Wednesday, March 11, 2026
Wednesday, March 11, 2026
Home Blog Page 402

Madhu Bangarappa ವಾಯುದಳದ ಅಧಿಕಾರಿ ಮಂಜುನಾಥ್ ಸಾವಿಗೆ ಮಧು ಬಂಗಾರಪ್ಪ ‌ಸಂತಾಪ

0

Madhu Bangarappa ಉತ್ತರ ಪ್ರದೇಶದ ಆಗ್ರಾದಲ್ಲಿ ಶುಕ್ರವಾರ ತರಬೇತಿ ವೇಳೆ ವಿಮಾನದಿಂದ ಕೆಳಗೆ ಹಾರಿದಾಗ ಪ್ಯಾರಾಚೂಟ್‌ ತೆರೆದುಕೊಳ್ಳದೇ ವಾಯುಪಡೆಯ ವಾರೆಂಟ್‌ ಆಫಿಸರ್, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಸಂಕೂರು ಗ್ರಾಮದ ಕೃಷಿಕ ಸುರೇಶ್ ಹಾಗೂ ನಾಗರತ್ನ ದಂಪತಿ ಪುತ್ರ, 36 ವರ್ಷದ ಜಿ.ಎಸ್.ಮಂಜುನಾಥ್‌ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಎಸ್.ಬಂಗಾರಪ್ಪನವರು ಸಂತಾಪ ಸೂಚಿಸಿದ್ದಾರೆ.

ವಾಯು ಸೇನೆಯಲ್ಲಿ ಸ್ಮರಣೀಯ ಸೇವೆ ಸಲ್ಲಿಸುತ್ತಾ ಸಂಕೂರು ಹಾಗೂ ಸುತ್ತಲಿನ ಗ್ರಾಮಗಳ ಯುವ ಸಮೂಹಕ್ಕೆ ಸ್ಫೂರ್ತಿ ಆಗಿದ್ದ ಮಂಜುನಾಥ್ ಅವರ ಅಕಾಲಿಕ ಮರಣ ದುಖಃ ತಂದಿದೆ. ವಾಯುಸೇನೆಯ ಈ ಹೆಮ್ಮೆಯ ಅಧಿಕಾರಿ ಸದಾ ನಮ್ಮೆಲ್ಲರ ಸ್ಮರಣೆಯಲ್ಲಿರುತ್ತಾರೆ.
ಮಂಜುನಾಥ್ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಭಗವಂತ ಅವರ ಕುಟುಂಬದವರಿಗೆ, ಸಂಬಂಧಿಗಳಿಗೆ, ಸಂಕೂರು ಗ್ರಾಮಸ್ಥರಿಗೆ ನೀಡಲಿ ಎಂದಿದ್ದಾರೆ.

Sri Vidhushekhara Bharati Mahaswamiji ಕಾಶಿಯಲ್ಲಿ ಶ್ರೀವಿಧುಶೇಖರ ಭಾರತಿ ಮಹಾಸ್ವಾಮಿಗಳ ಭವ್ಯ ವಿಶ್ವೇಶ್ವರಾರ್ಚನೆ

