Wednesday, February 25, 2026
Wednesday, February 25, 2026
Home Blog Page 1628

ಈಶ್ವರಪ್ಪ ವಿರುದ್ಧದ ಆರೋಪ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ-ಬೊಮ್ಮಾಯಿ

0

ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪಿಸಿದ್ದ ಗುತ್ತಿಗೆದಾರ ಸಂತೋಷ್ ಕೆ. ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಯು ಕಾನೂನು ಪ್ರಕಾರ ನಡೆಯುತ್ತದೆ. ಎಲ್ಲೂ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ವಿರುದ್ಧ ಎಫ್ ಐಆರ್ ಆಗಿದೆ. ಆ ಬಗ್ಗೆ ಎಲ್ಲ ವಿವರ ಪಡೆದುಕೊಂಡಿದ್ದೇನೆ. ಈ ಬಗ್ಗೆ ಈಶ್ವರಪ್ಪನವರೊಂದಿಗೆ ಮಾತನಾಡುತ್ತೇನೆ. ಫೋನಿನಲ್ಲೂ ಕೆಲವು ವಿಚಾರ ಮಾತನಾಡಿದ್ದೇನೆ ಎಂದರು.
ಪ್ರಕರಣದ ಬಗ್ಗೆ ಪಕ್ಷದ ವರಿಷ್ಟರಿಗೆ ಎಲ್ಲಾ ವಿಚಾರ ಗೊತ್ತಿದೆ. ನಾನು ಕೂಡ ಹೇಳಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಈಶ್ವರಪ್ಪನವರ ರಾಜೀನಾಮೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ರಾಜೀನಾಮೆ ಬಗ್ಗೆ ಈಶ್ವರಪ್ಪ ಏನು ಹೇಳಿದ್ದಾರೆ ಗೊತ್ತಿಲ್ಲ. ಒನ್ ಟು ಒನ್ ಮಾತನಾಡಿದರೆ ಸ್ಪಷ್ಟವಾಗುತ್ತದೆ. ಅಲ್ಲಿನ ಘಟನೆ ಮತ್ತು ಎಫ್.ಐ.ಆರ್ ಆದ ನಂತರ ಏನಾಗಿದೆ ಅಂತ ಅವರ ಜೊತೆಯೇ ಮಾತನಾಡುತ್ತೇನೆ ಎಂದರು.
ಕಾಂಗ್ರೆಸ್ ನಿಯೋಗವು ಈಶ್ವರಪ್ಪರನ್ನು ಸಂಪುಟದಿಂದ ವಜಾಗೊಳಿಸಿ, ಅವರನ್ನು ಬಂಧಿಸುವಂತೆ ಒತ್ತಾಯಿಸಿ ರಾಜ್ಯಪಾಲರನ್ನು ಭೇಟಿಯಾಗಿರುವ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ವಿರೋಧ ಪಕ್ಷದವರು ಇದರಲ್ಲಿ ತಪ್ಪು ಕಂಡು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ತನಿಖೆ ನಂತರ ಸತ್ಯಾಂಶ ಹೊರಗೆ ಬರುತ್ತದೆ. ಯಾರು ಇದರಲ್ಲಿ ಪಾತ್ರ ವಹಿಸಿದ್ದಾರೆ ಮತ್ತು ಇದರ ಹಿನ್ನೆಲೆ ಏನು ಅನ್ನೋದು ಗೊತ್ತಾಗುತ್ತದೆ ಎಂದರು.

ರಾಜ್ಯದಲ್ಲಿ ಈಗಿನಿಂದಲೇ ಕೋವಿಡ್ ವಿರುದ್ಧ ಮುಂಜಾಗ್ರತೆ- ಸುಧಾಕರ್

0

ಚೀನಾ, ದಕ್ಷಿಣ ಕೊರಿಯಾ, ಹಾಂಗ್‍ಕಾಂಗ್ ಇನ್ನು 8 ದೇಶಗಳಲ್ಲಿ ಕೊರೋನಾ ಹರಡುವಿಕೆ ತೀವ್ರವಾಗಿದೆ. ಈ ದೇಶಗಳಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಆರೋಗ್ಯ ಸೌಧದಲ್ಲಿ ಕೊರೋನಾ ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು.

