Tuesday, March 31, 2026
Tuesday, March 31, 2026
Home Blog Page 1349

ಹೊಟೆಲ್ ಕ್ಲಬ್ ರೆಸಾರ್ಟ್ ಗಳಲ್ಲಿ ಹೊಸವರ್ಷಾಚರಣೆ ಮಾರ್ಗಸೂಚಿ ಪಾಲಿಸಿ- ಮಿಥುನ್ ಕುಮಾರ್

0

28-12-2022 ರಂದು ಬೆಳಗ್ಗೆ 11:00 ಗಂಟೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗರವರು ಮುಂಬರುವ ಹೊಸ ವರ್ಷ ಆಚರಣೆಯ ಸಂಬಂಧ ಹೋಟೆಲ್, ಕ್ಲಬ್ ಮತ್ತು ರೆಸೋರ್ಟ್ ಮಾಲೀಕರು ಹಾಗೂ ವ್ಯವಸ್ಥಾಪಕರ ಸಭೆಯನ್ನು ನಡೆಸಿ, ಈ ಸೂಚನೆಗಳನ್ನು ನೀಡಿದರು.

1) ಸರ್ಕಾರದ ಆದೇಶದ ಅನ್ವಯ ಹೊಸ ವರ್ಷ ಆಚರಣೆಯನ್ನು ಬೆಳಗಿನ ಜಾವ 01:00 ಗಂಟೆಯ ಒಳಗಾಗಿ ಮುಕ್ತಾಯಗೊಳಿಸುವುದು.

2) ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸುವ ಮಕ್ಕಳು, ವೃದ್ಧರು ಮತ್ತು ಮಹಿಳೆಯರ ಸುರಕ್ಷತೆಯ ಕುರಿತು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು.

3) ಸಂಭ್ರಮಾಚರಣೆಯ ವೇಳೆ ಯಾವುದೇ ರೀತಿಯ ಮಾದಕ ವಸ್ತುಗಳನ್ನು ಬಳಸಬಾರದು.

4) ಮಧ್ಯ ಮಾರಾಟವನ್ನು ರಾತ್ರಿ 11:30 ರ ವರೆಗೆ ಮಾತ್ರ ಮಾಡುವುದು.

5) ಮಧ್ಯಪಾನ ಮಾಡಿ ವಾಹನವನ್ನು ಚಾಲನೆ ಮಾಡದೇ, ಮಧ್ಯಪಾನ ಮಾಡದೇ ಇರುವವರು ಚಾಲನೆ ಮಾಡುವುದು.

6) ನಿಗದಿ ಪಡಿಸಿದ ಶಬ್ದ ಮಿತಿಯನ್ನು ಮೀರಿ ಸೌಂಡ್ ಸಿಸ್ಟಂ ಗಳನ್ನು ಬಳಸುವಂತಿಲ್ಲ.

7) ಸಂಭ್ರಮಾಚರಣೆಗೆ ಬರುವ ಸಾರ್ವಜನಿಕರ ವಾಹನಗಳ ನಿಲುಗಡೆಗೆ ವ್ಯವಸ್ಥಿತವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡುವುದು.

8) ಗುಂಪನ್ನು ನಿಯಂತ್ರಿಸುವ ಸಂಬಂಧ ಒಂದಕ್ಕಿಂತ ಹೆಚ್ಚು ಪ್ರವೇಶ ದ್ವಾರಗಳನ್ನು ನಿರ್ಮಿಸುವುದು.

9) ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಬಳಸುವುದು.

10) 60 ವರ್ಷ ಮೇಲ್ಪಟ್ಟ ವೃದ್ಧರು, ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳು ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸದೇ ಇರುವುದು ಸೂಕ್ತವಾಗಿರುತ್ತದೆ.

11) ನೋ ಮಾಸ್ಕ್ ನೋ ಎಂಟ್ರಿ ಬೋರ್ಡ್ ಗಳನ್ನು ಸಾರ್ವಜನಿಕರವಾಗಿ ಎದ್ದು ಕಾಣುವ ರೀತಿಯಲ್ಲಿ ಹಾಕುವುದು.

12) ಹೊಸ ವರ್ಷ ಆಚರಣೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸಾರ್ವಜನಿಕರಿಗೂ ಕಡ್ಡಾಯವಾಗಿ ಥರ್ಮಲ್ ಸ್ರ್ಕೀನಿಂಗ್ ಗೆ ಒಳಪಡಿಸುವುದು.

13) ಯಾವುದೇ ತುರ್ತು ಸಂದರ್ಭದಲ್ಲಿ ಅಥವಾ ಸಹಾಯಕ್ಕಾಗಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ/ ಪೊಲೀಸ್ ಕಂಟ್ರೋಲ್ ರೂಂ ನಂಬರ್: 9480803300 / 08182-261413 ಅಥವಾ ತುರ್ತು ಸಹಾಯವಾಣಿ 112 ಗೆ ಕರೆ ಮಾಡುವುದು.

ಈ ಸಂದರ್ಭದಲ್ಲಿ ಡಿವೈಎಸ್.ಪಿ ಡಿಸಿಆರ್.ಬಿ ಮತ್ತು ಡಿವೈಎಸ್.ಪಿ ಶಿವಮೊಗ್ಗ ಉಪ ವಿಭಾಗ, ಪೊಲೀಸ್ ನಿರೀಕ್ಷಕರವರು ಹಾಜರಿದ್ದರು.

ನನಸಾಗುವ ಹಂತದಲ್ಲಿ ವಿಮಾನ ನಿಲ್ದಾಣ:ಜಿಲ್ಲಾ ಉದ್ಯಮಕ್ಕೆ ಸಹಕಾರಿ – ಗೋಪೀನಾಥ್

0

ಮಲೆನಾಡಿನ ಜನರ ಬಹುವರ್ಷಗಳ ಬೇಡಿಕೆಯಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಳ್ಳುತ್ತಿದೆ. ದಶಕಗಳ ಕನಸು ನನಸಾಗಲು ಕಾರಣರಾದ ಎಲ್ಲರಿಗೂ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಅಭಿನಂದನೆ ಸಲ್ಲಿಸಿದೆ.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಸೋಗಾನೆಯಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದ ಕೆಲಸಗಳನ್ನು ವೀಕ್ಷಿಸಿದರು. ಅತ್ಯಂತ ವೇಗಗತಿಯಲ್ಲಿ ಕೆಲಸ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ವಿಮಾಣ ನಿಲ್ದಾಣ ಶೀಘ್ರದಲ್ಲಿ ಆರಂಭ ಆಗುವುದರಿಂದ ಶಿವಮೊಗ್ಗ ಜಿಲ್ಲೆಯ ಉದ್ಯಮ, ಕೈಗಾರಿಕೆ, ಪ್ರವಾಸೋದ್ಯಮ, ಆರೋಗ್ಯ, ಶಿಕ್ಷಣ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಮೇಲೂ ಧನಾತ್ಮಕ ಪರಿಣಾಮ ಬೀರಲಿದೆ. ಅನೇಕ ರಾಜ್ಯ, ದೇಶಗಳೊಂದಿಗೆ ವ್ಯವಹಾರ ವೃದ್ಧಿಸಲು ಸಹಕಾರಿ ಆಗಲಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ಶಿವಮೊಗ್ಗ ವಿಮಾನ ನಿಲ್ದಾಣ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಳ್ಳುತ್ತಿದೆ.

ಉದ್ಯಮ ಹಾಗೂ ಕೈಗಾರಿಕಾ ವಲಯದಲ್ಲಿ ಮಹತ್ತರ ಅಭಿವೃದ್ಧಿಗೆ ಕಾರಣವಾಗಲಿದೆ ಎಂಬುದು ಬಹುತೇಕ ವಾಣಿಜ್ಯೋದ್ಯಮಿಗಳ ಅನಿಸಿಕೆಯಾಗಿದೆ. ಪ್ರಯಾಣಿಕರ ಸೌಲಭ್ಯದ ಜತೆಯಲ್ಲಿ ಕಾರ್ಗೋ ಸೇವೆಯನ್ನು ಅರಂಭಿಸುವ ಅವಶ್ಯಕತೆ ಇದೆ. ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಗಮನ ವಹಿಸಿ ಈಡೇರಿಸಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಯೋಜನೆ ಸಾಕಾರಗೊಳ್ಳುತ್ತಿದ್ದು, ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಕೊಡುಗೆ ಅಪಾರವಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೂ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಎಲ್ಲರ ಪರವಾಗಿ ಅಭಿನಂದನೆ ಸಲ್ಲಿಸುತ್ತದೆ ಎಂದು ತಿಳಿಸಿದರು.

ಮಾಜಿ ಅಧ್ಯಕ್ಷ ಟಿ.ಆರ್.ಅಶ್ವತ್ಥ್ ನಾರಾಯಣ ಶೆಟ್ಟಿ, ಡಿ.ಎಂ.ಶಂಕರಪ್ಪ, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಎಸ್.ಎಸ್.ಉದಯ್‌ಕುಮಾರ್, ಪ್ರದೀಪ್ ಎಲಿ, ಮರಿಸ್ವಾಮಿ, ರಮೇಶ್ ಹೆಗಡೆ, ಇಂಜಿನಿಯರ್ ನಿಲೇಶ್ ಹಾಜರಿದ್ದರು.

ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ಮಣಿಪುರಿ ಸಮರಕಲೆ ನೃತ್ಯೋತ್ಸವ

0

ಶಿವಮೊಗ್ಗದ ಸಹಚೇತನ ನಾಟ್ಯಾಲಯದ ವತಿಯಿಂದ ಡಿಸೆಂಬರ್ 30 ಹಾಗೂ ಜನವರಿ 1 ರಂದು ಕರ್ನಾಟಕ ಸಂಘದಲ್ಲಿ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಭಾರತೀಯ ಸಂಸ್ಕೃತಿಯ ದ್ಯೋತಕವೆನ್ನಲಾಗುವ ನೃತ್ಯ ಕಲೆಗಳು ಕಲಾವಿದರಿಗಷ್ಟೇ ಅಲ್ಲದೆ ಕಲಾಸ್ವಾದಕರಿಗೂ ಮೈಮನನವಿರೇಳಿಸುವ ವಿಶಿಷ್ಟವಾದ ಮಣಿಪುರಿ ಸಮರ ಕಲೆಗಳಾದ ಪೂಂಗ್ ಚೋಲೋಂ, ಕರತಾಲ್ ಚೋಲೋಮ್, ಸ್ಟಿಕ್ ಬ್ಯಾಲೆನ್ಸ್ ಹಾಗೂ ಬ್ಲೆಂಡ್ ಫೋಲ್ಡ್ಗಳನ್ನು ವಿಶೇಷವಾಗಿ ಕಲಾ ರಸಿಕರಿಗೆಂದೇ ನಾಟ್ಯಾರಾಧನಾ -11 ರ ರಾಷ್ಟ್ರೀಯ ನೃತ್ಯ ಮಹೋತ್ಸವದ ಉತ್ತರಾರ್ಧ ರೂಪದಲ್ಲಿ ನೆರವೇರುತ್ತಿದೆ. ಈ ನರ್ತನ ಕಲೆಯನ್ನು ಮಣಿಪುರ ರಾಜ್ಯದ ಮೂಲ ಕಲಾವಿದರೇ ಶಿವಮೊಗ್ಗೆಗೆ ಆಗಮಿಸಿ ಪ್ರದರ್ಶಿಸುತ್ತಿರುವುದು ವಿಶೇಷ.

ಮಣಿಪುರ ರಾಜ್ಯದ ಲೋಯಲಕ್ಪ ಮಣಿಪುರಿ ಡಾನ್ಸ್ ಗ್ರೂಪ್‌ನ ಚನ್ನಂಬ ಪ್ರದೀಪ್ ಸಿಂಗ್‌ರವರು ತಮ್ಮ ತಂಡದೊಂದಿಗೆ ಇದನ್ನು ಪ್ರಸ್ತುತಪಡಿಸುತ್ತಿದ್ದಾರೆ. ಡಿಸೆಂಬರ್ 30 ಶುಕ್ರವಾರ ಸಂಜೆ 6ಗಂಟೆಗೆ ಸರಿಯಾಗಿ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಈ ಕಲೆಯು ಪ್ರದರ್ಶನಗೊಳ್ಳಲಿದೆ. ಇದರ ಉದ್ಘಾಟನೆಯನೆಯನ್ನು ಶಿವಮೊಗ್ಗೆಯ ಅಪರ ಜಿಲ್ಲಾಧಿಕಾರಿಗಳಾದ ಡಾ. ನಾಗೇಂದ್ರ ಎಫ್. ಹೊನ್ನಳ್ಳಿ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮಾನ್ಯ ವಲಯ ಜಂಟಿ ನಿರ್ದೇಶಕರಾದ ಶ್ರೀ ಅಶೋಕ್ ಎನ್. ಛಲವಾದಿ, ಸಹಾಯಕ ನಿರ್ದೇಶಕರಾದ ಶ್ರೀ ಉಮೇಶ್ ಹಾಲಾಡಿ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರಾದ ಪ್ರಭಾಕರ ಪಿ. (ಪ್ರಭು) ಭಾಗವಹಿಸಲಿದ್ದಾರೆ.

ಜನವರಿ 1 ಭಾನುವಾರದಂದು ಭಾರತೀಯಂ 12 ಕಾರ್ಯಕ್ರಮದಲ್ಲಿ ಹಿಂದುಳಿದ ಬಡಾವಣೆಯ ಹಾಗೂ ಆಯ್ದ ಸರ್ಕಾರಿ ಶಾಲಾ ಮಕ್ಕಳಿಂದ ದೇಶಭಕ್ತಿಗೀತೆಗಳಿಗೆ ನೃತ್ಯ ಪ್ರದರ್ಶನಗೊಳ್ಳಲಿದೆ. ಸುಮಾರು 5 ಬಡಾವಣೆಯ 130 ಮಂದಿ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಎಲೆಮರೆಕಾಯಿಯಂತೆ ಅವಿರತವಾಗಿ ಸೇವೆಗೈಯುತ್ತಿರುವ ಇಬ್ಬರು ಸಮಾಜ ಮುಖಿ ಜೀವಿಗಳಿಗೆ ಹಾಗೂ ಒಂದು ಸಂಸ್ಥೆಗೆ ಹಿಂದೂ ಸೇವಾ ಪ್ರತಿಷ್ಠಾನದ ಶ್ರೀ ಅಜಿತ್ ಕುಮಾರ್‌ರವರ ಹೆಸರಿನ ಅಡಿಯಲ್ಲಿ ಸೇವಾ ದಿನದ ಅಂಗವಾಗಿ ಅಜಿತಶ್ರೀ ಪುರಸ್ಕಾರ್-2022 ನೀಡಿ ಗೌರವಿಸಲಾಗುತ್ತಿದೆ. ಈ ಬಾರಿಯ ಪುರಸ್ಕಾರವನ್ನು ಸಮಾಜ ಸೇವಕರಾದ ಶ್ರೀ ಕೊಡಕ್ಕಲ್ ಶಿವಪ್ರಸಾದ್, ಯೋಗಾಚಾರ್ಯರಾದ ಶ್ರೀನಿವಾಸ ಮೂರ್ತಿ ಹಾಗೂ ಆರೋಗ್ಯ ಸೇವಾ ಸಂಸ್ಥೆಯಾದ ಗುಡ್‌ಲಕ್ ಆರೈಕೆ ಕೇಂದ್ರಕ್ಕೆ ನೀಡಲಾಗುತ್ತಿದೆ. ಕಳೆದ 11 ವರ್ಷದಲ್ಲಿ 22ಮಂದಿ ಈ ಪ್ರಶಸ್ತಿಗೆ ಭಾಜನರಾಗಿದ್ದು ಇಂದಿಗೂ ತಮ್ಮ ಸೇವಾ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಈ ಕಾರ್ಯಕ್ರಮದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನವನ್ನು ಸನ್ಮಾನ್ಯ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಿವಮೊಗ್ಗ ನಗರದ ಶಾಸಕರಾದ ಕೆ. ಎಸ್. ಈಶ್ವರಪ್ಪನವರು ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕರಾದ ಶ್ರೀ ಡಿ.ಎಸ್. ಅರುಣ್, ಕನ್ನಡ ಸಂಸ್ಕೃತಿ ಇಲಾಖೆಯ ಮಾನ್ಯ ವಲಯ ಜಂಟಿ ನಿರ್ದೇಶಕರಾದ ಶ್ರೀ ಅಶೋಕ್ ಎನ್. ಛಲವಾದಿ, ಸಹಾಯಕ ನಿರ್ದೇಶಕರಾದ ಶ್ರೀ ಉಮೇಶ್ ಹಾಲಾಡಿ ಭಾಗವಹಿಸಲಿದ್ದಾರೆ. ಈ ಎರಡೂ ಕಾರ್ಯಕ್ರಮಕ್ಕೆ ಶಿವಮೊಗ್ಗೆಯ ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರವಿದೆ.
ಈ ಎರಡೂ ಕಾರ್ಯಕ್ರಮಗಳು ನಗರದ ಕರ್ನಾಟಕ ಸಂಘದಲ್ಲಿ ಸಂಜೆ 6ಗಂಟೆಗೆ ಸರಿಯಾಗಿ ನೆರವೇರಲಿದ್ದು ಆಡಳಿತ ಪಕ್ಷದ ನಾಯಕರು ಹಾಗೂ ಸಹಚೇತನ ನಾಟ್ಯಾಲಯದ ಗೌರವಾಧ್ಯಕ್ಷರು ಆದ ಎಸ್. ಎನ್. ಚನ್ನಬಸಪ್ಪ (ಚನ್ನಿ) ಹಾಗೂ ನೃತ್ಯ ಗುರು ಸಹನಾ ಚೇತನ್ ಉಪಸ್ಥಿತರಿರಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಕಲಾರಸಿಕರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕೆಂದು ಎಸ್. ಎನ್. ಚನ್ನಬಸಪ್ಪ (ಚನ್ನಿ) ಕೋರಿದ್ದಾರೆ

ಮೌನತಾಳದೇ ಮಾತಾಡಿ,ಹಕ್ಕು ಸಮಾನತೆ ಸಾಧಿಸಿ – ರಘುಕುಮಾರ್

0

ನಾಗರೀಕರು ಮಾನವ ಹಕ್ಕುಗಳಿಗೆ ಹೋರಾಡುವ ಸಲುವಾಗಿ ಬಾಯಿಗೆ ಹಾಕಿಕೊಂಡಿರುವ ಬೀಗವನ್ನು ತೆಗೆದರೆ ಮಾತ್ರ ಹಕ್ಕುಗಳ ಸಮಾನತೆ, ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ರಘುಕುಮಾರ್ ಅವರು ಹೇಳಿದರು.

