Friday, March 27, 2026
Friday, March 27, 2026
Home Blog Page 1376

ರಷ್ಯ ಈಗ ಭಯೋತ್ಪಾದಕ ದೇಶ ಯುರೋಪ್ ಸಂಸತ್ತಿನಿಂದ ಘೋಷಣೆ

0

ಐತಿಹಾಸಿಕ ಹೆಜ್ಜೆಯನ್ನಿಟ್ಟಿರುವ ಯುರೋಪ್‌ ಸಂಸತ್ತು ರಷ್ಯಾವನ್ನು ಭಯೋತ್ಪಾದಕ ರಾಷ್ಟ್ರವೆಂದು ಎಂದು ಘೋಷಿಸಿದೆ.

ರಷ್ಯಾ ಭಯೋತ್ಪಾದನೆ ನಡೆಸುತ್ತಿದೆ ಎಂದು ಘೋಷಣೆಯ ಪರವಾಗಿ ಮತ ಚಲಾಯಿಸುವಾಗ ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯರು ಈ ಮಹತ್ವದ ನಿರ್ಧಾರವನ್ನು ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ.

ಯುದ್ಧದ ಆರಂಭದಿಂದಲೂ ರಷ್ಯಾ ಭಯೋತ್ಪಾದಕ ದೇಶವೆಂದು ಎಂದು ಘೋಷಿಸಲು ಉಕ್ರೇನ್‌ನಿಂದ ಭಾರಿ ಬೇಡಿಕೆ ಇತ್ತು. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ಕಾಲಕಾಲಕ್ಕೆ ಈ ಬಗ್ಗೆ ಒತ್ತಾಯಿಸಿದ್ದರು.

ಈ ಕಾರಣದಿಂದಲೇ ಯುರೋಪಿಯನ್ ಪಾರ್ಲಿಮೆಂಟ್ ರಷ್ಯಾ ಉಗ್ರ ರಾಷ್ಟ್ರವೆಂದು ಈ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ.
ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಆರಂಭಿಸಿ 9 ತಿಂಗಳು ಕಳೆದಿದೆ. ಈ ಯುದ್ಧವು ಉಕ್ರೇನ್‌ನಲ್ಲಿ ದೊಡ್ಡ ವಿನಾಶವನ್ನು ಉಂಟುಮಾಡಿದೆ.

ಈ ಯುದ್ಧದಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.

ಈ ಯುದ್ಧದಿಂದಾಗಿ ಲಕ್ಷಾಂತರ ಉಕ್ರೇನ್‌ ದೇಶವನ್ನು ತೊರೆಯಬೇಕಾಯಿತು. ಇದೀಗ ಯುರೋಪಿಯನ್ ಪಾರ್ಲಿಮೆಂಟ್ (ಇಯು ಸಂಸತ್ತು ಭವನ) ಈ ಸಂಪೂರ್ಣ ವಿಷಯವನ್ನು ಗಮನದಲ್ಲಿಟ್ಟುಕೊಂಡು ಈ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ.
ಈ ನಿರ್ಧಾರದ ಅಡಿಯಲ್ಲಿ ರಷ್ಯಾದ ವಿರುದ್ಧ ಈ ದೊಡ್ಡ ಘೋಷಣೆ ಮಾಡಲಾಗಿದೆ.

ಮುಂದಿನ ವರ್ಷದೊಳಗೆ 4 ಕೋಟಿ ಜನರಿಗೆ ಆರೋಗ್ಯ ಕಾರ್ಡ್- ಸೀಎಂ

0

ಮುಂದಿನ ವರ್ಷದೊಳಗೆ ರಾಜ್ಯದ 4 ಕೋಟಿ ಜನರಿಗೆ ಆರೋಗ್ಯ ಕಾರ್ಡ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿ, ನೀರಾವರಿ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದರು.

ʻʻಡಬಲ್ ಎಂಜಿನ್ ಸರ್ಕಾರವಿರುವ ಕಾರಣ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತಿದೆ. ಭಾರತದ ಸಮಗ್ರ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಕಟಿಬದ್ಧರಾಗಿದ್ದಾರೆ. 58 ಲಕ್ಷ ರೈತ ಕುಟುಂಬಗಳಿಗೆ ರೈತ ಸಮ್ಮಾನ್‌ ಮತ್ತು ರಾಜ್ಯ ಸರಕಾರದ ಮೂಲಕ ಒಟ್ಟು 10000 ರೂ. ನೀಡಲಾಗುತ್ತಿದೆ. ಮುದ್ರಾ ಯೋಜನೆಯಡಿ ರಾಜ್ಯದ 19 ಲಕ್ಷ ಯುವಕರ ಸಣ್ಣ ಉದ್ದಿಮೆಗಳಿಗೆ ಆರ್ಥಿಕ ಸಹಾಯ. ಆಯುಷ್ಮಾನ್ ಭಾರತ ಯೋಜನೆಯಡಿ 1 ಕೋಟಿ ಆರೋಗ್ಯ ಕಾರ್ಡ್ ನೀಡಲಾಗಿದೆ ಎಂದರು.

10 ಲಕ್ಷ ರೈತರ ಮಕ್ಕಳು ಉತ್ತಮ ಶಿಕ್ಷಣ ಹೊಂದಲು ಅನುಕೂಲವಾಗುವಂತೆ ರೈತ ವಿದ್ಯಾನಿಧಿಯನ್ನು ನೀಡಲಾಗುತ್ತಿದೆ. 6 ಲಕ್ಷ ರೈತಕೂಲಿಕಾರರು, ಮೀನುಗಾರರು, ನೇಕಾರರ , ಆಟೋ ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು.

ಮಹಿಳಾ ಸಬಲೀಕರಣಕ್ಕೆ ಬದ್ಧರಾಗಿರುವ ನಮ್ಮ ಸರ್ಕಾರ ಸ್ತ್ರೀ ಸಾಮರ್ಥ್ಯ ಯೋಜನೆ ಮತ್ತು ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ಎಸ್.ಸಿ. ಮತ್ತು ಎಸ್ ಟಿ ಮೀಸಲಾತಿ ಹೆಚ್ಚಳ, 100 ಅಂಬೇಡ್ಕರ್ ಹಾಸ್ಟೆಲ್, 50 ಕನಕದಾಸ ಹಾಸ್ಟೆಲ್ ಗಳ ನಿರ್ಮಾಣ ಯೋಜನೆ, ಎಸ್ ಸಿ ಎಸ್ ಟಿ ಸಮುದಾಯದ ಬಡಜನರಿಗೆ 75 ಯೂನಿಟ್ ಉಚಿತ ವಿದ್ಯುತ್,28 ಸಾವಿರ ಕೋಟಿ ಎಸ್ ಸಿ, ಎಸ್ ಟಿ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ. ತಳಸಮುದಾಯದವರ ಏಳಿಗೆ ನಮ್ಮ ಸರ್ಕಾರದ ಗುರಿಯಾಗಿದೆ ಎಂದರು.