ದೇಶಗಳಲ್ಲಿ ಕೋವಿಡ್ ನಾಲ್ಕನೇ ಅಲೆ ಕಂಡುಬಂದಿದೆ. ದಕ್ಷಿಣ ಕೊರಿಯಾ, ಹಾಂಗ್‍ಕಾಂಗ್, ಚೀನಾ ದೇಶಗಳಲ್ಲಿ ಸಾಂಕ್ರಾಮಿಕದ ತೀವ್ರತೆ ಹೆಚ್ಚಿದೆ. ಜರ್ಮನಿ, ಯುಕೆಯಲ್ಲೂ ಸೋಂಕು ಹೆಚ್ಚಾಗಿದೆ. ಇಲ್ಲಿ ಎಕ್ಸ್‌ಇ ಮತ್ತು ಎಂಇ ಎಂಬ ಹೊಸ ವೈರಾಣು ಪ್ರಭೇದಗಳು ಕಂಡುಬಂದಿವೆ. ದೇಶದಲ್ಲಿ ನವದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿದೆ. ಇದಕ್ಕಾಗಿ ತುರ್ತು ಸಮಾಲೋಚನೆ ಸಭೆ ನಡೆಸಲಾಗಿದೆ. ಈ 8 ದೇಶಗಳಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರಾಜ್ಯಕ್ಕೆ ಬರುವವರ ಮೇಲೆ ವಿಶೇಷ ನಿಗಾವಹಿಸಬೇಕಿದೆ. ಆ ಪ್ರಯಾಣಿಕರಿಗೆ ಥರ್ಮಲ್ ತಪಾಸಣೆ ಮಾಡುತ್ತದೆ. ಅವರು ಮನೆಗೆ ತೆರಳಿದ ನಂತರ ಒಂದು ವಾರ ಅಥವಾ ಹತ್ತು ದಿನ ಟೆಲಿ ಮಾನಿಟರಿಂಗ್ ಮಾಡುತ್ತದೆ. ಲಸಿಕೆ ಪಡೆಯದ ಮಕ್ಕಳ ಮೇಲೆ ವಿಶೇಷ ನಿಗಾ ಇರಿಸುವುದು, ಸುಮಾರು 5 ಸಾವಿರ ಮಕ್ಕಳಿಗೆ ಪರೀಕ್ಷೆ ಮಾಡುವುದು ಮೊದಲಾದ ಸಲಹೆಗಳನ್ನು ತಜ್ಞರು ನೀಡಿದ್ದಾರೆ. ಈ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಶಿವಮೊಗ್ಗ ಕ್ರಿಕೆಟ್ ಆಟಗಾರ್ತಿ ಅದಿತಿ T20 ತಂಡಕ್ಕೆ ಆಯ್ಕೆ

0

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವೇದ ಕೃಷ್ಣಮೂರ್ತಿ ನೇತೃತ್ವದ ಕರ್ನಾಟಕ ಮಹಿಳಾ ಟಿ-20 ತಂಡಕ್ಕೆ ಶಿವಮೊಗ್ಗದ ಪ್ರತಿಭಾನ್ವಿತ ಮಹಿಳಾ ಕ್ರಿಕೆಟ್ ಕ್ರೀಡಾಪಟು ಕು.ಅದಿತಿ ರಾಜೇಶ್ ಇವರು ಆಯ್ಕೆಯಾಗಿದ್ದು, ಇವರು ದಿನಾಂಕ: 18-04-2022 ರಿಂದ ಗುಜರಾತ್‍ನ ರಾಜ್‍ಕೋಟ್‍ನಲ್ಲಿ ನಡೆಯಲಿರುವ ಹಿರಿಯ ಮಹಿಳಾ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.

ಅದಿತಿ ರಾಜೇಶ್‍ರವರು ಪ್ರಸ್ತುತ ನಗರದ ಡಿ.ವಿ.ಎಸ್ ವಿನೋಬನಗರ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಹ್ಯಾದ್ರಿ ಕಾಲೇಜಿನಲ್ಲಿರುವ ಕ್ರೀಡಾಂಗಣದಲ್ಲಿ ಕಳೆದ 8 ವರ್ಷಗಳಿಂದ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಕ್ರಿಕೆಟ್ ತರಬೇತುದಾರ ಪಿ.ವಿ.ನಾಗರಾಜ್ ಇವರ ಬಳಿ ತರಬೇತಿಯನ್ನು ಪಡೆಯುತ್ತಿದ್ದಾರೆ.

ಮಹಿಳಾ ಟಿ-20 ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿ ನಗರಕ್ಕೆ ಕೀರ್ತಿ ತಂದ ಈ ಪ್ರತಿಭಾವಂತ ಬಾಲಕಿಗೆ ಡಿ.ಎಸ್.ಅರುಣ್, ಕೆ.ಎಸ್.ಸಿ.ಎ ಶಿವಮೊಗ್ಗ ವಲಯದ ಸಂಚಾಲಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥಸ್ವಾಮಿ.ಎಂ.ಟಿ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಚ್ಚಿನ ಕೀರ್ತಿ ತರಲೆಂದು ಹಾರೈಸಿ, ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಆರೋಪಿ ಸಚಿವ ಈಶ್ವರಪ್ಪ ಅವರನ್ನುವಜಾಗೊಳಿಸಲು ಕಾಂಗ್ರೆಸ್ ಪ್ರತಿಭಟನೆ

0

ಗುತ್ತಿಗೆದಾರ ಸಂತೋಷ್ ಕುಮಾರ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು.

ಈಗಾಗಲೇ ದಾಖಲಾಗಿರುವ ಎಫ್‍ಐಆರ್ ಬಾಂಬ್ ಜೊತೆಗೆ ಭ್ರಷ್ಟಚಾರ ನಿಗ್ರಹ ಕಾಯ್ದೆ ಸೆಕ್ಷನ್‍ಗಳನ್ನು ಸೇರಿಸಬೇಕು ಮತ್ತು ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಇಂದು ರಾಜಭವನದ ಮುಂದೆ ಪ್ರತಿಭಟನೆ ನಡೆಸಿದೆ.

ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲಿಂ ಅಹಮ್ಮದ್ ಸೇರಿದಂತೆ ಶಾಸಕರು, ವಿಧಾನ ಪರಿಷತ್ ಸದಸ್ಯರ ನಿಯೋಗ ಇಂದು ಬೆಳಗ್ಗೆ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚೆಂದ್ ಗೆಲ್ಹೋಟ್‍ರನ್ನು ಭೇಟಿ ಮಾಡಿ ಈಶ್ವರಪ್ಪ ಅವರ ವಿರುದ್ಧ ದೂರು ನೀಡಿದೆ.

