Monday, March 23, 2026
Monday, March 23, 2026
Home Blog Page 1425

ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆ: ಶಿವಮೊಗ್ಗ ನಗರಕ್ಕೆ ಪ್ರಶಸ್ತಿ

0

ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆಯಲ್ಲಿ ದೇಶದ ಅತ್ಯುತ್ತಮ ನಗರಗಳಲ್ಲೊಂದು ಎಂಬ ಶ್ರೇಯಕ್ಕೆ ಶಿವಮೊಗ್ಗ ನಗರ ಪಾತ್ರವಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶದಾದ್ಯಂತ ಸಮೀಕ್ಷೆ ನಡೆಸಿದ್ದ ಕೇಂದ್ರ ಸರ್ಕಾರ, ಸ್ವಚ್ಛತೆ ನಿಟ್ಟಿನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಕಾರ್ಯವೈಖರಿಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಮೇಯರ್ ಸುನೀತಾ ಅಣ್ಣಪ್ಪ ಹಾಗೂ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡ ಅವರು ಅಕ್ಟೋಬರ್ 1ರಂದು ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ತಾಂತ್ರಿಕ ಕಾರಣದಿಂದ ಹೊಸ ಬಿಪಿಎಲ್ ಕಾರ್ಡ್ ವಿತರಣೆಯಾಗಿಲ್ಲ

0

ರಾಜ್ಯದಲ್ಲಿ ವಿವಿಧ ಕಾರಣಗಳಿಂದಾಗಿ ಈಗಾಗಲೇ ಲಕ್ಷಾಂತರ ಕಾರ್ಡ್ ಗಳನ್ನು ಸರ್ಕಾರ ರದ್ದುಗೊಳಿಸಿದೆ.

ಈ ನಡುವೆಯೂ ಹೊಸ ಬಿಪಿಎಲ್ ಕಾರ್ಡ್ ಗಳಿಗಾಗಿ ಅರ್ಜಿ ಸಲ್ಲಿಸುತ್ತಿರೋರ ಸಂಖ್ಯೆ ಏನೂ ಕಡಿಮೆ ಆಗಿಲ್ಲ.
ಆದ್ರೇ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಿ, ಆದ್ರೇ ಕಾರ್ಡ್ ಬಂತೋ ಇಲ್ಲವೋ, ಬರುತ್ತೋ ಇಲ್ಲವೇ ಎಂಬುದನ್ನು ಮಾತ್ರ ಕೇಳ ಬೇಡಿ ಎಂಬುದಾಗಿ ಆಹಾರ ಇಲಾಖೆ ಹೇಳುತ್ತಿದೆ.

ಹೌದು.. ರಾಜ್ಯದಲ್ಲಿ ಈವರೆ 3.11 ಲಕ್ಷ ಕುಟುಂಬಗಳು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಹೀಗೆ ಸಲ್ಲಿಕೆಯಾದಂತ ಕಾರ್ಡ್ ಗಳನ್ನು ಪರಿಶೀಲಿಸಿ, ಅರ್ಹರಿಗೆ ವಿತರಿಸಬೇಕಾದಂತ ಸರ್ಕಾರ ಮಾತ್ರ, ಯಾವುದೇ ಒಪ್ಪಿಗೆ ಸೂಚಿಸದ ಕಾರಣ, ವಿತರಣೆಯಾಗಿಲ್ಲ.

ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಅನೇಕ ಅರ್ಹ ಕುಟುಂಬಗಳು ಆಹಾರ ಧಾನ್ಯವಿಲ್ಲದೇ, ಬಿಪಿಎಲ್ ಕಾರ್ಡ್ ನಿಂದ ವಂಚಿತವಾಗಿ ದಿನದೂಡುವಂತೆ ಆಗಿದೆ. ಇದಷ್ಟೇ ಅಲ್ಲದೇ ಬಿಪಿಎಲ್ ಕಾರ್ಡ್ ಇದ್ದರೇ ಉಚಿತ ಚಿಕಿತ್ಸೆ ಸೌಲಭ್ಯ ಕೂಡ ಸಿಗದೇ, ಪರದಾಡುವಂತೆ ಆಗಿದೆ.

