Wednesday, March 18, 2026
Wednesday, March 18, 2026
Home Blog Page 1491

ಬಿಜೆಪಿ ಸರ್ಕಾರ ಹಣ ಲೂಟಿ ಮಾಡುತ್ತಿದೆ ಜನಪರ ಕಾಳಜಿಯಿಲ್ಲ- ಕುಮಾರಸ್ವಾಮಿ

0

ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಶಕ್ತಿ ವೃದ್ಧಿ ಮಾಡಿಕೊಳ್ಳುವ ಹೋರಾಟದಲ್ಲಿ ರಾಜಕಾರಣಿಗಳ ಮಕ್ಕಳು ಬಲಿಯಾಗುತ್ತಿಲ್ಲ. ಬದಲಿಗೆ ಅಮಾಯಕರ, ಬಡವರ ಮಕ್ಕಳು ಅಮಾನುಷವಾಗಿ ಬಲಿಯಾಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಬೆಳ್ಳಾರೆಯಲ್ಲಿ ಪ್ರವೀಣ್ ಎಂಬ ಯುವಕನ ಹತ್ಯೆಯಾಗಿದ್ದು, ಆತನ ಅಗಲಿಕೆಯಿಂದ ಅವರ ಇಡೀ ಕುಟುಂಬ ಈಗ ಬೀದಿಗೆ ಬಂದಿದೆ ಎಂದು ಕುಮಾರಸ್ವಾಮಿ ನೋವಿನಿಂದ ನುಡಿದರು.

ಮೈಸೂರಿನ ಕೆ.ಆರ್.ನಗರದಲ್ಲಿ ಡಾ.ಅಂಬೇಡ್ಕರ್ ಭವನಕ್ಕೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದ, ಮಾಜಿ ಮುಖ್ಯಮಂತ್ರಿಗಳು ಪರೋಕ್ಷವಾಗಿ ಬಿಜೆಪಿಯ ಸ್ವಾರ್ಥ ರಾಜಕಾರಣವನ್ನು ಕಟುವಾಗಿ ಟೀಕಿಸಿದರು.
ಬಿಜೆಪಿ ಸರಕಾರದ ಆಡಳಿತಲ್ಲಿ ಕಾರ್ಪೋರೇಟ್ ಕಂಪನಿಗಳು ಲಕ್ಷಾಂತರ ಕೋಟಿ ಕುಳಗಳಾಗುತ್ತಿವೆ. ಒಬ್ಬ ಕಾರ್ಪೋರೇಟ್ ವ್ಯಕ್ತಿಯ ಒಂದು ದಿನದ ಆದಾಯ 1 ಸಾವಿರದ 348 ಕೋಟಿ ರೂಪಾಯಿಗಳಾಗಿದೆ ಎಂದರು.

ಬಿಜೆಪಿ ಸರಕಾರ ಧನಿಕರ ಪರ ನೀತಿಯನ್ನು ಹೊಂದಿದೆ. ಆದರೆ ದೇಶದಲ್ಲಿ ಕೋಟ್ಯಂತರ ಜನರು ಸ್ವಾತಂತ್ರ್ಯ ಬಂದು ೭೫ ವರ್ಷವಾದ ಹೊತ್ತಿನಲ್ಲೂ ತುತ್ತು ಅನ್ನಕ್ಕೂ ಸಂಕಷ್ಟಪಡುತ್ತಿದ್ದಾರೆ ಎಂದು ಹೆಚ್ಡಿಕೆ ಮರುಗಿದರು.
ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ನಡೆಸುತ್ತಿರುವ ಸ್ವಾರ್ಥ ರಾಜಕೀಯವನ್ನು ಮಾಜಿ ಮುಖ್ಯಮಂತ್ರಿಗಳು ಎಳೆ ಎಳೆಯಾಗಿ ಬಿಡಿಸಿಟ್ಟರಲ್ಲದೆ; ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಶಕ್ತಿ ವೃದ್ಧಿ ಮಾಡಿಕೊಳ್ಳಲು ಬಗೆಬಗೆಯ ಹೋರಾಟಗಳನ್ನು ರೂಪಿಸುತ್ತಾರೆ. ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿ ಕಟ್ಟುತ್ತಾರೆ. ಜಾತಿ ಧರ್ಮಗಳ ನಡುವೆ ಸಂಘರ್ಷ ತರುತ್ತಾರೆ. ಆದರೆ ಈ ಹೋರಾಟದಲ್ಲಿ ರಾಜಕಾರಣಿಗಳ ಮಕ್ಕಳು, ಉಳ್ಳವರ ಮಕ್ಕಳು ಬಲಿಯಾಗುತ್ತಿಲ್ಲ. ಬದಲಿಗೆ ಅಮಾಯಕರ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

