Kuvempu University ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗುತ್ತಿದೆ. ಇದನ್ನು ಅಧ್ಯಾಪಕರು ಮತ್ತು ಅಧ್ಯಾಪಕ ಸಂಘಗಳು ಧೈರ್ಯವಾಗಿ ಖಂಡಿಸಬೇಕು ಹಾಗೂ ಮುಕ್ತವಾಗಿ ಅಸಮ್ಮತಿ ದಾಖಲಿಸಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ವಯೋನಿವೃತ್ತ ಪ್ರಾಧ್ಯಾಪಕ ಡಾ. ಡಿ. ಎಸ್. ಪೂರ್ಣಾನಂದ ಅಭಿಪ್ರಾಯಪಟ್ಟರು.
ಕುವೆಂಪು ವಿವಿಯ ನಾಲ್ವರು ವಯೋನಿವೃತ್ತ ಪ್ರಾಧ್ಯಾಪಕರಿಗೆ ಕುವೆಂಪು ವಿವಿಯ ಅಧ್ಯಾಪಕರ ಸಂಘ(ಕೂಟ)ದ ವತಿಯಿಂದ ಬುಧವಾರ ವಿವಿಯ ಪ್ರೊ. ಎಸ್ ಪಿ ಹಿರೇಮಠ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಮತ್ತು ಗೌರವ ಸಮರ್ಪಣೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ವಿವಿಗಳ ಸ್ವಾಯತ್ತತೆಯನ್ನು ಕಸಿದುಕೊಂಡು ಏಕರೂಪದ ಪಠ್ಯಕ್ರಮ ರಚಿಸಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. ಶೈಕ್ಷಣಿಕ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಕ್ರಮಗಳನ್ನು ಮುಲಾಜಿಲ್ಲದೇ ಅಧ್ಯಾಪಕರು ಖಂಡಿಸಬೇಕು, ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ಸರ್ಕಾರವು ವಿವಿಗಳ ಬೋಧಕರ ನೇಮಕಾತಿಯನ್ನು ಕೇಂದ್ರಿಕೃತವಾಗಿ ನಡೆಸಲು ಮುಂದಾದಾಗ ವಿವಿಯ ಅಧ್ಯಾಪಕರ ಸಂಘ ಖಂಡನೆ ವ್ಯಕ್ತಪಡಿಸಿ ಸರ್ಕಾರಕ್ಕೆ ಪ್ರತಿಕ್ರಿಯೆ ತಿಳಿಸಿತು.
ಸಂಶೋಧನಾ ಲೇಖನ ಬರೆದದ್ದಕ್ಕಾಗಿ ಅಶೋಕ ವಿವಿಯ ಪ್ರಾಧ್ಯಾಪಕರೊಬ್ಬರನ್ನು ವಜಾಗೊಳಿಸಲಾಯಿತು. ಅವರ ವಾಪಾಸಾತಿಗೆ ಇಡೀ ವಿವಿಯ ಬೋಧಕರ ತಂಡ ಧರಣಿ ನಡೆಸಿ ಒಗ್ಗಟ್ಟು ತೋರಿದರು.
ಪಾಠ-ಪ್ರವಚನ, ಶೈಕ್ಷಣಿಕ ಮತ್ತು ಉತ್ತುಮ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳುವುದು ಮಾತ್ರವಲ್ಲದೇ ಈ ಕ್ಷೇತ್ರದಲ್ಲಿನ ವಿಪತ್ತುಗಳಿಗೆ ಪ್ರತಿಕ್ರಿಯಿಸುವ, ಸ್ಪಂದಿಸುವ ಕರ್ತವ್ಯವನ್ನು ಅಧ್ಯಾಪಕರು ಮರೆಯಬಾರದು ಎಂದು ಕರೆಕೊಟ್ಟರು.
Kuvempu University ಕುಲಪತಿ ಪ್ರೊ. ಎಸ್. ವೆಂಕಟೇಶ್ ಮಾತನಾಡಿ, ಸಂಶೋಧನಾ ಕ್ಷೇತ್ರದಲ್ಲಿ ಪ್ರಾಧ್ಯಾಪಕರಿಗೆ ಸಾಕಷ್ಟು ಅಡ್ಡಿಗಳು ಬರುತ್ತಿವೆ. ಮುಕ್ತ ಸಂಶೋಧನಾ ವಾತಾವರಣ ನಿರ್ಮಿಸದಲ್ಲಿ ಮಾತ್ರವೇ ಗುಣಮಟ್ಟದ ಸಂಶೋಧನೆ ಕೈಗೊಂಡು ಸಾಮಾಜದ ಅಭಿವೃದ್ಧಿಗೆ ಕೈಜೋಡಿಸಲು, ಕೊಡುಗೆ ನೀಡಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ವಯೋನಿವೃತ್ತಿಗೊಂಡ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎ. ರಾಮೇಗೌಡ, ಜೈವಿಕ ತಂತ್ರಜ್ಞಾನ ವಿಭಾಗದ ಪ್ರೊ. ರಿಯಾಜ್ ಮೊಹಮ್ಮದ್, ಹಾಗೂ ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹಾಗೂ ಪ್ರಸ್ತುತ ಬೀದರ್ ವಿವಿಯ ಕುಲಪತಿ ಡಾ. ಬಿ ಎಸ್ ಬಿರಾದಾರ್ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಕೂಟಾದ ಅಧ್ಯಕ್ಷರಾದ ಪ್ರೊ. ಹಿರೇಮಣಿ ನಾಯ್ಕ್, ಕಾರ್ಯದರ್ಶಿ ಡಾ. ಬಿ ಜೆ ಗಿರೀಶ್, ಡಾ. ಗಜಾನನ ಪ್ರಭು ಸೇರಿದಂತೆ ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.