Shivamogga Municipal Corporation ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ಕೆ.ಮಾಯಣ್ಣ ಗೌಡ ಅವರೊಂದಿಗೆ ಸಾರ್ವಜನಿಕ ಮುಖಾಮುಖಿ ಕಾರ್ಯಕ್ರಮವನ್ನು ಇದೇ ತಿಂಗಳ 17ರ ಬುಧವಾರ ಬೆಳಗ್ಗೆ 11ಗಂಟೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯು ಆಯೋಜಿಸಿದೆ.
ಆಯುಕ್ತರಾದ ಕೆ.ಮಾಯಣ್ಣ ಗೌಡ ಅವರೊಂದಿಗೆ ಮಹಾನಗರ ಪಾಲಿಕೆಯ ಪ್ರಮುಖ ಅಧಿಕಾರಿಗಳು ಕೂಡ ಈ ಮುಖಾಮುಖಿಯಲ್ಲಿ ಪಾಲ್ಗೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ. ನಾಗರಿಕರ ಪ್ರಶ್ನೆಗಳಿಗೆ ಆಯುಕ್ತರು ಉತ್ತರಿಸಲಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಸುಮಾರು ಮೂರು ವರ್ಷ ಕಳೆದಿದೆ. ಈ ಅವಧಿಯಲ್ಲಿ ನಗರದ ಜನರ ಕುಂದುಕೊರತೆ ಪರಿಹರಿಸಲು ಪಾಲಿಕೆ ಆಡಳಿತ ಶಕ್ತಿ ಮೀರಿ ಶ್ರಮಿಸುತ್ತಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಪಾಲಿಕೆ ನಡುವೆ ಸೇತುವೆ ಆಗುವ ಕಾರ್ಯಕ್ರಮವೇ ಈ ಮುಖಾಮುಖಿ.
Shivamogga Municipal Corporation ವೈಯಕ್ತಿಕವಲ್ಲದ ಸಾರ್ವಜನಿಕವಾದ ಸಮಸ್ಯೆಗಳನ್ನು ಸಂಘಕ್ಕೆ ಕಳಿಸಬೇಕು. ಈ ಸಮಸ್ಯೆಗಳಿಗೆ ಆಯುಕ್ತರು ಪರಿಹರ ಸೂಚಿಸಲಿದ್ದಾರೆ. ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ನಗರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಬರೆದುಕಳಿಸಬಹುದು. ಪ್ರಶ್ನೆಗಳನ್ನು ಕಳಿಸಬೇಕಾದ ವಾಟ್ಸಪ್ ನಂ. 9448138183, 8073502892, 9538172845
Shivamogga Municipal Corporation ಶಿವಮೊಗ್ಗದ ಸಾರ್ವಜನಿಕವಾದ ಸಮಸ್ಯೆಗಳ ಬಗ್ಗೆ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಅವರೊಂದಿಗೆ ಮುಖಾಮುಖಿ ಕಾರ್ಯಕ್ರಮ
ಮಕ್ಕಳ ಶಿಕ್ಷಣ ಮೊಟಕುಮಾಡಿ ಬಾಲಕಾರ್ಮಿಕತೆ ಹಚ್ಚುವ ವ್ಯವಸ್ಥೆ ತೊಡೆದುಹಾಕಲು ಎಲ್ಲರೂ ಕೈ ಜೋಡಿಸಬೇಕು- ನ್ಯಾ.ಎಂ.ಎಸ್.ಸಂತೋಷ್
ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಯಲ್ಲಿ ಸಹ ಮಕ್ಕಳ ಪಾತ್ರ ಅಪಾರವಾಗಿದ್ದು ಪ್ರತಿ ಮಗು ಜಾಗೃತ ನಾಗರೀಕರಾಗಿ ಸಮಾಜ ಬದಲಾವಣೆಯ ರಾಯಭಾರಿಗಳಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್ ಕರೆ ನೀಡಿದರು.
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ವಕೀಲರ ಸಂಘ, ಹಾಲು ಒಕ್ಕೂಟ ಹಾಗೂ ದೇಶೀಯ ವಿದ್ಯಾಶಾಲಾ ಸಮಿತಿ ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರದಂದು ದೇಶೀಯ ವಿದ್ಯಾ ಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ-2026” ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಮಗುವೂ ಶಾಲೆಗೆ ದಾಖಲಾತಿ ನಿಯಮಿತವಾಗಿ ಶಿಕ್ಷಣ ಪಡೆಯಬೇಕು. ಹಾಗೂ ಮಕ್ಕಳು ತಮ್ಮ ಸುತ್ತಮುತ್ತಲಿನ ಯಾವುದೇ ಮಗು ಶಾಲೆಯಿಂದ ಹೊರಗುಳಿದಿರುವುದನ್ನು ಅಥವಾ ಕೆಲಸಕ್ಕೆ ಹೋಗುತ್ತಿರುವುದನ್ನು ಗಮನಸಿದರೆ ಶಿಕ್ಷಕರಿಗೆ, ಕಾರ್ಮಿಕ ಇಲಾಖೆಗೆ ಅಥವಾ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡಿ ತಿಳಿಸಬೇಕು.
ಶಿಕ್ಷಣವನ್ನು ಮೊಟಕುಗೊಳಿಸಿ ಬಾಲ ಕಾರ್ಮಿಕತೆಗೆ ಹಚ್ಚುವ ಈ ವ್ಯವಸ್ಥೆಯನ್ನು ತೊಡೆದುಹಾಕಲು ಎಲ್ಲರೂ ಕೈಜೋಡಿಸಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಮಕ್ಕಳ ಹಕ್ಕುಗಳ ಉಲ್ಲಂಘನೆ ಕಂಡು ಬಂದಲ್ಲಿ ಸಹಾಯವಾಣಿಗೆ ಕರೆ ಮಾಡಬೇಕು. ಈ ಪದ್ದತಿ ವಿರುದ್ದ ಆಂದೋಲನದ ರೀತಿಯಲ್ಲಿ ಹೋರಾಟ ಮಾಡಬೇಕಿದೆ ಎಂದು ತಿಳಿಸಿದರು.
