Friday, March 27, 2026
Friday, March 27, 2026
Home Blog Page 1375

ಎಲ್ಲೆಲ್ಲಿ ನಿಲ್ಲಲಯ್ಯಾ ಶಿವನೆ?

0

ಈಗ ಚುನಾವಣಾ ಕ್ಷೇತ್ರಗಳ ಆಯ್ಕೆ
ಬಹಳ ಸಿಕ್ಕುಸಿಕ್ಕಾಗುತ್ತಿದೆ.
ಪಕ್ಷಗಳ ಪ್ರಮುಖ ನಾಯಕರು ಎಲ್ಲ ಉಪ ನಾಯಕರಿಗೂ ಬೇಕಾದವರೆ. ಆದರೆ ಆ ಬೇಕಾದವರ ಕ್ಷೇತ್ರದ ಜನತೆಗೆ ಈ ಜನಪ್ರಿಯ ನಾಯಕರು
ಸಲ್ಲುತ್ತಾರೆಯೆ? ಎಂಬುದು ಗಂಭೀರವಾದ ಪ್ರಶ್ನೆ.

ಈಗ ಸಿದ್ದರಾಮಯ್ಯನವರ ಸ್ಥಿತಿಯ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.ಬಹುಷಃ ಅವರಂದುಕೊಂಡದ್ದಕ್ಕಿಂತ ಜಾಸ್ತಿಯೇ ಆಗುತ್ತಿದೆ.

ಒಮ್ಮೆ ಮುಖ್ಯಮಂತ್ರಿಯಾಗಿದ್ದವರು
ಮತ್ತೊಮ್ಮೆ ಆವಧಿಗೆ ತಾವು ಕ್ಷೇತ್ರದಿಂದಲೇ ಸ್ಪರ್ಧಿಸಿದರು.
ಆದರೆ ಅವರ ಭವಿಷ್ಯದ ಬಗ್ಗೆ ಗುಪ್ತಚರ ವರದಿ ಅವರನ್ನ ಅಧೀರತೆಗೆ ತಳ್ಳಿತು. ಬದಾಮಿಯಂತಹ‌ ಸುಭದ್ರ ಕ್ಷೇತ್ರ
ಆರಿಸಿಕೊಳ್ಳುವಂತೆ ಶಿಫಾರಸು ಬಂತು.ಅದು ನಿಜವೇ ಆಯಿತು.
ಒಮ್ಮೆ ಮುಖ್ಯಮಂತ್ರಿಯಾಗಿದ್ದವರು
ಆರಿಸಿದ ಕ್ಷೇತ್ರದಿಂದಲೇ ಸೋಲುವುದೆಂದರೆ ಅದು ಜೀರ್ಣಿಸಿಕೊಳ್ಳಲಾಗದ ಸಂಗತಿ.

ಇದೇ ಸನ್ನಿವೇಶ ರಾಹುಲ್ ಗಾಂಧಿಯವರಿಗೂ ಅಮೇಥಿಯಲ್ಲಿ
ಎದುರಾಗಿತ್ತು. ಅನಿಶ್ಚತೆಯಿಂದ ಅವರು ಕೇರಳದ ವೈನಾಡಿನಿಂದ ಸ್ಪರ್ಧಿಸಿದರು. ಅಮೇಥಿಯಲ್ಲಿ ಸ್ಮೃತಿ ಇರಾನಿ ಎದುರು ಪರಾಭವ. ವೈನಾಡಿನಲ್ಲಿ ಜಯಮಾಲೆ ಧರಿಸಿದರು. ಅಂದರೆ ಇಲ್ಲಿ ಈರ್ವರ ದೌರ್ಬಲ್ಯವನ್ನ ಅಳೆಯುತ್ತಿಲ್ಲ.. ಚುನಾವಣೆಯಲ್ಲಿ ಏನು ಬೇಕಾದರೂ ಘಟಿಸಬಹುದು.

ಯೋಜನೆಗಳನ್ನ ರೂಪಿಸಿದರೂ ಸಮರ್ಥ ಜಾರಿಗೆಯಾಗದೇ ಸಿದ್ಧರಾಮಯ್ಯ ತಮ್ಮ ಸ್ವಂತ ಕ್ಷೇತ್ರದಲ್ಲಿ ಸೋಲಬೇಕಾಯಿತು. ಜೊತೆಗೆ ಎದುರಾಳಿ ಜಿಟಿಡಿ ಗೌಡರೂ
ಕಡಿಮೆ ತೂಕದವರಲ್ಲ. ಅಮೇಥಿಯಲ್ಲಿ ಬಿಜೇಪಿಯ ಗಾಳಿ
ಮತ್ತು ಎದುರಾಳಿ ಕ್ಷೇತ್ರದಲ್ಲಿಯೇ ಇದ್ದು ನಡೆಸಿದ ಸಂಪರ್ಕ ಪ್ರಚಾರಗಳು‌ ರಾಹುಲ್ ಗೆಲುವಿಗೆ ಪ್ರತಿರೋಧ ಒಡ್ಡಿರಬಹುದು.

ಈಗ ರಾಜ್ಯದಲ್ಲಿ ಸಿದ್ಧರಾಮಯ್ಯ
ಕೋಲಾರದ ಕರೆಗೆ ಸೆಳೆಯಲ್ಪಡುತ್ತಿದ್ದಾರೆಯೆ? ಅಲ್ಲಿಯ ಮುಂದಾಳುಗಳು ನಿಜಕ್ಕೂ ಅವರನ್ನ ಗೆಲ್ಲಿಸುತ್ತಾರೆಯೆ? ಈಗ ಅವರ ಜನಪ್ರಿಯತೆ ಒರೆಗಲ್ಲು ಏನು ಹೇಳುತ್ತದೆ ? ಇವೆಲ್ಲವೂ ನಿಗೂಢ.