ನಮ್ಮ ಸರ್ಕಾರ ಕುರಿಗಾಹಿಗಳ ಸಂಘಕ್ಕೆ 20 ಕುರಿ ಮತ್ತು 1 ಮೇಕೆಯನ್ನು ನೀಡುವ ಮೂಲಕ ಕುರಿಗಾಹಿಗಳ ಜೀವನ ಸುಧಾರಣೆಗೆ ಯೋಜನೆ ರೂಪಿಸಲಾಗಿದ್ದು, 354 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಡಿಸೆಂಬರ್ ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬೈರತಿ ಬಸವರಾಜ, ಸಂಸದರಾದ ಜಿ.ಎಂ.‌ಸಿದ್ದೇಶ್ವರ್, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಕೆ.ಎಸ್‌ ನವೀನ್ ಹಾಗೂ ಮತ್ತಿತರರು ಹಾಜರಿದ್ದರು.‌

ಮಾದಕ ಪದಾರ್ಥಗಳ ದುಷ್ಪರಿಣಾಮದ ಅರಿವಿರಬೇಕು- ನ್ಯಾ.ಮಲ್ಲಿಕಾರ್ಜುನ ಗೌಡ

0

ಭಾರತ ವಿಶ್ವದಲ್ಲೇ ಅತಿದೊಡ್ಡ ಕ್ಯಾನ್ಸರ್ ಹಬ್‌ ಆಗಿ ಬೆಳೆಯುತ್ತಿರುವುದಕ್ಕೆ ತಂಬಾಕು ಸೇವನೆ ಮತ್ತು ಗಾಂಜಾ ಮತ್ತಿತರ ಮಾದಕ ವಸ್ತುಗಳ ಸೇವನೆ ಕಾರಣ.

ಕಾನೂನು ಜಾರಿಯಾದರೂ ಸಾರ್ವಜನಿಕರಲ್ಲಿ ಇವುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಇಲ್ಲದಿದ್ದರೆ ನಿಯಂತ್ರಣ ಕಷ್ಟ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಶಾಲೆ- ಕಾಲೇಜುಗಳ ಬಳಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರ. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ಜಾಸ್ತಿಯಿದೆ. ಮಾರಾಟಗಾರರು ಚಿಕ್ಕಮಕ್ಕಳಿಗೆ ಹಣದ ಆಮಿಷವೊಡ್ಡಿ ಅವರ ಮೂಲಕ ಗಾಂಜಾ ಮಾರಾಟ ಮಾಡುತ್ತಾರೆ. ₹ 100 ಚಾಕೊಲೆಟ್ ಆಸೆ ತೋರಿಸಿ 2 ಕೆ.ಜಿ. ಗಾಂಜಾ ಪೊಟ್ಟಣವನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ಮಕ್ಕಳ ಮೂಲಕ ಸುಲಭವಾಗಿ ತಲುಪಿಸುತ್ತಾರೆ’ ಎಂದು ಅವರು ಹೇಳಿದರು.

ಮಕ್ಕಳು ಸಿಕ್ಕಿಬಿದ್ದಲ್ಲಿ ಸುಲಭವಾಗಿ ಹೊರಗೆ ಬರಬಹುದು. ಶಿಕ್ಷೆಯ ಪ್ರಮಾಣ ಕಡಿಮೆ ಎಂಬುದು ಮಾದಕ ವಸ್ತುಗಳ ಮಾರಾಟಗಾರರ ತಂತ್ರವಾಗಿದೆ. ಮಾದಕ ಚಟಗಳಿಗೆ ದಾಸರಾದವರಿಗೆ ಮನೋ ತಜ್ಞರಿಂದ ಚಿಕಿತ್ಸೆ ಕೊಡಿಸಿ ಮುಖ್ಯವಾಹಿನಿಗೆ ತರಬೇಕು. ಶಾಲೆ, ಕಾಲೇಜುಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಇಂದಿಗೂ ಸುಶಿಕ್ಷಿತರು ಎನಿಸಿಕೊಂಡವರೇ ಶಾಲೆಯ ಅವಧಿ ಮುಗಿದ ನಂತರ ಆವರಣದಲ್ಲಿ ತಂಬಾಕು, ಮದ್ಯಪಾನ, ಧೂಮಪಾನ ಇನ್ನಿತರ ಮಾದಕ ವಸ್ತುಗಳನ್ನು ಸೇವನೆ ಮಾಡುವ ಮೂಲಕ ವಿಕೃತಿ ಮೆರೆಯುತ್ತಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ ಬೇಸರ ವ್ಯಕ್ತಪಡಿಸಿದರು.

ಡಿವೈಎಸ್‌ಪಿ ಪ್ರಭು, ಡಿಎಚ್‌ಒ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿದರು. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್, ಡಾ.ಮಲ್ಲಪ್ಪ, ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಹೇಮಂತ್ ರಾಜ್, ಶಿವಕುಮಾರ್ ಎಸ್.ಟಿ, ನಾಗರಾಜ್ ನಾಯಕ್ ಭಾಗವಹಿಸಿದ್ದರು

