Wednesday, March 18, 2026
Wednesday, March 18, 2026
Home Blog Page 1490

ಸ್ನೇಹದ ಮೂಲಕ ಸೌಹಾರ್ದ- ಶಾಂತಿ

0

ಪ್ರತಿ ವರ್ಷ ವಿಶ್ವದಾದ್ಯಂತ ಸ್ನೇಹ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜನರು, ದೇಶಗಳು, ಸಂಸ್ಕೃತಿಗಳು ಮತ್ತು ವ್ಯಕ್ತಿಗಳ ನಡುವಿನ ಸ್ನೇಹವು ಶಾಂತಿಯನ್ನು ಪ್ರೇರೇಪಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜುಲೈ 30 ಅನ್ನು ಅಂತಾರಾಷ್ಟ್ರೀಯ ಸ್ನೇಹ ದಿನವೆಂದು ಘೋಷಿಸಿತು.

ಗಳಿಸಿದ ಹಣ ಬಳಸುವ ತನಕ, ಗಳಿಸಿದ ಸ್ನೇಹ ಮಣ್ಣಿನಲ್ಲಿ ಮಣ್ಣಾಗಿ ಹೋಗುವ ತನಕ. ಇಂತಹ ಸುಂದರ ಸ್ನೇಹದ ಬಂಧದಿಂದಾಗಿ ಜೀವನವು ಅದ್ಭುತಗಳನ್ನು ಮಾಡಬಲ್ಲದು.

ಸ್ನೇಹಿತರೊಂದಿಗೆ ಬೆರೆತಾಗ ಮನಸ್ಸಿನ ಒತ್ತಡಗಳನ್ನು ಕಡಿಮೆ ಮಾಡಬಹುದು. ಸ್ನೇಹವು ವ್ಯಕ್ತಿಗಳ ನಡುವೆ ಶಾಂತಿಯನ್ನು ನೆಲೆಸುತ್ತದೆ. ಸ್ವಾಭಿಮಾನವನ್ನು ಬಲಪಡಿಸುತ್ತದೆ. ಯಾವುದಕ್ಕೂ ಸರಿಸಾಟಿ ಇಲ್ಲದ ಈ ಸ್ನೇಹ ಸಂಬಂಧವನ್ನು ಗೌರವಿಸುವ ನಿಟ್ಟಿನಲ್ಲಿ ಜು.30ರಂದು ಅಂತಾರಾಷ್ಟ್ರೀಯ ಸ್ನೇಹ ದಿನವನ್ನಾಗಿ ಆಚರಿಸಲಾಗುತ್ತದೆ.

ಸ್ನೇಹ ದಿನ ಯಾವಾಗ ಆರಂಭವಾಯಿತು. ಇದರ ಇತಿಹಾಸ ಹಾಗೂ ಮಹತ್ವಗಳನ್ನು ತಿಳಿದುಕೊಳ್ಳೋಣ

ಹಾಲ್‌ಮಾರ್ಕ್ ಕಾರ್ಡ್‌ಗಳ ಸಂಸ್ಥಾಪಕ ಜಾಯ್ಸ್ ಹಾಲ್ ಅವರು 1930ರ ಆಗಸ್ಟ್ 2ರಂದು ಸ್ನೇಹ ದಿನವನ್ನು ಆಚರಿಸಲು ನಿರ್ಧರಿಸಿದರು. ಈ ಆಚರಣೆ ಅನೇಕ ವರ್ಷಗಳವರೆಗೆ ನಡೆದುಕೊಂಡು ಬಂತು. ಅನೇಕ ವರ್ಷಗಳ ನಂತರ ಜನರಲ್ಲಿ ಆಚರಣೆಯ ಆಸಕ್ತಿ ಕಡಿಮೆಯಾಯಿತು. ಈ ಆಚರಣೆಯ ಉದ್ದೇಶ ಶುಭಾಶಯ ಪತ್ರಗಳನ್ನು ಮಾರಾಟ ಮಾಡುವ ಉದ್ದೇಶ ಎಂದು ಭಾವಿಸಲಾಯಿತು. ಯುನೈಟೆಡ್ ಸ್ಟೇಟ್ಸ್​ನಲ್ಲಿ ಸ್ನೇಹ ದಿನಕ್ಕೆ ಘೋಷಣೆ ಮಾಡಲಾಗಿದ್ದ ರಜಾದಿನ ಕೂಡ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು.

1958ರಲ್ಲಿ ಅಂತಾರಾಷ್ಟ್ರೀಯ ನಾಗರಿಕ ಸಂಸ್ಥೆಯು ಜುಲೈ 30 ರಂದು ಪ್ರಥಮ ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಪ್ರಸ್ತಾಪಿಸಿತು.

