ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮಗಳಿಗೆ ಸಂಬಂಧಿಸಿದ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ನೇತೃತ್ವದ ತಂಡವು ಕಾರಾಗೃಹಕ್ಕೆ ಧಿಡೀರ್ ಭೇಟಿ ನೀಡಿ ಪರಿಶೀಲಿಸಿದರು.
ಭೇಟಿ ನೀಡಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ನ್ಯಾಯಮೂರ್ತಿ ಬಿ. ವೀರಪ್ಪ ಅವರು, “ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲ. ಜೈಲಿನಲ್ಲಿ ವ್ಯವಸ್ಥೆಯ ಲೋಪಗಳು ಕಾಣಿಸಲಿಲ್ಲ. ಆಹಾರದ ಗುಣಮಟ್ಟ ಸಹ ಉತ್ತಮವಾಗಿದೆ ಎಂದು ಬಿ. ವೀರಪ್ಪ ಅವರು ಹೇಳಿದರು.
ಜೈಲು ಅಧಿಕಾರಿಗಳ ಧೋರಣೆ ಬಗ್ಗೆ ಕೆಲ ಕೈದಿಗಳಿಂದ ದೂರು ಕೇಳಿಬಂದಿದೆ. ತಪ್ಪು ಮಾಡಿ ಬಂದಿರುವ ಕೈದಿಗಳಿಗೆ ಅಂತಹ ಧೋರಣೆ ಸಾಮಾನ್ಯ ಎಂದು ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಆಗಿರುವಂತಹ ನ್ಯಾಯಮೂರ್ತಿ ಬಿ. ವೀರಪ್ಪ ಅವರು ತಿಳಿಸಿದ್ದಾರೆ.
9ರಿಂದ 10 ವರ್ಷ ಜೈಲುವಾಸ ಅನುಭವಿಸಿದರ ಪಟ್ಟಿ ಮಾಡಲು ಸೂಚಿಸಲಾಗಿದೆ. ಅಂಥವರ ಕ್ರಿಮಿನಲ್ ಮೇಲ್ಮನವಿ ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದರೆ ಅವುಗಳನ್ನು ಆದ್ಯತೆ ಮೇರೆಗೆ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಮೂರ್ತಿ ವೀರಪ್ಪ ಅವರು ತಿಳಿಸಿದ್ದಾರೆ.
ಬ್ಯಾರಕ್ ಗಳಿಗ, ಅಡುಗೆ ಮನೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ ತಂಡ ಕೈದಿಗಳೊಂದಿಗೆ ಸಂವಾದ ನಡೆಸಿತು. ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಕೈದಿಗಳಿಗೆ ಲಭ್ಯವಿರುವ ಹಕ್ಕುಗಳು, ಕಾನೂನು ಸೇವಾ ಪ್ರಾಧಿಕಾರದಿಂದ ಹೇಗೆ ನೆರವು ಪಡೆದುಕೊಳ್ಳಬಹುದೆಂಬ ಬಗ್ಗೆ ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ನ್ಯಾ. ಪಿ. ಎಸ್. ದಿನೇಶ್ ಕುಮಾರ್, ಹೈಕೋರ್ಟ್ ರಿಜಿಸ್ಟರ್ ಜನರಲ್ ಶಿವ ಶಂಕರೇಗೌಡ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್ ಶಶಿಧರ್ ಶೆಟ್ಟಿ ಹಾಗೂ ಇನ್ನಿತರರು ಪರಿಶೀಲನಾ ತಂಡದಲ್ಲಿ ಉಪಸ್ಥಿತರಿದ್ದರು.