ಬಿಜೆಪಿ ಸರಕಾರ ಪ್ರತಿ ವಿಚಾರದಲ್ಲಿ ಹಣ ಲೂಟಿ ಮಾಡುವುದನ್ನೇ ನೋಡುತ್ತಿದೆಯೇ ಹೊರತು, ಜನ ಪರ ಕಾಳಜಿ ನೋಡುತ್ತಿಲ್ಲ ಎಂದು ಇದೇ ವೇಳೆ ಕುಮಾರಸ್ವಾಮಿ ಅವರು ಆರೋಪಿಸಿದರು.
ಕೆ.ಆರ್.ನಗರ ಪಟ್ಟಣದ ಹಾಸನ-ಮೈಸೂರು ಮುಖ್ಯರಸ್ತೆಯ ತೋಪಮ್ಮ ದೇವಸ್ಥಾನದ ಬಳಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಕ್ಕೆ ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳು ಅಡಿಗಲ್ಲು ಹಾಕಿದರು.

ಮಾಜಿ ಸಚಿವ ಸಾ.ರಾ.ಮಹೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಥಮ ದರ್ಜೆ ಪಡೆದ ಪ.ಜಾ/ಪ.ವರ್ಗಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ

0

ಸಮಾಜ ಕಲ್ಯಾಣ ಇಲಾಖೆಯು 2022-23 ನೇ ಸಾಲಿನ ಮೆಟ್ರಿಕ್ ನಂತರದ ಅನೇಕ ಕೋರ್ಸುಗಳ ಪಬ್ಲಿಕ್ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಅರ್ಹ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆ ವೆಬ್‍ಸೈಟ್ www.sw.kar.nic.in ಮೂಲಕ ಅಕ್ಟೋಬರ್ 31 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಬಳಿಕ ಅರ್ಜಿಯ ಮುದ್ರಿತ ಪ್ರತಿಯನ್ನು ಅಗತ್ಯ ದಾಖಲಾತಿಗಳನ್ನು ದೃಢೀಕರಿಸಿ, ಲಗತ್ತಿಸಿ ಜಂಟಿ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಡಿ.ಸಿ. ಕಂಪೌಂಡ, ಧಾರವಾಡ ಇಲ್ಲಿಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಜಂಟಿ ನಿರ್ದೇಶಕರ ಕಚೇರಿ ಹಾಗೂ ಸಂಬಂಧಿಸಿದ ಆಯಾ ತಾಲ್ಲೂಕಿನ ಸಹಾಯಕ ನಿರ್ದೇಶಕರುಗಳ ಕಚೇರಿ ಸಮಾಜ ಕಲ್ಯಾಣ ಇಲಾಖೆ ಅಥವಾ ದೂರವಾಣಿ 0836-2447201 ಸಂಪರ್ಕಿಸಬಹುದು ಎಂದು ಪ್ರಕಟಣೆ ಮಾಹಿತಿ ತಿಳಿಸಿದೆ.

ಯಾವ ತನಿಖೆಯೇ ಮಾಡಲಿ ಪೋಲಿಸರು ವಿಫಲರಾಗಿದ್ದಾರೆ- ಡಿ ಕೆ ಶಿವಕುಮಾರ್

0

ಒಬ್ಬ ಹೋಮ್‌ ಮಿನಿಸ್ಟರ್, ಪಕ್ಷ ಎಂದು ತೆಗೆದುಕೊಂಡರೇ ರಾಜ್ಯ ಉಳಿಯಲು ಸಾಧ್ಯವಿಲ್ಲ. ಕಳೆದ 15 ದಿನಗಳ ಹಿಂದೆ ಇದೇ ರೀತಿಯ ಘಟನೆ ನಡೆದಿದೆ. ಯಾರದ್ದೊ‌ ಕಡೆ ಬೆರಳು ತೋರಿಸಿ ಸುಮ್ಮನೆ ಅವಲಕ್ಷಣ ಎನ್ನಿಸಿಕೊಳ್ಳಬೇಡಿ. ಯಾರು ಇದರಲ್ಲಿ ಭಾಗಿಯಾಗಿದ್ದಾರೆಂದು ಡಿಜಿಪಿ ಇಲ್ಲವೇ ಎಸ್‌ಪಿ ಹೇಳಬೇಕು.