ಕೋಲಾರದ ರಾಜಕೀಯದ ಒಳಸುಳಿಗಳು ಸಿದ್ಧರಾಮಯ್ಯನವರಿಗೆ ಗೊತ್ತಿಲ್ಲದೇನಿಲ್ಲ. ಹಿರಿಯ ರಾಜಕಾರಣಿ ಮುನಿಯಪ್ಪ ತಮ್ಮ ಮುನಿಸನ್ನ ಹಿಂದೆಯೇ ತೋರಿಸಿಕೊಂಡಿದ್ದಾರೆ. ವರ್ತೂರು ಪ್ರಕಾಶ್ ಒಂದೇ ಜಾತಿಯ ಮುಖಂಡರು. ಸಿದ್ಧರಾಮಯ್ಯನವರನ್ನ ಸೋಲಿಸುವುದೇ ಗುರಿ ಎಂಬಂತೆ ಹೇಳಿಕೆ ಬಂದಿದೆ. ಪಕ್ಷೇತರ ಶರತ್ ಬಚ್ಚೇಗೌಡರು ಕಾಂಗ್ರೆಸ್ ಬೆಂಬಿಲಿಸಿದ್ದಾರೆ.ಅವರ ತಂದೆ ಬಚ್ಚೇಗೌಡರು ಬಿಜೆಪಿಯಿಂದ ಸಂಸದರಾಗಿದ್ದಾರೆ.

ಇದಕ್ಕೆಲ್ಲ ಮುಂಚಿತವಾಗಿ ಹಿಸ ಮುಖಗಳೂ ರಾಜಕೀಯಕ್ಕೆ ಬರಲು
ಅಖಾಡ ಸಿದ್ಧಮಾಡಿಕೊಳ್ಳುತ್ತಿವೆ.
ಜೆಡಿಎಸ್ ಪಕ್ಷವೂ ಈಗ ಪಂಚರತ್ನ
ಪಾಂಚಜನ್ಯ ಮೊಳಗಿಸಿದೆ. ಒಂದು ರೀತಿಯ ಮಿಶ್ರವಾತಾವರಣ ಸೃಷ್ಟಿಯಾಗುತ್ತಿದೆ. ಅತ್ತ ಬದಾಮಿಯಲ್ಲಿ ಬೇರೆ ಕುಳಗಳು ಟಿಕೆಟ್ ಗೆ ಪ್ರಯತ್ನಿಸುತ್ತಿವೆ. ಮಗ ಡಾ.ಯತೀಂದ್ರ ಅವರು ಕ್ಷೇತ್ರತ್ಯಾಗದ
ಮಾತಾಡುತ್ತಿದ್ದಾರೆ.
ಈಗ ಏನು ಗ್ಯಾರಂಟಿ? ಜನಗಳದ್ದು ಏನು ವಾರಂಟಿ?
ಇಷ್ಟೆಲ್ಲ ಆದರೂ ಸಿದ್ಧರಾಮಯ್ಯ ಅದೃಷ್ಟವಂತರೆನ್ನಬಹುದು.ಏಕೆಂದರೆ
ಕಾಂಗ್ರೆಸ್ ನಲ್ಲಿ ರಾಜ್ಯಮಟ್ಟದ ಚರಿಷ್ಮ ಇರುವ ಏಕೈಕ ನಾಯಕ.
ಸದನದಲ್ಲಿ ಅನುಭವಿ ಮಾತುಗಾರ.

ಬದಾಮಿಗೆ ಬಂದರೆ ರಾಮುಲು
ಇತ್ತ ಚಾಮುಂಡೇಶ್ವರಿಗೆ ಬಂದರೆ ಹಳೇ ಎದುರಾಳಿ ಜಿಟಿಡಿ ಗೌಡರು.
ವರುಣಾದಲ್ಲಿ ಪ್ರೀತಿಪಾತ್ರ ಪುತ್ರ.
ಏನು ಮಾಡಲಿ ಶಿವನೆ?
ಅದಕ್ಕೆ ಈಗ ಅವರು ಕ್ಷೇತ್ರದ ಹೆಸರು ಸೂಚಿಸದೇ ಪಕ್ಷಕ್ಕೆ ಅಭ್ಯರ್ಥಿ ಅರ್ಜಿ
ರವಾನಿಸಿದ್ದಾರೆ.

ಶಿವಮೊಗ್ಗ ಬಸ್ ನಿಲ್ದಾಣದಲ್ಲೊಂದು ಕೊರತೆ

0

ಶಿವಮೊಗ್ಗ ಈಗ ಬೇಸಿಗೆಯ ಬಾಯಿಗೆ ತುತ್ತಾಗಲು ಕೆಲವೇ ದಿನಗಳಿವೆ.ಗಡಗಡ ಚಳಿಯ ಸಂಗಡ ಬಿರುಬಿಸಿಲು ರಾಚಲು ಕಾಯುತ್ತಿದೆ.

ಪುಣ್ಯಾತ್ಮರಾದ ಶಾಸಕರು,ಸಂಸದರು ಅಲ್ಲಲ್ಲಿ ಬಸ್ ತಂಗುದಾಣಗಳನ್ನ ನಿರ್ಮಿಸಿ ದೇಶಸೇವೆ ಮಾಡಿದ್ದಾರೆ.

ಸದ್ಯ ಶಿವಮೊಗ್ಗದ ಮುಖ್ಯ ಸಾರಿಗೆ ಬಸ್ ನಿಲ್ದಾಣ ವರ್ಣಮಯವಾಗಿ ತಲೆಯೆತ್ತಿ ನಿಂತಿದೆ. ಆದರೆ ಅಲ್ಲಿ ಬಸ್ ಗೆ ಕಾಯುವವರಿಗೆ ನೆರಳಿದೆ. ಕೂರಲು ಆಸನವಿವೆ.