0

ವರದಿ : ಪ್ರಭಾಕರ ಕಾರಂತ

Sri Vidhushekhara Bharati Mahaswamiji ಕಾಶೀ ವಿಶ್ವನಾಥ ಸನ್ನಧಿಗೆ ಶೃಂಗೇರಿಯ ಜಗದ್ಗುರುಗಳ ಪ್ರವೇಶ ಎಂದಿನಂತೆ ಭವ್ಯವಾಗಿ ಆಗಿದೆ.ಮೂರು ದಶಕ ಆಗಿತ್ತು ಇಲ್ಲಿಗೆ ಶೃಂಗೇರಿಯ ಜಗದ್ಗುರುಗಳು ಬಂದು.ಜಗದ್ಗುರು ಶ್ರೀ ಭಾರತೀತೀರ್ಥರು ಆಗ ಕಾಶಿಗೆ ಆಗಮಿಸಿ ವಿಶ್ವನಾಥನನ್ನು ಪೂಜಿಸಿದ್ದರು. ಅದಕ್ಕೂ ಮೊದಲು 48 ವರ್ಷದ ಹಿಂದೆ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥರು ತಮ್ಮ ಕರಕಮಲ ಸಂಜಾತ ಶ್ರೀ ಭಾರತೀತೀರ್ಥರೊಂದಿಗೆ ಪ್ರಯಾಗರಾಜ್ ಕುಂಬಮೇಳ ಮುಗಿಸಿ ಕಾಶಿಗೆ ಆಗಮಿಸಿದ್ದರು. ಆಗ ಅವರು ಕಾಶೀ ಶ್ರೀ ಅನ್ನಪೂರ್ಣೇಶ್ವರಿಯ ಮಂದಿರದ ಮೂರ್ತಿ ಪ್ರತಿಷ್ಠೆ ಕುಂಬಾಬಿಶೇಕ ನೆರವೇರಿಸಿದ್ದರು. ಈಗ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳು ಆಗಮಿಸಿ ಶ್ರೀ ಅನ್ನಪೂರ್ಣೇಶ್ವರಿಯ ನೂತನ ಮೂರ್ತಿ ಪ್ರತಿಷ್ಠೆ,ಸ್ವರ್ಣಕಲಸ ಸಮರ್ಪಣೆ ಕುಂಬಾಬಿಶೇಕ ನೆರವೇರಿಸಲಿದ್ದಾರೆ. ಜಗದ್ಗುರುಗಳನ್ನು ಕಾಶೀ ಮಹಾಪೌರ,ಕಾಶೀ ಮಹಾರಾಜ,ಕಾಶೀ ಅನ್ನಪೂರ್ಣ ದೇವಸ್ಥಾನದ ಶ್ರೀ ಶಂಕರ್ ಗುರೂಜಿ ಮಹಂತ್, ಕಾಶೀ ವಿದ್ವನ್ಮಂಡಲಿ,ಕಾಶೀ ವಿದ್ವತ್ ಪರಿಷತ್ ಮಂತಾದ ಪ್ರಮುಖರು ಸ್ವಾಗತಿಸಿದರು.ಕಾಶಿಯ ಜನ ಸ್ವಾಗತ ಸಭೆಯನ್ನು ನಡೆಸಿಕೊಟ್ಟರು. ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆಗೆ ಶುಭ ಮುಹೂರ್ತ ಇಟ್ಟುಕೊಟ್ಟ ಶ್ರೀ ಗಣೇಶ್ವರ ದ್ರಾವಿಡ್ ಸೇರಿದಂತೆ ಅನೇಕ ಗಣ್ಯರು ಶ್ರೀಗಳ ದರ್ಶನ ಪಡೆದರು. ಅಯೋಧ್ಯೆಯ ಮುಹೂರ್ತ ಸಮರ್ಪಕವಿಲ್ಲ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದು,ಮಂದಿರ ನಿರ್ಮಾಣ ಮುಗಿಯದೇ ಪ್ರಾಣ ಪ್ರತಿಷ್ಠೆ ಸಲ್ಲದು ಎಂದೂ ವಿವಾದ ಸೃಷ್ಟಿಯಾದಾಗ ಶೃಂಗೇರಿಯ ಜಗದ್ಗುರುಗಳಿಂದ ಪ್ರಾಣ ಪ್ರತಿಷ್ಠೆಯ ಮುಹೂರ್ತ ಮತ್ತು ಗರ್ಭಗುಡಿಯು ಪೂರ್ಣವಾದಾಗ ಪ್ರತಿಷ್ಠೆ ಮಾಡಬುದೆಂಬ ಅಭಿಪ್ರಾಯ ವ್ಯಕ್ತವಾಗಿದ್ದು ಉಲ್ಲೇಖಾರ್ಹ.
ಇಂದು ಕಾಶೀ ವಿಶ್ವನಾಥ ಸ್ವಾಮಿಗೆ ಶ್ರೀಗಳು ವಿಶೇಷ ಪೂಜೆ ಸಮರ್ಪಿಸಿದರು. ನಂತರ ಆಯುತ ಮೋದಕ ಮಹಾಗಣಪತಿ ಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು.ಭಗವತಿ ಅನ್ನಪೂರ್ಣೇಶ್ವರಿಯ ಮಂದಿರದಲ್ಲಿ ಕೋಟಿ ಕುಂಕುಮಾರ್ಚನೆಯು ಗುರುಗಳ ಉಪಸ್ಥಿತಿಯಲ್ಲಿ ಶುಭಾರಂಬಗೊಂಡಿತು. ಕಾಶೀ ವಿಶಾಲಕ್ಷಿ ದರ್ಶನ, ಬಿಂದು ಮಾಧವನಲ್ಲಿ ಲಕ್ಷ ತುಳಸಿ ಅರ್ಚನೆ ಮತ್ತು ಮಂಗಳಾರತಿ ನಡೆಸಿ ಜಗದ್ಗುರುಗಳಿಂದ ಕಾಶೀ ಪಂಚಗಂಗಾ ಘಾಟ್ ನ ಶೃಂಗೇರಿಯ ಶಾಖಾ ಮಠದ ಬೇಟಿ ನಡೆಯಿತು. ನಾಳೆ ಸಹಸ್ರ ಚಂಡೀಯಾಗದ ಶುಭಾರಂಬ ಗುರುಗಳ ಉಪಸ್ಥಿತಿಯಲ್ಲಿ ಜರುಗಲಿದೆ. ಸಂಜೆ ಶ್ರೀಗಳ ಅನುಗ್ರಹ ಭಾಷಣವಿದೆ. ವಿವಿದ ದೇವಸ್ಥಾನಗಳ ಬೇಟಿ,ವೇದ ಪುರಾಣ ಪಾರಾಯಣ,ಶಾಸ್ತ್ರ ಸಭೆ,ಧಾರ್ಮಿಕ ಕಾರ್ಯಕ್ರಮ, ಅನುಗ್ರಹ ಭಾಷಣ,ಚಂದ್ರಮೌಳೇಶ್ವರ ಪೂಜೆ, ಭಕ್ತರಿಗೆ ದರ್ಶನ ಎಂದು ಜಗದ್ಗುರುಗಳ ಪ್ರತಿ ಕ್ಷಣವೂ ಸದ್ಬಳಕೆ ಆಗುತ್ತಿದೆ.
ಎಲ್ಲಿಯ ಧಕ್ಷಿಣದ ಶೃಂಗೇರಿ,ಎಲ್ಲಿಯ ಉತ್ತರದ ಪ್ರಪಂಚದ ಪ್ರಾಚೀನ ನಗರಿ ಕಾಶಿ.ಈ ಬೆಸುಗೆ ಬೆಸೆದಿದ್ದು ಶಂಕರ ಭಗವತ್ಪಾದರು.ಅವರು ಮೂರ್ತಿಯೊಂದು ಕಾಶಿ ವಿಶ್ವನಾಥ ಕಾರಿಡಾರ್ ನಲ್ಲೇ ಸ್ಥಾಪಿಸಲಾಗಿದೆ. ಕಾಶಿಯ ಪುನರುತ್ಥಾನ ಮಾಡಿದ ಅಹಲ್ಯಾಬಾಯ್ ಹೋಳ್ಕರ್ ಪ್ರತಿಮೆಯೂ ಅಲ್ಲಿದೆ. ಸನಾತನ ಧರ್ಮದ ಪುನರುತ್ಥಾನಕ್ಕೆ ಆದಿ ಶಂಕರಾಚಾರ್ಯರು ಅವತರಿಸದಿದ್ದರೆ ಇಂದು ಭಾರತ ಬೇರೆಯೇ ದೇಶವಾಗಿ ಬೇರೆಯೇ ಧರ್ಮ ಆಚರಿಸುವಂತಾಗುತ್ತಿತ್ತು. ಶೃಂಗೇರಿಯ ಜಗದ್ಗುರುಗಳನ್ನೇ ಶಂಕರ ಭಗವತ್ಪಾದರ ಪ್ರತಿ ರೂಪ ಎಂದು ಈ ಪುಣ್ಯ ಕ್ಷೇತ್ರ ಸೇರಿದಂತೆ ಉತ್ತರದ ಭಕ್ತರು ನಂಬುತ್ತಾರಾಗಿ ಜಗದ್ಗುರುಗಳ ಬೇಟಿಗೆ ಅಷ್ಟೊಂದು ಮಹತ್ವ ದೊರಕುತ್ತದೆ. ದಿನವೂ ಸಾವಿರ ಸಂತರು ಬಂದು ಹೋಗುವ ಪುಣ್ಯಭೂಮಿ ಅದು. ಹೀಗಿದ್ದೂ ಶೃಂಗೇರಿಯ ಜಗದ್ಗುರುಗಳ ಪಾದಸ್ಪರ್ಶಕ್ಕೆ ಈ ಪವಿತ್ರ ಕ್ಷೇತ್ರ ಎದುರುನೋಡುತ್ತದೆ. ಮೂವತ್ತು ವರ್ಷದ ನಂತರ ಇಲ್ಲಿಗೆ ಬಂದೆವು ಅಂದರೆ ಮತ್ತೆ ಬರಲು ಮೂವತ್ತು ವರ್ಷ ಆದೀತು ಎಂದಲ್ಲ. ನಾವು ಪುನಃ ಪುನಃ ಕಾಶಿ ದರ್ಶನ ಮಾಡುತ್ತೇವೆ ಎಂದು ಜಗದ್ಗುರುಗಳು ಹೇಳಿದಾಗ ಕಾಶೀ ಮಹಾಜನತೆ ಹರ್ಷೋಲ್ಲಾಸದಿಂದ ಸ್ವಾಗತಿಸಿದರು. 48 ವರ್ಷದ ಹಿಂದೆ ಕುಂಬಮೇಳದ ನಂತರ ನಮ್ಮ ಪರಮಗುರುಗಳು ನಮ್ಮ ಗುರುಗಳ ಜೊತೆ ಆಗಮಿಸಿ ಅನ್ನಪೂರ್ಣೇಶ್ವರಿಯ ಪುನರ್ ಪ್ರತಿಷ್ಠೆ ಕುಂಬಾಬಿಶೇಕ ನೆರವೇರಿಸಿದ್ದರು. ಈಗ ನಾವೊಬ್ಬರೇ ಬಂದಿಲ್ಲ. ನಮ್ಮ ಗುರುಗಳ ತಪಸ್ಸಿನ ಶಕ್ತಿ,ಅನುಗ್ರಹ ನಮ್ಮ ಜೊತೆಗೇ ಇದೆ.ನಮ್ಮ ಯಾತ್ರೆ ನಡೆಸುವವರು ಅವರು ಎಂದು ಕಾಶೀ ಪುರಪ್ರವೇಶ ಸಮಾರಂಭದಲ್ಲೇ ಸನ್ನಿಧಾನ ತಿಳಿಸುವ ಮೂಲಕ ಅಚಲ ಗುರುಭಕ್ತಿಯನ್ನು ಪ್ರಕಟಿಸಿದರು. ಇನ್ನು ಫೆಬ್ರುವರಿಯ ಒಂಬತ್ತರ ವರೆಗೆ ಕಾಶಿಯಲ್ಲಿ ಶೃಂಗೇರಿಯ ಜಗದ್ಗುರುಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ನಂತರ ಅವರು ಅಯೋಧ್ಯೆಯ ಪ್ರಭು ರಾಮನ ದರ್ಶನ ಪಡೆಯಲಿದ್ದಾರೆ.ಅಯೋಧ್ಯೆಯ ಶ್ರೀ ರಾಮಮಂದಿರ ಟ್ರಸ್ಟ್ ಜಗದ್ಗುರುಗಳ ಬೇಟಿಗೆ ವಿಶೇಷ ಏರ್ಪಾಟು ಮಾಡಿದೆ. ಪ್ರಯಾಗ್ ರಾಜ್ ಸೇರಿದಂತೆ ಜಗದ್ಗುರುಗಳ ಬೇಟಿಯ
ಸಂಧರ್ಭ ರಾಷ್ಟ್ರೀಯ ಸ್ವಯಂಸೇವಕ ಸಂಘದವರು ವಿಶೇಷ ಏರ್ಪಾಟಿನಲ್ಲಿ ತೊಡಗಿಸಿಕೊಳ್ಳುತ್ತಾರೆ. ಕಾಶಿಯ ಸ್ವಾಗತ ಸಮಾರಂಭದಲ್ಲೂ ಅವರಿದ್ದರು.ವಿಶ್ವ ಹಿಂದೂ ಪರಿಷತ್ತಿನ ಮುಖ್ಯಸ್ಥರೇ ಪ್ರಯಾಗ್ ರಾಜ್ ನಲ್ಲಿ ಗುರುದರ್ಶನ ಮಾಡಿದ್ದರು. ಅವರಿಗೆ ಖುರ್ಚಿಯ ಮೇಲೆ ಕೂರುವ ಅವಕಾಶ ಇದ್ದಾಗಲೂ ಅವರು ನೆಲದ ಮೇಲೇ ಇತರ ಮುಖಂಡರ ಜೊತೆ ಕುಳಿತೇ ಗುರುಗಳೊಂದಿಗೆ ಮಾತುಕತೆ ನಡೆಸಿದರು.
ಧಕ್ಷಿಣ ಭಾರತದಲ್ಲಿ ಗುರುದರ್ಶನಕ್ಕೆ ಇರುವ ಪದ್ದತಿಗೂ ಉತ್ತರ ಭಾರತಕ್ಕೂ ವ್ಯತ್ಯಾಸವಿದೆ.ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥರು ಶೃಂಗೇರಿಯ ಜಗದ್ಗುರುಗಳಿಗೆ ಕಾಷಾಯ ವಸ್ತ್ರ ಹೊದಿಸಿದರು. ಉತ್ತರ ಭಾರತದಲ್ಲಿ ಗುರುಗಳಿಗೆ ನಮಸ್ಕರಿಸುವ ರೀತಿಯೂ ಬೇರೆ.ಗಣ್ಯರು ಗುರುಗಳ ಎದುರು ಪೂರ್ತಿ ವಸ್ತ್ರ ತೊಟ್ಟೇ ಖುರ್ಚಿಯ ಮೇಲೆ ಕುಳಿತುಕೊಳ್ಳುತ್ತಾರೆ.
ಅಮಿತ್ ಶಾ ತಮಗೆ ಗುರುಗಳು ಅನುಗ್ರಹ ಪೂರ್ವಕವಾಗಿ ಹೊದಿಸಿದ ಶಾಲನ್ನು ತಕ್ಷಣ ತೆಗೆದರು. ನನಗೆ ಪಿ.ವಿ.ನರಸಿಂಹ ರಾವ್ ಪ್ರಧಾನಿ ಆದಾಗ ಶೃಂಗೇರಿಗೆ ಬಂದ ಒಂದು ಸಂಧರ್ಭ ನೆನಪಿಗೆ ಬಂದಿತು. ಶೃಂಗೇರಿಯ ಶಂಕರಾಚಾರ್ಯರ ಮೂರ್ತಿ ಸ್ಥಾಪನೆಯ ಶಂಕುಸ್ಥಾಪನಾ ಸಮಾರಂಭ ಅದು. ಶ್ರೀ ಭಾರತೀತೀರ್ಥರು ಪ್ರಧಾನಿಗೆ ಶಾಲು ಅನುಗ್ರಹಿಸಿದ ತಕ್ಷಣ ಅವರು ಅದನ್ನು ತೆಗೆಯ ಹೊರಟಾಗ ಸ್ವಲ್ಪಕಾಲ ಅದು ಇಟ್ಟುಕೊಳ್ಳಿ ಎಂದು ಗುರು ಅಪ್ಪಣೆ ಆಯಿತು. ವಿನೀತ ವಿದ್ಯಾರ್ಥಿಯಂತೆ ಪ್ರಧಾನಿ ಅದನ್ನು ಪಾಲಿಸಿದ್ದರು. ನಂತರ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿಯವರಿಗೆ ಹಾಗೆ ಹೇಳಬೇಕಾಗೂ ಬರಲಿಲ್ಲ. ಆಗಲೂ ವೇದಿಕೇಯಲ್ಲಿ ಗುರುಗಳು ಮಾತ್ರ.ಸಭಿಕರ ಪ್ರಥಮ ಸಾಲಿನಲ್ಲಿ ಪ್ರಧಾನಿ ಮತ್ತು ಮುಖ್ಯ ಮಂತ್ರಿಗಳು. ನನಗೂ ಶೀರ್ನಾಳಿ ಚಂದ್ರಶೇಖರ್ ಕೃಪಿಯಿಂದ ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿತ್ತು.
ಶೃಂಗೇರಿಯ ಗುರುಪರಂಪರೆಗೆ ಇರುವ ವಿಶೇಷ ಗೌರವ ಎಲ್ಲಾ ಕಾಲಕ್ಕೂ ಮುಂದುವರೆಯಲಿದೆ.

S. N. Channabasappa ಮೃತ ಸೈನಿಕ ಮಂಜುನಾಥ್ ಪಾರ್ಥಿವ ಶರೀರ‌ಕ್ಕೆ ಶಿವಮೊಗ್ಗದಲ್ಲಿ ಸಾದರ ನಮನ

0

S. N. Channabasappa ಭಾರತೀಯ ವಾಯುಪಡೆಯಲ್ಲಿ ಜೂನಿಯರ್ ವಾರಂಟ್ ಅಧಿಕಾರಿಯಾಗಿ ಕಳೆದ 18 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ದೆಹಲಿಯಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಉತ್ತರ ಪ್ರದೇಶದ ಆಗ್ರಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸಂಕೂರು ಗ್ರಾಮದ 36 ವರ್ಷದ ಜಿ.ಎಸ್. ಮಂಜುನಾಥ್ ಅವರು ಪ್ಯಾರಾಟ್ರೂಪರ್ ತರಬೇತಿ ಶಾಲೆಯಲ್ಲಿ ತರಬೇತಿ ವ್ಯಾಯಾಮದ ಸಮಯದಲ್ಲಿ ಅವಘಡ ಸಂಭವಿಸಿ ಹುತಾತ್ಮರಾದ ಅತೀವ ನೋವುಂಟಾಗಿದೆ ಎಂದು ಶಿವಮೊಗ್ಗ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಸೂಚಿಸಿದ್ದಾರೆ.

