Tuesday, March 31, 2026
Tuesday, March 31, 2026
Home Blog Page 1351

ಮಕ್ಕಳು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿವಹಿಸಬೇಕು- ವರಸಿದ್ಧಿ ವೇಣುಗೋಪಾಲ್

0

ಬಾಲ್ಯದಿಂದಲೇ ಕಲಿಕೆಯಲ್ಲಿ ಮಕ್ಕಳು ಹೆಚ್ಚಿನ ಆಸಕ್ತಿ ವಹಿಸಿ ಶಿಕ್ಷಣವನ್ನು ಪಡೆದುಕೊಂಡಲ್ಲಿ ಭವಿಷ್ಯದ ದಿನಗಳಲ್ಲಿ ಉನ್ನತ ಮಟ್ಟದ ಸ್ಥಾನ ಅಥವಾ ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ ಎಂದು ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹೇಳಿದರು.

ಚಿಕ್ಕಮಗಳೂರಿನ ನೆಲ್ಲೂರು ಸಮೀಪದ ಶಂಕರ ವಿದ್ಯಾಮಂದಿರದ 22ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿ ಶಿಕ್ಷಣ ಎಂಬುದು ವಿದ್ಯಾರ್ಥಿಗಳ ಆಸ್ತಿ. ಅದನ್ನು ಯಾರಿಂದಲೂ ಕಸಿದುಕೊಳ್ಳಲು ಅಸಾಧ್ಯ ಎಂದು ಹೇಳಿದರು.

ಶಂಕರ ವಿದ್ಯಾಮಂದಿರವು ಹಲವು ವರ್ಷಗಳಿಂದ ಸ್ವಾಮೀಜಿಯವರ ನೇತೃತ್ವದಲ್ಲಿ ಸಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಶಿಕ್ಷಕರಿಗೆ ಭತ್ಯೆಗಳನ್ನು ಕಲ್ಪಿಸಿದೆ. ಶಾಲೆಯ ಶಿಕ್ಷಣದಲ್ಲಿ ಮುಂಜಾಗ್ರತಾ ಕ್ರಮ ವಹಿಸಿಕೊಂಡು ಉತ್ತಮ ಶಿಕ್ಷಣವನ್ನು ಮಕ್ಕಳಿಗೆ ನೀಡಲು ಶ್ರಮಿಸುತ್ತಿದೆ ಎಂದರು.

ಶಿಕ್ಷಣ ಮಹತ್ವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಮಕ್ಕಳಿಗೆ ಯಾವ ವಿಷಯದಲ್ಲಿ ಆಸಕ್ತಿ ಹೊಂದಿರುತ್ತಾರೋ ಅಂತಹ ವಿಷಯಗಳಲ್ಲಿ ಪೋಷಕರು ಆದ್ಯತೆ ನೀಡಿದ್ದಲ್ಲಿ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದು ತಿಳಿಸಿದರು.

ಶಾಲೆಯ ಸಮೀಪದಲ್ಲಿ ನಗರಸಭಾದಿಂದ ಪಾರ್ಕ್ ಅಭಿವೃದ್ದಿಪಡಿಸಿ ಶಾಲೆಗೆ ಸದ್ಯದಲ್ಲೇ ಹಸ್ತಾಂತರಿ ಸಲಾಗುವುದು. ಇದೇ ರೀತಿ ನಗರದಲ್ಲಿ ಸುಮಾರು ೨೫೦ ಪಾರ್ಕ್ಗಳನ್ನು ಅಭಿವೃದ್ದಿಪಡಿಸಿ ಸಂಘ- ಸಂಸ್ಥೆಗಳಿಗೆ ಹಸ್ತಾಂತರಿ ನಿರ್ವಹಣೆ ಮಾಡುವ ಜವಾಬ್ದಾರಿ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಸಂಸ್ಥಾಪಕ ಹಾಗೂ ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕಳೆದ ಎರಡು ದಶಕಗಳಿಂದ ಬಡ ಹಾಗೂ ಹಿಂದು ಳಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಅನುಕೂಲ ಕಲ್ಪಿಸಲಾಗಿದೆ ಎಂದರು.

ಶ್ರೀ ಶಂಕರ ಸ್ವಾಮಿ ಸೇವಾ ಪ್ರತಿಷ್ಟಾನದ ಟ್ರಸ್ಟಿ ಎಂ.ಬಿ.ಅಶೋಕ್‌ಕುಮಾರ್ ಮಾತನಾಡಿ ಸತತವಾಗಿ ೨೩ನೇ ವರ್ಷಕ್ಕೆ ಪಾದಾರ್ಪಣೆ ನಡೆಸಿ ಮುನ್ನುಗುತ್ತಿರುವ ಶಾಲೆಯ ಆಡಳಿತ ಮಂಡಳಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆದು ಮಧ್ಯಮ ವರ್ಗದ ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವಂತಾಗಲಿ ಎಂದು ಶುಭ ಕೋರಿದರು.

