Monday, March 16, 2026
Monday, March 16, 2026
Home Blog Page 1518

ನೂಪುರ್ ಶರ್ಮಾ ಅವರಿಗೆ ಲುಕ್ ಔಟ್ ನೋಟೀಸ್

0

ಪಶ್ಚಿಮ ಬಂಗಾಳದ ಅನೇಕ ಭಾಗಗಳಲ್ಲಿ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾದ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಕೋಲ್ಕತಾ ಪೊಲೀಸರು, ಶನಿವಾರ ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಮ್ಹೆರ್ಸ್ಟ್ ಸ್ಟ್ರೀಟ್ ಹಾಗೂ ನರ್ಕೆಲ್ದಂಗಾ ಪೊಲೀಸ್ ಠಾಣೆಗಳ ಅಧಿಕಾರಿಗಳು ಈಗಾಗ್ಲೇ ಸಮನ್ಸ್ ನೀಡಿದ್ದು, ವಿಚಾರಣೆಯಿಂದ ತಪ್ಪಿಸಿಕೊಂಡ ನೂಪುರ್‌ಗೆ ಸಧ್ಯ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅನೇಕ ಬಾರಿ ಸಮನ್ಸ್ ನೀಡಿದ್ದರೂ ನಮ್ಮ ಅಧಿಕಾರಿಗಳ ಮುಂದೆ ಹಾಜರಾಗಲು ವಿಫಲವಾದ ನಂತರ ಇಂದು ಲುಕ್‌ಔಟ್ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಕಳೆದ ತಿಂಗಳು ಆಕೆಯ ವಿರುದ್ಧ ಎಫ್‌ಐಆರ್‌ಗಳು ದಾಖಲಾದ ನಂತರ ಅಮ್ಹೆರ್ಸ್ಟ್ ಸ್ಟ್ರೀಟ್ ಮತ್ತು ನರ್ಕೆಲ್ದಂಗಾ ಪೊಲೀಸ್ ಠಾಣೆಗಳು ನೂಪುರ್‌ ಅವರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಕರೆದಿದ್ದವು ಎಂದು ಅಧಿಕಾರಿ ತಿಳಿಸಿದ್ದಾರೆ.

ಕೋಲ್ಕತಾಗೆ ಭೇಟಿ ನೀಡಿದರೆ ತನ್ನ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇದೆ ಎಂಬ ಆತಂಕವನ್ನು ಶರ್ಮಾ ಉಲ್ಲೇಖಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ಮುಂದೆ ಹಾಜರಾಗಲು 4 ವಾರಗಳ ಕಾಲಾವಕಾಶವನ್ನು ಕೋರಿದ್ದಾರೆ.

ಪುಟ್ಟ ಪುಟ್ಟ ಹೆಜ್ಜೆಯಿರಿಸಿ ಗಡಿಯೊಳಕ್ಕೆ ಬಂದ ಪಾಕ್ ಪುಟಾಣಿ ಕಂದ

0

ಪಾಕಿಸ್ತಾನದಿಂದ 3 ವರ್ಷದ ಮಗು ನಿನ್ನೆ ತಡರಾತ್ರಿ ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಬಂದಿತ್ತು. ಈ ಸಂದರ್ಭದಲ್ಲಿ ಮಗುವನ್ನು ನೋಡಿದ ಭದ್ರತಾ ಪಡೆ ಯೋಧರು ಮಗುವನ್ನು ರಕ್ಷಿಸಿ ಪಾಕಿಸ್ತಾನಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಮಗುವನ್ನು ಕುಟುಂಬಸ್ಥರ ಮಡಿಲಿಗೆ ಸೇರಿಸಿದ್ದಾರೆ.

ಪಂಜಾಬ್‌ನ ಹೆಚ್ಚಿನ ಭಾಗ ಪಾಕಿಸ್ತಾನದ ಗಡಿಯನ್ನು ಹಂಚಿಕೊಂಡಿದೆ. ಇದರಿಂದಾಗಿ ಅನೇಕ ಪಾಕಿಸ್ತಾನಿಗಳು ತಪ್ಪಾಗಿ ಪಂಜಾಬ್‌ನೊಳಗೆ ಬಂದು ಭಾರತವನ್ನು ಪ್ರವೇಶಿಸುತ್ತಾರೆ. ಇದೇ ರೀತಿ, ನಿನ್ನೆ ತಡರಾತ್ರಿ 3 ವರ್ಷದ ಮಗು ಎಲ್​ಒಸಿ ದಾಟಿ ಭಾರತ ಪ್ರವೇಶಿಸಿದೆ. ರಾತ್ರಿ ವೇಳೆ ಗಡಿ ಪ್ರದೇಶದಲ್ಲಿ ಮಗು ಒಂಟಿಯಾಗಿ ನಡೆದು ಬರುತ್ತಿದ್ದಾಗ ಕರ್ತವ್ಯದಲ್ಲಿದ್ದ ಗಡಿ ರಕ್ಷಕರ ಕಣ್ಣಿಗೆ ಬಿದ್ದಿದೆ. ಕತ್ತಲಲ್ಲಿ ಬಂದ ಮಗುವನ್ನು ಎತ್ತಿಕೊಂಡು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ.

