Wednesday, February 25, 2026
Wednesday, February 25, 2026
Home Blog Page 1627

ಶ್ರೀಲಂಕಾ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ವಿಪಕ್ಷಗಳ ಸಜ್ಜು

0

ನೆರೆಯ ಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಕೈಮೀರಿ ಹೋಗುತ್ತಿರುವ ನಡುವೆ ಅಲ್ಲಿನ ಪ್ರತಿಪಕ್ಷ ಇವತ್ತು ಅಧ್ಯಕ್ಷ ಗೋಟಬಯ ರಾಜಪಕ್ಸ ವಿರುದ್ಧ ಅವಿಶ್ವಾಸ ನಿರ್ಣಯ ಮತ್ತು ಗಡಿ ಮಹಾಭಿಯೋಗಕ್ಕೆ ಸಹಿ ಹಾಕಿದೆ.

ಲಂಕಾದ ಪ್ರತಿಪಕ್ಷವಾದ ಸಮಗಿ ಜನ ಬಲವೆಗಯ ನಾಯಕ ಸಜಿತ್‌ ಪ್ರೇಮದಾಸ ಟ್ವಿಟರ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಬದಲಾವಣೆ ಆಗದೇ ನಾವು ಸುಮ್ಮನಾಗೊಲ್ಲ. ಅವಿಶ್ವಾಸ ನಿರ್ಣಯ ಮತ್ತು ಪದಚ್ಯುತಿ ನಿರ್ಣಯಕ್ಕೆ ಸಹಿ ಮಾಡ್ತಾ ಇದ್ದೇವೆ. ಜೊತೆಗೆ ಅಧ್ಯಕ್ಷೀಯ ಪದ್ದತಿ ಬದಲಾವಣೆ ಆಗೋಕೆ ಸಂವಿಧಾನಾತ್ಮಕ ತಿದ್ದುಪಡಿ ಆಗಲಿದೆ ಅಂತ ಹೇಳಿದ್ದಾರೆ.

ಈ ನಿರ್ಣಯಗಳನ್ನ ಮಂಡಿಸೋಕು ಮೊದಲು ಲಂಕಾದ ಪ್ರತಿಪಕ್ಷಗಳಿಗೆ ವಿವಿಧ ಪಕ್ಷಗಳ 40 ಚುನಾಯಿತ ಸದಸ್ಯರ ಸಹಿ ಬೇಕು. ಈಗಾಗಲೇ ಎಸ್‌ಜೆಬಿ ಇಂದ 50 ಜನ ಸಹಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಆ ಕಡೆ ಪ್ರತಿಭಟನಾಕಾರರ ಜೊತೆ ಮಾತಾಡೋಕೆ ತಯಾರಿದ್ದೇವೆ ಎಂದು ಶ್ರೀಲಂಕಾ ಸರ್ಕಾರ ಹೇಳಿದ್ದು ಮಾತುಕತೆಗೆ ಆಹ್ವಾನಿಸಿದೆ.

ಯಾವ ಕಾರಣಕ್ಕೂ ರಾಜಿನಾಮೆ ನೀಡೋದಿಲ್ಲ- ಈಶ್ವರಪ್ಪ

0

ಗುತ್ತಿಗೆದಾರ ಸಂತೋಷ್ ಕುಮಾರ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು ಎನ್ನುವ ಕೂಗು ಕೇಳುತ್ತಿರುವಾಗಲೇ ಸಚಿವ ಕೆ. ಎಸ್. ಈಶ್ವರಪ್ಪ ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಕುರಿತು ಮಾತನಾಡಿದ ಅವರು, ಕಾನೂನುಬಾಹಿರವಾಗಿ ನಮ್ಮ ಗ್ರಾಮೀಣಾಭಿವೃದ್ಧಿ ಇಲಾಖೆ ನಡೆಸಿದಂತಹ ವಿಚಾರದಲ್ಲಿ ಕಾಂಗ್ರೆಸ್ಸಿನವರು ರಾಜಿನಾಮೆ ನೀಡಿ ಎನ್ನುತ್ತಿದ್ದಾರೆ. ಇದು ಒಂದು ಕಡೆಯಾದರೆ ಇನ್ನೊಂದೆಡೆ ಸಂತೋಷ್ ಪಾಟೀಲ್ ಅವರು ಡೆತ್ ನೋಟ್ ಬರೆದಿಲ್ಲ. ಆದರೂ ಸಹ ಡೆತ್ ನೋಟ್ ಬರೆದಿದ್ದಾರೆಂದು ಸುಳ್ಳು ಆರೋಪ ಹೊರಿಸಿ ರಾಜಿನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದರು.

ನಮ್ಮ ಇಲಾಖೆಯಲ್ಲಿ ಯಾವುದೇ ಕಾಮಗಾರಿ ಮಾಡಬೇಕಾದರೆ ಮೊದಲು ತಾಂತ್ರಿಕ ಅನುಮೋದನೆ ಯಾಗಬೇಕು. ಅದಾದ ನಂತರ ಹಣ ಬಿಡುಗಡೆಯಾಗುತ್ತದೆ. ವರ್ಗಾವಣೆ ಹಂಚಿಕೆಯಾಗಬೇಕು. ಕೆಲಸ ಮಾಡುವಂತಹ ಸಂದರ್ಭದಲ್ಲಿ ಸರ್ಕಾರಿ ಇಲಾಖೆಯವರು ಅದರ ಮುತವರ್ಜಿ ವಹಿಸಬೇಕು. ಕೆಲಸ ಮುಗಿದಮೇಲೆ ಬಿಲ್ ಪೇಮೆಂಟ್ ಆಗಬೇಕು. ಇದ್ಯಾವ ಪದ್ಧತಿಯು ಇಲ್ಲದೇನೆ ಸಿದ್ದರಾಮಯ್ಯನವರು ಮತ್ತು ಡಿಕೆಶಿ ಅವರಿಗೆ ನಾನು ಪ್ರಶ್ನಿಸುತ್ತೆನೆ. ತುಂಬಾ ವರ್ಷಗಳಿಂದ ನೀವು ಆಡಳಿತ ನಡೆಸಿದ್ದರಾ ಅಲ್ಲವೇ? ಈ ನಿಯಮಗಳನ್ನು ಗಾಳಿಗೆ ತೂರಿ ಬಿಲ್ ಗಳನ್ನು ಪೇಮೇಂಟ್ ಮಾಡಿದ್ದೀರಾ ಎಂದರು.