ಬಾಳಿಗೆ ಭದ್ರ ಬುನಾದಿ ನೀಡಿದ ಸ್ಟಾರ್ಟ್ ಅಪ್ ಒಂದರ ಯಶೋಗಾಥೆ

0

ಆ ಇಬ್ಬರು ಯುವಕರು ಉನ್ನತ ವ್ಯಾಸಂಗ ಮಾಡಿ ಕೈತುಂಬಾ ಆದಾಯ ತಂದುಕೊಡುವ ಉದ್ಯೋಗದಲ್ಲಿದ್ದರು.
ಆದರೆ ಅದರಿಂದ ತೃಪ್ತರಾಗಗೆ ಸಣ್ಣ ವ್ಯಾಪಾರವೇ ಉತ್ತಮ ಎಂದುಕೊಂಡರು. ತಮ್ಮ ಆಲೋಚನೆಗಳನ್ನು ಪರಸ್ಪರ ಹಂಚಿಕೊಂಡು ಕೆಲಸ ಮಾಡಲು ಆರಂಭಿಸಿದರು. ಏಳು ವರ್ಷಗಳ ಹಿಂದೆ ಡಿಸೈನ್ ವಾಲ್ಸ್ ಹೆಸರಿನಲ್ಲಿ ಆರಂಭವಾದ ಸ್ಟಾರ್ಟಪ್ ಕಂಪನಿ ದಿನದಿಂದ ದಿನಕ್ಕೆ ಉನ್ನತ ಮಟ್ಟಕ್ಕೆ ಬೆಳೆಯುತ್ತಿದ್ದು ಇದೀಗ 100 ಮಂದಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬಂದಿದೆ.

”ನಾವು ನಿಮ್ಮ ಜಾಗವನ್ನು ಅಲಂಕೃತಗೊಳಿಸುತ್ತೇವೆ” ಎಂಬ ಘೋಷಣೆಯೊಂದಿಗೆ ಈ ಸ್ಟಾರ್ಟ್​ಅಪ್​ ಕಂಪನಿ ಮುಂದೆ ಸಾಗುತ್ತಿದೆ.
100 ಮಂದಿಗೆ ಉದ್ಯೋಗ ಕೊಟ್ಟ ‘ಡಿಸೈನ್ ವಾಲ್ಸ್’
ಡಿಸೈನ್​ ವಾಲ್ಸ್​​: ಕಾಲ ಬದಲಾದಂತೆ ಯುವಜನತೆಯ ಚಿಂತನೆಯೂ ಬದಲಾಗುತ್ತಿದೆ. ಇಂದಿನ ಪೀಳಿಗೆಯವರು ದೊಡ್ಡ ಉದ್ಯೋಗಗಳಿಗಿಂತ ಸಣ್ಣ ವ್ಯಾಪಾರವೇ ಮೇಲು ಎಂದು ಭಾವಿಸುತ್ತಾರೆ. ಅದಕ್ಕೆ ಈ ಯುವಕರೇ ಸಾಕ್ಷಿ. ಇಬ್ಬರೂ ಕಾಲೇಜು ದಿನಗಳಲ್ಲಿ ಗೆಳೆಯರಾಗಿದ್ದರು. ವಿದ್ಯಾಭ್ಯಾಸ ಮುಗಿಸಿ ಕೆಲವು ವರ್ಷಗಳ ಕಾಲ ಕಾರ್ಪೊರೇಟ್ ಉದ್ಯೋಗಗಳಲ್ಲಿ ದುಡಿದು ಹಣ ಸಂಪಾದಿಸಿದರು. ಆದರೆ ಮೊದಲಿನಿಂದಲೂ ಉದ್ಯಮಿಯಾಗುವ ಯೋಚನೆ ಅವರ ಮನಸ್ಸಿನಲ್ಲಿತ್ತು.

2015ರಲ್ಲಿ, “ಡಿಸೈನ್ ವಾಲ್ಸ್” ಹೆಸರಿನ ಸ್ಟಾರ್ಟ್‌ಅಪ್ ಅನ್ನು ಸ್ಥಾಪಿಸಲಾಯಿತು. ಆ ಸಂಸ್ಥೆ ಉತ್ತಮ ಯಶಸ್ಸು ಸಾಧಿಸಿತು.
ವಿಚಾರಗಳ ವಿನಿಮಯ-ಸ್ವಂತ ಉದ್ಯಮ: ಆಂಧ್ರಪ್ರದೇಶದ ವಿಮಲ್ ಶ್ರೀಕಾಂತ್ ಮತ್ತು ಅಭಿನವ್ ರೆಡ್ಡಿ ಅವರೇ ಈ ಸಾಧಕರು.

ವಾರಂಗಲ್‌ನಲ್ಲಿರುವ ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಇನ್ನೋವೇಟಿವ್ ಟೆಕ್ನಾಲಜಿ, ರಿಸರ್ಚ್- IJITS ನಲ್ಲಿ ತಮ್ಮ ಅಧ್ಯಯನದ ದಿನಗಳಲ್ಲಿ ಸ್ನೇಹಿತರಾದರು. ವರ್ಷಾನುಗಟ್ಟಲೆ ಪ್ರತ್ಯೇಕವಾಗಿ ಕೆಲಸ ಮಾಡಿದ ಯುವಕರು ಸಮಾರಂಭವೊಂದರಲ್ಲಿ ಭೇಟಿಯಾಗಿ ತಮ್ಮ ವಿಚಾರಗಳನ್ನು ಹಂಚಿಕೊಂಡರು.

ಬಳಿಕ ತಮ್ಮ ಸ್ವಂತ ಉದ್ಯಮ ಸ್ಥಾಪಿಸುವ ದೃಢ ನಿರ್ಧಾರ ತೆಗೆದುಕೊಂಡು ಮುಂದಡಿ ಇಟ್ಟರು.

ಮೊಟ್ಟಮೊದಲ ಬಾರಿಗೆ ವಾಲ್ ಡಿಸೈನ್ ಕ್ಷೇತ್ರಕ್ಕೆ ಕಾಲಿಟ್ಟ ಅಭಿನವ್, ತಮ್ಮ ಕ್ಷೇತ್ರದಲ್ಲಿನ ಅಸಹಕಾರ, ಮಾರ್ಕೆಟಿಂಗ್​ನಲ್ಲಿ ಎದುರಿಸುತ್ತಿರುವ ಸವಾಲುಗಳು, ಸೇವೆಗಳ ಗುಣಮಟ್ಟದ ಬಗ್ಗೆ ಗೆಳೆಯ ವಿಮಲ್ ಜತೆ ಹಂಚಿಕೊಂಡರು. ಮಾರ್ಕೆಟಿಂಗ್​ನಲ್ಲಿ ಅನುಭವ ಹೊಂದಿದ್ದ ವಿಮಲ್, ಬಿಸ್ನೆಸ್ ಪಾರ್ಟ್​ನರ್ ಆಗುವ ಬಗ್ಗೆ ಅಭಿನವ್ ಸಲಹೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಇಬ್ಬರೂ ಜೊತೆಯಾದರು.

