ಜಾಗತಿಕ ಮಟ್ಟದಲ್ಲಿ ಭಾರತ ನಗೆಪಾಟಲಿಗೀಡಾಗಿಲ್ಲ.ಕ್ವಾಡ್ ದೇಶಗಳು, ಜಿ-7 ರಾಷ್ಟ್ರಗಳ ವೇದಿಕೆ, ಜಾಗತಿಕ ವಾತಾವರಣ ಕುರಿತ ಚರ್ಚೆ ಮುಂತಾದ ವೇದಿಕೆಗಳಲ್ಲಿ ಭಾರತಕ್ಕೆ ದೊರೆತ ಗೌರವಗಳೇ ಇದಕ್ಕೆ ಸಾಕ್ಷಿ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸಮರ್ಥಿಸಿಕೊಂಡಿದ್ದಾರೆ.
ಜಾಗತಿಕ ನಾಯಕರು ಭಾರತದ ಬಗ್ಗೆ ಇರಿಸಿರುವ ನಿರೀಕ್ಷೆಗಳೇ ಭಾರತದ ವಿದೇಶಾಂಗ ನೀತಿಯ ಯಶಸ್ಸನ್ನು ತೋರಿಸುತ್ತವೆ. ಹಲವು ದೇಶಗಳು ಕೊರೋನಾ ಕಾರಣದಿಂದ ತೀವ್ರ ಬಿಕ್ಕಟ್ಟು ಎದುರಿಸುತ್ತಿವೆ. ಆದರೆ, ಸವಾಲಿನ ನಡುವೆಯೇ ಭಾರತವು ತನ್ನದೇ ಆದ ರೀತಿಯಲ್ಲಿ ಸಮರ್ಥವಾಗಿ ನಿಭಾಯಿಸಿ, ಆರ್ಥಿಕತೆ ಕುಸಿತವನ್ನು ತಡೆಗಟ್ಟಿದೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ರಾಜಕೀಯ ಆರೋಪ, ಚರ್ಚೆಗಳು ಏನೇ ಇದ್ದರೂ ವ್ಯಾಖ್ಯಾನಗಳ ಅಂತಿಮ ಪರೀಕ್ಷೆಯಾಗುವುದು ಜನತಾ ನ್ಯಾಯಾಲಯದಲ್ಲಿ. ದೇಶದ ಆರ್ಥಿಕತೆಯನ್ನು ಉತ್ತಮವಾಗಿ ನಿಭಾಯಿಸಲಾಗಿದೆ. ಇದಕ್ಕಾಗಿಯೇ 2 ಚುನಾವಣೆಗಳಲ್ಲಿ ಜನರು ಬೆಂಬಲಿಸಿದ್ದಾರೆ ಎಂದು ಜೈಶಂಕರ್ ಅವರು ಹೇಳಿದರು.
ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ಜಾಗತಿಕ ಬ್ರ್ಯಾಂಡ್ ಆಗುತ್ತಿದೆ. ಮೂಲಸೌಕರ್ಯಗಳ ಸುಧಾರಣೆ ಎಂಬುದು ಮುಗಿಯದ ವಿದ್ಯಮಾನ ಎಂದರು.
ಅನೇಕ, ವಿದೇಶಿ ಕಂಪನಿಗಳು ಭಾರತಕ್ಕೆ ಬರಲು ಉತ್ಸುಕತೆ ತೋರುತ್ತಿವೆ. ಇದು ಭಾರತದ ಮೇಲಿಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ. ಇದರ ಲಾಭ ಬೆಂಗಳೂರಿಗೂ ಆಗಲಿದೆ ಎಂದು ಹೇಳಿದರು.
ಮುಂದಿನ ತಿಂಗಳು ಅಮೆರಿಕ ಭೇಟಿ ಸಂದರ್ಭ ಬೆಂಗಳೂರಿನಲ್ಲಿ ಅಮೆರಿಕ ಕಾನ್ಸಲೇಟ್ ತೆರೆಯುವ ಕುರಿತು ಪ್ರಸ್ತಾಪಿಸಲಾಗುವುದು. ಕಾನ್ಸಲೇಟ್ ತೆರೆಯುವ ಬಗ್ಗೆ ಬೆಂಗಳೂರು ಮತ್ತು ಹೈದರಾಬಾದ್ ನಡುವಿನ ಸ್ಫರ್ಧೆಯಲ್ಲಿ ಅಮೆರಿಕ 2006ರಲ್ಲಿ ಎರಡನೆಯದನ್ನೇ ಆಯ್ಕೆ ಮಾಡಿಕೊಂಡಿತ್ತು. ಅದು ಆ ದೇಶದ ನಿರ್ಧಾರ ಎಂದರು.