ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮದಿಂದಾಗಿ ನಿನ್ನೆ ಭಾನುವಾರ ರಾಜ್ಯದ ಹಲವು ಭಾಗದಲ್ಲಿ ಮಳೆಯಾಗಿದೆ. ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೈಸೂರಿನಲ್ಲಿ 50 ಮಿಮೀ, ಚಾಮರಾಜನಗರದಲ್ಲಿ 27 ಮಿಮೀ ಮಳೆಯಾಗಿದೆ.
ಮೇ 5ರ ಬಳಿಕ ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವಡೆ ಸಾಧಾರಣ ಮಳೆಯಾದರೆ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ,ಶಿವಮೊಗ್ಗ ಚಿಕ್ಕಮಗಳೂರು, ಕೊಡಗು, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ತಿಳಿಸಿದೆ.
ಹವಾಮಾನ ತಜ್ಞ ಡಾ.ಶ್ರೀನಿವಾಸ ರೆಡ್ಡಿ ಅವರು ಮಾತನಾಡಿ, ಮೇಲ್ಮೈ ಸುಳಿಗಾಳಿ, ವಿದರ್ಭದಿಂದ ಕರ್ನಾಟಕದವರೆಗೆ ಮೋಡ ಕವಿದ ವಾತಾವರಣ ಮತ್ತು ತಾಪಮಾನ ಹೆಚ್ಚಳದಿಂದ ರಾಜ್ಯದಲ್ಲಿ ಮಳೆ ಬೀಳುತ್ತಿದೆ. ಮುಂದಿನ 72 ಗಂಟೆ ಸಾಧಾರಣ ಮಳೆಯಾದರೆ ಮೇ 5ರಿಂದ ಕರಾವಳಿ ಮತ್ತು ಉತ್ತರ ಒಳನಾಡಿಗಿಂತ ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆ ಆಗಲಿದೆ. ಮಳೆ ಬಿದ್ದರೆ ತಾಪಮಾನ ತುಸು ಕಡಿಮೆಯಾಗುತ್ತದೆ. ಆದರೆ, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಉಷ್ಣಾಂಶ ಯಥಾಸ್ಥಿತಿಯಲ್ಲಿ ಇರಲಿದೆ ಎಂದು ಹೇಳಿದ್ದಾರೆ.