ಎಲ್ಲಾ ಸರಿ.ಬಸ್ ಗಳಿಂದ ಇಳಿಯುವಾಗ ಮಾತ್ರ ನರಕ ಸದೃಶ. ಪ್ರಯಾಣಿಕರು ತಮ್ಮ ಕೈಚೀಲ, ಸೂಟ್ ಕೇಸು
ಟ್ರಾಲಿ ಬ್ಯಾಗು ಗಳಿಂದ ಇಳಿದಾಕ್ಷಣ
ಸೂರ್ಯ ನೆತ್ತಿ ಕುಕ್ಕುತ್ತಾನೆ ಇಲ್ಲವೇ
ಮೂರುಗಂಟೆಯ ಬಿಸಿಲನ್ನ ಮುಖಕ್ಕೆ ರಾಚುತ್ತಾನೆ. ತಾಯಂದಿರಿದ್ದರಂತೂ ಮಕ್ಕಳನ್ನ ಹಿಡಿದು ಸಂಭಾಳಿಸುವಷ್ಟರಲ್ಲಿ ಆ ಬಿಸಿಲಿನ ಝಳಕ್ಕೆ ಹೈರಾಣು.

ಆಟೋ ಬರುವವರೆಗೂ ಬಿಸಿಲಲ್ಲಿ ( ಅಥವಾ ಮಳೆಯಲ್ಲಿ) ಒದ್ದಾಡಬೇಕು. ನಾನು ನೋಡುತ್ತಿದ್ದಂತೆ ಓರ್ವ ಮಹಿಳೆ ಬಿಸಿಲಿನ ಝಳಕ್ಕೆ ತಲೆ ತಿರುಗಿ ವಾಂತಿ ಮಾಡಿಕೊಂಡು ರೀಲಿಂಗ್ಸ್ ಹಿಡಿದು ಕೂತಿದ್ದರು.

ಆದ್ದರಿಂದ ಪುಣ್ಯಾತ್ಮರಿಗೆ ನಾವು
ಕೇಳುವುದಿಷ್ಟೆ. ಬಸ್ ನಿಂದ ಇಳಿಯುವ ಸ್ಥಳದಲ್ಲಿ ಕೊಂಚ ನೆರಳು ಇರುವಂತೆ ಮಾಡಿ. ಬಿಸಿಲಿಗೂ ಮತ್ತು ಮಳೆಗೂ ಅದರಿಂದ ರಕ್ಷಣೆ ಸಿಗುತ್ತದೆ.
ಸಾರಿಗೆ ಸಂಸ್ಥೆಯವರು ಈ ಬಗ್ಗೆ ತಕ್ಷಣ ಗಮನ ಹರಿಸಿ.

ಪ್ರಯಾಣಿಕರ
ಅಹವಾಲನ್ನ ಅದು ಸುದ್ದಿ ರಂಪವಾಗುವ ಮುನ್ನವೇ ಕಾರ್ಯರೂಪಕ್ಕೆ ತರಲು ಈ ಬರಹದ ಹಕ್ಕೊತ್ತಾಯ.

ಫ್ರಿಡ್ಜ್ ವಾಹನಗಳನ್ನು ಖರೀದಿಸಬೇಡಿ- ಜೆಫ್ ಬೆಜೋಸ್

0

ವಿಶ್ವದಲ್ಲಿ ಆರ್ಥಿಕ ಹಿಂಜರಿತದ ಲಕ್ಷಣಗಳು ಈಗಾಗಲೇ ಗೋಚರವಾಗುತ್ತಿವೆ. ಮುಂದಿನ ಆರು ತಿಂಗಳು ಅತ್ಯಂತ ಕಠಿಣವಾಗಿರಲಿವೆ ಎಂದು ಹೇಳಲಾಗುತ್ತಿದ್ದು, ಹೀಗಾಗಿ ಇದನ್ನು ಮುಂಚಿತವಾಗಿ ಊಹಿಸಿರುವ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಫ್ರಿಡ್ಜ್, ವಾಹನಗಳನ್ನು ಖರೀದಿಸದೆ ಉಳಿತಾಯದತ್ತ ಗಮನ ನೀಡಿ ಎಂದಿದ್ದರು.

ಈ ಆರ್ಥಿಕ ಹಿಂಜರಿತದ ಪರಿಣಾಮ ಐಟಿ ಕಂಪನಿಗಳ ಮೇಲೆ ತೀವ್ರವಾಗಿ ಬೀರಿದ್ದು, ಅಮೆಜಾನ್, ಟ್ವಿಟ್ಟರ್, ಸಿಸ್ಕೋ ಮೊದಲಾದ ಕಂಪನಿಗಳು ಸಾವಿರಾರು ಸಂಖ್ಯೆಯಲ್ಲಿ ತಮ್ಮ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ.

ಅಲ್ಲದೆ ಅಲ್ಫಾಬೆಟ್ ಒಡೆತನದ ಗೂಗಲ್ ಕೂಡ ಕಾರ್ಯಕ್ಷಮತೆ ಆಧರಿಸಿ 10,000ಕ್ಕೂ ಅಧಿಕ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಭಾರತದ ಮೇಲೂ ಈ ಆರ್ಥಿಕ ಹಿಂಜರಿತದ ಪರಿಣಾಮ ನಿಧಾನವಾಗಿ ಬೀರತೊಡಗಿದ್ದು, ಹೊಸದಾಗಿ ಇಂಜಿನಿಯರಿಂಗ್ ಮುಗಿಸಿಕೊಂಡು ಬಂದಿದ್ದವರನ್ನು ಆಯ್ಕೆ ಮಾಡಿದ್ದ ಕಂಪನಿಗಳು ಅವರುಗಳಿಗೆ ಆಫರ್ ಲೆಟರ್ ನೀಡಲು ಹಿಂದೇಟು ಹಾಕುತ್ತಿವೆ ಎಂದು ಹೇಳಲಾಗಿದೆ.

