Saturday, February 28, 2026
Saturday, February 28, 2026
Home Blog Page 1600

ರಾಜಕೀಯ ಪಕ್ಷ ಕಟ್ಟಿ ಅದೃಷ್ಟ ಪರೀಕ್ಷಿಸಲಿರುವ ಚಾಣಕ್ಯ: ಕಿಶೋರ್

0

ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಇಂದು ಸೋಮವಾರ ರಾಜಕೀಯಕ್ಕೆ ಧುಮುಕಲಿದ್ದಾರೆ ಎಂದು ಸುಳಿವು ಕೊಟ್ಟಿದ್ದಾರೆ. ಪ್ರಶಾಂತ್ ಕಿಶೋರ್ ಅವರು ತಮ್ಮ ರಾಜ್ಯ ಬಿಹಾರದಿಂದ ಪ್ರಾರಂಭಿಸಿ ಜನತಾ ನ್ಯಾಯಾಲಯಕ್ಕೆ ಹೋಗಲು ಸಿದ್ಧ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸೇರುವಂತೆ ಎಐಸಿಸಿ ಆಹ್ವಾನ ನೀಡಿತ್ತು. ಆ ಆಹ್ವಾನವನ್ನು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ತಿರಸ್ಕರಿಸಿದ್ದರು.
ನಂತರ ಅವರು ಮುಂದೆ ಏನು ಮಾಡಲಿದ್ದಾರೆ ಎಂಬ ತೀವ್ರ ಕುತೂಹಲ ಕೂಡ ಎಲ್ಲರಲ್ಲೂ ಮೂಡಿತ್ತು. ಆದರೆ ಈಗ ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.

ಪ್ರಶಾಂತ್ ಕಿಶೋರ್ ಅವರು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿ, ಸಕ್ರೀಯ ರಾಜಕಾರಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಷಯದ ಬಗ್ಗೆ ಟ್ವೀಟ್ ಮಾಡಿದ ಪ್ರಶಾಂತ್ ಕಿಶೋರ್ ಅವರು, ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣ ಭಾಗಿದಾರನಾಗಲು, ಹಾಗೂ ಜನಪರ ನೀತಿಯನ್ನು ರೂಪಿಸಲು ಸಹಾಯ ಮಾಡುವ ನನ್ನ ಅನ್ವೇಷಣೆಯು 10 ವರ್ಷಗಳ ರೋಲರ್ಕೋಸ್ಟರ್ ಸವಾರಿಗೆ ಕಾರಣವಾಯಿತು. ನಾನು ಪುಟವನ್ನು ತಿರುಗಿಸುತ್ತಿದ್ದಂತೆ, ಸಮಸ್ಯೆಗಳನ್ನು ಮತ್ತು ಜನರ ಉತ್ತಮ ಆಡಳಿತದ ಹಾದಿಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನಿಜವಾದ ಗುರುಗಳು, ಜನರ ಬಳಿಗೆ ಹೋಗುವ ಸಮಯ ಬಂದಿದೆ ಎಂದು ಪ್ರಶಾಂತ್ ಕಿಶೋರ್ ಅವರು ಹೇಳಿದ್ದಾರೆ.
ಈ ಮೂಲಕ ತಾವು ಹೊಸ ರಾಜಕೀಯ ಪಕ್ಷ ಸ್ಥಾಪನೆಯ ಸುಳಿವು ಸಹಾ ನೀಡಿದ್ದಾರೆ.

ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿತ: ಗ್ರಾಹಕ ಸ್ನೇಹೀ ಕ್ರಮ

0

ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಅಡುಗೆ ಎಣ್ಣೆ ಆಮದಿನ ಮೇಲಿನ ಸೆಸ್ ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಭಾರತವು ತನ್ನ ಅರ್ಧದಷ್ಟು ತೈಲವನ್ನು ಇಂಡೋನೇಷ್ಯಾದಿಂದ ಆಮದು ಮಾಡಿಕೊಂಡಿತು.
ಇಂಡೋನೇಷ್ಯಾವು ಇದ್ದಕ್ಕಿದ್ದಂತೆ ತಾಳೆ ಎಣ್ಣೆ ಹಾಗೂ ಕಚ್ಚಾ ತಾಳೆ ಎಣ್ಣೆಯ ರಫ್ತನ್ನು ನಿಷೇಧಿಸಿದೆ. ಇದು ಭಾರತದಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಬೇಡಿಕೆಯಲ್ಲಿ ಹೆಚ್ಚಳ ಹಾಗೂ ಪೂರೈಕೆಯಲ್ಲಿನ ಕುಸಿತದಿಂದಾಗಿ, ಬೆಲೆ ವೇಗವಾಗಿ ಏರುತ್ತಿದೆ.ಈ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯವು ಖಾದ್ಯ ತೈಲ ಆಮದಿನ ಮೇಲಿನ ಕೃಷಿ ಸೆಸ್ ಅನ್ನು ಶೇ.5 ರಷ್ಟು ಕಡಿಮೆ ಮಾಡಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.

ಅಂತರಾಷ್ಟ್ರೀಯ ತೈಲ ಬೆಲೆಗಳು ಏರುತ್ತಿರುವುದು ಗ್ರಾಹಕರು ಮತ್ತು ದೇಶದ ಆಡಳಿತಗಾರರನ್ನ ಘಾಸಿಗೊಳಿಸಿದೆ ಎಂದು ಎಸ್ಇಎ ಹೇಳಿದೆ.

ಇನ್ನು ಈ ಹೊರೆಯನ್ನ ಕಡಿಮೆ ಮಾಡಲು ಸರ್ಕಾರವು ಸಂಸ್ಕರಿಸಿದ, ಕಚ್ಚಾ ಅಡುಗೆ ಎಣ್ಣೆಗಳ ಮೇಲಿನ ಆಮದು ಸುಂಕವನ್ನ ಕಡಿತಗೊಳಿಸಲು ಮುಂದಾಗಿದೆ. ಈ ಮೂಲಕ ಅಡುಗೆ ಎಣ್ಣೆ ಬೆಲೆಯಲ್ಲಿ ಶೀಘ್ರವೇ ಇಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಮತ್ತೆ ಮಳೆರಾಯ ಸುರಿಯಲಿದ್ದಾನೆ- ಡಾ. ಶ್ರೀನಿವಾಸ್

0

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮದಿಂದಾಗಿ ನಿನ್ನೆ ಭಾನುವಾರ ರಾಜ್ಯದ ಹಲವು ಭಾಗದಲ್ಲಿ ಮಳೆಯಾಗಿದೆ. ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೈಸೂರಿನಲ್ಲಿ 50 ಮಿಮೀ, ಚಾಮರಾಜನಗರದಲ್ಲಿ 27 ಮಿಮೀ ಮಳೆಯಾಗಿದೆ.

ಮೇ 5ರ ಬಳಿಕ ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವಡೆ ಸಾಧಾರಣ ಮಳೆಯಾದರೆ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ,ಶಿವಮೊಗ್ಗ ಚಿಕ್ಕಮಗಳೂರು, ಕೊಡಗು, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ತಿಳಿಸಿದೆ.

ಹವಾಮಾನ ತಜ್ಞ ಡಾ.ಶ್ರೀನಿವಾಸ ರೆಡ್ಡಿ ಅವರು ಮಾತನಾಡಿ, ಮೇಲ್ಮೈ ಸುಳಿಗಾಳಿ, ವಿದರ್ಭದಿಂದ ಕರ್ನಾಟಕದವರೆಗೆ ಮೋಡ ಕವಿದ ವಾತಾವರಣ ಮತ್ತು ತಾಪಮಾನ ಹೆಚ್ಚಳದಿಂದ ರಾಜ್ಯದಲ್ಲಿ ಮಳೆ ಬೀಳುತ್ತಿದೆ. ಮುಂದಿನ 72 ಗಂಟೆ ಸಾಧಾರಣ ಮಳೆಯಾದರೆ ಮೇ 5ರಿಂದ ಕರಾವಳಿ ಮತ್ತು ಉತ್ತರ ಒಳನಾಡಿಗಿಂತ ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆ ಆಗಲಿದೆ. ಮಳೆ ಬಿದ್ದರೆ ತಾಪಮಾನ ತುಸು ಕಡಿಮೆಯಾಗುತ್ತದೆ. ಆದರೆ, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಉಷ್ಣಾಂಶ ಯಥಾಸ್ಥಿತಿಯಲ್ಲಿ ಇರಲಿದೆ ಎಂದು ಹೇಳಿದ್ದಾರೆ.