ಅಂದಹಾಗೇ ರಾಜ್ಯದಲ್ಲಿ 1.26 ಕೋಟಿ ಬಿಪಿಎಲ್ ಕಾರ್ಡ್ ಗಳಿದ್ದಾವೆ. ಹೊಸ ಕಾರ್ಡ್ ಯಾಕೆ ವಿತರಣೆ ಮಾಡುತ್ತಿಲ್ಲ ಎಂಬುದಾಗಿ ಆಹಾರ ಇಲಾಖೆಯ ಕಾರ್ಯದರ್ಶಿ ಡಾ.ಎಂ.ಟಿ ರೇಜು ಅವರನ್ನು ಕೇಳಿದ್ರೇ, ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ. ರಾಜ್ಯ ಸರ್ಕಾರ ಅನುಮತಿ ಕೊಟ್ಟಿಲ್ಲ.

ಹೀಗಾಗಿ ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಳ್ಳೋದಕ್ಕೆ ಆಗದೇ, ಹೊಸ ಕಾರ್ಡ್ ವಿತರಣೆ ಆಗಿಲ್ಲ. ಆದ್ರೇ ಹೊಸ ಕಾರ್ಡ್ ಗಾಗಿ ಅರ್ಜಿಯನ್ನು ಸಾರ್ವಜನಿಕರು ಸಲ್ಲಿಸಬಹುದಾಗಿದೆ ಎಂದಿದ್ದಾರೆ.

ಮೈಸೂರು ಪ್ರವಾಸಿಗರಿಗೆ ದಸರಾ ಸ್ಪೆಷಲ್ ಹೆಲಿ ರೈಡ್

0

ವಿಶ್ವ ವಿಖ್ಯಾತ ಮೈಸೂರು ದಸರಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈಗಾಗಲೇ ಚಾಲನೆ ನೀಡಿದ್ದು, ನಾಡಿನೆಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೊರೊನಾ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ದಸರಾ ಹಬ್ಬ ಈ ಬಾರಿ ತನ್ನ ಎಂದಿನ ವೈಭವವನ್ನು ಮರಳಿ ಪಡೆದಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರತಿದಿನ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಆಯೋಜಕರಿಂದ ಕೆಲವೊಂದು ಗೊಂದಲಗಳು ಮುಂದುವರೆದಿದೆ ಎನ್ನಲಾಗಿದ್ದು, ದಸರಾ ಸಿನಿಮೋತ್ಸವಕ್ಕೆ ಹೆಚ್ಚಿನ ಪ್ರಚಾರ ಸಿಗದ ಕಾರಣ ಪ್ರೇಕ್ಷಕರು ನಿರೀಕ್ಷಿತ ಸಂಖ್ಯೆಯಲ್ಲಿ ಆಗಮಿಸಿರಲಿಲ್ಲ ಎನ್ನಲಾಗಿದೆ.

ಇದರ ಮಧ್ಯೆ ಇಂದಿನಿಂದ ಸಾರ್ವಜನಿಕರಿಗೆ ‘ಹೆಲಿ ರೈಡ್’ ಆರಂಭವಾಗಿದ್ದು, ಎಂಟು ನಿಮಿಷಗಳ ಕಾಲ ಹೆಲಿಕಾಪ್ಟರ್ ಮೂಲಕ ಮೈಸೂರು ದರ್ಶನ ಮಾಡಿಸಲಾಗುತ್ತದೆ. ಅಕ್ಟೋಬರ್ 5 ರ ವರೆಗೆ ಇದು ನಡೆಯಲಿದ್ದು, ಒಬ್ಬರಿಗೆ ರೂ.3999 ರೂಪಾಯಿಗಳನ್ನು ನಿಗದಿ ಮಾಡಲಾಗಿದೆ.

ಸಾರ್ವಜನಿಕರು ಜಯಚಾಮರಾಜೇಂದ್ರ ಒಡೆಯರ್ ಹೆಲಿಪ್ಯಾಡ್ ನಲ್ಲಿ ಇದರ ಸೇವೆ ಪಡೆಯಬಹುದಾಗಿದೆ.

