ಧೂಮಪಾನ ಅಥವಾ ತಂಬಾಕು ಸೇವನೆಯು ಆರೋಗ್ಯಕ್ಕೆ ಮಾರಕವಾಗುವುದರ ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ತಂಬಾಕು ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತೀ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಲು ಹಲವಾರು ಅಭಿಯಾನಗಳು, ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.
ತಂಬಾಕು ಸೇವನೆಯಿಂದಾಗುವ ಸಮಸ್ಯೆಗಳು ಇಂದು ಇಡೀ ವಿಶ್ವ ಎದುರಿಸುತ್ತಿರುವ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ವಿಶ್ವಾದ್ಯಂತ ಸುಮಾರು 1.1 ಬಿಲಿಯನ್ ಧೂಮಪಾನಿಗಳಲ್ಲಿ ಸುಮಾರು ಶೇ.80 ರಷ್ಟು ಧೂಮಪಾನಿಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇದು ಆ ದೇಶಗಳ ಆರ್ಥಿಕ ಪರಿಸ್ಥಿತಿಗೆ ಮಾರಕವಾಗಿದೆ. ತಂಬಾಕು ಸೇವನೆಯಿಂದಾಗಿ ಮೂಲಭೂತ ಅಗತ್ಯಗಳಿಗೆ ಮಾಡಬೇಕಾದ ಖರ್ಚು, ವೆಚ್ಚವನ್ನು ತಂಬಾಕಿಗೆ ಬಳಸುವುದರಿಂದ ಜನರ ಜೀವನ ಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಧೂಮಪಾನವು ಕೇವಲ ಸೇವಿಸುವ ವ್ಯಕ್ತಿಯ ಮೇಲೆ ಪರಿಣಾಮ ಉಂಟು ಮಾಡದೇ ಪರೋಕ್ಷವಾಗಿ ಸೇವಿಸುವ ವ್ಯಕ್ತಿಗಳ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಿಗರೇಟ್, ಬೀಡಿ ಮತ್ತು ಹುಕ್ಕಾದಂತಹ ತಂಬಾಕು ಉತ್ಪನ್ನಗಳನ್ನು ಬಳಸಿದಾಗ ಅದರಿಂದ ಉಂಟಾಗುವ ಹೋಗೆಯನ್ನು ಆ ಸ್ಥಳದಲ್ಲಿರುವ ಬೇರೆ ವ್ಯಕ್ತಿಗಳು ಉಸಿರಾಟದ ಮೂಲಕ ಸೇವಿಸಿದವರು ಪರೋಕ್ಷ ಧೂಮಪಾನಿಗಳಾಗುತ್ತಾರೆ.
ತಂಬಾಕಿನಿಂದ ಆರೋಗ್ಯದ ಮೇಲಾಗುವ ಸಮಸ್ಯೆಗಳು :
ಬಾಯಿಯ ಕ್ಯಾನರ್, ಧ್ವನಿ ಪೆಟ್ಟಿಗೆ ಮತ್ತು ಗಂಟಲು ಕುಳಿ, ಶ್ವಾಸಕೋಶದ ಕ್ಯಾನ್ಸರ್, ಹೊಗೆ ಸಂಬಂಧಿ ಕಾಯಿಲೆಗಳು ದೀರ್ಘ ಕಾಲದ ಶ್ವಾಸಕೋಶದ ಕಾಯಿಲೆಗಳು, ಕಡಿಮೆ ತೂಕದ ಮಕ್ಕಳ ಜನನ ಮತ್ತು ಪುರುಷರಲ್ಲಿ ಫಲವತ್ತತೆ ಹಾಗೂ ಲೈಂಗಿಕ ದುರ್ಬಲತೆ ಇತ್ಯಾದಿ ಸಮಸ್ಯೆಗಳು ತಲೆದೋರುತ್ತವೆ. ಹಾಗಾಗಿ ತಂಬಾಕು ಸೇವನೆಯಿಂದಾಗುವ ಖಾಯಿಲೆಗಳು ಸಾಂಕ್ರಮಿಕವಲ್ಲದ ಆರೋಗ್ಯ ಸಮಸ್ಯೆಗಳ ಬೆಳವಣಿಗೆಗೆ ಕಾರಣವಾಗಿದೆ.
ಪ್ರಪಂಚದಲ್ಲಿ ತಂಬಾಕಿನ ಬಳಕೆಯಿಂದಾಗುವ ಸಾವುಗಳನ್ನು ನಿಯಂತ್ರಿಸಲು ವಿಶ್ವ ಆರೋಗ್ಯ ಸಂಸ್ಥೆಯು 1987ರಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಘೋಷಿಸಿತು.
ಪ್ರಸ್ತುತ ವರ್ಷದ ತಂಬಾಕು ರಹಿತ ದಿನದಂದು ತಂಬಾಕಿನಿಂದ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದುವುದರ ಜೊತೆಗೆ ”ತಂಬಾಕು ಪರಿಸರಕ್ಕೆ ಹಾನಿಕಾರಕ”ವೆಂಬ ಧ್ಯೆಯ ವಾಕ್ಯವನ್ನು ಅಳವಡಿಸಿಕೊಂಡಿದ್ದು, ತಂಬಾಕು ಕೃಷಿ, ಉತ್ಪಾದನೆ ಮತ್ತು ವಿತರಣೆಯಿಂದಾಗುವ ವಿಷಕಾರಿ ತ್ಯಾಜ್ಯಗಳ ಬಗ್ಗೆ ಅರಿಮೂಡಿಸುವುದಾಗಿದೆ.
ತಂಬಾಕು ಸೇವನೆಯು ಪ್ರತಿ ಹಂತದಲ್ಲೂ ಹಾನಿಕಾರಿಕ:
ಪ್ರಾರಂಭದಿಂದ ಅಂತ್ಯದವರೆಗೂ ತಂಬಾಕು ಜೀವನ ಚಕ್ರವು ಅಗಾಧವಾದ ಮಾಲಿನ್ಯಕಾರಕ ಮತ್ತು ಹಾನಿಕಾರಕ ಪ್ರಕ್ರಿಯೆಯಾಗಿದೆ. ಇಂದು ಹಲವರಿಗೆ ಧೂಮಪಾನದಿಂದ ಉಂಟಾಗುವ ಗಾಳಿಯ ಮಾಲಿನ್ಯವಷ್ಟೆ ಕಾಣುತ್ತಿದೆ. ಆದರೆ ತಂಬಾಕಿನ ಸಂಪೂರ್ಣ ಸರಪಳಿಯು ಹೆಚ್ಚು ಹಾನಿಯನ್ನು ಉಂಟು ಮಾಡುತ್ತದೆ.
ಜಗತ್ತಿನಾದ್ಯಂತ ಪ್ರತಿ ವರ್ಷ ಸುಮಾರು 3.5 ಮಿಲಿಯನ್ ಹೆಕ್ಟೇರ್ ಭೂಮಿ ತಂಬಾಕು ಬೆಳೆಯಿಂದಾಗಿ ನಾಶವಾಗುತ್ತಿದೆ. ಇದರಿಂದ ವರ್ಷಕ್ಕೆ 20 ಸಾವಿರ ಹೆಕ್ಟೇರ್ ಅರಣ್ಯ ನಾಶ ಮತ್ತು ಮಣ್ಣಿನ ಅವನತಿಗೆ ಕಾರಣವಾಗಿದೆ. ಇದರ ಜೊತೆಗೆ ತಂಬಾಕು ಉತ್ಪಾದನೆಯು ನೀರು, ಪಳಯುಳಿಕೆ ಇಂಧನ ಮತ್ತು ಖನಿಜ ಸಂಪನ್ಮೂಲಗಳ ನಾಶಕ್ಕೆ ಕಾರಣವಾಗಿದೆ.
ಪ್ರಪಂಚದಾದ್ಯಂತ ಪ್ರತಿ ವರ್ಷ ಧೂಮಪಾನದಿಂದ ಉಂಟಾಗುವ 4.5 ಟ್ರಿಲಿಯನ್ ಸಿಗರೇಟ್ ತುಂಡುಗಳ ಸರಿಯಾದ ವಿಲೇವಾರಿಯಾಗದೆ ಸುಮಾರು 1.69 ಶತಕೋಟಿ ಪೌಂಡ್ ವಿಷಕಾರಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಮತ್ತು ಸಾವಿರಾರು ರಾಸಯನಿಕಗಳು ಗಾಳಿ, ನೀರು ಮತ್ತು ಮಣ್ಣಿನಲ್ಲಿ ಸೇರುತ್ತಿದೆ. ಹೊಗೆಯಾಡಿಸಿದ ಪ್ರತಿಯೊಂದು ಸಿಗರೇಟ್ ಅಥವಾ ತಂಬಾಕು ಉತ್ಪನ್ನವು ನಮ್ಮ ಅಸ್ತಿತ್ವವನ್ನು ಅವಲಂಬಿಸಿರುವ ಅತ್ಯಾಮೂಲ್ಯ ಸಂಪನ್ಮೂಲಗಳನ್ನು ನಾಶ ಪಡಿಸುತ್ತಿದೆ. ತಂಬಾಕು ಕೃಷಿ , ಉತ್ಪಾದನೆ ಮತ್ತು ಬಳಕೆಯಿಂದಾಗಿ ನಮ್ಮ ನೀರು, ಮಣ್ಣು, ಕಡಲ ತೀರಗಳು ಮತ್ತು ಊರಿನ ಬೀದಿಗಳು ವಿಷಪೂರಿತ ತ್ಯಾಜ್ಯಗಳಿಂದ ಮಲಿನವಾಗಿವೆ.
