Monday, March 30, 2026
Monday, March 30, 2026
Home Blog Page 1358

ಮಕ್ಕಳ ಬೆಳಣಿಗೆಯತ್ತ ಗಂಭೀರವಾಗಿ ಗಮನ ಹರಿಸಿ-ಡಿ.ಎಸ್.ಅರುಣ್

0

ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವ ಕೆಲಸ ಮನೆಯಲ್ಲಾಗಬೇಕು. ಇದರ ಜವಾಬ್ದಾರಿಯನ್ನು ಪಾಲಕರೇ ಹೊರಬೇಕು. ಮಕ್ಕಳತ್ತ ನಿರ್ಲಕ್ಷ್ಯ ವಹಿಸದೆ ಗಮನಹರಿಸಿ ಉತ್ತಮ ವ್ಯಕ್ತಿಗಳನ್ನಾಗಿ ಬೆಳೆಸುವ ಜವಾಬ್ದಾರಿ ಇದೆ ಎಂದು ವಿಧಾನಪರಿಷತ್ ಸದಸ್ಯ ಡಿ. ಎಸ್. ಅರುಣ್ ಹೇಳಿದರು.

ಶಿವಮೊಗ್ಗ ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಟ್ರಸ್ಟ್ ಆಶ್ರಯದಲ್ಲಿ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ, ಬಹುಮಾನ ವಿತರಣೆ ಕಾರ್‍ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಸದಾ ಕ್ರಿಯಾಶೀಲರಾಗಿರಬೇಕು. ಅವರನ್ನು ಹೇಗೆ ಬೆಳೆಸಬೇಕೆನ್ನುವ ಅವಲೋಕನ ನಡೆಯಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಕೊರೊನಾದಿಂದ ಮಕ್ಕಳ ಕೈಗೆ ಬಂದ ಮೊಬೈಲ್ ಅವರನ್ನು ಇನ್ನಷ್ಟು ಅದಕ್ಕೆ ಆಪ್ತರನ್ನಾಗಿ ಮಾಡಿದೆ. ಇದರಿಂದ ಅವರನ್ನು ಹೊರತರಬೇಕು. ಮೊಬೈಲ್ ಚಟದಿಂದ ಹೊರಬಂದರೆ ಮಾತ್ರ ಅವರ ಕ್ರಿಯಾಶೀಲತೆ ಹೆಚ್ಚಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಕ್ಕಳು ಮೊಬೈಲ್ ಬಿಡಲು ಸಿದ್ಧರಿಲ್ಲ. ಆದರೆ ಬಿಡುವಂತೆ ಪಾಲಕರು ಮಾಡುವುದು ಈಗ ಅನಿವಾರ್‍ಯವಾಗಿದೆ ಎಂದು ಹೇಳಿದರು.

ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿ, ಪತ್ರಕರ್ತರು ಸಮಾಜಮುಖಿಯಾಗಿ ಕೆಲಸ ಮಾಡಬಹುದು ಎನ್ನುವುದನ್ನು ಶಿವಮೊಗ್ಗ ಪತ್ರಕರ್ತರು ತೋರಿಸಿಕೊಟ್ಟಿದ್ದಾರೆ. ಕೇವಲ ಸುದ್ದಿ ಬರೆಯುವುದಕ್ಕಷ್ಟೇ ಸೀಮಿತರಾಗದೆ ಸಮಾಜದ ಇತರೆ ಕೆಲಸಕ್ಕೂ ಮುಂದಾಗಬೇಕು. ಸ್ವಾಭಿಮಾನದಿಂದ ಮಕ್ಕಳು ತಮ್ಮ ಬದುಕನ್ನು ಕಟ್ಟಿಕೊಳ್ಳಲು ನೆರವಾಗಬೇಕಿದೆ. ಬಾಹ್ಯ ಆಕರ್ಷಣೆಗಳಿಗೆ ಸಿಲುಕದೆ ಬದ್ಧತೆ ಮತ್ತು ಏಕಮನಸ್ಸಿನಿಂದ ವಿದ್ಯಾಭ್ಯಾಸ ಮುಂದುವರಿಸಬೇಕು. ಯುವಶಕ್ತಿ ಸರಿದಾರಿಯಲ್ಲಿ ಸಾಗುವಂತಾಗಬೇಕೆಂದರು.

ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮಾತನಾಡಿ, ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿರುವುದು ಶ್ಲಾಘನೀಯ. ಇದೊಂದು ವಿಭಿನ್ನ ಕೆಲಸ. ತಮ್ಮ ದಿನನಿತ್ಯದ ಕೆಲಸಗಳಿಂದ ಹೊರಬಂದು ಇಂತಹ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪತ್ರಕರ್ತರು ಮಾದರಿಯಾಗಿದ್ದಾರೆ ಎಂದರು.

ಕ್ರಾಂತಿದೀಪ ಪ್ರಾದೇಶಿಕ ಪತ್ರಿಕೆಯ ಸಂಪಾದಕ ಎನ್. ಮಂಜುನಾಥ ಅವರು ರಾಜ್ಯ ನಿವೃತ್ತ ಪತ್ರಕರ್ತರ ಮಾಸಾಶನ ಸಮಿತಿ ಸದಸ್ಯರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಅವರನ್ನು ಈ ಸಂದರ್ಭದಲ್ಲಿ ಸಂಘದಿಂದ ಗೌರವಿಸಲಾಯಿತು.

