Friday, March 27, 2026
Friday, March 27, 2026
Home Blog Page 1377

ರಾಜ್ಯದಲ್ಲಿ ಈವರೆಗೆ 5.86 ಲಕ್ಷ ವಿಶೇಷ ಚೇತನರಿಗೆ ಗುರುತಿನ ಚೀಟಿ ವಿತರಿಸಲಾಗಿದೆ

ಸರ್ಕಾರದಿಂದ ವಿಶೇಷಚೇತನರಿಗೆ ನೀಡುವ ವಿಶಿಷ್ಟ ಗುರುತಿನ ಚೀಟಿಯ ವಿತರಣೆಯಲ್ಲಿ ರಾಜ್ಯದಲ್ಲಿ ಗಮನಾರ್ಹ ಸಾಧನೆಯಾಗಿದ್ದು, ಈವರೆಗೆ 5.86 ಲಕ್ಷ ವಿಶೇಷಚೇತನರಿಗೆ ಕಾರ್ಡ್‌ ವಿತರಣೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಕಾರ್ಡ್‌ ವಿತರಣೆ ಪ್ರಕ್ರಿಯೆಯ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ವಿಶೇಷಚೇತನರಿಗೆ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ, ವಿಶೇಷಚೇತನರಿಗೆ ನೀಡುವ ಯುನಿವರ್ಸಲ್ ಗುರುತು ಚೀಟಿ-ಯುಡಿಐಡಿಯಲ್ಲಿ ಕರ್ನಾಟಕ ಉತ್ತಮ ಸಾಧನೆ ತೋರಿದೆ. ರಾಮನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾರ್ಡ್‌ಗಳು ವಿತರಣೆಯಾಗಿವೆ. ಚಿಕ್ಕಮಗಳೂರು ಎರಡನೇ ಸ್ಥಾನದಲ್ಲಿದೆ. ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ ಹಾಗೂ ಮಂಡ್ಯ ಜಿಲ್ಲೆಗಳು ನಂತರದ ಸ್ಥಾನಗಳಲ್ಲಿವೆ ಎಂದು ಸಚಿವರು ತಿಳಿಸಿದರು. ಜೊತೆಗೆ, ಉತ್ತಮ ಸಾಧನೆ ಮಾಡಿದ ಜಿಲ್ಲೆಗಳ ಆರೋಗ್ಯಾಧಿಕಾರಿಗಳನ್ನು ಅಭಿನಂದಿಸಿದರು.

ವಿಶೇಷಚೇತನರು ಕಡ್ಡಾಯವಾಗಿ ಯುಡಿಐಡಿ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಒಮ್ಮೆ ಲಾಗಿನ್ ಆದ ನಂತರ ಯುಡಿಐಡಿ ಕಾರ್ಡ್ ಪಡೆಯುವುದು ಸುಲಭವಾಗಿದೆ. ಇದರ ಮೂಲಕ ಸರ್ಕಾರದಿಂದ ಅನೇಕ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲಿದೆ. ಯುಡಿಐಡಿ ಕಾರ್ಡ್‌ನಿಂದ ಬ್ಲಾಕ್ ಮತ್ತು ಜಿಲ್ಲಾ ಹಂತ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಎಲ್ಲಾ ಹಂತದ ಅನುಷ್ಠಾನ ಶ್ರೇಣಿಯಲ್ಲಿ ಫಲಾನುಭವಿಯ ಸೌಲಭ್ಯಗಳನ್ನು ಟ್ರ್ಯಾಕ್ ಮಾಡಲಾಗುವುದು. ಕಟ್ಟ ಕಡೆಯ ವಿಶೇಷಚೇತನರಿಗೂ ಯುಡಿಐಡಿ ಕಾರ್ಡ್‌ಗಳನ್ನು ವಿತರಿಸುವುದು ಸರ್ಕಾರದ ಗುರಿಯಾಗಿದ್ದು, ಇದಕ್ಕಾಗಿ ಎಲ್ಲಾ ವಲಯಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಅಂಗವೈಕಲ್ಯದಲ್ಲಿ ಈ ಹಿಂದೆ 7 ಬಗೆಯ ನ್ಯೂನತೆಗಳನ್ನು ಮಾತ್ರ ಪರಿಗಣಿಸಲಾಗುತ್ತಿತ್ತು. ಆದರೆ 2016 ರ ಆರ್.ಪಿ.ಡಬ್ಲ್ಯೂ.ಡಿ ಕಾಯ್ದೆಗೆ ತಿದ್ದುಪಡಿ ತಂದ ನಂತರ 21 ರೀತಿಯ ನ್ಯೂನತೆಗಳನ್ನು ಗುರುತಿಸಲಾಗಿದೆ. ವಿಶೇಷಚೇತನರ ವೈಯಕ್ತಿಕ ಮತ್ತು ದೈಹಿಕ ನ್ಯೂನತೆಗಳ ಬಗ್ಗೆ ದತ್ತಾಂಶ ಸಂಗ್ರಹಿಸಲಾಗುತ್ತಿದೆ. ಶೈಕ್ಷಣಿಕ, ಉದ್ಯೋಗ ವಿವರಗಳನ್ನು ಸಹ ಇದು ಒಳಗೊಂಡಿದೆ. ಶೇ.40 ರಷ್ಟು ದೈಹಿಕ ನ್ಯೂನತೆ ಹೊಂದಿರುವವರನ್ನು ವಿಶೇಷಚೇತನರು ಎಂದು ಗುರುತಿಸಲಾಗುತ್ತಿದೆ. 2011 ರ ಜನಗಣತಿ ವರದಿಯಂತೆ, ದೇಶದಲ್ಲಿ ಶೇ.2.21 ರಷ್ಟು ಮಂದಿ ಇಂತಹ ಸಮಸ್ಯೆಗಳನ್ನು ಹೊಂದಿದ್ದಾರೆ. ಇವರಿಗೆ ಸೌಲಭ್ಯಗಳನ್ನು ದೊರಕಿಸಿಕೊಡಲು ವಿಶೇಷ ಒತ್ತು ನೀಡಲಾಗಿದೆ ಎಂದು ತಿಳಿಸಿದರು

ಜೆಡಿಎಸ್ ಗೆಲ್ಲಿಸಿದರೆ ಮಹಿಳೆಗೆ ಡಿಸಿಎಂ ಸ್ಥಾನ ನೀಡಲು ಬದ್ಧ- ಕುಮಾರಸ್ವಾಮಿ

0

ಮಹಿಳೆಯರ ಪ್ರಾಮಾಣಿಕ ಅಭಿವೃದ್ಧಿಗೆ ಜೆಡಿಎಸ್‌ ಬದ್ಧವಾಗಿದೆ. ಹೀಗಾಗಿ ಅಧಿಕಾರಕ್ಕೆ ಬಂದ್ರೆ ಮಹಿಳೆಯರನ್ನ ಡಿಸಿಎಂ ಮಾಡುಲು ಸಿದ್ದವಿದ್ದೆವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕೋಲಾರ ನಗರದಲ್ಲಿ ಮಾತನಾಡಿದ ಅವರು, ಅವಕಾಶ ಬಂದರೇ ಮುಸ್ಲಿಂ ಸಮುದಾಯದವರು ಸಿಎಂ ಆಗಬಹುದು.ಅವರು ಯಾಕೆ ಆಗಬಾರದು?ನಿನ್ನೆ ಶಾಲೆಗೆ ಹೋಗುವ ಮಕ್ಕಳು ಬಂದು‌ ನೀವು ಸಿಎಂ ಆಗ್ಬೇಕು ಎಂದರು. ಆರತಿ ಮಾಡಿದಾಗ ದಕ್ಷಣೆ ಕೊಟ್ಟಾಗ ದುಡ್ಡು ಬೇಡ ಒಳ್ಳೆ ಶಾಲೆ ಮಾಡಿ ಅಂತ ಮಕ್ಕಳು ಹೇಳಿದ್ರು.ಮುಂದೆ ದುಡ್ಡು ಕೊಟ್ಟು‌ ಮತ ಪಡೆಯೋದನ್ನ ಜನ ನಿಷೇಧ ಮಾಡಿತ್ತಾರೆ.

ಐದು ವರ್ಷಗಳ ಆಡಳಿತ ಸಿಕ್ಕರೆ ಇನ್ಮುಂದೆ ಜನರು ಹಣವನ್ನು‌ ಪಡೆಯಬಾರದು. ಈ ರೀತಿಯ ಜನರ ಅಭಿವೃದ್ಧಿ ‌ಮಾಡುತ್ತೆನೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಎಚ್ ಡಿ ಕೆ ಟಾಂಗ್ ನೀಡಿದ್ದಾರೆ. ಒಬ್ರು ಮೂರು‌ ತಲೆ‌ಮಾರಿಗಾಗುವಷ್ಟು ದುಡ್ಡು ಮಾಡಿದ್ರು ಅಂತ ಹೇಳಿದ್ರು.ಈ‌ ಹಣ ಯಾವುದು ಅಂದ್ರೆ ಕೆ‌ಸಿ ವ್ಯಾಲಿ ,ಎತ್ತಿನಹೊಳೆ ಹಣ ಈ‌ ಮಾತು ಹೇಳಿದಾಗ ಕೂದಲು ಸ್ವಲ್ಲ ಇತ್ತು. ಇದೀಗ ಅದು‌ ಉದುರಿಹೋಗಿದೆ.ಅಷ್ಟಿದ್ರೆ ಚುನಾವಣೆ ಮುಗಿಯೂದ್ರೊಳಗೆ ಎತ್ತಿನ ಹೊಳೆ ಮುಗಿಸಲಿ ಎಂದು ಕುಮಾರಸ್ವಾಮಿ ಸವಾಲ್‌ ಹಾಕಿದ್ದಾರೆ.

ಹಾಲಿನ ದರ ₹ 3 ಏರಿಕೆ ಬೇಡ- ಬಸವರಾಜ ಬೊಮ್ಮಾಯಿ

0

ಗ್ರಾಹಕರಿಗೆ ಹೊರೆಯಾಗದಂತೆ ಹಾಗೂ ರೈತರಿಗೆ ಅನ್ಯಾಯವಾಗದಂತೆ ಸೂತ್ರ ರೂಪಿಸಬೇಕೆಂದು ಕೆ ಎಂ ಫ್ ಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಹಾಲಿನ ದರ ಏರಿಕೆಯ ಬಗ್ಗೆ ಪ್ರತಿಕ್ರಯಿಸಿ, ವಿವಿಧ ರಾಜ್ಯಗಳಲ್ಲಿರುವ ಹಾಲಿನ ದರ ಹಾಗೂ ಸಂಬಂಧಿಸಿದ ಸಂಪೂರ್ಣ ಮಾಹಿತಿ,ಕೆಎಂಎಫ್ ಸಂಸ್ಥೆಗೆ ತಗಲುತ್ತಿರುವ ವೆಚ್ಚ,ಹಾಲಿನ ದರ ಏರಿಕೆಗೆ ಕಾರಣಗಳು, ಸಂಸ್ಥೆಯಲ್ಲಿ ಆಗುತ್ತಿರುವ ಸೋರಿಕೆಗಳು,ನಷ್ಟಗಳನ್ನು ತಡೆಗಟ್ಟಲು ಸಂಸ್ಥೆಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ.

ಗ್ರಾಹಕ ಹಾಗೂ ರೈತನಿಗೆ ಅನುಕೂಲವಾಗುವ ಸೂತ್ರವನ್ನು ಎರಡು ದಿನಗಳಲ್ಲಿ ರೂಪಿಸಿಕೊಂಡು, ಕೆಎಂಎಫ್ ನಿರ್ದೇಶಕರ ಮಂಡಳಿ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ತಿಳಿಸಲಾಗಿದೆ. 3 ರೂ. ದರ ಹೆಚ್ಚಳ ಮಾಡುವುದು ಬೇಡ , ಆದರೆ ರೈತರು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕೆಂದು ಸಲಹೆ ನೀಡಲಾಗಿದೆ ಎಂದರು. ಗ್ರಾಹಕ ಹಾಗೂ ರೈತನ ಹಿತಚಿಂತನೆ ಸರ್ಕಾರದ ಕರ್ತವ್ಯ. ಕೆಎಂಎಫ್ ಕೂಡ ಸರ್ಕಾರದ ಒಂದು ಅಂಗವಾಗಿದ್ದು, ರೈತರಿಗೆ ಪ್ರೋತ್ಸಾಹ ಧನ, ಶಾಲಾ ಮಕ್ಕಳಿಗೆ ಹಾಲು ನೀಡಲಾಗುತ್ತಿದೆ.

ಗ್ರಾಹಕರ ಹಾಗೂ ರೈತರ ಹಿತಚಿಂತನೆ ಮಾಡುವ ಕರ್ತವ್ಯ ಸರ್ಕಾರದ್ದಾಗಿದ್ದು, ಕೆಎಂಎಫ್ ಗೆ ಮಾರ್ಗದರ್ಶನ ನೀಡಲಾಗಿದೆ. ಹಾಲಿನ ದರ ಕಾಲಕಾಲಕ್ಕೆ ಬದಲಾವಣೆಯಾಗುತ್ತದೆ. ಈ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳೂ ಸ್ಪರ್ಧೆಯಲ್ಲಿವೆ. ಈ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕೆಂದು ಕೆಎಂಎಫ್ ಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಎಲ್ಲಾ ಕೆಡಿಪಿ ಸಭೆಗಳಲ್ಲಿ ವಸತಿ ಯೋಜನೆ ಪ್ರಮುಖ ವಿಷಯವಾಗಬೇಕು- ಬೊಮ್ಮಾಯಿ

0

ಫೆಬ್ರವರಿ ಅಂತ್ಯದೊಳಗೆ 7 ಲಕ್ಷ ಮನೆಗಳನ್ನು ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಗೃಹ ಕಚೇರಿ ಕೃಷ್ಣದಲ್ಲಿ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ”ನಿರ್ಮಾಣದ ವಿವಿಧ ಹಂತಗಳಲ್ಲಿರುವ ಮನೆಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸಬೇಕು.
ಇದೊಂದು ಆಂದೋಲನದ ರೀತಿಯಲ್ಲಿ ಕೈಗೊಂಡು ಅಗತ್ಯವಿರುವ ಸಿಬ್ಬಂದಿ ಪೂರೈಸುವುದಾಗಿ ತಿಳಿಸಿದರು.
ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಸಭೆ ನಡೆಸಿ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕು” ಎಂದು ಸೂಚಿಸಿದರು.

ಎಲ್ಲಾ ಕೆಡಿಪಿ ಸಭೆಗಳಲ್ಲಿ ವಿವಿಧ ವಸತಿ ಯೋಜನೆಗಳಡಿ ಗೃಹ ನಿರ್ಮಾಣ ಪ್ರಮುಖ ವಿಷಯವಾಗಬೇಕು. ಹಿಂದಿನ ವರ್ಷಗಳ ಮನೆಗಳ ಪೈಕಿ 2 ಲಕ್ಷ ಹೆಚ್ಚಿನ ಮನೆಗಳು ಹಾಗೂ ಪ್ರಸಕ್ತ ಸಾಲಿನ 2 ರಿಂದ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿದರು.

ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ಖಾಸಗಿ ಬ್ಯಾಂಕ್ ಗಳ ಮುಖ್ಯಸ್ಥರ ಸಭೆ ಕರೆದು ಸಾಲ ನೀಡುವ ನಿಯಮಗಳ ಬಗ್ಗೆ ಚರ್ಚಿಸಲು ಸೂಚಿಸಿದರು.
20 ಸಾವಿರ ಮನೆ ನಿರ್ಮಾಣ ಮಾಡಲು ಅನುದಾನದ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಒಟ್ಟು 1089 ಕೋಟಿ ಲಭ್ಯವಿದ್ದು, ಫಲಾನುಭವಿಗಳು ನೀಡಬೇಕಿರುವ ಅನುದಾನ ಸರ್ಕಾರವೇ ಸಾಲ ನೀಡಿ, ಫಲಾನುಭವಿಗಳು ಹಣ ಮರುಪಾವತಿ ಮಾಡುವ ಷರತ್ತು ವಿಧಿಸಿ, ಕಂತಿನ ಮೊತ್ತವನ್ನು ಸರ್ಕಾರಕ್ಕೆ ಮರುಪಾವತಿ ಮಾಡುವಂತೆ ಸಿಎಂ ಸೂಚಿಸಿದರು.

ಕರ್ನಾಟಕದಲ್ಲಿ ವಸತಿ ನಿರ್ಮಾಣ, ಗೃಹ ನಿರ್ಮಾಣ ಕಳೆದ 3 ವರ್ಷದಲ್ಲಿ ದೊಡ್ಡ ಮಟ್ಟದಲ್ಲಿ ತೆಗೆದುಕೊಂಡಿದ್ದೇವೆ. 2018 ರಲ್ಲಿ ಸರ್ಕಾರದ ಅವಧಿ ಇನ್ನು 2 ತಿಂಗಳು ಇರುವಾಗಲೇ ಬಜೆಟ್ ನಲ್ಲಿ ಹಿಂದಿನ ಸರ್ಕಾರ ಲಕ್ಷ ಮನೆ ನಿರ್ಮಾಣ ಘೋಷಿಸಿತ್ತು. ಆದರೆ ಹಣ ಮೀಸಲಿಟ್ಟಿರಲಿಲ್ಲ, ಪ್ರಧಾನಮಂತ್ರಿ ವಸತಿ ಯೋಜನೆಯನ್ನೆ ಕಡೆಗಣಿಸಿದ್ರು. ನಮ್ಮ ಸರ್ಕಾರ ಬಂದ ಮೇಲೆ, 18 ಲಕ್ಷ ಮನೆಯನ್ನು ನೋಂದಣಿ ಮಾಡಿದ್ದೇವೆ. ನಾವು ಬಂದ ಮೇಲೆ 5 ಲಕ್ಷ ಮನೆ ನಾವು ಮಾಡಿದ್ದೇವೆ. ಬೆಂಗಳೂರಿನಲ್ಲಿ 1 ಲಕ್ಷ ಮನೆ ನಿರ್ಮಾಣ ಯೋಜನೆ ಇದೆ. ಈಗಾಗಲೇ 20 ಸಾವಿರ ಮನೆ ನಿರ್ಮಾಣ ಆಗಿದೆ. ಕೂಡಲೇ ಅದರ ಉದ್ಘಾಟನೆಯನ್ನು ಮಾಡಲಿದ್ದೇವೆ. ಇದು ಜನಪರ ಸರ್ಕಾರ, ರಾಜ್ಯದ ಹಿತಾಸಕ್ತಿಗೆ ಯಾವ ರೀತಿ ಕೆಲಸ ಮಾಡ್ತಿದ್ದೇವೆ ಎಂದು ತೋರಿಸುತ್ತೆ ಎಂದು ತಿಳಿಸಿದರು.

ಸಭೆಯಲ್ಲಿ ವಸತಿ ಸಚಿವ ವಿ.ಸೋಮಣ್ಣ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ವಸತಿ ಇಲಾಖೆ ಕಾರ್ಯದರ್ಶಿ ಡಾ: ಜೆ.ರವಿಶಂಕರ್, ಗೃಹ ಮಂಡಳಿ ಆಯುಕ್ತೆ ಕವಿತಾ.ಎಸ್.ಮಣ್ಣಿಕೇರಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಮೊದಲಾದವರು ಉಪಸ್ಥಿತರಿದ್ದರು.

ಮತದಾರರ ಪಟ್ಟಿ ಪರಿಷ್ಕರಣೆ ಚಿಲುಮೆ ಸಂಸ್ಥೆಯ ಮುಖ್ಯಸ್ಥ ಅರೆಸ್ಟ್

0

ಚಿಲುಮೆ ಸಂಸ್ಥೆ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ ಮತ್ತು ಗುರುತಿನ ಚೀಟಿ ಪರಿಷ್ಕರಣೆಯಲ್ಲಿ ಭಾಗಿಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಕೇಸ್​​ಗೆ ಸಂಬಂಧಿಸಿದಂತೆ ಆರೋಪಿಗಳ‌ನ್ನ ಪೊಲೀಸ್ ಕಷ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಮಲ್ಲೇಶ್ವರಂನಲ್ಲಿರುವ ಚಿಲುಮೆ ಸಂಸ್ಥೆಯ ಕಚೇರಿ ಮೇಲೆ ದಾಳಿ ನಡೆದಿತ್ತು.

ದಾಳಿ ಬಳಿಕ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್, ಆತನ ಸಹೋದರ ಕೆಂಪೇಗೌಡ ಹಾಗೂ ಯೋಜನಾಧಿಕಾರಿ ಪ್ರಜ್ವಲ್‌ ಅವರನ್ನು ಡಿಸೆಂಬರ್ 2ರ ತನಕ ಪೊಲೀಸ್ ಕಸ್ಟಡಿಯಲ್ಲಿ ಇರಿಸುವಂತೆ ಎಸಿಎಂಎಂ ನ್ಯಾಯಾಲಯದಿಂದ ಆದೇಶ ಬಂದಿದೆ.

ಇನ್ನು, ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲು ಹಲಸೂರು ಗೇಟ್‌ ಪೊಲೀಸರು ಮುಂದಾಗಿದ್ದಾರೆ.

ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿಗೆ ಹೃದಯ ನಾಳದ ಸ್ಟಂಟ್ ಸೇರ್ಪಡೆ

0

ಕೇಂದ್ರ ಆರೋಗ್ಯ ಸಚಿವಾಲಯ ಪರಿಷ್ಕೃತ ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ (ಎನ್‍ಎಲ್‍ಇಎಂ) The National List of Essential Medicines(NLEM) ಯಲ್ಲಿ ಹೃದಯ ನಾಳದ ಸ್ಟೆಂಟ್‍ಗಳನ್ನು ಹೊಸದಾಗಿ ಸೇರಿಸಿದೆ.

ಈ ಕ್ರಮದಿಂದ ಈ ಜೀವರಕ್ಷಕ ವೈದ್ಯಕೀಯ ಸಾಧನದ ಬೆಲೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ತಿಳಿದುಬಂದಿದೆ.

ಅಗತ್ಯತೆ ಆಧಾರದಲ್ಲಿ ಸ್ಟೆಂಟ್‍ಗಳನ್ನು ಪಟ್ಟಿಯಲ್ಲಿ ಸೇರಿಸುವ ಸಂಬಂಧ ಅಧ್ಯಯನ ನಡೆಸಲು ರಚಿಸಿದ್ದ ತಜ್ಞರ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ (ಎನ್‍ಪಿಪಿಎ) ಇದೀಗ ಹೃದಯನಾಳದ ಸ್ಟೆಂಟ್‍ಗೆ ಬೆಲೆ ನಿಗದಿಪಡಿಸಬೇಕಾಗಿದೆ.

ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯ ಪರಾಮರ್ಶೆ ಮತ್ತು ಪರಿಷ್ಕರಣೆಗಾಗಿ ರಾಷ್ಟ್ರೀಯ ವೈದ್ಯಕೀಯ ಸ್ಥಾಯಿ ಸಮಿತಿಯನ್ನು 2018ರಲ್ಲಿ ರಚಿಸಿತ್ತು. ಸಮಿತಿ ತನ್ನ ವರದಿಯನ್ನು ಸೆ. 9ರಂದು ಸಲ್ಲಿಸಿದ್ದು, ಇದನ್ನು ಆರೋಗ್ಯ ಸಚಿವಾಲಯ ಒಪ್ಪಿಕೊಂಡಿದೆ ಎಂದು ಆರೋಗ್ಯ ಸಚಿವಾಲಯ ಇತೀಚೆಗೆ ಬಿಡುಗಡೆ ಮಾಡಿದ ಅಧಿಸೂಚನೆ ವಿವರಿಸಿದೆ.

ಅಂತೆಯೇ ಬೇರ್ ಮೆಟಲ್ ಸ್ಟೆಂಟ್ (ಬಿಎಂಎಸ್) ಹಾಗೂ ಡ್ರಗ್ ಎಲ್ಯೂಟಿಂಗ್ ಸ್ಟೆಂಟ್ (ಡಿಇಎಸ್) ಸಾಧನಗಳನ್ನು ಪಟ್ಟಿಗೆ ಸೇರಿಸಲು ಎನ್‍ಸಿಎನ್‍ಎಂ ಶಿಫಾರಸ್ಸು ಮಾಡಿದೆ. ಇದನ್ನು ಆರೋಗ್ಯ ಸಚಿವಾಲಯ ಒಪ್ಪಿಕೊಂಡಿದೆ ಎಂದು ಎಂದು ಅಧಿಸೂಚನೆ ಹೇಳಿದೆ.

ಸತತ ಜಾಗೃತಿಯಿಂದ ಪ್ರಜಾಪ್ರಭುತ್ವ ಸದೃಢ- ಆಯನೂರು ಮಂಜುನಾಥ್

0

ಸತತವಾದ ಜಾಗೃತಿಯಿಂದ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ವ್ಯವಸ್ಥೆಯಲ್ಲಿನ ಲೋಪದೋಷಗಳು, ನ್ಯೂನತೆಗಳನ್ನು ತಿದ್ದುಪಡಿ ಮಾಡುತ್ತಾ ಈ ವ್ಯವಸ್ಥೆಯನ್ನು ಪವಿತ್ರವಾಗಿ ಉಳಿಸಿಕೊಂಡು ಹೋಗಬಹುದೆಂದು ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಂಸದೀಯ ವ್ಯವಹಾರಗಳ ಇಲಾಖೆ ಬೆಂಗಳೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಯುವ ಸಂಸತ್-2022 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಇಂದಿಗೂ ಪ್ರಸ್ತುತವಾಗಿದೆ. ಸದನ ಸರ್ವೋಚ್ಚವಾಗಿದ್ದು ವ್ಯವಸ್ಥೆಯನ್ನು ಸುಧಾರಿಸುವ ಬಹಳ ದೊಡ್ಡ ಯಂತ್ರ ಇದಾಗಿದೆ.

12 ನೇ ಶತಮಾನದಲ್ಲಿ ಅನುಭವ ಮಂಟಪವೆಂಬ ಸಂಸತ್‍ನಲ್ಲಿ ನಮ್ಮ ಜಿಲ್ಲೆಯವರಾದ ಅಲ್ಲಮಪ್ರಭು ಮೊದಲ ಸಭಾಧ್ಯಕ್ಷರಾಗಿದ್ದರೆಂಬುದು ನಮ್ಮೆಲ್ಲರ ಹೆಮ್ಮೆ. ಹಾಗೂ ದೇಶದ ಮೊಟ್ಟ ಮೊದಲ ಪ್ರಜಾತಂತ್ರ ವ್ಯವಸ್ಥೆ ಸ್ಥಾಪನೆಯಾಗಿದ್ದು ಕರ್ನಾಟಕ ರಾಜ್ಯದಲ್ಲಿ. ಸ್ವಾತಂತ್ರ್ಯ ಪೂರ್ವದಲ್ಲೇ ಮೈಸೂರು ಒಡೆಯರ್ ಕಾಲದಲ್ಲಿ ದೇಶದಲ್ಲೇ ಪ್ರಥಮವಾಗಿ ಪ್ರಜಾ ಪ್ರತಿನಿಧಿ ಕಲ್ಪನೆ ಮೂಡಿದ್ದು ನಮ್ಮ ರಾಜ್ಯದಲ್ಲಿ ಎಂದರು.

ಲೋಕಸಭೆ, ರಾಜ್ಯ ಸಭೆ, ವಿಧಾನಸಭೆ ಮತ್ತು ವಿಧಾನ ಪರಿಷತ್ ನಾಲ್ಕೂ ಸದನಗಳಲ್ಲಿ ಸದಸ್ಯನಾಗಿ ಸೇವೆ ಸಲ್ಲಿಸುವ ಸದವಕಾಶ ನನ್ನದಾಗಿದ್ದು ಮೂರು ಜನ ಪ್ರಧಾನ ಮಂತ್ರಿಗಳು ಮತ್ತು ಹಲವಾರು ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ ಅನುಭವ ಅನುಪಮವಾಗಿದೆ. ಎಲ್ಲ ಸ್ಥಾನಗಳೂ ವಿಭಿನ್ನವಾದ ಅನುಭವವನ್ನು ನೀಡಿದೆ ಎಂದು ಸ್ಮರಿಸಿದರು.

ವಿದ್ಯಾರ್ಥಿಗಳಿಗೆ, ಕೇಂದ್ರ ಮತ್ತು ರಾಜ್ಯದಲ್ಲಿ ನಡೆಯುವ ಸಂಸತ್ತಿನ ಕಲಾಪಗಳು, ಆಡಳಿತ ಪಕ್ಷ, ವಿರೋಧ ಪಕ್ಷ, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲ, ಸಭಾಧ್ಯಕ್ಷ, ಮುಖ್ಯಮಂತ್ರಿ ಹೀಗೆ ಸರ್ಕಾರದ ಯಂತ್ರದ ಕುರಿತು ಹಾಗೂ ಶಿಷ್ಟಾಚಾರ ವ್ಯವಸ್ಥೆ, ಸಂಸತ್ತಿನ ಕಲಾಪದ ಕುರಿತು ಸವಿಸ್ತಾರವಾಗಿ ವಿವರಣೆ ನೀಡಿದರು.

ಯುವ ಸಂಸತ್ ಸ್ಪರ್ಧೆಯಲ್ಲಿ 35 ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಭಾಧ್ಯಕ್ಷರಾಗಿ ಪಿಳ್ಳಂಗಿರಿ ಸರ್ಕಾರಿ ಪ್ರೌಢಶಾಲೆಯ ಧೃವ, ಮುಖ್ಯಮಂತ್ರಿಯಾಗಿ ಸಾಗರ ತಾಲ್ಲೂಕು ತ್ಯಾಗರ್ತಿಯ ಸರ್ಕಾರಿ ಪ್ರೌಢಶಾಲೆಯ ವಸಂತ ಕೆ, ಗೃಹ ಸಚಿವರಾಗಿ ಹೊಸನಗರ ತಾಲ್ಲೂಕಿನ ಬೇಳೂರಿನ ಸರ್ಕಾರಿ ಪ್ರೌಢಶಾಲೆಯ ಹರ್ಷಿತ ಡಿ, ಶಿಕ್ಷಣ ಸಚಿವರಾಗಿ ಶಿಕಾರಿಪುರ ಸರ್ಕಾರಿ ಪ್ರೌಢಶಾಲೆಯ ಭುವನೇಶ್ವರಿ, ಆರೋಗ್ಯ ಸಚಿವರಾಗಿ ಭದ್ರಾವತಿ ನ್ಯೂಟೌನ್ ಸರ್ಕಾರಿ ಪ್ರೌಢಶಾಲೆಯ ಅರ್ಷಿಯಾ ಫಿರ್ದೋಶಿ ಎ, ಸಮಾಜ ಕಲ್ಯಾಣ ಸಚಿವರಾಗಿ ಚಿಟ್ಟೂರ್‍ನ ಸರ್ಕಾರಿ ಪ್ರೌಢಶಾಲೆಯ ಕವಿತಾ, ಕಾನೂನು/ಸಂಸದೀಯ ಸಚಿವರಾಗಿ ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯ ದೀಕ್ಷಿತ್ ಎಸ್.ಎನ್ ಕಲಾಪದಲ್ಲಿ ಪಾಲ್ಗೊಂಡರೆ, ವಿರೋಧ ಪಕ್ಷದಲ್ಲಿ ಭದ್ರಾವತಿ ತಾಲ್ಲೂಕಿನ ಹೊಸ ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯ ಅಕ್ಷತ, ಹೊಸನಗರ ತಾಲ್ಲೂಕಿನ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯ ನಿಶ್ಮಿತಾ, ಸೊರಬ ತಾಲ್ಲೂಕಿನ ಉಳಿವಿಯ ಸರ್ಕಾರಿ ಪ್ರೌಢಶಾಲೆಯ ಸಿರಿ ಇತರರು ಪಾಲ್ಗೊಂಡಿದ್ದರು.

ಸಂಸತ್ತಿನ ಆರಂಭದಲ್ಲಿ ಸಂತಾಪ ಸೂಚನೆ ಕಲಾಪದಲ್ಲಿ ಸಚಿವರಾದ ಉಮೇಶ ಕತ್ತಿ ಮತ್ತು ನಟ ಪುನೀತ್ ರಾಜ್‍ಕುಮಾರ್‍ರವರಿಗೆ ಸಂತಾಪ ಸೂಚಿಸಲಾಯಿತು. ಪ್ರಶ್ನೋತ್ತರ ಕಲಾಪದಲ್ಲಿ ವಿರೋಧ ಪಕ್ಷದ ಸದಸ್ಯರು ಪೋಷಣ್ ಅಭಿಯಾನ 8 ಮತ್ತು 9ನೇ ತರಗತಿಗೆ ವಿಸ್ತರಣೆ ಕುರಿತು, ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಶಾಲಾ-ಕಾಲೇಜು, ವಸತಿ ಶಾಲೆಗಳ ವಿವರ ಸ್ಥಿತಿಗತಿ ಬಗ್ಗೆ ವಿವರಣೆ, ಮಳೆ ಹಾನಿ ಪರಿಹಾರ ಕ್ರಮಗಳು, ಸ್ಮಾರ್ಟ್‍ಸಿಟಿ ಯೋಜನೆಯಡಿ ಕಾಮಗಾರಿಗಳು, ಕೋಮು ಗಲಭೆ ನಿಯಂತ್ರಣ ಕ್ರಮಗಳು, ಹೈದರಾಬಾದ್ ಕರ್ನಾಟಕ ಹಸುರೀಕರಣಕ್ಕೆ ಕೈಗೊಂಡ ಕ್ರಮಗಳ ಕುರಿತಾದ ಪ್ರಶ್ನೆಗಳನ್ನು ಕೇಳಿದರು.

ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರು, ಶಾಸಕರು ಪ್ರಶ್ನೆಗಳಿಗೆ ಉತ್ತರ ನೀಡಿದರು. ಪ್ರಶ್ನೋತ್ತರ ಕಲಾಪದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು. ಸಭಾದ್ಯಕ್ಷರು ತಾಳ್ಮೆಯಿಂದ ಕಲಾಪದಲ್ಲಿ ಪಾಲ್ಗೊಳ್ಳುವಂತೆ ಸದಸ್ಯರಿಗೆ ಸೂಚನೆ ನೀಡಿದರು.

ವೇದಿಕೆ ಕಾರ್ಯಕ್ರಮದಲ್ಲಿ ಡಿಡಿಪಿಐ ಪರಮೇಶ್ವರಪ್ಪ, ಡಯಟ್ ಪ್ರಾಂಶುಪಾಲರಾದ ಬಸವರಾಜಪ್ಪ, ಶಿಕ್ಷಣ ಇಲಾಖೆ ಅಧಿಕಾರಿ ಉಮಾ ಮಹೇಶ್, ಯುವ ಸಂಸತ್ ನೋಡಲ್ ಅಧಿಕಾರಿ ಶಿವನಗೌಡ, ಹಸನ್ ಸಾಬ್ ಇತರೆ ಶಿಕ್ಷಕರು ಹಾಜರಿದ್ದರು.

ಕೆಎಂಎಫ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಕರ್ನಾಟಕ ಸರಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ ಬೆಂಗಳೂರು, ಇಲ್ಲಿ ಒಟ್ಟು 487 ವಿವಿಧ ಹುದ್ದೆಗಳು ಖಾಲಿಯಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಎಸ್‌ಎಸ್‌ಎಲ್‌ಸಿ, ಡಿಪ್ಲೋಮಾ, ಐಟಿಐ, ಪದವಿ, ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಆರಂಭಿಕ ಮಾಸಿಕ ಸಂಬಳ 17 ಸಾವಿರದಿಂದ 99, 600 ರೂಪಾಯಿ ಆಗಿದ್ದು, ಅರ್ಜಿ ಸಲ್ಲಿಸುಬ ಅಭ್ಯರ್ಥಿಗೆ ಕನಿಷ್ಠ 18 ಮತ್ತು ಗರಿಷ್ಠ 40 ವರ್ಷ ವಯಸ್ಸಾಗಿರಬೇಕು ಎಂದು ತಿಳಿಸಲಾಗಿದೆ.

ಸಹಾಯಕ ನಿರ್ದೇಶಕ, ಸುರಕ್ಷತಾ ಅಧಿಕಾರಿ, ಅಧೀಕ್ಷಕ, ಲೆಕ್ಕ ಸಹಾಯಕ, ಹಿರಿಯ ಉಪ ನಿರ್ದೇಶಕ, ಆಡಳಿತ ಸಹಾಯಕ ಮತ್ತು ಹಿರಿಯ ತಾಂತ್ರಿಕ ಸೇರಿದಂತೆ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 20 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನ ಡಿಸೆಂಬರ್ 19 ಆಗಿದೆ.

ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ , ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 17,000 ರಿಂದ ರೂ. 99,600ವರೆಗೂ ವೇತನ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ಆರಂಭ 20-11-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19-12-2022
ವೇತನ 17 ಸಾವಿರದಿಂದ 99,700

ದೇಶದಲ್ಲಿ ಶ್ರದ್ಧಾ ಕೊಲೆಯ ರೀತಿಯದ್ದೇಮತ್ತೊಂದು ಪ್ರಕರಣ

0

ದೇಶದಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿದ್ದು ಗೆಳತಿಯನ್ನೇ ಕೊಂದು ನಾಲ್ಕು ದಿನಗಳ ಕಾಲ ತನ್ನ ಮೆಡಿಕಲ್ ಶಾಪ್ ನಲ್ಲಿ ಇಟ್ಟಿದ್ದ ಘಟನೆ ವರದಿಯಾಗಿದೆ. ಮೆಡಿಕಲ್ ಸ್ಟೋರ್ನ ಮಾಲೀಕ ಆಶಿಶ್ ಸಾಹು ಹಣದ ಸಮಸ್ಯೆಯಿಂದ ತನ್ನ ಗೆಳತಿ ಪ್ರಿಯಾಂಕಾಳನ್ನು ಕೊಂದು ಶವವನ್ನು ನಾಲ್ಕು ದಿನಗಳ ಕಾಲ ತನ್ನ ಅಂಗಡಿಯಲ್ಲಿಟ್ಟು ವಿಲೇವಾರಿ ಮಾಡಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಘಟನೆ ಛತ್ತೀಸ್ಗಢದ ಬಿಲಾಸ್ಪುರ ಜಿಲ್ಲೆಯಲ್ಲಿ ನಡೆದಿದೆ.

ಮೃತದೇಹವನ್ನು ಬಟ್ಟೆಯೊಂದರಲ್ಲಿ ಸುತ್ತಿ ಕಾರಿನಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಸಾಹು ಮತ್ತು ಭಿಲಾಯಿ ನಿವಾಸಿ ಪ್ರಿಯಾಂಕಾ ನಡುವೆ ಹಣಕಾಸಿನ ವಿಚಾರವಾಗಿ ಕೆಲ ಸಮಯದಿಂದ ಜಗಳ ನಡೆಯುತ್ತಿತ್ತು. ಪ್ರಿಯಾಂಕಾ ಬಿಲಾಸ್ಪುರದ ಹಾಸ್ಟೆಲ್ ನಲ್ಲಿ ರಾಜ್ಯ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು.

‘ಪ್ರಿಯಾಂಕಾ ಮತ್ತು ಆಶಿಶ್ ಸಾಹು ಮಧ್ಯೆ ಆತ್ಮಿಯತೆ ಬೆಳೆಯಿತು. ನಂತರ ಇಬ್ಬರು ಒಟ್ಟಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರು. ಷೇರು ಮಾರುಕಟ್ಟೆಯಲ್ಲಿನ ನಷ್ಟದ ನಂತರ ತನ್ನಿಂದ ಸಾಲ ಪಡೆದಿದ್ದ 11 ಲಕ್ಷ ರೂಪಾಯಿಯನ್ನು ಹಿಂದಿರುಗಿಸುವಂತೆ ಆಶಿಶ್ ಗೆ ಒತ್ತಡ ಹೇರುತ್ತಿದ್ದಳು ಎಂದು ಬಿಲಾಸ್ಪುರದ ಹಿರಿಯ ಪೊಲೀಸ್ ಅಧೀಕ್ಷಕ ಪಾರುಲ್ ಮಾಥುರ್ ತಿಳಿಸಿದರು.

ಬಿಲಾಸ್ಪುರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕಾ ಕುಟುಂಬವು ನಾಪತ್ತೆ ದೂರು ದಾಖಲಿಸಿತ್ತು.
ನಂತರ ಪೊಲೀಸರು ಸಾಹು ಪ್ರಮುಖ ಆರೋಪಿ ಎಂದು ಶಂಕಿಸಿದ್ದು ಆತನ ಮೇಲೆ ಕಣ್ಣಿಟ್ಟಿತ್ತು. ಕುಟುಂಬದ ಸದಸ್ಯರೊಬ್ಬರು ಪ್ರಿಯಾಂಕಾ ಮತ್ತು ಸಾಹು ಇಬ್ಬರು ಪರಿಚಿತರು. ಅಲ್ಲದೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ಬಹಿರಂಗಪಡಿಸಿದರು.

ಆದ್ದರಿಂದ, ಆರೋಪಿಯನ್ನು ಪ್ರಮುಖ ಶಂಕಿತನಾಗಿ ಗುರುತಿಸಿದ್ದೇವು. ಸಾಹು ಅಂಗಡಿ ಮತ್ತು ನಿವಾಸದ ಸುತ್ತಮುತ್ತಲಿನ ಸಿಸಿಟಿವಿಯ ದೃಶ್ಯಗಳ ಜೊತೆಗೆ ಅವನ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ ಎಂದು ಹೇಳಿದರು.

ನವೆಂಬರ್ 14ರಂದು ಪ್ರಿಯಾಂಕಾಳನ್ನು ಕೊಂದ ಸಾಹು ದೇಹವನ್ನು ಮೆಡಿಕಲ್ ಶಾಪ್ ನಲ್ಲಿ ಇಟ್ಟಿದ್ದು, ಅಲ್ಲದೆ ಶವ ವಿಲೇವಾರಿಗೆ ಸಮಯ ಕಾಯುತ್ತಿದ್ದನು. ಆತ ದೇಹವನ್ನು ಸಾಗಿಸುತ್ತಿದ್ದಾಗ ಆತನನ್ನು ಬಂಧಿಸಲಾಯಿತು ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಪ್ರದೀಪ್ ಆರ್ಯ ಹೇಳಿದ್ದಾರೆ.