ವಿಧಾನಸಭೆ ಚುನಾವಣೆ ಡಿಸೆಂಬರ್ ತಿಂಗಳಿನಲ್ಲಿ ಎದುರಾಗುವ ಸಾಧ್ಯತೆಗಳಿವೆ ಎಂದು ಭವಿಷ್ಯ ನುಡಿದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇದಕ್ಕಾಗಿ ಈಗಿನಿಂದಲೇ ಸಜ್ಜಾಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಿನ್ನೆ ಶುಕ್ರವಾರ ಜನತಾಮಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕನಿಷ್ಠ ಹದಿನೈದು ಕ್ಷೇತ್ರಗಳನ್ನುಗೆಲ್ಲುವ ವಾತಾವರಣ ಜೆಡಿಎಸ್‌ಗೆ ಇದೆ.
ವಿಧಾನಸಭೆ ಹಾಗೂ ಬಿಬಿಎಂಪಿ ಚುನಾವಣೆಗೆ ಕಾರ್ಯಕರ್ತರು ಸಂಘಟಿತರಾಗಬೇಕು. ಬೆಂಗಳೂರಿನಲ್ಲಿ ನಮ್ಮ ಪಕ್ಷ ಶಕ್ತಿಯುತವಾಗಿಲ್ಲ ಎಂಬ ಭಾವನೆಯನ್ನ ತೆಗೆದುಹಾಕಬೇಕು ಎಂದು ಹೇಳಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಪಕ್ಷದ ಮತಗಳಿವೆ. ಕಾರ್ಯಕರ್ತರು ಇದನ್ನು ಮರೆಯಬಾರದು. ನಾವೇನು ಅಧಿಕಾರ ಇದ್ದಾಗ ಅಕ್ರಮವಾಗಿ ಹಣ ಲೂಟಿ ಮಾಡಿಲ್ಲ. ನಮ್ಮಲ್ಲಿ ಮೂರು ಜನ ಶಾಸಕರು ಪಕ್ಷದಲ್ಲಿ ಇದ್ದರು. ಅವರೂ ಬೇರೆ ಕಡೆ ಹೋಗಿದ್ದಾರೆ. ಚಾಮರಾಜಪೇಟೆಯಲ್ಲಿ ನಮ್ಮ ನಾಯಕರು ಹೋರಾಟ ಮಾಡಿದರು. ಅದರಿಂದಾಗಿ ಚಾಮರಾಜಪೇಟೆ, ಪುಲಕೇಶಿನಗರ, ಮಹಾಲಕ್ಷ್ಮೀಲೇಔಟ್‌ನಲ್ಲೂ ಗೆದ್ದೆವು. ಪಕ್ಷ ಉಳಿದರೆ ನಾವೆಲ್ಲಾ ಉಳಿಯುತ್ತೇವೆ ಎಂದು ತಿಳಿಸಿದ್ದಾರೆ.
ದೇವರ ಆಶೀರ್ವಾದದಿಂದ 2 ಬಾರಿ ಮುಖ್ಯಮಂತ್ರಿಯಾಗಿ ಇತಿಹಾಸದ ಪುಟ ಸೇರಿದ್ದೇನೆ. ಈಗಿನ ಸರ್ಕಾರ ಲೂಟಿ ಹೊಡೆಯುತ್ತಿದೆ. ಇದನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು. ನನಗೆ ಒಂದು ಅವಕಾಶ ಕೊಡಲಿ. ನಮಗೆ ಇಪ್ಪತ್ತು ವರ್ಷ ಬೇಡ ಐದು ವರ್ಷದ ಅವಕಾಶ ಕೊಟ್ಟರೆ ಸಾಕು ಎಂದು ಮನವಿ ಮಾಡಿದ್ದಾರೆ.
ನಮ್ಮ ಕಾರ್ಯಕರ್ತರು ಪ್ರತಿ ಮನೆ ಮನೆಗೂ ಹೋಗಿ, ಅವರ ಆದ್ಯತೆ ಏನು ಎಂಬುದನ್ನು ಅರಿಯುವ ಕೆಲಸ ಮಾಡಿ. ಜನರಿಂದ ಎಲ್ಲಾ ಮಹಿತಿಯನ್ನು ಸಂಗ್ರಹಿಸೋಣ. ಮುಂದೆ ನಮ್ಮ ಸರ್ಕಾರ ಬಂದ ನಂತರ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಜನತಾ ಮಿತ್ರ ಕಾರ್ಯಕ್ರಮ ಹದಿನೈದು ದಿನಗಳ ಕಾಲ ನಡೆಯುತ್ತದೆ. ಬೆಂಗಳೂರು ನಗರದ ಕಾರ್ಯಕರ್ತರ ಸಮಾವೇಶವನ್ನು ಜುಲೈ 17 ರಂದು ನಡೆಸುತ್ತೇವೆ. ಸುಮಾರು ಒಂದೂವರೆ ಲಕ್ಷ ಜನ ಇದರಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ಬಿಬಿಎಂಪಿ ಚುನಾವಣೆ ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ವಿಧಾನಸಭಾ ಚುನಾವಣೆ ಡಿಸೆಂಬರ್ ವೇಳೆಗೆ ಬರಲಿದೆ. ಅದಕ್ಕಾಗಿಯೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿಲ್ಲ. ಸಿದ್ದರಾಮಯ್ಯನವರಿಗೆ ರಾಹುಲ್ ಗಾಂಧಿ ಚಿಂತೆ, ಬಸವರಾಜ ಬೊಮ್ಮಾಯಿಗೆ ಪ್ರಧಾನಿ ನರೇಂದ್ರ ಮೋದಿ ಚಿಂತೆ. ಆದರೆ, ಕುಮಾರಸ್ವಾಮಿಯವರಿಗೆ ರಾಜ್ಯದ ಜನರ ಚಿಂತೆ. ಬಿಜೆಪಿಯವರು ಡೂಪ್ಲಿಕೇಟ್ ನೀರಿಗೆ ಪೂಜೆ ಮಾಡುತ್ತಾರೆ. ನಾವು ಶುದ್ಧ ನೀರಿಗೆ ಪೂಜೆ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.