ಅಮರ ನಟ ಡಾ.ಪುನೀತ್ ಗೆ ಚಿತ್ರದುರ್ಗದಲ್ಲಿ ಬಸವಶ್ರೀ ಗೌರವ ಪ್ರದಾನ

0

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದವರು. ಸಾವಿನ ನಂತರದಲ್ಲಿ ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಅದರಲ್ಲಿ ಮರಣೋತ್ತರವಾಗಿ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ನಾಳೆ ಶ್ರೀಮಠದ ಅನುಭವ ಮಂಟಪದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.

ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಡಾಕ್ಟರ್ ಶ್ರೀ ಶಿವಮೂರ್ತಿ ಮುರುಘಾ ಶರಣರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಬಿ.ಸಿ. ಪಾಟೀಲ್, ಶಾಸಕ ತಿಪ್ಪಾರೆಡ್ಡಿ, ನಟರಾದ ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಉಪಸ್ಥಿತರಿರಲಿದ್ದಾರೆ.

ಬಸವಶ್ರೀ ಪುರಸ್ಕೃತರ ಕುರಿತು ಹಿರಿಯ ಸಾಹಿತಿ, ನಾಟಕಕಾರ ಡಾ. ರಾಜಪ್ಪ ದಳವಾಯಿ ಮಾತನಾಡಲಿದ್ದಾರೆ. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಅನಿವಾಸಿ ಭಾರತೀಯ ಉದ್ಯಮಿ ಭರತ್ ಕುಮಾರ್, ಚಿತ್ರೋದ್ಯಮಿ ಚಿನ್ನೇಗೌಡ ಭಾಗವಹಿಸಲಿದ್ದಾರೆ.

ಸಾರಿಗೆ ಸಂಸ್ಥೆಯ ನೌಕರರ ಪ್ರಕರಣಗಳ ಮನ್ನಾ ಸರ್ಕಾರದ ಸ್ತುತ್ಯರ್ಹ ಕ್ರಮ

0

ಕೆ.ಎಸ್.ಆರ್.ಟಿ.ಸಿ. ಇತಿಹಾಸದಲ್ಲಿಯೇ ಮೊದಲ ಬಾರಿಗೆ 7,200 ನೌಕರರ ಶಿಸ್ತು ಪ್ರಕರಣಗಳನ್ನು ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ಮನ್ನಾ‌ ಮಾಡಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಅವರು ಹೇಳಿದ್ದಾರೆ.

ಕೆ.ಎಸ್.ಆರ್.ಟಿ.ಸಿ. ನಿಗಮದ‌ ವತಿಯಿಂದ ಕಾರ್ಮಿಕರ ದಿನಾಚರಣೆ ಆಚರಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 10 ತಿಂಗಳುಗಳ ಅವಧಿಗಿಂತ ಕಡಿಮೆ ಅವಧಿಯ ಒಳಗಿನ ಗೈರುಹಾಜರಿಯನ್ನು ಮನ್ನಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವ ನೌಕರರ ವಿಚಾರಣೆಯನ್ನು ರದ್ದುಗೊಳಿಸಿ, ಬಸ್ಸನ್ನು ನೀಡಿ ಚಾಲನೆಗೆ ಅನುವು ಮಾಡಿಕೊಡಲಾಗಿದೆ. ಅದರಂತೆ ಗೈರು ಹಾಜರಾಗಿದ್ದ 110 ನೌಕರರು ಕಳೆದ ಮೂರು ದಿನಗಳಿಂದ ಕರ್ತವ್ಯ ಹಾಜರಾಗಿದ್ದಾರೆ ಎಂದು ತಿಳಿಸಿದ್ದಾರೆ.

