Tuesday, August 4, 2026
Tuesday, August 4, 2026
Home Blog Page 49

ಆದ್ಯತಾ ವಲಯಗಳಿಗೆನಿಗದಿಪಡಿಸಿದ ಸಾಲಸೌಲಭ್ಯದ ಗುರಿ ತಲುಪಲು ಬ್ಯಾಂಕುಗಳು ಆದ್ಯತೆ ನೀಡಬೇಕು : ಎನ್.ಹೇಮಂತ್

0

ಖಾಸಗಿ ಬ್ಯಾಂಕುಗಳು ಆದ್ಯತಾ ವಲಯಗಳಾದ ಕೃಷಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿ ನಿಗದಿತ ಗುರಿ ಸಾಧಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್.ಎನ್ ಸೂಚನೆ ನೀಡಿದರು.

ಜಿ.ಪಂ. ಸಭಾಂಗಧಲ್ಲಿ ಏರ್ಪಡಿಸಲಾಗಿದ್ದ ಡಿಸಿಸಿ-ಡಿಎಲ್ ಆರ್ ಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಹಣಕಾಸು ವರ್ಷದ ಆದ್ಯತಾ ವಲಯಗಳಾದ ಕೃಷಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್ ಎಂಇ) ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ನಿಗದಿಪಡಿಸಿದ ಸಾಲದ ಗುರಿಯನ್ನು ತಲುಪಲು ಬ್ಯಾಂಕುಗಳು ಆದ್ಯತೆ ನೀಡಬೇಕು.

ಆದರೆ ಖಾಸಗಿ ಬ್ಯಾಂಕುಗಳು ಆದ್ಯತಾ ವಲಯಕ್ಕೆ ಪ್ರಾಮುಖ್ಯತೆ ನೀಡಿಲ್ಲ. ಪ್ರಗತಿಯೇ ಇಲ್ಲವಾಗಿದೆ. ಈ ಕುರಿತು ಸಮರ್ಪಕವಾದ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದು ಗಮನಕ್ಕೆ ತರಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರ್ಕಾರದ ವಿವಿಧ ಜನಪರ ಯೋಜನೆಗಳು ಮತ್ತು ಸಬ್ಸಿಡಿ ಸಾಲ ಸೌಲಭ್ಯಗಳು ಕಾಲಮಿತಿಯೊಳಗೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಬ್ಯಾಂಕುಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸಿಡಿ ರೇಷಿಯೋ ಕಡಿಮೆ ಇರುವ ಬ್ಯಾಂಕುಗಳು ನಿಗದಿತ ಗುರಿ ತಲುಪಲು ಕಾರ್ಯೋನ್ಮುಖರಾಗಬೇಕು ಎಂದ ಅವರು ಡಿಎಲ್ ಆರ್‌ಸಿ ಸಭೆಗೆ ಗೈರಾದ ಖಾಸಗಿ ಬ್ಯಾಂಕುಗಳಿಗೆ ನೋಟಿಸ್ ನೀಡಲು ಸೂಚನೆ ನೀಡಿದರು.

ಪಿಎಂಇಜಿಪಿ ಯೋಜನೆಯಡಿ ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ವಿಲೇ ಮಾಡಬೇಕು. ಹಾಗೂ ಮಂಜೂರಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸೌಲಭ್ಯ ವಿತರಣೆ ಮಾಡಬೇಕು. ವಿಶ್ವಕರ್ಮ ಯೋಜನೆಯಡಿ ವಿತರಣೆಗೆ ಬಾಕಿ ಇರುವ 678 ಅರ್ಜಿಗಳ ಕುರಿತು ಪರಿಶೀಲಿಸಿ ಕ್ರಮ ವಹಿಸಲು ತಿಳಿಸಿದ ಅವರು ಫಲಾನುಭವಿಗಳಿಗೆ ಸೂಕ್ತ ತರಬೇತಿ ಮತ್ತು ಸೌಲಭ್ಯ ನೀಡುವಂತೆ ತಿಳಿಸಿದರು.