ಪ್ರತಿಯೊಂದು ಮಗುವೂ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬಂದಾಗ ಮಾತ್ರ ಬಾಲಕಾರ್ಮಿಕ ಮುಕ್ತ ಸಮಾಜ ನಿರ್ಮಿಸಲು ಸಾಧ್ಯ. ಮಕ್ಕಳನ್ನು ಆಸ್ತಿಯನ್ನಾಗಿ ರೂಪಿಸಲು ಸರ್ಕಾರ 14 ವರ್ಷದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ವ್ಯವಸ್ಥೆ ತಂದಿದೆ. ಇದರ ಸಂಪೂರ್ಣ ಸದ್ಬಳಕೆ ಆಗಬೇಕು ಎಂದ ಅವರು ಮಾಜಿ ರಾಷ್ಟçಪತಿಗಳಾದ ಡಾ.ಎಪಿಜೆ ಅಬ್ದುಲ್ ಕಲಾಂ ರ 5 ಸೂತ್ರಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿ, ಹೇಳಿಸಿ, ಇವು ಮಂತ್ರಗಳಿದ್ದ ಹಾಗೆ. ದಿನನಿತ್ಯ ಹೇಳಿಕೊಳ್ಳಬೇಕೆಂದು ತಿಳಿಸಿದರು.
ಅಂದು ಶಿಕ್ಷಣ ನೀಡಲು ಮುಂದಾದವರನ್ನು ಬ್ರಿಟಿಷರು ಜೈಲಿಗೆ ಹಾಕಿದ್ದರು. ಆರು ಜನರು ಶಿಕ್ಷಣ ನೀಡುವ ಸಂಕಲ್ಪ ಮಾಡಿ ನಾವೇ ಶಾಲೆ ತೆರೆಯಬೇಕೆಂದು ದೇಶೀಯ ವಿದ್ಯಾ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇಂತಹ ಉತ್ಕೃಷ್ಟ ಸಂಸ್ಥೆಯಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ಆಚರಣೆ ಮಾಡುತ್ತಿರುವುದು ಉತ್ತಮ ವಿಚಾರ ಎಂದು ಸ್ಮರಿಸಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಅಧ್ಯಕ್ಷರಾದ ಕೆ. ಬಸಪ್ಪಗೌಡ ಮಾತನಾಡಿ, ಬಾಲ ಕಾರ್ಮಿಕ ಪದ್ದತಿಯು ನಾಗರೀಕ ಸಮಾಜ ಪ್ರಾರಂಭದಿAದಲೂ ಇದೆ. ಅಪರಾಧಗಳನ್ನು ತಡೆಯಲು ಹಂತ ಹಂತವಾಗಿ ಕಾನೂನುಗಳನ್ನು ರೂಪಿಸಲಾಗಿದೆ. ಬಾಲ ಕಾರ್ಮಿಕ ಪದ್ದತಿ ನಿಷೆಧ ಕಾಯ್ದೆ ಬಂದು 40 ವರ್ಷ ಕಳೆದರೂ ಈ ಪದ್ದತಿಯನ್ನು ತೊಡೆದು ಹಾಕಲು ಸಾಧ್ಯವಾಗಿಲ್ಲ. ಇದನ್ನು ತೊಡೆದು ಹಾಕುವುದು ನಾಗರೀಕ ಸಮಾಜದ ವ್ಯವಸ್ಥೆಯ ಜವಾಬ್ದಾರಿಯಾಗಿದೆ.
ಯಾವುದೇ ಮಗು ಕೂಡ ಶಿಕ್ಷಣದಿಂದ ವಂಚಿತನಾಗಬಾರದು. ಶಿಕ್ಷಣದಿಂದ ವಂಚಿತರಾದಲ್ಲಿ ಮಕ್ಕಳು ಸಮಾಜ ಘಾತುಕ ಚಟುವಟಿಕೆಯಲ್ಲಿ ತೊಡಗುವ ಸಂಭವ ಹೆಚ್ಚಿರುವ ಕಾರಣ, ಶಿಕ್ಷಣ ಕೊಡಿಸುವ ಹೊಣೆಗಾರಿಕೆ ನಮ್ಮ ಎಲ್ಲರ ಮೇಲಿದೆ. ಕಟ್ಟಕಡೆಯ ಮಗುವಿಗೂ ಶಿಕ್ಷಣ ಕೊಡಿಸುವ ವ್ಯವಸ್ಥೆ ನಿರ್ಮಿಸೋಣ. ಬಾಲ ಕಾರ್ಮಿಕರನ್ನು ನಾವು ಸಾಮಾನ್ಯವಾಗಿ ವಲಸೆ ಹೋಗುವವರಲ್ಲಿ, ಸ್ಲಂಗಳಲ್ಲಿ ಕಾಣುತ್ತಿದ್ದು, ಈ ಮಕ್ಕಳನ್ನು ಸಮೀಪದ ವಸತಿ ಶಾಲೆಗಳಿಗೆ ಸೇರಿಸುವ ವ್ಯವಸ್ಥೆ ಆಗಬೇಕೆಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಸ್ವಾಮಿ ಜಿ. ಆರ್ ಮಾತನಾಡಿ, ವಿದ್ಯಾರ್ಥಿಗಳೇ, ಬಾಲ ಕಾಮಿಕರು ತಮ್ಮ ಗಮನಕ್ಕೆ ಬಂದರೆ ಕಾರ್ಮಿಕ ಇಲಾಖೆಗೆ ಅಥವಾ ಮಕ್ಕಳ ಸಹಾಯವಾಣಿಗೆ ತಿಳಿಸಿರಿ. ವಿದ್ಯಾರ್ಥಿಗಳು ಗ್ರಹಿಕೆಯಲ್ಲಿ ನಿಪುಣರು. ಆದ್ದರಿಂದ ತಮ್ಮ ಸುತ್ತಮುತ್ತ ಜಾಗೃತಿ ಮೂಡಿಸಬೇಕು. ನಮ್ಮಲ್ಲಿ ಉಚಿತ ಶಿಕ್ಷಣ ವ್ಯವಸ್ಥೆ ಇದ್ದು, ಇಂತಹ ಶಿಕ್ಷಣ ಕೊಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತಾಜುದ್ದೀನ್ ಖಾನ್ ಮಾತನಾಡಿ, ಎಲ್ಲ ಮಕ್ಕಳಿಗೆ ಸುರಕ್ಷಿತ ಮತ್ತು ಆರೋಗ್ಯಕರವಾದ ಸಮಾಜದಲ್ಲಿ ಬದುಕುವ ಹಕ್ಕು ಇದೆ. ಆದರೂ ಈಗಲೂ ಬಾಲ ಕಾರ್ಮಿಕ ಪದ್ದತಿ ಇದೆ. ಆದ್ದರಿಂದ ನಾವೆಲ್ಲ ಒಟ್ಟಾಗಿ ಬಾಲ ಕಾರ್ಮಿಕತೆಯನ್ನು ತೊಡೆದು ಹಾಕುವ ಪ್ರತಿಜ್ಞೆ ಮಾಡೋಣ ಎಂದರು.
