ವಿಶ್ವದಾದ್ಯಂತ ಆತಂಕ ಮೂಡಿಸಿರುವ ಕೋವಿಡ್ ವೈರಾಣುವಿನ ಓಮಿಕ್ರಾನ್ ರೂಪಾಂತರಿ ಭಾರತಕ್ಕೂ ಪ್ರವೇಶಿಸಿದೆ. ದಕ್ಷಿಣ ಆಫ್ರಿಕಾದಿಂದ ದುಬೈ ಮೂಲಕ ಬೆಂಗಳೂರಿಗೆ ಬಂದ ಒಬ್ಬರು ಹಾಗೂ ಬೆಂಗಳೂರು ನಿವಾಸಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಓಮಿಕ್ರಾನ್ ನಮ್ಮ ದೇಶಕ್ಕೆ ಬಂದಿರುವುದು ಅಚ್ಚರಿಯಲ್ಲ. ಭಯಪಡುವ ಅಗತ್ಯವಿಲ್ಲ. ಯಾವುದೇ ಕೋವಿಡ್ ವೈರಸ್ ಇದ್ದರೂ ತಡೆಗಟ್ಟುವ ಕ್ರಮಗಳು ಒಂದೇ. ಆದಷ್ಟು ಬೇಗ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಬೇಕು ಎಂದು ಕೋವಿಡ್ ತಾಂತ್ರಿಕ ಸಮಿತಿ ಸದಸ್ಯ ಹಾಗೂ ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥ ಡಾ. ಸುದರ್ಶನ ಬಲ್ಲಾಳ್ ಅವರು ತಿಳಿಸಿದ್ದಾರೆ.
66 ವರ್ಷದ ದಕ್ಷಿಣ ಆಫ್ರಿಕಾ ಪ್ರಜೆ ನ.20ರಂದು ಬೆಂಗಳೂರಿಗೆ ಬಂದಿದ್ದರು. ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ವೇಳೆ ಪಾಸಿಟಿವ್ ಬಂದಿತ್ತು. ಅವರನ್ನು ಹೋಟೆಲ್ ನಲ್ಲಿ ಐಸೋಲೇಷನ್ ಇರಿಸಲಾಗಿತ್ತು. ಬಳಿಕ ಆ ವ್ಯಕ್ತಿ ಖಾಸಗಿಯಾಗಿ ಪರೀಕ್ಷೆ ಮಾಡಿದಾಗ ನೆಗೆಟಿವ್ ಬಂದಿತ್ತು. ಆ ವರದಿಯೊಂದಿಗೆ ನ.27ರಂದು ಆ ವ್ಯಕ್ತಿ ಭಾರತದಿಂದ ಮತ್ತೆ ಆಫ್ರಿಕಾಕ್ಕೆ ವಾಪಸಾಗಿದ್ದಾರೆ. 46 ವರ್ಷದ ಬೆಂಗಳೂರಿನ ಆರೋಗ್ಯ ಕಾರ್ಯಕರ್ತರೊಬ್ಬರಲ್ಲೂ ಸೋಂಕು ಕಾಣಿಸಿಕೊಂಡಿದೆ. ಅವರು ವಿದೇಶಿ ಪ್ರಯಾಣ ಮಾಡದಿದ್ದರೂ ಓಮಿಕ್ರಾನ್ ದೃಢಪಟ್ಟಿದೆ. ಅವರ ಸಂಪರ್ಕದಲ್ಲಿರುವ ಐವರಿಗೂ ಪೋಸಿಟಿವ್ ಬಂದಿದ್ದು, ರೂಪಾಂತರಿ ಪತ್ತೆಗೆ ಅವರ ಸ್ಯಾಂಪಲ್ ಗಳನ್ನು ಕಳಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಭಾರತಕ್ಕೆ ಹೊಸ ರೂಪಾಂತರಿ ಕಾಲಿಟ್ಟ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವರಾದ ಮನ್ಸುಖ್ ಮಾಂಡವಿಯ ಅವರು ಸಭೆ ನಡೆಸಿದ್ದಾರೆ.
ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಿ. ಹಾಗೆಯೇ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾ ವಹಿಸುವುದು, ಕ್ಷಿಪ್ರಗತಿಯಲ್ಲಿ ತಪಾಸಣೆ ಮಾಡುವ ದಿಸೆಯಲ್ಲೂ ವೇಗವಾಗಿ ಕಾರ್ಯನಿರ್ವಹಿಸಿ ಎಂದು ಸೂಚಿಸಿದ್ದಾರೆ.
