ಜಿಲ್ಲಾವಾರು ವಿಮಾಸಂಸ್ಥೆಗಳ ಬೆಳೆ ಪರಿಹಾರ ಇತ್ಯರ್ಥ 2021 ರ ಮುಂಗಾರು ಹಂಗಾಮಿನಲ್ಲಿ ಜಿಲ್ಲಾವಾರು ಬೆಳೆ ಪರಿಹಾರವನ್ನು ವಿಮಾ ಸಂಸ್ಥೆಗಳಿಂದ 590925 ಫಲಾನುಭವಿಗಳ 74917.18 ಲಕ್ಷ ರೂ. ಬೆಳೆ ಪರಿಹಾರ ಮೊತ್ತವನ್ನು ಲೆಕ್ಕಹಾಕಿದ್ದು,ಈ ಪೈಕಿ ಒಟ್ಟು 386266 ಫಲಾನುಭವಿಗಳ 60959.50 ಲಕ್ಷ ರೂ ಮೊತ್ತವನ್ನು ಇತ್ಯರ್ಥಪಡಿಸಲಾಗಿರುತ್ತದೆ.
ಉಳಿದಿರುವ 191417 ಫಲಾನುಭವಿಗಳ 13957.18ಲಕ್ಷ ರೂ.ಪರಿಹಾರವನ್ನು ಶೀಘ್ರದಲ್ಲಿಯೇ ಇತ್ಯರ್ಥ ಪಡಿಸುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ವಿಮಾ ಸಂಸ್ಥೆಗಳಿಂದ ಪರಿಹಾರವಾದ ಜಿಲ್ಲಾವಾರು ಬೆಳೆಪರಿಹಾರದ ವಿವರ ಈ ಕೆಳಗಿನಂತಿದೆ. (ಮೊತ್ತ ಲಕ್ಷ ರೂ.ಗಳಲ್ಲಿ) ಶಿವಮೊಗ್ಗ 413.22 ಚಿಕ್ಕಮಗಳೂರು 12.39 ದಾವಣಗೆರೆ 643.65 ಚಿತ್ರದುರ್ಗ 6543.87 ಬಳ್ಳಾರಿ 843.01
ಜೂನ್ 20 ಹಾಗೂ 21ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಎರಡು ದಿನಗಳ ಪ್ರವಾಸ ಕೈಗೊಳ್ಳಲಿರುವ ಮೋದಿ ಇಂದು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ್ದಾರೆ. ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
ಇದರೊಂದಿಗೆ ಪ್ರವಾಸ ಕಾರ್ಯಕ್ರಮದ ವಿವರಗಳ ಕುರಿತು ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಪ್ರಸ್ತಾಪಿಸಲಾದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಮೈಸೂರಿನ ಅರಮನೆ ಮೈದಾನದಲ್ಲಿ ಜೂನ್ 21 ರಂದು ವಿಶ್ವ ಯೋಗ ದಿನಾಚರಣೆ ನಡೆಯಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರುಗಲಿದೆ.
ಹಾಗಾಗಿ ಇದುವರೆಗೆ ಜಡ್ಡುಗಟ್ಟಿದ್ದ ಪಾಲಿಕೆ ಆಕ್ಟೀವ್ ಮೂಡ್‌ಗೆ ಬಂದಿದ್ದು ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ರಸ್ತೆ ಸೇರಿದಂತೆ ನಗರದ ಹೃದಯ ಭಾಗಗಳಲ್ಲಿ ಕಿತ್ತು ಹೋಗಿದ್ದ ರಸ್ತೆಗಳನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಸಭೆಯ ನಂತರ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ”ಪ್ರಧಾನಿಗಳ ಭೇಟಿ ಕಾರ್ಯಕ್ರಮಕ್ಕೆ ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಿ. ಯಾವುದೇ ರೀತಿಯ ಲೋಪಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿ” ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಯೋಗ ದಿನಾಚರಣೆಗೆ ಸಮರ್ಪಕ ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳಿದ ಅವರು, ಪ್ರಧಾನಿಗಳ ಎರಡು ದಿನಗಳ ಸಿದ್ಧತೆಗಳ ಕುರಿತು ವಿವರವಾಗಿ ಚರ್ಚಿಸಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಬಿ.ಎಚ್. ಅನಿಲ್ ಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಕೌಶಲ್ಯಾಭಿವೃದ್ಧಿ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಎಂ.ಎಸ್. ಶ್ರೀಕರ್, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ರಶ್ಮಿ ಮಹೇಶ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಅನಧಿಕೃತ ಡಿಜಿಟಲ್ ಸಾಲ ವಿತರಣಾ ಸಂಸ್ಥೆಗಳಿಗೆ ಬ್ರೇಕ್ ಹಾಕಲು ಶೀಘ್ರದಲ್ಲಿಯೇ ನಿಯಂತ್ರಣ ವ್ಯವಸ್ಥೆ ರೂಪಿಸಲಾಗುವುದು. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
ಡಿಜಿಟಲ್ ಆಪ್ ಗಳಿಗೆ ಕಡಿವಾಣ ಹಾಕಲಾಗುವುದು. ಅದಕ್ಕಾಗಿ ನಿಯಂತ್ರಣ ವ್ಯವಸ್ಥೆ ರೂಪಿಸಲಾಗುವುದು ಎಂದು ಹೇಳಿದ್ದಾರೆ.