ಶಿಕ್ಷಣ ವಂಚಿತ ಮಕ್ಕಳು ವ್ಯಸನಕ್ಕೊಳಗಾಗುವ ಸಂಭವ ಹೆಚ್ಚಿದೆ. ಹಾಗೂ ವ್ಯಸನಕ್ಕೊಳಗಾದ ಮಕ್ಕಳು ಅಪರಾಧ ಚಟುವಟಿಕೆಯಲ್ಲೂ ಪಾಲ್ಗೊಳ್ಳುತ್ತಾರೆ. ಮತ್ತು ವ್ಯಸನಕ್ಕೆ ಹಣ ಸಿಗದಿದ್ದಾಗ ಬಾಲ ಕಾರ್ಮಿಕತೆಗೆ ಒಳಗಾಗುತ್ತಾರೆ. ಹೀಗೆ ಒಂದಕ್ಕೊAದು ಸಂಬAಧ ಇದ್ದು, ಈ ಪದ್ದತಿಯಿಂದ ಇವರನ್ನು ಹೊರತರಲು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕಡ್ಡಾಯವಾಗಿ ಶಾಲೆಗೆ ದಾಖಲಿಸಬೇಕು. ವಿದ್ಯಾರ್ಥಿಗಳು ಉತ್ತಮ ಸ್ನೇಹಿತರನ್ನು ಮಾಡಿಕೊಳ್ಳಬೇಕು. ಏನೇ ಸಮಸ್ಯೆಗಳಿದ್ದರೆ ಸಹಾಯವಾಣಿ 1098 ಗೆ ಕರೆ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿರಾಜಪೇಟೆ ತಾಲ್ಲೂಕಿನ ಮಾಯಮುಡಿಯ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕರಾದ ದಿವಾಕರ್ ಆರ್. ಅವರು “ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ 2016” ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ವಿಶೇಷ ಉಪನ್ಯಾಸ ನೀಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಮಿಕ ನಿರೀಕ್ಷಕ ಎಂ.ಕೃಷ್ಣ ಸ್ವಾಗತಿಸಿದರು. ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ರಘುನಾಥ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಭಾರತಿ ಬಣಕಾರ್, ಡಿವಿಎಸ್ ಕಾರ್ಯದರ್ಶಿಗಳಾದ ಎಸ್.ಪಿ. ದಿನೇಶ್, ಪ್ರಾಂಶುಪಾಲರುಗಳಾದ ವೆಂಕಟೇಶ್, ಸರಿತಾ ಎನ್ ರಾವ್, ನಿರೀಕ್ಷಕಿ ಸುಖಿತಾ ಇತರರು ಹಾಜರಿದ್ದರು.
ಅರಿವು ಜಾಥಾ : “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ-2026” ಅಂಗವಾಗಿ ಶುಕ್ರವಾರ ಬೆಳಿಗ್ಗೆ ನಗರದ ಶಿವಪ್ಪ ನಾಯಕ ಸರ್ಕಲ್ ನಿಂದ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು ಜಾಥಾ ಮೂಲಕ ಜಾಗೃತಿ ಮೂಡಿಸುವ ಘೊಷಣೆಗಳನ್ನು ಕೂಗುತ್ತಾ ದೇಶೀಯ ವಿದ್ಯಾ ಸಂಸ್ಥೆಯನ್ನು ತಲುಪಿದರು.
ಕಂಬಿಯ ಹಿಂದಿದ್ದರೂ ಸ್ವಚ್ಛತಾ ಜಾಗೃತಿ ಗೀತೆ ಬರೆದು ಹಾಡಿದ ಕಲಾವಿದ ಮನಸ್ಸುಗಳು
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಮನೆ ಮನೆಗೆ ತೆರಳಿ ಕಸ ತುಂಬುವ ವಾಹನಗಳಲ್ಲಿ ಸಾರ್ವಜನಿಕರಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ವಚ್ಛತಾ ಜಾಗೃತಿ ಗೀತೆಗಳನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದ ಸಜಾ ಬಂದಿಯಾದ ಚಂದ್ರ ಹೆಮ್ಮಾಡಿ ಇವರು 06 ಗೀತೆಗಳ ಸಾಹಿತ್ಯ ಸಂಯೋಜಿಸಿದ್ದು, 06 ಜನ ಬಂದಿಗಳು 06 ವಿಶಿಷ್ಟ ಸ್ವಚ್ಛತಾ ಗೀತೆಗಳ ಗಾಯನದ ಧ್ವನಿಮುದ್ರಿಕೆಯನ್ನು ಸಿದ್ಧಪಡಿಸಿ ಮುದ್ರಿಸಿರುತ್ತಾರೆ.