ತಪಾಸಣೆ ನಡೆಸಿ ಪ್ರಯಾಣಿಕರಿಗೆ ತೊಂದರೆ ಕೊಡಬೇಡಿ : ಮನ್ಸುಖ್ ಮಾಂಡವಿಯಾ
ರೈತರ ದೂರು : ನಕಲಿ ಗೊಬ್ಬರ ಲಾರಿ ಜಪ್ತಿ
ದಾವಣಗೆರೆಯಲ್ಲಿ ಕೃಷಿ ವಿಚಕ್ಷಣಾ ದಳದ ದಾಳಿಗೆ ನಕಲಿ ಸಾವಯವ ಗೊಬ್ಬರ ಮಾರಾಟ ಮಾಡುತ್ತಿದ್ದ ಓರ್ವ ಬಲೆಗೆ ಬಿದ್ದಿದ್ದಾನೆ.
ರೈತರ ದೂರಿನನ್ವಯ ದಾವಣಗೆರೆ ತಾಲೂಕಿನ ರಾಮಪುರ ಗ್ರಾಮದ ಜಗಳೂರು ರಸ್ತೆಯಲ್ಲಿ ಸಾವಯವ ಗೊಬ್ಬರವೆಂದು ನಕಲಿ ಪೊಟ್ಯಾಷಿಯಂ ಗೊಬ್ಬರವನ್ನು ಲಾರಿಯಲ್ಲಿ ಸಾಗಿಸಲಾಗುತ್ತಿತ್ತು.ಆ ಲಾರಿಯನ್ನು ಪತ್ತೆ ಮಾಡಿದ ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳು ಸುಮಾರು 2.65ಲಕ್ಷ ರೂ.ಮೌಲ್ಯದ ನಕಲಿ ಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ.

ಲಾರಿ ಚಾಲಕನನ್ನು ಲಾರಿಯ ಬಗ್ಗೆ ಹಾಗೂ ಲಾರಿಯಲ್ಲಿರುವ ಅನುಮಾನಾಸ್ಪದವಾದ ರಸಗೊಬ್ಬರದ ಬಗ್ಗೆ ವಿಚಾರಿಸಿದಾಗ ಲಾರಿಯು ಮೈಸೂರಿನಿಂದ ಬಂದಿದ್ದು, ಇದರಲ್ಲಿ ಒಟ್ಟು 260 ಚೀಲ ರಸಗೊಬ್ಬರ ಇರುವುದಾಗಿ ತಿಳಿದು ಬಂತು. ರಸಗೊಬ್ಬರದ ಕುರಿತು ದಾಖಲೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ಆರ್ಗಾನಿಕ್ ಮನ್ಸೂರ್ ದಾವಣಗೆರೆ ಇವರ ಹೆಸರಿನಲ್ಲಿ ನಮೂದಿಸಿ 200 ಚೀಲ ಎಂದು ಬಿಲ್ ಮಾಡಿದ್ದು ಹಾಗೂ
ಲಾರಿಯನ್ನು ಪರಿಶೀಲಿಸಿದಾಗ ಲಾರಿಯಲ್ಲಿ ಅನುಮಾನಾಸ್ಪದ ರಸಗೊಬ್ಬರದ ಚೀಲಗಳು ಇರುವುದು ಕಂಡು ಬಂದಿದೆ. ಅಂತಹ ಚೀಲದ ಮೇಲೆ 60 % K2O ಎಂದು ನಮೂದಿಸಿದ್ದು, ಇಂಡಿಯನ್ ಫೋಟ್ಯಾಷ್ ಲಿಮಿಟೆಡ್ ಎಂಬ ಕಂಪನಿಯಿಂದ ತಯಾರಾಗಿದೆ ಎಂದು ನಮೂದಿಸಿರುವುದು ಕಂಡು ಬಂದಿರುತ್ತದೆ.ಆದರೆ ಈ ರಸಗೊಬ್ಬರಲ್ಲಿ , ಯಾವುದೇ ರೀತಿಯ ದಾಖಲೆಗಳು ಇರುವುದಿಲ್ಲ.ಲಾರಿ ಚಾಲಕ ತಪ್ಪಿಸಿಕೊಳ್ಳಲು ಯತ್ನಿಸಿದಾಗ ದಾಖಲೆಗಳನ್ನು ಪರಿಶೀಲಿಸಲಾಯಿತು.
ಈ ಸಂಬಂಧ ದಾವಣಗೆರೆ ಗ್ರಾಮೀಣ ವೃತ್ತ ಉಪವಿಭಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ಪೊಲೀಸರು ಆರೋಪಿ ಚಾಲಕ ಮಧುಸೂದನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ದಾಳಿಯಲ್ಲಿ ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳಾದ ಸುನೀಲ್,ಗೋವರ್ಧನ್ ಪಾಲ್ಗೊಂಡಿದ್ದರು.