ಈಗಾಗಲೇ ನನಗೆ ರಾಜ್ಯದ ಹಲವು ಕಡೆಯಿಂದ ಕರೆಗಳು ಬಂದಿವೆ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ ಎಂದು ಒತ್ತಾಯಿಸುತ್ತಿದ್ದಾರೆ.ಆ ಅಭಿಮಾನಿಗಳಿಗೆ ನಾನು ಯಾವ ರೀತಿ ಕೃತಜ್ಞತೆ ಸಲ್ಲಿಸಬೇಕು ತಿಳಿಯುತ್ತಿಲ್ಲ ಎಂದರು.

ಕಾಂಗ್ರೆಸ್ ನವರು ಗಣಪತಿಯವರ ಡೆತ್ ನೋಟ್ ಇಟ್ಟುಕೊಂಡು ಹೋರಾಟ ಮಾಡಿ ಜಾರ್ಜ್ ಅವರ ರಾಜೀನಾಮೆ ತೆಗೆದುಕೊಂಡಿದ್ದಿರಿ. ಸ್ವತಃ ಗಣಪತಿಯವರು ಸಾಯುವುದಕ್ಕೂ ಮುನ್ನ ನಾನು ಡೆತ್ ನೋಟ್ ಬರೆದಿದ್ದೇನೆ ಎಂದು ಹೇಳಿದ್ದರು. ಆ ಡೆತ್ ನೋಟ್ ಗೆ ಸಹಿ ಮಾಡಿದ್ದರು. ಇದು ಡೆತ್ ನೋಟ್ ಇರುವ ವ್ಯವಸ್ಥೆ. ಆದರೆ ಇಲ್ಲಿ ಆಗಿರುದೇನು ಎಂದು ಪ್ರಶ್ನಿಸಿದರು.

ಸಂತೋಷ್ ಪಾಟೀಲ್ ವಿಚಾರದಲ್ಲಿ ವಾಟ್ಸಪ್ ಮೆಸೇಜ್ ನಲ್ಲಿ ಟೈಪ್ ಮಾಡಲಾಗಿದೆ. ಅದು ಸಂತೋಷ್ ಪಾಟೀಲ್ ಬರೆದಿರುವ ಡೆತ್ ನೋಟೋ ಅಥವಾ ಇನ್ಯಾರು ಬರೆದಿರುವುದೋ ಗೊತ್ತಿಲ್ಲ. ಆ ಮೆಸೇಜ್ ಇಟ್ಟುಕೊಂಡು ರಾಜಿನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ನಾನು ಯಾವ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ ಎಂದರು.

ಅಡಿಕೆ ಮೇಲಿನ ಜಿಎಸ್ ಟಿ ದರ ಇಳಿಸಲು ಮನವಿ

0

ಅಡಿಕೆ ಮಾರುಕಟ್ಟೆಯಲ್ಲಿ ಸಮನ್ವಯ ಸಾಧಿಸಲು ಜಿಎಸ್‌ಟಿ ದರವನ್ನು ಶೇ.5ರಿಂದ ಶೇ 2ಕ್ಕೆ ಇಳಿಸಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಎ. ಕಿಶೋರ್‌ಕುಮಾರ್ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ ಅವರು, ಸಹಕಾರ ಸಂಸ್ಥೆಗಳು ಶೇ. 100ರಷ್ಟು ತೆರಿಗೆಯನ್ನು ಪಾವತಿಸುತ್ತವೆ.

ಇಡೀ ಅಡಿಕೆ ಮಾರುಕಟ್ಟೆಯಲ್ಲಿ ನಮ್ಮ ಪಾಲು ಶೇ.15ರಷ್ಟು ಇರುವುದರಿಂದ ಸಹಕಾರಿ ಸಂಘಗಳು ರೈತರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜಿಎಸ್‌ಟಿ ಇಳಿಕೆ ಮಾಡಬೇಕು ಎಂದು ವಿನಂತಿಸಿದ್ದಾರೆ.

ಬಾಕಿ ಇರುವ ಕೆಲಸಕ್ಕೆ ಆರ್ಥಿಕ ನೆರವಿನ ಅಗತ್ಯ ಇದೆ. 5 ಕೋಟಿ ರೂಪಾಯಿ ಮಂಜೂರು ಮಾಡಬೇಕು. ಅಡಿಕೆ ಹಳದಿ ರೋಗದಿಂದ ತೋಟ ನಾಶವಾಗಿರುವ ಸುಳ್ಯ, ಕೊಪ್ಪ ಮಡಿಕೇರಿ ಭಾಗದ ಬೆಳೆಗಾರರು ಸಹಕಾರಿ ಸಂಘಗಳಿಂದ ಪಡೆದ ಸಾಲ ಮನ್ನಾ ಮಾಡಿ, ಹೊಸ ಕೃಷಿ ಮಾಡಲು ಆರ್ಥಿಕ ಸಹಾಯ ನೀಡಬೇಕು. ಅಡಿಕೆ ಕೃಷಿಯಲ್ಲಿ ಕಾರ್ಮಿಕರ ಕೊರತೆಯಿದೆ.ಹೊಸತಾಗಿ ಮಾರುಕಟ್ಟೆಗೆ ಬಂದಿರುವ ಕಾರ್ಬನ್ ಫೈಬರ್ ದೋಟಿಯ ಕಸ್ಟಮ್ಸ್‌ ಸುಂಕವನ್ನು ಕಡಿಮೆ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿಪತ್ರದಲ್ಲಿ ವಿನಂತಿಸಲಾಗಿದೆ.

ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಎಚ್‌.ಎಂ. ಕೃಷ್ಣಕುಮಾರ್, ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ಇನ್ನೂ ಮುಂತಾದ ವರು ಉಪಸ್ಥಿತರಿದ್ದರು.

ದೇಶದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ

0

ದೇಶದಲ್ಲಿ ಕೊರೋನಾ ಪ್ರಕರಣ ಕಳೆದ ಮೂರ್ನಾಲ್ಕು ದಿನಗಳಿಂದ ಮೂರಂಕಿ ಗೆ ಇಳಿದಿದೆ. ಕೊರೋನಾ ಪ್ರಕರಣಗಳು ಮತ್ತೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂದು 1,088 ಹೊಸ ಪ್ರಕರಣಗಳು ವರದಿಯಾಗಿವೆ.

26 ಸೋಂಕಿತರು ಮೃತಪಟ್ಟಿದ್ದಾರೆ. ಇದುವರೆಗೆ 5,21,736 ಮಂದಿ ಮೃತಪಟ್ಟಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 4,30,38,016ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು 10,870ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ತಿಳಿಸಿದೆ.

ಆರ್ ಸಿ ಬಿ ಹೋರಾಟ ವ್ಯರ್ಥ ಚೆನೈ ಗೆ ಜಯ

0

ಉತ್ತಪ್ಪ-ಶಿವಂ ಜೊತೆಯಾಟದ ರಂಗು
ಉತ್ತಪ್ಪ, ದುಬೆ 165 ರನ್ ಜೊತೆಯಾಟ/ತೀಕ್ಷಣ ಗೆ 4 ವಿಕೆಟ್/ಆರ್ಸಿಬಿ ಗೆ 23 ರನ್ ನಿಂದ ಸೋಲು
ಸಿಕ್ಸರ್ ಮತ್ತು ಬೌಂಡರಿ ಗಳೊಂದಿಗೆ ರಂಜಿಸಿದ ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಅಬ್ಬರಿಸಿದರು. ಅವರಿಬ್ಬರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಬೃಹತ್ ಮೊತ್ತ ಕಲೆಯಾಗಿತು. ಚಾಲೆಂಜರ್ಸ್ ಬೆಂಗಳೂರು ಎದುರಿನ ಪಂದ್ಯದಲ್ಲಿ ಇವರಿಬ್ಬರಿಂದ ಒಟ್ಟು 17 ಸಿಕ್ಸರ್ ಮತ್ತು 9 ಬೌಂಡರಿಗಳು ಸಿಡಿದವು. ಇದರ ಫಲವಾಗಿ ತಂಡ4 ಕ್ಕೆ 116 ರನ್ ಮೊತ್ತ ಕಲೆ ಹಾಕಿತು.

ಇದು, ಐಪಿಎಲ್ ನ 15ನೇ ಆವೃತ್ತಿಯಲ್ಲಿ ತಂಡವೊಂದರ ಗರಿಷ್ಠ ಮೊತ್ತವಾಗಿದೆ. ಮೂರನೇ ವಿಕೆಟ್ಗೆ 165 ರನ್ ಸೇರಿಸಿದ ರಾಬಿನ್-ಶಿವಂ ಜೋಡಿ ಶತಕದಿಂದ ವಂಚಿತರಾದರು. ಆದರೆ ಇವರಿಬ್ಬ ರಿಂದ ವೈಯಕ್ತಿಕ ಗರಿಷ್ಠ ರನ್ ದಾಖಲಿಸುವಲ್ಲಿ ಯಶಸ್ವಿಯಾದರು. ಕೇವಲ 19 ರನ್ ಗಳಿಸುವಷ್ಟರಲ್ಲಿ ತಂಡದ ಮೊದಲ ವಿಕೆಟ್ ಕಳೆದುಕೊಂಡಿತ್ತು. ಮೂರು ಬೌಂಡರಿ ಸಿಡಿಸಿ ಭರವಸೆ ಮೂಡಿಸಿದ್ದ ಋತುರಾಜ ಗಾಯಕ್ವಾಡ್ ಈ ಆವೃತ್ತಿಯಲ್ಲಿ ಮೊದಲ ಪಂದ್ಯ ಆಡಿದ ಜೋಶ್ ಹ್ಯಾಂಡಲ್ ವುಡ್ ಎಸೆತದಲ್ಲಿ ಎಲ್ ಡಬ್ಲ್ಯೂ ಬಲೆಗೆ ಬಿದ್ದರು.


ಸುಯಶ್ ಪ್ರಭುದೇಸಾಯಿ ಮತ್ತು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ಮಿಂಚಿನ ಆಟಕ್ಕೆ ಮೋಹಿನ್ ಅಲಿ ವಿಕೆಟ್ ಕಳೆದುಕೊಂಡರು. ಲೈನ್ ಮ್ಯಾಕ್ಸ್ವೆಲ್ ಹಾಕಿದ ಏಳನೇ ಓವರ್ ನ ನಾಲ್ಕನೇ ಎಸೆತವನ್ನು ಅಲ್ಲಿ ಕಟ್ ಮಾಡಿದರು. ಬ್ಯಾಕ್ವರ್ಡ್ ಪಾಯಿಂಟ್ ನಲ್ಲಿ ಸುಯಶ್ ಕಡೆಗೆ ಸಾಗಿತ್ತು. ಚುರುಕಿನ ಫೀಲ್ಡಿಂಗ್ ಮಾಡಿದ ಸುಯಶ್ ನಿಖರ ಮಾಡಿದರು. ದಿನೇಶ್ ಕಾರ್ತಿಕ್ ಸೊಗಸಾಗಿ ವೇಲ್ಸ್ ಎರಗಿಸಿದರು.

ನಂತರ ರಾಬಿನ್ ಮತ್ತು ಶಿವಂ ಆಟ ರಂಗೇರಿತು. ಎಂಟನೇ ಓವರ್ನಲ್ಲಿ ಇಬ್ಬರು ತಲಾ ಒಂದೊಂದು ಬೌಂಡರಿ
ಗಳಿಸುವ ಮೂಲಕ ಆಕ್ರಮಣಕಾರಿ ಆಟದ ಮುನ್ಸೂಚನೆ ನೀಡಿದರು. ನಂತರ ಪ್ರತಿ ಓವರ್ ನಲ್ಲೂ ಬೌಂಡರಿಗಳು ಹರಿದುಬಂದವು. ಹದಿಮೂರನೇ ಓವರ್ನಲ್ಲಿ ಮ್ಯಾಕ್ಸ್ವೆಲ್ ಅವರನ್ನು ಮೂರುಬಾರಿ ಸಿಕ್ಸರ್ ಗೆ ಎತ್ತಿದ ರಾಬಿನ್ ತಂಡದ ಮೊತ್ತ ಮೂರಂಕಿ ಗೆ ದಾಟಿಸಿದರು.


16ನೇ ಓವರ್ ನಲ್ಲಿ ಹಾಜಲ್ ವುಡ್ ಚೆಂಡನ್ನು ಸಿಕ್ಸರ್ ಗೆ ಅಟ್ಟಿದ ಉತ್ತಪ್ಪ ನೂರು ರನ್ ಗಳ ಜೊತೆಯಾಟ ಪೂರೈಸಿದರು. ಸಿರಾಜ್ ಹಾಕಿದ 17ನೇ ಓವರ್ನಲ್ಲಿ 2 ಸಿಕ್ಸರ್ ಮತ್ತು ಒಂದು ಬೌಂಡರಿ ಯನ್ನೂ ಸಿಡಿಸಿದರು. 18ನೇ ಓವರ್ ನಲ್ಲಿ ಶಿವಂ 2 ಸಿಕ್ಸರ್ ಗಳಿಸಿದರು. ಆದರೆ ಉತ್ತಪ್ಪ ವಿಕೆಟ್ ಕಳೆದುಕೊಂಡರು. ಕೊನೆಯ ಓವರಿನಲ್ಲಿ ಎರಡು ಸಿಕ್ಸರ್ ಗಳ ಮೂಲಕ ಶಿವಂ ಶತಕದತ್ತ ದಾಪುಗಾಲು ಹಾಕಿದರು. ಆದರೆ ಕೊನೆ ಎಸೆತದಲ್ಲಿ ಎಡವಿದರು. ಸಿಕ್ಸರ್ ಗೆಂದು ಎತ್ತಿದ ಚೆಂಡು ಲಾಂಗ್ ಆನ್ ನಲ್ಲಿ ಫಫ್ ಡುಪ್ಲೆಸಿ ಬಳಿ ಸಾಗಿತು. ಕ್ಯಾಚ್ ಕೈಚೆಲ್ಲಿದರು. ಆದರೆ ದುಬೆ ಶತಕದ ಕನಸು ನನಸಾಗಲಿಲ್ಲ.

ಎಸ್ಎಸ್ಎಲ್ ಸಿ ಮೌಲ್ಯಮಾಪನ ಸಿಬ್ಬಂದಿ ಭತ್ಯೆ ಹೆಚ್ಚಳ

0

ಎಸ್‌ಎಸ್ ಎಲ್ ಸಿ ಮೌಲ್ಯ ಮಾಪಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಪ್ರಸಕ್ತ ಸಾಲಿನ ಎಸ್‌ಎಸ್ ಎಲ್ ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪಕರ ಭತ್ಯೆಯನ್ನು ಶೇ.5 ರಷ್ಟು ಹೆಚ್ಚಳ ಮಾಡಿದೆ.

ಎಸ್‌ಎಸ್ ಎಲ್ ಸಿ ಮೌಲ್ಯಮಾಪನ ಕೇಂದ್ರಗಳ ಅಧೀಕ್ಷರ ಸಂಭಾವನೆ, ಮೌಲ್ಯಮಾಪಕರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ದರ ಮತ್ತು ವಿವಿಧ ಭತ್ಯೆಗಳನ್ನು ಶೇ.5 ರಷ್ಟು ಹೆಚ್ಚಳ ಮಾಡಿದೆ. ಪರಿಷ್ಕೃತ ದರದಲ್ಲಿ 6,924 ರೂ. ಇದ್ದ ಜಂಟಿ ಮುಖ್ಯ ಅಧೀಕ್ಷರ ಸಂಭಾವನೆಯನ್ನು 7,270 ರೂ.ಗೆ ಏರಿಕೆ ಮಾಡಲಾಗಿದೆ. ಉಪ ಮುಖ್ಯ ಅಧೀಕ್ಷಕರ ಸಂಭಾವನೆ ಇದುವರೆಗೆ 5,204 ರೂ. ಇತ್ತು.ಇದನ್ನು 5,464 ರೂ. ಗೆ ಹೆಚ್ಚಿಸಲಾಗಿದೆ.

ಮೌಲ್ಯಪಾಕರಿಗೆ ಪ್ರತಿ ಉತ್ತರ ಪತ್ರಿಕೆ ಮೌಲ್ಯಮಾಪನ ದರವನ್ನು ಒಂದು ರೂ. ನಷ್ಟು ಹೆಚ್ಚಿಸಲಾಗಿದೆ. ಇದರಿಂದ 22 ರೂ. ಇದ್ದ ಪ್ರಥಮ ಭಾಷೆ ಪತ್ರಿಕೆ ದರ 23 ರೂ. ದ್ವೀತಿಯ, ತೃತೀಯ ಭಾಷೆ ಮತ್ತು ಐಚ್ಛಿಕ ವಿಷಯಗಳಿಗೆ 20 ರೂ. ಇದ್ದ ಪ್ರತಿ ಉತ್ತರ ಪ್ರತಿಕೆಗಳ ಮೌಲ್ಯಮಾಪನ ದರ 21 ರೂ.ಗೆ ಹೆಚ್ಚಿಸಲಾಗಿದೆ. ಅದೇ ರೀತಿ ದಿನ ಭತ್ಯೆ ಬೆಂಗಳೂರಿನಲ್ಲಿ 596ರೂ. ಇತರೆ ನಗರಗಳಲ್ಲಿ 469 ರೂ. ಸ್ಥಳೀಯ ಭತ್ಯೆ ಬೆಂಗಳೂರಿಗೆ 223 ರೂ. ಇತರೆ ನಗರಗಳಲ್ಲಿ ಸ್ಥಳೀಯ ಭತ್ಯೆಯನ್ನು 180 ರೂ.ಗೆ ಹೆಚ್ಚಿಸಲಾಗಿದೆ.

ದೇಶದಲ್ಲೇ ಪ್ರಥಮವಾಗಿ ಡೈರೆಕ್ಟರ್ ಆಪ್ ಸೆಕೆಂಡರಿ ಅಗ್ರಿಕಲ್ಚರ್ ರಚನೆ

0

ಡೈರೆಕ್ಟರೇಟ್ ಆಫ್ ಸೆಕೆಂಡರಿ ಅಗ್ರಿಕಲ್ಚರ್ ರಚನೆ ಕುರಿತ ಪ್ರಧಾನಿಯವರ ಕನಸನ್ನು ಕರ್ನಾಟಕದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ನನಸು ಮಾಡಿದೆ.

ಇದರಿಂದ ಕೃಷಿ ತೋಟಗಾರಿಕೆ, ಹೈನುಗಾರಿಕೆ, ಪ್ರಾಣಿಜನ್ಯ ಉತ್ಪನ್ನಗಳ ಸಂಸ್ಕರಣೆ, ಗುಡಿ ಕೈಗಾರಿಕೆ ಮೂಲಕ ರೈತರಿಗೆ ಹೆಚ್ಚಿನ ಆದಾಯ, ಉದ್ಯೋಗ ಹೆಚ್ಚಳ ಸಾಧ್ಯವಾಗಿದೆ. ಕೃಷಿ ಉಪ ಉತ್ಪನ್ನಗಳ ತಯಾರಿಕೆಯೂ ಸಾಧ್ಯವಾಗುತ್ತಿದೆ ಎಂದು ರಾಜ್ಯದ ಕೃಷಿ ಇಲಾಖೆ ಸಚಿವರಾದ ಬಿ.ಸಿ.ಪಾಟೀಲ್ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆತ್ಮನಿರ್ಭರ್ ಯೋಜನೆಯಡಿ ಆಹಾರ ಸಂಸ್ಕರಣಾ ಘಟಕಗಳನ್ನು ರಚಿಸಲು ಸೆಕೆಂಡರಿ ಡೈರೆಕ್ಟರೇಟ್ ನೆರವಾಗಲಿದೆ. ಇದರಡಿ ಘಟಕಕ್ಕೆ ಪಡೆದ ಸಾಲಕ್ಕೆ ಶೇ 35ರಷ್ಟು ಸಬ್ಸಿಡಿ ಸಿಗಲಿದೆ ಎಂದು ತಿಳಿಸಿದರು.ಅಲ್ಲದೆ ರಾಜ್ಯ ಸರಕಾರವು ಶೇ 15 ಸಬ್ಸಿಡಿ ನೀಡಲಿದ್ದು, ಒಟ್ಟು 50 ಶೇಕಡಾ ಸಬ್ಸಿಡಿ ಸಿಗಲಿದೆ ಎಂದು ನುಡಿದರು.

ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ರೈತರ ಮಕ್ಕಳಿಗೆ ಕೃಷಿ ಕಾಲೇಜು ಸೇರಲು ಶೇ 40ರಷ್ಟು ಮೀಸಲಾತಿ ಇತ್ತು. ಅದನ್ನು 2021ರಲ್ಲಿ ಶೇ 50ಕ್ಕೆ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ಕಳೆದ ವರ್ಷ 186 ಜನ ರೈತರ ಮಕ್ಕಳಿಗೆ ಹೆಚ್ಚುವರಿ ಸೀಟು ಲಭಿಸಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ರೈತ ವಿದ್ಯಾನಿಧಿ ಆರಂಭ ಮಾಡಿದ್ದು, ಇದರಿಂದ 7.13 ಲಕ್ಷ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ರೂ. 261 ಕೋಟಿ ವಿದ್ಯಾರ್ಥಿವೇತನ ಸಿಕ್ಕಿದೆ. ಇದು ಕೂಡ ದೇಶದಲ್ಲೇ ಮೊದಲು ಎಂದು ತಿಳಿಸಿದರು. ಇದರಲ್ಲಿ ಜಾತಿ ಧರ್ಮದ ಭೇದ ಇಲ್ಲ ಎಂದರು.

ಕರ್ನಾಟಕದಲ್ಲಿ ಒಟ್ಟು 742 ರೈತ ಸಂಪರ್ಕ ಕೇಂದ್ರಗಳಿದ್ದು, ಅದರಲ್ಲಿ 694 ಕೃಷಿ ಯಾಂತ್ರೀಕರಣ ಕೇಂದ್ರಗಳನ್ನು ಸ್ಥಾಪಿಸಿ 22 ಲಕ್ಷ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಇಲ್ಲಿ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಬಾಡಿಗೆಗೆ ಕೊಡಲಾಗುತ್ತಿದೆ. ಟ್ರ್ಯಾಕ್ಟರ್ ಮತ್ತಿತರ ಉಪಕರಣ ಇಲ್ಲದ ರೈತರಿಗೆ ಇದರಿಂದ ಪ್ರಯೋಜನ ಸಿಗುತ್ತಿದೆ ಎಂದು ವಿವರ ನೀಡಿದರು. ಕೃಷಿ ಯಂತ್ರೋಪಕರಣ ಬ್ಯಾಂಕ್ ಕೂಡ ಆರಂಭವಾಗಿದೆ ಎಂದರು.

ರಾಜ್ಯದಲ್ಲಿ ರಸಗೊಬ್ಬರದ ಯಾವುದೇ ಕೊರತೆ ಇಲ್ಲ. 50 ಸಾವಿರ ಮೆಟ್ರಿಕ್ ಟನ್ ಗೊಬ್ಬರವನ್ನು ಈ ವರ್ಷಕ್ಕಾಗಿ ನಾವು ದಾಸ್ತಾನು ಮಾಡಿದ್ದೇವೆ. ಯೂರಿಯಾ 30 ಸಾವಿರ ಮೆಟನ್ ಇದ್ದು, ಡಿಎಪಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ ಎಂದು ತಿಳಿಸಿದರು.

ಸೂಕ್ಷ್ಮ ನೀರಾವರಿಗೂ ಆದ್ಯತೆ ಕೊಡುತ್ತಿದ್ದು, ನೆರವು ನೀಡಲಾಗುತ್ತಿದೆ ಎಂದರು.
ರಿವಾರ್ಡ್ ರಿಜುವನೇಟಿಂಗ್ ವಾಟರ್‍ಶೆಡ್ ಫಾರ್ ಅಗ್ರಿಕಲ್ಚರ್ ಯೋಜನೆಯು ಕರ್ನಾಟಕಕ್ಕೆ ಸಿಕ್ಕಿದ್ದು, ರಾಜ್ಯದ 21 ಜಿಲ್ಲೆಗಳಲ್ಲಿ 600 ಕೋಟಿ ವೆಚ್ಚದಡಿ ಮುಂದಿನ 5 ವರ್ಷಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. ನ್ಯೂ ಜನರೇಷನ್ ವಾಟರ್‍ಶೆಡ್ ಯೋಜನೆಯಡಿ 642 ಕೋಟಿ ಮೊತ್ತವನ್ನು 51 ತಾಲ್ಲೂಕುಗಳಲ್ಲಿ ಖರ್ಚು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕಳಪೆ ರಸಗೊಬ್ಬರ, ಕಳಪೆ ಬಿತ್ತನೆ ಬೀಜ ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು. ಜಾಗೃತ ದಳವನ್ನು ಪೊಲೀಸ್ ಮಾದರಿಯಲ್ಲಿ ಜಾಗೃತಗೊಳಿಸಿ ಪರಿವರ್ತಿಸಲಾಗಿದೆ ಎಂದು ತಿಳಿಸಿದರು.

ರೈತರ ಟ್ರ್ಯಾಕ್ಟರ್ ಸಂಬಂಧ ಡೀಸೆಲ್‍ಗೆ ಸಬ್ಸಿಡಿ ನೀಡಲಾಗುತ್ತಿದೆ. ಇದು ಕೂಡ ದೇಶದಲ್ಲೇ ಮೊದಲ ಬಾರಿಗೆ ಜಾರಿಯಾಗಿದೆ. ಈ ಬಾರಿ ಬಳ್ಳಾರಿ ಜಿಲ್ಲೆಯ ಹಗರಿ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಕೃಷಿ ಕಾಲೇಜು ಆರಂಭವಾಗಲಿದೆ. ಮಹಿಳೆಯರಿಗೆ ಪ್ರತ್ಯೇಕ ಕೃಷಿ ಪಂಡಿತ ಪ್ರಶಸ್ತಿ ಕೊಡಲಾಗುವುದು ಎಂದು ತಿಳಿಸಿದರು.

2020-21ರಲ್ಲಿ ರಾಜ್ಯವು ಕೋವಿಡ್ ಸಂಕಷ್ಟದಲ್ಲಿದ್ದರೂ 160.55 ಲಕ್ಷ ಮೆಟ್ರಿಕ್ ಟನ್ ಆಹಾರವನ್ನು ಉತ್ಪಾದಿಸಲಾಗಿದೆ. ಇದು ಹಿಂದಿನ ವರ್ಷದ ಉತ್ಪಾದನೆಯಲ್ಲಿ ಶೇ 10ರಷ್ಟು ಹೆಚ್ಚಳದ ಸಾಧನೆಯಾಗಿದೆ. ಕೃಷಿಕರು ಕೋವಿಡ್ ಇದ್ದರೂ ಹಿಂದೆ ಸರಿಯದೆ ಇದ್ದುದಕ್ಕೆ ಇದು ಉದಾಹರಣೆ ಎಂದು ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ನಾವು 2019-20ನೇ ಸಾಲಿನಲ್ಲಿ 7.32 ಲಕ್ಷ ಫಲಾನುಭವಿಗಳಿಗೆ 843 ಕೋಟಿ, 20-21ರಲ್ಲಿ 4.60 ಲಕ್ಷ ರೈತರಿಗೆ 580 ಕೋಟಿ ಬೆಳೆ ವಿಮಾ ಪರಿಹಾರ ಕೊಡಲಾಗಿದೆ. 2021ರ ಮುಂಗಾರು ಹಂಗಾಮಿನಲ್ಲಿ 48 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಬೆಳೆ ಹಾನಿಗೆ ಸಂಬಂಧಿಸಿ 25.15 ಕೋಟಿ ಬೆಳೆ ವಿಮೆ ಪರಿಹಾರವನ್ನು ಇತ್ಯರ್ಥ ಪಡಿಸಲಾಗಿದೆ ಎಂದು ವಿವರ ನೀಡಿದರು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 2020-21 ಸಾಲಿನಲ್ಲಿ ರಾಜ್ಯದಿಂದ 49.18 ಲಕ್ಷ ರೈತರಿಗೆ 983.71 ಕೋಟಿ ಹಣವನ್ನು ನೇರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. 2021-22ರಲ್ಲಿ ಇದುವರೆಗೆ 50,035 ರೈತರಿಗೆ 1,977 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ. ಕೇಂದ್ರ ಸರಕಾರ- ರಾಜ್ಯ ಸರಕಾರ ಸೇರಿ 2020-21 ಸಾಲಿನಲ್ಲಿ 52 ಲಕ್ಷಕ್ಕೂ ಹೆಚ್ಚು ರೈತರಿಗೆ 3,113 ಕೋಟಿ ಹಾಗೂ 2021-22ರಲ್ಲಿ 53 ಲಕ್ಷಕ್ಕೂ ಹೆಚ್ಚು ರೈತರಿಗೆ 2,809 ಕೋಟಿ ಹಣವನ್ನು ಇದುವರೆಗೆ ನೀಡಿದೆ ಎಂದರು.

2017ರವರೆಗೆ ಗ್ರಾಮಲೆಕ್ಕಿಗರು ಕಟ್ಟೆ ಮೇಲೆ ಕುಳಿತು ಬೆಳೆ ಸಮೀಕ್ಷೆ ನಡೆಸುತ್ತಿದ್ದರು. ಇದೀಗ ಜಿಪಿಎಸ್ ಅಳವಡಿಸಿ ಸಮೀಕ್ಷೆ ಮಾಡಲಾಗುತ್ತಿದೆ. 2020ರಲ್ಲಿ “ನನ್ನ ಬೆಳೆ ನನ್ನ ಹಕ್ಕು” ಕಾರ್ಯಕ್ರಮದ ಮೂಲಕ ರೈತರಿಂದಲೇ ಬೆಳೆ ಸಮೀಕ್ಷೆ ಮಾಡುತ್ತಿದ್ದು, 46 ಲಕ್ಷ ಪ್ಲಾಟ್‍ಗಳಲ್ಲಿ ರೈತರೇ ಬೆಳೆ ಸಮೀಕ್ಷೆ ಮಾಡಿದ್ದಾರೆ. ಇದರಿಂದ ಬೆಳೆ ಉತ್ಪಾದನೆ ಸಂಬಂಧ ಏರಿಳಿತದ ಸಮಸ್ಯೆ ಪರಿಹಾರವಾಗಿದ್ದು, ರೈತರಿಗೆ ಅನುಕೂಲವಾಗುತ್ತಿದೆ ಎಂದು ತಿಳಿಸಿದರು.

ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ನಂಜುಂಡೇಗೌಡ ಮತ್ತು ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಜಿ.ಮಂಜುನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪಾಕಿಸ್ತಾನವು ಭಾರತದೊಂದಿಗೆ ಶಾಂತಿ- ಸಹಕಾರ ಬಯಸುತ್ತದೆ- ಶಹಬಾಜ್

0

ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದ್ದ ಮೊದಲ ದಿನವೇ ಕಾಶ್ಮೀರದ ಬೀದಿಗಳಲ್ಲಿ ರಕ್ತ ಹರಿಯುತ್ತಿದೆ ಎನ್ನುವ ಮೂಲಕ ಭಾರತವನ್ನು ಕೆಣಕಿದ್ದ ಶೆಹಬಾಜ್‌ ಷರೀಫ್ ನಿನ್ನೆ ಮೆತ್ತಗಾಗಿದ್ದಾರೆ.

ತಮಗೆ ಅಭಿನಂದನೆ ಸಲ್ಲಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಟ್ವೀಟ್‌ಗೆ ನಿನ್ನೆ. ಪ್ರತಿಕ್ರಿಯೆ ನೀಡಿರುವ ಶೆಹಬಾಜ್‌, ನಮ್ಮ ದೇಶವು ಭಾರತದೊಂದಿಗೆ ಶಾಂತಿಯುತ ಮತ್ತು ಸಹಕಾರಯುತ ಸಂಬಂಧವನ್ನು ಬಯಸುತ್ತದೆ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಎರಡೂ ದೇಶಗಳ ನಡುವೆ ಇರುವ ಎಲ್ಲ ಸಮಸ್ಯೆಗಳಿಗೂ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕಿದೆ. ಪಾಕಿಸ್ತಾನವೂ ಅದನ್ನೇ ಬಯಸುತ್ತದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನವು ಮಾಡುತ್ತಿರುವ ತ್ಯಾಗವು ಎಲ್ಲರಿಗೂ ಗೊತ್ತಿದೆ. ನಾವೀಗ ಶಾಂತಿ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯತ್ತ ಗಮನ ನೆಡಬೇಕಿದೆ ಎಂದು ಶೆಹಬಾಜ್‌ ಹೇಳಿದ್ದಾರೆ.

ಶೆಹಬಾಜ್‌ರಿಗೆ ಅಭಿನಂದನೆ ಸಲ್ಲಿಸಿ ಟ್ವೀಟ್‌ ಮಾಡಿದ್ದ ಪ್ರಧಾನಿ ಮೋದಿ, ಉಗ್ರವಾದ- ಮುಕ್ತ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಭಾರತ ಬಯಸುತ್ತದೆ ಎಂದಿದ್ದರು. ಇನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಟ್ವೀಟ್‌ ಮಾಡಿ, ಅಭಿನಂದನೆಯ ಜೊತೆಗೆ ಭಯೋತ್ಪಾದನೆ ಮಟ್ಟ ಹಾಕಿ ಎಂದು ತಿಳಿಸಿದ್ದಾರೆ.

ಇಸ್ತಾನ್ ಬುಲ್ ಸಂಧಾನದ ಪ್ರಸ್ತಾಪಗಳಿಂದ ಉಕ್ರೇನ್ ಹಿಂದೆ ಸರಿದಿದೆ-ಪುಟಿನ್

0

ತನ್ನ ಗುರಿಗಳನ್ನು ಈಡೇರಿಸಿಕೊಳ್ಳುವವರೆಗೆ ಉಕ್ರೇನ್‌ನಲ್ಲಿ ರಷ್ಯಾ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರೆಸಲಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ರಷ್ಯಾದ ಪೂರ್ವ ಭಾಗದಲ್ಲಿರುವ ವೊಸ್ಟೊಚ್ನಿ ಬಾಹ್ಯಾಕಾಶ ಉಡ್ಡಯನ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನಿಗದಿತ ಗುರಿಗಳನ್ನು ತಲುಪುವವರೆಗೆ ಮಿಲಿಟರಿ ಕಾರ್ಯಾಚರಣೆಯು ಮುಂದುವರಿಯುತ್ತದೆ ಎಂದು ಹೇಳಿದರು.

ಯೋಜನೆಯ ಪ್ರಕಾರವೇ ಈಗ ಕಾರ್ಯಾಚರಣೆ ನಡೆಯುತ್ತಿದೆ.
ಜೀವ ಹಾನಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಷ್ಯಾ ವೇಗವಾಗಿ ಕಾರ್ಯಾಚರಣೆ ಕೈಗೊಂಡಿಲ್ಲ ಎಂದು ಅವರು ಹೇಳಿದರು.

ಇಸ್ತಾನ್‌ಬುಲ್‌ನಲ್ಲಿ ರಷ್ಯಾದ ಸಂಧಾನಕಾರರೊಂದಿಗಿನ ಮಾತುಕತೆಯ ಸಮಯದಲ್ಲಿ ಮಾಡಿದ ಪ್ರಸ್ತಾಪಗಳಿಂದ ಉಕ್ರೇನ್ ಹಿಂದೆ ಸರಿದಿದೆ. ಇದರ ಪರಿಣಾಮವಾಗಿಯೇ ಮಾತುಕತೆಯಲ್ಲಿ ಬಿಕ್ಕಟ್ಟು ಉಂಟಾಗಿದೆ ಮತ್ತು ಮಾಸ್ಕೋ ತನ್ನ ಆಕ್ರಮಣವನ್ನು ಮುಂದುವರಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲದಂತಾಗಿದೆ ಎಂದು ಪುಟಿನ್ ಹೇಳಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿರುವ ಶ್ರೀಲಂಕಾ ವಿದೇಶೀ ಸಾಲ ತೀರಿಸಲೂ ಅಸಮರ್ಥ

0

ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾವು, 5,100 ಕೋಟಿ ಅಮೆರಿಕನ್ ಡಾಲರ್ (ಸುಮಾರು ₹3.87 ಲಕ್ಷ ಕೋಟಿ) ಮೊತ್ತದಷ್ಟು ವಿದೇಶಿ ಸಾಲ ಮರುಪಾವತಿ ಸಾಧ್ಯವಿಲ್ಲ ಎಂದು ಘೋಷಿಸಿದೆ.

ವಿದೇಶಿ ಸಾಲವನ್ನು ಮಾರುಪಾವತಿ ಮಾಡುವ ಸಾಮರ್ಥ್ಯವನ್ನು ನಾವು ಕಳೆದುಕೊಂಡಿದ್ದೇವೆ. ಇದನ್ನು ನಾವು ಸಾಲದಾತರಿಗೆ ತಿಳಿಸಿದ್ದೇವೆ. ದೇಶದ ಆರ್ಥಿಕ ಸ್ಥಿತಿ ಮತ್ತಷ್ಟು ಶೋಚನೀಯವಾಗುವುದನ್ನು ತಡೆಯುವ ಅತ್ಯಂತ ಕೊನೆಯ ಯತ್ನವಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಶ್ರೀಲಂಕಾ ಕೇಂದ್ರೀಯ ಬ್ಯಾಂಕ್‌ನ ಗವರ್ನರ್ ನಂದಲಾಲ್‌ ವೀರಸಿಂಘೆ ಅವರು ತಿಳಿಸಿದ್ದಾರೆ.

ವಿದೇಶಗಳಿಂದ ಇಂಧನ, ಆಹಾರ ಪದಾರ್ಥಗಳನ್ನು ಖರೀದಿಸಲು ಸಾಧ್ಯವಿಲ್ಲದೇ ಇರುವಷ್ಟು ಕನಿಷ್ಠಮಟ್ಟಕ್ಕೆ ಶ್ರೀಲಂಕಾದ ವಿದೇಶಿ ವಿನಿಮಯ ನಿಧಿ ಕುಸಿದಿದೆ.
ಮುಂದಿನ ದಿನಗಳಲ್ಲಿ ಸಾಲದ ಕಂತು ಪಾವತಿಸಬೇಕಾಗಿತ್ತು.

ಆದರೆ ಸಾಲ ತೀರಿಸಲು ಅಗತ್ಯವಿರುವಷ್ಟು ವಿದೇಶಿ ವಿನಿಮಯ ನಿಧಿ ಇಲ್ಲದೇ ಇರುವ ಕಾರಣಕ್ಕೆ, ವಿದೇಶಿ ಸಾಲ ಮರುಪಾವತಿ ಸಾಧ್ಯವಿಲ್ಲ ಎಂದು ಶ್ರೀಲಂಕಾ ಹೇಳಿದೆ.

ಶ್ರೀಲಂಕಾದಲ್ಲಿ ಹಲವು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು 2005ರಿಂದ ಚೀನಾ ಸಾಲ ನೀಡುತ್ತಾ ಬಂದಿದೆ. ದೇಶದ ಒಟ್ಟು ಸಾಲದಲ್ಲಿ ಚೀನಾದ ಪಾಲು ಶೇ 10ರಷ್ಟನ್ನು ಮೀರುತ್ತದೆ. ಸಾಲ ಮರುಪಾವತಿ ಸಾಧ್ಯವಿಲ್ಲ ಎಂದು ಘೋಷಿಸಿದ್ದರೂ, ಶ್ರೀಲಂಕಾಗೆ ನೆರವು ನೀಡಲು ನಾವು ಸಿದ್ಧರಿದ್ದೇವೆ ಎಂದು ಚೀನಾ ಘೋಷಿಸಿದೆ.

ಸಾಲ ಮರುಪಾವತಿ ಸಾಧ್ಯವಿಲ್ಲ ಎಂಬುದು ಈ ಮೊದಲೇ ಗೊತ್ತಾಗಿತ್ತು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಚೀನಾ ನಂತರ ಶ್ರೀಲಂಕಾಗೆ ಹೆಚ್ಚು ಸಾಲ ನೀಡಿದ ದೇಶಗಳ ಸಾಲಿನಲ್ಲಿ ಜಪಾನ್‌ ಮತ್ತು ಭಾರತ ಇವೆ. ಆರ್ಥಿಕ ಬಿಕ್ಕಟ್ಟು ಬಿಗಡಾಯಿಸಿದ ಕಾರಣ ಸಾಲ ಮರುಪಾವತಿ ವಿಧಾನವನ್ನು ಬದಲಿಸುವಂತೆ ಶ್ರೀಲಂಕಾವು ಚೀನಾ ಮತ್ತು ಭಾರತಕ್ಕೆ ಮನವಿ ಮಾಡಿಕೊಂಡಿತ್ತು. ಆದರೆ ಎರಡೂ ದೇಶಗಳು ಈ ಬೇಡಿಕೆಯನ್ನು ತಿರಸ್ಕರಿಸಿದ್ದವು. ಬದಲಿಗೆ, ಕಡಿಮೆ ಬಡ್ಡಿ ದರದಲ್ಲಿ ಮತ್ತಷ್ಟು ಸಾಲ ನೀಡಿದ್ದವು.
ವಿದೇಶಿ ವಿನಿಮಯ ನಿಧಿಯ ಬಹುಪಾಲನ್ನು ಸಾಲ ಮರುಪಾವತಿಸಲು ಸರ್ಕಾರ ಬಳಸಿದೆ. ಕೊನೆಯ ಕ್ಷಣದವರೆಗೂ ಸಾಲ ಮರುಪಾವತಿಗೆ ಸರ್ಕಾರ ಸಿದ್ಧವಿತ್ತು. ಜನರ ಹಿತಾಸಕ್ತಿಯನ್ನು ಬಲಿಕೊಟ್ಟು, ಸಾಲ ಮರುಪಾವತಿಸಲು ಸರ್ಕಾರ ಮುಂದಾಗಿತ್ತು.