ಪಿಎಂ ಸ್ವನಿಧಿ ಯೋಜನೆಯಡಿ 2ನೇ ಹಂತದ ಸಾಲದಲ್ಲಿ 210 ಅರ್ಜಿಗಳು ಬಾಕಿ ಇವೆ. ಯಾವೆಲ್ಲ ಬ್ಯಾಂಕುಗಳಲ್ಲಿ ಎರಡು, ಮೂರನೇ ಹಂತ ಸಾಲದ ಅರ್ಜಿಗಳು ಬಾಕಿ ಇವೆ ಎಂಬುದನ್ನು ವಿವರ ನೀಡಲು ಸೂಚಿಸಿದರು.
ಪಿಎಂ ಸೂರ್ಯ ಗರ್ ಮುಫ್ತ್ ಬಿಜಲಿ ಯೋಜನೆಯಡಿ ಜಿಲ್ಲೆಯಲ್ಲಿ ಕೇವಲ 413 ಅರ್ಜಿ ಬಂದಿವೆ. ಈ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕೆಂದರು.

ಬ್ಯಾಂಕುಗಳು ಮತ್ತು ವಿವಿಧ ಸರ್ಕಾರಿ ಇಲಾಖೆಗಳ ನಡುವೆ ಉತ್ತಮ ಸಮನ್ವಯತೆ ಇರಬೇಕು. ಪ್ರಗತಿಯಲ್ಲಿ ಹಿಂದುಳಿದಿರುವ ಬ್ಯಾಂಕ್‌ಗಳ ಅಧಿಕಾರಿಗಳು ಮುಂದಿನ ತ್ರೈಮಾಸಿಕದ ವೇಳೆಗೆ ನಿಗದಿತ ಗುರಿ ಸಾಧಿಸದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಎನ್ ಆರ್ ಎಲ್ ಎಂ ಯೋಜನೆಯಡಿ ಸ್ವ ಸಹಾಯ ಗುಂಪುಗಳಿಗೆ ಬ್ಯಾಂಕುಗಳು ಸಮರ್ಪಕವಾಗಿ ಸಾಲ ಸೌಲಭ್ಯ ನೀಡಬೇಕು. ಈ ಗುಂಪುಗಳು ಕೆಲವು ದೂರುಗಳನ್ನು ನೀಡಿದ್ದು ಅವನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಮುದ್ರಾ ಯೋಜನೆಯಡಿ ಬ್ಯಾಂಕುಗಳಿಲು ನಿಗದಿತ ಗುರಿ ಸಾಧಿಸಬೇಕು. ಕೃಷಿ ವಲಯಕ್ಕೆ ಸಕಾಲದಲ್ಲಿ ಸಾಲ ಸೌಲಭ್ಯ ಒದಗಿಸುವ ಮೂಲಕ ರೈತರಿಗೆ ನೆರವಾಗಬೇಕು. ಹಾಗೂ ವಿವಿಧ ಯೋಜನೆಗಳಡಿ ಬ್ಯಾಂಕುಗಳು ಸಾಲ ತಡೆ ಹಿಡಿದ ಮಾಹಿತಿಯನ್ನು ಪ್ರತಿ ತಿಂಗಳು ನೀಡಬೇಕು. ಹಾಗೂ ಅರ್ಜಿಗಳು ತಿರಸ್ಕೃತವಾಗಿತ್ತಿರುವ ಬಗ್ಗೆ ಸಹ ಮಾಹಿತಿ ನೀಡಬೇಕೆಂದು ಸೂಚಿಸಿದರು.

ಗೋವಿಂದಾಪುರ ಆಶ್ರಯ ಮನೆಗಳ ಇಸ್ವತ್ತು ಅನುಮೋದನೆ ಆಗಿದ್ದು ಸಂಬಂಧಿಸಿದ ನೌಕರರು ಇವನ್ನು ನಿಗದಿತ ಅವಧಿಯೊಳಗೆ ಡೌನ್ ಲೋಡ್ ಮಾಡಿಕೊಂಡು ಕ್ರಮ ವಹಿಸಲು ತಿಳಿಸಿದರು.