ಸೌಹಾರ್ದದ ಮೂಲಕ ಶಾಂತಿಯುತ ಸಂಸ್ಕೃತಿಯನ್ನು ಬೆಳೆಸಲು ಪ್ರಚಾರ ನಡೆಸಲಾಯಿತು. ವರ್ಷಗಳ ಬಳಿಕ 1998 ರಲ್ಲಿ ವಿಶ್ವಸಂಸ್ಥೆಯ ಕಾರ್ಯದರ್ಶಿ ಜನರಲ್ ಕೋಫಿ ಅನ್ನಾನ್ ಅವರ ಪತ್ನಿ ನೇನ್ ಅನ್ನನ್ ಅವರು ವಿನ್ನಿ ದಿ ಪೂಹ್ ಅವರನ್ನು ಸ್ನೇಹಕ್ಕಾಗಿ ವಿಶ್ವದ ರಾಯಭಾರಿ ಎಂದು ಕರೆದರು. ಅಂತಿಮವಾಗಿ, 2011ರ ಏಪ್ರಿಲ್ 27 ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯು ಜುಲೈ 30 ಅನ್ನು ಅಧಿಕೃತ ಅಂತಾರಾಷ್ಟ್ರೀಯ ಸ್ನೇಹ ದಿನವೆಂದು ಘೋಷಿಸಿತು.

ಜನರು, ದೇಶಗಳು, ಸಂಸ್ಕೃತಿಗಳು ಹಾಗೂ ವ್ಯಕ್ತಿಗಳ ನಡುವಿನ ಸ್ನೇಹವು ಶಾಂತಿಯನ್ನು ಪ್ರೇರೇಪಿಸುತ್ತದೆ. ಮತ್ತು ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಎಂಬ ಉದ್ದೇಶದಿಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜುಲೈ 30 ಅನ್ನು ಅಂತಾರಾಷ್ಟ್ರೀಯ ಸ್ನೇಹ ದಿನವೆಂದು ಘೋಷಿಸಿತು. ಈ ದಿನವನ್ನು ವಿಶೇಷ ದಿನವನ್ನಾಗಿ ಮಾಡಲು ಪ್ರಪಂಚದಾದ್ಯಂತ ಜನರು ತಮ್ಮ ಸ್ನೇಹಿತರೊಂದಿಗೆ ಹೊರಗೆ ಹೋಗುತ್ತಾರೆ. ಮತ್ತು ಒಟ್ಟಿಗೆ ಒಂದಷ್ಟು ಸಮಯ ಕಳೆಯುತ್ತಾರೆ. ಪಾರ್ಟಿಗಳನ್ನು ಆಯೋಜಿಸುತ್ತಾರೆ. ಲಾಂಗ್ ರೈಡ್ ಹೋಗುತ್ತಾರೆ.ಪ್ರವಾಸ ಕೈಗೊಳ್ಳುತ್ತಾರೆ.ಸುತ್ತಾಡಲು ಹೋಗುತ್ತಾರೆ. ಇನ್ನೂ ಕೆಲವರು ಉಡುಗೊರೆಗಳು, ಸಿಹಿತಿಂಡಿಗಳು, ಕಾರ್ಡ್‌ಗಳು ಮತ್ತು ಸ್ನೇಹ ಬ್ಯಾಂಡ್‌ಗಳನ್ನು ಕೂಡ ನೀಡಿ ಸ್ನೇಹ ದಿನವನ್ನು ಆಚರಿಸಿಕೊಳ್ಳುತ್ತಾರೆ.

ಕರಾವಳಿ ಮಲೆನಾಡು ಪ್ರದೇಶಗಳಲ್ಲಿ ಮತ್ತೆ ಮಳೆ ಹುಯ್ಯಲಿದೆ

0

ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಾವಣಗೆರೆ, ಚಿತ್ರದುರ್ಗ,ತುಮಕೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 24 ಗಂಟೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮುಂದಿನ 5 ದಿನ ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಆಗಸ್ಟ್ 1 ಹಾಗೂ 2 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾರತೀಯ ರೈಲ್ವೆಯು ಮಹಿಳೆಯರಿಗಾಗಿ ಕೆಲವು ಆಸನಗಳನ್ನ ಮೀಸಲಿಡಲಿದೆ

0

ಭಾರತೀಯ ರೈಲ್ವೆಯಲ್ಲಿ ಮಹಿಳಾ ಪ್ರಯಾಣಿಕರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು ಇನ್ನು ಮುಂದೆ ಮಹಿಳೆಯರಿಗೆ ರೈಲಿನಲ್ಲಿ ಕನ್ಫರ್ಮ್ ಸೀಟ್ ಸಿಗಲಿದೆ ಎಂದು ರೈಲ್ವೇ ಸಚಿವರು ಘೋಷಿಸಿದ್ದಾರೆ.

