Institute of Indian Foundrymen ಫೌಂಡ್ರಿ ಉದ್ಯಮವು ಎದುರಿಸುತ್ತಿರುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ತಂತ್ರಜ್ಞಾನ ಹಾಗೂ ಕೌಶಲ್ಯವನ್ನು ನಿರಂತರವಾಗಿ ನವೀಕರಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಪಿಇಎಸ್ಐಟಿಎಂ ರಿಜಿಸ್ಟ್ರಾರ್ ಡಾ. ನಾಗರಾಜ್ ಆರ್ ರವರು ಹೇಳಿದರು.
ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ (ಐಐಎಫ್) ಶಿವಮೊಗ್ಗ ಚಾಪ್ಟರ್ ವತಿಯಿಂದ 77ನೇ ರಾಷ್ಟ್ರೀಯ ಫೌಂಡ್ರಿ ದಿನಾಚರಣೆಯನ್ನು ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಈ ವೇಳೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, “ಕೆಲಸದ ನಿರ್ವಹಣೆ ಎಂದರೆ ಶಕ್ತಿ ನಿರ್ವಹಣೆ” ಎಂಬ ತತ್ವವನ್ನು ಉಲ್ಲೇಖಿಸಿದ ಅವರು, ಕೆಲಸದ ಜವಾಬ್ದಾರಿಗಳ ಜೊತೆಗೆ ವೈಯಕ್ತಿಕ ಜೀವನದಲ್ಲೂ ಸಮತೋಲನ ಕಾಪಾಡಿಕೊಳ್ಳುವ ಮಹತ್ವವನ್ನು ತಿಳಿಸಿದರು.
ಫೌಂಡ್ರಿ ಕ್ಷೇತ್ರಕ್ಕೆ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ತಜ್ಞರಾದ ಟೆಕ್ನೋರಿಂಗ್ಸ್‌ನ ಶಶಿಧರ್ ಭೂಪಾಳಂ ಹಾಗೂ ಪ್ರಗತಿ ಸ್ಟೀಲ್‌ನ ಸುರೇಂದ್ರ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಬೆಸ್ಟ್ ಪ್ರಾಕ್ಟಿಕಲ್ ಫೌಂಡ್ರಿಮನ್ ಪ್ರಶಸ್ತಿಯನ್ನು ಶಾಂತಲಾ ಸ್ಫೆರೋಕಾಸ್ಟ್‌ನ ರಾಜಪ್ಪ ಎ. ಹಾಗೂ ಬೆಸ್ಟ್ ಕುಶಲ್ ವರ್ಕರ್ ಪ್ರಶಸ್ತಿಯನ್ನು ಮಲ್ನಾಡ್ ಅಲಾಯ್ ಕಾಸ್ಟಿಂಗ್ಸ್‌ನ ಉಮೇಶ್ ಎಂ.ಕೆ. ಪಡೆದರು.
‘ಭೂಪಾಳಂ ಶರತ್ ವಿದ್ಯಾ ಪುರಸ್ಕಾರ’ದಡಿ ಜೆಎನ್‌ಎನ್‌ಸಿಇ ಕಾಲೇಜಿನ ಅನ್ವಿತಾ ಜೆ.ಸಿ. ಮತ್ತು ಪಿಇಎಸ್‌ಐಟಿಎಂ ಕಾಲೇಜಿನ ರೇಖಾ ಅವರಿಗೆ ತಲಾ ರೂ.10,000 ವಿದ್ಯಾರ್ಥಿವೇತನ ವಿತರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಕ್ವಿಜ್ ಹಾಗೂ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳ ವಿಜೇತರು, ಭಾಗವಹಿಸಿದವರು ಹಾಗೂ ತೀರ್ಪುಗಾರರನ್ನು ಗೌರವಿಸಿ ಬಹುಮಾನ ವಿತರಿಸಲಾಯಿತು.
ವಿವಿಧ ಫೌಂಡ್ರಿ ಮಾಲೀಕರು, ಸಿಬ್ಬಂದಿ, ಕಾರ್ಮಿಕರು ಹಾಗೂ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಐಐಎಫ್ ಶಿವಮೊಗ್ಗ ಚಾಪ್ಟರ್ ಆಯೋಜಿಸಿದ್ದ ಈ ಕಾರ್ಯಕ್ರಮವು ಫೌಂಡ್ರಿ ಉದ್ಯಮದ ವೃತ್ತಿಪರ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಕುಟುಂಬ, ಆರೋಗ್ಯ, ತಂತ್ರಜ್ಞಾನ ಮತ್ತು ಜ್ಞಾನವರ್ಧನೆಯ ಮಹತ್ವವನ್ನು ಸಾರುವ ಅರ್ಥಪೂರ್ಣ ವೇದಿಕೆಯಾಗಿತ್ತು.
ಐಐಎಫ್ ಶಿವಮೊಗ್ಗ ಚಾಪ್ಟರ್ ಅಧ್ಯಕ್ಷ ಮಹಾವೀರ್ ಜೈನ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ನಡೆಸಿಕೊಟ್ಟರು. ಉಪಾಧ್ಯಕ್ಷ ಎಂ.ಎಸ್. ಅರುಣ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಪ್ರದೀಪ್ ರಾಮಚಂದ್ರ ಅವರು ರಾಷ್ಟ್ರೀಯ ಫೌಂಡ್ರಿ ದಿನಾಚರಣೆಯ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮವು ಸಮೃದ್ಧಿ ಜೈನ್ ಹಾಗೂ ಸನ್ನಿಧಿ ಜೈನ್ ಅವರ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ಯಶಸ್ಸಿಗೆ ಕೌನ್ಸಿಲ್ ಸದಸ್ಯರಾದ ನಂಜುಂಡೇಶ್ವರ ಹೆಚ್.ಬಿ., ಶಾಂತಿ ಕಿರಣ್, ಭರತ್ ಬಿ.ಎಸ್., ಮಂಜಪ್ಪ ಹೆಚ್.ಎಸ್., ಚಂದನ್ ಎನ್. ಹೊಳ್ಳ, ಸುರೇಶ್ ಎಂ., ಲೋಕೇಶ್ ಎಸ್.ಹೆಚ್., ಅಕ್ಷಯ್ ದತ್ ಜೆ., ರಿಷಭ್ ಸಾರಥಿ ಹಾಗೂ ಹರ್ಷ ಬಿ.ಪಿ. ಅವರು ಸಹಕರಿಸಿದರು. ಗೌರವ ಖಜಾಂಚಿ ಆನಂದ್ ಕೋಟಿ ಹೆಚ್.ಆರ್. ವಂದನಾರ್ಪಣೆ ಸಲ್ಲಿಸಿದರು.