ಚಂದ್ರ ಹೆಮ್ಮಾಡಿಯವರಿಂದ ಕಸ ಎಸಿಯೋರು ಯಾರವೋ, ದಾದಾಪೀರ್‌ಯವರಿಂದ ಸ್ವಚ್ಛತೆಯೇ ಸೇವೆಯು ಎಂದ ಗಾಂಧಿ ತಾತನ, ತಿಮ್ಮಪ್ಪನವರಿಂದ ಕಸದ ಗಾಡಿ ಬಂತು ನೋಡಿ, ತಿಪ್ಪೇಸ್ವಾಮಿಯವರಿಂದ ಬನ್ನೀರಣ್ಣಾ ಬನ್ನೀರಕ್ಕಾ, ಆನಂದನವರಿAದ ಹಸಿಯಾಗಲಿ ಒಣ ಕಸವಾಗಲೀ, ಅನಿಲ್ ಕುಮಾರ್‌ನರಿಂದ ಕೇಳೋ ತಮ್ಮ ಕೇಳೋ ಅಣ್ಣಾ ಎಂಬ ಈ 6 ಸ್ವಚ್ಛತಾ ಜಾಗೃತಿ ಗೀತೆಗಳನ್ನು ಹಾಡಿದ್ದು, ಈ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆಯ ಮಹತ್ವದ ಕುರಿತು ಅರಿವು ಮತ್ತು ಜಾಗೃತಿ ಮೂಡಿಬರುವ ಸದಾಶಯವನ್ನು ಹೊಂದಲಾಗಿದೆ. ಈ ಹಾಡುಗಳಲ್ಲಿ ಸ್ವಚ್ಛತೆ ಕಾಪಾಡುವುದು, ಸಮರ್ಪಕ ವಿಧಾನದಲ್ಲಿ ಕಸ ವಿಲೇವಾರಿ ಮಾಡುವುದು, ಹಸಿಕಸ ಮತ್ತು ಒಣಕಸ ಬೇರ್ಪಡಿಸುವಿಕೆ, “ಕಸದಿಂದ ರಸ” ಮಾದರಿಯಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿ, ಬಯೋಗ್ಯಾಸ್ ಉತ್ಪಾದನ ಮೂಲಕ ಉದ್ಯೋಗ ಮತ್ತು ಆದಾಯವನ್ನು ಸಂಪಾದಿಸುವುದು. ಆರೋಗ್ಯ ರಕ್ಷಣೆ ಮತ್ತು ಪರಿಸರ ನೈರ್ಮಲ್ಯದ ಅರಿವು ಮೂಡಿಸುವುದು ಸೇರಿದಂತೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸ್ವಚ್ಛತೆಯೇ ಮೂಲ ತಳಹದಿ ಎಂಬ ಸಂದೇಶಗಳನ್ನು ಅಳವಡಿಸಲಾಗಿರುತ್ತದೆ.
ಈ ಬಂದಿಗಳ ಹಾಡುಗಳು ಜೂ.11 ರಿಂದ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ತುಂಬುವ ವಾಹನಗಳಲ್ಲಿ ಬಿತ್ತರಗೊಳ್ಳುತ್ತಿವೆ. ಬಂದಿಗಳ ಮನಃಪರಿವರ್ತನ ಮತ್ತು ಸುಧಾರಣಾ ಕಾರ್ಯಕ್ರಮಗಳಲ್ಲಿ ಈ ರೀತಿಯ ವಿಭಿನ್ನ ಹಾಗೂ ವಿನೂತನ ಕಾರ್ಯಕ್ರಮ ನಮ್ಮ ರಾಜ್ಯದಲ್ಲಿ ಪ್ರಪ್ರಥಮವಾಗಿದೆ ಎಂದು ಕಾರಾಗೃಹ ಮುಖ್ಯ ಅಧೀಕ್ಷಕರು ಪ್ರಕಟಣೆಲ್ಲಿ ತಿಳಿಸಿದ್ದಾರೆ.
ಮೂಲದಲ್ಲಿಯೇ ಕಸವಿಂಗಡಿಸಿ ಪುರಸಭೆ ವಾಹನಗಳಿಗೆ ನೀಡುವುದು ಕಡ್ಡಾಯ- ಭರತ್
ತಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿಕಸ, ಒಣಕಸ, ಸ್ಯಾನಿಟರಿ ತ್ಯಾಜ್ಯ ಮತ್ತು ವಿಶೇಷ ಕಾಳಜಿ ತ್ಯಾಜ್ಯವನ್ನಾಗಿ ವಿಂಗಡಿಸುವುದು ಕಡ್ಡಾಯವಾಗಿದೆ ಎಂದು ಶಿಕಾರಿಪುರ ಪುರಸಭೆಯ ಮುಖ್ಯಾಧಿಕಾರಿ ಭರತ್ ಅವರು ಹೇಳಿದರು.
ಇತ್ತೀಚೆಗೆ ಶಿಕಾರಿಪುರ ಪುರಸಭೆಯಿಂದ ಪುರಸಭೆ ಅಧಿಕಾರಿಗಳು ಮತ್ತು ಸ್ವಸಹಾಯ ಸಂಘಗಳ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು 2026 ರ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಾಗಾರದಲ್ಲಿ ಕಛೇರಿ ವ್ಯವಸ್ಥಾಪಕರಾದ ರಾಜ್ ಕುಮಾರ್ ಅವರು ಭಾಗವಹಿಸಿದ ಸ್ವಸಹಾಯ ಸಂಘದ ಸದಸ್ಯರಿಗೆ ಘನ ತ್ಯಾಜ್ಯ ನಿರ್ವಹಣಾ ನಿಯಮಗಳು-2026 ರ ಯೋಜನೆಯ ಉದ್ದೇಶಗಳು, ಮನೆ ಮನೆ ತ್ಯಾಜ್ಯ ಸಂಗ್ರಹಣೆ, ಕಸದ ವಿಂಗಡಣೆ, ಮರುಬಳಕೆ ಹಾಗೂ ನಗರ ಸ್ವಚ್ಛತೆಯಲ್ಲಿ ಸಮುದಾಯದ ಸಹಭಾಗಿತ್ವದ ಮಹತ್ವವನ್ನು ತಿಳಿಸಿದರು. ಪರಿಸರ ಸ್ನೇಹಿ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವಂತೆ ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವಂತೆ ಜಾಗೃತಿ ಮೂಡಿಸಿದರು.