ಬಳಿಕ ರಾಜಭವನ ಮುಂದೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಲ್ಲದೆ, ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ನಾಯಕರು ನಿರ್ಣಾಯಕ ಹೋರಾಟಕ್ಕೆ ಮುಂದಾಗಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆಗಳು ಶುರುವಾಗಿವೆ. ಈಶ್ವರಪ್ಪ ಅವರನ್ನು ಸಂಪುಟದಿಂದ ಕೈ ಬಿಟ್ಟರೆ ಸಾಲದು ಮೊದಲು ಅವರನ್ನು ಬಂಧಿಸಬೇಕು. ಈಗಾಗಲೇ ಉಡುಪಿಯಲ್ಲಿ ದಾಖಲಿಸಿರುವ ಎಫ್‍ಐಆರ್‍ನಲ್ಲಿ ಐಪಿಸಿ ಸೆಕ್ಷನ್ 306 ರೆಡ್ ವಿತ್ 34 ಅಡಿ ಪ್ರಕರಣ ದಾಖಲಿಸಲಾಗಿದೆ.

ಇದೇ ವೇಳೆ ಸರ್ಕಾರದ ವಿರುದ್ಧ ಕೇಳಿ ಬಂದಿದ್ದ ಶೇ.40ರಷ್ಟು ಕಮಿಷನ್ ಆರೋಪದ ಕುರಿತು ನಿಲುವಳಿ ಸೂಚನೆಯಡಿ ಚರ್ಚೆಗೆ ವಿಧಾನಸಭೆಯಲ್ಲಿ ಅವಕಾಶ ನೀಡಿದ್ದರೆ ಸಂತೋಷ್ ಆತ್ಮಹತ್ಯೆ ನಡೆಯುತ್ತಿರಲಿಲ್ಲ. ವಿಧಾನಸಭೆ ಅಧ್ಯಕ್ಷರು ಚರ್ಚೆಗೆ ಅವಕಾಶ ನೀಡಲಿಲ್ಲ ಎಂದು ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಘಟನೆಯ ಬಗ್ಗೆ ರಾಜ್ಯಪಾಲರು ಕಳವಳ ವ್ಯಕ್ತ ಪಡಿಸಿದ್ದಾರೆ. ನಿನ್ನೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಈಶ್ವರಪ್ಪ ಅವರೊಂದಿಗೆ ಮಾತನಾಡಿದ್ದು ತಮ್ಮದೇ ರೀತಿಯಲ್ಲಿ ವಿಚಾರಣೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಮಾತನಾಡಿ, ಸಂತೋಷ್ ಬಿಜೆಪಿ ಕಾರ್ಯಕರ್ತ, ಸಚಿವ ಈಶ್ವರಪ್ಪ ಮೌಖಿಕವಾಗಿ ನೀಡಿದ ಭರವಸೆಯ ಮೇರೆಗೆ ಗ್ರಾಮೀಣ ಭಾಗದ ರಸ್ತೆ ಕಾಮಗಾರಿಗಳಲ್ಲಿ ನಾಲ್ಕು ಕೋಟಿ ರೂಪಾಯಿ ಮೊತ್ತದ 108 ಕೆಲಸಗಳನ್ನು ಮಾಡಿದ್ದಾರೆ.

ಕಾಂಗ್ರೆಸ್ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಒಂದು ವೇಳೆ ಹೋರಾಟ ಮಾಡುವ ನಮ್ಮನ್ನು ಸರ್ಕಾರ ಜೈಲಿಗೆ ಹಾಕಿದರು ಹೆದರುವುದಿಲ್ಲ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಹರಕಲು ಬಾಯಿ ಸಚಿವ ಈಶ್ವರಪ್ಪರನ್ನು ಬಂಸಲೇಬೇಕು ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಅದಕ್ಕಾಗಿ ಅವರು ಪತ್ನಿಯ ಚಿನ್ನಾಭರಣಗಳನ್ನು ಅಡಮಾನ ಮಾಡಿದ್ದಾರೆ, ಖಾಸಗಿಯವರ ಬಳಿಯೂ ಸಾಲ ಮಾಡಿದ್ದಾರೆ. ಕಷ್ಟಪಟ್ಟು ಹಣ ಹೊಂದಿಸಿ ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡಿದ್ದಾರೆ. ಮಾಡಿದ ಕೆಲಸಕ್ಕೆ ಕಾರ್ಯಾದೇಶ ನೀಡಲು ಮತ್ತು ಬಿಲ್ ಪಾವತಿಸಲು ಸಚಿವ ಈಶ್ವರಪ್ಪ ಮತ್ತು ಅವರ ಬೆಂಬಲಿಗರು ಶೇ.40ರಷ್ಟು ಕಮಿಷನ್ ಕೇಳಿದ್ದಾರೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದ ಸಂತೋಷ್ ಕಮಿಷನ್ ಹಣ ಕೊಡಲಾಗದೆ 80ಕ್ಕೂ ಬಾರಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಆದರೂ ಬಿಲ್ ಪಾವತಿಯಾಗಿಲ್ಲ.