ಕೆಲವು ಅನಧಿಕೃತ ಸಾಲ ವಿತರಣಾ ಸಂಸ್ಥೆಗಳು ಕಾನೂನು ಬಾಹಿರವಾಗಿದ್ದು, ಅಂತಹ ಕೆಲವು ಸಂಸ್ಥೆಗಳ ಕಿರುಕುಳಕ್ಕೆ ಸಾಲಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ನಿಯಂತ್ರಣ ವ್ಯವಸ್ಥೆ ರೂಪಿಸಲಾಗುತ್ತದೆ. ಡಿಜಿಟಲ್ ಪ್ಲಾಟ್ ಫಾರ್ಮ್ ಗಳಿಂದ ಸಾಲ ಪಡೆದುಕೊಂಡವರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲಾಗುವುದು.
ಸಾಲ ಪಡೆದುಕೊಳ್ಳುವ ಮೊದಲು ಇಂತಹ ಆಪ್ ಗಳು ಆರ್.ಬಿ.ಐ.ನಲ್ಲಿ ನೋಂದಣಿಯಾಗಿವೆಯೇ ಎಂಬುದನ್ನು ಗ್ರಾಹಕರು ಪರಿಶೀಲಿಸಬೇಕು. ಸಾಲ ನೀಡುವ ಅನಧಿಕೃತ ಡಿಜಿಟಲ್ ಆಪ್ ಗಳಿಂದ ತೊಂದರೆ ಉಂಟಾದಲ್ಲಿ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಬೇಕೆಂದು ಹೇಳಲಾಗಿದೆ.
ಕೇಂದ್ರದ ನಾಗರಿಕ ಪರೀಕ್ಷೆ (ಐಎಎಸ್) ಬರೆಯಬೇಕು ಪಾಸಾಗಬೇಕು ಎಂಬುವುದು ಬಹಳಷ್ಟು ಜನರ ಕನಸಾಗಿರುತ್ತದೆ.
ಆದರೆ, ಐಎಎಸ್ ಬರೆಯಲು ಇಂಗ್ಲಿಷ್ನಲ್ಲಿ ಹೆಚ್ಚಿನ ಪ್ರಾವೀಣ್ಯತೆ ಬೇಕಾಗುತ್ತದೆ ಎಂಬ ತಪ್ಪು ಕಲ್ಪನೆ ಬಹಳಷ್ಟು ಜನರಲ್ಲಿದೆ. ಐಎಎಸ್ನ ಮುಖ್ಯ ಪರೀಕ್ಷೆಯಲ್ಲಿ ಕನ್ನಡಕ್ಕೂ ಅವಕಾಶವಿದ್ದು, ಕನ್ನಡವನ್ನು ಆಯ್ಕೆ ಮಾಡಿಕೊಂಡು ಕನ್ನಡದಲ್ಲಿಯೇ ಪರೀಕ್ಷೆ ಬರೆದರೂ ಪಾಸಾಗಬಹುದು ಎಂದು 2021-22ನೇ ಸಾಲಿನ ಕೇಂದ್ರದ ನಾಗರಿಕ ಪರೀಕ್ಷೆಯಲ್ಲಿ 191ನೇ ರ್‍ಯಾಂಕ್ ಗಳಿಸಿರುವ ಅಪೂರ್ವ ಬಾಸೂರು ಅವರು ತಿಳಿಸಿದ್ದಾರೆ.
