Friday, March 20, 2026
Friday, March 20, 2026
Home Blog Page 1471

ಸರ್ಕಾರದ ಒಂಟಿಮನೆ ಯೋಜನೆ ಪುನಃ ಚಾಲನೆ ನೀಡಲು ಸೂಚನೆ

0

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಒಂಟಿ ಮನೆ ಯೋಜನೆಗೆ ಮತ್ತೆ ಚಾಲನೆ ನೀಡುವಂತೆ ಸೂಚನೆ ನೀಡಿದ್ದಾರೆ.

ಆದ್ದರಿಂದ, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂಟಿ ಮನೆ ಯೋಜನೆಯನ್ನು ಮತ್ತೆ ಆರಂಭಿಸಲಾಗುತ್ತಿದೆ ಎಂದು ವಿಶೇಷ ಆಯುಕ್ತ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಹೇಳಿದ್ದಾರೆ.

2000 ಜನರಿಗೆ ತಲಾ 5 ಲಕ್ಷ ರೂಪಾಯಿಯಂತೆ ಧನಸಹಾಯ ನೀಡಲಾಗುತ್ತದೆ. ಶೀಘ್ರವೇ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಯೋಜನೆಗಾಗಿ 100 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅರ್ಜಿ ವಿಲೇವಾರಿಯಾದ ನಂತರ ಫಲಾನುಭವಿಗಳಿಗೆ ಚೆಕ್ ವಿತರಿಸಲಾಗುತ್ತದೆ ಎಂದರು.

ಮೋದಿಯವರ ದಕ್ಷ ನಾಯಕತ್ವದಿಂದ ಭಾರತಕ್ಕೆ ಬೆಲೆ-ಜೈಶಂಕರ್

0

40 ವರ್ಷಗಳ ಹಿಂದೆ ನಾನು ವಿದೇಶಾಂಗ ಸೇವೆಗೆ ಸೇರಿಕೊಂಡಾಗ ಜಾಗತಿಕ ಮಟ್ಟದಲ್ಲಿ ಭಾರತದ ದನಿಯೇ ಇರಲಿಲ್ಲ. ಆದರೀಗ ಪ್ರಧಾನಿ ಮೋದಿಯವರ ದಕ್ಷ ನಾಯಕತ್ವದಿಂದ ನಮ್ಮ ದನಿಗೆ ಅಭೂತಪೂರ್ವ ಬೆಲೆ ಬಂದಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿ​ದರು. ಹಾರೋ​ಹಳ್ಳಿ ಸಮೀ​ಪದ ಜೈನ್‌ ವಿವಿ ಆವರಣದಲ್ಲಿ ಶನಿವಾರ ನಡೆದ ಹರ್‌ ಘರ್‌ ತಿರಂಗಾ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಪಾಲ್ಗೊಂಡು ಮಾತ​ನಾ​ಡಿದ ಅವರು, ಎಂಟು ವರ್ಷಗಳಿಂದ ಈಚೆಗೆ ನಮ್ಮ ಯೋಗ, ಆಹಾರ, ಅಧ್ಯಾತ್ಮ, ಸಂಸ್ಕೃತಿ ಹಾಗೂ ಪರಂಪರೆಗಳಿಗೆ ವಿಶ್ವ ಮಟ್ಟದಲ್ಲಿ ಅಪಾರ ಗೌರವ ಪ್ರಾಪ್ತಿಯಾಗಿದೆ ಎಂದರು.

ವಿದೇಶಾಂಗ ನೀತಿಯು ದೇಶದ ಜನರ ದಿನನಿತ್ಯದ ಬದುಕಿನ ಮೇಲೆ ಅಪಾರ ಪರಿಣಾಮ ಬೀರುತ್ತದೆ. ಇದರಲ್ಲಿ ಭಾರತೀಯರ ಹಿತಾಸಕ್ತಿ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ನಾವು ತಾಳುವ ನಿಲುವು ನಿರ್ಣಾಯಕ ಪಾತ್ರ ವಹಿಸುತ್ತವೆ.

ಕೋವಿಡ್ ಚೇತರಿಕೆ ಪ್ರಮಾಣ ಶೇ 98.54 ರಷ್ಟಿದೆ

0

ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 14,092 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇದೇ ಅವಧಿಯಲ್ಲಿ 41 ಜನರು ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕರಣಗಳು 1,16,861ಕ್ಕೆ ಇಳಿಕೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.