ಚಿಕ್ಕಮಗಳೂರು ತಾಲ್ಲೂಕಿನ ಬ್ಯಾಗದಹಳ್ಳಿ ಗ್ರಾಮದ ಸ.ಕಿ.ಪ್ರಾ.ಶಾಲೆಯಲ್ಲಿ ಸಮಾನ ಪತ್ತಿನ ಸೌಹಾರ್ದ ಸಹಕಾರ ನಿಯಮಿತ ಸಹಯೋಗದೊಂದಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿಯ 2ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಅಧಿಕಾರಿ ಹಾಗೂ ರಾಜಕಾರಣಿಗಳು ಮಾನವ ಹಕ್ಕುಗಳ ಅರಿವಿಲ್ಲದ ಶೋಷಿತ ಸಮುದಾಯವನ್ನು ತುಳಿಯುತ್ತಾ ಬಂದಿದೆ. ಇವುಗಳ ವಿರುದ್ಧ ಹೋರಾಡಲು ಪ್ರತಿಯೊಬ್ಬ ನಾಗರೀಕರು ಹಕ್ಕುಗಳ ಅರಿವು ಹೊಂದುವುದರ ಜೊತೆಗೆ ಸೂಕ್ತ ದಾಖಲಾತಿ ಒದಗಿಸಿಕೊಂಡು ಕಿರುಕುಳ ನೀಡುವ ಅಧಿಕಾರಿಗಳು ಹಾಗೂ ಇತರರ ವಿರುದ್ಧ ಮೊಖದ್ದಮೆ ದಾಖಲಿಸಬಹುದು ಎಂದರು.

ಪ್ರಸ್ತುತ ಕಾಲಘಟ್ಟದಲ್ಲಿ ನಾಗರೀಕರಾಗಿ ಬದುಕಲು ಮಾನವನ ಹಕ್ಕುಗಳು ಅತಿಮುಖ್ಯವಾಗಿದೆ. ಪ್ರಜಾ ಪ್ರಭುತ್ವದ ಜೀವಂತಿಕೆ ಇರುವುದೇ ನಾಗರೀಕ ಸಮಾಜದ ಸ್ವಾತಂತ್ರ್ಯ ಬದುಕಿನಿಂದ, ಹಾಗಾಗಿ ಸಂವಿಧಾನ ಹಾಗೂ ಕಾನೂನು ನೀಡಿರುವ ಮಾನವ ಹಕ್ಕುಗಳನ್ನು ಬೆಂಬಲಿಸಿ ಬದುಕಬೇಕಾಗಿದೆ ಎಂದರು.
ಸಮಿತಿ ರಾಷ್ಟ್ರೀಯ ಗೌರವಾಧ್ಯಕ್ಷ ರಮಾನಂದ್ ನಾಯಕ್ ಮಾತನಾಡಿ ಸಮಾಜದಲ್ಲಿ ಪೊಲೀಸ್, ರಾಜಕಾರಣಿ ಹಾಗೂ ಸರ್ಕಾರಿ ನೌಕರರುಗಳು ಸೂಕ್ತ ಸಮಯದಲ್ಲಿ ಮಾನವನ ಹಕ್ಕುಗಳಿಗೆ ನ್ಯಾಯಬದ್ಧ ವಾಗಿ ಕಾರ್ಯನಿರ್ವಹಿಸಿದ್ದಲ್ಲಿ ಸಾರ್ವಜನಿಕರಿಗೆ ಎಂದಿಗೂ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು.

ಆ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಮಾನವ ಹಕ್ಕುಗಳ ಸಮಿತಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ರಾಜ್ಯದ 28 ಜಿಲ್ಲೆ ಹಾಗೂ 5 ಹೊರರಾಜ್ಯಗಳಲ್ಲಿ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಅನ್ಯಾಯ ಗೊಂಡವರಿಗೆ ನ್ಯಾಯ ಒದಗಿಸುವಲ್ಲಿ ಸಮಿತಿಯು ಕಾರ್ಯನಿರ್ವಹಿಸುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿ ಜಿಲ್ಲಾಧ್ಯಕ್ಷ ಎಂ.ರಾಜೇಶ್ ಮನುಷ್ಯನು ಲಕ್ಷಣವಂತನಾಗುವ ಮೊದಲು ಮಾನವ ಹಕ್ಕುಗಳ ಅರಿವು ಹೊಂದಿರಬೇಕು. ಇದರಿಂದ ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಹೋರಾಡುವ ಶಕ್ತನಾಗುತ್ತೇನೆ ಎಂದು ತಿಳಿಸಿದರು.

ಸಮಾನ ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ.ದೇವರಾಜ್ ಮಾತನಾಡಿ ವ್ಯಕ್ತಿಯ ಸ್ವಾತಂತ್ರ್ಯವನ್ನು ಗೌರವಿಸಿ ಬದುಕುವುದೇ ಮಾನವ ಹಕ್ಕುಗಳನ್ನು ಪಾಲನೆ ಮಾಡಿದಂತೆ. ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರವಾಗಿ ಜೀವಿಸುವ ಹಕ್ಕನ್ನು ಪಡೆದಿದ್ದು ಅವುಗಳ ರಕ್ಷಣೆ ಮಾಡುವ ಕಾರಣಕ್ಕಾಗಿ ಪ್ರತಿ ವರ್ಷವು ಡಿ.10 ರಂದು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಗೀತೆಗಳನ್ನು ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ,ಮಕ್ಕಳಿಗೆ ಸ್ಕೂಲ್ ಬ್ಯಾಗ್, ಸೂಟ್, ಸಮವಸ್ತç ಸೇರಿದಂತೆ ಅನೇಕ ಪರಿಕರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಮಾನ ಪತ್ತಿನ ನಿರ್ದೇಶಕರಾದ ಎಂ.ಎ.ರವಿಕುಮಾರ್, ಚೇತನ್ ಜಿ ನಾಯಕ್, ಕೆ.ಎನ್.ದೊಡ್ಡೇಗೌಡ, ಟಿ.ಎಂ.ದೇವಿಕಾ, ಹೆಚ್.ಎಂ.ನೀಲಕಂಠಪ್ಪ, ಸಿಇಓ ಬಿ.ವೈ.ವೆಂಕಟೇಶ್, ಸಮಾಜ ಸೇವಕ ಮಣಿವೇಲು, ಜಿಲ್ಲಾ ಸಮಿತಿಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀಮತಿ ವಿನುತಾ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಶಾಂತಿ ಫರ್ನಾಂಡೀಸ್, ನಗರ ಅಧ್ಯಕ್ಷೆ ಸಮೀಮ ಬಾನು, ತಾಲ್ಲೂಕು ಅಧ್ಯಕ್ಷ ರಾಜೇಶ್, ಉಪಾಧ್ಯಕ್ಷ ವಿಜಯ್ ಕುಮಾರ್, ತರೀಕೆರೆ ಅಧ್ಯಕ್ಷ ಸೈಯದ್, ಗ್ರಾ.ಪಂ. ಉಪಾಧ್ಯಕ್ಷೆ ಕಮಲ ಸೋಮಶೇಖರ್, ಸದಸ್ಯೆ ಶಿಲ್ಪಾ, ಶಾಲೆಯ ಮುಖ್ಯೋಪಾಧ್ಯಾಯ ನಾರಾಯಣಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮನಸ್ಸಿನಿಂದ ಮನಸ್ದಿಗೆ,- 7

0

ಕುಪ್ಪಳ್ಳಿಯಲ್ಲಿ ಹುಟ್ಟಿ – ಮೈಸೂರಿನಲ್ಲಿ ಬೆಳೆದು – ಕರ್ನಾಟಕದಲ್ಲಿ ಪಸರಿಸಿ – ಸಾಹಿತ್ಯದಲ್ಲಿ ರಸ ಋಷಿಯಾಗಿ – ಕವಿ ಶೈಲ ದಲ್ಲಿ ಲೀನರಾದ ರಾಷ್ಟ್ರ ಕವಿ ಕುವೆಂಪು ಅವರ ಜನುಮ ದಿನದ ಶುಭಾಶಯಗಳನ್ನು ಕೋರುತ್ತಾ ( ಡಿಸೆಂಬರ್ – 29 ).

ಕನ್ನಡ ಸಾಹಿತ್ಯ ಲೋಕದಲ್ಲಿ, ಇತಿಹಾಸದ ದಿಗ್ಗಜರ ಸಾಲಿನಲ್ಲಿ, ಮೇರು ಪರ್ವತದಂತೆ ಕಂಗೊಳಿಸುತ್ತಿರುವ ವ್ಯಕ್ತಿತ್ವ ಕುವೆಂಪು ಅವರದು.

