Shivaganga Yoga Center ಉತ್ತಮ ಆರೋಗ್ಯ ಮನುಷ್ಯನಿಗೆ ಅಮೂಲ್ಯ ಆಸ್ತಿ. ಉನ್ನತ ಸಾಧನೆಗೆ ಯೋಗ, ಧ್ಯಾನ ಹಾಗೂ ಕಠಿಣ ಪರಿಶ್ರಮ
ರಹದಾರಿಯಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು.
ಬಸವನಗುಡಿಯ ಸರ್ಕಾರಿ ನೌಕರರ ವಿಕಾಸ ಕೇಂದ್ರದ ಸಭಾಂಗಣದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರ ವತಿಯಿಂದ ನಡೆದ ಸರ್ಕಾರಿ ನೌಕರರ ವಿಕಾಸ ಕೇಂದ್ರ ಶಿವಮೊಗ್ಗ ಯೋಗ ಶಾಖೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಆರೋಗ್ಯ ಇದ್ದಲ್ಲಿ ಮಾತ್ರ ಸಾಧನೆ ಮಾಡಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಉನ್ನತ ಸಾಧನೆಗೆ ಯೋಗ, ಧ್ಯಾನ ಸಹಕಾರಿ. ಸಮಾಜಮುಖಿ, ಜನಪರ ಕಾರ್ಯಕ್ಕೆ ಸಹಕಾರ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಇಂಥಹ ಶಿಬಿರದ ಯಶಸ್ಸಿಗೆ ಅಗತ್ಯ ಬೆಂಬಲ ನೀಡಲಾಗುವುದು ಎಂದರು.
ಶಿವಗಂಗಾ ಯೋಗ ಕೇಂದ್ರದ ಕಾರ್ಯಾಧ್ಯಕ್ಷ, ಯೋಗಾಚಾರ್ಯ ಡಾ. ಸಿ.ವಿ. ರುದ್ರಾರಾಧ್ಯರು ಮಾತನಾಡಿ,
ಆಧುನಿಕ ಯುಗದಲ್ಲಿ ಒತ್ತಡದ ಜೀವನ ಶೈಲಿ, ಕ್ರಮಬದ್ಧವಲ್ಲದ ಆಹಾರ ಸೇವನೆಯಿಂದಾಗಿ ಹಲವರು ವಿವಿಧ ರೋಗಗಳಿಂದ ನರಳುವಂತಾಗಿದೆ. ಇದಕ್ಕೆಲ್ಲಾ ಯೋಗ ಪರಿಹಾರ. ಯೋಗ ಜೀವನದ ಅವಿಭಾಜ್ಯ ಅಂಗವಾಗಬೇಕು. ದಿನಕ್ಕೆ ಒಂದು ಗಂಟೆ ನಿರಂತರವಾಗಿ ಯೋಗ ಮಾಡುವುದರಿಂದ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.
. ಮನುಷ್ಯನಿಗೆ ಬಿಪಿ, ಶುಗರ್ ಬಂದರೆ ಹಲವು ರೋಗಗಳಿಗೆ ಆಹ್ವಾನ ನೀಡಿದಂತೆ. ಹೀಗಾಗಿ ಪ್ರಸ್ತುತ ಸಂದರ್ಭದಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವುದು ಎಲ್ಲರಿಗೂ ಅನಿವಾರ್ಯ ಮತ್ತು ಅತ್ಯಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ, ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷ ಎಸ್. ರುದ್ರೇಗೌಡ್ರು ಮಾತನಾಡಿ, ಪ್ರತಿಯೊಬ್ಬರು ಯೋಗ ಶಿಕ್ಷಣ ಪಡೆದು ರೋಗದಿಂದ ಮುಕ್ತರಾಗಬೇಕು. ಪ್ರತಿದಿನ ನಾವು ಸರಳ ಯೋಗಾಭ್ಯಾಸವನ್ನು ಕಾಲಮಿತಿ ಅನುಗುಣವಾಗಿ ಕನಿಷ್ಠ ಅರ್ಧ ಗಂಟೆಯಾದರೂ ತಪ್ಪದೇ ಮಾಡಿದರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಯಾವುದೇ ಔಷಧಿ, ಖರ್ಚಿಲ್ಲದೆ ಆರೋಗ್ಯ ಪಡೆಯುವ ಸುಲಭ ವಿಧಾನ. ಭಾರತದ ಯೋಗ ಪರಂಪರೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನೂರಾರು ದೇಶಗಳು ನಮ್ಮ ಯೋಗ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಯೋಗದಿಂದ ಕೆಲಸದಲ್ಲಿ ಕಾರ್ಯದಕ್ಷತೆ ಹೆಚ್ಚುವುದರಿಂದ ದೇಶದ ಆರ್ಥಿಕ ಪ್ರಗತಿಗೂ ಇದು ಬುನಾದಿಯಾಗಿದೆ ಎಂದು ತಿಳಿಸಿದರು.
Shivaganga Yoga Center ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್. ಮೋಹನ್ ಕುಮಾರ್ ಮಾತನಾಡಿ, ಮನುಷ್ಯನಿಗೆ ಯೋಗ, ವಾಕಿಂಗ್, ಕ್ರೀಡೆ ಯಾವುದಾದರೂ ದೈಹಿಕ ಕಸರತ್ತು ಅಗತ್ಯ. ಇದರಿಂದ ಆರೋಗ್ಯ ವೃದ್ಧಿಯಾಗುವುದಲ್ಲದೆ ಮನಸ್ಸಿಗೆ ಶಾಂತಿ, ಉತ್ಸಾಹ ದೊರೆಯುತ್ತದೆ. ಪ್ರತಿಯೊಬ್ಬರೂ ಯೋಗದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಶಿವಗಂಗಾ ಯೋಗ ಕೇಂದ್ರದ ಕಾರ್ಯದರ್ಶಿಗಳಾದ ಎಚ್. ಎo. ಚಂದ್ರಶೇಖರಯ್ಯ ಮಾತನಾಡಿ, ಯೋಗದಿಂದ ಶಿಸ್ತು, ಸಂಯಮ, ತಾಳ್ಮೆ ಮೂಡುವುದರಿಂದ ವ್ಯಕ್ತಿತ್ವ ವಿಕಸನಕ್ಕೆ ಇದು ಪೂರಕವಾಗಿದೆ. ಯುವಜನತೆ ಯೋಗಾಭ್ಯಾಸವನ್ನು ರೂಡಿ ಸಿಕೊಳ್ಳುವುದರಿಂದ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ವಿಜಯ ಬಾಯರ್, ಜಿ.ಎಸ್. ಓಂಕಾರ್, ಎಚ್.ಎಸ್. ಹರೀಶ್, ಕೇಶವಮೂರ್ತಿ, ಕೃಷ್ಣ ಹಾಗೂ ಇಳoಗೋವನ್ ಅವರಿಗೆ ಸನ್ಮಾನಿಸಲಾಯಿತು.
