“ಅಹಿಂಸಾ ಪರಮೋಧರ್ಮಃ’ ಎಂದು ಸಾರಿದ ಮಹಾವೀರ”
ಭಾರತದಲ್ಲಿ ಪ್ರತಿ ವರ್ಷಚೈತ್ರ ಶುಕ್ಷ ತ್ರಯೋದಶಿಯಂದು 24ನೇಯ ತೀರ್ಥಂಕರನಾದ ಮಹಾವೀರನ ಜಯಂತಿಯನ್ನು ಆಚರಿಸಲಾಗುತ್ತದೆ.
ಈ ದಿನವನ್ನು ‘ಮಹಾವೀರ ಜನ್ಮ ಕಲ್ಯಾಣಕ’ ಎಂದು ಕರೆಯಲಾಗುತ್ತದೆ. ಮಹಾವೀರ ಜಯಂತಿಯನ್ನು ಕೇವಲ ಜೈನರು ಮಾತ್ರವಲ್ಲದೇ ಇತರ ಧರ್ಮಿಯರು ಕೂಡ ಸ್ಮರಿಸುತ್ತಾರೆ.
ಎಲ್ಲ ಜಿನಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ಅಹಿಂಸೆಯನ್ನು ಪ್ರಪಂಚಕ್ಕೆ ಬೋಧಿಸಿದ ಮಹಾವೀರರು ಗೌತಮ ಬುದ್ಧನ ಸಮಕಾಲೀನರು. ಜೈನರು ತಮ್ಮ ಕಠಿಣ ಸಾಧನೆ ಮೂಲಕ ಪರಮಾತ್ಮನ ಗುಣಗಳನ್ನು ತಮ್ಮದಾಗಿಸಿ ತಾವು ಕೂಡ ಜಿನರಾಗಬಹುದೆಂಬ ಭರವಸೆಯಲ್ಲಿ ಮಹಾವೀರ ಜಯಂತಿಯನ್ನು ಆಚರಿಸುತ್ತಾರೆ. ‘ಜಿನ’ಎಂದರೆ ರಾಗ-ದ್ವೇಷ, ಮೋಹಾಧಿಕಾರಗಳನ್ನು ಗೆದ್ದವನು ಎನ್ನಲಾಗುತ್ತದೆ. ‘ಜೈನ’ ಶಬ್ದವು ಜಾತಿಯ ದ್ಯೋತಕವಲ್ಲ ಜಿನ ಮಾರ್ಗದಲ್ಲಿ ನಡೆದು ಜೈನನಾಗಿದ್ದಾನೆ ಎಂಬುದನ್ನು ಸೂಚಿಸುತ್ತದೆ.
ಈ ವರ್ಷದ ಚೈತ್ರ ಶುಕ್ಷ ತ್ರಯೋದಶಿ ದಿನವಾದ ಏಪ್ರಿಲ್ 14 ರಂದು ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತದೆ.
ಮಹಾವೀರರ ಜಯಂತಿಯನ್ನು ಆಚರಿಸಲು ಕಾರಣವೇನೆಂದರೆ “ಅಹಿಂಸಾ ಪರಮೋಧರ್ಮಃ” ಎನ್ನುವ ಮೂಲ ಮಂತ್ರದಿಂದ ಜಗತ್ತಿಗೆ ಶಾಂತಿಯನ್ನು ಬೋಧಿಸಿದ ಮಹಾನ್ ಪುರುಷ.
‘ನೀನು ಜೀವಿಸು ಇತರರನ್ನು ಜೀವಿಸಲು ಬಿಡು’ ಎನ್ನುವ ಮೂಲಕ ಪ್ರತಿಯೊಂದು ಜೀವಿಗೆ ಬದುಕುವ ಸ್ವಾತಂತ್ರ್ಯವಿದೆ ಎಂಬುದನ್ನು ತಿಳಿಸಿದವರು.
ತಮ್ಮ ಸುಖ, ಸಂಪತ್ತು, ಸಿರಿತನ ಎಲ್ಲವನ್ನು ತ್ಯಜಿಸಿ 12 ವರ್ಷಗಳ ಕಠಿಣ ತಪಸ್ಸಿನಿಂದ ಆತ್ಮಕಲ್ಯಾಣ ಮಾಡಿಕೊಂಡು ಜನರಿಲ್ಲಿದ್ದ ಅಂಧಕಾರ, ಮೌಢ್ಯ, ಅಜ್ಞಾನ ಮತ್ತು ಮೂಢನಂಬಿಕೆಗಳನ್ನು ದೂರ ಮಾಡಿ ಜನರ ಹೃದಯದಲ್ಲಿ ಜ್ಞಾನದ ಜ್ಯೋತಿ ಹಚ್ಚಿದವರು ಜೈನಧರ್ಮದ ಪ್ರವರ್ತಕ ಭಗವಾನ್ ಮಹಾವೀರರು.