3 ವರ್ಷದ ಮಗುವಿಗೆ ತನ್ನ ಸ್ಥಳದ ಬಗ್ಗೆ ಅರಿವಿಲ್ಲದ ಕಾರಣ ಭಾರತೀಯ ಅಧಿಕಾರಿಗಳು ಪಾಕಿಸ್ತಾನಿ ರೇಂಜರ್‌ನೊಂದಿಗೆ ಸಂಪರ್ಕ ಸಾಧಿಸಿ ಮಗುವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ತಪ್ಪಿಸಿಕೊಂಡು ಬಂದ ಮಗುವಿನ ಕುಟುಂಬದ ಮಾಹಿತಿ ಕಲೆ ಹಾಕಿದ ನಂತರ ಮರಳಿ ಮಗುವನ್ನು ಆ ಕುಟುಂಬದೊಂದಿಗೆ ಕಳುಹಿಸಿಕೊಟ್ಟಿದ್ದಾರೆ.

ಕುತೂಹಲ ತಾಳಿರುವ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಚುನಾವಣೆ

0

ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ.

ರಾಜಕೀಯ ಬಿಕ್ಕಟ್ಟಿನ ಬಳಿಕ ಇದೇ ಪ್ರಥಮ ಬಾರಿಗೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂದೆ ಬಣಗಳು ವಿಧಾನಸಭೆಯಲ್ಲಿ ಮುಖಾಮುಖಿಯಾಗಲಿವೆ.

ಹೊಸ ಮುಖ್ಯಮಂತ್ರಿಯು ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸಮತ ಸಾಬೀತುಪಡಿಸಬೇಕಿದೆ. 2 ದಿನಗಳ ಮಹಾರಾಷ್ಟ್ರ ವಿಧಾನಸಭೆ ವಿಶೇಷ ಅಧಿವೇಶನದ ಮೊದಲ ದಿನವಾದ ಇಂದೇ ಸ್ಪೀಕರ್ ಸ್ಥಾನದ ಚುನಾವಣೆ ನಡೆಯಲಿದೆ.

ಶಿವಸೇನೆ ಶಾಸಕರ ಬಂಡಾಯದಿಂದಾಗಿ ಅಧಿಕಾರ ಕಳೆದುಕೊಂಡ ಉದ್ಧವ್ ಠಾಕ್ರೆ ಇದೀಗ ಪಕ್ಷದ ಮೇಲೆ ಹಿಡಿತ ಉಳಿಸಿಕೊಳ್ಳಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಪಕ್ಷದ ಮೇಲಿನ ಹಿಡಿತವನ್ನೂ ಕಳೆದುಕೊಂಡರೆ ಮಹಾರಾಷ್ಟ್ರ ರಾಜಕಾರಣದಲ್ಲಿ ಉದ್ಧವ್ ಅಪ್ರಸ್ತುತರಾಗುವ ಅಪಾಯ ಎದುರಿಸಬೇಕಾಗುತ್ತದೆ. ಶಿವಸೇನೆಯ 55 ಶಾಸಕರ ಪೈಕಿ 39 ಮಂದಿ ಉದ್ಧವ್ ಠಾಕ್ರೆ ವಿರುದ್ಧ ತಿರುಗಿಬಿದ್ದಿದ್ದರು. ತಮ್ಮ ತಂದೆ ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ್ದ ಪಕ್ಷದ ಮೇಲೆ ಉದ್ಧವ್ ಹೊಂದಿದ್ದ ಹಿಡಿತದ ಬಗ್ಗೆ ಈ ಬೆಳವಣಿಗೆಯು ಹಲವು ಪ್ರಶ್ನೆಗಳಿಗೆ ಕಾರಣವಾಗಿತ್ತು. ಬಂಡಾಯ ಶಾಸಕರು ಬಿಜೆಪಿ ಆಡಳಿತದ ಗುಜರಾತ್, ಅಸ್ಸಾಂ ಮತ್ತು ಗೋವಾಗಳಲ್ಲಿ 10 ದಿನಗಳ ಕಾಲ ಸಂಚರಿಸಿದ ನಂತರ ಮುಂಬೈಗೆ ಹಿಂದಿರುಗಿದ್ದಾರೆ.

ಪಕ್ಷದಲ್ಲಿ ತಮಗೆ ಅಷ್ಟು ಬೆಂಬಲ ಇಲ್ಲ ಎನ್ನುವುದು ಖಚಿತವಾದ ನಂತರವೂ ಉದ್ಧವ್ ಠಾಕ್ರೆ ಬಂಡಾಯ ಶಾಸಕರಿಗೆ ಗೆಲುವು ಸುಲಭದ ತುತ್ತಾಗದಂತೆ ಮಾಡಬೇಕು ಎನ್ನುವ ಹಟವನ್ನು ಬಿಟ್ಟುಕೊಟ್ಟಿಲ್ಲ. ಶಿವಸೇನೆಯ ಶಾಸಕ ರಾಜನ್ ಸಾಲ್​ವಿ ಅವರನ್ನು ಸ್ಪೀಕರ್ ಸ್ಥಾನಕ್ಕೆ ತಮ್ಮ ಬಣದ ಉಮೇದುವಾರರಾಗಿ ನಿಲ್ಲಿಸಿದ್ದಾರೆ. ಬಿಜೆಪಿಯು ಶಾಸಕ ರಾಹುಲ್ ನರ್​ವೆಕರ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ಉಮೇದುವಾರರಾಗಿ ನಿಲ್ಲಿಸಿದೆ. ಏಕನಾಥ್ ಶಿಂದೆ ಬಣದ ಬೆಂಬಲವೂ ಇವರಿಗೆ ಇದೆ.

