Tuesday, March 17, 2026
Tuesday, March 17, 2026
Home Blog Page 434

Keladi Shivappa Nayaka University ಜನವರಿ 22. ಶಿವಪ್ಪನಾಯಕ ಕೃಷಿ ವಿವಿ 9 ನೇ ಘಟಿಕೋತ್ಸವ

0

Keladi Shivappa Nayaka University ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ 9ನೇ ಘಟಿಕೋತ್ಸವ ಸಮಾರಂಭವನ್ನು ದಿನಾಂಕ 22.01.2025 ರಂದು ಮುಖ್ಯ ಆವರಣ, ಇರುವಕ್ಕಿಯಲ್ಲಿ, ಮಧ್ಯಾಹ್ನ 2.00 ಘಂಟೆಗೆ ಆಯೋಜಿಸಲಾಗುತ್ತಿದೆ. ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಗೌರವಾನ್ವಿತ ಸನ್ಮಾನ್ಯಶ್ರೀ ಥಾವರ್ ಚಂದ್ ಗೆಹ್ಲೋಟ್ ರವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸುವರು.

Keladi Shivappa Nayaka University ಕರ್ನಾಟಕ ಸರ್ಕಾರದ ಗೌರವಾನ್ವಿತ ಕೃಷಿ ಸಚಿವರು ಹಾಗೂ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾದ ಸನ್ಮಾನ್ಯ ಶ್ರೀ.ಎಸ್.ಚೆಲುವರಾಯಸ್ವಾಮಿ ರವರು ಗೌರವ ಉಪಸ್ಥಿತಿಗಳಾಗಿ ಹಾಗೂ ಮುಖ್ಯ ಅತಿಥಿಗಳಾಗಿ ಪ್ರೋ.ಎಲ್.ಎಸ್.ಶಶಿಧರ, ನಿರ್ದೇಶಕರು, ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ, ಬೆಂಗಳೂರು ಇವರು ಘಟಿಕೋತ್ಸವ ಭಾಷಣ ಮಂಡಿಸಲಿದ್ದಾರೆ.

Building Trades Association ಗಾಂಧಿಬಜಾರ್ ವರ್ತಕರಿಗೆ ಭದ್ರತೆ ಕಲ್ಪಿಸಲು ಮನವಿ

0

Building Trades Association ಗಾಂಧಿ ಬಜಾರ್‌ನಲ್ಲಿ ಕಚೋರಿ ವ್ಯಾಪಾರಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಗಾಂಧಿಬಜಾರ್ ಕಟ್ಟಡ ಮಾಲೀಕರ ಹಾಗೂ ವರ್ತಕರ ಸಂಘದ ಅಧ್ಯಕ್ಷ ಎ.ಎಚ್.ಸುನೀಲ್ ಆಗ್ರಹಿಸಿದ್ದಾರೆ.

ಗಾಂಧಿಬಜಾರ್ ಸೇರಿ ವಿವಿಧೆಡೆ ಕ್ಷುಲ್ಲಕ ಕಾರಣಕ್ಕೆ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಯುತ್ತಿರುವುದು ಖಂಡನೀಯ. ಕೆಲವೆಡೆ ವ್ಯಾಪಾರಿಗಳಿಗೆ ಬೆದರಿಕೆ ಹಾಕುವುದು ಸಹ ನಡೆಯುತ್ತಿದೆ. ವ್ಯಾಪಾರಿಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಗಾಂಧಿ ಬಜಾರ್‌ನಲ್ಲಿ ವ್ಯಾಪಾರಿಗಳ ಸುರಕ್ಷತೆಗೆ ಸಂಬಂಧಿಸಿ ಪೊಲೀಸ್ ಉಪಠಾಣೆ ಸ್ಥಾಪಿಸಬೇಕು. ನಿರಂತರವಾಗಿ ಪೊಲೀಸ್ ಬೀಟ್ ವ್ಯವಸ್ಥೆ ಕಲ್ಪಿಸಬೇಕು. ಗಾಂಧಿಬಜಾರ್‌ನಲ್ಲಿ ವ್ಯಾಪಾರಿಗಳ ಸುರಕ್ಷತೆಗೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಕ್ರಮ ವಹಿಸಬೇಕು ಎಂದು ತಿಳಿಸಿದ್ದಾರೆ.

Building Trades Association ಕಚೋರಿ ವ್ಯಾಪಾರಿ ಮೇಲೆ ಹಲ್ಲೆ ಮಾಡಿರುವ ಎಲ್ಲ ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಗಾಂಧಿಬಜಾರ್‌ನಲ್ಲಿ ಪೊಲೀಸ್ ಉಪಠಾಣೆ ಸ್ಥಾಪಿಸುವಂತೆ ಗಾಂಧಿಬಜಾರ್ ಕಟ್ಟಡ ಮಾಲೀಕರ ಹಾಗೂ ವರ್ತಕರ ಸಂಘದ ಅಧ್ಯಕ್ಷ ಎ.ಎಚ್.ಸುನೀಲ್ ಮನವಿ ಮಾಡಿದ್ದಾರೆ.

Kho Kho World Cup ಶಿವಮೊಗ್ಗದ ಹೆಮ್ಮೆ ದೈಹಿಕ ಶಿಕ್ಷಕ ಎಸ್. ಗಿರೀಶ್ ಈಗ ವಿಶ್ವಕಪ್ ಖೋ ಖೋ ಪಂದ್ಯಾವಳಿಗೆ ತೀರ್ಪುಗಾರರಾಗಿ ನೇಮಕ

