Multi Purpose Social Service Society ಮಕ್ಕಳು ಮೊಬೈಲ್ ಬಿಟ್ಟು ಉತ್ತಮ ಶಿಕ್ಷಣವನ್ನು ಪಡೆದು ಉನ್ನತ ಮಟ್ಟದಲ್ಲಿ ಸಾಗಬೇಕು. ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷೆ ಹಾಗೂ ಅಸಂಘಟಿತ ಕೂಲಿ ಕಾರ್ಮಿಕರ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಕವಿತಾ ಥೋರತ್ ಹೇಳಿದರು.
ಶಿವಮೊಗ್ಗ ನಗರದ ಆಲ್ಕೊಳದಲ್ಲಿರುವ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ(ರಿ) ವತಿಯಿಂದ ಶಿವಮೊಗ್ಗ ತಾಲ್ಲೂಕಿನ ಸಿರಿಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಟ್ಟಿಗೆಹಳ್ಳಿ ಮತ್ತು ಸಿರಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕವನ್ನು ವಿತರಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್, ಇಂಟರ್‌ನೆಟ್ ಮೂಲಕ ಬಹಳಷ್ಟು ಮಕ್ಕಳು ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಮೊಬೈಲ್‌ಗಳಿಂದ ದೂರವಿಟ್ಟು ಪುಸ್ತಕಗಳನ್ನು ಓದಲು ನೀಡಬೇಕು ಹಾಗೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ ಸಂಸ್ಕಾರ, ಸದ್ಗುಣಗಳ ಜೊತೆಗೆ ಹಿರಿಯರಿಗೆ ಗೌರವ ನೀಡುವುದನ್ನು ಕಲಿಸಿಕೊಡಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ಐಎಎಸ್, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಯಲ್ಲಿರುವುದನ್ನು ನಾವು ಗಮನಿಸಬಹುದು. ಮುಂದಿನ ದಿನಗಳಲ್ಲಿ ನೀವೆಲ್ಲರೂ ಉನ್ನತ ವಿದ್ಯಾಭ್ಯಾಸ ಮುಗಿಸಿ ಇದೇ ವೇದಿಕೆಯಲ್ಲಿ ಅತಿಥಿಗಳಾಗಿ ಬಾಗವಹಿಸಿ ಎಂದು ಶುಭಹಾರೈಸಿದರು.
Multi Purpose Social Service Society ಇಂದಿನ ಕಾಲಘಟ್ಟದಲ್ಲಿ ಶಿಕ್ಷಣಕ್ಕೆ ಬಹಳ ಮಹತ್ವವಿದೆ. ಮಕ್ಕಳು ಶಾಲೆಯ ಹಂತದಲ್ಲಿ ತಮ್ಮ ಮುಂದಿನ ಗುರಿಯನ್ನು ಇಟ್ಟುಕೊಂಡು ಅದಕ್ಕೆ ತಕ್ಕಂತೆ ಪರಿಶ್ರಮದಿಂದ ಅಧ್ಯಯನ ನಡೆಸಿ ತಮ್ಮ ಗುರಿಯನ್ನು ತಲುಪಬೇಕು. ಅವರಿಗೆ ಸರಿಯಾದ ಮಾರ್ಗವನ್ನು ತೋರಿಸಬೇಕಾದ ಕೆಲಸ ಪೋಷಕರು ಹಾಗೂ ಶಿಕ್ಷಕರು ಮಾಡಬೇಕಿದೆ ಎಂದರು.
ಸಂಸ್ಥೆಯ ನಿರ್ದೇಶಕ ಫಾದರ್ ಪಿಯುಸ್ ಡಿಸೋಜಾ ಮಾತನಾಡಿ, ಮಕ್ಕಳು ಶಿಕ್ಷಣ ಕಲಿತರೆ ತಮಗಾಗುವ ಪ್ರಯೋಜನಗಳು, ಶಿಕ್ಷಣ ಕಲಿಯದಿದ್ದರೆ ಆಗುವ ಸಮಸೈಗಳ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಿರಿಗೆರೆ ಸ್ತ್ರೀಬಂಧು ಒಕ್ಕೂಟದ ಅಧ್ಯಕ್ಷೆ ರೂಪ, ಸಿರಿಗೆರೆ ಗ್ರಾ.ಪಂ. ಉಪಾಧ್ಯಕ್ಷೆ ನಾಗರತ್ನಮ್ಮ, ಸಿರಿಗೆರೆ ಗ್ರಾ.ಪಂ. ಸದಸ್ಯ ಯೋಗೇಂದ್ರ, ಹಾಗೂ ಸ್ವ ಸಹಾಯ ಸಂಘಗಳ ಮಹಿಳೆಯರು, ಗ್ರಾಮಸ್ಥರು, ಶಾಲಾ-ಮಕ್ಕಳು, ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.