ಬಂಡಾಯ ಶಾಸಕರು ತಮ್ಮದೇ ನಿಜವಾದ ಶಿವಸೇನೆ, ಬಹುತೇಕ ಶಾಸಕರ ತಮಗೇ ಇದೆ ಎಂದು ಪ್ರತಿಪಾದಿಸಿದ್ದಾರೆ. ಮಹಾವಿಕಾಸ್ ಅಘಾಡಿ ಸರ್ಕಾರದ ಡೆಪ್ಯುಟಿ ಸ್ಪೀಕರ್ ನರಹರಿ ಝಿರ್​ವಾಲ್ ಅವರು 16 ಬಂಡಾಯ ಶಾಸಕರ ವಿರುದ್ಧ ಅನರ್ಹತೆಯ ವಿಧಿವಿಧಾನಗಳನ್ನು ಆರಂಭಿಸಿದ್ದಾರೆ. ಈ ಪ್ರಕರಣದ ವಿಚಾರಣೆಯು ಇನ್ನೂ ಸುಪ್ರೀಂಕೋರ್ಟ್​ನಲ್ಲಿ ಬಾಕಿಯಿದೆ. ಬಂಡಾಯ ಶಾಸಕರಿಗೆ ಪ್ರತಿಕ್ರಿಯಿಸಿಸಲು ಡೆಪ್ಯುಟಿ ಸ್ಪೀಕರ್ ನೀಡಿದ್ದ 48 ಗಂಟೆಗಳ ಕಾಲಮಿತಿಯನ್ನು ಸುಪ್ರೀಂಕೋರ್ಟ್ ಜುಲೈ 12ರವರೆಗೆ ವಿಸ್ತರಿಸಿತ್ತು.

ವಿಧಾನಸಭೆಯಲ್ಲಿ ನಾಳೆ ಅಧಿವೇಶನ ಆರಂಭವಾದ ತಕ್ಷಣ ಉದ್ಧವ್ ಠಾಕ್ರೆ ಬಣದ ಶಾಸಕರು ಬಂಡಾಯ ಶಾಸಕರು ತಮ್ಮ ವಿಪ್​ಗೆ ಬದ್ಧರಾಗಿರಬೇಕು, ಬಿಜೆಪಿಯ ಸಾಲ್ವಿ ಅವರ ಪರವಾಗಿ ಮತ ಚಲಾಯಿಸುವಂತಿಲ್ಲ ಎಂದು ಕೂಗೆಬ್ಬಿಸಬಹುದು ಎಂದು ಹೇಳಲಾಗುತ್ತಿದೆ. ಬಿಜೆಪಿಯ ಬೆಂಬಲದೊಂದಿಗೆ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿಗೆ ಏಕನಾಥ್ ಶಿಂದೆ ಬಣವು ತಮಗೆ ಯಾವುದೇ ವಿಪ್ ಅನ್ವಯವಾಗುವುದಿಲ್ಲ ಎಂದು ಈಗಾಗಲೇ ಘೋಷಿಸಿದೆ. ಒಟ್ಟಿನಲ್ಲಿ ಇಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆಯಲಿರುವ ಅಧಿವೇಶನವು ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗುವ ಎಲ್ಲ ಸಾಧ್ಯತೆಗಳಿವೆ.

ದೇಶದಲ್ಲಿ ಮತ್ತೆ ಏರಿಕೆಯತ್ತ ಕೋವಿಡ್ ಸೋಂಕು

0

ಕಳೆದ ಒಂದು ದಿನದಲ್ಲಿ ಭಾರತದಾದ್ಯಂತ 16,103 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಆದರೆ, ಸಕ್ರಿಯ ಪ್ರಕರಣಗಳು 1,11,711 ಕ್ಕೆ ಏರಿಕೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇದೇ ಅವಧಿಯಲ್ಲಿ 31 ಜನರು ಕೊರೋನಾ ಸೋಂಕಿಗೆ ಸಾವನ್ನಪ್ಪಿದ್ದಾರೆ.
ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.26 ಪ್ರತಿಶತವನ್ನು ಒಳಗೊಂಡಿವೆ. ಚೇತರಿಕೆ ದರವು 98.54 ಪ್ರತಿಶತದಷ್ಟು ದಾಖಲಾಗಿದೆ ಎಂದು ತಿಳಿಸಲಾಗಿದೆ.

ದೆಹಲಿ,ಮುಂಬೈ,ಕೊಲ್ಕತ್ತಾ ,ಕೇರಳದಲ್ಲಿ ಸೋಂಕಿತರು ಹೆಚ್ಚಾಗಿ ಕಂಡುಬಂದಿದೆ.ಅನೇಕ ರಾಜ್ಯಗಳಲ್ಲಿ ಜನರು ಹೊರಗೆ ಒಡಾಡುವಾಗ ಮಾಸ್ಕ್ ಕಡ್ಡಾಯ ಎಂಬ ನಿಯಮ ಜಾರಿಗೆ ತರಲು ಮುಂದಾಗಿದೆ. ಮುಂದಿನ ದಿನದಲ್ಲಿ ಸೋಂಕು ಹೆಚ್ಚುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪತ್ರಕರ್ತರು ಮುಚ್ಚಿಟ್ಟದ್ದನ್ನು ಜನರೀಗ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುತ್ತಿದ್ದಾರೆ

0

ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯುವ ಮೂಲಕ ವಿಮರ್ಶಾತ್ಮಕವಾಗಿರಬೇಕಿದ್ದ ಮಾಧ್ಯಮ ಇಂದು ಮದಿಸಿದ ಆನೆಯಂತಾಗಿದೆ. ವಿಷವನ್ನು ಕಕ್ಕುವ ಮಾಧ್ಯಮಗಳಿಂದ ಸಮಾಜದಲ್ಲಿ ಮಾನವ ಸಂಬಂಧಗಳು ಹದಗೆಡುತ್ತಿವೆ ಎಂದು ವಿಚಾರವಾದಿ, ಸಾಹಿತಿ ಡಾ.ರಹಮತ್ ತರೀಕೆರೆ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಡಿಸಿದ್ದಾರೆ.