ರೈಲುಗಳಲ್ಲಿ ಮಹಿಳೆಯರ ಆರಾಮದಾಯಕ ಪ್ರಯಾಣಕ್ಕಾಗಿ ಭಾರತೀಯ ರೈಲ್ವೇ ಹಲವು ಸೌಲಭ್ಯಗಳನ್ನು ಆರಂಭಿಸಿದೆ.
ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯ ನೂತನ ಕ್ರಮ ಕೈಗೊಂಡಿದೆ.

ಈಗ ಮಹಿಳೆಯರು ರೈಲಿನಲ್ಲಿ ಸೀಟಿಗಾಗಿ ಚಿಂತಿಸಬೇಕಾಗಿಲ್ಲ. ಮಹಿಳೆಯರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಬಸ್‌ಗಳು ಮತ್ತು ಮೆಟ್ರೋ ರೈಲುಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸೀಟುಗಳನ್ನು ಮೀಸಲಿಡುವಂತೆಯೇ ಈಗ ಭಾರತೀಯ ರೈಲ್ವೇ ಕೂಡ ಮಹಿಳೆಯರಿಗೆ ಸೀಟುಗಳನ್ನು ಮೀಸಲಿಡಲಿದೆ ಎಂದು ರೈಲ್ವೆ ಸಚಿವರು ಘೋಷಿಸಿದ್ದಾರೆ. 

ಭಾರತೀಯ ರೈಲ್ವೇಯು ಈಗ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ವಿಶೇಷ ಬರ್ತ್‌ಗಳನ್ನು ವ್ಯವಸ್ಥೆ ಮಾಡಲಿದೆ. ದೂರದ ರೈಲುಗಳಲ್ಲಿ ಮಹಿಳೆಯರ ಆರಾಮದಾಯಕ ಪ್ರಯಾಣಕ್ಕಾಗಿ ಭಾರತೀಯ ರೈಲ್ವೇ ರಿಸರ್ವ್ ಬರ್ತ್ ಸೇರಿದಂತೆ ಹಲವು ಸೌಲಭ್ಯಗಳನ್ನು ಆರಂಭಿಸಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. 

ಮುಂದಿನ ದಿನಗಳಲ್ಲಿ ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೂರದ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಸ್ಲೀಪರ್ ಕ್ಲಾಸ್‌ನಲ್ಲಿ ಆರು ಬರ್ತ್‌ಗಳನ್ನು ಕಾಯ್ದಿರಿಸಲಾಗುವುದು. ಗರೀಬ್ ರಥ, ರಾಜಧಾನಿ, ಡುರೊಂಟೊ ಸೇರಿದಂತೆ ಸಂಪೂರ್ಣ ಹವಾನಿಯಂತ್ರಿತ ಎಕ್ಸ್‌ಪ್ರೆಸ್ ರೈಲುಗಳ ಮೂರನೇ ಎಸಿ ಕೋಚ್‌ನಲ್ಲಿ (3ಎಸಿ ವರ್ಗ) ಆರು ಬರ್ತ್‌ಗಳನ್ನು ಮಹಿಳಾ ಪ್ರಯಾಣಿಕರಿಗೆ ಕಾಯ್ದಿರಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.

ಪ್ರತಿ ಸ್ಲೀಪರ್ ಕೋಚ್‌ನಲ್ಲಿ ಆರರಿಂದ ಏಳು ಲೋವರ್ ಬರ್ತ್‌ಗಳು, ಹವಾನಿಯಂತ್ರಿತ 3 ಟೈಯರ್ (3 ಎಸಿ) ಕೋಚ್‌ಗಳಲ್ಲಿ ನಾಲ್ಕರಿಂದ ಐದು ಲೋವರ್ ಬರ್ತ್‌ಗಳು ಹಿರಿಯ ನಾಗರಿಕರಿಗೆ, 45 ವರ್ಷ ಮತ್ತು ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಮತ್ತು ಗರ್ಭಿಣಿಯರಿಗೆ ಮೀಸಲಿಡಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.

ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಸಚಿವರು ಭರವಸೆ ನೀಡಿದ್ದಾರೆ. ಇದರೊಂದಿಗೆ ರೈಲುಗಳು ಮತ್ತು ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರು ಹಾಗೂ ಇತರ ಪ್ರಯಾಣಿಕರ ಸುರಕ್ಷತೆಗಾಗಿ ಜಿಆರ್‌ಪಿ ಸಹಾಯದಿಂದ ರೈಲ್ವೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. 