ನಾಲ್ಕು ಕೋಟಿಯಲ್ಲಿ ಶೇ.40 ಕಮಿಷನ್ ಎಂದರೆ 1.60 ಕೋಟಿ ಭ್ರಷ್ಟಾಚಾರಕ್ಕೆ ಖರ್ಚಾಗಲಿದೆ. ಬಾಕಿ ಉಳಿಯುವುದು 2.40 ಕೋಟಿ ಮಾತ್ರ. ಅಷ್ಟು ದೊಡ್ಡ ಪ್ರಮಾಣದ ಕಮಿಷನ್ ಕೊಡಲಾಗದೆ ಸಂತೋಷ್ ಸಣ್ಣ ಪ್ರಮಾಣದ ಹಣವನ್ನೂ ನೀಡಿರಬಹುದು. ಆದರೆ ಸಚಿವರು ಬಿಲ್ ಪಾವತಿಸದೆ ಕಿರುಕುಳ ನೀಡಿದ್ದಾರೆ. ಇದರಿಂದ ಉಡುಪಿಗೆ ಹೋಗಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಪ್ರಯತ್ನಿಸಿ, ವಿಫಲವಾಗಿ ಹತಾಶನಾಗಿ ಅಲ್ಲಿಯೇ ಹೋಟೆಲ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ, ಸಮಾಜಕಲ್ಯಾಣ, ನೀರಾವರಿ, ಲೋಕೋಪಯೋಗಿ, ನಗರಾಭಿವೃದ್ಧಿ ಸೇರಿದಂತೆ ಎಲ್ಲಾ ಇಲಾಖೆಗಳಲ್ಲೂ ಶೇ.40ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಳೆದ ಜುಲೈನಲ್ಲಿ ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಎಲ್ಲರಿಗೂ ದೂರು ನೀಡಿದ್ದರು. ಅದರ ಚರ್ಚೆಗೆ ನಾವು ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯಡಿ ನೋಟಿಸ್ ನೀಡಿದ್ದೇವು.

ಆದರೆ ಪ್ರಾಥಮಿಕ ವಾದ ಮಂಡನೆಗೂ ಅವಕಾಶ ನೀಡದೆ ವಿಧಾನಸಭಾಧ್ಯಕ್ಷರು ಇತಿಹಾಸದಲ್ಲಿ ಮೊದಲ ಬಾರಿಗೆ ಸೂಚನೆಯನ್ನು ಸ್ವಯಂ ಪ್ರೇರಿತರಾಗಿ ತಿರಸ್ಕರಿಸಿದ್ದರು. ಒಂದು ವೇಳೆ ಕಮಿಷನ್ ದಂಧೆ ಚರ್ಚೆಯಾಗಿದ್ದರೆ ಇಂದು ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.

ಈಗ ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್ ಕುಮಾರ್ ಪಾಟೀಲ್ ದೆಹಲಿಗೆ ಹೋಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಸೇರಿದಂತೆ ಹಲವರಿಗೆ ದೂರು ನೀಡಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ದೂರು ನೀಡಿದ್ದಾರೆ.

ಆದರೆ ಯಾರು ಕ್ರಮ ಕೈಗೊಳ್ಳಲಿಲ್ಲ. ಸಂತೋಷ್ ಆತ್ಮಹತ್ಯೆ ಮೂಲಕ ಈ ಸರ್ಕಾರ ಶೇ.40ರಷ್ಟು ಕಮಿಷನ್ ದಂಧೆಯ ಸರ್ಕಾರ ಎಂಬುದು ಖಾತ್ರಿಯಾಗಿದೆ. ಆರೋಪಿ ಸ್ಥಾನದಲ್ಲಿರುವ ಈಶ್ವರಪ್ಪರನ್ನು ಬಂಧಿಸಬೇಕು, ಸಂಪುಟದಿಂದ ವಜಾ ಮಾಡಬೇಕು, ಭ್ರಷ್ಟಾಚಾರದ ಆರೋಪದ ಅಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಮಾನವೀಯ ಮೌಲ್ಯಗಳು ಮತ್ತು ನೈತಿಕ ಶಿಕ್ಷಣ ಎನ್ ಇ ಪಿ ಯಿಂದ ಸಾಧ್ಯ- ನಾಗೇಶ್

0

ಮಾನವೀಯತೆ ಮೌಲ್ಯಗಳುಳ್ಳ, ವಿನಯ ಹಾಗೂ ಗುಣಮಟ್ಟದ ನೈತಿಕ ಶಿಕ್ಷಣದಿಂದಾಗಿ ದೇಶ ಸಮೃದ್ದಿಯತ್ತ ಸಾಗುವಂತಾಗಲು ಹೊಸ ಶಿಕ್ಷಣ ನೀತಿ ಅವಶ್ಯವಾಗಿದೆ ಎಂದು ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ ಅವರು ತಿಳಿಸಿದರು.

ಬಾಗಲಕೋಟೆಯ ವಿದ್ಯಾಗಿರಿಯ ಬಸವೇಶ್ವರ ಇಂಜಿನೀಯರಿಂಗ್ ಕಾಲೇಜ ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಸವೇಶ್ವರ ವಿದ್ಯಾವರ್ಧಕ ಸಂಘ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತು ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತವನ್ನು ಜ್ಞಾನ ಜಗತ್ತಿನ ಬಲಶಾಲಿ ರಾಷ್ಟ್ರವನ್ನಾಗಿಸಲು ಕೊಡುಗೆ ನೀಡುವ ಭಾರತೀಯ ಮೌಲ್ಯಗಳಲ್ಲಿ ಬೇರೂರಿದ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವುದಾಗಿದೆ ಎಂದರು.