ಭಗವಾನ್ ಮಹಾವೀರರು ಬಿಹಾರದ ವೈಶಾಲಿಯಲ್ಲಿರುವ ಕುಂಡಲಪುರದ ರಾಜ ದಂಪತಿಗಳಾದ ಸಿದ್ದಾರ್ಥ ಮತ್ತು ತ್ರಿಶಲಾರ ಮಗನಾಗಿ ಕಿ.ಪೂ.599 ಜನಿಸಿದರು. ಆದರೆ ದಿಗಂಬರ ಜೈನರ ಪ್ರಕಾರ ಕ್ರಿ.ಪೂ.615 ರಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಮಹಾವೀರರ ಬಾಲ್ಯದ ಹೆಸರು ವರ್ಧಮಾನ. ಕ್ಷತ್ರಿಯರ ಒಡನಾಟದಲ್ಲಿ ಬೆಳೆದಂತೆಯೇ ಕ್ಷತ್ರಿಯ ಯೋಚಿತ ಶಸ್ತಾçಸ್ತç ವಿದ್ಯೆಗಳಲ್ಲಿ ಕರಗತನಾಗಿದ್ದ ಮಹಾವೀರ ಕುದುರೆ ಸವಾರಿ, ಕುಸ್ತಿ, ಈಜುಗಳಲ್ಲಿ ಅಸಾಮಾನ್ಯನಾಗಿದ್ದ. ಮದವೇರಿದ ಆನೆಯನ್ನು ಪಳಗಿಸಿದ್ದಕ್ಕಾಗಿ ‘ಅತಿವೀರ’ನೆಂದು ಪ್ರಸಿದ್ಧಿ ಹೊಂದಿದ್ದನು.
ಜ್ಞಾನ ಸಂಪಾದನೆಯೆಡೆಗೆ ಮಹಾವೀರ:
ವರ್ಧಮಾನ ಕ್ರಿ.ಪೂ.೯569 ಮಾರ್ಗಶಿರ ಮಾಸದ ಹತ್ತನೇ ದಿನ ಅಂದರೆ 30ನೇ ವಯಸ್ಸಿನಲ್ಲಿ ತನ್ನ ಅರಮನೆ, ಸಿರಿ, ಬಂಧು-ಬಳಗ, ತಂದೆ-ತಾಯಿ ಎಲ್ಲವನ್ನು ತ್ಯಜಿಸಿ, ‘ಜ್ಞಾನ ಸಂಪಾದನೆ’ ಮುಂದೆ ಎಲ್ಲ ವೈಭವಗಳು ತೃಣಕ್ಕೆ ಸಮಾನವೆಂದು ತಿಳಿದು ಸತ್ಯ ಶೋಧನೆ ಹಾದಿ ಹಿಡಿದರು. ಕುಂಡಲಪುರದ ಆಚೆ ಇರುವ ಜ್ಞಾಪಿಕವನದಲ್ಲಿದ್ದ ಅಶೋಕ ವೃಕ್ಷದ ಕೆಳಗೆ ಅಮೃತಶಿಲೆಯ ಮೇಲೆ ಕುಳಿತು ಧ್ಯಾನಾಸಕ್ತನಾದರು.
ಸುಮಾರು 12 ವರ್ಷ 5ತಿಂಗಳು 15 ದಿವಸಗಳ ಕಾಲ ಕಠಿಣ ತಪಸ್ಸನ್ನು ಮಾಡಿದರು. ಮಳೆ, ಚಳಿ, ಬಿಸಿಲನ್ನು ಲೆಕ್ಕಸದೆ ಹಾವು ಚೇಳುಗಳ ಪರಿವಿಲ್ಲದೆ ಕೇವಲ 12-13 ದಿನಗಳಿಗೊಮ್ಮೆ ಹಸಿವು ನೀಗಿಸಿಕೊಳ್ಳುತ್ತಾ ಅತೀಕಠಿಣ ತಪಸ್ಸನ್ನು ಆಚರಿಸಿದರು.