ಇತಂಹ ಕೊಲೆಗಳು ರಾಜಕೀಯವಾಗಿ ಆಯ್ತಾ, ಖಾಸಗೀಯಾಗಿ ಆಯಿತಾ, ಬೇರೆ ಉದ್ದೇಶದಿಂದ ಆಯ್ತಾ ಅಂತಾ ಪೊಲೀಸ್ ಅಧಿಕಾರಿಗಳು ಪ್ರಾಮಾಣೀಕರಿಸಬೇಕು. ತನಿಖೆ‌ ಮಾಡಿ ಯಾರೇ ಆದರೂ, ಕಾನೂನು ಕ್ರಮ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಸಚಿವರು, ಸರ್ಕಾರ ವಿಫಲವಾಗಿದೆ. ಸುಮ್ಮನೆ ಬಾಳೆಹಣ್ಣು ತಿಂದು ಸಿಪ್ಪೆನಾ ಬೇರೆ ಬಾಯಿಗೆ ಒರಸುವ ಪ್ರಯತ್ನ ಮಾಡಬಾರದು. ತನಿಖೆ ನಡೆಯಲಿ, ಅವರನ್ನು ಬಂಧಿಸಬೇಕು. ಸತ್ಯಾಂಶವನ್ನು ಹೊರಗೆ ಬರಲಿ ಎಂದರು.

ಪ್ರವೀಣ್ ನೆಟ್ಟಾರು ಹತ್ಯೆಯನ್ನು ರಾಜಕೀಯಕ್ಕೆ ಮಾಡಿದ್ದಾರೋ, ಬೇರೆ ವೈಯಕ್ತಿಕ ವಿಚಾರಕ್ಕೆ ಮಾಡಿದ್ದಾರೋ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಸತ್ಯಾಂಶ ಎಲ್ಲವೋ ಹೊರಗೆ ಬರಬೇಕು. ಜನರಿಗೂ ಗೊತ್ತಾಗಬೇಕು. ಯಾವ ತನಿಖೆ ಬೇಕಾದರೂ ಮಾಡಲಿ. ಒಟ್ಟಾರೆ ಪೊಲೀಸ್ ನವರು ವಿಫಲರಾಗಿದ್ದಾರೆ. ಕಾನೂನು ವ್ಯವಸ್ಥೆಯಲ್ಲಿ ಫೇಲ್ ಆಗಿದೆ. ಗೃಹ ಸಚಿವರು ಹೇಳಿದ್ದನ್ನು ಲೋಕಲ್ ಎಸ್‌ಪಿ ಹೇಳಲಿ. ಬಿಜೆಪಿಯವರಿಗೆ ರಾಜಕೀಯನೇ ಮುಖ್ಯವಾಗಿದೆ ಎಂಬುದಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರವೀಣ್ ಹತ್ಯೆ ಪ್ರಕರಣದಲ್ಲಿ 10 ಜನರ ಬಂಧನ- ಆರಗ ಜ್ಞಾನೇಂದ್ರ

0

ಬಿಜೆಪಿ ಕಾರ್ಯಕರ್ತ ಪ್ರವೀಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರೆಗೂ 10 ಮಂದಿ ಶಂಕಿತರನ್ನ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.

ಸಿಎಂ ಜೊತೆಗಿನ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು ಪ್ರಕರಣದ ಕುರಿತು ಸಿಎಂ ಜೊತೆ ಮಾತನಾಡಿದ್ದೇವೆ.