0

Kho Kho World Cup ವಿಶ್ವ ಕಪ್ ಖೋ ಖೋ ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಜನವರಿ 13 ರಿಂದ 19 ರವರೆಗೆ ವಿಶ್ವಕಪ್ ನಡೆಯುತ್ತಿರುವುದು ಐತಿಹಾಸಿಕ ಹೆಮ್ಮೆಯ ವಿಚಾರ. ಪ್ರಥಮ ವಿಶ್ವಕಪ್ ಖೋ ಖೋ ದಲ್ಲಿ ಪುರುಷ ಮತ್ತು ಮಹಿಳೆಯರ 20 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿವೆ.
ಈ ಕ್ರೀಡಾಕೂಟದಲ್ಲಿ ಅಂತರಾಷ್ಟ್ರೀಯ ತಾಂತ್ರಿಕ ತೀರ್ಪುಗಾರರಾಗಿ ಶಿವಮೊಗ್ಗ ತಾಲೂಕಿನ ಹಕ್ಕಿ ಪಿಕಿ ಕ್ಯಾಂಪಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಹಿಂದೆ ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ಏಷ್ಯನ್ ಚಾಂಪಿಯನ್ಶಿಪ್ ನಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ಉತ್ತಮ ಕಾರ್ಯನಿರ್ವಹಿಸಿ ಪ್ರಸಂಶೆಗೆ ಪಾತ್ರರಾಗಿದ್ದಾರೆ. ಕರ್ನಾಟಕದಿಂದ ಮತ್ತು ಶಿವಮೊಗ್ಗ ಜಿಲ್ಲೆಯಿಂದ ವಿಶ್ವಕಪ್ ಪಂದ್ಯಾವಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ.ಗಿರೀಶ್ ಎಸ್. 12ನೇ ವಯಸ್ಸಿನಿಂದ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಖೋ ಖೋ ತರಬೇತಿಯನ್ನು ಪಡೆಯುತ್ತಿದ್ದರು.
Kho Kho World Cup ಫ್ರೆಂಡ್ಸ್ ರಿಕ್ರಿಯೇಶನ್ ಅಸೋಸಿಯೇಷನ್ ವತಿಯಿಂದ ಅನೇಕ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದರು. ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಒಂದು ಬಾರಿ,ಸೀನಿಯರ್ ವಿಭಾಗದಲ್ಲಿ ಏಳು ಬಾರಿ, ಆಲ್ ಇಂಡಿಯಾ ಪಂದ್ಯಾವಳಿಯಲ್ಲಿ ಮೂರು ಬಾರಿ ಆಡಿ,ಪ್ರಥಮ, ದ್ವಿತೀಯ ಸ್ಥಾನವನ್ನು ಪಡೆದು, ರಾಜ್ಯ, ರಾಷ್ಟ್ರ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವುದು ಅವಿಸ್ಮರಣೀಯವೇ ಹೌದು.
ಗಿರೀಶ್ ಎಸ್. ದೆಹಲಿಯಲ್ಲಿ ನಡೆಯುವ ವಿಶ್ವಕಪ್ ಖೋ ಖೋ ದಲ್ಲಿ ತಾಂತ್ರಿಕ ತೀರ್ಪುಗಾರರಾಗಿ ಸೇವೆ ಸಲ್ಲಿಸಿರುವುದು ಸಂತೋಷದ ವಿಚಾರ. ಉತ್ತಮ ನಿರ್ಣಾಯಕ ನೀಡುವುದರೊಂದಿಗೆ ರಾಜ್ಯಕ್ಕೂ ಹಾಗೂ ಜಿಲ್ಲೆಗೆ ಕೀರ್ತಿ ತರಲೆಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ ಎಸ್. ಆರ್. ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾದ ಪ್ರಕಾಶ್ ಎಂ., ಜಿಲ್ಲೆಯ ಸಂಘ-ಸಂಸ್ಥೆಗಳು ಶುಭ ಹಾರೈಸಿದ್ದಾರೆ.

CM Siddharamaiah ಜಾತಿ ಜನಗಣತಿಯನ್ನ ಇಂದಿನ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದಿಲ್ಲ- ಸಿದ್ಧರಾಮಯ್ಯ

0

CM Siddharamaiah ಜಾತಿಗಣತಿ ವರದಿಯಲ್ಲಿರುವ ಅಂಕಿ-ಅಂಶ ಇನ್ನೂ ಸಾರ್ವಜನಿಕವಾಗದೇ ಇದ್ದು, ಈಗ ಕೇಳಿಬರುತ್ತಿರುವ ವಿಚಾರಗಳು ಬರೀ ಊಹಾಪೋಹಗಳಾಗಿರುವುದರಿಂದ, ಈ ವಿಚಾರದ ಬಗ್ಗೆ ವಿರೋಧ ಅನಾವಶ್ಯಕ. ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯ ವಿಷಯವನ್ನು ಮಂಡಿಸಲಾಗುವುದಿಲ್ಲ. ಮುಂದಿನ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಆಯೋಧ್ಯೆಯ ರಾಮಮಂದಿರ ಪ್ರಾರಂಭವಾದ ದಿನ ದೇಶಕ್ಕೆ ನಿಜ ಅರ್ಥದಲ್ಲಿ ಸ್ವಾತಂತ್ರ್ಯ ಲಭಿಸಿದೆ ಎಂಬ ಆರ್ ಎಸ್ ಎಸ್ ಪ್ರಮುಖ ಮೋಹನ್ ಭಾಗವತ್ ಅವರ ಹೇಳಿಕೆ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗೈದ ಹೋರಾಟಗಾರರಿಗೆ ಮಾಡಿದ ಅವಮಾನ. ಈ ಬಗ್ಗೆ ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸದ ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರು ಬ್ರಿಟೀಷರೊಂದಿಗೆ ಶಾಮೀಲಾಗಿದ್ದರು.

CM Siddharamaiah ಕಿಯೋನಿಕ್ಸ್ ಅಸೋಸಿಯೇಷನ್ ‍ಅವರು ಬಾಕಿ ಇರುವ ಬಿಲ್ಲುಗಳು ಪಾವತಿಯಾಗದಿರುವ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದವರು ದೊಡ್ಡ ಮೊತ್ತದ ಬಿಲ್ಲುಗಳನ್ನು ಪಾವತಿ ಮಾಡದೇ ಬಾಕಿ ಉಳಿಸಿದ್ದಾರೆ. ಈ ಬಿಲ್ಲುಗಳನ್ನು ಹಂತ ಹಂತವಾಗಿ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

R. Ashok ಕಬ್ಬು ಕೃಷಿಕರಿಗೆ ಬಾಕಿ ಇರುವ ₹ 4482 ಕೋಟಿ ಪಾವತಿ ಮಾಡಿ- ಆರ್.ಅಶೋಕ್

0

R. Ashok ರಾಜ್ಯಾದ್ಯಂತ ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಸಿದ ರೈತರಿಗೆ 4,482 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ರೈತರ ಸಂಕಷ್ಟ ಕೇಳಲು ರಾಜ್ಯದಲ್ಲಿ ಸರ್ಕಾರವೇ ಇಲ್ಲದ ಪರಿಸ್ಥಿತಿ ಎದುರಾಗಿರುವುದರಿಂದ ರೈತರು ಅನಾಥರಾಗಿದ್ದಾರೆ.

ಕಬ್ಬು ಪೂರೈಸಿದ 14 ದಿನಗಳಲ್ಲಿ ಬಿಲ್ ಮೊತ್ತ ಪಾವತಿಸಬೇಕು ಎಂಬ ಕಾಯ್ದೆ ಇದ್ದರೂ ಸಹ, ನಿಯಮವನ್ನ ಜಾರಿ ಮಾಡಲು ಕಾಂಗ್ರೆಸ್ ಸರ್ಕಾರ ಇಚ್ಛಾಶಕ್ತಿ ತೋರುತ್ತಿಲ್ಲ.

ಮುಖ್ಯಮಂತ್ರಿ ಸಿದ್ಧರಾಮಯ್ಯ ನವರೇ, ನಾಡಿನ ರೈತರ ಬದುಕು ಸುಭದ್ರ ಪಡಿಸಬೇಕಾದ ತಾವು
ನಿಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳುವುದರಲ್ಲೇ ಕಾಲ ಕಳೆದರೆ, ನಾಡಿನ ರೈತರ ಕಷ್ಟಕ್ಕೆ ಸ್ಪಂದಿಸುವವರು ಯಾರು? ನಿಮ್ಮ ಸರ್ಕಾರ ಸತ್ತಿದೆಯೋ ಅಥವಾ ಬದುಕಿದೆಯೋ?

