Monday, March 16, 2026
Monday, March 16, 2026
Home Blog Page 418

DC Shivamogga ಗಣಿ ದುರ್ಬಳಕೆಯಾದರೆ ಮುಖ್ಯಾಧಿಕಾರಿಗಳೇ ಹೊಣೆ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

0

DC Shivamogga ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಲಭ್ಯವಿರುವ ಮರಳು ಬ್ಲಾಕ್‌ಗಳನ್ನು ಸರ್ಕಾರದ ವಿವಿಧ ಕಾಮಗಾರಿಗಳಿಗೆ ಹಾಗೂ ಇನ್ನಿತರೆ ಕಾಮಗಾರಿಗಳಿಗೆ ನಿಯಮಾನುಸಾರ ಸರ್ಕಾರದ ಮರಳು ನೀತಿಯ ನಿಬಂಧನೆಗಳಿಗೊಳಪಟ್ಟು ಇಲಾಖೆಗಳಿಗೆ ಕಾಯ್ದಿರಿಸಲು ಜಿಲ್ಲಾ ಸಮಿತಿಗೆ ಇರುವ ಪ್ರದತ್ತ ಅಧಿಕಾರವನ್ನು ಬಳಸಿ, ಗಣಿಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಗಣಿಯನ್ನು ಕಾಯ್ದಿರಿಸಲು ಕೋರಿಕೆ ಸಲ್ಲಿಸಿದ ಇಲಾಖಾಧಿಕಾರಿಗಳು ಸಲ್ಲಿಸಿದ ಕೋರಿಕೆಯನ್ನು ಪರಿಶೀಲಿಸಿ, ತಮ್ಮ ಕೋರಿಕೆಯ ಗಣಿಯನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗುವುದು ಎಂದರು.
ಗಣಿಯನ್ನು ಬಳಸಿಕೊಳ್ಳಲು ಕೋರಿಕೆ ಸಲ್ಲಿಸಿದ ಇಲಾಖಾಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು, ಬೇಕಾದ ಮರಳಿನ ಪ್ರಮಾಣವನ್ನು ಲಿಖಿತವಾಗಿ ಬರೆದುಕೊಡಬೇಕು. ಗಣಿಯನ್ನು ದು‍ರ್ಬಳಕೆ ಮಾಡಿದಲ್ಲಿ ಸಂಬಂದಿಸಿದ ಇಲಾಖಾ ಮುಖ್ಯಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ಮರಳನ್ನು ಉದ್ದೇಶಿಕ ಕಾ‍ರ್ಯಕ್ಕೆ ಬಳಸಿಕೊಳ್ಳಬೇಕು. ನೆರೆಯ ಜಿಲ್ಲೆಗಳಿಗೇ ರವಾನಿಸಿದಲ್ಲಿ, ದುರ್ಬಳಕೆ ಮಾಡಿಕೊಂಡ ಬಗ್ಗೆ ಮಾಹಿತಿ ದೊರೆತಲ್ಲಿ ಅಂತಹ ಅಧಿಕಾರಿ-ಸಿಬ್ಬಂಧಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅಲ್ಲದೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದ ಅವರು, ಮರಳು ಗಣಿಗಾರಿಕೆ ಕೈಗೊಳ್ಳುವ ಸ್ಥಳದಲ್ಲಿ ಸಿ.ಸಿ.ಕ್ಯಾಮರಾಗಳ ಅಳವಡಿಕೆ ಮಾಡಿಕೊಳ್ಳಬೇಕು. ಅಗತ್ಯವಿರುವಾಗ ಸಿಸಿ.ಕ್ಯಾಮರಾ ಚಿತ್ರೀಕರಣದ ಪ್ರತಿಯನ್ನು ಸಂಬಂದಿಸಿದ ಇಲಾಖೆಗೆ ಒದಗಿಸಲು ಬದ್ದರಾಗಿರಬೇಕು ಎಂದರು.

ಕಾಯ್ದಿರಿಸಿದ ಗಣಿಗಳಲ್ಲದೆ ಉಳಿದ ಗಣಿಗಳನ್ನು ನಿಯಮಾನುಸಾರ ವಿಲೇ ಮಾಡುವಂತೆ ಜಿಲ್ಲಾ ಹಿರಿಯ ಭೂವಿಜ್ಞಾನಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಶಿವಮೊಗ್ಗ-ಭದ್ರಾವತಿ ತಾಲೂಕುಗಳ ವ್ಯಾಪ್ತಿಯಲ್ಲಿ ಹರಿಯುವ ತುಂಗ-ಭದ್ರಾ ನದಿ ಪ್ರದೇಶದಲ್ಲಿ ಯಾಂತ್ರಿಕ ದೋಣಿಗಳನ್ನು ಬಳಸಿ, ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದು, ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಗಣಿಗಳಿಂದ ಮರಳು ಸಾಗಾಣಿಕೆ ನಡೆಸುವ ಗುತ್ತಿಗೆದಾರರು ತಮ್ಮ ವಾಹನಗಳಿಗೆ ಜಿ.ಪಿ.ಎಸ್ ಅಳವಡಿಸಿರಬೇಕು.ಸ್ವಂತದ್ದಾಗಿರುವ ವೇಬ್ರಿಡ್ಜ್‌ ಹೊಂದಿರಬೇಕು. ಎನ್.ಜಿ.ಟಿ.ನಿಯಮಾನುಸಾರ ಯಂತ್ರಗಳನ್ನು ಬಳಸಬಾರದು. ಮಾನವ ಸಂಪನ್ಮೂಲವನ್ನೇ ಬಳಸಿ ಗಣಿಗಾರಿಕೆ ನಡೆಸಬೇಕು. ಐ.ಎಲ್ಎಂ.ಎಸ್.ನೋಂದಣಿ ಕಡ್ಡಾಯವಾಗಿ ಮಾಡಿಕೊಂಡಿರಬೇಕು ಹಾಗೂ ಮರಳು ದಾಸ್ತಾನಿಗೆ ಸ್ಥಳವನ್ನು ಹೊಂದಿರಬೇಕು ಎಂದರು.

ಮರಳು ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ಸುರಕ್ಷತಾ ಸಿಬ್ಬಂಧಿಯನ್ನು ನಿಯೋಜಿಸಿಕೊಳ್ಳಬೇಕು. ಜವಾಬ್ದಾರಿಯುತ ಅಧಿಕಾರಿಗಳೇ ನಿರ್ವಹಣೆಯ ಹೊಣೆ ಹೊರಬೇಕು ಎಂದ ಅವರು, ಗಣಿಗಳ ಉಸ್ತುವಾರಿಗಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿ-ಸಿಬ್ಬಂಧಿಗಳನ್ನು ನಿಯೋಜಿಸುವಂತೆ ಹಾಗೂ ಖುದ್ದು ಭೇಟಿ ನೀಡಿ ಪರಿಶೀಲಿಸುವಂತೆ ಅವರು ಸೂಚಿಸಿದರು.

DC Shivamogga ಈ ಹಿಂದೆ ಗಣಿಯನ್ನು ಪಡೆದುಕೊಂಡಿದ್ದ ಪಂಚಾಯತ್‌ರಾಜ್‌ ಇಲಾಖೆಯಿಂದ ಕಾಲಕಾಲಕ್ಕೆ ಇಲಾಖೆಗೆ ಸರಿಯಾದ ಮಾಹಿತಿ ನೀಡಿರುವುದಿಲ್ಲ. ಆದ್ದರಿಂದ ಅವರಿಗೆ ತಿಳುವಳಿಕೆ ನೀಡಬೇಕಲ್ಲದೆ ನೀಡಿರುವ ಗಣಿಯನ್ನು ಹಿಂದಕ್ಕೆ ಪಡೆದುಕೊಳ್ಳಲಾಗುವುದೆಂದವರು ನುಡಿದರು.

ಜಿಲ್ಲೆಯ ಎಲ್ಲಾ ಗಣಿಗಳ ಸಮರ್ಪಕ ನಿರ್ವಹಣೆಯ ಕುರಿತು ಆಯಾ ಪಂಚಾಯಿತಿ ವ್ಯಾಪ್ತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇಲಾಖಾ ನಿಯಮ ಅನುಸರಿಸುತ್ತಿರುವ ಬಗ್ಗೆ ವಿಶೇಷ ಗಮನಹರಿಸಬೇಕಲ್ಲದೆ ಸಂಬಂಧಿಸಿದ ಕಂದಾಯ ಹಾಗೂ ಪೊಲೀಸ್‌ ಇಲಾಖಾಧಿಕಾರಿಗಳು ಸೂಕ್ಷ್ಮವಾಗಿ ಗಮನಿಸಬೇಕೆಂದವರು ಸೂಚಿಸಿದರು.

ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಎತ್ತುವಳಿ ಮಾಡಿ ಆಂತರಿಕ ಸ್ಥಳಗಳಲ್ಲಿನ ನದಿ ಪಾತ್ರಗಳಲ್ಲಿ ದಾಸ್ತಾನು ಮಾಡಲಾಗುವ ಮರಳನ್ನು ಜಪ್ತಿ ಮಾಡಿ, ವಶಪಡಿಸಿಕೊಂಡು ವಿಲೇವಾರಿ ಮಾಡಲು ಹಾಗೂ ದರ ನಿಗಧಿಪಡಿಸಿಕೊಡುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಮಾರ್ಗದರ್ಶನ ನೀಡಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌, ಜಿಲ್ಲಾ ಪಂಚಾಯಿತಿ ಉಪಕಾರ್ಯದಶಿ ಶ್ರೀಮತಿ ಜಯಲಕ್ಷ್ಮಮ್ಮ, ಹಿರಿಯ ಭೂವಿಜ್ಞಾನಿ ಟಿ.ಕೆ.ನಾಯಕ್‌ ಸೇರಿದಂತೆ ಸಂಬಂದಿಸಿದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Klive Special Article “ಸೀತಾಪಹರಣ” ಸಿಹಿಮೊಗೆ ರಸಿಕರ ಮನಗೆದ್ದ ಯಕ್ಷಗಾನ

0

ಡಾ.ಸುಧೀಂದ್ರ. ಪ್ರಧಾನ ಸಂಪಾದಕ ಕೆ ಲೈವ್ ಪೋರ್ಟಲ್ ಶಿವಮೊಗ್ಗ.