Shivaganga Yoga Center ಉನ್ನತ ಸಾಧನೆಗೆ ಯೋಗ , ಧ್ಯಾನ ಹಾಗೂ ಕಠಿಣ ಪರಿಶ್ರಮ ರಹದಾರಿ- ಸಿ.ಎಸ್.ಷಡಾಕ್ಷರಿ
Karnataka State Road Transport Corporation ವಿದ್ಯಾರ್ಥಿಗಳಿಗೆ ಸಿಹಿಸುದ್ದಿ!. ಉಚಿತ/ ರಿಯಾಯಿತಿ ಬಸ್ ಪಾಸ್ ವಿತರಣೆ ಆರಂಭ
Karnataka State Road Transport Corporation ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್‌ಪಾಸ್ ವಿತರಣಾ ಕಾರ್ಯವನ್ನು ಮೇ ತಿಂಗಳಿನಿಂದ ಆರಂಭಿಸಿದ್ದು, ಸರ್ಕಾರದ ಆದೇಶದಂತೆ ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಜೂ. 12 ರಿಂದ ಉಚಿತ ಬಸ್ ಪಾಸ್ ವಿತರಿಸಲಾಗುತ್ತಿದೆ.
ಉಚಿತ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ಸೇವಾಸಿಂಧು URL-https://sevasindhu.karnataka.gov.in/buspassservices ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕಿದ್ದು, ವಿದ್ಯಾರ್ಥಿ ಬಸ್‌ಪಾಸ್ ವಿತರಣೆಯಲ್ಲಿ ಹಾಲಿ ಅನುಸರಿಸುತ್ತಿರುವ ನಿಯಮಾವಳಿಗಳನ್ನು ಮುಂದುವರೆಸಲಾಗಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ ವಿತರಿಸಲಾಗಿರುವ ವಿದ್ಯಾರ್ಥಿ ಬಸ್‌ಪಾಸ್‌ಗಳು ಯಥಾವತ್ತಾಗಿ ಚಾಲ್ತಿಯಲ್ಲಿರುತ್ತವೆ. ಆದಾಗ್ಯು ವಿದ್ಯಾರ್ಥಿಗಳು ಪಾವತಿಸಿರುವ ಮೊತ್ತವನ್ನು ಹಿಂದಿರುಗಿಸಲಾಗುವುದು. Karnataka State Road Transport Corporation ರಾಜ್ಯ ವಾಸವಿದ್ದು, ನೆರೆ ರಾಜ್ಯಗಳಲ್ಲಿ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ನೆರೆ ರಾಜ್ಯಗಳಲ್ಲಿ (ರಾಜ್ಯದ ಗಡಿಭಾಗದಲ್ಲಿ) ವಾಸವಿದ್ದು, ರಾಜ್ಯದೊಳಗಿನ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್ ಪಡೆಯಬಹುದಾಗಿದೆ. ಈಗಾಗಲೇ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಪಡೆದು ವಿತರಿಸಲಾದ ಪಾಸ್‌ಗಳ ಸಂಪೂರ್ಣ ಶುಲ್ಕವನ್ನು 15 ದಿನಗಳೊಳಗಾಗಿ ವಿದ್ಯಾರ್ಥಿಗಳಿಗೆ ಮರುಪಾವತಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪಾಸ್ ವಿತರಣಾ ಕೌಂಟರ್‌ಗಳ ವಿವರಗಳನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ https://ksrtc.karnataka.gov.in / student passನಲ್ಲಿ ಒದಗಿಸಲಾಗಿದೆ.
ಶಿಕಾರಿಪುರ ಅಂಬ್ಲಿಗೊಳ ಸನಿಹ ಕಾರು ಅಗ್ನಿಗಾಹುತಿ
ಶಿಕಾರಿಪುರ ತಾಲೂಕಿನ ಅಂಬಲಿಗೋಳ ಸಮೀಪ ಹೆದ್ದಾರಿಯಲ್ಲಿ ಆಕ್ಮಸಿಕ ಬೆಂಕಿ ತಗುಲಿ ಕಾರು ಹೊತ್ತಿ ಉರಿದಿದೆ.
ಶಿಕಾರಿಪುರದಿಂದ ಆಯನೂರು ಸಮೀಪದ ಹಣಗೆರೆ ಕಟ್ಟೆಗೆ ತೆರಳುತ್ತಿದ್ದ ಕಾರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಕಾರಿನಲ್ಲಿ ಓರ್ವ ಪುರುಷ ಹಾಗೂ ಮೂವರು ಮಹಿಳೆಯರು ಹಾಗೂ ಮಕ್ಕಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡು ಕಾರು ಉರಿದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ, ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಶಿಕಾರಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಾಧಕರಾದ ಡಾ.ಕೆ.ವಿ.ಅಕ್ಷರ ಮತ್ತು ಶ್ರಾವ್ಯಾ ಸಾಗರ್ ಅವರಿಗೆ ಹಾರ್ದಿಕ ಸನ್ಮಾನ
