Rotary Club of Shivamogga ಭಾರತೀಯ ಸೇನೆಯ ಸೈನಿಕರು ದೇಶದ ಭದ್ರತೆಗಾಗಿ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೈಹಿಕ ಹಾಗೂ ಮಾನಸಿಕ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತಾರೆ ಎಂದು ಭಾರತೀಯ ಸೇನೆಯ ದಿ ಸಿಖ್ ಲೈಟ್ ಇನ್ಫ್ಯಾಂಟ್ರಿ ಘಟಕದ ನಾನ್-ಕಮೀಷನ್ಡ್ ಅಧಿಕಾರಿ ಹಾಗೂ ಸುಬೇದಾರ್ ಮೇಜರ್ ರಾಜೇಶ್ ಎನ್. ಭಟ್ ಹೇಳಿದರು.
ಶಿವಮೊಗ್ಗ ನಗರದ ರಾಜೇಂದ್ರನಗರದಲ್ಲಿರುವ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಆಯೋಜಿಸಿದ್ದ “ಶಿಸ್ತಿನ ಹಾದಿಯಲ್ಲಿ ಸೇವೆಯ ನಾಯಕತ್ವ” ವಿಷಯದ ವಾರದ ಸಭೆಯಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆಯ ತರಬೇತಿ ದೈಹಿಕ ಸಾಮರ್ಥ್ಯ, ಮಾನಸಿಕ ದೃಢತೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಅತ್ಯಂತ ಶಿಸ್ತುಬದ್ಧವಾಗಿ ರೂಪಿಸಲಾಗಿದೆ ಎಂದರು.
ಯುದ್ಧತಂತ್ರದ ಕವಾಯತುಗಳು ಮತ್ತು ವಿಶೇಷ ತರಬೇತಿಗಳ ಮೂಲಕ ಸೈನಿಕರನ್ನು ಸಮರ್ಥ ಯೋಧರನ್ನಾಗಿ ರೂಪಿಸಲಾಗುತ್ತದೆ. ಪರ್ವತ ಪ್ರದೇಶಗಳು ಹಾಗೂ ತೀವ್ರ ಚಳಿಗಾಲದ ಯುದ್ಧ ಪರಿಸ್ಥಿತಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಕುಟುಂಬದಿಂದ ದೀರ್ಘಕಾಲ ದೂರವಿರುವುದು, ಕಾರ್ಯಾಚರಣೆಯ ಒತ್ತಡ, ಆಡಳಿತಾತ್ಮಕ ಸವಾಲುಗಳು ಹಾಗೂ ಮಾನಸಿಕ ಒತ್ತಡಗಳನ್ನು ಸೈನಿಕರು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ಸಿಯಾಚಿನ್‌ನಂತಹ ಎತ್ತರದ ಹಿಮಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವುದು ಅತ್ಯಂತ ಸವಾಲಿನ ಸಂಗತಿ. ಶೂನ್ಯಕ್ಕಿಂತ ಕಡಿಮೆ ತಾಪಮಾನ, ಹಿಮಪಾತದ ಅಪಾಯ, ಆಮ್ಲಜನಕದ ಕೊರತೆ ಹಾಗೂ ಗಡಿಯಾಚೆಗಿನ ಒಳನುಸುಳುವಿಕೆ ವಿರುದ್ಧ ನಿರಂತರ ಜಾಗರೂಕತೆ ವಹಿಸಬೇಕಾಗುತ್ತದೆ. ವಿವಾದಿತ ಗಡಿಭಾಗಗಳಲ್ಲಿ ಮೂಲಸೌಕರ್ಯ ನಿರ್ವಹಣೆ, ಲಾಜಿಸ್ಟಿಕ್ ಸಮಸ್ಯೆಗಳು ಹಾಗೂ ಕಠಿಣ ಕಾರ್ಯಭಾರಗಳ ನಡುವೆಯೂ ಭಾರತೀಯ ಸೇನೆ ದೇಶದ ಭದ್ರತೆಯನ್ನು ಯಶಸ್ವಿಯಾಗಿ ಕಾಪಾಡುತ್ತಿದೆ ಎಂದು ವಿವರಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷ ಶೇಷಗಿರಿ ಮಾತನಾಡಿ, ಭಾರತೀಯ ಸೇನೆ ದೇಶದ ಗಡಿಗಳನ್ನು ರಕ್ಷಿಸುವುದರ ಜೊತೆಗೆ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿಯೂ ಮಹತ್ವದ ಸೇವೆ ಸಲ್ಲಿಸುತ್ತದೆ. ಕರ್ತವ್ಯನಿಷ್ಠೆ, ದೇಶಭಕ್ತಿ ಹಾಗೂ ತ್ಯಾಗದ ಪ್ರತೀಕವಾಗಿ ಭಾರತೀಯ ಸಶಸ್ತ್ರ ಪಡೆಗಳನ್ನು ನಾಗರಿಕರು ಗೌರವದಿಂದ ಕಾಣುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಝೋನಲ್ ಲೆಫ್ಟಿನೆಂಟ್ ಮಹೇಶ್ ಆಲೇಮನೆ, ಕಾರ್ಯದರ್ಶಿ ಆರ್. ಮನೋಹರ, ಮಾಜಿ ಸಹಾಯಕ ಗವರ್ನರ್ ಜಿ. ವಿಜಯ್ ಕುಮಾರ್, ಮಾಜಿ ಅಧ್ಯಕ್ಷರಾದ ಎಚ್.ಬಿ. ಆದಿಮೂರ್ತಿ, ಎಚ್.ಎಸ್. ಸೂರ್ಯನಾರಾಯಣ ಹೊಸತೋಟ, ಗಣೇಶ್ ಎಸ್., ಶ್ರೀಕಾಂತ್ ಎನ್.ಎಚ್., ಡಾ. ಪರಮೇಶ್ವರ್ ಶಿಗ್ಗಾವ್, ಚಂದ್ರಹಾಸ್ ಪಿ. ರಾಯ್ಕರ್, ಎಂ.ಪಿ. ನಾಗರಾಜ್, ಅರುಣ್ ದೀಕ್ಷಿತ್, ಧರಣೇಂದ್ರ ದಿನಾಕರ್, ಚಂದ್ರಶೇಖರಯ್ಯ, ಶ್ರೀನಿವಾಸ್ ಗೌಡ ಎಚ್.ಎನ್., ನಿಕಟ ಪೂರ್ವ ಅಧ್ಯಕ್ಷ ಡಿ. ಕಿಶೋರ್ ಕುಮಾರ್, ಬಿ.ಆರ್. ಧನಂಜಯ್, ರಮೇಶ್ ಭಟ್, ರಾಜಶೇಖರ್ ಕೆ.ಎನ್., ರಘುರಾಜ್ ಎಚ್., ಕೇಶವಪ್ಪ ಎಂ.ಜಿ., ಸಂಜೀವ್ ಎಸ್.ಎನ್., ಅಜಿತ್ ಎಚ್.ಎಸ್., ಗಂಗಪ್ಪ, ಎಸ್. ರವಿಶಂಕರ್, ಕೆ.ಎನ್. ಮಹದೇವಸ್ವಾಮಿ, ಬಿಂದು ವಿಜಯ್ ಕುಮಾರ್, ರಾಜೇಶ್ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ರೋಟೇರಿಯನ್ ಸದಸ್ಯರು ಉಪಸ್ಥಿತರಿದ್ದರು.
