Monday, March 30, 2026
Monday, March 30, 2026
Home Blog Page 1362

ಲಾರಿ ಕಾರು ಢಿಕ್ಕಿ: ಮೂವರು ವಿದ್ಯಾರ್ಥಿಗಳ ಮರಣ

0

ಶಿವಮೊಗ್ಗ ತಾಲೂಕು ಕಲ್ಲಾಪುರ ಗ್ರಾಮದಲ್ಲಿ ಭೀಕರ ಅಪಘಾತ ನಡೆದಿದೆ. ನಿನ್ನೆ ಡಿಸೆಂಬರ್ 11ರ ಭಾನುವಾರ ಬೆಳಗ್ಗೆ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ಕಾರಿನಲ್ಲಿದ್ದ ಮೂವರು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಓರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮೃತಪಟ್ಟ ವಿದ್ಯಾರ್ಥಿಗಳು ದಾವಣಗೆರೆಯ ಅವರಗೆರೆ ನಿವಾಸಿಗಳು ಎಂದು ತಿಳಿದುಬಂದಿದೆ. 21 ವರ್ಷದ ವಯೋಮಾನದವರಾದ ವಿವೇಕ್, ಕಾರ್ತಿಕ್, ಮೋಹನ್ ಮೃತಪಟ್ಟ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ದಾವಣಗೆರೆ ನಗರ ಬಡಾವಣೆ ನಿವಾಸಿ ರುದ್ರೇಶ್ ಪೊಟೀಲ್ (20) ಗಂಭೀರ ಗಾಯಗೊಂಡ ಯುವಕನನ್ನು ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿಗಳು ಶಿವಮೊಗ್ಗದಿಂದ ದಾವಣಗೆರೆಗೆ ಕಾರಿನಲ್ಲಿ ತೆರಳುತ್ತಿದ್ದರು. ಎದುರುಗಡೆಯಿಂದ ಮೆಕ್ಕೆಜೋಳ ತುಂಬಿಕೊಂಡ ಲಾರಿ ಏಕಾಏಕಿ ಡಿಕ್ಕಿ ಹೊಡಿದಿದೆ. ಇದರಿಂದ ಕಾರಿನ ಮುಂಭಾಗ ಜಜ್ಜಿ ಹೋಗಿದೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಮಾಹಿತಿ ದೊರೆತಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಆಗಮಿಸಿ, ಘಟನೆಯ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ. ಈ ಸಂಬಂಧ ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಾವಕಾಶ

0

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹಲವು ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 33 ಎಕ್ಸ್​ಟರ್ನಲ್ ಫ್ಯಾಕಲ್ಟಿ, ಇಂಡಸ್ಟ್ರಿ ಅಡ್ವೈಸರ್ಸ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಅರಸುತ್ತಿರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಡಿಸೆಂಬರ್ 27, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹೈದರಾಬಾದ್, ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ನೋಡಿ.

ಸಂಸ್ಥೆ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಹುದ್ದೆ
ಎಕ್ಸ್​ಟರ್ನಲ್ ಫ್ಯಾಕಲ್ಟಿ, ಇಂಡಸ್ಟ್ರಿ ಅಡ್ವೈಸರ್ಸ್

ಒಟ್ಟು ಹುದ್ದೆ
33

ಉದ್ಯೋಗದ ಸ್ಥಳ
ಬೆಂಗಳೂರು, ಹೈದರಾಬಾದ್, ಲಕ್ನೋ, ಗುರುಗ್ರಾಮ

ವೇತನ
ನಿಯಮಾನುಸಾರ
ಹುದ್ದೆಯ ಮಾಹಿತಿ:
ಯುಎಲ್​ಎ ಹೆಡ್(ಡಿಜಿಟಲ್ ಟ್ರಾನ್ಸ್​​ಫರ್ಮೇಶನ್)-1
ಯುಎಲ್​ಎ ಹೆಡ್​ (ಸೇಲ್ಸ್​ & ಮಾರ್ಕೆಟಿಂಗ್)- 1
ಅಕಾಡೆಮಿಸಿಯನ್ಸ್​- 4
ಇಂಡಸ್ಟ್ರಿ ಅಡ್ವೈಸರ್ಸ್​-9
ಎಕ್ಸ್​​ಟರ್ನಲ್ ಫ್ಯಾಕಲ್ಟಿ- 18

ವಯೋಮಿತಿ:
ಯುಎಲ್​ಎ ಹೆಡ್(ಡಿಜಿಟಲ್ ಟ್ರಾನ್ಸ್​​ಫರ್ಮೇಶನ್)- 30 ರಿಂದ 60 ವರ್ಷ
ಯುಎಲ್​ಎ ಹೆಡ್​ (ಸೇಲ್ಸ್​ & ಮಾರ್ಕೆಟಿಂಗ್)- 30 ರಿಂದ 60 ವರ್ಷ
ಅಕಾಡೆಮಿಸಿಯನ್ಸ್​- 28 ರಿಂದ 60 ವರ್ಷ
ಇಂಡಸ್ಟ್ರಿ ಅಡ್ವೈಸರ್ಸ್​-28 ರಿಂದ 60 ವರ್ಷ
ಎಕ್ಸ್​​ಟರ್ನಲ್ ಫ್ಯಾಕಲ್ಟಿ- 28 ರಿಂದ 60 ವರ್ಷ