ಗ್ರಿಷ್ಮಋತು ಎರಡನೇ ತಿಂಗಳು, ನಾಲ್ಕನೇ ಪಕ್ಷ, ಸುವ್ರತ ಎನ್ನಲಾಗುವ ದಿನ ಕ್ರಿ.ಪೂ 557ರಂದು ಬಿಹಾರದ ಶಾಲವೃಕ್ಷದ ಕೆಳಗೆ ಮಹಾವೀರರಿಗೆ 42ನೇಯ ವಯಸ್ಸಿನಲ್ಲಿ ಜ್ಞಾನೋದಯವಾಗಿ ಅವರಿಗೆ ‘ಕೇವಲಜ್ಞಾನ’ ಲಭಿಸುತ್ತದೆ. ಈ ಜ್ಞಾನವನ್ನು ಎಲ್ಲವನ್ನು ತಿಳಿಯುವ ದಿವ್ಯಜ್ಞಾನ ಎನ್ನಲಾಗುತ್ತದೆ.
ಇದು ಅವರು ಪರ್ಯಾಂಕಾಸನದಲ್ಲಿದ್ದಾಗ ದೊರೆಯುತ್ತದೆ. ‘ಕೇವಲಜ್ಞಾನ’ ಸಾಧನೆ ಮಾಡಿದ ವರ್ಧಮಾನರು ಜಿತಕಾಮ, ಜಿನ, ಕೇವಲಿ, ಮಹಾವೀರ, ತೀರ್ಥಂಕರ ಎನಿಸಿಕೊಳ್ಳುತ್ತಾರೆ.
ಮಹಾವೀರರ ಪರಿನಿರ್ವಾಣ:
ಸುಮಾರು 32 ವರ್ಷಧರ್ಮ ಬೋಧನೆ ಮಾಡಿದ ಮಹಾವೀರರು ಕ್ರಿ.ಪೂ.527ರ ಕಾರ್ತಿಕ ಬಹುಳ ಅಮವಾಸ್ಯೆ ಸೋಮವಾರ ಬೆಳಿಗ್ಗೆ ದೀಪಾವಳಿಯಂದು 72ನೆಯ ವಯಸ್ಸಿನಲ್ಲಿ ಪಾವಾಪುರಿ ಎಂಬಲ್ಲಿ ನಿರ್ವಾಣವಾಗುತ್ತಾರೆ. ಜೈನರು ದೀಪಾವಳಿಯನ್ನು ಮಹಾವೀರರು ಮುಕ್ತವಾದ ದಿನವಾಗಿ ಆಚರಿಸುತ್ತಾರೆ.
ಅನೇಕಾಂತವಾದ ಪ್ರಜಾಪ್ರಭುತ್ವಕ್ಕೆ ಪೂರಕವಾದ ಸಿದ್ಧಾಂತ:
ಭಗವಾನ್ ಮಹಾವೀರರು ಪ್ರತಿಪಾದಿಸಿದ ಅನೇಕಾಂತವಾದ ಸಿದ್ದಾಂತದಲ್ಲಿ ಪ್ರತಿಯೊಬ್ಬರ ಅಭಿಪ್ರಾಯವನ್ನು ಗೌರವಿಸಲಾಗುತ್ತದೆ. ಸತ್ಯಕ್ಕೆ ಹಲವು ಮುಖಗಳು ಇರುತ್ತವೆ. ಸತ್ಯವನ್ನು ಒಂದು ಆಯಾಮದಿಂದ ಹುಡುಕಿದರೆ ಸಿಗುವುದಿಲ್ಲ ಬದಲಾಗಿ ಹಲವು ಆಯಾಮಗಳಿಂದ ಪರಿಶೀಲಿಸಿ ಸತ್ಯವನ್ನು ಕಂಡುಕೊಳ್ಳಬೇಕಾಗುತ್ತದೆ.
ಅಂದರೆ ಕೇವಲ ನನ್ನ ವಿಚಾರವೇ ಸರಿ, ನನ್ನದೇ ಸತ್ಯ ಎಂಬ ಕಲ್ಪನೆಯನ್ನು ತೊಡೆದು ಹಾಕಿ ಇನ್ನೊಬ್ಬರ ಅಭಿಪ್ರಾಯವನ್ನು ಗೌರವಿಸುವ ವಿಶಾಲ ಭಾವನೆ ಹೊಂದುವ ಮೂಲಕ ಸತ್ಯವನ್ನು ಕಾಣಬೇಕು. “ನೀನು ಹೇಳು ಇತರನ್ನು ಹೇಳಲು ಬಿಡು” ಎಂಬ ವಿಚಾರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪೂರಕವಾಗಿದ್ದು, ಸಮಾನತೆ ಮತ್ತು ಶಾಂತಿ ಪ್ರಜಾಪ್ರಭುತ್ವದ ಗುರಿಗಳು. ಇವುಗಳನ್ನು ಸಾಧಿಸಲು ಅನೇಕಾಂತವಾದ ಸಹಕಾರಿಯಾಗಿದೆ.