ಸನ್ಮಾನಕ್ಕುತ್ತರವಾಗಿ ಮಾತನಾಡಿದ ಅವರು, ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘ ವೈಶಿಷ್ಟ್ಯಪೂರ್ಣ ಕೆಲಸಗಳನ್ನು ಮಾಡುತ್ತಿದೆ. ಸಮಾಜದಲ್ಲಿ ಬೇರುಬಿಡುತ್ತಿರುವ ಮಾದಕ ವ್ಯಸನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಮಕ್ಕಳಲ್ಲಿರುವ ಪ್ರತಿಭೆ ಹೊರತರುವ ಕೆಲಸ ಮಾಡಿದೆ. ವಿಶಿಷ್ಟ ಕಾರ್‍ಯಕ್ರಮದ ಮೂಲಕ ಸಂಘ ಮಹತ್ವದ ಹೆಜ್ಜೆ ಇಡುತ್ತಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಪ್ರಾಸ್ತಾವಿಕ ಮಾತನಾಡಿ, ಪತ್ರಕರ್ತರ ಸಂಘಟನೆ ಹಮ್ಮಿಕೊಂಡಿರುವ ಜನಮುಖಿ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು.

ಸಂಘದ ಕಾರ್‍ಯದರ್ಶಿ ಸಂತೋಷ್ ಕಾಚಿನಕಟ್ಟೆ ಸ್ವಾಗತಿಸಿದರು. ಸಂಘದ ಗೌರವ ಅಧ್ಯಕ್ಷ ಎಸ್.ಚಂದ್ರಕಾಂತ್, ಪ್ರೆಸ್ ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ ಉಪಸ್ಥಿತರಿದ್ದರು. ಲಿಯಾಕತ್ ವಂದಿಸಿದರೆ, ಹೊನ್ನಾಳಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.

ಹವಾಮಾನ ಮುನ್ಸೂಚನೆ ರಾಜ್ಯದಲ್ಲಿ ಮತ್ತೆ ಮಳೆ

0

ಕರಾವಳಿ ಜಿಲ್ಲೆಗಳಲ್ಲಿ ಹಾಗೂ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಡಿಸೆಂಬರ್ 21ರಿಂದ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರದಲ್ಲಿ ಮಳೆಯಾಗಲಿದೆ ಎಂದು ತಿಳಿದುಬಂದಿದೆ.

ಬಾಗಲಕೋಟೆಯಲ್ಲಿ 13.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಈಗಾಗಲೇ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ 5.8ಕಿಲೋ ಮೀಟರ್ ಎತ್ತರದ ಸುಳಿಗಾಳಿ ಕರ್ನಾಟಕ ಕರಾವಳಿಯ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದರಿಂದ ಅದರ ಪ್ರಭಾವ ಉಂಟಾಗುವುದಿಲ್ಲ.

ಈ ಕಾರಣಕ್ಕೆ ಕರ್ನಾಟಕ ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣವಾಗಿ ಮಳೆ ಬೀಳಲಿದೆ.

ಬೆಂಗಳೂರು ಎಚ್​ಎಎಲ್​ನಲ್ಲಿ 28.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 29.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 28.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಇದರಿಂದಾಗಿ ನಿರಂತರವಾಗಿ ಚಳಿ, ಮಳೆ, ವಾತವರಣ ನಿರ್ಮಾಣವಾಗಿತ್ತು. ಇದರಿಂದ ಜನ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಚಳಿ, ಮೋಡ ಕವಿದ ವಾತಾವರಣ ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಕೆಲಸ ಖಾಲಿ ಇದೆ ಸೂಕ್ತ ಅಭ್ಯರ್ಥಿಗಳು ಅರ್ಜಿ ಹಾಕಿ

0

ಡೈರೆಕ್ಟರೇಟ್ ಜನರಲ್ ಆಫ್ ಪರ್ಫಾರ್ಮೆನ್ಸ್ ಮ್ಯಾನೇಜ್ಮೆಂಟ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು 6 ಸೀನಿಯರ್ ಪ್ರೈವೇಟ್ ಸೆಕ್ರೆಟರಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ.

ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ ನೋಡಿ.

ಸಂಸ್ಥೆ ಡೈರೆಕ್ಟರೇಟ್ ಜನರಲ್ ಆಫ್ ಪರ್ಫಾರ್ಮೆನ್ಸ್ ಮ್ಯಾನೇಜ್ಮೆಂಟ್

ಹುದ್ದೆ ಸೀನಿಯರ್ ಪ್ರೈವೇಟ್ ಸೆಕ್ರೆಟರಿ

ಒಟ್ಟು ಹುದ್ದೆ 6

ವೇತನ ಮಾಸಿಕ 47,600-1,51,100 ರೂ.

ಉದ್ಯೋಗದ ಸ್ಥಳ ಚೆನ್ನೈ, ಮುಂಬೈ, ಬೆಂಗಳೂರು, ಅಹಮದಾಬಾದ್​

ಅರ್ಹತೆ:
ಅಭ್ಯರ್ಥಿಗಳು ಕೇಂದ್ರ ಸರ್ಕಾರದಲ್ಲಿ ಸ್ಟೆನೋಗ್ರಾಫರ್ ಹುದ್ದೆಯಲ್ಲಿ ಇರಬೇಕು.

