Friday, March 20, 2026
Friday, March 20, 2026
Home Blog Page 1472

ಮೈಸೂರಿನಿಂದ ಚೆನ್ನೈಗೆ ವಿಮಾನ ಯಾನ ಸೇವೆ

0

ಮೈಸೂರು ವಿಮಾನ ನಿಲ್ದಾಣದಿಂದ ಚೆನ್ನೈಗೆ ಬೆಳಗಿನ ವಿಮಾನಯಾನ ಸೇವೆ ಇಂದಿನಿಂದ ಪ್ರಾರಂಭವಾಗಲಿದ್ದು, ಅಲಯನ್ಸ್​ ಏರ್​ ಈ ಸೇವೆ ನೀಡುತ್ತಿದೆ.

ಈಗಾಗಲೇ, ಇಂಡಿಗೋ ಏರ್​ಲೈನ್ಸ್​ ಸಂಜೆ ವೇಳೆಯಲ್ಲಿ ಮೈಸೂರು-ಚೆನ್ನೈ ನಡುವೆ ವಿಮಾನ ಸೇವೆ ನೀಡುತ್ತಿದೆ.

ಆದರೆ, ಈ ಮಾರ್ಗದಲ್ಲಿ ಬೆಳಗ್ಗೆ ವಿಮಾನಸೇವೆ ಒದಗಿಸಬೇಕೆಂಬುದು ಹೆಚ್ಚಿನ ಪ್ರಯಾಣಿಕರ ಬೇಡಿಕೆಯಾಗಿತ್ತು. ಆದ್ದರಿಂದ ಅಲಯನ್ಸ್​ ಏರ್​ ಮೈಸೂರು,ಚೆನ್ನೈ ನಡುವೆ ವಿಮಾನ ಸೇವೆ ಆರಂಭಿಸಿದೆ.

ವಾರದಲ್ಲಿ 3 ದಿನ ವಿಮಾನ ಹಾರಾಟ ನಡೆಸಲಿದೆ. ವಿಮಾನವು ಚೆನ್ನೈನಿಂದ ಬೆಳಗ್ಗೆ 9.25ಕ್ಕೆ ಹೊರಡಲಿದೆ. 11 ಗಂಟೆಗೆ ಮೈಸೂರಿಗೆ ಬರಲಿದೆ. ನಂತರ ಮೈಸೂರಿನಿಂದ ಬೆಳಗ್ಗೆ 11.30ಕ್ಕೆ ಹೊರಟು, ಮಧ್ಯಾಹ್ನ 1.30ಕ್ಕೆ ಚೆನ್ನೈ ತಲುಪಲಿದೆ. 70 ಆಸನಗಳನ್ನು ಒಳಗೊಂಡಿರುವ ಐಷಾರಾಮಿ ವಿಮಾನ ಇದಾಗಿದೆ. ಆರಾಮದಾಯಕವಾಗಿ ಪ್ರಯಾಣ ಮಾಡಬಹುದು. ಟಿಕೆಟ್​ ದರ ತಲಾ 4,678 ರೂ. ನಿಗದಿಪಡಿಸಲಾಗಿದೆ.

ಸಹ್ಯಾದ್ರಿ ಕಾಲೇಜಿನಲ್ಲಿ ಹರ್ ಮನ್ ತಿರಂಗಾ

0

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ವತಿಯಿಂದ “ಆಜಾದಿ ಕಾ ಅಮೃತ ಮಹೋತ್ಸವ” 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ಅಂಗವಾಗಿ “ಹ‌ರ್ ಮನ್ ತಿರಂಗಾ” ತಾಯಿ ಭಾರತಿಗೆ ಗೀತೆಗಳ ಆರತಿ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಡಿ ಎಸ್ ಅರುಣ್ ರವರು ಪಾಲ್ಗೊಂಡರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ ಸೆಲ್ವಮಣಿ, ಕುಲಸಚಿವ ಅನುರಾಧಾ, ಪ್ರಾಂಶುಪಾಲ ಎಂ.ಕೆ.ವೀಣಾ ಹಾಗೂ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅಮೃತ ಮಹೋತ್ಸವ ನಿಮಿತ್ತ ಎಲ್ಲರ ಮನೆಯ ಮೇಲೂ ರಾಷ್ಟ್ರಧ್ವಜ ಹೆಮ್ಮೆಯ ಸಂಗತಿ-ಶ್ರೀರಂಜಿನಿ ದತ್ತಾತ್ರಿ

0

ಅಮೃತ ಭಾರತ ಸಂಭ್ರಮಾಚರಣೆಯ ಪ್ರಯುಕ್ತ ಬಸವನಗಂಗೂರು ಸ.ಹಿ.ಪ್ರಾ.ಶಾಲೆ, ಬಸವನಗಂಗೂರು ಗ್ರಾಮ, ಅಬ್ಬಲಗೆರೆ ಗ್ರಾಮ ಪಂಚಾಯತಿ ಹಾಗೂ ಮನ್ವಂತರ ಮಹಿಳಾಮಂಡಳದ ಸಹಯೋಗದಲ್ಲಿ ಹರ್ ಘರ್ ಮೆ ತಿರಂಗಾ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು..

ಸ್ವಾತಂತ್ರ್ಯ ಭಾರತಕ್ಕಾಗಿ ನಮ್ಮ ದೇಶಭಕ್ತರು, ಯೋಧರು, ರಾಷ್ಟ್ರ ಭಕ್ತರು ನೀಡಿದ ಅಮೂಲ್ಯ ಬಲಿದಾನ ಕೊಡುಗೆಯ ಬಗ್ಗೆ ಶ್ರೀರಂಜಿನಿ ದತ್ತಾತ್ರಿಯವರು ಮಾಹಿತಿ ನೀಡಿದರು.
ತಿರಂಗಾಧ್ವಜ ಅಮೃತಾ ಭಾರತದ ನಿಮಿತ್ತ ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಈ ದೇಶದ ಸಮಸ್ತ ಪ್ರಜೆಗಳಿಗೂ ಅವರವರ ಮನೆಯ ಮೇಲೆ ತಿರಂಗಾಧ್ವಜವನ್ನು ಹಾರಿಸಲು ಅನುಮತಿ ನೀಡಿದ ಒಂದು ಸುವರ್ಣ ಅವಕಾಶ. ಸ್ವತಂತ್ರ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಇತ್ಯಾದಿ ವಿಶೇಷ ದಿನಗಳಲ್ಲಿ ನಿರ್ದಿಷ್ಟ ಸ್ಥಳಗಳನ್ನು ಹೊರತುಪಡಿಸಿ ಎಲ್ಲಿಯೂ ತ್ರಿವರ್ಣ ಧ್ವಜದ ಹಾರಾಟಕ್ಕೆ ಅನುಮತಿ ಇರುವುದಿಲ್ಲ. ಆದರೆ ಅಮೃತ ಭಾರತದ ನಿಮಿತ್ತ ಭಾರತದ ಪ್ರತಿಯೊಬ್ಬ ಭಾರತೀಯನೂ ತನ್ನ ಮನೆಯ ಮೇಲೆ ತ್ರಿವರ್ಣದ ಧ್ವಜ ಹಾರಿಸುವ ಸದವಕಾಶ ಭಾರತ ಸರ್ಕಾರ ನೀಡಿದೆ ಇದನ್ನು ನಾವು ಸಮ್ಮಾನದಿಂದ ಸ್ವೀಕರಿಸಿ ಧ್ವಜಕ್ಜೆ ವಂದನೆ ಸಲ್ಲಿಸಿ ನಮ್ಮ ರಾಷ್ಟ್ರ ಧ್ವಜವನ್ನ ಮುಗಿಲೆತ್ತರಕ್ಕೆ ಹಾರಿಸೋಣ ಎಂದು ನುಡಿದರು.