ಚಿತ್ತಾಪುರ ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ತಾಲೂಕು ಪದಾಧಿಕಾರಿಗಳ ಪದಗ್ರಹಣ ಹಾಗೂ ಪತ್ರಿಕಾ ದಿನಾಚರಣೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ನೈತಿಕತೆ ಉಳಿಸಿಕೊಂಡ ಪೆನ್ನಿಗೆ ಮಾತ್ರ ಪ್ರಭುತ್ವ ಹೆದರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುತ್ತ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಶಿಕ್ಷಕರು, ವೈದ್ಯರು, ವಕೀಲರು ಹಾಗೂ ಪತ್ರಕರ್ತರು ಕೆಡಬಾರದು. ಒಂದು ಸಂದರ್ಭದಲ್ಲಿ ಈ 4ಜನ ಕೆಟ್ಟುಹೋದರೆ ಸಮಾಜ ಪತನವಾಗುತ್ತದೆ. ವ್ಯವಸ್ಥೆಯನ್ನು ತಿದ್ದಬೇಕಾದ ಮಾಧ್ಯಮವೇ ಸಮಾಜಕ್ಕೆ ವಿಷ ಉಣಬಡಿಸುತ್ತದೆಂದರೆ ಪತನ ಶುರುವಾಗಿದೆ ಎಂತಲೇ ಅರ್ಥ. ನಾವೆಲ್ಲರೂ ಆತ್ಮವಿಮರ್ಶೆಗೊಳಪಡದ ಹೊರೆತು ಪರಿವರ್ತನೆ ಅಸಾಧ್ಯ ಎಂದು ಹೇಳಿದ್ದಾರೆ.

ಪ್ರಸ್ತುತ, ರಾಜಕೀಯ ವ್ಯವಸ್ಥೆಯಲ್ಲಿ ಬಹುತೇಕರು ಬೈಗುಳವನ್ನೇ ಅಶ್ಲೀಲ ಎಂದು ತಿಳಿದಿದ್ದಾರೆ. ಬೈಗುಳ ಅಶ್ಲೀಲವಲ್ಲ.ಸುಳ್ಳು ಹೇಳುವುದು ಅಶ್ಲೀಲವಾಗುತ್ತದೆ. ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳುವಲ್ಲಿ ಪೈಪೋಟಿಗಿಳಿದಿರುವ ಪತ್ರಿಕೆಗಳು, ಸುಳ್ಳನ್ನೇ ಬಣ್ಣ ಲೇಪಿಸಿ ಪ್ರಕಟಿಸುವ ಮೂಲಕ ಸತ್ಯದಿಂದ ಕೂಡಿದ ಸುದ್ದಿ ಓದುವ ಅಭಿರುಚಿಯನ್ನೇ ಕೆಡಿಸಿವೆ. ಕೋಮು ದ್ವೇಷದ ಸುದ್ದಿ ಪ್ರಚಾರದಿಂದ ಮನುಷ್ಯ ಸಂಬಂದ ಹದಗೆಟ್ಟಿದೆ. ಸಂಶೋದಕ ಎಂ.ಎಂ.ಕಲಬುರಗಿ ಹಾಗೂ ಗೌರಿ ಲಂಕೇಶರ ಹತ್ಯೆಯನ್ನು ದಾರುಣ ಕೊಲೆ ಎಂದು ಬಿತ್ತರಿಸಿದ್ದು ಮಾಧ್ಯಮಗಳ ದುರಂತ ಎಂದು ಬೇಸರ ವ್ಯಕ್ತಪಡಿಸಿದ ತರೀಕೆರೆ, ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಪತ್ರಕರ್ತರು ಮುಚ್ಚಿಟ್ಟ ಸುದ್ದಿಯನ್ನು ಜನರೇ ಬಿತ್ತರಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಸಕ್ರೀಯ ವಿರೋಧ ಪಕ್ಷ ಮತ್ತು ಸ್ವತಂತ್ರ ಮಾಧ್ಯಮದಿಂದ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿದೆ. ಆಡಳಿತ ವ್ಯವಸ್ಥೆಗೆ ಪತ್ರಕರ್ತರು ಸವಾಲು ಹಾಕದಿದ್ದರೆ ಸರ್ವಾಧಿಕಾರ ಸ್ಥಾಪನೆಯಾಗುತ್ತದೆ.

