Thursday, February 26, 2026
Thursday, February 26, 2026
Home Blog Page 1625

ಜೋ ಬೈಡೆನ್ ದಂಪತಿಗಳಿಂದ ಮಹಾವೀರ ಜಯಂತಿ ಶುಭಾಶಯ

0

ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಮಹಾವೀರ ಜಯಂತಿಯ ಸಂದರ್ಭದಲ್ಲಿ ಜನತೆಗೆ ಶುಭ ಹಾರೈಸಿದ್ದಾರೆ.

ಎಲ್ಲರಿಗೂ ಶಾಂತಿ, ಸಂತೋಷ ಮತ್ತು ಯಶಸ್ಸು ಸಿಗಲಿ ಎಂದು ಟ್ವೀಟ್‌ ಮೂಲಕ ತಮ್ಮ ಹಾಗೂ ಪತ್ನಿ, ಅಮೆರಿಕ ಮೊದಲ ಮಹಿಳೆ ಜಿಲ್‌ ಬೈಡನ್‌ ಪರವಾಗಿ ಬೈಡನ್‌ ಶುಭ ಕೋರಿದ್ದಾರೆ.

ಸತ್ಯಾನ್ವೇಷಣೆಗೆ, ಹಿಂಸೆಯಿಂದ ವಿಮುಖನಾಗಲು, ಪರಸ್ಪರ ಸೌಹಾರ್ದದಿಂದ ಬದುಕಲು ಮಹಾವೀರ ಸ್ವಾಮಿ ಅವರ ಬದುಕಿನ ಸಾರಗಳು ಅತ್ಯುತ್ತಮ ಉದಾಹರಣೆ.

ಏಷ್ಯನ್‌ ಅಮೆರಿಕನ್‌ ಪೆಸಿಫಿರ್‌ ಐಲೆಂಡರ್‌ ಮತ್ತು ಹವಾಯಿನ್‌ ಸಮಿತಿಯ ಪ್ರಮುಖ ಸಲಹೆಗಾರ ಅಜಯ್‌ ಭುಟೊರಿಯಾ ಅವರು ಬೈಡನ್‌ ಅವರ ಸಂದೇಶವನ್ನು ಸ್ವಾಗತಿಸಿದ್ದಾರೆ.

ಜೈನ ಧರ್ಮದ 24ನೇ ತೀರ್ಥಂಕರ ಮಹಾವೀರನ ಬೋಧನೆಗಳು ವಿಶ್ವಕ್ಕೆ ಅಗತ್ಯವಾಗಿದೆ. ಎಲ್ಲರೂ ‘ಅಹಿಂಸೆ’ಯ ಮಾರ್ಗದಲ್ಲಿ ನಡೆಯಬೇಕು ಎಂದು ಅಜಯ್‌ ಒತ್ತಾಯಿಸಿದ್ದಾರೆ.

ಹೊಸಪೇಟೆ ಬಿಜೆಪಿ ಕಾರ್ಯಕಾರಿಣಿ ಪಕ್ಷಕ್ಕೆ ಹೊಸ ಚರಿಷ್ಮ ತರಲಿದೆಯೆ?

0

ಇದೇ ತಿಂಗಳು 16 ಹಾಗೂ 17 ರಂದು ಹೊಸಪೇಟೆಯಲ್ಲಿ ನಡೆಯುವ ಬಿಜೆಪಿ ಕಾರ್ಯಕಾರಿಣಿ ಸಭೆ ಹಲವು ಕಾರಣಗಳಿಂದ ಈಗ ಮಹತ್ವ ಪಡೆದುಕೊಂಡಿದೆ. ” ಹೊಸ ನೀರು, ಹೊಸ ನೀತಿ” ಯ ಹರಿವಿಗೆ ಈ ಸಭೆ ನಾಂದಿ ಹಾಡಲಿದೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ಸಂಪೂರ್ಣ ಕಾಯಕಲ್ಪ‌ ನೀಡುವ ನಿಟ್ಟಿನಲ್ಲಿ ಈ ಸಭೆ ಮಹತ್ವದ ಪಾತ್ರ ವಹಿಸಲಿದೆ.
ಈ ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ರಾಜ್ಯ‌ ನಾಯಕರು ಭಾಗವಹಿಸಲಿದ್ದಾರೆ. ಮುಂದಿನ ಚುನಾವಣೆ ಎದುರಿಸಲು ಪಕ್ಷದ ಅಜೆಂಡಾ ಏನು ? ಎಂಬುದರ ಬಗ್ಗೆಯೂ ಈ ಸಭೆಯಲ್ಲಿ ಸುಳಿವು ದೊರಕಲಿದೆ.

ಮುಂದಿನ ಚುನಾವಣೆ ದೃಷ್ಟಿಯಿಂದ ಪಕ್ಷದ ಇಮೇಜ್ ಬದಲಾಯಿಸುವುದು ಅನಿವಾರ್ಯ ಎಂಬುದು ಬಿಜೆಪಿ ವರಿಷ್ಠರ ಅಭಿಪ್ರಾಯವಾಗಿದೆ.