ಬುದ್ದಿ, ಕ್ರಿಯೆ ಮತ್ತು ಕಾರ್ಯಗಳಲ್ಲಿಯೂ ಸಹ ಭಾರತೀಯತೆಯ ಕುರಿತು ಹೆಮ್ಮೆಯನ್ನು ಆಳವಾಗಿ ಬೇರೂರುವಂತೆ ಮಾಡುವ ಜೊತೆಗೆ ಮಾನವ ಹಕ್ಕುಗಳ ಕುರಿತು ಜವಾಬ್ದಾರಿಯುವ ಬದ್ದತೆ, ಸುಸ್ಥಿರ ಅಭಿವೃದ್ದಿ ಮತ್ತು ಜೀವನ ಹಾಗೂ ಜಾಗತಿಕ ಕಲ್ಯಾಣವನ್ನು ಬೆಂಬಲಿಸಿ ವಾಸ್ತವದಲ್ಲಿ ಕಲಿಕಾರ್ಥಿಗಳನ್ನು ಜಾಗತಿಕ ನಾಗರಿಕರನ್ನಾಗಿಸುವ ದೃಷ್ಠಿಕೋನ ಹೊಂದಲಾಗಿದೆ ಎಂದರು.

ವಿದ್ಯಾರ್ಥಿಗಳಲ್ಲಿ ಮೂಲಭೂತ ಕರ್ತವ್ಯಗಳು ಮತ್ತು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಆಳವಾದ ಗೌರವ, ದೇಶದೊಂದಿಗೆ ಭಾಂದವ್ಯ ಮತ್ತು ಬದಲಾಗುತ್ತಿರುವ ಜಗತ್ತಿನಲ್ಲಿ ತಮ್ಮ ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದರು.

ಸಮಾಜ ಸೇವಕ ಪಿ.ಓ.ಶಿವಕುಮಾರ್ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

0

ಶಿವಮೊಗ್ಗದ ಪಿ.ಓ.ಶಿವಕುಮಾರ್ ಅವರನ್ನ ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ.

ನವದೆಹಲಿಯ ಕಾಂಗ್ರೆಸ್ ಪಕ್ಷದ ಕಛೇರಿಯಿಂದ ಈ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ.ರಾಜ್ಯ ಪೋಲಿಸ್ ಇಲಾಖೆಯಲ್ಲಿ ಡಿವೈಎಸ್ ಪಿ ಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಶಿವಕುಮಾರ್ ಸದ್ಯ
ಸಹ್ಯಾದ್ರಿ ಸಂಯುಕ್ತ ನಿವೃತ್ತದಾರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೂ ಸಾಮಾಜಿಕ ,ರಾಜಕೀಯ ಚಿಂತನೆಗಳ ಮೂಲಕ
ಸಾರ್ವಜನಿಕ ಜೀವನದಲ್ಲಿ ಹೆಸರು ಮಾಡಿದ್ದಾರೆ.

ಪೋಲಿಸ್ ಇಲಾಖೆಗೆ ಪಿಎಸ್ಐ ಆಗಿ ನೇಮಕವಾಗಿ ಅನೇಕ ಅಪರಾಧಿಗಳ ಕೂಟಗಳ ಸೊಕ್ಕಡಗಿಸಿ ಬೇಡಿತೊಡಿಸಿದ ನಿಷ್ಠಾವಂತ ಅಧಿಕಾರಿ.
ತಮ್ಮ ಅಧಿಕಾರದ ಅವಧಿಯಲ್ಲಿ ನೊಂದವರಿಗೆ ಸಾಂತ್ವನ ನೀಡಿ,ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ನಿಷ್ಪಕ್ಷಪಾತವಾಗಿ ಹೋರಾಡಿದ್ದಾರೆ.

ಪ್ರಸ್ತುತ ರಾಷ್ಟ್ರೀಯ ಪಕ್ಷವೊಂದು ಶಿವಕುಮಾರ್ ಅವರಿಗೆ ರಾಜಕೀಯಕ್ಷೇತ್ರದಲ್ಲಿ ಸೇವೆಸಲ್ಲಿಸಲು ಆಮಂತ್ರಿಸಿರುವುದು
ಅವರ ಸೇವೆ ಮತ್ತು ಜನಪ್ರಿಯತೆಯನ್ನ ಗುರುತಿಸಿದಂತಾಗಿದೆ.

ಉಕ್ರೇನ್ ಮೇಲಿನ ದಾಳಿ ಮೂಲಕ ರಷ್ಯ ತನ್ನ ಭವ್ಯ ಉದ್ದೇಶ ಈಡೇರಿಸಿಕೊಳ್ಳುತ್ತದೆ

0

ಉಕ್ರೇನ್ ಮೇಲಿನ ಸೇನಾ ಕಾರ್ಯಾಚರಣೆಯ ಮೂಲಕ ಅಂದುಕೊಂಡ ಭವ್ಯ ಉದ್ದೇಶವನ್ನು ಖಚಿತವಾಗಿ ಈಡೇರಿಸಿಕೊಳ್ಳುತ್ತೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿನ್ನೆ ಸ್ಪಷ್ಟಪಡಿಸಿದ್ದಾರೆ.

ವೊಸ್ಟೋಚ್ನಿ ಕೋಸ್ಮೊಡ್ರೋಮ್ಲ್ಲಿ ನಡೆದ ಸಮಾರಂಭದಲ್ಲಿ ಪುಟಿನ್ ಈ ವಿಚಾರ ತಿಳಿಸಿದೆ. ಉಕ್ರೇನ್​ನ ರಷ್ಯಾ ವಿರೋಧಿ ಪಡೆಗಳನ್ನು ಮಟ್ಟ ಹಾಕುವುದಕ್ಕೆ ಸೇನಾ ಕಾರ್ಯಾಚರಣೆಯ ಹೊರತು ಬೇರೆ ಮಾರ್ಗವಿರಲಿಲ್ಲ.