Klive Special Article ಇಡಗುಂಜಿ ಮೇಳ ಅಂದರೆ ನಮಗೆ ಅಲ್ಲಿನ ಶ್ರೀಮಹಾಗಣಪತಿಯ ಭವ್ಯ ಮೂರ್ತಿ…
ಅಲ್ಲಿನ ಪರಿಸರದಲ್ಲಿ ಮರ್ಮರಿಸುವ ಯಕ್ಷಗಾನದ ಚಂಡೆ,ಮದ್ದಳೆ, ಭಾಗವತರ ಕಂಚಿನ ಕಂಠ, ವೇಷತೊಟ್ಟ ಯಕ್ಷಗಾನ ಕಲಾವಿದರು, ಅವರ ಮಾತು, ಹಾವಭಾವ ಏನೆಲ್ಲ ಯಕ್ಷಗಾನದ ವೇದಿಕೆ ಥಟ್ಟನೆ ನೆನಪಾಗುತ್ತದೆ.

ಸ್ಥಾಪಕ ಶಿವರಾಮ ಹೆಗಡೆ ನಂತರ ಪುತ್ರರಾದ ಕೆರೆಮನೆ ಶಂಭು ಹೆಗಡೆ, ಶಂಭುಹೆಗಡೆ ಪುತ್ರ ಶಿವಾನಂದ ಹೆಗಡೆ ಅಲ್ಲದೆ ಯುವ ಪೀಳಿಗೆಯ ಶ್ರೀಧರ ಹೆಗಡೆ ತನಕ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ತನ್ನ ಕಲಾ ಪರಂಪರೆಯ
ಮಡಿಹಾಸಿನ ಮೇಲೆ ಕುಣಿದು ಕುಪ್ಪಳಿಸಿದೆ. ಯಕ್ಷಗಾನ ಪ್ರಿಯರ ಮನದಾಳದಲ್ಲಿ ಇಡಗುಂಜಿ ಮೇಳದ ಆಟ ಎಂದರೆ ಬಹುದಿನಗಳ ಹಸಿವೆಗೆ ದೊರಕುವ ರಸದೂಟವೇ ಸರಿ.

ಈಗ ಇಡಗುಂಜಿ ಮೇಳಕ್ಕೆ ಈಗ
ಒಂಭತ್ತು ದಶಕಗಳು ಪೂರೈಸಿದ ಸಂಭ್ರಮ.
ಕರ್ನಾಟಕವೇ ಅಲ್ಲದೇ ಹೊರ ರಾಜ್ಯಗಳಲ್ಲಿ ಮೇಳ ಸುಳಿದಾಡಿ
ತನ್ನದೇ ಯಕ್ಷಗಾನದ ಪ್ರತಿಭೆಯಿಂದ ರಸಿಕರ ಮನಸೂರೆಮಾಡಿದೆ. ರಾಷ್ಟ್ರೀಯ ಉತ್ಸವಗಳಲ್ಲಿ ರಾರಾಜಿಸಿದ ಇಡಗುಂಜಿಯ ಮೇಳ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದೆ.

ಈ ವರ್ಷ ಯುನಸ್ಕೋದಿಂದ ಜಾಗತಿಕವಾಗಿ
ಪಾರಂಪರಿಕ ಕಲಾತಂಡವೆಂಬ
ಮನ್ನಣೆ ಪಡೆದು ಮತ್ತಷ್ಟೂ ನಭದತ್ತ ತನ್ನ ಯಕ್ಷ ಚಿತ್ತಾರ ಹರಡಿದೆ.

ಇಂತಹ ಸಂದರ್ಭದಲ್ಲಿಯೇ ಅಭ್ಯುದಯ,ಶ್ರೀಮಯ-90 ಸಾರಥಿಗಳು‌ . ಯಕ್ಷಗಾನ ರಸಿಕರು
ಎಲ್ಲರೂ ಒಂದಾಗಿ‌ ಯಕ್ಷಗಾನ ಕಲಾ ಸಂಘಟಕ ಶಿವಾನಂದ ಹೆಗಡೆ ಅವರಿಗೆ‌ ಆತ್ಮೀಯ ಸನ್ಮಾನ‌ವನ್ನ ಜನವರಿ 26 ರಂದು ಏರ್ಪಡಿಸಿತ್ತು.

ಈಗ ಸನ್ಮಾನ ,ಸತ್ಕಾರ ಅಂದರೆ ಅದು‌ ಮಾಮೂಲಿನ ವಿಷಯವಾಗಿದೆ. ಅದಕ್ಕೆಂದೇ
ಒಂದುಷ್ಟು ಕಲಾರಸದೌತಣವಿರಲಿ
ಎಂಬ ಆಶಯದ‌” ಸೀತಾಪಹರಣ”
ಪ್ರಸಂಗದ ಪ್ರದರ್ಶನವನ್ನು ಅಣಿಗೊಳಿಸಲಾಗಿತ್ತು.

ಕತೆ ಹೂರಣ ಸರ್ವವಿದಿತ.ಆದರೆ‌
ಶಿವಾನಂದ ಹೆಗಡೆ ಅವರ ತಾಲೀಮಿನಲ್ಲಿ‌ ಅಂದು ಸೀತಾಪಹರಣ ಕತೆ, ( ನನ್ನ ಮಟ್ಟಿಗಂತೂ)ವಿನೂತನವಾಗಿ‌
ನಿರೂಪಿಸಲ್ಪಟ್ಟಿತು.

Klive Special Article ರಂಗಪೂಜೆಯ ಸಂಪ್ರದಾಯದ ನಂತರ‌ದ ಕ್ಷಣದಲ್ಲೇ ಕಥಾರಂಭ.
ಇದೊಂದು‌ ವಿಶಿಷ್ಟ. ಮೊದಲಲ್ಲೇ‌ ರಾಮ ಲಕ್ಷ್ಮಣ ವೇಷಗಳು ಸಮೃದ್ಧವಾಗಿ ಪ್ರೇಕ್ಷಕರ ಕಣ್ತುಂಬಿಕೊಂಡವು. ರಾಮನ ಪಾತ್ರಧಾರಿ‌ ಶಿವಾನಂದ‌ಹೆಗಡೆ
ತುಂಬಿದ‌ಕೊಡದಂತೆ ಮಾತು, ಅಭಿನಯ, ಆಭೂಷಣಗಳಿಂದ
ರಾಮನೇ ಮೈವೆತ್ತಿ ಕೊಂಡಂತೆ ಭಾಸ. ಅವರದು ಲೀಲಾಜಾಲ‌ ನಟನೆ. ಲಕ್ಷ್ಮಣನಾಗಿ‌ ಅವರ ಪುತ್ರ ಶ್ರೀಧರ ಹೆಗಡೆ ಅಷ್ಟೇ ಸಮನಾಗಿ
ಅಭಿನಯದ ತೂಕ ನೀಡಿ ,ಅನುಭವಸ್ಥ ಪಾತ್ರಧಾರಿಯ‌ ಜೊತೆ‌
ಹಾಲು ಜೇನಂತೆ ಬೆರೆತು‌ ಇಡೀದೃಶ್ಯ
ಕಟ್ಟಿಕೊಡುವಲ್ಲಿ ಯಶಸ್ವಿಯಾದರು.
ಶ್ರೀಧರ ಹೆಗಡೆ ,ನಾಳಿನ ನಕ್ಷತ್ರ ಅಲ್ಲ
ಇಂದೇ ಬೆಳಗುವ‌ ತಾರೆ‌‌ ಎಂಬ ಭರವಸೆ ಮೂಡಿಸಿದರು.

ಪಂಚವಟಿಯಲ್ಲಿ ಸೀತೆಯು ಲಕ್ಷ್ಮಣನಿಗೆ ರಾಮನು‌ ಸಂಕಷ್ಟದಲ್ಲಿರುವಂತಿದೆ ತೆರಳು ಎಂದಾಗ‌ ಆವನು ರಾಮನ ಮಾತಿಗೆ‌ ಕಟ್ಟುಬಿದ್ದಿದ್ದೇನೆ ಎಂಬ ಇಬ್ಬಂದಿಸ್ಥಿತಿಯಲ್ಲಿದ್ದಾಗ ಸೀತೆ ಅಪಾರ್ಥಮಾಡಿಕೊಳ್ಳುವ ಸನ್ನಿವೇಶದಲ್ಲಿ ಹತಾಶನಾಗಿ‌ ನೆಲಕ್ಕೆ ಬೀಳುವ‌ ಅಭಿನಯ ಶ್ರೀಧರ‌ಹೆಗಡೆ ತನ್ಮಯತೆ ಮತ್ತು
ಮನೋಜ್ಞತೆಯನ್ನ ಬಿಂಬಿಸಿತು.