ಬಸವನ ಗಂಗೂರು ಗ್ರಾಮ ಅಬ್ಬಲಗೆರೆ ಗ್ರಾ.ಪಂ. ಅಧ್ಯಕ್ಷರಾದ ಬಸಮ್ಮನವರು,ಆಶಾ ಕಾರ್ಯಕರ್ತೆ, ಗ್ರಾ.ಪಂ ಸದಸ್ಯರಿಗೆ , ಶಾಲಾ ಮುಖ್ಯೋಪಾಧ್ಯಾಯರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಸಮ್ಮ, ಸದಸ್ಯರಾದ ದೇವಮ್ಮ , ವಿಜಯ್ ಕುಮಾರ್, ರಾಜಶೇಖರ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ನಟರಾಜ್, ಸದಸ್ಯರಾದ ರೋಜಾ, ವಿಜಯ್ ಕುಮಾರ್ ಸಂತೋಷ್ , ಉಷಾ.
ಶಾಲೆಯ ಮುಖೋಪಾಧ್ಯಾಯರಾದ ವಿದ್ಯಾಆಣ್ಣಪ್ಪ , ಶಿಕ್ಷಕರಾದ ಸವಿತಾ, ರುದ್ರಮೂರ್ತಿ, ಮಾರುತಿ ನಾಯಕ್ ರವರು ಉಪಸ್ಥಿತರಿದ್ದರು.
ಮನ್ವಂತರದ ಮಹಿಳಾ ಮಂಡಳದ ಅಧ್ಯಕ್ಷ ಶ್ರೀರಂಜಿನಿ ದತ್ತಾತ್ರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸಾಲ ವಸೂಲಾತಿಗೆ ಬೆದರಿಕೆ ಹಾಕುವಂತಿಲ್ಲ-ಅರ್ ಬಿ ಐ

0

ಸಾಲ ವಸೂಲು ಮಾಡುವ ನಿಟ್ಟಿನಲ್ಲಿ ರಿಕವರಿ ಏಜೆಂಟರು ಬೆಳಗ್ಗೆ 8 ಗಂಟೆಯಿಂದ ಮೊದಲು ಹಾಗೂ ರಾತ್ರಿ 7 ಗಂಟೆಯ ಅನಂತರ ಪೋನ್‌ ಮಾಡಿ ಬೆದರಿಕೆ ಹಾಕುವಂತಿಲ್ಲ ಎಂದು ಆರ್‌ಬಿಐ ಶುಕ್ರವಾರ ಹೊಸ ಸುತ್ತೋಲೆ ಬಿಡುಗಡೆ ಮಾಡಿದೆ.

ಬ್ಯಾಂಕೇತರ ವಿತ್ತೀಯ ಸಂಸ್ಥೆಗಳು, ಆಸ್ತಿ ಪುನರ್‌ರಚನೆ ಸೇವೆ ನೀಡುವ ಕಂಪೆನಿಗಗಳಿಗೆ ಹೊಸ ನಿಯಮ ಅನ್ವಯವಾಗಲಿದೆ.

ಈ ಹಿಂದೆಯೇ ಹೊರಡಿಸಲಾಗಿರುವ ನಿಯಮಗಳನ್ನು ಸಂಸ್ಥೆಗಳು ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದೆ.

ಆದ್ದರಿಂದ, ಹೊಸ ಸುತ್ತೋಲೆ ಹೊರಡಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಸಾಲ ವಸೂಲು ಮಾಡುವ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ಪ್ರತಿನಿಧಿಗಳು ಬಲಪ್ರಯೋಗ, ಕಿರುಕುಳ ನೀಡುವಂಥ ಕ್ರಮಗಳನ್ನು ಅನುಸರಿಸುವಂತೆಯೇ ಇಲ್ಲ. ಅನಪೇಕ್ಷಿತ ಸಂದೇಶಗಳನ್ನು, ಅನಾಮಧೇಯರ ಹೆಸರಿನಲ್ಲಿ ಬೆಳಗ್ಗೆ 8 ಗಂಟೆಯಿಂದ ಮೊದಲು ಮತ್ತು ರಾತ್ರಿ 7 ಗಂಟೆಯ ನಂತರ ಫೋನ್‌ ಮಾಡುವಂತಿಲ್ಲ ಎಂದು ಸುತ್ತೋಲೆಯಲ್ಲಿ ಆರ್‌ಬಿಐ ಸೂಚಿಸಿದೆ.

ಜಾಗತಿಕ ನಾಯಕರು ಭಾರತದ ವಿದೇಶಾಂಗ ನೀತಿ ಮೆಚ್ಚಿದ್ದಾರೆ-ಜೈಶಂಕರ್

0

ಜಾಗತಿಕ ಮಟ್ಟದಲ್ಲಿ ಭಾರತ ನಗೆಪಾಟಲಿಗೀಡಾಗಿಲ್ಲ.ಕ್ವಾಡ್ ದೇಶಗಳು, ಜಿ-7 ರಾಷ್ಟ್ರಗಳ ವೇದಿಕೆ, ಜಾಗತಿಕ ವಾತಾವರಣ ಕುರಿತ ಚರ್ಚೆ ಮುಂತಾದ ವೇದಿಕೆಗಳಲ್ಲಿ ಭಾರತಕ್ಕೆ ದೊರೆತ ಗೌರವಗಳೇ ಇದಕ್ಕೆ ಸಾಕ್ಷಿ‌ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್‌ ಅವರು ಸಮರ್ಥಿಸಿಕೊಂಡಿದ್ದಾರೆ.

