Monday, March 30, 2026
Monday, March 30, 2026
Home Blog Page 1361

ಗುಣಮಟ್ಟದ ಶಿಕ್ಷಣಕ್ಕೆ ವಿಐಎಸ್ಎಲ್ ನಿಂದ ನಿರಂತರ ಪ್ರೋತ್ಸಾಹ- ಚಂದ್ವಾನಿ

0

ಶಾಲೆಗಳಿಗೆ ಉಪಯುಕ್ತವಾದ ಅಂದಾಜು ಎರಡು ಲಕ್ಷ ರೂ ಮೌಲ್ಯದ ಬೆಂಚು, ಡೆಸ್ಕ್, ಟೇಬಲ್‌ಗಳು, ಕುರ್ಚಿಗಳು ಮತ್ತು ಅಕ್ಷರದಾಸೋಹ ಯೋಜನೆಗೆ ಬಳಸಬಹುದಾದ ಪಾತ್ರೆಗಳಂತಹ ಶೈಕ್ಷಣ ಕ ವಸ್ತುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ನಾಗೇಂದ್ರಪ್ಪರವರಿಗೆ ವಿಐಎಸ್‌ಎಲ್ ನ ಕಾರ್ಯಪಾಲಕ ನಿರ್ದೇಶಕ ಶ್ರೀ ಬಿ.ಎಲ್. ಚಂದ್ವಾನಿ ರವರು ಸೈಲ್-ವಿಐಎಸ್‌ಎಲ್‌ನ ಮಾನವ ಸಂಪನ್ಮೂಲ ಕೇಂದ್ರದಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಪಾಲಕ ನಿರ್ದೇಶಕರು, ವಿದ್ಯಾರ್ಥಿಗಳಿಗೆ ಲಭ್ಯವಿರುವ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡಲು ಸೈಲ್-ವಿಐಎಸ್‌ಎಲ್ ಸಂಸ್ಥೆಯು ನಿರಂತರವಾಗಿ ಶ್ರಮಿಸುತ್ತದೆ ಎಂದು ತಿಳಿಸಿದರು.

ಶ್ರೀ ನಾಗೇಂದ್ರಪ್ಪರವರು ಸೈಲ್-ವಿಐಎಸ್‌ಎಲ್ ಆಡಳಿತಕ್ಕೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ವಿದ್ಯಾರ್ಥಿಗಳ ಮೂಲಸೌಕರ್ಯ ಸೌಲಭ್ಯಗಳ ಸುಧಾರಣೆಗೆ ಸಾಮಗ್ರಿಗಳನ್ನು ಸೂಕ್ತವಾಗಿ ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿಐಎಸ್‌ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಶ್ರೀ ಜೆ. ಜಗದೀಶ, ವಿಐಎಸ್‌ಎಲ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಅಜಯ್.ಡಿ.ಸೋಂಕುವಾರ್, ಹಿರಿಯ ಅಧಿಕಾರಿಗಳಾದ ಶ್ರೀಮತಿ ಶೋಭ ಶಿವಶಂಕರನ್, ಮಹಾ ಪ್ರಬಂಧಕರು (ಹಣಕಾಸು ಮತ್ತು ಲೆಖ್ಖ), ಶ್ರೀ ಎನ್.ಕೆ. ಶಶಿಧರ್, ಮಹಾಪ್ರಬಂಧಕರು (ಎಮ್.ಎಮ್ ಮತ್ತು ಸಿ.ಸಿ) ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಿಬ್ಬಂದಿ ಇಲಾಖೆಯಿಂದ ಆಯೋಜಿಸಲಾಗಿತ್ತು. ಶ್ರೀಮತಿ ಶೋಭ.ಕೆ.ಎಸ್, ಸಹಾಯಕ ವ್ಯವಸ್ಥಾಪಕರು (ಸಿಬ್ಬಂದಿ) ನಿರೂಪಿಸಿದರು. ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾ ಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ) ಸ್ವಾಗತಿಸಿ ಧನ್ಯವಾಗಳನ್ನು ಅರ್ಪಿಸಿದರು.

ಮಹಿಳೆಯರಿಗೋಸ್ಕರ ಆಯುಷ್ಮತಿ ಕ್ಲಿನಿಕ್ಪ್ರಾರಂಭಿಸಲಾಗುವುದು- ಡಾ.ಸುಧಾಕರ್

0

ಮಹಿಳೆಯರಿಗೆ ಗುಣಮಟ್ಟದ ಪ್ರತ್ಯೇಕ ವೈದ್ಯಕೀಯ ಸೇವೆ ಒದಗಿಸಲು ರಾಜ್ಯಾದ್ಯಂತ 250 ‘ಆಯುಷ್ಮತಿ ಕ್ಲಿನಿಕ್’ಗಳನ್ನು ಪ್ರಾರಂಭ ಮಾಡಲಾಗುವುದು. ಈ ಯೋಜನೆಗೆ ಜನವರಿಯಲ್ಲಿ ಚಾಲನೆ ನೀಡಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ ಎಂದು ಆರೋಗ್ಯ ಸಚಿವರಾದ ಡಾ.ಕೆ. ಸುಧಾಕರ್ ಅವರು ತಿಳಿಸಿದರು.

ರಾಜ್ಯದಲ್ಲಿ ಈಗಾಗಲೇ ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಶಿಶುಗಳ ಮರಣ ಪ್ರಮಾಣ ಕಡಿಮೆಯಾಗಿದೆ. ಇದನ್ನು ಮತ್ತಷ್ಟು ತಗ್ಗಿಸಲು ‘ಆಯುಷ್ಮತಿ ಕ್ಲಿನಿಕ್’ಗಳು ನೆರವಾಗಲಿವೆ. ಇಲ್ಲಿ ಗರ್ಭಿಣಿಯರಿಗೆ ನಿಯಮಿತ ಆರೋಗ್ಯ ತಪಾಸಣೆ, ಪೌಷ್ಠಿಕ ಆಹಾರ ಸೇವನೆ ಹಾಗೂ ವೈಯಕ್ತಿಕ ಸ್ವಚ್ಛತೆಯ ಕುರಿತು ಸಲಹೆ, ಅಗತ್ಯ ಔಷಧಗಳ ಉಚಿತ ಪೂರೈಕೆಯಿಂದ ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಂಡುಬರುವ ರಕ್ತ ಹೀನತೆ, ಮಧುಮೇಹ, ರಕ್ತದೊತ್ತಡದಂತಹ ಸಾಮಾನ್ಯ ಸಮಸ್ಯೆಗಳನ್ನು ತಡೆಯಬಹುದಾಗಿದೆ. ಇದರಿಂದ ಹೆರಿಗೆ ಸಂದರ್ಭದಲ್ಲಿ ಸಂಭವಿಸು ತಾಯಿ ಮತ್ತು ಶಿಶುಗಳ ಮರಣ ಪ್ರಮಾಣವನ್ನು ತಡೆಯಬಹುದಾಗಿದೆ ಎಂದರು.