ರಾಮ ಸೀತೆಯರ‌ ಮಾಯಾಮೃಗದ
ಕುರಿತ ಸಂಭಾಷಣೆ ರಸಿಕರಿಗೆ ಕಚಗುಳಿಯಾಗಿತ್ತು. ಅಂದಿನ ಕತೆಯಲ್ಲಿ‌ ಇಂದಿನ ಸ್ತ್ರೀಯರ ಹಳದಿಲೋಹದ ವ್ಯಾಮೋಹಗಳನ್ನ ಎಳೆಎಳೆಯಾಗಿ ಬಿಡಿಸಿಟ್ಟದ್ದು
ರಸಿಕಾಂಗಣಕ್ಕೆ ಒಂದಿಷ್ಟು ಹೊತ್ತು
ಲವಲವಿಕೆ ನೀಡಿತು.
ರಾವಣನ‌ ಆಗಮನ ( ಪಾತ್ರಧಾರಿ:
ಕೆ.ಜಿ.ಮಂಜುನಾಥ) ‌ಪ್ರಸಂಗಕ್ಕೆ ತಿರುವು .ಅದರಲ್ಲೂ ಶೂರ್ಪನಖಿ‌
ಎದೆನಡುಗಿಸುವ‌ ವೇಷ. ಅವರೀರ್ವರ ಸಂಭಾಷಣೆ ಬೇಸರ ತರಿಸದೇ ಚುರುಕಾಗಿ‌ ಕತೆಯನ್ನು
ಸಾಗಿಸಿತು. ಶೂರ್ಪನಖಿ ಪಾತ್ರಧಾರಿ
( ವಿಘ್ನೇಶ್ವರ ಹಾಲುಗೋಡಿ ) ರಂಗವನ್ನ‌ ಆಕ್ರಮಿಸುವಂತೆ
ಆರ್ಭಟ. ಸೂಕ್ತ ಆಂಗಿಕ, ಆಹಾರ್ಯಗಳಿಂದ‌‌ ಪ್ರೇಕ್ಷಕರನ್ನ‌ ಸೆಳೆದರು.
ಮತ್ತೊಂದು‌ಘಟ್ಟವೆಂದರೆ ರಾವಣನು‌ ,ಮಾವ ಮಾರೀಚನ‌ ನೆರವು‌‌ಬೇಡುವ‌ ಪ್ರಸಂಗ. ಸಂಪೂರ್ಣ ಲೋಕಧರ್ಮೀ ಅಭಿನಯ‌‌ ತುಂಬಿದ ದೃಶ್ಯ. ಈರ್ವರ ಮಾತುಕತೆ ನಮ್ಮ‌ಲೌಕಿಕ ಜೀವನಕ್ಕೆ ಹಿಡಿದ ಕನ್ನಡಿ. ಮಾರೀಚನಾಗಿ ತಿಮ್ಮಪ್ಪ‌ಹೆಗಡೆ ಶಿರಳಗಿ‌ಕೂಡ ಪ್ರೇಕ್ಷರೊಂದಿಗೆ‌
ಸಂವಾದ ಮಾಡುವಂತಿತ್ತು. ಪಾಪಿಯ‌ ಕೈ ಸಾವಿಗಿಂತ‌ ದೇವರಾಮನ‌‌ ಬಾಣಕ್ಕೆ‌‌ ಎದೆಕೊಡುವುದೇ ಸೂಕ್ತ ಎಂಬ‌ ನಿರ್ಧಾರ ತಾಳುವಲ್ಲಿ‌ ಸಹೃದಯ‌ನೇ
ಆ ಪಾತ್ರಕ್ಕೆ ಭೇಷ್‌ ಹೇಳಿ ಬಿಡುವಂತಿದೆ.

ಹೀಗೆಯೇ ಮಾಯಾಮೃಗ‌ ಸನ್ನಿವೇಷ. ಅದಂತೂ‌ ಸಂಪೂರ್ಣ ಲೋಕಧರ್ಮೀ ಅಭಿನಯಕ್ಕೆ‌ ಸೋದಾಹರಣ ನಿರೂಪಣೆ. ಇಂದಿನ ರಮಣಿಯರ ಬಂಗಾರದ ವ್ಯಾಮೋಹಗಳನ್ನ ತರತರವಾಗಿ‌
ಲಘುಹಾಸ್ಯ ಮಿಶ್ರಿತವಾಗಿ ಮಾತಾಡುವ ರಾಮ( ಶಿವಾನಂದ ಹೆಗಡೆ) ಅಷ್ಟೇ ಸಂವಾದಿಯಾಗಿ
ಅಭಿನಯಿಸಿದ ಸೀತೆ‌( ಪಾತ್ರಧಾರಿ;
ಸದಾಶಿವ ಭಟ್ಟ) ಸಮಯ ಸರಿದದ್ದೇ‌ ತಿಳಿಯುವುದಿಲ್ಲ.

ಸಹೃದಯರಲ್ಲಿ ಅಂತಹ ಸೀತೆಯೇ ಬಂಗಾರಕ್ಕೆ ಆಸೆ ಪಟ್ಟಳಲ್ಲ‌ ಎಂದು‌
ವರ್ತಮಾನಕ್ಕೂ‌‌ ಬೆಸುಗೆ ಹಾಕುತ್ತದೆ. ಇದೇ‌ ಅಭಿನಯದ ಪ್ಲಸ್ ಪಾಯಿಂಟ್.
ಮಾಯಾಜಿಂಕೆಯಾಗಿ ಬಂದ‌‌
( ಪಾತ್ರಧಾರಿ; ಎನ್.ಚಂದ್ರಶೇಖರ್)
ರಂಗದ ಸಂಪೂರ್ಣ ಸ್ಥಳವನ್ನ ಬಳಸಿಕೊಂಡ ಏಕೈಕ‌ಪಾತ್ರ. ಜಿಂಕೆಯಾಗಿ‌ ಆಹಾರ್ಯದಲ್ಲಿ‌ ಯಶ. ಆಂಗಿಕದಲ್ಲಂತೂ‌ ಮತ್ತಷ್ಟು‌
ಸಿದ್ಧಿಪಡೆದ ಕಲಾವಿದ.
ಜಟಾಯು‌ ಪುಟ್ಟ ಪಾತ್ರವಾದರೂ
ಅದರ ಪ್ರವೇಶ ಮತ್ತು‌ ಅಭಿನಯ
ಸರಿಯಾದ ತೂಕದಲ್ಲಿತ್ತು.
ಪಾತ್ರಧಾರಿ, ಗಣಪತಿ‌ ಕುಣಬಿ ಕೂಡ
ಚೊಕ್ಕದಾದ ಪ್ರವೇಶ ಮತ್ತು‌ ಪರಿಣಾಮಕಾರಿ ಅಭಿನಯ.

ಕತೆಯ ಸರಿದಾಟ ಅರಿವಿಗೇ ಬರುವುದಿಲ್ಲ. ಪ್ರೇಕ್ಷಕರೇ ಮುಂದಿನ ಘಟನೆಗಳನ್ನ ನಿರೀಕ್ಷಿಸುವಂತೆಯೇ
ಆಟ ಮೋಡಿಯಂತೆ ನಡೆಯುತ್ತಿರುತ್ತದೆ. ಶಿಖರ ಘಟ್ಟವೇ
ಸೀತಾಪಹರಣ.
ಸನ್ಯಾಸಿ ರಾವಣನಾಗಿ‌ ಬಂದ ದೃಶ್ಯ‌
ಒಂದಷ್ಟು ಕ್ಷಣ ಅನಿಮಿಷನಾಗಿ
ಬಿಡುತ್ತಾನೆ‌ ಪ್ರೇಕ್ಷಕ. ಸೀತೆ‌ ಮೂರುಗೆರೆ ದಾಟುವ‌ ‌ಚಲನೆ, ರಾವಣ ( ಪಾತ್ರಧಾರಿ: ಈಶ್ವರ ಹಂಸಳ್ಳಿ) ದಿಟ್ಟ ನಿಲುವಿನಿಂದ, ವಂಚನೆಯ‌ ಮಾತುಗಳಿಂದ ಖಳನಾಯಕನಾಗಿ ನಮ್ಮ ಭಾವಕೋಶವನ್ನ‌‌ ಆಕ್ರಮಿಸಿ ಬಿಡುತ್ತಾನೆ.
ಅಪಹರಣದ ಸನ್ನಿವೇಷದಲ್ಲಿ
ಸೀತೆಯ ಆಕ್ರಂದನ‌ ಎಂಥವರಿಗೂ
ಮನ ಕಲಕದೇ ಇರದು.ಅಷ್ಟು ಸಹಜತೆ‌ ಆ ದೃಶ್ಯದಲ್ಲಿ ತುಂಬಿಕೊಂಡಿತ್ತು.
ಇಲ್ಲಿ ಭಾಗವತರ‌‌ ಬಗ್ಗೆ ಹೇಳದಿದ್ದರೆ
ಕರ್ತವ್ಯಚ್ಯುತಿಯಾದೀತು.
ಸಂಗೀತಜ್ಞರಲ್ಲದವರೂ‌ ಆ ರಾಗ,ಆಲಾಪಕ್ಕೆ ಶರಣಾಗಬೇಕು
( ಅನಂತ ಹೆಗಡೆ,ನರಸಿಂಹ ಹೆಗಡೆ, ರಾಮನ್ ಹೆಗಡೆ) ಹಾಗಿತ್ತು ಅವರ ಭಾಗವತಿಕೆ.
ಚಂಡೆಮದ್ದಳೆ ಅದೇ ಆಟದ ಜೀವಂತಿಕೆ.ಸಹೃದಯನ ಎದೆಬಡಿತಕ್ಕೆ ಸಂವಾದಿಯಾಗಿ‌
ಪ್ರಸಂಗ ಚಾಲಕನಾಗುವ ಶಕ್ತಿ.
ಬಂಗಾರದ ಜಿಂಕೆಯ ಚಲನೆಗೆ
ಹಾಕುವ ಮಟ್ಟುಗಳು ಕಳೆಕೊಟ್ಟವು.

ಒಟ್ಟಿನಲ್ಲಿ ಇದೊಂದು ಪ್ರಯೋಗ.
ಯಾಕೆಂದರೆ ಆಟವೆಂದರೆ ರಾತ್ರಿಯಿಡೀ ನಡೆಯುವ ದೀರ್ಘ ಪ್ರಸಂಗ.
ಆದರೆ ಈಗಿನ ಕಾಲಮಾನಕ್ಕೂ
ಯಕ್ಷಗಾನ ಪ್ರಸಂಗವನ್ನ. ಹೃಸ್ವವಾಗಿಸಿ, ಲೋಪಬಾರದಂತೆ
ಎರಡೇ ಗಂಟೆಗಳಲ್ಲೂ‌ ಯಕ್ಷಗಾನವನ್ನ ಪರಿಣಾಮಕಾರಿ
ಆಗಿಸಬಹುದು‌ ಎಂಬ ವಾದಕ್ಕೆ ಪುಷ್ಠಿ ಮತ್ತು ಮಾದರಿ.

ಇರುಳಿಡೀ ಪ್ರಸಂಗ ಒಂದು ಟೆಸ್ಟ್ ಕ್ರಿಕೆಟ್ ಮ್ಯಾಚ್. ಆದರೆ ಇಂತಹ‌ ಹೃಸ್ವ ಪ್ರಯೋಗಗಳು ಟಿ-20
ಮ್ಯಾಚ್ ಇದ್ದಂತೆ. ಎರಡರಲ್ಲೂ ಅದರದೇ ವಿಶೇಷತೆಗಳಿವೆ. ಆಕರ್ಷಣೆಗಳಿವೆ ಅಲ್ಲವೆ?