ವೇತನ:
ಡೈರೆಕ್ಟರೇಟ್ ಜನರಲ್ ಆಫ್ ಪರ್ಫಾರ್ಮೆನ್ಸ್ ಮ್ಯಾನೇಜ್ಮೆಂಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಸೀನಿಯರ್ ಪ್ರೈವೇಟ್ ಸೆಕ್ರೆಟರಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 47,600-1,51,100 ರೂ.ವರೆಗೆ ವೇತನ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14/12/2022
ಅರ್ಜಿ ಸಲ್ಲಿಸಲು ಕೊನೆ ದಿನ: 12/02/2023

ಶ್ರೀ ಬಾಲರಾಜ್ ಅವರಿಗೆ ಕೇಂದ್ರ ಗೃಹಸಚಿವಾಲಯದ ಪ್ರಶಸ್ತಿ

0

ಶ್ರೀ ಬಿ ಬಾಲರಾಜು, ಪೋಲಿಸ್ ಉಪಾಧೀಕ್ಷಕರು, ಶಿವಮೊಗ್ಗ ಉಪ ವಿಭಾಗ ರವರು 2018ನೇ ಸಾಲಿನ Union Home minister medal for excellence in investigation ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ಪರವಾಗಿ ಇವರಿಗೆ ಅಭಿನಂದನೆಗಳನ್ನ ಜಿಲ್ಲಾ ರಕ್ಷಣಾಧಿಕಾರಿ
ಶ್ರೀ ಮಿಥುನ್ ಕುಮಾರ್ ತಿಳಿಸಿದ್ದಾರೆ

ಮಳೂರಿನ ಗ್ರಾಮಸ್ಥರಿಗೆ ಅನುಕೂಲವಾದ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ

0

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ’ ಕಾರ್ಯಕ್ರಮದಡಿ ಜಿಲ್ಲಾಧಿಕಾರಿ
ಡಾ.ಆರ್ ಸೆಲ್ವಮಣಿಯವರು ಶಿಕಾರಿಪುರ ತಾಲ್ಲೂಕಿನ ತಾಳಗುಂದ ಹೋಬಳಿಯ ಮಳೂರು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮ ವಾಸ್ತವ್ಯ ಮಾಡಿದರು.

ಜಿಲ್ಲಾಧಿಕಾರಿಗಳು ಮೊದಲಿಗೆ ಮಳೂರು ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ತೆರಳಿ, ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ, ಇತರೆ ವ್ಯವಸ್ಥೆಯನ್ನು ಪರಿಶೀಲಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಮಳೂರಿನ ನ್ಯಾಯಬೆಲೆ ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿದರು. ತದನಂತರ ಮಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ಅಕ್ಷರ ದಾಸೋಹ ಆಹಾರ ಕೊಠಡಿ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿ, ಮಕ್ಕಳೊಂದಿಗೆ ಸಂವಾದ ನಡೆಸಿದರು. ಮಧ್ಯಾಹ್ನ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಚರ್ಚೆ ನಡೆಸಿದರು.

ನಂತರ ಗ್ರಾಮದ ಮಾರಿಕಾಂಬ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಕಂದಾಯ ಮತ್ತು ಇತರೆ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಗ್ರಾಮಸ್ಥರಿಂದ ಕುಂದುಕೊರತೆಗಳನ್ನು ಆಲಿಸಿ ಅರ್ಜಿಗಳನ್ನು ಸ್ವೀಕರಿಸಿದರು‌.

ಎಸ್‍ಸಿ/ಎಸ್‍ಟಿ ಕಾಲೋನಿಗಳಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಸಮಾಲೋಚಿಸಿದರು. ನಂತರ ತೊಗರ್ಸಿಯ ಶ್ರೀ ಚೆನ್ನಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ, ಪ್ರಭಾರ ಐಎಎಸ್ ಅಧಿಕಾರಿ ದಲ್ಜೀತ್ ಸಿಂಗ್, ತಹಶೀಲ್ದಾರ್, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ನಾಯಿ ಕಡಿದಾಗ ನಿರ್ಲಕ್ಷ್ಯ ಬೇಡ ಕೂಡಲೇ ವೈದ್ಯರನ್ನ ಭೇಟಿಮಾಡಿ- ಡಾ.ಗುಡದಪ್ಪ ಕಸಬಿ