R. Ashok ಈ ಕೂಡಲೇ ಕಬ್ಬು ಬೆಳೆಗಾರರ ಬಾಕಿ ಹಣ ಬಿಡುಗಡೆ ಮಾಡುವಂತೆ ಸಕರೆ ಕಾರ್ಖಾನೆಗಳಿಗೆ ಸೂಚನೆ ನೀಡಿ ರೈತರ ನೆರವಿಗೆ ಬನ್ನಿ ಎಂದು ವಿಧಾನಸಭೆಯಲ್ಲಿನ ವಿಪಕ್ಷನಾಯಕ ಆರ್. ಅಶೋಕ್
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ.

Water Supply and Drainage Board ನೀರಿನ ಕಂದಾಯ ಸ್ವೀಕೃತಿಗೆ ಜನವರಿ 19. ಭಾನುವಾರ ವಿಶೇಷ ಕೌಂಟರ್

0

Water Supply and Drainage Board 2024-25ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಮಾಡಲು ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗದ ವತಿಯಿಂದ ಜ.19 ರ ಭಾನುವಾರದಂದು ವಿಶೇಷ ವಸೂಲಾತಿ ಕೌಂಟರ್‌ಗಳನ್ನು ತರೆಯಲಾಗಿದೆ.
ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿಗಾಗಿ ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಗೋಪಾಲಗೌಡ ಬಡಾವಣೆಯ 100 ಅಡಿರಸ್ತೆ, ಮೋರ್ ಎದುರು ಸಿ.ಟಿ.ಬಸ್ ನಿಲ್ದಾಣ, ಹರಿಗೆ ಗಣಪತಿ ದೇವಸ್ಥಾನದ ಹತ್ತಿರ, ಮಿಳ್ಳಘಟ್ಟ ಮುಖ್ಯರಸ್ತೆ ಲಕ್ಷ್ಮಿ ಕ್ಯಾಂಟೀನ್ ಹತ್ತಿರ, ಓ.ಟಿ.ರಸ್ತೆ ಪರಿಚಯ ಸ್ಟೋರ್ ಹತ್ತಿರ ಮತ್ತು ಬಿ.ಹೆಚ್.ರಸ್ತೆ ಸಹ್ಯಾದ್ರಿ ಕಾಲೇಜ್ 1ನೇ ಗೇಟ್ ಹತ್ತಿರ ವಿಶೇಷ ವಸೂಲಾತಿ ಕೌಂಟರ್ ತೆರೆದಿದ್ದು, ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರು ತಿಳಿಸಿದ್ದಾರೆ.

KLive Special Article “ಭಾವ(ಚಿತ್ರ) ಜೀವಿ”ಗೆ” ನಂದನಾಂಜಲಿ”

0

ಸ್ಮರಣೆ:
ಡಾ.ಮೈತ್ರೇಯಿ ಆದಿತ್ಯ ಪ್ರಸಾದ್

KLive Special Article ಭಾವನೆಯ ಭಾವ ಜೀವಿಗೆ ಅಕ್ಷರಗಳ ನುಡಿ ನಮನ

ಕಳೆದ ನಾಲ್ಕು ದಿನಗಳಿಂದಲೂ ಕಾಡುತ್ತಿರುವ ನೆನಪುಗಳಿಗೆ… ಆಗುತ್ತಿರುವ ಯಾತನೆಗೆ… ಅಕ್ಷರರೂಪ ಕೊಡೋಣ ಆಗಲಾದರೂ ಮನಸ್ಸು ಹಗುರಾಗಬಹುದು ನೋವು ಮರೆಯಾಗಬಹುದು ಮರೆಯದೆ ನೆನಪು ಹಸಿರಾಗಬಹುದು ಎಂದು ಬರೆದೆ…
ಪರೋಪಕಾರಾಯ ಫಲಂತಿ ವೃಕ್ಷಃ
ಪರೋಪಕಾರಾಯ ವಹಂತಿ ನದ್ಯಃ l
ಪರೋಪಕಾರಾಯ ದುಹಂತಿ ಗಾವಃ
ಪರೋಪಕಾರಾರ್ಥಂ ಇದಂ ಶರೀರಮ್ ll ಎಂಬ
ಸುಭಾಷಿತವು ಪರೋಪಕಾರಿಗಳ ಕುರಿತಾಗಿ ಹೇಳುವಾಗ ಮರಗಳು ಸಿಹಿಯಾದ ಹಣ್ಣುಗಳನ್ನು ಕೊಡುತ್ತವೆ ಆದರೆ ತಾನೇ ಅದನ್ನು ತಿನ್ನುವುದಿಲ್ಲ, ನದಿಗಳು ಹರಿಯುತ್ತವೆ ನೀರನ್ನು ತಾನೇ ಸೇವಿಸುವುದಿಲ್ಲ, ಹಸು ಅಮೃತದಂತಹ ಹಾಲನ್ನು ಕೊಡುತ್ತದೆ ಆದರೆ ಅದನ್ನು ಪೂರ್ಣ ತಾನೇ ಸೇವಿಸುವುದಿಲ್ಲ. ಹೀಗೆ ಪರೋಪಕಾರಿಗಳು ತಮ್ಮ ಬಳಿ ಇರುವುದು ತಮಗಾಗಿ ಮಾತ್ರ ಅಲ್ಲ ಇತರರಿಗಾಗಿ ಹೆಚ್ಚು ಎನ್ನುವಂತಹ ಸ್ವಭಾವಕ್ಕೆ ಶಿವಮೊಗ್ಗ ನಂದನ್ ಒಳ್ಳೆಯ ಉದಾಹರಣೆ.

