Monday, March 16, 2026
Monday, March 16, 2026
Home Blog Page 1519

ರಾಜ್ಯ ಹೈಕೋರ್ಟ್ ದೇಶದ ಅತ್ಯುತ್ತಮ ಹೈಕೋರ್ಟ್ ಗಳಲ್ಲಿ ಒಂದಾಗಿದೆ- ಅವಸ್ಥಿ

0

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ನಾನು ಸುವರ್ಣಾವಕಾಶ ಎಂದು ಪರಿಗಣಿಸಿದ್ದೇನೆ.

ಈ ಸಂಸ್ಥೆಯಲ್ಲಿ ಶಕ್ತಿಮೀರಿ ಕೆಲಸ ಮಾಡಿದ ಭಾವ ನನ್ನಲ್ಲಿದೆ. ಕರ್ನಾಟಕ ಹೈಕೋರ್ಟ್‌ ದೇಶದ ಅತ್ಯುತ್ತಮ ಹೈಕೋರ್ಟ್‌ಗಳಲ್ಲಿ ಒಂದು” ಎಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮೆಚ್ಚುಗೆ ಸೂಚಿಸಿದರು.

ಸಿಜೆ ಅವಸ್ಥಿಯವರು ಸೇವೆಯಿಂದ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಶುಕ್ರವಾರ ಬೀಳ್ಕೊಡುಗೆ ಸಮಾರಂಭ ಆಯೋಜಿಸಿತ್ತು. ಸಮಾರಂಭದಲ್ಲಿ ಭಾಗವಹಿಸಿದ ಸಿಜೆ ಅವಸ್ಥಿ ಅವರು ನ್ಯಾಯಮೂರ್ತಿಯಾಗಿ ತಾವು ಸಲ್ಲಿಸಿದ ಸೇವೆ ಮತ್ತು ವಕೀಲಿಕೆ ದಿನಗಳಲ್ಲಿ ಗಳಿಸಿದ ಅನುಭವದ ಕುರಿತು ಮನಬಿಚ್ಚಿ ಮಾತನಾಡಿದರು.

“ಈ ರಾಜ್ಯದ ಹಲವು ಜಿಲ್ಲೆಗಳಿಗೆ ಕಳೆದ 8-9 ತಿಂಗಳಲ್ಲಿ ಭೇಟಿ ನೀಡಿದ್ದು, ಇಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಂಡಿದ್ದೇನೆ. ಹೀಗಾಗಿ, ಒಂದು ರಾಜ್ಯ, ಹಲವು ದೇಶ ಎಂಬ ಸೂಕ್ತಿಯು ಇಲ್ಲಿಗೆ ಹೊಂದುತ್ತದೆ” ಎಂದು ರಾಜ್ಯದ ಸಾಂಸ್ಕೃತಿಕ ವೈವಿಧ್ಯ, ಬಹುತ್ವದ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದರು.

“ಅಲಾಹಾಬಾದ್‌ ಹೈಕೋರ್ಟ್‌ ಮತ್ತು ಇಲ್ಲಿನ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಒಟ್ಟು 44 ಸಾವಿರ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದೇನೆ. 500ಕ್ಕೂ ಹೆಚ್ಚು ಪ್ರಕರಣಗಳು ಬಹುಮುಖ್ಯ ಕಾನೂನಿನ ಪ್ರಶ್ನೆಗಳನ್ನು ಒಳಗೊಂಡಿವೆ ಎಂದು ಪರಿಗಣಿಸಲ್ಪಟ್ಟಿವೆ” ಎಂದು ನ್ಯಾಯಮೂರ್ತಿಯಾಗಿ ತಮ್ಮ ಸೇವಾವಧಿಯನ್ನು ಅವರು ಅವಲೋಕಿಸಿದರು.

“ನ್ಯಾಯಮೂರ್ತಿಗಳು ಶಿಸ್ತು, ಬದ್ಧತೆಯಿಂದ ಕೂಡಿದ್ದು ನಿಷ್ಪಪಕ್ಷಪಾತ ಮತ್ತು ಪಾರದರ್ಶಕವಾಗಿರಬೇಕಾಗುತ್ತದೆ. ಯಾವುದೇ ಪಕ್ಷಪಾತವಿಲ್ಲದೇ ಅಲಹಾಬಾದ್‌ ಹೈಕೋರ್ಟ್‌ ಮತ್ತು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನ್ನ ತತ್ವಗಳಲ್ಲಿ ಯಾವುದೇ ರೀತಿಯಲ್ಲಿಯೂ ನಾನು ಹೊಂದಾಣಿಕೆ ಮಾಡಿಕೊಂಡಿಲ್ಲ” ಎಂದು ವಿವರಿಸಿದರು.