ಜಾಗತಿಕ ನಾಯಕರು ಭಾರತದ ಬಗ್ಗೆ ಇರಿಸಿರುವ ನಿರೀಕ್ಷೆಗಳೇ ಭಾರತದ ವಿದೇಶಾಂಗ ನೀತಿಯ ಯಶಸ್ಸನ್ನು ತೋರಿಸುತ್ತವೆ. ಹಲವು ದೇಶಗಳು ಕೊರೋನಾ ಕಾರಣದಿಂದ ತೀವ್ರ ಬಿಕ್ಕಟ್ಟು ಎದುರಿಸುತ್ತಿವೆ. ಆದರೆ, ಸವಾಲಿನ ನಡುವೆಯೇ ಭಾರತವು ತನ್ನದೇ ಆದ ರೀತಿಯಲ್ಲಿ ಸಮರ್ಥವಾಗಿ ನಿಭಾಯಿಸಿ, ಆರ್ಥಿಕತೆ ಕುಸಿತವನ್ನು ತಡೆಗಟ್ಟಿದೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ರಾಜಕೀಯ ಆರೋಪ, ಚರ್ಚೆಗಳು ಏನೇ ಇದ್ದರೂ ವ್ಯಾಖ್ಯಾನಗಳ ಅಂತಿಮ ಪರೀಕ್ಷೆಯಾಗುವುದು ಜನತಾ ನ್ಯಾಯಾಲಯದಲ್ಲಿ. ದೇಶದ ಆರ್ಥಿಕತೆಯನ್ನು ಉತ್ತಮವಾಗಿ ನಿಭಾಯಿಸಲಾಗಿದೆ. ಇದಕ್ಕಾಗಿಯೇ 2 ಚುನಾವಣೆಗಳಲ್ಲಿ ಜನರು ಬೆಂಬಲಿಸಿದ್ದಾರೆ ಎಂದು ಜೈಶಂಕರ್ ಅವರು ಹೇಳಿದರು.

ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ಜಾಗತಿಕ ಬ್ರ್ಯಾಂಡ್ ಆಗುತ್ತಿದೆ. ಮೂಲಸೌಕರ್ಯಗಳ ಸುಧಾರಣೆ ಎಂಬುದು‌ ಮುಗಿಯದ ವಿದ್ಯಮಾನ ಎಂದರು.

ಅನೇಕ, ವಿದೇಶಿ ಕಂಪನಿಗಳು ಭಾರತಕ್ಕೆ ಬರಲು ಉತ್ಸುಕತೆ ತೋರುತ್ತಿವೆ. ಇದು ಭಾರತದ ಮೇಲಿಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ. ಇದರ ಲಾಭ ಬೆಂಗಳೂರಿಗೂ ಆಗಲಿದೆ ಎಂದು ಹೇಳಿದರು.

ಮುಂದಿನ ತಿಂಗಳು ಅಮೆರಿಕ ಭೇಟಿ ಸಂದರ್ಭ ಬೆಂಗಳೂರಿನಲ್ಲಿ ಅಮೆರಿಕ ಕಾನ್ಸಲೇಟ್ ತೆರೆಯುವ ಕುರಿತು ಪ್ರಸ್ತಾಪಿಸಲಾಗುವುದು. ಕಾನ್ಸಲೇಟ್ ತೆರೆಯುವ ಬಗ್ಗೆ ಬೆಂಗಳೂರು ಮತ್ತು ಹೈದರಾಬಾದ್ ನಡುವಿನ ಸ್ಫರ್ಧೆಯಲ್ಲಿ ಅಮೆರಿಕ 2006ರಲ್ಲಿ ಎರಡನೆಯದನ್ನೇ ಆಯ್ಕೆ ಮಾಡಿಕೊಂಡಿತ್ತು. ಅದು ಆ ದೇಶದ ನಿರ್ಧಾರ ಎಂದರು.

ಹರ್ ಘರ್ ತಿರಂಗಾ ಅಭಿಯಾನಕ್ಕೆ ಬೊಮ್ಮಾಯಿ ಚಾಲನೆ

0

ಹರ್ ಘರ್ ತಿರಂಗಾ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಬೆಳಗ್ಗೆ ಚಾಲನೆ ನೀಡಿದ್ದಾರೆ. ತಮ್ಮ ಆರ್.ಟಿ. ನಗರ ನಿವಾಸದಲ್ಲಿ ರಾಷ್ಟ್ರದ ಧ್ವಜ ಹಾರಿಸುವ ಮುಖಾಂತರ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಬೊಮ್ಮಾಯಿ ಪತ್ನಿ, ಪುತ್ರ ಮತ್ತು ಸಚಿವ ಡಾ.ಸುಧಾಕರ್ ಅವರು ಉಪಸ್ಥಿತರಿದ್ದರು.

ಸ್ವಾತಂತ್ರ್ಯೋತ್ಸವದ 75ನೇ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಇಂದಿನಿಂದ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ನಡೆಯಲಿದೆ. ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ತಮ್ಮ ನಿವಾಸದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಧ್ವಜಾರೋಹಣ ಮಾಡಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ಇಂದಿನಿಂದ ದೇಶದೆಲ್ಲೆಡೆ ಹರ್ ಘರ್ ತಿರಂಗಾ ನಡೀತಿದೆ. ರಾಜ್ಯದಲ್ಲಿ ಹರ್ ಘರ್ ತಿರಂಗಾ ಯಶಸ್ವಿಗೊಳಿಸಲು ಎಲ್ಲ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲ ಗ್ರಾಮ ಪಂಚಾಯ್ತಿಗಳಿಗೂ ಧ್ವಜ‌ ವಿತರಣೆ ಮಾಡಲಾಗಿದೆ.