ಸಾಮಾಜಿಕ ಭದ್ರತಾ ಯೋಜನೆಗಳು: ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಅಟಲ್ ಪೆನ್ಷನ್ ಯೋಜನೆಗಳ ಕುರಿತು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಪ್ರತಿಯೊಬ್ಬರನ್ನೂ ಈ ಯೋಜನೆಗಳ ವ್ಯಾಪ್ತಿಗೆ ತರಬೇಕು ಎಂದರು. ಹಾಊ
ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಡಿಜಿಎಂ ಸಂಜೀವ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ವಾರ್ಷಿಕ ಸಾಲ ಯೋಜನೆ ರೂ.16,334.07 ಕೋಟಿಗಳ ಗುರಿಗೆ ಪ್ರತಿಯಾಗಿ ರೂ.17,970.62 ಕೋಟಿ ಸಾಧನೆ ಮಾಡುವ ಮೂಲಕ ಜಿಲ್ಲೆಯು ಶೇ. 110.02 ರಷ್ಟು ಪ್ರಗತಿ ದಾಖಲಿಸಿದೆ.

ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 23.93 ರಷ್ಟು ವಾರ್ಷಿಕ ಬೆಳವಣಿಗೆಯನ್ನು ತೋರಿಸುತ್ತದೆ.
ಆದ್ಯತಾ ವಲಯ ಸಾಧನೆ: ಕೃಷಿ ವಲಯಕ್ಕೆ ನಿಗದಿಪಡಿಸಿದ್ದ ರೂ.7,918.12 ಕೋಟಿಗಳ ಗುರಿಯಲ್ಲಿ ರೂ. 8,739.14 ಕೋಟಿಗಳನ್ನು ತಲುಪುವ ಮೂಲಕ ಶೇ. 110.37 ರಷ್ಟು ಸಾಧನೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಶೇ. 21.90 ರಷ್ಟು ಹೆಚ್ಚಿನ ಪ್ರಗತಿ ಕಂಡುಬಂದಿದೆ.
ಎಂ.ಎಸ್.ಎಂ.ಇ : ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಲಯದಲ್ಲಿ ರೂ.3,773.70 ಕೋಟಿ ಸಾಲ ನೀಡಲಾಗಿದ್ದು, ಶೇ. 94.83 ರಷ್ಟು ಗುರಿ ತಲುಪಲಾಗಿದೆ (ಶೇ. 12.86 ವಾರ್ಷಿಕ ಬೆಳವಣಿಗೆ).
ಒಟ್ಟಾರೆಯಾಗಿ ಆದ್ಯತಾ ವಲಯದಲ್ಲಿ ಶೇ. 103.30 ರಷ್ಟು ಸಾಧನೆಯಾಗಿದ್ದು, ರೂ.12,785.48 ಕೋಟಿ ವಿತರಿಸಲಾಗಿದೆ.

ಆದ್ಯತಾ ವಲಯದ ಅಡಿಯಲ್ಲಿ ಬರುವ ರಫ್ತು ಸಾಲ ಸಾಮಾಜಿಕ ಮೂಲಸೌಕರ್ಯ ನವೀಕರಿಸಬಹುದಾದ ಇಂಧನ ಮತ್ತು ಇತರ ವಲಯಗಳು ಹಾಗೂ ಆದ್ಯತೇತರ ವಲಯದ ಶಿಕ್ಷಣ ಕ್ಷೇತ್ರವು ಕಳೆದ ಮಾರ್ಚ್ 2025 ಕ್ಕೆ ಹೋಲಿಸಿದರೆ ನಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.

