Monday, March 9, 2026
Monday, March 9, 2026
Home Blog Page 381

Karnataka Lokayukta ಮಾರ್ಚ್ 18 ರಿಂದ 21 ವರೆಗೆ ರಾಜ್ಯ ಉಪಲೋಕಾಯುಕ್ತ ನ್ಯಾ.ಕೆ.ಫಣೀಂದ್ರ ಅವರ ಜಿಲ್ಲಾ ಕಾರ್ಯಕ್ರಮಗಳ ಮಾಹಿತಿ

0

Karnataka Lokayukta ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಮಾ. 18 ರಿಂದ 21 ರವರೆಗೆ ಶಿವಮೊಗ್ಗ ನಗರಕ್ಕೆ ಭೇಟಿ ನೀಡಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು ಅಲ್ಲದೇ ಇದೇ ಅವಧಿಯಲ್ಲಿ ವಿವಿಧ ಸಭೆ-ಸಮಾರಂಭ, ತರಬೇತಿ ಕಾರ್ಯಾಗಾರಗಳು, ಸಮಾಲೋಚನಾ ಸಭೆಗಳಲ್ಲಿ ಭಾಗವಹಿಸುವರು.

ಮಾ.18ರಂದು ಸಂಜೆ 7.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಮಾ.19ರಂ ದು ಬೆಳಿಗ್ಗೆ 10.00 ರಿಂದ ಸಂಜೆ 5.00 ರವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು. ಜಿಲ್ಲೆಯಲ್ಲಿ ಯಾವುದೇ ಸಾರ್ವಜನಿಕರಿಗೆ ಸರ್ಕಾರಿ ಅಧಿಕಾರಿ/ನೌಕರರಿಂದ ಕಾನೂನು ರೀತ್ಯಾ ಆಗಬೇಕಾದ ಕೆಲಸದಲ್ಲಿ ವಿಳಂಬನೆಯಾಗಿದ್ದಲ್ಲಿ ಅಥವಾ ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆಕೊಡುವುದು ಅಥವಾ ಇನ್ಯಾವುದೇ ತರಹದ ದುರಾಡಳಿತದಲ್ಲಿ ತೊಡಗಿದ್ದರೆ, ಅದರಿಂದ ತೊಂದರೆಗೊಳಗಾದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಅರ್ಜಿ ನಮೂನೆ 1 ಮತ್ತು 2 ರಲ್ಲಿ ಲಿಖಿತವಾಗಿ ದಾಖಲೆ, ಸಾಕ್ಷ್ಯಾಧಾರಗಳೊಂದಿಗೆ ಸಲ್ಲಿಸಬಹುದಾಗಿದೆ.

Karnataka Lokayukta ಮಾ.20 ರಂದು ಬೆಳಿಗ್ಗೆ 11.00 ರಿಂದ 11.30 ರವರೆಗೆ ನಗರದ ಜಿಲ್ಲಾ ಪಂಚಾಯಿತಿಯ ನಜೀರ್ ಸಾಬ್ ಸಭಾಂಗಣದಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ತನಿಖೆ/ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಪರಿಹರಿಸುವ ಕುರಿತು ದೂರುದಾರರು ಮತ್ತು ಎದುರುದಾರರ ಸಮ್ಮುಖದಲ್ಲಿ ಕಾನೂನು ರೀತ್ಯಾ ವಿಚಾರಣೆ ನಡೆಸುತ್ತಾರೆ. ಈ ಸಮಯದಲ್ಲಿ ದೂರುದಾರರು ಮತ್ತು ಎದುರುದಾರರ ಹಾಜರಿದ್ದು ಇದರ ಸದುಪಯೋಗಪಡೆದುಕೊಳ್ಳುವಂತೆ ಶಿವಮೊಗ್ಗ ಲೋಕಾಯುಕ್ತ ಇಲಾಖೆಯ ಪೊಲೀಸ್ ಅಧೀಕ್ಷಕ ಮಂಜುನಾಥ ಚೌದರಿ. ಎಂ.ಹೆಚ್. ತಿಳಿಸಿರುತ್ತಾರೆ.

CM Siddharamaih ಕುರ್ಚಿ ಉಳಿಸಿಕೊಳ್ಳುವ ಯತ್ನದಲ್ಲಿ ಸಿದ್ಧರಾಮಯ್ಯನವರ ಬಜೆಟ್…!

0

CM Siddharamaih ಕರ್ನಾಟಕದ ಅಭಿವೃದ್ಧಿಗೆ ಪೂರಕವೇ ಅಥವಾ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಪೂರಕವೇ?
ನೀವೇ ಉತ್ತರಿಸಬೇಕು!!

ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ಸಾಲದ ಒತ್ತಡ ಇರುವ ಬಜೆಟ್ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ್ದು, ಈ ‘ಅಸಮರ್ಥ ಬಜೆಟ್’ ಇದಾಗಿದೆ. ‘ಅಹಿಂದ’ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ಇವತ್ತು ಯಾವುದೇ ಹಿಂದುಳಿದವರ್ಗಗಳ ಕಲ್ಯಾಣಕ್ಕಾಗಿ ಏನನ್ನೂ ನೀಡದೆ, ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳಿಕೊಂಡು ಬಂದಂತಹ ಕರ್ನಾಟಕದ ಅಭಿವೃದ್ಧಿಗೊ ಅಥವಾ ಮುಸ್ಲಿಂ ಸಮುದಾಯದ ಅಭಿವೃದ್ಧಿಗೊ ಎಂಬ ಪ್ರಶ್ನೆ ಹುಟ್ಟು ಹಾಕುವಂತಿದೆ! ಎಂದು ಶಿವಮೊಗ್ಗ ಶಾಸಕರಾದ ಎಸ್ಎನ್ ಚೆನ್ನಬಸಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿಂದೂ ಧಾರ್ಮಿಕ ಸಂಸ್ಥೆಗಳ ನಿರ್ವಹಣೆ, ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಪ್ರಮುಖ ಪಾತ್ರ ವಹಿಸುವ ಮುಜರಾಯಿ ಇಲಾಖೆಗೆ ಈ ಬಜೆಟ್‌ನಲ್ಲಿ ಈ ವಿಭಾಗಕ್ಕೆ ಯಾವುದೇ ವಿಶೇಷ ಅನುದಾನ ನೀಡಿಲ್ಲ. ಜೊತೆಗೆ ರಾಜ್ಯ ಸರ್ಕಾರವು ಶಿವಮೊಗ್ಗವನ್ನು ಪರೋಕ್ಷ ನಿರ್ಲಕ್ಷ್ಯ ತೋರಿಸಿರುವುದು ಬಹಳ ವಿಷಾದನೀಯ. ಈ ಬಜೆಟ್‌ನಲ್ಲಿ ನಮ್ಮ ಶಿವಮೊಗ್ಗಕ್ಕೆ ಪ್ರತ್ಯೇಕ ಯೋಜನೆಗಳನ್ನು ಘೋಷಿಸದೆ, ರಾಜ್ಯ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿರುವುದು ಖಂಡನೀಯ.ರಾಜ್ಯದ ಆದಾಯ ಹೆಚ್ಚಿಸುವ ಯಾವುದೇ ಸ್ಪಷ್ಟ ಯೋಜನೆಗಳಿಲ್ಲದ ಅಭಿವೃದ್ಧಿಹೀನ ಈ ಬಜೆಟ್ ಕೇವಲ ರಾಜ್ಯದ ಜನತೆಯ ಸಾಲದ ಹೊರೆ ಹೆಚ್ಚಿಸಿದೆ ಎಂದಿದ್ದಾರೆ.