ಚಿಕ್ಕ ಮತ್ತು ಹದಿಹರೆಯದ ಹೆಣ್ಣು ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದ ಮಹಿಳೆಯರಿಗೆ ಆರೋಗ್ಯ ಸೇವೆ ದೊರೆಯಲಿದೆ. ಮನೆ, ಮಕ್ಕಳು ಸೇರಿ ಕುಟುಂಬದ ಸದಸ್ಯರ ಆರೋಗ್ಯ ನಿರ್ವಹಣೆ ಮಾಡುವ ಮಹಿಳೆಯರು ಕೆಲಸದ ನಡುವೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ.
ಅದು ಗೃಹಿಣಿಯಾಗಿರಬಹುದು, ಕೆಲಸಕ್ಕೆ ಹೋಗುವವರಾಗಿರಬಹುದು. ಮಹಿಳೆಯರು ಆರೋಗ್ಯದ ಬಗ್ಗೆ ಸದಾ ನಿರ್ಲಕ್ಷ್ಯ ಹೊಂದಿರುತ್ತಾರೆ. ಪರಿಣಾಮ ಆರೋಗ್ಯ ಸಮಸ್ಯೆ ಗಂಭೀರ ಹಂತಕ್ಕೆ ತಲುಪಿದಾಗ ಚಿಕಿತ್ಸೆಗೆ ಹೋಗುತ್ತಾರೆ. ಇದಕ್ಕೆ ಪರಿಹಾರವಾಗಿ ಹಾಗೂ ಆರಂಭದಲ್ಲೇ ಆರೋಗ್ಯ ಸಮಸ್ಯೆ ಗುರುತಿಸಿ ಸೂಕ್ತ ಚಿಕಿತ್ಸೆ ಒದಗಿಸಲು ‘ಆಯುಷ್ಮತಿ ಕ್ಲಿನಿಕ್’ಗಳನ್ನು ತೆರೆಯಲಾಗುತ್ತಿದೆ ಮಾಹಿತಿ ನೀಡಿದರು.

ಇದು ಕೇವಲ ಮಹಿಳೆಯರಿಗಾಗಿಯೇ ಮೀಸಲಾದ ಕ್ಲಿನಿಕ್​ಗಳು. ಇಲ್ಲಿ ನುರಿತ ಸ್ತ್ರೀರೋಗ ತಜ್ಞರು ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ತಪಾಸಣೆ, ಚಿಕಿತ್ಸೆ ಹಾಗೂ ಆರೋಗ್ಯ ಸಲಹೆಗಳನ್ನು ನೀಡಲಿದ್ದಾರೆ ಎಂದು ತಿಳಿಸಿದರು.

ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಮುಟ್ಟಿನ ತೊಂದರೆ, ಮಧುಮೇಹ, ರಕ್ತದೊತ್ತಡ, ಬೊಜ್ಜು, ಸಂಧಿವಾತ ಇತ್ಯಾದಿ ಸಮಸ್ಯೆಗಳಿಗೆ ಚಿಕಿತ್ಸೆ, ಗರ್ಭಿಣಿಯರಿಗೆ 9 ತಿಂಗಳ ಕಾಲ ಹಾಗೂ ಬಾಣಂತಿಯರ ಆರೋಗ್ಯ ತಪಾಸಣೆ ಮತ್ತು ನವಜಾತ ಶಿಶುಗಳ ಸಮಗ್ರ ಅರೈಕೆಯ ಸಲಹೆ, ಗರ್ಭನಿರೋಧಕ ಸೇವೆಗಳು, ಕ್ಯಾನ್ಸರ್ ಸ್ಕ್ರೀನಿಂಗ್ ಸೇರಿ ಮಹಿಳೆಯರಿಗೆ ಸಂಬಂಧಿಸಿದ ಎಲ್ಲ ಬಗೆಯ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಮೆಡಿಕಲ್ ಸೀಟು ಪಡೆದವರೆಲ್ಲ ಗ್ರಾಮೀಣ ಸೇವೆ ಮಾಡಬೇಕೆಂಬ ಕಾನೂನು ಸಡಿಲಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಗ್ರಾಮೀಣ ಭಾಗದ ಸರ್ಕಾರಿ ಆರೋಗ್ಯ ಸೇವೆಯಲ್ಲಿ ವೈದ್ಯರ ಕೊರತೆ ಗಂಭೀರವಾಗಿ ಬಾಧಿಸಿದ ಕಾರಣ ರಾಜ್ಯದಲ್ಲಿ ಮೆಡಿಕಲ್ ಶಿಕ್ಷಣ ಪೂರೈಸಿದವರು ಗ್ರಾಮೀಣ ಸೇವೆ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿತ್ತು.