ಮುಂಜಾನೆ 8 ಗಂಟೆಗೆ ಲಭ್ಯವಾದ ಮಾಹಿತಿ ಪ್ರಕಾರ, ಈ ಪೈಕಿ ಕೇರಳವೊಂದರಲ್ಲೇ 12 ಜನರು ಸಾವಿಗೀಡಾಗುವ ಮೂಲಕ ದೇಶದಲ್ಲಿ ಈವರೆಗೆ 5,27,037 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟು ಸೊಂಕು ಪ್ರಕರಣಗಳ ಪೈಕಿ ಶೇ 0.26ರಷ್ಟು ಸಕ್ರಿಯ ಪ್ರಕರಣಗಳಿವೆ.

ಒಟ್ಟು ಸೋಂಕು ಪ್ರಕರಣಗಳು 4,42,53,464ಕ್ಕೆ ಏರಿಕೆಯಾಗಿದೆ. 4,36,09,566 ಜನರು ಸೋಂಕಿನಿಂದ ಚೇತರಿಸಿಕೊಂಡಿರುವುದಾಗಿ ಅಂಕಿಅಂಶಗಳಿಂದ ತಿಳಿದುಬಂದಿದೆ.

ದೈನಂದಿನ ಪಾಸಿಟಿವಿಟಿ ದರವು ಶೇ 3.69 ರಷ್ಟಿದೆ. ವಾರದ ಪಾಸಿಟಿವಿಟಿ ದರ ಶೇ 4.57ರಷ್ಟಿದೆ. ಮರಣ ಪ್ರಮಾಣ ಶೇ 1.19ರಷ್ಟಿದ್ದರೆ, ರಾಷ್ಟ್ರೀಯ ಚೇತರಿಕೆ ದರವು ಶೇ 98.54ರಷ್ಟಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ದೇಶದಾದ್ಯಂತ ನಡೆಯುತ್ತಿರುವ ಲಸಿಕೆ ಅಭಿಯಾನದ ಅಂಗವಾಗಿ ಈವರೆಗೆ ದೇಶದಲ್ಲಿ 207.99 ಕೋಟಿ ಕೊರೋನಾ ವಿರುದ್ಧದ ಲಸಿಕಾ ಡೋಸ್‌ಗಳನ್ನು ವಿತರಿಸಲಾಗಿದೆ.

ಕುದ್ರೋಳಿಯಲ್ಲಿ ವಿವಿಧ ಧಾನ್ಯಗಳಿಂದ ರಾಷ್ಟ್ರಧ್ವಜ ವಿನ್ಯಾಸ

0

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಾವೆಲ್ಲರೂ ಒಂದೇ ಎನ್ನುವ ಭಾವೈಕ್ಯತೆ ಸಾರುವ ಹಿನ್ನೆಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಂಗಣದಲ್ಲಿ ಬೃಹತ್ ತಿರಂಗಾವನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮತ್ತು ಗುರು ಬೆಳದಿಂಗಳು ಫೌಂಡೇಶನ್ ವತಿಯಿಂದ ಸುಮಾರು 900 ಕೆ.ಜಿ. ಧವಸ ವಿನ್ಯಾಸಗೊಳಿಸಲಾಗಿದೆ.

ಆ.14ರಂದು ವೀಕ್ಷಣೆಗೆ ಲಭ್ಯವಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಅತ್ಯುತ್ತಮ ತನಿಖೆ ನಿರ್ವಹಿಸಿದ ಪೋಲಿಸ್ ಸಿಬ್ಬಂದಿಗೆ ಕೇಂದ್ರ ಗೃಹ ಸಚಿವರ ಪದಕ ಘೋಷಣೆ

0

2022 ರಲ್ಲಿ ಅತ್ಯುತ್ತಮ ತನಿಖೆ ನಿರ್ವಹಿಸಿದ ದೇಶದ ವಿವಿಧ ರಾಜ್ಯಗಳ 151 ಪೊಲೀಸ್ ಸಿಬ್ಬಂದಿಗೆ ಕೇಂದ್ರ ಗೃಹ ಸಚಿವರ ಪದಕ ಘೋಷಣೆ ಮಾಡಲಾಗಿದೆ.