ವಿದ್ಯಾರ್ಹತೆ:
ಯುಎಲ್​ಎ ಹೆಡ್(ಡಿಜಿಟಲ್ ಟ್ರಾನ್ಸ್​​ಫರ್ಮೇಶನ್)-ಎಂಬಿಎ, ಸ್ನಾತಕೋತ್ತರ ಪದವಿ, ಪಿಎಚ್​.ಡಿ
ಯುಎಲ್​ಎ ಹೆಡ್​ (ಸೇಲ್ಸ್​ & ಮಾರ್ಕೆಟಿಂಗ್)- ಎಂಬಿಎ, ಸ್ನಾತಕೋತ್ತರ ಪದವಿ, ಪಿಎಚ್​.ಡಿ
ಅಕಾಡೆಮಿಸಿಯನ್ಸ್​- ಎಂಬಿಎ, ಸ್ನಾತಕೋತ್ತರ ಪದವಿ, ಪಿಎಚ್​.ಡಿ
ಇಂಡಸ್ಟ್ರಿ ಅಡ್ವೈಸರ್ಸ್​-ಎಂಬಿಎ, ಸ್ನಾತಕೋತ್ತರ ಪದವಿ, ಪಿಎಚ್​.ಡಿ
ಎಕ್ಸ್​​ಟರ್ನಲ್ ಫ್ಯಾಕಲ್ಟಿ- ಎಂ.ಫಿಲ್, ಸ್ನಾತಕೋತ್ತರ ಪದವಿ, ಪಿಎಚ್​.ಡಿ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 07/12/2022
ಅರ್ಜಿ ಸಲ್ಲಿಸಲು ಕೊನೆಯ ದಿನ: 27/12/2022

ಆಯ್ಕೆ ಪ್ರಕ್ರಿಯೆ:
ಶಾರ್ಟ್​​ಲಿಸ್ಟಿಂಗ್
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಶುಲ್ಕ:
ಎಸ್​​ಸಿ/ಎಸ್​​ಟಿ/ PWD ಅಭ್ಯರ್ಥಿಗಳು- 150 ರೂ.
ಸಾಮಾನ್ಯ/ EWS/OBC ಅಭ್ಯರ್ಥಿಗಳು- 750 ರೂ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದಾಗಿದೆ.

ಬೆಂಗಳೂರಿನಲ್ಲಿ ಜಿ20 ದೇಶಗಳ ಆರ್ಥಿಕ ಮತ್ತು ಕೇಂದ್ರ ಬ್ಯಾಂಕ್ ಪ್ರತಿನಿಧಿಗಳ ಸಭೆ

0

ರಾಜಸ್ಥಾನದ ಉದಯಪುರದಲ್ಲಿ ಜಿ20 ದೇಶಗಳ ಮೊದಲ ಹಂತದ ಶೆರ್ಪಾಗಳ ಸಭೆಯನ್ನು ಭಾರತ ಮುಗಿಸಿದೆ.

ಈಗ 2ನೇ ಹಂತದಲ್ಲಿ ಬೆಂಗಳೂರಿನಲ್ಲಿ ಜಿ20 ದೇಶಗಳ ಹಣಕಾಸು ಮತ್ತು ಕೇಂದ್ರ ಬ್ಯಾಂಕ್‌ಗಳ ಪ್ರತಿನಿಧಿಗಳ ಸಭೆ ನಡೆಸಲು ಸಿದ್ಧವಾಗಿದೆ ಎಂದು ತಿಳಿದುಬಂದಿದೆ.

ಜಿ-20 ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್‌ ಬ್ಯಾಂಕ್‌ ಗವರ್ನರ್‌ಗಳ ನೇತೃತ್ವದ ಜಿ-20 ಫೈನಾನ್ಸ್ ಟ್ರ್ಯಾಕ್ ಬಂಡವಾಳ ಮತ್ತು ಆರ್ಥಿಕ ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ. ಇದು ಜಾಗತಿಕ ಆರ್ಥಿಕ ಚರ್ಚೆ ಮತ್ತು ನೀತಿ ಸಮನ್ವಯಕ್ಕೆ ಪರಿಣಾಮ ಕಾರಿ ವೇದಿಕೆ ಒದಗಿಸಲಿದೆ.

2023ರ ಫೆ. 23ರಿಂದ 25ರ ವರೆಗೆ ಬೆಂಗಳೂರಿನಲ್ಲಿ ಹಣ ಕಾಸು ಸಚಿವರು ಮತ್ತು ಸೆಂಟ್ರಲ್‌ ಬ್ಯಾಂಕ್‌ ಗವರ್ನರ್‌ಗಳ ಸಭೆ ನಡೆಯಲಿದೆ.ಭಾರತದ ಅಧ್ಯಕ್ಷತೆಯಲ್ಲಿ ಜಿ-20 ಫೈನಾನ್ಸ್ ಟ್ರ್ಯಾಕ್ ನ ಕಾರ್ಯಸೂಚಿಯ ಮೇಲಿನ ಚರ್ಚೆಗಳ ಆರಂಭವನ್ನು ಸೂಚಿಸುವ ಈ ಸಭೆಯನ್ನು ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಜಂಟಿಯಾಗಿ ಆಯೋಜಿಸಿವೆ.