CM Siddharamaih ರಾಜ್ಯದ ಎಲ್ಲ ವರ್ಗದ ಜನತೆಗೆ ಸಮನ್ಯಾಯತೆ ನೀಡುವ ಬದಲು, ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ನೀಡುವ ಮೂಲಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂಲಭೂತ ಆದರ್ಶಗಳಿಗೆ ವಿರುದ್ಧವಾಗಿದೆ. ಇದರ ಜೊತೆ ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ತತ್ವಗಳಿಗೆ ಪೂರಕವಲ್ಲ ಎಂಬುದನ್ನು ಎತ್ತಿ ತೋರುತ್ತಿದೆ ಎಂದು ಹೇಳಿದ್ದಾರೆ.

Shivamogga-Bhadravati Urban Development Authority ವಸತಿ ರಹಿತರಿಗೆ ನಿವೇಶನ‌ ಒದಗಿಸಲು ಕ್ರಮ- ಹೆಚ್.ಎಸ್.ಸುಂದರೇಶ್

0

Shivamogga-Bhadravati Urban Development Authority ಸ್ವಂತ ಸೂರೊಂದನ್ನು ಕಟ್ಟಿಕೊಳ್ಳಬೇಕೆಂಬ ಕನಸನ್ನು ಹೊಂದಿದ್ದು, ನಿವೇಶನದ ನಿರೀಕ್ಷೆಯಲ್ಲಿರುವ ಶಿವಮೊಗ್ಗದ ಅಸಂಖ್ಯಾತ ವಸತಿರಹಿತರನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನಿಷ್ಟ 5000 ನಿವೇಶನಗಳನ್ನಾದರೂ ಸೃಜಿಸಿ ಅರ್ಹರಿಗೆ ವಿತರಿಸುವ ಉದ್ದೇಶ ಹೊಂದಲಾಗಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್‌ಅವರು ಹೇಳಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ನಗರದ ಹೊರವಲಯದಲ್ಲಿರುವ ಗೋಪಶೆಟ್ಟಿಕೊಪ್ಪದಲ್ಲಿ ಈಗಾಗಲೇ 104ಎಕರೆ ಭೂಪ್ರದೇಶವನ್ನು ಗುರುತಿಸಲಾಗಿದ್ದು, ಆ ಪೈಕಿ ಈಗಾಗಲೇ 30ಎಕರೆ ಭೂಮಿಯ ಮಾಲೀಕರು 50:50 ಅನುಪಾತದಲ್ಲಿ ನಿವೇಶನವನ್ನು ಹಸ್ತಾಂತರಿಸಲು ಒಡಂಬಡಿಕೆ ಮಾಡಿಕೊಟ್ಟಿದ್ದು, ಭೂಪರಿವರ್ತನೆಗೆ ಸರ್ಕಾರದ ಅನುಮತಿ ದೊರೆತಿದ್ದು, ಶೀಘ್ರದಲ್ಲಿ ಬಡಾವಣೆ ಅಭಿವೃದ್ಧಿಪಡಿಸುವ ಕಾರ್ಯ ಆರಂಭಿಸಲಾಗುವುದು. ಉಳಿದ ಭೂಮಿಯ ಭೂಮಾಲೀಕರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಕ್ರಮ ವಹಿಸಲಾಗುವುದು. ಸಮಾಲೋಚನೆಯ ನಂತರವೂ ಭೂಮಿಯನ್ನು ಪ್ರಾಧಿಕಾರಕ್ಕೆ ನೀಡಲು ಹಿಂದೆ ಸರಿದಲ್ಲಿ ಅಂತಹ ಮಾಲೀಕತ್ವದ ಭೂಮಿಯನ್ನು ನಿಯಮಾನುಸಾರ ಭೂಸ್ವಾದೀನಪಡಿಸಿಕೊಂಡು ಸರ್ಕಾರದ ಅನುಮತಿ ಪಡೆದು ಅಭಿವೃದ್ಧಿಪಡಿಸಲಾಗುವುದು ಎಂದವರು ನುಡಿದರು.
Shivamogga-Bhadravati Urban Development Authority ಅಲ್ಲದೇ ನಗರಕ್ಕೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ ಕನಿಷ್ಟ 1.20ಎಕರೆಗಿಂತ ಹೆಚ್ಚಿನ ಭೂಮಿಯನ್ನು 50:50ಅನುಪಾತದಲ್ಲಿಯಾದರೂ ಸರಿ ಅಥವಾ ಸಂಪೂರ್ಣ ಮಾಲೀಕತ್ವವನ್ನು ವಹಿಸಿಕೊಡಲು ಇಚ್ಚಿಸಿದಲ್ಲಿ ಸೂಡಾ ವತಿಯಿಂದ ಉತ್ತಮ ಬೆಲೆಗೆ ಖರೀದಿಸಿ, ಬಡಾವಣೆ ಸೃಜಿಸಿ, ಅರ್ಹರಿಗೆ ನಿವೇಶನ ವಿತರಿಸಲು ಕ್ರಮ ವಹಿಸಲಾಗುವುದು. 100ಎಕರೆ ಭೂಮಿ ಖರೀದಿಸಲು ಸೂಡಾ ಸಿದ್ದವಾಗಿದ್ದು, ಅದಕ್ಕಾಗಿ 70ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದರು.
ಇದಲ್ಲದೇ ಪ್ರಾಧಿಕಾರದಿಂದ ರಚಿಸಲಾದ ಬಡಾವಣೆಗಳಿಗೆ ಮೂಲಭೂತ ಸೌಕರ್ಯ, ರಸ್ತೆ ಅಭಿವೃದ್ಧಿ, ಇತ್ಯಾದಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಸಾರ್ವಜನಿಕರ ಹಿತಾಸಕ್ತಿಗಾಗಿ ನಿರ್ವಹಿಸಲಾಗುವುದು ಎಂದ ಅವರು ಸ್ವಾಮಿ ವಿವೇಕಾನಂದ ಬಡಾವಣೆಯ ಮಹಿಳಾ ಪಾಲಿಟೆಕ್ನಿಕ್‌ಕಾಲೇಜು ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ, ಜೆ.ಹೆಚ್.ಪಟೇಲ್‌ಬಡಾವಣೆಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ, ಗೋಪಿಶೆಟ್ಟಿಕೊಪ್ಪ, ನಿಧಿಗೆ ಮಾಚೇನಹಳ್ಳಿ, ಸೋಮಿನಕೊಪ್ಪದಲ್ಲಿ ವಸತಿ ಸಮುಚ್ಛಯ, ಊರುಗಡೂರಿನ ಪ್ರಾಧಿಕಾರದ ವಸತಿ ಬಡಾವಣೆಯಲ್ಲಿ ಇರುವ 04 ಎಕರೆ ಪ್ರದೇಶದಲ್ಲಿ ವಸತಿ ಯೋಜನೆ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಪ್ರಾಧಿಕಾರದ ಹೊಸ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಿದ್ದು ಅದಕ್ಕಾಗಿ ಒಂದು ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ನಗರದ ಹೊರವರ್ತುಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪ್ರಸಕ್ತ ಸಾಲಿನ ಆಯ-ವ್ಯಯದಲ್ಲಿ 4.10ಕೋಟಿ ರೂ.ಗಳನ್ನು ಹಾಗೂ ಸೂಡಾ ಪ್ರದೇಶ ವ್ಯಾಪ್ತಿಯಲ್ಲಿನ ಕೆರೆಗಳ ಅಭಿವೃದ್ಧಿಗಾಗಿ 3ಕೋಟಿ., ಪ್ರಾಧಿಕಾರದ ಬಡಾವಣೆಗಳಲ್ಲಿನ ಉದ್ಯಾನವನಗಳ ಅಭಿವೃದ್ಧಿ, ನಿರ್ವಹಣೆಗೆ 3ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಈ ಉದ್ಯಾನವನಗಳನ್ನು ಅಲ್ಲಿನ ನಿವಾಸಿಗಳೇ ವ್ಯವಸ್ಥಿತವಾಗಿ ನಿರ್ವಹಿಸಲು ಅನುಕೂಲವಾಗುವಂತೆ ನಿವಾಸಿಗಳೋಂದಿಗೆ ಸಮಾಲೋಚನೆ ನಡೆಸಲಾಗುವುದು. ಅಲ್ಲದೇ ನಗರದ ಆಯ್ದ ಕಡೆಗಳಲ್ಲಿ ಆಟೋ-ಬಸ್‌ನಿರ್ಮಾಣ ಕಾಮಗಾರಿಗಳು, ಇತರೆ ಮೂಲಭೂತ ಸೌಕಕರ್ಯಗಳ ಅಭಿವೃದ್ಧಿಗಾಗಿ 5ಕೋಟಿ ಹಾಗೂ ಸೂಡಾ ಕಚೇರಿಯಲ್ಲಿನ ಅಭಿಲೇಖಾಲಯದ ದಾಖಲೆಗಳನ್ನು ಗಣಕೀಕರೀಸಲು 50ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದರು.
ಇಂದು ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿದ ಬಜೆಟ್‌ಜನಪರವಾಗಿದ್ದು, ಸಮಾಜದ ಎಲ್ಲ ಸ್ತರಗಳನ್ನು ಒಳಗೊಂಡಿದೆ. ವಿಶೇಷವಾಗಿ ಮಹಿಳೆ, ಮಕ್ಕಳು, ಶಿಕ್ಷಣ, ಕೃಷಿ, ನೀರಾವರಿ ಕೈಗಾರಿಕೆ ಸೇರಿದಂತೆ ಎಲ್ಲಾ ವಲಯಗಳಿಗೂ ಆದ್ಯತೆ ನೀಡಲಾಗಿದೆ. ಜನಸ್ನೇಹಿ ಬಜೆಟ್‌ರೂಪಿಸಿ, ಮಂಡಿಸಿರುವ ಮಾನ್ಯಮುಖ್ಯಮಂತ್ರಿಗಳಿಗೆ ಅಭಿನಂದಿಸುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಸೂಡಾ ನಿರ್ದೇಶಕರಾದ ಸಿದ್ಧಪ್ಪ, ಪ್ರವೀಣ್‌ಕುಮಾರ್‌, ರವಿಕುಮಾರ್‌ಮತ್ತಿತರರು ಉಪಸ್ಥಿತರಿದ್ದರು.

