Tuesday, March 31, 2026
Tuesday, March 31, 2026
Home Blog Page 1348

ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದ ಬಂದಿಗಳಿಗೆ ಪೈಂಟಿಂಗ್ ತರಬೇತಿ

0

ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದಲ್ಲಿ ಬಂಧಿಗಳಿಗೆ ಏಷಿಯನ್ ಪೈಂಟ್ ಕಂಪನಿ ವತಿಯಿಂದ ಕೆಲ ದಿನಗಳ ಹಿಂದೆ ಏರ್ಪಡಿಸಲಾಗಿದ್ದ ಪೈಂಟಿಂಗ್ ತರಬೇತಿಯಲ್ಲಿ ಸುಮಾರು 18 ಮಂದಿ ಪರಿಣಿತ ಹೊಂದಿದ ಹಿನ್ನೆಲೆಯಲ್ಲಿ ಕಾರಾಗೃಹದಲ್ಲಿ ಅಧೀಕ್ಷಕ ಶ್ರೀಶೈಲ ಎಸ್ ಮೇಟಿ ಪ್ರಮಾಣ ಪತ್ರವನ್ನು ವಿತರಿಸಿದರು.

ಈ ವೇಳೆ ಮಾತನಾಡಿದ ಶ್ರೀಶೈಲ ಎಸ್.ಮೇಟಿ ಏಷಿಯನ್ ಪೈಂಟ್ ಕಂಪನಿ ವತಿಯಿಂದ ಕಾರಾಬಂಧಿಗಳಿಗೆ ಉಚಿತವಾಗಿ ವಾಲ್‌ಪೈಂಟಿಂಗ್, ಡೀಸೈನ್ ಸೇರಿದಂತೆ ವಿವಿಧ ರೀತಿಯ ತರಬೇತಿ ನೀಡುವುದರ ಜೊತೆಗೆ ಬಂಧಿಗಳು ಬಿಡುಗಡೆ ನಂತರ ಕೆಲಸದ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿರುವು ದು ಸಂತಸದ ವಿಷಯ ಎಂದರು.

ಸರ್ಕಾರದ ವತಿಯಿಂದ ಕಾರಾಬಂಧಿಗಳಿಗೆ ದೊರೆಯುವ ವಿವಿಧ ತರಬೇತಿಯನ್ನು ನೀಡುವ ಮೂಲಕ ವೃತ್ತಿ ಬದುಕಿಗೆ ಅನುಕೂಲ ಕಲ್ಪಿಸಲಾಗುವುದು. ಆ ನಿಟ್ಟಿನಲ್ಲಿ ಬಂಧಿಗಳು ತರಬೇತಿಯಲ್ಲಿ ಪಾಲ್ಗೊಂಡು ಪರಿಣಿತಿ ಹೊಂದಿ ನಂತರದ ಜೀವನದಲ್ಲಿ ದುಡಿಮೆಯ ದಾರಿಕಂಡುಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆರ್ಟ ಆಫ್ ಲಿವಿಂಗ್‌ನ ಪ್ರವೀಣ್, ಏಷಿಯನ್ ಪೇಯಿಂಟ್ ಕಂಪನಿಯ ಸುನೀಲ್, ಜೈಲರ್ ಎಂ.ಕೆ.ನೆಲಧರಿ ಹಾಗೂ ಕಾರಾಬಂಧಿಗಳು ಉಪಸ್ಥಿತರಿದ್ದರು.

ಡಾ.ಅಶೋಕ ಪೈ ಜನ್ಮದಿನ-ರಕ್ತದಾನ ಶಿಬಿರ

0

ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ಖ್ಯಾತ ಮನೋವೈದ್ಯ ಡಾ. ಅಶೋಕ್ ಪೈ ಅವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ, ರೋಟರಿ ರಕ್ತನಿಧಿಯ ಸಾರ್ವಜನಿಕ ಸಂಪ್ರಕಾಧಿಕಾರಿ ಸತೀಶ್ “ನಗರದಲ್ಲಿ ಅಶೋಕ್ ಪೈ ಒಬ್ಬ ವೈದ್ಯರು ಎಂದು ಪ್ರಸಿದ್ಧಿ ಪಡೆದಿರುವಷ್ಟೇ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ ಕ್ಷೇತ್ರದಲ್ಲಿ ಹೆಸರುವಾಸಿ. ಇವರ ಜನ್ಮದಿನವನ್ನು ರಕ್ತದಾನ ಶಿಬಿರದಂಥ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಆಚರಿಸುವುದು ಅತ್ಯಂತ ಸೂಕ್ತ” ಎಂದರು.

ಮುಂದುವರಿದು ಈ ಕಾಲೇಜಿನಲ್ಲಿ ಇದುವರೆಗೆ 347 ಯೂನಿಟ್ ರಕ್ತ ಸಂಗ್ರಹಿಸಲಾಗಿತ್ತು ಹಾಗೂ ಇದರಿಂದ 1388 ಜನರು ಇದರ ಉಪಯೋಗ ಪಡೆದುಕೊಂಡರು ಎಂದು ಕಾಲೇಜಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಪ್ರಾಚಾರ್ಯೆ ಡಾ ಸಂಧ್ಯಾ ಕಾವೇರಿ ಮಾತನಾಡಿ “ಡಾ ಅಶೋಕ್ ಪೈ ತಮ್ಮ ಜೀವನದುದ್ದಕ್ಕೂ ರೋಟರಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದವರು. ರೋಟರಿಯೊಂದಿಗೆ ಹಲವು ಯೋಜನೆಗಳನ್ನ ಅವರು ರೂಪಿಸಿದ್ದರು. ಈ ಕಾರಣದಿಂದ ಈ ಜನ್ಮದಿನಾಚರಣೆ ರೋಟರಿಯೊಂದಿಗೆ ಆಚರಿಸುತ್ತಿರುವುದು ಹೆಚ್ಚು ಅರ್ಥಪೂರ್ಣ”. ಈ ದಿನ ಕಾಲೇಜಿನ ವಿದ್ಯಾರ್ಥಿಗಳು ಮಾನಸ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಹಲವಾರು ಸಾರ್ವಜನಿಕರು ರಕ್ತದಾನವನ್ನು ಮಾಡಲಿದ್ದಾರೆ.
ಅವರೆಲ್ಲರಿಗೂ ಮಾನಸ ಸಂಸ್ಥೆಯ ವತಿಯಿಂದ ಕೃತಜ್ಞತೆಗಳು ಎಂದರು.

ಕಾರ್ಯಕ್ರಮದಲ್ಲಿ ಮಾನಸ ಸಮೂಹ ಸಂಸ್ಥೆಯ ನಿರ್ದೇಶಕಿ ಡಾ. ರಜನಿ ಪೈ., ರೋಟರಿ ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ ರಜತ್, ಕಾಲೇಜಿನ ಎನ್ ಎಸ್ ಎಸ್ ಸಂಯೋಜನಾಧಿಕಾರಿ ಡಾ. ಸುಕೀರ್ತಿ ಇದ್ದರು. ಈ ಶಿಬಿರದ ನೇತೃತ್ವವನ್ನು ರೋಟರಿ ಬ್ಲಡ್ ಬ್ಯಾಂಕ್‌ನ ನಿರ್ದೇಶಕರಾದ ಡಾ. ಸಂಜಯ್, ಕಾಲೇಜಿನ ರೆಡ್‌ಕ್ರಾಸ್ ಸಂಯೋಜಕರಾದ ಶ್ರೀ ಮಂಜುನಾಥಸ್ವಾಮಿ ನಿರ್ದೇಶಿಸಿದರು‌.

ಪ್ರಧಾನಿ ಮೋದೀಜಿ ಅವರಿಗೆ ಮಾತೃ ವಿಯೋಗ

0

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ (100) ಅವರು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಹೀರಾಬೆನ್‌ ಅವರನ್ನು ಅಹಮದಾಬಾದ್‌ನ ಯು.ಎನ್.ಮೆಹ್ತಾ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಡಿಯಾಲಜಿ ಆ್ಯಂಡ್‌ ರೀಸರ್ಚ್‌ ಸೆಂಟರ್‌ ಆಸ್ಪತ್ರೆಗೆ ಬುಧವಾರ ದಾಖಲಿಸಲಾಗಿತ್ತು.