ರಾಜ್ಯ ಘಟಕದ ಒಟ್ಟಾರೆ ವಿದ್ಯಮಾನ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ‌ ನಿರೀಕ್ಷೆಯಂತೆ ಇಲ್ಲ. ಜಾತಿವಾದ, ವಂಶವಾದ ಹಾಗೂ ಭ್ರಷ್ಟಾಚಾರದ ವಿರುದ್ಧ ಪಕ್ಷ ನಿಲ್ಲಬೇಕೆಂಬ ರಾಷ್ಟ್ರೀಯ ನಾಯಕರ ಧೋರಣೆಗೆ ಮೊದಲ ಅಡ್ಡಿ ಕರ್ನಾಟಕದಿಂದಲೇ ಎದುರಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿವೆ.

ಚೀನಾದಲ್ಲಿನ ಭಾರತೀಯ ವಿದ್ಯಾರ್ಥಿಗಳ ಕಾಳಜಿ ಕುರಿತು ಸಂಸದೆ ಪತ್ರ

0

ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಅನಿಶ್ಚಿತತೆ ಎದುರಿಸುತ್ತಿದ್ದಾರೆ. ಹೀಗಾಗಿ ಸಂಸದೆ ಎನ್ ಸಿಪಿ ಸುಪ್ರಿಯಾ ಸುಳೆ ಅವರು ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವಿಯಾಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಪತ್ರವನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸುಳೆ, ಚೀನಾ ವಿಶ್ವವಿದ್ಯಾಲಯಗಳಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳು ಕೊರೊನಾ ನಂತರ ಭಾರತದಲ್ಲೇ ಇದ್ದಾರೆ.

‘ನಾನು ಚೀನಾದಲ್ಲಿನ ಭಾರತೀಯ ವಿದ್ಯಾರ್ಥಿಗಳ ನಿಯೋಗ ಹಾಗೂ ವಿದೇಶಿ ವೈದ್ಯಕೀಯ ಪದವೀಧರ ಪೋಷಕರ ಸಂಘದೊಂದಿಗೆ ಮಾತನಾಡಿದ್ದೇನೆ. ಅವರು ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅವುಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ಸಹಾಯ ಮಾಡಿ. ‘ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ಗಡಿಯನ್ನು ಮತ್ತೆ ತೆರೆಯುವ ಹಾಗೂ ಪ್ರಯಾಣದ ನಿರ್ಬಂಧಗಳನ್ನು ಸಡಿಲಗೊಳಿಸುವ ವಿಷಯದ ಅನಿಶ್ಚಿತತೆಯ ಬಗ್ಗೆ ನಾವು ಹಾಗೂ ನಮ್ಮ ಪೋಷಕರು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಒತ್ತಡಕ್ಕೊಳಗಾಗಿದ್ದೇವೆ. ಚೀನಾಕ್ಕೆ ಹಿಂತಿರುಗುವವರೆಗೂ ಚೀನಾದ ವೈದ್ಯಕೀಯ ಪಠ್ಯಕ್ರಮಕ್ಕೆ ತಕ್ಕಂತೆ ಭಾರತದಲ್ಲೇ ತರಗತಿ ಹಾಗೂ ಪ್ರಾಯೋಗಿಕ ತರಗತಿಗಳನ್ನು ಆರಂಭಿಸಿ ಅಥವಾ ಶೀಘ್ರದಲ್ಲಿ ಚೀನಾಕ್ಕೆ ಮರಳಲು ಸಹಾಯ ಮಾಡಿ’ ಎಂದು ವಿದ್ಯಾರ್ಥಿಗಳು ಪತ್ರಮುಖೇನ ಸುಪ್ರಿಯಾ ಸುಳೆ ಅವರಿಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸುಳೆ ಮಾಂಡವಿಯಾ ಅವರಿಗೆ ಪತ್ರ ಬರೆದಿದ್ದಾರೆ.

ಭಾರತ-ಚೀನಾ ಗಡಿಯನ್ನು ಮತ್ತೆ ತೆರೆಯುವ ಹಾಗೂ ಪ್ರಯಾಣದ ನಿರ್ಬಂಧಗಳನ್ನು ಸಡಿಲಗೊಳಿಸುವ ವಿಷಯದ ಅನಿಶ್ಚಿತತೆಯ ಬಗ್ಗೆ ಕಂಗಾಲಾಗಿದ್ದಾರೆ. ಈಗ ಈ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಚೀನಾದ ವಿಶ್ವವಿದ್ಯಾಲಯಗಳಲ್ಲಿ ಭೌತಿಕವಾಗಿ ತರಗತಿಗಳಿಗೆ ಹಾಜರಾಗುವವರೆಗೂ ಭಾರತದಲ್ಲೇ ಅವರಿಗೆ ಆಫ್‌ಲೈನ್‌ ತರಗತಿ ಹಾಗೂ ಪ್ರಾಯೋಗಿಕ ತರಗತಿಗಳನ್ನು ಆರಂಭಿಸಲು ಅವಕಾಶ ಮಾಡಿಕೊಡಬೇಕು ಎಂದು ಮಾಂಡವಿಯಾ ಅವರ ಸಹಾಯವನ್ನು ಆಕ್ಷೇಪಿಸಿದ್ದಾರೆ.