ಈ ಮಾತನಾಡಿದ ಅವರು, ಕನ್ನಡ ಮಾಧ್ಯಮದಲ್ಲಿ ಓದಿದ್ದೇವೆ ಎಂಬ ಕೀಳಿರಿಮೆ ಬೇಡ. ಕನ್ನಡ ಮಾಧ್ಯಮದ ಮಕ್ಕಳೂ ಉತ್ತಮ ಸಾಧನೆ ಮಾಡಲು ನಾಗರಿಕ ಸೇವಾ ಪರೀಕ್ಷೆಯಲ್ಲಿ ವಿಫುಲ ಅವಕಾಶಗಳಿವೆ.
ಮುಖ್ಯವಾಗಿ ಸತತ ಪರಿಶ್ರಮ, ಆಳವಾದ ಅಧ್ಯಯನ, ವಿಷಯ ಮನವರಿಕೆ ಸಾಮರ್ಥ್ಯ, ಕ್ರಿಯಾಶೀಲತೆ, ವಿಷಯಗಳನ್ನು ಅರಿಯುವ ಕುತೂಹಲ ಇತ್ಯಾದಿ ಅಂಶಗಳು ನಮ್ಮ ಅಧ್ಯಯನ ಮತ್ತು ಪರೀಕ್ಷಾ ಸಿದ್ಧತೆಗೆ ಪೂರಕವಾಗಿರುತ್ತವೆ. ನನ್ನ ಸಾಧನೆ ಹಿಂದೆ ನನ್ನ ಕುಟುಂಬ ಸದಸ್ಯರ ತ್ಯಾಗವಿದೆ. ಮುಖ್ಯವಾಗಿ ನನ್ನ ತಾಯಿ ನನ್ನೊಂದಿಗೆ ಇದ್ದು, ದೆಹಲಿಯಲ್ಲಿ ಕಳೆದ ಕ್ಷಣಗಳು, ಮಾಡಿದ ಕೆಲಸ, ನಿತ್ಯ ನನಗೆ ನೀಡುತ್ತಿದ್ದ ಬೆಂಬಲ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಯಾವ ಪದವಿ ಯುಪಿಎಸ್ಸಿ ಪರೀಕ್ಷೆಗೆ ಪೂರಕವಾಗುತ್ತದೆ ಎಂಬ ಕುತೂಹಲ ಬಹುತೇಕರಲ್ಲಿರುತ್ತದೆ. ಯಾವುದೇ ಪದವಿ ಮಾಡಿದ್ದರೂ ಸರಿ. ನೀವು ಆಯ್ಕೆ ಮಾಡಿ ಪದವಿ ಮಾಡಿದ ವಿಷಯದ ಕೇವಲ ಇಂತಿಷ್ಟು ಭಾಗ ಮಾತ್ರ ಯುಪಿಎಸ್ಸಿ ಪರೀಕ್ಷೆಯಲ್ಲಿ ವಿಷಯ ಇರುತ್ತದೆ ಎಂದರು.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗ 7000ಕ್ಕೂ ಅಧಿಕ ಕೇಸ್ ಗಳು ದಾಖಲಾಗಿವೆ. ಕಳೆದ 24 ಗಂಟೆಯಲ್ಲಿ 7,584 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ನಿನ್ನೆ 15,31,510 ಜನರಿಗೆ ವ್ಯಾಕ್ಸಿನ್ ನೀಡಲಾಗಿದ್ದು, ದೇಶದಲ್ಲಿ ಈವರೆಗೆ 1,947,642,992 ಡೋಸ್ ಲಸಿಕೆ ಹಾಕಲಾಗಿದೆ. ನಿನ್ನೆ 3,35,050 ಜನರನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದೆ.