ಸಾಹಿತ್ಯ ಎಂದರೇನು ? ಸಾಹಿತಿ ಎಂದರೆ ಯಾರು ?
ಅಕ್ಷರಗಳ ಮಾಂತ್ರಿಕ ಶಕ್ತಿ ಹೇಗಿರುತ್ತದೆ ? ಬರಹಗಳಲ್ಲಿ ಬದುಕಿನ ಸಂದೇಶ ಹೇಗೆ ನೀಡುವುದು ? ಸಾಹಿತ್ಯದ ವಿವಿಧ ಪ್ರಕಾರಗಳ ಮೂಲಕ ಸಾಮಾಜಿಕ ಸಾಂಸ್ಕೃತಿಕ ಪ್ರಭಾವ ಹೇಗೆ ಬೀರುತ್ತದೆ ?
ಮುಂತಾದ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಕುವೆಂಪು ಅವರನ್ನು ಹೆಸರಿಸಬಹುದು.

ಕನ್ನಡ ಭಾಷೆಯನ್ನು ವಿಸ್ತಾರ ಗೊಳಿಸುವಲ್ಲಿ, ಕನ್ನಡ ‌ಸಾಹಿತ್ಯದ ಓದುಗರ ಚಿಂತನೆಗಳನ್ನು ವಿಶಾಲಕ್ಕೆ ಕೊಂಡೊಯ್ಯುವಲ್ಲಿ, ಕರ್ನಾಟಕದ ಕೀರ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವಲ್ಲಿ, ಸಾಮಾನ್ಯ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿ ಕುವೆಂಪು ಅವರ ಕೊಡುಗೆ ಸಾಕಷ್ಟಿದೆ.

ಮಂತ್ರ ಮಾಂಗಲ್ಯ ಎಂಬ ಸರಳ ವಿವಾಹ ಪದ್ದತಿಯನ್ನು ಪರಿಚಯಿಸುವಲ್ಲಿ ಮತ್ತು ವಿಶ್ವ ಮಾನವ ಪ್ರಜ್ಞೆ ಜಾಗೃತಗೊಳಿಸುವಲ್ಲಿ ಕುವೆಂಪು ಅವರ ಸಾಹಿತ್ಯ ಶ್ರೇಷ್ಠತೆಯನ್ನು ಗುರುತಿಸಬಹುದು.

ಈ ಸಂದರ್ಭದಲ್ಲಿ, ಬರವಣಿಗೆ ಸಾಹಿತ್ಯವಾಗಿ ಬೆಳವಣಿಗೆ ಹೊಂದುವ ಪ್ರಕ್ರಿಯೆ ಗುರುತಿಸುವ ಒಂದು ಸಣ್ಣ ಪ್ರಯತ್ನ……

ಸಾಹಿತ್ಯ ಎಂದರೇನು ?

ಅಕ್ಷರಗಳೇ ? ಪದಗಳೇ ? ವಾಕ್ಯಗಳೇ ? ನಂಬಿಕೆಗಳೇ ? ಭಾವನೆಗಳೇ ? ಅನುಭವಗಳೇ ? ವ್ಯಾಕರಣವೇ ?ಛಂಧಸ್ಸೇ ? ಪ್ರಾಸವೇ ? ರಾಜಕೀಯವೇ ? ಸಾಮಾಜಿಕವೇ ? ಶಿಕ್ಷಣವೇ ? ಆಧ್ಯಾತ್ಮಿಕವೇ ? ಭಕ್ತಿಯೇ ? ವೈಚಾರಿಕತೆಯೇ ? ಕಲ್ಪನೆಯೇ ? ಪ್ರೀತಿಯೇ ?
ದ್ವೇಷವೇ ? ಅಸೂಯೆಯೇ ? ಇತಿಹಾಸವೇ ? ವರ್ತಮಾನವೇ ? ಭವಿಷ್ಯವೇ ? ಭ್ರಮೆಯೇ ?
ವಾಸ್ತವವೇ ? ಸ್ವಾಭಾವಿಕವೇ ? ಬರೆದದ್ದೆಲ್ಲವೂ ? ಗೀಚಿದ್ದೆಲ್ಲವೂ ? ಕಂಡಿದ್ದೆಲ್ಲವೂ ? ನೀತಿಗಳೇ ?
ನಿಯಮಗಳೇ ? ಸ್ವಚ್ಚಂದವೇ ? ಸರಳವೇ ? ಸಂಕೀರ್ಣವೇ ? ಸಂಘರ್ಷವೇ ? ಮಾತುಗಳೇ ?
ಮೌನವೇ ? ಶಬ್ದವೇ ? ಸಂಬಂಧಗಳೇ ? ಸಂಸ್ಕಾರಗಳೇ ?
ಶಾಸ್ತ್ರಗಳೇ ? ಕವಿತೆಯೇ ? ಕಥೆಯೇ ? ಕಾದಂಬರಿಯೇ ?
ನವರಸಗಳ ಪ್ರದರ್ಶನವೇ ? ಅರಿಷಡ್ವರ್ಗಗಳ ಅರಿವಿನ ವ್ಯಕ್ತಪಡಿಸುವಿಕೆಯೇ ? ಪಂಚೇದ್ರಿಯಗಳ ಸ್ಪರ್ಶ ಗ್ರಹಿಕೆಯೇ ?…

ಸಾಹಿತ್ಯವೆಂಬುದು…

ಭಾಷೆಯ ಒಡಲು, ಭಾವನೆಗಳ ಕಡಲು, ಅಕ್ಷರಗಳ ಮಡಿಲು, ಕಲ್ಪನಾ ಲೋಕದ ಸವಾಲು, ಕ್ರಿಯಾತ್ಮಕತೆಯ ಒಲವು, ಮನುಷ್ಯನ ನಿಲುವು, ಪ್ರಾಸಗಳ ಚೆಲುವು, ವ್ಯಾಕರಣದ ತಿಳಿವು, ‌ಛಂದಸ್ಸಿನ ಅರಿವು, ಮನಸ್ಸುಗಳ ಹರಿವು, ಜ್ಞಾನದ ಸುಳಿವು, ಜೀವಂತಿಕೆಯ ಕುರುಹು…

ಈ ಎಲ್ಲದರ ಸಮ್ಮಿಲನ…

ಅದೇ ಸಾಹಿತ್ಯದ ಸಂಕಲನ…
ನಮ್ಮೆಲ್ಲರ ಶುಭ ಮಿಲನ…

ಹಾಗೆಯೇ ಸಾಹಿತ್ಯದ ಶ್ರೇಷ್ಠತೆ ಎಲ್ಲಿ ? ಹೇಗೆ ?…

ನೋವು ಮತ್ತು ನೊಬೆಲ್ ಸಾಹಿತ್ಯ ಪ್ರಶಸ್ತಿ…

ವಿಶ್ವ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಎಂದು ನೊಬೆಲ್ ಪರಿಗಣಿಸಲ್ಪಟ್ಟಿದೆ………

ಹೆಚ್ಚು ಕಡಿಮೆ ಇಲ್ಲಿಯವರೆಗೂ ತನ್ನ ಮೂಲ ಆಶಯದ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದೆ…
( ಎಂದಿನಂತೆ ಒಂದಷ್ಟು ವಿವಾದ – ಅಸಮಾಧಾನ ಇದ್ದೇ ಇರುತ್ತದೆ )

ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಕೃತಿಗಳ ಸಾರಾಂಶಗಳನ್ನು ಓದುತ್ತಿರುವಾಗ ಗಮನಸೆಳೆಯುವ ಅಂಶವೆಂದರೆ ಬಹುತೇಕ ರಚನೆಗಳು ಅಂದರೆ ಶೇಕಡಾ 90% ಬರಹಗಳು ಶೋಷಣೆಯ, ಬಡತನದ, ಮೌಡ್ಯದ, ಅರಾಜಕತೆಯ, ದೌರ್ಜನ್ಯದ, ವ್ಯವಸ್ಥೆಯ ವಿರುದ್ಧದ, ಬದುಕಿನ ತಳಮಳಗಳ, ಅಸಹಾಯಕತೆಯ ವಿಷಯಗಳೇ ಕಂಡುಬರುತ್ತವೆ. ರಮ್ಯತೆಯ, ಆಧ್ಯಾತ್ಮದ, ಪ್ರೀತಿ ಪ್ರೇಮದ, ಪ್ರಾಕೃತಿಕ ಸೌಂದರ್ಯದ, ವೈಚಾರಿಕತೆಯ, ಕೌಟುಂಬಿಕ ಸಂಬಂಧಗಳ ವಿಷಯ ತುಂಬಾ ಕಡಿಮೆ ಇದೆ.

ಏಕೆ, ಈ ಪ್ರಶಸ್ತಿ ಪುರಸ್ಕೃತ ಸಾಹಿತ್ಯವು ಹೆಚ್ಚಾಗಿ ನೋವನ್ನೇ ಅವಲಂಬಿಸಿದೆ ?

ಇಡೀ ವಿಶ್ವದಲ್ಲೇ ಅತಿಹೆಚ್ಚು ಪ್ರಸಾರ, ಜನಪ್ರಿಯತೆ, ಓದುಗರು, ಆರಾಧಕರು, ಅಭಿಮಾನಿಗಳು, ಅನುಯಾಯಿಗಳು ಇರುವುದು ಧಾರ್ಮಿಕ ಸಾಹಿತ್ಯಕ್ಕೆ…

ಅತಿಹೆಚ್ಚು ಬರೆಯಲ್ಪಡುವುದು ಪ್ರೀತಿ ಪ್ರೇಮಗಳಿಗೆ ಸಂಬಂಧಿಸಿದ ಸಾಹಿತ್ಯ. ಅದರಲ್ಲೂ ಯುವ ಬರಹಗಾರರ ನೆಚ್ಚಿನ ವಿಷಯವಿದು.

