ಗೋಪಾಳ…ಶಿವಮೊಗ್ಗದ ಜನತೆಗೆ ತೀರಾ ಪರಿಚಯವಿರುವ ಜನವಸತಿ ತಾಣ.ಶಿವಮೊಗ್ಗದ ಈ ತುದಿಯಲ್ಲಿ ಬೆಳವಣಿಗೆ ಕಾಣುತ್ತಿದೆ.
ಗೋಪಾಳ ಪ್ರದೇಶ..ಗೋವುಗಳ ಸಮೃದ್ಧತಾಣವಾಗಿದ್ದು ..ಗೋಪಾಲರು ವಾಸಮಾಡುತ್ತಿದ್ದರಿಂದ ಈ ಹೆಸರು ಅನ್ವರ್ಥವಾಗಿ ಬಂತೆಂದು ಪ್ರತೀತಿ.
ಆದಿರಂಗನಾಥಸ್ವಾಮಿಯ ದೇವಾಲಯವೇ ಇದಕ್ಕೆ ಪುರಾತನ ಆಧಾರವೆನ್ನುತ್ತಾರೆ ಚರಿತ್ರೆಯ ಅಧ್ಯಯನದ ಹಿನ್ನೆಲೆಯಿದ್ದು ಪ್ರಾಧ್ಯಾಪಕರಾಗಿದ್ದು ಈಗ ಅಮೂಲ್ಯಶೋಧ ಸ್ಥಾಪಕರಾಗಿರುವ ಹಿರಿಯ ಖಂಡೋಬರಾವ್ .ಅಲ್ಲದೇ ಗರ್ಭಗುಡಿಯಲ್ಲಿ ಲಿಂಗವೂ ಇದೆ. ಅಂದರೆ ಹರಿಹರ ಸಮನ್ವಯತೆಯನ್ನೂ ಸಾರುವ ದೇವಸ್ಥಾನ ಅತ್ಯಂತ ಪುರಾತನವೆಂದು ಕಟ್ಟಡವೇ ಹೇಳುತ್ತದೆ. ಕ್ರಿ.ಶ.1103-1115 ರಲ್ಲಿ ಆಳಿದ ಗಂಗರ ದೊರೆ ತ್ರಿಭುವನ ಮಲ್ಲಭುಜಬಲ ಗಂಗಪೆರ್ಮಾಡಿಯ ಕಾಲದಲ್ಲಿ ವೆಂಕಟನಾಯಕನು ಸಿರಿಯೋಜ ಎಂಬ ಶಿಲ್ಪಿಯ ಸಹಕಾರದಿಂದ ನಿರ್ಮಿಸಿದ ಬಗ್ಗೆ ಇತಿಹಾಸತಜ್ಞ ಬಿ.ಎಸ್.ರಾಮಭಟ್ಟರು ಇಲ್ಲಿ ದೊರೆತ ಶಾಸನ ಆಧರಿಸಿ ದಾಖಲಿಸಿದ್ದಾರೆ. ಪ್ರಾಚೀನ ಶಿವಮೊಗ್ಗೆಯ ಸಂಕೇತವಾಗಿ ಈ ದೇಗುಲ ಶೋಭಿಸುತ್ತಿದೆ.

ಇದೇ ರೀತಿಯ ರಂಗ-ಲಿಂಗ ಸಾನಿಧ್ಯ ಮಲೇಬೆನ್ನೂರು ಸನಿಹದ ಕೊಮಾರನಹಳ್ಳಿಯ ರಂಗನಾಥ ದೇಗುಲದಲ್ಲೂ ಕಾಣಬಹುದು.ಅದನ್ನೇ ಹೆಳವನಕಟ್ಟೆ ಗಿರಿಜಮ್ಮ ” ಈತ ಲಿಂಗ ದೇವಾ ಶಿವನು…ಆತ ರಂಗ ಧಾಮಾ ವಿಷ್ಣು.” ಎಂದು ಹಾಡಿದ್ದಾರೆ.
ಸುಂದರ ರಂಗನಾಥನನ್ನ ನೋಡುತ್ತಾ ಕುಳಿತರೆ ಹೊತ್ತುಸರಿದದ್ದೇ ತಿಳಿಯದು.ಅಂತಹ ಆಕರ್ಷಣೀಯ ಮೂರ್ತಿ. ಒಳಾಂಗಣ ಕಟ್ಟಡದ
ಹೊರಮೈ ಆಧುನಿಕ ಸ್ಪರ್ಶಪಡೆದಿದೆ.

ನಿಜಕ್ಕೂ ನೀವು ಆ ಪರಿಸರಕ್ಕೆ ಪ್ರವೇಶಪಡೆದರೆ
ಜಗದಜಂಜಡದಿಂದ ಬಿಡುಗಡೆ ಪಡೆದ ಅನುಭವ ನಿಮ್ಮದಾಗುತ್ತದೆ.ಇದಕ್ಕಿಂತ ನಿರಾಳತೆ ನಿಮಗೆಲ್ಲಿ ಸಿಗುತ್ತದೆ ? ನಿಜಕ್ಕೂ ರಂಗನಾಥನಲ್ಲಿ ಬೇಡೋಣ . ದಯಾಮಯನೇ ನೀನಿರುವ ಪರಿಸರ ಕಮರ್ಷಿಯಲ್ ತಾಣವಾಗದೇ ಇರುವಂತೆ ನೋಡಿಕೋ ದೇವರೆ. ಹೀಗೇ ಮನಃಶಾಂತಿಯ ತಾಣವಾಗಿರಲಿ.