ಗಡಿ ವಿವಾದ ಕೇಂದ್ರಗೃಹ ಸಚಿವರೊಂದಿಗೆ ಸಭೆ- ಬೊಮ್ಮಾಯಿ

0

ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಧಿಸಿ ಶಾಂತಿ ಸುವ್ಯವಸ್ಥೆ ಕಾಪಾಡಲು ಗೃಹ ಸಚಿವ ಅಮಿತ್ ಶಾ ಸಭೆ ಕರೆದಿದ್ದಾರೆ. ಈ ಹಿನ್ನೆಲೆ ಕಾನೂನಾತ್ಮಕ, ಆಡಳಿತಾತ್ಮಕ ಹಾಗೂ ರಾಜಕೀಯವಾಗಿ ರಾಜ್ಯದ ನಿಲುವನ್ನು ಅಲ್ಲಿ ಸ್ಪಷ್ಟಪಡಿಸಿ ಅವರಿಗೆ ಮನವರಿಕೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಮಿತ್ರರೊಂದಿಗೆ ಮಾತನಾಡಿದ ಅವರು,
ಮಹದಾಯಿ ವಿಚಾರವಾಗಿ ರಕ್ತದಲ್ಲಿ ಪತ್ರ ಬರೆದಕ್ಕಾಗಿ ಯೋಜನೆ ನಾನು ಆರಂಭಿಸಿದ್ದೇನೆ. ನೀರಾವರಿ ಸಚಿವನಿದ್ದಾಗ 5.5 ಕಿಮೀ ಸಹ ಮಾಡಲಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಗೋವಾದಲ್ಲಿ ಕರ್ನಾಟಕಕ್ಕೆ ಒಂದು ಹನಿ ನೀರು ಬಿಡಬೇಡಿ ಎಂದು ಹೇಳಿಕೆ ನೀಡಿದ್ದರು ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಕರ್ನಾಟಕ ಮಹದಾಯಿ ನೀರು ತರುವ ಕೆನಾಲಗೆ ಗೋಡೆ ಕಟ್ಟಿದ್ದರು ಎಂದು ತಿಳಿಸಿದರು ಈ ವಿಚಾರವಾಗಿ ಕರ್ನಾಟಕ ನಿಲುವು ಸ್ಪಷ್ಟವಾಗಿದೆ. ಗಡಿ ವಿಚಾರ ಬಗ್ಗೆ ನ್ಯಾಯಾಲಯದ ಬಗ್ಗೆ ಸಾಕಷ್ಟು ವಾದಗಳಾಗಿವೆ. ಹಲವಾರು ವರದಿಗಳು ಸಹ ಬಂದಿವೆ. ಈ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ನಾನು ಈ ಬಗ್ಗೆ ಮಾತನಾಡಲ್ಲ ಎಂದರು.

ಗೋಪಾಲಗೌಡರು ರಾಜಕೀಯ ಕ್ಷೇತ್ರದ ಶ್ರೇಷ್ಠ ವ್ಯಕ್ತಿ-ಕವಿ ಪೀರ್ ಬಾಷಾ

0

ಸಹ್ಯಾದ್ರಿ ಕಲಾ ಕಾಲೇಜಿನ ಕನ್ನಡ ವಿಭಾಗ ಹಾಗೂ ಶಾಂತವೇರಿ ಗೋಪಾಲಗೌಡ ಜನ್ಮ ಶತಮಾನೋತ್ಸವ ಆಚರಣಾ ಸಮಿತಿ ಸಂಯುಕ್ತಾಶ್ರಯದಲ್ಲಿ ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ದಿಕ್ಸೂಚಿ ನಾಯಕ ಶಾಂತವೇರಿ ಗೋಪಾಲಗೌಡ ಸಾಧನೆಯ ಸ್ಮರಣೆ ಕಾರ್ಯಕ್ರಮವನ್ನು ನಡೆಸಲಾಯಿತು.

ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಕುರಿತು ಖ್ಯಾತ ಲೇಖಕರು , ಸಮಾಜಸೇವಕರಾದ ಶ್ರೀ. ಬಿ.ಪೀರ್ ಭಾಷಾ ಅವರು ಮಾತನಾಡಿ, ಶಾಂತವೇರಿ ಗೋಪಾಲಗೌಡರ ಬಗ್ಗೆ ಕೇವಲ ಶಿವಮೊಗ್ಗದವರಲ್ಲದೇ ಎಲ್ಲರೂ ತಿಳಿದುಕೊಳ್ಳಬೇಕಾದ ರಾಜಕೀಯ ಕ್ಷೇತ್ರದ ಶ್ರೇಷ್ಠ ವ್ಯಕ್ತಿ ಎಂದರೆ ತಪ್ಪಾಗಲಾರದು ಎಂದರು.

ಶಾಂತವೇರಿ ಗೋಪಾಲಗೌಡರು ಕೇವಲ ರಾಜಕೀಯ ವ್ಯಕ್ತಿಯಾಗಿರದೇ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿಯಾದ ಶಾಂತವೇರಿ ಗೋಪಾಲಗೌಡರು ನಮ್ಮೆಲ್ಲರಿಗೂ ಆದರ್ಶ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಂತವೇರಿ ಗೋಪಾಲಗೌಡ ಜನ್ಮ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ಶ್ರೀರಾಮ ಮನೋಹರ ಶಾಂತವೇರಿಯವರು ಮಾತನಾಡಿ, ತಂದೆಯವರಾದ ಶಾಂತವೇರಿ ಗೋಪಾಲಗೌಡರು ಹಲವಾರು ಆದರ್ಶಗಳನ್ನ ಮೈಗೂಡಿಸಿಕೊಂಡಿದ್ದರು. ಶಾಂತವೇರಿ ಗೋಪಾಲಗೌಡ ಜನ್ಮ ಶತಮಾನೋತ್ಸವವನ್ನು ಆಚರಿಸಬೇಕು ಎನ್ನುವುದು ಬಹು ದಿನಗಳ ಕನಸು. ಅದು ಇಂದಿಗೆ ಈಡೇರಿದೆ. ತಂದೆಯವರ ಎಲ್ಲಾ ಬರಹಗಳನ್ನ ಕಲೆಹಾಕಿ ಅದಕ್ಕೆ ಒಂದು ಆಧುನಿಕ ಸ್ಪರ್ಶವನ್ನು ನೀಡಿ ವೆಬ್ಸೈಟ್ ಅನ್ನು ಬಿಡುಗಡೆ ಮಾಡಲಾಗುವುದು. ಈ ಮೂಲಕ ಪುಸ್ತಕ ಪ್ರೇಮಿಗಳು ಶಾಂತವೇರಿ ಗೋಪಾಲಗೌಡರ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಒಳ್ಳೆಯ ಆದರ್ಶಗಳನ್ನ ಮೈಗೂಡಿಸಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ, ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ.ಕೆ.ಬಿ. ಧನಂಜಯ್, ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ ಡಾ. ಹಾಲಮ್ಮ ಎಂ , ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಮೋಹನ್ ಚಂದ್ರಗುತ್ತಿ, ಹಾಗೂ ಇನ್ನಿತರ ಗಣ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅತೀಕ್ ಉರ್ ರಹಮಾನ್ ಗೆ ರಾಷ್ಟ್ರಪತಿಗಳ ಪೋಲೀಸ್ ಸೇವಾಪದಕ