ನಿಗಮದ ಎಲ್ಲಾ ಸಿಬ್ಬಂದಿಗಳು 35,000, ಅದರಲ್ಲಿ ಒಟ್ಟು 8414 ಶಿಸ್ತು ಪ್ರಕರಣಗಳಿದೆ. ಕಳೆದ‌ 3 ದಿನಗಳಿಂದ 7200 ಶಿಸ್ತು ಪ್ರಕರಣಗಳನ್ನು ಅತೀ ಕಡಿಮೆ ಮೊತ್ತ ದಂಡ ಅಂದರೆ, ರೂ. 100, ರೂ. 200, ಗರಿಷ್ಠ ರೂ. 500 ಅನ್ನು ವಿಧಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಶಿಸ್ತು ಪ್ರಕರಣಗಳನ್ನು ಮುಕ್ತಾಯಗೊಂಡಿರುವ ನೌಕರರಿಗೆ ಆದೇಶ‌ದ‌ ಪ್ರತಿಯನ್ನು ಸಿಹಿಯೊಂದಿಗೆ ವಿತರಿಸಿ ಶುಭ ಕೋರಿದರು.

ಜರ್ಮನಿ-ಡೆನ್ಮಾರ್ಕ್-ಫ್ರಾನ್ಸ್ ಗೆ ಪ್ರಧಾನಿ ಮೋದಿ ಮಹತ್ವದ ಪ್ರವಾಸ

0

ಜರ್ಮನಿ, ಡೆನ್ಮಾರ್ಕ್ ಹಾಗೂ ಫ್ರಾನ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ 3 ದಿನಗಳ ಭೇಟಿಯ ಸಂದರ್ಭದಲ್ಲಿ ಇಂಧನ ಭದ್ರತೆಯ ಪ್ರಮುಖ ವಿಷಯಗಳ ಚರ್ಚೆ ನಡೆಯಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಅವರು ಮಾಹಿತಿ ನೀಡಿದ್ದಾರೆ.

ಪ್ರಧಾನಿ ಮೋದಿ ನಾಳೆಯಿಂದ 3 ದೇಶಗಳ ಪ್ರವಾಸವನ್ನು ಆರಂಭಿಸಲಿದ್ದಾರೆ. ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರ ಆಹ್ವಾನದ ಮೇರೆಗೆ ಮೇ 2 ರಂದು ಬರ್ಲಿನ್‌ಗೆ ಭೇಟಿ ನೀಡಲಿದ್ದಾರೆ. ನಂತರ ಡ್ಯಾನಿಶ್ ಕೌಂಟರ್‌ಪಾರ್ಟ್ ಮೆಟ್ಟೆ ಫ್ರೆಡೆರಿಕ್ಸೆನ್ ಅವರ ಆಹ್ವಾನದ ಮೇರೆಗೆ ಮೇ 3-4 ರಂದು ಕೋಪನ್‌ ಹೇಗನ್‌ಗೆ ಪ್ರಯಾಣಿಸಲಿದ್ದಾರೆ. ಮತ್ತು 2ನೇ ಭಾರತ,ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆ.

ಪ್ರಸ್ತುತ ಭೌಗೋಳಿಕ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂಧನ ಭದ್ರತೆಯು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಮತ್ತು ಯುರೋಪಿಯನ್ ನಾಯಕರೊಂದಿಗಿನ ಪ್ರಧಾನಿ ಮೋದಿಯವರ ಮಾತುಕತೆಯಲ್ಲಿ ಈ ವಿಷಯವು ಕಂಡುಬರುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದಾರೆ.

ಅಂಕಪಟ್ಟಿಯಲ್ಲಿ ಖಾತೆ ತೆರೆದ ಮುಂಬೈ

ಐಪಿಎಲ್ 15ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೊನೆಗೂ ಗೆಲುವಿನ ಮುಖ ನೋಡಿತು. ಸತತ ಎಂಟು ಸೋಲುಗಳ ನಂಟು ತೊರೆದ ರೋಹಿತ್ ಶರ್ಮಾ ಬಳಗ, ನಿನ್ನೆ ಶನಿವಾರದ ಡಬಲ್ ಹೆಡರ್ ನ ಎರಡನೇ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ 5 ವಿಕೆಟ್ ಗಳ ಜಯ ಸಾಧಿಸಿ 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.

ಈಗಾಗಲೇ ಪ್ಲೇಆಫ್ ಅವಕಾಶ ಕಳೆದುಕೊಂಡಿರುವ ಮುಂಬೈ ಇಂಡಿಯನ್ಸ್ ಗೆ ಜಯದ ನೆಮ್ಮದಿ ಲಭಿಸಿದ್ದು ಬಿಟ್ಟರೆ ಹೆಚ್ಚಿನ ಲಾಭವಿಲ್ಲ.