ಇದೇ ವೇಳೆ ವಾರ್ಷಿಕೋತ್ಸವ ಅಂಗವಾಗಿ ಮಕ್ಕಳು ತಯಾರಿಸಿದ ವಿವಿಧ ವಸ್ತುಗಳ ಪ್ರದರ್ಶನ ಮಾಡಲಾಯಿತು. ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಗಣ್ಯರಿಂದ ಬಹುಮಾನ ವಿತರಿಸ ಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಟ್ರಸ್ಟಿಗಳಾದ ಶ್ರೀಮತಿ ಶಾರದಾ ಪುಟ್ಟಸ್ವಾಮಿ, ಪಂಚಾಚಾರ್ಯ ಸೇವಾ ಸಮಿತಿ ಮಾಜಿ ಅಧ್ಯಕ್ಷ ಐ.ಕೆ.ಲೋಕೇಶ್, ಮುಗುಳುವಳ್ಳಿ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ.ಶಿವಣ್ಣ, ಶಾಲೆಯ ಮುಖ್ಯೋಪಾಧ್ಯಾಯನಿ ಎನ್.ಎಂ.ಮಮತ, ಶಿಕ್ಷಕರಾದ ಸುಹಾಸ್, ನಾಗಲಕ್ಷ್ಮಿ ದಿವ್ಯಾ, ಚಂದನ, ವಿದ್ಯಾ, ರಶ್ಮಿ, ಸಿಬ್ಬಂದಿ ರುದ್ರಮುನಿಸ್ವಾಮಿ ಮತ್ತಿತರರು ಹಾಜರಿದ್ದರು.

ಕ್ರಷರ್ ಮತ್ತು ಕ್ವಾರಿ ಮಾಲಿಕರಿಂದ ಗೃಹಸಚಿವರ ಜೊತೆ ಸಮಾಲೋಚನೆ

0

ಕ್ರಷರ್ ಮತ್ತು ಕ್ವಾರಿ ಮಾಲೀಕರಿಗೆ 5 ಪಟ್ಟು ದಂಡ ವಿಧಿಸುವ ಕ್ರಮದ ವಿರುದ್ಧವಾಗಿ ಈಗಾಗಲೇ ಕ್ರಷರ್ ಗಳನ್ನು ನಿಲ್ಲಿಸಿ ಪ್ರತಿಭಟಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಅವರನ್ನು ಎಸ್ ದತ್ತಾತ್ರಿ ಅವರ ನೇತೃತ್ವದಲ್ಲಿ ಇಂದು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ತಿಳಿಸಲಾಯಿತು.

ಶ್ರೀ ಜ್ಞಾನೇಂದ್ರ ಅವರು ತಕ್ಷಣವೇ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯೊಂದಿಗೆ ಮಾತನಾಡಿ ಮಂಗಳವಾರ ಅಥವಾ ಬುಧವಾರ ಮುಖ್ಯಮಂತ್ರಿಗಳೊಂದಿಗೆ ಸಭೆ ಏರ್ಪಾಟು ಮಾಡಲು ತಿಳಿಸಿ ಆ ಸಭೆಗೆ ಗಣಿ ಮತ್ತು ಭೂವಿಜ್ಞಾನ ಸಚಿವರು, ಕಾನೂನು ಸಚಿವರು, ಹಾಗೂ ಲೋಕೋಪ ಇಲಾಖೆ ಸಚಿವರು, ಮತ್ತು ರಾಜ್ಯ ಕ್ರಶರ್ ಹಾಗೂ ಕ್ವಾರಿ ಮಾಲೀಕರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸುವಂತೆ ಸೂಚಿಸಿದರು.

ಈ ನಿಯೋಗದಲ್ಲಿ ಕ್ರಷರ್ ಹಾಗೂ ಕ್ವಾರಿ ಮಾಲೀಕರ ಸಂಘದ ಅಧ್ಯಕ್ಷರಾದ ಎನ್ ಮಂಜುನಾಥ್ ಕಂಟ್ರಾಕ್ಟರ್ ಇಬ್ರಾಹಿಂ ಶರೀಫ್, ಕ್ರಷರ್ ಮತ್ತು ಕ್ವಾರಿ ಮಾಲೀಕರ ಸಂಘದ ನಿರ್ದೇಶಕರಾದ ಶ್ರೀ ಗಿರೀಶ್ ಹಾಗೂ ಗುರುಪ್ರಸಾದ್ ಉಪಸ್ಥಿತರಿದ್ದರು.

ಪಂಚರತ್ನ ಯೋಜನೆಗಳು ಬಡ ಮತ್ತು ಹಿಂದುಳಿದವರಿಗೆ ಅನುಕೂಲ-ತಿಮ್ಮಶೆಟ್ಟಿ

0

ಚಿಕ್ಕಮಗಳೂರಿನ ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಡಿಎಸ್ ವತಿಯಿಂದ ಬೂತ್‌ಮಟ್ಟದ ಕಾರ್ಯಕರ್ತರ ಸಭೆಯನ್ನು ಕ್ಷೇತ್ರದ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ನೇತೃತ್ವದಲ್ಲಿ ನಡೆಸಲಾಯಿತು.

ಈ ವೇಳೆ ಮಾತನಾಡಿದ ತಿಮ್ಮಶೆಟ್ಟಿ ಹೆಚ್.ಡಿ.ಕೆ.ಯವರ ಪಂಚರತ್ನ ಯೋಜನೆಗಳು ಅತ್ಯಂತವಾಗಿ ರೈತಾಪಿ ವರ್ಗ, ಬಡ ಹಾಗೂ ಹಿಂದುಳಿದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೂಪಿಸಲಾಗಿದ್ದು ಗ್ರಾಮ ಸ್ಥರು ಯೋಜನೆಗಳ ಸೌಲಭ್ಯಗಳನ್ನು ಅರಿತು ಜನತೆಗೆ ಸ್ಪಂದಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕುಮಾರಸ್ವಾಮಿಯವರ ಕೈಬಲಪಡಿಸಬೇಕು ಎಂದರು.