ಇದೆಲ್ಲವೂ ಸೂತ್ರಧಾರ ಶಿವಾನಂದ‌ಹೆಗಡೆ ಅವರ ಕರ್ತೃತ್ವಶಕ್ತಿ , ಸೃಜನಶೀಲತೆಗೆ ಸಾಕ್ಷಿ.
ನಮಗೆ ನಮ್ಮ ಕಲೆ, ಸಂಸ್ಕೃತಿ ,ಪರಂಪರೆ ಬೇಕು. ಬೇಕಿದ್ದರೆ ಮೊದಲು ಅವು‌ ಉಳಿಯ ಬೇಕು.
ಅಂತಹ ಬೇರನ್ನು ಪಳೆಯುಳಿಕೆ ಮಾಡದೇ ಜೀವಂತ‌ ಇರಿಸುವ ಛಲಗಾರಿಕೆಯನ್ನ. ಈ ಕ್ಷೇತ್ರದಲ್ಲಿ
ಶಿವಾನಂದ ಹೆಗಡೆ ತೋರಿಸುತ್ತಿದ್ದಾರೆ.
ಆ ಪಟ್ಟುಬಿಡದ ಶ್ರಮದ ಸಂಕೇತವಾಗಿ ಶ್ರೀಮಹಾಗಣಪತಿ‌ ಯಕ್ಷಗಾನ ಮಂಡಳಿಗೆ “ಯುನೆಸ್ಕೊ” ಮಾನ್ಯತೆ ನೀಡಿ
ಗೌರವಿಸಿದೆ. ಕನ್ನಡನಾಡಿಗೂ ಇದು‌ ಹೆಮ್ಮೆಯ ಸಂಗತಿಯಾಗಿದೆ.

ಇದು ಸುಲಭದ ಸಾಧನೆಯಲ್ಲ ದೇಶೀಯವಾಗಿ
ಈ ಮನ್ನಣೆ ಆರೇಳು ತಂಡಗಳಿಗೆ ಸಿಕ್ಕಿವೆ. ಈ ಸಾಧನೆಯ ಹಿಂದೆ ಕೆರೆಮನೆ ಕುಟುಂಬದ ಶ್ರಮ, ತ್ಯಾಗ, ಅರ್ಪಣಾ ಮನೋಭಾವ ಮತ್ತು ಇಡೀ ಊರಿನವರ ಸಹಕಾರ ಘನವಾಗಿ ನಿಂತಿದೆ.

ಹೊನ್ನಾವರ ಸನಿಹದ ಗುಣವಂತೆ ಎಂಬ ಪುಟ್ಟಗ್ರಾಮದಲ್ಲಿ ಕೆರೆಮನೆ ಶಂಭುಹೆಗಡೆ ಕಲಾಲೋಕವೇ ಮೈದಳೆದು ನಿಂತಿದೆ. ಯಕ್ಷಗಾನವನ್ನ ಒಂದು ಶೈಕ್ಷಣಿಕ ಶಿಸ್ತಾಗಿ ಅಧ್ಯಯನ ಮಾಡುವ
ಅಕಾಡೆಮಿಕ್ ಪ್ರಯತ್ನ ಅಲ್ಲಿ ಸಾಕಾರಗೊಂಡಿದೆ.
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ,ಯಕ್ಷಗಾನ ಗುರುಕುಲ,ಪ್ರಾತ್ಯಕ್ಷತೆ ಆಟವೇ ಪಾಠ,ಕಾರ್ಯಾಗಾರಗಳು,ತರಬೇತಿ..ಒಂದೆ ಎರಡೆ ಹೀಗೆ ಹತ್ತು ಹಲವು ಆಯಾಮಗಳಿಂದ ಇಡೀ ಯಕ್ಷಗಾನ ಕಲೆಗಿರುವ ಸಹಸ್ರ ಮುಖಗಳ ಬಗ್ಗೆ ಎಲ್ಲರೂ ನೋಡುವಂತೆ ಮಾಡಲಾಗುತ್ತಿದೆ
ಯಕ್ಷಗಾನ ಕಲಾಪ್ರಪಂಚದ ದಿಗ್ಗಜರೆಲ್ಲರೂ ಈ ಕಲಾವೇದಿಕೆಯ ಹೊನಲು‌ಬೆಳಕಿನಲ್ಲಿ ಬಣ್ಣಹಚ್ಚಿದ್ದಾರೆ. ಕಂಚು‌ಕಂಠದ ಭಾಗವತರು ಪಾತ್ರಗಳಿಗೆ ರಾಗ ಕಂಠ ನೀಡಿದ್ದಾರೆ. ಮದ್ದಳೆ ಪ್ರವೀಣರ ಮಾಂತ್ರಿಕ ಕೈಗಳು ಇಲ್ಲಿ ಸೋತಿಲ್ಲ.. ಅದಕ್ಕೆ ಹೊಯ್ ಕೈಯಾಗಿ ಪಾತ್ರಧಾರಿಗಳ ಮಾತುಗಾರಿಕೆ ಹೆಜ್ಜೆಗಳೂ ದಣಿದಿಲ್ಲ.

ಪ್ರಸ್ತುತ ಇಡಗುಂಜಿ ಮೇಳದ ನಿರ್ದೇಶಕರಾಗಿರುವ ಕೆರೆಮನೆ ಶಿವಾನಂದ ಹೆಗಡೆ ಅವರ ಅವಿರತ ಶ್ರಮದಿಂದಾಗಿ ಗುಣವಂತೆ ಜಾಗತಿಕ ಯಕ್ಷ ನಕ್ಷೆಯಲ್ಲಿ ಮಿನುಗುವಂತಾಗಿದೆ.
ಶಿವಮೊಗ್ಗದ ಯಕ್ಷಗಾನ ಪ್ರೇಮಿಗಳಿಗೆ ಇಡಗುಂಜಿ ಮೇಳ ಬಹಳ ಆಪ್ತವಾಗಿರುವ ಕಲಾತಂಡ. ಅದರ ಕಲಾವಿದರಂತೂ
ಮಿತ್ರರಂತೆ ಬೆರೆತುಹೋಗಿದ್ದಾರೆ.

ಶಿವಮೊಗ್ಗದ ಸಾಂಸ್ಕೃತಿಕ ಚಟುವಟಿಕೆಯ ಮುಂಚೂಣಿಯಲ್ಲಿರುವ ಅಭ್ಯುದಯ ಸಂಸ್ಥೆಯ ಲಷ್ಮೀನಾರಾಯಣ ಕಾಶಿ. ಎನ್.ರಾಮಚಂದ್ರ,ಡಾ.ರತ್ನಾಕರ್, ಬಾಬಣ್ಣ, ಡಾ.ಟಿ.ಜೆ.ಲಕ್ಷ್ಮೀನಾರಾಯಣ.
ಡಾ.ಅನಿಲ್ ಕುಮಾರ್, ಶ್ರೀನಿವಾಸ ಕಾರಂತ್ ಮುಂತಾದವರ ಶ್ರಮ ಸಾರ್ಥಕವಾಗಿದೆ.

Health and Family Welfare Development ಕುಷ್ಠರೋಗ ಅಂಟು ರೋಗವಲ್ಲ, ತಾರತಮ್ಯ ಬೇಡ : ಡಾ.ಕೆ.ಎಸ್.ನಟರಾಜ್