ಪ್ರಶಸ್ತಿ ಪಡೆದವರಲ್ಲಿ ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) 15, ಮಹಾರಾಷ್ಟ್ರ ಪೊಲೀಸ್ ಇಲಾಖೆಯ 11, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ತಲಾ 10, ಕೇರಳ ಪೊಲೀಸ್, ರಾಜಸ್ಥಾನ ಪೊಲೀಸ್ ಮತ್ತು ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಯ ತಲಾ ಎಂಟು ಅಧಿಕಾರಿಗಳು ಪದಕ ಪುರಸ್ಕೃತರಾಗಿದ್ದಾರೆ.

ಇದರಂತೆಯೇ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಪೊಲೀಸರು ಕೂಡ ಪ್ರಶಸ್ತಿಗೆ ಭಾಜನರಾಗಿದ್ದು, ಇದಲ್ಲದೆ ಪ್ರಶಸ್ತಿ ಪುರಸ್ಕೃತರಲ್ಲಿ 28 ಮಹಿಳಾ ಪೊಲೀಸ್ ಅಧಿಕಾರಿಗಳೂ ಸೇರಿದ್ದಾರೆ ಎಂದು ತಿಳಿದುಬಂದಿದೆ.

ಅಪರಾಧದ ತನಿಖೆಯ ಉನ್ನತ ವೃತ್ತಿಪರ ಮಾನದಂಡಗಳನ್ನು ಉತ್ತೇಜಿಸುವ ಮತ್ತು ತನಿಖೆಯಲ್ಲಿ ಅಂತಹ ಶ್ರೇಷ್ಠತೆಯನ್ನು ಗುರುತಿಸುವ ಉದ್ದೇಶದಿಂದ 2018ರಲ್ಲಿ ಈ ಪದಕ ನೀಡಿಕೆ ಆರಂಭಿಸಲಾಗಿತ್ತು. ಇದನ್ನು ಪ್ರತಿ ವರ್ಷ ಆಗಸ್ಟ್ 12 ರಂದು ಘೋಷಿಸಲಾಗುತ್ತದೆ.
ತನಿಖೆಯಲ್ಲಿನ ಅತ್ಯುತ್ತಮ ಸೇವೆಯನ್ನು ಗುರುತಿಸಿ ಕೇಂದ್ರ ತನಿಖಾ ಸಂಸ್ಥೆಗಳು, ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಪಡೆಯ ಸದಸ್ಯರಿಗೆ ತನಿಖೆಯಲ್ಲಿ ಶ್ರೇಷ್ಠತೆಯ ಆಧಾರದ ಮೇಲೆ ಪದಕವನ್ನು ನೀಡಲಾಗುತ್ತದೆ. ಹೆಡ್ ಕಾನ್‌ಸ್ಟೆಬಲ್‌ನಿಂದ ಹಿಡಿದು ಪೊಲೀಸ್ ಅಧೀಕ್ಷಕರವರೆಗೆ ಶ್ರೇಣಿಯ ಅರ್ಹ ಅಧಿಕಾರಿಗಳ ಶಿಫಾರಸುಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಕೇಳಲಾಗಿದೆ.

2021ರ ತನಿಖೆಯಲ್ಲಿನ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕವನ್ನು 152 ಪೊಲೀಸ್ ಸಿಬ್ಬಂದಿಗೆ ನೀಡಲಾಗಿದೆ. 2021 ರಲ್ಲಿ ಈ ಪ್ರಶಸ್ತಿಗಳನ್ನು ಪಡೆದ ಸಿಬ್ಬಂದಿಗಳಲ್ಲಿ ಸಿಬಿಐನಿಂದ 15, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಪೊಲೀಸರಿಂದ ತಲಾ 11, ಉತ್ತರ ಪ್ರದೇಶದ 10, ಕೇರಳ ಮತ್ತು ರಾಜಸ್ಥಾನ ಪೊಲೀಸರಿಂದ 9, ತಮಿಳುನಾಡು ಪೊಲೀಸರಿಂದ 8, ಬಿಹಾರದಿಂದ ಏಳು, ಗುಜರಾತ್‌ನಿಂದ ತಲಾ ಆರು ಮಂದಿ ಸೇರಿದ್ದರು. ಅಂತೆಯೇ ಕರ್ನಾಟಕ ಮತ್ತು ದೆಹಲಿ ಪೊಲೀಸರು ಮತ್ತು ಉಳಿದವರು ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಪೊಲೀಸ್ ಸಿಬ್ಬಂದಿಗಳಾಗಿದ್ದಾರೆ ಎನ್ನಲಾಗಿದೆ.