ರೈತರು ಹಾಗೂ ಜನಸಾಮಾನ್ಯರಿಗೆ ಅಧಿಕಾರ ಅವಧಿಯಲ್ಲಿ ಜನಪರ ಯೋಜನೆಗಳಿಗೆ ಒತ್ತು ನೀಡಿರುವ ಪಕ್ಷ ಜೆಡಿಎಸ್. ಇದನ್ನು ಮನಗಂಡು ಪ್ರತಿಯೊಬ್ಬರು ಮುಂದಿನ ಮಕ್ಕಳ ಭವಿಷ್ಯದ ಒಳ್ಳೆಯ ದಿನಗಳಿಗೆ ತೆನೆಹೊತ್ತ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಲ್ಲೇನಹಳ್ಳಿಯ ಪಕ್ಷದ ಮುಖಂಡರುಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಶಿವಮೊಗ್ಗ ಜಿಲ್ಲೆ ಪ್ರವೇಶಿಸಿದ ಕಸಾಪದ ಕನ್ನಡರಥ

0

ಹಾವೇರಿಯಲ್ಲಿ ದಿನಾಂಕ 06-01-2023 ರಿಂದ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ “ಕನ್ನಡ ರಥ”ವು ಜಿಲ್ಲೆಯ ಭದ್ರಾವತಿಯನ್ನು ಪ್ರವೇಶಿಸಿದ್ದು ವಿಜೃಂಭಣೆಯಿಂದ ಜಿಲ್ಲೆಗೆ ಬರಮಾಡಿಕೊಳ್ಳಲಾಯಿತು.

ಕನಕ ಮಂಟಪದ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಶಾಸಕರಾದ ಸನ್ಮಾನ್ಯ ಶ್ರೀ ಬಿ.ಕೆ.ಸಂಗಮೇಶ್ ರವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಡಿ.ಮಂಜುನಾಥ್, ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉಮೇಶ್ ಹೆಚ್., ಪೌರಾಯುಕ್ತರಾದ ಶ್ರೀ ಮನುಕುಮಾರ್, ಗ್ರೇಡ್ 2 ತಹಶೀಲ್ದಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರಸಭಾ ಸದಸ್ಯರು, ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸುಂದರರಾಜ್, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು-ಸದಸ್ಯರು, ವಿವಿಧ ಸಂಘಟನೆಗಳ ಪ್ರಮುಖರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಜರಿದ್ದರು.

ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನ ಬಂಧಿಸಿಲ್ಲ ಏಕೆ?- ಸಂಧ್ಯಾ ಗಣಪತಿ

0

ಮುಖ್ಯ ಶಿಕ್ಷಕರ ವಿರುದ್ಧ ಮಕ್ಕಳಿಗೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಆರೋಪಿಸಿ ಶಿಕ್ಷಣ ಇಲಾಖೆಗೆ ದೂರು ನೀಡಿದ್ದ ಪ್ರಕರಣದಲ್ಲಿ ಈಗ ಸುಳ್ಳು ದೂರು ನೀಡಿದವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ 3 ದಿನ ಕಳೆದರೂ ಆರೋಪಿ ಬಂಧಿಸದಿರುವ ಕುರಿತು ಕಲ್ಮನೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಗಣಪತಿ ಅವರು ಸಾಗರ ಗಾಮಾಂತರ ಠಾಣೆ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅವರು ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಆರೋಪಿ ರಾಜಾರೋಷವಾಗಿ ದ್ವಿಚಕ್ರವಾಹನದಲ್ಲಿ ಸಂಚರಿಸುತ್ತಿದ್ದರೂ ಪೊಲೀಸರು ಮಾತ್ರ ಆತನ ಬಂಧನಕ್ಕೆ ಆಸಕ್ತಿ ತೋರಿಸದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ ಎಂದ ಅವರು ವರದಾಮೂಲ ಎಳ್ಲಮವಾಸ್ಯೆ ಜಾತ್ರೆಯಲ್ಲಿ ಆರೋಪಿ ಕುಟುಂಬ ಸಮೇತ ಸಂಚರಿಸುತ್ತಿರುವ ಕುರಿತು ವಿವರಿಸಿದ ಅವರು ಸಾಗರ ನಗರ ಪೊಲೀಸ್ ಠಾಣೆ ಎದುರು ಬೈಕಿನಲ್ಲಿ ಹೋಗುತ್ತಿದ್ದರೂ ಆರೋಪಿಯ ಬಂಧನವಾಗಲಿಲ್ಲ ಯಾಕೆ?ಎಂದು ಪ್ರಶ್ನಿಸಿದರು.