ನಾನು 2000ದಲ್ಲಿ ಶಿವಮೊಗ್ಗಕ್ಕೆ ಬಂದಿದ್ದಾದರೂ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಸಂಪರ್ಕಕ್ಕೆ ಬಂದದ್ದು 2004ರಲ್ಲಿ. ಆಗಿನಿಂದಲೂ ಸಂಸ್ಕೃತೋತ್ಸವದ ಭಾಷಣ ಸ್ಪರ್ಧೆಗೆ ಛಾಯಾಗ್ರಾಹಕರಾಗಿ ಆಗಮಿಸುತ್ತಿದ್ದುದು ಶಿವಮೊಗ್ಗ ನಂದನ್ ಅವರು. ಅವರನ್ನು ಮೊದಲು ನೋಡಿದಾಗ ಎಷ್ಟೊಂದು ಸರಳ ವ್ಯಕ್ತಿ ಎಂದು ಆಶ್ಚರ್ಯವೆನಿಸಿತು. ಏಕೆಂದರೆ ಶಿವಮೊಗ್ಗ ನಂದನ್ ಎಂದರೆ ಆ ವೇಳೆಗಾಗಲೇ ಫೋಟೋಗ್ರಫಿಯಲ್ಲಿ ತನ್ನ ಛಾಪು ಮೂಡಿಸಿದ ವ್ಯಕ್ತಿಯಾಗಿದ್ದರು. ಒಳ್ಳೆಯ ಹೆಸರು ಮಾಡಿದ್ದರು ಒಂದಿನಿತೂ ಗರ್ವವಿರದ ವ್ಯಕ್ತಿಯಾಗಿದ್ದರು. ನನ್ನ ರೂಮ್ ಮೇಟ್ ಸವಿತಾ ಕಾನೂನು ಪದವಿ ಓದುತ್ತಿದ್ದಳು. ಅವಳ ಗೆಳತಿಯ ಫೋಟೋಗಳನ್ನು ಅದ್ಭುತವಾಗಿ ತೆಗೆದಿದ್ದನ್ನು ನಾನು ಮೊದಲೇ ನೋಡಿದ್ದೆ, ಆಗಲೇ ಅವರ ಕುರಿತಾಗಿ ಸ್ವಲ್ಪ ತಿಳಿದಿದ್ದೆ. ಆದರೆ ಮೊದಲು ನೋಡಿದ್ದು ಮಾತ್ರ ಸಂಸ್ಕೃತೋತ್ಸವದ ಭಾಷಣ ಸ್ಪರ್ಧೆಯಲ್ಲಿಯೇ. ಹೀಗೆ ಆರಂಭವಾದ ಪರಿಚಯ ಮತ್ತೂ ಪರಿಚಿತರಾದದ್ದು ನನ್ನ ಮನೆಯವರಿಂದ. ಏಕೆಂದರೆ ಅವರದ್ದೂ ಫೋಟೋಗ್ರಫಿ ಫೀಲ್ಡೇ ಆಗಿದ್ದರಿಂದ ಈರ್ವರೂ ಸ್ನೇಹಿತರಾಗಿದ್ದರು. ಅಲ್ಲದೇ ಇಬ್ಬರದೂ ಪತ್ರಿಕೋದ್ಯಮವೇ ಆಗಿದ್ದರಿಂದ ಅವರು ಮತ್ತಷ್ಟು ಹೆಚ್ಚು ಆಪ್ತರಾಗಿದ್ದರು.

KLive Special Article ಆ ಕಾರಣಕ್ಕಾಗಿಯೇ ನನ್ನ ಮಗನ ಮೊದಲ ಕೃಷ್ಣವೇಶದ ಫೋಟೋ ತೆಗೆದು ಕೊಟ್ಟಿದ್ದರು. ಅದಂತೂ ಎಲ್ಲವೂ ಅದ್ಭುತವಾದ ಫೋಟೋಗಳಾಗಿದ್ದವು. ಅದರಲ್ಲಿ ಒಂದು ಫೋಟೋ ಕನ್ನಡಪ್ರಭ ವಿಶೇಷಾಂಕದಲ್ಲಿಯೂ ಪ್ರಕಟಗೊಂಡಿತ್ತು. ತುಂಬಾ ಸ್ಮರಣೀಯವಾದ ಫೋಟೋಗಳಿಗೆ ಅಂದು ಸಾಕ್ಷಿಯಾಗಿತ್ತು. ಅವತ್ತು ತೆಗೆದ ಎಲ್ಲಾ ಫೋಟೋಗಳು ವಿಭಿನ್ನವಾಗಿತ್ತು. ಸ್ನೇಹಿತರಾಗಿದ್ದರಿಂದ ಮನೆಯವರ ಆಫೀಸ್ ಆದ ಹೊಸದಿಗಂತದಲ್ಲಿ ಹೋಗಿ ಒಂದಷ್ಟು ಅದ್ಭುತ ಎನಿಸುವ ಫೋಟೋಗಳನ್ನೂ ತೆಗೆದಿದ್ದರು.

ಆಗಾಗ ಎಲ್ಲೋ ಸಿಗುತ್ತಿದ್ದರು, ಖುಷಿಯಿಂದ ಮಾತಾಡಿಕೊಂಡು ಹೋಗುತ್ತಾ ಇದ್ದರು. ನನಗೇನೋ ಒಂಥರಾ ಹೆಮ್ಮೆ. ಎಲ್ಲರಿಗೂ ಚಿರಪರಿಚಿತರಾದ ನಂದನ್ ಅವರಿಗೇ ನಾವು ಪರಿಚಿತರು ಎಂದು. ಒಮ್ಮೆಯಂತೂ ಮಗನಿನ್ನು ಸಣ್ಣವನಿದ್ದಾಗ ವನ್ಯಜೀವಿ ಸಪ್ತಾಹ ಸಕ್ರೆಬೈಲಿನಲ್ಲಿ ನಡೆದಿತ್ತು. ಆ ಸಮಾರೋಪದ ಕಾರ್ಯಕ್ರಮಕ್ಕೆ ಮಗ ಮತ್ತು ಮನೆಯವರು ಹೋಗಿದ್ದರು. ಅಲ್ಲಿ ಮಗನೇ ಅವರ ಫೋಟೋ ತೆಗೆದು ಅವರಿಗೆ ತೋರಿಸ್ತಾ ಇರೋ ಫೋಟೋ ಅಂತೂ ಸೂರ್ಯಂಗೆ ಟಾರ್ಚಾ ಅನ್ನೋ ರೀತಿಯಲ್ಲಿ ಇತ್ತು.

2020ರ ವೇಳೆಗೆ ಕರೋನಾ ಎಂಬ ಹೆಮ್ಮಾರಿ ಜಗತ್ತಿಗೆ ಕಾಲಿಟ್ಟಾಗ ನಮ್ಮ ಕುಟುಂಬಕ್ಕೆ ಮತ್ತಷ್ಟು ಹತ್ತಿರವಾದರು. ಆಗ ಅವರ ಕುರಿತು ಅನೇಕ ಅಚ್ಚರಿ ಎನಿಸುವ ಸಂಗತಿಗಳು ತಿಳಿಯುತ್ತಾ ಹೋದವು. ಲಾಕ್ಡೌನ್ ಸಂದರ್ಭದಲ್ಲಿ ಅವರು ಅದೆಷ್ಟು ಕುಟುಂಬಗಳಿಗೆ ಸಹಕಾರ ಮಾಡಿದ್ದಾರೋ ಲೆಕ್ಕವಿಲ್ಲ. ಕರೋನ ಪೀಡಿತರ ಮನೆಗಳಿಗೆ ಹೋಗಿ ಅವರಿಗೆ ಅಗತ್ಯವಾದ ಔಷಧಿ, ರೇಷನ್ ಇತ್ಯಾದಿಗಳನ್ನು ಕೊಡುವುದು, ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವುದು, ಯಾವ ಕುಟುಂಬದಲ್ಲಾದರೂ ಸಾವಾದರೆ ಅವರ ಅಂತ್ಯಸಂಸ್ಕಾರಕ್ಕೆ ಹೋಗುವುದು, ಹಣ್ಣು ಹಂಚುವುದು, ಅಗತ್ಯ ಆಹಾರ ಪೂರೈಕೆ, ಪ್ರತಿನಿತ್ಯ ಅವರ ಉಭಯ ಕುಶಲೋಪರಿ ವಿಚಾರಿಸುವುದು. ಇಂತಹ ಲೆಕ್ಕವಿಲ್ಲದಷ್ಟು ಸಹಾಯಗಳನ್ನು ಮಾಡಿದ್ದಾರೆ. ಹಾಗಂತ ಅದನ್ನೆಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಇತರರು ಹೇಳಿದಾಗಲೇ ನಮಗೂ ತಿಳಿಯುತ್ತಿತ್ತು. ಕಷ್ಟ ಎಂದು ಯಾರೇ ಹೇಳಲಿ ಅವರ ಸಹಾಯಕ್ಕೆ ನಿಲ್ಲುವ ಮೊದಲ ವ್ಯಕ್ತಿ ನಂದನ್ ಜಿ ಎಂದರೆ ತಪ್ಪಾಗಲಾರದು. ಇದು ಅವರ ಬಾಲ್ಯದಲ್ಲಿನ ಬಡತನವೋ ಅಥವಾ ಆಗಿನಿಂದಲೂ ಕಂಡ ಜೀವನಪಾಠವಾಗಿರಬಹುದು ಎಂದು ಈಗ ಅನ್ನಿಸುತ್ತಿದೆ.