ಸ್ಟೇಫಿಟ್ ಹೆಲ್ತ್ ಕಂಪನಿ ಸೇವಾನ್ಯೂನತೆ: ಗ್ರಾಹಕರಿಗೆ ಪರಿಹಾರ

0

ಸ್ಟೇಫಿಟ್ ಹೆಲ್ತ್ ಮತ್ತು ವಲ್ರ್ಡ್ ಪ್ರೈ.ಲಿ ಇವರ ವಿರುದ್ದ ಅರ್ಜಿದಾರರಾದ ಯಶಸ್ವಿನಿ.ಜೆ ಇವರು ತಾವು ಖರೀದಿಸಿದ ಸರಕಿನ ಸೇವಾನ್ಯೂನ್ಯತೆಗಾಗಿ ಸೂಕ್ತ ಪರಿಹಾರ ಕೋರಿ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ದಾಖಲಿಸಿದ್ದ ಪ್ರಕರಣದಲ್ಲಿ ಪೀಠವು ಎದುರುದಾರರು ಅರ್ಜಿದಾರರಿಗೆ ಸರಕಿನ ಹಣ, ನ್ಯಾಯಾಲಯದ ಮತ್ತು ಇತರೆ ಖರ್ಚುವೆಚ್ಚ ಪಾವತಿಸುವಂತೆ ಆದೇಶಿಸಿದೆ.

ಅರ್ಜಿದಾರರು ತಮ್ಮ ಸ್ವಂತ ಉಪಯೋಗಕ್ಕಾಗಿ ಎದುರದಾರ ಸ್ಟೇಫಿಟ್ ಹೆಲ್ತ್ ಮತ್ತು ವಲ್ರ್ಡ್ ಪ್ರೈ.ಲಿ ನಿಂದ ರೂ.25,000 ಕ್ಕೆ ಮ್ಯಾಗ್ನೆಟಿಕ್ ಎಲಿಪ್ಟಿಕಲ್ ಬೈಕನ್ನು ಖರೀದಿಸಿರುತ್ತಾರೆ. ಕೆಲ ದಿನಗಳ ನಂತರ ಬೈಕ್ ಕರ್ಕಶ ಶಬ್ದ ಮಾಡಿದಾಗ ಸರಿಪಡಿವಂತೆ ಕೋರಿದ್ದಾಗ್ಯೂ ಎದುರುದಾರರು ಸರಿಪಡಿಸುವಲ್ಲಿ ವಿಫಲರಾಗಿರುತ್ತಾರೆ. ಹಾಗೂ ಎದುರದಾರ ಸಂಸ್ಥೆಯ ವ್ಯವಸ್ಥಾಪಕರ ಸಲಹೆ ಮೇರೆಗೆ ಇನ್ನೂ ಹೆಚ್ಚಿನ ಸುಧಾರಿತ ಬೈಕನ್ನು ಹೆಚ್ಚುವರಿ ರೂ.20,000 ನೀಡಿ ಖರೀದಿಸುತ್ತಾರೆ. ಆದರೆ ಈ ಬೈಕ್ ಕೂಡ ಖರೀದಿಯ ಕೆಲವೇ ದಿನಗಳಲ್ಲಿ ಕರ್ಕಶ ಶಬ್ದ ಉಂಟು ಮಾಡಲಾರಂಭಿಸಿದ್ದು, ಎದುರುದಾರರು ಬೈಕ್ ಸರಿಪಡಿಸುವಲ್ಲಿ ನಿರ್ಲಕ್ಷ್ಯ ತೋರಿ, ತಮ್ಮ ಹೊಣೆಗಾರಿಕೆ ಇಲ್ಲವೆಂದು ತಿಳಿಸಿರುವನ್ವಯ ನೊಂದ ಅರ್ಜಿದಾರರು ಸೂಕ್ತ ಪರಿಹಾರ ಕೋರಿ ಪ್ರಕರಣ ದಾಖಲಿಸಿರುತ್ತಾರೆ.

ದಾಖಲೆಗಳು, ವಾಸ್ತವಾಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ. ಪೀಠವು ಎದುರುದಾರರಿಗೆ ಬೈಕಿನ ಖರೀದಿಯ ಮೊತ್ತ ರೂ.45,000 ಗಳು, ವಾರ್ಷಿಕ ನಷ್ಟ ಪರಿಹಾರ ಮೊತ್ತ ರೂ.5,000 ಹಾಗೂ ವ್ಯಾಜ್ಯ ಖರ್ಚು ರೂ.2000/- ಗಳನ್ನು ಶೇ.7 ಬಡ್ಡಿ ದರ ಸೇರಿಸಿ ಆದೇಶದ ದಿನಾಂಕದಿಂದ 45 ದಿನಗಳ ಒಳಗೆ ಹಿಂತಿರುಗಿಸಬೇಕೆಂದು ಆದೇಶಿಸಿದೆ.

