Tuesday, August 4, 2026
Tuesday, August 4, 2026
Home Blog Page 53

Actress Aditi Prabhu Deva ಜೂನ್ 23 ರಂದು ಚಿತ್ರನಟಿ ಅದಿತಿ ಪ್ರಭುದೇವ ಅವರಿಂದ ಶಿವಮೊಗ್ಗದ ನಾರಾಯಣ ಕ್ಲಿನಿಕ್ ಉದ್ಘಾಟನೆ

0

Actress Aditi Prabhu Deva ಸ್ಯಾಂಡಲ್ ವುಡ್ ನ ಖ್ಯಾತ ನಟಿ ಅದಿತಿ ಪ್ರಭುದೇವ ಅವರು ಗೋಪಾಳ ದಲ್ಲಿರುವ ‘ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್’ ಅನ್ನು ಜೂ 23 ರಂದು ಬೆಳಿಗ್ಗೆ 10.30 ಕ್ಕೆ ಉದ್ಘಾಟಿಸಲಿದ್ದಾರೆ.

ಗೌರವ ಅತಿಥಿಗಳಾಗಿ ಹಿರಿಯ ವೈದ್ಯ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ವಿಜೇತ ಡಾ. ಎನ್ ಎಲ್ ನಾಯಕ್ ಅವರು ಭಾಗಿಯಾಗಲಿದ್ದಾರೆ.

ನಾರಾಯಣ ಹೆಲ್ತ್ ನ ಕರ್ನಾಟಕ ಕ್ಲಸ್ಟರ್ ಹಾಗೂ ಕಾರ್ಪೊರೇಟ್ ಗ್ರೋಥ್ ಇನಿಶಿಯೇಟಿವ್ ನಿರ್ದೇಶಕ ಡಾ. ವಿಜಯ ಸಿಂಗ್, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಉತ್ತಮ್ ಶರ್ಮ ಉಪಸ್ಥಿತರಿರುವರು

ನೂತನ ಕ್ಲಿನಿಕ್ ಗೋಪಾಳ ಗೌಡ ರಸ್ತೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎದುರು ಇರುವ ಸಿ.ಎಸ್. ಆರ್ಕೇಡ್‌ನಲ್ಲಿದೆ.
ಈ ಹೊಸ ಕ್ಲಿನಿಕ್‌ನಿಂದ ಗೋಪಾಳ, ಗೋಪಾಲ ಗೌಡ ಬಡಾವಣೆ, ಆಲ್ಕೊಳ, ಗಾಡಿಕೊಪ್ಪ, ಸ್ವಾಮಿ ವಿವೇಕಾನಂದ ಬಡಾವಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗಲಿದೆ.

ಈ ಕೇಂದ್ರವು ಡೇ ಕೇರ್ ಚಿಕಿತ್ಸೆಗಳು (Day care procedures), ಎಕೋ (ECHO), ಇಸಿಜಿ (ECG), ಟಿಎಂಟಿ (TMT), ಎಕ್ಸ್‌-ರೇ, ಫಿಸಿಯೋಥೆರಪಿ ಸೇರಿದಂತೆ ವ್ಯಾಪಕ ಶ್ರೇಣಿಯ ಸೇವೆಗಳನ್ನು ನೀಡಲಿದ್ದು, ಪ್ರತಿದಿನ ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸಲಿದೆ. ಇಲ್ಲಿ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ (ಪ್ರಯೋಗಾಲಯ) ಮತ್ತು ಆಂತರಿಕ ಔಷಧಾಲಯದ (In-house pharmacy) ಸೌಲಭ್ಯವೂ ಇದೆ.

Actress Aditi Prabhu Deva ಆಸ್ಪತ್ರೆಯ ಮೂಲಗಳ ಪ್ರಕಾರ, ಹೃದ್ರೋಗ (Cardiology), ಜನರಲ್ ಮೆಡಿಸಿನ್, ಎಂಡೋಕ್ರೈನಾಲಜಿ, ಆಂಕೊಲಾಜಿ (ಕ್ಯಾನ್ಸರ್ ಚಿಕಿತ್ಸೆ), ಇಎನ್‌ಟಿ (ENT), ಪ್ರಸೂತಿ ಮತ್ತು ಸ್ತ್ರೀರೋಗ (OBG) ಹಾಗೂ ಗ್ಯಾಸ್ಟ್ರೋಎಂಟರಾಲಜಿ ಸೇರಿದಂತೆ ಹಲವು ವಿಭಾಗಗಳ ತಜ್ಞ ವೈದ್ಯರು ಸಮಾಲೋಚನೆಗೆ ಲಭ್ಯವಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 91082 43454

Kuvempu University ಎನ್.ಜೆ.ಸಚಿನ್ ಗೆ ಕುವೆಂಪು ವಿವಿಯಿಂದ ಪಿ ಹೆಚ್ ಡಿ ಪದವಿ ಘೋಷಣೆ

0

Kuvempu University ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಚಿನ್ ಎನ್.ಜೆ ಅವರಿಗೆ ಕುವೆಂಪು ವಿಶ್ವವಿದ್ಯಾಲಯವು ಪಿಹೆಚ್.ಡಿ ಪದವಿಯನ್ನು ಘೋಷಿಸಿದೆ.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರಾದ ಡಾ. ಸತೀಶ್ ಕುಮಾರ್ ಅಂಡಿಂಜೆ ಅವರ ಮಾರ್ಗದರ್ಶನದಲ್ಲಿ, “ಅಭಿವೃದ್ಧಿ ಸಂವಹನ ಮಾಧ್ಯಮವಾಗಿ ಚಲನಚಿತ್ರ: ಆಯ್ದ ಕನ್ನಡ ಚಲನಚಿತ್ರಗಳ ಒಂದು ವಿಶ್ಲೇಷಣಾತ್ಮಕ ಅಧ್ಯಯನ”ಎಂಬ ವಿಷಯದ ಕುರಿತು ಸಚಿನ್ ಅವರು ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿದ್ದರು.
ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನೆಗವಾಡಿ ಗ್ರಾಮದವರಾದ ಸಚಿನ್ ಎನ್.ಜೆ ಅವರು ಜಯಪ್ಪ ಮತ್ತು ಸುಜಾತ ದಂಪತಿಯ ಪುತ್ರರಾಗಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ರಿಪ್ಪನ್‌ಪೇಟೆಯ ಚಂದಳ್ಳಿಯಲ್ಲಿ ಪೂರೈಸಿದ್ದು, ಪ್ರೌಢ ಮತ್ತು ಕಾಲೇಜು ಶಿಕ್ಷಣವನ್ನು ರಿಪ್ಪನ್‌ಪೇಟೆಯಲ್ಲಿಯೇ ಮುಗಿಸಿದ್ದಾರೆ. ಬಳಿಕ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದರು.
Kuvempu University ಪ್ರಸ್ತುತ ಇವರು ಹಾಸನದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ (ಸ್ವಾಯತ್ತ) ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

B.Y. Raghavendra ಮೋದಿ @12 ಯುವ ಸಂವಾದ” ದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಭಾಗಿ

0

B.Y. Raghavendra ಭಾರತೀಯ ಜನತಾ ಯುವ ಮೋರ್ಚಾ, ಶಿವಮೊಗ್ಗ ವತಿಯಿಂದ ಆಯೋಜಿಸಲಾದ “ಮೋದಿ @12 ಯುವ ಸಂವಾದ” ಕಾರ್ಯಕ್ರಮದಲ್ಲಿ ಜಿಲ್ಲೆಯ ನೂರಾರು ಯುವಕರು ಭಾಗವಹಿಸಿ ಅರ್ಥಪೂರ್ಣ ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 12 ವರ್ಷಗಳ ಆಡಳಿತ, ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ವಿವಿಧ ಯೋಜನೆಗಳು ಹಾಗೂ ವಿಕಸಿತ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರದ ಕುರಿತು ಚರ್ಚೆ ನಡೆಯಿತು. ಯುವಜನರ ಆಲೋಚನೆಗಳು, ನವೀನ ಕಲ್ಪನೆಗಳು ಮತ್ತು ಸಲಹೆಗಳನ್ನು ಆಲಿಸಲು ಈ ವೇದಿಕೆ ಪರಿಣಾಮಕಾರಿ ಮಾಧ್ಯಮವಾಗಿ ಕಾರ್ಯನಿರ್ವಹಿಸಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಜಗದೀಶ್, ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಚೆನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಹಾಗೂ ಡಾ. ಧನಂಜಯ್ ಸರ್ಜಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ ಮತ್ತು ಟಿ.ಡಿ. ಮೇಘರಾಜ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

