ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು “ಜಾತಿ, ಹಣ, ತೋಳ್ಬಲ ಹಾಗೂ ಪಕ್ಷಾಂತರ ಬಲಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುವುದನ್ನು ತಡೆಯಲು ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯ” ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
“ಚುನಾವಣಾ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಕಾಯ್ದುಕೊಳ್ಳಲು ಮಾರ್ಗದರ್ಶನ, ಸಲಹೆ ನೀಡಲು ಎಲ್ಲಾ ರಂಗದವರು ನೈತಿಕ ಹೊಣೆಗಾರಿಕೆ ಮುಂದಾಗಬೇಕು. ಎಲ್ಲೆಡೆ ವ್ಯಾಪಕ ಸಮಾಲೋಚನಾ ಸಭೆ, ಚರ್ಚೆಗಳು ಪ್ರಾರಂಭವಾಗಬೇಕು. ತುರ್ತುಪರಿಸ್ಥಿತಿ ವಿರುದ್ಧ ಇಡೀ ದೇಶ ಒಂದಾಗಿ ಹೋರಾಡಿತ್ತು. ಈಗ ಸೃಷ್ಟಿಯಾಗಿರುವ ರಾಜಕೀಯ ವಾತಾವರಣಕ್ಕೆ ಅಂತ್ಯವೂ ನಡೆಯಬೇಕಿದೆ” ಎಂದು ಕಾಗೇರಿಯವರು ಹೇಳಿದರು.
“ಪ್ರಭುತ್ವ ವ್ಯವಸ್ಥೆಯಲ್ಲಿ ನೈತಿಕ ಅಧಃಪತನ ಕುರಿತು ರಾಜಕಾರಣಿಗಳ ವಿರುದ್ಧ ಬಟ್ಟು ಮಾಡುವ ಸಂಸ್ಕೃತಿ ದೂರವಾಗಬೇಕು. ಚುನಾವಣೆ ಸುಧಾರಣೆ ಚರ್ಚೆ ಎಲ್ಲಿಂದ ಆರಂಭವಾದರೂ ಸ್ವಾಗತ. ವಿಧಾನಮಂಡಲದಲ್ಲೂ ಚರ್ಚೆ ಪ್ರಾರಂಭಿಸುವಂತೆ ಎಲ್ಲಾ ಶಾಸಕರಿಗೆ ಸಲಹೆ ನೀಡುತ್ತೇನೆ” ಎಂದು ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಿಳಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೇರಿ ಅವರು “ಶಾಸಕರ ಭವನದ ಬಳಿ ಎಂ.ಪಿ.ಕುಮಾರಸ್ವಾಮಿ ಅವರನ್ನು ತಡೆದು ಪೊಲೀಸರು ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪದ ಬಗ್ಗೆ ಪೊಲೀಸ್ ಅಧಿಕಾರಿಗಳ ವರದಿ ಆಧರಿಸಿ ಕ್ರಮ ಜರುಗಿಸಲಾಗುವುದು” ಎಂದು ಕಾಗೇರಿ ತಿಳಿಸಿದ್ದಾರೆ.