ಮುಖ್ಯಮಂತ್ರಿ ಜಿಲ್ಲಾ ಪ್ರವಾಸದಲ್ಲಿದ್ದಾಗಲೇ ಕೊಲೆ ಪ್ರಕರಣ- ಸಿದ್ಧರಾಮಯ್ಯ ಟೀಕೆ

0

ಸುಳ್ಯದಲ್ಲಿ ಮಸೂದ್ ಮತ್ತು ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿರುವ ಬೆನ್ನಲ್ಲಿಯೇ ಇಂದು ಸುರತ್ಕಲ್ ನಲ್ಲಿ ಫಾಝೀಲ್ ಎಂಬ ಯುವಕನ ಕೊಲೆ ನಡೆದಿರುವುದು ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಲೆಗಡುಕರು ಯಾವುದೇ ಪಕ್ಷ, ಪಂಥ, ಜಾತಿ, ಧರ್ಮದವರಾಗಿದ್ದರೂ ಅವರನ್ನು ಪತ್ತೆ ಹಚ್ಚಿ ಜೈಲಿಗೆ ಅಟ್ಟಬೇಕಾಗಿರುವ ರಾಜ್ಯ ಬಿಜೆಪಿ ಸರ್ಕಾರ ಹೆಣಗಳನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಹಾಕುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಟೀಕಿಸಿದ್ದಾರೆ.
ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟಬೇಕು. ಆದರೆ ರಾಜ್ಯ ಬಿಜೆಪಿ ಸರ್ಕಾರ ಸರ್ಕಾರ ತನ್ನ ವೈಫಲ್ಯ ಮುಚ್ಚಿಹಾಕಲು ಮತ್ತು ಜನಾಕ್ರೋಶವನ್ನು ಶಾಂತಗೊಳಿಸಲು ತನಿಖೆಯ ನೆಪದಲ್ಲಿ ಆರೋಪಿಗಳ ಹೊರತಾಗಿ ಅಮಾಯಕರಿಗೂ ಕಿರುಕುಳ ನೀಡುವುದು ಸಲ್ಲದು ಎಂದು ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.

ದಕ್ಷಿಣ ಕನ್ನಡದ ಸರಣಿ ಹತ್ಯೆಗಳನ್ನು ಖಂಡಿಸದೆ, ದುಷ್ಕರ್ಮಿಗಳನ್ನು ಬಂಧಿಸಿ ಜೈಲಿಗೆ ಅಟ್ಟದೆ, ಅವರ ದುಷ್ಕೃತ್ಯವನ್ನು ಕ್ರಿಯೆಗೆ-ಪ್ರತಿಕ್ರಿಯೆ ಎಂಬ ಸಮರ್ಥನೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಇದಕ್ಕೆ ಹೊಣೆಗಾರರು. ಅವರು ಜಿಲ್ಲೆಯಲ್ಲಿರುವಾಗಲೇ ನಡೆದಿರುವ ಹತ್ಯೆ ಅವರ ಮುಖಕ್ಕೆ ಮಂಗಳಾರತಿ ಮಾಡಿದಂತಿದೆ ಎಂದು ಟೀಕಿಸಿದ್ದಾರೆ.

ಅಸಮರ್ಥ ಗೃಹಸಚಿವರಿಗೆ ಪೊಲೀಸ್ ಇಲಾಖೆಯ ಮೇಲೆ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ. ಇದರಿಂದಾಗಿ ದುಷ್ಕರ್ಮಿಗಳು ರಾಜಾರೋಷವಾಗಿ ಹತ್ಯಾಕಾಂಡವನ್ನು ಮುಂದುವರಿಸಿದ್ದಾರೆ. ತಕ್ಷಣ ಗೃಹಸಚಿವ ಆರಗ ಜ್ಞಾನೇಂದ್ರರನ್ನು ಕಿತ್ತುಹಾಕದೆ ಇದ್ದರೆ ರಾಜ್ಯದಲ್ಲಿ ಜನ ಮನೆಯಿಂದ ಹೊರಗೆ ಬರುವುದೂ ಕಷ್ಟವಾಗಬಹುದು ಎಂದು ದೂರಿದ್ದಾರೆ.

ಸ್ಮಶಾನ ಜಾಗ ನೀಡಿದ ಬಗ್ಗೆ ರಾಜ್ಯ ಸರ್ಕಾರದಿಂದ ಹೈಕೋರ್ಟಿಗೆ ಮಾಹಿತಿ ಸಲ್ಲಿಕೆ

0

ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಿರುವ ಬಗ್ಗೆ ರಾಜ್ಯದ ಎಲ್ಲಾ 31 ಜಿಲ್ಲೆಗಳ ಸಮಗ್ರ ಮಾಹಿತಿಯನ್ನು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಒದಗಿಸಿದೆ.

ಈ ಕುರಿತು ಬೆಂಗಳೂರು ನಿವಾಸಿ ಮಹಮ್ಮದ್‌ ಇಕ್ಬಾಲ್‌ ಎಂಬುವರು ಸಲ್ಲಿಸಿರುವ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿಯು ಹಿರಿಯ ನ್ಯಾಯಮೂರ್ತಿ ಬಿ.
ವೀರಪ್ಪ ಹಾಗೂ ನ್ಯಾ.ಕೆ.ಎಸ್‌. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆ ಬಂದಿತ್ತು.