ಪ್ರಶ್ನೆ ಕೇಳುವ ನೈತಿಕತೆ ಮತ್ತು ಸಂವಿಧಾನಿಕ ಹಕ್ಕು ಪತ್ರಕರ್ತರು ಉಳಿಸಿಕೊಳ್ಳಬೇಕು. ಜನಪ್ರತಿನಿಧಿಗಳನ್ನು ಇಂದ್ರ,ಚಂದ್ರ ಎಂದು ಹೊಗಳುವ ಮೂಲಕ ವ್ಯಕ್ತಿಯಾರಾಧನೆ ಮಾಡಿದರೆ ಸೊಕ್ಕು ಅಹಾಂಕರ ಬೆಳೆಯುತ್ತದೆ. ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ನನ್ನ ಕರ್ತವ್ಯವಾಗಿರುತ್ತದೆ. ಜೊತೆಗೆ ಕ್ಷೇತ್ರದ ಜನರನ್ನು ವೈಚಾರಿಕವಾಗಿ ಸಾಂಸ್ಕೃತಿಕವಾಗಿ ಮೇಲೆತ್ತುವುದೂ ಕೂಡ ನನ್ನದೇ ಜವಾಬ್ದಾರಿಯಾಗಿದೆ. ಪ್ರಬುದ್ಧ ಸಮಾಜ ಸಮೃದ್ಧ ಸಮಾಜ ನಿರ್ಮಾಣ ಪ್ರತಿಯೊಬ್ಬರ ಗುರಿಯಾಗಬೇಕು. ಪ್ರಜಾಪ್ರಭುತ್ವದ ಕೊನೆಯ ಆಶಯವೇ ಪತ್ರಿಕಾರಂಗ. ಮಾಧ್ಯಮ ದಾರಿ ತಪ್ಪಿದರೆ ಕಟ್ಟಕಡೆಯ ವ್ಯಕ್ತಿ ಸಾಯುತ್ತಾನೆ ಎಂದು ಪ್ರಿಯಾಂಕ್ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ದ್ವಿದಳ ದಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವರಂಜನ್ ಸತ್ಯಂಪೇಟೆ, ಸಂಘದ ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ ಮುಡುಬೂಳಕರ, ಶಿಕ್ಷಣ ಪ್ರೇಮಿ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಿದ್ಧರಾಜ ಮಲಕಂಡಿ ಅಧ್ಯಕ್ಷತೆ ವಹಿಸಿದ್ದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ನೃಪತುಂಗ ಪತ್ರಿಕೆಯ ಸಂಪಾದಕ ಶಿವರಾಯ ದೊಡ್ಡಮನಿ, ಕ್ಷೇತ್ರಶಿಕ್ಷಣಾಧಿಕಾರಿ, ಸಿದ್ಧವೀರಯ್ಯ ರುದ್ನೂರ, ತಾಪಂ ಇಒ ನೀಲಗಂಗಾ ಬಬಲಾದ, ಜಿಪಂ ಮಾಜಿ ಸದಸ್ಯ ಅರುಣಕುಮಾರ ಪಾಟೀಲ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಗಂಗಾಧರ ಸಾಲಿಮಠ, ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ, ವಾಡಿ ಪುರಸಭೆ ಅಧ್ಯಕ್ಷೆ ಝರೀನಾಬೇಗಂ, ಚಿತ್ತಾಪುರ ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಶಿಕ್ಷಕರು, ಯುವ ಬರಹಗಾರರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಾಸನದಲ್ಲಿ ಆಗಸ್ಟ್ 10 ರಿಂದ ಅಗ್ನಿವೀರರ ನೇಮಕಾತಿ

0

ಆಗಸ್ಟ್ 10 ರಿಂದ ಆಗಸ್ಟ್ 22 ರವರೆಗೆ ಹಾಸನ ಜಿಲ್ಲಾ ಕ್ರೀಡಾ ಮೈದಾನದಲ್ಲಿ ಭೂ ಸೇನಾ ರ್ಯಾಲಿ ನಡೆಯಲಿದೆ. ಈ ಸಂದರ್ಭದಲ್ಲಿ ಅಗ್ನಿಪಥ ಯೋಜನೆಯಡಿ ಅಗ್ನಿವೀರ ರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಯ ಪುರುಷ ಅಭ್ಯರ್ಥಿಗಳು ಈ ಜಾಥಾದಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಲಾಗಿದೆ.

ಜನರಲ್ ಡ್ಯೂಟಿ, ಅಗ್ನಿವೀರ ತಾಂತ್ರಿಕ ನೇಮಕಾತಿ ಜೊತೆಗೆ 8ನೇ ತರಗತಿ ಮತ್ತು 10ನೇ ತರಗತಿ ಉತ್ತೀರ್ಣವಾಗಿರುವವರಿಗೆ ಅಗ್ನಿವೀರ ಕುಶಲಕರ್ಮಿ, ಅಗ್ನಿವೀರ ಕ್ಲರ್ಕ್ ಮತ್ತು ಸ್ಟೋರ್ ಕೀಪರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಆನ್ಲೈನ್ ಮೂಲಕ ನೋಂದಣಿ ಕಡ್ಡಾಯವಾಗಿದೆ. ಜುಲೈ 1ರಿಂದ ಜುಲೈ 30ರವರೆಗೆ https//joinindianarmy.nic.in ವೆಬ್ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಅಡ್ಮಿಟ್ ಕಾರ್ಡ್ ಗಳನ್ನು ನೋಂದಣಿ ವೇಳೆ ನೀಡಲಾದ ಇಮೇಲ್ ವಿಳಾಸಕ್ಕೆ ಆಗಸ್ಟ್ 1ರಿಂದ ಆಗಸ್ಟ್ 7ರ ಮಧ್ಯೆ ಕಳುಹಿಸಿಕೊಡಲಾಗುತ್ತದೆ.

ಇಲೆಕ್ಟ್ರಿಕ್ ವಾಹನ ಜನಸಾಮಾನ್ಯರು ಖರೀದಿಸುವಂತಿರಬೇಕು-ಬೊಮ್ಮಾಯಿ

0

ರಾಜ್ಯದಲ್ಲಿ ಹೈಡ್ರೋಜನ್ ಇಂಧನ ಉತ್ಪಾದಿಸಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ವತಿಯಿಂದ ನಗರದಲ್ಲಿ ನಿನ್ನೆ ಶುಕ್ರವಾರ ಆಯೋಜಿಸಲಾಗಿದ್ದ ಇ.ವಿ ಅಭಿಯಾನ ಮತ್ತು 152 ಚಾರ್ಜಿಂಗ್ ಸ್ಟೇಷನ್‌ಗಳಿಗೆ ಚಾಲನೆ ನೀಡಿ ಮಾತನಾಡಿದರು.