“2009ರಲ್ಲಿ ಅಲಾಹಾಬಾದ್‌ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗುವವರೆಗೆ 22 ವರ್ಷಗಳ ಕಾಲ ವಕೀಲನಾಗಿ ಕೆಲಸ ಮಾಡಿದ್ದೇನೆ. ಎಲ್ಲ ಯುವ ವಕೀಲರಂತೆ ಸಾಕಷ್ಟು ಶ್ರಮವಹಿಸಿ ಅಲಾಹಾಬಾದ್‌ ಹೈಕೋರ್ಟ್‌ ವಕೀಲರ ವೃಂದ ಮತ್ತು ನ್ಯಾಯಮೂರ್ತಿಗಳಿಂದ ಸಾಕಷ್ಟು ಕಲಿತಿದ್ದೇನೆ ಎಂದು ವಕೀಲಿಕೆ ದಿನಗಳನ್ನು ಮೆಲುಕು ಹಾಕಿದರು.

ವಕೀಲರ ಬದುಕು ಸವಾಲಿನಿಂದ ಕೂಡಿರುತ್ತದೆ. ವಕೀಲನಾಗಿ ಶ್ರಮವಹಿಸಿದ್ದು ಮತ್ತು ನನಗೆ ಸಿಕ್ಕ ಅವಕಾಶಗಳಿಂದ ಸಾಕಷ್ಟು ತೃಪ್ತಿ ಪಡೆದಿದ್ದೇನೆ.
ನ್ಯಾಯಮೂರ್ತಿಯಾಗಿ ಸೇವೆ ಮಾಡಿದ್ದಕ್ಕೆ ಹೋಲಿಕೆ ಮಾಡಿದರೆ ವಕೀಲಿಕೆ ವೃತ್ತಿಯನ್ನು ಅನುಭವಿಸಿದ್ದು, ಸಾಕಷ್ಟು ತೃಪ್ತಿ ಪಡೆದಿದ್ದೇನೆ ಎಂದರು.

ಹಲವು ಪ್ರಮುಖ ಮತ್ತು ಸವಾಲಿನ ಪ್ರಕರಣಗಳಲ್ಲಿ ವಾದ ಮಂಡಿಸಿದ್ದೇನೆ. ವಕೀಲಿಕೆ ಆರಂಭಿಸಿದಾಗ ನಾನು ಯಾರಿಗೂ ಗೊತ್ತಿರಲಿಲ್ಲ. 2009ರಲ್ಲಿ ನಾನು ನ್ಯಾಯಮೂರ್ತಿಯಾಗಿ ನೇಮಕವಾಗಿ ಚೇಂಬರ್‌ ಬಿಟ್ಟಾಗ 5 ಸಾವಿರಕ್ಕೂ ಅಧಿಕ ಪ್ರಕರಣಗಳು ಬಾಕಿ ಇದ್ದವು. ವಕೀಲನಾಗಿ ಎಲ್ಲವನ್ನೂ ನೋಡಿದ್ದೇನೆ ಎಂದು ವಿವರಿಸಿದರು.

ಕರ್ನಾಟಕದ ಜನರು ಅಪಾರ-ಪ್ರೀತಿ ವಿಶ್ವಾಸ ತೋರಿದ್ದು, ನನಗೆ ಎಂದಿಗೂ ಹೊರಗಿನವನು ಎನಿಸಿಲ್ಲ. ಸಾಕಷ್ಟು ನೆನಪುಗಳನ್ನು ಇಲ್ಲಿಂದ ನಾನು ಒಯ್ಯುತ್ತಿದ್ದೇನೆ ಎಂದರು.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರು ಸಿಜೆ ಅವಸ್ಥಿ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಆನ್‌ಲೈನ್‌ ಗೇಮಿಂಗ್‌, ಹಿಜಾಬ್‌ ನಿಷೇಧ ಸೇರಿದಂತೆ ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದು, ನ್ಯಾಯಾಂಗದ ಸುಧಾರಣೆಗೆ ಸಾಕಷ್ಟು ಒತ್ತು ನೀಡಿದ್ದಾರೆ ಎಂದು ಸ್ಮರಿಸಿದರು.

ಹಿರಿಯ ನ್ಯಾಯಮೂರ್ತಿ ಬಿ ವೀರಪ್ಪ ಸೇರಿದಂತೆ ಹಲವು ನ್ಯಾಯಮೂರ್ತಿಗಳು, ಕೆಎಸ್‌ಬಿಸಿ ಅಧ್ಯಕ್ಷ ಎಂ ಕಾಶೀನಾಥ್‌, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ, ಸಹಾಯಕ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಕೀಲರು, ಹಿರಿಯ ಹಾಗೂ ಕಿರಿಯ ವಕೀಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪೌರಕಾರ್ಮಿಕರ ವೇತನ ₹2000 ಹೆಚ್ಚಳ- ಬೊಮ್ಮಾಯಿ

0

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಿಂದ ಹೈದರಾಬಾದ್ ಗೆ ಪ್ರವಾಸ ಬೆಳೆಸಿದ್ದಾರೆ. ಅಲ್ಲಿ ಎರಡು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು ಅದರಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ತಿಳಿದುಬಂದಿದೆ.