ಪ್ರವೀಣ್‌ ಸೂದ್‌ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ ಮಾಡಿದ್ದೇವೆ. ಇನ್ನು ಪ್ರವೀಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 10 ಮಂದಿ ವಶಕ್ಕೆ ಪಡೆಯಲಾಗಿದೆ. ಪೊಲೀಸರು ತುಂಬಾನೇ ಚುರುಕಾಗಿ ತನಿಖೆ ನಡೆಸುತ್ತಿದ್ದಾರೆ. ಇನ್ನು ನಮ್ಮ ಪೊಲೀಸರು ಕೇರಳಕ್ಕೆ ತೆರಳಿ ಹುಡುಕಾಟ ನಡೆಸುತ್ತಿದ್ದಾರೆ. ಅಗತ್ಯವಿದರೆ, ಪ್ರಕರಣವನ್ನ ಎನ್‌ಐಎಗೆ ಒಪ್ಪಿಸಲು ಸಿದ್ದರಿದ್ದೇವೆ ಎಂದರು.

ಅಂದ್ಹಾಗೆ, ಬಿಜೆಪಿ ಕಾರ್ಯಕರ್ತ ಪ್ರವೀಣ್‌ ಹತ್ಯೆ ನಂತ್ರ ಬೆಳ್ಳಾರೆ ಉದ್ವಿಗ್ನಗೊಂಡಿದ್ದು, 144 ಸೆಕ್ಷನ್‌ ಜಾರಿ ಮಾಡಲಾಗಿದೆ. ಇನ್ನು ಪರಿಸ್ಥಿತಿ ಇನ್ನಷ್ಟು ಬಿಗಾಡಿಸುವ ಲಕ್ಷಣಗಳು ಕಾಣಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುರ್ತು ಸಭೆ ಕರೆದಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ, ಸಿಟಿ ರವಿ ಸೇರಿ ಹಲವರು ಭಾಗಿಯಾಗಿದ್ದರು.

ಗ್ರಾಹಕರ ದತ್ತಾಂಶ ಸೋರಿಕೆ ಸುಳ್ಳು ಆಧಾರ ರಹಿತ ಪೇಟಿಎಂ ಸ್ಪಷ್ಟನೆ

0

ಬಳಕೆದಾರರ ದತ್ತಾಂಶ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಪೇಟಿಎಂ ಕಂಪನಿ ತಿಳಿಸಿದೆ.
ಎರಡು ವರ್ಷಗಳ ಹಿಂದೆ ಪೇಟಿಎಂ ದತ್ತಾಂಶಕ್ಕೆ ಕನ್ನ ಹಾಕಲಾಗಿದ್ದು, 34 ಲಕ್ಷ ಬಳಕೆದಾರರ ದತ್ತಾಂಶಗಳು ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ಸೈಬರ್ ಭದ್ರತಾ ಕಂಪನಿ ‘ಫೈರ್‌ಫಾಕ್ಸ್ ಮಾನಿಟರ್’ ತಿಳಿಸಿತ್ತು.

ಇದರ ಹಿನ್ನೆಲೆಯಲ್ಲಿ, ಪೇಟಿಎಂ ಸ್ಪಷ್ಟನೆ ನೀಡಿದೆ.
2020ರಲ್ಲಿ ದತ್ತಾಂಶ ಸೋರಿಕೆಯಾಗಿತ್ತು ಎಂಬ ವರದಿ ಸುಳ್ಳು ಮತ್ತು ಆಧಾರರಹಿತ. ನಮ್ಮ ಬಳಕೆದಾರರ ದತ್ತಾಂಶಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ಪೇಟಿಎಂ ಮಾಲ್ ವಕ್ತಾರರು ‘ಐಎಎನ್‌ಎಸ್’ಗೆ ತಿಳಿಸಿದ್ದಾರೆ.

‘haveibeenpwned.com ತಾಣದಲ್ಲಿ ಅಪ್ಲೋಡ್ ಆಗಿರುವ ನಕಲಿ ವಿಚಾರವು ದತ್ತಾಂಶ ಸೋರಿಕೆಗೆ ಬಗ್ಗೆ ‘ಫೈರ್‌ಫಾಕ್ಸ್’ ಬ್ರೌಸರ್ ಅನ್ನು ತಪ್ಪಾಗಿ ಎಚ್ಚರಿಸಿದೆ. ಇದನ್ನು ಇತ್ಯರ್ಥಗೊಳಿಸುವ ವಿಚಾರವಾಗಿ ‘ಫೈರ್‌ಫಾಕ್ಸ್’ ಜತೆಗೆ ಸಂಪರ್ಕದಲ್ಲಿದ್ದೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಫೈರ್‌ಫಾಕ್ಸ್’ ಪ್ರಕಾರ, 2020ರ ಆಗಸ್ಟ್ 30ರಂದು ದತ್ತಾಂಶ ಸೋರಿಕೆಯಾಗಿತ್ತು ಎನ್ನಲಾಗಿದೆ.