ಈಗಾಗಲೇ, 1 ಕೋಟಿ 8 ಲಕ್ಷ ಧ್ವಜಗಳನ್ನು ವಿತರಿಸಿದ್ದೇವೆ. ರಾಜ್ಯದಲ್ಲಿ 1.20 ಕೋಟಿಗೂ ಹೆಚ್ಚು ಕಡೆ ತಿರಂಗಾ ಹಾರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಜಾಗತಿಕ ಕದನ ವಿರಾಮ ಆಯೋಗ ನೇತೃತ್ವಕ್ಕೆ ಭಾರತವೂ ಸೇರ್ಪಡೆ

0

ಜಾಗತಿಕ ಕದನ ವಿರಾಮ ಘೋಷಿಸಲು ಭಾರತ ಪ್ರಧಾನಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಮತ್ತು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ನೇತೃತ್ವದಲ್ಲಿ ಆಯೋಗ ರಚಿಸುವ ಪ್ರಸ್ತಾಪವನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸುವುದಾಗಿ ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಹೇಳಿದರು.

ಕನಿಷ್ಠ ಐದು ವರ್ಷಗಳ ಕಾಲ ಕದನ ವಿರಾಮ ಘೋಷಿಸಿ ಜಗತ್ತಿನಲ್ಲಿ ಶಾಂತಿ ನೆಲೆಸುವುದನ್ನು ಖಚಿತಪಡಿಸಬೇಕಿದೆ ಎಂದರು.

ಮೋದಿ, ಪೋಪ್ ಹಾಗೂ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅವರನ್ನೊಳಗೊಂಡ ಆಯೋಗದ ಮಧ್ಯಸ್ಥಿಕೆಯನ್ನು ವಿಶ್ವದ ಮೂರು ಮಹಾನ್ ಶಕ್ತಿಗಳಾದ ರಷ್ಯಾ, ಚೀನಾ, ಅಮೆರಿಕ ಒಪ್ಪಿಕೊಳ್ಳುತ್ತವೆ ಎಂದು ತಿಳಿಸಿದರು.

ಯುದ್ದವನ್ನು ನಿಲ್ಲಿಸಲು ಈ ಆಯೋಗವು ಭೇಟಿಯಾಗಿ ಪ್ರಸ್ತಾಪವನ್ನು ಸಲ್ಲಿಸಬೇಕಿದೆ. ಕನಿಷ್ಠ ಐದು ವರ್ಷ ಕದನ ವಿರಾಮಕ್ಕಾಗಿ ಒಪ್ಪಂದ ಮಾಡಿಕೊಳ್ಳಬೇಕಿದೆ. ಈ ಮೂಲಕ ಜಗತ್ತಿನೆಲ್ಲೆಡೆಯ ಸರ್ಕಾರಗಳು ವಿಶೇಷವಾಗಿ ಯುದ್ಧಪೀಡಿತ ದೇಶಗಳು ತಮ್ಮ ಜನರಿಗೆ ನೆರವಾಗಬಹುದಾಗಿದೆ ಎಂದು ಒಬ್ರಡಾರ್ ಮಾಡಿರುವ ಪ್ರಸ್ತಾಪದಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದ ಮುಂದಿನ ಐದು ವರ್ಷ ಯಾವುದೇ ಉದ್ವಿಗ್ನ ವಾತಾವರಣ, ಹಿಂಸಾಚಾರವಿಲ್ಲದೆ ಜಗತ್ತಿನಲ್ಲಿ ಶಾಂತಿ ನೆಲೆಸಲಿದೆ ಎಂದು ಹೇಳಿದರು.

ಏರೋಸ್ಪೇಸ್ ಮತ್ತು ಜಲನೀತಿಗೆ ರಾಜ್ಯ ಸಂಪುಟ ಅಸ್ತು

0

ಕರ್ನಾಟಕ ಏರೊಸ್ಪೇಸ್‌ ನೀತಿ ಹಾಗೂ ಕರ್ನಾಟಕ ಜಲ ನೀತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ರಕ್ಷಣಾ ನೀತಿಗೆ ಪೂರಕವಾಗಿ ರಾಜ್ಯವನ್ನು ಏರೋಸ್ಪೇಸ್‌ ಹಬ್‌ ಮಾಡುವುದು, ಪ್ರಸ್ತುತ ಹೆಲಿಕಾಪ್ಟರ್‌ ಮತ್ತು ವಿಮಾನ ತಯಾರಿ ವಲಯದಲ್ಲಿ ಶೇ.65, ಬಾಹ್ಯಾಕಾಶ ವಲಯದಲ್ಲಿ ಶೇ.25ರಷ್ಟಿರುವ ಪಾಲುದಾರಿಕೆಯನ್ನು ಹೆಚ್ಚಿಸುವುದು ಏರೋಸ್ಪೇಸ್‌ ನೀತಿಯ ಗುರಿಯಾಗಿದೆ.

ರಾಜ್ಯದಲ್ಲಿ ನೀರಿನ ಸಂಗ್ರಹ, ಬಳಕೆ, ಪೂರೈಕೆ, ಮಿತ ಬಳಕೆ ಒಳಗೊಂಡಂತೆ ನೀರು ನಿರ್ವಹಣೆ ಮಾಡುವುದು. ಪ್ರವಾಹ ಸಂದರ್ಭದಲ್ಲಿ ನೀರು ಹಿಡಿದಿಟ್ಟುಕೊಂಡು ಮರುಬಳಕೆ ಮಾಡುವ ಮಾರ್ಗೋಪಾಯ ಕಂಡು ಹಿಡಿಯುವುದು ಜಲ ನೀತಿಯ ಪ್ರಮುಖ ಉದ್ದೇಶವಾಗಿದೆ.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಕರ್ನಾಟಕ ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ನೀತಿ-2027 ಅಡಿ ನಾಲ್ಕು ವಲಯ ರಚಿಸಿ ರಫ್ತು ಉತ್ತೇಜಿಸಿ, ವಿದ್ಯುತ್‌, ಭೂ ಪರಿವರ್ತನೆ, ನೋಂದಣಿ ಸಂಬಂಧದ ಅನುಮತಿ ಸೇರಿ ಅನೇಕ ರೀತಿಯ ಸಬ್ಸಿಡಿ ಉದ್ಯಮದಾರರಿಗೆ ಕೊಡಲಾಗುವುದು. 20ರಿಂದ 25 ಲಕ್ಷ ರೂ.ವರೆಗೆ ಸಬ್ಸಿಡಿ ದೊರೆಯಲಿದೆ ಎಂದು ಹೇಳಿದರು.