ಕಾನೂನು ಬಾಹಿರ ಚಟುವಟಿಕೆ :ರಾಜ್ಯದಾದ್ಯಂತ 40 ಕ್ಕೂ ಹೆಚ್ಚು ಮಂದಿ ಬಂಧನ

0

ರಾಜ್ಯಾದ್ಯಂತ ಏಕಕಾಲದಲ್ಲಿ ಕರ್ನಾಟಕ ಪೊಲೀಸರು ಪಿಎಫ್‌ಐ ಕಚೇರಿ, ನಾಯಕರ ನಿವಾಸದ ಮೇಲೆ ದಾಳಿಯನ್ನು ನಡೆಸಿದ್ದಾರೆ. ಕಾನೂನುಬಾಹಿರ ಚಟುವಟಿಕೆಯಲ್ಲಿ ಶಾಮೀಲಾದ ಅನುಮಾನದ ಮೇಲೆ 40ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ.

ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಪಿಎಫ್‌ಐ ನಾಯಕ ನಿವಾಸದ ಮೇಲೆ ದಾಳಿಯನ್ನು ನಡೆಸಿದ್ದಾರೆ. ಮಂಗಳೂರು, ಬಾಗಲಕೋಟೆ, ರಾಮನಗರ, ಕೊಪ್ಪಳ, ಬಳ್ಳಾರಿ, ಬೆಂಗಳೂರು ಗ್ರಾಮಂತರ, ಕೋಲಾರ, ಮೈಸೂರು, ಚಾಮರಾಜನಗರದಲ್ಲೂ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿಯನ್ನು ನಡೆಸಿ 40ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ತನಿಖೆಯನ್ನು ನಡೆಸುತ್ತಿದ್ದಾರೆ.

ಪಿಎಫ್‌ಐ ಮೇಲೆ ಕೆಲದಿನಗಳ ಹಿಂದೆಯಷ್ಟೆ ಎನ್‌ಐಎ, ಇಡಿ, ರಾಜ್ಯ ಪೊಲೀಸರ ಸಹಕಾರದೊಂದಿಗೆ ದೇಶದಾದ್ಯಂತ ಮಹತ್ವದ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಈ ದಾಳಿ ಸಮಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಲವು ಕಾರ್ಯಕರ್ತರು ಸಕ್ರಿಯವಾಗಿ ಪ್ರತಿಭಟನೆಯನ್ನು ನಡೆಸಿದ್ದರು. ಇವರ ಮೇಲೂ ಸಾಕಷ್ಟು ಅನುಮಾನಗಳು ಉಂಟಾದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ದಾಳಿಯನ್ನು ನಡೆಸಿದ್ದಾರೆ.

ಮಳೆ ಹಾನಿ ಪರಿಹಾರಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ-ಯಡಿಯೂರಪ್ಪ

0

ರಾಜ್ಯದಲ್ಲಿ ಇತ್ತೀಚೆಗಷ್ಟೇ ಸುರಿದ ನಿರಂತರ ಮಳೆಯಿಂದ ಕೃಷಿ ಕ್ಷೇತ್ರಕ್ಕೆ ಭಾರಿ ಹಾನಿಯಾಗಿದ್ದು, ಬೆಳೆ ನಷ್ಟಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ ಪುಣ್ಯಸ್ಮರಣೆ ನಿಮಿತ್ತ ಸಿರಿಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ದೇಶದಲ್ಲಿ 26 ಸಾವಿರ ಕೋಟಿ ರೂಪಾಯಿಗಳಷ್ಟು ಬೆಳೆ ಭಾರೀ ಮಳೆ ಪ್ರವಾಹಕ್ಕೆ ನಷ್ಟವಾಗಿದೆ, ಬೆಳೆ ಪರಿಹಾರವಾಗಿ 1 ಲಕ್ಷ ಕೋಟಿಯನ್ನು ವಿವಿಧ ವಿಮಾ ಕಂಪನಿಗಳು ವಿತರಿಸಿವೆ.

