Tuesday, March 31, 2026
Tuesday, March 31, 2026
Home Blog Page 1350

ಕೊರೋನ ನಿರ್ಬಂಧವಿಲ್ಲ ಆದರೆ ಮಾರ್ಗಸೂಚಿ ಪಾಲಿಸಿ-ಡಾ.ಸುಧಾಕರ್

0

ರಾಜ್ಯದಲ್ಲಿ ಕರೊನಾದ ಆತಂಕ ಇಲ್ಲದಿರುವುದರಿಂದ ಹೊಸ ವರ್ಷದ ಸಂಭ್ರಮಾಚರಣೆಗೆ ಯಾವುದೇ ನಿರ್ಬಂಧ ವಿಧಿಸದಿರಲು ನಿರ್ಧರಿಸಿರುವ ಸರ್ಕಾರ, ಕೆಲ ಷರತ್ತುಗಳನ್ನು ಮಾತ್ರ ವಿಧಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಕಂದಾಯ ಸಚಿವ ಆರ್. ಅಶೋಕ್ ಹಾಗೂ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲಾಯಿತು. ರಾಜ್ಯದಲ್ಲಿ ಕರೊನಾ ವ್ಯಾಪಿಸುವ ಆತಂಕವಿಲ್ಲದಿದ್ದರೂ ಮುನ್ನೆಚ್ಚರಿಕೆ ಸಲುವಾಗಿ ಮಾಸ್ಕ್ ಕಡ್ಡಾಯ ಮಾಡಲಾಗುತ್ತಿದೆ. ಆದರೆ, ಮಾಸ್ಕ್ ಹಾಕದೆ ಇರುವವರಿಗೆ
ಯಾವುದೇ ದಂಡ ಹಾಕದೆ ಜಾಗೃತಿ ಮೂಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಮುನ್ನೆಚ್ಚರಿಕೆಯಾಗಿ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಸಚಿವದ್ವಯರು ಪರಿಶೀಲನೆ ನಡೆಸಿದರು.

ರಾಜ್ಯದಲ್ಲಿ ಕೋವಿಡ್ ಲಸಿಕೆ ಎರಡು ಡೋಸ್​ನಲ್ಲಿ ಶೇ.100 ರಷ್ಟು ಸಾಧನೆ ಮಾಡಲಾಗಿದೆ. ಶೇ.20 ರಷ್ಟು ಜನ ಮಾತ್ರ ಬೂಸ್ಟರ್ ಡೋಸ್ ಪಡೆದಿದ್ದಾರೆ. ಬೂಸ್ಟರ್ ಡೋಸ್ ಪಡೆಯುವುದು ಕಡ್ಡಾಯವಲ್ಲ. ಪಡೆದರೆ ಒಳ್ಳೆಯದು ಎಂಬ ಕಾರಣದಿಂದ ಮಂಗಳವಾರದಿಂದಲೇ ರಾಜ್ಯದಲ್ಲಿ ಬೂಸ್ಟರ್ ಡೋಸ್ ನೀಡುವ ಕಾರ್ಯ ನಡೆಯಲಿದೆ
ಎಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಮನಸೆಳೆದ ಶಿವಮೊಗ್ಗದ ಚಿಣ್ಣರ ಬ್ಯಾಂಡ್ ಪ್ರದರ್ಶನ

0

ಮೂಡುಬಿದಿರೆ ಆಳ್ವಾಸ್ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಶಿವಮೊಗ್ಗ ಜಿಲ್ಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕವು ಆಕರ್ಷಕ ಬ್ಯಾಂಡ್ ಪ್ರದರ್ಶನ ನೀಡಿತು.

ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಶಾಲೆಯ ವಿದ್ಯಾರ್ಥಿಗಳು ಮುಖ್ಯ ವೇದಿಕೆಯಲ್ಲಿ ಬ್ಯಾಂಡ್ ಪ್ರದರ್ಶನವನ್ನು ಅತ್ತ್ಯುತ್ತಮವಾಗಿ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದರು.

ಶಿವಮೊಗ್ಗ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಒಳ್ಳೆಯ ಹೆಸರು ತಂದಿದ್ದಾರೆ.

ಮೂಡುಬಿದಿರೆ ಆಳ್ವಾಸ್ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ದೇಶ ವಿದೇಶ ಹಾಗೂ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾವಿರಕ್ಕೂ ಅಧಿಕ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸಹ ಪಾಲ್ಗೊಂಡಿದ್ದಾರೆ.

ಎಲ್ಲರಿಗೂ ಊಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾರ್ವಜನಿಕರಿಗೂ ವಿವಿಧ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಎಲ್ಲ ವೇದಿಕೆಗಳಲ್ಲೂ ಅಚ್ಚುಕಟ್ಟಾಗಿ ಕಾರ್ಯಕ್ರಮಗಳು ಮೂಡಿಬರುತ್ತಿದ್ದವು.

ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಲಾವಿದರ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ಸ್ವಯಂ ಸೇವಕರು ಉತ್ತಮವಾಗಿ ಎಲ್ಲ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಎಚ್.ಡಿ.ರಮೇಶಶಾಸ್ತ್ರೀ, ಆಯುಕ್ತ ಜಿ.ವಿಜಯಕುಮಾರ್, ಜಾಂಬೂರಿಯ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ನಾಯಕರಾದ ಎಚ್.ಶಿವಶಂಕರ್, ವೈ.ಆರ್.ವೀರೇಶಪ್ಪ, ರಾಜೇಶ ಅವಲಕ್ಕಿ, ಎಂಎಲ್ ಸಿ ಮೋಹನ್ ಕೊಂಡಜ್ಜಿ, ಮಂಜುಳಾ, ಬಸವಣ್ಣಪ್ಪ, ಜ್ಯೋತಿ, ರಾಜ್ಯ ಸಹಾಯಕ‌‌ ಸಂಘಟನಾ ಆಯುಕ್ತೆ ಭಾರತಿ ಡಯಾಸ್, ಶಿವಮೊಗ್ಗ ಜಿಲ್ಲೆಯ ವಿವಿಧ ಶಾಲಾ ಕಾಲೇಜಿನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಪಾಲ್ಗೊಂಡಿದ್ದರು.

ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೆಚ್ಚುಗೆ ಪಡೆದ ಶಿವಮೊಗ್ಗದ ದಂಪತಿಗಳು

0

ಅಡಕೆ ಹಾಳೆಯಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ದೇಶ ಹಾಗೂ ವಿಶ್ವ ಮಟ್ಟದಲ್ಲಿ ಮಾರಾಟ ಮಾಡುತ್ತಿರುವ ಶಿವಮೊಗ್ಗ ಜಿಲ್ಲೆಯ ದಂಪತಿ ಬಗ್ಗೆ ಪ್ರಧಾನಿ ಮೋದಿಯವರು ತಮ್ಮ ಮನ್ ಕಿ ಬಾತ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

ಕರ್ನಾಟಕದ ಶಿವಮೊಗ್ಗದ ಸುರೇಶ್ ಮತ್ತು ಅವರ ಪತ್ನಿ ಮೈಥಿಲಿ ಅವರು ಅಡಕೆ ಹಾಳೆಯಿಂದ ಮಾಡಿದ ಅನೇಕ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪೂರೈಸುತ್ತಿದ್ದಾರೆ. ಟ್ರೇ, ಪ್ಲೇಟ್, ಹ್ಯಾಂಡ್‌ ಬ್ಯಾಗ್ ಮೊದಲಾದವು ಆ ಉತ್ಪನ್ನಗಳಲ್ಲಿ ಸೇರಿವೆ. ಅಡಕೆ ಹಾಳೆಯ ಪಾದರಕ್ಷೆಗಳನ್ನು ಸಹ ಜನ ಇಂದು ಬಹಳವಾಗಿ ಇಷ್ಟಪಡುತ್ತಿದ್ದಾರೆ. ಇಂದು ಅವರ ಉತ್ಪನ್ನಗಳಿಗೆ ಲಂಡನ್ ಮತ್ತು ಯುರೋಪ್ ಮಾರುಕಟ್ಟೆಗಳಿಂದ ಭಾರಿ ಬೇಡಿಕೆ ಇದೆ. ಇದು ನಮ್ಮ ನೈಸರ್ಗಿಕ ಸಂಪನ್ಮೂಲ ಮತ್ತು ಸಾಂಪ್ರದಾಯಿಕ ಕೌಶಲಗಳ ಸಮರ್ಥ ಬಳಕೆಗೆ ಅತ್ಯುತ್ತಮ ಉದಾಹರಣೆ. ಭಾರತದ ಈ ಸಾಂಪ್ರದಾಯಿಕ ಜ್ಞಾನವನ್ನು ಇಡೀ ಜಗತ್ತು ಇಂದು ಸುಸ್ಥಿರ ಭವಿಷ್ಯಕ್ಕಾಗಿ ಎದುರು ನೋಡುತ್ತಿದೆ. ನಾವು ಭಾರತೀಯರು ಸಹ ಈ ನಿಟ್ಟಿನಲ್ಲಿ ಮತ್ತಷ್ಟು ಗಮನ ನೀಡಬೇಕಿದೆ ಎಂದು ನರೇಂದ್ರ ಮೋದಿಯವರು ತಿಳಿಸಿದ್ದಾರೆ.

ಶಿವಮೊಗ್ಗದ ವಿನೋಬನಗರ ವಾಸಿ ಸುರೇಶ್‌, `ಭಟ್ ಮತ್ತು ಮೈಥಿಲಿ, ದಂಪತಿ ಉದ್ಯಮ ಸ್ಥಾಪಿಸಿ, ಆ ಮೂಲಕ ಪರಿಸರ ಸ್ನೇಹಿ ಅಡಕೆ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಅಡಕೆ ಹಾಳೆಯಿಂದ ತಟ್ಟೆ, ಟ್ರೇ, ‘ಚಪ್ಪಲಿ, ಪೆನ್‌ಸ್ಟ್ಯಾಂಡ್, ಡೈರಿ ಮೊದಲಾದ ಆಕರ್ಷಕ ಉತ್ಪನ್ನಗಳನ್ನು ತಯಾ ರಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಸರು ಮಾಡಿದ್ದಾರೆ. ಉತ್ತಮ ಗುಣಮಟ್ಟದ ವಸ್ತುಗಳ ತಯಾರಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಸುರೇಶ್‌ ಮತ್ತು ಮೈಥಿಲಿ ದಂಪತಿ ಅಡಕ ಹಾಳೆ ಉತ್ಪನ್ನಗಳ ರಫ್ತುದಾರರು ಮತ್ತು ಪೂರೈಕೆದಾರರಲ್ಲಿ ಒಬ್ಬರಾಗಿದ್ದಾರೆ. ಪ್ರಾಣಿಗಳ ಚರ್ಮ, ಪ್ಲಾಸ್ಟಿಕ್ ಮತ್ತು ರಬ್ಬರ್‌ಗೆ ಪರ್ಯಾ ಯವಾಗಿ, ಕಡಿಮೆ ಬೆಲೆಗೆ ಸಸ್ಯಾಧಾರಿತ ಉತ್ಪನ್ನ ಗಳನ್ನು ತಯಾರಿಸುತ್ತಾರೆ.

ನೈಸರ್ಗಿಕವಾಗಿ ಅಡಕೆ ಹಾಳೆಯಿಂದ ತಯಾರು ಮಾಡುವ ಪಾದರಕ್ಷೆಗಳಿಗೆ ಸುರೇಶ್‌ ಭಟ್ ದಂಪತಿ ಹೆಸರುವಾಸಿ.