ಈ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಆತ್ಮನಿರ್ಭರ್‌ ಯೋಜನೆಯಡಿ ದೇಶೀಯ ಉತ್ಪಾದನೆಯತ್ತ ಗಮನಹರಿಸಲು ಹಾಗೂ ಈ ಕ್ಷೇತ್ರಕ್ಕೆ ಹೆಚ್ಚಿನ ಹೂಡಿಕೆ ಆಕರ್ಷಿಸಲು ಈ ನೀತಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

2022-27ನೇ ಅವಧಿಯಲ್ಲಿ 45 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಿಸುವ ಗುರಿ ಹೊಂದಲಾಗಿದೆ. ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ 200 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ 70 ಸಾವಿರ ರೂ.ವರೆಗೆ ವಿದ್ಯಾರ್ಥಿ ವೇತನ ನೀಡಿ ಏರೋಸ್ಪೇಸ್‌ ವಲಯದಲ್ಲಿ ಹೊಸ ಹೊಸ ಆವಿಷ್ಕಾರ, ಸಂಶೋಧನೆಗೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.

ರಾಜ್ಯದ ತಾಲೂಕು ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಪರೀಕ್ಷೆ ಹಾಗೂ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆಗಾಗಿ 128 ಕಡೆ ಮಹಿಳಾ ಸ್ವಾಸ್ಥ್ಯ ಕೇಂದ್ರ ಸ್ಥಾಪನೆಗೆ ಸಂಪುಟ ಒಪ್ಪಿದೆ. ಇದರಡಿ ಓರ್ವ ತಜ್ಞ ವೈದ್ಯರು ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಇರಲಿದ್ದು, ಪರೀಕ್ಷೆಗಾಗಿ ಪ್ರತ್ಯೇಕ ಕೊಠಡಿ ಹಾಗೂ ಚಿಕಿತ್ಸೆಗಾಗಿ ವ್ಯವಸ್ಥೆ ಇರಲಿದೆ. ಇದಕ್ಕಾಗಿ 22.40 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು.

ಕೆ.ಶಿಪ್‌, ಕೆಆರ್‌ಡಿಸಿಎಲ್‌ ಮತ್ತು ಲೋಕೋಪಯೋಗಿ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸಿದ್ದ 1,329.47 ಕಿ.ಮೀ. ರಸ್ತೆಗಳ ನವೀಕರಣ ಮತ್ತು ದುರಸ್ತಿಗೆ 440 ಕೋಟಿ ರೂ. ಒದಗಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು.

ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶಕ್ಕೆ ಒಂದೇ ಸಿಇಟಿ ಪ್ರಸ್ತಾಪ

0

ವಿಶ್ವವಿದ್ಯಾಲಯ ಧನಸಹಾಯ ಆಯೋಗ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳನ್ನು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ-ಪದವಿಪೂರ್ವ (CUET-UG)ಗೆ ವಿಲೀನಗೊಳಿಸಲು ಪ್ರಸ್ತಾಪಿಸಿದೆ.

ಪ್ರಸ್ತಾವನೆಯಂತೆ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹೀಗೆ ಮೂರು ಪ್ರವೇಶ ಪರೀಕ್ಷೆಗಳಲ್ಲಿ ನಾಲ್ಕು ವಿಷಯಗಳಿಗೆ ಹಾಜರಾಗುವ ಬದಲು ವಿದ್ಯಾರ್ಥಿಗಳು ಒಮ್ಮೆ ಪರೀಕ್ಷೆ ಬರೆದು ಒಮ್ಮೆ ಮಾತ್ರ ವ್ಯಾಸಂಗ ಮಾಡಿ ವಿವಿಧ ಕ್ಷೇತ್ರಗಳಿಗೆ ಅರ್ಹತೆ ಪಡೆಯಬಹುದು ಎಂದು ಯುಜಿಸಿ ಅಧ್ಯಕ್ಷ ಎಂ.ಜಗದೇಶ್ ಕುಮಾರ್ ಮಾಹಿತಿ ನೀಡಿದರು.

ಸಂವಾದವೊಂದರಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಒಂದು ಜ್ಞಾನದ ಬೇಸ್‌ಗಾಗಿ ಅನೇಕ ಪರೀಕ್ಷೆಗಳನ್ನ ತೆಗೆದುಕೊಳ್ಳಬೇಕಾಗಿಲ್ಲ. ಒಂದು ಬಾರಿ ಪರೀಕ್ಷೆಯನ್ನು ನಡೆಸುವ ಪ್ರಸ್ತಾಪವನ್ನ ಮಾಡಲಾಗುತ್ತಿದೆ ಎಂದು ಹೇಳಿದರು. ಪರೀಕ್ಷೆ ಒಂದನ್ನ ನೀಡಬೇಕಾಗುತ್ತದೆ. ಆದರೆ ಇದಕ್ಕಾಗಿ ಅವಕಾಶಗಳು ವಿಭಿನ್ನವಾಗಿರುತ್ತದೆ. ಈ ಒಂದು ಪರೀಕ್ಷೆಯ ಮೂಲಕ ಒಬ್ಬರು ಅಧ್ಯಯನದ ವಿವಿಧ ಕ್ಷೇತ್ರಗಳಿಗೆ ಅರ್ಹತೆ ಪಡೆಯಬಹುದು. ಉನ್ನತ ಶಿಕ್ಷಣ ನಿಯಂತ್ರಣವು ಮಧ್ಯಸ್ಥಗಾರರೊಂದಿಗೆ ಒಮ್ಮತವನ್ನ ಚರ್ಚಿಸಲು ಸಮಿತಿಯನ್ನ ರಚಿಸುತ್ತಿದೆ. ವಿವಿಧ ವಿಶ್ವವಿದ್ಯಾನಿಲಯಗಳು ಮತ್ತು ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ವಿಭಿನ್ನ ಪರೀಕ್ಷೆಗಳ ಬದಲಿಗೆ, ಇದು ಈ ಒಂದು ಪರೀಕ್ಷೆಗೆ ತಯಾರಿ ನಡೆಸುತ್ತಿದೆ.