ಆದ್ಯತೇತರ ವಲಯ:
ಆದ್ಯತೇತರ ವಲಯದಲ್ಲಿ ನಿಗದಿಪಡಿಸಿದ ಗುರಿಗಿಂತಲೂ ಹೆಚ್ಚಿನ ಅಂದರೆ ಶೇ. 131.05 ರಷ್ಟು ಸಾಧನೆ ಮಾಡಲಾಗಿದ್ದು, ಒಟ್ಟು ರೂ.5,185.14 ಕೋಟಿ ಸಾಲ ವಿತರಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ. 41.34 ರಷ್ಟು ಭಾರಿ ಬೆಳವಣಿಗೆಯನ್ನು ಕಂಡಿದೆ. ವಿಶೇಷವಾಗಿ ವೈಯಕ್ತಿಕ ಸಾಲಗಳು ಶೇ. 141.09 ರಷ್ಟು ಪ್ರಗತಿ ಸಾಧಿಸಿಲಾಗಿದೆ ಎಂದರು.
ಸಭೆಯಲ್ಲಿ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಾಯಿತು.
ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ ಪಿ, ಆರ್‌ಬಿಐ ಎಫ್‌ಐಡಿಡಿ ಎಜಿಎಂ ಬಬುಲ್ ಬೊರ್ಡೊಲೈ(ವರ್ಚುಲವ್ ಮೂಲಕ), ನಬಾರ್ಡ್ ಡಿಡಿಎಂ ಶರತ್ ಗೌಡ, ಜಿಲ್ಲಾ ಸಂಯೋಜಕ ಬ್ಯಾಂಕುಗಳು, ಇತರೆ ಬ್ಯಾಂಕುಗಳ ಅಧಿಕಾರಿಗಳು ಹಾಜರಿದ್ದರು.

ವ್ಯಕ್ತಿ ನಾಪತ್ತೆಯಾಗಿ 26ವರ್ಷದ ನಂತರ ಠಾಣೆಯಲ್ಲಿ ದಾಖಲೆಯಾದ ಪ್ರಕರಣದ ಮಾಹಿತಿ

0

ಮಾಳೂರು ಪೊಲೀಸ್ ಠಾಣೆಯಲ್ಲಿ ತಡವಾಗಿ ದಾಖಲಾದ ದೂರಿನ್ವಯ 26 ವರ್ಷಗಳ ಹಿಂದೆ ಪ್ರಿಯಾ ಉಡುಪಿ ಎಂಬುವವರ ತಮ್ಮ ಸೋಹನ್ ಎಂಬ 24 ವರ್ಷದ ಯುವಕ ಕಾಣೆಯಾಗಿದ್ದು, ಇವರು ಮೂವರು ಸೋದರ ಸೋದರಿಯರಿಗೆ ತಂದೆ ತಾಯಿ ಇಲ್ಲದ್ದರಿಂದ ಸೋಹನ್ ಅನಾಥಾಶ್ರಮದಲ್ಲಿ ಬೆಳೆದು 10ನೇ ತರಗತಿ ಓದಿದ ನಂತರ ತೀರ್ಥಹಳ್ಳಿ ಮತ್ತು ಗಬಡಿಯಲ್ಲಿರುವ ಅಜ್ಜಿ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದವರು 1999ರಲ್ಲಿ ಕಾಣೆಯಾಗಿದ್ದರು.

ಈ ವ್ಯಕ್ತಿ ಕಾಣೆಯಾಗುವಾಗ 5.7 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದರು. ಈ ವ್ಯಕ್ತಿಯ ಬಗ್ಗೆ ಸುಳಿವು ಇದ್ದಲ್ಲಿ ಮಾಳೂರು ಪೊಲೀಸ್ ಠಾಣೆ ದೂ.ಸಂ.: 08181-235142/ 228310/9480803353 /9480803333/ 08182-261413/ 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ತಿಳಿಸಿದೆ.

Department of Social Welfare ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ‌ ಆಹ್ವಾನ

0

ಸಮಾಜ ಕಲ್ಯಾಣ ಇಲಾಖೆಯಿಂದ 2026-27 ನೇ ಸಾಲಿನಲ್ಲಿ ಭಾರತ ಸರ್ಕಾರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವೆಬ್‌ಸೈಟ್ www.sw.kar.nic.in & http://ssp.postmatric.karnataka.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಶಿವಮೊಗ್ಗ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರೇಡ್-1) ತಿಳಿಸಿದ್ದಾರೆ‌.