ಕಾರ್ಯಾಗಾರದಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಮಹಿಳೆಯರು ಮತ್ತು ಸ್ವಸಹಾಯ ಸಂಘಗಳ ಪಾತ್ರ ಮಹತ್ವದ್ದಾಗಿದ್ದು, ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಲಾಯಿತು. ಹೊಸ ನಿಯಮಗಳ ಪ್ರಕಾರ ಸಾರ್ವಜನಿಕರು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಹಸಿರು ಡಸ್ಟ್ ಬಿನ್‌ನಲ್ಲಿ ಹಸಿ ತ್ಯಾಜ್ಯಗಳಾದ ಅಡುಗೆಮನೆ ತ್ಯಾಜ್ಯ, ಆಹಾರ ಪದಾರ್ಥಗಳು, ಹಣ್ಣು-ತರಕಾರಿ ಸಿಪ್ಪೆಗಳು, ಹೂವುಗಳು, ಎಲೆಗಳು,ನೀಲಿ ಡಸ್ಟ್ ಬಿನ್‌ನಲ್ಲಿ ಒಣ ತ್ಯಾಜ್ಯಗಳಾದ ಪ್ಲಾಸ್ಟಿಕ್, ಕಾಗದ, ರಟ್ಟು, ಗಾಜು, ಲೋಹ ಹಾಗೂ ಇತರೆ ಮರುಬಳಕೆ ಮಾಡಬಹುದಾದ ವಸ್ತುಗಳು,ಕೆಂಪುಡಸ್ಟ್ ಬಿನ್‌ನಲ್ಲಿ ಸ್ಯಾನಿಟರಿ ತ್ಯಾಜ್ಯಗಳಾದ ಡ್ರೈಪರ್‌ಗಳು, ಸ್ಯಾನಿಟರಿ ಪ್ಯಾಡ್‌ಗಳು, ಟಿಶೂ ಪೇಪರ್‌ಗಳು ಮುಂತಾದವು ಹಾಗೂ ಕಪ್ಪು ಡಸ್ಟ್ ಬಿನ್‌ನಲ್ಲಿ ವಿಶೇಷ ಕಾಳಜಿ ತ್ಯಾಜ್ಯಗಳಾದ ಬ್ಯಾಟರಿ, ಬಲ್ಟ್, ಇ-ತ್ಯಾಜ್ಯ, ಔಷಧಿ ತ್ಯಾಜ್ಯ, ಪೇಂಟ್ ಡಬ್ಬಿಗಳು ಮುಂತಾದ ಅಪಾಯಕಾರಿ ತ್ಯಾಜ್ಯಗಳನ್ನು 04 ಬಗೆಯಲ್ಲಿ ವಿಂಗಡಣೆ ಮಾಡಿ ಪುರಸಭೆ ವಾಹನಗಳಿಗೆ ನೀಡುವಂತೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಸುರೇಶ್, ಹಿರಿಯ ಆರೋಗ್ಯ ನಿರೀಕ್ಷಕರಾದ ಸೈಯದ್ ನವಾಜ್ ಮತ್ತು ಕಿರಿಯ ಆರೋಗ್ಯ ನಿರೀಕ್ಷಕರಾದ ನಾಗಭೂಷಣ್, ಪುರಸಭೆ ಸಿಬ್ಬಂದಿ ವರ್ಗದವರು, ಸಮುದಾಯ ಸಂಪನ್ಮೂಲ ಸಿಬ್ಬಂದಿಗಳು ಹಾಗೂ ವಿವಿಧ ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.
Department of Kannada and Culture ವಿವಿಧ ವಯೋಮಾನದ ಕಲಾವಿದರಾಗಿ ನಿರ್ದಿಷ್ಟಪಡಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನ
Department of Kannada and Culture ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ವಯೋಮಾನದ ಕಲಾವಿದರಿಗಾಗಿ ಹಮ್ಮಿಕೊಳ್ಳಲಾಗುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇಲಾಖೆಯು ಮಕ್ಕಳಿಗಾಗಿ ‘ಚಿಗುರು’, ಯುವಕರಿಗಾಗಿ ‘ಯುವಸೌರಭ’ ಹಾಗೂ ಹಿರಿಯ ಕಲಾವಿದರಿಗಾಗಿ ‘ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಆಯಾ ವಿಭಾಗಗಳಲ್ಲಿ ಈ ಕೆಳಗಿನ ಕಲಾ ಪ್ರಕಾರಗಳಿಗೆ ಅವಕಾಶ ಕಲ್ಪಿಸಲಾಗಿದೆ:
ಚಿಗುರು ಕಾರ್ಯಕ್ರಮ (8 ರಿಂದ 14 ವರ್ಷದೊಳಗಿನ ಮಕ್ಕಳಿಗೆ):
ಶಾಸ್ತ್ರೀಯ ಸಂಗೀತ / ಕರ್ನಾಟಕ / ಹಿಂದೂಸ್ತಾನಿ / ಗಾಯನ ಮತ್ತು ವಾದ್ಯಸಂಗೀತ.
ಸುಗಮ ಸಂಗೀತ / ವಚನ ಸಂಗೀತ.
ಜನಪದ ಗೀತೆಗಳು.
ಸಮೂಹ ನೃತ್ಯ / ನೃತ್ಯ ರೂಪಕ.
ನಾಟಕ, ಯಕ್ಷಗಾನ, ಮೂಡಲಪಾಯ, ಬಯಲಾಟ, ಗೊಂಬೆಯಾಟ ಇತ್ಯಾದಿ ಸಮೂಹ ಕಾರ್ಯಕ್ರಮಗಳು.
ಏಕಪಾತ್ರಾಭಿನಯ.
ಯುವಸೌರಭ ಕಾರ್ಯಕ್ರಮ (15 ರಿಂದ 30 ವರ್ಷದೊಳಗಿನ ಯುವಕರಿಗೆ):
ಸುಗಮ ಸಂಗೀತ / ವಚನ ಸಂಗೀತ.
ಜನಪದ ಗೀತೆಗಳು.
ಸಮೂಹ ನೃತ್ಯ / ನೃತ್ಯ ರೂಪಕ.
ಜನಪದ ಪ್ರದರ್ಶನ ಕಲಾತಂಡ (ವಿವಿಧ 02 ಕಲಾ ಪ್ರಕಾರಗಳು).