ಈ ವೇಳೆ ಸರ್ಕಾರದ ಪರ ವಕೀಲರು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಸಲ್ಲಿಸಿರುವ ಸಮಗ್ರ ಮಾಹಿತಿಯನ್ನು ನ್ಯಾಯಪೀಠಕ್ಕೆ ಒದಗಿಸಿದರು. ರಾಜ್ಯದ ಒಟ್ಟು 29,616 ಗ್ರಾಮಗಳ ಪೈಕಿ ಈವರೆಗೆ 27,099 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒದಗಿಸಲಾಗಿದ್ದು, ಇನ್ನೂ 1,454 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒದಗಿಸಬೇಕಾಗಿದೆ. 1,006 ಗ್ರಾಮಗಳು ಬೇಚರಾಕ್‌ ಗ್ರಾಮಗಳಾಗಿವೆ ಎಂದು ಸರ್ಕಾರ ನೀಡಿರುವ ಮಾಹಿತಿಯಲ್ಲಿ ವಿವರಿಸಲಾಗಿದೆ.

ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಿರುವ ಬಗ್ಗೆ ರಾಜ್ಯದ ಎಲ್ಲಾ 31 ಜಿಲ್ಲೆಗಳ ಗ್ರಾಮವಾರು ಮಾಹಿತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ 2022ರ ಜೂ.30ರಂದು ಆದೇಶ ನೀಡಿತ್ತು.

ಅದರಂತೆ ಸರ್ಕಾರ, ಎಲ್ಲಾ 31 ಜಿಲ್ಲೆಗಳ 27,099 ಗ್ರಾಮಗಳಲ್ಲಿ ಸ್ಮಶಾನ ಜಾಗ ಒದಗಿಸಿರುವ ಜಿಲ್ಲಾಧಿಕಾರಿಗಳ ಆದೇಶ, ಆರ್‌ಟಿಸಿ ಮತ್ತು ಕಂದಾಯ ದಾಖಲೆಗಳ ಸಮಗ್ರ ಮಾಹಿತಿಯನ್ನು ಸಲ್ಲಿಸಿದೆ.

ಪ್ರವೀಣ್ ಹತ್ಯೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ

0

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಬಿಜೆಪಿ ಯುವಮೋರ್ಚಾದ ಜಿಲ್ಲಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಇಬ್ಬರು ಆರೋಪಿಗಳನ್ನು ಆ.11ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಯಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯ ಪೊಲೀಸರು ಝಾಕಿರ್ ಮತ್ತು ಶಫೀಕ್ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಇಬ್ಬರು ಆರೋಪಿಗಳನ್ನು ಪುತ್ತೂರಿನ ಪ್ರಧಾನ ಹಿರಿಯ ವ್ಯಾವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಬಂಧಿತ ಆರೋಪಿಗಳಿಬ್ಬರಿಗೂ ನ್ಯಾಯಾಧೀಶ ಗೌಡ ಆರ್.ಪಿ ಅವರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆಗೆ ಅಗತ್ಯವಿದ್ದಲ್ಲಿ ಮತ್ತೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಿದ್ದಾರೆ ಎಂದು ಸರ್ಕಾರಿ ಸಹಾಯಕ ಅಭಿಯೋಜಕಿ ಕವಿತಾ ಅವರು ಮಾಹಿತಿ ನೀಡಿದ್ದಾರೆ.

ಅಮೆರಿಕ ಜೊತೆ ಮಿಲಿಟರಿ ಸಂಘರ್ಷಕ್ಕೆ ಕೊರಿಯ ಸಿದ್ಧ- ಮಾಧ್ಯಮ ವರದಿ

0

ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ತನ್ನ ದೇಶವು ತನ್ನ ಪರಮಾಣು ಯುದ್ಧ ನಿರೋಧಕವನ್ನು ಸಜ್ಜುಗೊಳಿಸಲು ಹಾಗೂ ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಮಿಲಿಟರಿ ಘರ್ಷಣೆಗೆ ಸಿದ್ಧವಾಗಿದೆ ಎಂದು ಕೊರಿಯಾ ಮಾಧ್ಯಮ ವರದಿ ಮಾಡಿದೆ.

ಉತ್ತರವು 2017 ರಿಂದ ಉತ್ತರ ಕೊರಿಯಾವು ತನ್ನ ಮೊದಲ ಪರಮಾಣು ಪರೀಕ್ಷೆಯನ್ನು ನಡೆಸಬಹುದು ಎಂಬ ಮಾಹಿತಿಯನ್ನು ನೀಡಿದೆ.