0

ನಾಯಿ ಕಡಿದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಕೂಡಲೇ ವೈದ್ಯರ ಮಾರ್ಗದರ್ಶನದಂತೆ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವದಿಂದ ರೇಬಿಸ್ ಕಾಯಿಲೆಯ ಗುಣಲಕ್ಷಣಗಳು ಮತ್ತು ನಿಯಂತ್ರಣ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ನಾಯಿ ಕಚ್ಚಿದ ತಕ್ಷಣ ಗಾಯವನ್ನು ಸೋಪು ಮತ್ತು ನೀರಿನಿಂದ ಸತತ 15 ನಿಮಿಷಗಳ ಕಾಲ ತೊಳೆಯುವುದರಿಂದ ಶೇ 80 ರಷ್ಟು ರೇಬಿಸ್ ಬರದಂತೆ ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.
ರೇಬಿಸ್ ಕಾಯಿಲೆಯು ಲಿಸ್ಸಾ ವೈರಸ್ ಸೋಂಕಿನಿಂದ ಉಂಟಾಗುವ ಮೆದುಳು ಮತ್ತು ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆಯಾಗಿದೆ. ಕಾಯಿಲೆ ಗುಣಲಕ್ಷಣಗಳು ಕಾಣಿಸಿಕೊಂಡ ನಂತರ ಬದುಕುಳಿಯಲು ಸಾಧ್ಯವಿಲ್ಲದ ಭಯಾನಕ ಕಾಯಿಲೆ ಆಗಿದೆ. ಇದು ಸೋಂಕಿತ ನಾಯಿ ಕಚ್ಚುವುದರಿಂದ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ ಎಂದರು.
ಪ್ರತಿ ವರ್ಷ ವಿಶ್ವದ 150 ರಾಷ್ಟ್ರಗಳಲ್ಲಿ 59000 ಜನರು ರೇಬಿಸ್ ನಿಂದ ಮರಣ ಹೊಂದುತ್ತಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ 20000 ಜನರು ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ನಾಯಿ ಕಚ್ಚಿದ ತಕ್ಷಣ ಗಾಯವನ್ನು ಸೋಪು ಮತ್ತು ಹರಿಯುವ ನೀರಿನಿಂದ ಸ್ವಚ್ಚವಾಗಿ ತೊಳೆದು, ನಂಜು ನಿರೋಧಕಗಳಾದ ಡೆಟಾಲ್ ಅಥವಾ ಪಾವಿಡೋನ್ ಅಯೋಡಿನ್ ಹಚ್ಚುವುದರ ಜೊತೆಗೆ ವೈದ್ಯರನ್ನು ಭೇಟಿ ಮಾಡಿ ರೇಬಿಸ್ ರೋಗ ನಿರೋಧಕ ಲಸಿಕೆಯನ್ನು 0, 3, 7, 14 ಮತ್ತು 28ನೇ ದಿನದಂದು ತಪ್ಪದೇ ಪಡೆಯುವ ಮೂಲಕ ಭಯಾನಕ ಕಾಯಿಲೆಯಿಂದ ರಕ್ಷಣೆ ಪಡೆಯಬೇಕೆಂದು ಸಲಹೆ ನೀಡಿದರು. ಉಪನ್ಯಾಸದ ನಂತರ ಸಂವಾದದಲ್ಲಿ ಭಾಗವಹಿಸಿ ಸಾರ್ವಜನಿಕರ ಪ್ರಶ್ನೆಗಳಿಗೆ ಸರಳ ಮತ್ತು ಸೂಕ್ತ ಸಲಹೆಗಳ ಮೂಲಕ ಉತ್ತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷೆ ಸುಮತಿ ಜಿ ಕುಮಾರಸ್ವಾಮಿ ಮಾತನಾಡಿ, ನಗರದಲ್ಲಿ ಇತ್ತೀಚೆಗೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಆತಂಕಕಾರಿ. ಬೀದಿನಾಯಿಗಳ ನಿಯಂತ್ರಣ ಕುರಿತಂತೆ ಸೂಕ್ತ ಕ್ರಮವಹಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗದ ಅಧ್ಯಕ್ಷ ಡಾ. ಅರುಣ್ ಮೈಸೂರ್ ಮತ್ತು ಜಿಲ್ಲಾ ಒಕ್ಕಲಿಗರ ಸಂಘ ಶಿವಮೊಗ್ಗದ ಅಧ್ಯಕ್ಷ ಹೆಚ್.ಬಿ. ಆದಿಮೂರ್ತಿ, ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಕುಮಾರಸ್ವಾಮಿ, ಮಾಜಿ ಸಹಾಯಕ ಗವರ್ನರ್‌ಗಳಾದ ಜಿ. ವಿಜಯಕುಮಾರ್, ಚಂದ್ರಹಾಸ್ ಪಿ ರಾಯ್ಕರ್, ರೋಟರಿ ಶಿವಮೊಗ್ಗ ಪೂರ್ವದ ಕಡಿದಾಳ್ ಗೋಪಾಲ್, ಡಾ.ಪರಮೆಶ್ವರ್ ಡಿ. ಶಿಗ್ಗಾಂವ್, ಎನ್. ಹೆಚ್. ಶ್ರೀಕಾಂತ್, ಅರಣ್ ದಿಕ್ಷಿತ್, ಚಂದ್ರಶೇಖರಯ್ಯ, ಸತೀಶ್ ಚಂದ್ರ, ಸಂತೋಷ್, ಕೃಷ್ಣಮೂರ್ತಿ, ಮುಕುಂದೇಗೌಡ, ಕೇಶವಪ್ಪ, ಇನ್ನರ್ ವೀಲ್ ಕ್ಲಬ್‌ನ ಮಾಜಿ ಅಧ್ಯಕ್ಷೆ ರೂಪ ಗುಡದಪ್ಪ ಉಪಸ್ಥಿತರಿದ್ದರು.

ಚಿಕ್ಕಮಗಳೂರಿನಲ್ಲಿ ಬೀದಿನಾಯಿಗಳ ಕಾಟ

0

ಚಿಕ್ಕಮಗಳೂರು ನಗರದ ಕೋಟೆ ಬಡಾವಣೆ ಸಮೀಪದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವ ಪರಿಣಾಮ ದಿನನಿತ್ಯ ಸಂಚರಿಸುವ ಮಕ್ಕಳು ಹಾಗೂ ವೃದ್ದರಿಗೆ ತೀವ್ರ ಸಮಸ್ಯೆ ಎದುರಾಗುತ್ತಿದ್ದು ಶ್ವಾನಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಬೇಕು ಎಂದು ಬಡಾವಣೆಯ ನಿವಾಸಿಗಳು ನಗರಸಭಾ ಪೌರಾಯುಕ್ತರನ್ನು ಒತ್ತಾಯಿಸಿದರು.

