Tuesday, August 4, 2026
Tuesday, August 4, 2026
Home Blog Page 50

ತಾಂತ್ರಿಕ ಕಾರಣ ಅಥವಾ ತಪ್ಪು ಮಾಹಿತಿಯಿಂದ ಬಿಪಿಎಲ್ ಕಾರ್ಡುಗಳು ಎಪಿಎಲ್ ಆಗಿ ಬದಲಾಗಿದ್ದರೆ ಸರಿಪಡಿಸಲು 45 ದಿನಗಳ ಕಾಲಾವಕಾಶ ಇದೆ- ಹೆಚ್.ಎಂ.ಮಧು

0

ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯ ಯೋಜನೆ ಕುರಿತು ಫಲಾನುಭವಿಗಳು ಯಾವುದೇ ರೀತಿಯ ಗೊಂದಲಕ್ಕೀಡಾಗಬಾರದು. ಸದ್ಯಕ್ಕೆ ಈ ಯೋಜನೆಗಳು ಯಥಾಸ್ಥಿತಿಯಲ್ಲಿ ಮುಂದುವರೆಯುತ್ತಿವೆ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರಾದ ಹೆಚ್. ಎಂ. ಮಧು ತಿಳಿಸಿದರು.
ಶಿವಮೊಗ್ಗ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಐದು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯ ಯೋಜನೆಯ ಕುರಿತು ಸೋಷಿಯಲ್ ಮೀಡಿಯಾ ಮತ್ತು ಕೆಲವರು ಬದಲಾವಣೆ ಕುರಿತು ಮಾಹಿತಿ ಹರಿಬಿಡುತ್ತಿದ್ದಾರೆ. ಸರ್ಕಾರದಿಂದ ಇನ್ನೂ ಯಾವುದೇ ರೀತಿಯ ಆದೇಶಗಳು ಬಂದಿಲ್ಲ. ಆದೇಶ ಬರುವವರೆಗೆ ಯೋಜನೆಗಳು ಯಥಾಸ್ಥಿತಿಯಲ್ಲಿ ಮುಂದುವರೆಯುತ್ತವೆ. ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದರು.
ಗೃಹಲಕ್ಷ್ಮೀ ಯೋಜನೆಯಡಿ ತಾಂತ್ರಿಕ ಕಾರಣಗಳಿಂದ ಅಥವಾ ಬ್ಯಾಂಕ್ ಖಾತೆ ಜೋಡಣೆ ಸಮಸ್ಯೆಯಿಂದ ಬಾಕಿ ಉಳಿದಿರುವ ಮಹಿಳೆಯರ ಖಾತೆಗಳಿಗೆ ಶೀಘ್ರವಾಗಿ ಹಣ ಜಮಾ ಆಗಲು ಕ್ರಮ ಕೈಗೊಳ್ಳಬೇಕು ಎಂದ ಅವರು ಬಾಕಿ ಇರುವ ಅರ್ಜಿಗಳನ್ನು ತಕ್ಷಣವೇ ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಾಲ್ಲೂಕಿನಲ್ಲಿ ಈವರೆಗೆ 108232 ಫಲಾನುಭವಿಗಳು ನೋಂದಣಿಯಾಗಿದ್ದು, 42 ಫಲಾನುಭವಿಗಳ ಎನ್‌ಪಿಸಿಐ ಬಾಕಿ ಇದೆ. 2044 ಐಟಿ/ಜಿಎಸ್‌ಜಿ ಫಲಾನುಭವಿಗಳಿದ್ದು 304 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮರಣ ಹೊಂದಿರುವ ಬಗ್ಗೆ 332 ಅರ್ಜಿ ಸ್ವೀಕರಿಸಲಾಗಿದೆ ಎಂದರು.