ಹೇಳಿಕೆಗೆ ಕ್ಷಮೆಯಾಚಿಸಿದ ಪ್ರಿಯಾಂಕ ಖರ್ಗೆ

0

ಸರ್ಕಾರಿ ನೌಕರಿ ಪಡೆಯಬೇಕು ಎಂದರೆ ಯುವತಿಯರು ಮಂಚ ಏರಬೇಕು. ಯುವಕರು ಲಂಚ ಕೊಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದ ಜನರಲ್ಲಿ ಕ್ಷಮೆಯಾಚಿಸಲು ಸಿದ್ಧ ಎಂದಿದ್ದಾರೆ.

ಪ್ರಿಯಾಂಕ್ ಖರ್ಗೆ ಕ್ಷಮೆಯಾಚಿಸಬೇಕು ಎಂಬುದಾಗಿ ಬಿಜೆಪಿ ನಾಯಕರು ಒತ್ತಾಯಿಸಿರುವ ಬೆನ್ನಲ್ಲೇ, ನನ್ನ ಹೇಳಿಕೆಯಿಂದ ನಾಡಿನ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯಲ್ಲಿ ಅವಮಾನವಾಗುವ ರೀತಿಯಲ್ಲಿ ನನ್ನ ಮಾತುಗಳಲ್ಲಿ ನಾನು ಅರ್ಥೈಸಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ, ನಾನು ಕ್ಷಮೆ ಕೇಳಲು ಸಿದ್ದನಿದ್ದೇನೆ ಎಂದು ಅವರು ಹೇಳಿದ್ದಾರೆ.

ಈ ಕುರಿತಂತೆ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಶೇರ್ ಮಾಡಿರುವ ಅವರು, ನನ್ನ ಇಡೀ ಜೀವನ ಬಾಬಾಸಾಹೇಬರ ಆದರ್ಶಗಳ ಹಾದಿಯಲ್ಲಿ ಸಾಗಿದ್ದೇನೆ. ನಾಡಿನ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯಲ್ಲಿ ಅವಮಾನವಾಗುವ ರೀತಿಯಲ್ಲಿ ನನ್ನ ಮಾತುಗಳಲ್ಲಿ ನಾನು ಅರ್ಥೈಸಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ, ನಾನು ಕ್ಷಮೆ ಕೇಳಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.

ಅಂಗಾಂಗ ದಾನ‌ವೆಂದರೆ ಸಾವಿನ ನಂತರದಸಮಾಜ ಸೇವೆ- ಬೊಮ್ಮಾಯಿ

0

ಅಂಗಾಂಗ ದಾನ ಮಾನವೀಯತೆಯ ಕೆಲಸ. ಅಂಗಾಂಗಗಳನ್ನು ದಾನಕ್ಕೆ ಸಂಕಲ್ಪ ಮಾಡುವ ಮುಖಾಂತರ ಸಾವಿನ ನಂತರವೂ ಬದುಕು ನೀಡುವ ಸಾರ್ಥಕ ಕಾರ್ಯ ಮಾಡಬಹುದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧ ಮುಂಭಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಅಂಗಾಂಗ ದಾನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಒಬ್ಬ ವ್ಯಕ್ತಿ ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಎಂಟು ಜೀವಗಳನ್ನು ಉಳಿಸಬಹುದು. ಚರ್ಮದಿಂದ ಹಿಡಿದು ಎಲ್ಲ ಅಂಗಗಳನ್ನು ದಾನ ಮಾಡಬಹುದು. ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ. ಮಾನವ ಜನ್ಮ ಶ್ರೇಷ್ಠವಾದುದು. ಅಂಗಾಂಗ ದಾನದ ಮೂಲಕ ಈ ಶ್ರೇಷ್ಠ ಜೀವವನ್ನು ಉಳಿಸಿದಂತಾಗುತ್ತದೆ ಎಂದು ತಿಳಿಸಿದರು.