ಕೆಲವೊಂದು ಕಂಪನಿಗಳಂತೂ ನಿಮ್ಮ ಸಾಮರ್ಥ್ಯ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ನೆಪ ಹೇಳಿ ಇ-ಮೇಲ್ ಕಳಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಆದರೆ ಕೆಲ ಭಾರತೀಯ ತಜ್ಞರು ಭಾರತದ ಐಟಿ ಕ್ಷೇತ್ರದ ಮೇಲೆ ಈ ಆರ್ಥಿಕ ಹಿಂಜರಿತ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಅಲ್ಲದೆ ಈಗಾಗಲೇ ನೇಮಕಾತಿ ಪತ್ರ ಪಡೆದುಕೊಂಡಿರುವವರಿಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಲಿದೆ ಎಂಬ ಭರವಸೆಯ ಮಾತುಗಳನ್ನು ಹೇಳುತ್ತಿದ್ದಾರೆ.

ಖಂಡಾಂತರ ಕ್ಷಿಪಣಿ ಅಗ್ನಿ-3 ಯಶಸ್ವಿ ಉಡಾವಣೆ

0

ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಮಧ್ಯಂತರ ವ್ಯಾಪ್ತಿಯ ಖಂಡಾಂತರ ಕ್ಷಿಪಣಿ ಅಗ್ನಿ-3 ಅನ್ನು ಭಾರತ ಯಶಸ್ವಿಯಾಗಿ ನಡೆಸಿತು.

ಯಶಸ್ವಿ ಪರೀಕ್ಷೆಯು ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್‌ಎಫ್‌ಸಿ) ಆಶ್ರಯದಲ್ಲಿ ನಡೆಸಲಾದ ವಾಡಿಕೆಯ ಬಳಕೆದಾರರ ತರಬೇತಿ ಉಡಾವಣೆಗಳ ಭಾಗವಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಈ ಮೂಲಕ ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ಬಂದಂತೆ ಆಗಿದೆ.
ಈ ಉಡಾವಣೆ ಈ ಮೊದಲೇ ನಿರ್ಧರಿತ ವ್ಯಾಪ್ತಿಯವರೆಗೆ ನಡೆಸಲಾಯಿತು ಮತ್ತು ಎಲ್ಲಾ ಕಾರ್ಯಾಚರಣೆ ವ್ಯವಸ್ಥಿತವಾಗಿ ನಡೆದಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಅಗ್ನಿ-III ಅತ್ಯಾಧುನಿಕ ಮತ್ತು ನಿಖರವಾದ ಕ್ಷಿಪಣಿಗಳಲ್ಲಿ ಒಂದಾಗಿದೆ ಮತ್ತು ಈಗಾಗಲೇ ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಂಡಿದೆ. ಇದು 1.5 ಟನ್ ತೂಕದ ಪೇಲೋಡ್ ಅನ್ನು 3,000 ಕಿಮೀಗಿಂತ ಹೆಚ್ಚು ದೂರಕ್ಕೆ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಮೋದಿ ಸರ್ಕಾರ ಎರಡು ಕೋಟಿ ಉದ್ಯೋಗ ಇನ್ನೂ ನೀಡಿಲ್ಲ-ಸಿದ್ಧರಾಮಯ್ಯ

0

ಮೋದಿ ಸರ್ಕಾರ ಎರಡು ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಇನ್ನೂ ಕೊಟ್ಟಿಲ್ಲ, ಆದರೆ ನಿರುದ್ಯೋಗಿಗಳಿಗೆ ಕೋಪ ಬರುತ್ತಿಲ್ಲ, ಯಾಕೆ ಅಂತ ಗೊತ್ತಿಲ್ಲವೆಂದು ಕೆ.ಆರ್. ಪುರಂನ ಕೇಂಬ್ರಿಡ್ಜ್ ಮಹಾ ವಿದ್ಯಾಲಯದ ಮೊದಲ ವರ್ಷದ ಇಂಜಿನಿಯರಿಂಗ್ ಪ್ರಾರಂಭೊತ್ಸವ ಹಾಗೂ ನೂತನ ಸರ್ .ಎಂ. ವಿ ಆಡಿಟೋರಿಯಂ ಅನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ ಮಾತನಾಡಿದರು.

ವಿದ್ಯಾಸಂಸ್ಥೆಗಳನ್ನು ಸ್ಥಾಪನೆ ಮಾಡುವುದು ಬಹಳ ಕ್ಷಿಷ್ಟಕರ, ವಿದ್ಯೆ ಕೊಡುವ ಕೆಲಸ ಉತ್ತಮವಾದ ಕೆಲಸ, ಇಂದಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯವಶ್ಯಕ ಎಂದರು. ಸೇವೆಯ ಉದ್ದೇಶದಿಂದ ಶಿಕ್ಷಣಕ್ಷೇತ್ರಕ್ಕೆ, ವಿಜ್ಞಾನ ,ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ಬೆಳವಣಿಗೆ ಆಗಿದೆ ಅದಕ್ಕೆ ಅನುಗುಣಮಾಗಿ ವಿದ್ಯಾಸಂಸ್ಥೆಗಳು ಶಿಕ್ಷಣ ನೀಡಬೇಕಿದೆ ಎಂದು ತಿಳಿಸಿದರು.