ಈ ಕುರಿತು ಟ್ವಿಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಭವ್ಯವಾದ ಶತಮಾನವು ದೇವರ ಪಾದದ ಮೇಲೆ ನಿಂತಿದೆ .. ನನ್ನ ತಾಯಿಯಲ್ಲಿ ನಾನು ಯಾವಾಗಲೂ ಆ ತ್ರಿಮೂರ್ತಿಗಳ ಶಕ್ತಿ ಹಾಗೂ ಪ್ರೀತಿ, ವಾತ್ಸಲ್ಯವನ್ನು ಅನುಭವಿಸಿದ್ದೇನೆ, ಅವರದ್ದು ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿದೆ’ ಎಂದು ತಾಯಿಯ ಗುಣಗಾನ ಮಾಡಿದ್ದಾರೆ.

ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರ ಪಾರ್ಥಿವ ಶರೀರವನ್ನು ಗುಜರಾತ್‌ನ ಗಾಂಧಿನಗರದಲ್ಲಿ ಅಂತಿಮ ಸಂಸ್ಕಾರಕ್ಕಾಗಿ ಕೊಂಡೊಯ್ಯಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ ನರೇಂದ್ರ ಮೋದಿ ಅವರ ಸಹೋದರರು ಸೇರಿ ಗಾಂಧಿನಗರದಲ್ಲಿ ತಾಯಿ ಹೀರಾಬೆನ್ ಅವರ ಅಂತ್ಯಕ್ರಿಯೆಯನ್ನು ಪೂರ್ಣಗೊಳಿಸಿದರು. ಪ್ರಧಾನಿ ಮೋದಿ ತಮ್ಮ ಪ್ರೀತಿಯ ತಾಯಿಯ ಅಂತಿಮ ಯಾತ್ರೆಗೆ ಹೆಗಲುಕೊಟ್ಟರು.

ಶೈಕ್ಷಣಿಕ ಆಸಕ್ತಿಯ ಜೊತೆ ಕ್ರೀಡಾಸಕ್ತಿ ಮುಖ್ಯ- ಶಿವಕುಮಾರ್

0

ಸಹ್ಯಾದ್ರಿ ಕಲಾ – ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಆಶ್ರಯದಲ್ಲಿ ಆಯೋಜನೆಗೊಂಡಿರುವ ಕುವೆಂಪು ವಿಶ್ವವಿದ್ಯಾಲಯ ಮಟ್ಟದ 35ನೇ ಅಥ್ಲೆಟಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭವು ನೆಹರು ಕ್ರೀಡಾಂಗಣದಲ್ಲಿ ನೆರವೇರಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಎಸ್ ಶಿವಕುಮಾರ್ ಮಹಾಪೌರವರು ಮಹಾನಗರ ಪಾಲಿಕೆ ಶಿವಮೊಗ್ಗ ಇವರು ಆಗಮಿಸಿದ್ದರು. ಅವರು ತಮ್ಮ ಭಾಷಣದಲ್ಲಿ” ಶೈಕ್ಷಣಿಕ ಆಸಕ್ತಿಯ ಜೊತೆಗೆ ಕ್ರೀಡಾ ಆಸಕ್ತಿಯು ಕೂಡ ಯುವಜನತೆಗೆ ಅತಿ ಮುಖ್ಯವಾಗಿದೆ. ರಾಂಕ್ ಪಡೆದ ವಿದ್ಯಾರ್ಥಿಗಳಿಗಿಂತ ಪ್ರತಿಶತ 35 ಅಂಕಗಳನ್ನು ಪಡೆದ ಕ್ರೀಡಾಪಟುಗಳೇ ಹೆಚ್ಚಿನ ಸಾಧಕರಾಗಿ ದೇಶದಲ್ಲಿ ಮಿಂಚುತ್ತಿರುವುದು ನಮಗೆ ಗೊತ್ತಿರುವ ಸಂಗತಿ. ನಮ್ಮ ಆಸಕ್ತಿಯ ಕ್ಷೇತ್ರಗಳನ್ನು ಗುರುತಿಸಿಕೊಂಡು ಆ ದೆಸೆಯಲ್ಲಿ ಯಲ್ಲಿ ಮುಂದುವರಿದರೆ ಅತ್ಯುತ್ತಮ ಸಾಧಕರಾಗಲು ಸಾಧ್ಯವಾಗುತ್ತದೆ. ದೇಶಕ್ಕೆ ಏನಾದರೂ ಕೊಡುಗೆ ಕೊಡುವ ಸಾಧನೆಯು ನಮ್ಮದಾಗಬೇಕಾಗಿದೆ. ಆರೋಗ್ಯವಂತರಾಗಿ ಬದುಕಲು ನಮಗೆ ಕ್ರೀಡೆ ಮತ್ತು ವ್ಯಾಯಾಮ ಪೂರಕ” ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿರುವ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀಮತಿ ಅನುರಾಧ ಜಿ ಅವರು, ” ಇಂದಿನ ಶೈಕ್ಷಣಿಕ ವಿದ್ಯಮಾನಗಳಲ್ಲಿ ಕ್ರೀಡೆ ಅತ್ಯಂತ ಅವಶ್ಯಕವಾಗಿದೆ. ಆರೋಗ್ಯವಂತ ಮನಸ್ಸು ಮತ್ತು ದೇಹ ನಮ್ಮದಾಗ ಬೇಕಾದರೆ ಕ್ರೀಡಾ ಹವ್ಯಾಸಗಳಲ್ಲಿ ತೊಡಗಿ ಕೊಳ್ಳಬೇಕು.ಈ ದೇಶದ ಆಸ್ತಿ ಎಂದರೆ ಯುವಜನರು.ಅವರ ಕನಸುಗಳ ಮೇಲೆ ಈ ದೇಶದ ಭವಿಷ್ಯವಿದೆ. ಪಠ್ಯಧಾರಿತ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಯ ಆಸಕ್ತಿಯನ್ನು ಬೆಳೆಸಿಕೊಳ್ಳಲು ಇಂದಿನ ಹೊಸ ಶಿಕ್ಷಣ ನೀ ತಿಯಲ್ಲಿ ಬೇಕಾದಷ್ಟು ಅವಕಾಶವಿದೆ. ಅದನ್ನು ಸೂಕ್ತವಾಗಿ ಬಳಸಿಕೊಂಡು ಹೊಸ ಸಾಧನೆಗಳನ್ನು ಮಾಡಬೇಕಾಗಿದೆ.” ಎಂದು ಹೇಳುತ್ತಾ ವಿಜೇತರಿಗೆ ಹಾಗೂ ಭಾಗವಹಿಸಿದ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು.

ಈ ಕ್ರೀಡಾಕೂಟದಲ್ಲಿ ನೂತನ ದಾಖಲೆಯನ್ನು ಮಾಡಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಪುರುಷರ ವಿಭಾಗದ ಸಮಗ್ರ ಚಾಂಪಿಯನ್ ಶಿಪ್ ಡಿವಿಎಸ್ ಕಾಲೇಜು ಪಡೆದುಕೊಂಡರೆ, ಜ್ಞಾನ ಸಹ್ಯಾದ್ರಿ ಶಂಕರಘಟ್ಟ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ತೀರ್ಥಹಳ್ಳಿಯ ತುಂಗಾ ಕಾಲೇಜು ತೃತೀಯ ಸ್ಥಾನವನ್ನು ಪಡೆದುಕೊಂಡಿತು.

ಮಹಿಳಾ ವಿಭಾಗದ ಸಮಗ್ರ ಚಾಂಪಿಯನ್ ಶಿಪ್ ನ್ನು ಶ್ರೀಮತಿ ಇಂದಿರಾಗಾಂಧಿ ಕಾಲೇಜು ಸಾಗರ ವಿದ್ಯಾರ್ಥಿನಿಯರು ಪಡೆದುಕೊಂಡರು.