0

ಶ್ರೀ ಅತೀಕ್ ಉರ್ ರೆಹಮಾನ್, ASI ರವರು 1993ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಗೆ ಸೇವೆಗೆ ಸೇರಿದ್ದು, ಹಾಲೀ ಶಿವಮೊಗ್ಗದ ಬೆರಳು ಮುದ್ರೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಇವರು ಬೆರಳು ಮುದ್ರೆ ವಿಭಾಗದಲ್ಲಿ ಸಲ್ಲಿಸಿರುವ ಪ್ರಶಂಸನೀಯ ಸೇವೆಗಾಗಿ 2020ನೇ ಸಾಲಿನ ಸ್ವಾತಂತ್ರೋತ್ಸವ ನಿಮಿತ್ತ ನೀಡಲಾಗುವ ಮಾನ್ಯ ರಾಷ್ಟ್ರಪತಿಗಳ ಪೊಲೀಸ್ ಶ್ಲಾಂಘನೀಯ ಸೇವಾ ಪದಕಕ್ಕೆ ಪುರಸ್ಕೃತರಾಗಿರುತ್ತಾರೆ.

ದಿನಾಂಕಃ 11-12-2022 ರಂದು ಬೆಂಗಳೂರಿನ ರಾಜ ಭವನದ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ರಾಷ್ಟ್ರಪತಿಯವರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಮಾನ್ಯ ರಾಜ್ಯಪಾಲರು ಕರ್ನಾಟಕ ರಾಜ್ಯ ರವರು ಶ್ರೀ ಅತೀಕ್ ಉರ್ ರೆಹಮಾನ್, ASI ರವರಿಗೆ ಮಾನ್ಯ ರಾಷ್ಟ್ರಪತಿಗಳ ಪೊಲೀಸ್ ಶ್ಲಾಂಘನೀಯ ಸೇವಾ ಪದಕವನ್ನು ಪ್ರಧಾನ ಮಾಡಿರುತ್ತಾರೆ.

ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ರವರು ಶ್ರೀ ಅತೀಕ್ ಉರ್ ರೆಹಮಾನ್, ASI ರವರಿಗೆ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ

ಹೊಸನಗರ ತಾಲೂಕಿನಲ್ಲಿ ಆತಂಕ ಮೂಡಿಸಿರುವ ಜಾನುವಾರು ಚರ್ಮಗಂಟು ರೋಗ

0

ಹೊಸನಗರ ತಾಲ್ಲೂಕು ವ್ಯಾಪ್ತಿಯ ಹುಂಚ ಕೆರೆಹಳ್ಳಿ, ಕಸಬ ಹೋಬಳಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ, ಮಲೆನಾಡಿನಾದ್ಯಂತ, ಮಲೆನಾಡು ಗಿಡ್ಡ ತಳಿಯಲ್ಲಿ ಚರ್ಮಗಂಟು ರೋಗ ಕಾಯಿಲೆ ಉಲ್ಬಣಗೊಳ್ಳುತ್ತಿದೆ. ಇದರಿಂದ ರೈತರಲ್ಲಿ ಆತಂಕ ಉಂಟಾಗಿದೆ.

ಈಗಾಗಲೇ ತಾಲ್ಲೂಕಿನ ವ್ಯಾಪ್ತಿಯಲ್ಲಿ ಪಶು ಆಸ್ಪತ್ರೆಯಲ್ಲಿ ವೈದ್ಯರುಗಳು ಕೊರತೆ ಎದುರಿಸುವಂತಹ ಇಂದಿನ ದಿನಗಳಲ್ಲಿ ಉಲ್ಬಣಗೊಂಡಿರುವ ಮಲೆನಾಡು ಗಿಡ್ಡತಳಿಯಲ್ಲಿ ಕಾಣಿಸಿಕೊಂಡಿರುವ ಮಾರಕ ರೋಗದಿಂದಾಗಿ ಜಾನುವಾರುಗಳು ಪಡುವ ವೇದನೆ ಹೇಳತೀರದಂತಾಗಿದೆ.

ಮಲೆನಾಡಿನಲ್ಲಿ ಹೈನುಗಾರಿಕೆಯೇ ಜೀವಾಳವಾಗಿರುವ ತಾಲ್ಲೂಕಿನಲ್ಲಿ ಬಹುಪಾಲು ರೈತರು ಕೃಷಿಯ ಜೊತೆಗೆ ಜಾನುವಾರುಗಳನ್ನು ಸಾಕಾಣಿಕೆ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಜಾನುವಾರುಗಳಿವೆ.

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ರೈತಾಪಿ ವರ್ಗ ತೀವ್ರ ತೊಂದರೆ ಅನುಭವಿಸಿ ಚೇತರಿಸಿಕೊಳ್ಳುವ ಮುನ್ನವೇ ಅನ್ನದಾತರಿಗೆ ಈಗ, ಇನ್ನೊಂದು ಸಂಕಷ್ಟ ಎದುರಾಗಿದೆ.

ಹಸುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ರೋಗದ ಪ್ರಮಾಣ ಹೆಚ್ಚಾಗುತ್ತಿದೆ. ಈ ರೋಗದ ನಿಯಂತ್ರಣಕ್ಕಾಗಿ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಕೂಡಾ ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರಿಗೆರಸು, ನಾಡಿನ ವಿವಿಧ ಭಾಗಗಳಲ್ಲಿ, ಹಿಂಡ್ಲೆಮನೆ ಹೀಗೆ ಹಲವು ಸುತ್ತಮುತ್ತಲಿನ ಗ್ರಾಮಗಳಲ್ಲಿ ವ್ಯಾಪಿಸಿದೆ. ಇದರಿಂದ ರೈತಾಪಿ ವರ್ಗವು ಚಿಂತೆಗೀಡುವಂತೆ ಮಾಡಿದೆ.