ವಿಜ್ಞಾನಿಗಳ, ವೈದ್ಯರ ಪರಿಶ್ರಮದಿಂದ ನಮ್ಮ ಸಾವಿನ ನಂತರ ಅಂಗಾಂಗಗಳನ್ನು ನೀಡುವ ಮೂಲಕ ಇತರರ ಜೀವವನ್ನು ಬದುಕಿಸಬಹುದಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಪ್ರಸ್ತುತ 18 ಅಂಗಾಂಗ ಮರುಪಡೆಯುವಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಿಮಾನ್ಸ್‌ನಲ್ಲಿ ಮೆದುಳು ದಾನ ಹಾಗೂ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಮೂತ್ರಪಿಂಡ ದಾನಗಳನ್ನು ಮಾಡಬಹುದಾಗಿದೆ. ಇದು ಸರ್ಕಾರದ ದೊಡ್ಡಸಾಧನೆ. ಅಂಗಾಂಗ ದಾನ ಮಾನವೀಯತೆ ಕೆಲಸ ಎಂದು ಹೇಳಿದರು.

ಬ್ರೈನ್‌ ಡೆಡ್‌ ವ್ಯಕ್ತಿಯ ಅಂಗಾಂಗ ದಾನದಿಂದ 8 ಮಂದಿ ಮರುಜೀವ ಪಡೆಯುವುದರ ಜತೆಗೆ ಮರಣಾನಂತರವೂ ಅಂಗಾಂಗಗಳು ಪ್ರಪಂಚ ನೋಡಲು ಸಾಧ್ಯವಾಗುತ್ತದೆ. ನಾನು ಕೂಡ ಅಂಗಾಂಗ ದಾನಕ್ಕೆ ಸಹಿ ಮಾಡಿದ್ದೇನೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಅಂಗಾಂಗ ದಾನ ಮಾಡಿದವರ ಕುಟುಂಬ ಸದಸ್ಯರನ್ನು ಸನ್ಮಾನಿಸಲಾಯಿತು. ಐದು ಸಾವಿರಕ್ಕೂ ಹೆಚ್ಚು ಮಂದಿ ಮೆಡಿಕಲ್ಸ್‌, ಪ್ಯಾರಾ ಮೆಡಿಕಲ್ಸ್‌ ನರ್ಸಿಂಗ್‌ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡರು.

ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಪರಿಷತ್‌ ಹಂಗಾಮಿ ಸಭಾಪತಿ ರಘುನಾಥ್‌ ರಾವ್‌ ಮಲ್ಕಾಪುರೆ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌ ಉಪಸ್ಥಿತರಿದ್ದರು.

ನ್ಯಾ.ಭಕ್ತವತ್ಸಲಸಮಿತಿ ವರದಿಗೆ ಸರ್ಕಾರದ ಅಂಗೀಕಾರ

0

ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿ ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ ಎಂದು ರಾಜ್ಯ ಸರ್ಕಾರ ಸೂಚಿಸಿದೆ.

ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ನ್ಯಾ.ಭಕ್ತವತ್ಸಲ ಸಮಿತಿ ವರದಿಯನ್ನು ಅಂಗೀಕರಿಸಿದ್ದು 2027-28ರಲ್ಲಿ ಹೊಸದಾಗಿ ಹಿಂ.ವರ್ಗಗಳಿಗೆ ರಾಜಕೀಯ ಮೀಸಲಾತಿ ನೀತಿ ಅನ್ವಯ ಚುನಾವಣೆ ನಡೆಸಲಾಗುವುದು. ಈ ವರ್ಷ ಹಳೆಯ ಮೀಸಲಾತಿ ಪಟ್ಟಿಯನ್ನು ಆಧರಿಸಿ ಚುನಾವಣೆ ನಡೆಸಲು ಸಂಪುಟ ತೀರ್ಮಾನ ಮಾಡಿದೆ’ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.

ಈ ವರೆಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇರಲಿಲ್ಲ. ಭಕ್ತವತ್ಸಲ ವರದಿ ಅನ್ವಯ ಮೇಯರ್ ಮತ್ತು ಉಪಮೇಯರ್ ಆಯ್ಕೆಯಲ್ಲಿ ಹಿಂದುಳಿದ ವರ್ಗಗಳಿಗೆ ಅವಕಾಶ ಕಲ್ಪಿಸಲಾಗಿದೆ. ಎಸ್ಸಿ-ಎಸ್ಟಿ, ಹಿಂದುಳಿದ ವರ್ಗಗಳಿಗೆ ಶೇ.50ರಷ್ಟು ಮೀಸಲಾತಿ ಪ್ರಮಾಣ ಮೀರದಂತೆ ನೀಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಕ್ಷೇತ್ರದ ಜನಸಂಖ್ಯೆಯನ್ನು ಆಧರಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಶೇ.13ರಷ್ಟು ಅನ್ವಯವಾಗಲಿದೆ.