ಕೆಲವು ದಿನಗಳ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ತಮ್ಮ ಚೀನಾ ಸಹವರ್ತಿ ವಾಂಗ್ ಯಿ ಅವರಿಗೆ, ಭಾರತೀಯ ವಿದ್ಯಾರ್ಥಿಗಳು ಚೀನಾದಲ್ಲಿ ಮರಳಿ ತಮ್ಮ ವಿದ್ಯಾಭ್ಯಾಸ ಪ್ರಾರಂಭಿಸಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿದ್ದರು. ಬಳಿಕ ಬೀಜಿಂಗ್‌ ತಾರತಮ್ಯ ರಹಿತ ವಿಧಾನವನ್ನು ಅನುಸರಿಸಬಹುದು ಎಂದು ತಿಳಿಸಿದ್ದರು.

ಭಾರತ ಮತ್ತು ಚೀನಾ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಹೆಚ್ಚಳ

0

ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಶೇಕಡ 15.3ರಷ್ಟು ಹೆಚ್ಚಳ ಆಗಿದೆ. ವ್ಯಾಪಾರ ವಹಿವಾಟು
₹ 2.36 ಲಕ್ಷ ಕೋಟಿಗೆ ತಲುಪಿದೆ ಎಂದು ಚೀನಾ ಸರ್ಕಾರ ಮಾಹಿತಿ ನೀಡಿದೆ.

ಈ ಅವಧಿಯಲ್ಲಿ ಚೀನಾದಿಂದ ಭಾರತಕ್ಕೆ ಆಮದು ಆಗುವ ಉತ್ಪನ್ನಗಳ ಮೌಲ್ಯವು ₹ 2.06 ಲಕ್ಷ ಕೋಟಿಗೆ ತಲುಪಿದೆ ಎನ್ನಲಾಗಿದೆ.

ವಹಿವಾಟು ಏರಿಕೆಯ ಪ್ರವೃತ್ತಿಯು ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೂಡ ಮುಂದುವರಿದಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 15.3ರಷ್ಟು ಜಾಸ್ತಿ ಆಗಿದೆ ಎಂದು ಸರ್ಕಾರಿ ಸ್ವಾಮ್ಯದ ಪತ್ರಿಕೆಯೊಂದು ವರದಿ ಮಾಡಿದೆ ಎಂದು ತಿಳಿದುಬಂದಿದೆ.

ಹಿಂದಿನ ವರ್ಷದಲ್ಲಿ ಭಾರತ-ಚೀನಾ ದ್ವಿಪಕ್ಷೀಯ ವ್ಯಾಪಾರ ವಹಿವಾಟು ದಾಖಲೆಯ ₹ 9.53 ಲಕ್ಷ ಕೋಟಿಗೆ ತಲುಪಿತ್ತು.

ಯಾರಿಗೂ ಇರಿಸು ಮುರಿಸಾಗಬಾರದು ಈಗ ರಾಜಿನಾಮೆ ನೀಡುವೆ

0

ಗುತ್ತಿಗೆದಾರ ಮೃತ ಸಂತೋಷ ಪಾಟೀಲ ಆರೋಪಕ್ಕೆಗುರಿಯಾಗಿರುವ ಸಚಿವ ಶ್ರೀ ಕೆ .ಎಸ್. ಈಶ್ವರಪ್ಪ ಅವರು ಮುಖ್ಯಮಂತ್ರಿಗಳಿಗೆ
ರಾಜಿನಾಮೆ ಸಲ್ಲಿಸುವ ನಿರ್ಧಾರ ಮಾಡಿರುವುದನ್ನ
ಪತ್ರಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅವರ ಮಾತಿನ ಆಯ್ದ ಭಾಗಗಳು ಹೀಗಿದೆ.

“ಮಾನ್ಯ
ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಕ್ಕೆ ಗ್ರಾಮೀಣಾಭಿವೃದ್ಧಿ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಇವತ್ತು ನಾನು ತೀರ್ಮಾನ ತಗೊಂಡಿದ್ದೇನೆ
ನಾಳೆ ದಿನ  ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡ್ತಾ ಇದ್ದೇನೆ. ನನ್ನನ್ನ ಬೆಳೆಸಿದ ಎಲ್ಲರಿಗೂ ಇರಿಸಿಮುರಿಸಾಗಬಾರದು ಅಂತ ರಾಜಿನಾಮೆ ಕೊಡ್ತಾ ಇದ್ದೇನೆ.
ನಾಳೆ ಸಂಜೆ ಬೆಂಗಳೂರಿಗೆ ಹೋಗಿ. ಮುಖ್ಯಮಂತ್ರಿಗಳಿಗೆ ರಾಜಿನಾಮೆ ಪತ್ರವನ್ನ ನೀಡುತ್ತಿದ್ದೇನೆ.
ಈ ಎಪಿಸೋಡ್ ನಲ್ಲಿ ಒಂದೇಒಂದು  ಪರ್ಸೆಂಟ್ ತಪ್ಪಿದ್ರೆ ಭಗವಂತ ಶಿಕ್ಷೆ ಕೊಡಲಿ. ನಂಗೆ ಪೂರ್ಣ ನಂಬಿಕೆ ಇದೆ .ಈ ಒಂದು ಎಪಿಸೋಡ್ನಿಂದ ನಾನು ಮುಕ್ತವಾಗಿ ಹೊರಬರ್ತೇನೆ.
ನಾನೀಗಾಗ್ಲೆನೇ ಮುಖ್ಯಮಂತ್ರಿಗಳಿಗೆ ಇದ್ರ ಬಗ್ಗೆ ತನಿಖೆ ಮಾಡ್ಬೇಕು ಅಂತ ಹೇಳಿದಾಗ ಸಂತೋಷದಿಂದ ಇದನ್ನ ತನಿಖೆ ಖಂಡಿತ ಮಾಡಿಸ್ತೀನಿ ಅಂತ ಮುಖ್ಯಮಂತ್ರಿಗಳು ಹೇಳಿದಾರೆ.