Canara Bank Rural Self-Employment Training Institute ಹೊಳಲೂರಿನಲ್ಲಿ ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ಮಹಿಳಾ ದಿನಾಚರಣೆ

0

Canara Bank Rural Self-Employment Training Institute ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಹೊಳಲೂರಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀಯುತ ಶರತ್ ಗೌಡ ಡಿಡಿಎಂ ನಬಾರ್ಡ್ ಇವರು ಭಾಗವಹಿಸಿ ಶುಭ ಹಾರೈಸುವುದರ ಜೊತೆಗೆ ನಬಾರ್ಡಿನ ಯೋಜನೆಗಳ ಬಗ್ಗೆ ತಿಳಿಸಿದರು ಹಾಗೂ ಕಾರ್ಯಕ್ರಮದಲ್ಲಿ ಡಾ. ಶ್ರೀಧರ್ ಡಿ ಎಚ್ ಓ ಆಫೀಸ್ ಶಿವಮೊಗ್ಗ ಇವರು ಸಹ ಮಾನಸಿಕ ಆರೋಗ್ಯದ ಕುರಿತು ಮಾಹಿತಿಯನ್ನು ನೀಡಿದರು.

Canara Bank Rural Self-Employment Training Institute ಹಾಗೂ ಡಾಕ್ಟರ್ ಚಿನ್ಮಯಿನವರು ಮಹಿಳೆಯರಿಗೆ ಆರೋಗ್ಯದ ಕುರಿತು ಮತ್ತು ತಮ್ಮ ಸ್ವಚ್ಛತೆಯ ಕುರಿತು ಮಾಹಿತಿಯನ್ನು ನೀಡುವುದರ ಜೊತೆಗೆ ಆರೋಗ್ಯ ತಪಾಸಣಾ ಶಿಬಿರವನ್ನು ಸಹ ಹಮ್ಮಿಕೊಳ್ಳಲಾಯಿತು ಹಾಗೂ ಮಹಿಳಾ ದಿನಾಚರಣೆಯ ಅಂಗವಾಗಿ ನಮ್ಮ ತರಬೇತಿ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದು ಸ್ವಉದ್ಯೋಗವನ್ನು ಹಾಗೂ ತಮ್ಮ ವೃತ್ತಿ ಜೀವನವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಅಂತಹ ಶ್ರೀಮತಿ ಅಕ್ಷತಾ – ಬ್ಯೂಟಿ ಪಾರ್ಲರ ಹಾಗೂ ಕುಂಚೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಾಯಕ ಮಿತ್ರ ಕೆಲಸವನ್ನು ಮಾಡುತ್ತಿದ್ದಾರೆ, ಶ್ರೀಮತಿ ಲತಾ ನಿರಂಜನ್ ಕಾಚಿ ಕೊಪ್ಪ ದಲ್ಲಿ ಹೈನುಗಾರಿಕೆ ಉದ್ಯಮ, ಶ್ರೀಮತಿ ಲತಾ ಮುಖ್ಯ ಪುಸ್ತಕ ಬರಹಗಾರರು, ಭಾಗ್ಯ ಪಶು ಸಖಿ, ನೂರ್ ಜಾನ್ ಎಂಬ್ರಾಯಿಡರಿ ವೃತ್ತಿ, ಶೃತಿ ಕೋಳಿ ಸಾಕಾಣಿಕೆ ವೃತ್ತಿ ನೇತ್ರಾವತಿ ಎಂಬ್ರಾಯ್ಡರಿ ವೃತ್ತಿ ರೂಪ ಅನವೇರಿ ಬ್ಯೂಟಿ ಪಾರ್ಲರ್ ವೃತ್ತಿ , ಈ ಮೇಲ್ ಕಂಡ ಯಶಸ್ವಿ ಶಿಬಿರಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು . ತರಬೇತಿ ಸಂಸ್ಥೆಯ ನಿರ್ದೇಶಕರಾದ ಶ್ರೀಯುತ ಕಾಂತೇಶ್ ಅಂಬಿಗರ್ ರವರು ಎಲ್ಲಾ ಶಿಬಿರಾರ್ಥಿಗಳನ್ನ ಉದ್ದೇಶಿಸಿ ಸಂಸ್ಥೆಯಲ್ಲಿ ನಡೆಯುತ್ತಿರುವ ಮತ್ತು ಮುಂಬರುವ ತರಬೇತಿಗಳ ಬಗ್ಗೆ ಹಾಗೂ ಮಹಿಳೆಯರು ಹೇಗೆ ಉನ್ನತ ಮಟ್ಟಕ್ಕೆ ತಮ್ಮ ಜೀವನವನ್ನು ಕೊಂಡೊಯ್ಯಬೇಕು ಎಂಬುದರ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುತ್ತಾರೆ & ಕಾರ್ಯಕ್ರಮವನ್ನು ಶ್ರೀಮತಿ ದೀಪ ಉಪನ್ಯಾಸಕರು ನೆರವೇರಿಸಿ ಕೊಟ್ಟಿರುತ್ತಾರೆ .