ಈ ರೋಗ ಜಾನುವಾರುಗಳಲ್ಲಿ ಹರಡುವ ಬಗೆ ಹೀಗೆ…

ಸೊಳ್ಳೆ, ನೊಣ, ಉಣ್ಣೆ ಮತ್ತು ರೋಗಪೀಡಿತ ಪ್ರಾಣಿಗಳ ನೇರ ಸಂಪರ್ಕದಿಂದ ಈ ರೋಗ ದನಕರುಗಳಿಗೆ ಹರಡುತ್ತದೆ. ಅಲ್ಲದೇ, ರೋಗದಿಂದ ಬಳಲುತ್ತಿರುವ ಹಸುಗಳು ತಿಂದು ಬಿಟ್ಟ ಮೇವು ಮತ್ತು ಕುಡಿದು ಬಿಟ್ಟ ನೀರಿನ ಸೇವೆನೆಯಿಂದಲೂ ಈ ರೋಗ ಬರುತ್ತದೆ. ಜೊತೆಗೆ ಸೋಂಕಿತ ಹಸುವಿನ ರಕ್ತ, ಕೀವು, ದೈಹಿಕ ಸ್ರಾವದ ನೇರ ಸಂಪರ್ಕದಿಂದಲೂ ಬರುತ್ತದೆ. ಆದರೆ, ಈ ರೋಗ ಮನುಷ್ಯರಿಗೆ ಹರಡುವುದಿಲ್ಲ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ.

ಕ್ಯಾಪ್ರೈನ್‌ ಪಾಕ್ಸ್‌ ವೈರಾಣುವಿನಿಂದ ಬರುವ ಈ ರೋಗವು ಕುರಿ ಮತ್ತು ಮೇಕೆಗಳಲ್ಲಿ ಸಿಡುಬಿನ ಮಾದರಿಯಲ್ಲಿ ಕಾಣಿಸಿಕೊಳ್ಳುತ್ತದೆ. ಹಸುಗಳ ರಕ್ತ, ವೀರ್ಯ, ಜೊಲ್ಲು, ಕಣ್ಣು ಮತ್ತು ಮೂಗಿನ ಸ್ರವಿಕೆಯಲ್ಲಿ ಇರುವ ಈ ವೈರಾಣು 35 ದಿನಗಳ ಕಾಲ ಬದುಕಿರುತ್ತದೆ.

ಹಸುವಿನಲ್ಲಿ ರೋಗ ಲಕ್ಷಣಗಳೆಂದರೆ, ರೋಗ ತಗುಲಿದ ಪ್ರಾಣಿಗಳಲ್ಲಿ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಒಂದು ವಾರದ ನಂತರ ಚರ್ಮದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತವೆ. ನಂತರ ಚರ್ಮದಲ್ಲಿ ತುರಿಕೆ ಆರಂಭವಾಗುತ್ತದೆ. ರೋಗ ಕಾಣಿಸಿಕೊಂಡ ಹಸುಗಳಲ್ಲಿ ಹಾಲಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತದೆ.

ಅತಿಯಾದ ಜ್ವರ, ಮೂಗು ಮತ್ತು ಕಣ್ಣುಗಳಲ್ಲಿ ಸೋರುವಿಕೆ, ಜೊಲ್ಲು ಸುರಿಸುವುದು, ಮೈ ಮೇಲೆ ದೊಡ್ಡ ಗಂಟು ಬರುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಕೆಲ ಹಸುಗಳು ಮೇವು ತಿನ್ನದೆ ಕ್ರಮೇಣ ಬಡಕಲಾಗುತ್ತವೆ. ತಳಿ ಸಂವರ್ಧನೆ ಹೋರಿಗಳಲ್ಲಿ ಬಂಜೆತನ ಕಾಣಿಸಿಕೊಳ್ಳಬಹುದು.

ಗರ್ಭ ಧರಿಸಿದ ಹಸುಗಳಲ್ಲಿ ಗರ್ಭಪಾತವಾಗಿ, ದೀರ್ಘ ಕಾಲದವರೆಗೆ ಗರ್ಭ ಧರಿಸದಂತೆ ಆಗಬಹುದು. ಅಲ್ಲದೇ, ಮಾಸು ಚೀಲದ ಮೂಲಕ ರೋಗ ಪ್ರಸರಣದ ಸಾಧ್ಯತೆಯಿದೆ. ರೋಗಕ್ಕೆ ಶೀಘ್ರವೇ ಚಿಕಿತ್ಸೆ ಕೊಡಿಸದಿದ್ದರೆ ಗಂಟುಗಳು ಕೊಳೆತು, ನೊಣ ಮತ್ತು ಉಣ್ಣೆ ಕಡಿತದಿಂದ ಚರ್ಮದಲ್ಲಿ ಆಳವಾದ ರಂಧ್ರಗಳಾಗುತ್ತವೆ. ರೋಗದ ಸ್ಥಿತಿ ಗಂಭೀರವಾದರೆ ಹಸುಗಳು ಸಾವು ಸಂಭವಿಸಬಹುದು.

ಇದಕ್ಕೆ ಚಿಕಿತ್ಸೆ ಏನೆಂದರೆ, ರೋಗಪೀಡಿತ ಹಸುಗಳನ್ನು ಆರೋಗ್ಯವಂತ ಹಸುಗಳಿಂದ ಪ್ರತ್ಯೇಕಿಸಬೇಕು. ಹಸುಗಳಿಗೆ ಸೊಳ್ಳೆ, ನೊಣ, ಮತ್ತು ಉಣ್ಣೆ ನಿವಾರಕ ಮುಲಾಮು ಹಚ್ಚಬೇಕು. ಹಸುಗಳಿಗೆ ಕಡ್ಡಾಯವಾಗಿ ಮೇಕೆ ಸಿಡುಬು ನಿರೋಧಕ ಲಸಿಕೆ ಹಾಕಿಸಬೇಕು.

ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚುವುದರಿಂದ ಸೋಂಕು ಹರಡುವಿಕೆಗೆ ಕಡಿವಾಣ ಹಾಕಬಹುದು. ಟೆಟ್ರಾ ಸೈಕ್ಲಿನ್‌, ಪೆನ್ಸಿಲಿನ್‌ನಂತಹ ಆ್ಯಂಟಿ ಬಯೋಟಿಕ್‌ ಚುಚ್ಚುಮದ್ದು ನೀಡಬಹುದು. ರೋಗ ಹತೋಟಿಗಾಗಿ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಹಸುಗಳಿಗೆ ಮೇಕೆ ಸಿಡುಬು ಲಸಿಕೆ ಹಾಕಲಾಗುತ್ತಿದೆ.