ತಾವು ಸಿಎಂ ಆಗಿದ್ದ ಅವಧಿಯಲ್ಲಿ ಭರಮಸಾಗರ ಏತ ನೀರಾವರಿ ಯೋಜನೆಗೆ 565 ಕೋಟಿ ರೂಪಾಯಿ, ಜಗಳೂರು ಏತ ನೀರಾವರಿ ಯೋಜನೆಗೆ 725 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಇದರಿಂದ ಈ ಪ್ರದೇಶಕ್ಕೆ ನೀರು ಸಾಕಾಗುತ್ತದೆ ಎಂದರು.

ಆದಿ ರಂಗನಾಥ ದೇವಾಲಯ ಗೋಪಾಳ, ಶಿವಮೊಗ್ಗ

0

ಗೋಪಾಳ…ಶಿವಮೊಗ್ಗದ ಜನತೆಗೆ ತೀರಾ ಪರಿಚಯವಿರುವ ಜನವಸತಿ ತಾಣ.ಶಿವಮೊಗ್ಗದ ಈ ತುದಿಯಲ್ಲಿ ಬೆಳವಣಿಗೆ ಕಾಣುತ್ತಿದೆ.
ಗೋಪಾಳ ಪ್ರದೇಶ..ಗೋವುಗಳ ಸಮೃದ್ಧತಾಣವಾಗಿದ್ದು ..ಗೋಪಾಲರು ವಾಸಮಾಡುತ್ತಿದ್ದರಿಂದ ಈ ಹೆಸರು ಅನ್ವರ್ಥವಾಗಿ ಬಂತೆಂದು ಪ್ರತೀತಿ.
ಆದಿರಂಗನಾಥಸ್ವಾಮಿಯ ದೇವಾಲಯವೇ ಇದಕ್ಕೆ ಪುರಾತನ ಆಧಾರವೆನ್ನುತ್ತಾರೆ ಚರಿತ್ರೆಯ ಅಧ್ಯಯನದ ಹಿನ್ನೆಲೆಯಿದ್ದು ಪ್ರಾಧ್ಯಾಪಕರಾಗಿದ್ದು ಈಗ ಅಮೂಲ್ಯಶೋಧ ಸ್ಥಾಪಕರಾಗಿರುವ ಹಿರಿಯ ಖಂಡೋಬರಾವ್ .ಅಲ್ಲದೇ ಗರ್ಭಗುಡಿಯಲ್ಲಿ ಲಿಂಗವೂ ಇದೆ. ಅಂದರೆ ಹರಿಹರ ಸಮನ್ವಯತೆಯನ್ನೂ ಸಾರುವ ದೇವಸ್ಥಾನ ಅತ್ಯಂತ ಪುರಾತನವೆಂದು ಕಟ್ಟಡವೇ ಹೇಳುತ್ತದೆ. ಕ್ರಿ.ಶ.1103-1115 ರಲ್ಲಿ ಆಳಿದ ಗಂಗರ ದೊರೆ ತ್ರಿಭುವನ ಮಲ್ಲಭುಜಬಲ ಗಂಗಪೆರ್ಮಾಡಿಯ ಕಾಲದಲ್ಲಿ ವೆಂಕಟನಾಯಕನು ಸಿರಿಯೋಜ ಎಂಬ ಶಿಲ್ಪಿಯ ಸಹಕಾರದಿಂದ ನಿರ್ಮಿಸಿದ ಬಗ್ಗೆ ಇತಿಹಾಸತಜ್ಞ ಬಿ.ಎಸ್.ರಾಮಭಟ್ಟರು ಇಲ್ಲಿ ದೊರೆತ ಶಾಸನ ಆಧರಿಸಿ ದಾಖಲಿಸಿದ್ದಾರೆ. ಪ್ರಾಚೀನ ಶಿವಮೊಗ್ಗೆಯ ಸಂಕೇತವಾಗಿ ಈ ದೇಗುಲ ಶೋಭಿಸುತ್ತಿದೆ.