ವಿಕ್ರಾಂತ್ ರೋಣ ವಿಶ್ವದಾದ್ಯಂತ ಬೆಳ್ಳಿತೆರೆ ಪ್ರದರ್ಶನ

0

ಇಂದು ವಿಶ್ವದಾದ್ಯಂತ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬಿಡುಗಡೆಯಾಗಲಿದೆ. 2500 ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ತೆರೆ ಕಾಣಲಿದೆ. ವಿಶ್ವದಾತ್ಯಂತ ಮೊದಲ ದಿನ 9 ಸಾವಿರಕ್ಕೂ ಹೆಚ್ಚು ಶೋ ಪ್ರದರ್ಶನ ಕಾಣಲಿದೆ.

ಕರ್ನಾಟಕದಲ್ಲಿ ಪ್ರಥಮ ದಿನ 325 ಸಿಂಗಲ್ ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ತೆರೆ ಕಾಣಲಿದೆ. 65 ಮಲ್ಟಿಪ್ಲೆಕ್ಸ್ ನಲ್ಲಿ ವಿಕ್ರಾಂತ್ ರೋಣ ಬಿಡುಗಡೆಯಾಗಲಿದೆ.
ರಾಜ್ಯಾದ್ಯಂತ ಇಂದು 2500 ಶೋ ನಡೆಯುವ ಸಾಧ್ಯತೆ ಇದೆ. ಬೆಳಗ್ಗೆ 6 ಗಂಟೆಯಿಂದಲೇ ಶೋಗಳು ಆರಂಭವಾಗಿ, ಅಭಿಮಾನಿಗಳು ಸಂಭ್ರಮ ಮುಗಿಲು ಮೆಟ್ಟಿದೆ.

ಸುಮಾರು 90 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಕನ್ನಡ ಮಾತ್ರವಲ್ಲದೇ, ಬಹುಭಾಷೆಗಳಲ್ಲಿ ಬಿಡುಗಡೆಯಾಗಿದೆ. ಅನೂಪ್ ಭಂಡಾರಿ ನಿರ್ದೇಶಿಸಿದ್ದಾರೆ.

ಕ್ರಿಕೆಟ್ ಏಕದಿನ ಸರಣಿ ಮೂರನೇ ಪಂದ್ಯದಲ್ಲೂ ಶರಣಾದ ವೆಸ್ಟ್ ಇಂಡೀಸ್: ಭಾರತಕ್ಕೆ ಸರಣಿ

0

ವೆಸ್ಟ್ ಇಂಡೀಸ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲೂ ಭಾರತ ತಂಡ 119 ರನ್ ಗಳ ಗೆಲುವು ಸಾಧಿಸಿ, ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.

ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ನೀಡಿದ 226 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಟೀಂ ಇಂಡಿಯಾ ವಿಂಡೀಸ್ ವಿರುದ್ಧ 119 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ನಂತರ ಬೌಲಿಂಗ್ ಸೇರಿದಂತೆ ಆಲ್ರೌಂಡ್ ಪ್ರದರ್ಶನ ನೀಡಿದ ಭಾರತ ತಂಡ ಮೂರನೇ ಪಂದ್ಯದಲ್ಲಿ ಅರ್ಹವಾಗಿಯೇ ಜಯ ಸಾಧಿಸಿತು.

ಭಾರತ ನೀಡಿದ 226 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ವಿಂಡೀಸ್ ತಂಡ ಆರಂಭದಿಂದಲೂ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.