ಹೈದರಾಬಾದ್ ಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ,ಹೈದರಾಬಾದ್ ನಲ್ಲಿ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ ಪಿ ನಡ್ಡಾ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು, ರಾಜ್ಯಗಳ ನಾಯಕರು ಭಾಗಿಯಾಗಲಿದ್ದಾರೆ.
ರಾಜ್ಯದ ವಿವಿಧ ನಗರ ಪಾಲಿಕೆಗಳಲ್ಲಿ ನೇರ ಪಾವತಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಸೇವೆಗಳನ್ನು ಕಾಯಂಗೊಳಿಸಲು ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಕಾನೂನು ನಿಯಮಗಳಿಗೆ ಅನುಸಾರವಾಗಿ ಅನುಷ್ಠಾನಗೊಳಿಸಲು ಹಿರಿಯ ಅಧಿಕಾರಿಗಳು, ಕಾನೂನು ಇಲಾಖೆ ಅಧಿಕಾರಿಗಳು ಮತ್ತು ಪೌರಕಾರ್ಮಿಕರ ಪ್ರತಿನಿಧಿಗಳ ಸಮಿತಿಯನ್ನು ರಚಿಸಲಾಗುವುದು ಎಂದರು.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲಿದ್ದು ಈ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಸಾಂದರ್ಭಿಕವಾಗಿ ಭೇಟಿ ಮಾಡಿ ರಾಜ್ಯದ ಕುರಿತು ಮಾತುಕತೆ ನಡೆಸಲು ಪ್ರಯತ್ನಿಸುತ್ತೇನೆ ಎಂದರು.

ಪೌರಕಾರ್ಮಿಕರ ಸಮಸ್ಯೆಗಳ ಕುರಿತು ನಡೆಸಿದ ಸಭೆ ಕುರಿತು ಮಾತನಾಡಿದ ಬೊಮ್ಮಾಯಿ, ಪ್ರಸ್ತಾವಿತ ಸಮಿತಿಯು ಮೂರು ತಿಂಗಳೊಳಗೆ ವರದಿ ಸಲ್ಲಿಸಲಿದೆ. ಪೌರಕಾರ್ಮಿಕರು ಸಾಮಾಜಿಕ ಘನತೆ ಮತ್ತು ಭದ್ರತೆಗೆ ಅರ್ಹರು. ರಾಜ್ಯ ಸರಕಾರ ಮಾನವೀಯ ಧೋರಣೆಯೊಂದಿಗೆ ಅವರ ಸಂಕಷ್ಟಗಳಿಗೆ ಸ್ಪಂದಿಸಲಿದೆ. ಅವರ ಮಾಸಿಕ ಸಂಭಾವನೆಯನ್ನು 2,000 ರೂಪಾಯಿ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಪೌರಕಾರ್ಮಿಕರ ನೇಮಕಾತಿಯನ್ನು ಸರಳಗೊಳಿಸಲು ವಿಶೇಷ ನೇಮಕಾತಿ ನಿಯಮಗಳನ್ನು ರೂಪಿಸಲಾಗುವುದು ಎಂದು ಕೂಡ ತಿಳಿಸಿದರು.

ನೂಪುರ್ ಶರ್ಮ ತಮ್ಮ ಹೇಳಿಕೆಗೆ ಇಡೀ ದೇಶದ ಕ್ಷಮೆಕೋರಲಿ- ಸುಪ್ರೀಂ

0

ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಇಡೀ ದೇಶದ ಕ್ಷಮೆ ಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಬಿಜೆಪಿ ನಾಯಕಿ ನೂಪುರ್ ಶರ್ಮಾ ಇಡೀ ದೇಶದ ಕ್ಷಮೆ ಯಾಚಿಸಬೇಕೆಂದು ಸುಪ್ರೀಂ ಕೋರ್ಟ್ ನೂಪುರ್ ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ಪ್ರವಾದಿ ವಿರುದ್ಧ ಹೇಳಿಕೆ ನೀಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಕ್ಕೆ ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಹೇಳಿದೆ.ನೂಪುರ್ ಶರ್ಮ ವಿವಾದಾತ್ಮಕ ಹೇಳಿಕೆ ಇಡೀ ದೇಶಕ್ಕೆ ಬೆಂಕಿ ಹಚ್ಚಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಉದಯ್‌ಪುರದಲ್ಲಿ ಟೈಲರ್‌ನ ಹತ್ಯೆಯಾದ ದುರದೃಷ್ಟಕರ ಘಟನೆಗೆ ಆಕೆಯ ಆಕ್ರೋಶವೇ ಕಾರಣ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆಕೆಯ ಹೇಳಿಕೆ ಹೇಗೆ ಪ್ರಚೋದನೆ ನೀಡಿತು ಎಂಬುದನ್ನು ನಾವು ನೋಡಿದ್ದೇವೆ. ಉದಯಪುರದಲ್ಲಿ ಟೈಲರ್ ಕೊಲೆಯಾದ ದುರದೃಷ್ಟಕರ ಘಟನೆಗೆ ಆಕೆ ಏಕಾಏಕಿ ಕಾರಣವಾಗಿದ್ದಾರೆ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ.