ಪಕ್ಷದ ಸಂಘಟನೆಯ ಹಿರಿಯರಿಗೆ ,ಯಾರ್ಯರುನಂಗೆ ಇಲ್ಲೀ ತನಕ ಸಹಕಾರ ಕೊಟ್ಟಂತಹ ಕಾರ್ಯಕರ್ತರಿಗೆ  ಅವರಿಗೆಲ್ಲ ಅಭಿನಂದನೆ ಸಲ್ಲಿಸ್ತೀನೆ.ನಾನು ನಾಳೆದಿನ ಸಂಜೆ ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳಿಗೆ ರಾಜಿನಾಮೆ ಸಲ್ಲಿಸ್ತೀನಿ”

ಕಾಂಗ್ರೆಸ್ ಪ್ರತಿಕ್ರಿಯೆ :  ” ನಾವು ಹೋರಾಟ ಮಾಡಿದಮೇಲೆ ( ಬಿಜೆಪಿಅವರು) ಚುರುಕಾದರು. ನಾವು ಹೇಳಿದ್ದು ಅರೆಸ್ಟ್ ಮಾಡಿ ಅಂತ.” ಅಧ್ಯಕ್ಷರು.ಕೆಪಿಸಿಸಿ.

ವಿಶ್ವದಲ್ಲಿ ಪ್ರಜಾಪ್ರಭುತ್ವ ಉಳಿಯಲು ಅಂಬೇಡ್ಕರ್ ಕಾರಣ-ಈಶ್ವರಪ್ಪ

0

ಡಾ.ಬಿ.ಆರ್. ಅಂಬೇಡ್ಕರ್ ರವರ 131ನೇ ಜನ್ಮದಿನದ ಅಂಗವಾಗಿ ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಅಂಬೇಡ್ಕರ್ ಅವರ ಜನ್ಮ ದಿನವನ್ನು ಆಚರಿಸಲಾಯಿತು.

ನಗರದ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ಅವರ ಭಾವಚಿತ್ರವನ್ನು ರಥದಲ್ಲಿ ಇರಿಸಿ ಮಹಾನಗರ ಪಾಲಿಕೆ ಆವರಣದಿಂದ ಬಿ. ಹೆಚ್. ರಸ್ತೆ, ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆ, ಮಾರ್ಗವಾಗಿ ಕುವೆಂಪು ರಂಗಮಂದಿರಕ್ಕೆ ತರಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪನವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು ಇಡೀ ರಾಜ್ಯದಲ್ಲಿ, ಸಮಾಜದಲ್ಲಿ ಅಳವಡಿಸಲು ಜೀವನಪರ್ಯಂತ ಪ್ರಯತ್ನ ಪಡುತ್ತೇನೆ. ಇವತ್ತು ಇಡೀ ವಿಶ್ವದಲ್ಲಿ ಪ್ರಜಾಪ್ರಭುತ್ವ ಉಳಿಯಲು ಅಂಬೇಡ್ಕರ್ ಅವರೇ ಕಾರಣ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಯಾವ ಯಾವ ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೋ ಆ ದೇಶದಲ್ಲೆಲ್ಲಾ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾಡಿದಂತಹ ಕರಡು ಸಮಿತಿಯ ರಚನೆಯೇ ಕಾರಣ ಎಂದರು.

ಒಬ್ಬೊಬ್ಬರಿಗೆ ಒಂದೊಂದು ವಿಶೇಷ. ಹಿಂದುಗಳಿಗೆ ಭಗವದ್ಗೀತೆ, ಮುಸಲ್ಮಾನರಿಗೆ ಕುರಾನ್, ಕ್ರಿಶ್ಚಿಯನ್ ರಿಗೆ ಬೈಬಲ್. ಎಲ್ಲರಿಗೂ ಪವಿತ್ರ ಗ್ರಂಥವೆಂದರೆ ಅಂಬೇಡ್ಕರ್ ಅವರ ಸಂವಿಧಾನ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಎಲ್ಲರೂ ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆ.ಬಿ. ಅಶೋಕ್ ಕುಮಾರ್ ಅವರು ಅಂಬೇಡ್ಕರ್ ಅವರ ಜೀವನದ ಬಗ್ಗೆ ಮಾತನಾಡಿದರು.