“ಕೊಲ್ಲೆನ್ನದ ಧಮ್ಮ ಯಾವುದಯ್ಯ
ಆತ್ಮ ಶುದ್ದಿಯ ಮಾರ್ಗಎಲ್ಲಿಹುದಯ್ಯ
ಮಿಥ್ಯೆಗೆ ಅಲ್ಲಿ ತಾವೇ ಇಲ್ಲವಯ್ಯ
ಅದು ಮೋಕ್ಷವೀರ ಮಹಾವೀರರ ಪಂಥಕಾಣ ಜಿನನಾಥ”
ಅಹಿಂಸೆಯನ್ನು ಜಗತ್ತಿಗೆ ಸಾರಿದ ಧರ್ಮ ಜೈನಧರ್ಮ. ಕೊಲ್ಲು, ಕೊಲೆ ಮಾಡು ಎಂದು ಯಾವ ಧರ್ಮವು ಹೇಳುವುದಿಲ್ಲ. ವಾಸ್ತವವಾಗಿ ಜಗತ್ತಿನ ಎಲ್ಲ ಧರ್ಮಗಳು ಮೂಲತಃ ಅಹಿಂಸಾ ಧರ್ಮಗಳೇ ಆಗಿವೆ. ಆತ್ಮ ಶುದ್ಧಿಯ ಮಾರ್ಗವನ್ನು ಬೇರೆಲ್ಲೂ ಹುಡುಕಬೇಕಿಲ್ಲ. ದೈನಿಕ ಆಲೋಚನೆ ಮತ್ತು ವರ್ತಮಾನದ ನಡತೆಯಿಂದ ಆತ್ಮ ಶುದ್ಧಿಕಾಣಬೇಕು. ಸುಳ್ಳು, ಕಪಟ, ಮೋಸಗಳಿಗೆ ಅವಕಾಶವಿಲ್ಲದ ಧರ್ಮ ಮಹಾವೀರರದು. ಜೈನಧರ್ಮವು ಅಹಿಂಸಾ ಸಿದ್ಧಾಂತಕ್ಕೆ ನೀಡಿದ ಮಹತ್ತರ ಕೊಡುಗೆಗಾಗಿ “ಅಹಿಂಸಾ ಧರ್ಮ”, “ಜೀವದಯಾ ಧರ್ಮ”ವಾಗಿದೆ.
“ಅಹಿಂಸಾ ಪರಮೋ ಧರ್ಮಃ” ತತ್ವವಾಣಿಯು ಭಗವಾನ್ ಮಹಾವೀರರು ಜಗತ್ತಿಗೆ ನೀಡಿದ ಶ್ರೇಷ್ಠ ಸಂದೇಶವಾಗಿದೆ. ಅಹಿಂಸೆ ಎಂದರೆ ಕೇವಲ ಕೊಲ್ಲುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಮನಸ್ಸಿನಲ್ಲಿ ಹಿಂಸೆಯ ಬಗ್ಗೆ ಯೋಚಿಸಿದರು ಕೂಡ ಅದು ಹಿಂಸೆಯೇ ಆಗಿರುತ್ತೆ. ಹಿಂಸೆಯಿಂದ ಶಾಂತಿ ಮತ್ತು ವಿಕಾಸಗಳು ಸಾಧ್ಯವಿಲ್ಲ. ವೈರದಿಂದ ವೈರತ್ವ ಶಮನವಾಗುವುದಿಲ್ಲ. ಸ್ನೇಹದ ಮೂಲಕ ಇತರರನ್ನು ಪ್ರೀತಿಸುವುದೇ ಅಹಿಂಸೆಯ ವ್ಯಾಪಕ ಅರ್ಥ. ಆತ್ಮ ಪ್ರೇಮದಿಂದ ಹಿಡಿದು ವಿಶ್ವ ಪ್ರೇಮದ ವರೆಗೆ ಎಲ್ಲವು ಅಹಿಂಸೆಯನ್ನು ಆಶ್ರಯಿಸಿವೆ.