ನೂಪುರ್ ಶರ್ಮಾ ಹೈಕೋರ್ಟ್​ಗೆ ಹೋಗಿ ಅರ್ಜಿ ಸಲ್ಲಿಸಲಿ ಎಂದು ನೂಪುರ್ ಶರ್ಮಾ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನೂಪುರ ಶರ್ಮಾಗೆ ದೆಹಲಿ ಪೊಲೀಸರು ರೆಡ್ ಕಾರ್ಪೆಟ್ ಸ್ವಾಗತ ಕೋರಿರಬೇಕು. ಇಷ್ಟೊಂದು ಎಫ್.ಐ.ಆರ್. ದಾಖಲಾದರೂ ದೆಹಲಿ ಪೊಲೀಸ್ ಏಕೆ ಕ್ರಮ ಕೈಗೊಂಡಿಲ್ಲ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ತಮ್ಮ ವಿರುದ್ಧದ ಎಲ್ಲ ಕೇಸ್ ಗಳನ್ನು ದೆಹಲಿಗೆ ವರ್ಗಾವಣೆ ಮಾಡಬೇಕೆಂದು ನೂಪುರ್ ಶರ್ಮಾ ಕೋರಿದ್ದರು. ಇದೀಗ ನೂಪುರ್ ಶರ್ಮಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ

ಇಸ್ರೇಲ್ ನ ನೂತನ ಪ್ರಧಾನಿ ಲ್ಯಾಪಿಡ್ ಗೆಮೋದೀಜಿ ಅಭಿನಂದನೆ

0

ಇಸ್ರೇಲ್‌ನ 14 ನೇ ಪ್ರಧಾನ ಮಂತ್ರಿಯಾಗಿ ಯೈರ್ ಲ್ಯಾಪಿಡ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ.

ಇಸ್ರೇಲ್‌ನ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಕ್ಕಾಗಿ ಗೌರವಾನ್ವಿತ @yairlapid ಅವರಿಗೆ ಹಾರ್ದಿಕ ಶುಭಾಶಯಗಳು ಮತ್ತು ಹೃತ್ಪೂರ್ವಕ ಅಭಿನಂದನೆಗಳು.
ನಾವು 30 ವರ್ಷಗಳ ಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಆಚರಿಸುತ್ತಿರುವಾಗ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಯೈರ್ ಲ್ಯಾಪಿಡ್ ಗುರುವಾರ ಮತ್ತು ಶುಕ್ರವಾರದ ನಡುವಿನ ಮಧ್ಯರಾತ್ರಿಯ ಸಮಯದಲ್ಲಿ ಅಧಿಕೃತವಾಗಿ ಇಸ್ರೇಲ್‌ನ 14 ನೇ ಪ್ರಧಾನ ಮಂತ್ರಿಯಾದರು.

ನವೆಂಬರ್ 1 ರಂದು ನಡೆಯಲಿರುವ ಇಸ್ರೇಲ್ ಚುನಾವಣೆಗೆ ಮುಂಚಿತವಾಗಿ ಉಸ್ತುವಾರಿ ಸರ್ಕಾರವನ್ನು ವಹಿಸಿಕೊಳ್ಳುವುದರಿಂದ ಲ್ಯಾಪಿಡ್ ಅವರ ಅವಧಿಯು ಚಿಕ್ಕದಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬೆಂಗಳೂರಿನ ಸಮಗ್ರ ಅಭಿವೃದ್ದಿ ನಮ್ಮ ಸರ್ಕಾರದ ಗುರಿ- ಬೊಮ್ಮಾಯಿ

0

ಬೆಂಗಳೂರು ನಗರವನ್ನು ಅಂತಾರಾಷ್ಟ್ರೀಯ ಗುಣಮಟ್ಟದ ನಗರವನ್ನಾಗಿ ಅಭಿವೃದ್ಧಿಪಡಿಸಲು ಹಾಗೂ ನಗರದ ಸಮಗ್ರ ಅಭಿವೃದ್ಧಿಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಹೆಬ್ಬಾಳ ವಿಧಾನಸಭಾಕ್ಷೇತ್ರದ ಗಂಗಾನಗರದಲ್ಲಿ ಕೆಂಪೇಗೌಡ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಹಿಂದಿನವರು ಬೆಂಗಳೂರು ಅಭಿವೃದ್ಧಿ ಮಾಡದ ಕಾರಣ ಹಲವು ಸಮಸ್ಯೆಗಳು ಸೃಷ್ಟಿಯಾಗಿವೆ. ಕಾಲಕಾಲಕ್ಕೆ ರಸ್ತೆ ಅಭಿವೃದ್ಧಿ, ರಾಜಕಾಲುವೆ ಸಮಸ್ಯೆ ಸರಿಪಡಿಸಿದ್ದರೆ ಈ ಸಮಸ್ಯೆಗಳು ಉದ್ಭವವಾಗುತ್ತಿರಲಿಲ್ಲ. ಇವಾಗ ನಾನು ರಸ್ತೆ, ರಾಜಕಾಲುವೆ ಅಭಿವೃದ್ಧಿ ಸವಾಲನ್ನು ಸ್ವೀಕಾರ ಮಾಡಿದ್ದೇನೆ ಎಂದರು.