ಶಿವಮೊಗ್ಗದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಲಿಂಗ ಮೂರ್ತಿಯವರು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಡಿ.ಎಸ್. ಅರುಣ್, ಶ್ರೀ ಎನ್. ಜಿ . ನಾಗರಾಜ್, ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಶ್ರೀಮತಿ ಎಂ.ಎಲ್ .ವೈಶಾಲಿ, ಡಾ.ಬಿ.ಎಂ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಶ್ರೀ ಉಮೇಶ್ ಹೆಚ್, ಗ್ರಾಮಾಂತರ ಶಾಸಕರಾದ ಶ್ರೀ ಕೆ.ಬಿ. ಅಶೋಕ್ ನಾಯಕ್. ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಉಕ್ರೇನಿಗೆ ಅಮೆರಿಕ ಭರವಸೆಯೇ ಆನೆಬಲ ನೀಡಿದಂತಾಗಿದೆ

0

ಉಕ್ರೇನ್‌ನ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ಶುರು ಮಾಡಿ 50 ದಿನಗಳೇ ಕಳೆದು ಹೋಗಿದೆ. ಇದರ ಮಧ್ಯೆ ಉಕ್ರೇನ್ ಸೇನೆಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ನೀಡಿರುವ ಒಂದೇ ಒಂದು ಭರವಸೆಯು ಆನೆಬಲವನ್ನು ನೀಡಿದೆ.

ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯುಎಸ್ ನೆರವು ನೀಡಲಿದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಉಕ್ರೇನ್‌ಗೆ ಹೆಚ್ಚಿನ ಬೆಂಬಲವನ್ನು ನೀಡುವ ನಿಟ್ಟಿನಲ್ಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅನ್ನು ಭೇಟಿ ಮಾಡುವುದಕ್ಕೆ ಯುಎಸ್ ಉನ್ನತ ಮಟ್ಟದ ಅಧಿಕಾರಿಯೊಬ್ಬರನ್ನು ಕಳುಹಿಸಲು ಯೋಜನೆ ಹಾಕಿಕೊಂಡಿದೆ. ಸದ್ಯ ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ದೇಶವನ್ನು ಪ್ರತಿನಿಧಿಸುವ ಪ್ರತಿನಿಧಿಗಳಾಗಿದ್ದಾರೆ.

ಆದರೆ ಇವರ ಬದಲಿಗೆ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅಥವಾ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರಂತಹ ಅಧಿಕಾರಿಗಳು ಕೀವ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ.

ಹೊಸ ಹೂವಿಟ್ಜರ್ ಮತ್ತು ಹೆಲಿಕಾಪ್ಟರ್ ಸೇರಿದಂತೆ ಭಾರಿ ಪ್ರಮಾಣದ ಸೇನಾ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ನೀಡುವುದಾಗಿ ಅವರು ಹೇಳಿದ್ದಾರೆ.

ಮಾನವೀಯ ಹಕ್ಕುಗಳ ಬಗ್ಗೆ ಚರ್ಚೆಯೇ ಆಗಿಲ್ಲ-ಜೈಶಂಕರ್

0

ಭಾರತ ಮತ್ತು ಅಮೆರಿಕ ನಡುವಿನ 2+2 ಮಾತುಕತೆಯಲ್ಲಿ ಮಾನವ ಹಕ್ಕುಗಳ ವಿಷಯ ಚರ್ಚೆಯಾಗಿಲ್ಲ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಆದರೆ, ಈ ವಿಚಾರ ಚರ್ಚೆಯಾದಾಗಲೆಲ್ಲ ಭಾರತ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.

ಎಸ್ ಜೈಶಂಕರ್ ಮಾತನಾಡಿ, ಜನರು ಭಾರತದ ಬಗ್ಗೆ ಕಲ್ಪನೆಗಳನ್ನು ಹೊಂದಬಹುದು. ಅಮೆರಿಕದ ಮಾನವ ಹಕ್ಕುಗಳ ಪರಿಸ್ಥಿತಿಯ ಮೇಲೆ ಭಾರತವೂ ಕಣ್ಣಿಟ್ಟಿದೆ ಎಂದು ಅವರು ಹೇಳಿದರು. ಭಾರತದ ಬಗ್ಗೆ ಒಂದು ರೀತಿಯ ಲಾಬಿ ಮತ್ತು ವೋಟ್ ಬ್ಯಾಂಕ್ ಇಂತಹ ಸಮಸ್ಯೆಗಳನ್ನು ಮುಂದಿಡುತ್ತದೆ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.

ಇತ್ತೀಚೆಗಷ್ಟೇ ಭಾರತದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ಅಮೆರಿಕ ಗಮನಿಸುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್‌ ಹೇಳಿದ್ದರು.

ಭಾರತದಲ್ಲಿ ಕೆಲವು ರಾಜ್ಯಗಳು, ಪೊಲೀಸ್ ಮತ್ತು ಜೈಲು ಅಧಿಕಾರಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗಿದೆ ಎಂದೂ ಅವರು ಉಲ್ಲೇಖಿಸಿದ್ದರು.
ಭಾರತ ಮತ್ತು ಯುಎಸ್ ನಡುವಿನ 2+2 ಮಾತುಕತೆಯ ನಂತರ ಬ್ಲಿಂಕನ್, ಎಸ್ ಜೈಶಂಕರ್, ರಾಜನಾಥ್ ಸಿಂಗ್ ಮತ್ತು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಈ ವಿಷಯವನ್ನು ಸಭೆಯಲ್ಲಿ ಚರ್ಚಿಸಲಾಗಿಲ್ಲ ಎಂದು ಹೇಳಿದರು.