ಉನ್ನತ ಶಿಕ್ಷಣ ನಿಯಂತ್ರಕವು ಮಧ್ಯಸ್ಥಗಾರರೊಂದಿಗೆ ಒಮ್ಮತವನ್ನು ಚರ್ಚಿಸಲು ಸಮಿತಿಯನ್ನ ಸಿದ್ಧಪಡಿಸುತ್ತಿದೆ.
CUET ಅಂದರೆ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯು ದೇಶದ ಹೊಸ ಶಿಕ್ಷಣ ನೀತಿಯ ವಿಶೇಷ ಭಾಗವಾಗಿದೆ. ಈ ಮೂಲಕ ವಿಶ್ವವಿದ್ಯಾನಿಲಯಗಳಲ್ಲಿ ಇದುವರೆಗೆ ಮೆರಿಟ್ ಆಧಾರಿತ ಅಥವಾ ಪ್ರವೇಶ ಪರೀಕ್ಷೆ ಆಧಾರಿತ ಪ್ರವೇಶ ಪದ್ಧತಿಯನ್ನು ತೆಗೆದುಹಾಕುವ ಮೂಲಕ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಪ್ರವೇಶ ನೀಡಲಾಗುವುದು. ಇದೀಗ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪರೀಕ್ಷೆಗಳನ್ನೂ ವಿಲೀನಗೊಳಿಸಲು ಯುಜಿಸಿ ಮುಂದಾಗಿದೆ.

ಆನೆ ಬಗ್ಗೆ ಆಸಕ್ತಿಯ ಮಾಹಿತಿ

0

ಪರಿಸರ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರವಹಿಸುವ ಆನೆ ಹೆಚ್ಚಿನ ಪ್ರದೇಶಗಳಲ್ಲಿ ಪ್ರವಾಸೋದ್ಯಮದೊಂದಿಗೆ ಸಮಾಜಕ್ಕೂ ಕೊಡುಗೆ ನೀಡುವುದರಲ್ಲಿ ಮಹತ್ವದ ಪಾತ್ರ ವಹಿಸಿವೆ.

ಪ್ರತಿ ವರ್ಷ ಆಗಸ್ಟ್ 12ರಂದು ಆನೆಗಳ ದಿನವಾಗಿ ಆಚರಿಸಲಾಗುತ್ತದೆ. ಮಾನವನ ದುರಾಸೆ ಹಾಗೂ ಸೂಕ್ತನೆಲೆ ಇಲ್ಲದೆಯೇ ಅದೆಷ್ಟೋ ಕಾಡು ಪ್ರಾಣಿಗಳು ಅಳಿವಿನಂಚಿನಲ್ಲಿವೆ ಅದರಲ್ಲಿ ಆನೆ ಕೂಡ ಒಂದು.

ಅಧ್ಯಯನದ ಪ್ರಕಾರ, 40,000-50,000 ಆನೆ ಸಂತತಿಗಳು ಮಾತ್ರವೇ ಉಳಿದಿದ್ದು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಾಲಿನಲ್ಲಿ ಗಜಪಡೆ ಕೂಡ ಸೇರಿಕೊಂಡಿವೆ ಎಂಬುದು ಬೇಸರದ ಸಂಗತಿಯಾಗಿದೆ.

ಈ ದಿನದ ಮಹತ್ವವನ್ನು ಅರಿತುಕೊಳ್ಳಲು ಹಾಗೂ ಅತ್ಯದ್ಭುತ ಪ್ರಾಣಿ ಎಂಬ ಬಿರುದಿಗೆ ಭಾಜನವಾಗಿರುವ ಆನೆಯ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬರೂ ಅರಿತಿರಲೇಬೇಕು.
ಆನೆಗಳು ಭೂಮಿಯ ಮೇಲಿನ ಅತಿದೊಡ್ಡ ಸಸ್ತನಿಗಳೆಂಬ ಬಿರುದನ್ನು ಪಡೆದುಕೊಂಡಿವೆ. ಗಂಡಾನೆಗಳು ಸರಾಸರಿ ಮೂರು ಮೀಟರ್‌ಗಳು (13 ಫೀಟ್) ಎತ್ತರವನ್ನು ಪಡೆದುಕೊಂಡಿದ್ದರೆ ಇವುಗಳ ತೂಕ ಆರು ಟನ್‌ಗಳಷ್ಟಿರುತ್ತದೆ. ಆನೆಗಳು 4-6 ಕೆಜಿಯಷ್ಟು ತೂಕದ ದೊಡ್ಡ ಮೆದುಳುಗಳನ್ನು ಹೊಂದಿರುತ್ತವೆ. ಇದು ಭೂಮಿಯ ಮೇಲಿನ ಸಸ್ತನಿಗಳಲ್ಲೇ ಅತ್ಯಂತ ದೊಡ್ಡದಾಗಿದೆ. ಕಾಡಿನಲ್ಲಿ ಆನೆಗಳು 60-70 ವರ್ಷಗಳಷ್ಟು ಕಾಲ ಜೀವಿಸುತ್ತವೆ.

ಆಫ್ರಿಕನ್ ಆನೆಗಳು ಮತ್ತು ಏಷ್ಯನ್ ಆನೆಗಳು ಎರಡು ಮುಖ್ಯ ಜಾತಿಗಳಾಗಿವೆ.
ತಮ್ಮ ಭೌಗೋಳಿಕ ಸ್ಥಳಗಳ ಹೊರತಾಗಿ, ಆಫ್ರಿಕನ್ ಆನೆಗಳು ಆಫ್ರಿಕಾ ಖಂಡದ ಆಕಾರದಲ್ಲಿಯೇ ದೊಡ್ಡ ಕಿವಿಗಳೊಂದಿಗೆ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಏಷ್ಯನ್ ಆನೆಗಳು, ಹೆಚ್ಚು ದುಂಡಗಿನ ಕಿವಿಗಳೊಂದಿಗೆ ಚಿಕ್ಕ ಗಾತ್ರವನ್ನು ಹೊಂದಿರುತ್ತವೆ. ಎರಡು ಪ್ರಭೇದಗಳು ವಿಭಿನ್ನವಾದ ಸೊಂಡಿಲುಗಳನ್ನು ಹೊಂದಿದ್ದು ಆಫ್ರಿಕನ್ ಆನೆಗಳು ತಮ್ಮ ಸೊಂಡಿಲುಗಳ ತುದಿಯಲ್ಲಿ ಎರಡು ವಿಭಾಗಗಳನ್ನು ಹೊಂದಿದ್ದು ಏಷ್ಯಾದ ಆನೆಗಳು ಕೇವಲ ಒಂದನ್ನು ಹೊಂದಿರುತ್ತವೆ.