ನಾನೂ ಮಂತ್ರಾಲಯಕ್ಕೆ ಹೋಗಿ ಬಂದೆ

0

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮರತಾಯ ಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ…

ಎನ್ನ ಗುರುದೈವರಾದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 351ನೇ ಆರಾಧನ ಮಹೋತ್ಸವದ ಶುಭ ಸಂದರ್ಭದಲ್ಲಿ ನಾನು, ಮಂತ್ರಾಲಯವನ್ನು ನೋಡಿದ ಆ ಸವಿಘಳಿಗೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ನನಗೆ ಚಿಕ್ಕ ವಯಸ್ಸಿನಿಂದಲೂ ಗುರುರಾಯರು ಪ್ರಿಯವಾದ ದೈವ. ಮಂತ್ರಾಲಯಕ್ಕೆ ಹೋಗಬೇಕು ಎಂಬುದು ನನ್ನ ಬಹುದೊಡ್ಡ ಕನಸು. ಸಾಮಾನ್ಯವಾಗಿ ರಾಯರನ್ನು ನಂಬಿದವರಲ್ಲಿ ಈ ಕನಸು ಇದ್ದೇ ಇರುತ್ತದೆ.

ಸುಮಾರು 2-3 ತಿಂಗಳ ಹಿಂದೆ ನಾನಿರುವ ಪಿಜಿಯ ಓನರ್ ಅಂಕಲ್ ಮಂತ್ರಾಲಯಕ್ಕೆ ಕರೆದುಕೊಂಡು ಹೋಗುವ ಪ್ಲಾನ್ ಮಾಡಿದ್ರು. ಈ ಪ್ಲಾನ್ ಸುಮಾರು ಎರಡು,ಮೂರು ಬಾರಿ ನಾನಾ ಕಾರಣಗಳಿಂದ ಕ್ಯಾನ್ಸಲ್ ಕೂಡ ಆಗಿತ್ತು. ಫೈನಲ್ ಆಗಿ ಒಂದು ಡೇಟ್ ಫಿಕ್ಸ್ ಆಯ್ತು. ನಾವು ಏಳು ಜನ ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆಂದು ಹೊರಟೆವು. ಅಂದು ಶನಿವಾರ ಸಂಜೆ 7.15ಕ್ಕೆ ನಾವುಗಳು ಕಾರಿನಲ್ಲಿ ಮಂತ್ರಾಲಯಕ್ಕೆ ಹೊರಟೆವು.

ನನಗೆ ಎಲ್ಲಿಲ್ಲದ ಸಂಭ್ರಮ, ಸಡಗರ. ಜೀವನದ ಬಹು ದೊಡ್ಡ ಕನಸು, ನನಸಾಗುತ್ತಿದೆ ಎಂಬ ಖುಷಿ. ನಾವು ಮಂತ್ರಾಲಯವನ್ನು ತಲುಪಬೇಕಾದರೆ ಬೆಳಗಿನ ಜಾವ 3.30 ಆಗಿತ್ತು.

ರಾಯರ ದರ್ಶನದ ಸಮಯ 6 ಗಂಟೆಯಿಂದ ಆರಂಭವಾಗುತ್ತದೆ. ತರಿಗೆ ವಿಶ್ರಾಂತಿ ಪಡೆದುಕೊಳ್ಳಲು,ರೂಮ್ ಗಳನ್ನು ಪಡೆದೆವು.

7.30ರ ಸರಿ ಸುಮಾರಿಗೆ ಬೃಂದಾವನದಲ್ಲಿ ನೆಲೆಸಿರುವ ರಾಯರ ದರ್ಶನ ಪಡೆಯಲು, ತೆರಳಿದೆವು. 8 ಗಂಟೆಗೆ ರಾಯರನ್ನು ನೋಡುವ ಸೌಭಾಗ್ಯ ನನಗೆ ದೊರಕಿತು. ಆ ಎರಡು ನಿಮಿಷ ಗುರುದೈವರ ದರ್ಶನ ಪಡೆಯುವಾಗಲೇ, ನನಗೆ ತಿಳಿಯದೆ ಮೈ ರೋಮಾಂಚನಗೊಂಡು, ನನ್ನ ಕಣ್ಣುಗಳು ಒದ್ದೆಯಾಗಿ, ಮೂಕಳಾದೆ.