ಇದೇ ರೀತಿಯ ರಂಗ-ಲಿಂಗ ಸಾನಿಧ್ಯ ಮಲೇಬೆನ್ನೂರು ಸನಿಹದ ಕೊಮಾರನಹಳ್ಳಿಯ ರಂಗನಾಥ ದೇಗುಲದಲ್ಲೂ ಕಾಣಬಹುದು.ಅದನ್ನೇ ಹೆಳವನಕಟ್ಟೆ ಗಿರಿಜಮ್ಮ ” ಈತ ಲಿಂಗ ದೇವಾ ಶಿವನು…ಆತ ರಂಗ ಧಾಮಾ ವಿಷ್ಣು.” ಎಂದು ಹಾಡಿದ್ದಾರೆ.
ಸುಂದರ ರಂಗನಾಥನನ್ನ ನೋಡುತ್ತಾ ಕುಳಿತರೆ ಹೊತ್ತುಸರಿದದ್ದೇ ತಿಳಿಯದು.ಅಂತಹ ಆಕರ್ಷಣೀಯ ಮೂರ್ತಿ. ಒಳಾಂಗಣ ಕಟ್ಟಡದ
ಹೊರಮೈ ಆಧುನಿಕ ಸ್ಪರ್ಶಪಡೆದಿದೆ.

ನಿಜಕ್ಕೂ ನೀವು ಆ ಪರಿಸರಕ್ಕೆ ಪ್ರವೇಶಪಡೆದರೆ
ಜಗದಜಂಜಡದಿಂದ ಬಿಡುಗಡೆ ಪಡೆದ ಅನುಭವ ನಿಮ್ಮದಾಗುತ್ತದೆ.ಇದಕ್ಕಿಂತ ನಿರಾಳತೆ ನಿಮಗೆಲ್ಲಿ ಸಿಗುತ್ತದೆ ? ನಿಜಕ್ಕೂ ರಂಗನಾಥನಲ್ಲಿ ಬೇಡೋಣ . ದಯಾಮಯನೇ ನೀನಿರುವ ಪರಿಸರ ಕಮರ್ಷಿಯಲ್ ತಾಣವಾಗದೇ ಇರುವಂತೆ ನೋಡಿಕೋ ದೇವರೆ. ಹೀಗೇ ಮನಃಶಾಂತಿಯ ತಾಣವಾಗಿರಲಿ.

ಇತರ ಕರೆನ್ಸಿಗಳಿಗೆ ಹೋಲಿಸಿದರೆ ನಮ್ಮ ರೂಪಾಯಿ ಹೆಚ್ಚು ಪ್ರಬಲ-ನಿರ್ಮಲಾ ಸೀತಾರಾಮನ್

0

ಇತರ ಕರೆನ್ಸಿಗಳಿಗೆ ಹೋಲಿಸಿದರೆ ಅಮೆರಿಕಾ ಡಾಲರ್ ಎದುರು ರೂಪಾಯಿ ಹೆಚ್ಚು ಪ್ರಬಲವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ದಾಖಲೆಯ ಕುಸಿತಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆರ್‌ಬಿಐ ಮತ್ತು ಹಣಕಾಸು ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದರು.

ಪುಣೆ ಜಿಲ್ಲೆಗೆ ತಮ್ಮ ಮೂರು ದಿನಗಳ ಭೇಟಿಯ ಕೊನೆಯ ದಿನದಂದು ಮಾಧ್ಯಮಗಳೊಂದಿಗೆ ಮಾತನಾಡಿದ ಹಣಕಾಸು ಸಚಿವರು, ಇತರ ಕರೆನ್ಸಿಗಳಿಗೆ ಹೋಲಿಸಿದರೆ ಸ್ಥಿರತೆ ಕಾಯ್ದುಕೊಳ್ಳುವ ಸಾಮರ್ಥ್ಯವಿರುವ ಒಂದು ಕರೆನ್ಸಿ ಇದ್ದರೆ, ಅದು ಭಾರತೀಯ ರೂಪಾಯಿ ಮಾತ್ರ. ನಾವು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದೇವೆ ಎಂದರು.