ಅಧಿಕೃತ KCNA ಸುದ್ದಿ ಸಂಸ್ಥೆ ಪ್ರಕಾರ, ಜುಲೈ 27 ರ ಕೊರಿಯನ್ ಯುದ್ಧದ ಕದನವಿರಾಮದ 69ನೇ ವಾರ್ಷಿಕೋತ್ಸವವನ್ನು ನೆನಪಿಸಿಕೊಳ್ಳಲಾಗಿದೆ ಎಂದು ಕಾರ್ಯಕ್ರಮವೊಂದರಲ್ಲಿ ಕಿಮ್ ಹೇಳಿಕೆಗಳನ್ನು ನೀಡಿದರು.

ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ಯುದ್ಧಕ್ಕಾಗಿ ಪರಮಾಣು ಬೆದರಿಕೆಗಳನ್ನು ತಂದಿದೆ ಏಕೆಂದರೆ ಸಂಘರ್ಷದಲ್ಲಿ ಉತ್ತರ ಕೊರಿಯಾಕ್ಕೆ ತನ್ನ ಆತ್ಮರಕ್ಷಣೆಯನ್ನು ಹೆಚ್ಚಿಸುವ ತುರ್ತು ಕಾರ್ಯವನ್ನು ಸಾಧಿಸುವ ಅಗತ್ಯವಿದೆ ಎಂದು ಕಿಮ್ ಹೇಳಿದರು. ನಮ್ಮ ಸಶಸ್ತ್ರ ಪಡೆಗಳು ಯಾವುದೇ ಬಿಕ್ಕಟ್ಟಿಗೆ ಪ್ರತಿಕ್ರಿಯಿಸಲು ಸಂಪೂರ್ಣವಾಗಿ ಸಿದ್ಧವಾಗಿವೆ ಮತ್ತು ನಮ್ಮ ರಾಷ್ಟ್ರದ ಪರಮಾಣು ಯುದ್ಧ ನಿರೋಧಕವು ತನ್ನ ಸಂಪೂರ್ಣ ಶಕ್ತಿಯನ್ನು ನಿಷ್ಠೆಯಿಂದ, ನಿಖರವಾಗಿ ಮತ್ತು ತ್ವರಿತವಾಗಿ ತನ್ನ ಕಾರ್ಯಾಚರಣೆಗೆ ಸಜ್ಜುಗೊಳಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅವರು ಹೇಳಿದರು.

2017 ರಿಂದ ತನ್ನ ಮೊದಲ ಪರಮಾಣು ಪರೀಕ್ಷೆಯನ್ನು ನಡೆಸಲು ಪಯೋಂಗ್ಯಾಂಗ್ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎಂದು ಸಿಯೋಲ್ ಮತ್ತು ವಾಷಿಂಗ್ಟನ್ ಅಧಿಕಾರಿಗಳು ಹೇಳಿದ ನಂತರ ಈ ಹೇಳಿಕೆಯನ್ನು ನೀಡಿದ್ದಾರೆ.ದಕ್ಷಿಣ ಕೊರಿಯಾದ ಅಂತರ್-ಕೊರಿಯನ್ ವ್ಯವಹಾರಗಳ ಸಚಿವರು ಈ ಕಾರ್ಯದ ಸಮಯದಲ್ಲಿ ಪರೀಕ್ಷೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಉತ್ತರ ಕೊರಿಯಾ ಈ ಪರೀಕ್ಷೆಗೆ ಮುಂದಾದರೆ ಅದರ ಸೈಬರ್‌ಟಾಕ್ ಸಾಮರ್ಥ್ಯಗಳನ್ನು ತಡೆಯುವ ಗುರಿಯನ್ನು ಒಳಗೊಂಡಿರುವ ಕ್ರಮಗಳು ಸೇರಿದಂತೆ ಬಲವಾದ ನಿರ್ಬಂಧಗಳನ್ನು ಎದುರಿಸುವ ಸಾಧ್ಯತೆಯಿದೆ ಎಂದು ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವರು ಹೇಳಿದ್ದಾರೆ. ವಾಷಿಂಗ್ಟನ್ ಯುದ್ಧದ ಸುಮಾರು 70 ವರ್ಷಗಳ ನಂತರ ಉತ್ತರ ಕೊರಿಯಾ ವಿರುದ್ಧ ದಕ್ಷಿಣ ಕೊರಿಯಾದೊಂದಿಗೆ ಅಪಾಯಕಾರಿ, ಕಾನೂನುಬಾಹಿರ ಪ್ರತಿಕೂಲ ಕೃತ್ಯಗಳನ್ನು ಮುಂದುವರೆಸಿದೆ ಮತ್ತು ದೇಶವನ್ನು ಆಕ್ರಮಣಗೊಳಿಸುವ ನಡವಳಿಕೆಯನ್ನು ಸಮರ್ಥಿಸಲು ಪ್ರಯತ್ನಿಸುತ್ತಿದೆ ಎಂದು ಕಿಮ್ ಹೇಳಿದರು.