ಸೋಂಕಿತರ ಸಾವಿನ ಸಂಖ್ಯೆ ಮತ್ತೆ ಏರಿಕೆಯಾಗಿದ್ದು ಒಂದೇ ದಿನದಲ್ಲಿ 24 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 5,24,747ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಇನ್ನು ದೇಶದಲ್ಲಿ 36,267 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 3,791 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 4,26,44,092 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಕರ್ನಾಟಕ ದಲಿತ ನೌಕರರ ಒಕ್ಕೂಟ ಶಿವಮೊಗ್ಗ ಇವರ ವತಿಯಿಂದ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪ್ರೋ.ಬಿ. ಕೃಷ್ಣಪ್ಪನವರ 85ನೇ ಜನ್ಮದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕರ್ನಾಟಕ ದಲಿತ ಸಂಘರ್ಷದ ರಾಜ್ಯ ಸಂಚಾಲಕರಾದ ಶ್ರೀ ಸಿ.ಎಂ. ಗುರುಮೂರ್ತಿಯವರು ಮಾತನಾಡಿ, ಶ್ರೀ ಕೃಷ್ಣಪ್ಪನವರ ಜನ್ಮದಿನಾಚರಣೆಯನ್ನು ನಾವು ಆಚರಣೆ ಮಾಡುತ್ತಾ ಬಂದಿದ್ದೇವೆ. ಈ ನೆನಪು ನಮಗೆ ಅಗತ್ಯವಾಗಿದೆ. ಕೃಷ್ಣಪ್ಪನವರ ಚಿಂತನೆಗಳು, ಬದುಕು ಈಗಿನ ವರ್ತಮಾನಕ್ಕೆ, ಹಾಗೂ ಮುಂದಿನ ಭವಿಷ್ಯಕ್ಕೆ ಮಾರ್ಗ ಸೂಚಿಯಾಗಿವೆ ಎಂದರು.
ಇಂಥವರ ಹುಟ್ಟುಹಬ್ಬವನ್ನು ಕೇವಲ ಪುಷ್ಪನಮನ ಮಾಡುವ ಮೂಲಕ ಆಚರಿಸಿದೆ ಅವರ ಚಿಂತನೆಗಳನ್ನು ವಿಮರ್ಶಾತ್ಮಕವಾಗಿ ಮನನ ಮಾಡಿಕೊಳ್ಳುವುದು ಅತ್ಯಮೂಲ್ಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಹೊಸತು ಪತ್ರಿಕೆಯ ಸಂಪಾದಕರಾದ ಸಿದ್ದನಗೌಡ ಪಾಟೀಲ್ , ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಕೆ.ಟಿ. ಗಂಗಾಧರ, ಖ್ಯಾತ ಸಾಹಿತಿ ಶ್ರೀ.ಬಿ. ಚಂದ್ರೇಗೌಡ, ಪ್ರೊ. ಎಂ.ಜಿ. ನಂಜುಂಡಸ್ವಾಮಿ, ಶಿವಮೊಗ್ಗದ ವಕೀಲರಾದ ಶ್ರೀಪಾಲ್, ಶಿವಮೊಗ್ಗದ ಅಪರ ಜಿಲ್ಲಾಧಿಕಾರಿಗಳಾದ ನಾಗೇಂದ್ರ ಎಸ್. ಹೊನ್ನಾಳಿ, ಪ್ರಜಾವಾಣಿ ಪತ್ರಿಕೆಯ ಹಿರಿಯ ಪತ್ರಕರ್ತರಾದ ಚಂದ್ರಹಾಸ ಮತ್ತು ಇನ್ನಿತರರು ಉಪಸ್ಥಿತರಿದ್ದರು.
ಭಾರತದ ಮಹಿಳಾ ಕ್ರಿಕೆಟ್ ನ ದಂತಕಥೆ ಮಿಥಾಲಿ ರಾಜ್ ಅಂತರಾಷ್ಟ್ರೀಯ ಕ್ರಿಕೆಟ್ ನ ಎಲ್ಲಾ ಮಾದರಿಗಳಿಗೆ ನಿವೃತ್ತಿ ಪ್ರಕಟಿಸಿದ್ದಾರೆ.
ಮಿಥಾಲಿ ರಾಜ್ ಸುಮಾರು 23 ವರ್ಷಗಳ ಸುದೀರ್ಘ ವೃತ್ತಿ ಜೀವನಕ್ಕೆ ನಿನ್ನೆ ಬುಧವಾರ, ಅಂತರಾಷ್ಟ್ರೀಯ ಕ್ರಿಕೆಟ್ ಎಲ್ಲಾ ಮಾದರಿ ಕಲಿಕೆ ವಿದಾಯ ಹೇಳಿದ್ದಾರೆ.