ಸಂವಿಧಾನ ಗೌರವಿಸದ ಸರ್ಕಾರಗಳು ಬಹಳ ದಿನ ಉಳಿಯುವುದಿಲ್ಲ-ಮರ್ಲೆ ಅಣ್ಣಯ್ಯ

0

ಮನುಸ್ಮತಿಯಲ್ಲಿ ದಲಿತ, ಹಿಂದುಳಿದವರನ್ನು ಪಶುಗಳಂತೆ ಕಾಣುವ ಅಂಶವನ್ನು ಕಂಡು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು 1927 ಡಿ.25ರಂದು ಸುಟ್ಟು ಹಾಕಿದ ನೆನಪಿಗಾಗಿ ಚಿಕ್ಕಮಗಳೂರಿನ ಜಿಲ್ಲಾ ಪಂಚಾಯಿತಿ ಅಂಬೇಡ್ಕರ್ ಪ್ರತಿಮೆ ಎದುರು ದಲಿತ ಸಂಘಟನೆಗಳ ಐಕ್ಯಾತಾ ಚಾಲನಾ ಸಮಿತಿಯಿಂದ ಮನುಸ್ಮತಿ ಪ್ರತಿಯನ್ನು ದಹಿಸಿ ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಅಂದು ದೇಶದಲ್ಲಿ ಮನುಸ್ಮತಿ ಹೇರುವಂತಹ ಸಂದರ್ಭ ಬಂದಾಗ ಬಾಬಾ ಸಾಹೇಬರು ಅಳುಕದೆ ಅದನ್ನು ವಿರೋಧಿ ಸಿದ್ದರು. ಅದರ ಭಾಗವಾಗಿ ನಾವು ಕೂಡ ವಿರೋಧಿಸಬೇಕು. ಯಾರು ಸಂವಿಧಾನ ಗೌರವಿಸುವುದಿಲ್ಲವೋ ಅಂತಹ ಸರಕಾರಗಳು ಬಹಳಷ್ಟು ದಿನ ಉಳಿಯವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ದಂಟರಮಕ್ಕಿ ಶ್ರೀನಿವಾಸ್ ದೇಶದಲ್ಲಿ ಪ್ರತಿಯೊಬ್ಬರು ಸಮಾನತೆ, ಸಹಬಾಳ್ವೆಗಾಗಿ ಅಂಬೇಡ್ಕರ್ ಅವರು ಸಂವಿಧಾನದಡಿ ಜೀವಿಸಲು ಗ್ರಂಥವನ್ನು ಕೊಡುಗೆಯಾಗಿ ನೀಡಿದ್ದಾರೆ. ಆದರೆ ಮನುಸ್ಮೃತಿಯಲ್ಲಿ ಸಮಾನತೆ ವಿರೋಧವಾಗಿ ಅಂಶಗಳನ್ನು ರಚಿಸಿ ಅವಮಾನ ಮಾಡಲಾಗಿತ್ತು ಆ ನಿಟ್ಟಿ ನಲ್ಲಿ ಮನುಧರ್ಮವನ್ನು ಸುಡುವ ಮೂಲಕ ಅಂಬೇಡ್ಕರ್ ಆಶಯದಂತೆ ನಡೆಯಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಬಾಲಕೃಷ್ಣ ಬಿಳೇಕಲ್ಲು, ಬಿ.ಪಿ.ಚಂದ್ರಶೇಖರ್‌ಪುರ, ವಿರೂಪಾಕ್ಷ, ಮೋಹನ್‌ಕುಮಾರ್, ಶೇಖರ್, ಚಿದಾನಂದ್, ಮತ್ತಿತರರು ಹಾಜರಿದ್ದರು.

ವಿದ್ಯಾರ್ಥಿನಿಯರು ತಮ್ಮ ದೈಹಿಕ ಬದಲಾವಣೆ ಬಗ್ಗೆ ಅರಿವುಹೊಂದಿರಬೇಕು- ಡಾ.ಲಲಿತಾ ಭರತ್

0

ವಿದ್ಯಾರ್ಥಿನಿಯರಲ್ಲಿ ಆಗುವ ದೈಹಿಕ ಬದಲಾವಣೆಗಳ ಬಗ್ಗೆ ಅರಿವು ಹಾಗೂ ಸೂಕ್ತ ಮಾರ್ಗದರ್ಶನ ಅತ್ಯಂತ ಅವಶ್ಯಕ. ಪ್ರೌಢಾವಸ್ಥೆಯಲ್ಲಿ ಆಗುವ ಬದಲಾವಣೆಗಳಿಗೆ ಅಗತ್ಯ ಮಾನಸಿಕ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಡಾ. ಲಲಿತಾ ಭರತ್ ಹೇಳಿದರು.

ಶಿವಮೊಗ್ಗ ನಗರದ ವಾಸವಿ ಪಬ್ಲಿಕ್ ಶಾಲೆಯಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಹಾಗೂ ವಾಸವಿ ಫೌಂಡೇಶನ್ ವತಿಯಿಂದ “ಹದಿಹರೆಯದ ದುಗುಡ ದುಮ್ಮಾನ” ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಣ್ಣು ಜೀವನದ ಪಯಣದಲ್ಲಿ ಮಗಳು, ಹೆಂಡತಿ, ಸೊಸೆ, ತಾಯಿ ಹೀಗೆ ತುಂಬಾ ಜವಾಬ್ದಾರಿಯುತ ಘಟ್ಟಗಳನ್ನು ಕ್ರಮಿಸುತ್ತಾಳೆ. ಎಲ್ಲಾ ಘಟ್ಟಗಳಲ್ಲಿ ನೋವು ನಲಿವು, ಬೇಸರ ಆತಂಕ ಎಲ್ಲವೂ ಸಹಜ. ಬಾಲ್ಯದ ಮುಗ್ಧತೆ ಕಳೆದು ಪ್ರೌಢಿಮೆಯು ಅರಿಯುವ ಸಮಯ. ಸಹಜವಾಗಿ ಎದುರಿಸುವಂತಹ ದೈಹಿಕ ಬದಲಾವಣೆ, ಮಾನಸಿಕ ಬದಲಾವಣೆಯನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು ಎಂದು ತಿಳಿಸಿದರು.

ಜೆಸಿಐ ಸಹ್ಯಾದ್ರಿ ಶಿವಮೊಗ್ಗದ ಅಧ್ಯಕ್ಷೆ ಸುಷ್ಮಾ ಹಿರೇಮಠ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸ್ವಚ್ಛತೆ, ಪೌಷ್ಟಿಕ ಆಹಾರ ಸೇವನೆಯ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ. ಸ್ವಸ್ಥ ಸದೃಢ ಸಮಾಜ ನಿರ್ಮಾಣವು ಸಾಧ್ಯ ಎಂಬ ನಿಟ್ಟಿನಲ್ಲಿ ವಾಸವಿ ಫೌಂಡೇಶನ್ ಮತ್ತು ಜೆಸಿಐ ಸಹ್ಯಾದ್ರಿ ಶಿವಮೊಗ್ಗ ಎರಡು ಸಂಸ್ಥೆಗಳು ಕೈಜೋಡಿಸಿ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಹದಿಹರೆಯದ ಸಮಸ್ಯೆಗಳ ಒಂದು ಕಥೆಯನ್ನು ರಚಿಸಿ ನಿರ್ದೇಶಿಸಿ ಆಟವನ್ನು ರಾಧಿಕಾ ಮಾಲತೇಶ್ ಸುಷ್ಮಾ ಅರವಿಂದ್ ನಡೆಸಿಕೊಟ್ಟರು. ವಾಸವಿ ಫೌಂಡೇಶನ್ ಅಧ್ಯಕ್ಷೆ ಸುಷ್ಮಾ ಅರವಿಂದ್ ಮತ್ತು ಜೆಸಿಐ ಸಹ್ಯಾದ್ರಿ ಶಿವಮೊಗ್ಗದ ಅಧ್ಯಕ್ಷೆ ಸುಷ್ಮಾ ಹಿರೇಮಠ ಉಪಸ್ಥಿತರಿದ್ದರು.

ಕ್ಯಾನ್ಸರನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯಿರಿ- ಡಾ.ದಿನೇಶ್

0

ಕ್ಯಾನ್ಸರ್ ಬಗ್ಗೆ ಪ್ರತಿಯೊಬ್ಬರು ಅರಿವು ಹೊಂದಬೇಕಿರುವುದು ಅತ್ಯಂತ ಅವಶ್ಯಕ. ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಗುಣಪಡಿಸಿಕೊಳ್ಳಲು ಪ್ರಯತ್ನ ನಡೆಸಬೇಕು ಎಂದು ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆಯ ಗೌರವ ಕಾರ್ಯದರ್ಶಿ ಡಾ. ದಿನೇಶ್ ಹೇಳಿದರು.

ಭಾರತೀಯ ರೆಡ್ ಕ್ರಾಸ್ ಶಿವಮೊಗ್ಗ ಜಿಲ್ಲಾ ಶಾಖೆ, ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ, ಚಂದ್ರಗಿರಿ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆ ಶಿವಮೊಗ್ಗ ಸಹಯೋಗದಲ್ಲಿ ಶಿವಮೊಗ್ಗ ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಸದಸ್ಯರುಗಳಿಗೆ ಸದಸ್ಯತ್ವದ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೆಡ್ ಕ್ರಾಸ್ ವತಿಯಿಂದ ನಿರಂತರವಾಗಿ ಆರೋಗ್ಯ ಜಾಗೃತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಮಕ್ಕಳು, ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಉಪಯುಕ್ತ ಅರಿವು ಕಾರ್ಯಾಗಾರಗಳನ್ನು ಸಹ ನಡೆಸಲಾಗುತ್ತಿದೆ. ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ರಾಮಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಹಿಳೆಯರು ಮನೆಯ ಜವಬ್ದಾರಿಯಲ್ಲಿ ತೊಡಗಿಸಿಕೊಂಡು ಅವರ ಆರೋಗ್ಯದ ಕಡೆ ಗಮನ ಹರಿಸುವುದಿಲ್ಲ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಯನ್ನು ಗಮನಿಸದೆ ಬದುಕಿನಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಆದ್ದರಿಂದ ಸದಸ್ಯರ ಶ್ರೇಯೋಭಿವೃದ್ದಿಗಾಗಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಗಿದೆ. ಮಹಿಳೆಯರು ಆರೋಗ್ಯವಾಗಿದ್ದಲ್ಲಿ ತಮ್ಮ ಮನೆಯ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಸಬಹುದಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಹಿಳೆಯರಿಗಾಗಿ ರೆಡ್ ಕ್ರಾಸ್ ವತಿಯಿಂದ ಉಚಿತ ಕ್ಯಾನ್ಸರ್ ಅರಿವು ಮೂಡಿಸುವ ಮತ್ತು ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.

ಸೌಂದರ್ಯ ಮತ್ತು ಚರ್ಮರೋಗ ತಜ್ಞರಿಂದ ಉಚಿತ ತಪಾಸಣೆಯನ್ನು ನಡೆಸಲಾಯಿತು.
ರೆಡ್ ಕ್ರಾಸ್ ವತಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಲಾಯಿತು. ಚಂದ್ರಗಿರಿ ಆಸ್ಪತ್ರೆಯ ಡಾ.ಜಯಚಂದ್ರ, ಮತ್ತು ಸ್ತ್ರೀ ರೋಗ ತಜ್ಞೆ ಡಾ. ಮಾಧುರ್ಯಾ ಅವರು ಮಹಿಳೆಯರು ಕ್ಯಾನ್ಸರ್ ಬರದಂತೆ ತಡಗಟ್ಟಲು ಮುನ್ನೆಚರಿಗೆ ಹೇಗೆ ಮಾಡಬೇಕು ಎನ್ನುವುದರ ಬಗ್ಗೆ ವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ದೇವೆಂದ್ರ, ವಿನೋದ್, ಕೆ.ಸಿ.ಬಸವರಾಜ್, ಶಾರದಾ, ರೇಖಾ ರಂಗನಾಥ್, ಭಾರತೀಯ ರೆಡ್ ಕ್ರಾಸ್ ಘಟಕದ ನಿರ್ದೇಶಕರು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು. ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಚುನಾವಣೆ ಬಹಿಷ್ಕರಿಸದೇ ಹಕ್ಕು ಚಲಾಯಿಸಿ ಹೋರಾಡಿ ಸೌಲಭ್ಯ ಪಡೆಯಿರಿ

0

ಕೊಪ್ಪ ತಾಲ್ಲೂಕಿನ ಹಾಡುಗಾರು ಗ್ರಾಮವು ಮೂಲಭೂತ ಸೌಲಭ್ಯದ ಹಕ್ಕನ್ನು ಹೋರಾಟದ ಮುಖಾಂತರ ಪಡೆಯಬೇಕೇ ಹೊರತು ಚುನಾವಣೆ ಬಹಿಷ್ಕರಿಸಿ ಸಂವಿಧಾನವನ್ನು ಉಲ್ಲಂಘಿಸಬಾರದು ಎಂದು ಜಿಲ್ಲಾ ಆಮ್‌ಆದ್ಮಿ ಅಧ್ಯಕ್ಷ ಕೆ.ಸುಂದರಗೌಡ ಹೇಳಿದ್ದಾರೆ.

ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಎಲ್ಲಾ ಪಕ್ಷಗಳ ಮುಖಂಡರುಗಳು ರಾಜೀನಾಮೆ ನೀಡಿ ಚುನಾವಣೆಯನ್ನು ಬಹಿಷ್ಕರಿಸಿರುವುದು ಸಂವಿಧಾನ ಬಾಹಿರವಾಗಿದ್ದು ಸೌಲಭ್ಯ ಪಡೆಯಲು ಪ್ರತಿಭಟನೆ ಮತ್ತು ಹೋರಾಟಗಳ ಮೂಲಕ ಮುಂದಾಗಬೇಕೆ ಹೊರತು ಚುನಾವಣೆ ಬಹಿಷ್ಕರಿಸಿ ಅಸಹಾಯಕತೆ ತೋರಿದಲ್ಲಿ ಗ್ರಾಮದಲ್ಲಿ ಅಭಿವೃದ್ದಿ ಕಾಣಲು ಸಾಧ್ಯವಿಲ್ಲ ಎಂದಿದ್ದಾರೆ.

ಹಾಡುಗಾರು ಗ್ರಾಮದಲ್ಲಿ ರಸ್ತೆ, ಸೇತುವೆ, ಬಿಪಿಎಲ್‌ಕಾರ್ಡ್, ಸಾಗುವಳಿ ಚೀಟಿ ಹಾಗೂ ಮನೆ ಇಲ್ಲದವರಿಗೆ ಮನೆ ನಿರ್ಮಾಣ ಸೇರಿದಂತೆ ಮೂಲಸೌಕರ್ಯವನ್ನು ಲಭಿಸುವವರೆಗೂ ಚುನಾವಣೆಯನ್ನು ಬಹಿಷ್ಕರಿಸಿ ಪ್ರತಿಜ್ಞೆ ಮಾಡಿರುವುದು ಸೂಕ್ತವಲ್ಲ. ಸೌಲಭ್ಯವನ್ನು ಪಡೆಯಲು ಹೋರಾಟಗಳ ಮೂಲಕ ಒತ್ತಾಯಿಸಲು ಎಎಪಿಯೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದ್ದಾರೆ.

ಗ್ರಾಮದಲ್ಲಿ ರಾಜಕೀಯ ನಾಯಕರನ್ನು ನಿಷೇಧಿಸಿರುವುದು ಸಂವಿಧಾನ ವಿರುದ್ಧ ಹಾಗೂ ಪ್ರಜಾ ಪ್ರಭುತ್ವಕ್ಕೆ ಮಾರಕ. ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ನೇತೃತ್ವದಲ್ಲಿ ಮೂಲಭೂತ ಸಮಸ್ಯೆಗಳ ಹೋರಾಡಬೇಕು. ಚುನಾವಣೆ ಬಹಿಷ್ಕರಿಸಿ ಹೋರಾಟ ಮುಂದುವರೆಸಿದ್ದಲ್ಲಿ ಸಮಸ್ಯೆ ಬಗೆಹರಿಯದು ಆ ನಿಟ್ಟಿನಲ್ಲಿ ಗ್ರಾಮಸ್ಥರ ಸೌಲಭ್ಯಗಳನ್ನು ಕೊಡಿಸಲು ಎಎಪಿ ಸಂಪೂರ್ಣವಾಗಿ ಬೆಂಬಲ ಸೂಚಿಸಲಿದೆ ಎಂದು ತಿಳಿದುಬಂದಿದೆ.

ಸಿಕ್ಕ ಅವಕಾಶ ಬಳಸಿ ಸಾಧನೆ ಮಾಡಿ- ಡಾ.ಧನಂಜಯ ಸರ್ಜಿ

0

ಜೀವನದಲ್ಲಿ ಯಾವಾಗಲೂ ಸಿಕ್ಕ ಅವಕಾಶವನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು
ಶಿವಮೊಗ್ಗ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ ಸಲಹೆ ನೀಡಿದರು.

ಚನ್ನಗಿರಿ ಪಟ್ಟಣದ ಚಿತ್ರದುರ್ಗ ರಸ್ತೆಯ ಆರ್‌ಎಚ್‌ಎಂ ಗ್ರ್ಯಾಂಡ್‌ ಹೋಟೆಲ್‌ ನಲ್ಲಿ ನಡೆದ ವಾಯ್‌ರ‍ಸ ಆಫ್‌ ನಮ್ಮ ಅಡಕೆ ನಾಡು ಗ್ರ್ಯಾಂಡ್‌ ಫಿನಾಲೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಮಕ್ಕಳ ಮನೋವಿಕಾಸಕ್ಕೆ, ಪ್ರತಿಭೆ ಅನಾವರಣಕ್ಕೆ ಪೂರಕವಾಗುತ್ತವೆ. ಈ ನಿಟ್ಟಿನಲ್ಲಿ ಪೋಷಕರಾದ ನಾವು ಮಕ್ಕಳ ಹೊಣೆಗಾರಿಕೆ ಅರಿತು ಅವರನ್ನು ಬೆಳೆಸಬೇಕಿದೆ. ಅಲ್ಲದೇ ಅವರಲ್ಲಿನ ನಕಾರಾತ್ಮಕ ಚಿಂತನೆಗಳನ್ನು ದೂರ ಮಾಡಬೇಕಿದೆ ಎಂದರು.

ಸಂಗೀತ ಮನಸ್ಸಿಗೆ ತೃಪ್ತಿಯನ್ನು ನೀಡುತ್ತದೆ. ಮಕ್ಕಳು ಹಾಡುವುದರಿಂದ ಮತ್ತು ಹಾಡನ್ನು ಕೇಳುವುದರಿಂದ ಮೆದುಳಲ್ಲಿ ಹೆಚ್ಚಿನ ಸಂಚಲನ ಮತ್ತು ಸಕ್ರೀಯತೆ ಉಂಟಾಗುವ ಮೂಲಕ ಶಾಂತತೆ ಮತ್ತು ಮೆಮೋರಿ ಪವರ್‌ ವೃದ್ಧಿಯಾಗುತ್ತದೆ ಎಂದು ಅಭಿಪಾಯಿಸಿದರು.

ಚನ್ನಗಿರಿ ಅಡಕೆಯ ನಾಡು, ರಾಜ್ಯದಲ್ಲಿ ಒಟ್ಟು ಮೂರು ಲಕ್ಷ ಹೆಕ್ಟೇರ್‌ ಅಡಕೆ ಬೆಳೆಯಲಾಗುತ್ತದೆ. ಶಿವಮೊಗ್ಗ , ಚಿಕ್ಕಮಗಳೂರು ಹಾಗೂ ದಾವಣಗೆರೆ ಮೊದಲು ಮೂರು ಸ್ಥಾನದಲ್ಲಿವೆ. ಚನ್ನಗಿರಿ ತಾಲೂಕಿನಲ್ಲಿ ಹೆಚ್ಚು ಅಡಕೆ ಬೆಳೆಯುವುದರಿಂದ ಆರ್ಥಿಕ ಉನ್ನತಿಯೂ ಕಾರಣವಾಗಿದೆ, ಇದರಿಂದಾಗಿ ಬಹುತೇಕರು ಸ್ಥಿತಿವಂತರಾಗಿದ್ದಾರೆ, ಇದು ದೇಶದ ಪ್ರಗತಿಗೂ ಕಾರಣವಾಗಿದೆ ಎಂದರು.

ಈ ಸಂದರ್ಭ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ಶಿವಮೊಗ್ಗ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ, ಡಿವೈಎಸ್‌ಪಿ ಡಾ.ಸಂತೋಷ್‌ , ಸದ್ಗುರು ಆಯುರ್ವೇದ ಕಂಪನಿಯ ಸಂಸ್ಥಾಪಕರಾದ ಪ್ರದೀಪ್‌, ದಾವಣಗೆರೆ ವಿಶ್ವ ವಿದ್ಯಾನಿಲಯದ ಸಿಂಡಿಕೇಟ್‌ ಸದಸ್ಯರಾದ ಮಾಡಾಳು ಮಲ್ಲಿಕಾರ್ಜುನ , ಗಾಯಕಿ ಸುರೇಖಾ ಹೆಗಡೆ, ಅಡಕೆ ನಾಡು ಗ್ರೂಪ್‌ನ ಸದಸ್ಯರಾದ ಆರ್‌.ಕೆ. ಕಿರಣ್‌ ರೇವಾಳ್‌, ಶಶಿ ಕಿರಣ್‌, ಗುರುಪ್ರಸಾದ್‌, ಕಿರಣ್‌ ಕೋರಿ, ಕೃಷ್ಣಮೂರ್ತಿ ಕಶ್ಯಪ್‌, ಕೀರ್ತಿ ಮತ್ತು ಮಧು ಹಾಜರಿದ್ದರು.

ಮನಸ್ಸಿನಿಂದ ಮನಸ್ಸಿಗೆ -07

0

ವಿಶ್ವದ ಮಹಾನ್ ದಾರ್ಶನಿಕರಲ್ಲಿ ಒಬ್ಬರಾದ ಜೀಸಸ್ ಕ್ರೈಸ್ಟ್ ಅವರನ್ನು ಕ್ರಿಸ್ ಮಸ್ ಸಮಯದಲ್ಲಿ ನೆನೆಯುತ್ತಾ…….

ನಿಮ್ಮ ಶತ್ರುಗಳನ್ನು ಪ್ರೀತಿಸಿ, ನಿಮ್ಮ ನೆರೆಹೊರೆಯವರನ್ನು ಪ್ರೀತಿಸಿ ಎಂದು ಶಾಂತಿಯ ಸಂದೇಶ ನೀಡಿದ ಮತ್ತು ವಿಶ್ವದಲ್ಲೇ ಅತಿಹೆಚ್ಚು ಅಭಿಮಾನಿಗಳನ್ನು, ಬೆಂಬಲಿಗರನ್ನು, ಹಿಂಬಾಲಕರನ್ನು, ಭಕ್ತರನ್ನು ಹೊಂದಿರುವ ಕ್ರಿಶ್ಚಿಯನ್ ಧರ್ಮದ ಹುಟ್ಟಿಗೆ ಕಾರಣರಾದ ಯೇಸು ಕ್ರಿಸ್ತ ಅನೇಕ ವಿಷಯಗಳಲ್ಲಿ ಇಂದಿಗೂ ಪ್ರಸ್ತುತರಾಗುತ್ತಾರೆ.

ಸೇವೆಯ ಮುಖಾಂತರ ಬದುಕಿನ ಸಾರ್ಥಕತೆಯನ್ನು ಕಾಣುವ ಒಂದು ಅಪೂರ್ವ ಚಿಂತನೆಯನ್ನು ಬಹಳ ಹಿಂದೆಯೇ ಪ್ರತಿಪಾದಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

” ಓ ದೇವರೇ, ಇವರು ಏನು ಮಾಡುತ್ತಿದ್ದಾರೆ ಎಂದು ಇವರಿಗೇ ತಿಳಿದಿಲ್ಲ. ದಯವಿಟ್ಟು ಇವರನ್ನು ಕ್ಷಮಿಸು “

ಸ್ವತಃ ತನ್ನನ್ನು ಚಿತ್ರಹಿಂಸೆ ಕೊಟ್ಟು ಶಿಲುಬೆಗೇರಿಸುತ್ತಿದ್ದ ಜನರಿಗಾಗಿ ಯೇಸು ಕ್ರಿಸ್ತ ಈ ರೀತಿಯಲ್ಲಿ ಪ್ರಾರ್ಥಿಸಿದರು…..

ಇಂದು ಅದೇ ವ್ಯಕ್ತಿ ವಿಶ್ವದ ಅತ್ಯಂತ ಹೆಚ್ಚು ಜನ ಆರಾಧಿಸುವ ದೇವರಾಗಿದ್ದಾರೆ‌. ಈಗ ಒಳಿತಿಗಾಗಿ ಜನ ಅವರನ್ನು ಪ್ರಾರ್ಥಿಸುತ್ತಿದ್ದಾರೆ.

ಇಡೀ ಜಗತ್ತಿನ ಸೃಷ್ಟಿಕರ್ತರು ನಾವೇ ಎಂದು ಎಲ್ಲಾ ದೇವರುಗಳು ಹೇಳಿಕೊಳ್ಳುತ್ತಾರೆ. ಆದರೆ ಹಿಂದೂ ಮುಸ್ಲಿಂ ಕ್ರಿಶ್ಚಿಯನ್‌ ಗಳೆಂದು ಸೃಷ್ಟಿಸಿದ್ದು ಯಾರು ಮತ್ತು ಏಕೆ ಎಂಬ ಪ್ರಶ್ನೆಗೆ ಮಾತ್ರ ನಾವೇ ಉತ್ತರ ಹುಡುಕಿಕೊಳ್ಳಬೇಕು….!!!

ವಿಶ್ವದಾದ್ಯಂತ ಈಗ ಬಹುತೇಕ ದೇಶಗಳಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ಹಿಂದೆ ಇದ್ದ ಯುದ್ಧಗಳ ಜಾಗವನ್ನು ಈಗ ಭಯೋತ್ಪಾದನೆ ಎಂಬ ಭೂತ ಆಕ್ರಮಿಸಿಕೊಂಡಿದೆ. ಮರೆಯಲ್ಲಿ ನಿಂತು ಮಾಯಾವಿಯಂತೆ ಜನರನ್ನು ಕೊಲ್ಲುತ್ತಾ ಸಾಗುತ್ತಿದೆ. ಅಮಾಯಕರ ನೆತ್ತರು ಹರಿಯುತ್ತಿದೆ.

ಇಂತಹ ಸಂದರ್ಭದಲ್ಲಿ ಜೀಸಸ್ ನೆನಪಾಗುತ್ತಾರೆ.
ಶತ್ರುಗಳನ್ನು ಪ್ರೀತಿಸಿ, ನೆರೆಹೊರೆಯವರನ್ನು ಪ್ರೀತಿಸಿ ಎಂಬ ಅಮೋಘ ಸಂದೇಶ ನೀಡಿದವರು ಯೇಸು.
ಆದರೆ ಈಗ ಪ್ರೀತಿಸುವುದು ಇರಲಿ, ಗೆಳೆಯರನ್ನು, ನೆರೆಹೊರೆಯವರನ್ನು ನಂಬಲೂ ಸಾಧ್ಯವಾಗದ ಸ್ಥಿತಿಗೆ ತಲುಪಿದ್ದೇವೆ…

ಧರ್ಮ ಬೆಳೆದಂತೆಲ್ಲಾ ಅದರ ಆಚರಣೆಯಲ್ಲಿ ಮೂಡನಂಬಿಕೆಗಳು, ಮತಾಂತರಗಳು, ವಿಭಾಗಗಳು ಕ್ರಿಶ್ಚಿಯನ್ ಧರ್ಮದಲ್ಲೂ ಬೆಳೆದು ಬಂದವು.‌ ಮತಾಂಧ ಜನರಿಂದ ಧಾರ್ಮಿಕ ಕಾರಣಗಳಿಗಾಗಿ ಅಪಾರ ಹಿಂಸೆ ಸಹ ನಡೆದಿದೆ. ಸೇವಾ ಹೆಸರಿನಲ್ಲಿ ವಿಶ್ವದಲ್ಲಿ ಮತಾಂತರ ಮಾಡುತ್ತಿರುವ ಬಹುದೊಡ್ಡ ಆರೋಪ ಸಹ ಕ್ರಿಶ್ಚಿಯನ್ ಧರ್ಮದ ಕೆಲವರ ಮೇಲಿದೆ. ಜೀಸಸ್ ಹೇಳಿದಂತೆ ಸೇವೆ ನಿಸ್ಪಕ್ಷಪಾತವಾಗಿ, ನಿಷ್ಕಲ್ಮಶವಾಗಿ, ಸ್ವಾರ್ಥರಹಿತವಾಗಿ, ಪ್ರತಿಫಲಾಪೇಕ್ಷೆ ಇಲ್ಲದೇ ಮಾಡಬೇಕು. ಆ ನಿಟ್ಟಿನಲ್ಲಿ ಕ್ರಿಶ್ಚಿಯನ್ ಧರ್ಮದ ಧಾರ್ಮಿಕ ನಾಯಕತ್ವ ಗಂಭೀರವಾಗಿ ಯೋಚಿಸಬೇಕಿದೆ.

ಹಾಗೆಯೇ ಅಲ್ಲಿನ ಮೂಡನಂಬಿಕೆಯನ್ನು ಸಹ ಹೋಗಲಾಡಿಸಲು ಪ್ರಯತ್ನಿಸಬೇಕಿದೆ.

ಆಧುನಿಕತೆ ಬೆಳೆದಂತೆಲ್ಲಾ ಕ್ರಿಶ್ಚಿಯನ್ ಧರ್ಮ ಸೇವಾ ಮನೋಭಾವವನ್ನು, ಸರಳತೆಯನ್ನು, ನಾಗರಿಕ ಪ್ರಜ್ಞೆಯನ್ನು, ಶಾಂತಿ ಸಹಕಾರವನ್ನು ಮೈಗೂಡಿಸಿಕೊಳ್ಳುತ್ತಾ ಸಾಗಿತು. ಮುಖ್ಯವಾಗಿ ಪಾಶ್ಚಾತ್ಯ ದೇಶಗಳ ಸಂಸ್ಕೃತಿಯನ್ನು ಈ ನಿಟ್ಟಿನಲ್ಲಿ ಗಮನಿಸಬಹುದು.

ಆಡಳಿತದಲ್ಲಿ ಧಮನಕಾರಿ ಧೋರಣೆ, ಯುದ್ಧ, ಆಕ್ರಮಣ ಇದ್ದರೂ ವ್ಯಕ್ತಿ ಸ್ವಾತಂತ್ರ್ಯ, ವಿಶಾಲ ಮನೋಭಾವ, ಮಹತ್ವಾಕಾಂಕ್ಷೆ, ಕ್ರಿಯಾತ್ಮಕತೆಯಿಂದ ಕ್ರಿಶ್ಚಿಯನ್ ಧರ್ಮ ಹೆಚ್ಚು ಜನಪ್ರಿಯವೂ ಸಹನೀಯವೂ ಆಗಿದೆ. ಅದಕ್ಕೆ ಕಾರಣ ಜೀಸಸ್ ಅವರ ಸರಳ ಭೋದನೆಗಳು ಮತ್ತು ಮಾನವೀಯ ಕಳಕಳಿಯ ವಿಚಾರ ಸರಣಿಗಳು.

ವಿಶ್ವದ ಎರಡು ಮಹಾಯುದ್ಧಗಳಲ್ಲಿ ಕ್ರಿಶ್ಚಿಯನ್ ಧರ್ಮದ ದೇಶಗಳದೇ ಪ್ರಮುಖ ಪಾತ್ರ, ಹಾಗೆಯೇ ಧರ್ಮ ಒಂದು ಅಫೀಮು ಎಂದು ಆಕ್ರೋಶ ಭುಗಿಲೆದ್ದು ಕ್ರಾಂತಿಕಾರಕ ಚಿಂತನೆ ರೂಪ ಪಡೆದದ್ದು ಕ್ರಿಶ್ಚಿಯನ್ ಧರ್ಮದಲ್ಲೇ..

ಮದರ ಥೆರೆಸಾ ಅವರಂತಹ ಮಹಾನ್ ಸೇವಾ ಸ್ಪೂರ್ತಿಯ ವ್ಯಕ್ತಿತ್ವದ ಹುಟ್ಟಿಗೆ ಜೀಸಸ್ ವಿಚಾರಗಳು ಕಾರಣವಾದುದು ಅತ್ಯಂತ ಮಹತ್ವದ ವಿಷಯ.

ಹೀಗೆ ತನ್ನ ‌ಚಿಂತನೆಗಳಿಂದಲೇ ಇಂದು ವಿಶ್ವದ ಜನಸಂಖ್ಯೆಯಲ್ಲಿ ಅತಿಹೆಚ್ಚು ಜನರನ್ನು ತನ್ನ ಪರಿಧಿಯೊಳಗೆ ಸೇರಿಸಿಕೊಂಡಿರುವ ಕ್ರಿಶ್ಚಿಯನ್ ಧರ್ಮ ಮತ್ತು ಬೈಬಲ್ ನ ಹುಟ್ಟಿಗೆ ಕಾರಣವಾದ ಯೇಸು ಕ್ರಿಸ್ತನನ್ನು ನೆನೆಯುತ್ತಾ….

ವಿಶ್ವ ಶಾಂತಿಗಾಗಿ ಜನರಲ್ಲಿ ಪ್ರಾರ್ಥಿಸುತ್ತಾ….

ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.

ವಿವೇಕಾನಂದ ಎಚ್. ಕೆ.
9844013068…

2022 ಭಾರತದ ಹಲವು ಮಹತ್ವದ ಹೆಜ್ಜೆಗಳ ವರ್ಷ-ಮೋದೀಜಿ ಮನ್ ಕಿ ಬಾತ್

0

2022 ರ ವರ್ಷವು ಅದ್ಭುತವಾಗಿದೆ, ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿದಾಗ ‘ಅಮೃತ್ ಕಾಲ’ ಪ್ರಾರಂಭವಾಯಿತು. ಭಾರತ ವೇಗವಾಗಿ ಪ್ರಗತಿ ಸಾಧಿಸಿದೆ ಮತ್ತು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಮಾಸಿಕ ರೇಡಿಯೋ ಕಾರ್ಯಕ್ರಮವಾದ ‘ಮನ್ ಕಿ ಬಾತ್’ನ 96ನೇ ಆವೃತ್ತಿಯಲ್ಲಿ ಮಾತನಾಡಿದ ಮೋದಿಯವರು, ಪ್ರಪಂಚದ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದ್ದು, ನಾವೂ ಎಚ್ಚರವಹಿಸಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಂದು ಹೇಳಿದ್ದಾರೆ.

220 ಕೋಟಿ ಲಸಿಕೆಗಳ ದಾಖಲೆಯನ್ನು ಸಾಧಿಸಿತು. ರಫ್ತುಗಳಲ್ಲಿ USD 400 ಶತಕೋಟಿ ಗಡಿ ದಾಟಿದೆ. ಕೇಂದ್ರ ಸರ್ಕಾರದ ಆತ್ಮನಿರ್ಭರ್ ಭಾರತ್ ಉಪಕ್ರಮದ ಬಗ್ಗೆ ಮಾತನಾಡಿ, ಐಎನ್‌ಎಸ್ ವಿಕ್ರಾಂತ್ ಉಡಾವಣೆಯನ್ನು ಶ್ಲಾಘಿಸಿದರು. ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆಯ ಕಾರ್ಯಾರಂಭವು ಭಾರತದ 75 ವರ್ಷಗಳ ಸ್ವಾತಂತ್ರ್ಯದ ‘ಅಮೃತಕಾಲ್’ ಸಮಯದಲ್ಲಿ ಒಂದು ಮಹತ್ವದ ಸಂದರ್ಭವಾಗಿದೆ ಮತ್ತು ಇದು ದೇಶದ ಆತ್ಮವಿಶ್ವಾಸ ಮತ್ತು ಪರಾಕ್ರಮವನ್ನು ಸೂಚಿಸುತ್ತದೆ ಎಂದರು.

ಈ ಸ್ವದೇಶಿ ವಿಮಾನವಾಹಕ ನೌಕೆಯು ದೇಶದ ತಾಂತ್ರಿಕ ಕುಶಾಗ್ರಮತಿ ಮತ್ತು ಎಂಜಿನಿಯರಿಂಗ್ ಕೌಶಲ್ಯಕ್ಕೆ ಪುರಾವೆಯಾಗಿದೆ. ವಿಮಾನವಾಹಕ ಯುದ್ಧನೌಕೆಯನ್ನು ಉತ್ಪಾದಿಸಲು ಭಾರತದ ಸ್ವಾವಲಂಬನೆಯ ಈ ಕಾರ್ಯವು ದೇಶದ ರಕ್ಷಣಾ ಸ್ವದೇಶೀಕರಣ ಕಾರ್ಯಕ್ರಮಗಳು ಮತ್ತು ‘ಮೇಕ್ ಇನ್ ಇಂಡಿಯಾ’ ಅಭಿಯಾನವನ್ನು ಬಲಪಡಿಸುತ್ತದೆ ಎಂದು ತಿಳಿಸಿದರು.