ರಾಜಕಾಲುವೆಗೆ 1600 ಕೋಟಿ ಕೊಟ್ಟಿದ್ದೇವೆ.
ಸಬ್ ಅರ್ಬನ್ ಗೆ ಪ್ರಧಾನಿಗಳು ಅಡಿಗಲ್ಲು ಹಾಕಿದ್ದಾರೆ. ಫೆರಿಫರಲ್ ರಿಂಗ್ ರಸ್ತೆಗೂ ಮುಂದೆ ಅಡಿಗಲ್ಲು ಹಾಕುತ್ತೇವೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಗೆ ಒತ್ತು ನೀಡಲಾಗುವುದು. ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದೇನೆ. ದೂರದೃಷ್ಟಿ ಮೂಲಕ ಮೂಲಭೂತ ಸೌಕರ್ಯ ಸಿಗಲು ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದರು.

ಪೊಲೀಸ್ ಆಯುಕ್ತರೊಂದಿಗೆ ಸಭೆ ನಡೆಸಿ ಸಂಚಾರ ವ್ಯವಸ್ಥೆ ಯನ್ನು ಸುಗಮಗೊಳಿಸಲು ನಿರ್ದೇಶನ ನೀಡಿದ್ದೇನೆ. ಹತ್ತು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡು ಬೆಂಗಳೂರಿನ ಸಮಗ್ರ ಅಭಿವೃದ್ಧಿಯತ್ತ ನಡೆದಿದ್ದೇವೆ. ಬೆಂಗಳೂರಿನ ದಟ್ಟಣೆ ನಿವಾರಿಸಲು ಸ್ಯಾಟಲೈಟ್ ಟೌನ್ ಗಳ ನಿರ್ಮಾಣ ಕ್ಕೆ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಮೂಲಭೂತ ಸೌಕರ್ಯ ಬೆಂಗಳೂರಿನ ನಾಗರಿಕರಿಗೆ ದೊರೆಯಬೇಕು ಎಂಬ ದೂರದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದರು.

ಪಿ.ಎಸ್.ಆರ್. ಬಿಲ್ಡರ್, ಗ್ರಾಸ್ ರೂಟ್, ಎ.ಬಿ.ಎಸ್.ಎಸ್. ಇವರ ಸಹಭಾಗಿತ್ವದಲ್ಲಿ ಗಂಗಾನಗರದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 513ನೇ ಜಯಂತೋತ್ಸವ ಅಂಗವಾಗಿ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ವಿತರಿಸಿದರು.
ರಿಫೆರಲ್ ರಿಂಗ್ ರೋಡಿಗೆ ಟೆಂಡರ್ ಕರೆಯಲಾಗಿದೆ. ಈ ವರ್ಷ ಕಾಮಗಾರಿ ಪ್ರಾರಂಭವಾಗುತ್ತದೆ. ಮೆಟ್ರೋ ವಿಸ್ತರಣೆಯಾಗುತ್ತಿದೆ. ನಗರದ ಸೌಂದರ್ಯೀಕರಣಕ್ಕೆ ಕೆರೆಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ. ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಬಡವರು ಇರುವ ಸ್ಥಳಗಳ ಅಭಿವೃದ್ಧಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನೇ ನೀಡಿದರು.

ಕೋವಿಡ್ ಕಾರಣ ನಿಂತ ಎಲ್ಲಾ ರೈಲುಸೇವೆ ಆರಂಭಿಸಲು ಮನವಿ

0

ಕೊರೊನಾ ಪೂರ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಎಲ್ಲಾ ರೈಲು ಸೇವೆಗಳನ್ನು ಪುನರ್‌ ಆರಂಭಿಸುವಂತೆ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರು ಸಲಹೆ ನೀಡಿದರು.

ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ಪ್ರಯಾಣಿಕರ ಸೇವೆಗಳ ಸುಧಾರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು.

ಮೈಸೂರು-ಬೆಂಗಳೂರು ಮಧ್ಯೆ ಓಡಾಡುವ ಎಲ್ಲಾ ಸೂಪರ್‌ ಫಾಸ್ಟ್‌ ರೈಲುಗಳನ್ನು ಮತ್ತಷ್ಟು ವೇಗಗೊಳಿಸುವುದು. ಮೈಸೂರು ಮತ್ತು ಬೆಂಗಳೂರು ನಡುವೆ ಓಡುವ ಮಾಲ್ಗುಡಿ ಎಕ್ಸ್‌ಪ್ರೆಸ್‌ ನಲ್ಲಿ ಹವಾ ನಿಯಂತ್ರಿತ ಬೋಗಿ ಹೆಚ್ಚಿಸುವುದು. ಮೈಸೂರಿನಿಂದ ಹಾಸನ ಮತ್ತು ಮಂಗಳೂರು ಮೂಲಕ ಕರ್ನಾಟಕದ ಕರಾವಳಿ ಪ್ರದೇಶದೊಂದಿಗೆ ಸಂಪರ್ಕಿಸುವ ಹೊಸ ರೈಲು ಸೇವೆಗಳು, ತಾಳಗುಪ್ಪ, ಶಿವಮೊಗ್ಗ ಟೌನ್‌ನಿಂದ ಚೆನ್ನೈ ಮತ್ತು ಮೈಸೂರು ಕಡೆಗೆ
ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ದಾವಣಗೆರೆ, ಹರಿಹರ ಮತ್ತು ಹಾವೇರಿ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸೌಲಭ್ಯ ಹೆಚ್ಚಿಸುವುದು, ಮೈಸೂರಿನಿಂದ ದಾದರ್‌, ಅಜ್ಮಿರ್‌ ಮತ್ತು ನಿಜಾಮುದ್ದಿನ್‌ ನಿಲ್ದಾಣಗಳಿಗೆ ಈಗ ಇರುವ ಸಾಪ್ತಾಹಿಕ ಮತ್ತು ವಾರಕ್ಕೆ ಎರಡು ದಿನದ ಸೇವೆಯಿಂದ ವಾರಕ್ಕೆ ನಾಲ್ಕು ದಿನಗಳಿಗೆ ವಿಸ್ತರಿಸಲು ಸದಸ್ಯರು ಸಲಹೆ ನೀಡಿದರು.