ಡಿವಿಎಸ್ ಕಾಲೇಜಿನ ವಿದ್ಯಾರ್ಥಿಯಾದ ಶ್ರೀ ಧನಂಜಯ ಅವರು ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಪಡೆದುಕೊಂಡರು. ಅದೇ ಕಾಲೇಜಿನ ಕುಮಾರಿ ಅಕ್ಷತಾ ಅವರು ಮಹಿಳೆಯರ ವಿಭಾಗದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಪಡೆದುಕೊಂಡರು.

ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ.ರಾಜೇಶ್ವರಿ ಎನ್ ಅವರು ಸರ್ವರನ್ನು ಸ್ವಾಗತಿಸಿದರು. ಕ್ರೀಡಾಕೂಟದ ಸಂಚಾಲಕರಾದ ಡಾ. ಶಿವಮೂರ್ತಿ ಅವರು ಸಾಧಕರನ್ನು ಪರಿಚಯಿಸಿದರು. ವಾಣಿಜ್ಯ ಕಾಲೇಜಿನ ಪ್ರಾಚಾರ್ಯರಾದ ಡಾ ವೀಣಾ ಎಂ ಕೆ.ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಧ್ವಜವನ್ನು ಕುಲಸಚಿವರಿಗೆ ಹಸ್ತಾಂತರಿಸಲಾಯಿತು.

ಕೋವಿಡ್ ಆತಂಕ ಮುಂದಿನ 40 ದಿನಗಳು ನಿರ್ಣಾಯಕ

0

ಚೀನಾ ಸೇರಿದಂತೆ ಅನೇಕ ದೇಶಗಳಲ್ಲಿ ಉಲ್ಬಣಿಸಿರುವ ಕೊರೋನಾ ಸೋಂಕು ಇದೀಗ ಭಾರತದಲ್ಲೂ ಹೊಸ ಆಲೆಯ ಭೀತಿ ಸೃಷ್ಟಿ ಮಾಡಿದೆ.

ಮುಂದಿನ 40 ದಿನಗಳು ದೇಶಕ್ಕೆ ಅತ್ಯಂತ ನಿರ್ಣಾಯಕವಾಗಿರಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ.

ಕೇಂದ್ರ ಆರೋಗ್ಯ ಇಲಾಖೆಯ ಕೋವಿಡ್ ತಜ್ಞರ ಸಲಹಾ ಸಮಿತಿಯಲ್ಲಿ ನಡೆದ ಸಭೆಯ ಬಳಿಕ ಈ ಮಾಹಿತಿ ಹೊರಬಿದ್ದಿದೆ. ಮುಂದಿನ ತಿಂಗಳು ದೇಶದಲ್ಲಿ ಸೋಂಕು ಉತ್ತುಂಗಕ್ಕೇರಲಿದ್ದು ಎಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ಮುನ್ನೆಚ್ವರಿಕೆ ನೀಡಿದೆ.
ಅದನ್ನು ಆದರಿಸಿ ತಜ್ಞರು ಈ ಎಚ್ಚರಿಕೆ ನೀಡಿದ್ದಾರೆ.

ನಿರ್ಲಕ್ಷ್ಯ ವಹಿಸದೆ ಕೊರೋನಾ ಮುನ್ನೆಚ್ಚರಿಕೆ ನಿರ್ವಹಿಸಿದರೆ ಪರಿಣಾಮಕಾರಿಯಾಗಿ ಪರಿಸ್ಥಿತಿ ಎದುರಿಸಬಹುದು. ಕೊರೋನಾ ಉಪ ತಳಿ ಹೆಚ್ಚಳದಿಂದ ಸೋಂಕು ಹೆಚ್ಚಳ ನಿರೀಕ್ಷೆ ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಸೋಂಕಿನ ಅಲೆ ಹೆಚ್ಚಾದರೂ ಸೋಂಕಿನ ತೀವ್ರತೆ ಕಡಿಮೆ ಸೋಂಕಿನ ಅಲೆ ಹೆಚ್ಚಾದರೂ ಸೋಂಕಿನ ತೀವ್ರತೆ ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಚೀನಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಕೆಲವು ದೇಶಗಳಲ್ಲಿ ಕೋವಿಡ್ -19 ಪ್ರಕರಣಗಳ ಹೆಚ್ಚಳದ ಮಧ್ಯೆ, ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ ಮತ್ತು ಯಾವುದೇ ಘಟನೆಗೆ ಸಿದ್ಧರಾಗುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಿದೆ.

ಜನವರಿ 27 ಹಂಪಿ ಉತ್ಸವ ಮುಖ್ಯಮಂತ್ರಿಗಳಿಂದ ಉದ್ಘಾಟನೆ- ಸಚಿವೆ ಶಶಿಕಲಾ ಜೊಲ್ಲೆ

0

ಜನವರಿ 27 ರಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹಂಪಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ಸಂಸ್ಥೆಗಳ ಸಚಿವೆ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಹೇಳಿದರು.

ಬುಧವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಜಯನಗರ ಜಿಲ್ಲಾಡಳಿತದ ಅಧಿಕಾರಿಗಳ ಜೊತೆ ಸಭೆ ನಡೆಸಿ ಹಂಪಿ ಉತ್ಸವದ ಸಿದ್ದತೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.
ಕೋವಿಡ್ ನಂತರ ಮತ್ತು ವಿಜಯನಗರ ಜಿಲ್ಲೆ ಹೊಸದಾಗಿ ನಿರ್ಮಾಣವಾದ ನಂತರ ನಡೆಸುತ್ತಿರುವ ಹಂಪಿ ಉತ್ಸವ ಇದಾಗಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಅದ್ದೂರಿಯಾಗಿ ಉತ್ಸವ ಆಚರಣೆಗೆ ಸೂಚನೆ ನೀಡಲಾಗಿದ್ದು ಅಗತ್ಯ ಸಿದ್ದತೆಗಳನ್ನು ಚುರುಕುಗೊಳಿಸುವಂತೆ ಇಂದು ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗೆ ಸಚಿವರು ಸೂಚನೆ ನೀಡಿದರು.

ಮುಖ್ಯಮಂತ್ರಿಗಳಿಂದ ಉದ್ಘಾಟನೆ:

ಕಳೆದ ಬಾರಿ ವಿಜಯನಗರ ಜಿಲ್ಲೆಯಲ್ಲಿ ನಡೆಸಿದ ಸಭೆಯಲ್ಲಿ ಜನವರಿ 27, 28 ಮತ್ತು 29 ರಂದು ಹಂಪಿ ಉತ್ಸವ ಆಚರಣೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಬುಧವಾರ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದ್ದು, ಅವರು ಜನವರಿ 27 ರಂದು ಉದ್ಘಾಟನೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ದಸರಾ ಮಾದರಿಯ ದೀಪಾಲಂಕಾರ: ದಸರಾ ಮಾದರಿಯಲ್ಲಿ ಹಂಪಿ ಹಾಗೂ ಹೊಸಪೇಟೆಯಲ್ಲಿ ದೀಪದ ಆಲಂಕಾರ ಮಾಡುವ ಬಗ್ಗೆ ವಿಸ್ತ್ರುತವಾಗಿ ಚರ್ಚಿಸಲಾಯಿತು. ಹೊಸದಾಗಿ ದೀಪಾಲಂಕಾರ ಸಮಿತಿಯನ್ನು ರಚನೆ ಮಾಡಲಾಗಿದ್ದು, ಸದರಿ ಸಮಿತಿಯ ಸದಸ್ಯರು ಹೊಸಪೇಟೆ, ಕಮಲಾಪುರ, ಹಂಪಿ ಈ ಮೂರು ಸ್ಥಳಗಳ ಮುಖ್ಯ ರಸ್ತೆಗಳ ಪ್ರಮುಖ ಸ್ಥಳಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲು ಯೋಜನೆ ತಯಾರಿಸಿ ಪ್ರಸ್ತುತ ಪಡಿಸಲು ಸೂಚನೆ ನೀಡಲಾಯಿತು.