ಪಡಿತರ ಚೀಟಿ ಪರಿಷ್ಕರಣೆ ವೇಳೆ ಬಿಪಿಎಲ್ ಕಾರ್ಡ್ ರದ್ದಾಗಿ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆಯಾಗಿರುವ 4150 ಕಾರ್ಡ್ಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗಿದೆ. ಅರ್ಹರಾಗಿದ್ದರೂ ಕೆಲವು ತಾಂತ್ರಿಕ ಕಾರಣಗಳಿಂದ ಅಥವಾ ತಪ್ಪು ಮಾಹಿತಿಯಿಂದ ಬಿಪಿಎಲ್ ಕಾರ್ಡ್ಗಳು ಎಪಿಲ್ ಕಾರ್ಡುಗಳಾಗಿ ಬದಲಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಸರ್ಕಾರ 45 ದಿನಗಳ ಕಾಲಾವಕಾಶ ನೀಡಿದೆ. ಆದರೆ ಈ ಗ್ರೇಸ್ ಅವಧಿಯನ್ನು 90 ದಿನಗಳ ವರೆಗೆ ವಿಸ್ತರಿಸಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ತಾಲ್ಲೂಕಿನಲ್ಲಿ ಶೂನ್ಯ ವಿದ್ಯುತ್ ಬಿಲ್ ಪಡೆಯುತ್ತಿರುವ ಗ್ರಾಹಕರ ವಿವರಗಳನ್ನು ಪಡೆದ ಅಧ್ಯಕ್ಷರು, ತಾಂತ್ರಿಕ ದೋಷಗಳಿಂದ ವಂಚಿತರಾದ ಗ್ರಾಹಕರ ಸಮಸ್ಯೆಗಳನ್ನು ಮೆಸ್ಕಾಂ ಅಧಿಕಾರಿಗಳು ಸ್ಥಳದಲ್ಲೇ ಪರಿಹರಿಸಬೇಕು. ಹಾಗೂ ಕಮರ್ಷಿಯಲ್‌ಗಾಗಿ ಯಾರಾದರೂ ಈ ಯೋಜನೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದರೆ ರದ್ದುಪಡಿಸಬೇಕೆಂದರು.
ಯುವನಿಧಿ ಮತ್ತು ಶಕ್ತಿ ಯೋಜನೆ: ಪದವಿ ಮುಗಿಸಿ ನಿರುದ್ಯೋಗಿಗಳಾಗಿರುವ ಯುವಕ-ಯುವತಿಯರಿಗೆ ಭತ್ಯೆ ತಲುಪುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು ತಾಲ್ಲೂಕಿನಲ್ಲಿ ಈವರೆಗೆ 34088 ಫಲಾನುಭವಿಗಳಿಗೆ ರೂ.10,36,86000 ಹಣವನ್ನು ಜಮಾ ಮಾಡಲಾಗಿದೆ ಎಂದರು.
ತಾಲ್ಲೂಕಿನಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣದ ಯಶಸ್ವಿ ಅನುಷ್ಠಾನದ ಕುರಿತು ಸಾರಿಗೆ ಸಂಸ್ಥೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಶಾಲಾ-ಕಾಲೇಜು ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಬಗ್ಗೆ ಹೆಚ್ಚಿನ ಪ್ರಚಾರ ನೀಡುವಂತೆ ತಿಳಿಸಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಆರ್ ಶಿವಣ್ಣ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ಸುತ್ತೋಲೆಗಳು ಬಂದಲ್ಲಿ ತಮ್ಮ ಗಮನಕ್ಕೆ ತರಬೇಕು. ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಗೊಂದಲಕ್ಕೀಡಾಗದAತೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ತಾಲ್ಲೂಕು ಗ್ಯಾರಂಟಿ ಸಮಿತಿ ಸದಸ್ಯರು, ತಾಲ್ಲೂಕು ಇಓ ಪರಮೇಶ್ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಜಿಲ್ಲೆಯ ರೈತರು ಮತ್ತು ಸಾರ್ವಜನಿಕರ ಹಿತರಕ್ಷಣೆಯಲ್ಲಿ ಯಾವುದೇ ವಿಳಂಬ ಧೋರಣೆ ಸಹಿಸುವುದಿಲ್ಲ – ಬಿ.ವೈ.ರಾಘವೇಂದ್ರ