ಏಷ್ಯನ್ ಆನೆಗಳು ಅಳಿವಿನಂಚಿನಲ್ಲಿರುವ ಪ್ರಭೇದಗಳಾಗಿವೆ.
ಏಷ್ಯನ್ ಆನೆಯನ್ನು ಪ್ರಸ್ತುತ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ರೆಡ್ ಲಿಸ್ಟ್‌ನಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಪಟ್ಟಿಮಾಡಲಾಗಿದೆ. ಆನೆಗಳ ಸಂಖ್ಯೆಯು ಪ್ರತಿದಿನ ಕುಸಿಯುತ್ತಲೇ ಇದೆ. ಕೆಲವೊಂದು ಅಂದಾಜುಗಳು ಪ್ರಕಾರ, ಕಳೆದ 75 ವರ್ಷಗಳಲ್ಲಿ ಆನೆಗಳ ಸಂಖ್ಯೆಯಲ್ಲಿ 50% ನಷ್ಟು ಕುಸಿತ ಕಂಡುಬಂದಿದೆ. ಪ್ರಾಯಶಃ 20,000 ದಷ್ಟು ಏಷ್ಯನ್ ಆನೆಗಳು ಕಾಡಿನಲ್ಲಿ ಉಳಿದಿವೆ.

ಆನೆ ಕುಟುಂಬವು ಮಾತೃ ಪ್ರಧಾನ ವ್ಯವಸ್ಥೆಯನ್ನು ಆಧರಿಸಿವೆ. ಅಮ್ಮನಿಗೆ ಎಲ್ಲವೂ ತಿಳಿದಿರುತ್ತದೆ ಎಂಬ ಮಾತಿನಂತೆ ಆನೆ ಘಟಕದ ಮಾತೃಪಕ್ಷವು ಸಾಮಾನ್ಯವಾಗಿ ಕುಟುಂಬದ ಅತ್ಯಂತ ಪುರಾತನ ಮತ್ತು ವಯಸ್ಕ ಮಹಿಳಾ ಸದಸ್ಯೆಯೇ ಆಗಿರುತ್ತದೆ, ಅಂತೆಯೇ ಆಹಾರ ಮತ್ತು ನೀರಿಗಾಗಿ ದೂರದ ಪ್ರಯಾಣದಲ್ಲಿ ಹಿಂಡನ್ನು ಮುನ್ನಡೆಸುತ್ತದೆ. ಹಿಂಡಿನ ರಕ್ಷಣೆ, ಆಹಾರವನ್ನು ಹುಡುಕುವುದು, ಅಂತೆಯೇ ಎಳೆಯ ಕಂದಮ್ಮನ ಜವಬ್ದಾರಿಯನ್ನು ನಿರ್ವಹಿಸಲು ಕುಟುಂಬ ಘಟಕದ ಸದಸ್ಯರು ಸಾಮಾನ್ಯವಾಗಿ ಅಸಾಧಾರಣ ಟೀಮ್‌ವರ್ಕ್ ಅನ್ನು ಪ್ರದರ್ಶಿಸುತ್ತವೆ.

ಆನೆಯ ದಂತಗಳು ವಾಸ್ತವವಾಗಿ ವಿಸ್ತಾರವಾದ ಬಾಚಿಹಲ್ಲುಗಳಾಗಿದ್ದು, ಆನೆಗಳಿಗೆ ಸುಮಾರು 2 ವರ್ಷ ವಯಸ್ಸಿನಲ್ಲೇ ಮೊದಲು ಕಾಣಿಸಿಕೊಳ್ಳುತ್ತವೆ. ಆನೆಗಳು ದಂತವನ್ನು ಆಹಾರ ಮತ್ತು ನೀರು ಅಗೆಯಲು ಬಳಸುತ್ತವೆ ಅಂತೆಯೇ ಮರಗಳ ತೊಗಟೆಯನ್ನು ತೆಗೆದುಹಾಕಲು ಬಳಸುತ್ತವೆ.

ಆನೆಗಳು ಹೆಚ್ಚು ದಪ್ಪನೆಯ ಚರ್ಮವನ್ನು ಹೊಂದಿದ್ದು ವಿಪರೀತ ಶಾಖ ಮತ್ತು ಸೂರ್ಯನ ಪ್ರಜ್ವಲ ಕಿರಣದಿಂದ ಅವುಗಳನ್ನು ಸಂರಕ್ಷಿಸುತ್ತವೆ. ಆನೆಗಳು ನೀರು ಮತ್ತು ಮಣ್ಣಿನಲ್ಲಿ ಸ್ನಾನ ಮಾಡುವುದರಿಂದ ಹೆಚ್ಚಿನ ಮಡಿಕೆಗಳು ಮತ್ತು ಸುಕ್ಕುಗಳು ತೇವಾಂಶವನ್ನು ಸಂಗ್ರಹಿಸಬಹುದು ಮತ್ತು ಅಲ್ಲಿ ಚರ್ಮವು ತುಂಬಾ ಶುಷ್ಕವಾಗಿರುತ್ತದೆ.

ಆನೆಗಳ ಬಗ್ಗೆ ಅತ್ಯಂತ ದುರದೃಷ್ಟಕರ ಸಂಗತಿಯೆಂದರೆ ದಂತ ವ್ಯಾಪಾರಕ್ಕಾಗಿ ಅವುಗಳನ್ನು ನಾಶಮಾಡುವುದಾಗಿದೆ. ಆನೆಯ ದಂತವು ನಂಬಲಾಗದಷ್ಟು ಲಾಭದಾಯಕ ಉದ್ಯಮವಾಗಿ ಮಾರ್ಪಟ್ಟಿದೆ. ನೂರಾರು ವರ್ಷಗಳ ಹಿಂದೆ, ದಂತವನ್ನು ಸಾಮಾನ್ಯವಾಗಿ ಘನತೆಯ ಸಂಕೇತವಾಗಿ ನೋಡಲಾಗುತ್ತಿತ್ತು. ದಂತಕ್ಕಾಗಿ 1970 ಮತ್ತು 1980 ರ ದಶಕದಲ್ಲಿ ನಡೆದ ಬೃಹತ್ ಅಕ್ರಮ ಆನೆ ಬೇಟೆಯಿಂದಾಗಿ, ಕಳೆದ ಶತಮಾನದಲ್ಲಿ ಸುಮಾರು 90% ರಷ್ಟು ಆಫ್ರಿಕನ್ ಆನೆಗಳು ನಾಶವಾಗಿವೆ.
ಹೆಚ್ಚುತ್ತಿರುವ ಮಾನವ ಜನಸಂಖ್ಯೆಯ ಸಾಂದ್ರತೆ ಮತ್ತು ಕೃಷಿಯ ವಿಸ್ತರಣೆಯಿಂದಾಗಿ, ವಿಶೇಷವಾಗಿ ಆಫ್ರಿಕಾದ ದೇಶಗಳಲ್ಲಿ, ಮಾನವರು ಮತ್ತು ವನ್ಯಜೀವಿಗಳ ನಡುವೆ ಉಲ್ಬಣಗೊಳ್ಳುತ್ತಿರುವ ಹಂಚಿಕೆಯ ಭೂಮಿ ಸಂಘರ್ಷಗಳಿಗೆ ಉತ್ತೇಜನ ನೀಡಿದೆ. ಅನೇಕರಿಗೆ ಆದಾಯದ ಏಕೈಕ ಮೂಲವಾಗಿರುವ ಬೆಳೆ-ದಾಳಿಯಿಂದ ಹಿಡಿದು, ಭೂ ಅಭಿವೃದ್ಧಿ, ಆನೆ ಜಾತಿಗಳ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥೆಯಿಂದಾಗಿ ಅವುಗಳ ನೈಸರ್ಗಿಕ ಆವಾಸಸ್ಥಾನಗಳ ಅವನತಿಯನ್ನು ತಡೆಗಟ್ಟಬೇಕಾಗಿದೆ.