ಮುಂಬೈನಲ್ಲಿ, ಡಿವೈ ಪಾಟೀಲ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ, ಜೋಸ್ ಬಟ್ಲರ್ ಅವರ ಅರ್ಧಶತಕದ ನೆರವಿನಿಂದ 20 ಓವರ್ಗಳ ಮುಕ್ತಾಯಕ್ಕೆ 6 ವಿಕೆಟ್ ಕಳೆದುಕೊಂಡು 158 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಮುಂಬೈ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು 161 ರನ್ ಬಾರಿಸಿ ಗೆಲುವು ಸಾಧಿಸಿತು. ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕ ಮತ್ತು ತಿಲಕ್ ವರ್ಮ ಸಮಯೋಚಿತ ಬ್ಯಾಟಿಂಗ್ ಮುಂಬೈಗೆ ಗೆಲುವು ತಂದುಕೊಟ್ಟಿತು. ರೋಹಿತ್ ಶರ್ಮಾ ಮತ್ತೆ ಬ್ಯಾಟಿಂಗ್ ವೈಫಲ್ಯ ಕಂಡರು.

ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮುಂಬಯಿ ಬಿಗು ಬೌಲಿಂಗ್ ದಾಳಿ ಸಂಘಟಿಸಿತು. ಆದುರಿಂದ ಪವರ್ ಪ್ಲೇ ನಲ್ಲಿ ಹೆಚ್ಚು ರನ್ ಗಳಿಸಲಿಲ್ಲ. ದೇವದತ್ ಪಡಿಕಲ್ 15ರಂದು ಮೂಲಕ ಆರ್ ಆರ್ ಗೆ ಆರಂಭಿಕ ಹಿನ್ನಡೆ ಉಂಟಾಯಿತು. ನಾಯಕ ಸಂಜು ಸ್ಯಾಮ್ಸ್ ನ್ ಕೂಡ 16 ರನ್ಗಳಿಗೆ ಸೀಮಿತಗೊಂಡ ರೆ ನ್ಯೂಜಿಲೆಂಡ್ ಆಲ್-ರೌಂಡರ್ ಡ್ಯಾರಿಲ್ ಮಿಚೆಲ್ ಪ್ರಯಾಸದ 17ರನ್ ಬಾರಿಸಿದರು. ಹಿಂದಿನ ಪಂದ್ಯದಲ್ಲಿ ಆರ್ ಆರ್ ಪರ ಮಿಂಚಿದ್ದ ರಿಯಾನ್ ಪರಾಗ್ 3 ರನ್ಗಳಿಗೆ ಔಟಾಗಿ ನಿರಾಸೆ ಎದುರಿಸಿದರು. ಆದರೆ ಮತ್ತೊಂದು ಬದಿಯಲ್ಲಿ ನೆಲಕಚ್ಚಿ ಆಡಿದ ಬಟ್ಲರ್ ನಿಧಾನಗತಿಯಲ್ಲಿ ಗಳಿಸಿದರು. ಇದರ ಜೊತೆಗೆ ಹೃತಿಕ್ ಶೋಕಿಂಗ್ ಎಸೆದ ಇನಿಂಗ್ಸ್ನ 16ನೇ ಓವರ್ನಲ್ಲಿ ಸತತ ನಾಲ್ಕು ಸಿಕ್ಸರ್ ಬಾರಿಸಿ ಅರ್ಧಶತಕ ಪೂರೈಸಿದರು. ಆದರೆ ಓವರ್ ನ ಕೊನೆ ಎಸೆತಕ್ಕೆ ಔಟಾಗಿ ನಿರಾಸೆ ಎದುರಿಸಿದರು. ಕೊನೆಯಲ್ಲಿ ರವಿಚಂದ್ರನ್ ಅಶ್ವಿನ್ 9 ಎಸೆತಗಳಲ್ಲಿ 21 ರನ್ ಬಾರಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ತಂಡಕ್ಕೆ ನೆರವಾದರು.