ರಕ್ಷಣಾ ಇಲಾಖೆಯಿಂದ ಮಾನವರಹಿತ ವಿಮಾನ ಹಾರಾಟ ಯಶಸ್ವಿ ಪ್ರಯೋಗ

0

ಭಾರತದ ರಕ್ಷಣಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಶುರುವಾಗಿದೆ. ಮೇಕ್ ಇನ್ ಇಂಡಿಯಾದ ಜೊತೆಗೆ ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಮತ್ತೊಂದು ಹೆಜ್ಜೆ ಇರಿಸಲು ಸಜ್ಜಾಗಿದೆ.

ಸೇನೆಯಲ್ಲಿ ಆಧುನಿಕ ತಂತ್ರಜ್ಞಾನದ ಮತ್ತೊಂದು ಮಜಲನ್ನು ದಾಟಿದೆ. ಇತ್ತೀಚೆಗೆ ರಕ್ಷಣಾ ಇಲಾಖೆಗೆ ಸಂಬಂಧಪಟ್ಟಂತೆ ಹಲವು ದಾಖಲೆಗಳನ್ನು ಬರೆದಿರೋ ಡಿಆರ್​ಡಿಒ ಮತ್ತೊಂದು ರೆಕಾರ್ಡ್ ಮಾಡಿದೆ.

ರಕ್ಷಣಾ ಕ್ಷೇತ್ರದಲ್ಲಿ ಮೋದಿ ಸರ್ಕಾರ ಒಂದಲ್ಲ ಒಂದು ಯಶಸ್ವೀ ಪರೀಕ್ಷೆಗಳನ್ನು ನಡೆಸುತ್ತಿದೆ. ಭಾರತೀಯ ಸೇನೆಯ ಸಾಮರ್ಥ್ಯ ಹೆಚ್ಚಿಸೋ ನಿಟ್ಟಿನಲ್ಲಿ ವಿನೂತನ ತಂತ್ರಜ್ಞಾನಕ್ಕೆ ಸರ್ಕಾರ ಹೆಚ್ಚು ಒತ್ತು ಕೊಡುತ್ತದೆ. ಅದರಲ್ಲೂ ಸ್ವದೇಶಿ ನಿರ್ಮಾಣದ ಮೂಲಕ ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ ಅಭಿಯಾನವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತಿದೆ. ಒಂದಾದ ಮೇಲೊಂದು ಸಂಶೋಧನೆ ಮೂಲಕ ರಕ್ಷಣಾ ಇಲಾಖೆ ಬಲರ್ವನೆ ಮಾಡುತ್ತಿದೆ.

ಇದೀಗ ಡಿಆರ್​ಡಿಒ ಮತ್ತೊಂದು ಪರೀಕ್ಷೆಯಲ್ಲಿ ಯಶಸ್ಸು ಕಂಡಿದೆ. ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್​​ನಲ್ಲಿ ನಡೆದ ಮಾನವ ರಹಿತ ಲಘು ವಿಮಾನ ಹಾರಾಟ ಯಶಸ್ವಿಯಾಗಿದೆ.

ಎಸ್ ಬಿ ಐ ನಿಂದ ಶೀಘ್ರವೇ Watsapp ಬ್ಯಾಂಕಿಂಗ್ ಸೌಲಭ್ಯ

0

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಒಂದಾಗಿದೆ.

ಇದು ದೇಶದ ಹಳ್ಳಿಗಳಿಗೂ ಹರಡಿರುವ ಬ್ಯಾಂಕಿಂಗ್ ಜಾಲವಾಗಿದ್ದು, ದೇಶಾದ್ಯಂತ 45 ಕೋಟಿಗೂ ಹೆಚ್ಚು ಗ್ರಾಹಕರನ್ನ ಹೊಂದಿದೆ.
ಬ್ಯಾಂಕಿಂಗ್ ಸೇವೆಗಳನ್ನ ಗ್ರಾಹಕರಿಗೆ ಹತ್ತಿರ ತರಲು ಎಸ್‌ಬಿಐ ಹೆಚ್ಚು ಹೆಚ್ಚು ಶ್ರಮಿಸುತ್ತಿದೆ. ಶೀಘ್ರದಲ್ಲೇ ಎಸ್‌ಬಿಐ ವಾಟ್ಸಾಪ್‌ ಬ್ಯಾಂಕಿಂಗ್ ಸೇವೆಗಳನ್ನ ಒದಗಿಸಲಿದೆ ಎಂದು ತಿಳಿದು ಬಂದಿದೆ.SBI ವಾಟ್ಸಾಪ್‌ ಬ್ಯಾಂಕಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರಾ ಅವರು ತಿಳಿಸಿದ್ದಾರೆ.