ಆನೆಗಳ ಬಗ್ಗೆ ಹೆಚ್ಚು ಆಸಕ್ತಿದಾಯಕ ಸಂಗತಿಗಳಲ್ಲಿ ಇದೂ ಒಂದಾಗಿದ್ದು ,ಅವುಗಳು ತಮ್ಮ ಪಾದಗಳ ಮೂಲಕ ಕೂಡ ಸಂವಹನ ನಡೆಸಬಹುದಾಗಿದೆ. ಆನೆಗಳು ಸಂವಹನ ನಡೆಸಲು ಹಲವಾರು ವಿಧಾನಗಳಿವೆ. ಸಾಮಾನ್ಯವಾಗಿ ಕುಟುಂಬ ಸದಸ್ಯರನ್ನು ಸ್ವಾಗತಿಸುವಾಗ, ಆಂಗಿಕ ಭಾಷೆ ಮತ್ತು ಸ್ಪರ್ಶ ಮತ್ತು ಪರಿಮಳದಂತಹ ವಿಶಿಷ್ಟ ಇಂದ್ರಿಯಗಳನ್ನು ಬಳಸಿ ಪರಸ್ಪರರನ್ನು ಕೂಗಲು ಘೀಳಿಡುತ್ತವೆ. ಆದಾಗ್ಯೂ, ಆನೆಗಳು ಬಳಸುವ ಅತ್ಯಂತ ವಿಶಿಷ್ಟವಾದ ಸಂವಹನ ವಿಧಾನವೆಂದರೆ ಭೂಕಂಪನ ಸಂಕೇತಗಳ ಮೂಲಕವಾಗಿದ್ದು ಅವು ನೆಲದಲ್ಲಿ ಕಂಪನಗಳನ್ನು ಸೃಷ್ಟಿಸುತ್ತವೆ, ಇತರ ಆನೆಗಳು ಈ ಕಂಪನಗಳನ್ನು ತಮ್ಮ ಪಾದಗಳು ಮತ್ತು ಮೂಳೆಗಳ ಮೂಲಕ ಅವುಗಳನ್ನು ಪತ್ತೆಹಚ್ಚುತ್ತವೆ ಸಂವಹನ ಚಾನೆಲ್ ನಂಬಲಾಗದಷ್ಟು ದೂರದಲ್ಲಿ ಮತ್ತು ದಿಗಿಲೆಬ್ಬಿಸುವ ವೇಗದಲ್ಲಿ ಕೆಲಸ ಮಾಡಬಹುದು.

ಆನೆಯ ಸೊಂಡಿಲು ಮೂಗಿಗಿಂತಲೂ ಹೆಚ್ಚಿನ ಕೆಲಸ ಮಾಡುತ್ತದೆ. ವಾಸನೆ ಮತ್ತು ಉಸಿರಾಡುವುದಕ್ಕಿಂತಲೂ ಆನೆಗಳಿಗೆ ಹೆಚ್ಚುವರಿಯಾಗಿ ಸಹಕಾರಿಯಾಗಿದೆ. ಆಹಾರ ಮತ್ತು ವಸ್ತುಗಳನ್ನು ಹಿಡಿದುಕೊಳ್ಳಲು, ಮರದ ಕಾಂಡಗಳನ್ನು ಅಗೆಯಲು, ಆಟವಾಡಲು ಹಾಗೂ ಉದ್ದತೋಳಿನಂತೆ ಕೆಲಸ ಮಾಡುತ್ತದೆ. ಇನ್ನು ನೀರು ಸೇವಿಸಲು ಆನೆಗಳಿಗೆ ಸೊಂಡಿಲೇ ಸಹಕಾರಿ. ಸೊಂಡಿಲಿನಲ್ಲಿಯೇ 100,000 ವಿಭಿನ್ನ ಸ್ನಾಯುಗಳಿವೆ.

ಭೂಮಿಯ ಅತಿದೊಡ್ಡ ಭೂ ಸಸ್ತನಿಯಾಗಿದ್ದರೂ, ಆನೆಗಳ ಸಂಪೂರ್ಣ ಆಹಾರವು ಬೇರುಗಳು, ಹುಲ್ಲುಗಳು, ಹಣ್ಣುಗಳು ಮತ್ತು ತೊಗಟೆಯನ್ನು ಆಧರಿಸಿಕೊಂಡಿವೆ. ವಯಸ್ಕ ಆನೆಯು 300 ಪೌಂಡ್‌ಗಳಷ್ಟು ಆಹಾರವನ್ನು ಸೇವಿಸುತ್ತದೆ.
ದೊಡ್ಡ ಕೋತಿಗಳು ಹಾಗೂ ಡಾಲ್ಫಿನ್‌ಗಳಂತೆ ಆನೆಯು ವಿಶ್ವದ ಅತ್ಯಂತ ಬುದ್ಧಿವಂತ ಪ್ರಾಣಿ ಎಂದೆನಿಸಿದೆ. ತಮ್ಮ ಸೊಂಡಿಲುಗಳನ್ನು ಬಳಸಿಕೊಂಡು ಹಲವಾರು ಕಾರ್ಯಗಳನ್ನು ಮಾಡುತ್ತವೆ. ಅದೇ ರೀತಿ ಸಹಾನುಭೂತಿ ಮತ್ತು ದುಃಖದಂತಹ ಸಂಕೀರ್ಣ ಭಾವನೆಗಳನ್ನು ಅನುಭವಿಸಲು ಸೊಂಡಿಲುಗಳನ್ನು ಬಳಸುತ್ತವೆ.