ಈ ಸಂಬಂಧ ನಗರಸಭಾ ಆಯುಕ್ತ ಬಿ.ಸಿ.ಬಸವರಾಜ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿ ಕೋಟೆ, ದೋಣ ಕಣ ಹಾಗೂ ಹೊಸಮನೆ ಬಡಾವಣೆ ನಿವಾಸಿಗಳು ಕೂಡಲೇ ಬೀದಿನಾಯಿಗಳ ಹಾವಳಿ ತಪ್ಪಿಸಿ ಸುಗಮ ಓಡಾಟಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಹಳ್ಳಿಕಾರ ಯುವಕರ ಸಂಘದ ಅಧ್ಯಕ್ಷ ಕೋಟೆ ಸೋಮಣ್ಣ ಬಡಾವಣೆಯ ಸುತ್ತಮುತ್ತಲು ಹಲವಾರು ಬೀದಿನಾಯಿಗಳು ವಾಸಿಸುತ್ತಿರುವ ಪರಿಣಾಮ ಮಹಿಳೆಯರು, ವೃದ್ದರು ಹಾಗೂ ಮಕ್ಕಳು ಹಗಲು ಸಮಯದಲ್ಲಿ ಭಯದಿಂದ ಓಡಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಇದೇ ಮಾರ್ಗವಾಗಿ ಬೈಕ್‌ಗಳಲ್ಲಿ ಸಂಚರಿಸುತ್ತಿರುವವರಿಗೆ ಬೀದಿನಾಯಿಗಳ ಏಕಾಏಕಿ ದಾಳಿ ಯಿಂದಾಗಿ ಕೆಲವು ಮಂದಿಗೆ ಅಪಘಾತಗಳು ಸಂಭವಿಸಿವೆ. ಈ ದಾರಿಯಲ್ಲಿ ಅನೇಕ ಮಂದಿ ರೈತಾಪಿ ವರ್ಗದವರು ವಾಸಿಸುತ್ತಿದ್ದು ಇತೀಚೆಗೆ ಹಸುಗಳಿಗೂ ಸಹ ಬೀದಿನಾಯಿಗಳು ಕಚ್ಚಿರುವ ಪರಿಣಾಮ ಸಾವನ್ನಪ್ಪಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ಸಾರ್ವಜನಿಕರು ಸುಗಮ ಸಂಚಾರ ಹಾಗೂ ರೈತಾರ್ಪಿ ವರ್ಗದವರ ಹಸುಗಳಿಗೆ ಅನು ಕೂಲವಾಗುವ ನಿಟ್ಟಿನಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಿವಾಸಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ವೇಳೆಯಲ್ಲಿ ಬಡಾವಣೆಯ ನಿವಾಸಿಗಳಾದ ಭುಜೇಂದ್ರ ರಾಜ್ ಅರಸ್, ಸಿ.ಹೆಚ್. ಶ್ರೀನಿವಾಸ್, ಚಲುವರಾಜ್, ಕುಮಾರ್‌ರಾಜ್, ಶ್ರೀಧರ್ ದೋಣ ಕಣ, ಸಿ.ಎಸ್.ರಘಣ್ಣ, ನಾಗಣ್ಣ, ಬಸವಣ್ಣ, ಧರ್ಮಣ್ಣ ಮತ್ತಿತರರು ಹಾಜರಿದ್ದರು.

ಚಿಕ್ಕಮಗಳೂರಿನಲ್ಲಿ ಮಾಜಿ ಸಿಎಂ. ಎಚ್.ಡಿ.ಕೆ. ಜನ್ಮದಿನಾಚರಣೆ

0

ಚಿಕ್ಕಮಗಳೂರು, ಮಾಜಿ ಮುಖ್ಯಮಂತ್ರಿ, ರೈತರ ಕಣ್ಮಣಿ ಹೆಚ್.ಡಿ.ಕುಮಾರಸ್ವಾಮಿ ಅವರ 64ನೇ ಜನ್ಮದಿನಾಚರಣೆಯನ್ನು ನಗರದ ಸರ್ಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ಈ ವೇಳೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹೊಲದ ಗದ್ದೆ ಗಿರೀಶ್ ರಾಜ್ಯದಲ್ಲಿ 2 ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಿರ್ವಹಿಸಿದ ಅವರು ರೈತರು, ಬಡವರು, ದೀನ ದಲಿತರು ಹಾಗೂ ಅಲ್ಪಸಂಖ್ಯಾತರಿಗೆ ಉತ್ತಮ ಯೋಜನೆಗಳನ್ನು ರೂಪಿಸಿ ಅನುಕೂಲ ಕಲ್ಪಿಸಿಕೊಟ್ಟಿದ್ದರು ಎಂದರು.