ಸ್ಥಳೀಯ ಕಲಾತಂಡಗಳಿಗೆ ಹೆಚ್ಚಿನ ಆದ್ಯತೆ: ಹಂಪಿ ಉತ್ಸವದಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಕೋರಿ ಸುಮಾರು 1036 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳ ಆಯ್ಕೆಗೆ ಸಮಿತಿಯನ್ನು ರಚಿಸಲಾಗಿದ್ದು ಇದುವರೆಗೂ ಅವಕಾಶ ಸಿಗದ ಸ್ಥಳೀಯ ಕಲಾವಿದರುಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಸಚಿವರು ಸೂಚನೆ ನೀಡಿದರು.

ಕಾನೂನು ಸುವ್ಯವಸ್ಥೆಗೆ ಅಗತ್ಯ ತಯಾರಿ:ಲಕ್ಷಾಂತರ ಜನರು ಸೇರುವ ಈ ಉತ್ಸವದಲ್ಲಿ ಅಗತ್ಯ ಕಾನೂನು ಸುವ್ಯವಸ್ಥೆಗೆ ವ್ಯವಸ್ಥೆ ಮಾಡಬೇಕು. ಹಂಪಿ ಪ್ರದೇಶದಲ್ಲಿ ಸಂಪೂರ್ಣ ಸಿ.ಸಿ ಟಿವಿಗಳನ್ನು ಅಳವಡಿಸಬೇಕು. ಹಂಪಿಗೆ ಹೋಗುವ ಮಾರ್ಗವಾದ ಕಡ್ಡಿರಾಂಪುರ ಸ್ವಾಗತ ಕಮಾನಿನಿಂದ ಕಡ್ಡಿರಾಂಪೂರ, ಕೃಷ್ಣ ದೇವಸ್ಥಾನ, ಉದ್ದಾನ ವೀರಭದ್ರೇಶ್ವರ ದೇವಸ್ಥಾನದ ಮಾರ್ಗದ ಮೂಲಕ ಕಮಲಾಪುರದವರೆಗೆ ಏಕಮುಖ ಮಾರ್ಗ ಸಂಚಾರ ವ್ಯವಸ್ಥೆ ಮಾಡುವುದು. ಹಂಪಿ ಪ್ರದೇಶದಲ್ಲಿ ಅವಶ್ಯವಿದ್ದ ಕಡೆಗಳಲ್ಲಿ ಶಾಶ್ವತವಾಗಿ ಸಂಚಾರ ಸೂಚನಾ ಫಲಕಗಳನ್ನು ಅಳವಡಿಸಿ ಸುವ್ಯವಸ್ಥಿತ ವಾಹನ ನಿಲುಗಡೆಗೆ ಅವಕಾಶ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾತಂಡಗಳಿಂದ ಹೊಸಪೇಟೆ ನಗರದಲ್ಲಿ ವಸಂತವೈಭವ ಮೆರವಣಿಗೆ ಕಾರ್ಯಕ್ರಮ, ತುಂಗಾನದಿಯ ತಟದಲ್ಲಿ ತುಂಗಾರತಿ, ವಿಜಯನಗರ ವೈಭವದ ಕುರಿತು ಸುಮಾರು 300 ಕಲಾವಿದರನ್ನೊಳಗೊಂಡ ಧ್ವನಿ ಮತ್ತು ಬೆಳಕು ಕಾರ್ಯಕ್ರಮ, ಹಂಪಿ ಬೈ ಸ್ಕೈ, ವಿಭಿನ್ನ ರೀತಿಯ ಫಲಪುಷ್ಪ ಪ್ರದರ್ಶನ, ಅಶ್ವದಳ ಪ್ರದರ್ಶನ, ಕುಸ್ತಿ ಹಾಗೂ ಇತರೆ ಗ್ರಾಮೀಣ ಕ್ರೀಡೆಗಳ ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದರು.
ಸಭೆಯಲ್ಲಿ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ವೆಂಕಟೇಶ್, ಸಹಾಯಕ ಆಯುಕ್ತ ಸಿದ್ರಾಮೇಶ್ವರ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು

ಚಿಕಿತ್ಸಾದರ ಪಟ್ಟಿ ಪರಿಶೀಲಿಸಿ ‌ನಿಗದಿಪಡಿಸಲು ಐಎಂಎ ಮನವಿ

0

ಭಾರತೀಯ ವೈದ್ಯಕೀಯ ಸಂಘ, ಶಿವಮೊಗ್ಗ ಶಾಖೆಯು ಯಶಸ್ವಿನಿ ಯೋಜನೆಯಲ್ಲಿನ ವಿವಿಧ ಕಾರ್ಯ ಚಿಕಿತ್ಸೆಗಳ ಪ್ಯಾಕೇಜ್ ದರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿತು.

ಐಎಂಎ ಅಧ್ಯಕ್ಷರಾದ ಡಾ .ಅರುಣ್ ಎಂ ಎಸ್ ನೇತೃತ್ವದಲ್ಲಿ ಐಎಂಎ ಶಿವಮೊಗ್ಗ ಶಾಖೆಯ ಪದಾಧಿಕಾರಿಗಳು ಡಿಸಿ ಸೆಲ್ವಮಣಿ ಹಾಗೂ ಸಹಕಾರ ಸಂಘಗಳ ಒಕ್ಕೂಟದ ಡಿಆರ್ ವಾಸುದೇವ್ ಹಾಗು ಜಿಲ್ಲಾ ಆರೋಗ್ಯ ಇಲಾಖೆ ಅವರಿಗೆ ಮನವಿ ಪತ್ರವನ್ನು 28.12.22ರ ಸಂಜೆ ಸಲ್ಲಿಸಿದರು.

ಐಎಂಎಯ ಎಲ್ಲಾ ಪದಾಧಿಕಾರಿಗಳು ಸಹಕಾರಿ ಸದಸ್ಯರಿಗೆ ಮತ್ತು ಇತರರಿಗೆ ಯಶಸ್ವಿನಿ ಯೋಜನೆಯನ್ನು ಪುನರಾರಂಭಿಸುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ವಿವಿಧ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ನಿಗದಿಪಡಿಸಲಾದ ಪ್ಯಾಕೇಜ್ ಸುಂಕವು ಅವೈಜ್ಞಾನಿಕ, ಅಭಾಗಲಬ್ಧ ಮತ್ತು ತಜ್ಞರಿಂದ ತಕ್ಷಣದ ಪರಿಶೀಲನೆಯ ಅಗತ್ಯವಿದೆ ಎಂದು IMA ದೃಢವಾದ ಅಭಿಪ್ರಾಯವನ್ನು ಹೊಂದಿದೆ ಎಂದು ತಿಳಿಸಿದರು .

ಸಿಸೇರಿಯನ್ ನಂತಹ ಶಸ್ತ್ರಚಿಕಿತ್ಸೆಯ ಒಂದು ಉದಾಹರಣೆಯನ್ನು ಉಲ್ಲೇಖಿಸಿ ಕೇವಲ ರೂ. 9000/- ಮೊತ್ತವು ಶಸ್ತ್ರಚಿಕಿತ್ಸಾ ಔಷಧಿಗಳಿಗೂ ಉಪಭೋಗ್ಯಕ್ಕೆ ಸಾಕಾಗುವುದಿಲ್ಲ ಎಂದು ಐಎಂಎ ಕಾರ್ಯದರ್ಶಿಗಳಾದ ಡಾ. ರಕ್ಷಾ ರಾವ್ ಹೇಳಿದರು. ಈ ದರದಲ್ಲಿ ಒಳ್ಳೆಯ ಸೇವೆಯನ್ನು ಹಾಗು ಅದನ್ನು ಮಾಡುವ ವೈದ್ಯರಿಗೆ ನ್ಯಾಯಯುತವಾದ ದರವನ್ನು ಕೊಡಲು ಸಾಧ್ಯವೇ ಎಂದು ಸರ್ಕಾರ ಮರು ಯೋಚನೆ ಮಾಡಬೇಕೆಂದು ಹೇಳಿದರು.

ಯೋಜನೆಯ ಸುಗಮ ಪರಿಣಾಮಕಾರಿ ಕಾರ್ಯನಿರ್ವಹಣೆಗಾಗಿ, ಸರ್ಕಾರ, ಸೇವಾ ಪೂರೈಕೆದಾರರು ಮತ್ತು ಟಿಪಿಎ ನಡುವೆ ಅರ್ಥಪೂರ್ಣ ಚರ್ಚೆಗಳು ಮತ್ತು ಸಂವಾದಗಳು ನಡೆಯಬೇಕು ಎಂದು ಒತ್ತಾಯಿಸಿದರು.

ಆಸ್ಪತ್ರೆಗಳ ನಿರ್ವಹಣಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿದ್ದು, ಎರಡು ವರ್ಷಕ್ಕೊಮ್ಮೆಯಾದರೂ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಸಲ್ಲಿಸಿದ ಜ್ಞಾಪನಾ ಪತ್ರದ ಪ್ರಮುಖ ಅಂಶವೆಂದರೆ;

ಹಣದುಬ್ಬರ ಮತ್ತು ಪ್ರಸ್ತುತ ಆಸ್ಪತ್ರೆಗಳನ್ನು ನಡೆಸುವ ಹೆಚ್ಚಿನ ವೆಚ್ಚವನ್ನು ಪರಿಗಣಿಸಿ ಪ್ಯಾಕೇಜ್ ದರಗಳನ್ನು ಪರಿಷ್ಕರಿಸಲು ಕೋರಿಕೆ. ಕೊನೆಯ ಪ್ಯಾಕೇಜ್ ದರಗಳನ್ನು 2010 ರಲ್ಲಿ ನಿಗದಿಪಡಿಸಲಾಗಿದೆ. ಮತ್ತು 2018 ರವರೆಗೆ ಮುಂದುವರಿಸಲಾಗಿದೆ. ಪ್ರಸ್ತುತ ಪ್ಯಾಕೇಜ್ ದರಗಳು 2010 ರ ಪ್ಯಾಕೇಜ್ ದರಗಳಿಗಿಂತ ಕಡಿಮೆ (30-50% ರಷ್ಟು) ಅವೈಜ್ಞಾನಿಕವಾಗಿದೆ. ಮತ್ತು ಈ ಪ್ಯಾಕೇಜ್ ದರದಲ್ಲಿ ಫಲಾನುಭವಿಗಳಿಗೆ ಯಾವುದೇ ಖಾಸಗಿ ಆಸ್ಪತ್ರೆಯು ನ್ಯಾಯವನ್ನು ನೀಡಲು ಸಾಧ್ಯವಿಲ್ಲ.

ಯೋಜನೆಯ ಸುಗಮ ಅನುಷ್ಠಾನದಲ್ಲಿ ಸ್ಪರ್ಧಾತ್ಮಕ TPA ಗುರುತಿಸಲು ಮತ್ತು ಆಯ್ಕೆ ಮಾಡಲು.
2018 ರಲ್ಲಿ ಮುಚ್ಚಲಾದ ಹಿಂದಿನ ಯಶಸ್ವಿನಿ ಆರೋಗ್ಯ ಯೋಜನೆಯ ಸೇವೆ ಒದಗಿಸಿದ ಎಲ್ಲಾ ಆಸ್ಪತ್ರೆಗಳ ಉಳಿದಿರುವ ಬಾಕಿಯನ್ನು ತೆರವುಗೊಳಿಸಲು, ದರ ನಿಗಧಿ ಸಮಿತಿಯಲ್ಲಿ ಐಎಂಎ ಹಾಗು ಕೆಪಿಎಂಇಎ ವತಿಯಿಂದ ಇಬ್ಬಿಬ್ಬ ಸದಸ್ಯರನ್ನು ನೇಮಕ ಮಾಡಿ ವೈದ್ಯ ಸಮೂಹದ ಸಲಹೆ ಕಾಳಜಿಯನ್ನೂ ಪರಿಗಣಿಸುವುದು.
ಹಣದುಬ್ಬರ ಮತ್ತು ಆಸ್ಪತ್ರೆಗಳ ನಿರ್ವಹಣೆಯ ಪ್ರಸ್ತುತ ಹೆಚ್ಚಿನ ವೆಚ್ಚವನ್ನು ಪರಿಗಣಿಸಿ ಪ್ಯಾಕೇಜ್ ದರಗಳನ್ನು ಪರಿಷ್ಕರಿಸಲು.
ಖಜಾಂಚಿ ಡಾ . ಶಶಿಧರ್ ಸೇರಿದಂತೆ ಪ್ರಮುಖ ವೈದ್ಯರುಗಳಾದ ಡಾ. ಬಿರಾದಾರ್ , ಡಾ. ಸುಬ್ಬಣ್ಣ , ಡಾ . ಉದಯ್ ರಾವ್ , ಡಾ . ವಿಶ್ವನಾಥ್ , ಡಾ .ರಾಜಶೇಖರ್ ಉಪಸ್ಥಿತರಿದ್ದರು

ಕನ್ನಡದ ಪೆಂಪು ಕುವೆಂಪು

0

ಕುವೆಂಪು’ ಎಂಬ ಕಾವ್ಯನಾಮದಿಂದಲೇ ಪ್ರಸಿದ್ದರಾಗಿರುವ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಇವರು ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರು.

ಕುವೆಂಪು ಅವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ 29, 1904 ರಲ್ಲಿ ಜನಿಸಿದರು.
ಇವರ ತಂದೆ ವೆಂಕಟಪ್ಪ. ತಾಯಿ ಸೀತಮ್ಮ. ಕುವೆಂಪು ಅವರು ತಮ್ಮ ಬಾಲ್ಯವನ್ನು ಕುಪ್ಪಳ್ಳಿಯಲ್ಲಿ ಕಳೆಯುತ್ತಾರೆ .

ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಕಾರ್ಯ ನಿರ್ವಹಿಸಿದರು. ನಂತರದ ದಿನಗಳಲ್ಲಿ ಉಪಕುಲಪತಿಗಳಾದರು.

ಚಿಕ್ಕಂದಿನಿಂದಲೂ ವಿದ್ಯಾಭ್ಯಾಸದೊಂದಿಗೆ ಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದರು.

ವರಕವಿ ಬೇಂದ್ರೆಯವರಿಂದ “ಯುಗದ ಕವಿ” “ಜಗದ ಕವಿ” ಎನಿಸಿಕೊಂಡವರು ಕುವೆಂಪು.
ರಾಷ್ಟ್ರಕವಿ , ಸಾಹಿತ್ಯ ದಿಗ್ಗಜ ಎಂದೇ ಪ್ರಸಿದ್ಧರಾಗಿರುವ ಕುವೆಂಪುರವರು ವಿದ್ಯಾರ್ಥಿ ದೆಸೆಯಲ್ಲಿಯೇ 1928 ರಲ್ಲಿ ಬೆಂಗಳೂರಿನಲ್ಲಿ ನಡೆದ ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷತೆಯ ಗೌರವ ಇವರಿಗೆ ಸಂದಿತು .

ಕುವೆಂಪುರವರು ಕಾವ್ಯ, ಕವನ, ಕಥೆ, ಕಾದಂಬರಿ, ವಿಮರ್ಶೆ, ಅನುವಾದ, ನಾಟಕ ಹೀಗೆ ಎಲ್ಲಾ ಬಗೆಯ ಸಾಹಿತ್ಯ ರೂಪಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಇವರು ಕನ್ನಡದಲ್ಲಿ 80 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

1933 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿ ಸಮ್ಮೇಳನದ ಅಧ್ಯಕ್ಷರಾದರು.1937 ಎಪ್ರಿಲ್ 30 ರಂದು ಹೇಮಾವತಿಯವರನ್ನು ಕೈ ಹಿಡಿದರು.

ಪೂರ್ಣಚಂದ್ರ ತೇಜಸ್ವಿ ಮತ್ತು ಕೋಕಿಲೋದಯ ಚೈತ್ರ ಎಂಬ ಪುತ್ರರು, ಇಂದುಕಲಾ ಮತ್ತು ತರಿಣಿ ಎಂಬ ಇಬ್ಬ ಪುತ್ರಿಯರಿದ್ದಾರೆ. ರಾಮಕೃಷ್ಣ ಪರಮಹಂಸರ ಜೀವನದಿಂದ ಪ್ರಭಾವಿತರಾದ ಕುವೆಂಪುರವರು ಸ್ವಾಮಿ ಶಿವಾನಂದರಿಂದ ದೀಕ್ಷೆ ಪಡೆದಿದ್ದಾರೆ.

ಜ್ಞಾನಪೀಠ ಪ್ರಶಸ್ತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು ಕುವೆಂಪು.

ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ, ಹಾಗೂ ಪಂಪ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದವರು ಕುವೆಂಪು.

ಜಯ ಭಾರತ ಜನನಿಯ ತನುಜಾತೆ‘, ‘ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’,

‘ಓ ನನ್ನ ಚೇತನ ಆಗುವ ನೀ ಅನಿಕೇತನ’

ಹೀಗೆ ರಾಷ್ಟ್ರಕವಿ ಕುವೆಂಪು ಅವರ ಹಲವಾರು ಕವನಗಳು ಕನ್ನಡಿಗರ ಮನದಾಳದಲ್ಲಿ ಹಾಸುಹೊಕ್ಕಾಗಿದೆ. ಕನ್ನಡದ ಅಗ್ರಮಾನ್ಯ ಕಾದಂಬರಿಕಾರ ನಾಟಕಕಾರ, ವಿಮರ್ಷಕ ಮತ್ತು ಚಿಂತಕ, ಇಪ್ಪತ್ತನೆಯ ಶತಮಾನದಲ್ಲಿ ಕಂಡ ದೈತ್ಯ ಪ್ರತಿಭೆ ಕುವೆಂಪು.

ಜಲಗಾರ, ಯಮನಸೋಲು,
ಬೊಮ್ಮನಹಳ್ಳಿ ಕಿಂದರಿ ಜೋಗಿ,
ವಾಲ್ಮೀಕಿ ಭಾಗ್ಯ ಸ್ಮಶಾನ ಕುರುಕ್ಷೇತ್ರ, ಮಹಾರಾತ್ರಿ, ರಕ್ತಾಕ್ಷಿ, ಬಿರುಗಾಳಿ, ಬೆರಳ್‌ಗೆ ಕೊರಳ್, ಕಾನೂರು ಹೆಗ್ಗಡತಿ,
ಮಲೆಗಳಲ್ಲಿ ಮದುಮಗಳು ಇವು ಕುವೆಂಪು ಅವರ ಪ್ರಮುಖ ಕಾವ್ಯ ಕೃತಿಗಳಾಗಿವೆ.

ಅವರು ಕನ್ನಡಕ್ಕೆ ನೀಡಿದ ಕೊಡುಗೆಗಳಿಗಾಗಿ ಕನ್ನಡದ ಸಾಹಿತ್ಯಗಳನ್ನು ರಚಿಸಿದ್ದಕ್ಕಾಗಿ ಅವರಿಗೆ ಅನೇಕ ಮನ್ನಣೆ ಪ್ರಶಸ್ತಿಗಳು ದೊರೆತವು.

ಕನ್ನಡದ ಮಹೋನ್ನತ ಕವಿ ಕುವೆಂಪು 11 ನವೆಂಬರ್ 1994 ರಲ್ಲಿ ಇಹಲೋಕ ತ್ಯಜಿಸಿದರು.

ಶಬರಿಮಲೆ ಯಾತ್ರಿಕರಿಗೆ ಸರ್ಜಿ ಪ್ರತಿಷ್ಠಾನದಿಂದ ಮೆಡಿಕಲ್ ಕಿಟ್ ವಿತರಣೆ

0

ಶಿವಮೊಗ್ಗ:
ನಡೆದಾಡುವ ಅಯ್ಯಪ್ಪ ಶ್ರೀ ರೋಜಾ ಷಣ್ಮುಗಂ ಗುರೂಜಿಯವರ ಹುಟ್ಟಿದ ಹಬ್ಬವನ್ನು ಅವರ ಶಿಷ್ಯ ವೃಂದದಿಂದ ಭಕ್ತಿ ಪೂರ್ವಕವಾಗಿ ನಡೆಯಿತು.

ಮುಂಜಾನೆ ಸ್ವಾಮಿ ಅಯ್ಯಪ್ಪನ ಜೊತೆ ಗುರೂಜಿಯವರ ಪಾದುಕೆಯು ಗುರೂಜಿ ಅವರ ಮನೆಯಿಂದ ಹೊರಟು ಸಾರ್ವಜನಿಕ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಾರ್ಗವಾಗಿ ಮೆರವಣಿಗೆಯಲ್ಲಿ ಹೊಸೂಡಿ ಫಾರ್ಮಿಗೆ ತೆಗೆದುಕೊಂಡು ಹೋಗಲಾಯಿತು. ಹೊಸೂಡಿ ಗ್ರಾಮಸ್ಥರು ಹಾಗೂ ಶ್ರೀ ಶಬರೀಶ ಭಕ್ತ ಮಂಡಳಿ ವತಿಯಿಂದ ವಿಶೇಷ ಪೂಜೆ ನೆರವೇರಿಸಿದರು. ಗುರುಗಳ ದಿವ್ಯ ಸಾನಿಧ್ಯದಲ್ಲಿ ಶಿಷ್ಯರು ಅವರ ಆಶೀರ್ವಾದ ಪಡೆದರು.

ಶ್ರೀ ಸಾರ್ವಜನಿಕ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರೋಜಾ ಗುರೂಜಿ ಶಿಷ್ಯ ವೃಂದದಿಂದ ಏರ್ಪಡಿಸಲಾದ ಗುರುವಂದನಾ ಕಾರ್ಯಕ್ರಮವು ಪುಟಾಣಿ ಮಕ್ಕಳ ಹಾಡಿನಿಂದ ಶುರು ಮಾಡಿ, ಅಯ್ಯಪ್ಪನ ಭಜನೆ, ಡಾ.ಧನಂಜಯ್ ಸರ್ಜಿ, ಹಾಗೂ ಶಬರೀಶ್ ಗುರುಸ್ವಾಮಿಗಳು ಮಾತನಾಡಿದರು.

ಇದೇ ಸಂದರ್ಭದಲ್ಲಿ 25 ವರ್ಷ ಶಬರಿಮಲೆ ಯಾತ್ರೆ ಮಾಡಿದ ಗುರುಸ್ವಾಮಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಸರ್ಜಿ ಫೌಂಡೇಶನ್ ವತಿಯಿಂದ ಡಾ. ಧನಂಜಯ ಸರ್ಜಿ ಅವರು ಶಬರಿಮಲೆ ಯಾತ್ರೆ ಮಾಡುವ ಭಕ್ತರಿಗೆ ಮೆಡಿಕಲ್ ಕಿಟ್ ಹಾಗೂ ತುರ್ತು ಆರೋಗ್ಯ ಸಮಾಲೋಚನೆಗೆ ಇಬ್ಬರು ವೈದ್ಯರ ಫೋನ್ ನಂಬರ್ ಸಹ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ರೋಜಾ ಗುರೂಜಿ ಶಿಷ್ಯ ವೃಂದ, ಹೊಸೂಡಿ ಗ್ರಾಮಸ್ಥರು ಹಾಗೂ ಶ್ರೀ ಶಬರೀಶ ಭಕ್ತ ಮಂಡಳಿಯವರು ಉಪಸ್ಥಿತರಿದ್ದರು.

ಮನಸ್ಸಿನಿಂದ ಮನಸ್ಸಿಗೆ- 8

0

ಅಕ್ಷರಗಳ ಸಂಶೋಧನೆಯೊಂದಿಗೆ ಉಗಮವಾದ ಅದ್ಭುತ ಸೃಷ್ಟಿ ಈ ಬರವಣಿಗೆ. ಅಕ್ಷರಗಳಿಗಿಂತ ಮೊದಲು ಸಹ ಬರವಣಿಗೆ ಅಸ್ತಿತ್ವದಲ್ಲಿತ್ತು. ಆದರೆ ಚಿತ್ರ, ಸಂಜ್ಞೆ ಮುಂತಾದ ವಿಚಿತ್ರ ವೈಶಿಷ್ಟ್ಯ ರೂಪದಲ್ಲಿ ಅದು ಬಳಕೆಯಲ್ಲಿತ್ತು.

ಬರವಣಿಗೆ ಅದೊಂದು ಬರೆಯುವ ಕ್ರಿಯೆ ಅಥವಾ ಅಭಿಪ್ರಾಯ ವ್ಯಕ್ತಪಡಿಸುವ ಮಾರ್ಗ ಅಥವಾ ಭಾವನೆಗಳ ದಾಖಲೀಕರಣ ಅಥವಾ ಅಕ್ಷರಗಳ ಜೋಡಣಾ ಸ್ವಾತಂತ್ರ್ಯ ಅಥವಾ ಭಾಷೆಯ ಕ್ರಮಬದ್ಧ ಉಪಯೋಗ ಅಥವಾ ಸಂಪರ್ಕ ಮಾಧ್ಯಮ ಅಥವಾ
ಮನುಷ್ಯನ ಒಂದು ಕಲಾ ಪ್ರಕಾರ ಹೀಗೆ ನಾನಾ ರೀತಿಯ ಉತ್ತರಗಳನ್ನು ಹುಡುಕಿ ಹೇಳಬಹುದು.

ಯಾವಾಗ ಬರಹ ಒಂದು ಕ್ರಮಬದ್ಧತೆಯನ್ನು ಪಡೆಯಿತೋ ನಂತರದಲ್ಲಿ ವಿವಿಧ ಭಾಷೆಗಳು ಬೆಳವಣಿಗೆ ಹೊಂದಿದವು. ಅಕ್ಷರ ಸಂಶೋಧನೆಗು ಮೊದಲು ಭಾಷೆಗಳು ಅಸ್ತಿತ್ವದಲ್ಲಿದ್ದವು. ಆದರೆ ಲಿಪಿ ಇರಲಿಲ್ಲ. ಲಿಪಿಯ ಉಗಮದ ನಂತರ ಭಾಷೆಗಳು ಮಹತ್ವ ಪಡೆದುಕೊಂಡವು.

ಲ್ಯಾಟಿನ್, ಪ್ರಾಕೃತ, ಪಾಲಿ, ಪಾರ್ಸಿ, ಹಿಬ್ರೂ, ಸ್ಪಾನಿಷ್, ಚೀನೀ, ಅರಬ್ಬೀ, ಪರ್ಷಿಯನ್, ದ್ರಾವಿಡ, ಸಂಸ್ಕೃತ ಭಾಷೆಗಳು ಅತ್ಯಂತ ಪ್ರಾಚೀನ ಎಂದು ಹೇಳಲಾಗುತ್ತದೆ. ನನಗೆ ಈ ವಿಷಯದಲ್ಲಿ ತುಂಬಾ ಸ್ಪಷ್ಟವಾಗಿ ಮತ್ತು ಆಳವಾಗಿ ತಿಳಿದಿಲ್ಲ. ಸಾಮಾನ್ಯ ಜ್ಞಾನ ಮಾತ್ರ ಇದೆ. ಖಚಿತವಾಗಿ ತಿಳಿದ ಭಾಷಾ ತಜ್ಞರು ಇನ್ನಷ್ಟು ಮಾಹಿತಿ ಹಂಚಿಕೊಳ್ಳಬಹುದು.

ಇತಿಹಾಸ ಏನೇ ಇರಲಿ ಬರವಣಿಗೆ ಎಂಬುದು ಮಾನವ ನಾಗರಿಕತೆಯ ಎಲ್ಲವನ್ನೂ ಅಡಗಿಸಿಕೊಂಡು ಅದನ್ನು ಇಲ್ಲಿಯವರೆಗೂ ಮುನ್ನಡೆಸಿಕೊಂಡು ಬಂದ ಅತ್ಯುತ್ತಮ ವಾಹಕ.

ಬರಹಗಳ ಮೂಲಗಳು, ರೀತಿಗಳು, ಉಪಕರಣಗಳು, ಪ್ರಕಾರಗಳು, ರೂಪಗಳು, ಉದ್ದೇಶಗಳು, ಲಿಪಿಗಳು, ಭಾಷೆಗಳು ಎಷ್ಟೇ ಇರಬಹುದು ಆದರೆ ಬರಹ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಬರಹವಿಲ್ಲದೆಯೂ ಮನುಷ್ಯ ಬದುಕಬಹುದು ಮತ್ತು ಈಗಲೂ ಬಹಳಷ್ಟು ಜನ ಬದುಕುತ್ತಿದ್ದಾರೆ ಅದು ಅನಿವಾರ್ಯವಲ್ಲ. ಆದರೆ ಬರಹವಿಲ್ಲದಿದ್ದರೆ ಮನುಷ್ಯ ಕಳೆದುಕೊಳ್ಳುತ್ತಿದ್ದುದು ಏನು ಎಂದು ಯೋಚಿಸಿದಾಗ ಬರಹದ ಮಹತ್ವ ಅರ್ಥವಾಗುತ್ತದೆ.

ಬರಹವನ್ನು ಆಕಾಶದ ಅನಂತತೆಗೆ ಹೋಲಿಸಬಹುದು. ಅಕ್ಷರಗಳೇ ಬರಹದ ಮೂಲವಾದರು ಇಂದು ಅದೇ ಅಕ್ಷರಗಳಲ್ಲಿ ಬರಹದ ಸರಿಯಾದ ಮತ್ತು ಸ್ಪಷ್ಟವಾದ ಅರ್ಥವನ್ನು ಹಿಡಿದಿಡುವುದು ಸಾಧ್ಯವಿಲ್ಲ. ಅದು ಅಕ್ಷರವನ್ನು ಮೀರಿ ಬೆಳೆದಿದೆ. ಮನುಷ್ಯನ ಭಾವನೆ ಮತ್ತು ಬುದ್ದಿಶಕ್ತಿ ಬೆಳವಣಿಯಲ್ಲಿ ಅಕ್ಷರ ಮತ್ತು ಭಾಷೆ ಕೇವಲ ಮೆಟ್ಟಿಲಿನಂತೆ ಕೆಲಸ ಮಾಡುತ್ತಿದೆ. ಆತನ ಮನಸ್ಸೇ ಆತನ ತಲೆಯ ಮೇಲೆ ಕಿರೀಟದಂತೆ ಬಂದು ಕುಳಿತಿದೆ.

ಎಲ್ಲಾ ಪರಿವರ್ತನೆಗಳ ಬಳಿಕ ಬರವಣಿಗೆ ” ಸಾಹಿತ್ಯ ” ಎಂಬ ಪ್ರಕಾರದಲ್ಲಿ ಹೆಚ್ಚು ಪ್ರಕಾಶಮಾನವಾಗಿ, ಜನಪ್ರಿಯವಾಗಿ ರಾರಾಜಿಸುತ್ತಿದೆ.

” ಖಡ್ಗಕ್ಕಿಂತ ಲೇಖನಿ ಹರಿತ ” ಎಂಬುದು ಹಳೆಯ ಮಾತು. ಈಗ ಬರಹಗಳು ಬಾಂಬು ಬಂದೂಕುಗಳಿಗಿಂತ ಪ್ರಬಲವಾಗಿ ಕೆಲಸ ಮಾಡುತ್ತಿದೆ. ಕ್ರಾಂತಿಯ ಮೂಲದ್ರವ್ಯವಾಗಿಯೂ ಉಪಯೋಗಿಸಲಾಗುತ್ತಿದೆ.

ಬರಹ ನಮ್ಮನ್ನು ನಗಿಸುತ್ತದೆ, ಅಳಿಸುತ್ತದೆ, ಕೋಪವೂ ಸೇರಿ ನವ ರಸಗಳನ್ನು ಉತ್ಪತ್ತಿಮಾಡುತ್ತದೆ. ಹಾಗೆಯೇ ಬರಹ ಮೋಸ ವಂಚನೆ ದ್ರೋಹಗಳನ್ನು ಎಸಗುತ್ತದೆ.

ಕೆಲವು ಉತ್ಕೃಷ್ಟ ಬರಹಗಳು, ಕೆಲವು ಸಾಧಾರಣ ಬರಹಗಳು ಮತ್ತೆ ಕೆಲವನ್ನು ಕಳಪೆ ಬರಹಗಳು ಎಂಬುದಾಗಿಯೂ ವಿಂಗಡಿಸಲಾಗುತ್ತದೆ. ಇಲ್ಲಿ ಬರವಣಿಗೆಯ ಸಾಮರ್ಥ್ಯ ಮತ್ತು ಓದುಗರ ಸಾಮರ್ಥ್ಯ ಎರಡೂ ಪರೀಕ್ಷೆ ಒಳಪಡುತ್ತದೆ.

ಒಬ್ಬ ವ್ಯಕ್ತಿ ಬರಹಗಾರನಾಗಲು ಅರ್ಹತೆ ಮತ್ತು ಮಾನದಂಡಗಳೇನು ಎಂಬುದು ನಿರ್ದಿಷ್ಟವಾಗಿ ಇಲ್ಲ. ಆಸಕ್ತಿಯೇ ಮುಖ್ಯ. ಆ ಆಸಕ್ತಿ ಆತನ ಬರಹ ಶಕ್ತಿಯ ಮುಖಾಂತರ ಅರ್ಹತೆಯಾಗಿ ಪರಿವರ್ತನೆ ಹೊಂದುತ್ತದೆ.

ಆದರೆ ಬರಹ ಇಷ್ಟೊಂದು ಸರಳವಾಗಿಲ್ಲ. ಕೋಟಿ ಕೋಟಿ ಬರಹಗಾರರಿದ್ದಾರೆ. ವಿಶ್ವಮಟ್ಟದಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಮತ್ತು ಭಾರತದಲ್ಲಿ ಜ್ಞಾನಪೀಠ ಎಂಬ ಅತ್ಯುನ್ನತ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಇನ್ನೂ ಹಲವಾರು ಪ್ರಶಸ್ತಿ ಬಿರುದುಗಳು ಇವೆ.

ಬರವಣಿಗೆ ಹವ್ಯಾಸವು ಹೌದು, ವೃತ್ತಿಯೂ ಹೌದು, ಸಾಧನೆಯಾಗಿಯೂ ಗುರುತಿಸಲಾಗುತ್ತದೆ. ಬರಹಗಳಿಂದಲೇ ಬದುಕನ್ನು ಕಟ್ಟಿಕೊಂಡವರು ಇದ್ದಾರೆ, ಬರಹದಿಂದ ಹಣ ಅಧಿಕಾರ ಜನಪ್ರಿಯತೆ ಪಡೆದವರು ಇದ್ದಾರೆ, ಬರಹವನ್ನೇ ನಂಬಿ ಅನೇಕ ಕಷ್ಟ ನಷ್ಟಗಳಿಗೆ ಒಳಗಾದವರು ಸಹ ಸಾಕಷ್ಟು ಇದ್ದಾರೆ.

ಓದು ಬರಹಗಳು ಮನುಷ್ಯರನ್ನು ಹೆಚ್ಚು ನಾಗರಿಕವಾಗಿ ಮತ್ತು ಮಾನವೀಯವಾಗಿ ವರ್ತಿಸುವಂತೆ ಪ್ರೇರೇಪಿಸುತ್ತದೆ ಎಂಬ ಅಭಿಪ್ರಾಯವಿತ್ತು. ಆದರೆ ಅದು ಇತ್ತೀಚಿನ ಆಧುನಿಕ ಸಂದರ್ಭದಲ್ಲಿ ಅಷ್ಟೇನು ನಿಜವಲ್ಲ, ಬದಲಾಗಿ ಅವು ಆತನ ವ್ಯಕ್ತಿತ್ವವನ್ನು ಸಂಕುಚಿತ ಗೊಳಿಸುತ್ತಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿದೆ. ಓದು ಬರಹಗಳೇ ಬೇರೆ, ವಾಸ್ತವ ಬದುಕೇ ಬೇರೆ ಎಂದು ಕೆಲವರು ಹಾಸ್ಯ ಮಾಡುತ್ತಾರೆ.

ಮೊದಲಿಗೆ ಬರವಣಿಗೆ ಎಂಬುದು ಕೆಲವೇ ಕೆಲವು ಜನರ ಸ್ವತ್ತಾಗಿತ್ತು. ಮಾಧ್ಯಮಗಳ ಉಗಮದೊಂದಿಗೆ ಇನ್ನೂ ಹೆಚ್ಚು ಜನ ಬರಹಗಾರರಿಗೆ ವೇದಿಕೆ ದೊರೆಯಿತು. ಆದರೆ ಸಾಮಾಜಿಕ ಜಾಲತಾಣಗಳ ಅಭಿವೃದ್ಧಿಯೊಂದಿಗೆ ಬರವಣಿಗೆ ಸಾಮಾನ್ಯ ಜನರಿಗೂ ಬಾಗಿಲು ತೆರೆಯಿತು.

ಈಗ ಅಕ್ಷರ ಬಲ್ಲ, ಮೊಬೈಲ್ ಕಂಪ್ಯೂಟರ್ ಲ್ಯಾಪ್ ಟಾಪ್ ಮುಂತಾದ ವಸ್ತುಗಳನ್ನು ಹೊಂದಿರುವ ಎಲ್ಲರೂ ಏನಾದರೂ ಬರೆಯಲು ಪ್ರಾರಂಭಿಸಿದ್ದಾರೆ ಅಥವಾ ಕನಿಷ್ಠ ಕೆಲವು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನಾದರು ವ್ಯಕ್ತಪಡಿಸುತ್ತಾರೆ. ಇದೊಂದು ಕ್ರಾಂತಿಕಾರಕ ಬದಲಾವಣೆ.

ಆದರೆ ಬರೆಯುವ ರೀತಿ, ವಿಷಯಗಳು, ಉದ್ದೇಶಗಳು ಅನೇಕ ಒಳ್ಳೆಯ ಮೌಲ್ಯಗಳನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸುತ್ತಿದೆ. ಬರವಣಿಗೆ ವ್ಯಾಪಾರವಾಗಿದೆ, ಅಷ್ಟೇ ಅಲ್ಲ ಬರವಣಿಗೆ ವಿಷಯುಕ್ತ ಕತ್ತಿಯಾಗಿದೆ. ಬರಹಗಾರ ವಿಷ ಉಗುಳುವ ಹಾವಿನಂತಾಗಿದ್ದಾನೆ. ಬರಹಗಳು ನಿಯಂತ್ರಣ ಕಳೆದುಕೊಳ್ಳುತ್ತಿವೆ. ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ.

ಸಾಹಿತ್ಯವಾಗಿ ಬರಹ ಒಂದು ಅತ್ಯದ್ಭುತ ಪ್ರಯೋಗ. ಅದೇ ಪ್ರಯೋಗ ಮಾನವ ಜನಾಂಗದ ವಿನಾಶಕ್ಕೂ ಕಾರಣವಾಗುತ್ತಿದೆ. ಅದರ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಬರಹದ ಮುಖಾಂತರವೇ ಮನವಿ ಮಾಡಿಕೊಳ್ಳಬೇಕಾಗಿದೆ.

ಬರವಣಿಗೆ ಮತ್ತು ಬರಹಗಾರ,
ಬದುಕು ಮತ್ತು ಸಮಾಜದ ಶುದ್ಧ ಚಾರಿತ್ರ್ಯ ಮತ್ತು ವ್ಯಕ್ತಿತ್ವದ ಪ್ರತಿಬಿಂಬವಾಗುವ ಭವಿಷ್ಯದ ಕನಸು ಕಾಣುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

-ವಿವೇಕಾನಂದ ಎಚ್. ಕೆ.