ಈ ಸಭೆಯಲ್ಲಿ ನಾವು ಮಾನವ ಹಕ್ಕುಗಳ ವಿಚಾರವನ್ನು ಚರ್ಚಿಸಿಲ್ಲ ಎಂದು ಎಸ್ ಜೈಶಂಕರ್ ಹೇಳಿದ್ದಾರೆ. ಈ ಸಭೆಯು ಮುಖ್ಯವಾಗಿ ರಾಜಕೀಯ-ಮಿಲಿಟರಿ ವಿಷಯಗಳ ಬಗ್ಗೆ ಮಾತುಕತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಎಸ್ ಜೈಶಂಕರ್ ಮಾತನಾಡಿ, ಬ್ಲಿಂಕನ್ ಭಾರತಕ್ಕೆ ಬಂದಾಗ ಈ ವಿಚಾರ ಮುನ್ನೆಲೆಗೆ ಬಂತು. ಆ ಪತ್ರಿಕಾಗೋಷ್ಠಿಯನ್ನು ನೀವು ನೆನಪಿಸಿಕೊಂಡರೆ, ನಾವು ಈ ವಿಷಯವನ್ನು ಚರ್ಚಿಸಿದ್ದೇವೆ ಮತ್ತು ನಾವು ನಮ್ಮ ಅಭಿಪ್ರಾಯ ಮುಂದಿಟ್ಟಿದ್ದೆವು ಎಂದು ನೆನಪಿಸಲಿಚ್ಛಿಸುತ್ತೇನೆ. ಭಾರತದಲ್ಲಿನ ಮಾನವ ಹಕ್ಕುಗಳ ಬಗ್ಗೆ ಅಮೆರಿಕದ ಟೀಕೆಗಳ ಕುರಿತು ವಿದೇಶಾಂಗ ಸಚಿವ ಜೈಶಂಕರ್ ಮಾತನಾಡಿ ಭಾರತದ ಬಗ್ಗೆ ಅಭಿಪ್ರಾಯವನ್ನು ಹೊಂದಲು ಜನರಿಗೆ ಹಕ್ಕಿದೆ ಎಂದು ಹೇಳಿದ್ದಾರೆ. ಒಂದು ರೀತಿಯ ಲಾಬಿ ಮತ್ತು ವೋಟ್ ಬ್ಯಾಂಕ್ ಇಂತಹ ಸಮಸ್ಯೆಗಳನ್ನು ಮುಂದಿಡುತ್ತದೆ ಎಂದರು.

ಭಾರತದಲ್ಲಿನ ಮಾನವ ಹಕ್ಕುಗಳ ಬಗ್ಗೆ ಅಮೆರಿಕದ ಟೀಕೆಗಳ ಕುರಿತು ವಿದೇಶಾಂಗ ಸಚಿವ ಜೈಶಂಕರ್ ಅವರು, ಭಾರತದ ಬಗ್ಗೆ ಅಭಿಪ್ರಾಯವನ್ನು ಹೊಂದಲು ಜನರಿಗೆ ಹಕ್ಕಿದೆ ಎಂದು ಹೇಳಿದ್ದಾರೆ. ಒಂದು ರೀತಿಯ ಲಾಬಿ ಮತ್ತು ವೋಟ್ ಬ್ಯಾಂಕ್ ಇಂತಹ ಸಮಸ್ಯೆಗಳನ್ನು ಮುಂದಿಡುತ್ತದೆ ಎಂದರು.

ದಾವಣಗೆರೆ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಪರೀಕ್ಷೆ ನಡೆಸಲು ಪೂರ್ವ ತಯಾರಿ

0

ದಾವಣಗೆರೆ ಜಿಲ್ಲೆಯ 31 ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ ನಡೆಯುತ್ತಿದ್ದು ವ್ಯವಸ್ಥಿತವಾಗಿ ಪಾರದರ್ಶಕತೆಯಿಂದ ಪರೀಕ್ಷೆ ನಡೆಸಲು ಎಲ್ಲರೂ ಸಹಕರಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಕುರಿತು ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನ ಪಿಯು ವಾರ್ಷಿಕ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 19855 ವಿದ್ಯಾರ್ಥಿಗಳು ಹಾಜರಾಗುತ್ತಿದ್ದು ಯಾವುದೇ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಬಾರದು. ಈ ಹಿಂದೆ ಎಲ್ಲಾ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸಿದ ಹೆಮ್ಮೆ ನಮ್ಮ ಜಿಲ್ಲೆಗಿದೆ ಹಾಗಾಗಿ ಸರ್ಕಾರ ಮಾರ್ಗದರ್ಶನದಂತೆ ಎಲ್ಲಾ ಆದೇಶಗಳನ್ನು ಪರಿಪಾಲನೆ ಮಾಡುವ ಮೂಲಕ ಪರೀಕ್ಷೆಗಳು ಯಶಸ್ವಿಯಾಗಿ ನಡೆಯಲಿ ಎಂದು ಹೇಳಿದರು.

ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ವಿಚಕ್ಷಣಾ ಜಾಗೃತ ದಳ ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ನಿಷೇಧವಿದ್ದು, ಕೇಂದ್ರದ ಮುಖ್ಯ ಅಧೀಕ್ಷಕರು ಕ್ಯಾಮೆರಾ ಇಲ್ಲದ ಬೇಸಿಕ್ ಮೊಬೈಲ್ ಬಳಸಬಹುದಾಗಿದೆ. ಉಳಿದ ಸಿಬ್ಬಂದಿಗಳಿಗೆ ಮೊಬೈಲ್ ಬಳಸಲು ಅವಕಾಶವಿಲ್ಲ. ಪರೀಕ್ಷಾ ಕೇಂದ್ರದ 100 ಮೀ ಸುತ್ತಳತೆಯಲ್ಲಿ ಜೆರಾಕ್ಸ್ ಮತ್ತು ಕಂಪ್ಯೂಟರ್ ಸೈಬರ್ ಸೆಂಟರ್‍ಗಳು ತೆರೆಯುವುದನ್ನು ನಿಷೇಧಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಳೇ ಪ್ರಶ್ನೆ ಪತ್ರಿಕೆಗಳನ್ನು ಹರಿಬಿಟ್ಟು ಗೊಂದಲ ಸೃಷ್ಠಿಸುವವರ ಕುರಿತು ಜಾಗೃತಿ ವಹಿಸಬೇಕು ಎಂದರು.

ಯಾವುದೇ ಕೇಂದ್ರಗಳಲ್ಲಿ ವಿದ್ಯಾರ್ಥಿಗಳನ್ನು ನೆಲದ ಮೇಲೆ ಕೂರಿಸಿ ಪರೀಕ್ಷೆ ಬರೆಸುವಂತಿಲ್ಲ. ಎಲ್ಲಾ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಕೇಂದ್ರಗಳಿಗೆ ಸೂಕ್ತ ಬಂದೋಬಸ್ತ್ ಒದಗಿಸಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಪರೀಕ್ಷಾ ಕೇಂದ್ರದಲ್ಲಿ ಅಕ್ರಮಗಳು ನಡೆಯುವುದು ಕಂಡು ಬಂದಲ್ಲಿ ಸಿಆರ್‍ಪಿಸಿ 107-110 ರಡಿ ಕ್ರಮಕೈಗೊಳ್ಳಲಾಗುವುದು. ಸುತ್ತಲೂ ಪರೀಕ್ಷೆಗಳು ನಡೆಯುವ ಅವಧಿಯಲ್ಲಿ ಯಾವುದೇ ಧ್ವನಿವರ್ದಕಗಳನ್ನು ಬಳಸುವಂತಿಲ್ಲ, ಪೋಷಕರು ತಮ್ಮ ಮಕ್ಕಳನ್ನು ಕೇಂದ್ರಗಳಿಗೆ ಬಿಟ್ಟು ಹೋಗಲು ಬಂದಾಗ ಗೇಟ್‍ವರೆಗೆ ಮಾತ್ರ ಅವರಿಗೆ ಪ್ರವೇಶ ನೀಡಬೇಕು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿ ಹೊರತು ಪಡಿಸಿ ಬೇರೆಯವರಿಗೆ ಕೇಂದ್ರದ ಒಳಗೆ ಪ್ರವೇಶ ಮಾಡಲು ಅವಕಾಶ ನೀಡಬಾರದು.

ಕೇಸರಿ ಶಾಲು ಹಾಗೂ ಹಿಜಾಬ್‍ಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಕೇಂದ್ರದ ವ್ಯಾಪ್ತಿಯ ಇನ್ಸ್‍ಪೆಕ್ಟರ್ ಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು. ಎಲ್ಲರೂ ಹೈಕೋರ್ಟ್ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಡಿ.ಡಿ.ಪಿ.ಯು ಶಿವರಾಜ ಎಂ. ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಯಶಸ್ವಿಯಾಗಿ ಪರೀಕ್ಷೆಗಳು ನಡೆಯಲು ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಎಲ್ಲಾ ಮುಂಜಾಗೃತ ಕ್ರಮ ವಹಿಸಲಾಗಿದೆ. ಪರೀಕ್ಷಾ ಕೊಠಡಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಇನ್ನಿತರೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾವುದು ಎಂದರು.

ಸಭೆಯಲ್ಲಿ ಖಜಾನಾಧಿಕಾರಿ ಶ್ರೀಮತಿ ಪ್ರಭಾವತಿ, ರೂಟ್ ಆಫೀಸರ್ಸ್, ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಾಂಶುಪಾಲರು ಹಾಗೂ ಇತರರು ಹಾಜರಿದ್ದರು.

ಶಿವಮೊಗ್ಗ ಜಿಲ್ಲೆಯಲ್ಲಿ‌ ದ್ವಿತೀಯ ಪಿ,ಯು, ಪರೀಕ್ಷೆ ನಡೆಸಲು ಸಿದ್ದತೆ

0

ಪದವಿಪೂರ್ವ ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯನ್ನು ಏಪ್ರಿಲ್ 22ರಿಂದ ರಿಂದ ಮೇ 18ರವೆರೆಗೆ ರಾಜ್ಯದಾದ್ಯಂತ ನಡೆಸಲು ಉದ್ದೇಶಿಸಿದ್ದು, ಜಿಲ್ಲೆಯಲ್ಲಿಯೂ ಯಾವುದೇ ರೀತಿಯ ಅವ್ಯವಹಾರ ನಡೆಯದಂತೆ ಪರೀಕ್ಷೆಗಳು ಸುಗಮವಾಗಿ ನಡೆಯಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರು ಹೇಳಿದರು.