ಸದ್ಯ ಕಲ್ಲಿದ್ದಲು ಸಮಸ್ಯೆ ಇಲ್ಲ- ಸಚಿವ ಜೋಷಿ

0

ದೇಶದಲ್ಲಿ ಕಲ್ಲಿದ್ದಲು ಸಮಸ್ಯೆಯಾಗಲ್ಲ. 10 ದಿನಗಳಿಗಾಗುವಷ್ಟು ಕಲ್ಲಿದ್ದಲು ದಾಸ್ತಾನಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ಹುಬ್ಬಳ್ಳಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, 10 ದಿನಗಳ ನಂತರ ದೇಶ ಸಂಪೂರ್ಣ ಕತ್ತಲಾಗುತ್ತದೆ ಎನ್ನುವ ರೀತಿಯಲ್ಲಿ ಕೆಲವರು ಮಾತನಾಡುತ್ತಿದ್ದಾರೆ. ಅದು ಸರಿಯಲ್ಲ. ಕೇಂದ್ರ ಸರ್ಕಾರ ನಿರಂತರವಾಗಿ ಪ್ರತಿದಿನ 1.07 ಮಿಲಿಯನ್‌ ಟನ್‌ ಕಲ್ಲಿದ್ದಲು ಪೂರೈಕೆ ಮಾಡುತ್ತಿದೆ.

ಬೇಡಿಕೆ ಒಮ್ಮೇಲೆ ಹೆಚ್ಚಾಗಿದ್ದರಿಂದ ಸಾಗಾಟ ಮಾಡಲು ರೈಲ್ವೆ ಇಲಾಖೆ ಸಹ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಖಾಲಿಯಾದಷ್ಟುಕಲ್ಲಿದ್ದಲನ್ನು ನಿರಂತರವಾಗಿ ತುಂಬಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಕಲ್ಲಿದ್ದಲಿನ ಸಮಸ್ಯೆಯಾಗದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಯಾರೂ ಗಾಬರಿ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ದೇಶದ ಥರ್ಮಲ್‌ ಪವರ್‌ ಪ್ಲಾಂಟ್‌ಗಳಲ್ಲಿ 21.55 ಮಿಲಿಯನ್‌ ಟನ್‌ ಕಲ್ಲಿದ್ದಲು ದಾಸ್ತಾನಿದೆ. ಕೋಲ್‌ ಕಂಪನಿಗಳಲ್ಲಿ 72.05 ಮಿಲಿಯನ್‌ ಟನ್‌ ಕಲ್ಲಿದ್ದಲು ಸಂಗ್ರಹವಿದೆ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ ಎಂದರು.
ಈ ತಿಂಗಳು ಅನಿರೀಕ್ಷಿತವಾಗಿ ಬಿಸಿಲು ಹೆಚ್ಚಿದ್ದು, ವಿದ್ಯುತ್‌ಗೆ ಅತಿ ಹೆಚ್ಚು ಬೇಡಿಕೆ ಉಂಟಾಗಿದೆ. ದೇಶದ ಕೈಗಾರಿಕೆಗಳು ಸಹ ಪುಟಿದೆದ್ದಿವೆ. ಹೀಗಾಗಿ ಒಮ್ಮೇಲೆ ವಿದ್ಯುತ್‌ಗೆ ಬೇಡಿಕೆ ಹೆಚ್ಚಿದೆ. ದೂರದೂರದ ಪವರ್‌ ಪ್ಲಾಂಟ್‌ಗಳಲ್ಲಿ ಹತ್ತು ದಿನಕ್ಕಾಗುವಷ್ಟುಕಲ್ಲಿದ್ದಲು ಸಂಗ್ರಹವಿದೆ ಎಂದು ಹೇಳಿದರು.

ಉಕ್ರೇನ್ ಬಿಕ್ಕಟ್ಟು ಪರಿಹರಿಸಬೇಕೆ?ಅದಕ್ಕೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಿ

0

ಉಕ್ರೇನ್ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ನಿಜಕ್ಕೂ ಆಸಕ್ತಿಯಿದ್ದರೆ ಮೊದಲು ಉಕ್ರೇನ್ ಗೆ ಶಸ್ತ್ರಾಸ್ತ್ರ ಪೂರೈಸುವುದನ್ನು ನಿಲ್ಲಿಸಿ ಎಂದು ರಷ್ಯಾದ ವಿದೇಶ ಸಚಿವರು ಅಮೆರಿಕ ಮತ್ತು ನೇಟೊ ದೇಶಗಳನ್ನು ಆಗ್ರಹಿಸಿದ್ದಾರೆ.