ರಷ್ಯಾದ ಗುರಿ ಮತ್ತು ಉದ್ದೇಶ ಬಹಳ ಸ್ಪಷ್ಟವಾಗಿದೆ ಎಂದು ವಿವರಿಸಿದ್ದಾರೆ. ರಷ್ಯಾದ ಹಿತಾಸಕ್ತಿಗೆ ವಿರುದ್ಧವಾಗಿ ನ್ಯಾಟೋ ಕೂಟ ಸೇರ್ಪಡೆಯಾಗುವ ಉಕ್ರೇನ್ ನಡೆಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಲೇ ಬರಲಾಗಿತ್ತು. ಇದಲ್ಲದೆ, ರಷ್ಯಾ ಬೆಂಬಲಿತ ಭಿನ್ನಮತೀಯರನ್ನು ಹತ್ತಿಕ್ಕಲು ಉಕ್ರೇನ್ 2014ರಿಂದ ಈಚೆಗೆ ಪ್ರಯತ್ನಿಸುತ್ತಿದೆ. ಒಂದು ಕಡೆಗೆ ರಷ್ಯಾ ಜನರಿಗೆ ನೆರವು ನೀಡುತ್ತ ಅವರನ್ನು ರಕ್ಷಿಸುತ್ತಿದೆ. ಇನ್ನೊಂದೆಡೆ ರಷ್ಯಾದ ಸುರಕ್ಷತೆಯನ್ನು ಗಮನಿಸಲಾಗುತ್ತಿದೆ ಎಂದು ಪುಟಿನ್ ಅವರು ತಿಳಿಸಿದ್ದಾರೆ.

ರಷ್ಯಕ್ಕೆ ಭಾರತದಿಂದ ಅಗತ್ಯ ವಸ್ತುಗಳ ರಫ್ತು

0

ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾ ಮೇಲೆ ಅನೇಕ ಪಾಶ್ಚಿಮಾತ್ಯ ದೇಶಗಳು ವ್ಯಾಪಾರ ನಿರ್ಬಂಧ ಹೇರಿರುವ ಮಧ್ಯೆಯೇ, ರಷ್ಯಾಗೆ 200 ಕೋಟಿ ಡಾಲರ್‌ (15,218 ಕೋಟಿ ರು.) ಮೌಲ್ಯದ ಸರಕುಗಳನ್ನು ರಫ್ತು ಮಾಡಲು ಭಾರತ ಚಿಂತನೆ ನಡೆಸಿದೆ.

ದ್ವಿಪಕ್ಷೀಯ ವ್ಯಾಪಾರವನ್ನು ಮುಂದುವರಿಸಲು ಸ್ಥಳೀಯ ಕರೆನ್ಸಿಗಳಲ್ಲಿ ಪಾವತಿ ವ್ಯವಸ್ಥೆಗೆ ಭಾರತ ಮತ್ತು ರಷ್ಯಾ ಅವಕಾಶ ನೀಡಲು ಯೋಜನೆ ಸಿದ್ಧಪಡಿಸಿರುವುದರಿಂದ ಈ ಚಿಂತನೆ ನಡೆಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರಷ್ಯಾ ಮೇಲೆ ಅನೇಕ ದೇಶಗಳು ನಿರ್ಬಂಧ ಹೇರಿರುವ ಕಾರಣ ಆ ದೇಶಕ್ಕೆ ಸಮಸ್ಯೆಯಾಗಿದೆ.ಹೀಗಾಗಿ ಭಾರತ ಈ ಕ್ರಮಕ್ಕೆ ಮುಂದಾಗಿದೆ.
ಔಷಧ ಉತ್ಪನ್ನಗಳು, ಪ್ಲಾಸ್ಟಿಕ್‌ಗಳು, ಸಾವಯವ ಮತ್ತು ರಾಸಾಯನಿಕಗಳು, ಗೃಹ ಉತ್ಪನ್ನಗಳು, ಅಕ್ಕಿ, ಟೀ ಮತ್ತು ಕಾಫಿಯಂತಹ ಪಾನೀಯಗಳು, ಹಾಲು ಉತ್ಪನ್ನಗಳು ಮತ್ತು ಗೋ ಉತ್ಪನ್ನಗಳು ಈ ಪಟ್ಟಿಯಲ್ಲಿವೆ.

ಈ ಸಂಬಂಧ ಭಾರತದ ವಿವಿಧ ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆಪ್ರವೇಶವನ್ನು ಸಡಿಲಗೊಳಿಸುವಂತೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಷ್ಯಾ ಜೊತೆ ಖಾಸಗಿಯಾಗಿ ಮಾತುಕತೆ ನಡೆಸಿದೆ. ರಷ್ಯಾದ ಸರಕುಗಳ ದೊಡ್ಡ ಆಮದುದಾರನಾಗಿರುವ ಭಾರತದ ಜತೆಗಿನ ವ್ಯಾಪಾರದಲ್ಲಿ ಸಮತೋಲನ ಸಾಧಿಸಲು ರುಪಾಯಿ ಹಾಗೂ ರೂಬೆಲ್ ಕರೆನ್ಸಿಗಳಲ್ಲಿ ವ್ಯಾಪಾರ ಚಟುವಟಿಕೆ ನಡೆಸಲು ಎರಡೂ ದೇಶಗಳು ಜತೆಗೂಡಿ ಕೆಲಸ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿವೆ.

ಅಮೆರಿಕ ಮತ್ತಿತರ ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ನಿರ್ಬಂಧ ವಿಧಿಸಿದ ಬಳಿಕ ವಿವಿಧ ದೇಶಗಳಿಂದ ರಷ್ಯಾಗೆ ಪೂರೈಕೆಯಾಗುತ್ತಿದ್ದ ಸರಕುಗಳಿಗೆ ತಡೆ ಬಿದ್ದಿದೆ. ಈ ಸರಕುಗಳನ್ನು ರಫ್ತು ಮಾಡಲು ಭಾರತ ಆಸಕ್ತಿ ತೋರಿಸಿದೆ.

ಅಂತಾರಾಷ್ಟ್ರೀಯ ಒತ್ತಡದ ನಡುವೆಯೂ ರಷ್ಯಾದಿಂದ ಭಾರೀ ರಿಯಾಯಿತಿ ದರದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತವನ್ನು ಅನೇಕ ದೇಶಗಳು ಟೀಕಿಸಿವೆ.

ಪ್ರಧಾನಿ ಮೋದಿ ಅವರೊಂದಿಗೆ ಸಭೆ ನಡೆಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ‘ರಷ್ಯಾದಿಂದ ಹೆಚ್ಚಿನ ತೈಲ ಖರೀದಿ ಭಾರತದ ಹಿತಾಸಕ್ತಿಗೆ ಒಳ್ಳೆಯದಲ್ಲ. ಭಾರತ ಹೆಚ್ಚಿನ ತೈಲ ಅಗತ್ಯವನ್ನು ಪೂರೈಸಲು ಅಮೆರಿಕ ಸಿದ್ಧ ಎಂದಿದ್ದಾರೆ.

ಸದ್ಯ ಭಾರತ ಅಮೆರಿಕಕ್ಕೆ 68 ಬಿಲಿಯನ್‌ ಡಾಲರ್‌ಗೂ ಹೆಚ್ಚಿನ ಮೊತ್ತದ ವಸ್ತುಗಳನ್ನು ರಫ್ತು ಮಾಡುತ್ತದೆ. ರಷ್ಯಾಗೆ 300 ಡಾಲರ್‌ ಮೌಲ್ಯದ ಸರಕುಗಳನ್ನು ಆಮದು ಮಾಡುತ್ತಿದೆ.

ಪ್ರೌಢಶಾಲಾ ಹಂತದಿಂದ ಉದ್ಯಮಶೀಲತೆ ಮತ್ತು ವೃತ್ತಿ ಮಾರ್ಗದರ್ಶನ ಪಠ್ಯಕ್ರಮ

0

ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದ ಪಿಯುಸಿವರೆಗೆ ಉದ್ಯಮಶೀಲತೆಯ ಬೆಳವಣಿಗೆಯನ್ನು ತಿಳಿಸುವ ಪಠ್ಯಕ್ರಮವನ್ನು ಹಾಗೂ 8ನೇ ತರಗತಿಯಿಂದ ಪದವಿಯವರೆಗೂ ವೃತ್ತಿ ಮಾರ್ಗದರ್ಶನವನ್ನು ಕಡ್ಡಾಯಗೊಳಿಸಬೇಕು ಎಂದು ಕೌಶಲ್ಯ, ಉದ್ಯಮಶೀಲತೆ ಮತ್ತು ನವೋದ್ಯಮ ಕಾರ್ಯಪಡೆಯು ಶಿಫಾರಸು ಮಾಡಿದೆ.

ವಿಧಾನಸೌಧದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಕಾರ್ಯಪಡೆ ಅಧ್ಯಕ್ಷರೂ ಆದ ಉದ್ಯಮಶೀಲತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಅವರು ಕೊಟ್ಟ ವರದಿಯನ್ನು ಸ್ವೀಕರಿಸಿದ ನಂತರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮಾತನಾಡಿದರು.

ಮುಂದಿನ 10 ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದು ಸರಕಾರದ ಗುರಿಯಾಗಿದೆ. ಕೃಷಿ ಸೇರಿದಂತೆ ‌ಎಲ್ಲ ವಲಯಗಳಲ್ಲಿ ಗರಿಷ್ಠ ಉದ್ಯೋಗಾವಕಾಶದ ಸಾಧ್ಯತೆ ಇದೆ. ಇದನ್ನು ನನಸಾಗಿಸಲು ಪ್ರಮುಖ ಇಲಾಖೆಗಳನ್ನೆಲ್ಲ ಸೇರಿಸಿಕೊಂಡು ಕಾರ್ಯ ಪ್ರವೃತ್ತವಾಗಲಿದ್ದೇವೆ ಎಂದು ಅವರು ವಿವರಿಸಿದ್ದಾರೆ.