ಹೈಡ್ರೋಜನ್ ಇಂಧನ ತಯಾರಿ
ಸಲು ಈಗಾಗಲೇ 2 ಕಂಪನಿ ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಶೀಘ್ರ 3 ಘಟಕ ಗಳು ಕರ್ನಾ ಟಕದಲ್ಲಿ ಆರಂಭವಾಗಲಿವೆ. ಹೈಡ್ರೋಜನ್ ಇಂಧನ ನವೀಕರಿ ಸಬಹುದಾದ ಇಂಧನಗಳಲ್ಲೇ ಅತ್ಯು ತ್ತಮವಾಗಿದೆ. ಇದರಿಂದ, ಇಂಧನ ಉಳಿತಾಯವಾಗಲಿದೆ. ಕೇಂದ್ರ ಸರ್ಕಾ ರದ ನೆರವಿನಿಂದ ಈ ಯೋಜನೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಸಮುದ್ರದ ನೀರಿನಿಂದ ಅಮೋ ನಿಯಾ ತಯಾರಿಸಲು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸ
ಲಾಗಿದೆ. ಡಿಎಪಿ ಗೊಬ್ಬರ ತಯಾರಿಸಲು ಅಮೋನಿಯಾವನ್ನು ಅತಿ ಹೆಚ್ಚು ಬಳಸಲಾಗುತ್ತಿದೆ. ಅಮೋನಿಯಾ ಉತ್ಪಾದಿಸಲು ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಭಾರತ ಹಾಗೂ ಕೊಲ್ಲಿ ದೇಶಗಳು ಹೊರತುಪಡಿಸಿದರೆ ಬೇರೆಲ್ಲಿಯೂ ಈ ರೀತಿ ತಂತ್ರಜ್ಞಾನ ಇಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಎಲೆಕ್ಟ್ರಿಕ್‌ ವಾಹನ ಖರೀದಿ ದರ ಜನಸಾಮಾನ್ಯರಿಗೆ ನಿಲುಕುವಂತಿರ ಬೇಕು. ಉತ್ಪಾದಕರು ಈ ನಿಟ್ಟಿನಲ್ಲಿ ಚಿಂತಿಸಬೇಕು. ಎಲೆಕ್ಟ್ರಿಕಲ್‌ ವಾಹನಗಳಿಗಾಗಿ ಹೆಚ್ಚಿನ ಚಾರ್ಜಿಂಗ್ ಸ್ಟೇಷನ್‌ಗಳು ಹಾಗೂ ಬ್ಯಾಟರಿಗಳನ್ನು ಬದಲಾಯಿಸುವ ವ್ಯವಸ್ಥೆಯ ಕೇಂದ್ರ ಸ್ಥಾಪಿಸಲು ಮಹತ್ವ ನೀಡುವುದು ಅಗತ್ಯವಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕಲ್‌ ವಾಹನ ಬಳಕೆ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಮಲ್ಟಿ ಎಕ್ಸಲ್‌ ಎಲೆಕ್ಟ್ರಿಕಲ್‌ ಟ್ರಕ್‌ ಸಹ ಮಾರುಕಟ್ಟೆಗೆ ಬಿಡುಗಡೆಯಾಗಲಿವೆ. ಆಗ ಸಾರಿಗೆ ಕ್ಷೇತ್ರದಲ್ಲಿ ಬದಲಾವಣೆಗಳಾಗಬಹುದು ಎಂದು ತಿಳಿಸಿದ್ದಾರೆ.

ರಾಷ್ಟ್ರಾಧ್ಯಕ್ಷರನ್ನ ಅವಿರೋಧ ಆಯ್ಕೆ ಮಾಡುವುದು ಉತ್ತಮ- ಯಶ್ವಂತ್ ಸಿನ್ಹಾ

0

ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆ ಮತಯಾಚನೆ ನಡೆಸುತ್ತಿರುವ ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾದ ಯಶವಂತ್ ಸಿನ್ಹಾ ಛತ್ತೀಸ್ಗಢಕ್ಕೆ ಭೇಟಿ ನೀಡಿ ಅಲ್ಲಿನ ಶಾಸಕರೊಂದಿಗೆ ಸಭೆ ನಡೆಸಿ ಬೆಂಬಲ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿ ಹುದ್ದೆ ಅತ್ಯಂತ ಘನತೆಯುಳ್ಳದ್ದು. ಆ ಸ್ಥಾನಕ್ಕೆ ಚುನಾವಣೆ ನಡೆಸದೇ ಅವಿರೋಧವಾಗಿ ಆಯ್ಕೆ ಮಾಡುವುದು ಉತ್ತಮ ಎಂದು ಅಭಿಪ್ರಾಯಪಟ್ಟರು. ಈ ದೇಶಕ್ಕೆ ಮೂಕ ರಾಷ್ಟ್ರಪತಿಗಳು ಬೇಕಿಲ್ಲ. ಅಧ್ಯಕ್ಷರು ಸರ್ಕಾರದ ಕೈಗೊಂಬೆಯಾಗಬಾರದು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿ ಎಂದರು.

ರಾಷ್ಟ್ರಪತಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಸರ್ಕಾರ ಘನತೆ ಮೆರೆಯಬೇಕಿತ್ತು. ಆ ಸ್ಥಾನದಲ್ಲಿದ್ದವರಿಗೆ ಸಂವಿಧಾನದತ್ತವಾದ ಅಧಿಕಾರವಿದೆ. ಈ ಹಿಂದಿನ ಕೆಲ ಅಧ್ಯಕ್ಷರು ಕಚೇರಿಯನ್ನೇ ಬಿಟ್ಟು ಹೊರಬಾರದೇ ಇದ್ದುದನ್ನು ನಾವು ನೋಡಿದ್ದೇವೆ. ಮಾತನಾಡದ ಅಧ್ಯಕ್ಷರು ಈ ದೇಶಕ್ಕೆ ಬೇಡ. ನಿಯೋಜಿಯ ಜವಾಬ್ದಾರಿಯನ್ನು ಪೂರೈಸುವವರು ಅಧ್ಯಕ್ಷರಾಗಬೇಕು ಎಂದರು.