ಈವರೆಗೂ ತಂಬಾಕುವಿನಿಂದ ಪರಿಸರದ ಮೇಲಾಗಿರುವ ಪರಿಣಾಮಗಳೆಂದರೆ ಸುಮಾರು 60 ಕೋಟಿ ಮರಗಳನ್ನು ಸಿಗರೇಟ್ ತಯಾರಿಸಲು ಕಡಿಯಲಾಗಿದೆ, ಇದರಿಂದ ಉಂಟಾದ 8 ಕೋಟಿ 40 ಲಕ್ಷ ಟನ್‍ಗಳಷ್ಟು ಕಾರ್ಬನ್ ಡೈ ಆಕ್ಸೈಡ್ ಜಾಗತಿಕ ತಾಪಮಾನ ಹೆಚ್ಚಲು ಕಾರಣವಾಗಿದೆ.
ತಂಬಾಕು ಪ್ರತಿ ವರ್ಷ 8 ಮಿಲಿಯನ್ ಜನರನ್ನು ಕೊಲ್ಲುವುದರ ಜೊತೆಗೆ ಪರಿಸರವನ್ನು ನಾಶ ಪಡಿಸಿ ಕೃಷಿ ಉತ್ಪಾದನೆ, ವಿತರಣೆ ಮತ್ತು ನಂತರದ ಗ್ರಾಹಕ ತ್ಯಾಜ್ಯದ ಮೂಲಕ ಆರೋಗ್ಯಕ್ಕೆ ಮತ್ತಷ್ಟು ಹಾನಿಯನ್ನು ಉಂಟು ಮಾಡುತ್ತದೆ.
2022ರ ವಿಶ್ವ ತಂಬಾಕು ರಹಿತ ದಿನದ ಗುರಿಗಳು:
• ತಂಬಾಕಿನಿಂದ ಪರಿಸರದ ಮೇಲಾಗುವ ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ತಂಬಾಕು ಬೆಳೆಗಾರರಿಗೆ ಪರ್ಯಾಯ ಕೃಷಿಯ ಬಗ್ಗೆ ಪ್ರೋತ್ಸಾಹಿಸುವುದು.
• ತಂಬಾಕು ಸೇವನೆಯಿಂದಾಗುವ ವಿಶ್ವವ್ಯಾಪಿ ರೋಗಗಳು ಮತ್ತು ಸಾವುಗಳನ್ನು ಕಡಿಮೆ ಮಾಡುವುದು.
• ತಂಬಾಕು ಸೇವನೆಯ ಅಗತ್ಯಗಳನ್ನು ಕಡಿಮೆ ಮಾಡಿ, ಆರೋಗ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದು.
• ಪರಿಸರ ಮತ್ತು ಆರ್ಥಿಕತೆಯ ವೆಚ್ಚದಲ್ಲಿ ತಂಬಾಕು ಉತ್ಪನ್ನಗಳ ತ್ಯಾಜ್ಯಕ್ಕೆ ತಂಬಾಕು ಉತ್ಪಾದಕರನ್ನು (ಕೈಗಾರಿಕೆಗಳನ್ನು) ಜವಾಬ್ದಾರರನ್ನಾಗಿ ಮಾಡಲು ಕೆಲವು ನಿಯಮಗಳನ್ನು ರೂಪಿಸಿ ಅವುಗಳನ್ನು ಕಾರ್ಯಗತಗೊಳಿಸುವುದು.
ಅಂಕಿಅಂಶದ ಪ್ರಕಾರ ತಂಬಾಕು ಸೇವನೆಯಿಂದ ಪ್ರತಿ ವರ್ಷ ಸಾವಿಗೀಡಗುವವರ ಸಂಖ್ಯೆ 8 ಮಿಲಿಯನ್‍ಗೂ ಹೆಚ್ಚು ಮತ್ತು ಇದು 2030 ರ ವೇಳೆಗೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ತಂಬಾಕು ಕೇವಲ ಅದನ್ನು ಸೇವಿಸುವ ವ್ಯಕ್ತಿಯ ಮೇಲೆ ಪರಿಣಾಮ ಬೀರದೆ ಅದನ್ನು ಉತ್ಪಾದಿಸುವ ಭೂಮಿಯ ಮೇಲೂ ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ ಸರ್ಕಾರಗಳು ತಂಬಾಕು ಸೇವನೆ ಬಗ್ಗೆ ಜಾಗೃತಿ ಮೂಡಿಸಿ, ತಂಬಾಕು ಉತ್ಪಾದನೆಯ ಮೇಲೆ ಹಲವು ನಿರ್ಬಂಧಗಳನ್ನು ಹೇರುವುದರ ಮೂಲಕ ತಂಬಾಕಿನಿಂದಾಗುವ ಪರಿಣಾಮಗಳನ್ನು ನಿಯಂತ್ರಿಸಬಹುದಾಗಿದೆ.
ರಿತೇಶ್ ನಾಯ್ಕ
ಅಪ್ರೆಂಟಿಸ್ ವಾರ್ತಾ ಇಲಾಖೆ, ಶಿವಮೊಗ್ಗ