ಮನೆಗೆ ಬಂದ ಅತಿಥಿಗಳನ್ನು ಉಪಚರಿಸುವಾಗ ನಾವು ಬೇರೆ ಕೆಲಸದ ಒತ್ತಡದಲ್ಲಿದ್ದುಕೊಂಡು, ಯಾವುದೇ ನಿಜವಾದ ಭಾವನೆಗಳಿಲ್ಲದೆ ಕೇವಲ ಔಪಚಾರಿಕವಾಗಿ ಮಾತನಾಡುವ ಭಾವನಾರಹಿತವಾಗಿ ಯಾಂತ್ರಿಕವಾಗಿ ಕೆಲಸ ಮಾಡುವುದೇ ಇಂದಿನ ಕೃತಕ ಬುದ್ಧಿಮತ್ತೆ (AI) ಎಂದು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುಘರಾಜೇಂದ್ರ ಸ್ವಾಮಿಗಳು ಮಾರ್ಮಿಕವಾಗಿ ವಿಶ್ಲೇಷಿಸಿದರು.
ಇತ್ತೀಚೆಗೆ ನಡೆದ ‘ಬಸವಣ್ಣನೊಳಗಿನ ಬಸವಣ್ಣ’ ಕೃತಿ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಂದಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಮನುಷ್ಯನ ಬದುಕು ಹೇಗೆ ಯಾಂತ್ರಿಕವಾಗುತ್ತಿದೆ ಎಂಬುದನ್ನು ದೈನಂದಿನ ಉದಾಹರಣೆಯೊಂದಿಗೆ ಶ್ರೀಗಳು ಸರಳವಾಗಿ ಸಭಿಕರಿಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಅಶೋಕ ಜಿ.ಎಸ್. ಅವರು, ಮನುಷ್ಯನ ಜೀವನ ಇಂದು ತಂತ್ರಜ್ಞಾನದಿಂದ ಯಾಂತ್ರಿಕವಾಗುತ್ತಿದ್ದರೂ, ಬಸವಣ್ಣನವರ ಸಮಾಜೋ-ಧಾರ್ಮಿಕ ಕಾರ್ಯಗಳು ಹಾಗೂ ಅವರ ನಡೆ-ನುಡಿಯ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿವೆ. ಜೀವನವು ಕೇವಲ ಹಣಗಳಿಸುವ ಸಾಧನವಾಗಬಾರದು. ಹಣ ಜೀವನದ ಅಗತ್ಯವೇ ಹೊರತು ಅದೇ ಅಂತಿಮ ಗುರಿಯಾಗಬಾರದು. ಬಸವಣ್ಣನವರ ಅಂತರಂಗ ಮತ್ತು ಬಹಿರಂಗದ ಶುದ್ಧತೆಯ ಹುಡುಕಾಟವೇ ಈ ಕೃತಿಯ ಮಹತ್ವವಾಗಿದೆಎಂದರು.
ಬಾರಂದೂರು ಪ್ರಕಾಶ್ ಅವರು ಅಲ್ಲಮಪ್ರಭುಗಳ ವಚನಗಳ ಹಿನ್ನೆಲೆಯಲ್ಲಿ ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ಗುರು ಮತ್ತು ಶಿಷ್ಯರ ನಡುವಿನ ಸಂಬಂಧ ಹಾಗೂ ಅವರ ಪಾತ್ರಗಳು ಸಂಪೂರ್ಣ ಬದಲಾಗಿವೆ. ಕೃತಕ ಬುದ್ಧಿಮತ್ತೆಯ ಅತಿಯಾದ ಪ್ರಭಾವದಿಂದಾಗಿ ಮನುಷ್ಯನ ಇಡೀ ಬದುಕು ಯಾಂತ್ರಿಕತೆಯತ್ತ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಿವೃತ್ತ ಬಿ.ಇಡಿ ಪ್ರಾಂಶುಪಾಲರಾದ ಗೋಪಾಲಕೃಷ್ಣ ಕೊಳತಾಯಿ ಅವರು ವಿಷಯವನ್ನು ಸಕಾರಾತ್ಮಕವಾಗಿ ವಿಶ್ಲೇಷಿಸಿ, ಕೃತಕ ಬುದ್ಧಿಮತ್ತೆಯಿಂದ ಮಾನವಕುಲಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಬದಲಾಗುತ್ತಿರುವ ಪರಿಸ್ಥಿತಿ ಮತ್ತು ಹೊಸ ತಂತ್ರಜ್ಞಾನಕ್ಕೆ ನಾವು ಸಕಾರಾತ್ಮಕವಾಗಿ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಲಿಯಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜಡೆ ಮಠದ ಶ್ರೀಗಳು ಉಪಸ್ಥಿತರಿದ್ದರು. ಮುಖೇಶ್ ಅರವಿಂದ್ ಜಿ.ಎ. ಅವರು ಎಲ್ಲರಿಗೂ ವಂದನಾರ್ಪಣೆ ಮಾಡಿದರು. ಸವಿತಾ ಬಿ.ಎಮ್. ಅವರು ಸಮಗ್ರ ಕಾರ್ಯಕ್ರಮದ ನಿರೂಪಣೆಯನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿಕೊಟ್ಟರು.