ಇವರು ಡಿಸೆಂಬರ್ 3, 1982ರಲ್ಲಿ ರಾಜಸ್ಥಾನದಲ್ಲಿ ಜನಿಸಿದರು. ಜೂನ್ 26,1999 ಮಿಥಾಲಿ ರಾಜ್ ಅವರು ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ರಾಜ್ ಇವರ ಬ್ಯಾಟಿಂಗ್ ಶೈಲಿ ಬಲಗೈ ಆಗಿತ್ತು. ಇವರು ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ (10,868) ಗಳಿಸಿ ದಾಖಲೆಯ ಒಡತಿಯಾಗಿದ್ದಾರೆ.
214 ಟ್ರಸ್ಟ್ ಕ್ರಿಕೆಟ್ನಲ್ಲಿ ದ್ವಿಶತಕ ಗಳಿಸಿದ ಭಾರತದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 7,805 ಏಕದಿನ ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಗಳಿಸಿದ್ದಾರೆ.
ಇವರ ಕೊನೆಯ ಪಂದ್ಯ ಮಾರ್ಚ್ 27, 2022.
ಮಿಥಾಲಿ ರಾಜ್ ಅವರಿಗೆ 39 ವರ್ಷ. ಕ್ರಿಕೆಟ್ ನಿಂದ ನಿವೃತ್ತಿ ಆಗಲು ಇದು ಸೂಕ್ತ ಸಮಯವೆಂದು ನನಗನಿಸುತ್ತಿದೆ. ಪ್ರತಿಭಾನ್ವಿತ ಆಟಗಾರ್ತಿಯನ್ನು ಒಳಗೊಂಡಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ಭವಿಷ್ಯ ಉಜ್ವಲವಾಗಿದೆ ಎಂದು ಮಿಥಾಲಿ ರಾಜ್ ಅವರು ಅಭಿಪ್ರಾಯಪಟ್ಟಿದ್ದಾರೆ.
ನಮಗೆ ಜ್ವರ, ನೆಗಡಿ, ಇಂತಹ ಯಾವುದೇ ರೋಗಗಳು ಬಂದ್ರು, ಮೊದಲು ನಮ್ಮ ಬಗ್ಗೆ ಕಾಳಜಿವಹಿಸುವುದು ಅಮ್ಮ. ಮನುಷ್ಯ ರಲ್ಲಿ ಈ ಪ್ರೀತಿಯನ್ನು ನೋಡಿರುತ್ತೇವೆ. ಪ್ರಾಣಿಗಳಲ್ಲಿ ರೋಗಗಳು ಬಂದರೆ ಚಿಕಿತ್ಸೆ ತಮಗೆ ತಾವೇ ಪಡೆದುಕೊಳ್ಳುತ್ತವೆ. ಆದರೆ, ಇಲ್ಲೊಂದು ಗಾಯಗೊಂಡ ಕೋತಿ ತನ್ನ ಮರಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಯನ್ನ ಪಡೆದುಕೊಂಡಿದೆ.
ಹೌದು, ಒಂದು ಗಾಯಗೊಂಡಿರುವ ಹೆಣ್ಣುಕೋತಿ, ತನ್ನ ಮರಿಯೊಂದಿಗೆ ಸಹಾಯ ಪಡೆಯಲು ವೈದ್ಯರ ಬಳಿ ಬಂದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ಘಟನೆ ಬಿಹಾರದ ಹಳ್ಳಿಯೊಂದರಲ್ಲಿ ನಡೆದಿದೆ.