ಬ್ರಾಂಡನ್ ಕಿಂಗ್, ನಾಯಕ ಪೂರನ್, ಶಾಯ್ ಹೋಪ್ ಮತ್ತು ಹೇಡನ್ ವಾಲ್ಶ್ ಬಿಟ್ಟರೆ ಉಳಿದ ಯಾವ ಬ್ಯಾಟರ್ ನಿಂದಲೂ ಎರಡಂಕಿ ಮೊತ್ತ ಬರಲಿಲ್ಲ. ವಿಂಡೀಸ್ 4 ಬ್ಯಾಟರ್ ಗಳು ಶೂನ್ಯ ಸುತ್ತಿದ್ದರೆ, 3 ಮಂದಿ ಒಂದಂಕಿ ಮೊತ್ತಕ್ಕೆ ಔಟಾದರು. ಇದು ಭಾರತ ಪ್ರಭಾವಿ ಬೌಲಿಂಗ್ ಹಾಗೂ ಫೀಲ್ಡಿಂಗ್ ಸಾಕ್ಷಿಯಾಗಿತ್ತು.

ಅಂತಿಮವಾದಿ ವಿಂಡೀಸ್ ತಂಡ 26 ಓವರ್ ಗಳಲ್ಲಿ ಕೇವಲ 137 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 119 ರನ್ ಗಳ ಅಂತರದಲ್ಲಿ ಭಾರತದ ಎದುರು ಹೀನಾಯ ಸೋಲು ಕಂಡಿತು. ಈ ಸೋಲಿನ ಮೂಲಕ ಭಾರತ ತಂಡ 3 ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿ ಐತಿಹಾಸಿಕ ಸರಣಿ ಜಯ ಸಾಧಿಸಿದೆ.

ಪ.ಬಂಗಾಳ ಸಚಿವರ ಆಪ್ತ ಸಹಾಯಕಿ ಮನೆಯಲ್ಲಿ ₹ 29 ಕೋಟಿ ಪತ್ತೆ

0

ಬಂಧಿತ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಕೋಲ್ಕತ್ತಾದ ಎರಡನೇ ಫ್ಲಾಟ್‌ನಿಂದ ಸುಮಾರು 29 ಕೋಟಿ ರೂ. ನಗದು ಮತ್ತು ಐದು ಕೆಜಿ ಚಿನ್ನಾಭರಣ ಪತ್ತೆಯಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಕೋಲ್ಕತ್ತಾದ ಬೆಲ್‌ಘಾರಿಯಾ ಪ್ರದೇಶದಲ್ಲಿರುವ ಅರ್ಪಿತಾ ಮುಖರ್ಜಿ ಅವರ ಮನೆಯಿಂದ ತನಿಖಾ ಸಂಸ್ಥೆ ಅಧಿಕಾರಿಗಳು ಇಂದು ಮುಂಜಾನೆ 10 ಟ್ರಂಕ್‌ಗಳೊಂದಿಗೆ ತೆರಳಿದ್ದಾರೆ. ಮುಖರ್ಜಿ ಅವರ ಎರಡನೇ ಫ್ಲಾಟ್‌ನಿಂದ ವಶಪಡಿಸಿಕೊಂಡ ನಿಖರವಾದ ಹಣವನ್ನು ತಿಳಿಯಲು ಇಡಿ ಅಧಿಕಾರಿಗಳು ಮೂರು ನೋಟು ಎಣಿಕೆ ಯಂತ್ರಗಳನ್ನು ಬಳಸಿದ್ದಾರೆ ಎಂದು ಮೂಲಗಳು ತಿಳಿಸಿವೆ

ನಗರದ ಉತ್ತರದ ಅಂಚಿನಲ್ಲಿರುವ ಬೆಲ್ಘಾರಿಯಾದಲ್ಲಿನ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು, ಒಂದು ಕೊಠಡಿಯಲ್ಲಿ ಈ ನೋಟುಗಳ ರಾಶಿ ಪತ್ತೆಯಾಗಿದೆ.
ಇಡಿ ಅಧಿಕಾರಿಗಳು ತಮ್ಮ ತನಿಖೆಯ ಭಾಗವಾಗಿ ಮನೆ ಮೇಲೆ ದಾಳಿ ನಡೆಸಿದ್ದರು. ವಿಚಾರಣೆ ವೇಳೆ ಅರ್ಪಿತಾ ಮುಖರ್ಜಿ ತನ್ನ ಎಲ್ಲಾ ಆಸ್ತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಅವರನ್ನು ಶನಿವಾರ ಬಂಧಿಸಲಾಯಿತು. ಕಳೆದ ಕೆಲ ದಿನಗಳ ಹಿಂದೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ 20 ಕೋಟಿ ರೂ. ನಗದು ಹಣ ಪತ್ತೆಯಾಗಿತ್ತು. ಈಗಾಗಲೇ ಅವರನ್ನ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಪಾರ್ಥ ಚಟರ್ಜಿ ಅವರು ಆಗಸ್ಟ್ 3 ರವರೆಗೆ ತನಿಖಾ ಸಂಸ್ಥೆಯ ಕಸ್ಟಡಿಯಲ್ಲಿರಲಿದ್ದಾರೆ.