Red Cross Sanjeevini Blood Bank ರೆಡ್ ಕ್ರಾಸ್ ವತಿಯಿಂದ ಜೋಗ್ ಫಾಲ್ಸ್ ನಲ್ಲಿ ರಕ್ತದಾನ ಶಿಬಿರ

0

Red Cross Sanjeevini Blood Bank 54ನೇ ರಾಷ್ಟೀಯ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಡಿಯಲ್ಲಿ ಶಂಕರನಾರಾಯಣ ನಿರ್ಮಾಣ ಸಂಸ್ಥೆಯು ರೆಡ್ ಕ್ರಾಸ್ ರಕ್ತನಿಧಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರವನ್ನು ಜೋಗ ಫಾಲ್ಸ್‍ನಲ್ಲಿ ಆಯೋಜಿಸಲಾಯಿತು.

ರಕ್ತದಾನದ ಬಗ್ಗೆ ಅಲ್ಲಿ ಕೆಲಸ ಮಾಡುತ್ತಿರುವ ಹೊರರಾಜ್ಯದಿಂದ ಬಂದಿರುವ ಕಾರ್ಮಿಕರಿಗೆ ರಕ್ತದಾನದ ಮಹತ್ವವನ್ನು ತಿಳಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದ್ದು, ರೆಡ್ ಕ್ರಾಸ್ ರಕ್ತನಿಧಿಯ ಪ್ರತಿನಿಧಿಗಳಾದ ಡಿ.ಜೆ.ದಿನಕರ್ ರವರು ರಕ್ತದಾನದ ಮಹತ್ವದ ಬಗ್ಗೆ ಅಲ್ಲಿ ನೆರೆದಿದ್ದ ಎಲ್ಲರಿಗೂ ಸವಿಸ್ತಾರವಾಗಿ ತಿಳಿಸಿದರು.

ಎಸ್‍ಎನ್‍ಸಿ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಮಾತನಾಡಿ, ರಕ್ತದಾನದ ಪ್ರಯೋಜನಗಳನ್ನು ತಮ್ಮ ಸಿಬ್ಬಂದಿಗಳಿಗೆ ಹಾಗೂ ಕಾರ್ಮಿಕರಿಗೆ ತಿಳಿಸಿ, ತಾವು ರಕ್ತದಾನ ಮಾಡುವುದರ ಮೂಲಕ ಅಲ್ಲಿ ನೆರೆದಿದ್ದ ಎಲ್ಲರಿಗೂ ರಕ್ತದಾನ ಮಾಡಲು ಪ್ರೋತ್ಸಾಹಿಸಿದರು.

ಎಸ್‍ಎನ್‍ಸಿ ಸಂಸ್ಥೆಯು ಆಯೋಜಿಸಿದ್ದ ಈ ರಕ್ತದಾನ ಶಿಬಿರದಲ್ಲಿ ಸುಮಾರು 43 ಜನರು ರಕ್ತದಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಶಂಕರನಾರಾಯಣ ಕನ್ಸ್‍ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಪ್ರಾಜೆಕ್ಟ್ ಮ್ಯಾನೇಜರ್ ಸಂದೀಪ್.ಟಿ.ಆರ್, ಅಡ್ಮಿನ್ ಮ್ಯಾನೇಜರ್ ಶಶಿಧರ್ ಶೆಟ್ಟಿ, ಸುರಕ್ಷತಾ ಸಿಬ್ಬಂದಿ ತಬ್ರೇಜ್ ಹಾಗೂ ರೆಡ್ ಕ್ರಾಸ್ ಪ್ರತಿನಿಧಿಗಳಾದ ಡಿ.ಜೆ.ದಿನಕರ್, ಮಂಜುನಾಥ್ ಅಪ್ಪಾಜಿ, ಡಾ. ದಿನಕರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Puttaraj Gawai ಮಾರ್ಚ್ 9 ರಂದು ಗಾಯಕಿ ವಸುಧಾ ಶರ್ಮ‌ ಅವರಿಗೆ “ಗಾನ ಭೂಷಣ ” ಪ್ರಶಸ್ತಿ ನೀಡಿಕೆ

0

Puttaraj Gawai ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ೧೧೧ನೇ ಜನ್ಮದಿನ ಸಮಾರಂಭವನ್ನು ಮಾ. 09ರ ಭಾನುವಾರ ಬೆಳಿಗ್ಗೆ 11:30ಕ್ಕೆ ಸಾಗರ ರಸ್ತೆ ಅಂಧ ಮಕ್ಕಳ ಸಂಗೀತ ವಿದ್ಯಾಲಯ ಶ್ರೀ ವೀರೇಶ್ವರ ಪುಣ್ಯಾಶ್ರಮ ಸಂಸ್ಕೃತ ಪಾಠ ಶಾಲೆಯಲ್ಲಿ ಏರ್ಪಡಿಸಲಾಗಿದೆ.
ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಪುಣ್ಯಾಶ್ರಮದ ಆರ್.ಬಿ. ಸಂಗಮೇಶ್ವರ ಗವಾಯಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಚಾರ್ಟೆಡ್ ಅಕೌಂಟೆಂಟ್ ನರೇಂದ್ರ ಕೆ.ವಿ., ಭದ್ರಾವತಿ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ಧಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ವಾಗೇಶ್ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಾಗರದ ಖ್ಯಾತ ಹಿಂದೂಸ್ಥಾನಿ ಗಾಯಕಿ ವಿದೂಶಿ ಶ್ರೀಮತಿ ವಸುಧಾ ಶರ್ಮ ಅವರಿಗೆ ಶ್ರೀ ಗುರು ಗಾನಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿಶೇಷ ಗಾಯಕರಿಂದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ರಾಮಣ್ಣ ಭಜಂತ್ರಿ ಶಹನಾಯಿ ಆಕರ್ಷಿಸಲಿದೆ. ಹೊನ್ನಾಳಿ ರುಕ್ಮಿಣಿ ಭಜನಾ ಮಂಡಳಿಯಿಂದ ಭಜನಾ ಸೇವೆ, ಚೈತನ್ಯ ಜಯಕೀರ್ತಿ ಶ್ರೀರಕ್ಷೆ, ವಿದ್ಯಾರ್ಥಿಗಳಿಂದ ಪ್ರಾರ್ಥನೆ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ.
ಪುಟ್ಟರಾಜ ಮಂದಿರದ ಅಲಂಕಾರ ಹಾಗೂ ದಾಸೋಹದ ಸೇವೆಯನ್ನು ಉದ್ಯಮಿಗಳಾದ ಸಿದ್ಧಲಿಂಗಪ್ಪ ಐನಾಪುರ ಮತ್ತು ಕುಟುಂಬ, ರಮೇಶ್, ರಮ್ಯ, ಲಕ್ಷ್ಮಿದೇವಿ ದಿ. ಹೊನ್ನಪ್ಪ ಕುಟುಂಬ ಮತ್ತು ಆಶಾ ಚನ್ನಬಸಪ್ಪ ವಹಿಸಲಿದ್ದಾರೆ. ಮಾಹಿತಿಗೆ ಮೊ. 888 4955667ರಲ್ಲಿ ಸಂಪರ್ಕಿಸಲು ಕೋರಲಾಗಿದೆ.