ದೇಶದ ಹಿರಿಯ ರಾಜಕೀಯ ಮುತ್ಸದ್ದಿಗಳು ನಿಬ್ಬೆರಗಾಗುವ ರೀತಿಯಲ್ಲಿ ಆಡಳಿತ ನೀಡಿ ಎಲ್ಲ ವರ್ಗದ ಜನಮನ ಗೆದ್ದ ಜನನಾಯಕರಾಗಿದ್ದಾರೆ. ಇದೀಗ ಪಂಚರತ್ನ ಯೋಜನೆಯ ಮೂಲಕ ನಾಡಿನ ಜನತೆಯ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದಾರೆ ಎಂದು ಹೇಳಿದರು.

ತಾಲ್ಲೂಕು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ಎಂ.ತಿಮ್ಮಶೆಟ್ಟಿ ಮಾತನಾಡಿ ಹೆಚ್.ಡಿ.ಕೆ. ಅವರು ಜನತೆಯ ಸಮಸ್ಯೆಯನ್ನು ಅರಿಯುವ ಸಲುವಾಗಿ ಬಡವರ ಮನೆಯಲ್ಲಿ ಗ್ರಾಮವಾಸ್ತವ್ಯ ಮಾಡುವ ಮೂಲಕ ಕಷ್ಟಗಳಿಗೆ ಸ್ಪಂದಿಸುವ ಕಾಯಕದಲ್ಲಿ ನಿರಂತರಾಗಿ ತೊಡಗಿದ್ದ ಮಹಾನಾಯಕ ಎಂದು ತಿಳಿಸಿದರು.

ಕುಮಾರಸ್ವಾಮಿ ಅವರು ಅಧಿಕಾರದ ಸಮಯದಲ್ಲಿ ಜನಪರ ಯೋಜನೆಗಳಾದ ಮಕ್ಕಳಿಗೆ ಸೈಕಲ್, ಉಚಿತ ಅಕ್ಕಿ, ವೃದ್ದಾಪ್ಯದಲ್ಲಿರುವವರಿಗೆ ವಿವಿಧ ಸವಲತ್ತುಗಳನ್ನು ನೀಡಿ ಜನಮನ್ನಣೆ ಗಳಿಸಿದ ಹಿರಿಯ ರಾಜಕೀಯ ಮುತ್ಸದಿ ಎಂದು ವರ್ಣಿಸಿದರು.

ಇದೇ ವೇಳೆ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಹೆಚ್‌ಎಸ್ ಮಂಜಪ್ಪ, ಮಹಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಮುಖಂಡರುಗಳಾದ ಡಿ.ಕೆ.ಚಂದ್ರೇಗೌಡ, ಸಿ.ಕೆ.ಮೂರ್ತಿ, ಹುಣಸೇಮಕ್ಕಿ ಲಕ್ಷಣ , ಆನಂದೇಗೌಡ, ಚಂದ್ರಶೇಖರ್, ಶ್ರೀಮತಿ ಜಯಂತಿ, ಚಂದ್ರಶೇಖರ್ ಶಶಿಕುಮಾರ್, ರಕ್ತನಿಧಿ ಕೇಂದ್ರದ ಡಾ|| ಮುರುಳಿಧರ್, ಸಿಬ್ಬಂದಿಗಳಾದ ದಿವಾಕರ್, ಮಧುರೈ ಹಾಜರಿದ್ದರು.

ಕಡುಬಡತನದ ವಿದ್ಯಾರ್ಥಿಗಳಿಗೆ ನೆರವಾಗುವುದು ನಮ್ಮ ಧ್ಯೇಯ-ಕಮಲಾ ಗುಮಾಸ್ತೆ

0


ಬಡ, ಕೈಲಾಗದ ಆಶ್ರಯವಿಲ್ಲದ ಮಕ್ಕಳಿಗೆ ಸಹಾಯ ಒದಗಿಸಿ ಸುವ್ಯವಸ್ಥಿತ ಶಿಕ್ಷಣವನ್ನು ನೀಡಿ ಸಮಾಜದಲ್ಲಿ ಜೀವನವನ್ನು ನಡೆಸುವ ದಾರಿ ಕಲ್ಪಿಸಲು ನೆರವಾಗುತ್ತಿರುವ ಸಂಸ್ಥೆ ವಿಜಯನಗರ ಹೊಸಪೇಟೆಯ ರೋಟರಿ ಕ್ಲಬ್ ಸಹಭಾಗಿಯಾಗಿ ಸ್ಥಾಪಿತವಾಗಿರುವ ರೋಟರಿ ಕ್ಲಬ್ ಅಫ್ ಹಂಪಿ ಪರ್ಲ್ಸ್ ಸಂಸ್ಥೆ ಮತ್ತು ರೋಟರಿ ಕ್ಲಬ್ ಆಫ್ ವಿಜಯನಗರ ಹೆರಿಟೇಜ್.

ವಿಜಯನಗರ ಹೊಸಪೇಟೆಯ ರೋಟರಿ ಕ್ಲಬ್ ಆವರಣದಲ್ಲಿ ದಿನಾಂಕ 13-12-2022 ರ ಸಾಯಂಕಾಲ ರೋಟರಿ ಕ್ಲಬ್ ಆಪ್ ಹಂಪೆ ಪರ್ಲ್ಸ್ ಸಮಿತಿಯ ಮುಖ್ಯಸ್ಥರಾದ ಶ್ರೀಮತಿ ಕಮಲಾ ಗುಮಾಸ್ತೆಯವರ ನೇತೃತ್ವದಲ್ಲಿ ಹೊಸಪೇಟೆ ಮತ್ತು ಸುತ್ತಮುತ್ತಲಿನ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಉಪಯೋಗಕ್ಕಾಗಿ 200 ಕಂಪ್ಯೂಟರ್‌ಗಳನ್ನು ಉಚಿತವಾಗಿ ನೀಡುವುದರ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದಾರಿ ದೀಪವಾದರು.

ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಆರ್ಥಿಕವಾಗಿ ಕಡು ಬಡತನದಲ್ಲಿ ಜೀವನ ಸಾಗಿಸುವುರ ಮೂಲಕ ವಿದ್ಯಾಭ್ಯಾಸದಲ್ಲಿ ಸರಿಯಾದ ಮಾರ್ಗದರ್ಶನ ಮತ್ತು ಸಹಾಯವಿಲ್ಲದೆ ಅನೇಕ ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯ ಹಾಗಾಗಿ ಈ ಯೋಜನೆಯನ್ನು ನಮ್ಮ ಕ್ಲಬ್ ಹಾಕಿಕೊಂಡು ಕಾರ್ಯಗತಗೊಳಿಸಲು ಶ್ರಮಿಸುತ್ತಿರುವುದಾಗಿ ಶ್ರೀಮತಿ ಕಮಲಾ ಗುಮಾಸ್ತೆ ತಿಳಿಸಿದರು.

ವಿಜಯನಗರ ಜಿಲ್ಲೆ ಹೊಸಪೇಟೆ ನಗರದಲ್ಲಿ ಕಳೆದ 10 ತಿಂಗಳ ಹಿಂದೆ ಪ್ರಾರಂಭವಾದ ರೋಟರಿ ಕ್ಲಬ್ ಆಪ್ ಹಂಪೆ ಪರ್ಲ್ಸ್ ಕ್ಲಬ್ ಉದ್ಘಾಟನೆಯಾಗಿ ಸಮಾಜದ ಸಾಮಾಜಿಕ, ಆರೋಗ್ಯ,ಪರಿಸರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೈಜೋಡಿಸಿ ಸಮಾಜದ ಶಾಲಾ ಕಾಲೇಜುಗಳ ಸಾಮಾಜಿಕ ಉನ್ನತಿಯನ್ನು ಮುಖ್ಯ ಉದ್ದೇಶವನ್ನಾಗಿಟ್ಟುಕೊಂಡು ಶ್ರೀಮತಿ ಕಮಲಾ ಗುಮಾಸ್ತೆ ಮತ್ತು ರೋಟರಿ ಕ್ಲಬ್ ಮುಖ್ಯಸ್ಥರ ಮುಂದಾಳತ್ವದಲ್ಲಿ ಅನೇಕ ಕಾರ್ಯಕ್ರಮ ಮಾಡುತ್ತಿದ್ದು ಎಲ್ಲರಿಗೂ ಮೆಚ್ಚುಗೆ ಉಂಟಾಗಿದೆ. ಜೊತೆಗೆ ರೋಟರಿ ಕ್ಲಬ್ ಅಪ್ ವಿಜಯನಗರ ಹೆರಿಟೇಜ್ ಕ್ಲಬ್ ಸದಸ್ಯರು ಸಹ ನಮ್ಮ ಜೊತೆ ಕೈಜೋಡಿಸಿ ಈ ಸಹಾಯವನ್ನು ಮಾಡಿರುವುದು ಸಂತಸವಾಗಿದೆ ಎಂದು ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಉದ್ಘಾಟನೆ ಮಾಡಿದ ರೋಟರಿ ಕ್ಲಬ್ ಹೊಸಪೇಟೆಯ ಮುಖ್ಯಸ್ಥರು ಗಳಾದ ಶ್ರೀ ವಿಶ್ವನಾಥ್ ಕೆ ಜಾದವ್ ಮತ್ತು ಶ್ರೀ ತಿರುಪತಿ ನಾಯ್ಡು, ಶ್ರೀ ವಿ.ಜಿ ಶ್ರೀಕಾಂತ್ ರವರು ಶುಭಾಶಯ ತಿಳಿಸಿ ಕಾರ್ಯಕ್ರಮದ ಯಶಸ್ವಿಗೆ ಅಭಿನಂದನೆ ವ್ಯಕ್ತಪಡಿಸಿದರು.