0

Health and Family Welfare Development ಕುಷ್ಠರೋಗ ಅಂಟು ರೋಗವಲ್ಲ. ಈ ರೋಗದ ಬಗ್ಗೆ ತಾರತಮ್ಯ, ಬೇಧ-ಭಾವ ಬೇಡ. ಆದರೆ ಕುಷ್ಠರೋಗ ಇರುವ ವ್ಯಕ್ತಿ ಕೆಮ್ಮುವಾಗ ಅಥವಾ ಸೀನಿದಾಗ ಇನ್ನೊಬ್ಬರಿಗೆ ಹರಡಬುದಾದ್ದರಿಂದ ಎಚ್ಚರಿಕೆಯಿಂದ ಇರಬೇಕು ಎಂದು .
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿವಾರಣ ಕಾರ್ಯಕ್ರಮ ಶಿವಮೊಗ್ಗ, ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಹಾಗೂ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಇವರುಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನ ಕಾರ್ಯಕ್ರಮಕ್ಕೆ ಹಸಿರು ನಿಶಾನೆಯ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ 53 ಕುಷ್ಠರೋಗ ಪ್ರಕರಣಗಳು ಇವೆ. ಇದಲ್ಲದೇ ಏಪ್ರಿಲ್ ನಿಂದ ಇಲ್ಲಿಯವರೆಗೂ 32 ಪ್ರಕರಣಗಳನ್ನು ಪತ್ತೆ ಹಚ್ಚಿದ್ದೇವೆ. ಅದರಲ್ಲಿ ಶಿಕಾರಿಪುರ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.
ನಮ್ಮ ದೇಶ ತುಂಬು ಕುಟುಂಬ ಹೊಂದಿರುವ ದೇಶವಾಗಿದೆ. ಇದರಿಂದ ಕುಷ್ಠರೋಗ ಹರಡುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ನಾವು ಕೆಮ್ಮುವಾಗ, ಸೀನುವಾಗ ಎಚ್ಚರಿಕೆ ವಹಿಸಬೇಕು. ಇದಲ್ಲದೇ ದೇಹದಲ್ಲಿ ಬಿಳಿ ಮಚ್ಚೆಗಳು ಕಂಡುಬಂದಲ್ಲಿ ನಿರ್ಲಕ್ಷ್ಯತನ ಮಾಡದೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸಲಹೆ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಶಿಕಾರಿಪುರ ಅಲ್ಲದೆ ಜಿಲ್ಲೆಯ ಅನೇಕ ತಾಲ್ಲೂಕುಗಳಲ್ಲಿ ಕುಷ್ಠರೋಗ ಪ್ರಕರಣಗಳು ಕಂಡುಬಂದಿವೆ. ಆದರೆ ಪ್ರಮಾಣ ಕಡಿಮೆ ಇದೆ. ಜಿಲ್ಲೆಯ ಯಾವ ತಾಲ್ಲೂಕು ಕುಷ್ಠರೋಗದಿಂದ ಹೊರತಾಗಿಲ್ಲ. ಇದನ್ನು ತೊಡೆದು ಹಾಕಲು ಆರೋಗ್ಯ ಇಲಾಖೆ ಪಣತೊಟ್ಟಿದ್ದು, ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದೆ ಎಂದರು.
ಮೆಗ್ಗನ್ ಬೋಧನಾ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಟಿ.ಡಿ.ತಿಮ್ಮಪ್ಪ ಮಾತನಾಡಿ, ನಾವು ಸಣ್ಣ ಮಕ್ಕಳಿದ್ದಾಗ ನಗರದ ಬಸ್’ಸ್ಟಾಂಡ್, ದೇವಸ್ಥಾನ ಒಳಗೊಂಡಂತೆ ಅನೇಕ ಕಡೆ ಕುಷ್ಠರೋಗಿಗಳನ್ನು ಕಾಣುತ್ತಿದ್ದೆವು. ಜನರು ಅವರನ್ನು ಮುಟ್ಟಿಸಿಕೊಳ್ಳಲು ಹಿಂಜರಿಯುತ್ತಿದ್ದರು. ಈ ಖಾಯಿಲೆಯಿಂದ ಅವರು ವೈವಾಹಿಕ ಜೀವನದಿಂದಲೇ ದೂರ ಉಳಿದಿದ್ದರು. ಇಡೀ ಸಮಾಜವೇ ಈ ರೋಗವನ್ನು ಅನಿಷ್ಠವೆಂಬಂತೆ ಕಾಣುತ್ತಿದ್ದರು ಎಂದು ತಮ್ಮ ಬಾಲ್ಯದ ನೆನಪನ್ನು ಹಂಚಿಕೊಂಡರು.
ಏಸುಕ್ರಿಸ್ತ, ಭಗವಾನ್ ಬುದ್ದ, ಮಹಾತ್ಮ ಗಾಂಧಿ, ಮದರ್ ತೆರೇಸಾ ಇವರೆಲ್ಲಾ ಕುಷ್ಠರೋಗವನ್ನು ಅನಿಷ್ಠವೆಂದು ಕಾಣದೆ ಸೇವೆಯನ್ನು ಮಾಡಿದವರು. ಕುಷ್ಠರೋಗವು ಸ್ವರ್ಶದಿಂದ ಬರುವುದಿಲ್ಲ ಎಂದು ಅರಿತಿದ್ದ ಈ ಮಹಾನೀಯರು ತಮ್ಮ ಬದುಕಿನುದ್ದಕ್ಕೂ ಈ ರೋಗಿಗಳ ಶುಶ್ರೂಷೆ ಮಾಡುತ್ತಾ ಜೀವನ ನಡೆಸಿದರು. ಕುಷ್ಠರೋಗವನ್ನು ಹೋಗಲಾಡಿಸಬೇಕೆಂದು ಶ್ರಮಿಸುತ್ತಿರುವ ನಾವೆಲ್ಲರು ಇವರ ಆದರ್ಶವನ್ನು ಪಾಲನೆ ಮಾಡಬೇಕು. ಆ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಕೂಡ ಬೇಕು ಎಂದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶ್ರೀಧರ್ ಮಾತನಾಡಿ, ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನ ಗಾಂಧೀಜಿಯವರ ಆಂದೋಲನ ನೆನೆಪಿಸುತ್ತಿದೆ. ಇತ್ತೀಚಿಗೆ ಕುಷ್ಠರೋಗದ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಮೂಡಿದೆ. ಈ ರೋಗ ಪಾಪ, ಪುಣ್ಯದ ಪಿಡುಗು ಎಂದು ಭಾವಿಸಲಾಗುತ್ತಿದೆ. ಅಂತಹ ತಪ್ಪು ಕಲ್ಪನೆಯನ್ನು ಹೊಗಲಾಡಿಸೋಣ. ಅದಕ್ಕೆ ಇಂತಹ ಅಭಿಯಾನಗಳು ಮುಖ್ಯವಾಗಿದೆ ಎಂದರು.
Health and Family Welfare Development ಕುಷ್ಠರೋಗ ಸಮಾಜ ಮತ್ತು ಆರ್ಥಿಕತೆಯ ಮೇಲೆ ತುಂಬಾ ಸಮಸ್ಯೆ ಉಂಟು ಮಾಡುತ್ತಿದೆ. ಈ ರೋಗ ಇದೆ ಎಂದು ಹೇಳಲು ಕೂಡ ಮುಜುಗರ ಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಇಂತಹ ಪಿಡುಗನ್ನು ತೊಡೆದು ಹಾಕಲು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ನಾವೆಲ್ಲಾ ಕೆಲಸ ಮಾಡಬೇಕು. ಹಳ್ಳಿ ಹಳ್ಳಿಗಳಿಗು ಹೋಗಿ ಇದರ ಬಗ್ಗೆ ಅರಿವು ಮೂಡಸಬೇಕು. ಭಾರತೀಯ ವೈದ್ಯಕೀಯ ಸಂಘದವರು ಈ ಪಿಡುಗನ್ನು ಹೋಗಲಾಡಿಸಲು ಸದಾ ಆರೋಗ್ಯ ಇಲಾಖೆಯ ಜೊತೆ ಕೈ ಜೋಡಿಸುತ್ತದೆ ಎಂದರು.
ಕಾರ್ಯಕ್ರದಲ್ಲಿ ಜಿಲ್ಲಾ ಕುಷ್ಠರೋಗ ನಿವಾರಣಾ ಕಾರ್ಯಕ್ರಮಧಿಕಾರಿ ಡಾ.ಎಸ್.ಕೆ. ಕಿರಣ್ ಮಾತನಾಡಿ, ಚರ್ಮದ ಮೇಲೆ ತಿಳಿಬಿಳಿ ಅಥವಾ ಕೆಂಪು ಇಲ್ಲವೇ ತಾಮ್ರ ವರ್ಣ ಸ್ಪರ್ಷಜ್ಞಾನವಿಲ್ಲದ ಮಚ್ಚೆಗಳು, ಚರ್ಮದ ಮೇಲೆ ಬೆಳವಣಿಗೆಗಳು(ಗಂಟು), ನೋವು ರಹಿತ ಹುಣ್ಣುಗಳು, ಹುಬ್ಬುಗಳು ಅಥವಾ ಕಣ್ರೆಪ್ಪೆಗಳ ನಷ್ಟ ಇವು ಕುಷ್ಠರೋಗದ ಲಕ್ಷಣಗಳಾಗಿವೆ. ಈ ರೋಗವನ್ನು ತಡೆಗಟ್ಟಲು ಮಚ್ಚೆಗಳನ್ನು ಗುಪ್ತವಾಗಿರಿಸದೇ ವೈದ್ಯರಿಗೆ ತೋರಿಸಬೇಕು. ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಹರಡುವಿಕೆ ತಡೆಯಬಹುದು ಹಾಗೂ ಇದರಿಂದಾಗುವ ಅಂಗವೈಕಲ್ಯ ತಡೆಯಬಹುದು. ಕುಷ್ಠರೋಗದಿಂದ ಬಳಲುವವರಿಗೆ ಆರೋಗ್ಯ ಇಲಾಖೆಯಿಂದ ಶಸ್ತçಚಿಕಿತ್ಸೆ, ಉಚಿತ ಎಂಸಿಆರ್ ಚಪ್ಪಲಿ, ಸಹಾಯಕ ಔಷಧಿಗಳನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಇವರು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ “ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನ – 2025” ಕಾರ್ಯಕ್ರಮದ ಪೋಸ್ಟರ್ ಹಾಗೂ ಕುಷ್ಠರೋಗ ಮಾಹಿತಿ ಕರಪತ್ರಗಳನ್ನು ಬಿಡುಗಡೆ ಮಾಡಿ, ಮಾತನಾಡಿ ಈ ಪಾಕ್ಷಿಕÀದಲ್ಲಿ ಕುಷ್ಠರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಕುಷ್ಠರೋಗಿಗಳನ್ನು ಅತೀ ಶ್ರೀರ್ಘದಲ್ಲಿ ಗುರುತಿಸಿ ಚಿಕಿತ್ಸೆಗೆ ಒಳಪಡಿಸುವುದು ಮತ್ತು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳನ್ನು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಕರೆ ನೀಡಿದರು.
ಇದೇ ವೇಳೆ ಕುಷ್ಟರೊಗ ಜಾಗೃತಿ ಕುರಿತು ಸೈಕಲ್ ಜಾಥಾ ಕೈಗೊಳ್ಳಲಾಯಿತು. ಹಾಗೂ ಕುಷ್ಟರೋಗ ಜಾಗೃತಿ ಆಂದೋಲನದ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಅನುಷ್ಟಾನ ಅಧಿಕಾರಿಗಳು, ಚರ್ಮರೋಗ ತಜ್ಞರಾದ ಡಾ.ದಾದಾಪೀರ್ ಮತ್ತು ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳುಶಿವಮೊಗ್ಗ ಸೈಕಲ್ ಕ್ಲಬ್ ಸದಸ್ಯರು ಹಾಜದರಿದ್ದರು.

MESCOM ಜ.31ರಂದು ಅಶೋಕ ರಸ್ತೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

MESCOM ಶಿವಮೊಗ್ಗ ನಗರದ ಅಶೋಕ ರಸ್ತೆ ಮತ್ತು ಶಿವಾಜಿ ರಸ್ತೆ ಬಳಿ ವಿದ್ಯುತ್ ಪರಿಕರಗಳ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಶೋಕರಸ್ತೆ, ಶಿವಾಜಿ ರಸ್ತೆ, ಎಸ್‌ಪಿಎಂ ರಸ್ತೆ, ವಿನಾಯಕ ರಸ್ತೆ, ಯಾಲಕಪ್ಪ ಕೇರಿ, ಬೇಡರ ಕೇರಿ, ಭೂಪಾಳಂ ಶಾಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ.31 ರಂದು ಬೆಳಗ್ಗೆ 09.00 ಘಂಟೆಯಿಂದ ಸಂಜೆ 6.00 ಘಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.