ಅನೇಕರ ಮನೆಯ ಎಲ್ಲಾ ಇವೆಂಟ್ಗಳ ಫೋಟೋಗಳನ್ನು ತೆಗೆದು ಮನೆಯವರೆಲ್ಲರೂ ಚಿರಪರಿಚಿತರಾಗಿ ಆ ಮನೆಯ ಸದಸ್ಯರಲ್ಲಿ ಒಬ್ಬರಾಗಿ ಬಿಡುತ್ತಿದ್ದರು. ಅವರ ಎಲ್ಲ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಒಡನಾಡಿಯಾಗುತ್ತಿದ್ದರು. ಒಮ್ಮೆ ನಮಗೆ ಕೊರೋನಾ ಸಂದರ್ಭದಲ್ಲಿ ಇಬ್ಬರಿಗೂ ಸಂಬಳವಿಲ್ಲ ಮುಂದೇನು ಮಾಡಬೇಕೆಂಬುದೇ ತಿಳಿಯುತ್ತಿಲ್ಲ ಎಂದು ನಾನು ನೊಂದಾಗ, ನಾವಿರುವಾಗ ನೀವು ಯಾವುದಕ್ಕೂ ಚಿಂತೆ ಮಾಡಬೇಡಿ, ನಾವಿದ್ದೇವೆ ಧೈರ್ಯವಾಗಿರಿ ಎಂದು ಸಾಂತ್ವನದ ಮಾತನ್ನಾಡಿ ಬದುಕಿಗೆ ಧೈರ್ಯ ತುಂಬಿದ್ದರು.

ನಮ್ಮ ಮನೆಯ ಗೃಹಪ್ರವೇಶದ, ನನ್ನ ಪುಸ್ತಕ ಬಿಡುಗಡೆಯ ಎಲ್ಲ ಸುಂದರ ಕ್ಷಣಗಳನ್ನು ಅವರು ಜೀವಂತವಾಗಿರಿಸಿದ್ದಾರೆ.

ಸದ್ಗುಣಗಳ ಗಣಿಯಾದವರು ಇನ್ನಷ್ಟು ನಮ್ಮೊಂದಿಗೆ ಇರಬೇಕಿತ್ತು. ಸಾಧಿಸಿದ್ದು ಇನ್ನೂ ಕಡಿಮೆ, ಅದ್ಭುತವಾದದ್ದು ಸಾಧಿಸುವ ತುಡಿತ ಇಟ್ಟುಕೊಂಡಿದ್ದ ಜೀವ ಅದು. ಯಾರೇ ಆಗಲಿ ತ್ರಾಹಿ ಅಂದವರಿಗೆ ತನ್ನ ನೆರವಿನ ಹಸ್ತ ಚಾಚದೇ ಇರುತ್ತಿರಲಿಲ್ಲ. ಸರಳ, ಸಹೃದಯ,ಪ್ರಾಣಿ ಪ್ರೇಮಿ, ಪರಿಸರ ಪ್ರೇಮಿ, ಸಜ್ಜನ, ಹಠವಾದಿ ಹಾಗೂ ನಿಷ್ಟುರವಾದಿ ( ಆದರದು ವಿಷಯದ ವಾಸ್ತವತೆಗಷ್ಟೆ ಮೀಸಲು) ಇದರ ಹೊರತಾಗಿಯೂ ಸಂಬಂಧಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದ ವ್ಯಕ್ತಿ.
ಒಳ್ಳೆ ಫ್ರೇಮ್ ನಲ್ಲಿ ಇರಬೇಕು ಅಂತ ಫೋಟೋ ತೆಗಿತಿದ್ರು. ಕಂಟೆಂಟ್ ಬೇಸ್ ಫೋಟೋಗಳು ಆಗಿರುತ್ತಿದ್ವು. ಪ್ರಕೃತಿ ಪ್ರೇಮಿ, ಮರ ಗಿಡ ಪ್ರಾಣಿ ಪಕ್ಷಿಗಳೆಂದರೆ ಪ್ರಾಣ, ಮಗಳೆಂದರೆ ಪ್ರೀತಿ, ಮಗನೆಂದರೆ ಹೆಮ್ಮೆ. ತನ್ನ ಜೀವನದಲ್ಲಿ ಹೆಚ್ಚು ಗೌರವ ಪ್ರೀತಿ ತೋರಿಸ್ತಾ ಇದ್ದಿದ್ದು ತಾಯಿಗೆ, ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದು ತಾಯಿಯನ್ನೇ, ತಿಳಿಸಾರೆಂದರೆ ಅವರಿಗೆ ಬಲು ಇಷ್ಟ.

ನೋವು ಎನ್ನುವುದು ಆರೋಗ್ಯವೂ ಸೇರಿದಂತೆ ಎಲ್ಲದರಲ್ಲೂ ತಿಂದದ್ದು ಸ್ವಲ್ಪ ಹೆಚ್ಚೇ ಆದರೂ ಸದಾ ನಗುಮುಖ. ಅವರ ಸ್ವಭಾವ ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ ಎಂಬಂತೆ. ನಂದನ್ ಅವರಿಗೆ ಅನೇಕ ಸನ್ಮಾನ ಪುರಸ್ಕಾರಗಳು ಬಂದರೂ ಎಂದಿಗೂ ಬೀಗದ ವ್ಯಕ್ತಿ. ಅವರಿಗೆ ಅಂತ ಗೌರವಿಸಿದ್ದನ್ನು ಅದೇ ವೇದಿಕೆಯಲ್ಲಿ ಅವರ ಶಿಕ್ಷಕಿಗೆ ಸಮರ್ಪಿಸಿದ ನಿಷ್ಠಾವಂತ ಶಿಷ್ಯ. ಹೀಗೆ ಹೇಳ್ತಾ ಹೋದರೆ ಅದು ಮುಗಿಯದ ಕಥೆ.