ತಾಲೂಕಿನ ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಮುಖ್ಯ ಶಿಕ್ಷಕರು 7 ಮಕ್ಕಳಿಗೆ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ಶಿಕ್ಷಣ ಇಲಾಖೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪರಿಶೀಲನೆಗೆ ಬಂದಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಶಿವಮೊಗ್ಗದ ಉಪ ನಿರ್ದೇಶಕರನ್ನು ಶಾಲೆಯಲ್ಲಿ ಕೂಡಿ ಹಾಕಿ ಗ್ರಾಮಸ್ಥರು, ಎಸ್‌ಡಿಎಂಸಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ,ಸುಳ್ಳು ದೂರು ನೀಡಿದವರನ್ನು ನಮ್ಮೆದುರು ಕರೆತರುವಂತೆ ಪಟ್ಟು ಹಿಡಿದ ನಂತರ ಪೊಲೀಸ್ ಠಾಣೆಗೆ ಪೊಷಕರನ್ನು ಕರೆಯಿಸಿಕೊಂಡು ದೂರು ಪಡೆದು ತಡರಾತ್ರಿ ಪ್ರಕರಣ ದಾಖಲಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಅಕ್ಷತಾರಾಮಚಂದ್ರ ಮಾತನಾಡಿ ನಮ್ಮ ಶಾಲೆಯ ವಿರುದ್ಧ ಪಿತೂರಿ ಕಳೆದ ಒಂದು ವರ್ಷಗಳಿಂದ ನಡೆಯುತ್ತಿದೆ.ಶಾಲಾ ಶಿಕ್ಷಕಿಯರಿಬ್ಬರ ವೈಮನಸ್ಸು ಜಗಳದ ಪರಿಣಾಮ ಇಂತಹ ಘಟನೆಗಳಿಗೆ ಕುಮ್ಮಕ್ಕು ಸಿಕ್ಕಿದೆ ಎಂದು ಮೇಲ್ನೋಟಕ್ಕೆ ತಿಳಿಯುತ್ತಿದೆ.ಆದ್ದರಿಂದ ಪೊಲೀಸರು ಮತ್ತು ಶಿಕ್ಷಣ ಇಲಾಖೆ ತನಿಖೆ ನಡೆಸುವ ಮೂಲಕ ನಮ್ಮ ಶಾಲೆಯ ಮಕ್ಕಳ ತರಗತಿ ಹಾಗೂ ಜಾತಿ ಸಮೇತ ಆರೋಪಿಗೆ ನೀಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮಪಂಚಾಯಿತಿ ಸದಸ್ಯ ಸುರೇಶ್ ಶೆಟ್ಟಿ ಮಾತನಾಡಿ ಶಾಲೆಯ ಅಂಚಿನಲ್ಲಿ ಶಾಲೆಗೆ ಅಪಾಯವಾಗಿರುವ ಹೊನ್ನೆ ಮರ ಗಾಳಿಗೆ ಅರ್ಧಮರ ಮುರಿದು ಬಿದ್ದಿತ್ತು.ಅಡುಗೆಕೋಣೆ ಸೇರಿದಂತೆ ಮಕ್ಕಳ ಸಂರಕ್ಷಣೆಯ ಉದ್ದೇಶದಿಂದ ಅರಣ್ಯ ಇಲಾಖೆಯವರು ಟೆಂಡರ್ ಪ್ರಕ್ರಿಯೆ ನಡೆಸಿ ಮರ ತೆರವುಗೊಳಿಸಿ ಮರದ ಹರಾಜು ಬಾಬ್ತು ಅರಣ್ಯ ಇಲಾಖೆಗೆ ಸಂದಾಯವಾಗಿರುವುದು 2020 ರಲ್ಲಿ ಪ್ರಕ್ರಿಯೆ. ಆದರೇ ಕಳೆದ ಒಂದು ವರ್ಷದಿಂದ ವಿನಾಕಾರಣ ಮರದ ವಿಚಾರ ಮುನ್ನೆಲೆಗೆ ಬಂದು ಶಾಲೆಗೆ ಸಂಬಂಧವೇ ಇಲ್ಲದ ಹರಾಜು ಪ್ರಕ್ರಿಯೆ ಕುರಿತು ಖ್ಯಾತೆ ತೆಗೆದು ಶಾಲೆಯ ವಾತವರಣ ಹಾಳು ಮಾಡುತ್ತಿದ್ದರು.

ಒಟ್ಟಾರೆ ಕಾಗೆಹಳ್ಳ ಶಾಲೆಯ ಕುರಿತು ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಹಗೆತನ ಸಾಧಿಸುವ ದುರುದ್ದೇಶಿತ ವ್ಯಕ್ತಿಯ ವಿರುದ್ಧ ಶಿಕ್ಷಣ ಅಧಿಕಾರಿಗಳನ್ನು ದಿಗ್ಬಂಧನಕ್ಕೆ ಒಳಪಡಿಸಿ ಮಧ್ಯಾಹ್ನ 2:30 ರಿಂದ ರಾತ್ರಿ 8:00 ಗಂಟೆಯವರೆಗೂ ಹೋರಾಟ ನಡೆಸಿದ ಪರಿಣಾಮ ತಡರಾತ್ರಿ ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆದರೇ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ವಿಫಲವಾಗಿರುವ ಕಾರಣ ಮುಂದಿನ ದಿನಗಳಲ್ಲಿ ಪೊಲೀಸ್ ಠಾಣೆ ಎದುರು ಕಲ್ಮೆನೆ ಗ್ರಾಮಪಂಚಾಯಿತಿ ಸದಸ್ಯರು ಮತ್ತು ಶಾಲಾಭಿವೃದ್ಧಿ ಸಮಿತಿಯವರು ಹಾಗೂ ಪೊಷಕರು ಪ್ರತಿಭಟನಾ ಧರಣಿ ನಡೆಸುವ ಮೂಲಕ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಲು ನಿರ್ಣಯಿಸಿರುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗಣಪತಿಗದ್ದೇಮನೆ,ಯುವರಾಜ್,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಅಕ್ಷತಾರಾಮಚಂದ್ರ,ಉಪಾಧ್ಯಕ್ಷ ಉಮೇಶ್,ಗ್ರಾಮಪಂಚಾಯಿತಿ ಸದಸ್ಯ ಸುರೇಶ್ ಶೆಟ್ಟಿ,ಪೊಷಕರುಗಳಾದ ನೂರ್‌ಜಾನ್,ಹೊನ್ನಪ್ಪ,ಆರೀಫ್‌ವುಲ್ಲಾ ಮೊದಲಾದವರು ಉಪಸ್ಥಿತರಿದ್ದರು.