ನಾಟಕ, ಯಕ್ಷಗಾನ, ಮೂಡಲಪಾಯ, ಬಯಲಾಟ, ಗೊಂಬೆಯಾಟ ಇತ್ಯಾದಿ ಸಮೂಹ ಕಾರ್ಯಕ್ರಮಗಳು.
ಸಾಂಸ್ಕೃತಿಕ ಸೌರಭ ಕಾರ್ಯಕ್ರಮ (30 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರಿಗೆ):
ಶಾಸ್ತ್ರೀಯ ಸಂಗೀತ / ಕರ್ನಾಟಕ / ಹಿಂದೂಸ್ತಾನಿ / ಗಾಯನ ಮತ್ತು ವಾದ್ಯಸಂಗೀತ.
ಸುಗಮ ಸಂಗೀತ / ವಚನ ಸಂಗೀತ.
ಜನಪದ ಗೀತೆಗಳು.
ಸಮೂಹ ನೃತ್ಯ / ನೃತ್ಯ ರೂಪಕ.
ಜನಪದ ಪ್ರದರ್ಶನ ಕಲಾತಂಡ (ವಿವಿಧ 03 ಕಲಾ ಪ್ರಕಾರಗಳು).
ನಾಟಕ, ಯಕ್ಷಗಾನ, ಬಯಲಾಟ, ಗೊಂಬೆಯಾಟ ಇತ್ಯಾದಿ ಸಮೂಹ ಕಾರ್ಯಕ್ರಮಗಳು.
ಗಮಕ / ಕಥಾಕೀರ್ತನೆ.
Department of Kannada and Culture ಆಸಕ್ತ ಕಲಾವಿದರು ತಮ್ಮ ವಯಸ್ಸಿನ ಧೃಢೀಕರಣ ದಾಖಲೆಗಳೊಂದಿಗೆ, ಸಂಗೀತ ವಿದ್ಯಾಭ್ಯಾಸದ ಪ್ರಥಮ ದರ್ಜೆ (ಜೂನಿಯರ್ ಗ್ರೇಡ್), ಪ್ರೌಢದರ್ಜೆ (ಸೀನಿಯರ್ ಗ್ರೇಡ್), ವಿದ್ವತ್ ಶ್ರೇಣಿ, ಆಕಾಶವಾಣಿ ‘ಬಿ’ ಗ್ರೇಡ್ ಅಥವಾ ಸರ್ಕಾರದಿಂದ ನೀಡುವ ಪ್ರಶಸ್ತಿ ಪುರಸ್ಕೃತ ದಾಖಲೆಗಳನ್ನು ಲಗತ್ತಿಸಬೇಕು.
ಅಭ್ಯರ್ಥಿಗಳು ತಮ್ಮ ಸ್ವವಿವರವನ್ನು ಬಿಳಿ ಹಾಳೆಯ ಮೇಲೆ ಬರೆದು, ಅಗತ್ಯ ದಾಖಲೆಗಳೊಂದಿಗೆ “ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ರಂಗಮಂದಿರ, ಶಿವಮೊಗ್ಗ” ಈ ವಿಳಾಸಕ್ಕೆ ದಿನಾಂಕ: 25-06-2026ರ ಸಂಜೆ 5.00 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಿಶೇಷ ಸೂಚನೆ: ಈ ಹಿಂದೆ ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದ ಕಲಾವಿದರು ಈ ಬಾರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ: 08182-223354 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹೆಚ್ ತಿಳಿಸಿದ್ದಾರೆ.
ಹೊಳೆಬೆನವಳ್ಳಿ ಸನಿಹ ಭತ್ತದ ಗದ್ದೆಗೆ ನುಗ್ಗಿದ ಕಾರು:ಏರ್ ಬ್ಯಾಗ್ ರಕ್ಷಣೆಯಿಂದಾಗಿ ಚಾಲಕ ಪಾರು
ಶಿವಮೊಗ್ಗ-ಚಿತ್ರದುರ್ಗ ಹೆದ್ದಾರಿಯ ಹೊಳೆಬೆನವಳ್ಳಿ ಸಮೀಪ ಕಾರೊಂದು ಭತ್ತದ ಗದ್ದೆ ನುಗ್ಗಿದೆ. ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ ಕಾರು ಎದುರಿನಲ್ಲಿ ಬಂದ ಸರ್ಕಾರಿ ಬಸ್ ತಪ್ಪಿಸಲು ಹೋಗಿ ಚಾಲಕ ಕಾರನ್ನು ರಸ್ತೆ ಬದಿಯ ಭತ್ತದ ಗದ್ದೆಗೆ ನುಗಿಸಿದ್ದಾನೆ. ಕಾರು ಒಂದೆರಡು ಪಲ್ಟಿಯಾಗಿ ರಸ್ತೆ ಬದಿಯ 5-6 ಅಡಿ ತಗ್ಗಿನಲ್ಲಿರುವ ಗದ್ದೆಗೆ ನುಗ್ಗಿದೆ. ಎಲ್ಲ ಏರ್ ಬ್ಯಾಗ್‌ಗಳು ತೆರೆದುಕೊಂಡಿದ್ದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಓದುತ್ತಿರುವ ಆಂಧ್ರಪ್ರದೇಶದ ವಿದ್ಯಾರ್ಥಿಯದು ಎನ್ನಲಾಗಿದೆ. ಕೆರೆಯ ಕೆಲಸ ಮಾಡುತ್ತಿದ್ದವರು ಕಾರಿನಲ್ಲಿದವರನ್ನು ರಕ್ಷಿಸಿದ್ದಾರೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಜೂನ್ 13. ಶಿವಮೊಗ್ಗದಲ್ಲಿ ಬೃಹತ್ ರಕ್ತದಾನ ಶಿಬಿರ.- ಬಿ.ಗೋಪಿನಾಥ್
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಎಲ್ಲಾ ಸಂಯೋಜಿತ ಸಂಘಗಳ ವತಿಯಿಂದ ಟಿ ಆರ್ ಅಶ್ವಥ್ ನಾರಾಯಣ ಶೆಟ್ಟಿ ಅಭಿನಂದನಾ ಕಾರ್ಯಕ್ರಮದ ನಿಮಿತ್ತ ಜೂನ್ 13ರಂದು ಬೆಳಗ್ಗೆ 9ಕ್ಕೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಯುಕೆ & ಕೋ ಸಂಸ್ಥಾಪಕ ಕೆ.ಉಲ್ಲಾಸ್ ಕಾಮತ್ ಉದ್ಘಾಟಿಸುವರು.