ಈ ಹಣ ರಾಜ್ಯದ ಬೃಹತ್ ಶಿಕ್ಷಕರ ನೇಮಕಾತಿ ಹಗರಣದಿಂದ ಕಿಕ್‌ಬ್ಯಾಕ್ ಆಗಿದೆ ಎಂದು ಅರ್ಪಿತಾ ಮುಖರ್ಜಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ನಗದು ಇಟ್ಟಿದ್ದ ಕೊಠಡಿಗೆ ಪಾರ್ಥ ಚಟರ್ಜಿ ಮತ್ತು ಅವರ ವ್ಯಕ್ತಿಗಳಿಗೆ ಮಾತ್ರ ಪ್ರವೇಶವಿದೆ ಎಂದು ಅವರು ಹೇಳಿದ ಅವರು, 10 ದಿನಕ್ಕೊಮ್ಮೆ ಇಲ್ಲಿಗೆ ಬರುತ್ತಿದ್ದರು. ಪಾರ್ಥ ನನ್ನ ಮನೆ ಮತ್ತು ಇನ್ನೊಬ್ಬ ಮಹಿಳೆಯ ಮನೆಯನ್ನು ಮಿನಿ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾನೆ. ಆ ಮಹಿಳೆ ಕೂಡ ಆತನ ಆಪ್ತ ಸ್ನೇಹಿತೆ ಎಂದು ಅರ್ಪಿತಾ ಮುಖರ್ಜಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ 5159 ಅರೆಕಾಲಿಕ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ

0

ಶಿಕ್ಷಕ ಹುದ್ದೆಯ ನಿರೀಕ್ಷಿತರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ.ರಾಜ್ಯ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಅರೆಕಾಲಿಕ ಶಿಕ್ಷಕರ ಹುದ್ದೆಗಳ ಭರ್ತಿಗೆ ಮುಂದಾಗಿದೆ.

ಖಾಲಿ ಇರುವ 5159 ಹುದ್ದೆಗಳ ಭರ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದ್ದು,
2022-23ರ ಪ್ರತಿಯಾಗಿ ಪ್ರಸಕ್ತ ಸಾಲಿನಲ್ಲಿ ಈ ಅತಿಥಿ ಶಿಕ್ಷಕರನ್ನ ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಕರಡು ಅಧಿಸೂಚನೆ ಬಿಡುಗಡೆ ಮಾಡಿದೆ.

ಹುದ್ದೆಯ ಹೆಸರು : ಅತಿಥಿ ಶಿಕ್ಷಕರು
ಹುದ್ದೆಗಳ ಸಂಖ್ಯೆ : 5159
ಉದ್ಯೋಗ ಸ್ಥಳ : ಕರ್ನಾಟಕ
ವೇತನ : ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ನಿಯಮಾವಳಿಗಳ ಪ್ರಕಾರ
ವಯೋಮಿತಿ : ಅಭ್ಯರ್ಥಿಯ ಕನಿಷ್ಠ ವಯಸ್ಸು ಕಾಲೇಜು ಶಿಕ್ಷಣ ಇಲಾಖೆಯ ನೇಮಕಾತಿ ನಿಯಮಗಳ ಪ್ರಕಾರ ಇರಬೇಕು.
ಆಯ್ಕೆ ಪ್ರಕ್ರಿಯೆ : ಮೆರಿಟ್ ಪಟ್ಟಿ
ಪ್ರಮುಖ ದಿನಾಂಕಗಳು..!
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ : 19 ಜಲೈ 2022
ಅತಿಥಿ ಶಿಕ್ಷಕರು ಸಾಫ್ಟ್ ಕಾಪಿ ಸಲ್ಲಿಕೆಯ ಕೊನೆಯ ದಿನಾಂಕ: 26 ಜುಲೈ 2022
ಅಂದ್ಹಾಗೆ, ಅತಿಥಿ ಶಿಕ್ಷಕರ ನೇಮಕಾತಿ ಮತ್ತು ತಾಲೂಕುವಾರು ಹುದ್ದೆಗಳ ವಿವರಗಳಿಗಾಗಿ 26 ಜುಲೈ 2022 ರಂದು ಅಥವಾ ಅದಕ್ಕೂ ಮೊದಲು ಇ-ಮೇಲ್ ಐಡಿ est4cpibng@gmail.com ಗೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನ ಕಳುಹಿತಕ್ಕದ್ದು.