ಆಟೋ, ವ್ಯಾನ್ ಚಾಲಕರು ನಿಯಮ ಉಲ್ಲಂಘಿಸುವಂತಿಲ್ಲ
ಯಾವುದೇ ವಾಹನ ಚಾಲಕ ಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗ ಮತ್ತು ಮಕ್ಕಳನ್ನು ಕರೆ ತರುವಾಗ ಕೋವಿಡ್ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುತ್ತಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಇತ್ತೀಚೆಗೆ ಕರ್ನಾಟಕದಲ್ಲಿ ಐಚ್ಛಿಕ ಆಫ್‌ಲೈನ್ ತರಗತಿಗಳು ಪ್ರಾರಂಭವಾದ ನಂತರ ಖಾಸಗಿ ಮತ್ತು ಶಾಲಾ ವಾಹನಗಳ ಸುರಕ್ಷತೆಯ ಕೊರತೆಯ ಬಗ್ಗೆ ದೂರುಗಳು ಜಿಲ್ಲೆಯ ಅಧಿಕಾರಿಗಳ ಮುಂದೆ ಸಂಗ್ರಹವಾಗಿವೆ.
ಇದು ತಮ್ಮ ಮಕ್ಕಳನ್ನು ತರಗತಿಗಳಿಗೆ ಕಳುಹಿಸಲು ಒಪ್ಪಿಕೊಂಡಿರುವ ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಶಾಲೆಗಳಿಗೆ ಐದರಿಂದ ಆರು ವಿದ್ಯಾರ್ಥಿಗಳನ್ನು ಆಟೋಗಳಲ್ಲಿ ಕರೆದೊಯ್ಯುವುದು ಅಥವಾ 10 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಣ್ಣ ವ್ಯಾನ್‌ಗಳಲ್ಲಿ ಕರೆದುಕೊಂಡು ಹೋಗುವುದು ಒಳ್ಳೆಯ ವಿಚಾರ. ಆದರೆ, ಆಟೋಗಳಲ್ಲಿ ಮತ್ತು ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಾಹನಗಳಲ್ಲಿ ಒಂದೇ ಬಾರಿಗೆ ಬಹಳಷ್ಟು ಮಂದಿಯನ್ನು ಕರೆದೊಯ್ಯುವುದು ಸಾಮಾನ್ಯವಾಗಿಬಿಟ್ಟಿದೆ. ಈ ವರ್ಷ, ಕೋವಿಡ್ ಕಾರಣದಿಂದ ಶಾಲಾ ಬಸ್ ಶುಲ್ಕವನ್ನು ಹೆಚ್ಚಿಸಲಾಗಿದೆ. ಇದರ ಪರಿಣಾಮವಾಗಿ, ಪಾಲಕರು ಆಟೋಗಳು ಮತ್ತು ಖಾಸಗಿ ವಾಹನಗಳ ಮೊರೆ ಹೋಗಿವೆ.
ಆದರೆ ಆಟೋ ಚಾಲಕರು ಹಾಗೂ ಖಾಸಗಿ ವಾಹನ ಚಾಲಕರು ದೈಹಿಕ ಅಂತರದಂತಹ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಮೈಸೂರು ನಗರದ ನಾಗರತ್ನ ಸಿದ್ಧಯ್ಯ ಅವರು ತಿಳಿಸಿದ್ದಾರೆ.
ಬಹುಪಾಲು ಶಾಲೆಗಳು ಕೆಎಸ್‌ಆರ್‌ಟಿಸಿ ಬಸ್ ಸೇವೆಗಳನ್ನು ಹೊಂದಿಲ್ಲ. ಅವರು ಖಾಸಗಿ ವಾಹನಗಳನ್ನು ಬಳಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಆಟೋ ಚಾಲಕರಾದ ಶಶಿಧರ್ ಅವರು, ದೈಹಿಕ ಅಂತರವನ್ನು ಕಾಪಾಡುತ್ತಾ, ಪ್ರತಿ ಬಾರಿಗೆ ಕೇವಲ 3 -4 ಮಕ್ಕಳನ್ನು ಕರೆದೊಯ್ಯವುದು ಕಷ್ಟಕರವಾಗುತ್ತದೆ. ಈಗ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಹೆಚ್ಚಾಗಿದೆ. ಪೋಷಕರು ಹೆಚ್ಚು ಹಣ ನೀಡಲು ಒಪ್ಪುವುದಿಲ್ಲ. ಇದು ಆರ್ಥಿಕವಾಗಿ ಲಾಭದಾಯಕವಲ್ಲ. ನಮಗೂ ಯಾವುದೇ ಬೇರೆ ಮಾರ್ಗಗಳಿಲ್ಲ ಎಂದು ಹೇಳಿದ್ದಾರೆ.
ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ತಿಳಿಸಿದ್ದಾರೆ. ಹೆಚ್ಚುವರಿ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಕುರಿತು ಡಿಸಿಪಿ ಮತ್ತು ಆರ್‌ಟಿಒ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಪೋಷಕರೂ ಜಾಗರೂಕರಾಗಿರಬೇಕು. ಆಟೋ ಮತ್ತು ವ್ಯಾನ್‌ಗಳ ಚಾಲಕರನ್ನು ಭೇಟಿ ಮಾಡುವುದರ ಜೊತೆಗೆ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ನಾವು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಕಾಲಮಿತಿಯಲ್ಲಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಹಲವಾರು ಶಾಲೆಗಳು ಆನ್‌ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿವೆ ಮತ್ತು ಆಫ್‌ಲೈನ್ ತರಗತಿಗಳನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅನೇಕ ಪೋಷಕರು ಸರ್ಕಾರಕ್ಕೆ ದೂರು ನೀಡಿದ್ದಾರೆ.ಆದರೂ ಇದು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದೆ. ಪೋಷಕರು ದೂರು ನೀಡಿದರೆ ಶಿಕ್ಷಣ ಇಲಾಖೆ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರಾಜ್ಯಗಳಿಂದ ಅಧಿಕ ಸಾಲ : ರಿಸರ್ವ್ ಬ್ಯಾಂಕ್ ಆತಂಕ
ಭಾರತೀಯ ರಿಸರ್ವ್ ಬ್ಯಾಂಕ್ ರಾಜ್ಯಗಳು ಹೊಂದಿರುವ ಸಾಲದ ಪ್ರಮಾಣ ಆತಂಕಕಾರಿ ಮಟ್ಟದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
2022ರ ಮಾರ್ಚ್ ಅಂತ್ಯದ ವೇಳೆಗೆ ರಾಜ್ಯಗಳ ಸಾಲವು ಜಿಡಿಪಿಯ ಶೇ. 31ರ ಮಟ್ಟದಲ್ಲಿ ಇರಬಹುದು ಮತ್ತು ಇದು ಆತಂಕಕಾರಿಯಾಗಿದೆ ಎಂದು ಆರ್ ಬಿಐ ವರದಿಯಲ್ಲಿ ತಿಳಿಸಿದೆ.
2022-23ರಲ್ಲಿ ರಾಜ್ಯಗಳ ಸಾಲ-ಜಿಡಿಪಿ ಅನುಪಾತವು ಶೇ. 20 ರಲ್ಲಿ ಇರಬೇಕು ಎಂಬ ಗುರಿ ಇದೆ. ಆದರೆ ಈಗಿನ ಮಟ್ಟವು ಗುರಿಗಿಂತ ಅಧಿಕವಾಗಿರುವುದು ಆರ್ ಬಿ ಐ ಕಳವಳಕ್ಕೆ ಕಾರಣವಾಗಿದೆ.
ರಾಜ್ಯಗಳ ಹಣಕಾಸು ಕುರಿತ ವಾರ್ಷಿಕ ಅಧ್ಯಯನವನ್ನು ಆರ್ ಬಿ ಐ ಬಿಡುಗಡೆ ಮಾಡಿದೆ. 15 ನೇ ಹಣಕಾಸು ಆಯೋಗದ ಪ್ರಕಾರ ರಾಜ್ಯಗಳ ಸಾಲ ಜಿಡಿಪಿ ಅನುಪಾತವು 2025-26ರಲ್ಲಿ ಶೇ.32.5 ತಗಲಿದೆ ಹಾಗೂ ನಂತರ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ವರದಿಯಲ್ಲಿ ತಿಳಿಸಿದೆ.
ಜ್ಯೂ.ಹಾಕಿ ‘ಸೆಮಿ’ಗೆ ಭಾರತ
ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಬಲಿಷ್ಠ ಬೆಲ್ಜಿಯಂ ತಂಡವನ್ನು ಮಣಿಸುವ ಮೂಲಕ ಭಾರತ ತಂಡವು ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.
ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಕಳೆದ ಬಾರಿಯ ಚಾಂಪಿಯನ್ ಭಾರತ ತಂಡವು 1-0 ಅಂತರದಿಂದ ಬೆಲ್ಜಿಯಂ ತಂಡವನ್ನು ಸೋಲಿಸಿದೆ.
ಪಂದ್ಯದಲ್ಲಿ ಮೊದಲ ಕ್ವಾರ್ಟರ್ ಗೋಲ್ ರಹಿತವಾಗಿ ಮುಕ್ತಾಯಗೊಂಡಿತು. ಆದರೆ ದ್ವಿತೀಯ ಕ್ವಾರ್ಟರ್ ನಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಶಾರ್ದಾನಂದ ಗೋಲಾಗಿ ಪರಿವರ್ತಿಸಿ ಭಾರತೀಯ ತಂಡದಲ್ಲಿ ಆಸೆ ಮೂಡಿಸಿದರು. ನಂತರದ ಎರಡು ಅವಧಿಗಳಲ್ಲಿ ಉಭಯ ತಂಡಗಳು ಗೋಲ್ ಗಳಿಸಲು ಸೆಣದಾಡಿದರೂ ಸಹ ಗೋಲ್ ಗಳಿಸುವ ಪ್ರಯತ್ನ ನೆರವೇರಲಿಲ್ಲ.
ಈ ಜಯದಿಂದ ಭಾರತ ಮತ್ತೆ ತನ್ನ ಜ್ಯೂನಿಯರ್ ಹಾಕಿ ಪ್ರಭುತ್ವ ಕಾಯ್ದುಕೊಳ್ಳುವತ್ತ ಉಲ್ಲಸಿತವಾಗಿ ಮುನ್ನಡೆದಿದೆ.
ಓಮಿಕ್ರಾನ್, ಉಪಚಾರಕ್ಕೇ ದೆಹಲಿಯಲ್ಲಿ ಪ್ರತ್ಯೇಕ ಆಸ್ಪತ್ರೆ
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಲ್ಕು ಪ್ರಯಾಣಿಕರಲ್ಲಿ ಕೋವಿಡ್ -19 ದೃಡಪಟ್ಟಿದೆ.. ಅವರನ್ನು ದೆಹಲಿಯ ಸರ್ಕಾರಿ ಲೋಕನಾಯಕ ಜೈಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲದ ಪ್ರಕಾರ, ಲಂಡನ್ ಮತ್ತು ಆಮ್‌ಸ್ಟರ್‌ಡ್ಯಾಮ್‌ನಿಂದ ಮಂಗಳವಾರ ರಾತ್ರಿ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಾಲ್ವರಲ್ಲಿ ಕೋವಿಡ್ -19 ಪರೀಕ್ಷೆ ನಡೆಸಲಾಗಿದೆ.
ಅವರ ಮಾದರಿಯನ್ನು ಆಸ್ಪತ್ರೆಯ ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬ್‌ಗೆ ಕಳುಹಿಸಲಾಗಿದೆ. ಪ್ರಯಾಣಿಕರು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದಾರೆ. ವಿದೇಶಿ ಭೇಟಿಯಿಂದ ಬರುವ ಭಾರತೀಯ ಪ್ರಜೆಗಳು ಎಂದು ತಿಳಿದು ಬಂದಿದೆ.
ಹೊಸ ಕೋವಿಡ್ -19 ರೂಪಾಂತರದ ಓಮಿಕ್ರಾನ್‌ಗೆ ಧನಾತ್ಮಕ ಪರೀಕ್ಷೆ ಮಾಡುವ ರೋಗಿಗಳಿಗೆ ಚಿಕಿತ್ಸೆ ನೀಡಲು ದೆಹಲಿ ಸರ್ಕಾರ ನಡೆಸುತ್ತಿರುವ ಲೋಕ ನಾಯಕ್ ಜೈಪ್ರಕಾಶ್ ಆಸ್ಪತ್ರೆಯನ್ನು ವಿನ್ಯಾಸಗೊಳಿಸಲಾಗಿದೆ. ಅಂತಹ ರೋಗಿಗಳನ್ನು ಪ್ರತ್ಯೇಕಿಸಲು ಮತ್ತು ಚಿಕಿತ್ಸೆ ನೀಡಲು ವಾರ್ಡ್‌ಗಳನ್ನು ನಿಗದಿಪಡಿಸುವಂತೆ ದೆಹಲಿ ಸರ್ಕಾರವು ಆಸ್ಪತ್ರೆಗೆ ನಿರ್ದೇಶಿಸಿದೆ. ದೆಹಲಿಯ ಆರೋಗ್ಯ ಇಲಾಖೆ ಮಂಗಳವಾರ ಹೇಳಿಕೆಯೊಂದರಲ್ಲಿ ಹೊಸ ರೂಪಾಂತರವನ್ನು ಹೊಂದಿರುವ ಯಾವುದೇ ರೋಗಿಗೆ ಯಾವುದೇ ಕಾರಣಕ್ಕಾಗಿ ಆಸ್ಪತ್ರೆಗಳಿಗೆ ಪ್ರವೇಶವನ್ನು ನಿರಾಕರಿಸಲಾಗುವುದಿಲ್ಲ ಎಂದು ಆಸ್ಪತ್ರೆಗೆ ನಿರ್ದೇಶಿಸಿದೆ. ಮಾರ್ಗಸೂಚಿಗಳ ಪ್ರಕಾರ, ಓಮಿಕ್ರಾನ್ ಇರುವಿಕೆ ಸೂಚಿಸುವ ರೋಗಿಗೆ ಪ್ರತ್ಯೇಕ ಘಟಕವನ್ನು ಹೊಂದಿಸಬೇಕು. ಲೋಕ್ ನಾಯಕ್ ಆಸ್ಪತ್ರೆಯನ್ನು ಈ ಮೂಲಕ ಓಮಿಕ್ರಾನ್ ಚಿಕಿತ್ಸೆಗೆ ಮೀಸಲಾದ ಆಸ್ಪತ್ರೆ ಎಂದು ಗೊತ್ತುಪಡಿಸಲಾಗಿದೆ. ಇದು ಓಮಿಕ್ರಾನ್‌ನ ಹೊಸ ರೂಪಾಂತರದೊಂದಿಗೆ ಪತ್ತೆಯಾದ ರೋಗಿಗಳಿಗೆ ಚಿಕಿತ್ಸೆ ನೀಡುತ್ತದೆ. ಲೋಕ್ ನಾಯಕ್ ಆಸ್ಪತ್ರೆಯು ಪ್ರತ್ಯೇಕಿಸಲು ಮತ್ತು ಚಿಕಿತ್ಸೆಗಾಗಿ ಒಂದು ಅಥವಾ ಹೆಚ್ಚಿನ ಪ್ರತ್ಯೇಕ ಸಿಬ್ಬಂದಿಗಳನ್ನು ನೇಮಿಸುತ್ತದೆ. ಒಟ್ಟಾರೆಯಾಗಿ ಒಮಿಕ್ರಾನ್‌ನ ಹೊಸ ಕೋವಿಡ್ ರೂಪಾಂತರವು ಜಾಗತಿಕ ಅಪಾಯವನ್ನು ಹೆಚ್ಚಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಲಸಿಕೆ: ಎರಡನೇ ಡೋಸ್ ನೀಡುವ ಮಾರ್ಗೋಪಾಯ ಚಿಂತನೆ
ಓಮಿಕ್ರಾನ್ ರೂಪಾಂತರಿಯು ಆತಂಕ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಜನರಿಗೆ ಹೇಗಾದರೂ ಮಾಡಿ ಕೊರೊನಾ ನಿರೋಧಕ ಲಸಿಕೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿವೆ.
ಲಸಿಕೆ ಅಭಿಯಾನ ತೀವ್ರಗೊಳಿಸಬೇಕು, ವಿಶೇಷವಾಗಿ ಎರಡನೇ ಡೋಸ್ ನೀಡುವ ಕುರಿತು ಗಮನಹರಿಸಬೇಕು ಇಂದು ಕೇಂದ್ರ ಸರ್ಕಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಒತ್ತಡ ಹೇರುತ್ತಲೇ ಇದೆ. ರಾಜ್ಯಗಳ ಬಳಿ ಕೋಟ್ಯಂತರ ಡೋಸ್ ಗಳಿದ್ದರೂ ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಪಡೆಯದಿರುವುದು ತಲೆನೋವಾಗಿದೆ. ಹೀಗಾಗಿ ಈಗ ಬೆದರಿಕೆ ಅಸ್ತ್ರ ಪ್ರಯೋಗಿಸಲು ರಾಜ್ಯಗಳು ಒಂದಾಗಿವೆ.
ಲಸಿಕೆ ಪಡೆಯದವರಿಗೆ ಪಡಿತರ ಸೇರಿ ಸರ್ಕಾರದ ಸೌಲಭ್ಯಗಳನ್ನು ನೀಡಬಾರದು ಎಂದು ಕರ್ನಾಟಕ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಹಾಗೂ ಉಚಿತ ಚಿಕಿತ್ಸೆ ನೀಡಬಾರದೆಂಬ ರಾಜ್ಯ ಸರ್ಕಾರದ ಯೋಚನೆಯು ಹಲವು ರಾಜ್ಯಗಳ ಗಮನ ಸೆಳೆದಿದ್ದು, ಅದೇ ತಂತ್ರ ಅನುಸರಿಸಲು ತೀರ್ಮಾನಿಸಿವೆ.