ಮಿಲಿಟರಿ ಚಟುವಟಿಕೆಗಳ ಮೇಲೆ ಯುನೈಟೆಡ್ ಸ್ಟೇಟ್ಸ್ ಎರಡು ಮಾನದಂಡಗಳನ್ನು ಹೊಂದಿದೆ ಮತ್ತು ಪಯೋಂಗ್ಯಾಂಗ್ ಕಡೆಗೆ ಪ್ರತಿಕೂಲ ನೀತಿಯನ್ನು ಅನುಸರಿಸುತ್ತಿದೆ ಎಂದು ಉತ್ತರ ಕೊರಿಯಾ ಆರೋಪಿಸಿದೆ, ನಿರ್ಬಂಧಗಳ ಪರಿಹಾರಕ್ಕೆ ಪ್ರತಿಯಾಗಿ ದೇಶದ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ಕಿತ್ತುಹಾಕುವ ಗುರಿಯನ್ನು ಹೊಂದಿರುವ ಮಾತುಕತೆಗಳ ಪುನರಾರಂಭಕ್ಕೆ ಇದು ಅಡ್ಡಿಯಾಗುತ್ತದೆ ಎಂದು ಹೇಳಿದ್ದಾರೆ.

ಅಮೆರಿಕದೊಂದಿಗಿನ ಯಾವುದೇ ಮಿಲಿಟರಿ ದಾಳಿಗೆ ಉತ್ತರ ಕೊರಿಯಾ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ನಾನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ ಎಂದು ಕಿಮ್ ಹೇಳಿದರು. ಇತ್ತೀಚಿನ ತಿಂಗಳುಗಳಲ್ಲಿ ಉತ್ತರ ಕೊರಿಯಾ ಹೈಪರ್ಸಾನಿಕ್ ಕ್ಷಿಪಣಿಗಳು ಮತ್ತು ಕ್ಷಿಪಣಿಗಳನ್ನು ಪರೀಕ್ಷಿಸಿದೆ ಈ ಮೂಲಕ ನಾವು ಯುದ್ಧ ಮಾಡಲು ಸಿದ್ದ ಎಂದು ಹೇಳಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ ಶಾಲೆಗಳಲ್ಲಿ ವಿವಿಧ ಸ್ಪರ್ಧೆ ಏರ್ಪಡಿಸಲು ಸೂಚನೆ

0

ಅಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಾಗೂ ಮದ್ರಸಾಗಳಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ನಡೆಸುವಂತೆ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.

ಅಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರಭಕ್ತಿ ಮೂಡಿಸುವುದಕ್ಕಾಗಿ ಗಾಯನ, ಪ್ರಬಂಧ ಸ್ಪರ್ಧೆ, ಸ್ವಾತಂತ್ರ್ಯ ಹೋರಾಟ, ಹೋರಾಟ ಗಾರರ ವೇಷಭೂಷಣ ಹಾಗೂ ರಾಷ್ಟ್ರ ಬಾವುಟದ ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಬೇಕು. ವಿಜೇತರಿಗೆ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಬಹುಮಾನ ವಿತರಿಸುವಂತೆ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

1 ರಿಂದ 3ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರ ಧ್ವಜದ ಚಿತ್ರ ಬಿಡಿಸುವುದು, ವೇಷಭೂಷಣ ಸ್ಪರ್ಧೆ
4 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಗಾಯನ, ಭಾಷಣ ಸ್ಪರ್ಧೆ
6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಭಾವನೆ ಮೂಡಿಸುವ ಗೀತ ಗಾಯನ, ಭಾಷಣ ಮತ್ತು ಸ್ವತಂತ್ರ ಭಾರತದ ಅಭಿವೃದ್ಧಿ ಕುರಿತು ಪ್ರಬಂಧ ಸ್ಪರ್ಧೆ.

ಶಿವಮೊಗ್ಗ ಚಿಕ್ಕಮಗಳೂರು ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾರಿ ಮಳೆ ಎಲ್ಲೋ ಅಲರ್ಟ್

0

ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇಂದಿನಿಂದ 2 ದಿನಗಳ ಕಾಲ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜುಲೈ 29, 30 ರಂದು ಕರಾವಳಿ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇಂದು 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಾಳೆ ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಹಾಗೂ ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿಗೆ ಎಲ್ಲೋ ಅಲರ್ಟ್ ನೀಡಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಮತರ, ತುಮಕೂರು, ಚಾಮರಾಜನಗರ, ಕಲಬುರಗಿ, ಬಳ್ಳಾರಿ, ಬೀದರ್ ಜಿಲ್ಲೆಗಳು ಮತ್ತು ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ತಿಳಿಸಿದೆ.