ವೈಚಾರಿಕ ಬದುಕಿಗೆ ಬೆಳಕು ಚೆಲ್ಲುವ ಪಂಚಶೀಲ ತತ್ವಗಳು:
‘ಅಹಿಂಸೆ, ಸತ್ಯ, ಆಸ್ತೇಯ, ಅಪರಿಗ್ರಹ ಮತ್ತು ಬ್ರಹ್ಮಚರ್ಯಂ ಈ ಪಂಚಶೀಲ ತತ್ವಗಳು ಜೈನಧರ್ಮದ ಮಹತ್ವವನ್ನು ತಿಳಿಸುತ್ತವೆ. ಯಾವ ಜೀವಕುಲಕ್ಕೂ ಯಾವ ರೀತಿಯಲ್ಲೂ ಹಿಂಸೆ ಮಾಡಬಾರದು. ಅಸತ್ಯಕ್ಕೆ ಆ ಕ್ಷಣಕ್ಕೆ ಮಾತ್ರ ಗೆಲ್ಲುವ ಶಕ್ತಿಯಿದೆ. ಆದರೆ ಧೈರ್ಯದಿಂದ ಬದುಕು ನಡೆಸಲು ಇರುವ ಏಕಮಾತ್ರ ಸಾಧನ ಸತ್ಯ. ಆಸ್ತೇಯ ಎಂದರೆ ಕಳ್ಳತನ ಮಾಡದಿರುವುದು. ಅಪರಿಗ್ರಹವೆಂದರೆ ಅಗತ್ಯಕಿಂತ ಹೆಚ್ಚು ಇಟ್ಟುಕೊಳ್ಳದಿರುವುದು. ಬ್ರಹ್ಮಚರ್ಯ ಎಂದರೆ ಮದುವೆಯಾಗದಿರುವುದು ಎಂಬ ಒಂದೇ ಅರ್ಥವಲ್ಲ. ಮದುವೆಯಾದ ಮೇಲೂ ಬೇರೆ ಹೆಣ್ಣು ಮಕ್ಕಳನ್ನು ಗೌರವಿಸುವ ಹಾಗೂ ಅವರನ್ನು ಅಕ್ಕ-ತಂಗಿಯರೆಂದು ತಿಳಿದು ಕೊಳ್ಳುವುದು. ಹೀಗೆ ಭಗವಾನ್ ಮಹಾವೀರರು ಪಂಚಶೀಲ ತತ್ವಗಳನ್ನು ಬೋಧಿಸಿ ಜನರಲ್ಲಿ ವೈಚಾರಿಕ ಬದಲಾವಣೆಗೆ ಬೆಳಕು ಚೆಲ್ಲುತ್ತಾರೆ.
‘ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ್ಯ ಈ ತ್ರಿರತ್ನಗಳ ಮೂಲಕ ಸದಾ ಕಾಲ ಒಳ್ಳೆಯದನ್ನೆ ನೋಡು. ಅದರಿಂದಾಗಿ ಒಳ್ಳೆಯ ಜ್ಞಾನ ಸಂಚಯವಾಗುತ್ತದೆ, ಒಳ್ಳೆಯ ಜ್ಞಾನ ನಿನ್ನ ಒಳ್ಳೆಯ ನಡೆತೆಗೆ ಕಾರಣವಾಗುತ್ತದೆ ಎಂಬ ಮಹಾವೀರರ ಮಾತುಗಳು ಇಂದಿನ ದಿನಮಾನಗಳಲ್ಲಿಯೂ ಮತ್ತೆ ಮತ್ತೆ ಚಿಂತನೆಗೆ ಒಳಗಾಗುತ್ತವೆ.
ಅಶಾಂತಿ, ಗಲಭೆ, ಹಿಂಸೆ, ಜಾತೀಯತೆ, ಮತ್ತು ತಾರತಮ್ಯಗಳಿಂದ ಜಗತ್ತು ದುಸ್ತರವಾಗುತ್ತಿದೆ. ಸಮಾಜದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ, ಸಹನೆ ಮತ್ತು ಸಹಬಾಳ್ವೆಯನ್ನು ನಿರ್ಮಿಸುವ ಶಕ್ತಿ ಅಹಿಂಸಾ ಸಿದ್ಧಾಂತಕ್ಕೆ ಇದೆ. ಭಗವಾನ್ ಮಹಾವೀರರ ಸಂದೇಶಗಳು ಪ್ರಪಂಚಕ್ಕೆ ಬೆಳಕಾಗಿ “ಅಹಿಂಸಾ ಪರಮೋಧರ್ಮಃ” ತತ್ವದ ಮೂಲಕ ವಿಶ್ವದಲ್ಲಿ ಶಾಂತಿ ನೆಲೆಸಲಿ.
ಶರತ್ ಎಂ.ಎಸ್.
ವಾರ್ತಾ ಇಲಾಖೆ