ಈಗಾಗಲೇ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹರಡಿರುವ ಮಾರಕ ರೋಗದ ಹತೋಟಿಗೆ ಕ್ರಮ ಕೈಗೊಳ್ಳಲಾಗಿದ್ದರೂ, ಕೂಡಾ ದಿಢೀರ್ ಉಲ್ಬಣಗೊಂಡಿರುವುದರಿಂದಾಗಿ ರೈತರು ಸಾರ್ವಜನಿಕರನ್ನು ಚಿಂತಾಕ್ರಾಂತರನ್ನಾಗಿಸಿದೆ.

ಇನ್ನಾದರೂ ಸರ್ಕಾರ ತುರ್ತು ಗಮನಹರಿಸಿ ಈ ಮಾರಕ ರೋಗದ ನಿಯಂತ್ರಣಕ್ಕೆ ಮುಂದಾಗುವರೇ ಕಾದುನೋಡುವಂತಾಗಿದೆ.

ಮುಂಜಾಗ್ರತಾವಾಗಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಲಸಿಕೆ ನೀಡಲಾಗಿದೆ. ಅಲ್ಲದೆ ತಾಲ್ಲೂಕಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯ ಜಾನುವಾರುಗಳಿದೆ. ಈಗಾಗಲೇ ಚರ್ಮಗಂಟು ರೋಗದಿಂದಾಗಿ 45ಕ್ಕೂ ಅಧಿಕ ಸಂಖ್ಯೆಯಲ್ಲಿ ಜಾನುವಾರು ಈ ಮಾರಕ ರೋಗಕ್ಕೆ ಬಲಿಯಾಗಿವೆ ಎಂದು ತಿಳಿದು ಬಂದಿದೆ.

ಶಿವಮೊಗ್ಗ ಹೇಗಿರಬೇಕು? ಸಾರ್ವಜನಿಕ ಅಭಿಪ್ರಾಯ ಸಮೀಕ್ಷೆ ಅಭಿಯಾನ

0

ಸಾರ್ವಜನಿಕರ ಅಭಿಪ್ರಾಯವು ಉತ್ತಮ ದೇಶ ನಿರ್ಮಾಣ ಮಾಡುವಲ್ಲಿ ಸಹಕಾರಿ ಆಗಲಿದೆ. ಸಾರ್ವಜನಿಕರ ಅಭಿಪ್ರಾಯದಿಂದ ಸರ್ಕಾರಗಳು ಆಡಳಿತ ಶೈಲಿ ಉತ್ತಮಪಡಿಸಿಕೊಳ್ಳುವಲ್ಲಿ ಅನುಕೂಲ ಆಗಲಿದೆ. ಕಾನೂನುಗಳನ್ನು ರೂಪಿಸಲು ಸಾರ್ವಜನಿಕರ ಅನಿಸಿಕೆ ಪ್ರಮುಖ ಆಗುತ್ತದೆ ಎಂದು ವಿಶ್ವಚೆಸ್ ಮಾಸ್ಟರ್ ಸ್ಟ್ಯಾನಿ ಜಾರ್ಜ್ ಹೇಳಿದರು.

ಶಿವಮೊಗ್ಗ ನಗರದ ಸ್ಮಾರ್ಟ್ ಸಿಟಿ ಕಚೇರಿ ಸಭಾಂಗಣದಲ್ಲಿ ಶಿವಮೊಗ್ಗ ನಗರ ಹೇಗಿದೆ ಎಂಬ ಕುರಿತ ಸಾರ್ವಜನಿಕ ಅಭಿಪ್ರಾಯ ಸಮೀಕ್ಷೆ ಕಾರ್ಯದ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು. ಶಿವಮೊಗ್ಗ ಜಿಲ್ಲೆ ಸಾರಿಗೆ ಕ್ಷೇತ್ರದಲ್ಲಿ ಮಹತ್ತರ ಪ್ರಗತಿ ಸಾಧಿಸಿದ್ದು, ವಿಮಾಣ ನಿಲ್ದಾಣ ಶೀಘ್ರದಲ್ಲಿ ಬರುತ್ತಿದೆ. ರಸ್ತೆ, ರೈಲು ಮಾರ್ಗದ ಸಾರಿಗೆ ವ್ಯವಸ್ಥೆ ಅತ್ಯುತ್ತಮ ಪ್ರಗತಿ ಸಾಧಿಸಿದೆ.

ಪ್ರವಾಸೋದ್ಯಮ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಶಿವಮೊಗ್ಗ ಉನ್ನತ ಪ್ರಗತಿ ಸಾಧಿಸಿದೆ. ಇದರಿಂದ ಉದ್ಯೋಗ ಸೃಷ್ಠಿ ಆಗುತ್ತಿದೆ. ಶಿವಮೊಗ್ಗ ಮುಂದಿನ ದಿನಗಳಲ್ಲಿ ಮಾದರಿಯಾಗಿ ರೂಪುಗೊಳ್ಳಲಿದೆ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ಸಾರ್ವಜನಿಕ ಸಂಪರ್ಕಾಧಿಕಾರಿ ಮತ್ತು ನಗರ ದತ್ತಾಂಶಗಳ ಅಧಿಕಾರಿ ಬ್ರಿಜಿಟ್ ವರ್ಗೀಸ್ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಆರೊಗ್ಯ, ಶಿಕ್ಷಣ, ನೀರು ಪೂರೈಕೆ, ಸಾರ್ವಜನಿಕ ರಕ್ಷಣೆ, ಪರಿಸರ ಸಂರಕ್ಷಣೆ, ವಸತಿ ಸೌಲಭ್ಯ ಸಾರಿಗೆ ವ್ಯವಸ್ಥೆ, ಇತ್ಯಾದಿ ಮೂಲಸೌಕರ್ಯ ಸೇರಿದಂತೆ ಅಗತ್ಯ ವ್ಯವಸ್ಥೆಗಳ ಬಗ್ಗೆ ಮಾಹಿತಿ ಆನ್‌ಲೈನ್ ಮೂಲಕ ದಾಖಲಿಸುವ ಕಾರ್ಯ ನಡೆಯುತ್ತಿದೆ. ಎಲ್ಲ ವರ್ಗದ ಜನರು ಭಾಗವಹಿಸುವ ರೀತಿಯಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು. ವಿವಿಧ ಇಲಾಖೆಗಳಡಿ ಇರುವ ಸೌಲಭ್ಯಗಳ ಸಾಂಖ್ಯಿಕ ಮಾಹಿತಿಯನ್ನು ಮೌಲ್ಯಮಾಪನಕ್ಕಾಗಿ ಸೂಚಿತ ನಮೂನೆಯಲ್ಲಿ ವರದಿ ಸಿದ್ದಪಡಿಸಿ ಸಲ್ಲಿಸಲಾಗಿದೆ. ಈಗ ಜೀವನ ಗುಣಮಟ್ಟ ಸೌಕರ್ಯ ಕುರಿತು ಸಾರ್ವಜನಿಕ ಭಾಗವಹಿಸುವಿಕೆ ಮೂಲಕ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ನಗರದ ಜನಜೀವನದ ಗುಣಮಟ್ಟ, ಆರ್ಥಿಕ ಸದೃಢತೆ, ಆರ್ಥಿಕ ಸಾಮರ್ಥ್ಯ ಮತ್ತು ಇದರ ಸುಸ್ಥಿರತೆಯನ್ನು ಅಳೆಯುವ ಸಾಧನ ಇದಾಗಿದೆಎಂದು ತಿಳಿಸಿದರು.