ಅವರು ಇಂದು ಜಿಲ್ಲಾಡಳಿತ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ತಾಲೂಕುಗಳ ಒಟ್ಟು 36ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗಳು ಸುಗಮವಾಗಿ ನಡೆಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಡೆಯುವ ಪರೀಕ್ಷೆಯ ಎಲ್ಲಾ ಹಂತಗಳನ್ನು ಸಿಸಿ.ಟಿವಿ. ಕಣ್ಗಾವಲಿನಲ್ಲಿ ಸೆರೆಹಿಡಿಯಲಾಗುವುದು ಎಂದವರು ನುಡಿದರು.

ಜಿಲ್ಲೆಯ 36 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, 17,446 ಹೊಸ ವಿದ್ಯಾರ್ಥಿಗಳು, 924 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 663 ಖಾಸಗಿ ಅಭ್ಯರ್ಥಿಗಳು ಸೇರಿದಂತೆ ಒಟ್ಟು 19.033ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದರು.

ಈ ಪರೀಕ್ಷಾ ಕೇಂದ್ರಗಳಿಗೆ ಸಕಾಲದಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಕಾಲದಲ್ಲಿ ತಲುಪಿಸಿ, ಉಸ್ತುವಾರಿ ನೋಡಿಕೊಳ್ಳಲು, ಪರೀಕ್ಷೆಗಳು ಸುಗಮವಾಗಿ ನಡೆಯಲು 11 ಮಾರ್ಗಗಳಿಗೆ ತ್ರಿಸದಸ್ಯ ಸಮಿತಿಯ 33ಜನ ಸದಸ್ಯರುಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಪೊಲೀಸ್ ಸಹಕಾರವನ್ನು ನೀಡುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೋರಲಾಗಿದೆ ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಹೊಸನಗರ ತಾಲೂಕಿನ ಅಮೃತ, ಸಾಗರ ತಾಲೂಕಿನ ಸಿರಿವಂತೆ ಮತ್ತು ಹೊಳಲೂರಿನಲ್ಲಿ ಹೊಸದಾಗಿ ಮೂರು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಪರೀಕ್ಷೆ ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸಂಚರಿಸುವುದು, ಗುಂಪುಗೂಡುವುದನ್ನು ನಿರ್ಬಂಧಿಸಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ನಿಯೋಜಿತರಾದ ಅಧಿಕಾರಿ, ಸಿಬ್ಬಂಧಿಗಳನ್ನು ಹೊರತುಪಡಿಸಿ ಇತರೆ ವ್ಯಕ್ತಿಗಳು ಕೇಂದ್ರ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆಯದಂತೆ ಮುಂಜಾಗ್ರತಾ ಕ್ರಮವಹಿಸಲು ಸೂಚಿಸಲಾಗಿದೆ.

ಪರೀಕ್ಷೆ ನಡೆಯುವ ದಿನದಂದು ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಟೈಪಿಂಗ್, ಝೆರಾಕ್ಸ್ ಹಾಗೂ ಫ್ಯಾಕ್ಸ್ ಅಂಗಡಿಗಳು ತೆರೆಯದಂತೆ ಸೂಚಿಸಲಾಗಿದೆ ಎಂದರು.

ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾದ ಅಧಿಕಾರಿ ಮತ್ತು ಸಿಬ್ಬಂಧಿಗಳೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ಸಲ್ಲದು. ನಿಯೋಜಿತ ಅಧಿಕಾರಿಗಳು ಸದಾ ಜಾಗೃತವಾಗಿದ್ದು ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಪರೀಕ್ಷಾ ಕೇಂದ್ರದೊಳಗೆ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯ ಹಾಗೂ ಅಗತ್ಯವಿರುವ ಎಲ್ಲಾ ಮೂಲಭೂತ ಅಗತ್ಯಗಳನ್ನು ಒದಗಿಸುವಂತೆ ಹಾಗೂ ಕೊಠಡಿಯೊಳಗೆ ವಿದ್ಯುತ್ ಸೌಲಭ್ಯ ಮತ್ತು ಫ್ಯಾನ್‍ಗಳಿರುವಂತೆ ನೋಡಿಕೊಳ್ಳಲು ಕೊಠಡಿ ಮೇಲ್ವಿಚಾರಕರಿಗೆ ಸೂಚಿಸಿದರು.

ಇರುವ ಸಿಸಿ ಟಿವಿ. ಕ್ಯಾಮರಾಗಳು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳಲು ಸೂಚಿಸಿದರು.
ಪರೀಕ್ಷಾರ್ಥಿಗಳು ಹಾಗೂ ನಿಯೋಜಿತ ಅಧಿಕಾರಿ-ಸಿಬ್ಬಂಧಿಗಳೂ ಸಹ ಪರೀಕ್ಷಾ ಕೇಂದ್ರಕ್ಕೆ ಮೊಬೈಲ್, ಪುಸ್ತಕ, ಬ್ಯಾಗ್, ಪರ್ಸ್, ಎಲೆಕ್ಟ್ರಾನಿಕ್ಸ್ ಉಪಕರಣ, ಸ್ಮಾರ್ಟ್‍ವಾಚ್‍ಗಳು ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ||ನಾಗೇಂದ್ರ ಎಫ್.ಹೊನ್ನಳ್ಳಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜ ಕಾಗಲ್ಕರ್ ಸೇರಿದಂತೆ ಎಲ್ಲಾ ತಾಲೂಕುಗಳ ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳು ಉಪಸ್ಥಿತರಿದ್ದರು.