Chamber Of Commerce Shivamogga ಹೆಚ್ಚಿನ‌ ಹೂಡಿಕೆ ಆಕರ್ಷಣೆ ಹಿನ್ನೆಲೆ ಬಜೆಟ್ ನಲ್ಲಿ‌₹13692 ಕೋಟಿ ಆರ್ಥಿಕ ನೆರವು ಶ್ಲಾಘನೀಯ- ಬಿ.ಗೋಪಿನಾಥ್

0

Chamber Of Commerce Shivamogga ರಾಜ್ಯ ಸರ್ಕಾರದ ನೂತನ ಕೈಗಾರಿಕಾ ನೀತಿಯಿಂದ 20 ಲಕ್ಷ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಹೆಚ್ಚಿನ ಹೂಡಿಕೆ ಆಕರ್ಷಿಸುವ ಉದ್ದೇಶದಿಂದ 13692 ಕೋಟಿ ರೂ. ಆರ್ಥಿಕ ನೆರವು ಮತ್ತು ಸಹಾಯಧನ ನೀಡಿರುವುದು ಅಭಿನಂದನೀಯ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದ್ದಾರೆ.

ದೇಶದ ಜಿಡಿಪಿಗೆ ಶೇ. 8.4ರಷ್ಟು ರಾಜ್ಯ ಕೊಡುಗೆ ನೀಡಲಿದೆ. ಕರ್ನಾಟಕದ ಆರ್ಥಿಕತೆಯಲ್ಲಿ ಸೇವಾ ವಲಯಗಳ ಪಾಲು ಶೇ. 66ಕ್ಕೆ ಏರಿಕೆಯಾಗಿದೆ. ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಕೈಗಾರಿಕೆಗಳಿಗೆ ಪ್ರೋತ್ಸಾಹಿಸಲು 6,980 ಕೋಟಿ ರೂ. ಅನುದಾನ ಮೀಸಲಿಟ್ಟಿರುವುದರಿಂದ 50 ಸಾವಿರ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ. 3,758 ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹಿಸಲು 185 ಕೋಟಿ ರೂ. ನೆರವು ನೀಡುತ್ತಿರುವುದು ಸ್ವಾಗತಾರ್ಹ.

ಬಜೆಟ್‌ನಲ್ಲಿ ಜಿಲ್ಲಾ ರಸ್ತೆ ಮತ್ತು ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಅನುದಾನ ಮೀಸಲಿಡಸಲಾಗಿದೆ. ವಿಜಯಪುರ ವಿಮಾಣ ನಿಲ್ದಾಣಕ್ಕೆ 348 ಕೋಟಿ ರೂ. ಅನುದಾನ, ಮೈಸೂರು ರನ್‌ವೇ ರಸ್ತೆ ವಿಸ್ತರಣೆ, ರಾಯಚೂರು ವಿಮಾನ ನಿಲ್ದಾಣ ಪ್ರಾರಂಭಕ್ಕೆ ಅನುದಾನ, ರಾಮನಗರ, ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ, ದೇವನಹಳ್ಳಿಯಲ್ಲಿ ಮೊಬೈಲ್ ಉತ್ಪಾದನಾ ಘಟಕ ಪ್ರಾರಂಭಿಸಲು ಸರ್ಕಾರ ಮುಂದಾಗಿರುವುದು ಅಭಿನಂದನೀಯ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೇಕಾರರ ಆರ್ಥಿಕ ಸ್ವಾವಲಂವನೆಗೆ ವಿಶೇಷ ಪ್ಯಾಕೇಜ್, 5,000 ಕಿರು ಆಹಾರ ಸಂಸ್ಕರಣಾ ಘಟಕ, ಹತ್ತು ಜಿಲ್ಲಾ ಪ್ರವಾಸಿ ತಾಣದ ಅಭಿವೃದ್ಧಿಗೆ 50 ಕೋಟಿ ರೂ. ಬೆಂಗಳೂರಿನಲ್ಲಿ ಇವಿ ವಾಹನ ತಯಾರಿಕಾ ಕ್ಲಸ್ಟರ್ ನಿರ್ಮಾಣಕ್ಕೆ 25 ಕೋಟಿ ರೂ. ಅನುದಾನ ನೀಡಲಾಗಿದೆ. 8000 ಕೋಟಿ ರೂ. ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ, ಅಕ್ಕ ಕೋಆಪರೇಟೀವ್ ಸೋಸೈಟಿ ಸ್ಥಾಪನೆ, ಸಿನಿಮಾವನ್ನು ಕೈಗಾರಿಕಾ ಕ್ಷೇತ್ರದ ಉದ್ಯಮ ಎಂದು ಪರಿಗಣನೆ, ಮಹಾನಗರ ಪಾಲಿಕೆ ಅಭಿವೃದ್ಧಿಗೆ 2000 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

Chamber Of Commerce Shivamogga ಚಂದ್ರಗುತ್ತಿ ವಿಶೇಷ ಪ್ರವಾಸಿ ತಾಣವಾಗಿ ಅಭಿವೃದ್ಧಿಗೆ ನಮ್ಮ ಮೆಟ್ರೋ ದೇವನಹಳ್ಳಿವರೆಗೂ ವಿಸ್ತರಣೆ, ಮಂಗಳೂರಿನಲ್ಲಿ ಕ್ರೂಸ್ ವಾಟರ್ ಮಟ್ರೋ ನಿರ್ಮಾಣಕ್ಕೆ ಅನುದಾನ, ಬ್ರ್ಯಾಂಡ್ ಬೆಂಗಳೂರಿಗೆ 1800 ಕೋಟಿ ರೂ. ಅನುದಾನ ನೀಡಲಾಗಿದೆ. ಕೃಷಿ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ದೃಷ್ಟಿಯಿಂದ ಹೆಚ್ಚಿನ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

Guarantee Scheme ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ.‌ ಊಹಾಪೋಹಗಳಿಗೆ ಬೆಲೆಕೊಡಬೇಡಿ- ಸಿ.ಎಸ್.ಚಂದ್ರಭೂಪಾಲ್