ವರದಾಮೂಲವೂ ಒಂದು ಐತಿಹಾಸಿಕ ಪ್ರಸಿದ್ಧ ಕ್ಷೇತ್ರವಾಗಿದೆ. ಇಲ್ಲಿ ಹುಟ್ಟಿ ಹರಿಯುತ್ತಿರುವ ನದಿ ಲಕ್ಷಾಂತರ ಜನರ ನೀರಿನ ದಾಹ ಹಾಗೂ ಕೃಷಿಕರ ಬವಣೆಯನ್ನು ನೀಗುತ್ತಿದೆ. ಇದು ಹರಿಯುವ ಕಡೆಯಲ್ಲ ಅರಣ್ಯ, ಕೆರೆ, ಕಾಲುವೆಗಳು ತುಂಬಿ ಜನರ ಜೀವನೋಪಾಯಕ್ಕೆ ಹೇತುವಾಗಿದೆ. ನದಿಯ ಇಕ್ಕೆಲಗಳೂ ಜೀವವೈವಿದ್ಯದ ತಾಣವಾಗಿದ್ದು ಅಪರೂಪದ ಜೀವಿಗಳನ್ನು ಕಾಣುತ್ತೇವೆ. ವೈವಿದ್ಯಮಯವಾದ ಭತ್ತದ ತಳಿಗಳು, ಸಾಂಬಾರು ಗಿಡಗಳು, ಅಡಿಕೆ, ತೆಂಗು, ಏಲಕ್ಕಿ ಎಲ್ಲ ಬೆಳೆಯನ್ನು ಬೆಳೆಯಬಹುದಾದ ಹದವಾದ ವಾತಾವರಣ ಹಾಗೂ ಮಣ್ಣನ್ನು ಹೊಂದಿದೆ. ಅಭಿವೃದ್ಧಿಯ ಹೆಸರಿನಲ್ಲಿ ಈ ನದಿಯ ಹರಿವು ಹಾಗೂ ಪಾತ್ರ ಇಕ್ಕದಾಗುತ್ತಿರುವುದರಿಂದ ಇಲ್ಲಿನ ಜೀವರಾಶಿಗಳು ಸಸ್ಯ ಪ್ರಬೇಧಗಳು ಅಳಿವಿನಂಚಿಗೆ ಸಾಗುತ್ತಿವೆ ಎಂಬುದು ದುರಾದೃಷ್ಟ. ಭೂಮಿಯ ಮೇಲಿನ ಸಸ್ಯ, ನದಿ, ಕೆರೆಗಳ ಜೊತೆ ಜೊತೆಗೆ ನಾವು ಬದುಕಿದಲ್ಲಿ ಮಾತ್ರ ನಮ್ಮ ಜೀವನ ಹಸನಾಗುತ್ತದೆ. ಇವುಗಳಿಗೂ ಜೀವವಿದೆ ಎಂಬುದನ್ನು ಅರಿತು ಅವುಗಳ ಸಂರಕ್ಷಣೆ ಹಿಂದಿಗಿಂತ ಇಂದು ಅತ್ಯಂತ ತುರ್ತಾಗಿದೆ. ಈಗಾಗಲೇ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ಕೆಲವು ನದಿಗಳು ನೀರೇ ಇಲ್ಲದೆ, ನೀರಿದ್ದೂ ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿ ಕಾಣೆಯಾಗಿವೆ. ಇವುಗಳ ಸಂರಕ್ಷಣೆ ಯಾರೊಬ್ಬರಿಂದ ಸಾಧ್ಯವಿಲ್ಲದ ಮಾತು. ಇಡೀ ವ್ಯವಸ್ಥೆ ಈ ದಿಶೆಯಲ್ಲಿ ಎಚ್ಚೆತ್ತುಕೊಂಡು ಪರಿಸರವನ್ನು ಕಾಪಾಡಿಕೊಂಡು ಬರಬೇಕಾಗಿದೆ ಎಂದು ರಂಗಕರ್ಮಿ, ನೀನಾಸಮ್ ನಿರ್ದೇಶಕರಾದ ಕೆ.ವಿ. ಅಕ್ಷರ ಕರೆ ನೀಡಿದರು. ಕುವೆಂಪು ವಿಶ್ವವಿದ್ಯಾಲಯ ಈ ಸಾಲಿನಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ ಅಂಗವಾಗಿ ಶ್ರೀ ವರದಾಂಬಾ ಸೇವಾ ಪ್ರತಿಷ್ಠಾನ, ಶ್ರೀ ಕ್ಷೇತ್ರ ವರದಾಮೂಲ ಅವರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕದ ಜೀವವೈವಿದ್ಯಮಂಡಳಿಯು ಕೊಡಮಾಡುವ ಈ ಬಾರಿಯ ರಾಜ್ಯ ಜೀವವೈವಿದ್ಯ ಪ್ರಶಸ್ತಿಪುರಸ್ಕೃತ “ವರದಾ ನದಿ ಸಾಕ್ಷ್ಯ ಚಿತ್ರದ ನಿರ್ದೇಶಕಿ ಹಾಗೂ ನಿರ್ಮಾಪಕರಾದ ಶ್ರೀಮತಿ ಶ್ರಾವ್ಯಾ ಸಾಗರ್ ಅವರನ್ನೂ ಸಹ ಸನ್ಮಾನಿಸಲಾಯಿತು.
ಗೌರವ ಪುರಸ್ಕೃತರಿಬ್ಬರೂ ನಮ್ಮ ಊರಿನ ಹೆಮ್ಮೆಯಾಗಿದ್ದಾರೆ. ಪುಟ್ಟ ಪುಟ್ಟ ಹಳ್ಳಿಗಳಲ್ಲಿದ್ದುಕೊಂಡೇ ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ ಹೆಸರು ಮಾಡುತ್ತಿರುವ ಇವರನ್ನು ಸನ್ಮಾನಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಇವರುಗಳ ಸಾಧನೆ ಸಾಕಷ್ಟು ಯುವಜನರಿಗೆ ಪ್ರೇರಣೆಯಾಗಲಿ ಎಂಬುದು ನಮ್ಮೆಲ್ಲರ ಆಶಯ ಎಂದು ಜೀವವೈವಿದ್ಯ ಮಂಡಳಿಯ ನಿಕಟಪೂರ್ವ ಸದಸ್ಯ ಕವಲಕೋಡು ವೆಂಕಟೇಶ್ ಅವರು ಸನ್ಮಾನಿತರನ್ನು ಪರಿಚಯಿಸುತ್ತಾ ತಿಳಿಸಿದರು.