ದೇಶಸೇವೆಯ ಕರ್ತವ್ಯ ನಡೆಸುತ್ತಿದ್ದ ನಮ್ಮ ಹೆಮ್ಮೆಯ ಯೋಧ ಜಿ.ಎಸ್. ಮಂಜುನಾಥ್ ರವರ ಪಾರ್ಥಿವ ಶರೀರ ಇಂದು ಶಿವಮೊಗ್ಗ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಂತಿಮ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನಿಸಿ, ಯೋಧನ ಆತ್ಮಕ್ಕೆ ಮೋಕ್ಷ ಸಿಗಲಿ ಎಂದು ಪ್ರಾರ್ಥಿಸಲಾಯಿತು.

Sports Authority of India ತರಬೇತಿದಾರ ವಿನೋದ್ ಅವರಿಗೆ ಕ್ರೀಡಾ ಪ್ರಾಧಿಕಾರದಿಂದ ಪ್ರಮಾಣಪತ್ರ

0

Sports Authority of India ಫೆಬ್ರವರಿ 3 ರಿಂದ 7 ರವರೆಗೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಪಂಜಾಬಿನ ನೇತಾಜಿ
ಸುಭಾಷ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಪಟಿಯಾಲ ದಲ್ಲಿ ಆಯೋಜಿಸಿದ ಸ್ಪೋರ್ಟ್ಸ್ ಸೈಕಾಲಜಿ ಕೋರ್ಸ್ ನಲ್ಲಿ
ಪಾಲ್ಗೊಂಡಿದ್ದ ಶಿವಮೊಗ್ಗದ ಕರಾಟೆ, ಬಾಕ್ಸಿಂಗ್ ಮತ್ತು ಸ್ಕ್ವಾಯ್ ತರಬೇತಿದಾರ ಶಿವಮೊಗ್ಗ ವಿನೋದ್
ಕೋರ್ಸ್ ಅನ್ನು ಪೂರೈಸಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಪಟಿಯಾಲದ ನಿರ್ದೇಶಕರಿಂದ ಪ್ರಮಾಣಪತ್ರವನ್ನು ಪಡೆದಿದ್ದಾರೆ.

Air Force Manjunath ಮೃತ ವೀರ ವಾಯುದಳ ಸೈನಿಕ ಮಂಜುನಾಥ್ ಬಗ್ಗೆ ಮತ್ತಷ್ಟು ಮಾಹಿತಿ

0

Air Force Manjunath ತರಬೇತಿ ನೀಡುವ ವೇಳೆ ತಮ್ಮದೇ ಪ್ಯಾರಾಚೂಟ್ ಸರಿಯಾದ ಸಮಯಕ್ಕೆ ತೆರೆದುಕೊಳ್ಳದ ಪರಿಣಾಮ ಜಿಲ್ಲೆಯ ಹೊಸನಗರ ಮೂಲದ ಮಂಜುನಾಥ್(36) ಭಾರತೀಯ ವಾಯುಸೇವೆಯ ತರಬೇತುದಾರ ನೆಲೆಕ್ಕೆ ಅಪ್ಪಳಿಸಿ ಸ್ಥಳದಲ್ಲೆ ಸಾವಿಗೀಡಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರ ವಾಯುಸೇನ ಪಿಟಿಎಸ್ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಮೃತರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಕೂರು ಸಮೀಪದ ಗೋರನಗದ್ದೆ ವಾಸಿ ಜಿ.ಎಸ್ ಮಂಜುನಾಥ್ (36) ಬಿನ್ ಜಿ.ಎಂ. ಸುರೇಶ್ ಎಂದು ತಿಳಿದುಬಂದಿದೆ.

ಮೃತರು, 2023ರಲ್ಲಿ ಭಾರತೀಯ ವಾಯುಸೇನೆಗೆ ಜ್ಯೂನಿಯರ್ ವಾರೆಂಟ್ ಅಧಿಕಾರಿಯಾಗಿ ಸೇವೆಗೆ ಸೇರ್ಪಡೆಗೊಂಡಿದ್ದು, ನಂತರ, ಜಮ್ಮು-ಕಾಶ್ಮೀರ್, ಅಸ್ಸಾಂ, ಗಾಜೀಯಬಾದ್, ದೆಹಲಿಯಲ್ಲಿ ಸೇವೆ ಸಲ್ಲಿಸಿದ ಬಳಿಕ ಕಳೆದ ಒಂದುವರೆ ತಿಂಗಳಿನಿಂದ ಉತ್ತರ ಪ್ರದೇಶದ ಆಗ್ರದ ಭಾರತೀಯ ವಾಯುಸೇನೆಯ ಪ್ಯಾರ ಜೆಂಪ್ ಜ್ಯೂನಿಯರ್ ವಾರೆಂಟ್ ಅಧಿಕಾರಿಯಾಗಿ ಕರ್ತವ್ಯ ನಿರತರಾಗಿದ್ದರು.

ಮೂಲತಃ ಕೃಷಿ ಕುಟುಂಬಕ್ಕೆ ಸೇರಿದ ಮಂಜುನಾಥ್ ಇವರು 2019ರಲ್ಲಿ ಅಸ್ಸಾಂ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದು, ಸಂತಾನದ ನಿರೀಕ್ಷೆಯಲ್ಲಿದ್ದರು. ಒಟ್ಟಾರೆ 16 ವರ್ಷಗಳ ಕಾಲ ವಾಯುಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಮೃತರು, ಇದೇ ಫೆಬ್ರವರಿ 7ರ ಶುಕ್ರವಾರ ಬೆಳಗ್ಗೆ ಸರಿ ಸುಮಾರು 7 ರಿಂದ 8 ಗಂಟೆಯ ವೇಳೆಯಲ್ಲಿ ಆಗ್ರ ವಾಯುಸೇನೆ ಪಿಟಿಎಸ್ ಕೇಂದ್ರದಲ್ಲಿ ಮಂಜುನಾಥ ಅವರನ್ನು ಒಳಗೊಂಡಂತೆ ಸುಮಾರು 12 ಜನರ ತಂಡಕ್ಕೆ ಕಾರ್ಗೋ ಮಾದರಿ ವಿಮಾನದಿಂದ ಸುಮಾರು 18 ಸಾವಿರ ಅಡಿ ಎತ್ತರದಿಂದ ಪ್ಯಾರ ಜೆಂಪ್ ತರಬೇತಿ ನೀಡುವ ಸಮಯದಲ್ಲಿ, ಎಲ್ಲಾ 11 ಮಂದಿ ಶಿಬಿರಾರ್ಥಿಗಳು ಸುರಕ್ಷಿತವಾಗಿ ಜಂಪ್ ಪೂರೈಸಿದ್ದು, ಕೊನೆಯವರಾಗಿ ಮಂಜುನಾಥ್ ಜಿಗಿದಿದ್ದು, ಅವರ ಪ್ಯಾರಚೂಟ್ ಸರಿಯಾದ ಸಮಯಕ್ಕೆ ತೆರೆದುಕೊಳ್ಳದ ಪರಿಣಾಮ ತರಬೇತುದಾರ ಮಂಜುನಾಥ್ ಕೊನೆಯುಸಿರು ಕಂಡಿದ್ದಾರೆ.

Air Force Manjunath ಗ್ರಾಮದಲ್ಲಿ ಮಡುಗಟ್ಚಿದ ಶೋಕ :
ವಿಷಯದ ತಿಳಿಯುತ್ತಿದ್ದಂತೆ ಮೃತರ ಗ್ರಾಮದಲ್ಲಿ ಅತೀವ ಶೋಕ ಮನೆ ಮಾಡಿದ್ದು, ಸಂಬಂಧಿಕರು, ಹಿತೈಷಿಗಳಿಂದ ನೊಂದ ಕುಟುಂಬಕ್ಕೆ ಸಂತಾಪ ಸೂಚನೆ ಕಾರ್ಯ ನಡೆದಿದೆ. ನಾಳೆ 9ರ ಭಾನುವಾರ ಬೆಳಗ್ಗೆ ಸೇನಾನಿಯ ಮೃತದೇಹ ಪಟ್ಟಣ ತಲುಪುವ ನಿರೀಕ್ಷೆಯಿದ್ದು, ತಾಲೂಕು ಆಡಳಿತ ಸಕಲ ಸರ್ಕಾರಿ ಗೌರವ ನೀಡಲು ಸರ್ವ ತಯಾರಿಗೆ ಮುಂದಾಗಿದೆ.

ಹೊಸನಗರದ ಕ್ರೀಡಾಂಗಣದಲ್ಲಿ ಶಾಸಕ ಗೋಪಾಲಕೃಷ್ಣ ಸಮ್ಮುಖದಲ್ಲಿ ತಹಶೀಲ್ದಾರ್ ರಶ್ಮಿ ಹೆಚ್. ನೇತೃತ್ವದಲ್ಲಿ ಸರ್ಕಾರಿ ಗೌರವ ನೀಡಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ ಎಂದು ಮೃತನ ಕುಟುಂಬ ಮೂಲಗಳು ತಿಳಿಸಿವೆ. ಮೃತ ಮಂಜುನಾಥ್ ಅವರ ನಿಧನಕ್ಕೆ ಜಿಲ್ಲಾಧಿಕಾರಿ ಗುರುದತ್ತಹೆಗಡೆ, ಸಿಇಒ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಸ್ಟಾಧಿಕಾರಿ ಜಿ. ಕೆ. ಮಿಥುನ್ ಕುಮಾರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Sumukha Art School ಮಕ್ಕಳೆ, ವೇಷದ ವ್ಯಾಮೋಹ ಬೇಡ. ಪೌರಾಣಿಕ ಜ್ಞಾನ‌ ಸಂಪಾದಿಸಿ- ಕೆ.ಜಿ.ರಾಮರಾವ್

0

Sumukha Art School ಶಿವಮೊಗ್ಗದ ಸುಮುಖ ಕಲಾಕೇಂದ್ರದ ಆಶ್ರಯದಲ್ಲಿ ದಿ.ಹಳ್ಳಾಡಿ ಸುಬ್ರಾಯ ಮಲ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆಯಿತು. ಈ ಬಾರಿ‌ ಸುಬ್ರಾಯ ಮಲ್ಯ ಪ್ರಶಸ್ತಿಗೆ ಹಿರಿಯ‌ ಭಾಗವತಿಕೆ ಕಲಾವಿದ‌ ಕೆ.ಜಿ.ರಾಮರಾಯರು‌ ಭಾಜನರಾಗಿದ್ದಾರೆ. ದಿ.ಸುಬ್ರಾಯ ಮಲ್ಯ ರ ಪುತ್ರಿ‌ ಹಾಗೂ ಸುಮುಖ ಕಲಾ ಕೇಂದ್ರದ ನಿರ್ವಾಹಕಿ ಕಿರಣ್ ಪೈ‌ ಅವರು ಪ್ರಾಸ್ತಾವಿಕ‌ ನುಡಿಯಾಡಿದರು. ಯಕ್ಷಗಾನ ಕಲೆಯನ್ನ ಇಂದಿನ ಮಕ್ಕಳಿಗೆ ‌ಕಲಿಸುವ ಏಕೈಕ‌‌ ಉದ್ದೇಶದಿಂದ ಕಲಾ ಕೇಂದ್ರ‌ ಸ್ಥಾಪನೆಯಾಗಿದೆ. ಜೀವನದಲ್ಲಿ ಒಳ್ಳೆಯ ಸಂಸ್ಕಾರವನ್ನ ಯಕ್ಷಗಾನ‌ ಕಲಿಕೆ ತುಂಬಿ ಕೊಡುತ್ತದೆ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಇದು ಸಹಕಾರಿ ಎಂದು ಕಿರಣ್ ಪೈ ಹೇಳಿದರು.