0

Guarantee Scheme ಕರ್ನಾಟಕ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಹಾಗೂ ಯುವನಿಧಿ ಜಾರಿಗೊಂಡಾಗಿನಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಈ ಯೋಜನೆಗಳು ಹೀಗೆಯೆ ಮುಂದುವರೆಯಲಿವೆ. ಇವುಗಳನ್ನು ನಿಲ್ಲಿಸಲಾಗುವುದೆಂಬ ಊಹಾಪೋಹಗಳಿಗೆ ಸಾರ್ವಜನಿಕರು ಕಿವಿಗೊಡಬೇಡಿ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ತಿಳಿಸಿದ್ದಾರೆ.
ಡಿಸೆಂಬರ್ ತಿಂಗಳ ಬಾಕಿ ಇರುವ ಗೃಹಲಕ್ಷ್ಮಿ ಹಣವನ್ನು ಮಾರ್ಚ್ 3 ರಂದು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದು, ಜನವರಿ ತಿಂಗಳಿನ ಗೃಹಲಕ್ಷ್ಮೀ ಹಣ ಬಿಲ್ಲಿಂಗ್ ಆಗುತ್ತಿದೆ. ಈ ಬಾಕಿ ಹಣವನ್ನು ಕೂಡ ಶೀಘ್ರದಲ್ಲೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗಲಿದ್ದು, ನಂತರ ಫೆಬ್ರವರಿ ತಿಂಗಳ ಹಣ ಬಿಡುಗಡೆಯಾಗಲಿದೆ. ಆದ್ದರಿಂದ ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.
Guarantee Scheme ಅನ್ಯಭಾಗ್ಯ ಯೋಜನೆಯಡಿಯಲ್ಲಿ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯರಿಗೆ ಮಾಸಿಕ 5 ಕೆ.ಜಿ. ಅಕ್ಕಿ ಬದಲಿಗೆ ತಲಾ ರೂ. 170 ನೀಡಲಾಗುತ್ತಿದೆ. ಈಗಾಗಲೇ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಹಣವನ್ನು ಕುಟುಂಬದ ಮಹಿಳಾ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮೆಯಾಗಿದ್ದು, ಜನವರಿ ತಿಂಗಳ ಹಣ ಶೀಘ್ರದಲ್ಲೇ ಡಿಬಿಟಿ ಆಗಲಿದೆ. ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಇನ್ನು ಮುಂದೆ ನಗದು ಬದಲಿಗೆ 5 ಕೆ.ಜಿ ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಫೆಬ್ರವರಿ ತಿಂಗಳಿಂದಲೇ ಜಾರಿಗೆ ಬಂದಿದೆ. ಮಾರ್ಚ್ ತಿಂಗಳಿನಲ್ಲಿ ಒಟ್ಟು 15 ಕೆ.ಜಿ. ಅಕ್ಕಿ ಅನ್ನಭಾಗ್ಯ ಯೋಜನೆಯ ಪ್ರತಿ ಫಲಾನುಭವಿಗಳಿಗೆ ದೊರೆಯಲಿದೆ ಎಂದು ತಿಳಿಸಿದ್ದಾರೆ.
ತಾಂತ್ರಿಕ ಅನಾನುಕೂಲಗಳಿಂದ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳ ಫಲಾನುಭವಿಗಳಿಗೆ ದೊರೆಯಬೇಕಾದ ಹಣ ಕಳೆದ ಮೂರು ತಿಂಗಳಲ್ಲಿ ವಿಳಂಬವಾಯಿತು ಎಂಬ ಕಾರಣಕ್ಕೆ ಐದು ಗ್ಯಾರಂಟಿ ಯೋಜನೆಗಳ ನಿಲುಗಡೆ ಆಗುತ್ತದೆ ಎಂಬ ಊಹಾಪೋಹಗಳು ಶುರುವಾಗಿದೆ. ಇದು ಬಡವರಿಗಾಗಿ ಮಾಡಿದ ಯೋಜನೆಗಳು ಹಾಗಾಗಿ ಯಾವುದೇ ಕಾರಣಕ್ಕೂ ಈ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ನಿರಂತರವಾಗಿ ಮುನ್ನೆಡೆಯುತ್ತಿರುವ ಈ ಪಂಚ ಯೋಜನೆಗಳ ಲಾಭವನ್ನು ಫಲಾನುಭವಿಗಳಿಗೆ ದೊರೆಯುವಂತೆ ಮಾಡುವುದೇ ರಾಜ್ಯ ಸರ್ಕಾರದ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

Shivamogga Police ಅನಾಮಧೇಯ ವ್ಯಕ್ತಿ ಸಾವು ವಿದ್ಯಾನಗರ ಪೊಲೀಸ್ ಠಾಣೆ ಪ್ರಕಟಣೆ

0

Shivamogga Police ಶಿವಮೊಗ್ಗ ವಿದ್ಯಾನಗರದ ಮುಖ್ಯ ರಸ್ತೆ ಬಳಿ ಇರುವ ಹೊನ್ನಸಿರಿ ಲಾಡ್ಜ್ ಹತ್ತಿರ ಅಸ್ವಸ್ಥರಾಗಿ ಬಿದ್ದಿದ್ದ ಸುಮಾರು 35 ರಿಂದ 40 ವರ್ಷದ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಾ.6 ರಂದು ಮೃತಪಟ್ಟಿರುತ್ತಾರೆ.
ಮೃತನು ಸುಮಾರು 5 ಅಡಿ 4 ಇಂಚು ಎತ್ತರ, ಕಪ್ಪು ಮೈ ಬಣ್ಣ, ಸಾಧಾರಣ ಮೈಕಟ್ಟು, ಹೊಂದಿದ್ದು, ಕೋಲು ಮುಖ, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು-ಬಿಳಿ ಬಣ್ಣದ ಕೂದಲು 1/2 ಇಂಚು ಉದ್ದದ ಕಪ್ಪು-ಬಿಳಿ ಕುರುಚಲು ಗಡ್ಡ ಇರುತ್ತದೆ. ಮೈ ಮೇಲೆ ಹಸಿರು, ಕಪ್ಪು ಬಿಸ್ಕೇಟ್ ಬಣ್ಣದ ಅಡಿಡಾಸ್ ಟೀ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಸದರಿ ಮೃತ ಅನಾಮದೇಯ ಶವದ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರು ತಿಳಿಸಿದ್ದಾರೆ

Klive Special Article “ನೃತ್ಯ ವಿದ್ಯಾಧರಣಿ”ವಿದುಷಿ ಭ್ರಮರಿ ಶಿವಪ್ರಕಾಶ್, ಅರ್ಥಪೂರ್ಣ ನೃತ್ಯ‌ ಪ್ರದರ್ಶನ