ಕಾರ್ಯಕ್ರಮದ ಮೊದಲು ಕುಮಾರಿ ಧಾತ್ರಿ ಅರಣಕುಮಾರ್ ಪ್ರಾರ್ಥಿಸಿದರು, ವರದಾಂಬಾ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಟಿ.ಎಸ್. ಗಣಪತಿ ಎಲ್ಲರನ್ನು ಸ್ವಾಗತಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವರದಾಂಬಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಮೇಲಿನಮನೆ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಹಾಗೂ ವರದಾಂಬಾ ವ್ಯವಸ್ಥಾಪನಾ ಸಮಿತಿಗಳ ಅಧ್ಯಕ್ಷ ವ.ಶಂ. ರಾಮಚಂದ್ರ ಭಟ್, ಪ್ರಗತಿಪರ ಕೃಷಿಕ ನಾಗೇಂದ್ರ ಸಾಗರ್, ಸಾಗರ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿ.ಜಿ. ಶ್ರೀಧರ್, ಗ್ರಾಮಪಂಚಾಯ್ತಿ ಭೀಮನಕೋಣೆ ನಿಕಟಪೂರ್ವ ಅಧ್ಯಕ್ಷ ವಿ.ಕೆ. ಮಂಜುನಾಥ ಶೆಟ್ಟಿ ಭಾಗವಹಿಸಿದ್ದರು. ಸೇವಾ ಪ್ರತಿಷ್ಠಾನದ ಸದಸ್ಯರಾದ ಅಶೋಕ ಶಡ್ತಿಕೆರೆ, ಅರುಣ್‌ಕುಮಾರ್ ಮೇಲಿನ ಕವಲಕೋಡು, ಸತೀಶ ಎಲ್.ವಿ., ನಾಗರಾಜ ವಿ.ಟಿ., ಅಲ್ಲದೆ ಊರಿನ ಗಣ್ಯರು ನಾಗರೀಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮದ ನಂತರ ಮಲೆನಾಡು ಗಮಕ ಕಲಾ ಟ್ರಸ್ಟ್ (ರಿ.) ಸಾಗರ ಇವರಿಂದ “ವಿಶ್ವರೂಪ ದರ್ಶನ” (ಕುಮಾರ ವ್ಯಾಸ ಭಾರತದ ಆಯ್ದ ಭಾಗವನ್ನು) ಗಮಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿ.ವಿ. ಅಶೋಕ್‌ಕುಮಾರ್ ಹೆಗ್ಗೋಡು ಅವರ ಕಾವ್ಯ ವಾಚನವನ್ನು ಕಟ್ಟಿನಕೆರೆ ಕೆ.ಎಂ. ರವೀಂದ್ರ ಅವರು ವ್ಯಾಖ್ಯಾನಿಸಿದರು.
ಹೊಸನಗರ ಹೊರವಲಯ: ಬಸ್ ಮತ್ತು ಲಾರಿ ಡಿಕ್ಕಿ, ವಾಹನ ಸಂಚಾರಕ್ಕೆ ಕೆಲಕಾಲ ವ್ಯತ್ಯಯ
ಸರ್ಕಾರಿ ಬಸ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಹೊಸನಗರದ ಹೊರವಲಯದ ಸಾಗರ ರಸ್ತೆಯ ಅಂಕ್ರೋಡಿ ತಿರುವಿನಲ್ಲಿ ಕಳೆದ ಮಧ್ಯಾಹ್ನ 2:00 ಗಂಟೆ ಸುಮಾರಿಗೆ ನಡೆದಿದೆ. ಸಾಗರದಿಂದ ಹೊಸನಗರಕ್ಕೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಾಗು ಜಯನಗರದಿಂದ ಆನಂದಪುರಕ್ಕೆ ತೆರಳುತ್ತಿದ್ದ ಲಾರಿ ನಡುವೆ ಈ ಅಪಘಾತ ಸಂಭವಿಸಿದ್ದು ಸಾಗರ – ಹೊಸನಗರ ಮಧ್ಯೆ ಕೆಲಕಾಲ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ವಿಷಯ ತಿಳಿದ ಹೊಸನಗರ ಪೊಲೀಸರು ಅಪಘಾತ ನಡೆದ ಸ್ಥಳಕ್ಕೆ ತೆರಳಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅದೃಷ್ಟವಶಾತ್ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ತೀರ್ಥಹಳ್ಳಿ ಗಡಿಕ್ಕಲ್ ಸರ್ಕಲ್ ಬಳಿ ದನಗಳ್ಳತನಕ್ಕೆ ಪ್ರಯತ್ನ, ಆರೋಪಿಗಳ ಸೆರೆ
ದಿನಾಂಕ 10.06.2026 ರಂದು ಮಧ್ಯರಾತ್ರಿ ಗಡಿಕ್ಕಲ್ ಸರ್ಕಲ್ ನಲ್ಲಿ ದನ ಕಳ್ಳತನಕ್ಕೆ ಪ್ರಯತ್ನ ಪಟ್ಟ ಆರೋಪಿಗಳನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದ ರೋಷನ್ ಬೇಗ್ ಬಿನ್ ಪೈರೋಜ್ ಬೇಗ್ 31 ವರ್ಷ ಹಾಗೂ ಟೌನ್ ಇಮ್ರಾನ್ ಬಿನ್ ಅತೀಕ್ ಅಹಮದ್ 39 ವರ್ಷ ಇಬ್ಬರು ಆರೋಪಿಗಳು ಹಾಗೂ 4 ಲಕ್ಷ ಮೌಲ್ಯದ ಎರ್ಟಿಗಾ ಕಾರ್ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಪ್ರಕರಣ ಭೇದಿಸುವಲ್ಲಿ ಡಿ ವೈ ಎಸ್ ಪಿ ತೀರ್ಥಹಳ್ಳಿ ರವರಾದ ಅರವಿಂದ್ ಕಲಗುಜ್ಜಿ ರವರು ಹಾಗೂ ತೀರ್ಥಹಳ್ಳಿ ಠಾಣೆ ಇನ್ಸ್ಪೆಕ್ಟರ್ ಆದ ಇಮ್ರಾನ್ ಬೇಗ್ ಪಿಎಸ್ಐ ಸುಷ್ಮಾ ಆರ್. ಪಿಎಸ್ಐ ಯುವರಾಜ್ ರವರೊಂದಿಗೆ ಸಿಬ್ಬಂದಿಗಳಾದ ಲಿಂಗೇಗೌಡ, ಕುಮಾರ, ಪ್ರಸನ್ನ. ದೀಪಕ್. ಪ್ರದೀಪ ಕೆ. ಪಿ. ಮಂಜುನಾಥ್ ಹಂಪಿಹೊಳಿ. ಪ್ರಮೋದ್ ಜೆ. ರವರು ಇದ್ದರು.
ಜೂನ್ 17, ಪಾಲಿಕೆ ಆಯುಕ್ತ ಮಾಯಣ್ಣಗೌಡರೊಂದಿಗೆ ಮುಖಾಮುಖಿ. ಸಾರ್ವಜನಿಕರು ನಗರದ ಸಮಸ್ಯೆಗಳನ್ನ ಕೇಳಿ ಪರಿಹಾರ ಪಡೆಯಬಹುದು
ಶಿವಮೊಗ್ಗ ನಗರದ ನೀರು ಸರಬರಾಜು, ರಸ್ತೆ, ಚರಂಡಿ, ಮಳೆ ನೀರು ನಿರ್ವಹಣೆ, ಕಸ ವಿಲೇವಾರಿ ಸೇರಿದಂತೆ ವಿವಿಧ ನಾಗರಿಕ ಸಮಸ್ಯೆಗಳ ಕುರಿತು ಸಾರ್ವಜನಿಕರ ಅಹವಾಲುಗಳು ಹಾಗೂ ಸಲಹೆಗಳನ್ನು ಆಲಿಸಲು ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ವಿಶೇಷ ಮುಖಾಮುಖಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಕೆ. ಮಯಣ್ಣ ಗೌಡ ಭಾಗವಹಿಸಲಿದ್ದಾರೆ.