ಶಿವಮೊಗ್ಗ ನಗರದ ಸುಲಲಿತ ಜೀವನ ಸೂಚ್ಯಂಕ ಸಿದ್ದಪಡಿಸುವಲ್ಲಿ ಸಾರ್ವಜನಿಕರ ಅಭಿಪ್ರಾಯ ದಾಖಲೀಕರಣವು ಪ್ರಮುಖವಾಗಿದೆ ಎಂದರು.

ಸ್ಮಾರ್ಟ್ ಸಿಟಿ ಜನರಲ್ ಮ್ಯಾನೇಜರ್ ಶರತ್ ಮಾತನಾಡಿ, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ನಾಗರೀಕ ಸೌಲಭ್ಯಗಳ ಮಾಹಿತಿ ದಾಖಲೀಕರಣ ಕಾರ್ಯ ನಡೆಯುತ್ತಿದ್ದು, ಭಾರತ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ಸ್ಮಾರ್ಟ್ ಸಿಟಿ ಮಿಷನ್ ಮೂಲಕ ಜೀವನಗುಣಮಟ್ಟ ಸೌಕರ್ಯ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿದೆ ಎಂದರು.

ಸಮನ್ವಯ ಟ್ರಸ್ಟ್ಕಾ ರ್ಯನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ, ಹಿರಿಯ ಕಾರ್ಯನಿರ್ವಾಹಕ ಅಭಿಯಂತರ ವಿಜಯ್‌ಕುಮಾರ್, ಸಮನ್ವಯ ಸ್ವಯಂಸೇವಕರು ಉಪಸ್ಥಿತರಿದ್ದರು.

ಜನವರಿ 7 ರಿಂದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ- ಡಾ.ಸೆಲ್ವಮಣಿ

0

ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು 2023ರ ಜನವರಿ 7, 08 ಮತ್ತು 09ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.

ಈ ಸಂಬಂಧ ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಪ್ರತಿಭಾ ಕಾರಂಜಿಯ ಲಾಂಛನ ಹಾಗೂ ಜಾಲತಾಣ ಲೋಕಾರ್ಪಣೆಗೊಳಿಸಿ ಮಾಧ್ಯಮದ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಕಲೆಗಳನ್ನು ಉತ್ತೇಜಿಸುವ, ಶಾಲಾ ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆ, ಸೃಜನಾತ್ಮಕ ಕೌಶಲ್ಯಗಳನ್ನು ಹೊರತರಲು ಇದೊಂದು ಉತ್ತಮ ವೇದಿಕೆ ಇದಾಗಿರಲಿದೆ ಎಂದರು.

ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ನಡೆಸಲಾದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವದಲ್ಲಿ ಸ್ಥಾನ ಪಡೆದ 1375ಕ್ಕೂ ಹೆಚ್ಚಿನ ಪ್ರತಿಭಾವಂತ ವಿದ್ಯಾರ್ಥಿಗಳು ವಿವಿಧ ರೀತಿಯ 23 ವೈಯಕ್ತಿಕ ವಿಭಾಗಗಳಲ್ಲಿ ಹಾಗೂ 03 ಸಾಮೂಹಿಕ ವಿಭಾಗದಲ್ಲಿ ಭಾಗವಹಿಸಲಿದ್ದಾರೆ. ಪ್ರತಿಭಾ ಕಾರಂಜಿಯ ಉದ್ಘಾಟನಾ ಕಾರ್ಯಕ್ರಮವು ಜನವರಿ 07ರಂದು ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ. ಉಳಿದಂತೆ ಪ್ರತಿಭಾಕಾರಂಜಿಯ ಏಕರೀತಿಯ ಸಾಂಸ್ಕøತಿಕ ಸ್ಪರ್ಧೆಗಳು ಡಿ.ವಿ.ಎಸ್.ಕಾಲೇಜಿನ ವಿವಿಧ ಕೊಠಡಿಗಳಲ್ಲಿ ನಡೆಯಲಿವೆ ಎಂದರು.

ಸ್ಪರ್ಧೆಗಳಿಗೆ ತಜ್ಞ ಹಾಗೂ ಪರಿಣಿತಿ ಹೊಂದಿರುವ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದ 150ಕ್ಕೂ ಹೆಚ್ಚಿನ ತೀರ್ಪುಗಾರರನ್ನು ನಿಯೋಜಿಸಲಾಗಿದೆ ಅದರ ಯಶಸ್ಸಿಗಾಗಿ ಹಾಗೂ ವ್ಯವಸ್ಥಿತ ನಿರ್ವಹಣೆಗಾಗಿ ವಿವಿಧ 19ಸಮಿತಿಗಳನ್ನು ರಚಿಸಲಾಗಿದ್ದು, ಅದರ ಮೇಲ್ವಿಚಾರಣೆಗಾಗಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಥಮ ಸ್ಥಾನ ರೂ.6,000/, ದ್ವಿತೀಯ ಸ್ಥಾನ ರೂ.4,000/- ಹಾಗೂ ತೃತೀಯ ಸ್ಥಾನ ರೂ.2,000/-ಗಳ ನಗದು ಪುರಸ್ಕಾರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಆಗಮಿಸಿದ ಕ್ರೀಡಾಪಟುಗಳಿಗೆ ಉತ್ತಮ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದ್ದು, ನಗರದಲ್ಲಿ ಸುಮಾರು 13 ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.