ರಕ್ತದಾನ ಶಿಬಿರವು ಆರೋಗ್ಯವಂತ ವ್ಯಕ್ತಿಗಳು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವ ಒಂದು ಸಂಘಟಿತ ಕಾರ್ಯಕ್ರಮವಾಗಿದ್ದು, ಅಗತ್ಯವಿರುವ ರೋಗಿಗಳನ್ನು ನೇರವಾಗಿ ರಕ್ಷಿಸುವ ಮತ್ತು ಸಹಾಯ ಮಾಡುವ ಪ್ರಮುಖ ಜೀವಸೆಲೆಯಾಗಿ ಕಾರ್ಯನಿರ್ವಹಿಸುತ್ತದೆ. ಶಸ್ತ್ರಚಿಕಿತ್ಸೆ, ಅಪಘಾತಕ್ಕೀಡಾದವರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಬಳಸಲಾಗುವ ಸುರಕ್ಷಿತ, ಸ್ಥಿರವಾದ ರಕ್ತ ಪೂರೈಕೆಯನ್ನು ಕಾಪಾಡಿಕೊಳ್ಳಲು ಈ ಸಮುದಾಯ ಅಭಿಯಾನಗಳು ಅತ್ಯಗತ್ಯ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕೃತಿ ರಕ್ಷಣೆ ಜಾಗೃತಿಗೆ ದೇಶದಾದ್ಯಂತ ಜಾಥಾ ಹೊರಟಿರುವ ವಿಕ್ರಮಾದಿತ್ಯರ ಸಾಹಸ ಅನುಕರಣೀಯ- ಎನ್.ಗೋಪಿನಾಥ್
ಪ್ರಕೃತಿ ಉಳಿವಿಗಾಗಿ ದೇಶಾದ್ಯಂತ ಜನರನ್ನು ಜಾಗೃತಗೊಳಿಸುವ ಅವಶ್ಯಕತೆ ಇದ್ದು, ಪರಿಸರ ಸಂರಕ್ಷಣೆ ಮಾಡುವುದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಎಂದು ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ದೇಶಾದ್ಯಂತ ಜಾಥಾ ನಡೆಸುತ್ತಿರುವ ವಿಕ್ರಮಾದಿತ್ಯ ಅವರನ್ನು ಸನ್ಮಾನಿಸಿ ಮಾತನಾಡಿ, ನಿಸ್ವಾರ್ಥದಿಂದ ಮಾನವಕುಲಕ್ಕೆ ಅಗತ್ಯವಾಗಿ ಬೇಕಾಗಿರುವ ವಿಶ್ವ ಶಾಂತಿಗಾಗಿ ಹಾಗೂ ಮನುಷ್ಯನ ದುರಾಸೆಗೆ ಪ್ರಕೃತಿ ಮರುಗುತ್ತಿರುವುದನ್ನು ನೋಡಲಾರದೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡಿಗೆ ಮೂಲಕ ಜನಜಾಗೃತಿ ಮೂಡಿಸಲು ಹೊರಟಿರುವ ವಿಕ್ರಾಮಾದ್ಯಿತ್ಯ ಅವರ ಕಾರ್ಯ ಶ್ಲಾಘನೀಯ. ವಿಕ್ರಮಾದಿತ್ಯ ಅವರ ಶ್ರದ್ಧೆ ಮೆಚ್ಚುವಂತದ್ದು ಎಂದು ತಿಳಿಸಿದರು.
ಯೂತ್ ಹಾಸ್ಟೆಲ್ ಅಸೋಸಿಯೇಷನ್ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ತಾಂತ್ರಿಕ ಪದವಿ ಹೊಂದಿರುವ ವಿಕ್ರಮಾದಿತ್ಯ ಅವರು ಉತ್ತಮ ಉದ್ಯೋಗ ಪಡೆದು ಜೀವನ ನಡೆಸಬಹುದಾಗಿತ್ತು. ಆದರೆ ಲೋಕ ಕಲ್ಯಾಣದ ಚಿಂತನೆಯೊಂದಿಗೆ ದೇಶ ಪರ್ಯಟಣೆ ಕೈಗೊಂಡಿರುವುದು ಪ್ರಶಂಸನೀಯ ಎಂದು ತಿಳಿಸಿದರು.
ಲಕ್ಷ್ಮೀದೇವಿ ಗೋಪಿನಾಥ್ ಮಾತನಾಡಿ, ಪ್ರಕೃತಿ ಉಳಿವಿನ ಸಂದೇಶದ ಜೊತೆಗೆ ಮಹಿಳಾ ಸಬಲೀಕರಣ, ಭ್ರೂಣಹತ್ಯೆಗಳ ಬಗ್ಗೆಯೂ ಗಮನ ಸೆಳೆಯುವಂತಹ ವಿಚಾರಗಳನ್ನು ಸೇರಿಸಿಕೊಳ್ಳಲಿ ಎಂದು ಆಶಿಸಿದರು.
ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಚೇರ್ಮನ್ ವಾಗೇಶ್ ಮಾತನಾಡಿ, ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸಂಗಮ ಸ್ಥಳ ನೀಲಗಿರಿಯವರಾದ ಇವರು, ಮಾನವರ ದುರಾಸೆಗೆ ಪ್ರಕೃತಿ ನಶಿಸುತ್ತಿರುವುದನ್ನು ಸಹಿಸಲಾಗದೆ, ತನ್ನ ಕೈಲಾದ ಮಟ್ಟಿಗೆ ದೇಶದ ಜನರನ್ನು ತಲುಪಿ, ಪ್ರಾಕೃತಿಕ ಸಂಪತ್ತು ಉಳಿಯುವುದರಿಂದ ಎಲ್ಲಾ ಪ್ರಾಣಿ ಸಂಕುಲಗಳಿಗೂ ಹಾಗೂ ಮುಂದಿನ ಪೀಳಿಗೆಗೆ ನಾವು ನೀಡಬಹದಾದ ಉತ್ತಮ ಕೊಡಿಗೆಯಾಗುತ್ತದೆ ಎಂಬ ಭಾವನೆಯಿಂದ ಏಕಾಂಗಿಯಾಗಿ ದೇಶ ಸುತ್ತುವ ಕೆಲಸ ಪ್ರಾರಂಭಿಸಿದ್ದಾರೆ. ಇವರಿಗೆ ಎಲ್ಲಾ ಸಂಘ ಸಂಸ್ಥೆಗಳು ಪ್ರೋತ್ಸಾಹಿಸಬೇಕು ಎಂದರು.