Department of Social Welfare ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ತಾಲ್ಲೂಕು ಸಹಾಯಕ ನಿರ್ದೇಶಕರ (ಗ್ರೇಡ್-1) ಕಚೇರಿ, ಸಮಾಜ ಕಲ್ಯಾಣ ಇಲಾಖೆ, ವಿದ್ಯಾನಗರ, ಬಿ ಹೆಚ್ ರಸ್ತೆ, ದೂ.ಸಂ: 08182-240512 ನ್ನು ಸಂಪರ್ಕಿಸುವುದು.

Jawahar Navodaya Vidyalaya ಗಾಜನೂರಿನ ನವೋದಯ ವಿದ್ಯಾಲಯದ 11 ನೇ ತರಗತಿ ವಾಣಿಜ್ಯ ವಿಭಾಗದ ಖಾಲಿಯಿರುವ ಸೀಟ್ ಗಳಿಗೆ ಅರ್ಜಿ ಆಹ್ವಾನ

0

Jawahar Navodaya Vidyalaya ಶಿವಮೊಗ್ಗ ಜಿಲ್ಲೆಯ ಗಾಜನೂರಿನ ಜವಾಹರ ನವೋದಯ ವಿದ್ಯಾಲಯದ 2026-27ನೇ ಸಾಲಿಗೆ 11ನೇ ತರಗತಿಗೆ ವಾಣಿಜ್ಯ ವಿಭಾಗಕ್ಕೆ ಖಾಲಿ ಇರುವ ಸೀಟುಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

2025-26 ನೇ ಸಾಲಿನಲ್ಲಿ 10ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು. ಹತ್ತನೇ ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಕನಿಷ್ಠ ಶೇಕಡವಾರು 50 ಅಂಕಗಳನ್ನು ಪಡೆದಿರಬೇಕು.

Jawahar Navodaya Vidyalaya ಅಭ್ಯರ್ಥಿಯು 01.06.2009 ರಿಂದ 31.7.2011 ರ ದಿನಾಂಕದೊಳಗೆ ಜನಿಸಿರಬೇಕು.
ಅರ್ಹ ಆಸಕ್ತ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ವಿದ್ಯಾಲಯದ ಕಾರ್ಯಾಲಯಕ್ಕೆ ಜೂ. 30 ರ ಒಳಗಾಗಿ ಅರ್ಜಿಯನ್ನು ಎಲ್ಲಾ ದಾಖಲಾತಿಗಳೊಂದಿಗೆ ಸಲ್ಲಿಸುವಂತೆ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.

ವರದಕ್ಷಿಣೆ ಕಿರುಕುಳ: ಪತ್ನಿಯ ದೂರು.ಆರೋಪ ಸಾಬೀತಾಗಿ ಪತಿರಾಯನಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್

0

ಬಳ್ಳಾರಿ ಜಿಲ್ಲೆಯ ಕೊಟ್ಟೂರು ವಾಸಿ ಮಂಜುನಾಥ್ ಇವರು ತಮ್ಮ ಪತ್ನಿ ಸುಮರವರಿಗೆ ಹೆಚ್ಚಿನ ವರದಕ್ಷಿಣೆ, ಸೈಟ್ ಹಾಗೂ ಬಂಗಾರ ತರಲು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾಗಿ ಹಾಗೂ ಜೀವ ಬೆದರಿಕೆ ಹಾಕಿದ್ದಾಗಿ 2017ರಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿ ಪ್ರಭಾವತಿ ಸಿ. ಇವರು ಪ್ರಕರಣದ ತನಿಖೆ ನಡೆಸಿ 2018ರಲ್ಲಿ 2ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿರುತ್ತಾರೆ.