ಸ್ವಾತಂತ್ರದ ಬಂದಾಗ 16 % ಸಾಕ್ಷರತೆ ಇತ್ತು ಈಗ 78% ಆಗಿದೆ ಇನ್ನೂ 22 % ಅನಕ್ಷರಸ್ಥರಿದ್ದಾರೆ, ದೇಶದ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವಂತಾಗಬೇಕು ಎಲ್ಲರಿಗೂ ಶಿಕ್ಷಣ ಸಿಕ್ಕರೆ ಮಾತ್ರ ಸಮಾಜದ ಏಳಿಗೆಯಾಗವುದ. ಉದ್ಯೋಗ ಬಯಸಿದವರಿಗೆ ಉದ್ಯೋಗ ಸಿಗಬೇಕು ಅದಕ್ಕೆ ಅನುಗುಣವಾಗಿ ಶಿಕ್ಷಣ ನೀಡಬೇಕು ಎಂದರು. ಉತ್ತಮ ಶಿಕ್ಷಣದ ಜೊತೆ ಕೌಶಲ್ಯ ತರಬೇತಿ ಬೇಕು, ಕೌಶಲ್ಯ ತರಬೇತಿ ಮೂಲಕ ಉದ್ಯೋಗಗಳು ಸೃಷ್ಟಿ ಆಗುತ್ತವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಹೇಳಿದರು.

ದೇಶದ ಡಿಜಿಟಲ್ ಮಾಧ್ಯಮಗಳಿಗೆ ಶೀಘ್ರ ನಿಯಂತ್ರಣ ಮಸೂದೆ- ಸಚಿವ ಅನುರಾಗ್ ಠಾಕೂರ್

0

ಕೇಂದ್ರ ಸರ್ಕಾರವು ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸುವ ಮಸೂದೆಯನ್ನು ಕಾರ್ಯಗತಗೊಳಿಸುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಹೇಳಿದ್ದಾರೆ.

ಹಿಂದೆ ಸುದ್ದಿಗಳ ಏಕಮುಖ ಸಂವಹನವಿತ್ತು. ಆದರೆ, ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳ ಅಭಿವೃದ್ಧಿಯೊಂದಿಗೆ ಸುದ್ದಿಗಳ ಸಂವಹನವು ಬಹು ಆಯಾಮಗಳನ್ನು ಹೊಂದಿದೆ. ಈಗ ಒಂದು ಹಳ್ಳಿಯ ಸಣ್ಣ ಸುದ್ದಿಯೂ ಡಿಜಿಟಲ್ ಮಾಧ್ಯಮದ ಮೂಲಕ ರಾಷ್ಟ್ರೀಯ ವೇದಿಕೆಗೆ ತಲುಪುತ್ತದೆ. ಸರ್ಕಾರವು ಹೆಚ್ಚಿನ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳನ್ನು ಸ್ವಯಂ ನಿಯಂತ್ರಣಕ್ಕೆ ಬಿಟ್ಟಿದೆ ಎಂದು ಠಾಕೂರ್ ಬುಧವಾರ ತಿಳಿಸಿದ್ದಾರೆ.

ಡಿಜಿಟಲ್ ಮಾಧ್ಯಮವು ಅವಕಾಶಗಳನ್ನು ಮತ್ತು ಸವಾಲುಗಳನ್ನು ಒದಗಿಸುತ್ತದೆ. ಉತ್ತಮ ಸಮತೋಲನವನ್ನು ಹೊಂದಲು, ಈ ಬಗ್ಗೆ ಏನು ಮಾಡಬಹುದೆಂದು ಸರ್ಕಾರವು ನೋಡುತ್ತದೆ. ಬದಲಾವಣೆಗಳನ್ನು ಕಾನೂನಾಗಿ ತರಬೇಕು ಎಂದು ನಾನು ಹೇಳುತ್ತೇನೆ ಮತ್ತು ನಿಮ್ಮ ಕೆಲಸವನ್ನು ಸರಳಗೊಳಿಸಲು ನಾವು ಮಸೂದೆಯನ್ನು ಪರಿಚಯಿಸಲು ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

ಪತ್ರಿಕೆಗಳ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗುವುದು ಮತ್ತು ಕೇಂದ್ರ ಸರ್ಕಾರವು 1867 ರ ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಆಕ್ಟ್ ಬದಲಿಗೆ ಹೊಸ ಕಾನೂನನ್ನು ಶೀಘ್ರದಲ್ಲೇ ತರಲಿದೆ. ಹೊಸ ಕಾನೂನಿನ ಅಡಿಯಲ್ಲಿ, ಆನ್‌ಲೈನ್ ಮೋಡ್ ಮೂಲಕ ಒಂದು ವಾರದಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದು ಈಗ ಸುಮಾರು ನಾಲ್ಕು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.

ಪತ್ರಿಕೆಗಳು ಸರಿಯಾದ ಸಮಯದಲ್ಲಿ ಸಾಮಾನ್ಯ ಜನರ ಮುಂದೆ ಸರಿಯಾದ ಸುದ್ದಿಯನ್ನು ತರಬೇಕು. ಸರಕಾರದ ಲೋಪದೋಷಗಳ ಜತೆಗೆ ಜನಕಲ್ಯಾಣ ಯೋಜನೆಗಳು ಹಾಗೂ ಸರಕಾರದ ನೀತಿಗಳು ಜನಸಾಮಾನ್ಯರಿಗೆ ತಲುಪಬೇಕು.
ಮಾಧ್ಯಮಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಮತ್ತು ‘ಭಯ ಮತ್ತು ಗೊಂದಲ’ದ ವಾತಾವರಣ ಸೃಷ್ಟಿಸುವುದನ್ನು ತಪ್ಪಿಸಬೇಕು ಎಂದು ಎಚ್ಚರಿಸಿದರು.

ಕೋವಿಡ್‌ನಿಂದ ಸಾವನ್ನಪ್ಪಿದ ಪತ್ರಕರ್ತರ ಕುಟುಂಬಗಳಿಗೆ ಹಣಕಾಸಿನ ನೆರವು ನೀಡಲಾಗಿದೆ. ಕೇಂದ್ರವು ಪತ್ರಕರ್ತರ ಹಿತಾಸಕ್ತಿಗಳನ್ನು ನೋಡಿಕೊಳ್ಳುತ್ತದೆ ಎಂದು ಠಾಕೂರ್ ಅವರು ಭರವಸೆ ನೀಡಿದರು.

ಪಟ್ಟುಬಿಡದ ಕೆಎಂಎಫ್ ಹಾಲಿನ ಉತ್ಪನ್ನಗಳ ದರ ಹೆಚ್ಚಳ

0

ನಂದಿನಿ ಬ್ರಾಂಡ್ ನ ಎಲ್ಲಾ ಮಾದರಿಯ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂಪಾಯಿ ಹೆಚ್ಚಿಸಲಾಗಿದೆ.

ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಹಾಲು ಮಹಾಮಂಡಳದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ನ. 14ರಂದು ಕೆಎಂಎಫ್ ಪ್ರತಿ ಲೀಟರ್ ಗೆ ಮೂರು ರೂಪಾಯಿ ಹೆಚ್ಚಿಸಲು ನಿರ್ಧರಿಸಿತ್ತು. ಆದರೆ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಹಾಲಿನ ದರ ಹೆಚ್ಚಿಸದಂತೆ ಸೂಚಿಸಿದ್ದರು. ರೈತರಿಗೆ ಹಾಗೂ ಗ್ರಾಹಕರಿಗೆ ಇದರಿಂದ ಹೊರೆಯಾಗದಂತೆ ನಿರ್ಣಯ ಕೈಗೊಳ್ಳಲು ಸೂಚಿಸಿದ್ದರು. ಈ ಸೂಚನೆಯನ್ನು ನೆನಪಿನಲ್ಲಿಟ್ಟುಕೊಂಡು ಕರ್ನಾಟಕ ಹಾಲು ಮಹಾಮಂಡಲದ ಆಡಳಿತ ಮಂಡಳಿ ಸಭೆಯಲ್ಲಿ ಈ ದರವನ್ನು ಪರಿಷ್ಕರಿಸಲಾಗಿದೆ.

ಹಾಲು ಒಕ್ಕೂಟಗಳಲ್ಲಿ ಹಳೆಯ ದರ ಮುದ್ರಿತವಾಗಿರುವ ಪಾಕೆಟ್ಗಳ ದಾಸ್ತಾನಿದೆ. ಈ ದಾಸ್ತಾನು ಮುಗಿಯುವವರೆಗೂ ಹಳೆಯ ದರ ಮುದ್ರಿತ ಪ್ಯಾಕೆಟ್ ಗಳಲ್ಲಿ ಹಾಲು ಪೂರೈಕೆ ಯಾಗಲಿದೆ ಎಂದು ಕೆಎಂಎಫ್ ಮಾಹಿತಿ ನೀಡಿದೆ.

ಕೆಎಂಎಫ್ ನಿರ್ಧಾರ ಪರಿಷ್ಕೃತ ದರ ಇಂದಿನಿಂದ ಜಾರಿಯಾಗಿದೆ. ಹಾಲು, ಮೊಸರಿನ ದರ ಪರಿಷ್ಕರಣಿ ಹೀಗಿದೆ…

ಟೋನ್ಡ್ ಹಾಲು ಪ್ರಸ್ತುತ 37, ಪರಿಷ್ಕೃತ 39.

ಹೋಮೋಜಿನೈಸ್ಡ್ ಟೋನ್ಡ್ ಹಾಲು ಪ್ರಸ್ತುತ 38, ಪರಿಷ್ಕೃತ 40.

ಹೋಮೋಜಿನೈಸ್ಡ್ ಹಸುವಿನ ಹಾಲು ಪ್ರಸ್ತುತ 42, ಪರಿಷ್ಕೃತ 44.

ಸ್ಪೆಷಲ್‌ ಹಾಲು ಪ್ರಸ್ತುತ 43, ಪರಿಷ್ಕೃತ 45.

ಶುಭಂ ಹಾಲು ಪ್ರಸ್ತುತ 43, ಪರಿಷ್ಕೃತ 45.

ಹೋಮೋಜಿನೈಸ್ಡ್ ಸ್ಟ್ಯಾಂಡಡೈ ರ್ಸ್ಡ್ ಹಾಲು ಪ್ರಸ್ತುತ 44, ಪರಿಷ್ಕೃತ 46.

ಸಮೃದ್ಧಿ ಹಾಲು ಪ್ರಸ್ತುತ 48
ಪರಿಷ್ಕೃತ 50.

ಸಂತೃಪ್ತಿ ಹಾಲು ಪ್ರಸ್ತುತ 50, ಪರಿಷ್ಕೃತ 52.

ಡಬಲ್‌ಟೋನ್ಡ್ ಹಾಲು ಪ್ರಸ್ತುತ 36, ಪರಿಷ್ಕೃತ 38.

ಮೊಸರು (ಪ್ರತಿ ಕೆ.ಜಿ.ಗೆ) ಪ್ರಸ್ತುತ 45,
ಪರಿಷ್ಕೃತ 47.

ಪ್ರಸವಪೂರ್ವ ಲಿಂಗ ಪತ್ತೆ ಅಪರಾಧ ಕಾಯಿದೆ ಬಿಗಿ ಅನುಷ್ಠಾನ

0

ಮಂಗಳೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಕ್ಯಾನಿಂಗ್ ಸೆಂಟರ್‌ಗಳು ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್ ಸಲಹೆ ನೀಡಿದರು.

ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ತಂತ್ರ ವಿಧಾನಗಳ ನಿಷೇಧ (ಪಿಸಿ ಆಯಂಡ್ ಪಿಎನ್‌ಡಿಟಿ)ಕಾಯ್ದೆ ಅನುಷ್ಠಾನದ ಕುರಿತು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯ ಕಚೇರಿಯಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗರ್ಭಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡುವುದು ಹಾಗೂ ಸ್ಕ್ಯಾನಿಂಗ್ ಸಂಸ್ಥೆಯವರು ಪಿಸಿ ಮತ್ತು ಪಿಎನ್‌ಡಿಟಿ ಕಾಯ್ಡೆ ಕಾನೂನನ್ನು ಅನುಷ್ಠಾನಗೊಳಿಸದಿರುವುದು ಶಿಕ್ಷಾರ್ಹ ಅಪರಾಧವಾಗಿದೆ.
ಪುರುಷ ಹಾಗೂ ಮಹಿಳೆಯರ ಸಮಾನ ಅನುಪಾತ ಕಾಪಾಡುವ ದೃಷ್ಟಿಯಿಂದ ಈ ಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿ ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್ ಸಂಸ್ಥೆಗಳನ್ನು 3 ತಿಂಗಳಿಗೊಮ್ಮೆ ಭೇಟಿ ಮಾಡಿ ತಪಾಸಣೆ ಹಾಗೂ ಮೇಲ್ವಿಚಾರಣೆ ನಡೆಸಬೇಕು. ಪಿಸಿ ಆಯಂಡ್ ಪಿಎನ್‌ಡಿಟಿ ಕಾಯ್ದೆಯನ್ನು ಅನುಷ್ಠಾನ ಮಾಡದ ಸಂಸ್ಥೆಗಳಿಗೆ ನೊಟೀಸ್ ನೀಡುವಂತೆ ಡಾ. ಕಿಶೋರ್ ಕುಮಾರ್ ಸೂಚಿಸಿದರು.

ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷೆ ಡಾ.ವತ್ಸಲಾ ಕಾಮತ್, ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಡಾ.ದೀಪಾ ಪ್ರಭು ಕೆ.ಪಿ., ಸದಸ್ಯರಾದ ಡಾ.ಅಮೃತ ಭಂಡಾರಿ, ಡಾ.ಸುಂದರಿ, ಡಾ.ಶೈಲಜಾ, ಡಾ.ಅನಿತ್‌ರಾಜ್, ವಕೀಲರಾದ ಚಂದ್ರಹಾಸ್ ಮತ್ತಿತರರು ಉಪಸ್ಥಿತರಿದ್ದರು.

ತೆರೆದ ಹೃದಯದ ಶಸ್ತ್ರಚಿಕಿತ್ಸೆ ಇಲ್ಲದೇ ಕವಾಟ ಬದಲಿಸಿದ ಮಣಿಪಾಲ್ ವೈದ್ಯರ ಸಾಧನೆ

0

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗದ ತಜ್ಞ ವೈದ್ಯರ ತಂಡವೊಂದು ತೆರೆದ ಹೃದಯ ಶಸ್ತ್ರಚಿಕಿತ್ಸೆ ಇಲ್ಲದೇ ಮಹಾಪಧಮನಿಯ ಕವಾಟವನ್ನು ಯಶಸ್ವಿಯಾಗಿ ಬದಲಾಯಿಸಿದೆ.

ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ.ಟಾಮ್ ದೇವಾಸಿಯಾ, ಸಹಾಯಕ ಪ್ರಾಧ್ಯಾಪಕಿ ಡಾ.ಮೋನಿಕಾ ಜೆ ಮತ್ತು ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ಗುರುಪ್ರಸಾದ್ ರೈ ಅವರನ್ನೊಳಗೊಂಡ ತಂಡವು ಅಪರೂಪದ ಸಾಹಸ ನಡೆಸಿ ಯಶಸ್ವಿಯಾಗಿದೆ ಎಂದು ಕೆಎಂಸಿ ತಿಳಿಸಿದೆ.

ಟ್ರಾನ್ಸ್‌ಕ್ಯಾಥೆಟರ್ ಎರೋಟಿಕ್ ವಾಲ್ವ್ ಇಂಪ್ಲಾಂಟೇಷನ್ (ಟಿಎವಿಐ) ನಂತರ ಕೆಲವೇ ದಿನಗಳಲ್ಲಿ ರೋಗಿ ಗಳನ್ನು ಸ್ಥಿರ ಸ್ಥಿತಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟದ ಬದಲಾವಣೆಯನ್ನು ದೇಶದ ಕೆಲವೇ ಹೃದ್ರೋಗ ತಜ್ಞರು ಮಾತ್ರ ಮಾಡುತ್ತಾರೆ.

ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಯಲ್ಲಿ ‘ದಿ ಟೀಮ್ ತಾವಿ ‘ ಇದುವರೆಗೆ ಇಂತಹ ಅನೇಕ ಚಿಕಿತ್ಸಾ ವಿಧಾನವನ್ನು ಯಶಸ್ವಿಯಾಗಿ ನಡೆಸಿದೆ ಎಂದು ತಿಳಿಸಿದೆ.

76 ವರ್ಷ ವಯಸ್ಸಿನ ಪುರುಷ ರೋಗಿಯು ಒಂದು ತಿಂಗಳಿನಿಂದ ತೀವ್ರವಾದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಇದರ ತೊಂದರೆ ಕ್ರಮೇಣ ಹೆಚ್ಚುತ್ತಿತ್ತು. ಅವರ 2ಡಿ ಎಕೋ ತೀವ್ರವಾದ ಕ್ಯಾಲ್ಸಿಫಿಕ್ ಮಹಾಪಧಮನಿಯ ಸ್ಟೆನೋಸಿಸ್ ಅನ್ನು ತೋರಿಸುತಿತ್ತು. ಇಂಥ ಸಂದರ್ಭದಲ್ಲಿ ಪರಿಧಮನಿಯ ಆಂಜಿಯೋಗ್ರಾಮ್ ಸಾಮಾನ್ಯವಾಗಿತ್ತು.

ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ರೋಗಿ ಹೆಚ್ಚಿನ ಅಪಾಯವನ್ನು ಹೊಂದಿದ್ದರಿಂದ ನಾವು ಈ ರೋಗಿಗೆ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟ ಬದಲಾವಣೆ ಮಾಡಿದೆವು. ಇದು ಕೆಎಂಸಿ ಕೋವಿಡ್ ಯುಗದಲ್ಲಿ ಮಾಡಿದ ಮೊದಲ ತಾವಿ ಚಿಕಿತ್ಸಾ ವಿಧಾನವಾಗಿತ್ತು. ಕೆಲವೇ ದಿನಗಳಲ್ಲಿ ರೋಗಿ ಆರೋಗ್ಯವಂತರಾಗಿ ನಗುನಗುತ್ತಾ ಮನೆಗೆ ಮರಳಿದರು ಎಂದು ತಜ್ಞರ ತಂಡ ತಿಳಿಸಿದೆ.

ಅದೇ ರೀತಿ 72 ವರ್ಷ ವಯಸ್ಸಿನ ಪುರುಷ ರೋಗಿ ತೀವ್ರವಾದ ಉಸಿರಾಟದ ತೊಂದರೆ ಮತ್ತು ತಲೆತಿರುಗುವಿಕೆ ಯಿಂದ ಬಳಲುತ್ತಿದ್ದು ಅವರಿಗೂ ತೆರೆದ ಹೃದಯ ಶಸ್ತ್ರಚಿಕಿತ್ಸೆ ಸಾಧ್ಯವಿರಲಿಲ್ಲ. ಹೀಗಾಗಿ ತಾವಿ ಚಿಕಿತ್ಸಾ ವಿಧಾನದ ಮೂಲಕ ಮಹಾಪಧಮನಿಯ ಕವಾಟವನ್ನು ಬದಲಿಸಲಾಯಿತು. ಕೆಲವೇ ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಮತ್ತೊಬ್ಬ 74 ವರ್ಷ ವಯಸ್ಸಿನ ಪುರುಷ ರೋಗಿ, ತೀವ್ರ ಹೃದಯ ವೈಫಲ್ಯ ಮತ್ತು ದೀರ್ಘಕಾಲದ ಕೆಮ್ಮಿನಿಂದ ಬಳಲುತ್ತಿದ್ದರು.
ಅವರ ಶ್ವಾಸಕೋಶದ ಕಾಯಿಲೆಯನ್ನು ಮೊದಲು ಗುಣಪಡಿಸಿ ಬಳಿಕ ಅವರಿಗೆ ಕವಾಟದ ಬದಲಾವಣೆ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ತಂಡ ತಿಳಿಸಿದೆ.

ಹಿರಿಯ ನಾಗರಿಕರಿಗೆ ತಿಮ್ಮಪ್ಪನ ದರ್ಶನಕ್ಕೆ ವಿಶೇಷ ಸಮಯಾವಕಾಶ

0

ಹಿರಿಯ ನಾಗರಿಕರಿಗೆ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಇನ್ನು ಸುಲಭವಾಗಲಿದೆ.
ಹಿರಿಯ ನಾಗರಿಕರಿಗಾಗಿಯೇ ಎರಡು ಸ್ಲಾಟ್‌ಗಳನ್ನು ಟಿಟಿಡಿ ಮೀಸಲಿಟ್ಟಿದೆ.

ಪ್ರತಿ ದಿನ ಬೆಳಗ್ಗೆ 10 ಗಂಟೆ, ಮಧ್ಯಾಹ್ನ 3 ಗಂಟೆ ಸ್ಲಾಟ್‌ನಲ್ಲಿ ವಿಶೇಷವಾಗಿ ಹಿರಿಯ ನಾಗರಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಇದಕ್ಕಾಗಿ ವಯಸ್ಸು ನಮೂದಿಸಿರುವ ಪೋಟೋ ಇರುವ ಗುರುತಿನ ಪತ್ರ(ಆಧಾರ್‌)ವನ್ನು ಕೌಂಟರ್‌ನಲ್ಲಿ ಅವರು ತೋರಿಸಬೇಕಾಗುವುದು ಕಡ್ಡಾಯ.

ದರ್ಶನ ಉಚಿತವಾಗಿದೆ. ಜತೆಗೆ ಒಬ್ಬರಿಗೆ ಎರಡು ಲಾಡು ಪ್ರಸಾದಕ್ಕೆ 20 ರೂ. ಹಾಗೂ ಹೆಚ್ಚುವರಿ ಪ್ರತಿ ಲಾಡುಗೆ 25 ರೂ. ನೀಡಬೇಕಾಗುತ್ತದೆ.
ಹಿರಿಯ ನಾಗರಿಕರಿಗಾಗಿ ವಿಶೇಷ ಪಥ ನಿರ್ಮಿಲಾಗಿದೆ. ಅವರು ಮೆಟ್ಟಿಲು ಹತ್ತಬೇಕಾಗಿಲ್ಲ.

ದರ್ಶನದ ವೇಳೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಕಾರ್‌ ಪಾರ್ಕಿಂಗ್‌ನಿಂದ ದೇಗುಲ ಬಾಗಿಲಿಗೆ ಕರೆತರಲು ಬ್ಯಾಟರಿ ಕಾರ್‌ ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರ ಸ್ಲಾಟ್‌ 30 ನಿಮಿಷಗಳು ಇದ್ದು, ಅಲ್ಲಿಯವರೆಗೆ ಇತರರ ದರ್ಶನ ಸ್ಥಗಿತಗೊಳಿಸಲಾಗುವುದು ಎಂದು ತಿಳಿದುಬಂದಿದೆ.