ಒಮಿಕ್ರಾನ್ ಪ್ರಸರಣದ ಹಿನ್ನೆಲೆಯಲ್ಲಿ ಡಿಸೆಂಬರ್ 15ರಿಂದ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡದಿರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಐಎಎಸ್ ಅಧಿಕಾರಿಗಳಿಗೆ ಇಲಾಖಾ ನಿಯೋಜನೆ ಆದೇಶ
ಕೆಎಎಸ್ ನಿಂದ ಐಎಎಸ್ ಗೆ ಬಡ್ತಿ ಹೊಂದಿರುವ 11 ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿರುವ ಸರಕಾರ ಆದೇಶ ಹೊರಡಿಸಿದೆ.
ಎಂ ಶಿಲ್ಪ: ಜಂಟಿ ಕಾರ್ಯದರ್ಶಿ, ವೈದ್ಯ ಶಿಕ್ಷಣ ಇಲಾಖೆ
ಎನ್. ಚಂದ್ರಶೇಖರ್ : ಹೆಚ್ಚುವರಿ ನಿರ್ದೇಶಕ (ಆಡಳಿತ) ತೋಟಗಾರಿಕೆ ಇಲಾಖೆ
ಎ. ಬಿ. ಬಸವರಾಜು : ನಿರ್ದೇಶಕ (ತಾಂತ್ರಿಕ) ಐಟಿ-ಬಿಟಿ ಇಲಾಖೆ
ಎಸ್. ನವೀನ್ ಕುಮಾರ್ ರಾಜು : ವಿಶೇಷ ಡಿಸಿ, ಭೂಮಿ ಮಾನಿಟರಿಂಗ್ ಸೆಲ್
ಎಸ್.ಜೆ. ಸೋಮಶೇಖರ್ : ಆಡಳಿತಾಧಿಕಾರಿ,ಕೆಇಎ
ಡಾ.ಬಿ.ವಿ. ವಾಸಂತಿ ಅಮರ್ : ಕಾರ್ಯ ನಿರ್ವಾಹಕ ನಿರ್ದೇಶಕಿ, ಕೆಎಸ್ಎಂಸಿ
ಡಾ.ಎಂ.ಮಹೇಶ್ : ಸಿಎಒ ಮತ್ತು ಕಾರ್ಯದರ್ಶಿ, ಬಿಡಬ್ಲ್ಯೂಎಸ್ಎಸ್ ಬಿ
ಜಿ.ಲಿಂಗಮೂರ್ತಿ : ಜನರಲ್ ಮ್ಯಾನೇಜರ್, ಕೆಯುಐಡಿಎಫ್ ಸಿ ಮತ್ತು ಹಣಕಾಸು ನಿಗಮ
ಎಸ್.ರಂಗಪ್ಪ : ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇಬ್ರಾಹಿಂ ಮೈಗೂರ್ : ಕಾರ್ಯ ನಿರ್ವಾಹಕ ನಿರ್ದೇಶಕ, ಕೆಯುಐಡಿಎಫ್ ಸಿ ಮತ್ತು ಹಣಕಾಸು ನಿಗಮ
ವಿಶೇಷ ಜಿಲ್ಲಾಧಿಕಾರಿ : ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ -2 ಹುದ್ದೆಗೆ ಐಎಎಸ್ ಅಧಿಕಾರಿ ಎಸ್.ಎನ್.ಬಾಲಚಂದ್ರ ಅವರನ್ನು ನಿಯೋಜಿಸಿರುವ ಸರ್ಕಾರ ಆದೇಶ ಹೊರಡಿಸಿದೆ.
ಕಣ್ಮನ ಸೆಳೆದ ಲಕ್ಷ ದೀಪೋತ್ಸವ
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ನವೆಂಬರ್ 29ರಿಂದ ಆರಂಭಗೊಂಡಿದೆ. ಲಕ್ಷದೀಪೋತ್ಸವದ ಅಂಗವಾಗಿ ಪ್ರತಿ ದಿನವು ಒಂದೊಂದು ವಿಶೇಷತೆಗಳಿಂದ ಧರ್ಮಸ್ಥಳ ಕ್ಷೇತ್ರ ವಿಜೃಂಭಿಸಲಿದೆ.