ಜೂನ್ 17ರಂದು ಬೆಳಿಗ್ಗೆ 11 ಗಂಟೆಗೆ ಪತ್ರಿಕಾ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ನಗರದ ನಾಗರಿಕರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ.
ನಗರದ ಅಭಿವೃದ್ಧಿ, ಮೂಲಸೌಕರ್ಯಗಳ ಸುಧಾರಣೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ನಾಗರಿಕರು ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಿ ತಮ್ಮ ಅಭಿಪ್ರಾಯ, ಸಲಹೆ ಹಾಗೂ ಅಹವಾಲುಗಳನ್ನು ನೇರವಾಗಿ ಆಯುಕ್ತರ ಮುಂದಿಡುವ ಅವಕಾಶ ಇದಾಗಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ ಆರ್.ಎಸ್. ತಿಳಿಸಿದ್ದಾರೆ.
Shimoga District Fisheries Department ಪ್ರಧಾನ ಮಂತ್ರಿ ಮತ್ಸ್ಯಸಂಪದ/ ನೀಲಿ ಕ್ರಾಂತಿ ಯೋಜನೆಯ ಸಹಾಯಧನ ಪಡೆಯಲು ಆಸಕ್ತರಿಂದ ಅರ್ಜಿ ಆಹ್ವಾನ
Shimoga District Fisheries Department ಶಿವಮೊಗ್ಗ ಜಿಲ್ಲಾ ಮೀನುಗಾರಿಕೆ ಇಲಾಖೆಯು 2022-26 ರಿಂದ 2024-25 ನೇ ಸಾಲಿನವರೆಗೂ ಮರುಹಂಚಿಕೆಯಾಗಿರುವ ಪ್ರಧಾನ ಮಂತ್ರಿ ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿಯಲ್ಲಿ ಬಾಕಿಯಿರುವ ಮೀನು ಕೃಷಿ ಕೊಳಗಳ ನಿರ್ಮಾಣ, ಮೀನುಕೃಷಿ ಕೊಳ ನಿರ್ಮಾಣ ಮಾಡಿ ಮೀನುಕೃಷಿ ಕೈಗೊಂಡವರಿಗೆ ಹೂಡಿಕೆಗಳ ವೆಚ್ಚದ ಮೇಲೆ ಸಹಾಯಧನ ಹಾಗೂ ಮೀನುಮರಿ ಪಾಲನಾ ಘಟಕ ನಿರ್ಮಾಣದ ಬಗ್ಗೆ ಸಹಾಯಧನ ಪಡೆಯಲು ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸಹಾಯಧನ ಘಟಕಗಳ ಉಪಯೋಜನೆಗಳನ್ನು ಪಡೆಯಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 40 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ. 60 ರಷ್ಟು ಸಹಾಯಧನ ನೀಡಲಾಗುವುದು.
ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಆಯಾ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಜೂ. 20 ರೊಳಗಾಗಿ ಸಲ್ಲಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Green Impact Summit ನಾವು ನೆಟ್ಟ ಚಿಕ್ಕ ಕನಸಿನ ಬೀಜ. ಇಂದು ಸಾವಿರಾರು ಜನರನ್ನ ತಲುಪಿ ಚಳವಳಿಯಾಗಿ ಬೆಳೆದಿದೆ- ನಿರಂಜನಿ ರವೀಂದ್ರ
Green Impact Summit ಕಳೆದ ಹತ್ತು ವರ್ಷಗಳಿಂದ ಪರಿಸರ ಸಂರಕ್ಷಣೆ, ಸಾಮಾಜಿಕ ಅರಣ್ಯ, ಹವಾಮಾನ ಬದಲಾವಣೆ ಜಾಗೃತಿ, ಯುವಜನರ ಸಬಲೀಕರಣ ಹಾಗೂ ಸುಸ್ಥಿರ ಅಭಿವೃದ್ಧಿಯ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೋ ಗ್ರೀನ್ ಅಸೋಸಿಯೇಷನ್ ತನ್ನ 10ನೇ ವರ್ಷದ ಸಂಭ್ರಮದ ಅಂಗವಾಗಿ ಗ್ರೀನ್ ಇಂಪ್ಯಾಕ್ಟ್ ಸಮ್ಮಿಟ್- 2026 ಹಾಗೂ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರೀನ್ ಶಾರ್ಕ್ ಟ್ಯಾಂಕ್ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಗ್ರೀನ್ ಶಾರ್ಕ್ ಟ್ಯಾಂಕ್‌ನಲ್ಲಿ ವಿವಿಧ ಕ್ಷೇತ್ರಗಳ ಪರಿಸರ ಸ್ನೇಹಿ ಹಾಗೂ ಸಾಮಾಜಿಕ ಪರಿಣಾಮ ಉಂಟುಮಾಡುವ ನವೋದ್ಯಮ ಕಲ್ಪನೆಗಳಿಗೆ ವೇದಿಕೆ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ಖ್ಯಾತ ಉದ್ಯಮಿಗಳು, ತಂತ್ರಜ್ಞರು ಮತ್ತು ಹೂಡಿಕೆದಾರರಾದ ರಾಜೇಶ್ ಕುಂದರ್, ವಿಕಾಸ್ ಪತ್ತಾರ್, ಅರುಣ್ ಬಾಲಮಟ್ಟಿ, ನಿವೇದನ್ ನೆಂಪೆ, ಸುಬ್ರಹ್ಮಣ್ಯ ಬಸವನಹಳ್ಳಿ ಅವರು ಗ್ರೀನ್ ಶಾರ್ಕ್ ಟ್ಯಾಂಕ್‌ನ ಹೂಡಿಕೆದಾರರು (ಶಾರ್ಕ್ಸ್)ಗಳಾಗಿ ಭಾಗವಹಿಸಿ ಸ್ಪರ್ಧಿಗಳ ಪರಿಕಲ್ಪನೆಗಳನ್ನು ಮೌಲ್ಯಮಾಪನ ಮಾಡಿದರು.