ಉಕ್ರೇನ್ ನಲ್ಲಿ ಬಿಕ್ಕಟ್ಟಿಗೆ ಪರಿಹಾರ ಹುಡುಕುವ ಆಸಕ್ತಿಯಿದ್ದರೆ ಅಮೆರಿಕ ಮತ್ತು ನೇಟೊ ದೇಶಗಳು ಉಕ್ರೇನ್ ಗೆ ಶಸ್ತ್ರಾಸ್ತ್ರ ಪೂರೈಸುವುದನ್ನು ಮೊದಲು ನಿಲ್ಲಿಸಬೇಕು ಎಂದು ಚೀನಾದ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಕ್ಸಿನ್ಹುವಾಗೆ ನೀಡಿದ ಸಂದರ್ಶನದಲ್ಲಿ ರಷ್ಯಾ ದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಹೇಳಿದ್ದಾರೆ.

ಉಕ್ರೇನ್ ನಲ್ಲಿ ನಡೆಸಲಾಗುತ್ತಿರುವ ವಿಶೇಷ ಕಾರ್ಯಾಚರಣೆ ಯೋಜಿಸಿದ ರೀತಿಯಲ್ಲಿಯೇ ಮುಂದುವರಿಯುತ್ತಿದೆ.

ತನ್ನ ವಿರುದ್ಧದ ನಿರ್ಬಂಧ ಹಾಗೂ ಉಕ್ರೇನ್ ಗೆ ಶಸ್ತ್ರಾಸ್ತ್ರ ರವಾನೆ ಉಭಯ ದೇಶಗಳ ನಡುವಿನ ಸಂಧಾನ ಮಾತುಕತೆಗೆ ತೊಡಕಾಗಿದೆ. ಸಂಧಾನ ಮಾತುಕತೆ ಮುಂದುವರಿಯಲಿದೆ. ಆದರೆ ಪ್ರಗತಿ ಸಾಧಿಸುವುದು ಕಷ್ಟವಾಗಬಹುದು ಎಂದು ಲಾವ್ರೋವ್ ಹೇಳಿದರು.

ಇದರ ನಡುವೆ ಪೋಲ್ಯಾಂಡಿನ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಯಾವುದೇ ಒಪ್ಪಂದಕ್ಕೆ ಬಾರದೆ ಸಂಧಾನ ಮಾತುಕತೆ ಅಂತ್ಯವಾಗುವ ಅಪಾಯವಿದೆ ಎಂದರು.

ಉಕ್ರೇನ್ ಗೆ ಶಸ್ತ್ರಸ್ತ್ರ ಪೂರೈಸುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯಬೇಡಿ ಎಂದು ರಷ್ಯಾ ಎಚ್ಚರಿಕೆ ನೀಡಿದೆ.

ಅಮೆರಿಕ ಹಾಗೂ ಯುರೋಪ್ನ ಹಲವು ದೇಶಗಳು ಉಕ್ರೇನ್ ಗೆಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಒದಗಿಸುತ್ತಿವೆ. ಉಕ್ರೇನ್ ಗೆ33 ಬಿಲಿಯನ್ ಡಾಲರ್ ನೆರವು ಒದಗಿಸುವ ನಿರ್ಣಯಕ್ಕೆ ಅನುಮೋದನೆ ನೀಡುವಂತೆ ಅಮೆರಿಕದ ಅಧ್ಯಕ್ಷ ಬೈಡನ್ ಸಂಸತ್ತನ್ನು ಕೋರಿದ್ದಾರೆ.

ಪಾಕ್ ನಲ್ಲಿ ಉನ್ನತ ವ್ಯಾಸಂಗ: ಭಾರತದಲ್ಲಿ ಅಮಾನ್ಯ

0

ಪಾಕಿಸ್ತಾನದಲ್ಲಿ ಉನ್ನತ ವ್ಯಾಸಂಗ ಪಡೆದರೆ ಭಾರತದಲ್ಲಿ ಮಾನ್ಯತೆ ಸಿಗುವುದಿಲ್ಲ ಎಂದು ಯುಜಿಸಿ ಇತ್ತೀಚೆಗಷ್ಟೇ ನಿಯಮ ಹೊರಡಿಸಿದ ಬೆನ್ನಲ್ಲೇ ಇದೀಗ ಭಾರತೀಯ ವೈದ್ಯಕೀಯ ಮಂಡಳಿಯೂ ಅಂತಹುದೇ ನಿಯಮ ಜಾರಿಗೊಳಿಲು ಮುಂದಾಗಿದೆ.