ಮೋಹನ್, ಸೆಂತೀಲ್ ವೇಲನ್ ಇದ್ದರು.
ಸಾಗರ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ:ಅಕ್ರಮ ಜಂಬಿಟ್ಟಿಗೆ ಸಾಗಾಣಿಕೆ ಲಾರಿಗಳ ವಶ
ಸಾಗರ ತಾಲೂಕಿನಲ್ಲಿ ಯಾವುದೇ ಅಕ್ರಮ ಜಂಬಿಟ್ಟಿಗೆ ಸಾಗಾಣಿಕೆಯನ್ನು ನಡೆಯಬಿಡುವುದಿಲ್ಲ, ಅಕ್ರಮ ಸಾಗಾಣಿಕೆದಾರರ ವಿರುದ್ಧ ಖಡಕ್ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಹಶೀಲ್ದಾರ್ ಡಾ. ಪ್ರತಿಭಾ ಆರ್ ಎಚ್ಚರಿಸಿದ್ದಾರೆ. ಇಂದು ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ಹಿರೇ ನಲ್ಲೂರು ಗ್ರಾಮ ಪಂಚಾಯಿತಿಯ ಹಿರೇನೆಲ್ಲೂರು ಗ್ರಾಮದಲ್ಲಿ ಸರ್ವೆ ನಂಬರ್ 211 ರಲ್ಲಿ ಅಕ್ರಮವಾಗಿ ಜಂಬಿಟ್ಟಿಗೆ ತೆಗೆದು ಲಾರಿಗಳಲ್ಲಿ ಸಾಗಿಸುತ್ತಿದ್ದಾಗ ಪತ್ತೆ ಹಚ್ಚಿ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ. ನೂತನವಾಗಿ ಬಂದಿರುವ ತಹಸಿಲ್ದಾರ್ ಡಾ. ಪ್ರತಿಭಾ ಆರ್ ರವರು ಸಾಗರ ತಾಲೂಕಿನಲ್ಲಿ ಯಾವುದೇ ಅಕ್ರಮ ಮರಳು ಸಾಗಾಣಿಕೆ, ಅಕ್ರಮ ಜಂಬಿಟ್ಟಿಗೆ ಸಾಗಾಣಿಕೆಯನ್ನು ತಡೆಯಲು ಕ್ರಮಕೈಗೊಂಡಿದ್ದಾರೆ.
Chamber of Commerce Shivamogga ಜೂನ್ 13. “ಭಾರತದಲ್ಲಿ ಕುಟುಂಬ ವ್ಯವಹಾರ ನಿರ್ವಹಣೆ ಸವಾಲುಗಳು & ಭವಿಷ್ಯ” ವಿಶೇಷ ಉಪನ್ಯಾಸ
Chamber of Commerce Shivamogga ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋ ಕಾಸ್ಟ್ ಸಭಾಂಗಣದಲ್ಲಿ ಜೂನ್ 13ರಂದು ಬೆಳಗ್ಗೆ 10.30ಕ್ಕೆ “ ಭಾರತದಲ್ಲಿ ಕುಟುಂಬ ವ್ಯವಹಾರ ನಿರ್ವಹಣೆ ಸವಾಲುಗಳು ಮತ್ತು ಭವಿಷ್ಯ” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ವಹಣೆಯೊಂದಿಗೆ ಆಯೋಜಿಸಿರುವ ಉಪನ್ಯಾಸ ಕಾರ್ಯಕ್ರಮವನ್ನು ಯುಕೆ & ಕೋ ಸಂಸ್ಥಾಪಕ ಕೆ.ಉಲ್ಲಾಸ್ ಕಾಮತ್ ಉದ್ಘಾಟಿಸುವರು. ಟಿ ಆರ್ ಅಶ್ವಥ್ ನಾರಾಯಣ ಶೆಟ್ಟಿ ಅಭಿನಂದನಾ ಸಮಿತಿ ಗೌರವ ಅಧ್ಯಕ್ಷ ಎಸ್.ರುದ್ರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಉಪಸ್ಥಿತರಿರುವರು.
ಉದ್ಯಮಿ ಟಿ ಆರ್ ಅಶ್ವಥ್ ನಾರಾಯಣ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಭೂಪಾಳಂ ಶಶಿಧರ್, ಎ.ಎಂ.ಸುರೇಶ್ ಕಾರ್ಯಕ್ರಮದಲ್ಲಿ ಹಾಜರಿರುವರು.
Chamber of Commerce Shivamogga ಕೆ.ಉಲ್ಲಾಸ್ ಕಾಮತ್ ಅವರು ಯುಕೆ & ಕೋ ಸಂಸ್ಥಾಪಕರಾಗಿದ್ದು, ಕುಟುಂಬ ನಿರ್ವಹಣೆಯ ಉದ್ಯಮ ಬೆಳೆಯಲು ಮತ್ತು ಯಶಸ್ವಿಯಾಗಲು ಸಬಲೀಕರಣಗೊಳಿಸುವ ಕುರಿತು ಮಾರ್ಗದರ್ಶನ ನೀಡುವರು. ವಿಶೇಷ ಉಪನ್ಯಾಸದ ಭಾಗವಾಗಲು ಮೊಬೈಲ್ ನಂಬರ್ 7019663300 ಸಂಪರ್ಕಿಸಬಹುದಾಗಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ತಿಳಿಸಿದ್ದಾರೆ.