ಸಾಕ್ಷಿ ವಿಚಾರಣೆ ನಡೆಸಿ ಪರಸ್ಪರ ವಾದವನ್ನು ಆಲಿಸಿದ ನ್ಯಾಯಾಧೀಶರಾದ ಸಿದ್ಧರಾಜು ಎನ್.ಕೆ. ಇವರು ದಿ:24/06/2026 ರಂದು ಆರೋಪಿ ಮಂಜುನಾಥನಿಗೆ ಕಲಂ.: 498(ಎ) ಐಪಿಸಿ ಅಪರಾಧಕ್ಕೆ ಮೂರು ವರ್ಷ ಸಾದಾ ಸಜೆ ಶಿಕ್ಷೆ ಹಾಗೂ ಹತ್ತು ಸಾವಿರ ರೂ.ಗಳ ದಂಡ ಹಾಗೂ ಕಲಂ.506 ಐಪಿಸಿಗೆ 2 ವರ್ಷ ಸಾದಾ ಶಿಕ್ಷೆ ಮತ್ತು ರೂ. 5000/- ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತಾರೆ.

ಅಭಿಯೋಜನೆಯ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಜಿ.ಕೆ. ಕಿರಣ್‌ಕುಮಾರ್ ವಾದ ಮಂಡಿಸಿದ್ದರು.

World Blood Donor Day 92 ನೇ ಬಾರಿಗೆ ರಕ್ತದಾನ ಮಾಡಿದ ದಾನಿ ಸುರೇಶ್ ಅವರಿಗೆ ಆತ್ಮೀಯ ಸನ್ಮಾನ

0

World Blood Donor Day ವಿಶ್ವ ರಕ್ತದಾನಿಗಳ ದಿನಾಚರಣೆ–2026ರ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ, ಬೆಂಗಳೂರು ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಎ.ಎಂ. ಸುರೇಶ್ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಅಪರೂಪದ AB-ನೆಗಟಿವ್ ರಕ್ತದ ಗುಂಪಿನ ದಾನಿಯಾಗಿರುವ ಎ.ಎಂ. ಸುರೇಶ್ ಅವರು ಇದುವರೆಗೆ 92 ಬಾರಿ ರಕ್ತದಾನ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸಲು ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ನಿರಂತರ ಹಾಗೂ ನಿಸ್ವಾರ್ಥ ರಕ್ತದಾನ ಸೇವೆಯನ್ನು ಪರಿಗಣಿಸಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಈ ಗೌರವವನ್ನು ನೀಡಿ ಸನ್ಮಾನಿಸಿದೆ.

ಈ ಸಾಧನೆ ಅನೇಕ ಯುವಕರು ಹಾಗೂ ರಕ್ತದಾನಿಗಳಲ್ಲಿ ಜಾಗೃತಿ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಸ್ಪೂರ್ತಿದಾಯಕ ಉದಾಹರಣೆಯಾಗಿದೆ. ಸುರೇಶ್ ಅವರ ರಕ್ತದಾನದ ಸೇವೆ ಶೀಘ್ರದಲ್ಲೇ ಶತಕದ ಮೈಲಿಗಲ್ಲು ತಲುಪಲಿ ಎಂದು ಶುಭಾಶಯಗಳು ವ್ಯಕ್ತವಾಗಿವೆ.

World Blood Donor Day ರಾಜ್ಯಮಟ್ಟದ ಪ್ರಶಸ್ತಿ ಸ್ವೀಕರಿಸಿದ ಎ.ಎಂ. ಸುರೇಶ್ ಅವರಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪರವಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

ಅಡ್ಡ ಮತದಾನ ಅವಾಂತರ: ಧರ್ಮಸ್ಥಳ ಕ್ಷೇತ್ರದಲ್ಲಿ ಆಣೆ- ಪ್ರಮಾಣ. ಹಿರಿಯರ ಸಲಹೆಯಂತೆ ರಾಜ್ಯಾಧ್ಯಕ್ಷರು ಕೈಬಿಟ್ಟಿದ್ದಾರೆ : ಆರಗ ಜ್ಞಾನೇಂದ್ರ

0

ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಡ್ಡಮತದಾನ ನಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಆರಗ ಜ್ಞಾನೇಂದ್ರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಂತಹ ಪಕ್ಷಕ್ಕೆ ದ್ರೋಹ ಮಾಡುವ ಕೆಲಸ ಯಾರೂ ಮಾಡಬಾರದಿತ್ತು. ಅಡ್ಡಮತದಾನದ ಬಗ್ಗೆ ಪಕ್ಷದಲ್ಲಿ ಬಹಳ ನೋವಿದ್ದು, ಈ ವಿಚಾರವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ಹೇಳಿದರು.