ಅಸಕ್ತ ಮತ್ತು ಅರ್ಹ ಅಧಿಕೃತ ವೆಬ್‌ಸೈಟ್ schooleducation.kar.nic.in ಪ್ರವೇಶಿಸಿ ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.

ಪ್ರವೀಣ್ ಹತ್ಯೆ ಪ್ರಕರಣ ತನಿಖೆ: ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲು ಚಿಂತನೆ

0

ಮಂಗಳೂರಿನಲ್ಲಿ ನಡೆದ ಪ್ರವೀಣ್ ಹತ್ಯೆ ಪ್ರಕರಣವನ್ನು ಅಗತ್ಯವಿದ್ದಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ಕ್ಕೆ ವಹಿಸಿಕೊಡಲು ಹಿಂಜರಿಯುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಆರ್.ಟಿ.ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಪ್ರವೀಣ್ ಹತ್ಯೆ ಪ್ರಕರಣದ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ.
ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಆದೇಶ ನೀಡಲಾಗಿದೆ. ಕೇರಳ ರಾಜ್ಯದ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿರಲಾಗಿದೆ ಎಂದರು.

ಸಮಾಜದಲ್ಲಿ ಹಿಂಸೆ, ಕ್ಷೋಭೆ ಉಂಟು ಮಾಡುವಂತಹ ದುಷ್ಕೃತ್ಯವನ್ನು ಎಸಗಿರುವ ದುಷ್ಕರ್ಮಿಗಳನ್ನು ದಮನ ಮಾಡುವವರೆಗೂ ವಿಶ್ರಮಿಸುವುದಿಲ್ಲ ಎಂದರು.

ಮಂಗಳೂರು ಹಾಗೂ ಕಾಸರಗೋಡು ಎಸ್ಪಿಗಳೊಂದಿಗೆ ಮಾತನಾಡಿದ್ದೇನೆ.
ಕರ್ನಾಟಕ ಡಿಜಿಪಿ, ಕೇರಳದ ಡಿಜಿಪಿಯವರೊಂದಿಗೆ ಮಾತನಾಡಿದ್ದಾರೆ. ಇಂದು ಕೂಡ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಡಿಜಿಯವರನ್ನು ಕರೆಸಿ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಶೀಘ್ರದಲ್ಲಿಯೇ ಕೊಲೆಗೈದವರನ್ನು ಬಂಧಿಸಿ ಉಗ್ರ ಶಿಕ್ಷೆ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಈ ಹಿಂದೆ ಮಂಗಳೂರು, ಡಿ.ಜೆ.ಹಳ್ಳಿ, ಶಿವಮೊಗ್ಗದ ಪ್ರಕರಣಗಳಂತೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೇ ಘಟನೆಯ ಹಿಂದಿರುವ ವ್ಯಕ್ತಿಗಳು, ಸಂಘಟನೆಗಳು ಯಾರೇ ಇದ್ದರೂ ಅವರನ್ನು ಸದೆಬಡಿಯುವ ಕೆಲಸವನ್ನು ಮಾಡಲಾಗುವುದು. ಜನರು ಆವೇಶಕ್ಕೆ ಒಳಗಾಗದೇ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು ಹಾಗೂ ಈ ಸಂದರ್ಭದಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡದೆ ತನಿಖೆಗೆ ಎಲ್ಲರೂ ಸಹಕರಿಸಬೇಕೆಂದು ಮುಖ್ಯಮಂತ್ರಿ ಮನವಿ ಮಾಡಿದರು.