ಒಂದು ಹೆಣ್ಣು ಕೋತಿ ಹಾಗೂ ಅದರ ಮರಿ ಗಾಯಗೊಂಡಿತ್ತು. ಇದರ ಚಿಕಿತ್ಸೆಗೆ ತಾಯಿ ಕೋತಿ ತನ್ನ ಮರಿಯನ್ನು ಅಪ್ಪಿಕೊಂಡು ಖಾಸಗಿ ಕ್ಲಿನಿಕ್ ಮುಂದೆ ಕುಳಿತಿತ್ತು. ಇದನ್ನು ಗಮನಿಸಿದ ಡಾ. ಎಸ್. ಎಂ.ಖಾನ್ ಅವರು ಆ ಕೋತಿಯನ್ನು ಚಿಕಿತ್ಸೆಗೆ ಒಳಗೆ ಬರಲು ಸೂಚಿಸಿದಾಗ, ಆ ಕೋತಿ ತನ್ನ ಮರಿಯನ್ನು ಅಪ್ಪಿಕೊಂಡು ಒಳಗಿರುವ ಬೆಂಚಿನ ಮೇಲೆ ಬಂದು ಕುಳಿತುಕೊಂಡಿತು. ನಂತರದಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಕ್ಲಿನಿಕ್ ನಿಂದ ಹೊರಹೋಗಿದೆ ಎಂದು ವೈದ್ಯರು ಮಾಹಿತಿ ತಿಳಿಸಿದ್ದಾರೆ.
ತಾಯಿ-ಮಗುವಿನ ಪ್ರೀತಿ ಕೇವಲ ಮನುಷ್ಯರ ಲ್ಲಿಯೇ ಇರದೆ, ಪ್ರಾಣಿಗಳಲ್ಲಿಯೂ ಇರುತ್ತದೆ ಎಂಬುದಕ್ಕೆ ಉದಾಹರಣೆಯಾಗಿದೆ.
ಸರಿ… ತಾಯಿ ಕೋತಿ ಹೋಗೋವಾಗ ಡಾಕ್ಟ್ರಿಗೆ ಫೀಸು ಕೊಡ್ತಾ ? ಅಂತ ಕೇಳಬೇಡಿ.ಧನ್ಯವಾದ ಅಂತೂ ತನ್ನ ಭಾಷೆಯಲ್ಲೇ ಹೇಳಿರತ್ತೆ ..ಅಲ್ವೆ?
ವಿದ್ಯಾರ್ಥಿಗಳು ತಮಗೆ ಕಷ್ಟವೆನಿಸುವ ವಿಷಯಗಳನ್ನು ಮೊದಲು ಪ್ರೀತಿಸಬೇಕು. ಆಗ ಅದು ನಿಮ್ಮದಾಗಿ ಅರ್ಥವಾಗುತ್ತದೆ, ಸುಲಭವಾಗುತ್ತದೆ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ.ಈಶ್ವರಪ್ಪ ಕಿವಿಮಾತು ಹೇಳಿದರು.
ಅವರಿಂದು ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಹಾಗೂ ವನಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಶಿಸ್ತು, ಶ್ರಮ, ಶ್ರದ್ಧೆಯಿಂದ ಪಾಠ ಕೇಳಿ ಅದನ್ನು ಬುದ್ಧಿ, ಕರುಣೆ ಮತ್ತು ಕೌಶಲ್ಯದೊಂದಿಗೆ ಜೀವನದಲ್ಲಿ ಅಳವಡಿಸಿ ಬಳಸಿಕೊಳ್ಳಬೇಕು ಆಗ ಯಶಸ್ಸು ಸಾಧ್ಯ, ಪರಿಪೂರ್ಣತೆ ನಮ್ಮಲ್ಲಿ ಅಡಗಿರುವ ವಿದ್ಯೆ, ಅದನ್ನು ಹೊರ ತೆಗೆಯುವುದು ಶಿಕ್ಷಕರ ಪಾತ್ರ, ಶಿಕ್ಷಕರು ವಿದ್ಯಾರ್ಥಿಗಳಿಗೆ ಎರಡನೇ ಪೋಷಕರು ಇದ್ದಂತೆ ಎಂದರು.