ಅಡ್ಡಮತದಾನ ಮಾಡಿದವರನ್ನು ಪತ್ತೆಹಚ್ಚಲು ಸಮಿತಿಯನ್ನು ರಚಿಸಲಾಗಿದ್ದು, ಒಂದು ಅಥವಾ ಎರಡು ದಿನಗಳಲ್ಲಿ ವರದಿ ಬರಲಿದೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ತನ್ನ ಶಾಸಕರನ್ನು ಒಟ್ಟುಗೂಡಿಸಿ ಕಟ್ಟುನಿಟ್ಟಿನ ನಿಗಾದಲ್ಲಿ ಇಟ್ಟಿತ್ತು. ಆದರೆ ನಮ್ಮ ನಾಯಕರು ಶಾಸಕರನ್ನು ನಂಬಿದ್ದರು. ಆದರೂ ಪಕ್ಷದೊಳಗೆ ವಿಶ್ವಾಸಘಾತಕತನ ನಡೆದಿರುವುದು ನೋವು ತಂದಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ವಿಚಾರ

ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷರು ನೋವಿನಿಂದ ಆ ರೀತಿಯ ಹೇಳಿಕೆ ನೀಡಿದ್ದರು. ಧರ್ಮಸ್ಥಳವು ಪವಿತ್ರ ಕ್ಷೇತ್ರವಾಗಿದ್ದು, ಅಲ್ಲಿ ರಾಜಕೀಯವನ್ನು ತರಬಾರದು ಎಂಬ ಅಭಿಪ್ರಾಯವನ್ನು ಪಕ್ಷದ ಹಿರಿಯರು ವ್ಯಕ್ತಪಡಿಸಿದ್ದಾರೆ ಎಂದರು.

ಹಿರಿಯ ನಾಯಕರ ಸಲಹೆಯ ಮೇರೆಗೆ ಅಧ್ಯಕ್ಷರು ತಮ್ಮ ನಿರ್ಧಾರವನ್ನು ಹಿಂಪಡೆದಿದ್ದಾರೆ. ಅಡ್ಡಮತದಾನದ ಕುರಿತು ರಚನೆಯಾಗಿರುವ ಸಮಿತಿ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲೇ ಎಲ್ಲ ಸತ್ಯಾಂಶಗಳು ಬಹಿರಂಗವಾಗಲಿವೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಸಂಘಟಿತ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ಧನ ಪಡೆಯಲು ಆನ್ ಲೈನ್ ಅರ್ಜಿ ಆಹ್ವಾನ

0

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಮಂಡಳಿಯು 2026-27ನೇ ಸಾಲಿನ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಪ್ರೌಢ ಶಾಲೆಯಿಂದ ಸ್ನಾತಕೋತ್ತರ ಪದವಿವರೆಗೆ ಹಾಗೂ ವೈದ್ಯಕೀಯ ಅಥವಾ ಇಂಜಿನಿಯರಿಂಗ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಕಾರ್ಮಿಕರ ಮಾಸಿಕ ವೇತನವು ₹35,000/- ಕ್ಕಿಂತ ಹೆಚ್ಚಿರಬಾರದು. ಒಂದು ಕುಟುಂಬದಲ್ಲಿ ಗರಿಷ್ಠ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯ ಲಭ್ಯವಿರುತ್ತದೆ.

ವಿದ್ಯಾರ್ಥಿಯು ಹಿಂದಿನ ವರ್ಷದ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದವರಾಗಿದ್ದರೆ ಕನಿಷ್ಠ ಶೇ. 50 ರಷ್ಟು ಮತ್ತು ಪ.ಜಾ/ಪ.ಪಂ ವರ್ಗದವರಾಗಿದ್ದರೆ ಕನಿಷ್ಠ ಶೇ. 45 ರಷ್ಟು ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು.