ಮಾನವೀಯ ಮೌಲ್ಯಗಳ ಕಳಚುವಿಕೆ: ಹಿಂದೆಯೇ ಏಲಿಯಟ್ ಕಾವ್ಯ ಉಲ್ಲೇಖಿಸಿದೆ

0

ಏಲಿಯಟ್ ಮಹಾ ಕವಿಯ ದಿ ವೇಸ್ಟ್ ಲ್ಯಾಂಡ್ ಕಾವ್ಯ ರಚನೆಗೆ ನೂರು ವರ್ಷ ಸಂದಿದ್ದರೂ ಅದರ ಅಂತರಾಳ ಇಂದಿಗೂ ಪ್ರಸ್ತುತ. ಬಹು ಆಯಾಮದ ಚರ್ಚೆಗೆ ಈ ಕಾವ್ಯ ಕಾರಣವಾಗುತ್ತದೆ. ಹೀಗಾಗಿ ಇದೊಂದು ಸಾರ್ವಕಾಲಿಕ ಮಹತ್ವದ ಕಾವ್ಯ ಎಂದು ಹಿರಿಯ ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ಬಣ್ಣಿಸಿದರು.

ನಗರದ ಸಮಾನ ಮನಸ್ಕರ ವೇದಿಕೆ ಬಹುಮುಖಿ ವತಿಯಿಂದ ಎಲಿಯಟ್ ಮಹಾ ಕವಿಯ ದಿ ವೇಸ್ಟ್ ಲ್ಯಾಂಡ್ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲ ಮಹಾಯುದ್ಧದ ನಂತರದ ಮನುಷ್ಯನ ಹಪಾಹಪಿತನವನ್ನು ಗಟ್ಟಿಯಾಗಿ ಅನಾವರಣಗೊಳಿಸುತ್ತಲೇ, ಆಧುನಿಕ ಮನುಷ್ಯನ ಒಬ್ಬಂಟಿತನವನ್ನು ಸಹ ಕವಿತೆ ತೆರೆದಿಡುತ್ತದೆ ಎಂದರು.

ಯೂರೋಪ್ ನಾಗರೀಕತೆಯ ಕುಸಿತ ಒಂದೆಡೆಯಾದರೆ, ಇನ್ನೊಂದೆಡೆಯಲ್ಲಿ ನಂಬಿಕೆಯೇ ಅಪನಂಬಿಕೆಯಾಗುವ ಗಂಭೀರ ಪರಿಣಾಮವನ್ನು ಈ ಕಾವ್ಯ ಅಭಿವ್ಯಕ್ತಿಸುತ್ತದೆ ಎಂದ ಅವರು, ಈ ಕಾವ್ಯ ತನ್ನ ಅಂತರ್ಗತವಾದ ಭಾವಾಭಿವ್ಯಕ್ತಿಯಲ್ಲಿ ಕೇವಲ ಯೂರೋಪ್ ನಾಗರೀಕತೆ ಮಾತ್ರವಲ್ಲ, ಜಗತ್ತಿನ ಎಲ್ಲ ಪರಂಪರಾಗತ ಮೌಲ್ಯಗಳ ಅಧಃಪತನವನ್ನು ಸಹ ವಿಶ್ಲೇಷಿಸುತ್ತದೆ. ಹೀಗಾಗಿ ಇದು ಸಾರ್ವಕಾಲಿಕ ಮಹತ್ವದ ಕೃತಿ ಎಂದು ಆರ್ಥೈಸಿದರು.

ಪರಸ್ಪರ ಕಳಚುತ್ತಿರುವ ಮಾನವೀಯ ಮೌಲ್ಯಗಳನ್ನು ನೂರು ವರ್ಷಗಳ ಹಿಂದೆಯೇ ಕವಿ ಉಲ್ಲೇಖಿಸಿದ್ದರು ಎಂಬುದು ಅಚ್ಚರಿ ಮೂಡಿಸುತ್ತದೆ ಎಂದ ಅವರು, ಸರಳವಾದ ಶಬ್ದಗಳ ಮೂಲಕ, ತನ್ನ ಸುತ್ತಲಿನ ಘಟನೆಗಳ ಅನುಭವದ ಮೂಲಕ ಕವಿ ಕಠೋರವಾದ ಸತ್ಯವನ್ನು ತೆರೆದಿಟ್ಟಿದ್ದಾರೆ. ಪುರುಷನ ದಬ್ಬಾಳಿಕೆ, ನರಹತ್ಯೆ, ಯಾಂತ್ರಿಕ ಬದುಕು, ಕಳಚಿ ಬೀಳುತ್ತಿರುವ ಮಾನವೀಯ ಮೌಲ್ಯದ ಲಯಗಳನ್ನು ವಿಶ್ಲೇಷಿಸುತ್ತಲೇ ಒಂದು ಮಹತ್ವದ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ ಎಂದರು.

ಈಗ ಬೇಕಿರುವುದು ಮರುಹುಟ್ಟಲ್ಲ, ಮರವು ಎಂದು ಸೂಕ್ಷ÷್ಮವಾಗಿ ಹೇಳಿರುವ ಕವಿ, ಚಲನೆ ಅಥವಾ ಸ್ಪಂದನೆಯನ್ನು ಕಳೆದುಕೊಂಡಿರುವ ಅಧುನಿಕ ಜೀವನ ಮೂರು ಧರ್ಮಗಳ ಮೌಲ್ಯಗಳನ್ನು, ಅವುಗಳ ಮೇಲಿನ ನಂಬಿಕೆಗಳನ್ನು ಈ ಕಾವ್ಯ ಅನಾವರಣಗೊಳಿಸುತ್ತದೆ ಎಂದರು.

ಜಗತ್ತಿನ ಎಲ್ಲಾ ಭಾಷೆಗಳ ಸಾಹಿತ್ಯದ ಮೇಲೆ ಇನ್ನಿಲ್ಲದಂತೆ ಪ್ರಭಾವ ಬೀರಿದ, ಹೊಸ ಕಾಲದ ಮಹಾಕಾವ್ಯ ಎಂದೇ ಪರಿಗಣಿಸಲ್ಪಡುವ ಎಲಿಯಟ್ ನ ದಿ ವೇಸ್ಟ್ ಲ್ಯಾಂಡ್ ಪ್ರಕಟವಾಗಿ ಇದೀಗ ನೂರು ವರ್ಷ. ಆಧುನಿಕ ನಾಗರಿಕತೆಯ ಭ್ರಷ್ಟತೆ, ಕುರೂಪ ಹಾಗೂ ಬಂಜೆತನವನ್ನು ಸಂಕಿರ್ಣವಾಗಿ ಚಿತ್ರಿಸುವ ಕವನ, ಈ ಕವನದ ಮೂಲಕ ಎಲಿಯಟ್ ಸಾಹಿತ್ಯ ಲೋಕದ ಧ್ರುವಧಾರೆಯಾಗಿಬಿಟ್ಟ ಎಂದ ಅವರು, ದಿ ವೇಸ್ಟ್ ಲ್ಯಾಂಡ್ ಖಂಡಿತವಾಗಿಯೂ ವಿಶ್ವ ಸಾಹಿತ್ಯದ ಒಂದು ಮೈಲಿಗಲ್ಲು ಎಂದು ಅರ್ಥೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನುಸಹ್ಯಾದ್ರಿ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕ ಡಾ. ಎಸ್. ಸಿರಾಜ್ ಅಹ್ಮದ್ ವಹಿಸಿ, ಮಾತನಾಡಿದರು.
ಬಹುಮುಖಿಯ ಡಾ. ಹೆಚ್. ಎಸ್. ನಾಗಭೂಷಣ, ಸ್ವಾಗತ, ಪ್ರಾಸ್ತಾವಿಕ ಹಾಗೂ ವಂದನಾರ್ಪಣೆಯನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಪ್ರೊ. ರಾಜೇಂದ್ರ ಚೆನ್ನಿಯವರು ಸಭಿಕರೊಂದಿಗೆ ಸಂವಾದ ನಡೆಸಿಕೊಟ್ಟರು..

ಕ್ರೀಡಾಸ್ಪರ್ಧೆಗಳಿಂದ ಉತ್ತಮ ಆರೋಗ್ಯ- ಮಿಥುನ್ ಕುಮಾರ್

0

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಪ್ರತಿಯೊಬ್ಬರು ಆಸಕ್ತ ಸ್ಪರ್ಧೆಗಳಲ್ಲಿ ಅಭ್ಯಾಸ ಮಾಡಬೇಕು. ನಿರಂತರವಾಗಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹೇಳಿದರು.

ಐಎಂಎ ಕ್ರಿಕೆಟ್ ಅಸೋಸಿಯೆಷನ್ ಶಿವಮೊಗ್ಗ ವತಿಯಿಂದ ಶಿವಮೊಗ್ಗ ನಗರದ ಪೆಸಿಟ್ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ “ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆಯ ರಾಜ್ಯ ಮಟ್ಟದ ವೈದ್ಯರ ಕ್ರಿಕೆಟ್ ಪಂದ್ಯಾವಳಿ” ಉದ್ಘಾಟಿಸಿ ಮಾತನಾಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರಗಳು ಅತ್ಯಂತ ಕ್ರೀಯಾಶೀಲವಾಗಿದ್ದು, ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುತ್ತಿವೆ. ಬೇರೆ ಭಾಗಗಳಿಗಿಂತ ಶಿವಮೊಗ್ಗ ಉತ್ತಮ ಹೆಸರು ಪಡೆದಿದೆ. ಹೆಚ್ಚು ಕ್ರೀಯಾತ್ಮಕವಾಗಿ ಶಿವಮೊಗ್ಗ ಕಾಣಿಸುತ್ತಿದೆ. ವೈದ್ಯರ ಸಂಘವು ರಾಜ್ಯಮಟ್ಟದ ಪಂದ್ಯಾವಳಿ ಆಯೋಜಿಸಿರುವುದು ಅಭಿನಂದನೀಯ ಎಂದು ತಿಳಿಸಿದರು.

ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯು ಅತ್ಯಂತ ಶ್ರಮ ವಹಿಸಿ ಕೆಲಸ ಮಾಡುವ ಇಲಾಖೆ ಆಗಿದ್ದು, ಹೆಚ್ಚು ಒತ್ತಡ ಇರುತ್ತದೆ. ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಕೆಲಸದ ಒತ್ತಡ ಮರೆಯಾಗುತ್ತದೆ. ಕ್ರೀಡೆ ಅತ್ಯಂತ ಉತ್ಸಾಹದಿಂದ ಇರಲು ನೆರವಾಗುತ್ತದೆ ಎಂದರು.

ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ. ಅರುಣ್ ಎಂ.ಎಸ್. ಮಾತನಾಡಿ, ಐಎಂಎ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸಿದ್ದು, ಕ್ರೀಡೆ ಎಲ್ಲರಲ್ಲಿಯೂ ಸ್ಫೂರ್ತಿ ನೀಡುವ ಜತೆಯಲ್ಲಿ ಸಂಘಟನಾ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಭಾರತೀಯ ವೈದ್ಯಕೀಯ ಸಂಘದ ಸದಸ್ಯತ್ವ ನೋಂದಣಿ ಕೂಡ ಗಮನ ವಹಿಸಲಾಗಿದೆ. ರಾಜ್ಯ ಮಟ್ಟದಲ್ಲಿ ಸಂಘಟನೆ ಬಲಿಷ್ಠಗೊಳ್ಳಲು ಅನುಕೂಲವಾಗಿದೆ ಎಂದು ಹೇಳಿದರು.

ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ ಡಾ. ಎಸ್.ಶ್ರೀಧರ್, ಸುಬ್ಬಯ್ಯ ಆಸ್ಪತ್ರೆಯ ಎಂ.ಡಿ. ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಭಾರತೀಯ ಅಂಚೆ ಇಲಾಖೆಯಲ್ಲಿ‌ನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗವನ್ನು ಎದುರು ನೋಡುತ್ತಿರುವವರಿಗೆ ಗುಡ್ ನ್ಯೂಸ್. ಅಂಚೆ ಇಲಾಖೆಯು ಮೆಕ್ಯಾನಿಕ್, MV ಎಲೆಕ್ಟ್ರಿಷಿಯನ್, ಕಾಪರ್ ಮತ್ತು ಟಿನ್‌ಮಿತ್ ಮತ್ತು ಅಪ್ಹೋಲ್‌ಸ್ಟರರ್ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್ indiapost.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:

MV ಮೆಕ್ಯಾನಿಕ್- 4 ಹುದ್ದೆಗಳು
MV ಎಲೆಕ್ಟ್ರಿಷಿಯನ್– 1 ಹುದ್ದೆಗಳು
ಕಾಪರ್ ಮತ್ತು ಟಿನ್‌ಮಿತ್- 1 ಹುದ್ದೆಗಳು
ಅಪ್ಹೋಲ್‌ಸ್ಟರರ್- 1 ಹುದ್ದೆಗಳು

ವಯೋಮಿತಿ:

ಈ ಹುದ್ದೆಗಳಿಗೆ 18 ವರ್ಷದಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕ:

ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಾಗಿ ರೂ. 100/- ರೂ ಪಾವತಿಸಬೇಕಾಗುತ್ತದೆ.

ಅರ್ಹತಾ ಮಾನದಂಡಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ, ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ತಾಂತ್ರಿಕ ಸಂಸ್ಥೆಯಿಂದ ಸಂಬಂಧಿತ ವಿಷಯದಲ್ಲಿ ಪ್ರಮಾಣಪತ್ರ ಹೊಂದಿರಬೇಕು. ಇದಲ್ಲದೆ, ಮಾನ್ಯವಾದ ಚಾಲನಾ ಪರವಾನಗಿ (HMV) ಸಹ ಇರಬೇಕಾಗುತ್ತದೆ.

ಅರ್ಜಿ ಶುಲ್ಕ:

ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಾಗಿ ರೂ. 100/- ರೂ ಪಾವತಿಸಬೇಕಾಗುತ್ತದೆ.

ವೇತನ:

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವೇತನವಾಗಿ ರೂ. 19900 ರಿಂದ ರೂ. 63200 ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಮಾಡಿ.

ಆಯ್ಕೆ ಪ್ರಕ್ರಿಯೆ:

ಸ್ಪರ್ಧಾತ್ಮಕ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜನವರಿ 9, 2023

ಯಾವ ವಿದ್ಯಾರ್ಥಿವೇತನವನ್ನೂ ಸ್ಥಗಿತಮಾಡಿಲ್ಲ- ಶ್ರೀನಿವಾಸ ಪೂಜಾರಿ

0

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ‌. ಯಾವ ವಿದ್ಯಾರ್ಥಿ ವೇತನವನ್ನು ಕೂಡ ಸ್ಥಗಿತಗೊಳಿಸಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

ಅಧಿವೇಶನದಲ್ಲಿ ಮಾತನಾಡಿದ ಸಚಿವರು 1 ರಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ವಿದ್ಯಾರ್ಥಿ ವೇತನ ನೀಡಲಿದೆ.

ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳಿಗೆ 100 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ನೀಡಲಾಗುತ್ತದೆ. ಬಿಸಿಎಂ ಹಾಸ್ಟೆಲ್ ಗಳಲ್ಲಿ ಮಕ್ಕಳಿಗೆ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗುತ್ತದೆ. ಮಕ್ಕಳಿಗೆ ಹಾಸಿಗೆ, ಮಂಚ, ಸೋಲಾರ್, ಗೀಸರ್ ಗಳನ್ನು ಒದಗಿಸುವ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದರು. ಹಾಸ್ಟೆಲ್ ಗಳಿಗೆ 100 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ನೀಡಲಾಗುತ್ತದೆ ಎಂದು ಹೇಳಿದರು.

ಪರಿಶಿಷ್ಟ ವರ್ಗದ ಮತ್ತು ಒಬಿಸಿ ಮಕ್ಕಳಿಗೆ ಯಥಾ ಸ್ಥಿತಿಯಲ್ಲಿ ವಿದ್ಯಾರ್ಥಿ ವೇತನ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಎಲ್ಲಾ ಹಂತದ ವಿದ್ಯಾರ್ಥಿ ವೇತನ ಮುಂದುವರೆಯಲಿದೆ.

ವಿದ್ಯಾರ್ಥಿಗಳು ಆತಂಕಪಡುವುದು ಬೇಡ, ಯಾವ ವಿದ್ಯಾರ್ಥಿ ವೇತನವನ್ನು ಸ್ಥಗಿತ ಮಾಡುವುದಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು, ಅಲ್ಲದೇ ಈ ವಿಚಾರ ವ್ಯಾಪಕ ಟೀಕೆಗೂ ಕಾರಣವಾಗಿತ್ತು.ಈ ಕುರಿತಂತೆ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಕಾರಣಕ್ಕೂ ಸ್ಥಗಿತ ಮಾಡಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.

ಸಾರಿಗೆ ಬಸ್ ದೋಷದಿಂದ ಪ್ರಯಾಣಿಕರು ಗಾಯಗೊಂಡರೆ ನಿಗಮವೇ ಪರಿಹಾರ ನೀಡಬೇಕು

0

ಬಸ್ ನಲ್ಲಿನ ದೋಷದಿಂದ ಪ್ರಯಾಣಿಕರು ಗಾಯಗೊಂಡರೆ ಪರಿಹಾರ ನೀಡುವಂತೆ ಕೆಎಸ್ಆರ್ಟಿಸಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಕುಂತನಹಳ್ಳಿ ಗ್ರಾಮದ ಪಿ ಚಂದ್ರಪ್ರಭಾ ಅವರು ಮೋಟಾರು ವಾಹನ ಅಪಘಾತ ನ್ಯಾಯಾಧಿಕರಣದ ಅರ್ಜಿಯನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಅವರು ಪುರಸ್ಕರಿಸಿದ್ದಾರೆ.

ಕೆಎಸ್ಆರ್ಟಿಸಿ ಬಸ್ ಚಾಲಕನ ನಿರ್ಲಕ್ಷ್ಯ ಹಾಗೂ ಅತಿವೇಗದ ಚಾಲನೆಯಿಂದಾಗಿ ಸರ್ಕಾರಿ ಪ್ರಾಥಮಿಕ ಶಾಲೆಯ 30 ವರ್ಷದ ಶಿಕ್ಷಕಿ ಚಂದ್ರಪ್ರಭಾ ಅವರು ತಮ್ಮ ಬಲಗಾಲಿನ ಮೂಳೆ ಮುರಿತಕ್ಕೆ ಒಳಗಾಗಿ 12 ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು.

ಪ್ರಕರಣ ಸಂಬಂಧ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಲ್ಲಿ ಚಾಲಕ ತಪ್ಪಿತಸ್ಥರಲ್ಲ ಎಂದು ಪೊಲೀಸರು ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿದ ಚಂದ್ರಪ್ರಭಾ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಚಂದ್ರಪ್ರಭಾ ಅವರ ಅರ್ಜಿಯನ್ನು ನ್ಯಾಯಾಧಿಕರಣ ವಜಾಗೊಳಿಸಿತ್ತು, ನಂತರ ಚಂದ್ರಪ್ರಭಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಅವರು ಪುರಸ್ಕರಿಸಿದ್ದು, ಅರ್ಜಿದಾರರು ಇಲ್ಲಿಯವರಗೆ ವಾರ್ಷಿಕ ಶೇ.6 ಬಡ್ಡಿಯೊಂದಿಗೆ ರೂ.1.30,000 ಪರಿಹಾರ ಪಡೆದುಕೊಳ್ಳುಲು ಅರ್ಹರಾಗಿದ್ದಾರೆಂದ ಹೇಳಿದ್ದು, ನ್ಯಾಯಾಧಿಕರಣದ ಆದೇಶವನ್ನು ರದ್ದುಗೊಳಿಸಿದರು.

ಅಲ್ಲದೆ, ಬಸ್ ನಲ್ಲಿನ ದೋಶದಿಂದ ಪ್ರಯಾಣಿಕರೊಬ್ಬರಿಗೆ ಗಾಯಗಳಾದರೆ ಪರಿಹಾರ ನೀಡುವಂತೆ ಸಾರಿಗೆ ನಿಗಮಕ್ಕೆ ಸೂಚಿಸಿದರು.

ಅರ್ಜಿದಾರರಾಗಿರುವ ಚಂದ್ರಪ್ರಭಾ ಅವರು 2012ರ ಆಗಸ್ಟ್ 22 ರಂದು ಸಂಜೆ 5.30 ಗಂಟೆಗೆ ಕೆಲಸ ಮುಗಿಸಿ ಹೆಚ್.ಡಿ.ಕೋಟೆಯಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದರು. ಚಾಲಕನು ಬಸ್ ಅನ್ನು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದನು.

ಈ ವೇಳೆ ಇದ್ದಕ್ಕಿದ್ದಂತೆ ಬಸ್ನ ಇಂಜಿನ್ಗೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಬಸ್ ನ್ನು ನಿಲ್ಲಿಸಲಾಗಿದ್ದು, ಪ್ರಯಾಣಿಕರು ಇಳಿಯಲು ಆರಂಭಿಸಿದ್ದಾರೆ. ಈ ವೇಳೆ ಚಾಲಕ ಇದ್ದಕ್ಕಿದ್ದಂತೆ ಬಸ್ ಚಾಲನೆಯನ್ನು ಆರಂಭಿಸಿದ್ದಾರೆ. ಪರಿಣಾಮ ಚಂದ್ರಪ್ರಭಾ ಅವರು ಬಿದ್ದಿದ್ದಾರೆ. ಇದರಿಂದ ಬಲಗಾಲಿನ ಮೂಳೆ ಮುರಿತಗೊಂಡಿದೆ.