ಸಮಾರಂಭವನ್ನ ಜ್ಯೋತಿ ಬೆಳಗುವ ಉದ್ಘಾಟಿಸಲಾಯಿತು. ಶಿವಮೊಗ್ಗದ ಹಿರಿಯ ಯಕ್ಷಗಾನ ಅಭಿಮಾನಿ‌ ಮತ್ತು‌ ಖ್ಯಾತ ವೈದ್ಯ
ಡಾ.ರತ್ನಾಕರ್ ಉದ್ಘಾಟಿಸಿದರು. “ಯಕ್ಷಗಾನ ಕಲೆ ಅತ್ಯಂತ ಪ್ರಭಾವಿ ಮತ್ತು ವ್ಯಕ್ತಿತ್ವ‌ವರ್ಧನೆಗೆ ಸಹಕಾರಿ.
ಅಂತಹ ಕಲೆಯನ್ನ ಕಲಿಯಲು ಹೋಗಿ‌ ಸಾಧಿಸಲಾಗಲಿಲ್ಲ. ಆದರೆ ಅದರ ಮೇಲಿನ ಮಮತೆಯಿಂದ ಯಕ್ಷಗಾನದ ಕಲಾವಿದರನ್ನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಲ್ಲಿನ ಗೆಳೆಯರೊಂದಿಗೆ ಒಂದುಗೂಡಿರುವೆ. ಮಹಿಳೆಯರಿಗೆ ಯಕ್ಷಗಾನ ಕಲಿಸುವ ಲಕ್ಷ್ಮೀನಾರಾಯಣ ಕಾಶಿ ಅಂಥವರ ಸಾಹಚರ್ಯ‌ ದೊರೆತಿದೆ. ಹೀಗಾಗಿ ಶಿವಮೊಗ್ಗದದಲ್ಲಿ ಅಭಿಮಾನಿಗಳ ಬಳಗ ರಚಿಸಿಕೊಂಡಿದ್ದೇವೆ. ಮಹಿಳೆಯರನ್ನ, ಮಕ್ಕಳನ್ನ ಈ ಕಲೆಯತ್ತ ಸೆಳೆಯುವ ಕಿರಣ್ ಪೈ‌ ಅವರ‌ ಶ್ರಮ‌ ಸಾರ್ಥಕವಾಗುತ್ತಿದೆ.” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಮಾನದಲ್ಲಿ ‘ಚಾಟ್ ಜಿಪಿಟಿ‌’ ಎಂಬ ಮಾಹಿತಿ ಭೂತದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಕಲಾರಂಗದ ಎಲ್ಲ ಸಂಗತಿಗಳನ್ನ ಗುರುವಿಲ್ಲದೇ ಥಟ್ಟನೆ ಬಾಚಿಕೊಡುವ ‌ ಈ ಕ್ರಮದಿಂದ ವಿಲಕ್ಷಣ ವಾತಾವರಣವೇ ಭವಿಷ್ಯದಲ್ಲಿ ಸೃಷ್ಟಿಯಾಗಲಿದೆ.
ಯಕ್ಷಗಾನದಂತಹ ವಿರಾಟ್ ಕಲೆಯನ್ನ ಸವಿಯುವ ಸಹೃದಯರೇ ಮುಂದೆ ಶೂನ್ಯ ವಾಗಬಹುದು. ಮೌಖಿಕ ಕಲಿಕೆಗೆ
ಸಂವಾದಿ ಅಲ್ಲದಿದ್ದರೂ ನಮ್ಮ ಮುಂದಿನ ಪೀಳಿಗೆ ಅದನ್ನೇ ಆರಾಧಿಸುವ, ಲವಲವಿಕೆಯಲ್ಲಿ ಇಂತಹ ಕಲೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗುತ್ತಾರೆ. ಅಂತಹ ದಿನ ದೂರವಿಲ್ಲ‌ ಎಂದು ಕಳಕಳಿಯಿಂದ ಮಾತನಾಡಿದರು.

ಶಿವಮೊಗ್ಗ ಅಭ್ಯುದಯ ಸಂಸ್ಥೆಯ‌ ನಿರ್ದೇಶಕ‌ ಲಕ್ಷ್ಮೀನಾರಾಯಣ ಕಾಶಿ ಅವರು ಸನ್ಮಾನಿತ ಕೆ.ಜಿ.ರಾಮರಾಯರಿಗೆ‌‌ ಅಭಿನಂದನಾ ಭಾಷಣಮಾಡಿದರು. ಗುರು‌ ಉಪ್ಪೂರರಿಂದ ಶಾಸ್ತ್ರೀಯ ತಳಹದಿ‌ ಪಡೆದು ,ನೆಬ್ಬೂರರ‌‌ ಒಡನಾಟದಿಂದ‌‌‌ ಭಾವತುಂಬಿ‌ ಭಾಗವತಿಕೆಗೆ ಹೊಸ ಚೇತನ ನೀಡಿದರು. ಕೆರೆಮನೆ ಶಂಭುಹೆಗಡೆ ಮೇಳದಿಂದ ಬಿಡುವು ದೊರೆತಾಗ‌ ಸಾಗರ ಪ್ರಾಂತ್ಯಕ್ಕೆ‌ಬಂದು‌ ಅಲ್ಲಿ‌
ಯುವಕರಿಗೆ ಯಕ್ಷಗಾನ‌ ತಾಲೀಮು‌ ನೀಡಿದರು. ಹೀಗಾಗಿ‌‌ ಸಾಗರ ಸುತ್ತಮುತ್ತ ಈ‌ಕಲೆ ಬೆಳೆಯಲಿಕ್ಕೆ ಕಾರಣೀಭೂತರಾದರು. ಸಾಕೇತ ಕಲಾವಿದರು ಎಂಬ‌ ತಂಡ ಕಟ್ಟಿ ಯಕ್ಷಗಾನ ಅಭಿಮಾನಿಗಳನ್ನ ರಂಜಿಸಿದರು. ಶಂಭು‌ಹೆಗಡೆ ಅವರ
ಕಲಾ ಪ್ರಜ಼್ಞೆ, ಆದರ್ಶ, ಮತ್ತು‌ ಕಮಿಟ್ ಮೆಂಟ್‌‌‌ ಗಳನ್ನ ತಮ್ಮದಾಗಿಸಿ ಯಕ್ಷಗಾನಕ್ಕೆ‌ತಮ್ಮನ್ನ ಅರ್ಪಿಸಿಕೊಂಡಿದ್ದಾರೆ. ಹೀಗೆ ಅವರದ್ದು ಸುಮಾರು ಐವತ್ತು‌ ವರ್ಷಗಳ‌ ಕಲಾಪಯಣ ಸಾಗಿ ಬಂದಿದೆ. ಅಷ್ಟೇ ಅಲ್ಲದೆ ಯಕ್ಷಗಾನ ಭಾಗವತಿಕೆಗೆ ಮೀಸಲಾಗದೇ ರಂಗನಡೆ,ರಂಗಕ್ರಿಯೆಗಳ ಬಗ್ಗೆ ಇದಮಿತ್ಥಂ ಎಂದು‌‌ ಹೇಳಬಹುದಾದ ಕಲಾ‌ಪ್ರಭುತ್ವ‌ವನ್ನ ರೂಢಿಸಿಕೊಂಡು ಬಂದಿದ್ದಾರೆ.
ಎಂದು ಅಭಿನಂದಿಸಿದರು.

ಹಿರಿಯ ಭಾಗವತಿಕೆ‌ ಕಲಾವಿದ ಕೆ.ಜಿ.ರಾಮರಾಯರಿಗೆ ಹಳ್ಳಾಡಿ‌ ಸುಬ್ರಾಯ ಮಲ್ಯ ಸ್ಮಾರಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
“ನಾರಣಪ್ಪ ಉಪ್ಪೂರು ಮತ್ತು‌‌ ಸುಬ್ರಾಯ ಮಲ್ಯರು ನನಗೆ ಗುರುಗಳಾಗಿದ್ದವರು. ಉಡುಪಿ ಕಲಾ ಕೇಂದ್ರದ ಉಪ್ಪೂರು‌ ಪ್ರಶಸ್ತಿ‌ ಬಂದಿದೆ.ಈಗ‌ ಸುಬ್ರಾಯ ಮಲ್ಯರ ಹೆಸರಿನ. ಪ್ರಶಸ್ತಿ‌‌ ಬಂದು‌ ಒಂದು ರೀತಿಯ ಧನ್ಯತಾಭಾವ ನಮಗಾಗಿದೆ ಎಂದರು.
ಶಿವಮೊಗ್ಗದಲ್ಲಿ‌ ಮಹಿಳಾ ಯಕ್ಷಗಾನ ಬೆಳವಣಿಗೆಗೆ ಕಾರಣರಾದ ಲಕ್ಷ್ಮೀ ನಾರಾಯಣ ಕಾಶಿ‌ ಅವರ‌ ಕೊಡುಗೆ ಅದ್ವಿತೀಯ ಎಂದು‌ ಹೇಳಿದರು. ಅದರ ಪಡಿನೆಳಲಾಗಿ‌ ಕಿರಣ್ ಪೈ ಅವರ ಸುಮುಖ‌ ಕಲಾಕೇಂದ್ರ ಯಕ್ಷಗಾನ‌ ಕಲಿಕೆಯಲ್ಲಿ ತನ್ನನ್ನ ತೊಡಗಿಸಿಕೊಂಡಿದೆ. ಬಾಬಣ್ಣನಂಥ ಸಹೃದಯರ ಪ್ರೋತ್ಸಾಹ ಯಕ್ಷಗಾನ‌ಕಲೆ‌‌ ಈ ಪ್ರದೇಶದಲ್ಲಿ ಬೆಳೆಯಲು‌ ಸಹಕಾರಿಯಾಗಿದೆ ಎಂದು ಯಕ್ಷಗಾನ ಕಲೆ ಬೆಳೆಸಿದ ವ್ಯಕ್ತಿ ವಿಶೇಷಗಳನ್ನು ಸ್ಮರಿಸಿದರು. “ ಮಕ್ಕಳೇ ವೇಷದ ವ್ಯಾಮೋಹ‌ ಪಡಬೇಡಿ. ಬೇರೆ ಬೇರೆ ಗುರುಗಳ‌
ಬಳಿಗೆ ಹೋಗಿ‌ ನಿಮ್ಮ ಅರೆಬರೆ ಕಲಾಸಕ್ತಿಯನ್ನ ತೋರಿಸಿ ಕಲೆಗೆ‌ ಅಗೌರವ‌ ತರಬೇಡಿ. ಶಿಷ್ಟಾಚಾರ ಪಾಲಿಸಿ. ಪೌರಾಣಿಕ ಜ್ಞಾನಸಂಪಾದನೆ ಮಾಡಿ. ಇವೆಲ್ಲ‌ ನಿಮಗೆ ಯಕ್ಷಗಾನ ಕಲೆ ಮೈಗೂಡಿಸಿಕೊಳ್ಳಲು‌ ತುಂಬಾ‌ ಸಹಕಾರಿ ಎಂದು‌ ಮಕ್ಕಳಿಗೆ‌‌ ಕಿವಿಮಾತು ಹೇಳಿದರು. ಆರಂಭದಲ್ಲಿ ಗೋವಿಂದರಾಯ ನಾಯಕ್ ಅವರು ಸ್ವಾಗತ ಕೋರಿದರು.
ಶ್ರೀನಿವಾಸ ಆಚಾರ್ಯ‌ಅವರು ಕಾರ್ಯಕ್ರಮ
ನಿರೂಪಿಸಿದರು.

Sahyadri Narayana Multispeciality Hospital ಭಾನುವಾರ ಬೆಳ್ಳಂಬೆಳಗು ಸೈಕಲ್ ಜಾಥಾ.ಕ್ಯಾನ್ಸರ್ ಬಗ್ಗೆ ‌ಜನಜಾಗೃತಿ ಮೂಡಿಸಿದ ಸಹ್ಯಾದ್ರಿ‌ ನಾರಾಯಣ ಆಸ್ಪತ್ರೆ ವೈದ್ಯ ವೃಂದ

0

Sahyadri Narayana Multispeciality Hospital ಭಾನುವಾರ ಬೆಳಿಗ್ಗೆಇಬ್ಬನಿ, ನಡುಗುವ ಚಳಿಯಲ್ಲಿ, ಶಿವಮೊಗ್ಗ ನಿವಾಸಿಗಳು ಹಾಗೂ ಶಿವಮೊಗ್ಗ ಸೈಕಲ್ ಕ್ಲಬ್ ಸದಸ್ಯರು ಸೇರಿ ನೂರಾರು ಸೈಕ್ಲಿಂಗ್ ಪ್ರೇಮಿಗಳು ಉತ್ಸಾಹಭರಿತವಾಗಿ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಶಿವಮೊಗ್ಗ ಸೈಕಲ್ ಕ್ಲಬ್ ಸಹಯೋಗದಲ್ಲಿ ಕ್ಯಾನ್ಸರ್‌ ಜಾಗೃತಿಗಾಗಿ ಆಯೋಜಿಸಲಾದ ಸೈಕ್ಲೋಥಾನ್ ನಲ್ಲಿ ಪಾಲ್ಗೊಂಡರು.

ಈ ಸೈಕ್ಲೋಥಾನ್‌ಗೆ ಎಲ್ಲ ವಯಸ್ಸಿನ ಸುಮಾರು 300 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಶಿವಮೊಗ್ಗ ಸೈಕಲ್ ಕ್ಲಬ್ ನಿರ್ದೇಶಕರಾದ ಡಾ. ಹೆಚ್.ಎಂ. ನಟರಾಜ್, ವಾಯುಪಡೆ ನಿವೃತ್ತ ಅಧಿಕಾರಿ ಹಾಗೂ ರಾಜ್ಯ ಲೆಕ್ಕಪತ್ರ ವಿಭಾಗದ ಮಾಜಿ ಜಾಯಿಂಟ್ ಕಂಟ್ರೋಲರ್, ಮತ್ತು ಡಾ. ಅಪರ್ಣ ಶ್ರೀವತ್ಸ, ಮೆಡಿಕಲ್‌ ಅಂಕೋಲೋಜಿಸ್ಟ್‌, ಎಸ್‌ಎನ್‌ಎಂಎಚ್‌, ಅವರು ಹಸಿರು ನಿಶಾನೆ ತೋರಿಸಿದರು.

ಸೈಕ್ಲೋಥಾನ್‌ವು ಕುವೆಂಪು ರಸ್ತೆಯ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ನಿಂದ ಪ್ರಾರಂಭವಾಗಿ ಉಷಾ ನರ್ಸಿಂಗ್ ಹೋಮ್, ವಿನೋಬನಗರ ಪೋಲೀಸ್ ಠಾಣೆ, ಅಲ್ಕೋಲ್ ಸರ್ಕಲ್, ಗೋಪಾಳ್ ಬಸ್ ನಿಲ್ದಾಣ, ಎನ್.ಟಿ. ರಸ್ತೆ ಮೂಲಕ ಸಾಗಿ ಸಹ್ಯಾದ್ರಿ ನಾರಾಯಣ ಆಸ್ಪತ್ರೆ, ಹರಕೆರೆ ಯಲ್ಲಿ ಮುಕ್ತಾಯಗೊಂಡಿತು.

ಜನರನ್ನು ಉದ್ದೇಶಿಸಿ ಮಾತನಾಡಿದ ಡಾ. ಅಪರ್ಣ ಶ್ರೀವತ್ಸ ಕ್ಯಾನ್ಸರ್‌ನ ಮುನ್ಸೂಚನೆ ಮತ್ತು ತಡೆಗಟ್ಟುವಿಕೆ ಕುರಿತು ಮಾತನಾಡಿದರು. ಕೆಲವರಲ್ಲಿ ಕ್ಯಾನ್ಸರ್‌ಗೆ ಕಾರಣವೆನೆಂದು ತಿಳಿಯುವದಿಲ್ಲ ಆದರೆ ಇದು ಯಾರಿಗಾದರೂ ಬರುವ ಸಾಧ್ಯತೆ ಇದೆ.

ಅನಾರೋಗ್ಯಕರ ಗಡ್ಡೆ, ಅನಿರೀಕ್ಷಿತ ರಕ್ತಸ್ರಾವ (ಮೂಗು, ಮೂತ್ರ ಅಥವಾ ಗುದದ್ವಾರದಿಂದ) ಕಂಡು ಬಂದರೆ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ. 40 ವರ್ಷ ಮೇಲ್ಪಟ್ಟವರು ವರ್ಷಕ್ಕೊಮ್ಮೆ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಡಾ ಅರ್ಪಣಾ ಶ್ರೀವತ್ಸ್‌ ಸಲಹೆ ನೀಡಿದರು.

ಸರ್ಜಿಕಲ್‌ ಅಂಕಾಲಿಜಿಸ್ಟ್‌ ಡಾ. ವಿವೇಕ್ ಎಂ.ಎ. ಅವರು ಮಾತನಾಡಿ, ಧೂಮಪಾನ, ಮದ್ಯಪಾನ, ಅನಾರೊಗ್ಯಕರ ಆಹಾರ ಪದ್ಧತಿ, ಚಟುವಟಿಕೆ ಇಲ್ಲದ ಜೀವನಶೈಲಿ ಮುಂತಾದವು ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳು. ಜನರು ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ಶಿಷ್ಟ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕೆಲವು ಕ್ಯಾನ್ಸರ್‌ಗಳನ್ನು ಲಸಿಕೆ ಮೂಲಕ ತಡೆಯಬಹುದು ಎಂದು ಹೇಳಿದರು.

Sahyadri Narayana Multispeciality Hospital ಡಾ. ಹೆಚ್.ಎಂ. ನಟರಾಜ ಅವರು ಸೈಕ್ಲಿಂಗ್‌ನ ಸೌಂದರ್ಯ ಮತ್ತು ಪ್ರಯೋಜನಗಳನ್ನು ವಿವರಿಸಿದರು. -ಸೈಕ್ಲಿಂಗ್ ಶಾರೀರಿಕ ಆರೋಗ್ಯದ ಅವಿಚ್ಛಿನ್ನ ಭಾಗವಾಗಿದೆ. “ಹಲವರು ನಾನು ಸೈಕ್ಲಿಂಗ್ ಮಾಡಲಾಗದು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ, ಆದರೆ ಇದು ಸುಳ್ಳು ಕಲ್ಪನೆ. ನಾನು ಈ ಇಳಿ ವಯಸ್ಸಿನಲ್ಲೂ ನಿರಂತರ ಸೈಕ್ಲಿಂಗ್ ಮಾಡುತ್ತೇನೆ ಮತ್ತುಆಗಾಗ ನನ್ನ ಊರಿಗೂ ಸೈಕಲ್‌ನಲ್ಲಿ ಹೋಗುತ್ತೇನೆ,” ಎಂದು ಹೇಳಿದರು.

ವಿಶೇಷವಾಗಿ ಡಾಕ್ಟರ್‌ಗಳು ಸಹ ಸಾಧ್ಯವಾದಾಗ ಸೈಕ್ಲಿಂಗ್‌ ಅಥವಾ ಆಸ್ಪತ್ರೆಗೆ ಸೈಕಲ್‌ ಮೂಲಕ ತೆರಳುವಂತೆ ಕರೆ ನೀಡಿದರು. “ಸೈಕ್ಲಿಂಗ್ ಕೇವಲ ಸಾರಿಗೆ ವಿಧಾನವಲ್ಲ, ಇದು ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುವ ಒಂದು ಸುಂದರ ವಿಧಾನ ,” ಎಂದರು.

ಈ ಸಮಾರಂಭದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ವರ್ಗೀಸ್ ಪಿ. ಜಾನ್, ಡಾ. ಶ್ರೀವತ್ಸ ನಾಡಿಗ್, ಡಾ. ರವಿ ಕೆ.ಆರ್., ಡಾ. ವಿಕ್ರಮ್ ಎಂ.ಜೆ., ಡಾ. ರಾಮಸುಂದರ್, ಮಾರ್ಕೇಟಿಂಗ್‌ ಜನರಲ್‌ ಮ್ಯಾನೇಜರ್‌ ರಾಜಸಿಂಗ್ ಎಸ್.ವಿ., ಮಾರ್ಕೆಟಿಂಗ್‌ ಮ್ಯಾನೇಜರ್‌ ಶೈಲೇಶ್ ಎಸ್.ಎನ್., ರೋಟರಿ ಕ್ಲಬ್ ಸದಸ್ಯರಾದ ವಿಜಯಕುಮಾರ, ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.

ಈ ಸೈಕ್ಲೋಥಾನ್ ಕ್ಯಾನ್ಸರ್ ಜಾಗೃತಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಮಹತ್ವದ ಸಂದೇಶವನ್ನು ಸಾರಲು ಯಶಸ್ವಿಯಾಯಿತು.

Klive Special Article ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕೆಲವು ಮೆಲುಕುಗಳು

0

ಲೇ: ಗೋಪಾಲ್ ಯಡಗೆರೆ.ಹಿರಿಯ ವರದಿಗಾರರು. ಕನ್ನಡಪ್ರಭ. ಶಿವಮೊಗ್ಗ

Klive Special Article ಕತೆಗಳಿಗೆ ಎಂದೂ ಸಾವಿಲ್ಲ; ವ್ಯಕ್ತಿತ್ವ, ಕಲ್ಪನೆ, ಭಾವನೆಯ ವಿಕಾಸಕ್ಕೆ ಪೂರಕವಾಗಿದೆ: ಗೋಪಾಲ್‌ ಯಡಗೆರೆ
ಸಾಹಿತಿಗಳು, ಕಥೆಗಾರರು ತಂತ್ರಜ್ಞಾನದ ಅರಿವನ್ನು ಹೊಂದಬೇಕು
ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಥೆಗಳ ಪ್ರೇರಣೆಯು ಮಗುವಿನಿಂದ ಹಿಡಿದು ವಯಸ್ಕರವರೆಗೆ ಎಲ್ಲರಲ್ಲಿಯೂ ಕಲ್ಪನೆ, ಭಾವ ಮತ್ತು ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾಗುತ್ತವೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಗೋಪಾಲ್‌ ಯಡಗೆರೆ ಹೇಳಿದರು.

ಇಲ್ಲಿನ ಗೋಪಿಶೆಟ್ಟಿಕೊಪ್ಪದ ಚಾಲುಕ್ಯನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿರುವ ಶಿವಮೊಗ್ಗ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಏರ್ಪಡಿಸಿದ್ದ “ಕಥೆ ಹೇಳುವೆವು ಕೇಳಿ” ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೆಯೂ ಕಥೆಗಳು ಇದ್ದವು, ಈಗಲೂ ಇವೆ, ಮುಂದೇಯೂ ಇರುತ್ತವೆ. ಸಾಹಿತ್ಯ ಮತ್ತು ಕಥೆಗಳಿಗೆ ಯಾವತ್ತೂ ಸಾವಿಲ್ಲ ಎಂದರು.

ಕಥೆಗಳ ಕೇಳುವಿಕೆ ಮಗುವಿಗೆ ಹುಟ್ಟಿದ ಕೆಲವೇ ದಿನಗಳಿಂದ ಆರಂಭವಾಗುತ್ತದೆ. ಕಥೆಗಳ ಪ್ರೇರಣೆಯಿಂದ ಮಗುವಿನಲ್ಲಿ ಆಗುವ ಕಲ್ಪನೆಯ ವಿಕಾಸ, ವ್ಯಕ್ತಿತ್ವದ ವಿಕಾಸದಿಂದ ಮಗುವು ಆರೋಗ್ಯಕರವಾಗಿ ಬೆಳೆಯಲು ಸಹಕಾರಿಯಾಗುತ್ತವೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುತ್ತದೆ. ತಂದೆ-ತಾಯಿಯ ಮಡಿಲಲ್ಲಿ ಮಲಗಿ ರೋಚಕತೆಯಿಂದ, ಭಾವನಾತ್ಮಕತೆಯಿಂದ, ತಾದಾತ್ಮ್ಯತೆಯಿಂದ ಕತೆಗಳನ್ನು ಆಸ್ವಾದಿಸುತ್ತದೆ ಎಂದರು.

ಮೊದಲು ಕಥೆಗಳೆಂದರೆ ಅದು ಕೇಳುವ ಕಥೆಗಳಾಗಿದ್ದವು. ಈಗ ಕೇಳುವುದರ ಜೊತೆಗೆ ನೋಡುವ ಕಥೆಗಳು ಮುಂಚೂಣಿಗೆ ಬಂದು ಕೂತಿವೆ. ಕೇಳುವ ಕಥೆಗಳಲ್ಲಿ ಮಗು ತನ್ನದೇ ಕಲ್ಪನೆಯಿಂದ ಸ್ವೀಕರಿಸಿದರೆ, ನೋಡುವ ಕಥೆಗಳಲ್ಲಿ ಒಂದು ರೀತಿಯ ಈ ಕಲ್ಪನೆಯಿಲ್ಲದ ಸ್ಥಿತಿಯನ್ನು ಗಮನಿಸಬಹುದಾಗಿದೆ ಎಂದು ವಿಶ್ಲೇಷಿಸಿದರು.

ಇಂದಿನ ಮಕ್ಕಳು ಕೇಳುವಿಕೆ, ಓದುವಿಕೆಯಿಂದ ನೋಡುವ ಕಥೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ವಯಸ್ಕರರು ಬದಲಾದ ಡಿಜಿಟಲ್‌ ಫಾರ್ಮ ಮೂಲಕ ಕೇಳುವ ಕತೆಯತ್ತ ಆಕರ್ಷಿತರಾಗುತ್ತಿದ್ದಾರೆ. ಕಥೆಗಳ ಪ್ರಸ್ತುತತೆಯ ಮಾಧ್ಯಮಗಳು ಬದಲಾಗುತ್ತಿದೆಯೇ ಹೊರತು ಅದರ ಆಕರ್ಷಣೆ ಕಡಿಮೆಯಾಗಿಲ್ಲ ಎಂದು ಅಭಿಪ್ರಾಯಮಟ್ಟರು.

ಇಂದಿನ ಸಾಹಿತಿಗಳು, ಕತೆಗಾರರು ತಂತ್ರಜ್ಞಾನದ ಅರಿವನ್ನು ಹೊಂದ ಬೇಕು. ಹೊಸ ತಂತ್ರಜ್ಞಾನದ ಮೂಲಕ ಓದುಗರು, ಸಾಹಿತ್ಯಾಸಕ್ತರನ್ನು ತಲುಪಬೇಕು ಎಂದು ಹೇಳಿದರು.

ಗೋಷ್ಠಿಯಲ್ಲಿ ಶೈಲಜಾ, ಡಾ.ನಾಗೇಂದ್ರ ಆಚಾರ್ಯ, ಸಂಧ್ಯಾ ಗಾಜನೂರು, ನೇತ್ರಾವತಿ ಸೊರಬ, ಟಿ.ಜಿ.ಹರೀಶ್‌ ಆಳ್ವಾಸ್, ಈಶ್ವರಪ್ಪ ಮಂಕಳಲೆ, ಅಲಕ ತೀರ್ಥಹಳ್ಳಿ ಮತ್ತಿತರರು ಇದ್ದರು.


ಮಲೆನಾಡಿನ ಸಮಸ್ಯೆ ಬಗೆಹರಿಸಲು ಸಂಸದರುಗಳಿಗೆ ಬದ್ದತೆಯಿಲ್ಲ:ಕಲ್ಕುಳಿ ವಿಠ್ಠಲಹೆಗಡೆ

Klive Special Article ಶಿವಮೊಗ್ಗ ಸ್ಥಳೀಯ ಜನರ ಸಹಭಾಗಿತ್ವ ಇಲ್ಲದೆಯೆ ಯಾವುದೇ ಪರಿಸರ ಯೋಜನೆ ಯಶಸ್ವಿಯಾಗುವುದಿಲ್ಲ. ಸ್ಥಳೀಯ ಜನರ ವಿಶ್ವಾಸ ಪಡೆಯುವ ಸೌಜನ್ಯತೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ತೋರಬೇಕಿದೆ ಎಂದು ಪರಿಸರ ತಜ್ಞ ಕಲ್ಕುಳಿ ವಿಠ್ಠಲಹೆಗಡೆ ಅಭಿಪ್ರಾಯಪಟ್ಟರು.
ಇಲ್ಲಿನ ಗೋಪಿಶೆಟ್ಟಿಕೊಪ್ಪದ ಚಾಲುಕ್ಯನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿರುವ ಶಿವಮೊಗ್ಗ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಆಯೋಜಸಿದ್ದ ಮಲೆನಾಡು ಬದುಕಿನ ಸವಾಲುಗಳು ಕುರಿತ ಗೋಷ್ಟಿಯಲ್ಲಿ ಅವರು ಮಾತನಾಡಿ, ಖಾಕಿ ಬಟ್ಟೆ ಹಾಕಿದವರನ್ನೆಲ್ಲ ನೋಡಿದರೆ ಹೆದರುವ ಪರಿಸ್ಥಿತಿ ಮಲೆನಾಡಿನ ಜನರಲ್ಲಿದೆ. ಯಾವಾಗ ಯಾರು ತಮ್ಮ ಮನೆಗಳನ್ನು ತೆರೆವುಗೊಳಿಸುತ್ತಾರೆ ಎಂಬ ಭಯದಲ್ಲಿಯೆ ಬದುಕುವ ಪರಿಸ್ಥಿತಿ ಬಂದಿದೆ ಎಂದರು.
ಈ ಒತ್ತುವರಿ ಎಂಬ ಸಮಸ್ಯೆ ಶುರುವಾಗಿದ್ದೆ ಗೋದಾವರ್ಮನ್ ಕೇಸ್ ನಿಂದ. ಅರಣ್ಯ ಇಲಾಖೆ ಕಾಡಿನ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಒಂದು ಸಾರ್ವಜನಿಕ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಭೂಮಿ ನೀಡಲಾಗದ ಪರಿಸ್ಥಿತಿ ಇದೆ. ಎಲ್ಲವು ಕೇಂದ್ರ ಸರ್ಕಾರದ ಹಸಿರು ಪೀಠದ ಅನುಮತಿ ಪಡೆಯಬೇಕು. ಈ ಬಗ್ಗೆ ವಾದ ಮಾಡಬೇಕಾದ ರಾಜ್ಯದ ಸಂಸದರುಗಳಿಗೆ ತಿಳುವಳಿಕೆ ಮತ್ತು ಬದ್ದತೆಯಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದರು.

ವನ್ಯಜೀವಿ ಮತ್ತು ಮಾನವ ಸಂಘರ್ಷ ಜಾಸ್ತಿಯಾಗುತ್ತಿದೆ. ಆನೆಯ ಸ್ವಭಾವ ಗೊತ್ತಿಲ್ಲದ ಪ್ರದೇಶದಲ್ಲಿ ಆನೆಗಳು ಸಂಚರಿಸುತ್ತಿರುವುದು ಅಪಾಯಕಾರಿಯಾಗಿದೆ. ಆನೆಯ ಪಥವನ್ನು ಬದಲಾಯಿಸಲು ಯಾರಿಂದಲು ಸಾಧ್ಯವಿಲ್ಲ. ಆನೆಗಳ ನೆಲೆಯು ಹೇಮಾವತಿ ಡ್ಯಾಂನಲ್ಲಿ ಮುಳುಗಿ ಹೋಗಿದ್ದರಿಂದ, ಎಲ್ಲೆಂದರಲ್ಲಿ ಆನೆಗಳ ಓಡಾಟ ಕಾಣುತ್ತಿದೆ. ಆನೆಗಳಿಂದ ಸಾವಿಗೀಡಾದವರಿಗೆ ಪರಿಹಾರ ನೀಡಿ ಹೆಚ್ಚುಗಾರಿಕೆ ತೋರುವ ಜೊತೆಗೆ, ಪ್ರಾಣಿಗಳಿಗೆ ನೈಸರ್ಗಿಕ ನೆಲೆ ನೀಡುವ ಪ್ರಯತ್ನ ನಡೆಯಬೇಕಿದೆ ಎಂದು ತಿಳಿಸಿದರು. ಗೋಷ್ಟಿಯಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ ಗೌಡ ಮಾತನಾಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ.ಜೆ.ಕೆ.ರಮೇಶ್, ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಉಪಸ್ಥಿತರಿದ್ದರು.

ಜಾಗತೀಕರಣದ ಹಿಡಿತಕ್ಕೆ ಸಿಲುಕಿ ನೆಲದ ಸಂಸ್ಕೃತಿಯೇ ನಾಶವಾಗುತ್ತಿದೆ
ಶಿವಮೊಗ್ಗ: ಜಾಗತೀಕರಣದ ಹಿಡಿತಕ್ಕೆ ಸಿಲುಕಿ ನೆಲದ ಸಂಸ್ಕೃತಿಯೇ ನಾಶವಾಗುತ್ತಿದೆ ಎಂದು ಲೇಖಕ ಡಾ. ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು.

ಅವರು ಗುರುವಾರ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಜಾಗತೀಕರಣ ಮತ್ತು ಕನ್ನಡ ಅಸ್ಮಿತೆ ಕುರಿತ ಗೋಷ್ಠಿಯಲ್ಲಿ ಮಾತನಾಡಿ, ಜಾಗತೀಕರಣ ಎಂಬುದು ಒಂದು ಮಾಯಾವಿ ಭೂತವಾಗಿದೆ. ಸಾವಿರಾರು ವರ್ಷದ ಸಂಸ್ಕೃತಿಯ ಮೇಲೆ ಇದು ಪರಿಣಾಮ ಬೀರುತ್ತಿದೆ. ಗೌಡ, ಪಟೇಲ, ಶಾನುಭೋಗ ಈ ಮನೋಧರ್ಮದ ನೆರಳುಗಳು ಜಾಗತೀಕರಣದ ಒಳಗೆ ಇವೆ. ರೈತ ಸಂಸ್ಕೃತಿಯೂ ಸೇರಿದಂತೆ ಈ ನೆಲದ ಸಂಸ್ಕೃತಿಯೇ ಜಾಗತೀಕರಣದ ಹಿಡಿತಕ್ಕೆ ಸಿಕ್ಕು ಎಲ್ಲವನ್ನೂ ನಾಶ ಮಾಡುತ್ತಾ ಹೋಗುತ್ತಿವೆ ಎಂದರು.

ನಮಗೆ ಈಗ ಹಳ್ಳಿಗಳ ಉದ್ಧಾರ ಬೇಕಾಗಿಲ್ಲ. ಸ್ಮಾರ್ಟ್ ಸಿಟಿ ಮುಖ್ಯವಾಗುತ್ತಿದೆ. ಈ ಸ್ಮಾರ್ಟ್ ಸಿಟಿಗಳು ಕೂಡ ಜಾಗತೀಕರಣದ ಮತ್ತೊಂದು ಮುಖವಾಗಿದೆ. ಸರ್ಕಾರ ಇದಕ್ಕೆ ಮಣೆ ಹಾಕಿದ ಮೇಲಂತೂ ಇದು ಇನ್ನೂ ಹೆಚ್ಚಾಗುತ್ತಿದೆ. ಇದರ ಜೊತೆಗೆ ಮಾಲ್ ಸಂಸ್ಕೃತಿಯೂ ಸೇರಿಕೊಂಡಿದೆ. ಇದು ನಮ್ಮ ರೈತರನ್ನು ನಾಶ ಮಾಡುತ್ತಿವೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ಇಂದು ಕನ್ನಡ ಭಾಷೆಗೆ ಧಕ್ಕೆ ಬರುತ್ತಿದೆ. ಹಿಂದಿ ನಮಗೆ ಸಾಕಷ್ಟು ತೊಂದರೆ ಕೊಡುತ್ತಿದೆ. ಇದಕ್ಕೆ ಕೇಂದ್ರದ ಆಶ್ರಯವಿದೆ. ಶೇ. 66ರಷ್ಟು ವೇಗದಲ್ಲಿ ಹಿಂದಿ ಬೆಳೆಯುತ್ತಿದ್ದರೆ ಇತರ ಭಾಷೆಗಳು ಶೇ. 7ರಷ್ಟು ಮಾತ್ರ ಬೆಳೆಯುತ್ತಿವೆ. ಅದರಲ್ಲೂ ಕನ್ನಡ ಶೇ. 3.7ರಷ್ಟು ಮಾತ್ರ ಕಡಿಮೆ ವೇಗದಲ್ಲಿ ಬೆಳೆಯುತ್ತಿದೆ ಎಂದರು.

45 ಸಾವಿರ ಕನ್ನಡ ಶಾಲೆಗಳು ಮುಚ್ಚಿವೆ ಎಂದರೆ ಕನ್ನಡ ಉಳಿಯುವುದಾದರೂ ಹೇಗೆ? ಜನಸಂಖ್ಯೆ ಬೆಳವಣಿಗೆಗೆ ಅನುಗುಣವಾಗಿ ಭಾಷೆ ಕೂಡ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣವೇ ಇಲ್ಲ. ನಮ್ಮಲ್ಲಿ ಮಾತ್ರ ಜನಸಂಖ್ಯೆ ನಿಯಂತ್ರಣವಿದೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಡಾ.ಜೆ.ಕೆ. ರಮೇಶ್ ಇದ್ದರು. ಷಣ್ಮುಖಾಚಾರ್ ನಿರೂಪಿಸಿದರು. ಕಾರ್ತಿಕ್ ಸ್ವಾಗತಿಸಿ, ಶಂಕರ್ ವಂದಿಸಿದರು.


ಸಿನಿಮಾ ಮತ್ತು ಸಾಹಿತ್ಯ ಎರಡೂ ಭಿನ್ನ ಅನುಭವ ನೀಡುತ್ತವೆ

ಶಿವಮೊಗ್ಗ: ಸಿನಿಮಾಕ್ಕೂ ಸಾಹಿತ್ಯಕ್ಕೂ ನಂಟು ಇದ್ದರೂ ಕೂಡ ಇವೆರಡೂ ವಿಭಿನ್ನ ಅನುಭವಗಳನ್ನು ನೀಡುತ್ತವೆ ಎಂದು ಸಾಹಿತಿ ಹಾಗೂ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಸಾಹಿತ್ಯ ಮತ್ತು ಸಿನಿಮಾ ಮಾಧ್ಯಮ ಸಂವಾದ, ಸಾದೃಶ್ಯ-ವೈದೃಶ್ಯಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,
ಸಿನಿಮಾ ಮತ್ತು ಸಾಹಿತ್ಯ ಮತ್ತು ಎರಡೂ ಅಭಿವ್ಯಕ್ತಿಸುತ್ತವೆ. ಅನುಭವಗಳನ್ನು ಶೋಧಿಸುತ್ತವೆ. ನಿರ್ದಿಷ್ಟ ವ್ಯಾಕರಣವೂ ಇರುತ್ತದೆ. ಮನರಂಜನೆಯೂ ಇರುತ್ತದೆ. ಆದರೆ, ಅವರೆಡೂ ಬೇರೆ ಬೇರೆ ಕೋನಗಳಲ್ಲಿ ಸೃಷ್ಟಿಯಾಗುತ್ತವೆ ಎಂದರು.

ಸಾಹಿತ್ಯದಲ್ಲಿ ಶೇ. 90ರಷ್ಟು ವಿಚಾರಗಳು ಇದ್ದರೆ, ಸಿನಿಮಾದಲ್ಲಿ ಅದು ಶೇ. 10ಕ್ಕೆ ಇಳಿದು ವ್ಯವಹಾರಿಕವಾಗಿ ಉತ್ಪಾದನಾ ಕ್ಷೇತ್ರಕ್ಕೆ ಇಳಿದುಬಿಡುತ್ತದೆ. ಪುಸ್ತಕವನ್ನು ನಿಧಾನವಾಗಿ ಓದಬಹುದು. ಬಿಟ್ಟು ಬಿಟ್ಟು ಓದಬಹುದು. ಆದರೆ ಸಿನಿಮಾ ಹಾಗಲ್ಲ. ಅದನ್ನು ಬಿಡುಗಡೆಯಾದ ದಿನ ನೋಡಬೇಕು. ಮತ್ತು ಅದರ ಭವಿಷ್ಯ ಅಂದೇ ತೀರ್ಮಾನವಾಗುತ್ತದೆ ಎಂದರು.
ಸಾಹಿತ್ಯಕ್ಕೆ ಪರದಾಟವಿರುವುದಿಲ್ಲ. ಸಿನಿಮಾಕ್ಕೆ ಪರದಾಟವಿರುತ್ತದೆ. ಸಿನಿಮಾ ಜೂಜಾಗಿಯೂ ಮಾರ್ಪಾಡಾಗುತ್ತದೆ. ನೂರಾರು ಕಾರ್ಮಿಕರು ಸೇರಿ ಸಿನಿಮಾ ಮಾಡಬೇಕಾಗುತ್ತದೆ. ಆದರೆ ಸಾಹಿತ್ಯಕ್ಕೆ ಆ ರೀತಿಯ ಕಷ್ಟಗಳು ಇರುವುದಿಲ್ಲ. ಅದೊಂದು ಧ್ಯಾನದ ಪರಿಸ್ಥಿತಿ. ಆದರೆ, ಸಿನಿಮಾ ಹಾಗಲ್ಲ. ಅದು ವರ್ಣ. ಕಾದಂಬರಿ ಸಿನಿಮಾಗಳು ಯಶಸ್ವಿಯಾಗಿದ್ದರೂ ಕೂಡ ಅದು ವಿಭಿನ್ನ ರೀತಿಯಲ್ಲಿ ಸಿನಿಮಾ ಮರುಕಟ್ಟೆಗೆ ತಕ್ಕಂತೆ ರೂಪುಗೊಳ್ಳಲೇಬೇಕಾಗುತ್ತದೆ. ಹಾಗಾಗಿಯೇ ಕಲಾತ್ಮಕ ಚಿತ್ರಗಳಿಗೆ ಮಾರುಕಟ್ಟೆ ಇರುವುದಿಲ್ಲ. ಅದು ಜನರನ್ನು ತಲುಪುವುದಿಲ್ಲ. ಇಂದಿನ ಹೊಸ ಯುವಕರು ಕಡಿಮೆ ಬಜೆಟ್ ನಲ್ಲಿ ಒಳ್ಳೆಯ ಸಿನಿಮಾ ಮಾಡಬೇಕು ಎಂದರು.
ಸೈಮಾ ಫಿಲಂಫೇರ್ ಅವಾರ್ಡ್ ಪುರಸ್ಕೃತ ಶಿವಮೊಗ್ಗದ ಎಸ್. ಅರ್ಜುನ್ ಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಗೋಷ್ಠಿಯಲ್ಲಿ ರಂಗಕರ್ಮಿ ಜಿ.ಆರ್. ಲವ , ಸಾಹಿತಿ, ಅಂಕಣಕಾರ ಬಿ. ಚಂದ್ರೇಗೌಡ ಉಪಸ್ಥಿತರಿದ್ದರು.