ಅದರಂತೆ ಹೆಚ್ಚಿನ ಸಂಖ್ಯೆಯಲ್ಲಿರುವ ಎಸ್ ಬಿಐ ಗ್ರಾಹಕರು ವಾಟ್ಸಾಪ್‌ ಮೂಲಕ ಸೇವೆಗಳನ್ನ ಪಡೆಯಬಹುದಾಗಿದೆ.
ಈಗಾಗಲೇ ಹಲವು ಬ್ಯಾಂಕ್ʼಗಳು ವಾಟ್ಸಾಪ್‌ ಮೂಲಕ ಬ್ಯಾಂಕಿಂಗ್ ಸೇವೆ ನೀಡುತ್ತಿವೆ. ಎಚ್‌ಡಿಎಫ್‌ಸಿ ಬ್ಯಾಂಕ್, ಯೆಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಆಕ್ಸಿಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ವಾಟ್ಸಾಪ್ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿವೆ. ಬಹುತೇಕ ಎಲ್ಲಾ ಖಾಸಗಿ ಬ್ಯಾಂಕ್‌ಗಳು ವಾಟ್ಸಾಪ್‌ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತವೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಎಸ್‌ಬಿಐ ಈ ವಿಷಯದಲ್ಲಿ ಹಿಂದೆ ಬಿದ್ದಿದೆ. ಆದ್ರೆ, ಈಗ ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ.

ಕಾರ್ಪೊರೇಟ್ ಕ್ಲೈಂಟ್‌ಗಳು ಮತ್ತು ಅಗ್ರಿಗೇಟರ್‌ಗಳಿಗಾಗಿ API ಅನ್ನು ಪ್ರಾರಂಭಿಸುವುದಾಗಿ SBI ಘೋಷಿಸಿದೆ. API ಬ್ಯಾಂಕಿಂಗ್ ವ್ಯವಸ್ಥೆಯನ್ನ ಪ್ರಾರಂಭಿಸಿದರೆ, ಬ್ಯಾಂಕ್ ಮತ್ತು ಕ್ಲೈಂಟ್ ಸರ್ವರ್‌ಗಳ ನಡುವಿನ ಸಂವಹನವು ಸುಲಭವಾಗುತ್ತದೆ.

ಎರಡು ವ್ಯವಸ್ಥೆಗಳ ನಡುವೆ ಡೇಟಾ ವರ್ಗಾವಣೆ ಸುಲಭ. ಗ್ರಾಹಕರು ತೊಂದರೆ-ಮುಕ್ತ ಮತ್ತು ಸುರಕ್ಷಿತ ಸೇವೆಗಳನ್ನು ಪಡೆಯುತ್ತಾರೆ. ಎಸ್‌ಬಿಐ ಹಲವು ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸಲು ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್‌ ಸೇವೆಗಳನ್ನು ಬಳಸುತ್ತಿದೆ. ಆದರೆ, ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಯಾವ ರೀತಿಯ ಸೇವೆಗಳು ಲಭ್ಯವಿರುತ್ತವೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.

ಈಗಾಗಲೇ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ವಾಟ್ಸಾಪ್‌ ಮೂಲಕ ಹೋಲ್ಡರ್‌ಗಳಿಗೆ ವಿವಿಧ ಸೇವೆಗಳನ್ನು ಒದಗಿಸಲಾಗುತ್ತದೆ. ಇದಕ್ಕಾಗಿ SBI ಕಾರ್ಡ್ ಈಗಾಗಲೇ ವಾಟ್ಸಾಪ್ ಸಂಪರ್ಕ ಸೇವೆಯನ್ನ ಪ್ರಾರಂಭಿಸಿದೆ. ಈ ಸೇವೆಯ ಮೂಲಕ ಗ್ರಾಹಕರು ತಮ್ಮ ಖಾತೆಯ ವಿವರಗಳು, ರಿವಾರ್ಡ್ ಪಾಯಿಂಟ್‌ಗಳು, ಬಾಕಿ ಉಳಿದಿರುವ ಹಣ, ಕಾರ್ಡ್ ಪಾವತಿಗಳಂತಹ ಎಲ್ಲಾ ಸೇವೆಗಳನ್ನ ಪ್ರವೇಶಿಸಬಹುದು. ಎಸ್‌ಬಿಐ ಕಾರ್ಡ್ ಹೊಂದಿರುವವರು ಈ ಸೇವೆಯನ್ನ ಬಳಸಲು ಮುಂಗಡವಾಗಿ ನೋಂದಾಯಿಸಿಕೊಳ್ಳಬೇಕು. ಅದರಂತೆ, ಖಾತೆಗೆ ಲಿಂಕ್‌ ಆಗಿರುವ ನಿಮ್ಮ ಮೊಬೈಲ್ ಸಂಖ್ಯೆಯಿಂದ 08080945040 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬೇಕು.