Karnataka Rakshana Vedike ಕನ್ನಡಪರ ಹೋರಾಟಗಾರರ ಕೇಸ್ ವಾಪಸ್, ಮುಖ್ಯಮಂತ್ರಿಗೆ ಅಭಿನಂದನೆ

0

Karnataka Rakshana Vedike ಕನ್ನಡಪರ ಹೋರಾಟಗಾರರ ಮೇಲೆ ವಿವಿಧಡೆ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಕಿರಣ್ ಕುಮಾರ್ ಎಚ್ಎಸ್ ಹರ್ಷ ವ್ಯಕ್ತಪಡಿಸಿದ್ದಾರೆ.

Karnataka Rakshana Vedike ಕನ್ನಡಪರ ಸಂಘಟನೆಗಳಲ್ಲಿ ಹಲವಾರು ಬಡ ಕೂಲಿ ಕಾರ್ಮಿಕರು ಆಟೋ ಚಾಲಕರು ರೈತರು ಸಾಹಿತಿಗಳು ಯುವ ಬರಹಗಾರರಿದ್ದು ನಾಡು ನುಡಿ ನೆಲ ಭಾಷೆಗಳ ಹೋರಾಟದಲ್ಲಿ ಭಾಗಿಯಾಗಿದ್ದರು ಅಂತ ಅವರ ಮೇಲಿನ ದುರುದ್ದೇಶದಿಂದ ಕೂಡಿದ ಹಾಕಲಾದ ಎಲ್ಲಾ ಕೇಸ್ ಗಳನ್ನು ಹಿಂತೆಗೆದುಕೊಂಡು ಅವರ ಹಿತ ಕಾಪಾಡಿದ್ದಕ್ಕೆ ಹಾಗೂ ಈ ನಿರ್ಧಾರ ತೆಗೆದುಕೊಂಡ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಕನ್ನಡಪರ ಹೋರಾಟಗಾರರ ಪರವಾಗಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Red Cross Shivamogga ಮನುಕುಲದ ಸೇವೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ : ಡಾ. ದಿನೇಶ್

0

Red Cross Shivamogga ಮನುಕುಲದ ಸೇವೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ ಸದಾ ಮುಂಚೂಣಿಯಲ್ಲಿದ್ದು, ತುರ್ತು ಆಘಾತ ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸುವ ಕೆಲಸ ಮಾಡುತ್ತಿದೆ. ಅಗತ್ಯ ವಸ್ತುಗಳನ್ನು ತಲುಪಿಸುವ ಕಾರ್ಯ ನಿರಂತರವಾಗಿ ನಡೆಸುತ್ತಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಶಿವಮೊಗ್ಗ ಘಟಕದ ಗೌರವ ಕಾರ್ಯದರ್ಶಿ ಡಾ. ದಿನೇಶ್ ಹೇಳಿದರು.
ಶಿವಮೊಗ್ಗ ನಗರದ ಹೊಸಮನೆ ಆರನೇ ಕ್ರಾಸ್‌ನಲ್ಲಿ ರತ್ನಮ್ಮ ಅವರ ಮನೆ ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಇಡೀ ಮನೆಯಲ್ಲಿದ್ದ ವಸ್ತುಗಳು ಭಸ್ಮವಾಗಿದ್ದ ಹಿನ್ನೆಲೆಯಲ್ಲಿ ರೆಡ್‌ಕ್ರಾಸ್ ತಂಡ ಪರಿಶೀಲಿಸಿ ಸಾಂತ್ವಾನ ಹೇಳಿ ಧೈರ್ಯ ತುಂಬಿದ ಅವರು, ಮನೆಗೆ ತುರ್ತಾಗಿ ಅವಶ್ಯವಿರುವ ವಸ್ತುಗಳನ್ನು ವಿತರಿಸಿದರು.
ಪಾತ್ರೆಗಳು, ಕಿಚನ್ ಸೆಟ್, ಬೆಡ್‌ಶೀಟ್, ಜಮಕಾನ, ಆಹಾರ ಪದಾರ್ಥ, ಬಟ್ಟೆಗಳು, ಸೀರೆ, ಪಂಚೆ, ಅಗತ್ಯ ಸಾಮಾಗ್ರಿಗಳನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಶಿವಮೊಗ್ಗ ಘಟಕದಿಂದ ವಿತರಿಸಲಾಯಿತು.
Red Cross Shivamogga ಇದೇ ಸಂದರ್ಭದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಶಿವಮೊಗ್ಗ ಘಟಕದ ಕಾರ್ಯದರ್ಶಿ ಎ.ಎಂ.ಸುರೇಶ್ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆ ಕರೊನಾ, ಸುನಾಮಿ, ತುರ್ತು ಅವಘಡ ಸಂದರ್ಭಗಳಲ್ಲಿ ಮಾನವೀಯ ಸೇವಾ ಕಾರ್ಯಗಳನ್ನು ನಡೆಸಿದೆ. ತುರ್ತು ಪರಿಸ್ಥಿತಿಗಳಲ್ಲಿ ಅಗತ್ಯವಿರುವ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.
ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ರತ್ನಮ್ಮ ಎಂಬುವವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಬಹುತೇಕ ವಸ್ತುಗಳು ಸುಟ್ಟು ಹೋಗಿದ್ದು, ಸಂಸ್ಥೆ ವತಿಯಿಂದ ತುರ್ತಾಗಿ ಅವರಿಗೆ ಅವಶ್ಯವಿರುವ ವಸ್ತುಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಅಗತ್ಯ ಸಾಮಾಗ್ರಿಗಳನ್ನು ವಿತರಿಸುವ ಸಂದರ್ಭದಲ್ಲಿ ನಿರ್ದೇಶಕರಾದ ನವೀನ್, ಗಿರೀಶ್ ಶೇಟ್, ಜಗದೀಶ್, ಜಿ.ವಿಜಯಕುಮಾರ್, ಧರಣೇಂದ್ರ ದಿನಕರ್ ಮತ್ತಿತರರು ಉಪಸ್ಥಿತರಿದ್ದರು.

JCI Shivamogga ರಕ್ತದಾನದಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ: ಶೇಷಗಿರಿ ಡಿ.ಕೆ

0

JCI Shivamogga ರಕ್ತದಾನ ಅತ್ಯಂತ ಶ್ರೇಷ್ಠದಾನ ಆಗಿದ್ದು, ರಕ್ತದಾನದಿಂದ ಆತ್ಮತೃಪ್ತಿಯ ಜತೆಗೆ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಜೆಸಿಎ.ವೈಸ್ ಚೇರ್ಮನ್ ಶೇಷಗಿರಿ ಡಿ.ಕೆ. ಹೇಳಿದರು.
ಶಿವಮೊಗ್ಗ ನಗರದ ಜೆಪಿಎನ್ ರಸ್ತೆಯಲ್ಲಿರುವ ರೆಡ್ ಕ್ರಾಸ್ ಸಂಜೀವಿನಿ ರಕ್ತನಿಧಿಯಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಶಿವಮೊಗ್ಗ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಕ್ತದಾನದಿಂದ ಜೀವ ಉಳಿಸಿದ ಪುಣ್ಯ ಲಭಿಸುತ್ತದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ಜೆಸಿಐ ರಾಷ್ಟ್ರೀಯ ಸಂಯೋಜಕ ಸತೀಶ್ ಚಂದ್ರ ಮಾತನಾಡಿ, ರಕ್ತದ ಕೊರತೆ ಇರುವುದರಿಂದ ಸಾಕಷ್ಟು ಜನರು ಜೀವ ಕಳೆದುಕೊಳ್ಳುತ್ತಾರೆ. ರಕ್ತದ ಲಭ್ಯತೆ ಇದ್ದಲ್ಲಿ ತುರ್ತು ಸಂದರ್ಭದಲ್ಲಿರುವವರಿಗೆ ರಕ್ತ ಸಿಗುವ ಜತೆಯಲ್ಲಿ ಅಮೂಲ ಜೀವ ಉಳಿಯುತ್ತದೆ. ಯುವಜನರು ರಕ್ತದಾನ ಮಾಡಬೇಕು ಎಂದು ಹೇಳಿದರು.
JCI Shivamogga ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಜಿ.ಗಣೇಶ್ ಮಾತನಾಡಿ, ಅಧ್ಯಕ್ಷರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದು, ವರ್ಷಪೂರ್ತಿ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದ್ದು, ಮೊದಲ ಕಾರ್ಯಕ್ರಮವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ರಕ್ತದಾನ ಮಾಡುವವುದರಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ. ಮುಂದಿನ ದಿನಗಳಲ್ಲಿ ಕಾಲೇಜುಗಳಲ್ಲಿ ರಕ್ತದ ಗುಂಪು ತಪಾಸಣೆ, ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಥಮ ಬಾರಿಗೆ ರಕ್ತದಾನ ಮಾಡಿದ ಸುಮಂತ್ ನಾಯ್ಕ್, ಕುಮಾರ್, 25 ಬಾರಿ ರಕ್ತದಾನ ಮಾಡಿದ ಸುಮಂತ್ ಬಿ.ಟಿ., 56 ಬಾರಿ ರಕ್ತದಾನ ಮಾಡಿದ ಅಲ್ಲಬಕಾಸ್, 116 ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್ ಅವರನ್ನು ಅಭಿನಂದಿಸಲಾಯಿತು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕ ನವೀನ್, ನವೀನ್ ಬಿಲ್ಗುಣಿ, ಡಾ. ರಮೇಶ್ ಉಪಸ್ಥಿತರಿದ್ದರು.

