S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಮೂಡುವುದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ(ಚನ್ನಿ) ತಿಳಿಸಿದರು.
ಅವರು ಶಿವಮೊಗ್ಗ ನಗರದ ಬ್ರಾಹ್ಮಣ ಸೇವಾ ಸಂಘ(ರಿ)ನ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಾಧಕರಿಗೆ ಸನ್ಮಾನಿಸುವುವ ಕಾರ್ಯ ಶ್ಲಾಘನೀಯ. ಈ ಸಮಾಜಮುಖಿ ಕಾರ್ಯಕ್ರಮವು ಬೇರೆಯವರನ್ನೂ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸುವ ನಿಟ್ಟಿನಲ್ಲಿ ಪ್ರೇರೇಪಿಸುವುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪರಿಸರ ಜಾಗೃತಿ ಇಂದಿನ ಅಗತ್ಯವಾಗಿದೆ. ಮಕ್ಕಳಲ್ಲಿ ಪರಿಸರ ಜಾಗೃತಿ ಉಂಟುಮಾಡುವ ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ನ ಸೇವೆ ಅಭಿನಂದನೀಯವಾಗಿದೆ. ಸಂಘಟನೆಯು ಸದೃಢವಾಗಿದ್ದರೆ, ಹೆಚ್ಚಿನ ಸಮಾಜಿಕ ಸೇವಾಕಾರ್ಯಗಳನ್ನು ನಿರ್ವಹಿಸಲು ಸಾಧ್ಯ. ಸೇವಾ ಟ್ರಸ್ಟ್ ಬೇರೆ ಸಂಘಟನೆಗಳಿಗೆ ಮಾದರಿಯಾಗಿ ಈ ಸಂಘಟನೆ ಚಟುವಟಿಕೆಯನ್ನು ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಮಕ್ಕಳಲ್ಲಿ ಮೂರು ಪ್ರಮುಖ ಪ್ರಜ್ಞೆಗಳು ಅಗತ್ಯ, ಮೊದಲನೆಯದು ಕುಟುಂಬ ಪ್ರಜ್ಞೆಯಾಗಿ ತಂದೆ ತಾಯಿ ಗುರು ಹಿರಿಯರನ್ನು ಗೌರವಿಸುವುದು, ಎರಡನೆಯದಾಗಿ ಪರಿಸರ ಪ್ರಜ್ಞೆ, ಅಂದರೆ ಸುತ್ತಲಿನ ಪರಿಸರವನ್ನು ಉತ್ತಮವಾಗಿರಿಸಿಕೊಳ್ಳುವುದು ಹಾಗೂ ಮಾರಕ ಪ್ಲಾಸ್ಟಿಕ್ ಬಳಕೆ ಮಿತಗೊಳಿಸುವುದು ಮತ್ತು ರಾಷ್ಟ್ರ ಪ್ರಜ್ಞೆಯಾಗಿ ದೇಶದ ವರ್ತಮಾನ ವಿಚಾರಗಳ ಬಗ್ಗೆ ನಿರಂತರ ತಿಳುವಳಿಕೆಯನ್ನು ಹೊಂದಿರಬೇಕು ಎಂದು ಸನ್ಮಾನಿತ ಪರಿಸರ ಪ್ರೇಮಿ ನವ್ಯಶ್ರೀ ನಾಗೇಶ್ ವಿವರಿಸಿದರು.
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಬೇಕು. ಬುದ್ಧಿಶಕ್ತಿಯ ವೃದ್ಧಿ ಹಾಗೂ ನೈತಿಕತೆಯ ಹಾದಿಯಲ್ಲಿ ಸಮಾಜದ ಉನ್ನತ ಸ್ಥಾನಗಳಿಸುವ ನಿಟ್ಟಿನಲ್ಲಿ ಸಾಗುವಂತೆ ಎನ್.ಇ.ಎಸ್.ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಸಂದೇಶ ನೀಡಿದರು.
ಪ್ರಸ್ತುತ ಕಾಲದಲ್ಲಿ ಹೆಚ್ಚಿನ ಅಂಕಗಳಿಕೆ ಅನಿವಾರ್ಯ. ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಲು ಭವಿಷ್ಯವನ್ನು ಈಗಿನಿಂದಲ್ಲೇ ರೂಢಿಸಿಕೊಳ್ಳಿ, ಪುರಸ್ಕಾರ ಪಡೆದ ಎಲ್ಲರಿಗೂ ಆಯುರಾರೋಗ್ಯ ಐಶ್ವರ್ಯದ ಬದುಕು ದೊರಕಲಿ ಎಂದು ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಹೆಸರಾಂತ ಲೆಕ್ಕಪರಿಶೋಧಕರಾದ ಎಸ್.ಜಿ.ಗೋಪಾಲ್ ಹಾರೈಸಿದರು.
S.N. Channabasappa ಉದ್ಯಮಿ ಸಮಾಜಸೇವಕರಾದ ಎ.ಶಿವರಾಮಭಟ್ಟರನ್ನು ಸನ್ಮಾನಿಸಲಾಯಿತು. ವಿಪ್ರ ಸಮುದಾಯದ ಶೇ.೮೫ಕ್ಕಿಂತ ಅಧಿಕ ಅಂಕಪಡೆದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನ ನಗದು ಹಾಗೂ ಅಭಿನಂದನಾ ಪತ್ರದೊಂದಿಗೆ ಪುರಸ್ಕರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುರೇಶ್ ಉಮರಾಣಿವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷ ಎನ್.ಎಸ್.ಪ್ರಕಾಶ್ ಉಪಸ್ಥಿತರಿದ್ದರು. ಆರಂಭದಲ್ಲಿ ನ.ರಾ.ವೆಂಕಟೇಶ್ ಸ್ವಾಗತಿಸಿದರು. ಸಹನಾ ಪ್ರಾರ್ಥನೆ ಸಲ್ಲಿಸಿದರು.
ಗಣೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಛಾಯಾಪತಿ ವಂದಿಸಿದರು.