ಅಲ್ಲಿಂದ ಹೊರಬಂದು ದೇವಸ್ಥಾನದ ಆವರಣದಲ್ಲಿ ಕುಳಿತೆವು. ಕೆಲ ಕಾಲ ಯಾರ ಬಳಿ ಮಾತನಾಡದೆ ಮೌನವಾಗಿ, ರಾಯರಲ್ಲಿ ನನ್ನೆಲ್ಲ ಭಾವನೆಗಳನ್ನು ಹಂಚಿಕೊಂಡನು. ಸುಮ್ಮನೆ ಹಾಗೆ ಕಣ್ಣು ಮುಚ್ಚಿ, ಇದು ಕನಸ್ಸು ನನಸು ಎಂದು ನನಗೆ ಸಂಶಯ ಉಂಟಾಯಿತು. ನಿಜಕ್ಕೂ ರಾಯರ ದರ್ಶನ ಪಡೆದು ಧನ್ಯಳಾದೆ ಎಂದೆನಿಸಿತು. ಅಲ್ಲಿಂದ, ಪಂಚಮುಖಿ ಆಂಜನೇಯ ದೇವಾಲಯದ ದರ್ಶನ ಪಡೆದು ಹಿಂದಿರುಗಿದೆವು.

ನನ್ನ ರಾಯರ ದರ್ಶನದ ಯಾತ್ರೆಗೆ ಕಾರಣರಾದ ನನ್ನ ಪಿಜಿಯ ಅಂಕಲ್ ಅವರಿಗೆ ನಿಜಕ್ಕೂ ನಾನು ಚಿರಋಣಿ. ನೀವು ಮಂತ್ರಾಲಯದ ಯಾತ್ರೆಯನ್ನ ಕೈಗೊಳ್ಳದಿದ್ದರೆ, ಒಮ್ಮೆಯಾದರೂ ನಿಮ್ಮ ಕುಟುಂಬದವರೊಂದಿಗೆ ರಾಯರ ದರ್ಶನದ ಸೌಭಾಗ್ಯವನ್ನು ಪಡೆದುಕೊಳ್ಳಿ…

  • ರಚನಾ.ಕೆ.ಆರ್

ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಅಕ್ರಮವಿಲ್ಲ ಪರೀಕ್ಷಾ ಪ್ರಾಧಿಕಾರ ಸ್ಪಷ್ಟನೆ

0

ಈಚೆಗೆ ನಡೆದ ಕೆಪಿಟಿಸಿಎಲ್‌ ಕಿರಿಯ ಸಹಾಯಕರ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಯೊಬ್ಬ ಸ್ಮಾರ್ಟ್‌ ವಾಚ್‌ ತಂದಿರುವುದು ಹೊರತುಪಡಿಸಿ, ಯಾವುದೇ ಪರೀಕ್ಷಾ ಅಕ್ರಮಗಳು ನಡೆದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಉದ್ದೇಶಿತ ಪರೀಕ್ಷೆಯಲ್ಲಿ ಗೋಕಾಕ್‌ ಪರೀಕ್ಷಾ ಕೇಂದ್ರದಲ್ಲೊಬ್ಬ ಅಭ್ಯರ್ಥಿ ಕೇಂದ್ರಕ್ಕೆ ಸ್ಮಾರ್ಟ್‌ ವಾಚ್‌ ತಂದಿರುವುದು ಪರೀಕ್ಷೆ ಆರಂಭವಾಗುತ್ತಿದ್ದಂತೆ ಪತ್ತೆಯಾಗಿದೆ. ತಕ್ಷಣ ವಶಪಡಿಸಿಕೊಳ್ಳಲಾಗಿದೆ. ಇತರೆ ಯಾವುದೇ ಅ ಕ್ರಮಗಳು ನಡೆದಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಗೋಕಾಕ್‌ನಲ್ಲಿರುವ ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಯೊಬ್ಬರು ತಮ್ಮ ಒಳ ಉಡುಪಿನಲ್ಲಿ ಸ್ಮಾರ್ಟ್‌ವಾಚ್‌ ಇಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗಿರುವುದನ್ನು ಪತ್ತೆಹಚ್ಚಲಾಗಿದೆ. ತಕ್ಷಣ ಅದನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ಬೇರೆ ಯಾವುದೇ ಪರೀಕ್ಷಾ ಅಕ್ರಮಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ ಎಂದು ಕೆಇಎ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.