ಪಾಕಿಸ್ಥಾನದಲ್ಲಿ ಪಡೆದಿರುವ ಎಂಬಿಬಿಎಸ್‌ ಅಥವಾ ದಂತ ವೈದ್ಯ ಪದವಿಗಳಿಗೆ ಭಾರತದಲ್ಲಿ ಮಾನ್ಯತೆ ಸಿಗುವುದಿಲ್ಲ. ಅಲ್ಲದೆ, ಪಾಕ್‌ನ ವೈದ್ಯ ಶಿಕ್ಷಣ ಸಂಸ್ಥೆಗಳಿಂದ ವೈದ್ಯ ಪದವೀಧರರಾಗುವ ಭಾರತೀಯರಿಗೆ ಅಥವಾ ಅನಿವಾಸಿ ಭಾರತೀಯರಿಗೆ ಭಾರತದ ಯಾವುದೇ ಕಡೆಗಳಲ್ಲಿಯೂ ವೈದ್ಯ ವೃತ್ತಿ ನಿರ್ವಹಿಸಲು ಅವಕಾಶ ನೀಡುವುದಿಲ್ಲ ಎಂದು ಭಾರತೀಯ ವೈದ್ಯ ಕೀಯ ಮಂಡಳಿ ಅಧಿಸೂಚನೆ ಹೊರಡಿಸಿದೆ.

ಪಾಕ್‌ನಲ್ಲಿ ಪಡೆದ ಎಂಬಿಬಿಎಸ್ ಅಥವಾ ದಂತ ವೈದ್ಯ ಪದವಿಗೆ ಭಾರತದಲ್ಲಿ ಮಾನ್ಯತೆ ಇಲ್ಲ ಎಂದು ಮಂಡಳಿ ಹೇಳಿದೆ.

ಆದರೆ ಭಾರತೀಯ ವಿದೇಶಾಂಗ ಇಲಾಖೆಯ ಒಪ್ಪಿಗೆ ಮೇರೆಗೆ 2018ರ ಡಿಸೆಂಬರ್‌ಗೂ ಮೊದಲು ಹಾಗೂ ನಂತರ ಪಾಕಿಸ್ಥಾನದಲ್ಲಿ ವೈದ್ಯ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಗೆ ಹೊಸ ಅಧಿಸೂಚನೆಯಿಂದ ವಿನಾಯಿತಿ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಒಂದು ವೇಳೆ ಪಾಕ್‌ನಲ್ಲಿ ವೈದ್ಯ ಪದವಿ ಪಡೆದು ಬಳಿಕ ಭಾರತ ಸರ್ಕಾರದ ಮಾನ್ಯತೆಯೊಂದಿಗೆ ಭಾರತಕ್ಕೆ ವಲಸೆ ಬಂದಿರವ ವ್ಯಕ್ತಿಗಳಿಗೆ ಕೂಡಾ ನಿಯಮದಿಂದ ವಿನಾಯಿತಿ ಇದೆ ಎಂದು ಮಂಡಳಿ ತಿಳಿಸಿದೆ.

ಪಾಕ್‌ನಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳ ಯಾವುದೇ ಪದವಿ, ಇಂಜಿನಿಯರಿಂಗ್ ಪದವಿಗೆ ಭಾರತದಲ್ಲಿ ಮಾನ್ಯತೆ ಕಲ್ಪಿಸುವುದಿಲ್ಲ ಹಾಗೂ ಇಲ್ಲಿ ಅಂತಹವರಿಗೆ ಉದ್ಯೋಗ ನಿರ್ವಹಿಸಲು ಅವಕಾಶವಿಲ್ಲ ಎಂಬುದಾಗಿ ಇತ್ತೀಚೆಗಷ್ಟೇ ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ (ಯುಜಿಸಿ) ಹಾಗೂ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಧಿಸೂಚನೆ ಹೊರಡಿಸಿದ್ದವು.