0

ಶಿವಮೊಗ್ಗ ಜಿಲ್ಲೆಯಾದ್ಯಂತ ಅಕಾಲಿಕ ಮಳೆಯಿಂದ ಉಂಟಾಗಿರುವ ಹಾನಿ ಹಾಗೂ ರೈತರ ಪ್ರಮುಖ ಸಮಸ್ಯೆಗಳ ಕುರಿತು ಇಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉನ್ನತಾಧಿಕಾರಿಗಳ ತುರ್ತು ಪರಾಮರ್ಶನಾ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಬಿ.ವೈ. ರಾಘವೇಂದ್ರ ಅವರು, ಸಂಕಷ್ಟದಲ್ಲಿರುವ ರೈತರಿಗೆ ತ್ವರಿತ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಯಾವುದೇ ಸಮಸ್ಯೆಗೆ ವಿಳಂಬವಿಲ್ಲದೆ ಸ್ಪಂದಿಸಬೇಕೆಂದು ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಸಭೆಯಲ್ಲಿ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಅಡಿಕೆ ಬೆಳೆಗಾರರ ಸಮಸ್ಯೆ ಪ್ರಮುಖವಾಗಿ ಚರ್ಚೆಗೆ ಬಂದಿತು. ಶಿವಮೊಗ್ಗ ಗ್ರಾಮಾಂತರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ನೆಲಕಚ್ಚಿರುವ ಅಡಿಕೆ ಮರಗಳಿಗೆ ಪರಿಹಾರ ಒದಗಿಸುವ ಕುರಿತು ಸರ್ಕಾರಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವನೆಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಯಿತು.

ಇದೇ ವೇಳೆ, 2024-25ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (R-WBCIS) ಅಡಿಯಲ್ಲಿ ರೈತರಿಗೆ ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಲಾಯಿತು. ಅರ್ಹ ರೈತರಿಗೆ ನ್ಯಾಯ ದೊರಕುವಂತೆ ತ್ವರಿತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಯಿತು.

ಜಿಲ್ಲೆಯ ಪ್ರಮುಖ ನದಿಗಳ ಹರಿವು ಹಾಗೂ ಜಲಾಶಯಗಳ ನೀರಿನ ಸಂಗ್ರಹದ ಸ್ಥಿತಿಗತಿಯನ್ನೂ ಸಭೆಯಲ್ಲಿ ಪರಿಶೀಲಿಸಲಾಯಿತು. ಲಿಫ್ಟ್ ಇರಿಗೇಶನ್ ಪಂಪ್‌ಗಳು, ಮೋಟಾರುಗಳ ಕಾರ್ಯಕ್ಷಮತೆ ಮತ್ತು ವಿದ್ಯುತ್ ಬಿಲ್ ನಿರ್ವಹಣೆ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಹಾಳಾಗಿರುವ ಮಳೆಮಾಪನ ಕೇಂದ್ರಗಳನ್ನು ತಕ್ಷಣ ದುರಸ್ತಿಗೊಳಿಸಿ, ನಿಖರ ಹವಾಮಾನ ಮಾಹಿತಿ ದೊರಕುವಂತೆ ಕ್ರಮ ವಹಿಸಲು ಸಭೆಯಲ್ಲಿ ಆದೇಶಿಸಲಾಯಿತು.

ಮುಂಬರುವ ದಿನಗಳಲ್ಲಿ ರೈತರಿಗೆ ಯಾವುದೇ ಕೊರತೆ ಉಂಟಾಗದಂತೆ ಮೇವು, ರಾಸಾಯನಿಕ ಗೊಬ್ಬರ ಸೇರಿದಂತೆ ಅಗತ್ಯ ಕೃಷಿ ಪರಿಕರಗಳ ದಾಸ್ತಾನು, ವಿತರಣೆ ಹಾಗೂ ಉಳಿಕೆ ಪ್ರಮಾಣದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರ ಹಿತಾಸಕ್ತಿಗೆ ಯಾವುದೇ ರೀತಿಯ ವಿಳಂಬ ಧೋರಣೆಯನ್ನು ಸಹಿಸುವುದಿಲ್ಲ ಎಂದು ಬಿ.ವೈ. ರಾಘವೇಂದ್ರ ಸ್ಪಷ್ಟಪಡಿಸಿದರು. ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಬಾಕಿ ಇರುವ ಪ್ರಸ್ತಾವನೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವಂತೆ ಅವರು ಸೂಚನೆ ನೀಡಿದರು.

ಶಿವಮೊಗ್ಗ ತಾಲ್ಲೂಕು ಕಛೇರಿಗೆ ಲೋಕಾಯುಕ್ತ ದಿಢೀರ್ ದಾಳಿ. ದಾಖಲೆಗಳ ಪರಿಶೀಲನೆ

0

ಶಿವಮೊಗ್ಗ ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ದಿಢೀರ್ ದಾಳಿ ನಡೆಸಿದ್ದಾರೆ. ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ದಾಖಲೆ ಮಾಡಿಕೊಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಕಚೇರಿಯ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಶಿವಮೊಗ್ಗ ತಾಲೂಕು ತಹಶೀಲ್ದಾರ್ ಕಚೇರಿ ಹಾಗೂ ಕಂದಾಯ ಇಲಾಖೆಯ ಆಡಳಿತ ಶಾಖೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ 15 ಮಂದಿ ಲೋಕಾಯುಕ್ತ ಸಿಬ್ಬಂದಿಗಳ ತಂಡ ಭಾಗವಹಿಸಿದೆ.

ಗೋವಿಂದಪುರ ಪ್ರದೇಶದಲ್ಲಿರುವ ಸುಮಾರು 10 ಎಕರೆ ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ಅಕ್ರಮವಾಗಿ ದಾಖಲೆ ಮಾಡಿಕೊಟ್ಟಿರುವ ಆರೋಪದ ಹಿನ್ನೆಲೆ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ದಾಳಿ ವೇಳೆ ತಹಶೀಲ್ದಾರ್ ಕಚೇರಿ ಮತ್ತು ಕಂದಾಯ ಇಲಾಖೆಯ ವಿವಿಧ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದು, ತನಿಖೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇದೇ ವೇಳೆ, ಕೆಲ ನಕಲಿ ದಾಖಲೆಗಳು (ಫೇಕ್ ಡಾಕ್ಯುಮೆಂಟ್‌ಗಳು) ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಅವುಗಳ ಕುರಿತು ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿತ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸುವ ಕಾರ್ಯವೂ ಮುಂದುವರಿದಿದೆ.

ರಾಜ್ಯ ಬಿಜೆಪಿ ಅಧ್ಯಕ್ಷರ ಬಗ್ಗೆ ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಮಾಧ್ಯಮ ಹೇಳಿಕೆ ಅಪಹಾಸ್ಯಕರ- ನಿರಂಜನ್ ಕುಪ್ಪಗಡ್ಡೆ

0

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಪಕ್ಷ ಸಂಘಟನೆ ವಿರುದ್ಧ ಮಾಜಿ ಸಚಿವ ಎಸ್. ಕುಮಾರ್ ಬಂಗಾರಪ್ಪ ಅವರ ಅಪಹಾಸ್ಯಕರ ಮಾಧ್ಯಮ ಹೇಳಿಕೆ ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ನಿರಂಜನ್ ಕುಪ್ಪಗಡ್ಡೆ ಹೇಳಿದರು.

ಸೊರಬ ಪಟ್ಟಣದ ಹೊಸಪೇಟೆ ಬಡಾವಣೆಯ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಸದೃಢವಾಗಿ ಕಟ್ಟಿ ಬೆಳೆಸಲು ಹಾಗೂ ಯುವಕರನ್ನು ಪಕ್ಷಕ್ಕೆ ಸೆಳೆಯಲು ವಿಶೇಷ ಆಸಕ್ತಿ ಹೊಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬಗ್ಗೆ ಅಪಹಾಸ್ಯ ಮಾಡುವುದನ್ನು ಕುಮಾರ್ ಕೈಬಿಡಬೇಕು. ಕುಮಾರ್ ಶಾಸಕರಾಗಿದ್ದ ಅವಧಿಯಲ್ಲಿ ಪಕ್ಷದ ಸಂಘಟನೆಗೆ ಕೊಡುಗೆ ಏನು?. ಕಾರ್ಯಕರ್ತರನ್ನು ನಿರ್ಲಕ್ಷಿಸಿ ದ್ವೇಷ ಮಾಡಿದ್ದೆ ಅವರ ಸಾಧನೆಯಾಗಿದೆ ಎಂದರು.

ಒಂದು ದಶಕಗಳ ಕಾಲ ರಾಜಕೀಯ ವನವಾಸದಲ್ಲಿದ್ದ ಕುಮಾರ್ ಬಂಗಾರಪ್ಪ ಅವರನ್ನು 2018ರ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷಕ್ಕೆ ಆಹ್ವಾನಿಸಿ ತಮ್ಮ ಮನೆ‌, ಮಠ ಕೆಲಸ ಬಿಟ್ಟು ಒಗ್ಗಟ್ಟಿನಿಂದ ಗೆಲ್ಲಿಸಿದ್ದರು. ಕೃತಜ್ಞತಾ ಭಾವವಿಲ್ಲದ ಕುಮಾರ್ ಬಂಗಾರಪ್ಪ, ಗೆದ್ದ ನಂತರ ಬಿಜೆಪಿ ಮುಖಂಡರ ಮೇಲೆ ವ್ಯೆಯಕ್ತಿಕ ದ್ವೇಷ ಸಾಧಿಸಿ ದೂರವಿಟ್ಟರು. ನಾಡು ಕಂಡ ಜನಪ್ರಿಯ ಮುಖ್ಯ ಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರನ್ನು ತಮ್ಮ ಹೆಸರಿನ ಮುಂದೆ ಹೊಂದಿರುವ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರು ತಮ್ಮ ಮೂಲ ನಾಮದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ಸಾಗರ ರಸ್ತೆಯಲ್ಲಿ ಮಹಿಳೆಯೋರ್ವರ ಮೇಲೆ ದೌರ್ಜನ್ಯ ಎಸಗಿದ್ದು, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಮೇಲೆ ದೂರು ದಾಖಲಿಸಿದ್ದು, ಆನವಟ್ಟಿಯಲ್ಲಿ ಮೂಡಿ-ಮೂಗೂರು ಏತ ನೀರಾವರಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಆಯೋಜನೆ ಮಾಡಿದ್ದ ಊಟವನ್ನು ಸಂಪೂರ್ಣ ಹಾಳು ಮಾಡಿದ್ದು ಬಿಟ್ಟರೇ ಪಕ್ಷ ಸಂಘಟನೆಯ ಬಗ್ಗೆ ಯಾವುದೇ ಕೊಡುಗೆ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಮಾತಾಡುವ ನೈತಿಕತೆಯೂ ಇಲ್ಲ ಎಂದು ಖಡಖ್ ಆಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗಜಾನನರಾವ್ ಉಳವಿ, ಗುರುಪ್ರಸನ್ನಗೌಡ ಬಾಸೂರು, ಎ.ಎಲ್.ಅರವಿಂದ್, ಸುರೇಶ್ ಎಸ್ಎನ್ ಕೊಪ್ಪ, ಹರೀಶ್, ಬೆನವಪ್ಪ, ರಾಮಚಂದ್ರ, ಬಸವರಾಜ್,‌ ಅರುಣಕುಮಾರ್ ಪುಟ್ಟನಹಳ್ಳಿ ಇದ್ದರು.

ಶಿವಮೊಗ್ಗ ಜಿಲ್ಲೆಯ ಕುಸ್ತಿ ಕ್ರೀಡೆಗೆ ಪ್ರೋತ್ಸಾಹನ ಮತ್ತು ಮಿಳಘಟ್ಟ ಬಡ ನಿವಾಸಿಗಳಿಗೆ ಹಕ್ಕುಪತ್ರ ಸಮಸ್ಯೆ ಪರಿಹರಿಸಲು ಮನವಿ

0

ಶಿವಮೊಗ್ಗ ಜಿಲ್ಲೆಯ ಸಾಂಪ್ರದಾಯಿಕ ಕುಸ್ತಿ ಕ್ರೀಡೆಯ ಬೆಳವಣಿಗೆ ಹಾಗೂ ಮಿಳಘಟ್ಟ ಗ್ರಾಮದ ಬಡ ನಿವಾಸಿಗಳ ಹಕ್ಕುಪತ್ರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರು ಭೇಟಿಯ ವೇಳೆ ಉಪಮುಖ್ಯಮಂತ್ರಿಗಳನ್ನು ಭೇಟಿಯಾದ ಶಾಸಕ ಚನ್ನಬಸಪ್ಪ ಅವರು ಶಿವಮೊಗ್ಗ ನಗರ ಮತ್ತು ತಾಲೂಕಿಗೆ ಸಂಬಂಧಿಸಿದ ಎರಡು ಪ್ರಮುಖ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿ ಜ್ಞಾಪನಾ ಪತ್ರ ಸಲ್ಲಿಸಿದರು.

ಶಿವಮೊಗ್ಗ ಜಿಲ್ಲೆಯು ಕುಸ್ತಿ ಕ್ರೀಡೆಗೆ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಇಲ್ಲಿನ ಅನೇಕ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಸ್ತಿ ಕ್ರೀಡಾ ಶಾಲೆಯನ್ನು ಮುಂದುವರಿಸಲು ಅಗತ್ಯ ಅನುದಾನ ಹಾಗೂ ಮೂಲಸೌಕರ್ಯ ಒದಗಿಸಬೇಕೆಂದು ಶಾಸಕರು ಮನವಿ ಮಾಡಿದರು.

ಇದೇ ವೇಳೆ ಶಿವಮೊಗ್ಗ ತಾಲೂಕಿನ ಕಸಬಾ-01 ಹೋಬಳಿಯ ಮಿಳಘಟ್ಟ ಗ್ರಾಮದ ಸರ್ವೆ ನಂ. 92ರ ಸರ್ಕಾರಿ ಕರಾಬು ಗುಂಡು ತೋಪು ಜಾಗದಲ್ಲಿ ಹಲವು ದಶಕಗಳಿಂದ ವಾಸಿಸುತ್ತಿರುವ ನೂರಾರು ಬಡ ಕುಟುಂಬಗಳಿಗೆ ಇನ್ನೂ ಹಕ್ಕುಪತ್ರ ದೊರೆತಿಲ್ಲ ಎಂಬ ವಿಷಯವನ್ನು ಸಚಿವರ ಗಮನಕ್ಕೆ ತಂದರು. ಕಂದಾಯ ಇಲಾಖೆಯ ನಿಯಮಾವಳಿಗಳಡಿ ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಅರ್ಹ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಶಿವಮೊಗ್ಗ ಎನ್.ಟಿ‌.ರಸ್ತೆಯಲ್ಲಿ ಸುಗಮ ವಾಹನ ಸಂಚಾರಕ್ಕೆ ಅಡಚಣೆಯಿದ್ದ ಅಂಗಡಿಗಳ ತೆರವು

0

ಶಿವಮೊಗ್ಗ ನಗರದ ಎನ್.ಟಿ. ರಸ್ತೆಯಲ್ಲಿ ಎರಡು ‌ಕಡೆ ಪಾದಚಾರಿ ಮಾರ್ಗದಲ್ಲಿ, ಪಾದಚಾರಿಗಳ ಸಂಚಾರಕ್ಕೆ ಅಡಚಣೆ ಉಂಟುಮಾಡುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಣ್ಣಿನ ಅಂಗಡಿಗಳು ಮತ್ತು ತಿಂಡಿ ಅಂಗಡಿಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳ ಸಹಕಾರದೊಂದಿಗೆ ವಿಶೇಷ ಕಾರ್ಯಚರಣೆ ನೆಡೆಸಿ ಸಮೀಪದ ಕೃಷಿ ಇಲಾಖೆಯ ಪಕ್ಕದ ಕನ್ಸರ್ ವೆನ್ಸಿಯ ಜಾಗಕ್ಕೆ ಸ್ಥಳಾಂತರಿಸಲಾಯಿತು. ಇದರಿಂದ ಸದರಿ ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕರು ಸುರಕ್ಷಿತವಾಗಿ ಹಾಗೂ ಸುಗಮವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಜಿಲ್ಲಾ ಸಂಚಾರಿ ಪೊಲೀಸ್ ಇಲಾಖೆಯ ಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಆಸ್ತಿ ಹಂಚಿಕೆ ವೈಷಮ್ಯ: ವೃದ್ಧೆಯ ಕೊಲೆ ಮಾಡಿದ ತಪ್ಪಿತಸ್ಥರಿಗೆ ಶಿಕ್ಷೆ ಘೋಷಿಸಿದ ನ್ಯಾಯಾಲಯ

0

ಆಸ್ತಿ ಹಂಚಿಕೆ ವಿವಾದ ಹಾಗೂ ವೈಷಮ್ಯದ ಹಿನ್ನೆಲೆ ವೃದ್ಧೆಯೊಬ್ಬರನ್ನು ಕುತ್ತಿಗೆ ಸೀಳಿ ಕೊಲೆ ಮಾಡಿದ್ದ ಆರೋಪಿಗಳಿಗೆ ಶಿವಮೊಗ್ಗದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 30,000 ದಂಡ ವಿಧಿಸಿ ತೀರ್ಪು ನೀಡಿದೆ.

ಶಿವಮೊಗ್ಗ ತಾಲೂಕಿನ ಸುತ್ತುಕೋಟೆ ಗ್ರಾಮದ ಹನುಮಂತ್ ನಾಯ್ಕ್ (48) ಶಿಕ್ಷೆಗೆ ಒಳಗಾದ ಆರೋಪಿಗಳು
ಆರೋಪಿ ಹನುಮಂತ ನಾಯ್ಕ್ ತನ್ನ ಮನೆಯ ಭಾಗವೊಂದರಲ್ಲಿ ಜ್ಯೋತಿ ಬಾಯಿ (35) ಎಂಬುವರು ಉಳಿದುಕೊಳ್ಳಲು ನೀಡಿದ್ದ. ಇತ್ತ ಆಸ್ತಿ ಹಂಚಿಕೆ ವಿಚಾರದಲ್ಲಿ ರತ್ನಾಬಾಯಿ (60) ಎಂಬುವರು ತಮಗೆ ಮೋಸ ಮಾಡಿದ್ದಾರೆ ಹಾಗೂ ಊರಿನವರ ಮುಂದೆ ನಿಂದಿಸುತ್ತಿದ್ದಾರೆ ಎಂದು ಜ್ಯೋತಿ ಬಾಯಿ ಮತ್ತು ಹನುಮಂತ್ ನಾಯ್ಕ್ ವೈಷಮ್ಯ ಹೊಂದಿದ್ದರು.
2023ರ ಮಾರ್ಚ್ 15ರ ರಾತ್ರಿ ರತ್ನಾಬಾಯಿ ಅವರು ಹನುಮಂತ ನಾಯ್ಕ್ ಮನೆಯ ಮುಂದಿನ ಕಟ್ಟೆಯ ಮೇಲೆ ಮಲಗಿದ್ದರು.

ಆಗ ಆರೋಪಿ ಹನುಮಂತ ನಾಯ್ಕ್‌ ಚಾಕುವಿನಿಂದ ಅವರ ಕುತ್ತಿಗೆ ಕೋಯ್ದು ಕೊಲೆ ಮಾಡಿದ್ದ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಇನ್‌ಸ್ಪೆಕ್ಟರ್ ತಿಪ್ಪೆಸ್ವಾಮಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಅಪರಾಧ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಅಭಯ್ ಧನಪಾಲ್ ಚೌಗಲ ಅವರು ಜೂನ್ 24ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್. ವಾದ ಮಂಡಿಸಿದ್ದರು.

ಪ.ಜಾ./ ಪ.ಪಂಗಡಗಳ ಅಲೆಮಾರಿ ಸಮುದಾಯದ ವಸತಿ ರಹಿತರಿಗೆ ಗೃಹ ನಿರ್ಮಾಣಕ್ಕೆ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ

0

ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯದ ವಸತಿ ರಹಿತರಿಗೆ ಗೃಹ ನಿರ್ಮಾಣಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ಜು.04 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಸಹಾಯಕ ನಿರ್ದೇಶಕರು ಕಚೇರಿಯನ್ನು ಸಂಪರ್ಕಿಸುವುದು.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಅಧಿಸೂಚನೆ

0

ಶಿವಮೊಗ್ಗ ಜಿಲ್ಲೆಯ ರೈತ ಬಾಂಧವರ ಹಿತದೃಷ್ಟಿಯಿಂದ 2026-27ನೇ ಸಾಲಿನ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ’ಯನ್ನು ಅನುಷ್ಠಾನಗೊಳಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಈ ಮುಂಗಾರು ಹಂಗಾಮಿನಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳುವಂತೆ ಶಿವಮೊಗ್ಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಕೋರಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಆಯ್ದ ಹೋಬಳಿ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೆಳಗಿನ ಬೆಳೆಗಳನ್ನು ವಿಮೆಗೆ ಒಳಪಡಿಸಲಾಗಿದೆ:
ಮುಸುಕಿನ ಜೋಳ (ನೀರಾವರಿ/ಮಳೆ ಆಶ್ರಿತ): ನೋಂದಣಿಗೆ ಕೊನೆಯ ದಿನಾಂಕ 31.07.2026
ಭತ್ತ (ನೀರಾವರಿ/ಮಳೆ ಆಶ್ರಿತ): ನೋಂದಣಿಗೆ ಕೊನೆಯ ದಿನಾಂಕ 14.08.2026
ರಾಗಿ (ಮಳೆ ಆಶ್ರಿತ): ನೋಂದಣಿಗೆ ಕೊನೆಯ ದಿನಾಂಕ 14.08.2026.
ರೈತರು ಬಿತ್ತನೆ ಅಥವಾ ನಾಟಿ ಮಾಡುವುದಕ್ಕಿಂತ ಮುಂಚಿತವಾಗಿಯೂ ಸಹ ವಿಮೆ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಬೆಳೆ ಸಾಲ ಪಡೆದ ರೈತರು: ಬ್ಯಾಂಕ್‌ಗಳ ಮೂಲಕ ಸಾಲ ಪಡೆಯುವ ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದರೆ, ವಿಮೆ ನೋಂದಣಿಯ ಅಂತಿಮ ದಿನಾಂಕಕ್ಕೆ 7 ದಿನ ಮುಂಚಿತವಾಗಿ ಲಿಖಿತ ಮುಚ್ಚಳಿಕೆ ಪತ್ರವನ್ನು ನೀಡುವ ಮೂಲಕ ಯೋಜನೆಯಿಂದ ಹೊರಗುಳಿಯಬಹುದು.

ಬೆಳೆ ಸಾಲ ಪಡೆಯದ ರೈತರು: ಸಾಲ ಪಡೆಯದ ರೈತರು ತಮ್ಮ ಪಹಣಿ ಮತ್ತು ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್, ಆರ್ಥಿಕ ಸಂಸ್ಥೆಗಳು ಅಥವಾ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ (ಸಿಎಸ್ ಸಿ) ನೋಂದಾಯಿಸಿಕೊಳ್ಳಬಹುದು.
ಜಿಲ್ಲೆಯಲ್ಲಿ ಈ ಯೋಜನೆಯನ್ನು ಸರ್ಕಾರದಿಂದ ನಿಯೋಜಿತವಾದ ಅಗ್ರಿಕಲ್ಚರ್ ಇನ್‌ಶ್ಯೂರೆನ್ಸ್ ಕಂಪನಿಯ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ರೈತರು ಹೆಚ್ಚಿನ ವಿವರಗಳಿಗಾಗಿ ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರ ಇಲಾಖೆ ಅಥವಾ ಹತ್ತಿರದ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಹಾಗೂ ಸರ್ಕಾರದ ಅಧಿಕೃತ ಸಂರಕ್ಷಣೆ ವೆಬ್‌ಸೈಟ್ samrkshane.karnataka.gov.in ಮೂಲಕವೂ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಿವಮೊಗ್ಗ ಜನತೆಯ ಪರವಾಗಿ ಸೀಎಂ ಡಿ.ಕೆ ಶಿವಕುಮಾರ್ ಗೆ, ಸಂಸದ, ಶಾಸಕರಾದಿಯಾಗಿ ಅಭಿನಂದನೆ ಸಲ್ಲಿಕೆ

0

ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ವಕೀಲರ ನಿಯೋಗದವರು ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಇಂದು ಭೇಟಿಯಾಗಿ, ಅಭಿನಂದಿಸಿ, ಸಮಾಲೋಚನೆ ನಡೆಸಿದರು.

ಶಾಸಕರಾದ ಚನ್ನಬಸಪ್ಪ, ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಧನಂಜಯ ಸರ್ಜಿ, ಅರುಣ್ ಶಂಕರ್ ಮೂರ್ತಿ, ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಸ್ವಾಮಿ, ಬಸಪ್ಪ ಗೌಡ ಮತ್ತಿತರರು ನಿಯೋಗದ ಪರವಾಗಿ ಹಾಜರಿದ್ದರು.