ಧರ್ಮಸ್ಥಳ ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವ, ಕೆರೆಕಟ್ಟೆ ಉತ್ಸವ ಹಾಗೂ ಲಲಿತೋದ್ಯಾನ ಉತ್ಸವ ಅದ್ದೂರಿಯಾಗಿ ನೆರವೇರಿತು. ಬರುತ್ತಿದ್ದಂತಹ ಭಕ್ತರು ದೇವತಾ ಮೂರ್ತಿಯನ್ನು ಕಂಡು ಭಕ್ತಿ ಪರವಶಕ್ಕೊಳಗಾದರು.
ಶ್ರೀ ಮಂಜುನಾಥ ಸ್ವಾಮಿಯ ವಿಗ್ರಹವನ್ನು ಬೆಳ್ಳಿರಥೋತ್ಸವ ಅದ್ದೂರಿಯಾಗಿ ಜರುಗಿದೆ. ಪ್ರತಿವರ್ಷವೂ ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ, ಹೊರರಾಜ್ಯಗಳು ಮತ್ತು ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಈ ಬಾರಿಯೂ ಕೂಡ ಲಕ್ಷ ದೀಪೋತ್ಸವವನ್ನು ಸಂತೋಷದಿಂದ ಕಣ್ತುಂಬಿ ಕೊಳ್ಳುತ್ತಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ಲಕ್ಷದೀಪೋತ್ಸವದಲ್ಲಿ ಭಾಗಿಯಾಗಿದ್ದರು.
ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಪುನಶ್ಚೇತನ
ಕೋವಿಡ್ ನಿಂದಾಗಿ ಗ್ರಾಮೀಣ ಮಹಿಳಾ ಸ್ವಸಹಾಯ ಗುಂಪುಗಳು ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಇವುಗಳ ಪುನಶ್ಚೇತನಕ್ಕಾಗಿ 20 ಲಕ್ಷ ರೂ. ಅನುದಾನ ನೀಡುವ ಯೋಜನೆಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮುಂದಾಗಿದೆ.
ರಾಜ್ಯದ 6,000 ಮಹಿಳಾ ಸ್ವಸಹಾಯ ಗುಂಪುಗಳ 1 ಲಕ್ಷಕ್ಕೂ ಅಧಿಕ ಮಹಿಳಾ ಸದಸ್ಯರಿಗೆ ಈ ಯೋಜನೆಯ ಅನುಕೂಲವಾಗಲಿದೆ. ಶೀಘ್ರದಲ್ಲೇ ಈ ಯೋಜನೆ ಅನುಷ್ಠಾನಗೊಳ್ಳಲಿದೆ.
ಕೋವಿಡ್ ನಿಂದಾಗಿ ಗ್ರಾಮೀಣ ಭಾಗದ ಮಹಿಳೆಯರ ಸ್ಥಿತಿ ಬಡತನ ರೇಖೆಗಿಂತ ಕೆಳಮಟ್ಟದ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ಪಾರದರ್ಶಕ ನಿಯಮಗಳಿಗೆ ವಿನಾಯಿತಿ ನೀಡಿ ಪಂಚಾಯತ್ ರಾಜ್ ಅಧಿನಿಯ 1993, ಸೆಕ್ಷನ್ 60(ಬಿ) ಅನ್ವಯ ಮಹಿಳಾ ಗುಂಪುಗಳ ಉತ್ತೇಜನಕ್ಕೆ ಕಾಲಮಿತಿ ಇಲ್ಲದೆ 20 ಲಕ್ಷ ರೂ ವರೆಗೆ ಅನುದಾನ ನೀಡುವ ಯೋಜನೆ ಇದಾಗಿದೆ.
ಯೋಜನೆಯನ್ನು ಪಡೆಯಲು ಸ್ವಸಹಾಯ ಸಂಘದ ಅರ್ಹತೆಗಳು ಹೀಗಿವೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಸ್ಥಾಪಿತ ಸಂಘವಾಗಿರ ಬೇಕು. ಶೇ.10 ರಷ್ಟು ವಂತಿಗೆ ನೀಡುವ ಅರ್ಹತೆ. ಈ ಹಿಂದಿನ ಬ್ಯಾಂಕ್ ಸಾಲಗಳನ್ನು ಸಮಯಕ್ಕನುಸಾರ ಪಾವತಿಸಿರಬೇಕು. ಕಳೆದ ಐದು ವರ್ಷಗಳ ದಾಖಲೆಗಳನ್ನ ಪೂರ್ಣವಾಗಿ ಮಹಿಳಾ ಸಂಘಗಳು ಹೊಂದಿರ ಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ.