ಹೃದಯಾಘಾತದಿಂದ ಅವರಿಲ್ಲ ಎಂದು ಕೇಳಿದಾಗಿನಿಂದ, ಸೂತಕದ ಮನೆಯಾದ ಸುದ್ದಿಮನೆ ಎಂಬ ಮುರಳಿಧರ್ ಅವರ ಸಾಲುಗಳು, ಸಾವಿಗೆ ಸಾವು ಬರಬಾರದೇಕೆ ಎಂಬ ರವಿ ಟೆಲೆಕ್ಸ್ ಅವರ ಮಾತುಗಳು ಮತ್ತಷ್ಟು ಹೃದಯವನ್ನು ಆರ್ದ್ರಗೊಳಿಸಿದೆ. ಅವರ ಕುರಿತಾಗಿ ಇತರರು ಫೇಸ್ಬುಕ್ ವಾಟ್ಸಾಪ್ ಗಳಲ್ಲಿ ಬರೆದಿದ್ದನ್ನು ನೋಡಿದರೆ ಅವರು ಎಷ್ಟು ಜನರ ಹೃದಯಕ್ಕೆ ಹತ್ತಿರವಾಗಿದ್ದರು ಎಂದು ತಿಳಿದು ಬರುತ್ತದೆ. ‘ಮನಸ್ಸಿಗಾಗಿರುವ ಭಾರದಿಂದ ನಾನು ನೋಡಲೂ ಬಂದಿಲ್ಲ… ನನಗೆ ನಗು ಮುಖದ ನಂದನ್ ನೆನಪೇ ಬೇಕೆಂಬ ಹಠ…
ಆದರೂ ಛಾಯಾಗ್ರಹಣದಲ್ಲಿ ನಂದನ್ ಗೆ ನಂದನ್ ಅವರೇ ಸಾಟಿ…
ಒಳ್ಳೆಯ ಫೋಟೋ ಎಂದಾಕ್ಷಣ ನಂದನ್ ನೆನಪಾಗುತ್ತಿದ್ದರು, ಈಗ ಆ ಪ್ರಶ್ನೆಗೆ ಶೂನ್ಯ ಕಾಡುತ್ತಿದೆ… ಪ್ರಶ್ನೆಯಾಗಿಯೇ ಉಳಿಯುವುದೇನೋ ಅಷ್ಟರ ಮಟ್ಟಿಗೆ ನಂದನ್ ನಮ್ಮನ್ನು ಆವರಿಸಿದ್ದರು… ಎನ್ನುವ ವಾದಿರಾಜ್ ಮಾತುಗಳಂತೆಯೇ ಅನೇಕರಿಗಾಗಿದೆ.

ಬಹು ಮುಖ್ಯವಾದ ಹಾಗೂ ಮೆಚ್ಚಲೇ ಬೇಕಾದ ಗುಣ ಎಂದರೆ, ತನ್ನಂತೆಯೇ ಅನೇಕರು ಬೆಳೆಯಲು ಪ್ರೋತ್ಸಾಹಿಸುವ ಸಜ್ಜನಿಕೆಯ ಗುರುವಿನ ಗುಣ ಅವರಲ್ಲಿತ್ತು. ಧರಣಿ ಕೂರೋದ್ರಲ್ಲಿ ಮೊದಲು, ಮರ ಕಡಿತಾರಂದ್ರೆ ಮೊದಲು ತನ್ನನ್ನೇ ತೆಗಿರಿ ಅಂತ ತನ್ನ ಪ್ರಾಣ ಕೊಡಲು ಹೊರಟವ, ಒಮ್ಮೊಮ್ಮೆ ಆರೋಗ್ಯದ ಕಾರಣದಿಂದ ಬಸವಳಿದು ಹೋಗಿದ್ರು ಬತ್ತದ ಉತ್ಸಾಹ ಹೊಂದಿದ ವ್ಯಕ್ತಿ, ತನಗೆ ತಿಳಿದ ಅನೇಕ ಉತ್ತಮ ಸಂಗತಿಗಳನ್ನು ಇತರರಿಗೂ ಹಂಚುವ ಸಹೃದಯಿ.

ಒಟ್ಟಾರೆ ಹೇಳಬೇಕೆಂದರೆ ಬದುಕನ್ನು ಪ್ರೀತಿಸುವಂತೆ ಮಾಡಿದ, ಭಾವನೆಗಳ ಜೊತೆಗೆ ಜೀವಂತ ಚಿತ್ರ ನೋಡಿದಂತಾಗುವ ಫೋಟೋ ಕ್ಲಿಕ್ಕಿಸುವ ಮತ್ತು ಆ ದಿನಗಳನ್ನು ಜೀವಂತವಾಗಿರಿಸಿದ ಜಾದುಗಾರ. ಇವೆಲ್ಲವೂ ನನ್ನೊಬ್ಬಳ ಮಾತಲ್ಲ ಅವರ ಕುರಿತಾಗಿ ಯಾರನ್ನೇ ಕೇಳಿದರು ಇವುಗಳೇ ಬರುತ್ತವೆ. ನಮ್ಮ ಶ್ರೀಧರ, ಶಿವಣ್ಣ ಎಲ್ಲರೂ ಸಹ ಅವರ ಸಾವಿಗೆ ಮರುಗಿದವರೇ. ಹೀಗೆ ಹೇಳುವಾಗ ಕಣ್ಣಂಚಲಿ ಹನಿಯೊಂದು ಜಾರಿದೆ. ಭಾವನೆಗಳಿಗೆ ಜೀವ ತುಂಬುವ ಜೀವಿಗೆ ಭಾವಪೂರ್ಣ ವಿದಾಯವನ್ನು ಈ ನುಡಿ ನಮನಗಳ ಮೂಲಕ ಸಲ್ಲಿಸುತ್ತಿದ್ದೇನೆ. ಹೋಗಿ ಬನ್ನಿ ನಂದನ್ ಜೀ….ನಿಮ್ಮಂತವರ ಸಂತತಿ ಸಾವಿರವಾಗಲಿ.