ಅಂದಿನಿಂದ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಾಲ್‌ಪೇಪರ್‌ಗಳನ್ನು (ಗೋಡೆಯ ಅಲಂಕಾರ) ನೀಡುತ್ತಾ ವ್ಯಾಪಾರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದೇವೆ ಎನ್ನುತ್ತಾರೆ ಅಭಿನವ್ ರೆಡ್ಡಿ.
1 ಲಕ್ಷ ರೂ. ಬಂಡವಾಳದಿಂದ ಆರಂಭ: ಇಬ್ಬರು ಸ್ನೇಹಿತರ ಜೊತೆ ಸೇರಿ ಮಿಯಾಪುರದಲ್ಲಿ ಒಂದು ಲಕ್ಷ ರೂಪಾಯಿ ಬಂಡವಾಳ ಹೂಡಿ ಡಿಸೈನ್ ವಾಲ್ಸ್ ಎಂಬ ಉದ್ಯಮ ಆರಂಭಿಸಿದರು. ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸುವ ವಾಲ್‌ಪೇಪರ್‌ಗಳು, ಕರ್ಟನ್‌ಗಳು ಮತ್ತು ಒಳಾಂಗಣ ಅಲಂಕಾರ ಸೇವೆಗಳನ್ನು ಗ್ರಾಹಕರನ್ನು ಮೆಚ್ಚಿಸುವ ರೀತಿಯಲ್ಲಿ ಒದಗಿಸಲಾಗಿದೆ. ಪ್ರಾರಂಭದಲ್ಲಿ ಸವಾಲುಗಳನ್ನು ಎದುರಿಸಿ, ಹಲವು ಪಾಠಗಳನ್ನು ಕಲಿತು ಅದನ್ನು ಮೆಟ್ಟಿ ನಿಲ್ಲಲು ಮುಂದಾಗುತ್ತಿದ್ದೇವೆ ಎನ್ನುತ್ತಾರೆ ಈ ಯುವ ಉದ್ಯಮಿಗಳು.

ಮನೆಯ ಹಾಲ್, ಬೆಡ್ ರೂಂ, ಬಾಲ್ಕನಿಗೆ ಹೊಸ ಸೊಬಗನ್ನು ತಂದು ಗ್ರಾಹಕರ ಮೆಚ್ಚುಗೆ ಪಡೆಯುತ್ತಿದ್ದಾರೆ. ತಮ್ಮ ತಂಡದ ಸೃಜನಶೀಲತೆಯನ್ನು ಒಟ್ಟು ಸೇರಿಸಿ ಬಣ್ಣಗಳ ಮಾಯಾಲೋಕ ಸೃಷ್ಟಿಸುತ್ತಿದ್ದಾರೆ. ಅತ್ಯಾಧುನಿಕ ಯಂತ್ರಗಳಲ್ಲಿ ರಚಿಸಲಾದ ಸುಂದರವಾದ ಗೋಡೆ ವಿನ್ಯಾಸಗಳು ಮತ್ತು 3D ವಾಲ್‌ಪೇಪರ್‌ಗಳು ಬಳಕೆದಾರರನ್ನು ಸಂತೋಷಪಡಿಸುತ್ತಿವೆ.

ಮಾರ್ಕೆಟಿಂಗ್‌ನಲ್ಲಿ ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆ, ತಪ್ಪುಗಳನ್ನು ವಿಶ್ಲೇಷಿಸುತ್ತಾ ಮುನ್ನಡೆಯುತ್ತಿರುವ ಅಭಿನವ್ ಮತ್ತು ವಿಮಲ್ ತಮ್ಮ ಏಳು ವರ್ಷಗಳ ಅವಧಿಯಲ್ಲಿ ಹಿಂದೆಮುಂದೆ ನೋಡದೇ ಯಾವುದಕ್ಕೂ ಎದುರದೇ ಪಯಣ ಮುಂದುವರಿಸುತ್ತಿದ್ದಾರೆ.
ಡಿಸೈನ್​ ವಾಲ್ಸ್​ ಸಂಸ್ಥೆ ಇದುವರೆಗೆ 200ಕ್ಕೂ ಹೆಚ್ಚು ಕಂಪನಿಗಳೊಂದಿಗೆ 5000ಕ್ಕೂ ಹೆಚ್ಚು ಯೋಜನೆಗಳನ್ನು ಪೂರ್ಣಗೊಳಿಸಿದೆ. 30 ಲಕ್ಷ ಚದರ ಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಗೋಡೆ ವಿನ್ಯಾಸಗಳನ್ನು ಮಾಡಿದೆ.

ಇಂತಹ ಮಹತ್ತರ ಸಾಧನೆ ಮಾಡುತ್ತಿರುವ ಈ ಯುವ ಗೆಳೆಯರಿಗೆ ಟೈಮ್ಸ್ ಆಫ್‌ ಇಂಡಿಯಾ ಸೇರಿದಂತೆ ನಾಲ್ಕು ರಾಷ್ಟ್ರ ಪ್ರಶಸ್ತಿಗಳು ಲಭಿಸಿರುವುದು ಸಂಸ್ಥೆಯ ನೌಕರರಿಗೆ ಸಂತಸ ತಂದಿದೆ.

ದತ್ತುಮಕ್ಕಳೂ ನೈಸರ್ಗಿಕವಾಗಿ ಜನ್ಮಿಸಿದ ಮಕ್ಕಳಷ್ಟೇ ಅರ್ಹರು

0

ದತ್ತು ಮಕ್ಕಳು ಅನುಕಂಪದ ನೌಕರಿ ಪಡೆಯಬಹುದು, ನೈಸರ್ಗಿಕ ಮಕ್ಕಳಿಗೂ ದತ್ತು ಮಕ್ಕಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ದತ್ತು ಪುತ್ರನಿಗೆ ಅನುಕಂಪದ ಆಧಾರದ ಉದ್ಯೋಗ ಲಭ್ಯವಾಗುವುದಿಲ್ಲ ಎಂದು ಏಕ ಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂಣದರಾಜು ಮತ್ತು ನ್ಯಾಯಮೂರ್ತಿ ಜಿ ಬಸವರಾಜು ಪೀಠ ಆದೇಶ ಹೊರಡಿಸಿದೆ.

ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯುವ ಸಂದರ್ಭದಲ್ಲಿ ದತ್ತು ಮಕ್ಕಳು ಹಾಗೂ ಸ್ವಂತ ಮಕ್ಕಳು ಎಂಬ ವ್ಯತ್ಯಾಸ ನೋಡಿದಲ್ಲಿ ದತ್ತು ತೆಗೆದುಕೊಳ್ಳುವ ಉದ್ದೇಶ ಈಡೇರುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.

ಬನಹಟ್ಟಿಯ ಜೆಎಂಎಫ್ ಸಿ ಕೋರ್ಟ್ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಕಚೇರಿಯಲ್ಲಿ ವಿನಾಯಕ ಎಂ ಮುತ್ತಟ್ಟಿ ಎಂಬುವವರು ಗ್ರೂಪ್ ಡಿ ನೌಕರ ನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮುತ್ತಟ್ಟಿ ಅವರು 2011 ರಲ್ಲಿ ಗಿರೀಶ್ ಅವರನ್ನು ದತ್ತು ತೆಗೆದುಕೊಂಡಿದ್ದರು. ಆದರೆ 2018 ರಲ್ಲಿ ವಿನಾಯಕ ಎಂ ಮುತ್ತಟ್ಟಿ ನಿಧನರಾಗಿದ್ದರು.

ಅವರ ಹುದ್ದೆಯನ್ನು ಅನುಕಂಪದ ಆಧಾರದ ಮೇಲೆ ನೀಡುವಂತೆ ಅವರ ದತ್ತುಪುತ್ರ ಗಿರೀಶ್ ಪ್ರಾಸಿಕ್ಯೂಷನ್ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ದತ್ತು ಪುತ್ರನಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡುವುದಿಲ್ಲ ಎಂದು ಹೇಳಿ ಅರ್ಜಿ ತಿರಸ್ಕರಿಸಿತ್ತು.

ಇದನ್ನು ಪ್ರಶ್ನಿಸಿ ಗಿರೀಶ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ದತ್ತು ಮಕ್ಕಳು ಅನುಕಂಪದ ನೌಕರಿ ಪಡೆಯಬಹುದು, ನೈಸರ್ಗಿಕ ಮಕ್ಕಳಿಗೂ ದತ್ತು ಮಕ್ಕಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಶಬರಿಮಲೈ ದರ್ಶನ ಸಮಯದಲ್ಲಿ ಬದಲಾವಣೆ

0

ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದು ಬರುತ್ತಿರುವ ಕಾರಣ, ದರ್ಶನ ಸಮಯದಲ್ಲಿ ಬದಲಾವಣೆ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.

ಕಳೆದ ಎರಡು ವರ್ಷ ಕೋವಿಡ್‌ ಕಾರಣಕ್ಕಾಗಿ ಇಂತಿಷ್ಟೇ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.
ಆದರೆ, ಈ ವರ್ಷ ನಿರ್ಬಂಧಗಳನ್ನು ತೆರವು ಮಾಡಲಾಗಿದ್ದು, ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಕ್ತಾದಿಗಳು ದರ್ಶನ ಪಡೆಯುತ್ತಿದ್ದಾರೆ.

ಹಾಗಾಗಿ ಮಧ್ಯಾಹ್ನ 3ರಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ರಾತ್ರಿ 11ರವರೆಗೂ ದರ್ಶನ ಪಡೆಯಬಹುದಾಗಿದೆ.
ಈ ಮೊದಲು ಬೆಳಿಗ್ಗೆ 3ರಿಂದ ಮಧ್ಯಾಹ್ನ 1ರ ವರೆಗೆ ಮತ್ತು ಸಂಜೆ 4ರಿಂದ ಮಧ್ಯರಾತ್ರಿಯ ವರೆಗೆ ಅಯ್ಯಪ್ಪ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಶಬರಿಮಲೆಯ ಅಯ್ಯಪ್ಪ ದೇವಸ್ಥಾನವು ನವೆಂಬರ್‌ 16ರಿಂದ ಬಾಗಿಲು ತೆರೆದಿದ್ದು, ಈ ವರ್ಷದ ಶಬರಿಮಲೆ ಯಾತ್ರೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ದಿನಕ್ಕೆ ಸುಮಾರು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಅಯ್ಯಪ್ಪನ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ.

ತಿಂಗಳಿಗೆ ಪ್ರತೀ ಕುಟುಂಬಕ್ಕೆ ಉಚಿತವಾಗಿ ಹತ್ತುಸಾವಿರ ಲೀಟರ್ ಕುಡಿಯುವ ನೀರು

0

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪ್ರತಿಯೊಂದು ಕುಟುಂಬಕ್ಕೂ ಸಿಹಿ ಸುದ್ದಿ ನೀಡಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿನ ಪ್ರತಿಯೊಂದು ಕುಟುಂಬಕ್ಕೂ ಮಾಸಿಕ ಹತ್ತು ಸಾವಿರ ಲೀಟರ್ ಕುಡಿಯುವ ನೀರನ್ನು ಉಚಿತವಾಗಿ ಕೊಡುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ.

ಹೊಸ ವರ್ಷ ಜನವರಿಗೆ ಹೊಸ ಕೊಡುಗೆ ನೀಡಲು ಉದ್ದೇಶಿಸಿದ್ದು, ಮುಂದಿನ ಚುನಾವಣೆಯನ್ನು ಗಮನದಲ್ಲಿ ಟ್ಟುಕೊಂಡು ಜಾರಿಗೆ ತರುವ ಬಗ್ಗೆ ಚರ್ಚೆ ನಡೆದಿದೆ.

ರಾಜ್ಯದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ದಿನದ 24 ಗಂಟೆ ನೀರು ಸರಬರಾಜು ಮಾಡುವ ‘ಜಲ ಜೀವನ್ ಮಿಷನ್’ನ ಹರ್​ಘರ್ ಜಲ್ ಯೋಜನೆ ಜಾರಿಗೆ ಬರುತ್ತಿದೆ. ಅಂದಾಜು 10 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಯೋಜನೆಗಳು ಭರದಿಂದ ನಡೆದಿವೆ.

ಇದೇ ಯೋಜನೆಯಲ್ಲಿ ಉಚಿತ ನೀರು ಪೂರೈಕೆ ಯೋಜನೆ ಜಾರಿಗೆ ತಂದರೆ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಏನೂ ಬರುವುದಿಲ್ಲವೆಂಬುದು ಸರ್ಕಾರದ ಲೆಕ್ಕಾಚಾರ. ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಇದೇ ರೀತಿಯ ಯೋಜನೆಯನ್ನು ಜಾರಿಗೆ ತಂದಿದೆ. ಅಲ್ಲಿ ಜನಪ್ರಿಯ ಕಾರ್ಯಕ್ರಮವಾಗಿದ್ದು, ಪಕ್ಷದ ಪರವಾಗಿ ಜನರ ಅಭಿಪ್ರಾಯ ಮೂಡಿಸಿದೆ.

ಆದ್ದರಿಂದಲೇ ರಾಜ್ಯದಲ್ಲಿಯೂ ಚುನಾವಣೆಗೆ ಹೋಗುವ ಮುನ್ನ ಇಂಥದ್ದೊಂದು ಯೋಜನೆಯನ್ನು ತರುವುದು ಒಟ್ಟಾರೆ ಆಶಯವಾಗಿದೆ.
ಕರೊನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಾಲ ಹೆಚ್ಚು ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಾಲ್ಕು ಷರತ್ತುಗಳನ್ನು ವಿಧಿಸಿತ್ತು. ಅದರಲ್ಲಿ ಸ್ಥಳೀಯ ಸಂಸ್ಥೆಗಳ ಆದಾಯ ವೃದ್ದಿ ಮಾಡಿಕೊಳ್ಳುವುದು ಒಂದಾಗಿತ್ತು.

ಆ ಸಂದರ್ಭದಲ್ಲಿ ಕೆಲವು ಸ್ಥಳೀಯ ಸಂಸ್ಥೆಗಳು ತೆರಿಗೆ ದರ ಹೆಚ್ಚಿಸಿದ್ದವು. ಅದರಲ್ಲಿ ನೀರಿನ ದರವೂ ಸೇರಿತ್ತು. ಆದರೆ, ಸಂಗ್ರಹ ಕಡಿಮೆಯಾಗುವುದರ ಜತೆಗೆ ದೂರುಗಳು ಹೆಚ್ಚಾಗಿದ್ದವು.

ನಗರಾಭಿವೃದ್ದಿ ಇಲಾಖೆ ಯೋಜನೆ: ಸ್ಥಳೀಯ ಸಂಸ್ಥೆಗಳಲ್ಲಿ ದೂರುಗಳು ಹೆಚ್ಚಾಗಿ ಕೇಳಿಬಂದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ. ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿ ಮುಂದಿನ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಿದ್ದಾರೆ. ಯೋಜನೆಯನ್ನು ಮೊದಲಿಗೆ ಪ್ರಕಟಿಸಿ ಮುಂದಿನ ಬಜೆಟ್​ನಲ್ಲಿ ಅನುದಾನ ಹೊಂದಾಣಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಬೆಂಗಳೂರು ಹೊರತುಪಡಿಸಿದರೆ ಉಳಿದ ನಗರ ಮತ್ತು ಗ್ರಾಮೀಣ ಭಾಗಕ್ಕೆ ವಾರ್ಷಿಕ ಅಂದಾಜು 250 ಕೋಟಿ ರೂ.ಗಳಷ್ಟು ಮಾತ್ರ ವೆಚ್ಚ ಆಗಬಹುದೆಂದು ಅಂದಾಜು ಮಾಡಲಾಗಿದೆ. ಹತ್ತು ಸಾವಿರ ಲೀಟರ್​ಗಿಂತ ಹೆಚ್ಚು ಬಳಕೆ ಮಾಡುವವರಿಗೆ ಸ್ಲ್ಯಾಬ್ ರೀತಿಯಲ್ಲಿ ಶುಲ್ಕ ವಿಧಿಸುವುದು. ಅದರಲ್ಲಿ ಮೊದಲ ಐದು ಸಾವಿರ ಲೀಟರ್​ಗೆ ಒಂದು ಮೊತ್ತವಿದ್ದರೆ, ಐದು ಸಾವಿರ ಲೀಟರ್ ಮೀರಿದ ನಂತರ ಹೆಚ್ಚಿನ ಶುಲ್ಕ ವಿಧಿಸುವ ಮೂಲಕ ಸರ್ಕಾರ ವೆಚ್ಚ ಮಾಡುವ ಮೊತ್ತದ ಬಹುಭಾಗ ವಾಪಾಸು ಬರುತ್ತದೆ ಎಂಬ ಅಂದಾಜು ಇದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 10 ಸಾವಿರ ಲೀಟರ್​ಗಿಂತ ಹೆಚ್ಚಿನ ಪ್ರಮಾಣದ ನೀರು ಬಳಕೆದಾರರು ದೊಡ್ಡ ಪ್ರಮಾಣದಲ್ಲಿದ್ದಾರೆ ಎನ್ನಲಾಗಿದೆ.

ಕಂದಾಯ ಭೂಮಿ ಖರೀದಿಸಿದ ಏಳುದಿನಗಳಲ್ಲೇ ಖಾತೆ ಪಹಣಿ ‌ಬದಲಾವಣೆ

0

ಕಂದಾಯ ಭೂಮಿ ನೋಂದಣಿಯ ಅನಂತರ ಇನ್ನು ಮುಂದೆ ಏಳು ದಿನಗಳಲ್ಲಿ ಖಾತೆ ಮತ್ತು ಪಹಣಿ ಬದಲಾವಣೆಯಾಗಲಿದೆ.

ಪ್ರಸ್ತುತ ಜಮೀನು ಖರೀದಿ ಮಾಡಿದವರು ಖಾತೆ ಮತ್ತು ಪಹಣಿ ಗಾಗಿ 34 ದಿನ ಕಾಯುವುದು ಹಾಗೂ ಕಂದಾಯ ಇಲಾಖೆ ಅಧಿ ಕಾರಿಗಳ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ.
ಇದನ್ನು ತಪ್ಪಿಸಲು ನೂತನ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.
ಜಮೀನು ಖರೀದಿ ಮಾಡಿದವರು ಖಾತೆ ಬದಲಾವಣೆಗೆ ಕಾಯುವುದನ್ನು ತಪ್ಪಿಸುವುದಕ್ಕಾಗಿ ಏಳು ದಿನಗಳಲ್ಲಿ ಖಾತೆ ಹಾಗೂ ಪಹಣಿ ಮಾಡಿಕೊಡುವಂತೆ ಸದ್ಯದಲ್ಲೇ ಆದೇಶ ಜಾರಿಯಾಗಲಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು.

ಇದರಿಂದ ರಾಜ್ಯಾದ್ಯಂತ ಜಮೀನು ಖರೀದಿದಾರರು ಏಳು ದಿನಗಳಲ್ಲಿ ಖಾತೆ ಪಡೆದು ಸಾಲ ಹಾಗೂ ಇತರ ದಾಖಲೆ ಪಡೆಯಲು ಅನುಕೂಲವಾಗಲಿದೆ. ಜತೆಗೆ ತಿಂಗಳುಗಟ್ಟಲೆ ಅಲೆದಾಡುವುದು ತಪ್ಪಲಿದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ್‌ ಸಿದ್ಧಿ ಹಾಗೂ ವಿವೇಕಾನಂದ ಗಿರಿಜನ ಆಶ್ರಮ ಶಾಲೆಯ ಡಾ| ಬಾಲಸುಬ್ರಹ್ಮಣ್ಯ ಅವರ ಪ್ರೇರಣೆಯಿಂದ ಮುಂದಿನ ಬಾರಿ ಹಾಡಿಯಲ್ಲಿ ವಾಸ್ತವ್ಯ ಹೂಡಲು ತೀರ್ಮಾನಿಸಲಾಗಿದೆ.

ಜನವರಿಯಲ್ಲಿ ದಾವಣಗೆರೆ, ಹುಬ್ಬಳ್ಳಿ, ಹಾವೇರಿ, ಗದಗ, ಬೆಳಗಾವಿ, ಚಿತ್ರದುರ್ಗ ಸೇರಿ ಎಂಟು ಜಿಲ್ಲೆಗಳ 50 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ಸಚಿವ ಆರ್‌. ಅಶೋಕ್‌ ತಿಳಿಸಿದರು.

ಹಾಸನ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಂದು ಲಕ್ಷ ಎಕರೆ ಕಾಫಿ ತೋಟ ಒತ್ತುವರಿಯಾಗಿದ್ದು, ಸ್ವಾಧೀನ ದಲ್ಲಿರುವವರಿಗೆ ಎಕರೆಗೆ ಇಂತಿಷ್ಟು ವಾರ್ಷಿಕ ತೆರಿಗೆ ನಿಗದಿ ಮಾಡಿ 30 ವರ್ಷಗಳ ಕಾಲ ಗುತ್ತಿಗೆಗೆ ನೀಡುವ ಸಂಬಂಧ ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡಿಸ ಲಾಗುವುದು ಎಂದು ಆರ್‌. ಅಶೋಕ್‌ ತಿಳಿಸಿದರು.

ಈ ಮೂರು ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದ ಜಮೀನನ್ನು ವರ್ಷಗಳಿಂದ ಒತ್ತುವರಿ ಮಾಡಿಕೊಂಡಿದ್ದು, ಈಗ ಸ್ವಯಂಪ್ರೇರಿತರಾಗಿ ತಾವು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಪ್ರಮಾಣ ಪತ್ರ ನೀಡಿ 30 ವರ್ಷಗಳ ಕಾಲ ಗುತ್ತಿಗೆಗೆ ಸರಕಾರದಿಂದಲೇ ಪಡೆಯಲಿದ್ದಾರೆ ಎಂದರು.

ಮೀನು ಕೃಷಿಕರ ಮಕ್ಕಳಿಗೆ ವಿದ್ಯಾನಿಧಿ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ

0

ಮೀನುಗಾರಿಕೆ ಇಲಾಖೆ ವತಿಯಿಂದ 2022-23 ನೇ ಸಾಲಿನಲ್ಲಿ ಮೀನುಗಾರರ, ಮೀನು ಕೃಷಿಕರ ಮಕ್ಕಳಿಗೆ ಮುಖ್ಯಮಂತ್ರಿ ವಿದ್ಯಾನಿಧಿ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

8 ರಿಂದ 10 ನೇ ತರಗತಿವರೆಗೆ ಓದುತ್ತಿರುವ ಹೆಣ್ಣು ಮಕ್ಕಳಿಗೆ ಮಾತ್ರ 2000 ರೂ., ಪಿಯುಸಿ, ಐಟಿಐ, ಡಿಪ್ಲೋಮಾ ಓದುತ್ತಿರುವ ಹೆಣ್ಣು ಮಕ್ಕಳಿಗೆ 3000 ರೂ.
ಮತ್ತು ಗಂಡು ಮಕ್ಕಳಿಗೆ 2500 ರೂ., ಪದವಿ ಅಂದರೆ ಬಿ.ಎ, ಬಿ.ಎಸ್.ಸಿ., ಬಿಕಾಂ ಹಾಗೂ ಸ್ನಾತಕೋತ್ತರ ಕೋರ್ಸ್ ಓದುತ್ತಿರುವ ಹೆಣ್ಣು ಮಕ್ಕಳಿಗೆ 5500 ರೂ. ಮತ್ತು ಗಂಡು ಮಕ್ಕಳಿಗೆ 5000 ರೂ., ವೃತ್ತಿಪರ ಕೋರ್ಸ್‌ಗಳಾದ ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್, ಬಿ ಫಾರ್ಮ್, ನರ್ಸಿಗ್ ಓದುತ್ತಿರುವ ಗಂಡು ಮಕ್ಕಳಿಗೆ 7500 ರೂ. ಮತ್ತು ಹೆಣ್ಣು ಮಕ್ಕಳಿಗೆ 8000 ರೂ., ಎಂಬಿಬಿಎಸ್, ಬಿಇ, ಬಿಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್‌ಗಳನ್ನು ಓದುವ ಗಂಡು ಮಕ್ಕಳಿಗೆ 10,000 ರೂ. ಮತ್ತು ಹೆಣ್ಣು ಮಕ್ಕಳಿಗೆ 11,000 ರೂ. ಶಿಷ್ಯವೇತನ ನೀಡಲಾಗುವುದು.

ಶಿಷ್ಯ ವೇತನ ಅರ್ಜಿ ಸಲ್ಲಿಸಲಿಚ್ಚಿಸುವ ಜಿಲ್ಲೆಯ ಎಲ್ಲಾ ಮೀನುಗಾರರು FRUITS ID ಸೃಜಿಸಲು ತಮ್ಮ ಆಧಾರ್‌ ಕಾರ್ಡ್‌ ಪ್ರತಿ, ಮೀನುಗಾರರ ಸಹಕಾರ ಸಂಘದ ಸದಸ್ಯತ್ವ ಪತ್ರ, ಬ್ಯಾಂಕ್ ಖಾತೆ ವಿವರ, ಮೊಬೈಲ್ ದೂರವಾಣಿ ಸಂಖ್ಯೆ ಹಾಗೂ ಮಕ್ಕಳ ಶಾಲಾ ವಿದ್ಯಾಭ್ಯಾಸದ ಐಡಿ ಕಾರ್ಡ್ ಪ್ರತಿಯೊಂದಿಗೆ ಸಂಬಂಧಿಸಿದ ತಾಲೂಕು ಮೀನುಗಾರಿಕಾ ಸಹಾಯಕ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಿ ನವೆಂಬರ್ 30 ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಕಣ್ಮನ ಸೆಳೆದ ತುಂಗಾರತಿ

0

ದಿನಾಂಕ: 19.11.2022. ರಂದು ಮನ್ವಂತರ ಮಹಿಳಾ ಮಂಡಳ ಹಾಗೂ ಕೋಟೆ ಯೋಗ ಕೇಂದ್ರದ ಮಹಿಳಾ ತಂಡದಿಂದ “ಕಾರ್ತಿಕ ಕಲರವ” ಮತ್ತು “ತುಂಗಾರತಿ” ಕಾರ್ಯಕ್ರಮ ತುಂಗಾ ನದಿ ದಡ, ಗಂಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿತ್ತು.

ವಿಶೇಷವಾದ ಪರಿಸರ ಜಾಗೃತಿ ಗೀತೆಗಳು, ನದಿ, ನಾಡು ಕುರಿತು ಪಿಕ್ ಅಂಡ್ ಸ್ವೀಚ್ ಹಾಗೂ ವಿಶೇಷ ಕನ್ನಡದ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ಕಾರ್ಯಕ್ರಮ ಅತ್ಯಂತ ವಿಶಿಷ್ಠ ವಾಗಿ ನೆರವೇರಿತು.

ನದಿ ದಡದ ದೇವಾಲಯದ ಮುಂದೆ ದೀಪ ಪ್ರಜ್ವಲನೆ ಮಾಡಿದ ಮನ್ವಂತರದ ಅಧ್ಯಕ್ಷರಾದ ಶ್ರೀರಂಜಿನಿ ಯವರು ದೀಪ ಬೆಳಕು ನೀಡುವುದು ಮಾತ್ರವಲ್ಲ..ರಕ್ಷಣೆಯ ಭಾವವನ್ನು ಕಟ್ಟಿಕೊಡುತ್ತದೆ ಎಂದು ಮನ್ವಂತರ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀ ರಂಜಿನಿ ದತ್ತಾತ್ರಿಯವರು ತಿಳಿಸಿದರು.

ಬೆಳಕಿಗೆ ಹೇಗೆ ಕತ್ತಲೆಯನ್ನು ಹೊಡೆದೋಡಿಸುವ ಶಕ್ತಿ ಇದೆಯೋ ಅಂತೆಯೇ ಮಹಿಳೆ ಕೂಡ ತನ್ನ ಅದಮ್ಯ ಕಾರ್ಯಕ್ಷಮತೆ, ದಕ್ಷತೆ, ಪ್ರಾಮಾಣಿಕತೆ ಇತ್ಯಾದಿ ಬೆಳಕಿನ ಕಿರಣದ ಮೂಲಜ ರಕ್ಷಣೆಯ ಭಾವ, ಭಕುತಿಯ ಮೂಲಕ ಕುಟುಂಬ, ಸಮಾಜವನ್ನು ಮುನ್ನಡೆಸಿದ್ದಾಳೆ ಎಂದರು‌.

ತನ್ನ ನಿತ್ಯ ಕಾಯಕದ ಮೂಲಕ ಹೊರಹೊಮ್ಮುವ ಬೆಳಕಿನಿಂದ ನಕಾರಾತ್ಮಕ ಭಾವ ಓಡಿಸಿ, ಸಕಾರಾತ್ಮಕ ಸ್ಥಿರತೆ ಕಾಪಿಟ್ಟಿದ್ದಾಳೆ ಎಂದು ತಿಳಿಸಿದರು.

ನೀರು – ನೀರೆಗೆ ಹತ್ತಿರದ ನಂಟು, ಪ್ರಕೃತಿ ಮತ್ತು ಮಾತೆಯರಿಗೆ ಸಂಬಂಧ ಉಂಟು. ಬನ್ನಿ ಪ್ರಕೃತಿ ಸಂರಕ್ಷಣೆ ನಮ್ಮ ಜವಾಬ್ದಾರಿ ಎಂದು ಸಾರೋಣ ಎಂದು ಶ್ರೀರಂಜಿನಿ ದತ್ತಾತ್ರಿ ನುಡಿದು ಅನೇಕ ಪರಿಸರ ಗೀತೆಗಳನ್ನು ಒಟ್ಟಾಗಿ ಹಾಡಿಸಿದರು.

ಕೋಟೆ ಯೋಗ ಕೇಂದ್ರ ಮಹಿಳಾ ತಂಡದ ಪುಷ್ಪಾರವಿಯವರು ಕಾರ್ತೀಕ ಕಲರವದ ಈ ಸದ್ದು ಸದಾ ವ್ಯಾಪಿಸಲಿ, ನಮ್ಮೊಳಗಿನ ಸ್ನೇಹ, ವಿಶ್ವಾಸ ಸದಾ ಸ್ಥಿರತೆಯಿಂದಿರಲಿ ಎಂದರು.

ಮನ್ವಂತರದ ಜಯಾಸುರೇಶ್, ಅಶ್ವಿನಿ, ಸುಲೋಚನಾ ಎಲ್ಲ ಗೆಳತಿಯರು ಭಾಗವಹಿಸಿದ್ದರು.

ಕೋಟೆ ಯೋಗಕೇಂದ್ರದ ಮಹಿಳಾ ತಂಡದವರು ಅತ್ಯಂತ ಶ್ರದ್ಧೆಯಿಂದ ತುಂಗಾರತಿ ಕಾರ್ಯಕ್ರಮ ಆಯೋಜಿಸಿದ್ದರು.