Directorate of Women And Child Development Department ಡಿ.ಎಸ್.ಗಾಯತ್ರಿ ಅವರಿಗೆ ಸಚಿವರಿಂದ ಸನ್ಮಾನ

0

Directorate of Women And Child Development Department ಶಿವಮೊಗ್ಗ ಮಕ್ಕಳ ರಕ್ಷಣಾಧಿಕಾರಿ ಸಾಂಸ್ಥಿಕ ಸೇವೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗಾಯತ್ರಿ ಡಿ.ಎಸ್. ಅವರ ಸೇವೆಯನ್ನು ಪರಿಗಣಿಸಿ ಮಹಿಳಾ ಮತ್ತು ಮಕ್ಕಳ ಕೇಂದ್ರ ಕಚೇರಿ ಕಳೆದ ಆಗಸ್ಟ್ 15 ,2024 ರಂದು ದೆಹಲಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ವಿಶೇಷ ಆಹ್ವಾನಿತರಾಗಿದ್ದರು.
ಶಿವಮೊಗ್ಗ ಜಿಲ್ಲಾಡಳಿತದ ವತಿಯಿಂದ ಇಲ್ಲಿನ 76ನೇ ಗಣರಾಜ್ಯೋತ್ಸವದ ಸಮಾರಂಭದಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ಅತ್ಯುತ್ತಮ ಸೇವಾ ಪ್ರಶಸ್ತಿಯನ್ನು
ಡಿ.ಎಸ್.ಗಾಯತ್ರಿ ಅವರಿಗೆ ನೀಡಿದರು.

Klive Special Article ಅಂತರಂಗ ಭಕ್ತಿಯ ಶೋಧಕ, ಶ್ರೀಪುರಂದರದಾಸರು

0

ಲೇ’: ಎನ್.ಜಯಭೀಮ ಜೊಯ್ಸ್.
ಶಿವಮೊಗ್ಗ

Klive Special Article ಶ್ರೀಪುರಂದರದಾಸರು ಕನ್ನಡನಾಡು ಕಂಡ ಹಾಡಿನ ಮೂಲಕ ಧರ್ಮಪ್ರಸಾರವನ್ನುಕೈಗೊಂಡಅಪ್ರತಿಮ ಹರಿದಾಸವರೇಣ್ಯರು.ಕನ್ನಡ ಭಾಷೆಗೆವಿಷಿಷ್ಟವಾದ ಮೆರುಗನ್ನು ತಮ್ಮ ಗೀತೆಗಳ ಮೂಲಕತಂದುಕೊಟ್ಟ ಮಹಾನುಭಾವರು.
ದಾಸರು ಪೂರ್ವ ಜೀವನದಲ್ಲಿ ಮಹಾ ಜಿಪುಣಾ
ಗ್ರೇಸರರೆಂದು ಪ್ರಸಿದ್ಧಿಪಡೆದ ಇವರು ನಂತರ ಸರ್ವಸ್ವವನ್ನೂ ದಾನಮಾಡಿ ದಾನಶೂರರೆನಿಸಿದ್ದು ವಿಶಿಷ್ಟದೈವಸಂಕಲ್ಪ.ನವಕೋಟಿಎನ್ನಿಸಿದಮಹಾ
ಲಕ್ಷ್ಮಿಯನ್ನು ತೊರೆದುಅವಳ ಪತಿಯಾದ ಶ್ರೀಮನ್ನಾರಾಯಣನನ್ನು ಆರಾಧಿಸಿದ್ದು ಇವರ ಜೀವನದಅಮೋಘಸಾಧನೆ.ಕೇವಲಮಹಾಲಕ್ಷ್ಮಿಯ ಉಪಾಸನೆ ಒಂದರಿಂದಲೇ ಜೀವನದಲ್ಲಿ ಸಾರ್ಥಕ್ಯ ಸಾಧ್ಯವಾಗುವುದಿಲ್ಲ.ಲಕ್ಷ್ಮೀರಮಣನಾದ ನಾರಾಯಣನ ಉಪಾಸನೆಯಿಂದ ಜೀವನ ಸಾರ್ಥಕ್ಯ ಪಡೆಯಬಹುದೆಂಬುದನ್ನು ಮಾನವ
ಕೋಟಿಗೆ ತೋರಿಸಿಕೊಟ್ಟ ಮಹಿಮರು.ಪೂರ್ವ ಜೀವನದಲ್ಲಿ ಚಿನಿವಾರವೃತ್ತಿಯಿಂದಬೆಳ್ಳಿಬಂಗಾರದ ವ್ಯಾಪಾರಿಗಳಾಗಿದ್ದರೆ ಅನಂತರದಲ್ಲಿ ತಮ್ಮ ಪದಗಳ ಗಾಯನದ ಮೂಲಕ ಸಂಗೀತದ ಸುವರ್ಣಸುಧೆಯನ್ನು ಹರಿಸಿದ ಗೀತಾಚಾರ್ಯರು.
ಇವರ ಈ ಮಹಾನ್ ಪರಿವರ್ತನೆಗೆ ಒಂದು ರೀತಿಯಲ್ಲಿ ಅವರ ಕೈಹಿಡಿದ ಧರ್ಮಪತ್ನಿ ಸರಸ್ವತೀ
ಬಾಯಿಯವರ ಧರ್ಮಶ್ರದ್ಧೆಯೇ ಪ್ರಮುಖವಾದ
ಕಾರಣವೆಂದು ಹೇಳಬಹುದು.ಪುರಂದರದಾಸರು ಎಷ್ಟು ಜಿಪುಣತನವನ್ನು ಹೊಂದಿದ್ದರೋ ಅಷ್ಟೇ ಹೆಚ್ಚಿನಧಾರಾಳತನವನ್ನುಹೊಂದಿದ್ದವರುಶ್ರೀಮತಿ
ಸರಸ್ವತೀಬಾಯಿಯವರು.ಇದರಸ್ಮರಣೆಗೆಂಬಂತೆ”ಹೆಂಡತಿಸಂತತಿಸಾವಿರವಾಗಲಿದಂಡಿಗೆಬೆತ್ತಹಿಡಿಸಿ
ದಳಯ್ಯ”ಎಂದುಪುರಂದರದಾಸರು ಹೆಂಡತಿಗೆ ಕೃತಜ್ಞತೆಯನ್ನು ಈ ಕೃತಿಯಲ್ಲಿ ಹೇಳಿದ್ದಾರೆ.
“ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯಾ”//
ಪತಿಯು ಸನ್ಮಾರ್ಗವನ್ನು ಹಿಡಿಯಲು ಪತ್ನಿಯಾದವಳು ವಹಿಸಬೇಕಾದ ಎಚ್ಚರಿಕೆಯ
ತಿಳುವಳಿಕೆಯನ್ನು ಸರಸ್ವತೀಬಾಯಿಯವರಿಂದ
ತಿಳಿದುಕೊಳ್ಳಬಹುದಾಗಿದೆ.
Klive Special Article ಶ್ರೀವ್ಯಾಸರಾಯರಂತಹಶ್ರೇಷ್ಠಯತಿಗಳನ್ನುಗುರುಗಳಾಗಿಪಡೆದಮಹಾನುಭಾವರುಶ್ರೀಪುರಂದರ
ದಾಸರು. ಅಂದು ವಿಜಯನಗರವೆಂದು ಕರೆಸಿಕೊಂಡ ಇಂದಿನ ಹಂಪೆ ಇವರ ಹರಿದಾಸ ಜೀವನದ ಮುಖ್ಯಕಾರ್ಯಕ್ಷೇತ್ರವಾಗಿದ್ದು ಇವರನ್ನು ವಿಜಯನಗರದ ಹರಿದಾಸರೆಂದೇ ಗುರುತಿಸುವಂತೆ ಮಾಡಿದೆ.ಪುರಂದರದಾಸರ ದೇಶ ಸಂಚಾರ ಕೇವಲ ತೀರ್ಥಕ್ಷೇತ್ರ ದರ್ಶನ ಮಾತ್ರ ಆಗಿರದೇ,ತೀರ್ಥಕ್ಷೇತ್ರ ಮಹಿಮೆಯ ಪ್ರಸಾರ ಕಾರ್ಯವೂ ಆಗಿ ಜ್ಞಾನ
ಪ್ರಸಾರ ಕಾರ್ಯವೆನಿಸಿತು..
ಸಂಗೀತ ಪಿತಾಮಹರೆಂದು ಕರೆಸಿಕೊಂಡವರು ಶ್ರೀಪುರಂದರದಾಸರು.ಅವರತ್ಯಾಗಮಯಜೀವನ,ಅವರಲ್ಲಿದ್ದ ಅಪಾರವಾದ ತೇಜಸ್ಸು,ಅಪಾರವಾದ ಭಕ್ತಿ,ಸಂಗೀತಜ್ಞಾನ,ಎಲ್ಲಕ್ಕಿಂತಹೆಚ್ಚಾಗಿಪಾಮರರಿಗೆ,ಅಬಾಲವೃದ್ಧರಿಗೆ ಅರ್ಥವಾಗುವಂತೆ ಅವರು ರಚಿಸಿದ ಹಾಡುಗಳಲ್ಲಿ ಕಂಡ ಸರಳವಾದಭಾಷೆ.ಈ ಎಲ್ಲ ಗುಣಗಳೂಅವರನ್ನುಜನಪ್ರಿಯರನ್ನಾಗಿಸಿತು.
ಸಾಮಾನ್ಯ ಜನರು ಜೀವನದಲ್ಲಿ ಸಮಾಧಾನ ಬೇಕೆನಿಸಿದಾಗ,ಧೈರ್ಯಗುಂದಿದಾಗ,ಸ್ಫೂರ್ತಿಯ ಅವಶ್ಯಕತೆ ಬೇಕಾದಾಗ,ಉತ್ಸಾಹ ಉಕ್ಕಿ ಬಂದಾಗ ಪುರಂದರದಾಸರರಚಿಸಿದ ನುಡಿಮುತ್ತುಗಳನ್ನು ನೆನೆಸಿಕೊಂಡುಆನಂದವನ್ನು ಪಡೆದಿದ್ದಾರೆ.ಇವರು ರಚಿಸಿರುವ ಹಾಡುಗಳಲ್ಲಿಕಂಡುಬರುವಸರಳವಾದ ಶೈಲಿಎಲ್ಲರಅಂತರಂಗವನ್ನುಹೊಕ್ಕುನಾಡಿನಲ್ಲಿ
ಅಸಂಖ್ಯಾತ ಜನರಿಗೆ ಮಾರ್ಗದರ್ಶನ ಮಾಡಿವೆ ಮತ್ತುಉತ್ಸಾಹತುಂಬಿದೈವಭಕ್ತಿಯನ್ನುಪ್ರೇರೇಪಿ
ಸಿವೆ.ಕೀರ್ತನೆ ಸಾಹಿತ್ಯದಲ್ಲಿ ಪುರಂದರ ದಾಸರದ್ದು ಬಹುದೊಡ್ಡ ಕೊಡುಗೆ,ಅದರಲ್ಲೂ ಕರ್ನಾಟಕ ಸಂಗೀತಕ್ಕೆಸಲ್ಲಿಸಿರುವಕೊಡುಗೆಬಹಳಅಪಾರ
ವಾಗಿದೆ.ಅವರುಸಲ್ಲಿಸಿರುವಈಅಮೂಲ್ಯಸೇವೆಗಾಗಿಯೇಅವರನ್ನುಸಂಗೀತಪಿತಾಮಹಎಂದುಕರೆಯುತ್ತಾರೆ.”ದಾಸರೆಂದರೆಪುರಂದರದಾಸರಯ್ಯ”ಎಂದು ಶ್ರೀವ್ಯಾಸರಾಯರಿಂದಲೇ ಮೆಚ್ಚುಗೆ ಪಡೆದಂತಹದಾಸಶ್ರೇಷ್ಠರು ಶ್ರೀಪುರಂದರದಾಸರು.
ಇವರ ಕೀರ್ತನೆಗಳಲ್ಲಿ ಆಧ್ಯಾತ್ಮದ ಜೊತೆ ಸಾಮಾಜಿಕಕಳಕಳಿಯನ್ನೂಸಾರುವಂತಹಸಾಹಿತ್ಯವಿದೆ,ಶೈಲಿಇದೆ.ಇವರಕೀರ್ತನೆಗಳುಮನಸ್ಸಿಗೆಮುದವನ್ನುಕೊಡುತ್ತವೆ.ಶ್ರೀಪುರಂದರದಾಸರ ಕೃತಿಗಳು ಸಾರ್ವಕಾಲಿಕವಾಗಿಸತ್ಯವೂ,ಸುಲಲಿತವೂಮತ್ತುಸುಂದರವೂ ಆಗಿವೆ.ಕೀರ್ತನೆಗಳನ್ನುರಚಿಸಿ,ಹಾಡಿ ಜನಸಾಮಾನ್ಯರ ಮನಸ್ಸಿಗೆ ಮುಟ್ಟುವಂತೆ ಪ್ರಚಾರಮಾಡಿದ ರೀತಿ ಅನುಪಮವಾಗಿದೆ.
ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು ಎಂಬ ಮಾತನ್ನು ಪುರಂದರದಾಸರ ಕೀರ್ತನೆ
ಯಿಂದತಿಳಿಯಬಹುದು.”ಆಚಾರವಿಲ್ಲದನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ”.
ಯಾವುದೇಕಾರಣವಿಲ್ಲದೆಬೇರೆಯವರನ್ನುದೂಷಿಸುವುದಕ್ಕೆಂದೇ ಚಾಚಿ ಕೊಂಡಿರುವಂಥ ನಾಲಿಗೆ ಎಂದು ತಿಳಿಸುವುದರಮೂಲಕ ಸಮಾಜವನ್ನು ತಿದ್ದುವ ಕಾರ್ಯಕ್ಕೂಮುಂದಾದ ದಾಸರ ಕೊಡುಗೆ ಅಮೂಲ್ಯವಾಗಿದೆ.
ಇವರು ಗೀತೆ ಗಳನ್ನು ರಚಿಸಿ ಜನ ಸಾಮಾನ್ಯರಿಗೂ ಕನ್ನಡ ಸಾಹಿತ್ಯಕ್ಕೂ ಚಿರವಾದ ಬೆಸುಗೆಯನ್ನು ಗಂಟು ಹಾಕಿದವರು ಶ್ರೀದಾಸರು.
ಶ್ರೀದಾಸರು ತಮ್ಮ ಹಾಡುಗಳ ಮೂಲಕ ಈ ಐಹಿಕ ಭೋಗ ಭಾಗ್ಯಗಳೆಲ್ಲ ಅಸ್ಥಿರ,ಭಗವಂತನ ಕರುಣೆಯೊಂದೇಸ್ಥಿರಎಂದುತಿಳಿಯಪಡಿಸಿದವರು.ಶ್ರೀಪುರಂದರವಿಠಲನ ಪರಮಾನುಗ್ರಹ ಪಾತ್ರರಾದ ಅವರು ಹೋದ ದಾರಿಯೇ ಹೆದ್ದಾರಿ,ನುಡಿದ ಮಾತೇ ದಿವ್ಯೋಪದೇಶ,ಅವರು ಮಾಡಿದ ಕಾರ್ಯವೇ ಲೋಕಕ್ಕೆ ಮಾದರಿ.ಮಿತಿಮೀರಿದ ಧನಲೋಭದಿಂದ ಕಿಲುಬು ಹಿಡಿದಿದ್ದ ಅವರ ಹೃದಯವು ಪುರಂದರ ವಿಠಲನಮೇಲಿನ ಭಕ್ತಿಯಿಂದ ಶುದ್ಧವಾದ ಸುಧಾ ಕಲಶವಾಯಿತು. ಜಿಪುಣಾಗ್ರೇಸರ ಚಕ್ರವರ್ತಿಯಾಗಿದ್ದ ಶ್ರೀನಿವಾಸ ನಾಯಕರು ಭಕ್ತಪುರಂದರದಾಸರಾದರು.
ಇಂತಹ ದಾಸ ಶ್ರೇಷ್ಠರು ಹರಿಪಾದವನ್ನು ಸೇರಿದ್ದು ಶಾಲಿವಾಹನಶಕ1486ರಪುಷ್ಯಮಾಸದಬಹುಳ
ಅಮಾವಾಸ್ಯೆಯಂದು ಹಂಪಿಯಲ್ಲಿ.
ಇವರು ನಾರದರ ಅಂಶಜರೆಂದು ಹೇಳುತ್ತಾರೆ.
ಇಂತಹಮಹಾಮಹಿಮರನ್ನು,ಪರಮಭಾಗವತ
ರನ್ನು,ಹರಿದಾಸ ಶ್ರೇಷ್ಠರನ್ನು ನೆನೆವ ದಿನವೇ ಸುದಿನ.ಪುಷ್ಯಮಾಸದ ಬಹುಳ ಅಮಾವಾಸ್ಯೆ
ಶ್ರೀಪುರಂದರದಾಸರಆರಾಧನೆಯದಿನನಾವೂ
ಅವರ ಸ್ಮರಣೆಮಾಡಿ ಭಕ್ತಿಯ ನಮನಗಳನ್ನು ಸಲ್ಲಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.
“ಗುರುಪುರಂದರದಾಸರೇ ನಿಮ್ಮ
ಚರಣ ಸರಸಿಜ ನಂಬಿದೆ/
ಗರುವ ರಹಿತನ ಮಾಡಿ ಎಮ್ಮನು
ಪೊರೆವ ಭಾರವು ನಿಮ್ಮದೆ”//