B.Y. Raghavendra ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಯುವಕರ ಸಕ್ರಿಯ ಭಾಗವಹಿಸುವಿಕೆ ದೇಶದ ಅಭಿವೃದ್ಧಿಗೆ ಹೊಸ ಶಕ್ತಿ ನೀಡಲಿದೆ ಎಂದು ತಿಳಿಸಿದರು. ಜಿಲ್ಲೆಯ ಯುವ ಸಬಲೀಕರಣ ಹಾಗೂ ವಿಕಸಿತ ಭಾರತದ ಸಂಕಲ್ಪಕ್ಕೆ ಬೆಂಬಲವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಯುವಕರಿಗೆ ಮತ್ತು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಯುವ ಮೋರ್ಚಾ ಪದಾಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಯೋಗ- ಸಂಗೀತ ಬದುಕಿಗೆ ಬೇಕು ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ

0

ಇಂದು ವಿಶ್ವ ಯೋಗ ದಿನವೂ ಹೌದು ಮತ್ತು ವಿಶ್ವ
ಸಂಗೀತ ದಿನವೂ ಹೌದು.
ಯೋಗ ದೇಹದ ಆರೋಗ್ಯಕ್ಕಾದರೆ ಸಂಗೀತ ಮನಸ್ಸಿನ ಆರೋಗ್ಯಕ್ಕೆ ಉತ್ತಮ ಸಹಕಾರಿಯಾಗಿದೆ.
ಯೋಗ ಮತ್ತು ಸಂಗೀತ ಎರಡೂ ಪೂರಕವಾಗಿದೆ.
ಮನುಷ್ಯನಿಗೆ ಎರಡೂ ಬೇಕು.ಇವೆರಡೂ ಇತ್ತೆಂದರೆ
ಅವನು ಕಾಯಾ,ವಾಚಾ ಮನಸಾ ಸದೃಢವಂತನಾಗುತ್ತಾನೆ.ಯೋಗ ದೇಹದ ಆರೋಗ್ಯವನ್ನು ಸುಧಾರಿಸಿದರೆ ಸಂಗೀತ ಮನಸ್ಸಿನ
ಆರೋಗ್ಯವನ್ನು ಸುಧಾರಿಸುತ್ತದೆ.
ಬದುಕಿನ ಪ್ರತಿ ಹಂತದಲ್ಲಿಯೂ ದೈಹಿಕ,ಮಾನಸಿಕ
ಆರೋಗ್ಯಕ್ಕಾಗಿ ಯೋಗದ ಮೊರೆ ಹೋಗುವುದು ಸೂಕ್ತ ಎನ್ನುವುದು ಸರ್ವವಿದಿತವಾಗಿದೆ.ಯೌವನದಲ್ಲಿ ಇದ್ದ ಶಕ್ತಿ ವಯಸ್ಸಾಗುತ್ತಾ ಹೋದಂತೆ ಕ್ರಮೇಣ ಕಡಿಮೆ
ಯಾಗುತ್ತಾ ಹೋಗುತ್ತದೆ.ದೇಹದ ಜೀವ ಕೋಶಗಳು,ಅಂಗಾಂಗಗಳು ಹಾಗೂ ದೈಹಿಕ-ಮಾನಸಿಕ ಕಾರ್ಯಕ್ಷಮತೆ ಕುಗ್ಗುತ್ತಾ ಹೋಗುತ್ತದೆ.ಈ ಹಂತದಲ್ಲಿ ಯೋಗ,ಧ್ಯಾನ,ಪ್ರಾಣಾಯಾಮಗಳು ದೊಡ್ಡ ಪ್ರಭಾವವನ್ನು ಬೀರುತ್ತವೆ.
ಸಂಗೀತ ಎನ್ನುವುದು ಕೇವಲ ಮನರಂಜನೆಯಲ್ಲ.ಅದು ಭಾಷೆಗಳ ಗಡಿಯನ್ನು ಮೀರಿ ಆತ್ಮವನ್ನು ಸ್ಪರ್ಶಿಸುವ ಒಂದು ಅದ್ಭುತ ಕಲೆ.
ಹಾಗಾಗಿಯೇ ಸಂಗೀತ ಬಹುತೇಕ ಎಲ್ಲರನ್ನೂ ಮುದಗೊಳಿಸುತ್ತದೆ,ಮಂತ್ರಮುಗ್ಧಗೊಳಿಸುತ್ತದೆ.ಸಂಗೀತವನ್ನು ಆಲಿಸುವ ಕಿವಿ ಮತ್ತು ಆಸ್ವಾದಿಸುವ ಮನಸ್ಸು
ಇರಬೇಕಷ್ಟೆ.
ಮನಸ್ಸಿಗೆ ಬೇಸರ ಮುಸುಕಿದಾಗ ಸಂಗೀತವನ್ನು ಎಂದರೆ ದೇವರನಾಮಗಳನ್ನು,ಒಳ್ಳೆಯ ಹಾಡುಗಳನ್ನು
ಕೇಳಿದರೆ ಮನಸ್ಸಿಗಾದ ಬೇಸರ ಮಂಜಿನಂತೆ ಕರಗಿ
ಮನಸ್ಸು ಪ್ರಫುಲ್ಲವಾಗುತ್ತದೆ.
ಕೆಲವರಿಗೆ ಹರಿದಾಸರ ಅಂಕಿತದ ಹಾಡುಗಳನ್ನು ಕೇಳುವುದು,ಕೆಲವರಿಗೆ ಚಲನಚಿತ್ರಗೀತೆಗಳನ್ನು ಕೇಳಿ
ಮನಸ್ಸನ್ನು ಹಗುರಮಾಡಿಕೊಳ್ಳುತ್ತಾರೆ.ಇದು ಅವರವರ ಅಭಿರುಚಿಗೆ ತಕ್ಕ ವಿಷಯವಾಗಿರುತ್ತೆ.
ಅಂತೂ ಯೋಗ ಮಾಡಿ ದೇಹದ ಆರೋಗ್ಯವನ್ನು
ರಕ್ಷಿಸಿಕೊಳ್ಳುವುದರ ಜೊತೆಗೆ ಸಂಗೀತವನ್ನು ಕೇಳಿ ಮನಸ್ಸಿನ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.


“ಯೋಗ ಮಾಡೋಣ,ಸಂಗೀತ ಕೇಳೋಣ
ದೈಹಿಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳೋಣ”

ಗಾಜನೂರಿನ ಜವಾಹರ್ ನವೋದಯ ಶಾಲೆಯ 11 ನೇ ತರಗತಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನ

0

ಶಿವಮೊಗ್ಗ ಜಿಲ್ಲೆಯ ಗಾಜನೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ 2026-27ನೇ ಸಾಲಿನ 11ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳ ಪ್ರವೇಶಾತಿಗಾಗಿ ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಜವಾಹರ್ ನವೋದಯ ವಿದ್ಯಾಲಯದ ಕಾರ್ಯಾಲಯಕ್ಕೆ ಭೇಟಿ ನೀಡಿ, ಜೂನ್ 25 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು 2025-26ನೇ ಸಾಲಿನಲ್ಲಿ 10ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು. 10ನೇ ತರಗತಿಯ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಕನಿಷ್ಠ ಶೇಕಡಾವಾರು 60ರಷ್ಟು ಅಂಕಗಳನ್ನು ಪಡೆದಿರಬೇಕು. ಅಭ್ಯರ್ಥಿಯು ದಿನಾಂಕ 01.06.2009 ರಿಂದ 31.07.2011 ರ ನಡುವಿನ ಅವಧಿಯಲ್ಲಿ ಜನಿಸಿರಬೇಕು.
ಹೆಚ್ಚಿನ ಮಾಹಿತಿ ಹಾಗೂ ಸಂಪರ್ಕಕ್ಕಾಗಿ ವಿದ್ಯಾಲಯದ ಅಧಿಕೃತ ಇಮೇಲ್ (jnvshimoga@gmail.com) ಅಥವಾ ವೆಬ್‌ಸೈಟ್ (https://navodaya.gov.in/nvs/nvs-school/SHIMOGA/en/home/index.html) ಅನ್ನು ಗಮನಿಸಬಹುದಾಗಿದೆ.

Klive Special Article ಅಪರೂಪದ “ಜಲಾಧಿವಾಸ ಗಣಪತಿ” ಕ್ಷೇತ್ರ. ಲೇ: ಡಾ.ಶಾಂತಾರಾಮ ಸಾಮಕ

0

Klive Special Article ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿ ಗ್ರಾಮದ ಬಳಿ ಇರುವ ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನವು ಭಾರತದ ಅತ್ಯಂತ ಅಪರೂಪದ ಮತ್ತು ಐತಿಹಾಸಿಕ ಪ್ರಸಿದ್ಧಿ ಹೊಂದಿದ ಕ್ಷೇತ್ರಗಳಲ್ಲಿ ಒಂದಾಗಿದೆ. ಇದನ್ನು ‘ಜಲಧಿವಾಸ ಗಣಪತಿ’ ಕ್ಷೇತ್ರ ಎಂದೂ ಕರೆಯಲಾಗುತ್ತದೆ.
​ಈ ಕ್ಷೇತ್ರದ ಇತಿಹಾಸ ಮತ್ತು ಪೌರಾಣಿಕ ಹಿನ್ನೆಲೆಯ ಪ್ರಮುಖ ವಿವರಗಳು ಇಲ್ಲಿವೆ:
​೧. ಪೌರಾಣಿಕ ಹಿನ್ನೆಲೆ (ಸ್ಥಳ ಪುರಾಣ)
​ಶಿವ ಮತ್ತು ತ್ರಿಪುರಾಸುರನ ಯುದ್ಧ: ಪುರಾಣಗಳ ಪ್ರಕಾರ, ಪರಶಿವನು ತ್ರಿಪುರಾಸುರನೆಂಬ ರಾಕ್ಷಸನ ಸಂಹಾರಕ್ಕೆ ಹೊರಡುವಾಗ ನಿಯಮದಂತೆ ಗಣಪತಿಯನ್ನು ಪೂಜಿಸಲು ಮರೆಯುತ್ತಾನೆ. ಇದರಿಂದಾಗಿ ಯುದ್ಧದಲ್ಲಿ ಜಯ ಸಿಗದೆ ವಿಘ್ನಗಳು ಎದುರಾದಾಗ, ಶಿವನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ನಂತರ ಗಣಪತಿಯನ್ನು ಪ್ರಸನ್ನಗೊಳಿಸಲು ಈ ಜಾಗದಲ್ಲಿ ಶಿವನೇ ಸ್ವತಃ ವಿನಾಯಕನನ್ನು ಪ್ರತಿಷ್ಠಾಪಿಸಿದನು ಎಂಬ ಪ್ರತೀತಿ ಇದೆ.
​ಮಧುಪಾನ ಮತ್ತು ಉರಿ ಶಮನ: ಮತ್ತೊಂದು ಜನಪ್ರಿಯ ಕಥೆಯ ಪ್ರಕಾರ, ಬಾಲಗಣಪತಿಯು ಅತಿಯಾಗಿ ಜೇನುತುಪ್ಪವನ್ನು (ಮಧು) ಸೇವಿಸಿದಾಗ ಅವನ ದೇಹದಲ್ಲಿ ವಿಪರೀತ ಉರಿ (ತಾಪ) ಕಾಣಿಸಿಕೊಂಡಿತು. ಈ ತಾಪವನ್ನು ತಂಪಾಗಿಸಲು ಪರಶಿವನು ಮಗನನ್ನು ಇಲ್ಲಿನ ಜಲಾವೃತವಾದ ಗುಹೆಯಲ್ಲಿ ನೆಲೆಸುವಂತೆ ಸೂಚಿಸಿದನು. ಕಂಠಪ್ರಮಾಣದ ನೀರಿನಲ್ಲಿ ಮುಳುಗಿರುವ ಗಣಪತಿಯ ದರ್ಶನದಿಂದ ಭಕ್ತರ ಆಂತರಿಕ ಹಾಗೂ ದೈಹಿಕ ತಾಪಗಳು ಶಮನವಾಗುತ್ತವೆ ಎಂಬುದು ಭಕ್ತರ ದೃಢ ನಂಬಿಕೆ.
​Klive Special Article ೨. ಐತಿಹಾಸಿಕ ಹಾಗೂ ಪುರಾತತ್ವ ಹಿನ್ನೆಲೆ
​ಸ್ವಯಂಭು ಮೂರ್ತಿ: ಇಲ್ಲಿ ಯಾವುದೇ ಕೃತಕ ವಿಗ್ರಹ ಪ್ರತಿಷ್ಠಾಪನೆ ಆಗಿಲ್ಲ. ಬೃಹತ್ ಕೃಷ್ಣಶಿಲೆಯ ಬಂಡೆಯೊಂದರ ನೈಸರ್ಗಿಕ ಗುಹೆಯೊಳಗೆ ಸುಮಾರು ಮೂರು ಅಡಿ ಎತ್ತರದ ವಿನಾಯಕನ ಆಕೃತಿಯು ಸ್ವಯಂಭುವಾಗಿ (ತಾನಾಗಿಯೇ) ಮೂಡಿಬಂದಿದೆ. ಸ್ವಾಮಿಯ ಸೊಂಡಿಲು, ಕಣ್ಣು ಮತ್ತು ಕಾಲುಗಳ ಆಕೃತಿಯನ್ನು ಇಲ್ಲಿ ಸ್ಪಷ್ಟವಾಗಿ ಕಾಣಬಹುದು.
​ಕಾಲಾವಧಿ: ಈ ಕ್ಷೇತ್ರದ ಪ್ರಾಚೀನತೆ ಸಾವಿರಾರು ವರ್ಷಗಳದ್ದಾಗಿದ್ದರೂ, ಇಲ್ಲಿನ ಶಿಲಾಮಯ ಗರ್ಭಗುಡಿಯು ಸಾಧಾರಣ ೮೦೦ ವರ್ಷಗಳಷ್ಟು ಹಳೆಯದು ಎಂದು ಪ್ರಸಿದ್ಧ ಇತಿಹಾಸಕಾರರು ಹಾಗೂ ಪುರಾತತ್ವ ಸಂಶೋಧಕರಾಗಿದ್ದ ಪ್ರೊ. ಪಿ. ಗುರುರಾಜ ಭಟ್ ಅವರು ತಮ್ಮ ಅಧ್ಯಯನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
​ನವೀಕರಣ: ಗರ್ಭಗುಡಿಯ ಮುಂದಿನ ತೀರ್ಥಮಂಟಪ, ಹೆಬ್ಬಾಗಿಲು ಮುಂತಾದ ರಚನೆಗಳನ್ನು ನಂತರದ ಕಾಲದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ೧೯೯೭ರಲ್ಲಿ ಸಾಂಪ್ರದಾಯಿಕ ಶಿಲ್ಪಕಲೆಗೆ ಧಕ್ಕೆ ಬಾರದಂತೆ ಗರ್ಭಗುಡಿಯನ್ನು ಜೀರ್ಣೋದ್ಧಾರ ಮಾಡಲಾಗಿದೆ. ಇದು ಗುಡ್ಡಟ್ಟು ಅಡಿಗರ ಆನುವಂಶಿಕ ಆಡಳಿತಕ್ಕೆ ಒಳಪಟ್ಟಿದೆ.
​೩. ಕ್ಷೇತ್ರದ ವಿಶಿಷ್ಟ ಸೇವೆಗಳು
​ಆಯಿರಕೊಡ ಸೇವೆ (ಸಾವಿರ ಕೊಡ ಅಭಿಷೇಕ): ಇದು ಈ ಕ್ಷೇತ್ರದ ಅತ್ಯಂತ ಪ್ರಸಿದ್ಧ ಹಾಗೂ ವಿಶಿಷ್ಟ ಸೇವೆ. ಪ್ರತಿದಿನ ಮುಂಜಾನೆ ಗರ್ಭಗುಡಿಯ ಕಂಠಪ್ರಮಾಣದ ನೀರನ್ನು ಸಂಪೂರ್ಣವಾಗಿ ಹೊರತೆಗೆದು, ಸ್ವಾಮಿಗೆ ತೈಲಾಭ್ಯಂಜನ ಮತ್ತು ಪೂಜೆ ನೆರವೇರಿಸಲಾಗುತ್ತದೆ. ನಂತರ ಹತ್ತಿರದ ಪವಿತ್ರ ಬಾವಿಯಿಂದ ಭಕ್ತರು ಸಾಲಾಗಿ ನಿಂತು ೧೦೦೦ ಕೊಡ ನೀರನ್ನು ತಂದು ಗರ್ಭಗುಡಿಯ ಗುಹೆಯನ್ನು ತುಂಬಿಸುತ್ತಾರೆ. ಈ ಸೇವೆಗೆ ದಶಕಗಳ ಕಾಲದ ಮುಂಗಡ ಕಾಯ್ದಿರಿಸುವಿಕೆ (Waiting List) ಇರುವುದು ಕ್ಷೇತ್ರದ ಮಹಿಮೆಗೆ ಸಾಕ್ಷಿ.
​ಅಕ್ಕಿ ಕಡುಬು ಸೇವೆ: ಗಣೇಶನಿಗೆ ಪ್ರಿಯವಾದ ಅಕ್ಕಿ ಕಡುಬಿನ ಬೃಹತ್ ನೈವೇದ್ಯವನ್ನು ಇಲ್ಲಿ ಹರಕೆಯಾಗಿ ಸಮರ್ಪಿಸಲಾಗುತ್ತದೆ.
​ಪ್ರಕೃತಿಯ ಮಡಲಿನಲ್ಲಿ, ಬೃಹತ್ ಆನೆಯಾಕಾರದ ಬಂಡೆಯ ಆಶ್ರಯದಲ್ಲಿ ಜಲವಾಸಿಯಾಗಿ ಕಂಗೊಳಿಸುವ ಗುಡ್ಡಟ್ಟು ವಿನಾಯಕನ ಇತಿಹಾಸವು ಕರಾವಳಿಯ ವಿಶಿಷ್ಟ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಬಿಂಬಿಸುತ್ತದೆ.

ಶಿವಮೊಗ್ಗದ ಸುತ್ತುಕೋಟೆಯಲ್ಲಿ ಯುವಕನ ಭೀಕರ ಕೊಲೆ!

0

ಶಿವಮೊಗ್ಗ ತಾಲೂಕಿನ ಸುತ್ತುಕೋಟೆ ಗ್ರಾಮದ ನಿವಾಸಿ ಪ್ರವೀಣ್ (29) ಕೊಲೆಯಾದ ಯುವಕನಾಗಿದ್ದಾನೆ. ಟ್ರಾಕ್ಟರ್ ಬಾಡಿಗೆ ಹಾಗೂ ಇತರ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಪ್ರವೀಣ್, ನಿನ್ನೆ ರಾತ್ರಿ ಊಟ ಮುಗಿಸಿ ಮನೆಯಲ್ಲಿ ಮಲಗಿದ್ದನು.

ಇಂದು ಬೆಳಿಗ್ಗೆ ಕೆಲಸಕ್ಕೆ ಬರಲು ಕೆಲವು ಯುವಕರು ಪ್ರವೀಣ್‌ಗೆ ಕರೆ ಮಾಡಿದರೂ, ಆತ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಅವರು ಮನೆಗೆ ತೆರಳಿ ಪರಿಶೀಲಿಸಿದಾಗ, ಪ್ರವೀಣ್ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಮೂಲಕ ಕೃತ್ಯ ಬೆಳಕಿಗೆ ಬಂದಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ವ್ಯವಹಾರಿಕ ವೈಷಮ್ಯದ ಹಿನ್ನೆಲೆ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಕುಂಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಕುಂಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಜೂನ್ 23. ಗಾಜನೂರು ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

0

ಶಿವಮೊಗ್ಗ ತಾಲ್ಲೂಕಿನ ಗಾಜನೂರು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು ಜೂನ್ 23 ರ ಮಂಗಳವಾರದಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕೆಳಕಂಡ ಸ್ಥಳಗಳಲ್ಲಿ‌ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಗಾಜನೂರು, ಕ್ಯಾಂಪ್ ಮತ್ತು ಡ್ಯಾಂ, ಸಕ್ಕರೆಬೈಲು, ನವೋದಯ ಶಾಲೆ, ಶಿವಮೊಗ್ಗ ಕುಡಿಯುವ ನೀರಿನ ಸ್ಥಾವರ, ಹಾಲಲಕ್ಕವಳ್ಳಿ, ಕಡೇಕಲ್, ಯರಗನಾಳ್, ಕುಸ್ಕೂರು, ವೀರಾಪುರ, ತಟ್ಟಿಕೆರೆ, ಹೊಸಕೊಪ್ಪ, ಇಂದಿರಾನಗರ ಹೊಸಹಳ್ಳಿ, ಮುಳ್ಕೆರೆ, ಆನೆಬಿಡಾರ, ತಿಮ್ಮಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು
ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಕೋರಿದೆ

“ಬಾಲ್ಯವಿವಾಹ ತಡೆಗೆ ಸರ್ಕಾರ ಬದ್ಧ”-ಶಿವಮೊಗ್ಗದ ವಾರ್ತಾ‌ ಇಲಾಖೆಯಿಂದ ಮಾಹಿತಿ

0

ಬಾಲ್ಯ ಎಂಬುದು ಆಟ, ಪಾಠ ಮತ್ತು ಮುಗ್ಧ ಕನಸುಗಳನ್ನು ಕಾಣುವ ಸುಂದರ ಕಾಲ. ಆದರೆ, ಅದೇ ಬಾಲ್ಯಕ್ಕೆ ಮದುವೆಯೆಂಬ ನೊಗವನ್ನು ಕಟ್ಟಿ, ಮಕ್ಕಳ ಭವಿಷ್ಯವನ್ನು ಚಿಗುರಿನಲ್ಲೇ ಕಮರಿಸುವ ‘ಬಾಲ್ಯ ವಿವಾಹ’ ಎಂಬ ಸಾಮಾಜಿಕ ಪಿಡುಗು ಇಂದಿಗೂ ನಮ್ಮ ಸಮಾಜಕ್ಕೆ ದೊಡ್ಡ ಸವಾಲಾಗಿದೆ.

ಹೆಣ್ಣುಮಕ್ಕಳ ಆರೋಗ್ಯ, ಶಿಕ್ಷಣ, ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳನ್ನು ಕಸಿಯುವ ಈ ಪಿಡುಗನ್ನು ಬೇರುಸಹಿತ ಕಿತ್ತೊಗೆಯಲು ಕರ್ನಾಟಕ ಸರ್ಕಾರವು ಕಠಿಣ ಕಾನೂನು ತಿದ್ದುಪಡಿಗಳು, ಬಿಗಿಯಾದ ಆಡಳಿತಾತ್ಮಕ ಕ್ರಮಗಳು, ತಂತ್ರಜ್ಞಾನದ ಬಳಕೆ ಮತ್ತು ವ್ಯವಸ್ಥಿತ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಅತ್ಯಂತ ಗಂಭೀರ ಹಾಗೂ ಸುದೀರ್ಘ ಹೋರಾಟವನ್ನು ನಡೆಸುತ್ತಿದೆ.

ಕಾನೂನಿಗೆ ಐತಿಹಾಸಿಕ ಬಲ: ‘ನಿಶ್ಚಿತಾರ್ಥವೂ ಅಪರಾಧ’

ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಇಡೀ ದೇಶದಲ್ಲೇ ಅತ್ಯಂತ ಕಠಿಣ ಮತ್ತು ಪ್ರಗತಿಪರ ಕಾನೂನು ರೂಪಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಸರ್ಕಾರದ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ಕ್ಕೆ ರಾಜ್ಯ ಸರ್ಕಾರವು ಮಹತ್ವದ ತಿದ್ದುಪಡಿಗಳನ್ನು ತಂದಿದೆ. ಈ ಕಟ್ಟುನಿಟ್ಟಿನ ತಿದ್ದುಪಡಿಗಳ ಪ್ರಕಾರ, ಕೇವಲ ಬಾಲ್ಯ ವಿವಾಹ ಮಾಡುವುದು ಮಾತ್ರವಲ್ಲದೆ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ನಿಶ್ಚಿತಾರ್ಥ (Engagement) ಮಾಡುವುದು ಅಥವಾ ಅದಕ್ಕೆ ಸಿದ್ಧತೆ ನಡೆಸುವುದು ಕೂಡ ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಯಾವುದೇ ನಿಶ್ಚಿತಾರ್ಥಗಳನ್ನು ಕಾನೂನುಬಾಹಿರ ಮತ್ತು ಶೂನ್ಯ (Null and Void) ಎಂದು ಘೋಷಿಸಲಾಗಿದೆ.

ಬಾಲ್ಯ ವಿವಾಹವನ್ನು ಪ್ರೋತ್ಸಾಹಿಸುವ, ಅದಕ್ಕೆ ಸಿದ್ಧತೆ ನಡೆಸುವ ಅಥವಾ ನೆರವೇರಿಸುವ ಪೋಷಕರು, ಸಂಬಂಧಿಕರು, ಮದುವೆಗೆ ಸಾಕ್ಷಿಯಾಗುವವರು ಸೇರಿದಂತೆ ಯಾವುದೇ ವ್ಯಕ್ತಿಗಳಿಗೆ ಕನಿಷ್ಠ 2 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಕಡ್ಡಾಯ ಅವಕಾಶ ಕಲ್ಪಿಸಲಾಗಿದೆ. ಈ ಅಪರಾಧಗಳನ್ನು ಜಾಮೀನು ರಹಿತ (Non-bailable) ಮತ್ತು ರಾಜಿ ಮಾಡಿಕೊಳ್ಳಲಾಗದ (Cognizable) ಅಪರಾಧಗಳಾಗಿ ಪರಿಗಣಿಸಲಾಗಿದೆ.

ಅಧಿಕಾರಿಗಳ ವಿಕೇಂದ್ರೀಕರಣ ಮತ್ತು ಸಾಮೂಹಿಕ ಹೊಣೆಗಾರಿಕೆ :

ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಬಾಲ್ಯ ವಿವಾಹಗಳನ್ನು ಮುಂಚಿತವಾಗಿಯೇ ಪತ್ತೆ ಹಚ್ಚಿ ತಡೆಯಲು ಸರ್ಕಾರವು ವ್ಯಾಪಕ ಜಾಲವನ್ನು ಹೊಂದಿರುವ ‘ಬಾಲ್ಯ ವಿವಾಹ ನಿಷೇಧಾಧಿಕಾರಿಗಳನ್ನು’ (CMPOs) ನೇಮಿಸಿದೆ. ಗ್ರಾಮೀಣ ಭಾಗದಲ್ಲಿ ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಷ್ಟೇ ಅಲ್ಲದೆ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (PDO), ಗ್ರಾಮ ಆಡಳಿತ ಅಧಿಕಾರಿಗಳು (VA), ಶಾಲಾ ಮುಖ್ಯ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ನಿಷೇಧಾಧಿಕಾರಿಗಳನ್ನಾಗಿ ಮಾಡಿ ಕಾನೂನುಬದ್ಧ ಜವಾಬ್ದಾರಿ ಹಂಚಲಾಗಿದೆ. ಶಾಲೆಯಲ್ಲಿ ಯಾವುದೇ ಮಗು ಸತತವಾಗಿ 3 ದಿನಗಳಿಗಿಂತ ಹೆಚ್ಚು ಕಾಲ ಗೈರುಹಾಜರಾದರೆ, ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಕಡ್ಡಾಯವಾಗಿ ಅವರ ಮನೆಗೆ ಭೇಟಿ ನೀಡಿ ಮಗುವಿನ ಸ್ಥಿತಿಗತಿಯ ಮಾಹಿತಿ ಪಡೆಯುವ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ.

ಇದಲ್ಲದೆ, ಕಲ್ಯಾಣ ಮಂಟಪಗಳು, ದೇವಸ್ಥಾನಗಳು, ಚರ್ಚ್, ಮಸೀದಿಗಳು ಅಥವಾ ಸಾಮೂಹಿಕ ವಿವಾಹ ಆಯೋಜಿಸುವ ಯಾವುದೇ ಸಂಘ-ಸಂಸ್ಥೆಗಳು ವಧು-ವರರ ವಯಸ್ಸಿನ ಅಧಿಕೃತ ದೃಢೀಕರಣ ಪತ್ರಗಳನ್ನು (ಎಸ್.ಎಸ್.ಎಲ್.ಸಿ ಅಂಕಪಟ್ಟಿ / ಜನನ ಪ್ರಮಾಣಪತ್ರ) ಪರಿಶೀಲಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಬಾಲ್ಯ ವಿವಾಹಕ್ಕೆ ಆಸ್ಪದ ನೀಡಿದರೆ, ಕಲ್ಯಾಣ ಮಂಟಪಗಳ ಮಾಲೀಕರು, ವ್ಯವಸ್ಥಾಪಕರು, ಮುದ್ರಣಾಲಯದವರು (ಮದುವೆ ಪತ್ರಿಕೆ ಮುದ್ರಿಸಿದವರು) ಮತ್ತು ವಿವಾಹ ನೆರವೇರಿಸುವ ಪುರೋಹಿತರು, ಖಾಜಿಗಳು ಅಥವಾ ಧಾರ್ಮಿಕ ಮುಖಂಡರ ವಿರುದ್ಧವೂ ನೇರವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಪರವಾನಗಿ ರದ್ದುಪಡಿಸುವ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

ತಂತ್ರಜ್ಞಾನದ ಬಳಕೆ, ತಡೆಯಾಜ್ಞೆ ಮತ್ತು ಪುನರ್ವಸತಿ

ಬಾಲ್ಯ ವಿವಾಹದ ಮಾಹಿತಿ ಸಿಕ್ಕ ತಕ್ಷಣ ಸಾರ್ವಜನಿಕರು ದೂರು ನೀಡಲು ಮತ್ತು ಮಕ್ಕಳನ್ನು ತಕ್ಷಣವೇ ರಕ್ಷಿಸಲು ಸರ್ಕಾರ ಆಧುನಿಕ ತಂತ್ರಜ್ಞಾನ ಹಾಗೂ ಸಹಾಯವಾಣಿಗಳನ್ನು ಸಕ್ರಿಯಗೊಳಿಸಿದೆ. 24 ಗಂಟೆಯೂ ಉಚಿತವಾಗಿ ಕಾರ್ಯನಿರ್ವಹಿಸುವ 1098 ಸಹಾಯವಾಣಿ ಮತ್ತು ಮಹಿಳಾ ಸಹಾಯವಾಣಿ 181 ಮೂಲಕ ದೂರುಗಳನ್ನು ಸ್ವೀಕರಿಸಲಾಗುತ್ತದೆ. ಇಲ್ಲಿ ಮಾಹಿತಿ ನೀಡುವf ಸಾರ್ವಜನಿಕರ ಅಥವಾ ನೆರೆಹೊರೆಯವರ ವಿವರಗಳನ್ನು ಕಾನೂನುಬದ್ಧವಾಗಿ ಸಂಪೂರ್ಣ ಗೌಪ್ಯವಾಗಿಡಲಾಗುತ್ತದೆ.

ಒಂದು ವೇಳೆ ಮದುವೆಯ ಮಾಹಿತಿ ಮುಂಚಿತವಾಗಿ ತಿಳಿದರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪೋಷಕರಿಂದ ಮುಚ್ಚಳಿಕೆ ಪತ್ರವನ್ನು ಬರೆಸಿಕೊಳ್ಳುತ್ತಾರೆ. ಒಂದು ವೇಳೆ ಪೋಷಕರು ಕಾನೂನಿಗೆ ಮಣಿಯದಿದ್ದರೆ. ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (JMFC) ನ್ಯಾಯಾಲಯದಿಂದ ತುರ್ತು ತಡೆಯಾಜ್ಞೆ (njunction Order) ತಂದು ಮದುವೆಯನ್ನು ಸ್ಥಳದಲ್ಲೇ ನಿಲ್ಲಿಸುವ ಸಂಪೂರ್ಣ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಕೇವಲ ಮದುವೆ ತಡೆಯುವುದಷ್ಟೇ ಅಲ್ಲದೆ, ಪಾರು ಮಾಡಲ್ಪಟ್ಟ ಬಾಲಕ-ಬಾಲಕಿಯರ ಮುಂದಿನ ಜವಾಬ್ದಾರಿಯನ್ನೂ ಸರ್ಕಾರವೇ ವಹಿಸಿಕೊಳ್ಳುತ್ತದೆ.

ಸರ್ಕಾರಿ ಬಾಲ ಮಂದಿರಗಳು ಮತ್ತು ‘ಸಖಿ’ ಒನ್ ಸ್ಟಾಪ್ ಸೆಂಟರ್ ಗಳ ಮೂಲಕ ಅವರಿಗೆ ಉಚಿತ ಸುರಕ್ಷಿತ ವಸತಿ, ಶಿಕ್ಷಣದ ಮುಂದುವರಿಕೆ, ರಕ್ಷಣೆ ಮತ್ತು ಮಾನಸಿಕ ಆಘಾತದಿಂದ ಹೊರಬರಲು ನುರಿತ ತಜ್ಞರಿಂದ ಕೌನ್ಸಿಲಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.

ಹೆಣ್ಣು ಮಕ್ಕಳ ಸಬಲೀಕರಣ ಮತ್ತು ಸಾಮಾಜಿಕ ಬದಲಾವಣೆ

ಕೇವಲ ಶಿಕ್ಷೆಯ ಭಯದಿಂದ ಮಾತ್ರ ಸಾಮಾಜಿಕ ಪಿಡುಗುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿರುವ ಕರ್ನಾಟಕ ಸರ್ಕಾರ, ಹೆಣ್ಣು ಮಕ್ಕಳ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಬಡತನದ ಕಾರಣಕ್ಕಾಗಿ ಪೋಷಕರು ಹೆಣ್ಣು ಮಕ್ಕಳನ್ನು ಅರ್ಧಕ್ಕೆ ಶಾಲೆಯಿಂದ ಬಿಡಿಸುವುದನ್ನು ತಡೆಯಲು ಉಚಿತ ಬಸ್ ಪಾಸ್, ಉಚಿತ ಸೈಕಲ್ ವಿತರಣೆ, ವಸತಿ ನಿಲಯಗಳ ಸೌಲಭ್ಯ ಮತ್ತು ಪ್ರೋತ್ಸಾಹದಾಯಕ ವಿದ್ಯಾರ್ಥಿವೇತನ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಬಡ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನವನ್ನು ಪ್ರೋತ್ಸಾಹಿಸಲು ಮತ್ತು ಅವರ ಆರ್ಥಿಕ ಭದ್ರತೆಗಾಗಿ ಜಾರಿಯಲ್ಲಿರುವ ‘ಭಾಗ್ಯಲಕ್ಷ್ಮಿ’ಯಂತಹ ಯೋಜನೆಗಳು ಹೆಣ್ಣುಮಕ್ಕಳು 18 ವರ್ಷ ತುಂಬುವವರೆಗೆ ಮದುವೆ ಮಾಡದಂತೆ ಪೋಷಕರನ್ನು ಪರೋಕ್ಷವಾಗಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿವೆ.

ಇದರೊಂದಿಗೆ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (KSLSA), ಪೊಲೀಸ್ ಇಲಾಖೆ ಮತ್ತು ವಿವಿಧ ಸ್ವಯಂಸೇವಾ ಸಂಸ್ಥೆಗಳ (NGO’s) ಜಂಟಿ ಸಹಯೋಗದಲ್ಲಿ ಗ್ರಾಮೀಣ ಹಾಗೂ ಹಿಂದುಳಿದ ತಾಲೂಕುಗಳಲ್ಲಿ ನಿರಂತರವಾಗಿ ‘ಬಾಲ್ಯ ವಿವಾಹ ಮುಕ್ತ ಹಳ್ಳಿ’ ಅಭಿಯಾನಗಳು, ಬೀದಿ ನಾಟಕಗಳು ಮತ್ತು ಜಾಗೃತಿ ಜಾಥಾಗಳನ್ನು ನಡೆಸಲಾಗುತ್ತಿದೆ. ಸ್ವಸಹಾಯ ಸಂಘಗಳ ಮಹಿಳೆಯರು ಮತ್ತು ಆಶಾ ಕಾರ್ಯಕರ್ತೆಯರಿಗೆ ವಿಶೇಷ ತರಬೇತಿ ನೀಡಿ, ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹದ ವಿರುದ್ಧದ ಕಣ್ಣುಗಳಾಗಿ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ.

ಬಾಲ್ಯ ವಿವಾಹ ತಡೆಗೆ ಕಠಿಣ ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ: 1234/2017 ರ ಆದೇಶದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮತ್ತು ರಾಜ್ಯದಲ್ಲಿ ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ “ರಾಜ್ಯ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ”ಯನ್ನು ರಚಿಸಿದೆ.

ಈ ಸಮಿತಿಯು ಇತ್ತೀಚೆಗೆ ಮಹತ್ವದ ಸಭೆ ನಡೆಸಿ ನಿರ್ಣಾಯಕ ತೀರ್ಮಾನಗಳನ್ನು ಕೈಗೊಂಡಿದೆ. ಕಳೆದ 5 ವರ್ಷಗಳ ಆತಂಕಕಾರಿ ಅಂಕಿ-ಅಂಶಗಳ ವಿಶ್ಲೇಷಣೆ ಮಾಡಿರುವ ಸಮಿತಿಯು, ಇತ್ತೀಚಿನ ವರದಿಗಳ ಪ್ರಕಾರ, ರಾಜ್ಯದಲ್ಲಿ ಬಾಲ್ಯ ವಿವಾಹದ ದೂರುಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿರುವುದು ಆತಂಕ ಮೂಡಿಸಿದೆ ಎಂದು ಕಳವಳ ವ್ಯಕ್ತಪಡಿಸಿದೆ.

2020ನೇ ಸಾಲಿನಲ್ಲಿ 2,290 ರಷ್ಟಿದ್ದ ಬಾಲ್ಯ ವಿವಾಹದ ಪ್ರಕರಣಗಳ ಸಂಖ್ಯೆಯು, 2024ನೇ ಸಾಲಿನ ವೇಳೆಗೆ 3,127 ಕ್ಕೆ ಏರಿಕೆಯಾಗಿದೆ. 2023ರಲ್ಲಿ ಸ್ವಲ್ಪ ಇಳಿಕೆಯಾಗಿದ್ದನ್ನು ಹೊರತುಪಡಿಸಿದರೆ, ಒಟ್ಟಾರೆ ಪ್ರಕರಣಗಳ ಗ್ರಾಫ್ ಮೇಲ್ಮುಖವಾಗಿದೆ. ವಿಶೇಷವಾಗಿ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ತಲಾ 200 ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದರೆ, ಇನ್ನುಳಿದ 11 ಜಿಲ್ಲೆಗಳಲ್ಲಿ 100 ಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಈ ಹಠಾತ್ ಏರಿಕೆಗೆ ಕಾರಣವಾದ ಅಂಶಗಳನ್ನು ಮತ್ತು ಕೋವಿಡ್-ಪೂರ್ವ (2018 ಮತ್ತು 2019ರ) ದಾಖಲೆಗಳನ್ನು ಆಳವಾಗಿ ಅಧ್ಯಯನ ಮಾಡಲು ಸರ್ಕಾರ ಮುಂದಾಗಿದೆ.

ವಾಸ್ತವ ಮತ್ತು ತಡೆಗಟ್ಟುವಿಕೆಯ ನಡುವಿನ ಅಂತರ: ತನಿಖೆಗೆ ಆದೇಶ

ದಾಖಲಾಗುವ ದೂರುಗಳು ಮತ್ತು ವಾಸ್ತವವಾಗಿ ತಡೆಗಟ್ಟಲಾಗುತ್ತಿರುವ ವಿವಾಹಗಳ ನಡುವೆ ದೊಡ್ಡ ಕಂದಕವಿರುವುದನ್ನು ಸಮಿತಿ ಗುರುತಿಸಿದೆ. ಉದಾಹರಣೆಗೆ, 2024ರಲ್ಲಿ ಸ್ವೀಕರಿಸಿದ 3,127 ದೂರುಗಳ ಪೈಕಿ 2,323 ಬಾಲ್ಯ ವಿವಾಹಗಳನ್ನು ಯಶಸ್ವಿಯಾಗಿ ತಡೆಗಟ್ಟಲಾಗಿದೆಯಾದರೂ, ಅಧಿಕಾರಿಗಳ ಕಣ್ಣು ತಪ್ಪಿಸಿ 804 ಬಾಲ್ಯ ವಿವಾಹಗಳು ನಡೆದುಹೋಗಿವೆ. ಈ ಅಂತರಕ್ಕೆ ಕಾರಣವೇನು ಮತ್ತು ವ್ಯವಸ್ಥೆಯಲ್ಲಿನ ಲೋಪದೋಷಗಳೇನು ಎಂಬುದನ್ನು ಪತ್ತೆಹಚ್ಚಲು ಸಮಿತಿ ಸೂಚಿಸಿದೆ.

ಇನ್ನೊಂದು ಆಘಾತಕಾರಿ ವಿಷಯವೆಂದರೆ, ಎಫ್.ಐ.ಆರ್.ಗಳು ದಾಖಲಾಗುತ್ತಿದ್ದರೂ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿರುವ ಪ್ರಮಾಣ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. 2020ರಲ್ಲಿ ಕೇವಲ 3, 2024ರಲ್ಲಿ ಕೇವಲ 1 ಮತ್ತು 2021ರಲ್ಲಿ ಕೇವಲ 10 ಅಪರಾಧಗಳು ಮಾತ್ರ ಶಿಕ್ಷೆಗೆ ಒಳಪಟ್ಟಿವೆ. ಈ ಹಿನ್ನೆಲೆಯಲ್ಲಿ ತನಿಖೆ ಮತ್ತು ಕಾನೂನು ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸಲು ಗೃಹ ಇಲಾಖೆ ಹಾಗೂ ಕಾನೂನು ಇಲಾಖೆಯ ಸಮನ್ವಯದೊಂದಿಗೆ ವಿಶೇಷ ಕ್ರಮ ಕೈಗೊಳ್ಳಲಾಗುತ್ತಿದೆ.

ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ತರಬೇತಿ ಮತ್ತು ಹೊಣೆಗಾರಿಕೆ :

ಮಕ್ಕಳ ಸಹಾಯವಾಣಿ 1098 ಕ್ಕೆ ಬಂದ ಕರೆಗಳ ಸ್ವರೂಪ ಮತ್ತು ಅವುಗಳಿಗೆ ಸ್ಪಂದಿಸಲು ಅಧಿಕಾರಿಗಳು ತೆಗೆದುಕೊಳ್ಳುವ ಸಮಯದ ಕುರಿತು ನಿರಂತರ ವಿಮರ್ಶೆ ನಡೆಸಲಾಗುತ್ತಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕರ್ನಾಟಕ ತಿದ್ದುಪಡಿಗಳ ಅಡಿಯಲ್ಲಿ ತಳಮಟ್ಟದ ಅಧಿಕಾರಿಗಳ ಸಾಮಥ್ರ್ಯ ವೃದ್ಧಿಗಾಗಿ ವಿಶೇಷ ತರಬೇತಿ ಮಾಡ್ಯೂಲ್ ಸಿದ್ಧಪಡಿಸಲಾಗುತ್ತಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಪ್ರೌಢಶಾಲಾ ಶಿಕ್ಷಕರು, ಅಂಗನವಾಡಿ ಮೇಲ್ವಿಚಾರಕರು ಹಾಗೂ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಅಧಿಕಾರಿಗಳು, ದಾದಿಯರು ಮತ್ತು ಆಶಾ ಕಾರ್ಯಕರ್ತೆಯರಿಗೆ ಅಪಾಯದಲ್ಲಿರುವ ಮಕ್ಕಳನ್ನು ಗುರುತಿಸುವುದು, ತುರ್ತು ಹಸ್ತಕ್ಷೇಪದ ಕಾರ್ಯವಿಧಾನಗಳು ಮತ್ತು ಬಾಲ್ಯ ವಿವಾಹದ ಸಾಮಾಜಿಕ-ಆರ್ಥಿಕ ದುಷ್ಪರಿಣಾಮಗಳ ಕುರಿತು ವಿಶೇಷ ತರಬೇತಿ ನೀಡಲು ಸೂಚಿಸಲಾಗಿದೆ. ಶಾಲೆಗಳಲ್ಲಿ ನಿರಂತರ ಗೈರುಹಾಜರಾಗುವ ಹೆಣ್ಣುಮಕ್ಕಳನ್ನು ಪತ್ತೆ ಹಚ್ಚುವ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಗೆ ನೀಡಲಾಗಿದೆ.

ರಕ್ಷಣೆ, ಪುನರ್ವಸತಿ ಮತ್ತು ಶಿಕ್ಷಣದ ಮುಂದುವರಿಕೆ :

ಬಾಲ್ಯ ವಿವಾಹದ ಅಪಾಯದಲ್ಲಿರುವ ದುರ್ಬಲ ಮಕ್ಕಳನ್ನು ಪತ್ತೆ ಹಚ್ಚಲು 5 ಪ್ರಮುಖ ಮಾನದಂಡಗಳನ್ನು ಸರ್ಕಾರ ಗುರುತಿಸಿದೆ. ಮದುವೆಯಿಂದ ರಕ್ಷಿಸಲ್ಪಟ್ಟ ಎಲ್ಲಾ ಮಕ್ಕಳಿಗೆ ತಕ್ಷಣದ ಸೂಕ್ತ ರಕ್ಷಣೆ ಮತ್ತು ದೀರ್ಘಕಾಲೀನ ಪುನರ್ವಸತಿ ಕಲ್ಪಿಸಲಾಗುವುದು. ರಕ್ಷಿಸಲ್ಪಟ್ಟ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಯು ಜಂಟಿ ಸುತ್ತೋಲೆ ಹೊರಡಿಸಿ, ‘ಗ್ರಾಮ ಪಂಚಾಯತ್ ಶಿಕ್ಷಣ ಕಾರ್ಯಪಡೆ’ಗಳ ಮೂಲಕ ಸ್ಥಳೀಯವಾಗಿ ಆ ಮಕ್ಕಳಿಗೆ ಶಿಕ್ಷಣದ ಮುಂದುವರಿಕೆಯನ್ನು ಖಚಿತಪಡಿಸಲಿವೆ.

ಮೇಲ್ವಿಚಾರಣೆ, ಸಾಮಾಜಿಕ ಜಾಗೃತಿ ಮತ್ತು ಬುಡಕಟ್ಟು ಸಮುದಾಯಗಳ ಮೇಲೆ ವಿಶೇಷ ಗಮನ :

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ನಿಯಮಿತವಾಗಿ ವರ್ಚುವಲ್ ಸಭೆಗಳ ಮೂಲಕ ತಳಮಟ್ಟದ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನಡೆಯುವಾಗ ವಧು-ವರರ ವಯಸ್ಸಿನ ದೃಢೀಕರಣದ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲಾಗುವುದು. ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಬಾಲ್ಯ ವಿವಾಹ ಮುಕ್ತವಾಗುವ ಗ್ರಾಮ ಪಂಚಾಯತಿಗಳಿಗೆ “ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯತ್” ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಇದಲ್ಲದೆ, ಮಕ್ಕಳ ಸಹಾಯವಾಣಿ ಸಂಖ್ಯೆ 1098 ಮತ್ತು ಮಹಿಳಾ ಸಹಾಯವಾಣಿ ಸಂಖ್ಯೆ 181 ಕುರಿತು ಶಾಲಾ-ಕಾಲೇಜುಗಳು, ಗ್ರಾಮ ಪಂಚಾಯತಿಗಳಲ್ಲಿ ಭಿತ್ತಿಪತ್ರಗಳ ಮೂಲಕ ಜಾಗೃತಿ ಮೂಡಿಸಲಾಗುವುದು ಹಾಗೂ ಹದಿಹರೆಯದವರಿಗೆ ಸಂತಾನೋತ್ಪತ್ತಿ ಆರೋಗ್ಯದ ಕುರಿತು ವಿಶೇಷ ಶಿಕ್ಷಣ ನೀಡಲಾಗುವುದು. ವಿಶೇಷವಾಗಿ, ಬುಡಕಟ್ಟು ಸಮುದಾಯಗಳು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಬಾಲ್ಯ ವಿವಾಹದ ಸಮಸ್ಯೆಗಳನ್ನು ಪರಿಹರಿಸಲು ಬುಡಕಟ್ಟು ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕಾನೂನು ಬಲವರ್ಧನೆ :

‘ಬಾಲ್ಯ ವಿವಾಹ (ಕರ್ನಾಟಕ) ನಿಷೇಧ ನಿಯಮಗಳು, 2022’ ರ ಕರಡನ್ನು ಸಂಸದೀಯ ವ್ಯವಹಾರಗಳು ಮತ್ತು ಕಾನೂನು ರಚನೆ ಇಲಾಖೆಯು ಪರೀಕ್ಷಿಸುತ್ತಿದ್ದು, ಅಗತ್ಯ ಪರಿಷ್ಕರಣೆಗಳೊಂದಿಗೆ ಶೀಘ್ರದಲ್ಲೇ ಅಂತಿಮ ಅನುಮೋದನೆ ಪಡೆದು ಜಾರಿಗೆ ತರಲಾಗುವುದು.

ಬಾಲ್ಯ ವಿವಾಹ ಮುಕ್ತ ರಾಜ್ಯವನ್ನಾಗಿ ಮಾಡುವುದು ಕೇವಲ ಒಂದು ಇಲಾಖೆ ಅಥವಾ ಸರ್ಕಾರದ ಜವಾಬ್ದಾರಿಯಲ್ಲ. ಅದು ನಮ್ಮ ಸಮಾಜದ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಪರಮ ಕರ್ತವ್ಯವಾಗಿದೆ. ಅಪ್ರಾಪ್ತ ವಯಸ್ಸಿನಲ್ಲಿ ತಾಯ್ತನದ ಭಾರ ಹೊರುವ ಹೆಣ್ಣುಮಕ್ಕಳು ತೀವ್ರ ಅಪೌಷ್ಟಿಕತೆ ಮತ್ತು ರಕ್ತಹೀನತೆಗೆ ಒಳಗಾಗುತ್ತಾರೆ, ಇದು ಇಡೀ ಮುಂದಿನ ಪೀಳಿಗೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೆಣ್ಣುಮಕ್ಕಳಿಗೆ ಮದುವೆಯ ನೊಗ ಕಟ್ಟುವ ಬದಲು ಅವರ ಕೈಗೆ ಪುಸ್ತಕ ಮತ್ತು ಉದ್ಯೋಗದ ಶಕ್ತಿ ತುಂಬುವುದು ಇಂದಿನ ತುರ್ತು ಅಗತ್ಯವಾಗಿದೆ. ನಮ್ಮ ಸುತ್ತಮುತ್ತ ಇಂತಹ ಘಟನೆಗಳು ಅಥವಾ ಪ್ರಯತ್ನಗಳು ಕಂಡುಬಂದರೆ ತಕ್ಷಣ ಧ್ವನಿ ಎತ್ತುವ ಮೂಲಕ ಮತ್ತು ಸಹಾಯವಾಣಿಗೆ ಕರೆ ಮಾಡುವ ಮೂಲಕ ಮುಗ್ಧ ಮಕ್ಕಳ ಭವಿಷ್ಯವನ್ನು ಕತ್ತಲಿಗೆ ತಳ್ಳುವುದನ್ನು ತಪ್ಪಿಸಲು ಸಾರ್ವಜನಿಕರು ಕೈಜೋಡಿಸಬೇಕಿದೆ.

State Election Commission ರಾಜ್ಯ ಚುನಾವಣಾ ಆಯೋಗದ ನಿರ್ದೇಶನ: ಜೂನ್ 24 ರಂದು ಮತಗಟ್ಟೆ ಏಜೆಂಟರುಗಳಿಗೆ ಕಾರ್ಯಾಗಾರ

0

State Election Commission ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದರ ಅನ್ವಯ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟರುಗಳಿಗೆ ಕಾರ್ಯಾಗಾರವೊಂದನ್ನು ಆಯೋಜಿಸಲಾಗಿದೆ.
113-ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮಾನ್ಯತೆ ಪಡೆದ ಎಲ್ಲಾ ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟರುಗಳಿಗಾಗಿ ದಿನಾಂಕ 24-06-2026ರ ಬುಧವಾರ ಬೆಳಿಗ್ಗೆ 11:00 ಗಂಟೆಗೆ ನಗರದ ಕುವೆಂಪು ರಂಗ ಮಂದಿರದಲ್ಲಿ ಈ ಕಾರ್ಯಾಗಾರ ನಡೆಯಲಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ 113-ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಲಿದ್ದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಕುರಿತು ವಿವರವಾದ ಮಾಹಿತಿ ನೀಡಲಾಗುತ್ತದೆ.
ಸಂಬಂಧಪಟ್ಟ ಎಲ್ಲಾ ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟರುಗಳು ಈ ಕಾರ್ಯಾಗಾರಕ್ಕೆ ತಪ್ಪದೇ ಹಾಜರಾಗಬೇಕಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಉಪಆಯುಕ್ತರು (ಆಡಳಿತ) ಪ್ರಕಟಣೆಯಲ್ಲಿ ಕೋರಿದ್ದಾರೆ.