ಒಂದೇ ಆವರಣದಲ್ಲಿ ಪ್ರಾಥಮಿಕ ಪ್ರೌಢ ಶಾಲೆಗಳಿದ್ದರೆ ಏಕಶಾಲೆ ಪರಿವರ್ತನೆ

0

ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಒಂದು ಆವರಣದಲ್ಲಿ ಒಂದೇ ಮಾಧ್ಯಮದ 2ಕ್ಕಿಂತ ಹೆಚ್ಚಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ನಡೆಯುತ್ತಿದ್ದರೆ, ಅಂತಹ ಶಾಲೆಗಳನ್ನು ಗುರುತಿಸಿ ಒಂದೇ ಶಾಲೆಯನ್ನಾಗಿ ಮಾಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.
ನಾಗೇಶ್‌ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಸಂಬಂಧ ಟಿಪ್ಪಣಿ ಹೊರಡಿಸಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಉಪ ನಿರ್ದೇಶಕರು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಒಂದೇ ಆವರಣದಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳೊಂದಿಗೆ ಶಾಲೆಗಳು ನಡೆಯುತ್ತಿರುವುದನ್ನು ಗಮನಿಸಲಾಗಿದೆ.

ಈ ರೀತಿಯ ಶಾಲೆಯಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಪೂರಕ ವಾತಾವರಣ ಇರುವುದಿಲ್ಲ.
ಈ ಶಾಲೆಗಳಿಗೆ ಇರುವ ಪ್ರತ್ಯೇಕ ಯು-ಡೈಸ್‌ ಕೋಡ್‌ಗಳಿಗೆ ಬದಲಾಗಿ ಒಂದೇ ಯು-ಡೈಸ್‌ ಕೋಡ್‌ಗಳನ್ನು ನೀಡಲು ಇಲಾಖೆಯು ಆಯುಕ್ತರು ಕೂಡಲೇ ಕ್ರಮ ಕೈಗೊಳ್ಳಬೇಕು. ಕೈಗೊಂಡ ವರದಿಯನ್ನು ಕಡತದ ಮೂಲಕ ಸಲ್ಲಿಸುವಂತೆ ಸಚಿವರು ಸೂಚಿಸಿದ್ದಾರೆ.

ಹೊಸ ಶಿಕ್ಷಣ ನೀತಿಯಿಂದ ಶಿಕ್ಷಣದ ಗುಣಮಟ್ಟ ಹೆಚ್ಚುತ್ತಿದೆ-ಪ್ರೊ.ವೇಕಟೇಶ್ವರಲು

0

ಕಳೆದ ದಶಕದಿಂದೀಚೆಗೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳ ತೀವ್ರ ಪ್ರತಿಸ್ಫರ್ಧೆಯ ನಡುವೆ ಸರ್ಕಾರಿ ಅನುದಾನಿತ ವಿಶ್ವವಿದ್ಯಾಲಯಗಳು ಸ್ವಾಯತ್ತತೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಿನ ವಿಚಾರವಾಗಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘದ ವತಿಯಿಂದ ಜ್ಞಾನಸಹ್ಯಾದ್ರಿಯ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ವಿಶ್ವವಿದ್ಯಾಲಯದ ವ್ಯವಸ್ಥೆಯೇ ಸಂಪೂರ್ಣ ಬುಡಮೇಲಾಗುತ್ತಿದೆ. ಒಂದೆಡೆ ಸರ್ಕಾರದ ಅನುದಾನ ಕಡಿತಗೊಳ್ಳುತ್ತಿದ್ದರೆ, ಇನ್ನೊಂದೆಡೆ ವಿವಿಗಳು ಬಹುತೇಕ ಸ್ವಾಯತ್ತತೆ ಕಳೆದುಕೊಳ್ಳುತ್ತಿದೆ ಎಂದರು.

ಹೊಸ ಶಿಕ್ಷಣ ನೀತಿಯ ಅನುಷ್ಠಾನದ ನಂತರ ಶಿಕ್ಷಣ ಕ್ಷೇತ್ರ ಕೂಡ ಮುಕ್ತವಾಗಿದ್ದು, ಸರ್ಕಾರಿ ವಿವಿಗಳು, ಖಾಸಗಿ ವಿವಿಗಳು, ಕಾಲೇಜುಗಳು, ಡೀಮ್ಡ್ ಶಿಕ್ಷಣ ಸಂಸ್ಥೆಗಳು, ಹೀಗೆ ಎಲ್ಲವೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದರ ಜೊತೆಗೆ ಸರ್ಕಾರದ ಅನುದಾನವನ್ನು ನಿರೀಕ್ಷಿಸದೆ ತಮ್ಮ ಸಂಪನ್ಮೂಲಗಳನ್ನು ತಾವೇ ಕ್ರೋಢೀಕರಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇಂಥಹಾ ಸವಾಲಿನ ಸಮಯದಲ್ಲಿ ವಿವಿಗಳು ಸ್ವಾವಲಂಬಿಗಳಾಗುವತ್ತ ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ ಎಂದರು.

ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ದೂರಶಿಕ್ಷಣ ಕೋರ್ಸ್ಗಳನ್ನು ನಡೆಸುವುದರ ಮೂಲಕ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದ ಕುವೆಂಪು ವಿಶ್ವವಿದ್ಯಾಲಯ ಈಗ ಸರ್ಕಾರದ ಅನುದಾನಕ್ಕೆ ಕಾದು ಕೂರುವಂತಹ ಗಂಭೀರ ಸ್ಥಿತಿಯಲ್ಲಿದೆ. ಸರ್ಕಾರ ಎಲ್ಲ ವಿಶ್ವವಿದ್ಯಾಲಯದ ದೂರ ಶಿಕ್ಷಣ ಕೋರ್ಸ್ಗಳಿಗೆ ಕಡಿವಾಣ ಹಾಕಿದ್ದು ದೊಡ್ಡ ಹಿನ್ನಡೆ ಎಂದರು.

ಕುಲಸಚಿವೆ ಜಿ. ಅನುರಾಧ, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಕೆ. ನವೀನ್ ಕುಮಾರ್, ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ, ಸಂಘದ ಅಧ್ಯಕ್ಷ ಪ್ರೊ. ಭೋಜ್ಯಾನಾಯಕ್, ಕಾರ್ಯದರ್ಶಿ ಪ್ರೊ. ಪ್ರಶಾಂತ್ ನಾಯಕ್, ಪ್ರೊ. ವೆಂಕಟೇಶ್, ಪ್ರೊ. ಯಾದವ್ ಬೋಡ್ಕೆ, ಪ್ರೊ. ನಾಗರಾಜ್, ಮತ್ತಿತರ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿವಮೊಗ್ಗ ಆದಿಚುಂಚನಗಿರಿ ಶಾಖಾ ಮಠದಲ್ಲಿಶರನ್ನವರಾತ್ರ್ಯೋತ್ಸವ

0

ಶಿವಮೊಗ್ಗ ಶಾಖಾ ಮಠದಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿ ಮತ್ತು ಶೀ ಕಾಳಿಕಾಂಬ ದೇವಿಯ ಅಮ್ಮನವರ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವವು ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು ಹಾಗೂ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ 26/09/2022 ರಿಂದ 05/10/2022 ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಒಂಬತ್ತು ದಿನಗಳವರೆಗೆ ಶ್ರೀದೇವಿಗೆ ವಿವಿಧ ಅಲಂಕಾರಗಳಿಂದ ಪೂಜಾ ಕೈಂಕರ್ಯಗಳು ಜರುಗಲಿವೆ.

ಸಂಜೆ ದುರ್ಗಾಹೋಮ ನಡೆಸಲಾಗುವುದು, ಪ್ರತಿದಿನ ಸಂಜೆ 6:15 ರಿಂದ 7:20 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ದಿವ್ಯಸಾನಿಧ್ಯದಲ್ಲಿ ಅ, 01/10/2022 ರಂದು ಬೆಳಿಗ್ಗೆ 7 ರಿಂದ ಚಂಡಿಕಾ ಹೋಮ, ಮಹಾಮಂಗಳಾರತಿ, ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ನಂತರ ಪ್ರಸಾದ ವಿನಿಯೋಗ ವಿರುತ್ತದೆ. ಅ,05/10/2022 ರ ಸಂಜೆ 5 ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮವಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ. ಶ್ರೀ ಕಾಳಿಕಾಂಬ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಶಿಮೊಗ್ಗ ಶಾಖಾಮಠದ ವ್ಯವಸ್ಥಾಪಕರು ಕೋರಿದ್ದಾರೆ