ನೀವು ಮಾಡಿದ ಒಳ್ಳೆಯ ಕೆಲಸಗಳಿಂದಲೇ ನಿಮಗೆ ಸದ್ಗತಿ ದೊರೆಯಲಿ. ನಿಮ್ಮ ಕುಟುಂಬಕ್ಕೆ ನಿಮ್ಮ ಅಗಲಿಕೆ ನೋವು ಸಹಿಸುವಂತೆ ಭಗವಂತ ಕರುಣಿಸಲಿ. ನೀವು ಬಿಟ್ಟುಹೋದ ಹಾದಿಯಲ್ಲಿ ಉಳಿದವರು ನಡೆಯುವಂತಹ ಪ್ರೇರಣೆ ಸಿಗುವಂತಾಗಲಿ. ನೀವು ಇನ್ನೂ ಮಾಡಬೇಕೆಂದಿದ್ದ ಸಾಧನೆಗಳಿಗೆ, ಕಾರ್ಯಗಳಿಗೆ ನಿಮ್ಮ ಕುಟುಂಬಕ್ಕೆ ಪ್ರೇರಣೆ ದೊರೆತು ಮುನ್ನಡೆಸುವಂತಾಗಲಿ, ಏಕೆಂದರೆ ನಿಮ್ಮ ಮಗನೇ ಹೇಳಿದ್ದಾನೆ “ತೊರೆದು ಹೋದವರ ಹುಡುಕಬಹುದು ನಮ್ಮೊಳಗಿನ ಅಸ್ಮಿತೆಯಾಗುಳಿದಿಹ ದೀಪವನ್ನಲ್ಲ. ಎನ್ನಾಲದ ಮರ ಎನ್ನೊಳಗೆ ಬೇರೂರಿದೆ” ಎಂದು ಇದೇ ಆಶಭಾವನೆ ನಮಗೆ. ನಿಮ್ಮ ಹಾಗೂ ನಿಮ್ಮ ಬದುಕಿನಿಂದ ಪ್ರೇರಣೆ ದೊರೆತು ಇನ್ನಷ್ಟು ಸತ್ಕಾರ್ಯಗಳು ಸಮಾಜದಲ್ಲಿ ಆಗುವಂತಾಗಲಿ. ಎಲ್ಲ ಸಮಾಜಮುಖಿ ಕಾರ್ಯಗಳಲ್ಲಿ ನಿಮ್ಮನ್ನು ಕಾಣುವಂತಾಗಲಿ. ನಿಮ್ಮ ಹೆಸರಿನಲ್ಲಿ ಒಂದು ಪ್ರಶಸ್ತಿ ನೀಡಿ ಪತ್ರಿಕೋದ್ಯಮದಲ್ಲಿ ನಿಮ್ಮ ಹೆಸರು ಚಿರಸ್ಥಾಯಿಯಾಗುವಂತಾಗಲಿ. ಎಲ್ಲರ ಕುಟುಂಬಕ್ಕೂ ನೆರವಿನ ಹಸ್ತ ಚಾಚಿದ ನಿಮ್ಮ ಕುಟುಂಬಕ್ಕೂ ನೆರವು ದೊರಕುವಂತಾಗಲಿ. ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದ ನಿಮ್ಮ ಆತ್ಮೀಯರು ನಿಮ್ಮ ಹೆಸರಿನಲ್ಲಿ ಒಂದು ಗಿಡವನ್ನಾದರೂ ನೆಟ್ಟು ನಿಮ್ಮನ್ನು ಜೀವಂತವಾಗಿರಿಸಿಕೊಳ್ಳಲಿ. ಹೋಗಿ ಬನ್ನಿ ನಂದನ್ ಜೀ ….

ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಉಪನ್ಯಾಸಕರು,
ಪೇಸ್ ಪಿಯು ಕಾಲೇಜು, ಶಿವಮೊಗ್ಗ

DC Shivamogga ಗೋರಕ್ಷಣೆಗೆ ಶ್ರೀಜ್ಞಾನೇಶ್ವರಿ ಗೋ ಶಾಲೆ& ದೈವಜ್ಞ ಬ್ರಾಹ್ಮಣ ಸಮಾಜದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

0

DC Shivamogga ಗೋವುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಗೋಶಾಲೆಗಳಿಗೆ ಭದ್ರತೆ ಒದಗಿಸುವಂತೆ ಆಗ್ರಹಿಸಿ ನಗರದ ಶ್ರೀ ಜ್ಞಾನೇಶ್ವರಿ ಗೋಶಾಲೆ ಹಾಗೂ ದೈವಜ್ಞ ಬ್ರಾಹ್ಮಣ ಸಮಾಜದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.
ಪವಿತ್ರ ಗೋಮಾತೆಗೆ ಕ್ರೂರ ಚಿತ್ರಹಿಂಸೆ ನೀಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಬೆಂಗಳೂರಿನ ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದು ಚಿತ್ರಹಿಂಸೆ ನೀಡಿರುವುದು ಆಘಾತ ಉಂಟು ಮಾಡಿದೆ. ಗೋಮಾತೆಗೆ ನೋವು ನೀಡಿರುವ ಘಟನೆ ಗೋಪಾಲಕರು ಹಾಗೂ ಗೋಪ್ರೇಮಿಗಳಿಗೆ ನೋವುಂಟು ಮಾಡಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
DC Shivamogga ರಾಜ್ಯದಲ್ಲಿ ಗೋವುಗಳಿಗೆ ರಕ್ಷಣೆ ಇಲ್ಲವಾಗಿದೆ. ಗೋವುಗಳಿಗೆ ಚಿತ್ರಹಿಂಸೆ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಮತಾಂಧ ಶಕ್ತಿಗಳ ಕೈವಾಡ ಕಂಡು ಬರುತ್ತಿದೆ. ಪ್ರಕರಣವನ್ನು ಅಖಂಡ ಗೋಪ್ರೇಮಿಗಳು, ಜ್ಞಾನೇಶ್ವರಿ ಗೋಶಾಲೆ ಆಡಳಿತ ಮಂಡಳಿ ಹಾಗೂ ದೈವಜ್ಞ ಬ್ರಾಹ್ಮಣ ಸಮಾಜದ ಪದಾಧಿಕಾರಿಗಳು ಖಂಡಿಸುತ್ತೇವೆ. ಗೋವುಗಳಿಗೆ ಹಿಂಸೆ ನೀಡಿರುವ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ವಿವಿಧೆಡೆ ಇರುವ ಗೋಶಾಲೆಗಳಿಗೆ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು.
ಜ್ಞಾನೇಶ್ವರಿ ಗೋಶಾಲೆ ಅಧ್ಯಕ್ಷ ಚಂದ್ರಹಾಸ ಪಿ.ರಾಯ್ಕರ್, ಪ್ರಶಾಂತ್ ಸಿ.ರಾಯ್ಕರ್, ಗುರುರಾಜ್ ಶೇಟ್, ಗಣೇಶ್, ದೈವಜ್ಞ ಸಮಾಜದ ಪ್ರಕಾಶ್, ಎಸ್.ಪಾಂಡುರಂಗ ಶೇಟ್, ಸೋಮೇಶ್, ಕೃಷ್ಣಮೂರ್ತಿ, ರಾಘವೇಂದ್ರ ಮತ್ತಿತರರು ಹಾಜರಿದ್ದರು.

Actor Saif Ali Khan ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ದುಷ್ಕರ್ಮಿಗಳಿಂದ ಚಾಕು ಇರಿತ

0

Actor Saif Ali Khan ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ಜ.16ರಂದು ನಡೆದ ಬಗ್ಗೆ ವರದಿಯಾಗಿದೆ.