ಶಿವಮೊಗ್ಗದ ಗೋಪಿಶೆಟ್ಟಿಕೊಪ್ಪದ ಚಾಲುಕ್ಯನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿರುವ ಶಿವಮೊಗ್ಗ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಆಯೋಜಸಿದ್ದ ಮಲೆನಾಡು ಬದುಕಿನ ಸವಾಲುಗಳು ಕುರಿತ ಗೋಷ್ಟಿಯಲ್ಲಿ ಪರಿಸರ ತಜ್ಞ ಕಲ್ಕುಳಿ ವಿಠ್ಠಲಹೆಗಡೆ ಮಾತನಾಡಿದರು.


ಶಿವಮೊಗ್ಗದ ಗೋಪಿಶೆಟ್ಟಿಕೊಪ್ಪದ ಚಾಲುಕ್ಯನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿರುವ ಶಿವಮೊಗ್ಗ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಆಯೋಜಸಿದ್ದ ಕುರಿತ ಗೋಷ್ಟಿಯಲ್ಲಿ “ಕಥೆ ಹೇಳುವೆವು ಕೇಳಿ” ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ, ಸಾಹಿತಿ ಗೋಪಾಲ್‌ ಯಡಗೆರೆ ಮಾತನಾಡಿದರು.

Natanam Bharatnatyam Dance ಶಿವಮೊಗ್ಗದಲ್ಲಿ ನಟನಂ ಕಲಾ ಸಂಸ್ಕೃತಿ‌‌‌ ಉತ್ಸವ- 2025

0

Natanam Bharatnatyam Dance ಶಿವಮೊಗ್ಗ ರಾಜೇಂದ್ರ ನಗರದ ಪ್ರತಿಷ್ಠಿತ ನಟನಂ ಬಾಲ ನಾಟ್ಯ ಕೇಂದ್ರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ.ಎಸ್. ಕೇಶವಕುಮಾರ್ ಪಿಳ್ಳೈ ಅವರ ನೇತೃತ್ವದಲ್ಲಿ ಫೆ 10ರ ಸೋಮವಾರ ಸಂಜೆ 5:00ಗೆ ಕುವೆಂಪುರಂಗ ಮಂದಿರದಲ್ಲಿ “ನಟನಂ ಕಲಾ ಸಂಸ್ಕೃತಿ ಉತ್ಸವ- 2025” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಭರತನಾಟ್ಯ ವಿಧುಷಿ ಶ್ರೀವಲ್ಲಿ ಅಂಬರೀಶ್ ಹಾಗೂ ಅಂಬರೀಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ನಟನಂ ಬಾಲನಾಟ್ಯ ಕೇಂದ್ರದ ಕಾರ್ಯದರ್ಶಿ ಆರ್. ಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಇಡೀ ಉತ್ಸವದ ನಿರ್ದೇಶನವನ್ನು ಡಾ. ಎಸ್. ಕೇಶವಕುಮಾರ್ ಪಿಳ್ಳೈ ವಹಿಸಲಿದ್ದಾರೆ.
ಇದರಲ್ಲಿ ವಿಶೇಷವಾಗಿ ಒಡಿಸ್ಸಿ ನೃತ್ಯವನ್ನು ಬೆಂಗಳೂರಿನ ನವಭಾವ ನೃತ್ಯ ಶಾಲೆಯ ಫೌಂಡರ್ ಗುರು ಸೌಮ್ಯ ರಂಗಸ್ವಾಮಿ ಪ್ರದರ್ಶಿಸಲಿದ್ದಾರೆ. ಅಂತೆಯೇ ಬೆಂಗಳೂರಿನ ನಾಟ್ಯಪ್ರಿಯ ಕಲಾನಿಕೇತನ ಕೇಂದ್ರದ ಫೌಂಡರ್ ವಿದುಷಿ ಸುಪ್ರಿಯ ಕಾರ್ತಿಕೇಯನ್ ಕೂಚುಪುಡಿ ನೃತ್ಯವನ್ನು ಪ್ರದರ್ಶಿಸಲಿದ್ದಾರೆ.
ಮೋಹಿನಿ ಆಟಂ ನಾಟ್ಯವನ್ನು ಶಿವಮೊಗ್ಗ ಬೊಮ್ಮನಕಟ್ಟೆಯ ಶ್ರೀ ಶಿವಾನಿ ಭರತನಾಟ್ಯ ಕಲಾ ಕೇಂದ್ರದ ವಿದುಷಿ ಚೈತ್ರ ಕಾರ್ತಿಕ್ ಪ್ರದರ್ಶಿಸಲಿದ್ದು, ಭರತನಾಟ್ಯಂ ಅನ್ನು ನಟನಂ ಕೇಂದ್ರದ ವಿಧುಷಿ ನಾಟ್ಯಶ್ರೀ ಚೇತನ್ ಹಾಗೂ ವಿದ್ವಾನ್ ಚೇತನ್ ಎಸ್. ಸಿ. ಪ್ರದರ್ಶಿಸಲಿದ್ದು, ಅದೇ ಬಗೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಾಟ್ಯಶಂಕರ ನೃತ್ಯಾಲಯದ ವಿದ್ವಾನ್ ಮಾಲತೇಶ್ ಟಿಕಾರೆ ಪ್ರದರ್ಶಿಸಲಿದ್ದಾರೆ.
ವಿಶೇಷ ಆಕರ್ಷಣೆಯಾಗಿ ದಕ್ಷ ಯಜ್ಞ ನೃತ್ಯ ರೂಪಕವನ್ನ ವಿದ್ವಾನ್ ಡಾ. ಎಸ್. ಕೇಶವಕುಮಾರ್ ಪಿಳ್ಳೈ ಪ್ರದರ್ಶಿಸಲಿದ್ದಾರೆ. ಈ ಸಂದರ್ಭದಲ್ಲಿ ಜಪಾನಿನ ಫ್ಯಾನ್ ಡ್ಯಾನ್ಸ್ ಹಾಗೂ ಈಜಿಪ್ಟಿನ ವಿಂಗ್ ಡ್ಯಾನ್ಸನ್ನು ಕಲಾವಿದರು ಪ್ರದರ್ಶಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವರನ್ನು ನಟನಂ ಬಾಲನಾಟ್ಯ ಕೇಂದ್ರ ಹಾಗೂ ಕಲಾವಿದರು, ಪೋಷಕರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

Warrant Officer Manjunath ಸ್ಕೈ ಡೈವಿಂಗ್ ಸಂದರ್ಭದಲ್ಲಿ‌ ಪ್ಯಾರಾಚ್ಯೂಟ್ ತೆರೆಯದೇ ಏರ್ ಫೋರ್ಸ್ ಅಧಿಕಾರಿ ಮಂಜುನಾಥ್ ಮರಣ

0

Warrant Officer Manjunath ಸ್ಕೈ ಡೈವಿಂಗ್ ವೇಳೆ ಪ್ಯಾರಚ್ಯೂಟ್ ತೆರೆಯದೆ ಏರ್ಫೋರ್ಸ್ ಅಧಿಕಾರಿ ಸಾವನ್ನಪ್ಪಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಕೂರು ನಿವಾಸಿ ಮಂಜುನಾಥ್ ಜಿ ಎಸ್(36) ಮೃತಪಟ್ಟ ದುರ್ದೈವಿ ಯಾಗಿದ್ದಾರೆ.

ಆಗ್ರಾದ ಪ್ಯಾರಾ ಟ್ರೈನಿಂಗ್ ಸ್ಕೂಲ್ ನಲ್ಲಿ ವಾರಂಟ್ ಆಫಿಸರ್ ಹಾಗೂ ಪ್ಯಾರಾ ಜಂಪ್ ಇನಸ್ಟ್ರಕ್ಟರ್ ಆಗಿ ಕಾರ್ಯ ನಿರ್ವಹಿಸುತಿದ್ದ ಮಂಜುನಾಥ್ ಶುಕ್ರವಾರ ಬೆಳಿಗ್ಗೆ 9.30ಕ್ಕೆ ಸ್ಕೈ ಡೈವಿಂಗ್ ಮಾಡುವಾಗ ಪ್ಯಾರಾಚೂಟ್ ನಿಷ್ಕ್ರಿಯಗೊಂಡಿದ್ದು,
ಸುಮಾರು 13 ಸಾವಿರ ಅಡಿ ಮೇಲಿಂದ ಕೆಳಗೆ ಬಿದ್ದು ಮಂಜುನಾಥ್ ಸಾವನ್ನಪ್ಪಿದ್ದಾರೆ.

ಮಧ್ಯಾಹ್ನ 2.30 ಗೆ ಮೃತದೇಹ ಡ್ರಾಫಿಂಗ್ ಝೋನ್ ಮಲ್ಪುರ ಬಳಿ ಗೋದಿಹೊಲದಲ್ಲಿ ಗಾಯಗೊಂಡಿದ್ದ ಮಂಜುನಾಥ್ ಪತ್ತೆ ಮಾಡಲಾಯಿತು ಎನ್ನಲಾಗುತ್ತಿದೆ.

ಸ್ಕೈಡೈವಿಂಗ್ ವೇಳೆ ಹಾರಿದ 12 ಮಂದಿ ಮಂಜುನಾಥ್ ಜಿ ಎಸ್ ವರ್ಷದ ಸುರಕ್ಷಿತವಾಗಿ ಕೆಳಕ್ಕೆ ಇಳಿದಿರಲಿಲ್ಲ. ಅವರಿಗಾಗಿ ಹುಡುಕಾಟ ನಡೆಸಿದಾಗ, ಅವರು ತೀವ್ರ ಗಂಭೀರವಾದ ಸ್ಥಿತಿಯಲ್ಲಿ ಗೋದಿಯ ಹೊಲದಲ್ಲಿ ಪತ್ತೆಯಾಗಿದ್ದು,
ಅವರನ್ನ ಸ್ಥಳೀಯ ಆಸ್ಪತ್ರೆಗೆ ಕರದೊಯ್ಯಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

Warrant Officer Manjunath ಸಂಕೂರಿನಲ್ಲಿ ತಂದೆ ತಾಯಿ ಹಾಗೂ ತಮ್ಮ , ತಂಗಿ ಇದ್ದು 2019 ರಲ್ಲಿ ಅಸ್ಸಾಂ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು.

ಮೃತದೇಹ ಆಗ್ರಾದಲ್ಲಿದ್ದು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಹುಟ್ಟೂರಾದ ಹೊಸನಗರ ತಾಲೂಕಿನ ಸಂಕೂರು ಗ್ರಾಮಕ್ಕೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ.