Thursday, February 26, 2026
Thursday, February 26, 2026
Home Blog Page 1626

ಕೆಜಿಎಫ್ 2 ಹಿಂದಿನೆಲ್ಲ ಕನ್ನಡ ಚಿತ್ರಗಳ ಗಳಿಕೆ ಮೀರಲಿದೆ

0

ಕೆಜಿಎಫ್ ಚಾಪ್ಟರ್ 2 ಸಿನಿಮಾ ಇಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. 8 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಈ ಚಿತ್ರ ತೆರೆಕಂಡಿದೆ.

ಭಾರತದಲ್ಲಿಯೇ 6000 ಗೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಐದು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣಗೊಂಡಿದ್ದು, ಎಪ್ಪತ್ತು ದೇಶಗಳಲ್ಲಿ ಇಂದು ತೆರೆಕಂಡಿದೆ.
ಚಿತ್ರ ಬಿಡುಗಡೆಗೂ ಮುನ್ನವೇ ಟಿಕೆಟ್ ಮುಂಗಡ ಬುಕ್ಕಿಂಗ್ ಆರಂಭಗೊಂಡಿದ್ದು, ತೆರೆ ಮೇಲೆ ತಮ್ಮ ನೆಚ್ಚಿನ ನಟನನ್ನು ಕಂಡು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್, ಸಂಜಯ್ ದತ್, ರವೀನಾ ಟಂಡನ್ ಮೊದಲಾದವರು ನಟಿಸಿದ್ದಾರೆ. ವಿಜಯ್ ಕಿರಂಗದೂರು ತಮ್ಮ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

ಈ ಚಿತ್ರ ರಾಜಮೌಳಿ ನಿರ್ದೇಶನದ RRR ಚಿತ್ರವನ್ನೂ ಮೀರಿಸಲಿದೆ ಎಂಬ ಮಾತುಗಳು ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಿದೆ. ಕನ್ನಡ ಚಿತ್ರವೊಂದು ಈಗ ವಿಶ್ವದಾದ್ಯಂತ ಸದ್ದು ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆ ತಂದಿದೆ.

ಸಿ.ಎಂ.ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನೇಮಕ-ದೇವೇಗೌಡರು

0

ಜಾತ್ಯತೀತ ಜನತಾ ದಳ ಪಕ್ಷದ ನೂತನ ಸಾರಥಿಯಾಗಿ ಸಿ.ಎಂ. ಇಬ್ರಾಹಿಂ ನೇಮಕಗೊಳ್ಳಲಿದ್ದಾರೆ ಎಂದು ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಘೋಷಿಸಿದರು.

ರಾಮನಗರದಲ್ಲಿ ನಡೆದ ಜನತಾ ಜಲಧಾರೆ ಸಮಾವೇಶದಲ್ಲಿ ಈ ಕುರಿತು ಮಾಹಿತಿ ದೇವೇಗೌಡರು, ಏ.17ರಂದು ಒಳ್ಳೆಯ ದಿನವಾಗಿದ್ದು, ಅಂದೇ ಇಬ್ರಾಹಿಂ ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದರು.

ಹಾಲಿ ಅಧ್ಯಕ್ಷ ಎಚ್​.ಕೆ. ಕುಮಾರಸ್ವಾಮಿ ಅವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸರಿಸಮನಾಗಿ ಸಂಸದೀಯ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು. ಈ ಮೂಲಕ ಇಬ್ಬರೂ ಅನುಭವಿ ನಾಯಕರು ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದರು.

ಬಾಲಕಾರ್ಮಿಕರು ಕಂಡುಬಂದರೆ 1098 ಸಂಖ್ಯೆಗೆ ಕರೆಮಾಡಿ-ಡಾ.ಸೆಲ್ವಮಣಿ

0

ಶಿವಮೊಗ್ಗ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಬಾಲಕಾರ್ಮಿಕರನ್ನು ಪತ್ತೆ ಹಚ್ಚಲು ನಿರಂತರ ತಪಾಸಣಾ ಕಾರ್ಯವನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಜಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಬಾಲಕಾರ್ಮಿರನ್ನು ಕೆಲಸದಲ್ಲಿ ತೊಡಗಿಸಿಕೊಂಡಿರುವ ಸಾಧ್ಯತೆಗಳು ಹೆಚ್ಚಿವೆ. ಅಡಿಕೆ ತೋಟಗಳು, ಇಟ್ಟಿಗೆ ಭಟ್ಟಿಗಳು, ಪೌಲ್ಟ್ರಿ ಫಾರ್ಮ್‍ಗಳು, ಮಂಡಕ್ಕಿ ಭಟ್ಟಿಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸಬೇಕು. ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾಲಕಾರ್ಮಿಕರು ಇಲ್ಲದಿರುವುದರ ಬಗ್ಗೆ ಪಿಡಿಒಗಳು ಮತ್ತು ಸ್ಥಳೀಯ ಸಂಸ್ಥೆ ಅಧಿಕಾರಿಗಳು ಮುಚ್ಚಳಿಕೆ ಪತ್ರವನ್ನು ಸಲ್ಲಿಸಬೇಕು. ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‍ಗಳು ಸಹ ತಪಾಸಣಾ ಕಾರ್ಯ ನಡೆಸಿ ಬಾಲಕಾರ್ಮಿಕರು ಕಂಡು ಬಂದಲ್ಲಿ ಮಾಲಿಕರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಬೇಕು ಎಂದರು.

ಕಳೆದ ವರ್ಷ ಜಿಲ್ಲೆಯಲ್ಲಿ ಬಾಲಕಾರ್ಮಿಕರನ್ನು ಪತ್ತೆ ಹಚ್ಚಲು 638 ದಿಢೀರ್ ತಪಾಸಣೆ ಕೈಗೊಳ್ಳಲಾಗಿದ್ದು, 7ಪ್ರಕರಣಗಳಲ್ಲಿ ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ ಎಫ್‍ಐಆರ್ ದಾಖಲಿಸಲಾಗಿದೆ. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಬಾಲಕಾರ್ಮಿಕರ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಜಿಲ್ಲೆಯಲ್ಲಿ 58 ಅಪಾಯಕಾರಿ ಉದ್ದಿಮೆಗಳು ಹಾಗೂ 11262 ಅಪಾಯಕಾರಿಯಲ್ಲದ ಉದ್ದಿಮೆಗಳನ್ನು ಗುರುತಿಸಲಾಗಿದೆ. ಈ ಎಲ್ಲಾ ಕಡೆ ಬಾಲಕಾರ್ಮಿಕರನ್ನು ತೊಡಗಿಸಲಾಗಿದೆಯೇ ಎಂದು ತಪಾಸಣೆ ಮಾಡಲಾಗಿದೆ ಎಂದು ಬಾಲಕಾರ್ಮಿಕ ಯೋಜನಾಧಿಕಾರಿ ರಘನಾಥ್ ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಎಲ್ಲಿಯಾದರೂ ಬಾಲಕಾರ್ಮಿಕರು ಕಂಡು ಬಂದಲ್ಲಿ ಸಾರ್ವಜನಿಕರು 1098 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ. ಬಾಲಕಾರ್ಮಿಕ ಪದ್ಧತಿಯಿಂದಾಗಿ ಅಂತಹ ಮಕ್ಕಳ ಶೋಷಣೆ, ಲೈಂಗಿಕ ಕಿರುಕುಳ, ಕ್ರಿಮಿನಲ್ ಕೃತ್ಯಗಳಿಗೆ ದಾರಿಯಾಗುತ್ತದೆ. ಬಾಲಕಾರ್ಮಿಕರನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಬಾಲಕಾರ್ಮಿಕ ಜಾಗೃತಿ ಭಿತ್ತಿಪತ್ರಿಕೆಯನ್ನು ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಹೊನ್ನಳ್ಳಿ, ಜಿಲ್ಲಾ ಕಾರ್ಮಿಕ ಕಲ್ಯಾಣಾಧಿಕಾರಿ ಸೀಬಿ ರಂಗಯ್ಯ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿಕಾರ್ಜುನ್, ತಹಶೀಲ್ದಾರ್ ಗಳು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ವಂತ ಊರಿನಲ್ಲಿ ಸಂತೋಷ ಪಾಟೀಲ ಅವರ ಅಂತ್ಯ ಸಂಸ್ಕಾರ

0

ಆತ್ಮಹತ್ಯೆ ಮಾಡಿಕೊಂಡು ಮೃತರಾದ ಗುತ್ತಿಗೆದಾರ ಸಂತೋಷ ಪಾಟೀಲ್ ಅವರ ಅಂತ್ಯಕ್ರಿಯೆ ನಡೆಯಿತು.
ಬೆಳಗಾವಿ ಜಿಲ್ಲೆಯ ಬಡಸ ಗ್ರಾಮದಲ್ಲಿ ವಿಧಿವತ್ತಾಗಿ ಶವಸಂಸ್ಕಾರ ನಡೆಯಿತು.
ಇದಕ್ಕೆ ಮುನ್ನ ಸ್ವಲ್ಪ ಹೊತ್ತು ಅಲ್ಲಿ ಸಹೋದರ ಬಸವಗೌ ಡ ಪಾಟೀಲರು ಆತ್ಮಹತ್ಯೆಗೆ ಕಾರಣರಾದವರನ್ನ ಬಂಧಿಸಲು ಪಟ್ಟು ಹಿಡಿದರು. ಪೋಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು ಎನ್ನಲಾಗಿದೆ.
ಮೃತದೇಹ ಸ್ವಂತ ಊರಿಗೆ ಬಂದಾಗ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ
ಮತ್ತು ಅನೇಕರು
ಸಂತೋಷ ಅವರ ಮೃತದೇಹದ ದರ್ಶನ ಪಡೆದರು.

ಪ್ರಧಾನಿ ಮೋದಿ ಅವರಿಗೆ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ

0

ಪ್ರಧಾನಿ ನರೇಂದ್ರ ಮೋದಿ ಅವರು ಲತಾ ದೀನನಾಥ್ ಮಂಗೇಶ್ವರ್ ಪ್ರಶಸ್ತಿ ಗೌರವ ಪಡೆಯುವ ಪ್ರಥಮ ವ್ಯಕ್ತಿಯಾಗಲಿದ್ದಾರೆ.

ಏಪ್ರಿಲ್ 24 ರಂದು ನಡೆಯಲಿರುವ 80ನೇ ವಾರ್ಷಿಕ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊದಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇತ್ತೀಚಿಗೆ ಮುಂಬೈನಲ್ಲಿ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ಮತ್ತು ಗೌರವಾರ್ಥವಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.

ಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ ಚಾರಿಟಬಲ್ ಟ್ರಸ್ಟ್, “ನಮ್ಮ ರಾಷ್ಟ್ರ, ಜನರು, ನಮ್ಮ ಸಮಾಜಕ್ಕೆ ಅದ್ಭುತ ಮತ್ತು ಅನುಕರಣೀಯ ಕೊಡುಗೆಗಳನ್ನು ನೀಡಿದ ಓರ್ವ ವ್ಯಕ್ತಿಗೆ ಈ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುವುದು” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ರಾಷ್ಟ್ರ ಮತ್ತು ಸಮಾಜಕ್ಕೆ ನಿಸ್ವಾರ್ಥ ಸೇವೆಗಾಗಿ ಪ್ರಧಾನಿ ಮೋದಿ ಮೊದಲಿಗರಾಗಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ ಚಾರಿಟಬಲ್ ಟ್ರಸ್ಟ್ ತಿಳಿಸಿದೆ.

ಏಪ್ರಿಲ್ 24 ರಂದು ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ತಂದೆ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಅವರ 80ನೇ ಪುಣ್ಯತಿಥಿ. ಪ್ರಶಸ್ತಿ ಪ್ರದಾನ ಸಮಾರಂಭ ಮುಂಬೈನ ಷಣ್ಮುಖಾನಂದ ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

ಪ್ರಾಥಮಿಕ ವರದಿ ಬರುವವರೆಗೆ ರಾಜಿನಾಮೆ ಕೇಳುವುದಿಲ್ಲ- ಸಿಎಂ

0

ಗುತ್ತಿಗೆದಾರ ಸಂತೋಷ್ ಪಾಟೀಲ್ ಅಸಹಜ ಸಾವಿನ ಪ್ರಾಥಮಿಕ ವರದಿ ಬರುವವರೆಗೂ ಸಚಿವರಿಂದ ರಾಜೀನಾಮೆ ಪಡೆಯುವುದಿಲ್ಲ ಎಂದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಈಗಾಗಲೇ ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪ ಅವರಿಂದಲೇ ನಾನು ಸ್ಪಷ್ಟನೆ ಪಡೆದುಕೊಂಡಿದ್ದೇನೆ.
ಪ್ರಕರಣಕ್ಕೂ ಸಚಿವರಿಗೂ ಸಂಬಂಧವಿಲ್ಲ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ.

ಈಗ ಇಲಾಖೆಯಿಂದ ಏನೆಲ್ಲ ಸ್ಪಷ್ಟನೆ ಬೇಕೋ, ಅದನ್ನು ಪಡೆದಿದ್ದು ಆಗಿದೆ. ಇನ್ನು ಪ್ರಕರಣ ತನಿಖೆಗೆ ವಹಿಸಿ, ಪ್ರಾಥಮಿಕ ವರದಿಗಾಗಿ ಕಾಯುತ್ತಿದ್ದೇವೆ. ಹೀಗಾಗಿ, ಪ್ರಾಥಮಿಕ ವರದಿ ಬರುವವರೆಗೂ ಸಚಿವರಿಂದ ರಾಜೀನಾಮೆ ಪಡೆಯುವುದಿಲ್ಲ ಎಂದು ಬೊಮ್ಮಾಯಿ ಸ್ಪಷ್ಟನೆ ನೀಡಿದರು.

ರಷ್ಯದ ಜಾಗತಿಕ ಗ್ರಾಹಕರೊಂದಿಗೆ ಮಾತ್ರ ವ್ಯವಹರಿಸುತ್ತೇವೆ-ಇನ್ಫೋಸಿಸ್

0

ರಷ್ಯಾ ಗ್ರಾಹಕರ ಜೊತೆ ಕೆಲಸ ಮಾಡುವುದಿಲ್ಲ ಎಂದು ಇನ್ಫೊಸಿಸ್ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಇನ್ಫೊಸಿಸ್ ಸಿಇಒ ಸಲೀಲ್ ಪಾರೇಖ್, ನಾವು ರಷ್ಯಾದ ಗ್ರಾಹಕರ ಜೊತೆ ಕೆಲಸ ಮಾಡುವುದಿಲ್ಲ. ಕೇವಲ ರಷ್ಯಾದಲ್ಲಿರುವ ಕೆಲವೇ ಜಾಗತಿಕ ಗ್ರಾಹಕರೊಡನೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ರಷ್ಯಾದಲ್ಲಿನ ಪ್ರಸ್ತುತ ಬೆಳವಣಿಗೆಯಿಂದ ನಮ್ಮ ಕಂಪನಿ ಮೇಲೆ ಪ್ರಭಾವವೇನೂ ಆಗಿಲ್ಲ. ರಷ್ಯಾದಲ್ಲಿನ ವರ್ಕ್‌ ಸ್ಟೆಷನ್‌ಗಳನ್ನು ರಷ್ಯಾದ ಹೊರಗೆ ಸ್ಥಳಾಂತರಿಸಲಾಗುವುದು. ಅಲ್ಲಿ 100 ಕ್ಕೂ ಕಡಿಮೆ ಇನ್ಫೊಸಿಸ್ ಉದ್ಯೋಗಿಗಳಿದ್ದಾರೆ ಎಂದಿದ್ದಾರೆ.

ಯುರೋಪ್‌ನಲ್ಲಿ ಇನ್ಫೊಸಿಸ್ ಒಂದು ಕಂಪನಿಯಾಗಿ ಎರಡೂ ಕಡೆಗಳಿಂದ (ರಷ್ಯಾ-ಉಕ್ರೇನ್) ಶಾಂತಿ ಒಪ್ಪಂದವಾಗುವುದನ್ನು ಎದುರು ನೋಡುತ್ತಿದೆ.

ಉಕ್ರೇನ್‌ನಲ್ಲಿ ಮಾನವೀಯತೆಯ ಆಧಾರದ ಮೇಲೆ 1 ಮಿಲಿಯನ್ ಡಾಲರ್ ನೆರವು ನೀಡಲಾಗಿದೆ ಎಂದು ಪಾರೇಖ್ ತಿಳಿಸಿದ್ದಾರೆ.

ವಿಶ್ವ ರತ್ನ ಡಾ.ಅಂಬೇಡ್ಕರ್

0

ಇಂದು ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ರವರ 130 ನೇ ಜಯಂತಿ.

ಭಾರತ ಮಾತ್ರವಲ್ಲದೇ ಸುಮಾರು 143ಕ್ಕಿಂತ ಹೆಚ್ಚು ರಾಷ್ಟ್ರಗಳು ಅಂಬೇಡ್ಕರ್ ರವರ ಜನ್ಮ ಜಯಂತಿಯನ್ನು ಆಚರಿಸುತ್ತಿವೆ. ಇದು ಹೆಮ್ಮೆಯ ವಿಷಯವೇ ಸರಿ.

ಅಂಬೇಡ್ಕರ್ ರವರ ಸಾಧನೆಗೆ ಇಡೀ ಜಗತ್ತೇ ತಲೆ ಬಾಗಿದೆ ಎಂದರೆ ತಪ್ಪಾಗಲಾರದು.

ಡಾ. ಬಿ.ಆರ್. ಅಂಬೇಡ್ಕರ್ 1891ರ ಏಪ್ರಿಲ್ 14 ರಂದು ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು.
ಅಂಬೇಡ್ಕರ್ ರವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು.

ಭೀಮರಾವ್ ಅಂಬೇಡ್ಕರ್, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು.

ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ. ಇವರು ಮಹಾರ‍ ಜಾತಿಯಲ್ಲಿ ಹುಟ್ಟಿದರು. ಈ ಜಾತಿಯವರು ಹೆಚ್ಚಿನ ಜನ ಬ್ರಿಟಿಷ್ ಸರ್ಕಾರದ ಮಿಲಿಟರಿ ಸೇವೆಯಲ್ಲಿ ಉದ್ಯೋಗಕ್ಕಾಗಿ ಸೇರುತ್ತಿದ್ದರು.
ಇವರ ಅಜ್ಜ ಮಾಲೋಜಿ ಸಕ್ಪಾಲ್ ಅವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಬಾಂಬೆ ಸೇನೆಯಲ್ಲಿ ಸೇರಿ, ಹವಾಲ್ದಾರರಾಗಿ ನಿವೃತ್ತಿ ಹೊಂದಿದ್ದರು. ಇವರು ಆ ಕಾಲಕ್ಕೆ 19 ಮೆಡಲ್ ಗಳನ್ನು ಗಳಿಸಿದ್ದರು. ಇವರಿಗೆ ಇಬ್ಬರು ಮಕ್ಕಳು ರಾಮಜಿ ಸಕ್ಪಾಲ್, ಮೀರಾ ಸಕ್ಪಾಲ್. ರಾಮಜಿ ಸಕ್ಪಾಲ್ ಅವರ ಹೆಂಡತಿ ಭೀಮಬಾಯಿ. ಇವರು ಠಾಣೆ ಜಿಲ್ಲೆಯ ಮುರಬಾದಕರ್ ಎಂಬ ಅಸ್ಪೃಶ್ಯ ಕುಟುಂಬದವರು.
ಇವರ ತಂದೆ ಹಾಗೂ ಆರು ಜನ ಚಿಕ್ಕಪ್ಪಂದಿರು, ಸೈನ್ಯದಲ್ಲಿ ಸುಬೇದಾರರಾಗಿದ್ದರು.ರಾಮಜಿ ಮತ್ತು ಭೀಮಬಾಯಿ ರವರು ಇಬ್ಬರು ಕಷ್ಟ ಸಹಿಷ್ಣುಗಳಾದ ಸತಿಪತಿಗಳಾಗಿದ್ದರು.

ಇವರಿಗೆ 14 ಮಕ್ಕಳು ಹುಟ್ಟಿದರು. ಈ 14ನೇ ಮಗುವೇ ಅಂಬೇಡ್ಕರ್. ಅಂಬೇಡ್ಕರ್ ಅವರ ಮೊದಲ ಹೆಸರು ಭೀಮರಾವ್ ಆಗಿತ್ತು. ಡಾ. ಅಂಬೇಡ್ಕರರು ನಾನು ನನ್ನ ತಂದೆ ತಾಯಿಯರಿಗೆ 14 ನೇ ರತ್ನನಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರಂತೆ.

ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು. ಅವರು ಸಾಮಾಜಿಕ ಸುಧಾರಕ, ಶಿಕ್ಷಣ ತಜ್ಞ, ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಕಾನೂನು ತಜ್ಞರಾಗಿ ದೇಶದ ಸಂವಿಧಾನಕ್ಕೆ ನೀಡಿರುವ ಕೊಡುಗೆ ಅಪಾರ.

ಸಮಾಜ, ಜಾತಿ ಮತ್ತು ಸಮುದಾಯಗಳ ಬಗೆಗಿನ ಅವರ ಆಲೋಚನೆಗಳು ರಾಜಕೀಯ ಗಡಿಗಳನ್ನು ಮೀರಿದ್ದಾಗಿದೆ.

ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ದೀನ ದಲಿತರಿಗಾಗಿ ಹೋರಾಡಿದರು ಮತ್ತು ಲಿಂಗ ಸಮಾನತೆಯನ್ನು ಬಲವಾಗಿ ನಂಬಿದ್ದರು. ಅವರು ಶಿಕ್ಷಣದ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಒತ್ತಾಯಿಸಿದರು. ಸಮಾಜದ ಎಲ್ಲ ಜನರಿಗೆ ಸಮಾನತೆಯನ್ನು ಖಾತ್ರಿಪಡಿಸಿಕೊಳ್ಳಲು ಜಾತಿ ಅಡೆತಡೆಗಳನ್ನು ಕೆಡವಲು ಶ್ರಮಿಸಿದರು.

ದೀನ ದಲಿತರಿಗೆ ಶಿಕ್ಷಣವನ್ನು ತಲುಪುವಂತೆ ಮಾಡಲು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಅವರು ಒತ್ತು ನೀಡಿದರು.

ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಹಲವಾರು ಸುಧಾರಣೆಗಳನ್ನು ತಂದರು. ದಲಿತರು ಹಾಗೂ ಅಸ್ಪೃಶ್ಯರಿಗೆ ಸಮಾನ ಹಕ್ಕುಗಳಿಗಾಗಿ ಒತ್ತಾಯಿಸಿ ಪ್ರತಿಭಟನೆಗಳನ್ನು ಸಹ ನಡೆಸಿದರು. ಮಹಾನ್ ವ್ಯಕ್ತಿ ಅಂಬೇಡ್ಕರ್ ವರ್ಗ ಮತ್ತು ಜಾತಿಯನ್ನು ಲೆಕ್ಕಿಸದೆ ತುಳಿತಕ್ಕೊಳಗಾದವರ ಮತ್ತು ಬಡವರ ಹಕ್ಕುಗಳಿಗಾಗಿ ಹೋರಾಡಿದರು.

ಹಿಂದೂ ಧರ್ಮದಲ್ಲಿ ಇದ್ದು ಅಸ್ಪೃಶ್ಯತೆ ಹೋಗಲಾಡಿಸುವುದು ಕಷ್ಟವೆಂದು ಅರಿತ ಅಂಬೇಡ್ಕರ್ 1956 ರಲ್ಲಿ ನಾಗ್ಪುರದಲ್ಲಿ ನಡೆದ ಸಮಾರಂಭದಲ್ಲಿ ಸುಮಾರು 200,000 ಸಹವರ್ತಿ ದಲಿತರೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.

ಕರಡು ಸಮಿತಿಯ ಅದ್ಯಕ್ಷರಾಗಿದ್ದ ಅಂಬೇಡ್ಕರ ಅವರು ಸಹಜವಾಗಿ ‘ಸಂವಿಧಾನ ಶಿಲ್ಪಿ’ ಎನಿಸಿದರು.
ಅಂಬೇಡ್ಕರ್ ಅವರಿಗೆ ಭಾರತದ ಪರಮೋಚ್ಛ ನಾಗರಿಕ ಪುರಸ್ಕಾರ “ಭಾರತ ರತ್ನ” ವನ್ನು ಮರಣೋತ್ತರವಾಗಿ ಪ್ರಧಾನ ಮಾಡಲಾಯಿತು.

ಸಂಸತ್ತು (ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ) ಸದಸ್ಯರಾಗಿ
ಅಂಬೇಡ್ಕರರನ್ನು ಆಗಿನ ಪ್ರಧಾನಿ ಜವಹರಲಾಲ್ ನೆಹರೂ ತಮ್ಮ ಮಂತ್ರಿಮಂಡಲದಲ್ಲಿ ಕಾನೂನು ಸಚಿವರಾಗುವಂತೆ ಆಹ್ವಾನಿಸಿದರು.

1952 ಜೂನ್ 15ರಂದು ಕೊಲಂಬಿಯಾ ವಿಶ್ವವಿದ್ಯಾನಿಲಯವು ಅವರಿಗೆ ಕಾನೂನಿನ ಡಾಕ್ಟರೇಟ್(ಎಲ್‌ಎಲ್‍.ಡಿ) ಗೌರವ ಪದವಿ ಪ್ರದಾನ ಮಾಡಿತು.

1953, ಜನವರಿ 12ರಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯವು ಅವರಿಗೆ ಎಲ್‌ಎಲ್‍.ಡಿ ಗೌರವ ಪದವಿ ಕೊಟ್ಟು ಪುರಸ್ಕರಿಸಿತು.

2015- ವಿಶ್ವರತ್ನ ಪ್ರಶಸ್ತಿಯನ್ನು ಕೊಲಂಬಿಯ ವಿಶ್ವವಿದ್ಯಾನಿಲಯದಿಂದ ಮರಣೋತ್ತರವಾಗಿ ನೀಡಲಾಯಿತು.

ಮಾರ್ಚ್ 31, 1990 ರಂದು ಅವರಿಗೆ ಮರಣೋತ್ತರೂವಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನು ನೀಡಲಾಯಿತು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಡಿಸೆಂಬರ್ 6 ,1956ರಂದು ಇಹಲೋಕ ತ್ಯಜಿಸಿದರು.

ಇಂದು ಆ ಮಹಾನ್ ಉದಾತ್ತ ಆತ್ಮವನ್ನು ನೆನಪಿಸಿಕೊಳ್ಳುವ ಮತ್ತು ಅವರ ನಂಬಿಕೆಗಳು, ಬೋಧನೆಗಳು, ಕಾರ್ಯಗಳನ್ನು ಗೌರವಿಸುವ ಸುದಿನ.

ಜೀವನದ ಮಹಾ ತತ್ವಗಳನ್ನು ಬೋಧಿಸಿದ ಮಹಾವೀರರು

0

“ಅಹಿಂಸಾ ಪರಮೋಧರ್ಮಃ’ ಎಂದು ಸಾರಿದ ಮಹಾವೀರ”
ಭಾರತದಲ್ಲಿ ಪ್ರತಿ ವರ್ಷಚೈತ್ರ ಶುಕ್ಷ ತ್ರಯೋದಶಿಯಂದು 24ನೇಯ ತೀರ್ಥಂಕರನಾದ ಮಹಾವೀರನ ಜಯಂತಿಯನ್ನು ಆಚರಿಸಲಾಗುತ್ತದೆ.

ಈ ದಿನವನ್ನು ‘ಮಹಾವೀರ ಜನ್ಮ ಕಲ್ಯಾಣಕ’ ಎಂದು ಕರೆಯಲಾಗುತ್ತದೆ. ಮಹಾವೀರ ಜಯಂತಿಯನ್ನು ಕೇವಲ ಜೈನರು ಮಾತ್ರವಲ್ಲದೇ ಇತರ ಧರ್ಮಿಯರು ಕೂಡ ಸ್ಮರಿಸುತ್ತಾರೆ.

ಎಲ್ಲ ಜಿನಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ಅಹಿಂಸೆಯನ್ನು ಪ್ರಪಂಚಕ್ಕೆ ಬೋಧಿಸಿದ ಮಹಾವೀರರು ಗೌತಮ ಬುದ್ಧನ ಸಮಕಾಲೀನರು. ಜೈನರು ತಮ್ಮ ಕಠಿಣ ಸಾಧನೆ ಮೂಲಕ ಪರಮಾತ್ಮನ ಗುಣಗಳನ್ನು ತಮ್ಮದಾಗಿಸಿ ತಾವು ಕೂಡ ಜಿನರಾಗಬಹುದೆಂಬ ಭರವಸೆಯಲ್ಲಿ ಮಹಾವೀರ ಜಯಂತಿಯನ್ನು ಆಚರಿಸುತ್ತಾರೆ. ‘ಜಿನ’ಎಂದರೆ ರಾಗ-ದ್ವೇಷ, ಮೋಹಾಧಿಕಾರಗಳನ್ನು ಗೆದ್ದವನು ಎನ್ನಲಾಗುತ್ತದೆ. ‘ಜೈನ’ ಶಬ್ದವು ಜಾತಿಯ ದ್ಯೋತಕವಲ್ಲ ಜಿನ ಮಾರ್ಗದಲ್ಲಿ ನಡೆದು ಜೈನನಾಗಿದ್ದಾನೆ ಎಂಬುದನ್ನು ಸೂಚಿಸುತ್ತದೆ.

ಈ ವರ್ಷದ ಚೈತ್ರ ಶುಕ್ಷ ತ್ರಯೋದಶಿ ದಿನವಾದ ಏಪ್ರಿಲ್ 14 ರಂದು ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತದೆ.
ಮಹಾವೀರರ ಜಯಂತಿಯನ್ನು ಆಚರಿಸಲು ಕಾರಣವೇನೆಂದರೆ “ಅಹಿಂಸಾ ಪರಮೋಧರ್ಮಃ” ಎನ್ನುವ ಮೂಲ ಮಂತ್ರದಿಂದ ಜಗತ್ತಿಗೆ ಶಾಂತಿಯನ್ನು ಬೋಧಿಸಿದ ಮಹಾನ್ ಪುರುಷ.

‘ನೀನು ಜೀವಿಸು ಇತರರನ್ನು ಜೀವಿಸಲು ಬಿಡು’ ಎನ್ನುವ ಮೂಲಕ ಪ್ರತಿಯೊಂದು ಜೀವಿಗೆ ಬದುಕುವ ಸ್ವಾತಂತ್ರ್ಯವಿದೆ ಎಂಬುದನ್ನು ತಿಳಿಸಿದವರು.

ತಮ್ಮ ಸುಖ, ಸಂಪತ್ತು, ಸಿರಿತನ ಎಲ್ಲವನ್ನು ತ್ಯಜಿಸಿ 12 ವರ್ಷಗಳ ಕಠಿಣ ತಪಸ್ಸಿನಿಂದ ಆತ್ಮಕಲ್ಯಾಣ ಮಾಡಿಕೊಂಡು ಜನರಿಲ್ಲಿದ್ದ ಅಂಧಕಾರ, ಮೌಢ್ಯ, ಅಜ್ಞಾನ ಮತ್ತು ಮೂಢನಂಬಿಕೆಗಳನ್ನು ದೂರ ಮಾಡಿ ಜನರ ಹೃದಯದಲ್ಲಿ ಜ್ಞಾನದ ಜ್ಯೋತಿ ಹಚ್ಚಿದವರು ಜೈನಧರ್ಮದ ಪ್ರವರ್ತಕ ಭಗವಾನ್ ಮಹಾವೀರರು.

ಭಗವಾನ್ ಮಹಾವೀರರು ಬಿಹಾರದ ವೈಶಾಲಿಯಲ್ಲಿರುವ ಕುಂಡಲಪುರದ ರಾಜ ದಂಪತಿಗಳಾದ ಸಿದ್ದಾರ್ಥ ಮತ್ತು ತ್ರಿಶಲಾರ ಮಗನಾಗಿ ಕಿ.ಪೂ.599 ಜನಿಸಿದರು. ಆದರೆ ದಿಗಂಬರ ಜೈನರ ಪ್ರಕಾರ ಕ್ರಿ.ಪೂ.615 ರಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಮಹಾವೀರರ ಬಾಲ್ಯದ ಹೆಸರು ವರ್ಧಮಾನ. ಕ್ಷತ್ರಿಯರ ಒಡನಾಟದಲ್ಲಿ ಬೆಳೆದಂತೆಯೇ ಕ್ಷತ್ರಿಯ ಯೋಚಿತ ಶಸ್ತಾçಸ್ತç ವಿದ್ಯೆಗಳಲ್ಲಿ ಕರಗತನಾಗಿದ್ದ ಮಹಾವೀರ ಕುದುರೆ ಸವಾರಿ, ಕುಸ್ತಿ, ಈಜುಗಳಲ್ಲಿ ಅಸಾಮಾನ್ಯನಾಗಿದ್ದ. ಮದವೇರಿದ ಆನೆಯನ್ನು ಪಳಗಿಸಿದ್ದಕ್ಕಾಗಿ ‘ಅತಿವೀರ’ನೆಂದು ಪ್ರಸಿದ್ಧಿ ಹೊಂದಿದ್ದನು.

ಜ್ಞಾನ ಸಂಪಾದನೆಯೆಡೆಗೆ ಮಹಾವೀರ:
ವರ್ಧಮಾನ ಕ್ರಿ.ಪೂ.೯569 ಮಾರ್ಗಶಿರ ಮಾಸದ ಹತ್ತನೇ ದಿನ ಅಂದರೆ 30ನೇ ವಯಸ್ಸಿನಲ್ಲಿ ತನ್ನ ಅರಮನೆ, ಸಿರಿ, ಬಂಧು-ಬಳಗ, ತಂದೆ-ತಾಯಿ ಎಲ್ಲವನ್ನು ತ್ಯಜಿಸಿ, ‘ಜ್ಞಾನ ಸಂಪಾದನೆ’ ಮುಂದೆ ಎಲ್ಲ ವೈಭವಗಳು ತೃಣಕ್ಕೆ ಸಮಾನವೆಂದು ತಿಳಿದು ಸತ್ಯ ಶೋಧನೆ ಹಾದಿ ಹಿಡಿದರು. ಕುಂಡಲಪುರದ ಆಚೆ ಇರುವ ಜ್ಞಾಪಿಕವನದಲ್ಲಿದ್ದ ಅಶೋಕ ವೃಕ್ಷದ ಕೆಳಗೆ ಅಮೃತಶಿಲೆಯ ಮೇಲೆ ಕುಳಿತು ಧ್ಯಾನಾಸಕ್ತನಾದರು.

ಸುಮಾರು 12 ವರ್ಷ 5ತಿಂಗಳು 15 ದಿವಸಗಳ ಕಾಲ ಕಠಿಣ ತಪಸ್ಸನ್ನು ಮಾಡಿದರು. ಮಳೆ, ಚಳಿ, ಬಿಸಿಲನ್ನು ಲೆಕ್ಕಸದೆ ಹಾವು ಚೇಳುಗಳ ಪರಿವಿಲ್ಲದೆ ಕೇವಲ 12-13 ದಿನಗಳಿಗೊಮ್ಮೆ ಹಸಿವು ನೀಗಿಸಿಕೊಳ್ಳುತ್ತಾ ಅತೀಕಠಿಣ ತಪಸ್ಸನ್ನು ಆಚರಿಸಿದರು.

ಗ್ರಿಷ್ಮಋತು ಎರಡನೇ ತಿಂಗಳು, ನಾಲ್ಕನೇ ಪಕ್ಷ, ಸುವ್ರತ ಎನ್ನಲಾಗುವ ದಿನ ಕ್ರಿ.ಪೂ 557ರಂದು ಬಿಹಾರದ ಶಾಲವೃಕ್ಷದ ಕೆಳಗೆ ಮಹಾವೀರರಿಗೆ 42ನೇಯ ವಯಸ್ಸಿನಲ್ಲಿ ಜ್ಞಾನೋದಯವಾಗಿ ಅವರಿಗೆ ‘ಕೇವಲಜ್ಞಾನ’ ಲಭಿಸುತ್ತದೆ. ಈ ಜ್ಞಾನವನ್ನು ಎಲ್ಲವನ್ನು ತಿಳಿಯುವ ದಿವ್ಯಜ್ಞಾನ ಎನ್ನಲಾಗುತ್ತದೆ.

ಇದು ಅವರು ಪರ್ಯಾಂಕಾಸನದಲ್ಲಿದ್ದಾಗ ದೊರೆಯುತ್ತದೆ. ‘ಕೇವಲಜ್ಞಾನ’ ಸಾಧನೆ ಮಾಡಿದ ವರ್ಧಮಾನರು ಜಿತಕಾಮ, ಜಿನ, ಕೇವಲಿ, ಮಹಾವೀರ, ತೀರ್ಥಂಕರ ಎನಿಸಿಕೊಳ್ಳುತ್ತಾರೆ.

ಮಹಾವೀರರ ಪರಿನಿರ್ವಾಣ:
ಸುಮಾರು 32 ವರ್ಷಧರ್ಮ ಬೋಧನೆ ಮಾಡಿದ ಮಹಾವೀರರು ಕ್ರಿ.ಪೂ.527ರ ಕಾರ್ತಿಕ ಬಹುಳ ಅಮವಾಸ್ಯೆ ಸೋಮವಾರ ಬೆಳಿಗ್ಗೆ ದೀಪಾವಳಿಯಂದು 72ನೆಯ ವಯಸ್ಸಿನಲ್ಲಿ ಪಾವಾಪುರಿ ಎಂಬಲ್ಲಿ ನಿರ್ವಾಣವಾಗುತ್ತಾರೆ. ಜೈನರು ದೀಪಾವಳಿಯನ್ನು ಮಹಾವೀರರು ಮುಕ್ತವಾದ ದಿನವಾಗಿ ಆಚರಿಸುತ್ತಾರೆ.

ಅನೇಕಾಂತವಾದ ಪ್ರಜಾಪ್ರಭುತ್ವಕ್ಕೆ ಪೂರಕವಾದ ಸಿದ್ಧಾಂತ:
ಭಗವಾನ್ ಮಹಾವೀರರು ಪ್ರತಿಪಾದಿಸಿದ ಅನೇಕಾಂತವಾದ ಸಿದ್ದಾಂತದಲ್ಲಿ ಪ್ರತಿಯೊಬ್ಬರ ಅಭಿಪ್ರಾಯವನ್ನು ಗೌರವಿಸಲಾಗುತ್ತದೆ. ಸತ್ಯಕ್ಕೆ ಹಲವು ಮುಖಗಳು ಇರುತ್ತವೆ. ಸತ್ಯವನ್ನು ಒಂದು ಆಯಾಮದಿಂದ ಹುಡುಕಿದರೆ ಸಿಗುವುದಿಲ್ಲ ಬದಲಾಗಿ ಹಲವು ಆಯಾಮಗಳಿಂದ ಪರಿಶೀಲಿಸಿ ಸತ್ಯವನ್ನು ಕಂಡುಕೊಳ್ಳಬೇಕಾಗುತ್ತದೆ.

ಅಂದರೆ ಕೇವಲ ನನ್ನ ವಿಚಾರವೇ ಸರಿ, ನನ್ನದೇ ಸತ್ಯ ಎಂಬ ಕಲ್ಪನೆಯನ್ನು ತೊಡೆದು ಹಾಕಿ ಇನ್ನೊಬ್ಬರ ಅಭಿಪ್ರಾಯವನ್ನು ಗೌರವಿಸುವ ವಿಶಾಲ ಭಾವನೆ ಹೊಂದುವ ಮೂಲಕ ಸತ್ಯವನ್ನು ಕಾಣಬೇಕು. “ನೀನು ಹೇಳು ಇತರನ್ನು ಹೇಳಲು ಬಿಡು” ಎಂಬ ವಿಚಾರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪೂರಕವಾಗಿದ್ದು, ಸಮಾನತೆ ಮತ್ತು ಶಾಂತಿ ಪ್ರಜಾಪ್ರಭುತ್ವದ ಗುರಿಗಳು. ಇವುಗಳನ್ನು ಸಾಧಿಸಲು ಅನೇಕಾಂತವಾದ ಸಹಕಾರಿಯಾಗಿದೆ.

“ಕೊಲ್ಲೆನ್ನದ ಧಮ್ಮ ಯಾವುದಯ್ಯ
ಆತ್ಮ ಶುದ್ದಿಯ ಮಾರ್ಗಎಲ್ಲಿಹುದಯ್ಯ
ಮಿಥ್ಯೆಗೆ ಅಲ್ಲಿ ತಾವೇ ಇಲ್ಲವಯ್ಯ
ಅದು ಮೋಕ್ಷವೀರ ಮಹಾವೀರರ ಪಂಥಕಾಣ ಜಿನನಾಥ”

ಅಹಿಂಸೆಯನ್ನು ಜಗತ್ತಿಗೆ ಸಾರಿದ ಧರ್ಮ ಜೈನಧರ್ಮ. ಕೊಲ್ಲು, ಕೊಲೆ ಮಾಡು ಎಂದು ಯಾವ ಧರ್ಮವು ಹೇಳುವುದಿಲ್ಲ. ವಾಸ್ತವವಾಗಿ ಜಗತ್ತಿನ ಎಲ್ಲ ಧರ್ಮಗಳು ಮೂಲತಃ ಅಹಿಂಸಾ ಧರ್ಮಗಳೇ ಆಗಿವೆ. ಆತ್ಮ ಶುದ್ಧಿಯ ಮಾರ್ಗವನ್ನು ಬೇರೆಲ್ಲೂ ಹುಡುಕಬೇಕಿಲ್ಲ. ದೈನಿಕ ಆಲೋಚನೆ ಮತ್ತು ವರ್ತಮಾನದ ನಡತೆಯಿಂದ ಆತ್ಮ ಶುದ್ಧಿಕಾಣಬೇಕು. ಸುಳ್ಳು, ಕಪಟ, ಮೋಸಗಳಿಗೆ ಅವಕಾಶವಿಲ್ಲದ ಧರ್ಮ ಮಹಾವೀರರದು. ಜೈನಧರ್ಮವು ಅಹಿಂಸಾ ಸಿದ್ಧಾಂತಕ್ಕೆ ನೀಡಿದ ಮಹತ್ತರ ಕೊಡುಗೆಗಾಗಿ “ಅಹಿಂಸಾ ಧರ್ಮ”, “ಜೀವದಯಾ ಧರ್ಮ”ವಾಗಿದೆ.

“ಅಹಿಂಸಾ ಪರಮೋ ಧರ್ಮಃ” ತತ್ವವಾಣಿಯು ಭಗವಾನ್ ಮಹಾವೀರರು ಜಗತ್ತಿಗೆ ನೀಡಿದ ಶ್ರೇಷ್ಠ ಸಂದೇಶವಾಗಿದೆ. ಅಹಿಂಸೆ ಎಂದರೆ ಕೇವಲ ಕೊಲ್ಲುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಮನಸ್ಸಿನಲ್ಲಿ ಹಿಂಸೆಯ ಬಗ್ಗೆ ಯೋಚಿಸಿದರು ಕೂಡ ಅದು ಹಿಂಸೆಯೇ ಆಗಿರುತ್ತೆ. ಹಿಂಸೆಯಿಂದ ಶಾಂತಿ ಮತ್ತು ವಿಕಾಸಗಳು ಸಾಧ್ಯವಿಲ್ಲ. ವೈರದಿಂದ ವೈರತ್ವ ಶಮನವಾಗುವುದಿಲ್ಲ. ಸ್ನೇಹದ ಮೂಲಕ ಇತರರನ್ನು ಪ್ರೀತಿಸುವುದೇ ಅಹಿಂಸೆಯ ವ್ಯಾಪಕ ಅರ್ಥ. ಆತ್ಮ ಪ್ರೇಮದಿಂದ ಹಿಡಿದು ವಿಶ್ವ ಪ್ರೇಮದ ವರೆಗೆ ಎಲ್ಲವು ಅಹಿಂಸೆಯನ್ನು ಆಶ್ರಯಿಸಿವೆ.

ವೈಚಾರಿಕ ಬದುಕಿಗೆ ಬೆಳಕು ಚೆಲ್ಲುವ ಪಂಚಶೀಲ ತತ್ವಗಳು:
‘ಅಹಿಂಸೆ, ಸತ್ಯ, ಆಸ್ತೇಯ, ಅಪರಿಗ್ರಹ ಮತ್ತು ಬ್ರಹ್ಮಚರ್ಯಂ ಈ ಪಂಚಶೀಲ ತತ್ವಗಳು ಜೈನಧರ್ಮದ ಮಹತ್ವವನ್ನು ತಿಳಿಸುತ್ತವೆ. ಯಾವ ಜೀವಕುಲಕ್ಕೂ ಯಾವ ರೀತಿಯಲ್ಲೂ ಹಿಂಸೆ ಮಾಡಬಾರದು. ಅಸತ್ಯಕ್ಕೆ ಆ ಕ್ಷಣಕ್ಕೆ ಮಾತ್ರ ಗೆಲ್ಲುವ ಶಕ್ತಿಯಿದೆ. ಆದರೆ ಧೈರ್ಯದಿಂದ ಬದುಕು ನಡೆಸಲು ಇರುವ ಏಕಮಾತ್ರ ಸಾಧನ ಸತ್ಯ. ಆಸ್ತೇಯ ಎಂದರೆ ಕಳ್ಳತನ ಮಾಡದಿರುವುದು. ಅಪರಿಗ್ರಹವೆಂದರೆ ಅಗತ್ಯಕಿಂತ ಹೆಚ್ಚು ಇಟ್ಟುಕೊಳ್ಳದಿರುವುದು. ಬ್ರಹ್ಮಚರ್ಯ ಎಂದರೆ ಮದುವೆಯಾಗದಿರುವುದು ಎಂಬ ಒಂದೇ ಅರ್ಥವಲ್ಲ. ಮದುವೆಯಾದ ಮೇಲೂ ಬೇರೆ ಹೆಣ್ಣು ಮಕ್ಕಳನ್ನು ಗೌರವಿಸುವ ಹಾಗೂ ಅವರನ್ನು ಅಕ್ಕ-ತಂಗಿಯರೆಂದು ತಿಳಿದು ಕೊಳ್ಳುವುದು. ಹೀಗೆ ಭಗವಾನ್ ಮಹಾವೀರರು ಪಂಚಶೀಲ ತತ್ವಗಳನ್ನು ಬೋಧಿಸಿ ಜನರಲ್ಲಿ ವೈಚಾರಿಕ ಬದಲಾವಣೆಗೆ ಬೆಳಕು ಚೆಲ್ಲುತ್ತಾರೆ.

‘ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ್ಯ ಈ ತ್ರಿರತ್ನಗಳ ಮೂಲಕ ಸದಾ ಕಾಲ ಒಳ್ಳೆಯದನ್ನೆ ನೋಡು‌. ಅದರಿಂದಾಗಿ ಒಳ್ಳೆಯ ಜ್ಞಾನ ಸಂಚಯವಾಗುತ್ತದೆ, ಒಳ್ಳೆಯ ಜ್ಞಾನ ನಿನ್ನ ಒಳ್ಳೆಯ ನಡೆತೆಗೆ ಕಾರಣವಾಗುತ್ತದೆ ಎಂಬ ಮಹಾವೀರರ ಮಾತುಗಳು ಇಂದಿನ ದಿನಮಾನಗಳಲ್ಲಿಯೂ ಮತ್ತೆ ಮತ್ತೆ ಚಿಂತನೆಗೆ ಒಳಗಾಗುತ್ತವೆ.

ಅಶಾಂತಿ, ಗಲಭೆ, ಹಿಂಸೆ, ಜಾತೀಯತೆ, ಮತ್ತು ತಾರತಮ್ಯಗಳಿಂದ ಜಗತ್ತು ದುಸ್ತರವಾಗುತ್ತಿದೆ. ಸಮಾಜದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ, ಸಹನೆ ಮತ್ತು ಸಹಬಾಳ್ವೆಯನ್ನು ನಿರ್ಮಿಸುವ ಶಕ್ತಿ ಅಹಿಂಸಾ ಸಿದ್ಧಾಂತಕ್ಕೆ ಇದೆ. ಭಗವಾನ್ ಮಹಾವೀರರ ಸಂದೇಶಗಳು ಪ್ರಪಂಚಕ್ಕೆ ಬೆಳಕಾಗಿ “ಅಹಿಂಸಾ ಪರಮೋಧರ್ಮಃ” ತತ್ವದ ಮೂಲಕ ವಿಶ್ವದಲ್ಲಿ ಶಾಂತಿ ನೆಲೆಸಲಿ.

ಶರತ್ ಎಂ.ಎಸ್.
ವಾರ್ತಾ ಇಲಾಖೆ