ಬಾಂದ್ರಾ (ಪಶ್ಚಿಮ) ದಲ್ಲಿರುವ ಅವರ ನಿವಾಸದೊಳಗೆ ನುಗ್ಗಿದ ದುಷ್ಕರ್ಮಿಗಳು ಚೂರಿಯಿಂದ 2-3 ಬಾರಿ ಇರಿದ ಪರಿಣಾಮ ನಟ ಗಾಯಗೊಂಡಿದ್ದಾರೆ.

ಮುಂಬೈ ನ ಲೀಲಾವತಿ ಆಸ್ಪತ್ರೆಯಲ್ಲಿ ನಟ ಚಿಕಿತ್ಸೆ ಪಡೆಯುತ್ತಿದ್ದು, ಜ.16ರ ಗುರುವಾರ ಮುಂಜಾನೆ 2:30 ರ ಸುಮಾರಿಗೆ ನಟ ತನ್ನ ಇತರ ಕುಟುಂಬ ಸದಸ್ಯರೊಂದಿಗೆ ತನ್ನ ಮನೆಯಲ್ಲಿ ಮಲಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

Actor Saif Ali Khan ಘಟನೆ ಸಂಬಂಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಕೊಂಡ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Bharat Scouts and Guides ಮುಂದೆ ಗುರಿ ಹಿಂದೆ ಗುರುವಿನ ಅನುಗ್ರಹದಿಂದ ಮುಂದುವರೆಯಿರಿ- ಡಾ.ರವಿಕಿರಣ್

0

Bharat Scouts and Guides ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಜಿಲ್ಲಾ ಸಂಸ್ಥೆ ವತಿಯಿಂದ ಸ್ಥಳೀಯ ಸಂಸ್ಥೆಯ ಸಹಯೋಗದಲ್ಲಿ ದಿನಾಂಕ 13-01-2025, ಸೋಮವಾರದಂದು ಜಿಲ್ಲಾ ಸ್ಕೌಟ್ ಭವನದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಸ್ವಾಮಿ ವಿವೇಕಾನಂದರ 163ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಶ್ರೀ ಡಾ. ರವಿ ಕಿರಣ್, ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಪ್ರಜ್ವಲಿಸಿ ಮಾತನಾಡುತ್ತಾ, ಸ್ವಾಮಿ ವಿವೇಕಾನಂದರ ಜೀವನದಲ್ಲಿ ಆಗಿ ಹೋದ ಘಟನೆಗಳು, ಅನುಭವಿಸಿದ ನೋವು ಅವಮಾನ ಮತ್ತು ಅದನ್ನು ಎದುರಿಸಿದ ರೀತಿಯನ್ನು ಮಕ್ಕಳಿಗೆ ಕಣ್ಣು ಕಟ್ಟುವ ರೀತಿಯಲ್ಲಿ ಹೇಳಿದರು. ಅವರ ಉದ್ಘೋಶ ” ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ” ಸರ್ವ ಮಕ್ಕಳಿಂದ ಹೇಳಿಸಿ, ಅದರಂತೆ ಜೀವನದಲ್ಲಿ ಮುಂದೆ ಗುರಿ ಇಟ್ಟುಕೊಂಡು ಹಿಂದೆ ಗುರುವಿನ ಅನುಗ್ರಹದಿಂದ ಜೀವನದಲ್ಲಿ ಮುಂದೆ ಬರಲು ತಿಳಿಸಿದರು.

ಕಾರ್ಯಕ್ರಮವು ಸ್ಕೌಟ್ ಗೈಡ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶ್ರೀ ಎಸ್. ಜಿ. ಆನಂದ್ ಜಿಲ್ಲಾ ಆಯುಕ್ತರು ( ಸ್ಕೌಟ್ಸ್ )ಸರ್ವರನ್ನು ಸ್ವಾಗತಿಸಿದರು. ಕೇಂದ್ರ ಸ್ಥಾನಿಕ ಆಯುಕ್ತ ಶ್ರೀ ಜಿ. ವಿಜಯಕುಮಾರ್ ಅತಿಥಿಗಳನ್ನು ಪರಿಚಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ರವರು ತಮ್ಮ ಅಧ್ಯಕ್ಷಿಯ ನುಡಿಯಲ್ಲಿ ಸ್ವಾಮಿ ವಿವೇಕಾನಂದರ ದೃಷ್ಟಿಕೋಣವನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರ ಧ್ಯೆಯವಾದ ” ಸಮಾಜಕ್ಕಾಗಿ ಬಾಳು ” ಎನ್ನುವಂತೆ ಸಮಾಜದಲ್ಲಿ ಎಲ್ಲೆಲ್ಲಿ ಅವಕಾಶ ಸಿಗುವುದೋ ಅಲ್ಲಲ್ಲಿ ಸೇವೆ ಸಲ್ಲಿಸಿ ಭಾರತ ಮಾತೆಗೆ ನಿಮ್ಮ ಕೊಡುಗೆ ಕೊಡಿ ಎಂದು ಮಕ್ಕಳಿಗೆ ಕರೆ ನೀಡಿದರು.

Bharat Scouts and Guides ಜಿಲ್ಲಾ ಸಹಕಾರ್ಯದರ್ಶಿ ಶ್ರೀ ವೈ. ಆರ್. ವೀರೇಶಪ್ಪ ಸರ್ವರಿಗೂ ವಂದಿಸಿದರು. ಜಿಲ್ಲಾ ಖಜಾಂಚಿ ಶ್ರೀ ಚೂಡಾಮಣಿ ಪವಾರ್, ಸಹಾಯಕ ಜಿಲ್ಲಾ ಆಯುಕ್ತ ಶ್ರೀ ಮಲ್ಲಿಕಾರ್ಜುನ ಕಾನೂರ್, ಕೇಂದ್ರ ಸ್ಥಾನಿಕ ಆಯುಕ್ತ ಶ್ರೀ ಎಂ. ಕೆ. ಕೃಷ್ಣಸ್ವಾಮಿ, ಗೈಡ್ ಶಿಕ್ಷಕಿ ಶ್ರೀಮತಿ ದಾಕ್ಷಾಯಿಣಿ ರಾಜಕುಮಾರ್, ಸ್ಕೌಟ್ ಮಾಸ್ಟರ್ ಶ್ರೀ ಅಣ್ಣಪ್ಪ ಒಂಟಮಾಳಗಿ, ಕಛೇರಿ ಸಿಬ್ಬಂದಿ ಶ್ರೀ ದೇವಯ್ಯ, ಭರತ್ ಉಪಸ್ಥಿತರಿದ್ದರು.

ನಗರದ ವಿವಿಧ ಶಾಲಾ, ಕಾಲೇಜಿನಿಂದ 150 ಮಕ್ಕಳು ಭಾಗವಹಿಸಿದ್ದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀ ರಾಜೇಶ್ ವಿ ಅವಲಕ್ಕಿ ರವರು ಕಾರ್ಯಕ್ರಮ ನಿರೂಪಿಸಿದರು ಮತ್ತು ಮುಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ರಾಷ್ಟ್ರಗೀತೆ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.