0

Klive Special Article ಅದೊಂದು ವಿಶೇಷವಾದ ಕಾರ್ಯಕ್ರಮ. ಶಿವಮೊಗ್ಗದ ಖ್ಯಾತ ಹಿರಿಯ ಉಪನ್ಯಾಸಕರುಗಳಾದ ಡಾ. ವಿಘ್ನೇಶ್ ಭಟ್ ಹಾಗೂ ಡಾ. ಸುಮಿತ್ರಾ ವಿ. ಭಟ್ ದಂಪತಿಗಳು ಕಳೆದ ನಾಲ್ಕು ದಶಕಗಳಿಂದಲೂ ರಥಸಪ್ತಮಿ ಸಮಯದಲ್ಲಿ ಜನಿಸಿದ ತಮ್ಮ ಮಕ್ಕಳ ಜನ್ಮದಿನವನ್ನು ವಸುಧಾ ವೈಶಾಲಿ ಜನ್ಮದಿನೋತ್ಸವ ಎಂದು ಆಯೋಜಿಸಿ, ಕಲೆಯಲ್ಲಿ ಸಾಧನೆಗೈದವರನ್ನು ಆಯ್ಕೆ ಮಾಡಿ ಅವರಿಗೊಂದು ಬಿರುದು ನೀಡಿ ಸನ್ಮಾನಿಸುವ ಕಾರ್ಯಕ್ರಮವನ್ನು ನಿರಂತರ ಯಜ್ಞದ ಹಾಗೆ ಮಾಡುತ್ತಾ ಬಂದಿದ್ದಾರೆ. ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಆಯೋಜನೆಯಾಗಿತ್ತು. ಅಂದು ವಿಶೇಷ ಕಲಾಸನ್ಮಾನಕ್ಕೆ ಭಾಜನರಾದವರು ಡಾ. ವಿದುಷಿ ಭ್ರಮರಿ ಶಿವಪ್ರಕಾಶ್. ಇವರು ಕನ್ನಡದ ಪ್ರಸಿದ್ಧ ಲೇಖಕರೂ, ರಂಗಕರ್ಮಿಗಳೂ ಹಾಗೂ ಶಿಕ್ಷಣ ತಜ್ಞರೂ ಆದ ಉದ್ಯಾವರ ಮಾಧವ ಆಚಾರ್ಯರ ಸುಪುತ್ರಿ. ಹಾಗೆಯೇ ಅಂತರಾಷ್ಟ್ರೀಯ ಖ್ಯಾತಿಯ ಡಾ. ವಸುಂಧರ ದೊರೆಸ್ವಾಮಿಯರಲ್ಲಿ ಶಿಷ್ಯೆಯಾಗಿ ಶಾಸ್ತ್ರೀಯ ನೃತ್ಯದಲ್ಲಿ ವಿದ್ವತ್ ಪದವಿಗಳಿಸಿ ಪ್ರಸ್ತುತ ಮಂಗಳೂರಿನ `ನಾದ ಡ್ಯಾನ್ಸ್ ಅಂಡ್ ಕಲ್ಚರಲ್ ಟ್ರಸ್ಟ್’ನ ನಿರ್ದೇಶಕಿಯಾಗಿದ್ದಾರೆ. ತಮ್ಮ ಅಪೂರ್ವ ನಾಟ್ಯ ಸಾಧನೆಯ ಕಾರಣದಿಂದಾಗಿ ಡಾಕ್ಟರೇಟ್ ಪದವಿ ಪಡೆದಿದ್ದೇ ಅಲ್ಲದೇ ಕೇಂದ್ರ ಸಂಸ್ಕೃತಿ ಸಚಿವಾಲಯದ ಜೂನಿಯರ್ ಮಾನ್ಯತೆ ಪಡೆದವರಾಗಿದ್ದಾರೆ. ಅವರಿಗೆ ಪ್ರೊ. ಶಂಕರನಾರಾಯಣ ಶಾಸ್ತ್ರಿಯವರು ಅಧ್ಯಕ್ಷತೆ ವಹಿಸಿದ ಈ ಕಾರ್ಯಕ್ರಮದಲ್ಲಿ “ನೃತ್ಯ ವಿದ್ಯಾಧಾರಿಣಿ” ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ಅದೊಂದು ಅಪೂರ್ವದ ಕಾರ್ಯಕ್ರಮವಾಗಿತ್ತು.
ಸಭಾ ಕಾರ್ಯಕ್ರಮದ ನಂತರ ಗದುಗಿನ ನಾರಣಪ್ಪನ ‘ಕರ್ಣಾಟ ಭಾರತ ಕಥಾಮಂಜರಿ’ ಯಿಂದ ಆಯ್ದ ಪದ್ಯಗಳನ್ನು ಶಾಸ್ತ್ರೀಯ ಭರತನಾಟ್ಯದ ಚಿತ್ರ ಚೌಕಟ್ಟಿನಲ್ಲಿ ಕಲಾತ್ಮಕವಾಗಿ ತೋರಿಸುವ ಪ್ರಯತ್ನ ನೃತ್ಯದ ಮೂಲಕ ಮಾಡಿದರು. ಇದು ಶಾಸ್ತ್ರೀಯ ಭರತನಾಟ್ಯದ ನೃತ್ಯಬಂಧಗಳ ಚೌಕಟ್ಟಿನಲ್ಲಿ ಪ್ರಸ್ತುತಪಡಿಸಿದ್ದು ಒಂದು ಹೊಸ ಪರಿಕಲ್ಪನೆಯಾಗಿತ್ತು. ಕುಮಾರವ್ಯಾಸ ಭಾರತವೆಂದೇ ಪ್ರಸಿದ್ಧವಾದ ಈ ನಡುಗನ್ನಡ ಕಾವ್ಯದ ಮಂಗಳಾಚಾರಣೆಯಿಂದ ಆರಂಭಿಸಿ ಪಟ್ಟಾಭಿಷೇಕದ ವರೆಗಿನ ಆಯ್ದ ಸನ್ನಿವೇಶಗಳನ್ನು ಭರತನಾಟ್ಯದ ತೊಡೆಯಂ, ಸ್ವರ, ಜತಿ, ಪದ, ವರ್ಣ, ಪದಂ, ಜಾವಳಿ, ತಿಲ್ಲಾನಗಳ ಬಂಧಕ್ಕೆ ಅಳವಡಿಸಿದ್ದಂತೂ ತುಂಬಾ ರಂಜನೀಯವಾಗಿತ್ತು.
ವಾಚನ ಪ್ರವಚನವೇ ಮುಖ್ಯ ಪ್ರದರ್ಶನ ವಿಧಾನವಾಗಿ ಇತ್ತೀಚಿನವರೆಗೂ ಪ್ರಚಲಿತದಲ್ಲಿದ್ದ ಈ ಕಾವ್ಯ ಶಾಸ್ತ್ರೀಯ ನೃತ್ಯ ಪ್ರದರ್ಶನದ ಚೌಕಟ್ಟಿಗೆ ತಂದದ್ದು ಮಾತ್ರವಲ್ಲದೆ ಪ್ರೇಕ್ಷಕರ ಅರಿವಿನ ವ್ಯಾಪ್ತಿ ವಿಸ್ತರಿಸುವಂತೆಯೂ ಇತ್ತು. ಗಮಕವಾಚನ ಹಾಗೂ ಶಾಸ್ತ್ರೀಯ ಸಂಗೀತ ಹಾಡುಗಾರಿಕೆಯ ತುಲನಾತ್ಮಕ ನೋಟ ಬೌದ್ಧಿಕ ಪ್ರಜ್ಞೆಯು ಜಾಗೃತಗೊಳಿಸುವಂತಾದರೆ, ಕುಮಾರವ್ಯಾಸನ ಪದ್ಯದ ಸಾಲು ನೃತ್ಯ ಚಿತ್ರವಾಗಿ ನಮ್ಮನ್ನು ಭಾವಲೋಕದಲ್ಲಿ ತೇಲುವಂತೆ ಮಾಡಿದವು. ನೃತ್ಯಗಾತಿಯ ಸಂದರ್ಭೋಚಿತ ಅಭಿವ್ಯಕ್ತಿ, ಅಭಿನಯ, ಹಾವ ಭಾವ, ತಾಳ ಲಯಗಳ ಹೆಜ್ಜೆ ಗತಿ ಮತ್ತು ಆವರ್ತವಾಗುವ ಅನೇಕ ಸಂಗತಿಗಳೊಂದಿಗೆ ಕಾವ್ಯಕ್ಕೆ ದೃಶ್ಯದ ಮೆರುಗು ತಂದಿತು. ಅವರದು ನೃತ್ಯಕ್ಕೆ ಹೇಳಿ ಮಾಡಿಸಿದ ಮೈಮಾಟ, ನಿಲುವು, ಬಹುಮುಖ ಪ್ರತಿಭೆ ಈ ಮೂರರ ಸಂಗಮಗೊಂಡ ನೃತ್ಯ ಕಲಾಪ್ರತಿಭೆ ಭ್ರಮರಿಯವರು.