ವಿದ್ಯಾರ್ಥಿಗಳ ಉಜ್ವಲ ಭವಿಷ್ಯ, ನಿರುದ್ಯೋಗ ನಿವಾರಣೆ ಮತ್ತು ಗುಣಮಟ್ಟದ ಶಿಕ್ಷಣ ಇವು ಸಾಧ್ಯವಾಗಬೇಕೆಂದರೆ ಕಲಿಕೆಯ ಹಂತದಿಂದಲೇ ಕೌಶಲ್ಯವನ್ನು ಕಲಿಸುವುದರ ಜೊತೆಗೆ ಉದ್ಯಮಶೀಲ ಮನೋಭಾವವನ್ನು ಬೆಳೆಸಬೇಕಾಗಿದೆ. ಆದ್ದರಿಂದ, ಕಾರ್ಯಪಡೆಯ ಶಿಫಾರಸಿನಂತೆ ಜಿಲ್ಲಾ ಮಟ್ಟದಲ್ಲಿ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಉದ್ಯಮಶೀಲತಾ ವಿಕಸನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಆಧುನಿಕ ಕಾಲಕ್ಕೆ ತಕ್ಕಂತೆ ಎಲ್ಲಾ ಜಿಲ್ಲೆಗಳಲ್ಲೂ ವಿಕಸನ ಅಥವಾ ಪರಿಪೋಷಣಾ ಕೇಂದ್ರಗಳ ಜಾಲವನ್ನು ಅಸ್ತಿತ್ವಕ್ಕೆ ತರಬೇಕು. ಇದನ್ನು ಬಲಪಡಿಸಲು ಇಸ್ರೇಲಿನ ತಂತ್ರಜ್ಞಾನ ವರ್ಗಾವಣೆ ಕೇಂದ್ರಗಳ ಮಾದರಿಯಲ್ಲಿ ಕರ್ನಾಟಕ ಸಂಶೋಧನೆ ಮತ್ತು ನಾವೀನ್ಯತೆ ಪ್ರಾಧಿಕಾರವನ್ನು ಸ್ಥಾಪಿಸಿ, ಅದನ್ನು ನೋಡಲ್ ಏಜೆನ್ಸಿಯಾಗಿ ಮಾಡಲಿದ್ದೇವೆ ಎಂದು ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ.

ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಕೌಶಲ್ಯಗಳು ಯಾವ ಮಟ್ಟದಲ್ಲಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಮಾದರಿ ಸಮೀಕ್ಷೆ ಕೈಗೊಳ್ಳಬೇಕು. ಜೊತೆಗೆ, ಜಿಲ್ಲಾ ಮಟ್ಟದಲ್ಲಿ ಉದ್ಯಮ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಇದರಲ್ಲಿ ಹೇಳಲಾಗಿದೆ. ಹೊಸ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಏಂಜಲ್ ಹೂಡಿಕೆದಾರರು, ಬ್ಯಾಂಕು ಮತ್ತು ಮತ್ತಿತ್ತರು ಸೂಕ್ತ ಹಣಕಾಸು ಸಂಸ್ಥೆಗಳಿಂದ ಸಾಫ್ಟ್ ಲೋನ್ ಒದಗಿಸಲು ವ್ಯವಸ್ಥೆ ಮಾಡುವ ಅಗತ್ಯವಿದೆ. ಇವೆಲ್ಲವುಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಶೀಘ್ರದಲ್ಲೇ ಮುಂದಿನ ಕಾರ್ಯಕ್ರಮಗಳನ್ನು ರೂಪಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಡಿಜಿಟಲ್ ಆರ್ಥಿಕತೆಯಲ್ಲಿ ಕೌಶಲ್ಯಪೂರ್ಣ ಯುವಜನರಿಗೆ ಅಪಾರ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಪದವಿ ಶಿಕ್ಷಣ ಮುಗಿಸಿರುವ ವಿದ್ಯಾರ್ಥಿಗಳಿಗೆ ಸೂಕ್ತ ಕೌಶಲ್ಯ ಕೋರ್ಸುಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಮಿಗಿಲಾಗಿ, ಯುವಜನರನ್ನು ಭವಿಷ್ಯದ ಕೌಶಲ್ಯಗಳಲ್ಲಿ ಸನ್ನದ್ಧಗೊಳಿಸಲು ಇನ್ಫೋಸಿಸ್, ಮೈಕ್ರೋಸಾಫ್ಟ್, ಐಬಿಎಂ ಮುಂತಾದ ಕಂಪನಿಗಳಲ್ಲಿ ಇಂಟರ್ನ್ ಶಿಪ್ ಮಾಡಲು ಅವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಈ ಕಂಪನಿಗಳೊಂದಿಗೆ ಸಹಯೋಗ ಹೊಂದಲಿದೆ ಎಂದು ಅಶ್ವತ್ಥನಾರಾಯಣ ವಿವರಿಸಿದ್ದಾರೆ.

ರಾಜ್ಯದಲ್ಲಿ 950 ಪಿಎಸ್ಐ ಹುದ್ದೆಗಳ ಭರ್ತಿಗೆ ನೇಮಕ ಪ್ರಕ್ರಿಯೆ- ಜ್ಞಾನೇಂದ್ರ

0

ರಾಜ್ಯದಲ್ಲಿ ಶೀಘ್ರವೇ ಖಾಲಿಯಿರುವ 950 ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ಭರ್ತಿಗೆ ನೇಮಕ ಪ್ರಕ್ರಿಯೆ ನಡೆಸಲಾಗುವುದು ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ಬೆಳಗಾವಿಯ ಮೆಚ್ಚೆಯ ಕೆಎಸ್‌ಆರ್ ಪಿ 2 ನೇ ಪಡೆಯ ತರಬೇತಿ ಶಾಲೆ ಕವಾಯತು ಮೈದಾನದಲ್ಲಿ ಕೆಎಸ್‌ಆರ್ ಪಿ ಪೊಲೀಸ್ ಕಾನ್ಸ್ ಟೇಬಲ್ ಪ್ರಶಿಕ್ಷಣಾರ್ಥಿಗಳ 4 ನೇ ತಂಡದ ನಿರ್ಗಮನದ ಪಥಸಂಚಲನದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ 950 ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ಭರ್ತಿಗೆ ನೇಮಕ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಪೊಲೀಸರಿಗಾಗಿ 20 ಸಾವಿರ ವಸತಿ ಗೃಹಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಈಗಾಗಲೇ 10 ಸಾವಿರ ವಸತಿ ಗೃಹಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.