ಪದವಿಪೂರ್ವ ಶಿಕ್ಷಣವು ನಿರ್ಣಾಯಕ ಘಟ್ಟವಾಗಿದ್ದು ವಿದ್ಯಾರ್ಥಿಗಳು ಮುಂದೆ ತಾವು ಏನಾಗಬೇಕೆಂಬ ನಿರ್ಧಾರ ತೆಗೆದುಕೊಳ್ಳುವ ಪರ್ವ ಕಾಲವಿದು ಎಂದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ನಸೀಮಾ ಬಾನು, ಉದಯ್ ಕಿರಣ್, ಹಾಗೂ ಬಾಲಾಜಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ತಮ್ಮ ಕಾಲೇಜು ಜೀವನದ ಅನುಭವಗಳನ್ನು ಹಾಗೂ ತಮ್ಮ ಸಾಧನೆಗೆ ರೂಢಿಸಿಕೊಂಡ ಮಾರ್ಗಗಳನ್ನು ವಿವರಿಸಿದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಪಿ.ರು ದ್ರಪ್ಪನವರು ಅಂದಂದಿನ ಪಠ್ಯ ವಿಷಯಗಳನ್ನು ವಿದ್ಯಾರ್ಥಿಗಳು ಅಂದೇ ಅರ್ಥ ಮಾಡಿಕೊಂಡಲ್ಲಿ ಪರೀಕ್ಷೆಗಳಿಗೆ ಭಯಪಡುವ ಸಂದರ್ಭ ಬರುವುದಿಲ್ಲ, ಇದಕ್ಕೆ ಆಸಕ್ತಿ ಬಹುಮುಖ್ಯ ಎಂದರು.
ಗಣಿತ ಉಪನ್ಯಾಸಕ ಕೆ.ಸಿ.ಶಿವಶಂಕರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಚೈತ್ರ ಮತ್ತು ಸಂಗಡಿಗರು ಹಾಡಿದರು. ಸ್ವಾಗತವನ್ನು ಇಂಗ್ಲಿಷ್ ಭಾಷಾ ಉಪನ್ಯಾಸಕ ಕೆ.ಸಿ.ವಿಜಯಕುಮಾರ್ ಕೋರಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಅಧ್ಯಾಪಕಿ ಶರ್ಮಿಳಾ ಮಾಡಿದರು. ಕನ್ನಡ ಭಾಷಾ ಉಪನ್ಯಾಸಕ ಹೆಚ್.ಸಿ. ವಿನಯ್ ಕುಮಾರ್ ವಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ವನಮಹೋತ್ಸವದ ಅಂಗವಾಗಿ ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರೆರೆಯಲಾಯಿತು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ 6 ಸಾವಿರ ರೂ.ಗಳ ಆರ್ಥಿಕ ನೆರವನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ಮೂಲಕ ವರ್ಗಾವಣೆ ನೀಡಲಾಗುತ್ತಿದೆ.
ಈಗಾಗಲೇ ಈ ಸೌಲಭ್ಯವನ್ನು ಪಡೆದಿರುವ ರೈತರು ಮುಂದಿನ ಬಾರಿ ಆರ್ಥಿಕ ನೆರವು ಪಡೆಯಬೇಕಾದರೆ ಇ-ಕೆವೈಸಿ ಮಾಡಿಸುವುದನ್ನು ಮರೆಯಬಾರದು. ಪ್ರತಿವರ್ಷವೂ ಫಲಾನುಭವಿ ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಆದ್ದರಿಂದ ಮುಂದಿನ ಸೌಲಭ್ಯ ಪಡೆಯಬೇಕಾದರೆ ಜುಲೈ 31ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಸರ್ಕಾರದ ಸೌಲಭ್ಯಗಳು ದುರುಪಯೋಗವಾಗುವ ಸಾಧ್ಯತೆ ಹೆಚ್ಚಿದೆ.
ಆದ್ದರಿಂದ ಮುಂದಿನ ದಿನಗಳಲ್ಲಿ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಆರ್ಥಿಕ ನೆರವು ವರ್ಗಾವಣೆಯಾಗಬೇಕಾದರೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ಈಗಾಗಲೇ ರಾಜ್ಯದಲ್ಲಿ ಇದುವರೆಗೆ ಶೇ.16 ರಷ್ಟು ರೈತರು ಮಾತ್ರ ಇ – ಕೆವೈಸಿ ಮಾಡಿಸಿದ್ದು, ಶೇ.84 ರಷ್ಟು ರೈತರು ಇದನ್ನು ಮಾಡಿಸಿರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬ ರೈತರೂ ಇದನ್ನು ಮಾಡಿಸುವುದು ಕಡ್ಡಾಯವಾಗಿದ್ದು, ಇ-ಕೆವೈಸಿ ಮಾಡಿಸದ ರೈತರು ಜುಲೈ 31 ರೊಳಗೆ ಓಟಿಪಿ ಆಧಾರಿತ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಮಾಡಿಸುವಂತೆ ಕೃಷಿ ಆಯುಕ್ತರು ತಿಳಿಸಿದ್ದಾರೆ.