ಬಿಟ್ ಕಾಯಿನ್ ಹಗರಣದ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಗುತ್ತಿಗೆದಾರರಿಂದ ಶೇ.40 ಕಮಿಷನ್ ಆರೋಪ ವಿಚಾರಣೆಗೆ ಸಿಎಂ ಬೊಮ್ಮಾಯಿ ಅವರು ತನಿಖೆಗೆ ಮುಂದಾಗಿದ್ದಾರೆ.
ಪ್ರಧಾನಿ ಮೋದಿಯವರಿಗೆ ಕಳೆದ ಜುಲೈ 26ರಂದು ‘ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್’ ಪತ್ರ ಬರೆದಿತ್ತು. ಗುತ್ತಿಗೆ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ಬೇಡಿಕೆಗೆ ಒತ್ತಡ ಹೇರಲಾಗುತ್ತಿದೆ ಎಂದು ಪತ್ರದಲ್ಲಿ ಗಂಭೀರವಾಗಿ ಆರೋಪಿಸಿತ್ತು. ನಂತರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೂ ಸಹ ಸಂಘದ ಪದಾಧಿಕಾರಿಗಳ ನಿಯೋಗ ಮನವಿ ಸಲ್ಲಿಸಿತ್ತು.
ಈ ಸಂಬಂಧ ಪ್ರತಿಪಕ್ಷಗಳು ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಟೀಕಿಸಿವೆ. ಸಿಎಂ ಬೊಮ್ಮಾಯಿ ಅವರು ಸಂಬಂಧಪಟ್ಟ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ.
ಶೇ.40ರಷ್ಟು ಕಮಿಷನ್ ದಂಧೆ ಬಗ್ಗೆ ಗುತ್ತಿಗೆದಾರರ ಸಂಘದ ಆರೋಪವನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರವನ್ನು ವಜಾ ಮಾಡಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ರಾಜ್ಯಪಾಲರಿಗೆ ಪ್ರತಿಪಕ್ಷ ಕಾಂಗ್ರೆಸ್ ಮನವಿ ಪತ್ರ ಸಲ್ಲಿಸಿದೆ. ಈ ವಿಷಯವನ್ನು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
ಗುತ್ತಿಗೆದಾರರಿಂದ ಶೇ.40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಬೊಮ್ಮಾಯಿಯವರು ಪ್ರತಿಕ್ರಿಯಿಸಿದ್ದು, “ನಮ್ಮ ಸರ್ಕಾರ ಬಂದ ಮೇಲೆ ಯಾವುದಾದರೂ ಟೆಂಡರ್ ಅಂತಿಮ ಗೊಂಡಿದ್ದರೆ, ಅದನ್ನು ವಿಶೇಷವಾಗಿ ಪರಿಶೀಲನೆ ಮಾಡುವಂತೆ ಸೂಚಿಸಲಾಗಿದೆ. ಇದಕ್ಕಿಂತ ಪಾರದರ್ಶಕತೆ ಇನ್ನೇನು ಬೇಕು?” ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟೀಕಿಸಿರುವ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ‘ನಮ್ಮ ಸರ್ಕಾರವಿದ್ದಾಗ ಮೋದಿಯವರು ಟೆನ್ ಪರ್ಸೆಂಟ್ ಸರ್ಕಾರ ಎಂದಿದ್ದರು. ಈ ಹೇಳಿಕೆಗೆ ಯಾವ ಆಧಾರವೂ ಇರಲಿಲ್ಲ. ಆದರೆ, ಈಗ ನಾವು ಕೊಟ್ಟ ದೂರಿನಲ್ಲಿ ಗುತ್ತಿಗೆದಾರರ ಸಂಘ ಬರೆದ ಪತ್ರ ನೀಡಿದ್ದೇವೆ’ ಎಂದು ಹೇಳಿದ್ದಾರೆ.
‘ರಾಜ್ಯಕ್ಕೆ ಕಳಂಕ ಬಂದಿದೆ. ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು. ಗುತ್ತಿಗೆದಾರರ ಸಂಘದ ದೂರಿನ ಬಗ್ಗೆ ಸುಪ್ರೀಂಕೋರ್ಟ್ ಜಡ್ಜ್ ಅವರಿಂದ ತನಿಖೆ ಆಗಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.