ನೋಂದಾಯಿಸಿದ ನಂತರ ವಾಟ್ಸಾಪ್‌ನಲ್ಲಿ OPTIN ಎಂದು ಟೈಪ್ ಮಾಡಿ 9004022022ಗೆ ಸಂದೇಶ ಕಳುಹಿಸಿ. ಅದರ ನಂತರ ನೀವು ವಾಟ್ಸಾಪ್‌ನಲ್ಲಿ ಕ್ರೆಡಿಟ್ ಕಾರ್ಡ್ ಸಂಬಂಧಿತ ಸೇವೆಗಳನ್ನ ಪಡೆಯಬಹುದು.

ರಸಗೊಬ್ಬರ ಸಮರ್ಪಕ ಪೂರೈಕೆಗೋಸ್ಕರ ರಷ್ಯದೊಂದಿಗೆ ಒಪ್ಪಂದ

0

ದೇಶದಲ್ಲಿ ರಸಗೊಬ್ಬರ ಉತ್ಪಾದನೆ ಹೆಚ್ಚಿಸಲು ಹಾಗೂ ಸಮರ್ಪಕ ಗೊಬ್ಬರ ಪೂರೈಕೆಗಾಗಿ ಭಾರತೀಯ ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್‌ಯು) ರಷ್ಯಾದ ಉದ್ಯಮದ ಫೋಸ್ ಆಗ್ರೋದೊಂದಿಗೆ ದೀರ್ಘಕಾಲದ ಒಪ್ಪಂದ ಮಾಡಿಕೊಂಡಿವೆ ಎಂದು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್ಸೂಖ್ ಮಾಂಡವೀಯ ತಿಳಿಸಿದ್ದಾರೆ.

ಭಾರತಕ್ಕೆ ಡೈ ಅಮೋನಿಯಂ ಫಾಸ್ಫೇಟ್ (ಡಿಎಪಿ) ಹಾಗೂ ಅದರ ಕಚ್ಚಾ ಸಾಮಗ್ರಿಗಳ ನಿಯಮಿತ ಮತ್ತು ಸಕಾಲಕ್ಕೆ ಸಮರ್ಪಕ ಒದಗಿಸುವ ಪ್ರಮಾಣವನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಗೊಬ್ಬರದ ಕಚ್ಚಾ ಸಾಮಾಗ್ರಿಗಳನ್ನು ಪೈಪೋಟಿ ದರದಲ್ಲಿ ಭಾರತಕ್ಕೆ ನೀಡಲು ಸೌದಿ ಅರೇಬಿಯಾ, ರಷ್ಯಾ ಸೇರಿದಂತೆ ಇತರ ದೇಶಗಳು ಸಿದ್ಧವಿರುವುದಾಗಿ ವಿವರಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾಡಿಕೊಂಡ ಈ ಒಪ್ಪಂದದಿಂದಾಗಿ ಡೈಅಮೋನಿಯಂ ಫಾಸ್ಫೇಟ್ (ಡಿಎಪಿ) ಸೇರಿದಂತೆ ಐದು ರೀತಿಯ ರಸಗೊಬ್ಬರಗಳು ಭಾರತಕ್ಕೆ ಪೂರೈಕೆ ಆಗಲಿವೆ ಎಂದು ಮನ್ಸೂಖ್ ಮಾಂಡವೀಯ ರಾಜ್ಯಸಭೆಗೆ ಸಲ್ಲಿಸಿದ ಕಡತದಲ್ಲಿ ಉಲ್ಲೇಖಿಸಲಾಗಿದೆ.

ದೇಶದಲ್ಲಿ ವ್ಯಾಪಕ ಹರಡುತ್ತಿರುವ ಕೊರೋನ ಸೋಂಕು

0

ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ನಾಲ್ಕನೆ ಅಲೆ ಆತಂಕ ದಿನೇ ದಿನೆ ಹೆಚ್ಚುತ್ತಿದೆ. ಈ ಮಧ್ಯೆ ಕಳೆದ 24 ಗಂಟೆಯಲ್ಲಿ 17,092 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ನಿನ್ನೆಗಿಂತ ಕೊಂಚ ಹೆಚ್ಚು ಪ್ರಮಾಣದಲ್ಲಿ ಇಂದು ಸೋಂಕಿತರ ಕೇಸ್ ದಾಖಲಾಗಿದೆ.

ಇನ್ನು ದೇಶದಲ್ಲಿ 1,09,568 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 14,684 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 4,28,51,590 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.

ನಿನ್ನೆ 9,09,776 ಜನರಿಗೆ ವ್ಯಾಕ್ಸಿನ್ ನೀಡಲಾಗಿದ್ದು, ದೇಶದಲ್ಲಿ ಈವರೆಗೆ 1,97,84,80,015 ಡೋಸ್ ಲಸಿಕೆ ಹಾಕಲಾಗಿದೆ.

ಸಾವಿನ ಸಂಖ್ಯೆಯಲ್ಲಿಯೂ ಇಂದು ಏರಿಕೆ ಕಂಡಿದ್ದು, 24 ಗಂಟೆಯಲ್ಲಿ 29 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 5,25,168 ಕ್ಕೆ ಏರಿಕೆಯಾಗಿದೆ.