ಒಟ್ಟು 19 ತಂಡಗಳು ತಮ್ಮ ನವೀನ ಹಾಗೂ ಪರಿಸರ ಕಾಳಜಿಯ ಉದ್ಯಮ ಪರಿಕಲ್ಪನೆಗಳನ್ನು ಪ್ರಸ್ತುತಪಡಿಸಿದವು. ಇವುಗಳÀ ಮೌಲ್ಯಮಾಪನದ ನಂತರ 3 ತಂಡಗಳನ್ನು ಇನ್‌ಕ್ಯುಬೇಷನ್ ಮತ್ತು ಮುಂದಿನ ಮಾರ್ಗದರ್ಶನಕ್ಕಾಗಿ ಆಯ್ಕೆ ಮಾಡಲಾಯಿತು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ. ಜಗದೀಶ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ವಿವಿ ಆಡಳಿತ ಮಂಡಳಿ ಸದಸ್ಯರಾದ ಶಶಾಂಕ್ ಹೆಚ್. ಎಸ್., ವಿಸ್ತರಣಾ ನಿರ್ದೇಶಕರಾದ ಡಾ. ರಾಘವೇಂದ್ರ ಮೇಸ್ತ ಆಗಮಿಸಿದ್ದರು.
ವೇದಿಕೆಯಲ್ಲಿ ಗ್ರೋ ಗ್ರೀನ್ ಅಸೋಸಿಯೇಷನ್ ಅಧ್ಯಕ್ಷೆ ನಿರಂಜನಿ ರವೀಂದ್ರ, ಉಪಾಧ್ಯಕ್ಷೆ ಸವಿತಾ ಕುಮಾರ್, ಖಜಾಂಚಿ ಸೋನಾ ಶುಭಾ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ವೇತಾ ಆಚಾರ್ಯ, ನೈನಾ ರಾಜೇಶ್, ಉಜ್ವಲ ರವಿ, ಸುಪ್ರಿಯಾ ಚೇತನ್, ವಿಜಯಲಕ್ಷಿö್ಮ ಕಾರ್ತಿಕ್ ಮತ್ತಿತರರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ನಿರಂಜನಿ ರವೀಂದ್ರ, ಹತ್ತು ವರ್ಷಗಳು ಎನ್ನುವುದು ಕೇವಲ ಹಿಂದಿರುಗಿ ನೋಡುವ ಸಮಯವಲ್ಲ; ಭವಿಷ್ಯದತ್ತ ಹೊಸ ಕನಸುಗಳನ್ನು ಕಟ್ಟುವ ಸಮಯ. ನಾವು ನೆಟ್ಟ ಒಂದು ಚಿಕ್ಕ ಬೀಜ ಇಂದು ಸಾವಿರಾರು ಜನರನ್ನು ತಲುಪಿದ ಚಳವಳಿಯಾಗಿ ಬೆಳೆದಿದೆ. ಗ್ರೀನ್ ಶಾರ್ಕ್ ಟ್ಯಾಂಕ್ ಮೂಲಕ ಪರಿಸರ ಹಾಗೂ ಸಮಾಜಕ್ಕೆ ಉಪಯೋಗವಾಗುವ ಯುವಕರ ಆಲೋಚನೆಗಳಿಗೆ ಹೂಡಿಕೆ, ಮಾರ್ಗದರ್ಶನ ಮತ್ತು ಅವಕಾಶ ಒದಗಿಸುವ ವೇದಿಕೆಯನ್ನು ನಿರ್ಮಿಸಿದ್ದೇವೆ ಎಂದು ತಿಳಿಸಿದರು.
Green Impact Summit ಮರಗಳನ್ನು ನೆಡುವುದು ಮಾತ್ರ ಪರಿಸರ ಸಂರಕ್ಷಣೆ ಅಲ್ಲ; ಹೊಸ ಆಲೋಚನೆಗಳನ್ನು ಬೆಳೆಸುವುದೂ ಪರಿಸರ ಸಂರಕ್ಷಣೆಯಾಗಿದೆ. ಇಂದಿನ ಯುವಕರಲ್ಲಿ ಇರುವ ಸೃಜನಶೀಲತೆ ಮತ್ತು ಸಾಮಾಜಿಕ ಕಾಳಜಿ ನಮ್ಮ ನಾಳೆಯ ಹಸಿರು ಭವಿಷ್ಯದ ಆಶಾಕಿರಣವಾಗಿದೆ ಎಂದು ಹೇಳಿದರು.
ಗ್ರೋ ಗ್ರೀನ್ ಅಸೋಸಿಯೇಷನ್ ಕಳೆದ ಹತ್ತು ವರ್ಷಗಳಲ್ಲಿ ಸಾವಿರಾರು ಸಸಿಗಳ ನೆಡುವಿಕೆ, ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ, ಜೈವಿಕ ತ್ಯಾಜ್ಯ ನಿರ್ವಹಣೆ, ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಕೌಶಲ್ಯ ತರಬೇತಿ, ಉದ್ಯಾನ ಅಭಿವೃದ್ಧಿ ಹಾಗೂ ಹವಾಮಾನ ಬದಲಾವಣೆ ಕುರಿತ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದರು.
10 ವರ್ಷಗಳ ಸಾಧನೆಯಿಂದ ಪ್ರೇರಿತರಾಗಿ, ಮುಂದಿನ ದಶಕದಲ್ಲಿ ಇನ್ನಷ್ಟು ಹಸಿರು, ಸುಸ್ಥಿರ ಹಾಗೂ ನವೋದ್ಯಮ ಆಧಾರಿತ ಸಮಾಜ ನಿರ್ಮಾಣದತ್ತ ಗ್ರೋ ಗ್ರೀನ್ ಅಸೋಸಿಯೇಷನ್ ತನ್ನ ಪಯಣವನ್ನು ಮುಂದುವರಿಸಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
Karnataka Advanced Attendance Management System ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ : ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ
Karnataka Advanced Attendance Management System ರಾಜ್ಯ ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರವು ‘ಕರ್ತವ್ಯ’ (KAAMS – Karnataka Advanced Attendance Management System) ಎಂಬ ನೂತನ ಮುಂದುವರಿದ ಹಾಜರಾತಿ ನಿರ್ವಹಣಾ ತಂತ್ರಜ್ಞಾನವನ್ನು ಜಾರಿಗೆ ತಂದಿದೆ.
ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಇಲಾಖಾ ಕಾರ್ಯದರ್ಶಿಗಳೊಂದಿಗೆ ನಡೆಸಿದ ಮೊದಲ ಸಭೆಯಲ್ಲೇ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು ಕಚೇರಿ ವೇಳೆಯಲ್ಲಿ ಕಡ್ಡಾಯವಾಗಿ 100% ಹಾಜರಿರಬೇಕು ಮತ್ತು ಸಾರ್ವಜನಿಕರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದರು.
ಈ ಹಿಂದೆ ಜಾರಿಯಲ್ಲಿದ್ದ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಉದ್ಯೋಗಿಗಳು ಕೇವಲ ಡಿಜಿಟಲ್ ಸಹಿ ಮಾಡಿ ಕಚೇರಿಯಿಂದ ಗೈರಾಗುವ ಸಾಧ್ಯತೆಗಳಿದ್ದವು. ಈ ದೋಷವನ್ನು ನಿವಾರಿಸಲು, ಉದ್ಯೋಗಿಗಳ ಭೌತಿಕ ಉಪಸ್ಥಿತಿ ಮತ್ತು ಕಚೇರಿಯ ಭೌಗೋಳಿಕ ಸ್ಥಳವನ್ನು (Geographical Location) ನಿಖರವಾಗಿ ಪತ್ತೆಹಚ್ಚುವ ಈ ಹೊಸ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಸಂಪೂರ್ಣ “ಮೇಡ್-ಇನ್-ಕರ್ನಾಟಕ” ಆವಿಷ್ಕಾರ
ಯಾವುದೇ ಬಾಹ್ಯ ಖಾಸಗಿ ತಂತ್ರಜ್ಞಾನ ಸಂಸ್ಥೆಗಳ ನೆರವಿಲ್ಲದೆ, ಸಂಪೂರ್ಣವಾಗಿ ಸರ್ಕಾರದ ಪರಿಸರ ವ್ಯವಸ್ಥೆಯಲ್ಲೇ “ಕರ್ತವ್ಯ” ಸಾಫ್ಟ್‌ವೇರ್ ಅನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಉಸ್ತುವಾರಿಯಲ್ಲಿ, ಸೆಂಟರ್ ಫಾರ್ ಇ-ಗವರ್ನೆನ್ಸ್ (CeG) ಮತ್ತು ಕರ್ನಾಟಕ ಎಐ ಸೆಲ್ (Karnataka AI Cell) ಜಂಟಿಯಾಗಿ ಇದನ್ನು ಸಿದ್ಧಪಡಿಸಿವೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ವೆಂಡರ್ ವೆಚ್ಚ ಉಳಿತಾಯವಾಗಿದ್ದು, ದತ್ತಾಂಶ ಸುರಕ್ಷತೆ ಮತ್ತು ಸ್ವಾಯತ್ತತೆ ಹೆಚ್ಚಾಗಿದೆ. ಕರ್ನಾಟಕದ ಈ ಯಶಸ್ವಿ ಮಾದರಿಯನ್ನು ದೇಶದ ಇತರೆ ರಾಜ್ಯಗಳೂ ಅಳವಡಿಸಿಕೊಳ್ಳಬಹುದಾಗಿದೆ.
ತಂತ್ರಜ್ಞಾನದ ಪ್ರಮುಖ ವೈಶಿಷ್ಟ್ಯಗಳು :
ಕೃತಕ ಬುದ್ಧಿಮತ್ತೆ (AI) ಆಧಾರಿತ ಮುಖ ಗುರುತಿಸುವಿಕೆ – ವಂಚನೆಯ ಹಾಜರಾತಿಯನ್ನು ತಡೆಯಲು ಲೈವ್‌ನೆಸ್ ಡಿಟೆಕ್ಷನ್ (Liveness Detection) ತಂತ್ರಜ್ಞಾನದೊಂದಿಗೆ ಎಐ ಫೇಶಿಯಲ್ ರೆಕಗ್ನಿಷನ್ ಬಳಸಲಾಗಿದೆ.
ಜಿಯೋಫೆನ್ಸಿಂಗ್ (Geofencing) – ಜಿಐಎಸ್ (GIS) ತಂತ್ರಜ್ಞಾನದ ಮೂಲಕ ಉದ್ಯೋಗಿ ತನ್ನ ಕಚೇರಿಯ ನಿಗದಿತ ಪರಿಧಿಯೊಳಗೆ ಇದ್ದಾಗ ಮಾತ್ರ ಹಾಜರಾತಿ ದಾಖಲಿಸಲು ಸಾಧ್ಯವಾಗುತ್ತದೆ.
ಸಂಯೋಜಿತ ಡೇಟಾಬೇಸ್ – ಇದನ್ನು ಆಧಾರ್ ಇ-ಕೆವೈಸಿ (e-KYC) ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) ಯೊಂದಿಗೆ ಸಂಯೋಜಿಸಲಾಗಿದೆ.
ಮೊಬೈಲ್ ಆಪ್ ಮತ್ತು ರಜೆ ನಿರ್ವಹಣೆ – ಆಂಡ್ರಾಯ್ಡ್ ಮತ್ತು ಐಒಎಸ್ ಆಪ್‌ಗಳ ಮೂಲಕ ಹಾಜರಾತಿ, ರಜೆ ಮತ್ತು ಅಧಿಕೃತ ಹೊರಗಿನ ಕೆಲಸದ (OOD) ವಿವರಗಳನ್ನು ದಾಖಲಿಸುವ ಸೌಲಭ್ಯವಿದೆ.
ಇಲಾಖೆಗಳಲ್ಲಿ ದಾಖಲೆ ವೇಗದ ಅನುಷ್ಠಾನ
ಮುಖ್ಯಮಂತ್ರಿಗಳ ಕಟ್ಟುನಿಟ್ಟಿನ ಆದೇಶದ ಬೆನ್ನಲ್ಲೇ ಈ ತಂತ್ರಜ್ಞಾನವು ಇಲಾಖೆಗಳಲ್ಲಿ ಅತ್ಯಂತ ವೇಗವಾಗಿ ಅನುಷ್ಠಾನಗೊಳ್ಳುತ್ತಿದೆ.
ಕಳೆದ ವಾರ ಅಂದಾಜು 2,46,000 ರಷ್ಟಿದ್ದ ಒಟ್ಟು ನೋಂದಾಯಿತ ಉದ್ಯೋಗಿಗಳ ಸಂಖ್ಯೆ ಪ್ರಸ್ತುತ ವಾರದಲ್ಲಿ 3,01,034 ಕ್ಕೆ ಏರಿಕೆಯಾಗಿದೆ. ಇದು ಕೇವಲ ಒಂದೇ ವಾರದಲ್ಲಿ ಶೇಕಡಾ 25% ಕ್ಕಿಂತಲೂ ಹೆಚ್ಚು (55,000ಕ್ಕೂ ಅಧಿಕ ಹೊಸ ಸೇರ್ಪಡೆ) ಬೆಳವಣಿಗೆಯಾಗಿದೆ. ಇದೇ ಅವಧಿಯಲ್ಲಿ, ಆ್ಯಪ್ ಮೂಲಕ ಪ್ರತಿದಿನ ದಾಖಲಾಗುವ ದೈನಂದಿನ ಹಾಜರಾತಿ ಸಂಖ್ಯೆಯು ಸಹ 1,85,308 ರಿಂದ 2,32,612 ಕ್ಕೆ ಜಿಗಿದಿದ್ದು, ಸಕ್ರಿಯ ಬಳಕೆಯಲ್ಲಿ ಶೇಕಡಾ 25% ರಷ್ಟು ಭಾರಿ ಏರಿಕೆ ದಾಖಲಾಗಿದೆ.
ಪ್ರಸ್ತುತ 42 ಇಲಾಖೆಗಳ 4,78,522 ನೌಕರರನ್ನು ಈ ವ್ಯವಸ್ಥೆಗೆ ಒಳಪಡಿಸಲಾಗಿದ್ದು, ಈ ಪೈಕಿ 3.01 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಕೇವಲ ಒಂದೇ ವಾರದಲ್ಲಿ ನೋಂದಣಿ ಪ್ರಕ್ರಿಯೆಯಲ್ಲಿ ಶೇಕಡಾ 25 ರಷ್ಟು ಅಭೂತಪೂರ್ವ ಪ್ರಗತಿ ಕಂಡುಬಂದಿದೆ.
ಶಾಲಾ ಶಿಕ್ಷಣ ಇಲಾಖೆ: ಒಟ್ಟು 1,76,055 ಉದ್ಯೋಗಿಗಳಲ್ಲಿ ಈಗಾಗಲೇ 1,68,252 ನೌಕರರು ನೋಂದಾಯಿಸಿಕೊಂಡಿದ್ದು, 1,41,800ಕ್ಕೂ ಹೆಚ್ಚು ದೈನಂದಿನ ಚೆಕ್-ಇನ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: 66,969 ನೋಂದಣಿ ಹಾಗೂ 54,400ಕ್ಕೂ ಹೆಚ್ಚು ದೈನಂದಿನ ಹಾಜರಾತಿಯೊಂದಿಗೆ ಎರಡನೇ ಸ್ಥಾನದಲ್ಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಗಳಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾದ ನಂತರ, ಶಾಲಾ ಶಿಕ್ಷಣ ಇಲಾಖೆಯ ಸಿಬ್ಬಂದಿ ಇದನ್ನು ಸಕ್ರಿಯವಾಗಿ ಬಳಸುತ್ತಿದ್ದಾರೆ. ಇನ್ನುಳಿದ ಹಲವು ಇಲಾಖೆಗಳು ಈಗಾಗಲೇ ಶೇಕಡಾ 90 ಕ್ಕಿಂತ ಹೆಚ್ಚು ನೋಂದಣಿ ಮೈಲಿಗಲ್ಲನ್ನು ದಾಟಿವೆ.
ಇತರ ಇಲಾಖೆಗಳು: ಪದವಿ ಪೂರ್ವ ಮಂಡಳಿ, ಆಯುಷ್ (AYUSH), ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮತ್ತು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಗಳು ಈಗಾಗಲೇ 90% ಕ್ಕಿಂತ ಹೆಚ್ಚು ನೋಂದಣಿ ಗುರಿಯನ್ನು ಯಶಸ್ವಿಯಾಗಿ ತಲುಪಿವೆ.
“ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಡಿಸಿ/ಸಿಇಒಗಳು ದಿನನಿತ್ಯ ಈ ವ್ಯವಸ್ಥೆಯ ಡ್ಯಾಶ್‌ಬೋರ್ಡ್ ಅನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕಚೇರಿ ಅವಧಿಯಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಸಿಗದಿರುವ ಬಗ್ಗೆ ನಾಗರಿಕರು ನೀಡುವ ಪ್ರತಿಕ್ರಿಯೆ (Feedback) ಈ ಸುಶಾಸನದ ಗುರಿಯನ್ನು ತಲುಪಲು ಪ್ರಮುಖ ಪಾತ್ರ ವಹಿಸಲಿದೆ.”
ಸಾರ್ವಜನಿಕರಿಗೆ ಸಿಗಲಿದೆ ಉತ್ತಮ ಸೇವೆ:
ಸಾರ್ವಜನಿಕ ಸೇವೆಗೆ ಹೊಸ ವೇಗ
ಮೊಬೈಲ್ ಮೂಲಕವೇ ಹಾಜರಾತಿ ದಾಖಲಿಸುವ ಸೌಲಭ್ಯ ಇರುವುದರಿಂದ ಕಚೇರಿಗಳ ಮುಂಭಾಗದಲ್ಲಿ ಬಯೋಮೆಟ್ರಿಕ್‌ಗಾಗಿ ಸಾಲಿನಲ್ಲಿ ನಿಲ್ಲುವುದು ತಪ್ಪಿದೆ ಎಂದು ಸರ್ಕಾರಿ ನೌಕರರು ಸಂತಸ ವ್ಯಕ್ತಪಡಿಸಿದ್ದಾರೆ.
”ಕರ್ತವ್ಯ ಆ್ಯಪ್ ಪ್ರತಿಯೊಬ್ಬ ಸರ್ಕಾರಿ ನೌಕರನೂ ತನ್ನ ಜವಾಬ್ದಾರಿಯನ್ನು ಹೆಮ್ಮೆ, ಶಿಸ್ತು ಮತ್ತು ನಿರ್ದಿಷ್ಟ ಉದ್ದೇಶದೊಂದಿಗೆ ನಿರ್ವಹಿಸಲು ಶಕ್ತಿ ತುಂಬುತ್ತಿದೆ”.
ಅಂತಿಮವಾಗಿ, ಕಚೇರಿಗಳಲ್ಲಿ ಅಧಿಕಾರಿಗಳ ಭೌತಿಕ ಲಭ್ಯತೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸುವ ಮೂಲಕ ಸಾರ್ವಜನಿಕರಿಗೆ ಸಿಗುವ ಸೇವೆಗಳು ಇನ್ನು ಮುಂದೆ ಹೆಚ್ಚು ಸುಲಭ ಹಾಗೂ ತಡೆರಹಿತವಾಗಲಿವೆ. ಈ ಮೂಲಕ ಕರ್ನಾಟಕವು ಡಿಜಿಟಲ್ ಆಡಳಿತ ಮತ್ತು ನಾಗರಿಕ ಕೇಂದ್ರಿತ ಸುಧಾರಣೆಯಲ್ಲಿ ದೇಶದಲ್ಲೇ ಮುಂಚೂಣಿ ರಾಜ್ಯವಾಗಿ ಹೊರಹೊಮ್ಮಿದೆ ಎಂದು
ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