ವೈಯಕ್ತಿಕವಾಗಿ , ಸಾಮಾಜಿಕವಾಗಿ ಮತ್ತು ಸಮೂಹದಲ್ಲಿ ಯಾವುದೇ ಆತಂಕವನ್ನು ಪಡದೆ ಗುರಿಯನ್ನು ಸಾಧಿಸಲು ಮಾಡುವ ಉಪಯುಕ್ತವಾದ ಮತ್ತು ಕೈಯಲ್ಲಿ ಆಗುವ ಕೆಲಸಗಳನ್ನು ಮಾಡಿ ಸಂತೋಷದ ಕಡೆ ಜೀವನವನ್ನು ಸಾಗಿಸುವ ಮಾರ್ಗದಲ್ಲಿ ಸಿಗುವ ಸವಲತ್ತುಗಳನ್ನು ಮಾಡಿದಾಗ ಅತಿಯಾದ ಆನಂದವಾಗುತ್ತದೆ, ನಮ್ಮ ಕೊಡುಗೆ ಉಪಯುಕ್ತವಾದರೆ ಕಾಲೇಜು ವಿದ್ಯಾರ್ಥಿಗಳಿಗೆ ಆಗುವ ಆನಂದವನ್ನು ನಾವು ಸಂತಸದಿಂದ ಸ್ವೀಕರಿಸಬಹುದು ಎಂದು ಶ್ರೀಮತಿ ಕಮಲಾ ಗುಮಾಸ್ತೆಯವರು ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತ ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮ ದಲ್ಲಿ ಕೆಎಫ್ಐಎಲ್ ಲೇಡೀಸ್ ಕ್ಲಬ್ ಮುಖ್ಯಸ್ಥರು ಮತ್ತು ರೋಟರಿ ಹಂಪಿ ಪರ್ಲ್ಸ್ ಸದಸ್ಯರಾದ ಶ್ರೀಮತಿ ಲಕ್ಷ್ಮೀನಾರಾಯಣ, ಶ್ರೀಮತಿ ಸುಮಾನಾಗರಾಜ್ , ಹಂಪಿ ಪರ್ಲ್ಸ್ ಕ್ಲಬ್ ಮುಖ್ಯಸ್ಥರಾದ ಶ್ರೀಮತಿ ಪ್ರಿಯಾ ಗೌತಮ್,ಡಾ. ಪಲ್ಲವಿ ಅಮರನಾಥ್, ಶ್ರೀಮತಿ ಪಾವನ ನಾಯ್ಡು , ಶ್ರೀಮತಿ ಅಶ್ವಿನಿ ಕೊತ್ತುಂಬರಿ ಮತ್ತು ಕ್ಲಬ್ ಸದಸ್ಯರು ಭಾಗವಹಿಸಿದ್ದರು.

ರೋಟರಿ ಕ್ಲಬ್ ಆಪ್ ಹಂಪಿ ಪರ್ಲ್ಸ್ ಮತ್ತು ರೋಟರಿ ಕ್ಲಬ್ ಅಪ್ ವಿಜಯನಗರ ಹೆರಿಟೇಜ್ ಇವರು ಹೊಸಪೇಟೆಯ ಸುತ್ತಮುತ್ತಲಿನ ಸರ್ಕಾರಿ ಕಾಲೇಜುಗಳಾದ ಕೂಡ್ಲಿಗಿ ಪಿ.ಯು. ಕಾಲೇಜ್, ಹಗರಿಬೊಮ್ಮನಹಳ್ಳಿ ಪಿ.ಯು ಕಾಲೇಜ್ ,ಕಂಪ್ಲಿ ಪಿ.ಯು ಕಾಲೇಜ್ ಮತ್ತು ಹಡಗಲಿ ಪಿ.ಯು ಕಾಲೇಜುಗಳಿಗೆ ಉಚಿತ ಕಂಪ್ಯೂಟರ್ ಹಂಚಿಕೆ ಮಾಡಿದರು.

ವರದಿ : ಮುರುಳೀಧರ್ ನಾಡಿಗೇರ್
ವಿಜಯನಗರ – ಹೊಸಪೇಟೆ

ಶಿವಮೊಗ್ಗ ಸಮೀಪ ಬೈಕ್ ಕಾರು ಢಿಕ್ಕಿ ಬೈಕ್ ಸವಾರನಿಗೆ ಪೆಟ್ಟು

0

ಶಿವಮೊಗ್ಗದ ಕಾಚಿನ ಕಟ್ಟೆ ಸಮೀಪ ಬೈಕ್​, ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರನ ಕಾಲಿಗೆ ಪೆಟ್ಟಾಗಿದೆ.

ಶಿವಮೊಗ್ಗದ ಕಡೆಯಿಂದ ಎನ್​​ಆರ್​ಪುರದ ಕಡೆಗೆ ಹೊರಟಿದ್ದ ಬೈಕ್​ಗೆ ಎದುರುಗಡೆಯಿಂದ ಬರುತ್ತಿದ್ದ ಕಾರೊಂದು ಜೋರಾಗಿ ಡಿಕ್ಕಿ ಹೊಡೆದಿದೆ. ನೇರವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಘಟನೆಯಲ್ಲಿ ಬೈಕ್​ ಸವಾರನ ಕಾಲಿಗೆ ಬಲವಾದ ಪೆಟ್ಟಾಗಿದೆ.

ಶಿವಮೊಗ್ಗ -ಎನ್​ಆರ್​ಪುರ ಮೇನ್​ ರೋಡ್​ನಲ್ಲಿ ಈ ಘಟನೆ ಸಂಭವಿಸಿದೆ. ಘಟನೆ ಬೆನ್ನಲೆ ಗಾಯಾಳುವನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.  ಶಿವಮೊಗ್ಗದ ಕಡೆಯಿಂದ ಎನ್​​ಆರ್​ಪುರದ ಕಡೆಗೆ ಹೊರಟಿದ್ದ ಬೈಕ್​ಗೆ ಎದುರುಗಡೆಯಿಂದ ಬರುತ್ತಿದ್ದ ಕಾರೊಂದು ಜೋರಾಗಿ ಡಿಕ್ಕಿ ಹೊಡೆದಿದೆ.

ಇನ್ನೂ ಬೈಕ್ ಸವಾರ ಯಾರು ಎಲ್ಲಿಯವರು ಎಂಬ ಮಾಹಿತಿ ಲಭ್ಯವಾಗಿಲ್ಲ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.