ಮಹಾನಗರ ಪಾಲಿಕೆ ಅವೈಜ್ಞಾನಿಕವಾಗಿ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಇಂದು ಪಾಲಿಕೆ ಮುಂಭಾಗದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಜನ ಈಗಾಗಲೇ ಸಂಕಷ್ಟದ ಸಂದರ್ಭದಲ್ಲಿದ್ದಾರೆ. ನೀರಿನ ಮತ್ತು ಆಸ್ತಿ ತೆರಿಗೆಯನ್ನು ನಾಲ್ಕೈದು ಪಟ್ಟು ಹೆಚ್ಚಿಸಲಾಗಿದೆ. 10 ಸಾವಿರ ರೂ. ಕಟ್ಟುತ್ತಿದ್ದವರು ಈಗ 45 ಸಾವಿರ ರೂ. ಕಟ್ಟಬೇಕಿದೆ. 25 ಸಾವಿರ ರೂ. ಕಟ್ಟುತ್ತಿದ್ದವರು 1 ಲಕ್ಷ ರೂ. ಕಟ್ಟಬೇಕಿದೆ. ಎಸ್.ಆರ್. ದರ ಹೆಚ್ಚಿಸಿದಂತೆ ತೆರಿಗೆಯನ್ನೂ ಏರಿಕೆ ಮಾಡಲಾಗುತ್ತಿದೆ. ಸ್ವಂತ ಮನೆಯವರೂ ಕೂಡ ಬಾಡಿಗೆ ಮನೆಯವರಂತೆ ಬಾಡಿಗೆ ಕಟ್ಟಬೇಕಾಗುತ್ತದೆ ಎಂದು ಆರೋಪಿಸಿದರು.
ಆಸ್ತಿ ತೆರಿಗೆ ಅವೈಜ್ಞಾನಿಕವಾಗಿ ನಿರ್ಧರಿಸಲಾಗಿದೆ. ಇದರಿಂದ ತೆರಿಗೆದಾರರ ಮೇಲೆ ಹೊರೆಯಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನರ ಹಿತವನ್ನೇ ಕಡೆಗಣಿಸಲಾಗುತ್ತಿದೆ. ತಕ್ಷಣವೇ ತೆರಿಗೆಯನ್ನು ವಾಪಸ್ ತೆಗೆದುಕೊಂಡು ಹಳೆ ತೆರಿಗೆಯನ್ನೇ ಮುಂದುವರೆಸಬೇಕು ಎಂದು ಪ್ರತಿಭಟನಾಕಾರರು ಪಾಲಿಕೆ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮಂಗನ ಕಾಯಿಲೆ ಸಂಶೋಧನಾ ಲ್ಯಾಬ್ ಸಾಗರದಲ್ಲಿ ಆರಂಭಿಸಲು ಗುರುತಿಸಲಾಗಿತ್ತು. ಆದರೆ ವಿಜ್ಞಾನಿಗಳು ಅಲ್ಲಿಗೆ ಬರುವುದಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಆರಂಭಿಸಬೇಕೆಂಬ ಬೇಡಿಕೆ ಬಂದಿದೆ. ಆದರೆ ಶಿವಮೊಗ್ಗದಲ್ಲಾದರೂ ಲ್ಯಾಬ್ ಆರಂಭಿಸಬೇಕೆಂದು ಒತ್ತಾಯಿಸಲಾಗಿದೆ ಎಂದರು.
ಕರೂರು ಜಾಗವನ್ನು ಬಫರ್ ಜೋನ್ ಮಾಡುವ ಪ್ರಸ್ತಾವನೆಯನ್ನು ಕೈ ಬಿಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದರು. ಅವರು, ಮುಳುಗಡೆ ಪ್ರದೇಶದವರಿಗೆ ಅರಣ್ಯ ಕಾಯಿದೆಗಳಿಂದ ಮುಕ್ತಿಯೇ ಇಲ್ಲದಂತಾಗಿದೆ. ಒಂದಾದ ಮೇಲೊಂದರಂತೆ ನಿಯಮಗಳನ್ನು ಹೇರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.