ಭಾರತವು ಈ ಶೃಂಗಸಭೆಯ ಗುಂಪಿನ ಅಧ್ಯಕ್ಷತೆ ವಹಿಸಿಕೊಂಡ ಅನಂತರ ನಡೆಯಲಿರುವ ಸಭೆಗಳ ಪೈಕಿ ಎರಡು ಸಭೆಗಳು ಉದ್ಯಾನ ನಗರಿಯಲ್ಲಿ ನಿಗದಿಯಾಗಿವೆ. ಇದರಲ್ಲಿ ಎಫ್ಸಿಬಿಡಿ ಸಭೆ ಡಿ. 13ರಿಂದ 15ರ ವರೆಗೆ ನಡೆಯಲಿದೆ ಎಂದು ತಿಳಿದುಬಂದಿದೆ.

ಶಿವಮೊಗ್ಗದಲ್ಲಿ ಲಕ್ಷಮೋದಕ ಯಾಗ

0

ಶಿವಮೊಗ್ಗ ಅರ್ಚಕ ವೃಂದ ಮತ್ತು ಇತರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ 13-12-2022 ರವರೆಗೆ ಲೋಕಕಲ್ಯಾಣಾರ್ಥವಾಗಿ ಲಕ್ಷ ಮೋದಕ ಯಾಗ ನಡೆಯುತ್ತಿದೆ.

ಶಿವಮೊಗ್ಗ, ರವೀಂದ್ರ ನಗರದ ಶ್ರೀ ಪ್ರಸನ್ನ ಗಣಪತಿ ಬಲಮುರಿ ದೇವಸ್ಥಾನದಲ್ಲಿ ಈ ಯಾಗ ಏರ್ಪಡಾಗಿದೆ.

ಡಿಸೆಂಬರ್ 13 ರ ಮಂಗಳವಾರ ಬೆಳಗ್ಗೆ 11.30 ಯಾಗದ ಪೂರ್ಣಾಹುತಿ ನೆರವೇರಲಿದೆ.

ಪರಮಪೂಜ್ಯ ಶ್ರೀ ಶ್ರೀ ಶ್ರೀ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿಗಳು ಪೀಠಾಧಿಪತಿಗಳು ಶುಕಶಂಕರ ಪೀಠ, ಶ್ರೀ ಬಾಲಕೃಷ್ಣಾನಂದ ಮಹಾಸಂಸ್ಥಾನಂ, ತಲಕಾಡು ಹಾಗೂ ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರೀ ಸೀತಾರಾಮ ಕೆದ್ಲಾಯರು ಆಗಮಿಸುತ್ತಿದ್ದಾರೆ .

ಶ್ರೀ ಗಳವರು ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರಕ್ಕೆ ಆಗಮಿಸಲಿದ್ದಾರೆ. ಸಮಸ್ತ ಭಗವದ್ ಭಕ್ತರನ್ನು ಅನುಗ್ರಹಿಸಲಿದ್ದಾರೆ.

ಎಲ್ಲರನ್ನೂ ಒಂದೇ ಭಾವನೆಯಿಂದ ಕಾಣುವುದೇ ಶಾಲೆಗಳಲ್ಲಿರುವ ವಿಶೇಷತೆ- ಶ್ರೀಗಣನಾಥ ಸ್ವಾಮೀಜಿ

0

ಮಕ್ಕಳ ನೈತಿಕ ಶಿಕ್ಷಣದಲ್ಲಿ ಯಾವುದೇ ಜಾತಿ, ಧರ್ಮ ಹಾಗೂ ಮೇಲು-ಕೀಳು ಎಂಬ ಭೇಧಬಾವವಿಲ್ಲದೇ ಎಲ್ಲರನ್ನು ಒಂದೇ ಭಾವನೆಯಿಂದ ಕಾಣುವುದೇ ಶಾಲೆಗಳ ಲ್ಲಿರುವ ವಿಶೇಷತೆ ಎಂದು ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.

ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಬಿಜಿಎಸ್ ಕ್ಯಾಂಪಸ್‌ನಲ್ಲಿ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯ ಚುಂಚೋತ್ಸವ-2022ರ ಶಾಲಾ ಕಾಲೇಜುಗಳ ಸಾಂಸ್ಕೃತಿಕ ವೈಭವ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ನೆರವೇರಿಸಿದ ಅವರು ಆರ್ಶೀವಚನ ನೀಡುತ್ತಿದ್ದರು.

ಬಿಜಿಎಸ್ ಶಾಲೆಯು ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳನ್ನು ಗುರುತಿಸಿ ನೈತಿಕ ಹಾಗೂ ಮೌಲ್ಯಧಾರಿತ ಶಿಕ್ಷಣವನ್ನು ನೀಡುವುದರೊಂದಿಗೆ ಮಕ್ಕಳಲ್ಲಿರುವ ವ್ಯಾಸಂಗದ ಪ್ರತಿಭೆಯನ್ನು ಹೊರ ಹೊಮ್ಮಿಸುವ ಮೂಲಕ ಅಧಿಕ ಅಂಕಗಳನ್ನು ಗಳಿಸಲು ಶ್ರಮವಹಿಸಿ ಮುಂದಿನ ಜೀವನಕ್ಕೆ ದಾರಿ ಮಾಡಿಕೊಡುವ ಕಾಯಕದಲ್ಲಿ ತೊಡಗಿದೆ ಎಂದು ತಿಳಿಸಿದರು.

ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳ ಹಿಂದೆ ವಿದ್ಯಾರ್ಥಿಗಳಿಗೆ ಶಾಲೆ, ಪಾಠ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿತ್ತು. ತದ ನಂತರ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಬಿಜಿಎಸ್ ಶಾಲೆಯ ಮಕ್ಕಳಿಗೆ ವಿದ್ಯಾಭ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾಸಕ್ತಿಯ ಕಾರ್ಯ ಚಟುವಟಿಕೆಯನ್ನು ಮರುಸೃಷ್ಟಿಸುವ ಮೂಲಕ ಅನುಕೂಲ ಕಲ್ಪಿಸಲಾಗಿದೆ ಎಂದರು.

ಕೊರೊನಾ ಸಂದರ್ಭದಲ್ಲಿ ಕಂಡಂತಹ ದುರಂತಗಳು ಏಳತೀರದಾಗಿದ್ದರಿಂದ ಶ್ರೀ ಆದಿಚುಂ ಚನಗಿರಿ ಮಹಾಸಂಸ್ಥಾನ ಮಠದ ಗುರುಗಳು ಕೇವಲ ಶಿಕ್ಷಣವಿದ್ದರೆ ಸಾಲದು ಪ್ರಕೃತಿಯು ಮಾನವನಿಗೆ ಅವಶ್ಯವಿದೆ ಎಂಬುದನ್ನು ಮನಗಂಡು ಸುಮಾರು 5 ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮ ರೂಪಿಸಿದ್ದರು ಎಂದು ಹೇಳಿದರು.

ಬಿಜಿಎಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜೆ.ಜಿ.ಸುರೇಂದ್ರ ಮಾತನಾಡಿ ಕಳೆದ ವರ್ಷ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸ್ವಾಮೀಜಿಯ ನೇತೃತ್ವದಲ್ಲಿ ಗೌರವಿಸುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದು ತಿಳಿಸಿದರು.

ಇದೇ ವೇಳೆ ಶಾಲಾ ಮಕ್ಕಳಿಂದ ಯಕ್ಷಗಾನ, ಭರತನಾಟ್ಯ, ಕುಚುಪುಡಿ, ಡ್ಯಾನ್ಸ್ ಹಾಗೂ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಅವರ ಗೀತೆಗಳಿಗೆ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಪ್ರೌಢಶಾಲೆ ಜಿ.ಆರ್.ಚಂದ್ರಶೇಖರ್, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪೋಷಕರು, ಶಾಲೆಯ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನೇಮಕಾತಿ ಪ್ರಕ್ರಿಯೆ ಲೋಪದೋಷಗಳಿಗೆ ಕಡಿವಾಣ- ಬೊಮ್ಮಾಯಿ

0

ತಂತ್ರಜ್ಞಾನದ ಮೂಲಕ ಇತ್ತೀಚಿನ ದಿನಗಳಲ್ಲಿ ಅಪರಾಧ ಕೂಡ ಹೆಚ್ಚಾಗುತ್ತಿದೆ. ಅದೇ ತಂತ್ರಜ್ಞಾನ ಅಪರಾಧವನ್ನು ಪತ್ತೆಹಚ್ಚಲು ಅನುಕೂಲವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ರಾಜಭವನದ ಗಾಜಿನ ಅರಮನೆಯಲ್ಲಿ ನಡೆದ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇಲಾಖೆಯ ನೇಮಕಾತಿ ವೇಳೆ ನಡೆಯುವ ಅಕ್ರಮಗಳನ್ನು ತಡೆಗಟ್ಟಲು ಮುಂದಾಗಬೇಕೆಂದು ಸಿಎಂ ಸೂಚನೆ ನೀಡಿದರು.

ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ವೇಳೆ ಒಂದಿಲ್ಲೊಂದು ಎಡವಟ್ಟುಗಳಿಂದಾಗಿ ಅಕ್ರಮಗಳು ನಡೆದಿರುವುದು ಇಲಾಖೆಗೆ ಶೋಭೆ ತರುವುದಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ಗೃಹ ಇಲಾಖೆಗೆ ಇನ್ನು ಹೆಚ್ಚಿನ ತಂತ್ರಜ್ಞಾನ ಅಗತ್ಯವಿದೆ ಎಂಬುದು ನನಗೆ ಗೊತ್ತಾಗಿದೆ. ನಿಮಗೆ ಬೇಕಾದ ಪರಿಣಿತರನ್ನು ಸೇರಿಸಿಕೊಳ್ಳಿ. ಅದಕ್ಕೆ ಬೇಕಾದ ಅನುದಾನವನ್ನು ಮುಂದಿನ ಬಜೆಟ್‍ನಲ್ಲಿ ನೀಡುತ್ತೇನೆ ಎಂದು ಭರವಸೆ ನೀಡಿದರು.

ವಿಧಿವಿಜ್ಞಾನ ಪ್ರಯೋಗಾಲಯ ಸದ್ಯಕ್ಕೆ ಬೆಂಗಳೂರು, ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಇದು ಕನಿಷ್ಟ ಪಕ್ಷ ವಲಯದಲ್ಲಾದರೂ ಇರಬೇಕೆಂದು ಅಧಿಕಾರಿಗಳು ನನಗೆ ಸಲಹೆ ನೀಡಿದ್ದಾರೆ. ಎರಡು ವಿಧಿವಿಜ್ಞಾನ ಪ್ರಯೋಗಾಲಯ ತೆರೆಯಲು ಸರ್ಕಾರ ಸಿದ್ದವಿದೆ ಎಂದು ತಿಳಿಸಿದರು.

ಈಗ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಎಂತಹ ಅಪರಾಧವಿರಲಿ, ಅಕ್ರಮವೇ ಇರಲಿ ಕಾಲಮಿತಿ ಯೊಳಗೆ ಪತ್ತೆಹಚ್ಚಬಹುದು. ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನೇಮಕಾತಿಯಲ್ಲಿ ಉಂಟಾಗುವ ಲೋಪದೋಷಗಳಿಗೆ ಕಡಿವಾಣ ಹಾಕಬೇಕು, ಅಧಿಕಾರಿಗಳು ಗಂಭೀರ ಚಿಂತನೆ ನಡೆಸಬೇಕೆಂದು ಸಲಹೆ ಮಾಡಿದರು.

ನೂತನ ಠಾಣೆಗಳನ್ನ ಆರಂಭಿಸುವ ಪ್ರಸ್ತಾಪವಿದೆ- ಆರಗ ಜ್ಞಾನೇಂದ್ರ

0

ರಾಜಭವನದಲ್ಲಿ ಆಯೋಜಿಸಿದ್ದ, ಅತ್ಯುತ್ತಮ ಸೇವೆಗೈದ ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿಯವರ ಪದಕ ಪ್ರದಾನ ಸಮಾರಂಭದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಭಾಗವಹಿಸಿದ್ದರು.

ಪೊಲೀಸ್ ಇಲಾಖೆಯ ಬಲವರ್ಧನೆಗೆ ಅತಿ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ವರ್ಷ ಸುಮಾರು ₹200 ಕೋಟಿ ವೆಚ್ಚದಲ್ಲಿ 117 ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗುತ್ತಿದೆ.

ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಿತ್ಯ ಮನಕ್ಕೆ ಮುದ ನೀಡುವ ಚಟುವಟಿಕೆ ಮಾಡಿ-ಡಾ.ಸರ್ಜಿ

0

ವಯಸ್ಸು ದೇಹಕ್ಕಲ್ಲ, ಮನಸ್ಸಿಗೆ ಮಾತ್ರ, ಹಾಗಾಗಿ ನಿತ್ಯ ಮನಸ್ಸಿಗೆ ಮುದ ನೀಡುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವಂತೆ ನಿವೃತ್ತ ನೌಕರರಿಗೆ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ ಸಲಹೆ ನೀಡಿದರು.

ಸರ್ಜಿ ಫೌಂಡೇಶನ್‌, ಸರ್ಜಿ ಆಸ್ಪತ್ರೆಗಳ ಸಮೂಹ ಹಾಗೂ ಜಿಲ್ಲಾ ಸರಕಾರಿ ನಿವೃತ್ತ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ನಿವೃತ್ತ ನೌಕರರಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಸರಕಾರದ ನಿಯಮಾನುಸಾರ ಸರಕಾರಿ ಸೇವೆಯಲ್ಲಿ 60 ರ ನಂತರ ನಿವೃತ್ತಿಯಷ್ಟೇ. ನಿವೃತ್ತಿ ಅನ್ನುವುದು ದೇಹಕ್ಕೆ ಸಂಬಂಧಿಸಿದ್ದೇ ಹೊರತು ಮನಸ್ಸಿಗಲ್ಲ. ಮನೆಯಲ್ಲಿಯೇ ನಿತ್ಯವೂ ಸಣ್ಣಪುಟ್ಟ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಬೇಸರ ಕಳೆದುಕೊಳ್ಳಬಹುದು, ಗಾರ್ಡನ್‌ನಲ್ಲಿ ಒಂದಷ್ಟು ಕೆಲಸ, ಪುಸ್ತಕ ಓದುವುದು, ಇಲ್ಲವೇ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು, ನಿಮಗೆ ವೃತ್ತಿ ಜೀವನದಲ್ಲಿದ್ದ ಅನುಭವವನ್ನು ಯುವ ಸಮೂಹಕ್ಕೆ , ಸಮಾಜಕ್ಕೆ ಧಾರೆ ಎರೆಯುವಂತಹ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಂಡರೆ ಆರೋಗ್ಯ ಸದೃಢವಾಗಿರುತ್ತದೆ, ನೆಮ್ಮದಿಯೂ ಲಭಿಸುತ್ತದೆ ಎಂದರು.

ವರನಟ ಡಾ.ರಾಜ್‌ ಕುಮಾರ್‌ ಅವರು ತಮ 45 ನೇ ವಯಸ್ಸಿನಲ್ಲಿ ಹಾಡುಗಾರಿಕೆಯನ್ನು ಆರಂಭಿಸಿ, ಬಹುದೊಡ್ಡ ಸಾಧನೆ ಮಾಡುವ ಮೂಲಕ ಇಂದಿಗೂ ಚಿತ್ರ ರಸಿಕರ, ಸಂಗೀತ ಪ್ರಿಯರ ಜನಮಾನಸದಲ್ಲಿ ಉಳಿದಿದ್ದಾರೆ, ಈ ವಯಸ್ಸಿನಲ್ಲಿ ಹಾಡೋದು ಸಾಧ್ಯಾನಾ ಎಂದುಕೊಂಡಿದ್ದರೆ ಅದು ಸಾಧ್ಯವಿರುತ್ತಿರಲ್ಲ, ಹಾಗೆಯೇ ವಿಶ್ವದ ಶ್ರೇಷ್ಠ ವಿಜ್ಞಾನಿ, ಬಲ್ಬ್ ಅನ್ನು ಕಂಡು ಹಿಡಿದ ಥಾಮಸ್‌ ಆಲ್ವಾ ಎಡಿಸನ್‌ ಅವರು ಕೂಡ, 64 ನೇ ವಯಸ್ಸಿನಲ್ಲಿ ತಮ್ಮ ಕಾರ್ಖಾನೆಗಳೆಲ್ಲವೂ ಬೆಂಕಿಗಾಹುತಿಯಾದಾಗ ಧೃತಿಗೆಡದೇ ಮತ್ತೆ ಕಾರ್ಖಾನೆಗಳನ್ನು ನಿರ್ಮಿಸುತ್ತಾರೆ. ನಿವೃತ್ತಿಯ ವಯಸ್ಸಾಗಿದೆ ಎಂದು ಸುಮ್ಮನೆ ಕುಳಿತಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ನಿವೃತ್ತಿಯ ನಂತರ ಮಾನಸಿಕ ಸದೃಢರಾದರೆ ಮಾತ್ರ ನೆಮ್ಮದಿ ಜೀವನ ಕಾಣಲು ಸಾಧ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಯುವ ಮುಖಂಡ , ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ.ಕಾಂತೇಶ್‌ ಮಾತನಾಡಿ, ಡಾ.ಧನಂಜಯ ಸರ್ಜಿ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಅವರಿಗೆ ಹೃದಯಪೂರ್ವಕ ಸ್ವಾಗತ. ಅವರ ಅನುಭವವನ್ನು ಪಕ್ಷ ಬಳಸಿಕೊಳ್ಳಲಿದ್ದು, ಎಲ್ಲರೂ ಸಂಘಟಿತರಾಗಿ, ಒಟ್ಟಿಗೆ ಬೆಳೆಯೋಣ ಎಂದು ಆಶಿಸಿದರು.

ಈ ಸಂದರ್ಭ ಡಾ.ಧನಂಜಯ ಸರ್ಜಿ ಅವರನ್ನು ಗೌರವಿಸಲಾಯಿತು.
ಜಿಲ್ಲಾ ಸರಕಾರಿ ನಿವೃತ್ತ ನೌಕರರ ಸಂಘದ ಡಿ.ಎಂ.ಚಂದ್ರಶೇಖರ್‌ ಮತ್ತಿತರರು ಭಾಗವಹಿಸಿದ್ದರು.

ವಿಶೇಷ ಚೇತನರ ಮಕ್ಕಳ ಪ್ರಗತಿ ಬಗ್ಗೆ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಕ್ರಮ

0

ನಿರಂತರ ಪುನಶ್ವೇತನ ಕಾರ್ಯಕ್ರಮ ಕ್ರಿಯಾಶೀಲತೆ ಯಶಸ್ಸಿನ ಕೀಲಿ ಕೈಯಾಗಿದೆ
ಮನಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರ ಮಾನಸಾಧಾರ ಟ್ರಸ್ಟ್(ರಿ) ಶಿವಮೊಗ್ಗ ಮತ್ತು ವಿಶೇಷ ಚೇತನ ಮಕ್ಕಳ ಕೌಶಲಾಭಿವೃದ್ಧಿ ಪುನಶ್ವೇತನ ಮತ್ತು ಸಬಲೀಕರಣ ಸಂಯುಕ್ತ ಪ್ರಾದೇಶಿಕ ಕೇಂದ್ರ ದಾವಣಗೆರೆ ಇವರ ಸಂಯುಕ್ತ ಸಹಕಾರದೊಂದಿಗೆ ದಿನಾಂಕ 12-12-2022 ರಿಂದ ದಿನಾಂಕ 16-12-2022ರವರೆಗೆ ಸಮಯ : ಬೆಳಗ್ಗೆ 10ಗಂಟೆ ಯಿಂದ ಸಂಜೆ 5ಗಂಟೆಯ ವರೆಗೆ ಮನಸ್ಪೂರ್ತಿ ಕಲಿಕಾ ಕೇಂದ್ರದಲ್ಲಿ ವಿಶೇಷ ಶಿಕ್ಷಣದಲ್ಲಿ ತರಬೇತಿಯನ್ನು ಪಡೆದ 30 ಜನ ಶಿಕ್ಷಕರಿಗಾಗಿ ವಿಶೇ಼ಷ ಚೇತನರ ಮಕ್ಕಳ ಜೀವನ ಕೌಶಲ ಹಾಗೂ ಶೈಕ್ಷಣ ಕ ಪ್ರಗತಿಗಾಗಿ ಪೂರ್ವ ಪ್ರಾಥಮಿಕ ಹಂತದ ನಿರಂತರ ಪುನಶ್ವೇತನ ಕಾರ್ಯಕ್ರಮದ ಕಾರ್ಯಾಗಾರವನ್ನು ಏರ್ಪಡಿಸಿದೆ.

ಈ ಕಾರ್ಯಕ್ರಮದಲ್ಲಿ ಮಾನಸ ಟ್ರಸ್ಟ್ ನಿರ್ದೇಶಕರು ಡಾ| ರಜನಿ ಎ ಪೈ ಹಾಗೂ ಶೈಕ್ಷಣ ಕ ನಿರ್ದೇಕರು ಡಾ| ಪ್ರೀತಿ ವಿ ಶಾನ್‌ಭಾಗ್ ಮತ್ತು ಡಾ|ವಿಜಯ ರಾಜ್ ಸಿ.ಆರ್.ಸಿ ಸಮನ್ವಯಾಧಿಕಾರಿ ದಾವಣಗೆರೆ ಇವರ ಅಧ್ಯಕ್ಷತೆಯಲ್ಲಿ 5 ದಿನದ ಕಾರ್ಯಾಗಾರವನ್ನು ಮನಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ್ದು, ನೊಂದಾಯಿತ ಶಿಕ್ಷಕರು ಕಾರ್ಯಾಗಾರದ ಸದುಪಯೊಗವನ್ನು ಪಡೆದುಕೊಳ್ಳಲಿದ್ದಾರೆ

ಯೋಜನೆ ರೂಪಿಸುವಲ್ಲಿ ಸಮಾಜದ ವಸ್ತು‌ನಿಷ್ಠ ಅಧ್ಯಯನ ಮುಖ್ಯ- ಎಚ್.ಬಿ. ಮಂಜುನಾಥ್

0

ಯೋಜನೆಗಳ ರೂಪಿಸುವಿಕೆಯಲ್ಲಿ ಸಮಾಜ ವ್ಯವಸ್ಥೆಯ ವಸ್ತುನಿಷ್ಠ ಅಧ್ಯಯನ ಅತ್ಯವಶ್ಯ” -ಸಮಾಜಶಾಸ್ತ್ರ ಉಪನ್ಯಾಸಕರ ಶೈಕ್ಷಣಿಕ ಪುನಶ್ಚೇತನ ಕಾರ್ಯಾಗಾರದಲ್ಲಿ ಎಚ್. ಬಿ. ಮಂಜುನಾಥ- ದಾವಣಗೆರೆ.ಡಿ.9. ಜನಪರವಾದ ಯಾವುದೇ ಯೋಜನೆಗಳನ್ನು ರೂಪಿಸುವ ಪೂರ್ವದಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿನ ಸ್ಥಿತಿಗತಿ ಹಾಗೂ ಸಮಸ್ಯೆಗಳ ವಸ್ತುನಿಷ್ಠ ಅರಿವು ಅತ್ಯವಶ್ಯ ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್ ಅಭಿಪ್ರಾಯ ಪಟ್ಟರು.

ಅವರಿಂದು ದಾವಣಗೆರೆ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಸಮಾಜಶಾಸ್ತ್ರ ಉಪನ್ಯಾಸಕರ ವೇದಿಕೆ ವತಿಯಿಂದ ಏರ್ಪಾಡಾಗಿದ್ದ ಶೈಕ್ಷಣಿಕ ಪುನಶ್ಚೇತನ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಮುಖ್ಯಅತಿಥಿಗಳಾಗಿ ಪ್ರಧಾನ ಭಾಷಣ ನೀಡುತ್ತಾ ಸಮಾಜಶಾಸ್ತ್ರವೆಂದರೆ ಸಮಾಜದ ಹಾಗೂ ಮಾನವ ಜೀವಿಯ ಸಾಮಾನ್ಯ ವರ್ತನೆಗಳ, ಗುಣಲಕ್ಷಣಗಳ ವ್ಯವಸ್ಥಿತ ಅಧ್ಯಯನ ವಾಗಿದ್ದು ಇದರಿಂದ ವ್ಯವಸ್ಥೆಯ ಸಾಮಾಜಿಕ, ಆರ್ಥಿಕ, ಕೌಟುಂಬಿಕ, ಕೈಗಾರಿಕಾ, ಶೈಕ್ಷಣಿಕ, ಔದ್ಯೋಗಿಕ, ಆಧ್ಯಾತ್ಮಿಕ ಮುಂತಾಗಿ ಎಲ್ಲ ರಂಗಗಳ ಸಮಸ್ಯೆಗಳನ್ನು ತಿಳಿದು, ಅಪರಾಧಗಳನ್ನು ಕಡಿಮೆಗೊಳಿಸಿ, ಸುಧಾರಣೆ ತರಲು ಯೋಜನೆಗಳನ್ನು ರೂಪಿಸಲು ಸಮಾಜಶಾಸ್ತ್ರ ದಿಂದ ಸಾಧ್ಯವಿದ್ದು ಸಮಾಜಶಾಸ್ತ್ರ ವಿದ್ಯಾರ್ಥಿಗಳು ಕೇವಲ ಪಠ್ಯವಾಗಿ ಸ್ವೀಕರಿಸಿ ಪರೀಕ್ಷೆ ಬರೆದು ಪದವಿಗಳಿಸಿ ಉದ್ಯೋಗಿಗಳಾದರೆ ಸಾಲದು.

0ಸಮಾಜ ಶಾಸ್ತ್ರ ವಿದ್ಯಾರ್ಥಿಗಳು ದೇಶದ ಯೋಜನೆಗಳ ರೂಪಿಸುವಿಕೆಗೆ ಪ್ರೇರಕವಾದ ಪೂರಕವಾದ ಅಂಶಗಳನ್ನು ಕೊಡುವುದರೊಂದಿಗೆ ಭಾರತ ದೇಶವು ಭವಿಷ್ಯದಲ್ಲಿ ಐದು ಟ್ರಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಮಹಾನ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಸಮಾಜ ಶಾಸ್ತ್ರ ವಿದ್ಯಾರ್ಥಿಗಳ ಪಾತ್ರವೂ ಪ್ರಮುಖವಾಗಿದ್ದು ಈ ನಿಟ್ಟಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಪ್ರೇರಣೆ ಬರುವಂತೆ ಉಪನ್ಯಾಸಗಳನ್ನು ಮಾಡಬೇಕು ಎಂದ ಮಂಜುನಾಥ್ ನಮ್ಮ ರಾಮಾಯಣ, ಮಹಾಭಾರತ ಮುಂತಾದ ಮಹಾಕಾವ್ಯಗಳಲ್ಲಿ ಬರುವ ಅನೇಕ ವಿಚಾರಗಳು ಈಗಿನ ಸಮಾಜಶಾಸ್ತ್ರದ ಪಠ್ಯದಲ್ಲಿನ ಅಂಶಗಳಿಗೆ ಯೋಗ್ಯ ನಿದರ್ಶನಗಳನ್ನು ಒದಗಿಸುತ್ತವೆ, ಆದ್ದರಿಂದ ಸಮಾಜಶಾಸ್ತ್ರ ಉಪನ್ಯಾಸಕರು ಇವುಗಳ ವಸ್ತುನಿಷ್ಠ ಅಧ್ಯಯನವನ್ನು ಸಹ ಮಾಡಿ ಆಸಕ್ತಿದಾಯಕವಾಗಿ ವಿದ್ಯಾರ್ಥಿಗಳಿಗೆ ಅವುಗಳನ್ನು ತಿಳಿಸಬೇಕು ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ದಾವಣಗೆರೆ ಉಪನಿರ್ದೇಶಕ ಎಂ ಶಿವರಾಜುರವರು ಸಮಾಜಶಾಸ್ತ್ರ ವಿಷಯಕ್ಕೆ ಸಿಗಬೇಕಾದ ಪ್ರಾಮುಖ್ಯತೆಯನ್ನು ಹೇಳಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ದಾವಣಗೆರೆ ಜಿಲ್ಲಾ ಅಧ್ಯಕ್ಷ ಬಿ ಪಾಲಾಕ್ಷಿಯವರು ಪ್ರತಿಯೊಬ್ಬ ಸಮಾಜಶಾಸ್ತ್ರ ವಿದ್ಯಾರ್ಥಿಯೂ ಓರ್ವ ಸಮಾಜ ಸುಧಾರಕನಂತೆ ಹೊರ ಹೊಮ್ಮಬೇಕು ಎಂದು ಆಶಯ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರುಗಳ ಸಂಘದ ಅಧ್ಯಕ್ಷರಾದ ಸಿ ಬಿ ರವಿ, ಮಾಗನೂರು ಬಸಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಪ್ರಸಾದ್ ಬಂಗೇರ ಮಾತುಗಳ ನಾಡಿದರು ದಾವಣಗೆರೆ ಜಿಲ್ಲಾ ಪದವಿ ಪೂರ್ವ ಕಾಲೇಜು ಸಮಾಜಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷರಾದ ಆರ್ ಸುರೇಶ್ ಅಧ್ಯಕ್ಷೀಯ ನುಡಿಗಳ ನಾಡಿದರು ಮಾಗನೂರು ಬಸಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನ ನಿರ್ದೇಶಕರಾದ ಜಿ ಎನ್ ಎಚ್ ಕುಮಾರ್ ಉಪಸ್ಥಿತರಿದ್ದು ಸಂಪನ್ಮೂಲ ವ್ಯಕ್ತಿಗಳಾದ ಪ್ರಾಧ್ಯಾಪಕ ಕೆಬಿ ರಂಗಪ್ಪ ಸಹಾಯಕ ಪ್ರಾಧ್ಯಾಪಕಿ ಡಾ. ಲತಾ ಎಸ್ಎಂ ಉಪನ್ಯಾಸ ನೀಡಿದರು ನಿವೃತ್ತ ಉಪನ್ಯಾಸಕರಿಗೆ ಹಾಗೂ ಮುಂಬಡ್ತಿ ಪಡೆದ ಉಪನ್ಯಾಸಕರುಗಳಿಗೆ ಸನ್ಮಾನ ನೀಡಲಾಯಿತು .