ಅರ್ಹ ವಿದ್ಯಾರ್ಥಿಗಳು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕೃತ ವೆಬ್‌ಸೈಟ್ www.klwbapps.karnataka.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ.
ಅರ್ಜಿ ಸಲ್ಲಿಸಲು ದಿನಾಂಕ: 31-12-2026 ಕಡೆಯ ದಿನವಾಗಿರುತ್ತದೆ.

ಹೆಚ್ಚಿನ ವಿವರಗಳಿಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು “ಕಾರ್ಮಿಕ ಅಧಿಕಾರಿಗಳವರ ಕಚೇರಿ ಶಿವಮೊಗ್ಗ ಉಪವಿಭಾಗ, ಶಿವಮೊಗ್ಗ ಕಚೇರಿಗೆ ಅಥವಾ ದೂ.ಸಂಖ್ಯೆ 080-23475188
8277291175 / 8277120505
9141585402 ನ್ನು ಸಂಪರ್ಕಿಸಬಹುದು ಎಂದು ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಎಂ ಪಿ ತಿಳಿಸಿದ್ದಾರೆ.

ಜೂನ್ 27. ನಾಡಪ್ರಭು ಕೆಂಪೇಗೌಡ ಜಯಂತಿ ಜಿಲ್ಲಾಡಳಿತದಿಂದ ಪೂರ್ವ ಸಿದ್ಧತೆ

0

ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಜೂ.27 ರ ಬೆಳಿಗ್ಗೆ 10.00ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿಯನ್ನು ಏರ್ಪಡಿಸಲಾಗಿದೆ.

ಶಾಸಕರಾದ ಎಸ್.ಎನ್.ಚನ್ನಬಸಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಉದ್ಘಾಟನೆಯನ್ನು ನೆರವೇರಿಸುವರು.

ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ವಿವಿಧ ಪ್ರಾಧಿಕಾರ, ನಿಗಮ, ಮಂಡಳಿಗಳ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ಗೌರವಾನ್ವಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ ಸಿಇಓ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಇನ್ನಿತರ ಗಣ್ಯರು, ಅಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಅಂದು ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಕೆ. ಶ್ರೀಪತಿ ಹಳಗುಂದ ಇವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.

ಟೂಲ್ ರೂಮ್ ಮೆಷಿನಿಸ್ಟ್( TRM) ಕೋರ್ಸಿಗೆ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಅರ್ಹರಿಂದ ಅರ್ಜಿ ಆಹ್ವಾನ

0

2026-27ನೇ ಸಾಲಿಗೆ ಶಿವಮೊಗ್ಗ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ)ದಲ್ಲಿ ಒಂದು ವರ್ಷದ ಟೂಲ್ ರೂಮ್ ಮೆಷಿನಿಸ್ಟ್ (TRM) ಕೋರ್ಸ್ ಗೆ ಎಸ್‌ಎಸ್‌ಎಲ್‌ಸಿ ಪಾಸ್/ಫೇಲ್ ಆದವರಿಂದ ಶುಲ್ಕದೊಂದಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ವಯಸ್ಸು, ವಿದ್ಯಾರ್ಹತೆ ದಾಖಲಾತಿಗಳು ಹಾಗೂ ವೈಯಕ್ತಿಕ ವಿವರಗಳೊಂದಿಗೆ ಮಾಚೇನಹಳ್ಳಿ, ನಿಧಿಗೆ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೆ ಅರ್ಜಿ ಸಲ್ಲಿಸುವುದು.

ತರಬೇತಿ ಮುಗಿದ ನಂತರ ತಾಂತ್ರಿಕ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶವನ್ನು ಕಲ್ಪಿಸಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂ. ಸಂ: 08182-246054/ 9448307027/ 9449286543 ಗಳನ್ನು ಸಂಪರ್ಕಿಸುವುದು.