ಸಾಹಸ, ಶೃಂಗಾರ, ಹಾಸ್ಯ, ವಿಜ್ಞಾನ ಮುಂತಾದ ಸಾಹಿತ್ಯಗಳು ವಿಶೇಷವಾಗಿ ಅಲ್ಪ ಪ್ರಮಾಣದಲ್ಲಿ ಗುರುತಿಸಲ್ಪಡುತ್ತದೆ.

ಆದರೆ,
ನೋವಿನ ಸಾಹಿತ್ಯ ಬಹುತೇಕ ಶ್ರೇಷ್ಠ ಸಾಹಿತ್ಯವಾಗಿ ಹೊರಹೊಮ್ಮುತ್ತದೆ – ಕಾಡುತ್ತದೆ – ಪ್ರಶಸ್ತಿ ಪಡೆಯುತ್ತದೆ. ನೋವು ಪ್ರೀತಿಯಲ್ಲಿ ಇರಬಹುದು, ಯುದ್ದದಲ್ಲಿ ಇರಬಹುದು, ಪ್ರಕೃತಿಯ ನಾಶದಲ್ಲಿ ಇರಬಹುದು, ನೋವಿನ ‌ಅಂತರಾಳ ಎಲ್ಲರನ್ನೂ ತಟ್ಟುತ್ತದೆ.

ನೋವಿನ ತೀವ್ರತೆ ಅಳೆಯುವ ಯಾವುದೇ ಮಾಪನ ಇಲ್ಲ ನಿಜ. ನೋವು ಖಾಸಗಿಯಾಗಿರಬಹುದು, ಸಾಮೂಹಿಕವಾಗಿರಬಹುದು, ವೈಯಕ್ತಿಕವಾಗಿರಬಹುದು, ಸಾರ್ವಜನಿಕವಾಗಿರಬಹುದು. ಅದು ವ್ಯಕ್ತಿಯ ಮನಸ್ಸಿನ ಮೇಲೆ ಬೀರುವ ಪರಿಣಾಮಗಳ ಆಧಾರದಲ್ಲಿ ನಿರ್ಧರಿಸಲ್ಪಡುತ್ತದೆ. ಅದನ್ನು ಸ್ವೀಕರಿಸುವ ವ್ಯಕ್ತಿಯ ಮನಸ್ಥಿತಿಯ ಮೇಲೆ ಅವಲಂಭಿಸಿರುತ್ತದೆ. ಆದರೆ ಅದರಿಂದ ಮೂಡುವ ಭಾವನೆಗಳು ಕಲೆ ಸಂಗೀತ ಸಾಹಿತ್ಯ ಮುಂತಾದ ಪ್ರಕಾರಗಳಲ್ಲಿ ಪ್ರಕಟವಾದಾಗ ಓದುವವರು ನೋಡುವವರು ಕೇಳುವವರು ಭಾವ ತೀವ್ರತೆಗೆ ಒಳಗಾಗುತ್ತಾರೆ.

ಮನುಷ್ಯನ ವ್ಯಕ್ತಿತ್ವದಲ್ಲಿ ಆತನ ಜೀವಿತ ಕಾಲದಲ್ಲಿ ಅನೇಕ ಘಟನೆಗಳು ಸಂಭವಿಸಿ ಎಲ್ಲಾ ರೀತಿಯ ಭಾವನೆಗಳನ್ನು ಹೊಮ್ಮಿಸುತ್ತದೆ. ಅದರಲ್ಲಿ ನೋವಿನ ನೆನಪು ಮಾತ್ರ ಇತರ ಭಾವನೆಗಳ ಮೇಲೆ ಸವಾರಿ ಮಾಡುತ್ತದೆ. ಬೇಕಾದರೆ ಒಮ್ಮೆ ಅವಲೋಕಿಸಿ ನೋಡಿ ಪ್ರೀತಿ ಸಂತೋಷ ಕೋಪ ಭಯ ಮುಂತಾದ ಇತರ ಭಾವನೆಗಳು ಇದ್ದರೂ ನೋವಿನ ಘಟನೆಗಳು ಮಾತ್ರ ಬೇಡ ಬೇಡವೆಂದರೂ ಮತ್ತೆ ಮತ್ತೆ ಕಾಡುತ್ತಲೇ ಇರುತ್ತವೆ. ಅದನ್ನೇ ಚಿಂತೆ ಎಂದು ಲೋಕದ ಆಡು ಭಾಷೆಯಲ್ಲಿ ಕರೆಯಲಾಗುತ್ತದೆ.

ಚಿತೆ ( ಬೆಂಕಿ ) ನಮ್ಮನ್ನು ಒಮ್ಮೆ ಸುಟ್ಟರೆ ಚಿಂತೆ ಇಡೀ ಬದುಕಿನ ಪ್ರತಿಕ್ಷಣವನ್ನು ಸುಡುತ್ತಲೇ ಇರುತ್ತದೆ.

ಹಲವಾರು ಹುಟ್ಟುಗಳ ನಡುವೆ ಒಂದು ಸಾವು, ಎಷ್ಟೋ ಸಂಬಂಧಗಳ ನಡುವೆ ಒಂದು ವಿರಹ, ಅನೇಕ ಲಾಭಗಳ ನಡುವೆ ಒಂದು ನಷ್ಟ, ಅಪಾರ ಹೊಗಳಿಕೆಗಳ ನಡುವೆ ಒಂದು ತೆಗಳಿಗೆ ನಮ್ಮನ್ನು ಅಲ್ಲಾಡಿಸಿಬಿಡುತ್ತದೆ. ಇರುವುದಕ್ಕಿಂತ ಇಲ್ಲದಿರುವುದರ ಕಡೆಯೇ ಮನಸ್ಸು ಸದಾ ಯೋಚಿಸುತ್ತದೆ.

ಆ ಕಾರಣದಿಂದಾಗಿಯೇ ನೋವಿನ ಸಾಹಿತ್ಯ ಓದುಗರೆದೆಯಲ್ಲಿ ಸೃಷ್ಟಿಸುವ ತಳಮಳ ಮತ್ತು ಅದರಿಂದ ಏಳುವ ಮಾನಸಿಕ ಅಲೆಗಳು ಅನಂತರದ ಪರಿಣಾಮಗಳು ಗಾಢ ಅನುಭವ ನೀಡುತ್ತದೆ. ನಮ್ಮ ವೈಯಕ್ತಿಕ ಬದುಕಿನೊಂದಿಗೆ ಸಮೀಕರಣಗೊಳ್ಳುತ್ತದೆ.
ದೀರ್ಘಕಾಲ ಉಳಿಯುತ್ತದೆ.

ಹಾಗೆಂದ ಮಾತ್ರಕ್ಕೆ ಬೇರೆ ಪ್ರಕಾರದ ಸಾಹಿತ್ಯ ಈ ಗುಣಲಕ್ಷಣಗಳನ್ನು ಹೊಂದಿಲ್ಲ ಎಂಬ ಅಭಿಪ್ರಾಯಕ್ಕೆ ಬರಬಾರದು. ಅದು ಓದುಗರ ಆಸಕ್ತಿಯನ್ನು ಅವಲಂಬಿಸಿರುತ್ತದೆ. ಅವರ ವಯಸ್ಸು ಅವರ ಬದುಕಿನ ಸ್ಥಿತಿ ಗತಿಗಳು, ಬೆಳೆದ ಪರಿಸರ ಎಲ್ಲವೂ ಇದನ್ನು ನಿರ್ಧರಿಸುತ್ತದೆ.

ಆದರೆ ಒಟ್ಟಾರೆ ನೋವಿನ ಸಾಹಿತ್ಯ ಬರಹಗಳಲ್ಲಿ ಸೃಷ್ಟಿಸುವ ತವಕ ತಲ್ಲಣಗಳು ಇತರೆ ಸಾಹಿತ್ಯ ಪ್ರಕಾರಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂಬುದು ಸಾಮಾನ್ಯ ಸ್ಥಿತಿಯಲ್ಲಿ ಕಂಡುಬರುತ್ತದೆ. ನೋವಿನ ಮನಸ್ಥಿತಿಯಲ್ಲಿ ಇದ್ದವರಿಗಂತೂ ಇನ್ನೂ ಹೆಚ್ಚು ಕಾಡುತ್ತದೆ. ಓದುತ್ತಾ ಓದುತ್ತಾ ಕಣ್ಣೀರಾಗುತ್ತಾರೆ.

ಕಾಡದಿರು ನೀನು
ನೋವೆಂಬ ಮಾಯೆ,
ಎಷ್ಟೊಂದು ಹಿಂಸೆ
ನೆನಪುಗಳ ಭಾರ,
ಮುಂದಕ್ಕೂ ಚಲಿಸಲು ಬಿಡದೆ,
ಹಿಂತಿರುಗಲೂ ಅವಕಾಶ ನೀಡದೆ,
ಕಾಡದಿರು ನೀನು ನೋವೆಂಬ ಮಾಯೆ…

ಸಾಹಿತ್ಯವನ್ನು ಅತ್ಯಂತ ವಿಶಾಲ ಅರ್ಥದಲ್ಲಿ ಗ್ರಹಿಸಬೇಕು. ಭಾಷೆಯ ಮೇಲಿನ ಹಿಡಿತ, ವಿಷಯಗಳ ವ್ಯಾಪ್ತಿ, ಅದು ಸಾಹಿತ್ಯ ಕ್ಷೇತ್ರ ಮತ್ತು ಜನಸಾಮಾನ್ಯರಲ್ಲಿ ಬೀರಿರುವ ಪ್ರಭಾವ, ಎಷ್ಟು ದೀರ್ಘಕಾಲದಿಂದ ಅದು ಉಳಿದು ಬಂದಿದೆ, ಪ್ರಶಸ್ತಿ ಮಾನದಂಡಗಳಲ್ಲಿ ಅದಕ್ಕಿರುವ ಸ್ಥಾನ, ಓದುವಾಗ ಆ ಸಾಹಿತ್ಯ ಓದುಗರ ಮನದಲ್ಲಿ ಮೂಡಿಸುವ ಭಾವ ತರಂಗಗಳು, ಸಾಹಿತ್ಯ ಪ್ರಕಾರಗಳು, ಭಾರತೀಯ ಮತ್ತು ವಿಶ್ವದ ಇತರ ಭಾಷೆಗಳ ಸಾಹಿತ್ಯದ ಆಳ ಅಗಲಗಳ ಮೂಲದಿಂದ ಪರಿಶೀಲನೆ, ಸಾಹಿತ್ಯದ ದೂರದೃಷ್ಟಿ, ಮಾನವೀಯ ಸ್ಪಂದನೆ, ಸಾಹಿತಿಯ ಒಟ್ಟು ವ್ಯಕ್ತಿತ್ವ ಮುಂತಾದ ಎಲ್ಲವನ್ನೂ ಒಳಗೊಂಡಿರಬೇಕು.

ದಾಖಲಾತಿಯ ಸಾಹಿತ್ಯ, ಹೊಗಳಿಕೆಯ ಸಾಹಿತ್ಯ, ಪೌರಾಣಿಕ ಸಾಹಿತ್ಯ, ಐತಿಹಾಸಿಕ ಸಾಹಿತ್ಯ, ಭಕ್ತಿ ಸಾಹಿತ್ಯ, ದಾಸ ಸಾಹಿತ್ಯ, ವಚನ ಸಾಹಿತ್ಯ, ನವ್ಯ ಸಾಹಿತ್ಯ, ನವೋದಯ ಸಾಹಿತ್ಯ, ನವ್ಯೋತ್ತರ ಸಾಹಿತ್ಯ, ಬಂಡಾಯ ಸಾಹಿತ್ಯ, ಮಹಿಳಾ ಸಾಹಿತ್ಯ, ಶಿಶು ಸಾಹಿತ್ಯ, ಜಾನಪದ ಸಾಹಿತ್ಯ, ಆಧ್ಯಾತ್ಮಿಕ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಹಾಸ್ಯ ಸಾಹಿತ್ಯ ಮುಂತಾದ ಎಲ್ಲಾ ಸಾಹಿತ್ಯ ಪ್ರಕಾರಗಳನ್ನು ಒಳಗೊಂಡು…

ಕಥೆ, ಕಾದಂಬರಿ, ಕಾವ್ಯ, ನಾಟಕ, ಪ್ರಬಂಧ, ಸಂಶೋಧನೆ, ಅನುವಾದ, ವಿಮರ್ಶೆ ಇತ್ಯಾದಿ ಎಲ್ಲವೂ ಸೇರಿ…

ಕುವೆಂಪು ಅವರು ಕನ್ನಡ ಸಾಹಿತ್ಯ ಕ್ಷೇತ್ರದ ಮೇರು ಪರ್ವತ ಅಗುವುದು ಇಲ್ಲಿಯೇ…

ಸಾಂಕೇತಿಕವಾಗಿ ಹೇಳುವುದಾದರೆ…

ರಾಮಾಯಣ ದರ್ಶನಂ ಎಂಬ ಮಹಾಕಾವ್ಯ, ಜಯ ಭಾರತ ಜನನಿಯ ತನುಜಾತೆ ಎಂಬ ನಾಡಗೀತೆ, ನೇಗಿಲ ಯೋಗಿ ಎಂಬ ರೈತ ಗೀತೆ, ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ, ದೋಣಿ ಸಾಗಲಿ ಮುಂದೆ ಹೋಗಲಿ, ಎಲ್ಲಾದರು ಇರು ಎಂತಾದರೂ ಇರು, ಭಾರಿಸು ಕನ್ನಡ ಡಿಂಡಿಮವ ಎಂಬ ಭಾಷಾ ಮಹತ್ವದ ರಚನೆಗಳು, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಎಂಬ ಕಾದಂಬರಿಗಳು, ಶೂದ್ರ ತಪಸ್ವಿ, ಬೆರಳ್ಗೆ ಕೊರಳ್ ನಾಟಕಗಳು, ಎಲ್ಲಕ್ಕಿಂತ ಹೆಚ್ಚಾಗಿ ವಿಶ್ವ ಮಾನವ ಪ್ರಜ್ಞೆ ಎತ್ತಿ ಹಿಡಿದ ಮಹಾನ್ ಸಾಹಿತಿ ಕುವೆಂಪು.

ಅವರನ್ನು ಅತ್ಯಂತ ಪ್ರೀತಿ ಅಭಿಮಾನದಿಂದ ಸ್ಮರಿಸುತ್ತಾ…

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ಬರಹ ಕೃಪೆ: ವಿವೇಕಾನಂದ ಎಚ್. ಕೆ.

ಜನರ ಆರ್ಥಿಕತೆಗೆ ಬಾಧಕವಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ- ಸೀಎಂ

0

ಕೊರೋನಾದಿಂದಾಗಿ ಜನರ ಆರ್ಥಿಕತೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮವನ್ನು ಹಂತಹಂತವಾಗಿ ಜರುಗಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಬೆಳಗಾವಿ ಸುವರ್ಣಸೌಧದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಬಗ್ಗೆ ಪ್ರತಿಕ್ರಿಯೆ ನೀಡಿ, ಸಚಿವಸಂಪುಟದಲ್ಲಿ ಈ ಬರ್ಗೆ ಚರ್ಚಿಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಬೇಕು. ಬೂಸ್ಟರ್ ಡೋಸ್ ಹೆಚ್ಚಿಸಬೇಕು. ಐಎಲ್‌ಐ ಮತ್ತು ಸಾರಿ ಪರೀಕ್ಷೆಗಳನ್ನು ಹೆಚ್ಚಿಸುವುದು.ಮಾಸ್ಕ್ ಗಳ ಧಾರಣೆ, ಒಳಾಂಗಣಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯ ಗಳ ಬಗ್ಗೆ ತಜ್ಞರ ಸಮಿತಿಯೊಂದಿಗೆ ಸಭೆ ನಡೆಸಿ, ಕ್ರಮೇಣ ಹಂತ ಹಂತವಾಗಿ ನಿಯಮಗಳನ್ನು ಜಾರಿ ತರಲಾಗುತ್ತದೆ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ಚಿತ್ರ “ವೈಶಂಪಾಯನ ತೀರ” ಜನವರಿ 6 ರಂದು ಬಿಡುಗಡೆ

ಸ್ವರಸಂಗಮ ಎಂಟರ್ಟೈನ್ ಮೆಂಟ್ ಬ್ಯಾನರ್ ನಲ್ಲಿ ಆರ್. ಸುರೇಶ್ ಬಾಬು ನಿರ್ಮಿಸಿ , ಮಲೆನಾಡ ಪ್ರಸಿದ್ಧ ರಂಗಕರ್ಮಿ ರಮೇಶ್ ಬೇಗಾರ್ ನಿರ್ದೇಶಿಸಿರುವ ವೈಶಂಪಾಯನ ತೀರ ಸಿನಿಮಾ ಹೊಸವರ್ಷದ ಆರಂಭದ ಜನವರಿ 6 ರಂದು ತೆರೆಕಾಣಲಿದೆ.

ಪ್ರಸಿದ್ಧ ಕಥಾಲೇಖಕ ಮಹಾಬಲ ಮೂರ್ತಿ ಕೊಡ್ಲೆಕೆರೆ ಇವರ ಜನಪ್ರಿಯ ಸಣ್ಣಕಥೆಯನ್ನು ಆಧರಿಸಿದ ಈ ಚಿತ್ರ ಯಕ್ಷಗಾನ ಕಲೆಯ ಹಿನ್ನೆಲೆಯಲ್ಲಿ ಸಾಗುವ , ವೈಯಕ್ತಿಕ ಬದುಕಿನ ಸಂಬಂಧಗಳ ನಿಗೂಢತೆಯನ್ನು ಬಿಂಬಿಸುವ , ಪ್ರಕೃತಿ – ಪುರುಷನ ಸಂಘರ್ಷವನ್ನು ಹೇಳುವ ಕಥೆಯಾಗಿದೆ.
ಮಲೆನಾಡಿನ ಶೃಂಗೇರಿ ಭಾಗದ ಜನಜೀವನ , ಭಾಷೆ , ಸಂಸ್ಕೃತಿಯನ್ನು ಚಿತ್ರದಲ್ಲಿ ಬಳಸಲಾಗಿದ್ದು ಮತ್ತೊಂದು ಮಣ್ಣಿನ ಮೂಲಸೊಗಡಿನ ಚಿತ್ರವಾಗಿ ಮೂಡಿಬಂದಿದೆ.
30 ವರ್ಷಗಳ ಹಿಂದೆ ರಚಿತವಾದ ಕಥೆಗೆ ಇಂದು ಟ್ರೆಂಡ್ ಆಗಿರುವ ಶೈಲಿಯ ಚಿತ್ರಕಥೆ ಅಳವಡಿಸಿದ್ದು ಎಲ್ಲರಿಗೂ ಇಷ್ಟವಾಗುವಂತೆ ಕಥನ ಶೈಲಿ ಇರಲಿದೆ.
ಚಿತ್ರದ ಪ್ರಮುಖ ಪಾತ್ರಗಳು ಕೃಷ್ಣ ಭಟ್ಟ , ವೆಂಕಪ್ಪ ಹೆಗ್ಡೆ ಮತ್ತು ಕಲ್ಯಾಣಿ. ಇವುಗಳನ್ನು ಕ್ರಮವಾಗಿ ರವೀಶ್ ಹೆಗ್ಡೆ ಐನ್ ಬೈಲು , ಪ್ರಸನ್ನ ಶೆಟ್ಟಿಗಾರ್ ಮತ್ತು ವೈಜಯಂತಿ ಅಡಿಗ ನಿರ್ವಹಿಸಿದ್ದಾರೆ. ಕಥೆಯಲ್ಲಿ ಪೂರಕವಾದ ಮತ್ತೊಂದು ಟ್ರ್ಯಾಕ್ ಅಳವಡಿಸಿದ್ದು ಇದರಲ್ಲಿ ಪ್ರಮೋದ್ ಶೆಟ್ಟಿ , ಬಾಬು ಹಿರಣ್ಣಯ್ಯ ,ರಮೇಶ್ ಪಂಡಿತ್, ಬಿ. ಎಲ್. ರವಿಕುಮಾರ್ ಮತ್ತು ನಾಗಶ್ರೀ ಬೇಗಾರ್ ಕಾಣಿಸಿಕೊಂಡಿದ್ದಾರೆ.
ವಿಶ್ವ ವಿಖ್ಯಾತ ರಂಗಭೂಮಿ ಹಾಸ್ಯ ಕಲಾವಿದರಾದ ಕುಂದಾಪುರದ ಕುಳ್ಳಪ್ಪು ಸಹೋದರರಾದ ಸತೀಶ್ ಪೈ , ಸಂತೋಷ್ ಪೈ ಮತ್ತು ಖ್ಯಾತ ಟಿ. ವಿ. ವಾರ್ತಾವಾಚಕ ಸುಬ್ರಹ್ಮಣ್ಯ ಹಂಡಿಗೆ ಮೊದಲಬಾರಿ ಸಿನಿಮಾಕ್ಕಾಗಿ ಬಣ್ಣ ಹಚ್ಚಿರುವುದು ಚಿತ್ರದ ವಿಶೇಷ
ರಮೇಶ್ ಭಟ್ , ಗುರುರಾಜ ಹೊಸಕೋಟಿ , ಶೃಂಗೇರಿ ರಾಮಣ್ಣ ರಂಥ ಹಿರಿಯ ಕಲಾವಿದರೂ ನಟಿಸಿರುವ ಚಿತ್ರವಿದು.

ಗುತ್ತಳಿಕೆ ಕೇಶವ , ನಯನ ಎ. ಎಸ್. ಸಸಿಮನೆ ವಿಶ್ವನಾಥ್ , ಕೃಷ್ಣಮೂರ್ತಿ , ರಾಧಾಕೃಷ್ಣ , ಸ್ಪೂರ್ತಿ , ದೀಪ್ತಿ ಆರ್ ಭಟ್ , ಅರೇಹಳ್ಳ , ವೈಶಾಲಿ , ಸ್ವಾತಿ , ಜ್ಯೋತಿ ಕಾಮತ್ , ವೈಷ್ಣವಿ ರಾವ್ , ಪೃಥ್ವಿರಾಜ್ , ಶಂಕರ್ , ವಿವೇಕ್ ಸುಂಕುರ್ಡಿ , ವಿಶ್ವನಾಥ ಶೆಟ್ಟಿ ,ಮೊದಲಾದ ಮಲೆನಾಡ ಪ್ರತಿಭಾವಂತ ರಂಗಕಲಾವಿದರ ದಂಡೇ ಈ ಚಿತ್ರದಲ್ಲಿದೆ.

ಶ್ರೀನಿಧಿ ಕೊಪ್ಪ ಸಂಯೋಜಿಸಿದ ಮೂರುಹಾಡುಗಳನ್ನು ಸಾದ್ವಿನಿಕೊಪ್ಪ ಮತ್ತು ವಿನಯ್ ಶೃಂಗೇರಿ ಹಾಡಿದ್ದಾರೆ. ಹಿನ್ನೆಲೆ ಸಂಗೀತವನ್ನು ವಿನುಮನಸು ಅವರು ಒದಗಿಸಿದ್ದಾರೆ. ಶಶೀರ ಶೃಂಗೇರಿ ಛಾಯಾಗ್ರಹಣ , ಅವಿನಾಶ್ ಶೃಂಗೇರಿ ಸಂಕಲನ , ಅಭಿಷೇಕ್ ಹೆಬ್ಬಾರ್ ಕಲಾನಿರ್ದೇಶನ , ರಾಮಚಂದ್ರ ಅವರ ಸಹನಿರ್ದೇಶನ , ಕಾರ್ತಿಕ್ ನಿರ್ವಣೆಯನ್ನು ಸಿನಿಮಾ ಹೊಂದಿದೆ.

ತಂತ್ರಜ್ಞರೆಲ್ಲರೂ ಈಗಲೂ ಮಲೆನಾಡ ನಿವಾಸಿಗಳೆಂಬುದು ವಿಶೇಷ.

ನಿರ್ದೇಶಕ ರಮೇಶ್ ಬೇಗಾರ್ ಬಗ್ಗೆ

 - ಮಲೆನಾಡ ಭಾಗದಲ್ಲಿ ತಾರಾಮೌಲ್ಯ ಇರುವ ಬಹುಮುಖ ಸೃಜನಶೀಲ ರಮೇಶ್ ಬೇಗಾರ್.   ನಾಟಕ ಮತ್ತು ಕಿರುತೆರೆ ಧಾರಾವಾಹಿಗಳ ನಿರ್ದೇಶಕ  , ಯಕ್ಷಗಾನ ಪ್ರಸಂಗ ಕರ್ತ , ಮೆಗಾ ಈವೆಂಟ್ ಗಳ ಸಾಂಸ್ಕೃತಿಕ ಸಂಘಟಕ  ಮಾತ್ರವಲ್ಲದೇ 2 ಅವಧಿಗೆ ಯಕ್ಷಗಾನ ಅಕಾಡೆಮಿಯ  ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. 35 ವರ್ಷಗಳ  ಸುದೀರ್ಘ ಸಾಂಸ್ಕೃತಿಕ ಕೃಷಿಯ ರಮೇಶ್ ಮಲೆನಾಡ ಜಿಲ್ಲೆಗಳಲ್ಲಿ ಮನೆಮಗನಂಥ ಖ್ಯಾತಿಪಡೆದ ಅವಿರತ ಸೃಜನಶೀಲ ಕಲಾವಿದ. ಇವರ ಸಾಂಸ್ಕೃತಿಕ ಹಿನ್ನೆಲೆ ಈ ಸಿನಿಮಾಕ್ಕೆ ಹೊಸ ಹೊಳಹು ನೀಡಿದೆ ಮಾತ್ರವಲ್ಲ ಕುತೂಹಲವನ್ನೂ ಹುಟ್ಟು ಹಾಕಿದೆ.

ನಿರ್ಮಾಪಕ ಆರ್. ಸುರೇಶ್ ಬಾಬು ಬಗ್ಗೆ
3 ದಶಕಗಳ ಹಿಂದೆ ಸ್ವರಸಂಗಮ ಎಂಬ ಆಡಿಯೋ ಕ್ಯಾಸೆಟ್ ಉದ್ಯಮ ಸ್ಥಾಪಿಸಿ ಅಪಾರ ಯಶಸ್ಸು ಕಂಡವರು ಆರ್. ಸುರೇಶ್ ಬಾಬು.
ಗುರುರಾಜುಲು ನಾಯ್ಡು ಅವರ ಗಜಗೌರಿವ್ರತ , ಕಾಳಿಂಗ ನಾವಡರ ನಾಗಶ್ರೀ , ರಾಜು ತಾಳಿಕೋಟಿ ಅವರ ಕಲಿಯುಗ ಕುಡುಕ ದಂಥ ಬಿಗ್ ಹಿಟ್ ಗಳನ್ನು ನೀಡಿದ ಖ್ಯಾತಿ ಸುರೇಶ್ ಬಾಬು ಅವರದ್ದು. ಡಾ ರಾಜ್ , ಎಸ್. ಪಿ. ಬಿ. ಸೇರಿದಂತೆ ದಿಗ್ಗಜರೆಲ್ಲರೂ ಇವರ ಕಂಪೆನಿಗಾಗಿ ಹಾಡಿದ್ದಾರೆ.

ನಂತರ ಟಿ. ವಿ. ಧಾರಾವಾಹಿ , ವೀಡಿಯೋ ವಾರ್ತೆ , ಆಡಿಯೋ – ವೀಡಿಯೋ ಸ್ಟುಡಿಯೋ ವ್ಯವಹಾರವನ್ನು ಮಾಡಿದವರು.
ಎ. ಎಸ್. ಮೂರ್ತಿ ಸಂಪಾದಕತ್ವದಲ್ಲಿ ವೀಡಿಯೋ ವಾರ್ತೆಗಳ ವಿ. ಹೆಚ್. ಎಸ್. ಕ್ಯಾಸೆಟ್ ಹೊರತಂದಿದ್ದ ಪ್ರಯೋಗ ಶೀಲರು ಈ ಸುರೇಶ್ ಬಾಬು .

ಉರುಳಿ ಬಿದ್ದ ಸೇನಾವಾಹನ:ಮಡಿದ ಸೈನಿಕರಿಗೆ ಶ್ರದ್ಧಾಂಜಲಿ

0

ಇತ್ತೀಚೆಗೆ ಸಿಕ್ಕಿಂ ರಾಜ್ಯದ ವಾಹನ ಅಪಘಾತದಲ್ಲಿ ಹುತಾತ್ಮ ರಾಗಿರುವ ಭಾರತೀಯ ಸೇನೆಯ ವೀರ ಯೋಧರಿಗೆ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಚಿಕ್ಕಮಗಳೂರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಸೋಮವಾರ ಸಂಜೆ ಕ್ಯಾಂಡಲ್ ಹಿಡಿದು ಶ್ರದ್ದಾಂಜಲಿ ಸಲ್ಲಿಸ ಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಿ.ಎಸ್.ಮಂಜುನಾಥ್ ಸೈನಿಕರು ಆಪರೇಷನ್ ಸಲು ವಾಗಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ 4 ವಾಹನಗಳಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅತಿಯಾದ ಹಿಮಾದ ಪರಿಣಾಮ ಚಾಲಕ ನಿಯಂತ್ರಣ ತಪ್ಪಿ ಒಂದು ವಾಹನವು ಕಂದಕಕ್ಕೆ ಉರುಳಿದೆ ಎಂದರು.

ವಾಹನದಲ್ಲಿ ಸುಮಾರು 20 ಸೈನಿಕರು ಪ್ರಯಾಣಿಸುತ್ತಿದ್ದು, ನೂರಾರು ಅಡಿಗಳ ಎತ್ತರದಿಂದ ಕಂದಕಕ್ಕೆ ಉರುಳಿದ ಸಂದರ್ಭದಲ್ಲಿ ಸುಮಾರು 16 ಮಂದಿ ಸೈನಿಕರು ಸ್ಥಳದಲ್ಲೇ ಮೃತಪಟ್ಟಿದ್ದು ಉಳಿದ 4 ಮಂದಿಯು ಅತಿಯಾದ ಗಾಯಗಳಿಂದ ಚಿಕಿತ್ಸೆಯಲ್ಲಿದ್ದಾರೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾಜಿ ಸೈನಿಕರ ಸಂಘದ ವತಿಯಿಂದ ತಾಲ್ಲೂಕು ಪಂಚಾಯಿತಿಯ ಸಂಘದ ಕಚೇರಿಯಿಂದ ಮೆರವಣಿಗೆ ನಡೆಸಿ ಮೃತರಾದ ವೀರ ಯೋಧರಿಗೆ ಜಯಘೋಷ ಕೂಗಿ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡು ಮೌನಾಚರಣೆ ನಡೆಸಿ ಸಂತಾಪ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ಕೃಷ್ಣೇಗೌಡ, ರಾಮಯ್ಯ, ಬಸವರಾಜ್ ಪ್ರಾಸಿಸ್ ಡಿಸೋಜಾ, ನಾಗರಾಜ್, ಹೆಚ್.ಎಂ.ಮಂಜುನಾಥ್, ಎನ್.ಸಿ.ಶಂಕರ್, ಜಬ್ಬಾರ್‌ಖಾನ್, ವೇಣು, ಗಿಡ್ಡೇಗೌಡ, ಡಿಸಿಲ್ವಾ, ರಾಮಚಂದ್ರಶೆಟ್ಟಿ, ಕುಮಾರಸ್ವಾಮಿ, ಮಹಾಬಲರಾಮ್ ರೈ, ಸಂಘದ ಪದಾಧಿಕಾರಿಗಳು, ಸಮಾನ ಮನಸ್ಕರ ಬಳಗದ ಕೋಟೆ ಸೋಮಣ್ಣ, ಕೇಶವೇಗೌಡ, ಶ್ರೀನಿವಾಸ್, ಶ್ರೀಧರ್ ದೊಣಿಖಣ, ಅಶ್ವಥ್ ನಾರಾಯಣ್, ರಘು, ಬಸವರಾಜ್ ಹಾಜರಿದ್ದರು.

ಶಿವಮೊಗ್ಗಕ್ಕೆ ಭೇಟಿ ನೀಡಿದ ಸಿಂಗಾಪೂರ್ ನ ರೋಟರಿ ಯುವ ಪ್ರತಿನಿಧಿ

0

ಭಾರತೀಯ ಮೂಲದ ಸಿಂಗಾಪುರ ರೋಟರಿ ಕ್ಲಬ್ ಯುವ ಸದಸ್ಯ ಮುಕುಂದನ್ ಅವರು ಶಿವಮೊಗ್ಗ ನಗರದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ವೈಶಿಷ್ಟ್ಯತೆಗಳ ಬಗ್ಗೆ ಮಾತನಾಡಿದರು.
ರೋಟರಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದು, ವಿಶ್ವದಾದ್ಯಂತ ಸದಸ್ಯತ್ವ ಹೊಂದಿರುವುದು ಪ್ರತಿಷ್ಠೆಯ ಸಂಗತಿಯಾಗಿದೆ. ವೃತ್ತಿ ಜೀವನದ ಜತೆಯಲ್ಲಿ ಸೇವೆಯು ಪ್ರಮುಖ ಎಂಬುದನ್ನು ಅರಿವು ಮೂಡಿಸುತ್ತದೆ. ಉಳಿತಾಯದ ಹಣದಲ್ಲಿ ಸ್ವಲ್ಪ ಹಣವನ್ನು ಸಮಾಜದ ಒಳಿತಿಗೆ ಹಾಗೂ ಮಾನವೀಯ ಸೇವೆಗೆ ಸಂಸ್ಥೆ ಶ್ರಮಿಸುತ್ತಿದೆ. 13 ಲಕ್ಷ ಸ್ವಯಂ ಸೇವಾ ಸದಸ್ಯರನ್ನು ಹೊಂದಿರುವ ಏಕೈಕ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಎಂದು ಮುಕುಂದನ್ ಹೇಳಿದರು.
ಸಿಂಗಾಪುರದಲ್ಲಿ ರೋಟರಿ ಸಂಸ್ಥೆ ಸದಸ್ಯರಾಗಿ ಯುವಕರಿಗೆ ಮತ್ತು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ 28 ಸೇವಾ ಯೋಜನೆಯನ್ನು ಮಾಡಿದ ಕೀರ್ತಿ ಇವರದ್ದಾಗಿದೆ. ಭಾರತೀಯ ಮೂಲದವರಾದ ಮುಕುಂದನ್ ಅವರು ಶಿವಮೊಗ್ಗದಲ್ಲಿ ರೋಟರಿ ಪೂರ್ವದ ಸದಸ್ಯರೊಂದಿಗೆ ಸೇರಿ ಗ್ಲೋಬಲ್ ಗ್ರಾಂಟ್ ಮೂಲಕ ಉತ್ತಮ ಸಮಾಜ ಮುಖಿ ಸೇವೆ ಮಾಡಲು ಉತ್ಸುಕರಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಸದಸ್ಯರ ಪ್ರೀತಿ, ವಿಶ್ವಾಸ, ಸ್ನೇಹ ಸಂಬಂಧವನ್ನು ಹಂಚಿಕೊಳ್ಳವ ಸಂಕೇತವಾಗಿ ಕ್ಲಬ್ ಧ್ವಜ ವಿನಿಮಯ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ರೋಟರಿ ಮಾಜಿ ಗವರ್ನರ್ ಎಚ್.ಎಲ್. ರವಿ ಅವರು ಅತಿಥಿಗಳ ಪರಿಚಯ ಮಾಡಿಕೊಡುವುದರೊಂದಿಗೆ ಕಾರ್ಯಕ್ರಮದ ಉದ್ದೇಶ ತಿಳಿಸಿದರು. ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ ರೋಟರಿ ಜಿಲ್ಲೆಯ ವಿವರ ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಕ್ಲಬ್ ಕಾರ್ಯದರ್ಶಿ ಕುಮಾರಸ್ವಾಮಿ, ಡಾ. ಪರಮೇಶ್ವರ ಶಿಗ್ಗಾಂ, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ರವೀಂದ್ರನಾಥ ಐತಾಳ, ಓಂ ಪ್ರಕಾಶ್ ತೇಲಕರ್ ಮತ್ತು ಮಾಜಿ ಅಧ್ಯಕ್ಷ ಕಡಿದಾಳ ಗೋಪಾಲ ಮತ್ತು ಶ್ರೀಮತಿ ನಾಗವೇಣಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.