ಶಿಷ್ಟಾಚಾರದಂತೆ ಈ ಕಾರ್ಯಕ್ರಮದ ಉದ್ಘಾಟನೆಗೆ ರಾಜ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ.ಪ್ರಕಾಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ, ಲೋಕೇಶ್ವರಪ್ಪ, ರಾಮಪ್ಪಗೌಡ ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಉದ್ಯಮದಲ್ಲಿ ಯಶಸ್ಸು ಸಾಧಿಸಬೇಕಿದ್ದರೆ ಆತ್ಮವಿಶ್ವಾಸ ಮುಖ್ಯ- ಕೆ.ಎಸ್.ಈಶ್ವರಪ್ಪ

0

[3:34 pm, 13/12/2022] Anju KLive Sub Editor: ನಮ್ಮ ಶಿವಮೊಗ್ಗದ ಕುರಿತು ಸಾರ್ವಜನಿಕರು ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು
[3:34 pm, 13/12/2022] Anju KLive Sub Editor: ಉದ್ಯೋಗ ಅರಸುವ ಜತೆಯಲ್ಲಿ ಸ್ವಯಂ ಉದ್ಯೋಗ ಹಾಗೂ ಕೈಗಾರಿಕಾ ಆರಂಭಿಸುವ ಬಗ್ಗೆ ಆಲೋಚನೆ ನಡೆಸಬೇಕು. ಉದ್ಯಮದಲ್ಲಿ ಯಶಸ್ಸು ಸಾಧಿಸಬೇಕಾದರೆ ಆತ್ಮವಿಶ್ವಾಸ ಹಾಗೂ ಧೈರ್ಯ ಮುಖ್ಯ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಸಹ್ಯಾದ್ರಿ ಕಲಾ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯ ಮಿಷನ್ ಹಾಗೂ ಸಹ್ಯಾದ್ರಿ ಕಲಾ ಕಾಲೇಜಿನ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

ಪದವಿ ಶಿಕ್ಷಣ ಪೂರೈಸಿದ ನಂತರ ಮುಂದೆ ಯಾವ ಕ್ಷೇತ್ರದಲ್ಲಿ ಮುನ್ನಡೆಯಬೇಕು ಎಂಬ ಸ್ಪಷ್ಟ ಕಲ್ಪನೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಗುರುಗಳ ಮಾರ್ಗದರ್ಶನ ಹಾಗೂ ಆಸಕ್ತಿ ಕ್ಷೇತ್ರದಲ್ಲಿ ಸರಿಯಾದ ತರಬೇತಿ ಪಡೆಯುವುದರಿಂದ ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ ಎಂದು ತಿಳಿಸಿದರು.
ನಾನು ಪದವಿ ಪೂರೈಸಿದ ನಂತರ ಹಿರಿಯರ ಮಾರ್ಗದರ್ಶನದಲ್ಲಿ ಸಣ್ಣ ಕೈಗಾರಿಕಾ ಆರಂಭಿಸಿ ಅನೇಕ ಸವಾಲುಗಳನ್ನು ಎದುರಿಸಿ ಹಂತ ಹಂತವಾಗಿ ಬೆಳೆದೆ. ವಿವಿಧ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟು ಯಶಸ್ಸು ಸಾಧಿಸಿದೆ. ಪ್ರಯತ್ನ ಮಾಡುವಾಗ ಹಿಂದೇಟು ಹಾಕಿದರೆ ಯಾವ ಕ್ಷೇತ್ರವೇ ಆದರೂ ವೈಫಲ್ಯ ಕಾಣುತ್ತೇವೆ. ಆದರೆ ಪ್ರಯತ್ನ ನಿರಂತರವಾಗಿ ಇದ್ದಾಗ ಮಾತ್ರ ನಮ್ಮ ಗುರಿ ಮುಟ್ಟಲು ಸಾಧ್ಯವಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ಕೌಶಲ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿ. ದೇಶದ ಯುವಜನರಿಗೆ ಕೌಶಲ್ಯ ಕಲಿಕೆ ಒದಗಿಸುವ ದೃಷ್ಠಿಯಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಕೌಶಲ್ಯ ಉದ್ಯೋಗ ಒದಗಿಸುವ ಜತೆಯಲ್ಲಿ ಸ್ವಯಂ ಉದ್ಯೋಗ ಆರಂಭಿಸಲು ಎಲ್ಲ ರೀತಿ ಸಾಲ ಸೌಲಭ್ಯ ನೀಡುವ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರವಾಸೋದ್ಯಮ ಕ್ಷೇತ್ರ, ಶಿಕ್ಷಣ, ಆರೋಗ್ಯ, ಹಣಕಾಸು ಕ್ಷೇತ್ರಗಳಲ್ಲಿ ಇರುವ ಅವಕಾಶಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಸ್ವಯಂ ಉದ್ಯೋಗ ಅವಕಾಶ ಸೃಷ್ಠಿಸಿಕೊಳ್ಳುವ ಬಗ್ಗೆ ಆಲೋಚನೆ ನಡೆಸಬೇಕು. ಸಂಸ್ಥೆ ಆರಂಭಿಸುವ ಮೂಲಕ ಅನೇಕರಿಗೆ ಉದ್ಯೋಗ ಒದಗಿಸಬೇಕು ಎಂದು ತಿಳಿಸಿದರು.

ಶಿವಮೊಗ್ಗ ನಗರದ ಸಹ್ಯಾದ್ರಿ ಕಲಾ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಸಾವಿರಕ್ಕೂ ಅಧಿಕ ಉದ್ಯೋಗ ಆಕಾಂಕ್ಷಿಗಳು ಪಾಲ್ಗೊಂಡಿದ್ದರು. 30ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿವೆ. 7ನೇ ತರಗತಿ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ ಶಿಕ್ಷಣ ಪೂರೈಸಿದ ಎಲ್ಲರಿಗೂ ಅವಕಾಶ ಇತ್ತು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್, ಟೀಕ್ಯಾನಾಯ್ಕ್, ಸಮನ್ವಯ ಕಾಶಿ, ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಧನಂಜಯ್ ಮತ್ತಿತರರು ಉಪಸ್ಥಿತರಿದ್ದರು.