ಎನ್.ಜಯಭೀಮ್ ಜೊಯ್ಸ್
(9449242399)

Natanam Balanatya Kendra ಜನವರಿ 30 & 31 ನಟನಂ ನೃತ್ಯೋತ್ಸವ

0

Natanam Balanatya Kendra ರಾಷ್ಟ್ರಮಟ್ಟದ ಹಿರಿಮೆಗಳಿಸಿರುವ ಶಿವಮೊಗ್ಗ ರಾಜೇಂದ್ರನಗರದ ನಟನಂ ಬಾಲನಾಟ್ಯ ಕೇಂದ್ರದಿಂದ ಎರಡು ದಿನಗಳ ಕಾಲ 224 ವಿದ್ಯಾರ್ಥಿ ಕಲಾವಿದರ ಭರ್ಜರಿ ನೃತ್ಯೋತ್ಸವ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ಕಲಾಶ್ರೀ ಗುರು ವಿದ್ವಾನ್ ಡಾ. ಎಸ್ ಕೇಶವಕುಮಾರ್ ಪಿಳ್ಳೈ ಅವರು ತಿಳಿಸಿದ್ದಾರೆ.
ನಟನಂ ಬಾಲನಾಟ್ಯ ಕೇಂದ್ರದಿಂದ ಜನವರಿ 30ರ ನಾಳೆ ಹಾಗೂ 31ರಂದು ಶಿವಮೊಗ್ಗ ಕುವೆಂಪುರಂಗಮಂದಿರಲ್ಲಿ ಪ್ರತಿದಿನ ಸಂಜೆ 5:30ಕ್ಕೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರಲ್ಲಿ ಅತ್ಯಂತ ವಿಜೃಂಭಣೆಯಿಂದ ಭಾರತದ ಮುಖ್ಯ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಭರತನಾಟ್ಯ ಹಾಗೂ ಕರ್ನಾಟಕ ಜಾನಪದ ನೃತ್ಯ, ಪಂಜಾಬಿನ ಭಾಂಗ್ಡಾ ನೃತ್ಯ, ರಾಜಸ್ಥಾನದ ಕಾಲ್ ಬೇಲಿಯಾ ಪ್ಯೂಜನ್ ಮತ್ತು ಫ್ಯೂಷನ್ ನೃತ್ಯಗಳಿಗೆ 224 ಕಲಾವಿದರು ಅಭಿನಯಿಸಲಿದ್ದಾರೆ.
Natanam Balanatya Kendra ಈ ಕಾರ್ಯಕ್ರಮವನ್ನು ಎಸ್.ಕೇಶವಕುಮಾರ್ ಪಿಳ್ಳೈ ಪ್ರಸ್ತುತಪಡಿಸಿದ್ದು, ಅವರೊಂದಿಗೆ ವಿದ್ವಾನ್ ಎಸ್‌ಸಿ ಚೇತನ್, ವಿದುಶ್ರೀ ನಾಟ್ಯಶ್ರೀ ಕೆ ಸೆಲ್ಬಂ, ನಟನಂ ಕೇಂದ್ರದ ನೃತ್ಯ ಶಿಕ್ಷಕರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವರಿಗೂ ಆತ್ಮೀಯ ಸ್ವಾಗತವನ್ನು ಕೋರಲಾಗಿದ್ದು, ಕಲಾವಿದರ ನೃತ್ಯೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಲಾಗಿದೆ.