ಮಕ್ಕಳ ನೈತಿಕ ಶಿಕ್ಷಣದಲ್ಲಿ ಯಾವುದೇ ಜಾತಿ, ಧರ್ಮ ಹಾಗೂ ಮೇಲು-ಕೀಳು ಎಂಬ ಭೇಧಬಾವವಿಲ್ಲದೇ ಎಲ್ಲರನ್ನು ಒಂದೇ ಭಾವನೆಯಿಂದ ಕಾಣುವುದೇ ಶಾಲೆಗಳ ಲ್ಲಿರುವ ವಿಶೇಷತೆ ಎಂದು ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಬಿಜಿಎಸ್ ಕ್ಯಾಂಪಸ್‌ನಲ್ಲಿ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯ ಚುಂಚೋತ್ಸವ-2022ರ ಶಾಲಾ ಕಾಲೇಜುಗಳ ಸಾಂಸ್ಕೃತಿಕ ವೈಭವ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ನೆರವೇರಿಸಿದ ಅವರು ಆರ್ಶೀವಚನ ನೀಡುತ್ತಿದ್ದರು.
ಬಿಜಿಎಸ್ ಶಾಲೆಯು ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳನ್ನು ಗುರುತಿಸಿ ನೈತಿಕ ಹಾಗೂ ಮೌಲ್ಯಧಾರಿತ ಶಿಕ್ಷಣವನ್ನು ನೀಡುವುದರೊಂದಿಗೆ ಮಕ್ಕಳಲ್ಲಿರುವ ವ್ಯಾಸಂಗದ ಪ್ರತಿಭೆಯನ್ನು ಹೊರ ಹೊಮ್ಮಿಸುವ ಮೂಲಕ ಅಧಿಕ ಅಂಕಗಳನ್ನು ಗಳಿಸಲು ಶ್ರಮವಹಿಸಿ ಮುಂದಿನ ಜೀವನಕ್ಕೆ ದಾರಿ ಮಾಡಿಕೊಡುವ ಕಾಯಕದಲ್ಲಿ ತೊಡಗಿದೆ ಎಂದು ತಿಳಿಸಿದರು.
ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳ ಹಿಂದೆ ವಿದ್ಯಾರ್ಥಿಗಳಿಗೆ ಶಾಲೆ, ಪಾಠ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿತ್ತು. ತದ ನಂತರ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಬಿಜಿಎಸ್ ಶಾಲೆಯ ಮಕ್ಕಳಿಗೆ ವಿದ್ಯಾಭ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾಸಕ್ತಿಯ ಕಾರ್ಯ ಚಟುವಟಿಕೆಯನ್ನು ಮರುಸೃಷ್ಟಿಸುವ ಮೂಲಕ ಅನುಕೂಲ ಕಲ್ಪಿಸಲಾಗಿದೆ ಎಂದರು.
ಕೊರೊನಾ ಸಂದರ್ಭದಲ್ಲಿ ಕಂಡಂತಹ ದುರಂತಗಳು ಏಳತೀರದಾಗಿದ್ದರಿಂದ ಶ್ರೀ ಆದಿಚುಂ ಚನಗಿರಿ ಮಹಾಸಂಸ್ಥಾನ ಮಠದ ಗುರುಗಳು ಕೇವಲ ಶಿಕ್ಷಣವಿದ್ದರೆ ಸಾಲದು ಪ್ರಕೃತಿಯು ಮಾನವನಿಗೆ ಅವಶ್ಯವಿದೆ ಎಂಬುದನ್ನು ಮನಗಂಡು ಸುಮಾರು 5 ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮ ರೂಪಿಸಿದ್ದರು ಎಂದು ಹೇಳಿದರು.
ಬಿಜಿಎಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜೆ.ಜಿ.ಸುರೇಂದ್ರ ಮಾತನಾಡಿ ಕಳೆದ ವರ್ಷ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸ್ವಾಮೀಜಿಯ ನೇತೃತ್ವದಲ್ಲಿ ಗೌರವಿಸುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದು ತಿಳಿಸಿದರು.
ಇದೇ ವೇಳೆ ಶಾಲಾ ಮಕ್ಕಳಿಂದ ಯಕ್ಷಗಾನ, ಭರತನಾಟ್ಯ, ಕುಚುಪುಡಿ, ಡ್ಯಾನ್ಸ್ ಹಾಗೂ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಅವರ ಗೀತೆಗಳಿಗೆ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಪ್ರೌಢಶಾಲೆ ಜಿ.ಆರ್.ಚಂದ್ರಶೇಖರ್, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪೋಷಕರು, ಶಾಲೆಯ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.