Klive Special Article ಆರಂಭದ ಮಂಗಳಾಚರಣೆಯಲ್ಲಿ ವೀರನಾರಾಯಣಸ್ವಾಮಿ, ಗಣಪತಿ ಹಾಗೂ ವೇದವ್ಯಾಸರ ಸ್ತುತಿ ನೃತ್ಯ ಮಾಡಿದರೆ, ಎರಡನೆಯ ನೃತ್ಯ ಬಂಧದಲ್ಲಿ ಕುಮಾರವ್ಯಾಸ ಹೇಳಿದ ಹಾಗೆ ಕೃಷ್ಣನ ಕಥೆ. ಅಲ್ಲಿ ಕೃಷ್ಣನ ವಿಶ್ವ ವ್ಯಾಪಕತೆಯನ್ನು ಭೀಷ್ಮ ಸ್ತುತಿಸಿದ ರೀತಿಯಲ್ಲಿ ಸ್ವರಗಳ ಜೊತೆಯಲ್ಲಿ ಮನೋಜ್ಙ ನೃತ್ಯ ಪ್ರಸ್ತುತಿ ಮಾಡಿದರು. ನಂತರ ಹಿಡಿಂಬೆಯ ಪ್ರಣಯ ಪ್ರೇಮಾಂಕುರ, ಭೀಮನ ವ್ಯಕ್ತಿತ್ವವನ್ನು ನೋಡಿ ಅವನನ್ನು ಒಲಿಸಿಕೊಳ್ಳುವ ಅವಳ ಪ್ರಯತ್ನ ಕಾಡಿನ ಒರಟು ಸ್ವಭಾವದ ರಕ್ಕಸಿ ನಾಡಿನ ಸುಭಗತೆಯನ್ನು ನಿರೀಕ್ಷಿಸುವಂತಹ ಕ್ಷಣಗಳು ಚೇತೋಹಾರಿಯಾಗಿತ್ತು.
ಕೃಷ್ಣ ಸಂಧಾನದ ಸಂದರ್ಭದಲ್ಲಿ ಕೌರವನೊಬ್ಬನಿಗೆ ಬಿಟ್ಟು ಉಳಿದವರಿಗೆ ತೋರಿದ ವಿಶ್ವರೂಪ ದರ್ಶನ ಅದರಿಂದ ಕೋಪಗೊಂಡ ಕೌರವ ತನ್ನಪ್ಪನಲ್ಲಿ ತನ್ನ ಮನದ ಇಂಗಿತ ಹೇಳಿಕೊಳ್ಳುವ ದೃಶ್ಯ ಅಲ್ಲಿನ ಕೃಷ್ಣ ನನ್ನೊಳಗೆ ಇದ್ದು ಇದನ್ನೆಲ್ಲ ನಡೆಸಿದ್ದಾನೆ ಆತ ಸರ್ವಾಂತರ್ಯಾಮಿ ಹಾಗಾಗಿ ನನ್ನ ಮನಸ್ಥಿತಿ ಏನು ಎಂದರೆ ಇವನನ್ನು ಕೆಣಕಿಯೇ ನನಗೆ ಕೈವಲ್ಯ ಎಂದು ಸವಾಲೆಸಗುತ್ತಾನೆ. ನೀ ನಗು ಹೋಗು ಕದನವಕೊಂದು ಬಾ ಎಂದ… ಆಗ ಇಡೀ ತನ್ನ ಸಾಮ್ರಾಜ್ಯದಲ್ಲಿ ಒಂದು ಸೂಜಿ ಮೊನೆಯಷ್ಟು ನಾನು ಕೊಡುವುದಿಲ್ಲ ನಾನು ಯುದ್ಧಕ್ಕೆ ಸಿದ್ದ ಎಂದು ಹೇಳಿ ಸಂಧಾನ ಮುರಿಯುವಂತಹ ಸನ್ನಿವೇಶವಂತೂ ನೃತ್ಯಗಾತಿಯ ನೈಜ ಅಭಿನಯದಲ್ಲಿ ಮನಸೂರೆಗೊಂಡಿತು.
ನಂತರ ಗಾಂಧಾರಿ ತನ್ನೆಲ್ಲ ನೂರು ಮಕ್ಕಳನ್ನು ಕಳೆದುಕೊಂಡಂತಹ ಆಕೆಯ ಮಿಶ್ರಮನೋಭಾವ ಅಲ್ಲಿ – ನಿನ್ನ ಲೀಲೆಯ ಸಿರಿ ಸೊಬಗಿನ ಮಾಯ ರಚನೆ ಇದು ಗದುಗಿನ ವೀರನಾರಾಯಣ ಎನ್ನುತ್ತಾ ಅವಳು ದುಃಖವನ್ನು ತೋಡಿಕೊಂಡಿದ್ದಂತೂ ಮನಮುಟ್ಟುವಂತೆ ಅಭಿನಯಿಸಿ ತೋರಿಸಿದರು. ಇನ್ನು ತಿಲ್ಲಾನದಲ್ಲಿ ಪಟ್ಟಾಭಿಷೇಕದ ಸಂದರ್ಭ ಮತ್ತು ಕೃಷ್ಣನನ್ನು ಬೀಳ್ಕೊಡುವುದನ್ನು ಪ್ರದರ್ಶನ ಮಾಡಿದರೆ ಅಂತಿಮದಲ್ಲಿ ಫಲಶ್ರುತಿಯಾಗಿ ಮಂಗಳಾಚಾರಣೆ ವೇದ ಪಾರಾಯಣದ ಫಲ, ತಪಸಿನ ಫಲ, ಯಾಗ ಫಲಗಳು ಮೇದಿನಿ ಕನ್ಯಾದಾನ ಮಾಡಿದ ಫಲ ಈ ಭಾರತದಲ್ಲಿನ ಒಂದೊಂದು ಅಕ್ಷರ ಕೇಳಿದವರಿಗೂ ಸಿಗುತ್ತದೆಂದು ಕುಮಾರವ್ಯಾಸ ಹೇಳಿದುದನ್ನೇ ಹೇಳಿ ಈ ಎಲ್ಲವನ್ನು ಮುಕುಂದಾರ್ಪಣ ಮಾಡಿ ಆ ಕೃಷ್ಣನಿಂದ ಆರಂಭವಾದದ್ದನ್ನ ಕೃಷ್ಣನಿಗೆ ಸಮರ್ಪಿಸಿದ ರೀತಿ ರಸಿಕರ ಮೆಚ್ಚುಗೆಯನ್ನು ಪಡೆದವು.
ಇವೆಲ್ಲಕ್ಕೂ ಹಿನ್ನೆಲೆಯಾಗಿ ಹಿಮ್ಮೆಳದಲ್ಲಿನ ಚಂದ್ರಶೇಖರ ಕೆದಿಲಾಯರ ಹಾಡುಗಾರಿಕೆಯೇ ಪ್ರದರ್ಶನದ ವಾತಾವರಣವನ್ನು ಸಮರ್ಥವಾಗಿ ಹಿಡಿದಿಟ್ಟಂತಹ ಅಂಶಗಳಾಗಿದ್ದವು. ಈ ಎಲ್ಲವನ್ನ ನೋಡಿ ನನ್ನ ಮಗ ತಾನು ಅದ್ಭುತವಾಗಿ ಸವಿದ ನೃತ್ಯ ಪ್ರದರ್ಶನ ಇದು ಎಂದಿದ್ದು ಕೂಡ ನಮಗೆ ವಿಶೇಷವೇ ಆಗಿತ್ತು. ಅಲ್ಲದೇ ಕುಮಾರವ್ಯಾಸ ಭಾರತವನ್ನು ಕಣ್ಣೆದುರಿಗೆ ಕಟ್ಟುವಂತೆ ಅಭಿನಯಿಸಿದ್ದಾರೆ ಎಂದು ಹೇಳಿದ್ದನ್ನ ನಾನಿಲ್ಲಿ ಹೇಳಲೇಬೇಕು. ಆ ಮಟ್ಟಿಗಿನ ತಲ್ಲೀನತೆಯನ್ನು ಪ್ರೇಕ್ಷಕರಲ್ಲಿ ಮೂಡಿಸಿದ್ದನ್ನು ನೆನೆಯಲೇಕು. ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿಯುವುದು ಎನ್ನುವಂತೆ ಇಡೀ ಭಾರತವನ್ನು ನಮ್ಮ ಕಣ್ಣೆದುರಿಗೆ ಕುಣಿಯುವಂತೆ ಮಾಡಿದಂತಹ ನೃತ್ಯ ಕಲಾವಿದೆಗೆ ‘ನೃತ್ಯ ವಿದ್ಯಾಧರಣಿ’ ಎನ್ನುವಂತಹ ಬಿರುದು ಸಾರ್ಥಕವಾಯಿತು ಎನ್ನುವುದರಲ್ಲಿ ಸಂಶಯವೇ ಇಲ್ಲ.

– ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಸಂಸ್ಕೃತ ಉಪನ್ಯಾಸಕರು, ಶಿವಮೊಗ್ಗ.

ಚಿತ್ರಕೃಪೆ : ಸಿದ್ಧಾರ್ಥ ಎ. ಕಶ್ಯಪ