ರಾಷ್ಟ್ರಪತಿ ಚುನಾವಣೆಯ ಮತದಾನವು ಜುಲೈ 18 ರಂದು ನಡೆಯಲಿದೆ. 21ರಂದು ಮತ ಎಣಿಕೆ ಜರುಗಲಿದೆ.

ಜನತಾಮಿತ್ರದ ಮೂಲಕ ಜೆಡಿಎಸ್ ಚುನಾವಣಾ ಕಣಕ್ಕೆ ಸಜ್ಜು

0

ವಿಧಾನಸಭೆ ಚುನಾವಣೆ ಡಿಸೆಂಬರ್‌ ತಿಂಗಳಿನಲ್ಲಿ ಎದುರಾಗುವ ಸಾಧ್ಯತೆಗಳಿವೆ ಎಂದು ಭವಿಷ್ಯ ನುಡಿದಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಇದಕ್ಕಾಗಿ ಈಗಿನಿಂದಲೇ ಸಜ್ಜಾಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಿನ್ನೆ ಶುಕ್ರವಾರ ಜನತಾಮಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕನಿಷ್ಠ ಹದಿನೈದು ಕ್ಷೇತ್ರಗಳನ್ನುಗೆಲ್ಲುವ ವಾತಾವರಣ ಜೆಡಿಎಸ್‌ಗೆ ಇದೆ.

ವಿಧಾನಸಭೆ ಹಾಗೂ ಬಿಬಿಎಂಪಿ ಚುನಾವಣೆಗೆ ಕಾರ್ಯಕರ್ತರು ಸಂಘಟಿತರಾಗಬೇಕು. ಬೆಂಗಳೂರಿನಲ್ಲಿ ನಮ್ಮ ಪಕ್ಷ ಶಕ್ತಿಯುತವಾಗಿಲ್ಲ ಎಂಬ ಭಾವನೆಯನ್ನ ತೆಗೆದುಹಾಕಬೇಕು ಎಂದು ಹೇಳಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿ ಪಕ್ಷದ ಮತಗಳಿವೆ. ಕಾರ್ಯಕರ್ತರು ಇದನ್ನು ಮರೆಯಬಾರದು. ನಾವೇನು ಅಧಿಕಾರ ಇದ್ದಾಗ ಅಕ್ರಮವಾಗಿ ಹಣ ಲೂಟಿ ಮಾಡಿಲ್ಲ. ನಮ್ಮಲ್ಲಿ ಮೂರು ಜನ ಶಾಸಕರು ಪಕ್ಷದಲ್ಲಿ ಇದ್ದರು. ಅವರೂ ಬೇರೆ ಕಡೆ ಹೋಗಿದ್ದಾರೆ. ಚಾಮರಾಜಪೇಟೆಯಲ್ಲಿ ನಮ್ಮ ನಾಯಕರು ಹೋರಾಟ ಮಾಡಿದರು. ಅದರಿಂದಾಗಿ ಚಾಮರಾಜಪೇಟೆ, ಪುಲಕೇಶಿನಗರ, ಮಹಾಲಕ್ಷ್ಮೀಲೇಔಟ್‌ನಲ್ಲೂ ಗೆದ್ದೆವು. ಪಕ್ಷ ಉಳಿದರೆ ನಾವೆಲ್ಲಾ ಉಳಿಯುತ್ತೇವೆ ಎಂದು ತಿಳಿಸಿದ್ದಾರೆ.

ದೇವರ ಆಶೀರ್ವಾದದಿಂದ 2 ಬಾರಿ ಮುಖ್ಯಮಂತ್ರಿಯಾಗಿ ಇತಿಹಾಸದ ಪುಟ ಸೇರಿದ್ದೇನೆ. ಈಗಿನ ಸರ್ಕಾರ ಲೂಟಿ ಹೊಡೆಯುತ್ತಿದೆ. ಇದನ್ನು ಸಂಪೂರ್ಣವಾಗಿ ಬಂದ್‌ ಮಾಡಬೇಕು. ನನಗೆ ಒಂದು ಅವಕಾಶ ಕೊಡಲಿ. ನಮಗೆ ಇಪ್ಪತ್ತು ವರ್ಷ ಬೇಡ ಐದು ವರ್ಷದ ಅವಕಾಶ ಕೊಟ್ಟರೆ ಸಾಕು ಎಂದು ಮನವಿ ಮಾಡಿದ್ದಾರೆ.

ನಮ್ಮ ಕಾರ್ಯಕರ್ತರು ಪ್ರತಿ ಮನೆ ಮನೆಗೂ ಹೋಗಿ, ಅವರ ಆದ್ಯತೆ ಏನು ಎಂಬುದನ್ನು ಅರಿಯುವ ಕೆಲಸ ಮಾಡಿ. ಜನರಿಂದ ಎಲ್ಲಾ ಮಹಿತಿಯನ್ನು ಸಂಗ್ರಹಿಸೋಣ. ಮುಂದೆ ನಮ್ಮ ಸರ್ಕಾರ ಬಂದ ನಂತರ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಜನತಾ ಮಿತ್ರ ಕಾರ್ಯಕ್ರಮ ಹದಿನೈದು ದಿನಗಳ ಕಾಲ ನಡೆಯುತ್ತದೆ. ಬೆಂಗಳೂರು ನಗರದ ಕಾರ್ಯಕರ್ತರ ಸಮಾವೇಶವನ್ನು ಜುಲೈ 17 ರಂದು ನಡೆಸುತ್ತೇವೆ. ಸುಮಾರು ಒಂದೂವರೆ ಲಕ್ಷ ಜನ ಇದರಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದ್ದಾರೆ.

ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ಬಿಬಿಎಂಪಿ ಚುನಾವಣೆ ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ವಿಧಾನಸಭಾ ಚುನಾವಣೆ ಡಿಸೆಂಬರ್‌ ವೇಳೆಗೆ ಬರಲಿದೆ. ಅದಕ್ಕಾಗಿಯೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿಲ್ಲ. ಸಿದ್ದರಾಮಯ್ಯನವರಿಗೆ ರಾಹುಲ್‌ ಗಾಂಧಿ ಚಿಂತೆ, ಬಸವರಾಜ ಬೊಮ್ಮಾಯಿಗೆ ಪ್ರಧಾನಿ ನರೇಂದ್ರ ಮೋದಿ ಚಿಂತೆ. ಆದರೆ, ಕುಮಾರಸ್ವಾಮಿಯವರಿಗೆ ರಾಜ್ಯದ ಜನರ ಚಿಂತೆ. ಬಿಜೆಪಿಯವರು ಡೂಪ್ಲಿಕೇಟ್‌ ನೀರಿಗೆ ಪೂಜೆ ಮಾಡುತ್ತಾರೆ. ನಾವು ಶುದ್ಧ ನೀರಿಗೆ ಪೂಜೆ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ಸಿಎಂ ಆಗುವ ಗುರಿಗೆ ಬದಲು ನಮ್ಮದು ಭ್ರಷ್ಟಾಚಾರದ ವಿರುದ್ಧ ಬಂಡಾಯ- ಶಿಂಧೆ

0

ನಾನು ಮುಖ್ಯಮಂತ್ರಿಯಾಗಲು ಬಂಡಾಯವೆದ್ದಿರಲಿಲ್ಲ.

ಶಿವಸೇನೆ, ಕಾಂಗ್ರೆಸ್ ಮೈತ್ರಿ ಸರ್ಕಾರದ ಭ್ರಷ್ಟಾಚಾರ ಸಹಿಸಲಾಗದೇ ನಾವೆಲ್ಲರೂ ಹೊರಬಂದಿದ್ದೇವೆ ಎಂದು ಶಿವಸೇನೆಯ ಬಂಡಾಯ ಶಾಸಕ ಏಕನಾಥ್ ಶಿಂಧೆ ಸಮರ್ಥಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಮುಂದಿನ ಸಿಎಂ ಏಕನಾಥ್​ ಶಿಂಧೆ ಎಂದು ಮಾಜಿ ಸಿಎಂ ದೇವೆಂದ್ರ ಫಡ್ನವಿಸ್​ ಘೋಷಿಸಿದ ಬೆನ್ನಲ್ಲೇ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಶಿವಸೇನೆ ಮತ್ತು ಎನ್​ಸಿಪಿ ಸರ್ಕಾರದ ಭ್ರಷ್ಟಾಚಾರದಿಂದ ಸಾಕಾಗಿ ಹೋಗಿದ್ದೆವು ಎಂದು ಹೇಳಿದ್ದಾರೆ.

ಶಿವಸೇನೆ ಮತ್ತು ಎನ್​ಸಿಪಿ ಮೈತ್ರಿ ಬಾಳಾಸಾಹೇಬ್​ ಠಾಕ್ರೆ ಅವರ ತತ್ವ ಸಿದ್ಧಾಂತದ ವಿರುದ್ಧವಾಗಿತ್ತು. ಅದೆಲ್ಲವನ್ನೂ ತೊರೆದು ಮೈತ್ರಿ ಮಾಡಿಕೊಂಡಿದ್ದ ಸರ್ಕಾರದಲ್ಲಿ ಸಚಿವರಿಂದಲೇ ನಡೆಯುತ್ತಿದ್ದ ಭ್ರಷ್ಟಾರದಿಂದ ಬೇಸತ್ತು ನಾವು ಹೊರಬಂದಿದ್ದೇವೆ.1980ರ ದಶಕದಲ್ಲಿ ಶಿವಸೇನೆ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ ಶಿಂಧೆ ಬಾಳಾಠಾಕ್ರೆ ಅವರಿಂದ ಹಿಂದುತ್ವದ ರಾಜಕೀಯ ಕಲಿತು ಮಹಾರಾಷ್ಟ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲಿರುವ ಏಕನಾಥ್​ ಶಿಂಧೆ ಅವರು ಕಿಂಗ್ ಮೇಕರ್ ಅಲ್ಲ ಕಿಂಗ್​​, ಈ ಎಲ್ಲಾ ಬೆಳವಣಿಗೆಗಳಲ್ಲಿ ನಾನು ಯಾವ ಪಾತ್ರವನ್ನೂ ವಹಿಸಿಲ್ಲ, ಇದೆಲ್ಲಾ ಶ್ರೇಯಸ್ಸು ಶಿಂಧೆ ಅವರಿಗೆ ಸೇರಬೇಕಿದೆ. ಹಾಗಾಗಿ ಮುಖ್ಯಮಂತ್ರಿ ಸ್ಥಾನವನ್ನು ಅವರಿಗೆ ಬಿಟ್ಟುಕೊಡುವ ಮೂಲಕ ಬಾಳಾಠಾಕ್ರೆ ಅವರಿಗೆ ಗೌರವ ನೀಡುತ್ತಿದ್ದೇವೆ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​ ತಿಳಿಸಿದ್ದಾರೆ.